*ಬಹಳ ಸುಲಭವಾಗಿ ಸಾಧ್ಯವಾಗುವಂಥದ್ದು

ವನಿಗೇನಪ್ಪ ಎಲ್ಲವೂ ` ನೀರು ಕುಡಿದಷ್ಟು ಸುಲಭ' ಎಂದು ಸಾಮಾನ್ಯರು ಹೇಳುತ್ತಾರೆ. ಅದನ್ನೇ ಪಂಡಿತರು, ಅವನಿಗೆ ಎಲ್ಲವೂ` ಕರತಲಾಮಲಕ’ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಬಹಳ ಪ್ರೀತಿ ಉಳ್ಳವರು ಅವನಿಗೆ ಎಲ್ಲವೂ `ಅಂಗೈ ನೆಲ್ಲಿಕಾಯಿ’ ಎಂದು ಹೇಳುತ್ತಾರೆ.
ಕರತಲಾಮಲಕ ಎನ್ನುವುದು ಸಂಸ್ಕೃತ ನುಡಿ. ಕರತಲ ಎಂದರೆ ಅಂಗೈ. ಅಮಲಕ ಎಂದರೆ ನೆಲ್ಲಿಕಾಯಿ.
ನೆಲ್ಲಿಕಾಯಿ ಸುಲಭದಲ್ಲಿ ಸಿಗುವಂಥದ್ದೆ? ಅಲ್ಲವೇ ಅಲ್ಲ. ಕಾಡಿಗೆ ಹೋಗಬೇಕು. ಕಲ್ಲು ಮುಳ್ಳು ತುಳಿದು ಮರ ಏರಿ ಅದನ್ನು ಕಿತ್ತು ತರುವವರೆಗೆ ಸುಸ್ತು ಹೊಡೆದಿರುತ್ತೀರಿ. ಅಂಥ ನೆಲ್ಲಿಕಾಯಿ ಅಂಗೈಯಲ್ಲಿಯೇ ಇದೆ ಅಂದರೆ? ಕಷ್ಟದಲ್ಲಿ ಸಿಗುವಂಥದ್ದೂ ಇವನಿಗೆ ಸುಲಭಸಾಧ್ಯವಾಗಿದೆ ಎಂಬ ಭಾವ ಇಲ್ಲಿಯದು.
ಒಬ್ಬರ ಸಾಮರ್ಥ್ಯವನ್ನು ಹೊಗಳುವಾಗ ಈ ಮಾತು ಸಾಮಾನ್ಯವಾಗಿ ಬಳಕೆಯಾಗುತ್ತದೆ. ಅಂದಹಾಗೆ ನೆಲ್ಲಿಕಾಯಿ ಆರೋಗ್ಯಕ್ಕೆ ಅತ್ಯುತ್ತಮ. ಔಷಧವಾಗಿಯೂ ಇದು ಬಳಕೆಯಾಗುತ್ತದೆ.