*ತನಗೆ ತಾನೇ ಗುರುವಾಗುವ ಸಾಧನೆ

ಕ ಮನಸ್ಸಿನಿಂದ ಯಾರ ಸಹಾಯವೂ ಇಲ್ಲದೆ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸುವ ವ್ಯಕ್ತಿಯನ್ನು ಕಂಡಾಗ, `ನೋಡಿ, ಅವನದು ಎಂಥ ಏಕಲವ್ಯ ಶ್ರದ್ಧೆ’ ಎಂದು ಮೆಚ್ಚುಗೆಯ ಮಾತನ್ನು ಆಡುತ್ತೇವೆ. ಮಹಾಭಾರತದಲ್ಲಿ ಏಕಲವ್ಯ ಅತ್ಯಂತ ಚಿರಪರಿಚಿತ ಪಾತ್ರವಾಗಿದ್ದಾನೆ.
ಮೂಲತಃ ಏಕಲವ್ಯ ಯಾದವ ವಂಶದವನು. ಚಿಕ್ಕಂದಿನಲ್ಲಿಯೇ ಆತ ಕಾಡನ್ನು ಸೇರಿದ ಕಾರಣ ಮೂಲ ವಂಶದ ಕುರುಹು ಮರೆಯಾಯಿತು. ಆದರೆ ಧನುರ್ವಿದ್ಯೆಯನ್ನು ಕಲಿಯಬೇಕೆಂಬ ಇಚ್ಛೆ ಮಾತ್ರ ಆತನಲ್ಲಿ ಬಲವಾಗಿ ಉಳಿಯಿತು.
ಆತ ದ್ರೋಣಾಚಾರ್ಯರ ಬಳಿಗೆ ಬಂದು ವಿದ್ಯೆ ಕಲಿಸುವಂತೆ ಕೋರಿದಾಗ ಅವರು ನಿರಾಕರಿಸುತ್ತಾರೆ. ಬಳಿಕ ಆತ ದ್ರೋಣಾಚಾರ್ಯರ ಪ್ರತಿಮೆಯೊಂದನ್ನು ಮಾಡಿಕೊಂಡು ಅದನ್ನು ಪೂಜಿಸುತ್ತಾ ಏಕ ಮನಸ್ಸಿನಿಂದ ಧನುರ್ವಿದ್ಯೆಯಲ್ಲಿ ಸಾಧನೆಯನ್ನು ಮಾಡುತ್ತಾನೆ. ಸತತ ಪ್ರಯತ್ನವು ಆತನನ್ನು ನಿಪುಣನನ್ನಾಗಿ ಮಾಡುತ್ತದೆ. ಶಬ್ದವೇದಿಯಂಥ ವಿದ್ಯೆಯನ್ನೇ ಆತ ಕರಗತ ಮಾಡಿಕೊಳ್ಳುತ್ತಾನೆ.
ಮುಂದೆ ಪಾಂಡವರು ದ್ರೋಣಾಚಾರ್ಯರ ಶಿಷ್ಯರಾಗುತ್ತಾರೆ. ಅರ್ಜುನನನ್ನು ಅವರು ಅಪ್ರತಿಮ ಬಿಲ್ಲುಗಾರನನ್ನಾಗಿ ಮಾಡುವ ಪ್ರತಿಜ್ಞೆ ತೊಡುತ್ತಾರೆ. ಒಮ್ಮೆ ಬೇಟೆಗೆ ಹೋದಾಗ ಏಕಲವ್ಯನ ಮುಖಾಮುಖಿಯಾಗುತ್ತದೆ. ಏಕಲವ್ಯನ ಅಪ್ರತಿಮ ಬಿಲ್ಲುಗಾರಿಕೆ ಅರ್ಜುನನಲ್ಲಿ ಅಸೂಯೆಯನ್ನು ಹುಟ್ಟುಹಾಕುತ್ತದೆ. ಶಿಷ್ಯನನ್ನು ಅಜಿಂಕ್ಯನನ್ನಾಗಿ ಮಾಡುವ ಉದ್ದೇಶದಿಂದ ಗುರುದಕ್ಷಿಣೆ ರೂಪದಲ್ಲಿ ಏಕಲವ್ಯನ ಹೆಬ್ಬೆರಳನ್ನೇ ದ್ರೋಣಾಚಾರ್ಯರು ಪಡೆದುಕೊಳ್ಳುತ್ತಾರೆ. ಹೆಬ್ಬೆರಳಿಲ್ಲದೆ ಆತ ಬಾಣ ಪ್ರಯೋಗ ಮಾಡುವುದಾದರೂ ಹೇಗೆ?
ಏಕಲವ್ಯ ವೃತ್ತಾಂತ ಶ್ರದ್ಧೆಯನ್ನು ಹೇಳುವುದರ ಜೊತೆಗೆ ಅಂದಿನ ಸಾಮಾಜಿಕ ವ್ಯವಸ್ಥೆಯನ್ನೂ ಹೇಳುತ್ತದೆ.