*ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು

ಮ್ಮೂರ ಶಂಕರ ಜೀವನದಲ್ಲಿ ನೆಲೆ ನಿಲ್ಲಲು ಏನೇನೋ ಮಾಡಿದ. ಮೊದಲು ಗೇರುಬೀಜದ ವ್ಯಾಪಾರ, ನಂತರ ಚಹಾದಂಗಡಿ, ನಂತರ ಕಲ್ಲಂಗಡಿ ಬೆಳೆ, ಐಸ್‌ಕ್ಯಾಂಡಿ ಫ್ಯಾಕ್ಟರಿ ಹೀಗೆ ಒಂದಾದ ಮೇಲೆ ಒಂದನ್ನು ಮಾಡುತ್ತ ಹೋದ. ಕೊನೆಗೆ ಅವನು ಸಿನಿಮಾ ಟಾಕೀಸಿನಲ್ಲಿ ಬ್ಲ್ಯಾಕ್‌ ಟಿಕೆಟ್‌ ಮಾರಾಟವನ್ನೂ ಮಾಡಿದ.
ಊರಿನಲ್ಲಿ, ಶಂಕರ ಈಗ ಏನು ಮಾಡ್ತಿದ್ದಾನೆ ಎಂದು ಯಾರನ್ನಾದರೂ ಕೇಳಿದರೆ, `ಎಲ್ಲ ಬಿಟ್ಟ ಬಂಗಿ ನೆಟ್ಟ' ಎಂದು ಹೇಳುತ್ತಾರೆ. ಶಂಕರನ ಇತ್ಯೋಪರಿ ಎಲ್ಲ ತಿಳಿದವರಿಗೆ ಈ ಮಾತಿನ ತಾತ್ಪರ್ಯ ತಕ್ಷಣ ಅರ್ಥವಾಗುತ್ತದೆ. ಶಂಕರ ಇಲ್ಲಿ ಒಂದು ಉದಾಹರಣೆ ಮಾತ್ರ. ಶಂಕರನ ಹಾಗೆ ಜೀವನದಲ್ಲಿ ಎಲ್ಲದರಲ್ಲಿಯೂ ಕೈಯಾಡಿಸಲು ಹೋಗಿ ಎಲ್ಲಿಯೂ ಯಶಸ್ಸನ್ನು ಕಾಣದವರು ಅನೇಕರು ಕಾಣಸಿಗುತ್ತಾರೆ. ಆಗೆಲ್ಲ ಈ ಮಾತನ್ನು ಹೇಳುತ್ತಾರೆ. ಯಾವುದೇ ಒಂದರಲ್ಲಿ ಮನಸ್ಸನ್ನು ನೆಟ್ಟು ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಎಲ್ಲದರಲ್ಲಿಯೂ ಒಂದು ಕೈ ನೋಡುವ ಪ್ರವೃತ್ತಿ ಅಪಾಯಕಾರಿ. ಚಂಚಲ ಪ್ರವೃತ್ತಿಯವರು ಬದುಕಿನಲ್ಲಿ ಯಶಸ್ವಿಯಾಗುವುದಿಲ್ಲ ಎನ್ನುವುದನ್ನು ಇದು ಧ್ವನಿಸುತ್ತದೆ. ಹತ್ತು ಒಳ್ಳೆಯ ಕೆಲಸ ಮಾಡಿದರೂ ಒಂದರಲ್ಲೂ ಯಶಸ್ಸನ್ನು ಕಾಣದೇ ಹೋದಾಗ ಹತಾಶೆ ಸಹಜ. ಅಂಥ ಸಂದರ್ಭದಲ್ಲಿ ಅಡ್ಡದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ಅಡ್ಡದಾರಿಯನ್ನು ಇಲ್ಲಿಯಬಂಗಿ ನೆಟ್ಟ’ ಮಾತು ಚೆನ್ನಾಗಿ ಧ್ವನಿಸುತ್ತದೆ. ಬಂಗಿ ಎಂದರೆ ಅಫೀಮು, ಗಾಂಜಾ. ಇದನ್ನು ಬೆಳೆಯುವುದು ಹೇಗೆ ಕಾನೂನು ಬಾಹಿರವೋ ಅದರ ಸೇವನೆ ಕೂಡ ಕಾನೂನು ಬಾಹಿರ. ನೆಟ್ಟ ಎಂದರೆ ಗಿಡವನ್ನು ನಾಟಿ ಮಾಡಿದ ಎಂಬ ಅರ್ಥದ ಜೊತೆಯಲ್ಲಿ ಬಾಯಲ್ಲಿ ಇಟ್ಟು ಸೇದಿದ ಎಂಬ ಅರ್ಥವನ್ನೂ ಧ್ವನಿಸುತ್ತದೆ.