ರಷ್ಯಾದೆದುರು ತಪ್ಪೊಪ್ಪಿಕೊಂಡ ಅಮೆರಿಕದ ಅಧ್ಯಕ್ಷ ಐಸೆನ್‌ಹೋವರ್‌

ಪ್ರತಿಯೊಂದು ದೇಶವೂ ತನ್ನ ಸೌರ್ವಭೌಮತ್ವವನ್ನು ಅಖಂಡವಾಗಿ ಉಳಿಸಿಕೊಳ್ಳಲು ನಿರಂತರ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ದೇಶದ ಗಡಿಗಳನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ ಇತರ ದೇಶದವರು ಯಾವ ರೀತಿಯ ಸನ್ನದ್ಧತೆಯಲ್ಲಿದ್ದಾರೆ ಎಂದು ಅರಿತುಕೊಳ್ಳುವುದೂ ಅಷ್ಟೇ ಮಹತ್ವದ್ದು. ಜಗತ್ತಿನ ಎರಡು ಬಲಾಢ್ಯ ರಾಷ್ಟ್ರಗಳು ಅಮೆರಿಕ ಮತ್ತು ರಷ್ಯಾ. ರಷ್ಯಾ ಈ ಮೊದಲು ಸೋವಿಯತ್‌ ಒಕ್ಕೂಟವಾಗಿತ್ತು. ಒಂದು ಬಲಿಷ್ಠವಾದ ಪ್ರಜಾಪ್ರಭುತ್ವ ರಾಷ್ಟ್ರವಾದರೆ ಇನ್ನೊಂದು ಕಮ್ಯುನಿಸ್ಟ್‌ ರಾಷ್ಟ್ರ. ಎರಡನೆ ಮಹಾಯುದ್ದದ ಬಳಿಕ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ಹಾವು ಮುಂಗಸಿಗಳಂತೆ ಆಗಿದ್ದವು. ಜಗತ್ತಿನ ಎಲ್ಲ ರಾಷ್ಟ್ರಗಳು ಒಂದೋ ಅಮೆರಿಕದ ಪರ ಇಲ್ಲವೆ ರಷ್ಯಾದ ಪರ ನಿಲ್ಲುವ ಸಂದರ್ಭ ಬಂದೊದಗಿತ್ತು. ಇದು ಇತಿಹಾಸದಲ್ಲಿ ಶೀತಲ ಯುದ್ಧ ಎಂದು ದಾಖಲಾಗಿದೆ.
ರಷ್ಯಾ ಮತ್ತು ಅಮೆರಿಕಗಳು ಪರಸ್ಪರ ವಿಶ್ವಾಸವನ್ನು ಕಳೆದುಕೊಂಡಿದ್ದಾಗ ಒಬ್ಬರ ಮೇಲೆ ಒಬ್ಬರು ಬೇಹುಗಾರಿಕೆಯನ್ನು ನಡೆಸುವುದು ಸಹಜವಾಗಿತ್ತು. ಬೇಹುಗಾರಿಕೆಯಲ್ಲಿ ಹಲವು ರೀತಿಗಳಿವೆ. ಒಂದು ರಾಷ್ಟ್ರದೊಳಗೆ ಇನ್ನೊಂದು ರಾಷ್ಟ್ರದ ವ್ಯಕ್ತಿ ತನ್ನ ಗುರುತು ಮರೆಮಾಚಿಕೊಂಡು ಪ್ರವೇಶ ಪಡೆಯುವುದು, ಆಯಕಟ್ಟಿನ ಜನರ ಸ್ನೇಹ ಸಂಪಾದಿಸಂಪಾದಿಸಿ ತನಗೆ ಬೇಕಾದ ಮಾಹಿತಿಯನ್ನು ಪಡೆಯುವುದು ಒಂದು ರೀತಿ. ತುಂಬ ಹಿಂದಿನ ಕಾಲದಲ್ಲಿ ಇದಕ್ಕೆ ಗೂಢಚರ್ಯ ಎಂದು ಹೇಳುತ್ತಿದ್ದರು. ಅಮೆರಿಕ ಆ ಕಾಲದಲ್ಲಿ ಹೊಸತೆನಿಸಿದ ವೈಮಾನಿಕ ಗೂಢಚರ್ಯವನ್ನು ನಡೆಸಿತ್ತು. ಇದು ಬಹಿರಂಗಗೊಂಡು ಅಮೆರಿಕವು ಅಪಮಾನಿತವಾಗಿ ತಪ್ಪೊಪ್ಪಿಕೊಳ್ಳುವ ಪ್ರಸಂಗ ಎದುರಾಯಿತು.
ಅಮೆರಿಕದ ಈ ಕ್ರಮದಿಂದಾಗಿ ಅಂತಾರಾಷ್ಟ್ರೀಯ ರಾಜತಾಂತ್ರಿಕ ಬಿಕ್ಕಟ್ಟು ತಲೆದೋರಿತ್ತು. ಇದು 1960ರ ಮೇ ತಿಂಗಳು. ಅಮೆರಿಕದ ಯು-2 ಬೇಹುಗಾರಿಕೆ ವಿಮಾನವನ್ನು ಸೋವಿಯತ್‌ ಒಕ್ಕೂಟ ಹೊಡೆದುರುಳಿಸಿತ್ತು. ಅದರ ಚಾಲಕ ಗೂಢಚಾರಿ ಫ್ರಾನ್ಸಿಸ್ ಗ್ಯಾರಿ ಪವರ್ಸ್‌ (1929-77) ಜೀವಂತವಾಗಿ ಸೆರೆಸಿಕ್ಕಿದ್ದ. ಈ ಎಲ್ಲ ಘಟನೆಯ ಹಿನ್ನೆಲೆಯಲ್ಲಿ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಡ್ವೈಟ್‌ ಡಿ. ಐಸೆನ್‌ಹೋವರ್‌ ಅವರು ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ) ಹಲವು ವರ್ಷಗಳಿಂದ ರಷ್ಯಾದ ಮೇಲೆ ಬೇಹುಗಾರಿಕೆ ವಿಮಾನವನ್ನು ಹಾರಿಸುತ್ತಿತ್ತು ಎಂದು ಒಪ್ಪಿಕೊಳ್ಳುವಂತೆ ಆಯಿತು. ಪವರ್ಸ್‌ನನ್ನು ಬೇಹುಗಾರಿಕೆ ಆರೋಪದ ಮೇಲೆ ರಷ್ಯಾ ವಿಚಾರಣೆಗೆ ಗುರಿಪಡಿಸಿತು ಮತ್ತು ಆತನಿಗೆ ಹತ್ತು ವರ್ಷಗಳ ಶಿಕ್ಷೆಯನ್ನು ವಿಧಿಸಿತು. ಆದರೆ ಪವರ್ಸ್‌ನ ಅದೃಷ್ಟವೇ ಇರಬೇಕು, ಆತ ಎರಡು ವರ್ಷವೂ ಜೈಲಿನಲ್ಲಿ ಇರಲಿಲ್ಲ. ರಷ್ಯಾದ ಬೇಹುಗಾರನೊಬ್ಬ ಅಮೆರಿಕದಲ್ಲಿ ಸಿಕ್ಕಿಬಿದ್ದಿದ್ದ. ಅವನ ಬದಲಾಗಿ ಇವನು ಎಂಬ ಷರತ್ತಿನ ಮೇಲೆ ಈ ಬೇಹುಗಾರರ ವಿನಿಮಯ ನಡೆಯಿತು.
ಹಿನ್ನೆಲೆ-
ಎರಡನೆ ಮಹಾಯುದ್ದದ ಬಳಿಕ ಜಾಗತಿಕ ಬಲಾಬಲದ ಹೊಂದಾಣಿಕೆಯಲ್ಲಿ ಏರುಪೇರು ಉಂಟಾಯಿತು. ಎರಡು ಬಣಗಳು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಣುಬಾಂಬು ಶೋಧವಾದ ಬಳಿಕ ಮೈಲುಗೈ ಸಾಧಿಸುವ ಹುಚ್ಚಾಟಕ್ಕೆ ಅಮೆರಿಕ ಮತ್ತು ರಷ್ಯಾ ಇಳಿದಿದ್ದವು. ಮಿಲಿಟರಿ ತಂತ್ರಜ್ಞಾನದಲ್ಲಿ ಕಮ್ಯುನಿಸ್ಟ್‌ ರಷ್ಯಾ ಯಾವ ಕಾರಣಕ್ಕೂ ಮೇಲುಗೈ ಸಾಧಿಸಬಾರದು ಎಂಬುದು ಅಮೆರಿಕದ ಅಧ್ಯಕ್ಷ ಐಸೆನ್‌ಹೋವರ್‌ ಅವರ ನಿರ್ಧಾರವಾಗಿತ್ತು. ಸೋವಿಯತ್‌ ರಷ್ಯಾದ ಸಾಮರ್ಥ್ಯವೇನು, ಅದು ಎಷ್ಟರಮಟ್ಟಿಗೆ ಸನ್ನದ್ಧವಾಗಿದೆ ಎಂಬುದನ್ನು ಅರಿಯುವ ಒಂದು ಗುಪ್ತ ಯೋಜನೆಗೆ ಅವರು ಸಹಿಹಾಕಿದರು. ಇದು 1956ರಲ್ಲಿ. ಅತಿ ಎತ್ತರದಲ್ಲಿ ಹಾರುವ ವಿಮಾನಗಳನ್ನು ಸೋವಿಯತ್‌ ಒಕ್ಕೂಟದ ಮೇಲೆ ಹಾರಿ ಬಿಡುವುದು ಈ ಯೋಜನೆ. ಅಮೆರಿಕದ ಬಳಿ ಅತ್ಯಾಧುನಿಕವಾದ ಲಾಕ್‌ಹೀಡ್ ಯು-2 ವಿಮಾನಗಳಿದ್ದವು. ಇದಕ್ಕೆ ಡ್ರ್ಯಾಗನ್‌ ಲೇಡಿ ಎಂದೂ ಕರೆಯುತ್ತಿದ್ದರು. ಇದು ಒಂದೇ ಎಂಜಿನ್ನಿನ ಅತಿ ಎತ್ತರದಲ್ಲಿ ಹಾರುವ ವಿಮಾನವಾಗಿತ್ತು. ಎಲ್ಲ ರೀತಿಯ ಹವಾಮಾನದಲ್ಲೂ ಇದು ಹಗಲು ರಾತ್ರಿ ಎನ್ನದೆ 70 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲುದಾಗಿತ್ತು.
ಈ ಬೇಹುಗಾರಿಕೆ ವಿಮಾನಗಳು ಕಳುಹಿಸುತ್ತಿದ್ದ ಮಾಹಿತಿ ಮತ್ತು ಫೋಟೋಗಳನ್ನು ನೋಡಿ ಐಸೆನ್ ಹೋವರ್‌ ಸಂತುಷ್ಟರಾಗಿದ್ದರು. ಸದ್ಯಕ್ಕೆ ಸೋವಿಯತ್‌ ಬಳಿ ಇರುವ ಪರಮಾಣು ಸಾಮರ್ಥ್ಯವು ಅದರ ನಾಯಕ ನಿಕಿತ ಖ್ರುಶ್ಚೇವ್‌ ಹೇಳಿಕೊಂಡಿರುವ ಪ್ರಮಾಣಕಿಂತ ಗಮನಾರ್ಹವಾಗಿ ಕಡಿಮೆ ಇವೆ ಎಂಬ ಮಾಹಿತಿಯೂ ಅದರಲ್ಲಿ ಸೇರಿತ್ತು. ಅಮೆರಿಕದಲ್ಲಿ ಅಧ್ಯಕ್ಷರ ವಿರೋಧಿಗಳು ಸೋವಿಯತ್‌ ಅಮೆರಿಕಕ್ಕಿಂತ ಹೆಚ್ಚು ಶಕ್ತಿಶಾಲಿ ಎಂದು ಹೇಳಿ ಕಾಲೆಳೆಯುತ್ತಿದ್ದರು. ಆದರೆ ಈ ಮಾಹಿತಿಗಳು ರಷ್ಯಾದ ಪರಮಾಣು ಸಾಮರ್ಥ್ಯ ಮತ್ತು ಕ್ಷಿಪಣಿ ಸಾಮರ್ಥ್ಯವು ಅಮೆರಿಕಕ್ಕಿಂತ ತುಂಬ ಕಡಿಮೆ ಸಾಮರ್ಥ್ಯದವು. ಅಮೆರಿಕ ತುಂಬ ಮುಂದಿದೆ ಎಂದು ಸಮಾಧಾನಪಟ್ಟುಕೊಂಡರು. ಶೀತಲಯುದ್ದದ ಸಂದರ್ಭದಲ್ಲಿ ಇದಕ್ಕಿಂತ ಒಳ್ಳೆಯ ಸುದ್ದಿ ಬೇರೇನಿದ್ದೀತು?
ಅಮೇರಿಕವು ತನ್ನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಸಂಗತಿ ರಷ್ಯಾಕ್ಕೆ ಗೊತ್ತಿತ್ತು. ರಷ್ಯಾದ ರಡಾರ್‌ಗಳು ನಾಲ್ಕು ವರ್ಷಗಳಿಂದ ಈ ಬೇಹುಗಾರಿಕೆ ವಿಮಾನಗಳನ್ನು ಪತ್ತೆ ಮಾಡಿದ್ದವು. ಆದರೆ ಅವುಗಳನ್ನು ತಡೆಯುವ ಸಾಮರ್ಥ್ಯ ರಷ್ಯಾದ ಬಳಿ ಇರಲಿಲ್ಲ. ಭೂಮಿಯಿಂದ 13 ಮೈಲು ಎತ್ತರದಲ್ಲಿ ಹಾರುವ ಈ ಯು-2 ಬೇಹುಗಾರಿಕೆ ವಿಮಾನಗಳನ್ನು ರಷ್ಯಾದ ಜೆಟ್‌ಗಳಾಗಲಿ ಕ್ಷಿಪಣಿಗಳಾಗಲಿ ತಡೆಯುವಂತಿರಲಿಲ್ಲ. ಆದರೆ 1960ರ ಬೇಸಿಗೆಯ ವೇಳೆಗೆ ರಷ್ಯಾ ಆ ಸಾಮರ್ಥ್ಯವನ್ನು ಪಡೆದುಕೊಂಡಿತು. ಅದು ಭೂಮಿಯಿಂದ ನಭಕ್ಕೆ ಹಾರುವ ಝೆನಿತ್‌ ಎಂಬ ದೂರ ಶ್ರೇಣಿಯ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತ್ತು. ಆ ವರ್ಷ ಮೇ 1ರಂದು ಅದು ಸಿಐಎ ಪೈಲಟ್‌ 30 ವರ್ಷಗಳ ಫ್ರಾನ್ಸಿಸ್ ‌ ಗ್ಯಾರಿ ಪವರ್ಸ್‌ ಚಾಲನೆ ಮಾಡುತ್ತಿದ್ದ ಯು-2 ವಿಮಾನಕ್ಕೆ ತಡೆ ಒಡ್ಡಿತು.
ಬಿತ್ತು ವಿಮಾನ ಕೆಳಕ್ಕೆ-
ಭೂ ವಾತಾವರಣದ ಅಂಚಿನಲ್ಲಿ ಎತ್ತರದಲ್ಲಿ ಹಾರಾಡುತ್ತಿದ್ದ ಅಮೆರಿಕದ ಆ ಬೇಹುಗಾರಿಕೆ ವಿಮಾನವನ್ನು ಹಾರಿಸುವುದರಲ್ಲಿ ಪವರ್ಸ್‌ ವಿಶೇಷ ತರಬೇತು ಪಡೆದವನಾಗಿದ್ದ. ಸೋವಿಯೆತ್‌ ಮೇಲೆ ಹಾರುತ್ತ ಸೇನೆಯ ಆಯಕಟ್ಟಿನ ಸ್ಥಳಗಳ ಫೋಟೋವನ್ನು ಈ ವಿಮಾನ ತೆಗೆಯುತ್ತಿತ್ತು. ಎಲ್ಲವೂ ಎಣಿಸಿದಂತೆಯೇ ನಡೆದಿದ್ದರೆ ಪಾಕಿಸ್ತಾನದಿಂದ ಹೊರಟಿದ್ದ ಆ ವಿಮಾನ ನಾರ್ವೆಯ ಒಂದು ನಿಗದಿತ ತಾಣದಲ್ಲಿ ಇಳಿಯುವುದಿತ್ತು. ಆದರೆ ಹಿಂದಿನ ಎಲ್ಲ ಹಾರಾಟಗಳಂತೆ ಈ ಹಾರಾಟ ಅದೃಷ್ಟದಿಂದ ಕೂಡಿರಲಿಲ್ಲ.
ಪವರ್ಸ್‌ ಯು-2 ವಿಮಾನವನ್ನು ಸ್ವೆರ್ಡ್ಲೋವಸ್ಕ್‌ (ಈಗಿನ ಯೆಕಟೆರಿನ್‌ಬರ್ಗ್‌) ಮೇಲೆ ಹಾರಿಸುತ್ತಿದ್ದಾಗ ಭೂಮಿಯಿಂದ ಗಗನಕ್ಕೆ ನೆಗೆಯುವ ಕ್ಷಿಪಣಿಯನ್ನು ಸೋವಿಯತ್‌ ವಿಮಾನದತ್ತ ಹಾರಿಬಿಟ್ಟಿತು. ಅದು ವಿಮಾನದ ಹತ್ತಿರವೇ ಸ್ಫೋಟಗೊಂಡು ವಿಮಾನ ತನ್ನ ಹಾರಾಟದ ಎತ್ತರದಿಂದ ಕೆಳಕ್ಕೆ ಕುಸಿಯುವಂತೆ ಆಯಿತು. ಆಗ ಮತ್ತೊಂದು ಕ್ಷಿಪಣಿಯನ್ನು ಹಾರಿಸಿದಾಗ ಅದು ವಿಮಾನಕ್ಕೆ ನೇರವಾಗಿ ಬಡಿಯಿತು. ಆಗ ವಿಮಾನ ಕೆಳಕ್ಕೆ ಉರುಳಲಾರಂಭಿಸಿತು. ಪವರ್ಸ್‌ ಪ್ಯಾರಾಚ್ಯೂಟ್‌ ಬಳಸಿ ಭೂಮಿಯನ್ನು ತಲುಪಿದಾಗ ಸೋವಿಯತ್‌ ಪಡೆಗಳು ಅವನನ್ನು ಸುತ್ತುವರಿದಿದ್ದವು. ಪವರ್ಸ್‌ ಬಂಧನವು ಬಹುದೊಡ್ಡ ರಾಜತಾಂತ್ರಿಕ ಸಮಸ್ಯೆಯನ್ನು ತಂದೊಡ್ಡಿತು.
ಅಮೆರಿಕದ ನಿರಾಕರಣೆ-
ಮೇ 5ರಂದು ಖ್ರುಶ್ಚೇವ್‌ ಸೋವಿಯತ್‌ ಮಿಲಿಟರಿಯು ಅಮೆರಿಕದ ಒಂದು ಬೇಹುಗಾರಿಕೆ ವಿಮಾನವನ್ನು ಹೊಡೆದುರುಳಿಸಿದೆ ಎಂದು ಪ್ರಕಟಿಸಿದರು. ಆದರ ಚಾಲಕ ಪವರ್ಸ್‌ನನ್ನು ಸೆರೆಹಿಡಿಯಲಾಗಿದೆ ಎಂಬ ಅಂಶವನ್ನು ಮುಚ್ಚಿಟ್ಟರು. ಹೊಡೆದುರುಳಿಸಿದ ವಿಮಾನದಿಂದ ಬೇಹುಗಾರಿಕೆಯ ಸಾಕ್ಷ್ಯ ಸಿಗುವುದು ಅತ್ಯಲ್ಪ. ಚಾಲಕ ಸತ್ತುಹೋಗಿರಬಹುದು ಎಂದುಕೊಂಡು ರಷ್ಯಾದ ಹೇಳಿಕೆಯನ್ನು ಅಮೆರಿಕ ಅಲ್ಲಗಳೆಯಿತು. ಅದೊಂದು ಸಾಮಾನ್ಯವಾದ ಹವಾಮಾನ ವೀಕ್ಷಣೆಯ ವಿಮಾನವಾಗಿತ್ತು. ದಾರಿತಪ್ಪಿ ರಷ್ಯಾದ ನೆಲೆಯಲ್ಲಿ ಬಂದಿತ್ತು ಎಂದು ಹೇಳಿತು. ಸೋವಿಯತ್‌ ಅದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿತು. ವಿಮಾನದ ಅವಶೇಷಗಳ ಜೊತೆಯಲ್ಲಿ ಸೆರೆಸಿಕ್ಕಿದ ಚಾಲಕನ ಭಾವಚಿತ್ರವನ್ನೂ ಅದು ಪ್ರದರ್ಶಿಸಿತು. ಅದು ಬೇಹುಗಾರಿಕೆಯ ವಿಮಾನವೇ ಆಗಿತ್ತು ಎಂಬುದು ಅವಶೇಷಗಳಿಂದ ಸಿದ್ಧವಾಗಿತ್ತು.
ಅದೇ ತಿಂಗಳ 14ರಂದು ಪ್ಯಾರಿಸ್‌ನಲ್ಲಿ ಫ್ರಾನ್ಸ್‌ ಮತ್ತು ಬ್ರಿಟನ್ನಿನ ನಾಯಕರೊಂದಿಗೆ ಸೋವಿಯತ್‌ ಮತ್ತು ಅಮೆರಿಕದ ನಾಯಕರ ಶೃಂಗ ನಡೆಯುವುದಿತ್ತು. ಆ ಸಭೆಯಲ್ಲಿ ಪರಮಾಣು ಅಸ್ತ್ರಗಳ ಉತ್ಪಾದನೆ ಮತ್ತು ಪ್ರಯೋಗಗಳ ಮೇಲೆ ನಿಯಂತ್ರಣ ಹೇರಿಕೊಳ್ಳುವ ಸಂಬಂಧದಲ್ಲಿ ಹೊಸ ಒಪ್ಪಂದಕ್ಕೆ ಬರಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಈ ಯು-2 ವಿಮಾನ ಪ್ರಕರಣದಿಂದಾಗಿ ಅಸಾಧ್ಯವೆಂಬಂತೆ ತೋರಿತು.
ಪ್ಯಾರಿಸ್‌ ಶೃಂಗ ಆರಂಭವಾಗುವುದಕ್ಕೆ ಮುನ್ನ ಐಸೆನ್‌ಹೋವರ್‌ ಆಡಳಿತವು ಹವಾಮಾನ ವೀಕ್ಷಣೆಯ ವಿಮಾನ ಎಂಬ ಹೇಳಿಕೆಯನ್ನು ಹಿಂದಕ್ಕೆ ಪಡೆಯಿತು. ಅದು ಬೇಹುಗಾರಿಕೆಯ ವಿಮಾನವೇ ಆಗಿತ್ತು ಎಂಬುದನ್ನು ಒಪ್ಪಿಕೊಂಡಿತು. ಅಧ್ಯಕ್ಷರ ತಪ್ಪೊಪ್ಪಿಗೆಯು ಶೃಂಗ ಯಶಸ್ವಿಯಾಗುವುದಕ್ಕೆ ಸಹಾಯ ಮಾಡಲಿಲ್ಲ. ಅಮೆರಿಕದ ಈ ವರ್ತನೆಯಿಂದ ಸೋವಿಯತ್‌ ಅದರೊಂದಿಗೆ ಸಹಕಾರದ ಮಾತುಕತೆಯಾಡುವುದು ಸಾಧ್ಯವಿಲ್ಲದಂತೆ ಮಾಡಿದೆ ಎಂದು ಖ್ರುಶ್ಚೇವ್‌ ಹೇಳಿದರು. ಶೃಂಗವು ಆರಂಭವಾದ ಸ್ವಲ್ಪಹೊತ್ತಿನಲ್ಲಿಯೇ ಅವರು ಬಹಿಷ್ಕಾರ ಹಾಕಿ ಹೊರನಡೆದುಬಿಟ್ಟರು. ಮುಂದಿನ ವರ್ಷಗಳಲ್ಲಿಯೂ ಪರಮಾಣು ನಿಶಸ್ತ್ರೀಕರಣದ ಮಾತುಕತೆಗಳು ಫಲಪ್ರದವಾಗಲಿಲ್ಲ.
ಪವರ್ಸ್‌ ತಾನು ಸೆರೆಯಾಗುವ ಬದಲು ಆತ್ಮಾಹುತಿ ಮಾಡಿಕೊಳ್ಳುವ ಅವಕಾಶವಿತ್ತು. ಯಾವತ್ತಾದರೂ ಸಿಕ್ಕಿಬೀಳುವ ಪ್ರಸಂಗ ಎದುರಾದರೆ ವಿಷ ತುಂಬಿದ ಅತಿ ಸೂಕ್ಷ್ಮವಾದ ಸೂಜಿಯನ್ನು ಆತನಿಗೆ ನೀಡಲಾಗಿತ್ತು. ಆದರೆ ಆತ ಅದನ್ನು ಬಳಸಲಿಲ್ಲ, ಜೀವಂತವಾಗಿರಲು ಆತ ನಿರ್ಧರಿಸಿದ್ದ. ಅದಕ್ಕಾಗಿ ಆತನನ್ನು ಹೇಡಿ ಎಂದು ಆತನ ದೇಶದಲ್ಲಿ ಆತನ ಸಹೋದ್ಯೋಗಿಗಳು ಜರೆದರು. ಆತ ಬದುಕಿದ್ದುದರಿಂದ ಅಮೆರಿಕವು ಮುಜುಗರಕ್ಕೆ ಒಳಗಾಗಿತ್ತು.
ಸೋವಿಯತ್‌ ಜೈಲಿನಲ್ಲಿದ್ದ ಅವನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಹತ್ತು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಆದರೆ ಅಮೆರಿಕದಲ್ಲಿ ಸಿಕ್ಕಿಬಿದ್ದ ಸೋವಿಯತ್‌ ಏಜೆಂಟ್‌ ರುಡಾಲ್ಫ್‌ ಅಬೆಲ್‌ನ ವಿನಿಮಯಕ್ಕೆ ಪವರ್ಸ್‌ನನ್ನು ಬಿಡುಗಡೆ ಮಾಡಲಾಯಿತು. ಈ ರೀತಿಯ ಒಪ್ಪಂದ ಅಮೆರಿಕ ಮತ್ತು ರಷ್ಯಾ ನಡುವೆ ನಡೆದದ್ದು ಅದೇ ಮೊದಲಾಗಿತ್ತು. ಅಮೆರಿಕಕ್ಕೆ ಹಿಂತಿರುಗಿದ ಬಳಿಕ ಪವರ್ಸ್‌ ಸಿಐಎ ಬಿಟ್ಟು ಲಾಸ್‌ ಏಂಜೆಲ್ಸ್‌ನ ಟೀವಿ ಸ್ಟೇಶನ್‌ ಒಂದರಲ್ಲಿ ಹೆಲಿಕಾಪ್ಟರ್‌ ಚಾಲಕನಾಗಿ ಸೇರಿಕೊಂಡನು. 1977ರಲ್ಲಿ ನಡೆದ ಹೆಲಿಕಾಪ್ಟರ್‌ ಅಪಘಾತದಲ್ಲಿ ಆತ ಸಾವಿಗೀಡಾದನು. ಆಗ ಆತನ ವಯಸ್ಸು ಕೇವಲ 47.