*ಪ್ರಜೆ-ಪ್ರಭುವಿನ ನಡುವಿನ ಕೊಂಡಿ

ಹಳ ಮಾತನಾಡುವ ಹೆಣ್ಣುಮಕ್ಕಳನ್ನು ಕಂಡಾಗ `ಒಳ್ಳೆ ಅಡಗೂಳಜ್ಜಿ ಹಾಗೆ ಮಾತಾಡ್ತಾ ಇದ್ದೀಯಾ’ ಎಂದು ಮೂದಲಿಸುವವರು ಇದ್ದಾರೆ.
ಯಾರು ಈ ಅಡಗೂಳಜ್ಜಿ? ಅಡುಗೆಯನ್ನು ಮಾಡಿ ಬಡಿಸುವವಳು ಅಡಗೂಳಜ್ಜಿ. ಹಿಂದಿನ ಕಾಲದಲ್ಲಿ ಈಗಿನಂತೆ ಊರುಗಳಲ್ಲಿ ಹೊಟೇಲುಗಳು ಇರಲಿಲ್ಲ. ದಾರಿಯ ಪಕ್ಕದಲ್ಲಿ ಪ್ರಯಾಣಿಕರಿಗೆ ಊಟವನ್ನು ಮಾಡಿ ಹಾಕಲು ಅಡಗೂಳಜ್ಜಿಯರು ಮನೆಗಳನ್ನು ಮಾಡಿಕೊಂಡಿರುತ್ತಿದ್ದರು. ಪ್ರಯಾಣಿಕರು ಇಂಥ ಅಡಗೂಳಜ್ಜಿಯರ ಮನೆಗಳಲ್ಲಿ ನಿಂತು ವಿಶ್ರಮಿಸಿಕೊಂಡು ಆಹಾರ ಸೇವಿಸಿ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು.
ಪ್ರಯಾಣಿಕರು ಬರುತ್ತಾ ಹೋಗುತ್ತಾ ಇರುವುದರಿಂದ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಅಡಗೂಳಜ್ಜಿಯರಲ್ಲಿ ಸಹಜವಾಗಿಯೇ ಹತ್ತೂರ ಸುದ್ದಿಗಳು ಸಂಗ್ರಹವಾಗುತ್ತಿದ್ದವು. ಇವು ರೋಚಕವೂ ಸ್ವಾರಸ್ಯಭರಿತವೂ ಆಗಿರುತ್ತಿದ್ದವು. ಹೀಗಾಗಿ ಅಡಗೂಳಜ್ಜಿಯರು ಸಹಜವಾಗಿ ಮಾತನಾಡಿದರೂ ಕತೆಗಳಂತೆಯೇ ಅವು ಕೇಳುತ್ತಿದ್ದವು.
ರಾಜ ಮಹಾರಾಜರು ಅಡಗೂಳಜ್ಜಿಯರನ್ನು ತಮ್ಮ ಬೇಹುಗಾರರನ್ನಾಗಿ ಪರಿಗಣಿಸುತ್ತಿದ್ದರು. ಅವರಿಂದ ತಿಳಿದುಬರುವ ಸುದ್ದಿಯ ಮೇಲಿಂದಲೇ ರಾಜ್ಯದಲ್ಲಿಯ ಆಗುಹೋಗುಗಳನ್ನು ಅರಿಯುತ್ತಿದ್ದರು. ಒಂದು ರೀತಿಯಲ್ಲಿ ಅಡಗೂಳಜ್ಜಿಯರು ಪ್ರಜೆ- ಪ್ರಭುವಿನ ನಡುವಿನ ಕೊಂಡಿಯಾಗಿದ್ದರು.