ಹಿಂದೆಲ್ಲ ಹೊಳೆಸಾಲಿನಲ್ಲಿ ಹೆಂಚಿನ ಮನೆಗಳು ಅಪರೂಪ. ಒಂದೂರಿನಲ್ಲಿ ಹೆಂಚಿನ ಮನೆಗಳು ಎಷ್ಟು ಎಂದು ಕೇಳಿದರೆ ಕೈಬೆರಳಿನಲ್ಲಿ ಎಣಿಕೆ ಮಾಡಿ ಹೇಳಬಹುದಾಗಿತ್ತು. ಕಾಸರಕೋಡು, ಮಾವಿನಕುರ್ವೆಗಳಲ್ಲಿ ಹೆಂಚಿನ ಕಾರ್ಖಾನೆಗಳಿದ್ದರೂ ಮಚ್ವೆಯಲ್ಲಿ ತಂದ ಮಂಗಳೂರು ಹೆಂಚಿನ ಮನೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಅಂಥ ಒಂದೆರಡು ಮನೆಗಳೂ ಹೊಳೆಸಾಲಿನಲ್ಲಿದ್ದವು. ಅದು ಬಿಟ್ಟರೆ ಉಳಿದವು ಹೊದಿಕೆಯ ಮನೆಗಳಾಗಿದ್ದವು. ಹೊದಿಕೆಯ ಮನೆಗಳೆಂದರೆ ತೆಂಗಿನ ಮಡ್ಲು ನೇಯ್ದು ಮಾಡಿದ ತಡಿಕೆಯನ್ನು ಹೊದಿಸಿದ್ದು, ಕಬ್ಬಿನ ಗರಿಗಳನ್ನು ಹೊದೆಸಿದ್ದು, ಅಡಕೆ ಮರದ ಸೋಗೆಯನ್ನು ಹೊದೆಸಿದ್ದು, ತಾಳೆ ಮರದ ಗರಿಯನ್ನು ಹೊದೆಸಿದ್ದು, ಕುಂಬರಿಯಲ್ಲಿ ಬೆಳೆದ ಕರಡವನ್ನು ಹೊದೆಸಿದ್ದು, ಬತ್ತದ ಹುಲ್ಲನ್ನು ಹೊದೆಸಿದ್ದು ಹೀಗೆ ತರಾವರಿ ಮನೆಗಳು ಇದ್ದವು. ಇವುಗಳನ್ನು ಹೊದಿಕೆ ಮಾಡುವುದಕ್ಕೆ ಕಸಬುದಾರರೇ ಬೇಕಾಗುತ್ತಿದ್ದರು.
ಇಂಥ ಹೊದಿಕೆಗಳನ್ನು ಗಡುಗಾಲ ಆರಂಭಕ್ಕೆ ಮೊದಲೇ ಮಾಡಿ ಮುಗಿಸುತ್ತಿದ್ದರು. ಮನೆಗಳು, ಬಚ್ಚಲುಗಳು, ಕೊಟ್ಟಿಗೆಗಳು ಎಲ್ಲವೂ ಇಂಥ ಹೊದಿಕೆಯಿಂದ ಶೋಭಿಸುತ್ತಿದ್ದವು. ಗಡುಗಾಲದ ಆರಂಭದಲ್ಲಿ ಹೊಳೆಸಾಲಿಗೆ ಯಾರಾದರೂ ಹೊಸಬರು ಬಂದರೆ ಮನೆಗಳ ಹೊಸತನ ಕಣ್ಣಿಗೆ ರಾಚುತ್ತಿದ್ದವು. ಈ ಮನೆಗಳನ್ನು ಹೊದಿಕೆ ಮಾಡುವುದಕ್ಕೆ ಕನಿಷ್ಠ ಹತ್ತು ಹನ್ನೆರಡು ಜನರ ತಂಡವೇ ಬೇಕಾಗುತ್ತಿತ್ತು. ಆದರೆ ಇವರು ಯಾರೂ ಕೂಲಿಗೆ ಬರುತ್ತಿರಲಿಲ್ಲ. ಇವತ್ತು ಒಬ್ಬರ ಮನೆಗೆ ಒಬ್ಬ ಹೋದರೆ ಇನ್ನೊಂದು ದಿನ ಆತನ ಮನೆಗೆ ಇವನು ಹೋಗಬೇಕಿತ್ತು. ಇದಕ್ಕೆ ಮುರಿಯಾಳು ಅನ್ನುತ್ತಿದ್ದರು. ಎಲ್ಲರೂ ಒಟ್ಟಾಗಿ ಮಾಡುವ ಈ ಕೆಲಸಕ್ಕೆ ಕಂಬಳ ಎನ್ನುತ್ತಿದ್ದರು. ಹೊದಿಕೆಯ ಕಂಬಳ, ಗೊಬ್ಬರ ಹೊರುವ ಕಂಬಳ, ಗದ್ದೆ ಉಳುವ ಕಂಬಳ, ನಾಟಿ ಕಂಬಳ ಇಂಥವೆಲ್ಲ ಹೊಳೆಸಾಲಿನಲ್ಲಿ ಸಾಮಾನ್ಯ. ಕೂಲಿಯಿಲ್ಲದ ಕೆಲಸ ಕಂಬಳಕ್ಕೆ ಬರುವವರಿಗೆ ಭರ್ಜರಿಯಾಗಿ ಊಟೋಪಚಾರ ನಡೆಯುತ್ತಿತ್ತು. ಎಳ್ಳಿನ ಆಸರ, ರಾಗಿಯ ಆಸರ, ಉದ್ದಿನ ಆಸರ ಎಂದೆಲ್ಲ ಮಾಡಿಕೊಡುತ್ತಿದ್ದರು. ಜೊತೆಗೆ ಊಟವೂ ಇರುತ್ತಿತ್ತು.
ಈ ಕಂಬಳಕ್ಕೆ ಬರುವವರಲ್ಲಿ ತಮ್ಮ ಕೌಶಲ್ಯ ಪ್ರದರ್ಶನದ ಪೈಪೋಟಿಯೂ ನಡೆಯುತ್ತಿತ್ತು. ಹಾಗೆಯೇ ಹೊಸ ಹುಡುಗರಿಗೆ ತರಬೇತಿಯೂ ನಡೆಯುತ್ತಿತ್ತು. ಹೊದಿಕೆಯ ಕಂಬಳದಲ್ಲಿ ಹೊಸ ಹುಡುಗರನ್ನು ಮಧ್ಯದಲ್ಲಿ ಕುಳ್ಳಿರಿಸಿಕೊಂಡು ಅವರಿಗೆ ಕೆಲಸದ ಗುಟ್ಟುಗಳನ್ನು ಹಿರಿಯರು ಹೇಳಿಕೊಡುತ್ತಿದ್ದರು. ತಮ್ಮ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವವರು ತಯಾರಾಗಲಿ ಎಂಬುದು ಅವರ ಉದ್ದೇಶವಾಗಿತ್ತು. ಹೀಗೆ ಹೊಸ ಹುಡುಗರನ್ನು ತಯಾರು ಮಾಡುವುದರಲ್ಲಿ ಹನುಮಯ್ಯ ಹೆಸರುವಾಸಿಯಾಗಿದ್ದ. ಹೊಳೆಸಾಲಿನಲ್ಲಿ ಹನುಮಯ್ಯನ ಹೊದಿಕೆಯ ಕಸಬುದಾರಿಕೆ ನಾಲ್ಕು ಜನರ ಮಾತಿನ ನಡುವೆ ಬಂದುಹೋಗುವ ವಿಷಯವಾಗಿತ್ತು. ಹೊದಿಕೆಯ ಹನುಮಯ್ಯ ಎಂದೇ ಕೆಲವು ಸಲ ಅವನನ್ನು ಕರೆಯುತ್ತಿದ್ದರು. ಇಂಥ ಹನುಮಯ್ಯನು ಮಾದೇವ ಗೌಡರ ಕೊಟ್ಟಿಗೆಯ ಹೊದಿಕೆಗೆ ಹೋದವನು ಕೊಟ್ಟಿಗೆಯ ಮಾಡಿನ ಮೇಲೆಯೇ ಜೀವ ಬಿಟ್ಟಿದ್ದು ಹೊಳೆಸಾಲಿನವರಿಗೆ ಇವತ್ತಿಗೂ ಬಿಡಿಸಲಾಗದ ಒಗಟಾಗಿಯೇ ಉಳಿದುಕೊಂಡಿದೆ.
ಮಾದೇವ ಗೌಡರದು ಇಪ್ಪತ್ತು ದನಕರುಗಳನ್ನು ಕಟ್ಟುವ ನಾಲ್ಕಂಕಣದ ನಾಲ್ಕು ಮಾಡಿನ ದೊಡ್ಡ ಕೊಟ್ಟಿಗೆಯೇ ಆಗಿತ್ತು. ಗಡುಗಾಲಕ್ಕೆ ತಿಂಗಳಿರುವಾಗಲೇ ಮಾದೇವ ಗೌಡರು ಒಂದಿಪ್ಪತ್ತು ಜನರ ತಂಡವನ್ನು ಸೇರಿಸಿ ಹೊದಿಕೆಯ ಕಂಬಳ ಏರ್ಪಾಟು ಮಾಡಿದ್ದರು. ಆ ತಂಡದಲ್ಲಿ ಕಸಬುದಾರಿ ಹನುಮಯ್ಯ ಇದ್ದನೆಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಅದರ ಹಿಂದಿನ ವರ್ಷವೂ ಹನುಮಯ್ಯ ಬಂದಿದ್ದನು. ಕಳೆದ ವರ್ಷ ತಾನು ಏರಿದ ಮಾಡನ್ನೇ ಈ ಬಾರಿಯೂ ಏರಿದ್ದ. ಅವನ ಅಕ್ಕಪಕ್ಕದಲ್ಲಿ ಮೂರ್ನಾಲ್ಕು ಜನರು ಇದ್ದರು. ಅವರೆಲ್ಲರಿಗೂ ಹಾಗೆ ಮಾಡಿ ಹೀಗೆ ಮಾಡಿ ಎಂದೆಲ್ಲ ಹನುಮಯ್ಯ ಹೇಳುತ್ತಿದ್ದನು. ಹಳೆಯ ತೆಂಗಿನ ಗರಿಯ ಮಡ್ಲುಗಳನ್ನು ಕೀಳುತ್ತಿದ್ದರು. ತುಂಬ ಕೆಟ್ಟುಹೋಗಿದ್ದರೆ ಅದನ್ನು ಕೆಳಕ್ಕೆ ಎಸೆಯುತ್ತಿದ್ದರು. ಸುಮಾರಾಗಿ ಮತ್ತೆ ಹೊದೆಸಬಹುದು ಎನ್ನುವ ಹಾಗಿದ್ದರೆ ಅಲ್ಲಿಯೇ ಇರಿಸಿಕೊಳ್ಳುತ್ತಿದ್ದರು. ಬಿದಿರುಗಳುಗಳು ಲಡ್ಡಾಗಿದ್ದರೆ ಅದನ್ನು ತೆಗೆದು ಹೊಸದನ್ನು ಸೇರಿಸುತ್ತಿದ್ದರು. ಅಡಕೆಯ ದಬ್ಬೆ ಲಡ್ಡಾಗಿದ್ದರೆ ಅದನ್ನೂ ಬದಲಾಯಿಸುತ್ತಿದ್ದರು. ಅದನ್ನು ಕಟ್ಟುವುದಕ್ಕೆ ಬೆತ್ತದ ಬಳ್ಳಿಗಳನ್ನು ಬಳಸುತ್ತಿದ್ದರು. ಈ ಬೆತ್ತದ ಬಳ್ಳಿ ಕನಿಷ್ಠ ಹತ್ತು ವರ್ಷವಾದರೂ ಗಟ್ಟಿಯಾಗಿಯೇ ಇರುತ್ತಿದ್ದವು.
ಹನುಮಯ್ಯ ಕುಳಿತಲ್ಲಿ ಒಂದು ಬಿದಿರಿನ ಗಳುವು ಮುರಿದಿತ್ತು. ಕಳೆದ ವರ್ಷ ಅದೇ ಗಳುವಿಗೆ ಹೊಸ ಅಡಕೆಯ ದಬ್ಬೆಯನ್ನು ಹಾಕಿ ಬೆತ್ತದ ಬಳ್ಳಿಯಿಂದ ಹನುಮಯ್ಯನೇ ಬಿಗಿದಿದ್ದ. ಅದು ಅವನಿಗೆ ಚೆನ್ನಾಗಿ ನೆನಪಿತ್ತು. ನೆನಪಿರಲು ಕಾರಣ ಅದೇನೋ ಅವನ ಕೈಗೆ ಚುಚ್ಚಿದ ಹಾಗೆ ಆಗಿ ಸ್ವಲ್ಪ ರಕ್ತವೂ ಬಂದಿತ್ತು. ಲಡ್ಡಾದ ಗಳುವನ್ನು ತೆಗೆಯಬೇಕೆಂದರೆ ಆ ಬೆತ್ತದ ಬಳ್ಳಿಯ ಕಟ್ಟನ್ನು ಬಿಚ್ಚಬೇಕಿತ್ತು. ಹನುಮಯ್ಯನೇ ಆ ಕಟ್ಟನ್ನು ಬಿಚ್ಚತೊಡಗಿದ. ಅದೇನೋ ಒಣಗಿದ ಹಾವಿನ ದೇಹದಂತೆ ಇದ್ದದ್ದು ಬೆತ್ತದ ಬಳ್ಳಿಯ ಅಡಿಭಾಗದಲ್ಲಿ ಹನುಮಯ್ಯ ಕಂಡ. ಅವನಿಗೆ ಎಲ್ಲವೂ ಗೊತ್ತಾಗಿ ಹೋಯಿತು. ಕಳೆದ ವರ್ಷ ದಬ್ಬೆಯನ್ನು ಕಟ್ಟುವಾಗ ತಾನೇ ಆ ಹಾವನ್ನು ಸೇರಿಸಿಯೇ ಬಿಗಿದು ಬಿಟ್ಟ ವಾಸ್ತವ ಮನದಟ್ಟಾಯತು. ಅಂದರೆ ತನಗೆ ಚುಚ್ಚಿದ್ದು ಮತ್ತೇನೂ ಅಲ್ಲ, ಆ ಹಾವೇ ಕಡಿದದ್ದು ಎಂಬುದು ಸ್ಪಷ್ಟವಾಯಿತು. ಪಕ್ಕದಲ್ಲಿದ್ದ ರಾಮ ಗೌಡನಿಗೆ, ಘಾತ ಆಗಿಹೋಯಿತು ನೋಡು ರಾಮ ಎಂದು ಹೇಳುತ್ತಿರುವಾಗಲೇ ಹನುಮಯ್ಯನ ಬಾಯಿಂದ, ಮೂಗಿನಿಂದ ರಕ್ತ ಬರುತ್ತಿತ್ತು. ಕೊಟ್ಟಿಗೆಯ ಮಾಡಿನ ಮೇಲೆಯೇ ಹನುಮಯ್ಯನ ದೇಹ ಒರಗಿತ್ತು. ಕೊಟ್ಟಿಗೆಯ ಕಂಬಳದ ಕೂಗು, ಬೊಬ್ಬೆಗಳೆಲ್ಲ ಒಂದು ಕ್ಷಣದಲ್ಲಿ ಮೌನವಾಗಿ ಬದಲಾಯಿತು.
ಹನುಮಯ್ಯನನ್ನು ಮಾಡಿನಿಂದ ಕೆಳಗಿಳಿಸಿ ಮರದ ನೆರಳಿನಲ್ಲಿ ಗೋಣಿ ಹಾಸಿ ಮಲಗಿಸಿದರು. ಆತ ಉಸಿರಾಡುತ್ತಿದ್ದ. ತನ್ನ ಕೈ ಬೆರಳನ್ನು ಮುಟ್ಟಿಮುಟ್ಟಿ ತೋರಿಸುತ್ತಿದ್ದ. ಅದೇನೆಂದು ಉಳಿದವರಿಗೆ ಅರ್ಥವಾಗುವ ಮೊದಲೇ ಹನುಮಯ್ಯನ ಉಸಿರು ನಿಂತುಹೋಗಿತ್ತು. ಹೃದಯದ ಬಡಿದಾಟ ನಿಂತಿತ್ತು. ಹಾವು ಕಡಿದೂ ತಾನು ಒಂದು ವರ್ಷ ಬದುಕಿ ಉಳಿದೆನಲ್ಲ ಎಂಬ ಸಂಭ್ರಮ ಒಂದು ಕಡೆ, ಹಿರಿಹಾವನ್ನು ತಾನು ಕೊಂದೆನೆಂಬ ಪಾಪಪ್ರಜ್ಞೆ ಇನ್ನೊಂದು ಕಡೆ. ಅವನ ರಕ್ತದೊತ್ತಡ ಒಮ್ಮೆಲೆ ಹೆಚ್ಚಿತು. ಹೃದಯಸ್ತಂಭನ. ಹನುಮಯ್ಯನನ್ನು ಬಲಿ ಪಡೆದುಕೊಂಡಿದ್ದು ಯಾವುದು ಎಂದು ಹೇಳುವವರು ಯಾರು? ಈಗಲೂ ಹೊದಿಕೆಯ ಹನುಮಯ್ಯ ಹೊಳೆಸಾಲಿನವರ ಬಾಯಲ್ಲಿ ಮಾತಾಗಿ ಉಳಿದುಕೊಂಡಿದ್ದಾನೆ. ಎಲ್ಲ ಸಮಯದಲ್ಲಿ ಅಲ್ಲದಿದ್ದರೂ ಹೊದಿಕೆಯ ಕಂಬಳದಲ್ಲಿ ಆತನ ನೆನಪು ತೆಗೆಯದವರು ಇಲ್ಲವೇ ಇಲ್ಲ.
Hodike hanmayya kate
chennagittu. Idna
Hrudyagata anbhudalla. Sir,
Namskara. Time keeper
agidde Belgavi IE mattu KP.
Nanu 1997 alke Tammagala
Balaga kudidde. But nanu
Kannada, Englist Typist Agi.
Ee Varsh June 22 kke Mane
kadege nadeyo kala. (Retire).
Matte aa kala estu
channagittu alva. Old and
yengar Janration . Shri u
tarads Tavu, sarju,
Timmappa Batru,
Hegeleyarada. Ravi hegde,
matte tamma team. Ladies
team. Bhavana, Malati, Preeti
. En chandagiddevo. By Sir.
Elladru betti adre noduva. Jai
Karnataka. Hige kate kavana
mundu varesi.
ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕೆ
ಧನ್ಯವಾದ ಸುರೇಶ್