*ಸಾಯುವಾಗ ಮಾತ್ರ ಶ್ರೇಷ್ಠತೆ ಹೊರಬೀಳುತ್ತದೆ
ಹಂಸ ತುಂಬ ಸುಂದರವಾದ ಪಕ್ಷಿ. ಪರಿಶುದ್ಧತೆಯ ಸಂಕೇತ ಅದು. ಹಾಲಿನಿಂದ ನೀರನ್ನು ಬೇರ್ಪಡಿಸಿ ಅದು ಕುಡಿಯುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಂಸಕ್ಕೆ ಸಂಬಂಧಿಸಿದ ಇನ್ನೊಂದು ನಂಬಿಕೆ, ಅದು ಸಾಯುವಾಗ ಅತ್ಯಂತ ಮಧುರವಾಗಿ ಹೃದಯಂಗಮವಾಗಿ ಹಾಡುತ್ತದೆಯಂತೆ. ಹಾಗೆ ಹಾಡುತ್ತ ಹಾಡುತ್ತ ಅದು ಸತ್ತುಹೋಗುವುದಂತೆ.
ಭಾರತೀಯ ಸಾಹಿತ್ಯದಲ್ಲಿ ಇದನ್ನು ಉಪಮೆಯ ರೀತಿಯಲ್ಲೋ ದೃಷ್ಟಾಂತದ ರೀತಿಯಲ್ಲೋ ಬಳಸಿಕೊಂಡಿದ್ದಾರೆ. ಅದೇ ಪಾಶ್ಚಾತ್ಯ ಸಾಹಿತ್ಯದಲ್ಲೂ ಇದು ಸ್ವಾನ್ ಸಾಂಗ್ ಎಂದು ಬಳಕೆಯಾಗಿದೆ. ಷೇಕ್ಸ್ಪಿಯರ್ನ ಮರ್ಚೆಂಟ್ ಆಫ್ ವೆನಿಸ್ನಲ್ಲಿ ಇದರ ಪ್ರಯೋಗವಾಗಿದೆ.
ಕನ್ನಡದಲ್ಲಿ ತ.ರಾ.ಸು. ಅವರು ಹಂಸಗೀತೆ ಎಂಬ ಕಾದಂಬರಿಯನ್ನು ಬರೆದರು. ಇದು ನಂತರ ಸಿನಿಮಾ ಆಗಿಯೂ ಹೆಸರು ಮಾಡಿತು. ಇದರಲ್ಲಿಯ ಕಥಾನಾಯಕ ಸಂಗೀತಗಾರ. ಅವನ ಅಂತ್ಯ ಹಾಡುತ್ತ ಹಾಡುತ್ತ ಆಗುತ್ತದೆ.
ಸಾಯುವಾಗ ಹಂಸ ಹಾಡುತ್ತದೆಯೆ? ಅದು ಒಂದು ಕವಿಸಮಯ. ಪ್ರಾಚೀನ ಗ್ರೀಸ್ ವಿದ್ವಾಂಸ ಪ್ಲಿನಿ ದ ಎಲ್ಡರ್ ಎಂಬಾತ ಕ್ರಿ.ಶ. 77ರಲ್ಲಿ ತನ್ನ ನ್ಯಾಚುರಲ್ ಹಿಸ್ಟರಿ ಎಂಬ ಗ್ರಂಥದಲ್ಲಿ ಹಂಸಗಳು ಸಾಯುವಾಗ ಹಾಡುವುದಿಲ್ಲ ಎಂದು ಸಾರಿದ.
ಅತ್ಯಂತ ಶ್ರೇಷ್ಠ ಅಭಿವ್ಯಕ್ತಿ ಎಂದು ಹೇಳುವಾಗ ಅಥವಾ ಯಾರದಾದರೂ ಅಂತ್ಯವನ್ನು ಹೇಳುವಾಗ ಹಂಸಗೀತೆ ಪದ ಪ್ರಯೋಗವಾಗುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.