*ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತು
ಹೋಗಯ್ಯ ಹೋಗ್, ನಿಂದೊಳ್ಳೆ ಹಾವೇರಿ ನ್ಯಾಯ ಆಯ್ತಲ್ಲ ಎಂದು ಮಾತಿನ ನಡುವೆ ಹೇಳಿಬಿಡುತ್ತೇವೆ. ಹಾವೇರಿ ನ್ಯಾಯ ಎಂದರೇನು ಎಂಬುದು ಸ್ವತಃ ಹಾವೇರಿಯವರಿಗೂ ಗೊತ್ತಿಲ್ಲ. ನಿಮ್ಮೂರಿಂದೇ ನ್ಯಾಯ ಇದು. ನಿಮಗೇ ಗೊತ್ತಿಲ್ಲಂದ್ರ ಹೆಂಗ್ರಿ ಎಂದು ಕೇಳಿದರೆ ಪೆಚ್ಚಾಗಿ ನಗೆ ಬೀರುತ್ತಾರೆ. ಹಾವೇರಿಗೂ ಹಾವೇರಿ ನ್ಯಾಯಕ್ಕೂ ಎಂಥ ನಂಟು ಎಂಬುದು ಇಂದಿಗೂ ಬಿಡಿಸಲಾಗದ ಒಗಟು.
ಅತ್ತ ಕಡೆಯೂ ಅಲ್ಲ, ಇತ್ತ ಕಡೆಯೂ ಇಲ್ಲ ಎಂಬಂತೆ ನ್ಯಾಯ ಹೇಳುವುದು ಹಾವೇರಿ ನ್ಯಾಯ. ಅಡ್ಡ ಗೋಡಯ ಮೇಲೆ ದೀಪ ಇಟ್ಟ ಹಾಗೆ ಮಾತನಾಡುವುದು ಹಾವೇರಿ ನ್ಯಾಯ. ಅತ್ತ ಹಾವೂ ಸಾಯಬಾರದು ಇತ್ತ ಕೋಲೂ ಮುರಿಯಬಾರದು ಎನ್ನುವಂಥ ತೀರ್ಪನ್ನು ಹೇಳುವುದು ಹಾವೇರಿ ನ್ಯಾಯ.
ಅಂದಹಾಗೆ ಈಗ ಹಾವಿಗೂ ನ್ಯಾಯಕ್ಕೂ ಸಂಬಂಧ ಕಲ್ಪಿಸಬಹುದಾಗಿದೆ. ಹಾವು ಮೈಮೇಲೆ ಏರಿ ಬಂದಾಗ ಏನು ಮಾಡುತ್ತೀರಿ? ಏನು ಮಾಡಬೇಕೆಂದು ನಿಮ್ಮ ಮೆದುಳು ಆಲೋಚಿಸುವ ಪೂರ್ವದಲ್ಲಿಯೇ ನಿಮ್ಮ ಕಾಲುಗಳು ಅದೇನೋ ತೀರ್ಮಾನ ಕೈಗೊಂಡಿರುತ್ತವೆ. ತಮ್ಮ ಕೈ ಮೀರಿದ ಸ್ಥಿತಿಯಲ್ಲಿ, ಯಾವುದೇ ತೀರ್ಮಾನ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಕೈಗೊಳ್ಳಲಾದ ತೀರ್ಮಾನವೂ ಹಾವೇರಿ ನ್ಯಾಯವೇ.
ಹರಿ ಹೆಚ್ಚೋ ಹರ ಹೆಚ್ಚೋ ಎಂಬ ಪುರಾಣದ ವಿವಾದದಲ್ಲಿ ಇಬ್ಬರೂ ಸರಿ ಎಂಬಂಥ ಪರಿಹಾರವನ್ನು ಕಂಡುಕೊಂಡರಲ್ಲ, ಅದೂ ಹಾವೇರಿ ನ್ಯಾಯವೇ. ತಾಯಿಗೂ ಸಮಾಧಾನವಾಗಬೇಕು, ಹೆಂಡತಿಗೂ ಸಮಾಧಾನವಾಗಬೇಕು ಎಂಬ ಗಂಡನ ನಡೆಯೂ ಹಾವೇರಿ ನ್ಯಾಯವೇ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.