*ಕೇಳಿದರೇ ಭಯವಾಗುವ ಸ್ಥಿತಿ
ಎದುರಾಳಿಗಳಿಗೆ ಆತ ಸಿಂಹಸ್ವಪ್ನವಾಗಿದ್ದ ಎಂದು ವರ್ಣಿಸುವುದನ್ನು ಕೇಳಿದ್ದೇವೆ. ಅಂದರೆ ಎದುರಾಳಿಗಳು ಅವನನ್ನು ಕಂಡರೆ ಅಂಜುತ್ತಿದ್ದರು, ಎದುರಾಳಿಗಳಲ್ಲಿ ಆತ ಭಯವನ್ನು ಹುಟ್ಟಿಸುತ್ತಿದ್ದ, ಎದುರಾಳಿಗಳನ್ನು ನಾಶ ಮಾಡುವ ಸಾಮರ್ಥ್ಯ ಅತನಲ್ಲಿತ್ತು ಎಂದೆಲ್ಲ ಭಾವಾರ್ಥ ಇಲ್ಲಿ ಹುಟ್ಟುತ್ತದೆ.
ಆತನ ಹೆಸರು ಕೇಳಿದರೆ ನಿದ್ದೆಯಲ್ಲೂ ಬೆಚ್ಚಿಬೀಳುತ್ತಾರೆ ಎಂದರೆ ಆತನ ಕ್ರೂರತೆಯನ್ನೂ ಇದು ಹೇಳುತ್ತದೆ. ಪೊಲೀಸ್ ಅಧಿಕಾರಿಯೊಬ್ಬನ ವಿಷಯದಲ್ಲಿ ಅಪರಾಧಿಗಳಿಗೆ ಸಂಬಂಧಿಸಿದಂತೆ ಹೀಗೆ ಹೇಳಿದರೆ ಆತ ದಕ್ಷ ಎಂದರ್ಥ. ಇದೇ ಮಾತುಗಳನ್ನು ಅಪರಾಧಿಗಳ, ರೌಡಿಗಳ ವಿಷಯದಲ್ಲಿ ಹೇಳಿದರೆ ಆತ ಕ್ರೂರಿ ಎಂದರ್ಥ.
ಹೇಳಿಕೇಳಿ ಸಿಂಹ ಕಾಡಿನ ರಾಜ. ಅದರ ಗಾಂಭೀರ್ಯವನ್ನು ನೋಡಿದರೆ ಅಂಜಿಕೆ ಹುಟ್ಟುವುದು ಸಹಜ. ಸಿಂಹ ಒಮ್ಮೆ ಗರ್ಜನೆ ಹಾಕಿದರೆ ಎದೆ ನಡುಗುತ್ತದೆ. ಎದುರಿಗಿರುವ ಸಿಂಹವನ್ನು ನೋಡಿ ಅಂಜಿದವನು ಅದರ ನೆನಪಿನಲ್ಲೇ ಮಲಗಿದರೆ ನಿದ್ದೆ ಎಲ್ಲಿ ಬರುವುದು ಅರೆಬರೆ ನಿದ್ದೆಯಲ್ಲಿ ಸ್ವಪ್ನ ಬಿದ್ದರೂ ಸಿಂಹದ್ದೇ ಸ್ವಪ್ನ. ನಿದ್ದೆಯಲ್ಲೂ ಆತ ಅಂಜದೆ ಇರುತ್ತಾನೆಯೇ?
ಇದಕ್ಕಾಗಿಯೇ ಹೇಳುವುದು ಬದುಕಿದರೆ ಸಿಂಹದ ಹಾಗೆ ಬದುಕಬೇಕು ಎಂದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.