ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರವು ಸಂದಿರುವ ಈ ಸಂದರ್ಭದಲ್ಲಿ ನಾವೆಲ್ಲ ಈ ಬಗ್ಗೆ ಹೆಮ್ಮೆ ಪಡಬೇಕೆ ಹೊರತು ಅಪಸ್ವರ ಎತ್ತಬಾರದು. ನಾಡಿನ ಇನ್ನೊಬ್ಬ ಶ್ರೇಷ್ಠ ಸಾಹಿತಿ ಎಸ್.ಎಲ್.ಭೈರಪ್ಪ ಕೂಡ ಈ ಪ್ರಶಸ್ತಿಗೆ ಅರ್ಹರಾಗಿದ್ದವರೇ. ಅವರಿಗೆ ಇದಕ್ಕಿಂತಲೂ ಬಹಳ ಮೊದಲೇ ಈ ಪ್ರಶಸ್ತಿ ಲಭಿಸಬೇಕಿತ್ತು.
ಆದರೆ “ಭಾರತೀಯ ಜ್ಞಾನಪೀಠವು’ ಪ್ರಶಸ್ತಿಗೆ ಹೇಗೆ ಆಯ್ಕೆಮಾಡುತ್ತದೆ ಎಂಬುದನ್ನು ಗಮನಿಸಿದರೆ ಪ್ರಶಸ್ತಿಗಾಗಿ ಲಾಬಿ ಮಾಡಿದ್ದಾರೆ ಎಂಬಂಥ ಅಪಸ್ವರಗಳಿಗೆ ಆಸ್ಪದವಿರುವುದಿಲ್ಲ. ಹಲವರು ಕೇಂದ್ರ ಸರ್ಕಾರವೇ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುತ್ತದೆ ಎಂದು ಭಾವಿಸಿದ್ದಾರೆ. ಅದು ತಪ್ಪು. ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯು ಅತ್ಯಂತ ಪಾರದರ್ಶಕವಾಗಿ ನಡೆಯುತ್ತದೆ.
ಈ ಬಾರಿ ಪ್ರಕಟವಾದ 45 ಮತ್ತು 46ನೆ ಜ್ಞಾನಪೀಠ ಪ್ರಶಸ್ತಿಯ ಸಂಬಂಧದಲ್ಲಿ ಭಾರತೀಯ ಜ್ಞಾನಪೀಠದ ನಿರ್ದೇಶಕ ರವೀಂದ್ರ ಕಾಲಿಯಾ ಅವರು ಈ ವರ್ಷದ ಮಾರ್ಚ್15ರಂದು ಪ್ರಕಟಣೆಯನ್ನು ಹೊರಡಿಸಿದ್ದರು. ಈ ದಿನಾಂಕದಂದು ಪ್ರಕಟಣೆಗೊಂಡ ಪ್ರಸ್ತಾವನೆ ಪತ್ರವನ್ನು ಭಾರತೀಯ ಜ್ಞಾನಪೀಠದ ವತಿಯಿಂದ ಎಲ್ಲ ಭಾರತೀಯ ಭಾಷೆಗಳ ಪ್ರಮುಖ ಲೇಖಕರಿಗೆ ಕಳುಹಿಸಿದ್ದರು. ಅವರ ಬಳಿ ಇರುವ ಕನ್ನಡ ಸಾಹಿತಿಗಳ ಪಟ್ಟಿ ಬಹುಶಃ ಪರಿಷ್ಕೃತಗೊಂಡಿಲ್ಲ. ಏಕೆಂದರೆ ಈಗಾಗಲೆ ನಿಧನಹೊಂದಿರುವ ಕೆಲವು ಸಾಹಿತಿಗಳ ಹೆಸರಿಗೂ ಈ ಪ್ರಸ್ತಾವನೆಯ ಫಾರ್ಮ್ ಬಂದಿತ್ತು. ಇದರ ಹೊರತಾಗಿ ಪ್ರಸ್ತಾವನೆ ಫಾರ್ಮ್ ಭಾರತೀಯ ಜ್ಞಾನಪೀಠದ ವೆಬ್‌ಸೈಟ್ www.jnanpith.net ನಲ್ಲಿ ಕೂಡ ಲಭ್ಯವಿದ್ದು ಇದನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿಕೊಂಡು 30 ಏಪ್ರಿಲ್ 2011ರೊಳಗೆ ಭರ್ತಿಮಾಡಿ ಕಳುಹಿಸಬಹುದಿತ್ತು. ಈ ಸಂಬಂಧದಲ್ಲಿ ಪ್ರತಿ ವರ್ಷ ಜನವರಿ ತಿಂಗಳಲ್ಲಿಯೇ www.jnanpith.netನಲ್ಲಿ ಪ್ರಕಟಣೆ ನೀಡಿರುತ್ತಾರೆ.
ಸಂವಿಧಾನದ 8ನೆ ಪರಿಚ್ಛೇದದಲ್ಲಿ ನಮೂದಿತವಾದ ಭಾರತೀಯ ಭಾಷೆಗಳಲ್ಲಿ ರಚಿತವಾದ ಅತ್ಯುತ್ತಮ ಸೃಜನ ಸಾಹಿತ್ಯಕ್ಕಾಗಿ ಈ ಪ್ರಶಸ್ತಿ. ಒಬ್ಬ ವ್ಯಕ್ತಿಯ ಸಾಹಿತ್ಯದ ಗುಣಮಟ್ಟ ಮತ್ತು ಪ್ರಮಾಣವನ್ನು ಇಲ್ಲಿ ಗಮನಿಸಲಾಗುತ್ತದೆ ಮತ್ತು ಯಾವ ವರ್ಷಕ್ಕೆ ಯಾವ ಸಾಹಿತಿ ಪ್ರಶಸ್ತಿಗೆ ಪರಿಗಣಿತರಾಗುತ್ತಾರೋ ಆ ವರ್ಷದಿಂದ ಹಿಂದಿನ 20 ವರ್ಷಗಳ ಅವರ ಸಾಹಿತ್ಯ ಕೃಷಿಯನ್ನು ಪರಿಗಣಿಸಲಾಗುತ್ತದೆ. ಅಂದರೆ ಈ 20 ವರ್ಷಗಳ ಹಿಂದೆ ಆ ಸಾಹಿತಿ ಅದೆಷ್ಟೇ ಅಪೂರ್ವ ಕೃತಿಗಳನ್ನು ರಚಿಸಿದ್ದರೂ ಅದು ಪರಿಗಣನೆಗೆ ಬರುವುದಿಲ್ಲ.
ಅತ್ಯಂತ ಪ್ರತಿಷ್ಠಿತವೂ ವಿಶಿಷ್ಟವೂ ಆಗಿರುವ ಮತ್ತು ಅಧಿಕೃತತೆಯನ್ನು ಪಡೆದಿರುವ ಈ ಪ್ರಶಸ್ತಿಯು ವ್ಯಾಪಕವಾಗಿರುವ ತನ್ನ ಆಯ್ಕೆ ಪ್ರಕ್ರಿಯೆಯಿಂದಾಗಿ ಪಾರದರ್ಶಕತೆಯನ್ನು ಉಳಿಸಿಕೊಂಡಿದೆ. ವಿದ್ವಾಂಸರು, ವಿಮರ್ಶಕರು, ಬರೆಹಗಾರರು ಮತ್ತು ಪ್ರಬುದ್ಧ ಓದುಗರು, ಪ್ರತಿಷ್ಠಿತ ಸಂಸ್ಥೆಗಳು ಈ ಆಯ್ಕೆಯನ್ನು ಅಂತಿಮಗೊಳಸಲು ಸಹಕರಿಸಿವೆ. ಈ ಪ್ರಶಸ್ತಿಗೆ ಅರ್ಹರಾದವರನ್ನು ಆಯ್ಕೆ ಮಾಡುತ್ತೀರಿ ಎಂಬ ವಿಶ್ವಾಸ ನಮಗೆ ಇದೆ ಎಂದು ಆ ಪ್ರಸ್ತಾವನೆ ಪತ್ರದಲ್ಲಿ ರವೀಂದ್ರ ಕಾಲಿಯಾ ನಿವೇದಿಸಿಕೊಂಡಿದ್ದಾರೆ.
ಪ್ರಸ್ತಾವನೆ ಪತ್ರದಲ್ಲಿರುವ ಇನ್ನೂ ಕೆಲವು ನಿಬಂಧನೆಗಳನ್ನು ನೋಡಿರಿ:
ನೀವು ಪ್ರಸ್ತಾವ ಕಳುಹಿಸುವ ಲೇಖಕರು ಭಾರತೀಯ ಪ್ರಜೆಯಾಗಿರಬೇಕು ಮತ್ತು ಅವರು ಜೀವಂತವಾಗಿರಬೇಕು. ಮರಣೋತ್ತರವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರಿಗೂ ನೀಡುವುದಿಲ್ಲ. ಯಾವ ಲೇಖಕರೂ ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಳ್ಳಬಾರದು.
ಈ ಪ್ರಶಸ್ತಿಯನ್ನು ಒಟ್ಟಾರೆ ಸಾಹಿತ್ಯ ಕೃಷಿಗೆ ನೀಡಲಾಗುತ್ತದೆ. ಮತ್ತು ಪ್ರಶಸ್ತಿಗೆ ಶಿಫಾರಸು ಮಾಡುವ ವರ್ಷದ ಹಿಂದಿನ 20 ವರ್ಷಗಳ ಸಾಹಿತ್ಯವನ್ನು ಪರಿಗಣಿಸಬೇಕು. 2010ನೆ ವರ್ಷದ ಜ್ಞಾನಪೀಠಕ್ಕೆ ಪ್ರಸ್ತಾವ ಸಲ್ಲಿಸುವವರು ಲೇಖಕರ 1990-2009ರ ನಡುವಿನ ಬರೆಹಗಳನ್ನು ಮಾತ್ರ ಪರಿಗಣಿಸಬೇಕು.
ಒಂದು ಭಾಷೆಯು ಈ ವರ್ಷ ಪ್ರಶಸ್ತಿಯನ್ನು ಗಳಿಸಿದರೆ ಮುಂದಿನ 3 ವರ್ಷ ಆ ಭಾಷೆಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಬಾರದು. ಈ ಬಾರಿ ಮಲೆಯಾಳಂ ಮತ್ತು ಉರ್ದು ಭಾಷೆಗಳನ್ನು ಪ್ರಶಸ್ತಿಗೆ ಪರಿಗಣಿಸಲಿಲ್ಲ. ಇನ್ನೊಂದು ಮಾತು, 2009ನೆ ಸಾಲಿಗೆ ಮಾಡಿದ ಶಿಫಾರಸಿನ ಮೇರೆಗೆ ಭಾಷೆಯೊಂದು ಆಯ್ಕೆಯಾದರೆ 2010ರ ಸಾಲಿನ ಅಂತಿಮ ಸುತ್ತಿನ ಆಯ್ಕೆಯಲ್ಲಿ ಆ ಭಾಷೆಯನ್ನು ಪರಿಗಣಿಸುವುದಿಲ್ಲ. (ಈ ವಿವರಣೆ ಏಕೆಂದರೆ ಒಂದೇ ಬಾರಿ ಎರಡು ವರ್ಷಗಳ ಪ್ರಶಸ್ತಿಗೆ ಆಹ್ವಾನ ಮಾಡಿದ್ದು.)
ಒಮ್ಮೆ ಪ್ರಶಸ್ತಿಗೆ ಆಯ್ಕೆಯಾದ ಬರೆಹಗಾರರನ್ನು ಮತ್ತೆ ಪರಿಗಣಿಸುವುದಿಲ್ಲ. ಒಂದು ನಿರ್ದಿಷ್ಟ ವರ್ಷ ಪ್ರಶಸ್ತಿಗೆ ಅರ್ಹವಾದ ಪ್ರವೇಶಗಳು ಬಂದಿಲ್ಲವೆಂದು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿಗೆ ಅನ್ನಿಸಿದರೆ ಆ ವರ್ಷ ಯಾರಿಗೂ ಪ್ರಶಸ್ತಿಯನ್ನು ಕೊಡದೆ ಇರಬಹುದು
ಎಲ್ಲ ಭಾಷೆಗಳಿಂದ ಬಂದ ಪ್ರಸ್ತಾವನೆಗಳನ್ನು ಪ್ರತಿಯೊಂದು ಭಾಷೆಗೂ ಸಂಬಂಧಿಸಿದಂತೆ ರಚಿಸಿದ ಸಲಹಾ ಸಮಿತಿ ಪರಿಶೀಲಿಸುತ್ತದೆ. ಈ ಸಮಿತಿಯಲ್ಲಿ ಆಯಾ ಭಾಷೆಗಳ ಮೂವರು ಖ್ಯಾತ ವಿದ್ವಾಂಸರು ಮತ್ತು/ ಅಥವಾ ವಿಮರ್ಶಕರು ಇರುತ್ತಾರೆ. ಈ ಶಿಫಾರಸುಗಳ ಹೊರತಾಗಿಯೂ ಬೇರಾವುದೇ ಲೇಖಕ ಅಥವಾ ಲೇಖಕರು ಪ್ರಶಸ್ತಿಗೆ ಅರ್ಹರಿದ್ದಾರೆ ಎಂದು ಕಂಡು ಬಂದರೆ ಸಮಿತಿಯು ಅವರ ಹೆಸರುಗಳನ್ನೂ ಪ್ರಶಸ್ತಿಯ ನಿಯಮಗಳಿಗೆ ಅನುಗುಣವಾಗಿ ಪರಿಶೀಲಿಸುತ್ತದೆ. ವಾಸ್ತವವೆಂದರೆ, ಆಯಾ ಭಾಷೆಯ ಸಲಹಾ ಸಮಿತಿಯು ಆ ಭಾಷೆಯ ಯಾವುದೇ ಅರ್ಹ ಲೇಖಕ ಪ್ರಶಸ್ತಿಯ ಪರಿಶೀಲನೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.
ವಿವಿಧ ಭಾಷೆಯ ಸಲಹಾ ಸಮಿತಿಯ ಶಿಫಾರಸುಗಳನ್ನು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಮಂಡಳಿಯು ಪರಿಶೀಲಿಸಿ ಮೌಲ್ಯಮಾಪನ ಮಾಡುತ್ತದೆ. ಅಗತ್ಯವೆನಿಸಿದಲ್ಲಿ ಪ್ರಶಸ್ತಿಗೆ ಪರಿಗಣಿತರಾಗುವ ಲೇಖಕರ ಬರೆಹಗಳನ್ನು ಇಡಿಯಾಗಿ ಅಥವಾ ಭಾಗಶಃ ಹಿಂದಿ ಅಥವಾ ಇಂಗ್ಲಿಷಿಗೆ ಅನುವಾದ ಮಾಡಿಸುತ್ತಾರೆ. ಆಯ್ಕೆ ಮಂಡಳಿಯು ಒಬ್ಬ ಲೇಖಕನ ನಿಗದಿ ಪಡಿಸಿದ ಅವಧಿಯೊಳಗಿನ ಒಟ್ಟಾರೆ ಸೃಜನಸಾಹಿತ್ಯವನ್ನು ಪರಿಗಣಿಸುತ್ತದೆ. ಸಮಕಾಲೀನ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಅದರ ಸಾಹಿತ್ಯಕ ಮೌಲ್ಯವನ್ನು ಅಳೆಯುತ್ತದೆ.
ಯಾರ ಪರವಾಗಿ ಅತಿ ಹೆಚ್ಚು ಪ್ರಸ್ತಾವನೆಗಳು ಬಂದಿವೆಯೋ ಅವರಿಗೇ ಪ್ರಶಸ್ತಿ ಎನ್ನುವ ಮಾತು ಇಲ್ಲ. ಒಟ್ಟಾರೆ ಆಯ್ಕೆ ಮಂಡಳಿಯ ನಿರ್ಧಾರವೇ ಅಂತಿಮವಾದದ್ದು.
ಇದೀಗ 2010ನೆ ಸಾಲಿಗೆ ಚಂದ್ರಶೇಖರ ಕಂಬಾರ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಂದರೆ ಇನ್ನು ಮೂರು ವರ್ಷ ಕನ್ನಡ ಭಾಷೆಗೆ ಜ್ಞಾನಪೀಠ ಇಲ್ಲ. 2014ನೆ ಸಾಲಿಗೆ ಕನ್ನಡ ಭಾಷೆಯ ಲೇಖಕರನ್ನು ಪ್ರಶಸ್ತಿಗೆ ಪರಿಗಣಿಸುತ್ತಾರೆ.
ಕಂಬಾರರ ಬದಲಾಗಿ ಎಲ್.ಎಲ್.ಭೈರಪ್ಪನವರಿಗೆ ಪ್ರಶಸ್ತಿಯನ್ನು ನೀಡಬೇಕಿತ್ತು ಎಂದು ಅಪೇಕ್ಷಿಸುವವರು 1990ರಿಂದ 2009ರ ನಡುವಿನ ಭೈರಪ್ಪನವರ ಸಾಹಿತ್ಯವನ್ನು ಪರಿಶೀಲಿಸಬೇಕು. ಭೈರಪ್ಪನವರ ಪ್ರಸಿದ್ಧ ಕೃತಿಗಳಾದ ಧರ್ಮಶ್ರೀ, ಮತದಾನ, ವಂಶವೃಕ್ಷ, ಗೃಹಭಂಗ, ದಾಟು, ಪರ್ವ, ಜಲಪಾತ, ನಾಯಿನೆರಳು, ತಬ್ಬಲಿಯು ನೀನಾದೆ ಮಗನೆ ಇತ್ಯಾದಿಯೆಲ್ಲ 1990ಕ್ಕೂ ಮೊದಲೇ ರಚನೆಯಾದವುಗಳು. 90ರ ದಶಕದಲ್ಲೇ ಭೈರಪ್ಪನವರಿಗೆ ಜ್ಞಾನಪೀಠ ಬಂದುಬಿಡಬೇಕಿತ್ತು. ಈ 20 ವರ್ಷಗಳ ಅವಧಿಯಲ್ಲಿ ಭೈರಪ್ಪನವರು ರಚಿಸಿದ ಕೃತಿಗಳು ಮತ್ತು ಚಂದ್ರಶೇಖರ ಕಂಬಾರರು ರಚಿಸಿದ ಕೃತಿಗಳನ್ನು ಸಹೃದಯ ವಿಮರ್ಶಕರು ತೂಗಿ ನೋಡಬೇಕು.
1990ರಿಂದೀಚೆ ಭೈರಪ್ಪನವರು ರಚಿಸಿದ ಕೃತಿಗಳು ಇವು-
ಅಂಚು
ತಂತು
ಸಾರ್ಥ
ಮಂದ್ರ
ಆವರಣ
ಕವಲು
(ಇವೆಲ್ಲ ಕಾದಂಬರಿಗಳು)
ಭಿತ್ತಿ- ಆತ್ಮವೃತ್ತಾಂತ
ಸಂದರ್ಭ: ಸಂವಾದ- ಸಾಹಿತ್ಯ ಚಿಂತನ ಗ್ರಂಥ
1990ರಿಂದೀಚೆ ಕಂಬಾರರು ರಚಿಸಿದ ಕೃತಿಗಳು ಇವು-
ಶಿಖರ ಸೂರ್ಯ- ಕಾದಂಬರಿ
ಅಕ್ಕಕ್ಕು ಹಾಡುಗಳೇ (ಕಾವ್ಯ)
ಈವರೆಗಿನ ಹೇಳತೇನ ಕೇಳ (ಕಾವ್ಯ)
ಚಕೋರಿ (ಕಾವ್ಯ )
ಸಿರಿಸಂಪಿಗೆ – ನಾಟಕ
ಬೋಳೆಶಂಕರ- ನಾಟಕ
ಪುಷ್ಪರಾಣಿ- ನಾಟಕ
ಮಹಾಮಾಯಿ- ನಾಟಕ
ನೆಲದ ಮರೆಯ ನಿಧಾನ (ಸಂಶೋಧನೆ)
ಬೃಹದ್ದೇಶೀಯ ಚಿಂತನ (ಸಂಶೋಧನೆ)
An Antholog of Modern India plays- for National school of Drama-2000
ಕಂಬಾರರ ಪ್ರಸಿದ್ಧ ಕೃತಿಗಳಾದ ಜೋಕುಮಾರ ಸ್ವಾಮಿ, ಸಿಂಗಾರೆವ್ವ ಮತ್ತು ಅರಮನೆ, ಋಷ್ಯಶೃಂಗ, ನಾರ್ಸಿಸಸ್, ಜೈಸಿದನಾಯ್ಕ, ಕಾಡುಕುದುರೆ, ಮತಾಂತರ, ಹರಕೆಯ ಕುರಿ ಮೊದಲಾದವು ಪ್ರಕಟವಾಗಿದ್ದೂ 1990ರ ಪೂರ್ವದಲ್ಲಿಯೇ.
ಭೈರಪ್ಪನವರಿಗೆ ಪ್ರಶಸ್ತಿ ಬರಬೇಕಾದ ಸಮಯದಲ್ಲಿ ಅವರ ಪರವಾಗಿ ಪ್ರಸ್ತಾವನೆಗಳನ್ನು ಕನ್ನಡ ಸಾಹಿತ್ಯಪ್ರೇಮಿಗಳು, ಅಭಿಮಾನಿಗಳು ಕಳುಹಿಸಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. 2014ರ ಪ್ರಶಸ್ತಿಗೆ ಭೈರಪ್ಪನವರ ಹೆಸರನ್ನು ಎಲ್ಲರೂ ಸೇರಿ ಶಿಫಾರಸು ಮಾಡೋಣ. ಈ ಮೂರು ವರ್ಷಗಳ ಅವಧಿಯಲ್ಲಿ ಭೈರಪ್ಪನವರು ಇನ್ನೂ ಉತ್ತಮವಾದ ಕೃತಿಗಳನ್ನು ರಚಿಸಲಿ. ಆದರೆ ಈಗ ಪ್ರಶಸ್ತಿ ಪಡೆದಿರುವ ಕಂಬಾರರನ್ನು ಗೌರವಿಸೋಣ, ಅಭಿನಂದಿಸೋಣ.
ಭಾರತೀಯ ಜ್ಞಾನಪೀಠ
1943ರ ಡಿಸೆಂಬರ್‌ನಲ್ಲಿ ವಾರಾಣಸಿಯಲ್ಲಿ ಅಖಿಲಭಾರತ ಪೌರಸ್ತ್ಯ ಸಮ್ಮೇಳನ ನಡೆಯುತ್ತದೆ. ಅಲ್ಲಿ ಸೇರಿದ್ದ ಕೆಲವು ಭಾರತೀಯ ಸಂಸ್ಕೃತಿಯ ಪ್ರಚಾರಕರು ಪರೋಪಕಾರಿ ಶ್ರೀಮಂತ ಸಾಹು ಶಾಂತಿಪ್ರಸಾದ್ ಜೈನ್ ಅವರನ್ನು ಭೆಟ್ಟಿ ಮಾಡಿ ಸಂಸ್ಕೃತ, ಪ್ರಾಕೃತ, ಪಾಲಿ ಮತ್ತು ಅಪಭ್ರಂಶ ಗ್ರಂಥಗಳ ಶಾಸ್ತ್ರೀಯ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗೆ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಪ್ರಸ್ತಾವವನ್ನು ಮುಂದಿಡುತ್ತಾರೆ. ಅದಕ್ಕೆ ಓಗೊಟ್ಟ ಸಾಹು ಅವರು ಭಾರತೀಯ ಜ್ಞಾನಪೀಠವನ್ನು ಸ್ಥಾಪಿಸುತ್ತಾರೆ.
18 ಫೆಬ್ರವರಿ 1944ರಂದು ಇದರ ನೊಂದಣಿಯೂ ಆಗುತ್ತದೆ. ಜ್ಞಾನಕ್ಕೆ ಸಂಬಂಧಿಸಿದ ಅಳಿದುಹೋಗುತ್ತಿರುವ, ಅಪರೂಪದ ಮತ್ತು ಅಪ್ರಕಟಿತ ಕೃತಿಗಳ ಸಂಶೋಧನೆ ಮತ್ತು ಪ್ರಕಟಣೆಗಾಗಿ ಹಾಗೂ ಮೂಲ ಸಾಹಿತ್ಯವನ್ನು ಸೃಷ್ಟಿಸುವುದನ್ನು ಉತ್ತೇಜಿಸುವುದಕ್ಕಾಗಿ ಎಂಬ ಉದ್ದೇಶಗಳನ್ನು ಅದರಲ್ಲಿ ನಮೂದಿಸಲಾಗಿತ್ತು.
ಪ್ರಶಸ್ತಿ
ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಿದವರು ಸಾಹು ಶಾಂತಿಪ್ರಸಾದ್ ಜೈನ್. ಅವರ 50ನೆ ಹುಟ್ಟುಹಬ್ಬದ ದಿನವಾದ 22 ಮೇ 1961ರಂದು ಅವರ ಕುಟುಂಬದ ಸದಸ್ಯರೆಲ್ಲ ಸೇರಿ ಸಾಹಿತ್ಯ ಅಥವಾ ಸಂಸ್ಕೃತಿಯ ಕ್ಷೇತ್ರದಲ್ಲಿ ಅಸಾಮಾನ್ಯವಾದ ಸಾಧನೆ ಮಾಡಿದವರಿಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕೆಂಬ ನಿರ್ಣಯನ್ನು ಕೈಗೊಂಡರು. ಈ ಸಂಬಂಧದಲ್ಲಿ 16 ಸೆಪ್ಟೆಂಬರ್ 1961ರಂದು ವಿಶ್ವಸ್ಥರ ಮಂಡಳಿಯೊಂದನ್ನು ರಚಿಸಲಾಯಿತು. ಇದರ ಮೊದಲ ಅಧ್ಯಕ್ಷರಾದ ಶ್ರೀಮತಿ ಮೂರ್ತಿದೇವಿಯವರು ಈ ಪ್ರಶಸ್ತಿಯ ಸಂಬಂಧದಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಿದರು. ಸದ್ಯ ಈ ಪ್ರಶಸ್ತಿಯ ಮೌಲ್ಯ 7.5 ಲಕ್ಷ ರುಪಾಯಿ.
ಮಂಡಳಿಯಲ್ಲಿದ್ದ ಕನ್ನಡಿಗರು
2010ನೆ ಸಾಲಿನ ಜ್ಞಾನಪೀಠ ಪ್ರಶಸ್ತಿಯ ಆಯ್ಕೆ ಮಂಡಳಿಯಲ್ಲಿ ಕನ್ನಡ ವಿಭಾಗದಲ್ಲಿ ಇದ್ದ ಮೂವರು ಹಿರಿಯಸಾಹಿತಿಗಳು ಧಾರವಾಡದ ಪ್ರೊ. ಟಿ.ಆರ್.ಭಟ್, ಬೆಂಗಳೂರಿನ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತುಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.