ನಮ್ಮೂರಿನ ರಾಮಯ್ಯನವರು ಅವತ್ತು ಮೂರು ಬಾರಿ ಮನೆಯಲ್ಲಿದ್ದ ಜನರನ್ನು ಪೋಸ್ಟ್್ಮನ್ ಬಂದುಹೋದನೆ ಎಂದು ವಿಚಾರಿಸಿದ್ದರು. ಕೊನೆಗೂ ತಡೆದುಕೊಳ್ಳುವುದು ಆಗದೆ ಅಂಚೆಕಚೇರಿಗೇ ಹೋದರು. ತಮ್ಮ ವಿಳಾಸದ ಪತ್ರ ಏನಾದರೂ ಬಂದಿದೆಯೆ ಎಂದು ವಿಚಾರಿಸಿದರು. `ಇಲ್ಲ’ ಎಂಬ ಪೋಸ್ಟ್್ಮಾಸ್ತರನ ಉತ್ತರದಿಂದ ನಿರಾಶೆಗೊಂಡವರಂತೆ ಕಂಡುಬಂದರು. ಮಾರನೆ ದಿನವೂ ಮತ್ತೆ ಅದೇ ಕಾತರ. ಮೂರು ದಿನದ ನಂತರ ಅಂಚೆಯವನು ಅವರು ನಿರೀಕ್ಷಿಸುತ್ತಿದ್ದ ಪತ್ರ ತಂದು ಕೊಟ್ಟನು. ಓದುವುದಕ್ಕೆಂದು ಧಾರವಾಡಕ್ಕೆ ಹೋಗಿದ್ದ ಅವರ ಮಗ ಬರೆದ ಪತ್ರ ಅದು. ಅವನ ಯೋಗಕ್ಷೇಮದ ಬಗ್ಗೆ, ಅಲ್ಲಿಯ ಪರಿಸ್ಥಿತಿಯ ಬಗ್ಗೆ ರಾಮಯ್ಯನವರಿಗೆ ಕಾಳಜಿಯಾಗಿತ್ತು. ಯಾಕೆಂದರೆ ಮಗ ಅದೇ ಮೊದಲ ಬಾರಿಗೆ ಊರು ಬಿಟ್ಟು ಹೊರಗೆ ಹೋದವನು. ಮಗನು ಬರೆದ ಪತ್ರವನ್ನು ಮೂರು ಮೂರು ಬಾರಿ ಓದಿ, ಮನೆಯವರಿಗೆಲ್ಲ ಓದಿ ಹೇಳಿದ ಮೇಲೆಯೇ ಅವರಿಗೆ ಸಮಾಧಾನ.
ಇಂಥ ಕಾತರವನ್ನು, ಉದ್ವೇಗವನ್ನು ಎಲ್ಲರೂ ಅನುಭವಿಸಿದವರೇ. ಈ ಉದ್ವೇಗ ಅನುಭವಿಸುವಲ್ಲಿ, ನಂತರ ಅದರ ಶಮನದಲ್ಲಿ ಅದೆಂಥದ್ದೋ ಸುಖ. ರಾಮಗಿರಿ ಆಶ್ರಮದ ವಿರಹಿ ಯಕ್ಷ ಮೇಘ ಸಂದೇಶ ಕಳುಹಿಸಿದ ಕಾಲ ಅದೆಲ್ಲೋ ಕಳೆದು ಹೋಗಿದೆ. ಅದಕ್ಕಾಗಿ ಇಂದು ವ್ಯಥೆ ಪಡುವವರು ಯಾರೂ ಇಲ್ಲ. ಸಂಪರ್ಕ ಕ್ರಾಂತಿ ಇಂದು ನಾವು ಕುಂತಲ್ಲಿ ನಿಂತಲ್ಲಿ ತನ್ನ ಅಸ್ಮಿತೆಯನ್ನು ಸಾರುತ್ತಲೇ ಇದೆ. ಸಾವಿರಾರು ಮೈಲು ದೂರದಲ್ಲಿದ್ದವರ ಧ್ವನಿಯನ್ನು ಕೇಳುವುದರ ಜೊತೆಯಲ್ಲಿ ಅವರ ಮುಖವನ್ನೂ ನೀವು ನೋಡಬಹುದು. ಮನೆಯಲ್ಲಿ ಮೂಲೆಯಲ್ಲಿ ಹೊದ್ದುಕೊಂಡು ಮಲಗಿರುತ್ತಿದ್ದ ಟೆಲಿಫೋನ್ ಇಂದು ಕಿಸೆಯಲ್ಲಿ ನಿಮಿಷಕ್ಕೊಮ್ಮೆ ಕಿರುಗುಟ್ಟುತ್ತ ಇರುತ್ತದೆ. ವಿಜ್ಞಾನವು ರಾಕೆಟ್ ವೇಗದೊಂದಿಗೆ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಜೊತೆಯಲ್ಲಿ ಇ- ಮೇಲು ಆ ಮೇಲುಗಳ ಹಾವಳಿ.
ಯಾರು ಏನೇ ಹೇಳಲಿ, ನನಗಂತೂ ಸಂಪರ್ಕ ಕ್ರಾಂತಿಯ ಮೇಲೆ ಕಂಡಾಪಟ್ಟೆ ಸಿಟ್ಟು ಬಂದಿದೆ. ಏನೋ ಯಾರಿಗೋ ಹೇಳಬೇಕೆನ್ನಿಸಿದಾಗ ತಕ್ಷಣಕ್ಕೆ ಪಕ್ಕದಲ್ಲಿಯ ಫೋನನ್ನು ಎತ್ತಿ ಅತ್ತ ಕಡೆ ರಿಂಗಿಸಿ ಬಿಟ್ಟರೆ ಮುಗಿದೇ ಹೋಯಿತು. ಹೇಳಬೇಕಾದುದನ್ನು ನಾಲ್ಕಾರು ಮಾತುಗಳಲ್ಲಿ ಹೇಳಿ ಮುಗಿಸಿ ರಿಸೀವರ್ ಇಟ್ಟುಬಿಡುತ್ತಾರೆ. ಹೆಚ್ಚು ಮಾತನಾಡಿದರೆ ಹೆಚ್ಚು ಬಿಲ್ ಬರುವ ಅಂಜಿಕೆ. ಇದಕ್ಕೆ ಅಂಚೆ ಇಲಾಖೆಯವರೂ ತಮ್ಮ ಕಾಣಿಕೆ ಸೇರಿಸಿದ್ದಾರೆ. ಅಂಚೆ ದರಗಳನ್ನು ಸಿಕ್ಕಾಪಟ್ಟೆ ಏರಿಸಿದ್ದಾರೆ. ಒಂದು ಪಾಕೆಟ್ ಕವರಿನ ಬೆಲೆ ಐದು ರುಪಾಯಿ. ಇಪ್ಪತ್ತು ಗ್ರಾಂ ವರೆಗೆ ಮಾತ್ರ. ನಂತರ ಇಪ್ಪತ್ತು ಗ್ರಾಂಗಳಿಗೆ ಮತ್ತೆ ಐದು ರುಪಾಯಿ. ಇಂಥ ದರಗಳಲ್ಲಿ ಪತ್ರ ಬರೆಯುವುದಕ್ಕಿಂತ ಎಂಬತ್ತು ಪೈಸೆ ತಗಲುವ ಒಂದು ಫೋನ್ಕಾಲ್ ಮಾಡುವುದೇ ಉತ್ತಮ ಅನ್ನಿಸಿಬಿಟ್ಟರೆ ಅದು ಅವರ ತಪ್ಪಲ್ಲ ಬಿಡಿ.
ವಿಜ್ಞಾನದ ಹೊಸ ಆವಿಷ್ಕಾರಗಳು, ಅಂಚೆ ಇಲಾಖೆಯ ಅಂಚೆ ದರಗಳ ಏರಾಟ ಇವುಗಳಿಂದ ನಾವು ಒಂದು ಸುಂದರ ಅನುಭವದಿಂದ ವಂಚಿತರಾಗುತ್ತಿದ್ದೇವೆ. ಅದನ್ನು ಹೇಳುವುದಕ್ಕೇ ಇಷ್ಟುದ್ದ ಪೀಠಿಕೆ ಅಷ್ಟೇ. ಒಂದು ಕಾಲವಿತ್ತು. ಆ ಕಾಲದಲ್ಲಿ ಅಬ್ಬರ ಅವಸರ ಇರಲಿಲ್ಲ. ಶರಾವತಿಯ ಭರಿತ ಇಳಿತ ಇಲ್ಲದ ಸಮಾಹಿತ ಪಾತಳಿಯಂತೆ ಅದು. ದೂರದ ಊರಿನಲ್ಲಿರುವ ಮಗ, ಅಲ್ಲಿಯ ವಿಶೇಷಗಳನ್ನೆಲ್ಲ ಶಬ್ದಗಳನ್ನು ಹೆಕ್ಕಿ ಪೋಣಿಸಿ ಅದರಲ್ಲಿ ತನ್ನ ಉಸಿರನ್ನು ತುಂಬಿ ಕನ್ಣಿಗೊತ್ತಿಕೊಂಡು ರಸ್ತೆಯಂಚಿನ ಅಂಚೆ ಡಬ್ಬಿಯಲ್ಲಿ ಹಾಕುತ್ತಿದ್ದ. ಉಬ್ಬು ತಗ್ಗಿನ ರಸ್ತೆಗಳಲ್ಲಿ ಬಸ್ಸುಗಳಲ್ಲಿ ಇಷ್ಟು, ರೈಲಿನಲ್ಲಿ ಅಷ್ಟು, ಮತ್ತೆ ಹಡಿನಲ್ಲಿ ಮತ್ತಷ್ಟು, ಆಕಾಶ ಮಾರ್ಗದಲ್ಲಿ ಇನ್ನಷ್ಟು ಪ್ರಯಾಣಿಸಿ ಈ ಊರಿನ ಅಂಚೆಯಣ್ಣನ ಮೂಲಕ ಅಪ್ಪ ಅಮ್ಮನ ಕೈಯನ್ನು ತಲುಪಿದಾಗ ಅವರ ಉತ್ಸಾಹ ಬಣ್ಣಿಸುವುದೆಂತು? ಆ ಪತ್ರ ಬರುವುದೆಂದು ಅದೆಷ್ಟು ನಿರೀಕ್ಷೆ, ಅದೆಷ್ಟು ಕಾತರದಿಂದಿರುತ್ತಿದ್ದರು ಅವರು! ಅಪ್ಪ ಒಮ್ಮೆ ಮನಸ್ಸಿನಲ್ಲಿಯೇ ಅದನ್ನು ಓದಿಕೊಳ್ಳುತ್ತಿದ್ದ. ಆಮೇಲೆ ಹೆಂಡತಿಯನ್ನು ಕರೆದು ಕುಳ್ಳಿರಿಸಿಕೊಂಡು ಆಕೆಗೊಮ್ಮೆ ಓದಿ ಹೇಳುತ್ತಿದ್ದ. ಮನೆಯಲ್ಲಿ ಇತರರು ಇದ್ದರೆ ಅವರಿಗೆ ಓದಿ ಹೇಳುತ್ತಿದ್ದ. ಓದು ಕಲಿತವರಿದ್ದರೆ ಆ ಮನೆಯಲ್ಲಿ ಅವರ ಕೈಯಲ್ಲಿಯ ಅಕ್ಕರೆಯ ಕೂಸಾಗಿ ಆ ಪತ್ರ ಓಡಾಡುತ್ತಿತ್ತು. ಎರಡು ದಿನ ಬಿಟ್ಟು ಪುರುಸೊತ್ತಾದಾಗ ಮತ್ತೆ ಅಪ್ಪ ಆ ಪತ್ರವನ್ನು ಓದುವನು. ಅವ್ವನಿಗೆ ನೆನಪಾದಾಗೊಮ್ಮೆ ಓದಲುಬರದಿದ್ದರೂ ಅದನ್ನು ಕೈಯಲ್ಲಿ ಹಡಿದು ಕಣ್ಣಿಗೊತ್ತಿಕೊಂಡು, ಮೆಲ್ಲನೆ ಅತ್ತ ಇತ್ತ ನೋಡಿ ಆ ಪತ್ರವನ್ನು ತುಟಿಯಂಚಿನಿಂದ ಸ್ಪಶರ್ಿಸಿ ಸಾವಿರ ಸಾವಿರ ಮೈಲು ದೂರದಲ್ಲಿರುವ ಮಗನನ್ನೇ ಚುಂಬಿಸುತ್ತಿರುವೆನೋ ಎಂದು ಭ್ರಾಂತಿ, ಸಂಭ್ರಾಂತಿ ಪಡುತ್ತ ಮೆಲ್ಲನೆ ಅಂಗಳಕ್ಕೆ ಇಳಿದು ಆಕಳ ಕರುವನ್ನು ಎದೆಗೆ ಅವುಚಿಕೊಳ್ಳುವಳು. ನಾಲ್ಕು ದಿನದ ಮೇಲೆ ನೆಂಟರೋ ಇಷ್ಟರೋ ಯಾರಾದರೂ ಬಂದರೆ ಅವರೆದುರಿಗೆಲ್ಲ ಮಗನ ಪತ್ರ ಮತ್ತೆ ಹಾರಾಡುವುದು. ಅಲ್ಲಿ ಹಾಗಂತೆ ಹೀಗಂತೆ ಎನ್ನುತ್ತ ಆ ಅಂತೆ ಕಂತೆಗಳಿಗೆ ಇನ್ನಷ್ಟು ಕಲ್ಪನೆಯ ಬೊಂತೆಗಳನ್ನು ಸೇರಿಸಿ ಇಷ್ಟಿದ್ದುದನ್ನು ಅಷ್ಟುದ್ದ ಮಾಡಿಬಿಡುವುದು ಆ ಮುಗ್ಧ ಜೀವಿಗಳಿಗೆ ಅಸಾಧ್ಯವೇನಲ್ಲ. ಜೊತೆಯಲ್ಲಿ ಇಂಥದ್ದರಲ್ಲಿ ಅವನು ಹ್ಯಾಂಗೆ ಇದ್ದಾನೋ ಏನೋ ಎಂಬ ಕಕ್ಕುಲಾತಿಯ ನುಡಿ.
ಇದು ಮಗನ ಪತ್ರಕ್ಕೆ ಹೆತ್ತವರ ಪ್ರತಿಕ್ರಿಯೆಯಾದರೆ ಗಂಡನ ಮನೆಯಿಂದ ಮಗಳು ಬರೆಯುವ ಪತ್ರಕ್ಕೆ ದೊರೆಯುವ ಮರ್ಯಾದೆಯೂ ವಿಶಿಷ್ಟವಾದದ್ದು. ಗಂಡನ ಮನೆಯಲ್ಲಿ ಎಷ್ಟು ಕೆಲಸವೋ ಏನೋ? ಪತ್ರ ಬರೆಯುವುದಕ್ಕೆ ಪುರುಸೊತ್ತೆಲ್ಲಿ ಆಕೆಗೆ? ಅತ್ತೆದು ಮಾವಂದು ಕಣ್ಣುತಪ್ಪಿಸಿ ಬರೆದಿರಬೇಕು. ಅದಕ್ಕೇ ಮೂರ್ನಾಲ್ಕು ಕಡೆ ಕೊಂಬು, ಕಾಮಾಗಳೆಲ್ಲ ಹೆಂಗ್ಯೆಂಗೋ ಆಗಿವೆ. ಪತ್ರ ನೋಡಿದರೆ ಗಂಡ ಇವಳು ಹೇಳಿದ ಹಾಗೇ ಕೇಳುತ್ತಿರಬೇಕು ಅನ್ನಿಸುತ್ತದೆ. ನಾದಿನಿಯರು, ಮೈದುನರ ಬಗ್ಗೆ ಒಂದೂ ಮಾತು ಬರೆದಿಲ್ಲವಲ್ಲ. ಯಾರ್ಯಾರು ಏನೇನು ಕಿರಿಕ್ಕು ಮಾಡ್ತಾರೋ ಏನೋ ಎಂದೆಲ್ಲ ಆ ಪತ್ರದ ಸಾಲುಗಳಲ್ಲಿ, ಅಕ್ಷರಗಳಲ್ಲಿ, ಅವುಗಳ ಕೊಂಬು ಕಾಮಾಗಳಲ್ಲೆಲ್ಲ ಮಗಳ ಸುಖದ ಕನವರಿಕೆ. ನೋವಿನ ನಿಟ್ಟುಸಿರು. ಆಕೆಯ ಬಯಕೆಗಳು, ಬೇಡಗಳು ಎಲ್ಲವನ್ನೂ ಹುಡುಕುವ ತಕರ್ಿಸುವ ಹೆತ್ತವರ ಪರಿ ಅನನ್ಯ.
ತವರಿಗೆ ಹೋದ ಹೆಂಡತಿಯ ಪತ್ರದ ನಿರೀಕ್ಷೆಯಲ್ಲಿರುವ ಗಂಡನ ತಹತಹ ಬೇರೆಯೇ ತರ. ಹೋಗುವಾಗ ಅಷ್ಟೊಂದು ಹೇಳಿ ಕಳುಹಿಸಿದ್ದೆ. ತವರಿಗೆ ಮುಟ್ಟಿದ ತಕ್ಷಣ ಪತ್ರ ಬರೆಯುವುದಕ್ಕೆ ಈಕೆಗೆ ಅದೇನು ರೋಗ! ತವರಿಗೆ ಹೋದಕೂಡಲೇ ಗಂಡನ ಮರೆತು ಬಿಡುವುದೇ. ಇಲ್ಲಿದ್ದಾಗ ಇಂದ್ರಚಂದ್ರ ಎಂದೆಲ್ಲ ನನ್ನನ್ನು ಉಬ್ಬಿಸುತ್ತಿದ್ದವಳು ತವರಿಗೆ ಹೋದ ಮೇಲೆ ಈ ಪರಿ ನಿರ್ಲಕ್ಷ್ಯ ಮಾಡುವುದೇ? ನಾನೇ ಪಾಕೆಟು ಕವರುಗಳನ್ನು ಖರೀದಿಸಿ ವಿಳಾಸ ಕೂಡ ಬರೆದು ಕೊಟ್ಟಿದ್ದೆನಲ್ಲ. ಎಲ್ಲಿ ಕಳೆದುಕೊಂಡಳೋ ಏನೋ? ಅಲ್ಲಿ ಹೋದ ಮೇಲೆ ಅಕ್ಕ ತಂಗಿಯರು, ಅಣ್ಣ ತಮ್ಮಂದಿರು ಇವಳಿಗೆ ಪತ್ರ ಬರೆಯುವುದಕ್ಕೆ ಪುರುಸೊತ್ತು ಕೊಟ್ಟರೆ ತಾನೆ? ಅವರಿಗಾದರೂ ಬುದ್ಧಿ ಬೇಡವೆ? ಗಂಡನಿಗೆ ಪತ್ರ ಬರೆ ಎಂದು ಅವರಾದರೂ ಹೇಳುವುದು ಬೇಡವೆ? ಶುದ್ಧ ಗೂಬೆಗಳು. ಆ ಗೂಬೆಗಳ ಕಣ್ಣು ತಪ್ಪಿಸಿ ಪತ್ರ ಬರೆಯುವುದೆಂದರೆ ದೊಡ್ಡ ಕಷ್ಟವೇ ಹೌದು ಅವಳಿಗೆ ಎಂದು ಅವಳ ಪರವಾಗಿ ಕೊನೆಗೂ ಮನಸ್ಸು ಚಿಂತಿಸುತ್ತದೆ. ಎಷ್ಟೆಂದರೂ ಆಕೆಗೆ ಮನಸೋತವನಲ್ಲವೆ ಅವನು? ಇಲ್ಲಿ ಆಕೆಯ ಪತ್ರ ತನಗೆ ಮಾತ್ರ ಸಿಗಬೇಕು ಎಂದು ಅಂಚೆಯವನ ಹತ್ತಿರ ಮಸಲತ್ತು ಮಾಡಿದ್ದಾನೆ ಆತ. ತನ್ನ ಹೆಸರಿಗೆ `ಆ ಊರಿಂದ’ ಬಂದ ಪತ್ರವನ್ನು ಮನೆಯಲ್ಲಿ ಎಲ್ಲರ ಎದುರಿನಲ್ಲಿ ಕೊಡದೆ ತನಗೆ ಗುಟ್ಟಾಗಿ ಕೊಡಬೇಕು ಎಂದು ಹೇಳಿಟ್ಟಿದ್ದಾನೆ. ಅಷ್ಟೊಂದು ನಿರೀಕ್ಷೆಯಲ್ಲಿದ್ದವನಿಗೆ ಪತ್ರ ಬರದೇ ಇರುತ್ತದೆಯೇ. ಬಂದೇ ಬಂತು. ಕನಸುಗಳನ್ನು ಹೊತ್ತು ತಂತು. ಪತ್ರದ ಆರಂಭದಲ್ಲಿಯೇ ಆಕೆ `ತವರಿನಲ್ಲಿ ನಾನು ನಾಚಿಕೊಳ್ಳುವ ಹಾಗೆ ಮಾಡಿದ್ದಿರಿ’ ಎಂದು ಗಂಡನನ್ನು ಆಕ್ಷೇಪಿಸಿ ಬಿಟ್ಟಿದ್ದಳು. ಅದು ಏನೆಂದು ಇವನ ಟ್ಯೂಬ್ಲೈಟ್ ತಲೆಗೆ ತಟ್ಟನೆ ಹೊಳೆಯಲೇ ಇಲ್ಲ. `ಈ ತಿಂಗಳು ನಾನು ಹೊರಗೆ ಕುಂತಿಲ್ಲ’ ಎಂಬ ಮುಂದಿನ ವಾಕ್ಯವನ್ನು ಓದಿದ ಮೇಲೆಯೇ ಜಗ್ಗೆಂದು ಅಸಲು ವಿಷಯ ಮಿಂಚಿದ್ದು. ಇದನ್ನು ಮನೆಯಲ್ಲಿ ಹೇಳುವುದು ಹೇಗೆ? ಹೇಳಿದರೆ ಖುಷಿಯಂತೂ ಪಡುತ್ತಾರೆ ನಿಜ. ಆದರೆ ಹೇಳುವುದು ಹೇಗೆ?
ಮರು ಟಪಾಲಿಗೇ ಉತ್ತರಿಸಿದ, `ನಿನ್ನ ಅತ್ತೆ ಮಾವನಿಗೆ ನೀನೇ ಬಂದ ಮೇಲೆ ಹೇಳುವಿಯಂತೆ. ಅಲ್ಲಿಯವರೆಗೂ ಈ ವಿಷಯ ನನ್ನನಿನ್ನ ನಡುವೆ ಮಾತ್ರ’ ಎಂದು. ಮಗುವಿನ ಬಗ್ಗೆ ಅದೇನೇನೋ ಕನಸು ಕಟ್ಟಿ ಬರೆದಿದ್ದ. ಯಾವುದೋ ಕವಿಯ ಕವನದ ಸಾಲುಗಳನ್ನು ಉಲ್ಲೇಖಿಸಿದ್ದ. ಬಿದಿಗೆ ಚಂದ್ರ ಪೂರ್ಣಚಂದ್ರನಾಗಿ ಧರೆಗಿಳಿಯುವುದು ಯಾವಾಗ ಎಂದು ಅಲವತ್ತುಕೊಂಡಿದ್ದ. ಪತ್ರದ ತುಂಬ ನನ್ನ ಸಿಹಿ ಮುತ್ತುಗಳನ್ನು ಕಳುಹಿಸಿದ್ದೇನೆ. ಅದು ನಿನಗೂ, ನಿನ್ನೊಳಗಿನ ಆ ಅವನಿಗೂ ಎಂದು ಬರೆದಿದ್ದ. ಆಕೆಯೇನೋ ಆ ಮುತ್ತುಗಳನ್ನು ಸ್ವೀಕರಿಸಿದಳು. ಆದರೆ ಅವಳೊಳಗಿನ ಅವನಿಗೆ ತಲುಪಿಸಿದ್ದೆಂತೋ?
ಹೀಗೆ ವಿಚಾರಿಸುತ್ತ ಹೋದರೆ ಪತ್ರಗಳಲ್ಲಿ ಬಾಲಿಶವೆನ್ನುವಂಥ, ಅರ್ಥ ರಹಿತವಾದ ಅದೆಷ್ಟೋ ಪದಗಳು ತುಂಬಿರುತ್ತವೆ. ಮನಸ್ಸಿಗೆ ಅನ್ನಿಸಿದನ್ನು ಆ ಕ್ಷಣಕ್ಕೆ ಶಬ್ದಗಳಲ್ಲಿ ಹೇಳಲು ಆಗದೆ ಇದ್ದಾಗ, ಆಥವಾ ಸಾಮಾನ್ಯ ರೀತಿಯಲ್ಲಿ ಅದನ್ನು ಹೇಳಬಾರದು ಅನ್ನಿಸಿದಾಗ ಇವೆಲ್ಲ ಅವಾಂತರಗಳು ಸಹಜ. ಯುವ ಪ್ರೇಮಿಗಳ ಪತ್ರಗಳಲ್ಲಂತೂ ಇಂಥವು ಸಾಮಾನ್ಯ. ಯಾವಯಾವುದೋ ಪುಸ್ತಕಗಳಲ್ಲಿಯ ರಸವತ್ತಾದ ಸಾಲುಗಳನ್ನು ಅನಾಮತ್ತಾಗಿ ಎತ್ತಿ ಆ ಪತ್ರಗಳಲ್ಲಿ ಇಟ್ಟಿರುತ್ತಾರೆ. ಇಲ್ಲಿ ಕೃತಿಚೌರ್ಯದ ಪ್ರಶ್ನೆ ಬರುವುದೇ ಇಲ್ಲ. ಹೃದಯ ಚೋರರಿಗೆ ಕೃತಿಚೌರ್ಯ ಅಂಥ ಪ್ರಮಾದ ಅನ್ನಿಸುವುದೇ ಇಲ್ಲ. ಮೊದಲು ಹೇಳುವುದನ್ನೆಲ್ಲ ಒಂದು ಅಂತದರ್ೇಶೀಯ ಪತ್ರದಲ್ಲಿಯೇ ಒಂದು ಬಿಳಿ ಹಾಳೆಯನ್ನು ಮಧ್ಯದಲ್ಲಿ ಸೇರಿಸಿಬಿಟ್ಟಿರುತ್ತಾರೆ. ಅಂಚೆಯಣ್ಣನ ಗಮನಕ್ಕೆ ಅದು ಬರದಿದ್ದರೆ ಸರಿ. ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ.
ಇದೆಲ್ಲ ದೊಡ್ಡವರ ಬುದ್ಧಿವಂತರ ಪರಿಯಾದರೆ ಚಿಕ್ಕ ಮಕ್ಕಳೂ ಹೃದಯ ಕಲಕುವಂಥ ಕೆಲವೇ ಸಾಲುಗಳನ್ನು ಬರೆದು ಬಹು ಕಾಲದ ವರೆಗೆ ನೆನಪಿನಲ್ಲಿ ನಿಂತುಬಿಡುತ್ತಾರೆ. ಪರ ಊರಿನಲ್ಲಿ ನೌಕರಿ ಮಾಡುತ್ತಿದ್ದ ಚಿಕ್ಕಪ್ಪನಿಗೆ ಒಂಬತ್ತು ಹತ್ತು ವರ್ಷದ ಪೋರನೊಬ್ಬ ಹೀಗೆ ಬರೆಯುತ್ತಾನೆ…. ಚಿಕ್ಕಪ್ಪ ನೀನು ಈ ಸಲ ಊರಿಗೆ ಬರುವಾಗ ನನಗೆ ಒಂದು ಕಪ್ಪು ಬಣ್ಣದ ಬೆಲ್ಟು ತೆಗೆದುಕೊಂಡು ಬಾ. ಇನ್ನೊಂದು ವಿಷಯ, ನೀನು ತಪ್ಪು ತಿಳಿಯದಿದ್ದರೆ, ನನ್ನ ಪಾಟಿ ಒಡೆದು ಹೋಗಿದೆ. ಬರುವಾಗ ಪ್ಲಸ್ಟಿಕ್ ದಂಡಿಗೆಯ ಒಂದು ಪಾಟಿ ತೆಗೆದುಕೊಂಡು ಬಾ… ಇಲ್ಲಿಯವರೆಗೇನೋ ಪತ್ರದ ಒಕ್ಕಣೆ ಸರಿ. ಆದರೆ ಪತ್ರದ ಮುಂದಿನ ಒಕ್ಕಣೆ ನೋಡಿ… ನೀನು ತಂದವನು ಎಲ್ಲರ ಎದುರಿಗೆ ಅದನ್ನೆಲ್ಲ ಚೀಲದಿಂದ ಹೊರಗೆ ತೆಗೆಯ ಬೇಡ. ನಿನ್ನ ಚೀಲದಲ್ಲಿಯೇ ಇರಲಿ… ಈ ಮಾತು ಬರೆದ ಮೇಲಂತೂ ಆತನ ಚಿಕ್ಕಪ್ಪ ಕ್ಲೀನ್ ಬೌಲ್ಡ್. ;ಕದಕಪದಪ ತಂದೇ ತರುತ್ತಾನೆ ಎನ್ನುವ ಭರವಸೆ ಯಾವ ಅನುಮಾನಕ್ಕೂ ಎಡೆ ಇಲ್ಲದಂತೆ ಅದರಲ್ಲಿ ವ್ಯಕ್ತವಾಗಿದೆ. ಎಲ್ಲರ ಎದುರಿಗೆ ಚೀಲದಿಂದ ಹೊರಗೆ ತೆಗೆಯಬೇಡ ಎಂಬ ಮಾತು ಮಹಾಕವಿಗಳ ಕಾವ್ಯಕ್ಕೆ ವಿಮಶರ್ೆ ಬರೆದಂಥವರಿಂದಲೇ ವಿಶ್ಲೇಷಣೆ ಅಪೇಕ್ಷಿಸುವಂಥದ್ದು.
ರಜೆಗೆ ಅಜ್ಜನ ಊರಿಗೆ ಬಂದ ಮಕ್ಕಳು ಮರಳಿ ಮನೆಗೆ ಹೋದವರು ಮಾವನಿಗೆ ಅಜ್ಜನ ಮನೆಯ ನೆನಪುಗಳನ್ನು ತೋಡಿಕೊಂಡು ಪತ್ರ ಬರೆದರು. ವಿಳಾಸ ಸರಿಯಾಗಿ ಬರೆಯಬೇಕು ಎಂದು ಅವರಿಗೆ ಗೊತ್ತಿದ್ದರೆ ತಾನೆ? ಮಾವನ ಹೆಸರು ಶಂಕರ. ಶಂಕರ ಮಾವ. ಜಲವಳ್ಳಿ, ಹೊನ್ನಾವರ ಎಂದು ಬರೆದು ಟಪಾಲಿಗೆ ಹಾಕಿದರು. ಪತ್ರವೇನೋ ಪಲವಳ್ಳಿಗೆ ಬಂತು. ಶಂಕರ ಮಾವನನ್ನು ಎಲ್ಲಿ ಹುಡುಕುವುದು? ಊರಲ್ಲಿ ಎಂಟ್ಹತ್ತು ಶಂಕರರಿದ್ದರು. ಅಂಚೆಯಣ್ಣನಿಗೆ ಅಪಾರ ತಾಳ್ಮೆ ಇತ್ತು. ಪತ್ರ ಬಂದ ಊರು ನೋಡಿದ. ಒಕ್ಕಣೆ ನೋಡಿದ. ಅಜ್ಜನ ಮನೆಗೆ ಬಂದಾಗ ಅಂಚೆಯಣ್ಣನನ್ನೂ ಕಾಡಿದ ಮಕ್ಕಳೇ ಅವರು. ಆಗ ಅವನಿಗೆ ಈ ಶಂಕರ ಮಾವ ಯಾರು ಎಂದು ಗೊತ್ತಾಯಿತು. ಅಂತೂ ಪತ್ರ ಶಂಕರ ಮಾವನಿಗೆ ತಲುಪಿತು.
ಎಷ್ಟೊಂದು ನಿರ್ವ್ಯಾಜ ಪ್ರೀತಿ, ಅಂತಃಕರಣ. ಇವೆಲ್ಲ ಪತ್ರಗಳಲ್ಲಿ ಒಡಮೂಡಲು ಮಾತ್ರ ಸಾಧ್ಯವಾದದ್ದು. ವಿರಾಮದಲ್ಲಿ ಕುಳಿತು ಆಲೋಚಿಸಿ ಹೀಗೆ ಬರೆದರೆ ಹೀಗೆ ಪರಿಣಾಮ ಉಂಟುಮಾಡಬಹುದು, ಅದರಿಂದ ಅವರಿಗೆ ಖುಷಿ ಮೂಡಬಹುದು, ಈ ಶಬ್ದದಿಂದ ಅವರಿಗೆ ನೋವಾಗಬಹುದೆ? ಹಾಗಿದ್ದರೆ ಅದು ಬೇಡ ಎಂದು ಕಾಟು ಹೊಡೆದದ್ದು, ಮರೆತದ್ದು ಎಂದು ಕೊನೆಯಲ್ಲಿ ಸೇರಿಸಿದ ಎರಡು ವಾಕ್ಯಗಳು, ಆ ವಾಕ್ಯಗಳೇ ಇಡೀ ಪತ್ರದ ಸಾರ ಎನ್ನುವಂತೆ ಭಾಸವಾದದ್ದು. ಪತ್ರವನ್ನು ಅಡ್ಡ ಹಿಡಿದು ಕೊನೆಯದು ಎನ್ನುವಂತೆ ಎರಡೇ ಎರಡು ಶಬ್ದ ಬರೆದದ್ದು.
ಓಹೋ! ಇದೆಲ್ಲ ಪತ್ರಗಳನ್ನು ನೀವೂ ಕಾದಿಟ್ಟಿದ್ದೀರಾ? ಪುರುಸೊತ್ತಿದ್ದಾಗ ಒಮ್ಮೆ ಅವುಗಳತ್ತ ಕಣ್ಣಾಡಿಸಿ. ಅವರೆಲ್ಲ ಮತ್ತೆ ನಿಮ್ಮ ಮನೆಯಂಗಳದಲ್ಲೇ ವಿರಾಮಾಸನದಲ್ಲಿ ಕುಳಿತಿರುತ್ತಾರೆ. ಅಡುಗೆ ಮನೆಯಲ್ಲಿ ಅವರ ಬಳೆಗಳ ಶಬ್ದ ನಿಮಗೆ ಕೇಳಿಸುತ್ತದೆ. ನೀವು ಮಂಚದ ಮೇಲೆ ಅಡ್ಡಾಗಿದ್ದಲ್ಲೇ ನಿಮಗೆ ಕಚಗುಳಿ ಇಕ್ಕಿ ಮಾಯವಾಗುತ್ತಾರೆ…
ಈ ಪತ್ರದ ಮಹಿಮೆ ಅರಿತೇ ನಾನು ಕೆಲವು ವರ್ಷಗಳ ಹಿಂದೆ ಒಂದು ಕವನ ಗೀಚಿದ್ದೆ…
ಗೆ,
ನೀವ್ ಬರೆದ ಪತ್ರಗಳ ಪಂಕ್ತಿ ಪದ ಬಿಡಿ ಅಕ್ಷರಗಳು
ಕೊಂಬು ಕಾಮಾಗಳೆಲ್ಲ
ನನ್ನ ಮದ ಪ್ರಶ್ನಾರ್ಥಕ ಚಿಹ್ನೆಗಳನ್ನೆಲ್ಲ
ಬದಿಗೆ ಸರಿಸಿ
ಪೂರ್ಣ ವಿರಾಮವನ್ನಿಡುತ್ತಿವೆ.

ಮತ್ತೆ,
ಅರೆಗಾಲದಲ್ಲೊಮ್ಮೊಮ್ಮೆ
ಹನಿ ಮಳೆಯು ಸುರಿದಂತೆ
ವರ್ತಮಾನಕೆ ತಂಪು
ಹಸುರಿನ ಕನಸು ಭವಿಷ್ಯಕ್ಕೆ

ಅಲ್ಲದೆ,
ಬಿಳಿ ಹಾಳೆಯ ಕರಿ ಗೀರುಗಲಲ್ಲ,
ಬರಿಯ ಉಭಯಕುಶಲೋಪರಿಯಲ್ಲ,
ನೀವ್ ಬರೆದ ಪತ್ರಗಳು
ನಿಮ್ಮ ಪ್ರತ್ಯಕ್ಷ ದರ್ಶನವೆನಗೆ

ಹಣೆಯ ನಿರಿಗೆಗಳು ಕಣ್ಣ ಕೊಂಕುಗಳು
ತುಟಿಗಳ ವಕ್ರತೆ ಕೊರಳ ಉಬ್ಬುಗಳಷ್ಟೇ ಅಲ್ಲ
ನಿಮ್ಮ ಹೃದಯವೇ ತೆರೆದು ತೋರುವವಲ್ಲಿ
ಬರೆಯಿರಿ, ಬರೆಯದೆ ಇರದಿರಿ.