ಹೀರೋ ಎಂಬ ಸಂಕೇತ ನಾಮ ಹೊಂದಿದ್ದ ಒಲೆಗ್ ವ್ಲಡಿಮಿರೋವಿಚ್ ಪೆಂಕೋವ್ಸಕಿ ನಿಜಕ್ಕೂ ಗೂಢಚರ್ಯ ಲೋಕದ ಒಬ್ಬ ಹೀರೋನೇ ಆಗಿದ್ದನು. ಆತ ಸೋವಿಯತ್ ಮಿಲಿಟರಿ ಇಂಟೆಲಿಜೆನ್ಸ್ (ಜಿಆರ್ಯು)ನಲ್ಲಿ 1950 ಮತ್ತು 60ರ ದಶಕದಲ್ಲಿ ಕರ್ನಲ್ ಆಗಿದ್ದ. ಈತ ಸೋವಿಯತ್ ಕಣ್ಣಿಗೆ ಮಣ್ಣೆರಚಿ ಇಂಗ್ಲೆಂಡ್ ಮತ್ತು ಅಮೆರಿಕಕ್ಕೆ ಮಹತ್ವದ ಮಾಹಿತಿಗಳನ್ನು ಒದಗಿಸುತ್ತಿದ್ದನು. ಸೋವಿಯತ್ ಒಕ್ಕೂಟವು ಕ್ಯೂಬಾದಲ್ಲಿ ಕ್ಷಿಪಣಿಗಳನ್ನು ನೆಲೆಗೊಳಿಸಿದ ಬಗ್ಗೆ ನಿರ್ದಿಷ್ಟವಾಗಿ ತಿಳಿಸಿದವನು ಇವನು. ಇದರಿಂದ ಆ ಎರಡು ದೇಶಗಳು ಸೋವಿಯತ್ ಎದುರು ಸೈನಿಕವಾಗಿ ಸಜ್ಜುಗೊಳ್ಳುವುದಕ್ಕೆ ನೆರವಾಯಿತು. ಎರಡನೆ ಮಹಾಯುದ್ದದ ಬಳಿಕ ಸೋವಿಯತ್ ರಷ್ಯಾ ಮತ್ತು ನ್ಯಾಟೋ ಕೂಟದ ರಾಷ್ಟ್ರಗಳ ನಡುವೆ ಹುಟ್ಟಿಕೊಂಡ ಶೀಲತ ಯುದ್ಧದ ದಿಕ್ಕು ದೆಸೆಗಳು ಬದಲಾಗುವುದಕ್ಕೆ ಸಹಾಯಕವಾದ ಮಹತ್ವದ ಮಾಹಿತಿಗಳನ್ನು ಇಂಗ್ಲೆಂಡಿಗೆ ಒದಗಿಸಿದ ಹಲವರಲ್ಲಿ ಪೆಂಕೋವ್ಸಕಿ ಪ್ರಮುಖನಾಗಿದ್ದನು. 1962ರಲ್ಲಿ ಸೋವಿಯತ್ ಬೇಹುಗಾರರು ಇವನನ್ನು ಬಂಧಿಸುತ್ತಾರೆ. ಈತನ ವಿಚಾರಣೆ ನಡೆಯುತ್ತದೆ. ನಂತರದ ವರ್ಷದಲ್ಲಿ ಇವನನ್ನು ಸಾಯಿಸಲಾಗುತ್ತದೆ.
ರಷ್ಯಾದಲ್ಲಿ ಯಾದವೀ ಕಲಹ ನಡೆದಿದ್ದ ಸಮಯದಲ್ಲಿ ಸಾಮ್ರಾಟರ ಬಿಳಿ ಸೇನೆಯಲ್ಲಿ ಒಬ್ಬ ಅಧಿಕಾರಿಯಾಗಿದ್ದ ಪೆಂಕೋವ್ಸಕಿಯ ತಂದೆ ಕ್ರಾಂತಿಕಾರಿಗಳಿಂದ ಸಾವಿಗೀಡಾಗುತ್ತಾರೆ. ಈ ಒಂದು ದ್ವೇಷ ಬಾಲಕ ಪೆಂಕೋವ್ಸಕಿಯ ಮನದಾಳದಲ್ಲಿ ಹೆಪ್ಪುಗಟ್ಟಿರುತ್ತದೆ. ಪೆಂಕೋವ್ಸಕಿಯು ಕೀವ್ ಆರ್ಟಿಲರಿ ಅಕಾಡೆಮಿಯಲ್ಲಿ 1939ರಲ್ಲಿ ಲೆಫ್ಟಿನಂಟ್ ಪದವಿಯನ್ನು ಪಡೆಯುತ್ತಾನೆ. ಫಿನ್ಲೆಂಡ್ ವಿರುದ್ಧ ನಡೆದ ಚಳಿಗಾಲದ ಯುದ್ಧದಲ್ಲಿ ಮತ್ತು ಎರಡನೆ ಜಾಗತಿಕ ಯುದ್ದದಲ್ಲಿ ಭಾಗವಹಿಸಿದ್ದ ಆತ ಲೆಫ್ಟಿನಂಟ್ ಕರ್ನಲ್ ಪದವಿಯ ವರೆಗೂ ಏರುತ್ತಾನೆ. ಒಬ್ಬ ಜಿಆರ್ಯು ಅಧಿಕಾರಿಯಾಗಿದ್ದ ಪೆಂಕೋವ್ಸಕಿಯನ್ನು 1955ರಲ್ಲಿ ಟರ್ಕಿಯ ಅಂಕಾರದಲ್ಲಿದ್ದ ಸೇನೆಯ ತುಕಡಿಗೆ ನೇಮಕ ಮಾಡುತ್ತಾರೆ. ನಂತರ ಅವನು ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ಸೋವಿಯತ್ ಸಮಿತಿಯಲ್ಲಿ ಕೆಲಸ ಮಾಡುತ್ತಾನೆ. ಜಿಆರ್ಯು ಮುಖ್ಯಸ್ಥ ಇವಾನ್ ಸೆರೋವ್ ಮತ್ತು ಸೋವಿಯತ್ ಮಾರ್ಷಲ್ ಸೆರ್ಗೇಯಿ ವಾರೆಂತ್ಸೋವ್ ಜೊತೆ ಪೆಂಕೋವ್ಸಕಿಗೆ ವೈಯಕ್ತಿಕ ಗೆಳೆತನವಿತ್ತು.
ಸೇತುವೆಯ ಮೇಲೆ ಮೊದಲ ಭೇಟಿ-
1960ರ ಆಗಸ್ಟ್ 12ರಂದು ಮಾಸ್ಕೋದ ಸೇತುವೆಯೊಂದರ ಮೇಲೆ ಚೆನ್ನಾಗಿ ಬಟ್ಟೆಗಳನ್ನು ಧರಿಸಿದ್ದ ರಷ್ಯಾದ ವ್ಯಕ್ತಿಯೊಬ್ಬಪ್ರವಾಸದ ಮೇಲೆ ಬಂದಿದ್ದ ಅಮೆರಿಕದ ಇಬ್ಬರು ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆ ದೇಶದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ(ಸಿಐಎ)ಗೆ ತಲುಪಿಸುವುದಕ್ಕೆ ಪ್ರಸ್ತಾವನೆಗಳ ಕಟ್ಟೊಂದನ್ನು ನೀಡುತ್ತಾನೆ. ಅದೆಂಥ ಸಮಯವಾಗಿತ್ತು ಎಂದರೆ ಅದೇ ವರ್ಷ ಮೇ ತಿಂಗಳಿನಲ್ಲಿ ಅಮೆರಿಕದ ಬೇಹುಗಾರಿಕೆ ವಿಮಾನ ಯು-2ಅನ್ನು ಸೋವಿಯತ್ ಒಕ್ಕೂಟ ಹೊಡೆದುರುಳಿಸಿ ಅದರ ಚಾಲಕನಾದ ಗ್ರೇ ಪವರ್ಸ್ನನ್ನು ಸೆರೆಹಿಡಿದಿರುತ್ತದೆ. ಮುಂದಿನ ನಾಲ್ಕು ದಿನಗಳಲ್ಲಿ ಮಾಸ್ಕೋದಲ್ಲಿ ಅವನ ವಿಚಾರಣೆ ನಡೆಯುವುದಿರುತ್ತದೆ. ಅಮೆರಿಕದ ಆ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ವ್ಯಕ್ತಿ ಬೇರಾರು ಅಲ್ಲ, ಆತ ಪೆಂಕೋವ್ಸಕಿ ಆಗಿರುತ್ತಾನೆ. ಆತ ಅವರಿಗೆ ಹೇಳುತ್ತಾನೆ, ಅಮೆರಿಕದ ಬೇಹುಗಾರಿಕೆ ವಿಮಾನವನ್ನು ಖ್ರುಶ್ಚೇವ್ ಹೇಳಿದಂತೆ ಒಂದೇ ಕ್ಷಿಪಣಿಯಿಂದ ಹೊಡೆದು ಉರುಳಿಸಿದ್ದಲ್ಲ, ಅದಕ್ಕೆ 14 ಕ್ಷಿಪಣಿಗಳನ್ನು ಹಾರಿಸಲಾಗಿತ್ತು. ಅವುಗಳಲ್ಲಿ ಒಂದೂ ನೇರವಾಗಿ ವಿಮಾನಕ್ಕೆ ತಗುಲಿಲ್ಲ ಎಂಬುದನ್ನು ತಾನು ಬಹಿರಂಗಪಡಿಸಬಲ್ಲೆ ಎಂದು ಹೇಳಿದನು.
ಆ ಇಬ್ಬರು ಅಮೆರಿದ ವಿದ್ಯಾರ್ಥಿಗಳಲ್ಲಿ ಒಬ್ಬನಿಗೆ, ಇದು ಯಾವುದೋ ರಷ್ಯಾದ ಪೊಲೀಸರ ಒಳಸಂಚು ಇರಬಹುದು ಎಂಬ ಅನುಮಾನ ಬಂದು ಪೆಂಕೋವ್ಸಕಿಯನ್ನು ತಳ್ಳಿ ಓಡುತ್ತ ತನ್ನ ಹೊಟೇಲ್ ಕೋಣೆಯನ್ನು ಸೇರಿಕೊಳ್ಳುತ್ತಾನೆ. ಆದರೆ ಇನ್ನೊಬ್ಬನಿಗೆ ರಷ್ಯಾದ ಈ ವ್ಯಕ್ತಿಯ ಮೇಲೆ ನಂಬಿಕೆ ಬರುತ್ತದೆ. ಆತ ಆ ಲಕೋಟೆಯನ್ನು ತೆಗೆದುಕೊಳ್ಳುತ್ತಾನೆ. ಅದನ್ನು ಅಮೆರಿಕದ ದೂತಾವಾಸಕ್ಕೆ ತಲುಪಿಸುತ್ತಾನೆ. ಅಲ್ಲಿಯ ಅಧಿಕಾರಿಗಳು ಅದರ ಬಗ್ಗೆ ತುಂಬ ತಲೆ ಕೆಡಿಸಿಕೊಂಡು ನಂತರ ರಾಜತಾಂತ್ರಿಕರ ಬ್ಯಾಗ್ ಒಂದರಲ್ಲಿ ಹಾಕಿ ವಾಷಿಂಗ್ಟನ್ನಲ್ಲಿದ್ದ ಸಿಐಎ ಕಚೇರಿಗೆ ತಲುಪಿಸುತ್ತಾರೆ. ಆ ಪತ್ರದಲ್ಲಿ ಪೆಂಕೋವ್ಸಕಿಯು, ತಾನು ರಹಸ್ಯ ಮಾಹಿತಿಗಳನ್ನು ನಿಮಗೆ ಕಳುಹಿಸುವುದಕ್ಕೆ ಸಿದ್ಧನಿದ್ದೇನೆ. ಅದನ್ನು ನೋಡಿ ಒರೆಗೆ ಹಚ್ಚಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದು ನಿಮಗೆ ಬಿಟ್ಟಿದ್ದು. ಮಾಹಿತಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ನೀಡುವುದಿಲ್ಲ. ಸಂಕೇತ ಸ್ಥಳವೊಂದರಲ್ಲಿ ಅದನ್ನು ಬಿಟ್ಟಿರುತ್ತೇನೆ. ಅದನ್ನು ನಿಮ್ಮವರು ಒಯ್ಯಬಹುದು ಎಂದು ತಿಳಿಸಿದ್ದನು. ಸಿಐಎಗೆ ಕುತೂಹಲದ ಜೊತೆಗೆ ಅನುಮಾನವೂ ಉಂಟಾಯಿತು. ಪಾಶ್ಚಾತ್ಯ ಬೇಹುಗಾರಿಕೆ ಸೇವೆಗಳಿಗೆ ಪೆಂಕೋವ್ಸಕಿ ಅಪರಿಚಿತ ಏನಾಗಿರಲಿಲ್ಲ. ಆತ 1955ರಲ್ಲಿ ಅಂಕಾರದಲ್ಲಿದ್ದದ್ದು, ಆಗ ಮಧ್ಯಪ್ರಾಚ್ಯದ ಕುರಿತು ಸೋವಿಯತ್ ನಡೆಯ ಬಗ್ಗೆ ಮಾಹಿತಿಗಳನ್ನು ನೀಡುವಂತೆ ಹಲವು ಬೇಹುಗಾರಿಕೆ ಸಂಸ್ಥೆಗಳು ಆತನನ್ನು ಸಂಪರ್ಕಿಸಿದ್ದು, ಆತ ಅವನ್ನೆಲ್ಲ ತಿರಸ್ಕರಿಸಿದ್ದು, ಆತನ ಯುದ್ಧ ದಾಖಲೆಗಳು, ರಷ್ಯಾದ ಜನರಲ್ ಒಬ್ಬರ ಮಗಳೊಂದಿಗೆ ಆತನ ಮದುವೆಯಾಗಿರುವುದು, ನಿರಂತರವಾಗಿ ಮೇಲಿನ ಹುದ್ದೆಗಳಿಗೆ ಏರುತ್ತ ಬಂದದ್ದು ಇವನ್ನೆಲ್ಲ ಗಮನಿಸಿದಾಗ ಈತ ಪಕ್ಷಾಂತರ ಮಾಡಬಹುದೆ, ಸೋವಿಯತ್ಗೆ ದ್ರೋಹ ಬಗೆಯಬಹುದೆ ಎಂಬ ಅನುಮಾನ ಸಿಐಎಗೆ ಮೂಡುತ್ತದೆ.
ತಮ್ಮ ಮೇಲೆ ನಿರಂತರ ಕಣ್ಗಾವಲಿದೆ ಎಂಬುದನ್ನು ಅರಿತಿದ್ದ ಸಿಐಎ ಅಧಿಕಾರಿಗಳು ಅವನನ್ನು ಸಂಪರ್ಕಿಸುವುದಕ್ಕೆ ವಿಳಂಬ ಮಾಡುತ್ತಾರೆ. ಈ ವಿಷಯವನ್ನು ನಿರ್ವಹಿಸುವುದಕ್ಕೆ ಅದು ಮಾಸ್ಕೋದಲ್ಲಿದ್ದ ಅಮೆರಿಕದ ದೂತಾವಾಸಕ್ಕೆ ವಿಶೇಷ ಅಧಿಕಾರಿಯೊಬ್ಬನನ್ನು ಕಳುಹಿಸುತ್ತದೆ. ಈ ನಡುವೆ ಪೆಂಕೋವ್ಸಕಿಯ ಮೇಲೆ ಬ್ರಿಟನ್ನಿನ ಕಣ್ಣು ಬಿದ್ದಿರುತ್ತದೆ. ತನ್ನ ಬೇಹುಗಾರಿಕೆಯ ಬಲ ಕುಂದಿಲ್ಲ ಎಂಬುದನ್ನು ಅಮೆರಿಕದ ಎದುರು ತೋರಿಸಿಕೊಳ್ಳುವುದಕ್ಕೆ ಬ್ರಿಟಿಷರ ಎಸ್ಐಎಸ್ ಆತನನ್ನು ಬಳಸಿಕೊಳ್ಳುವುದಕ್ಕೆ ನಿರ್ಧರಿಸುತ್ತದೆ. ಇದರ ಪರವಾಗಿ ಕೆಲಸ ಮಾಡುತ್ತಿದ್ದ ಫಿಲ್ಬಿ, ಬರ್ಗೆಸ್ ಮತ್ತು ಮ್ಯಾಕಲಿನ್ ರಷ್ಯಾದ ಕೆಜಿಬಿ ಪರ ಕೆಲಸ ಮಾಡುವವರೆಂದು ಬಹಿರಂಗವಾಗಿರುತ್ತದೆ. ಅವರ ಸೇವೆಯಿಂದ ವಂಚಿತವಾಗಿ ಆ ಕ್ಷಣದಲ್ಲಿ ಅದು ದುರ್ಬಲವಾಗಿತ್ತು. ಅವರ ಬದಲಿಗೆ ಮಾಸ್ಕೋದಲ್ಲಿ ತಾನು ಒಬ್ಬ ಏಜೆಂಟನ್ನು ಹೊಂದಿ ಅವನಿಂದ ಅಮೂಲ್ಯ ಮಾಹಿತಿಯನ್ನು ಪಡೆದರೆ ಸಿಐಎ ಕಣ್ಣಲ್ಲಿ ತನ್ನ ಮಾನ ಹೆಚ್ಚುವುದೆಂದು ಅದು ಬಗೆಯುತ್ತದೆ. ಉದ್ಯಮಿಯಾದ ಗ್ರೆವಿಲ್ಲೆ ವಿನ್ನೆಯನ್ನು ಅದು ಆಗಲೇ ಮಾಸ್ಕೋಗೆ ಕಳುಹಿಸಿರುತ್ತದೆ. ಪೆಂಕೋವ್ಸಕಿಗೆ ಈ ಗ್ರೆವಿಲ್ಲೆ ವಿನ್ನೆಯ ಪರಿಚಯವಾಗುತ್ತದೆ. ತಾನು 1961ರಲ್ಲಿ ಲಂಡನ್ನಿಗೆ ಬಂದಾಗ ಇಬ್ಬರು ಅಮೆರಿಕದ ಮತ್ತು ಇಬ್ಬರು ಬ್ರಿಟಿಷ್ ಬೇಹುಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿಸುವಂತೆ ಪೆಂಕೋವ್ಸಕಿ ಆತನ ಮನವೊಲಿಸುತ್ತಾನೆ. ವಿನ್ನೆ ಆತನ ಸಂದೇಶವಾಹಕರಲ್ಲಿ ಒಬ್ಬನಾಗಿರುತ್ತಾನೆ. ಪೆಂಕೋವ್ಸಕಿಯೊಂದಿಗೆ ಸಂಪರ್ಕ ಸಾಧಿಸುವ ವಿಶಿಷ್ಟ ಕೆಲಸವನ್ನು ಬ್ರಿಟಿಷ್ ಬೇಹುಗಾರಿಕೆ ವ್ಯವಸ್ಥೆಯು ತನಗೆ ವಹಿಸಿತ್ತು ಅದನ್ನು ತಾನು ತುಂಬ ಎಚ್ಚರಿಕೆಯಿಂದ ನಿರ್ವಹಿಸಿದ್ದೆ ಎಂದು ವಿನ್ನೆ ತನ್ನ ಆತ್ಮಕಥನದಲ್ಲಿ ನಂತರ ಬರೆದುಕೊಂಡಿದ್ದಾನೆ. 1961ರ ಏಪ್ರಿಲ್ನಲ್ಲಿ ಅವನು ವಿನ್ನೆಗೆ ದೊಡ್ಡ ಪ್ರಮಾಣದಲ್ಲಿ ದಾಖಲೆಗಳನ್ನು ಮತ್ತು ಫಿಲ್ಮ್ಗಳನ್ನು ನೀಡುತ್ತಾನೆ. ಬ್ರಿಟಿಷರಿಗೆ ಮತ್ತು ಅಮೆರಿಕದವರಿಗೆ ಆಕಸ್ಮಿಕವಾಗಿ ತಮಗೆ ಹೊಡೆದ ಅದೃಷ್ಟದ ಲಾಟರಿಯನ್ನು ನಂಬುವುದಕ್ಕೇ ಆಗಲಿಲ್ಲ.
ಪೆಂಕೋವ್ಸಕಿಯನ್ನು ಸಂಪರ್ಕಿಸಲು ಸಿಐಎ ವಿಳಂಬ ಮಾಡಿದ್ದಕ್ಕೆ ಅಮೆರಿಕವು ಪರಿತಪಿಸಬೇಕಾಯಿತು ಎಂಬುದು ನಂತರ ಸಿದ್ಧವಾಯಿತು. ಆದರೂ ಬ್ರಿಟಿಷರು ಪೆಂಕೋವ್ಸಕಿಯಿಂದ ತಾವು ಪಡೆದ ಮಾಹಿತಿಯನ್ನು ಅಮೆರಿಕದೊಂದಿಗೆ ಹಂಚಿಕೊಂಡರು. ಮುಂದಿನ ಹದಿನೆಂಟು ತಿಂಗಳುಗಳಲ್ಲಿ ಪೆಂಕೋವ್ಸಕಿಯು ಭಾರೀ ದೊಡ್ಡ ಪ್ರಮಾಣದಲ್ಲಿ ಮಾಹಿತಿಯನ್ನು ಬ್ರಿಟಿಷ್ ಸೀಕ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ನ ಮಾಸ್ಕೋದಲ್ಲಿಯ ವ್ಯವಹಾರ ನೋಡಿಕೊಳ್ಳುತ್ತಿದ್ದ ರೌರಿ ಚಿಸ್ಹೋಲ್ಮ್ ಮತ್ತು ಅವರ ಪತ್ನಿ ಜೆನೆಟ್ ಚಿಸ್ಹೋಲ್ಮ್ ಅವರಿಗೆ ಮತ್ತು ತಮ್ಮ ಸಂಪರ್ಕಕ್ಕೆ ಬಂದ ಸಿಐಎ ಹಾಗೂ ಎಸ್ಐಎಸ್ನವರಿಗೆ ತನ್ನ ವಿದೇಶ ಭೇಟಿಯ ಸಂದರ್ಭದಲ್ಲಿ ಹಸ್ತಾಂತರಿಸಿದನು. ತುಂಬಾ ಮಹತ್ವದ್ದು ಎಂದರೆ ಸೋವಿಯತ್ನ ಪರಮಾಣು ಅಸ್ತ್ರವು ಮೊದಲು ಭಾವಿಸಿದಷ್ಟು ದೊಡ್ಡದಲ್ಲ, ತುಂಬ ಚಿಕ್ಕದಿದೆ ಹಾಗೂ ಸೋವಿಯತ್ನ ಪರಮಾಣು ಇಂಧನ ವ್ಯವಸ್ಥೆಯು ಇನ್ನೂ ಪೂರ್ತಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ, ಹಾಗೆಯೇ ಸೋವಿಯತ್ನ ಮಾರ್ಗದರ್ಶಿ ವ್ಯವಸ್ಥೆಯು ಕಾರ್ಯನಿರ್ವಹಿಸುವ ಸ್ಥಿತಿಯನ್ನು ಇನ್ನೂ ಪಡೆದಿಲ್ಲ ಎಂಬ ಮಾಹಿತಿಯನ್ನು ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕನೆಡಿಯವರಿಗೆ ನೀಡಿದ್ದು. ಇದರಿಂದಾಗಿ ಖ್ರುಶ್ಚೇವ್ ಸೋವಿಯತ್ನ ಕ್ಷಿಪಣಿ ಸಾಮರ್ಥ್ಯವನ್ನು ಇರುವುದಕ್ಕಿಂತ ತುಂಬ ಹೆಚ್ಚಾಗಿಯೇ ಹೇಳಿಕೊಂಡಿದ್ದಾರೆ ಎಂಬ ಅಂಶ ಅವರಿಗೆ ತಿಳಿಯುತ್ತದೆ.
ಪೆಂಕೋವ್ಸಕಿಯು ಸೋವಿಯತ್ನ ಪ್ರಮುಖವಾದ ಮಾಹಿತಿಯನ್ನು ನೀಡಿದರೂ ಆತನ ಉಪಯುಕ್ತತೆ ವಿಷಯದಲ್ಲಿ ಬ್ರಿಟಿಷ್ ಎಂಐ5 ಅಧಿಕಾರಿ ಪೀಟರ್ ರೈಟ್ ಅವರು ಭಿನ್ನವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಈ ಮೊದಲು ಸೋವಿಯತ್ಗೆ ದ್ರೋಹ ಬಗೆದು ಮಾಹಿತಿ ನೀಡಿದ್ದ ಇಗೋರ್ ಗೌಝೆಂಕೋ ಮತ್ತಿತರ ರೀತಿ ಪೆಂಕೋವ್ಸಕಿ ಪಶ್ಚಿಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋವಿಯತ್ನ ಕಾನೂನುಬಾಹಿರ ಏಜೆಂಟರ ಹೆಸರನ್ನು ಬಹಿರಂಗಪಡಿಸಿಲ್ಲ. ಆತ ನೀಡಿದ್ದು ಕೇವಲ ಸಾಂಸ್ಥಿಕ ವಿವರಗಳು, ಆದರೆ ಅವುಗಳಲ್ಲಿ ಹೆಚ್ಚಿನವು ಮೊದಲೇ ಗೊತ್ತಿದ್ದವು ಆಗಿದ್ದವು. ಆದಾಗ್ಯೂ ಅವುಗಳಲ್ಲಿ ಹಲವು ದಾಖಲೆಗಳು ಮೂಲ ಪ್ರತಿಗಳೇ ಆಗಿದ್ದವು. ಅವುಗಳನ್ನು ಪಡೆದುಕೊಳ್ಳುವುದು ಸುಲಭದಲ್ಲಿ ಸಾಧ್ಯವಾದುದಾಗಿರಲಿಲ್ಲ ಎಂದು ಹೇಳಿದ್ದಾರೆ. ಶೀತಲಯುದ್ಧದ ಸಮಯದಲ್ಲಿ ಬ್ರಿಟಿಷ್ ಬೇಹುಗಾರಿಕೆ ಪಡೆಯು ನಿರ್ವಹಿಸಿದ ಪಾತ್ರದ ರೀತಿಗೆ ಅದರ ನಾಯಕತ್ವವನ್ನು ರೈಟ್ ಖಂಡಿಸಿದ್ದಾರೆ. ಬ್ರಿಟಿಷ್ ಬೇಹುಗಾರಿಕೆ ಪಡೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ರೈಟ್ ಸಲಹೆ ಮಾಡಿದ್ದರು. ಹಾಗೆ ಮಾಡಿದ್ದರೆ ಸೋವಿಯತ್ ಪರ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಏಜೆಂಟರಾದ ಫಿಲ್ಬಿ, ಮೆಕಲಿನ್, ಬರ್ಗೀಸ್ ಮತ್ತು ಬ್ಲಂಟ್ ಅವರನ್ನು ಕಂಡುಹಿಡಿಯಬಹುದಾಗಿತ್ತು ಎಂಬುದು ಅವರ ನಿಲವು. ಫಿಲ್ಬಿ ಮೊದಲಾದವರು ಸೋವಿಯತ್ ಪರ ಕೆಲಸ ಮಾಡುತ್ತಿದ್ದುದರಿಂದ ಬ್ರಿಟಿಷ್ ಬೇಹುಗಾರಿಕೆಯು ಪಾರ್ಶ್ವವಾಯು ಬಡಿದಂತೆ ಇತ್ತು. ಅದು ಯಾವುದೇ ಸವಾಲಿನ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಇದನ್ನು ಅರಿತ ಸೋವಿಯತ್ ಪೆಂಕೋವ್ಸಕಿಯನ್ನು ಬ್ರಿಟನ್ನಿನಲ್ಲಿ ಬಿಟ್ಟು ಅದನ್ನು ಇನ್ನಷ್ಟು ದುರ್ಬಲಗೊಳಿಸಿತು ಎಂದು ಹೇಳಿದ್ದಾರೆ. ಆದರೆ ಬ್ರಿಟಿಷ್ ಏಜೆಂಟ್ ಗ್ರೆವಿಲ್ಲೆ ವಿನ್ನೆಯು ಪೆಂಕೋವ್ಸಕಿಯ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುತ್ತಾನೆ. ಈತ ಪೆಂಕೋವ್ಸಕಿಯ ಜೊತೆಯಲ್ಲಿ ಬಂಧನಕ್ಕೆ ಒಳಗಾಗಿ ಲುಬ್ಯಾಂಕ ಜೈಲಿನಲ್ಲಿ 18 ತಿಂಗಳು ಕಳೆದವನು. ಇವನಿಗೆ ಎಂಟು ವರ್ಷ ಜೈಲು ಶಿಕ್ಷೆಯಾಗಿರುತ್ತದೆ. ಕೆಜಿಬಿಯ ಒಬ್ಬ ಅಧಿಕಾರಿ ಗೋರ್ಡನ್ ಲೋನ್ಸ್ಡೇಲ್ 1961ರಿಂದ ಬ್ರಿಟನ್ನಿನ ಜೈಲಿನಲ್ಲಿರುತ್ತಾನೆ. ಅವನ ಬದಲಾಗಿ ಇವನು ಎಂಬ ವಿನಿಮಯ ಒಪ್ಪಂದದಂತೆ 1964ರ ಏಪ್ರಿಲ್ನಲ್ಲಿ ವಿನ್ನೆ ಬ್ರಿಟನ್ನಿಗೆ ಹಸ್ತಾಂತರವಾಗುತ್ತಾನೆ. ಕುಡಿತವನ್ನು ವ್ಯಸನವಾಗಿಸಿಕೊಂಡಿದ್ದ ಈತ 1990ರಲ್ಲಿ ಸಾವಿಗೀಡಾಗುತ್ತಾನೆ.
ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟು-
ಕ್ಯೂಬಾದಲ್ಲಿ ತಾನು ಪರಮಾಣು ಕ್ಷಿಪಣಿಗಳ ನೆಲೆಯೊಂದನ್ನು ಸ್ಥಾಪಿಸಿದರೆ ಅದನ್ನು ಪತ್ತೆ ಮಾಡುವುದು ವಾಷಿಂಗ್ಟನ್ನಿಗೆ ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ ಗೊತ್ತಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಅದು ಇರುತ್ತದೆ ಎಂಬ ನಂಬಿಕೆಯಿಂದ ಸೋವಿಯತ್ ನಾಯಕತ್ವವು ಆ ದಿಸೆಯಲ್ಲಿಕಾರ್ಯಪ್ರವೃತ್ತವಾಗಿತ್ತು. ಕ್ಯೂಬಾದಲ್ಲಿ ಎಲ್ಲಿ ಪರಮಾಣು ಕ್ಷಿಪಣಿ ಉಡಾವಣೆಯ ನೆಲೆಗಳನ್ನು ಸೋವಿಯತ್ ಸ್ಥಾಪಿಸಿದೆ ಎಂಬುದರ ವಿವರಗಳನ್ನು ಪೆಂಕೋವ್ಸಕಿಯು ಬ್ರಿಟನ್ ಮತ್ತು ಅಮೆರಿಕಕ್ಕೆ ನೀಡಿದ್ದನು. ಈ ಮಾಹಿತಿ ಆಧರಿಸಿದ ಅಮೆರಿಕದ ಯು-2 ಬೇಹುಗಾರಿಕೆ ವಿಮಾನಗಳು ಕ್ಷಿಪಣಿ ಇರುವ ನೆಲೆಗಳ ಅಸ್ಪಷ್ಟವಾದ ಫೋಟೋಗಳನ್ನು ತೆಗೆಯುವಲ್ಲಿ ಯಶಸ್ವಿಯಾಗುತ್ತವೆ. ಈ ಮಾಹಿತಿಯು ಎಷ್ಟೊಂದು ಪ್ರಮುಖವಾದದ್ದು ಎಂಬುದನ್ನು 1978ರಲ್ಲಿ ಬ್ರಿಟನ್ ಪರವಾಗಿ ಕೆಲಸ ಮಾಡಿದ ಜಿಆರ್ಯುನ ಮಾಜಿ ಕ್ಯಾಪ್ಟನ್ ವಿಕ್ಟರ್ ಸುವೋರೋವ್ ಎಂಬಾತ ಸೋವಿಯತ್ ಬೇಹುಗಾರಿಕೆ ಕುರಿತ ತನ್ನ ಕೃತಿಯೊಂದರಲ್ಲಿ ವಿವರಿಸಿದ್ದಾನೆ. ಇತಿಹಾಸಕಾರರು ಜಿಆರ್ಯು ಕರ್ನಲ್ ಒಲೆಗ್ ಪೆಂಕೋವ್ಸಕಿಯ ಹೆಸರನ್ನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳಬೇಕು. ಅವರು ಒದಗಿಸಿದ ಬೆಲೆಕಟ್ಟಲಾಗದ ಮಾಹಿತಿಯಿಂದ ಕ್ಯೂಬಾದ ಬಿಕ್ಕಟ್ಟು ಕೊನೆಯ ಜಾಗತಿಕ ಯುದ್ಧವಾಗಿ ಮಾರ್ಪಡುವುದನ್ನು ತಪ್ಪಿಸಿತು ಎಂದು ವರ್ಣಿಸಿದ್ದಾನೆ. ಅಮೆರಿಕವು ರಷ್ಯಾದ ಕ್ಷಿಪಣಿ ನೆಲೆಯು ಕ್ಯೂಬಾದಲ್ಲಿ ನಿರ್ದಿಷ್ಟವಾಗಿ ಇಲ್ಲಿಯೇ ಇದೆ ಎಂದು ಕುಂಡುಕೊಂಡಿದ್ದು ಕುತೂಹಲಕಾರಿಯಾಗಿದೆ. ಕ್ಯೂಬಾದ ಒಂದು ಕಡೆ ದೊಡ್ಡದಾದ ಫುಟ್ಬಾಲ್ ಕ್ರೀಡಾಂಗಣವನ್ನು ಹೊಸದಾಗಿ ನಿರ್ಮಿಸಲಾಗುತ್ತಿತ್ತು. ಇದು ಪೆಂಕೋವ್ಸಕಿ ಸೂಚಿಸಿದ ನೆಲೆಯ ಹತ್ತಿರವೇ ಇತ್ತು. ಕ್ಯೂಬಾದ ರಾಷ್ಟ್ರೀಯ ಕ್ರೀಡೆ ಬೇಸ್ಬಾಲ್. ಆ ದೇಶದಲ್ಲಿ ಫುಟ್ಬಾಲ್ ಆಡುವುದು ಕಡಿಮೆ. ಫುಟ್ಬಾಲ್ ರಷ್ಯಾದ ಆಟ. ತನ್ನದಲ್ಲದ ಕ್ರೀಡೆಗೆ ಇಷ್ಟೊಂದು ದೊಡ್ಡ ಕ್ರೀಡಾಂಗಣವನ್ನು ಕ್ಯೂಬಾ ಏಕೆ ನಿರ್ಮಿಸುತ್ತಿದೆ ಎಂಬ ಕುತೂಹಲ ಅಮೆರಿಕಕ್ಕೆ. ಕೊನೆಗೆ ಅದು, ಇಲ್ಲಿಯೇ ರಷ್ಯಾದ ಪರಮಾಣು ಕ್ಷಿಪಣಿಯನ್ನು ನಿಯೋಜಿಸುತ್ತಿರುವುದು ಎಂಬ ತೀರ್ಮಾನಕ್ಕೆ ಬರುತ್ತದೆ. ಅದು ನಿಜವೂ ಆಗಿತ್ತು.
ಪೆಂಕೋವ್ಸಕಿಯ ಚಟುವಟಿಕೆಗಳನ್ನು ಕೆಜಿಬಿ ಪರವಾಗಿ ಕೆಲಸ ಮಾಡುತ್ತಿದ್ದ ಸೋವಿಯತ್ ಡಬ್ಬಲ್ ಏಜೆಂಟ್, ಎನ್ಎಸ್ಎದಲ್ಲಿ ನೌಕರನಾಗಿದ್ದ ಜಾಕ್ ಡನ್ಲಪ್ ಬೆಳಕಿಗೆ ತರುತ್ತಾನೆ. ಕೆಜಿಬಿಯ ಉನ್ನತ ಅಧಿಕಾರಿಗಳಿಗೆ ಪೆಂಕೋವ್ಸಕಿಯು ಒಬ್ಬ ಡಬ್ಬಲ್ ಏಜೆಂಟ್ ಎಂಬ ಅರಿವು ಒಂದು ವರ್ಷಕ್ಕೂ ಪೂರ್ವದಲ್ಲಿಯೇ ಗೊತ್ತಿತ್ತು. ಆದರೆ ಎಂಐ6ನಲ್ಲಿದ್ದ ತಮ್ಮ ಮಾಹಿತಿ ಮೂಲವನ್ನು ರಕ್ಷಿಸಿಕೊಳ್ಳುವುದಕ್ಕೆ ಅವರು ಮೊದಲ ಆದ್ಯತೆಯನ್ನು ನೀಡಿದರು. ಈ ಕಾರಣಕ್ಕೆ ಅವರು ಪೆಂಕೋವ್ಸಕಿಯನ್ನು ಸಂಬಂಧವಿಲ್ಲದ ಬೇರಾವುದೋ ಪ್ರಕರಣದಲ್ಲಿ ಸಿಲುಕಿಸಿದರು. ಈ ಮೂಲಕ ಬ್ರಿಟಿಷ್ ರಾಜತಾಂತ್ರಿಕರ ಕಣ್ಣಿಗೆ ಮಣ್ಣೆರಚಿ ಪೆಂಕೋವ್ಸಕಿಯನ್ನು ಬಂಧಿಸುವುದಕ್ಕೆ ದಾರಿ ಸುಗಮ ಮಾಡಿಕೊಂಡರು. ಒಮ್ಮೆ ಈತನನ್ನು ಬಂಧಿಸಿದರೂ ತಮ್ಮ ಪರವಾಗಿ ಬ್ರಿಟನ್ನಿನಲ್ಲಿ ಕೆಲಸ ಮಾಡುವವರು ಸುರಕ್ಷಿತವಾಗಿರುತ್ತಾರೆ ಎಂಬುದು ಇದರ ಹಿಂದಿನ ಲೆಕ್ಕಾಚಾರ. ಇವೆಲ್ಲ ಏನೇ ಇದ್ದರೂ ಕ್ಯೂಬಾದಲ್ಲಿ ಪರಮಾಣು ಕ್ಷಿಪಣಿಗಳು ಇವೆ ಎಂಬ ಮಾಹಿತಿ ಸೋವಿಯತ್ ಬಯಸಿದ್ದಕ್ಕಿಂತ ಮೊದಲೇ ಅಮೆರಿಕಕ್ಕೆ ಗೊತ್ತಾಗುತ್ತದೆ.
ಅಮೆರಿಕದ ಅಧ್ಯಕ್ಷ ಕೆನೆಡಿಯವರು ದೇಶವನ್ನು ಉದ್ದೇಶಿಸಿ ಈ ಸಂಬಂಧ ಮಾತನಾಡುವುದಕ್ಕೆ ಮೊದಲೇ ಪೆಂಕೋವ್ಸಕಿಯನ್ನು 1962ರ ಅಕ್ಟೋಬರ್ 22ರಂದು ಬಂಧಿಸಲಾಯಿತು. ಕೆನೆಡಿ ತಮ್ಮ ಭಾಷಣದಲ್ಲಿ, ಸೋವಿಯತ್ ರಷ್ಯಾ ಕ್ಯೂಬಾದಲ್ಲಿ ಮಧ್ಯಮ ಶ್ರೇಣಿಯ ಪರಮಾಣು ಕ್ಷಿಪಣಿಗಳನ್ನು ಸ್ಥಾಪಿಸುತ್ತಿದೆ. ಈ ಸಂಬಂಧದ ಬೇಹುಗಾರಿಕೆ ವರದಿಗಳನ್ನು ಯು-2 ಬೇಹುಗಾರಿಕೆ ವಿಮಾನಗಳು ತೆಗೆದಿರುವ ಭಾವಚಿತ್ರಗಳು ಖಚಿತಪಡಿಸಿವೆ. ಈ ಯೋಜನೆಯ ರಹಸ್ಯ ಹೆಸರು ಆಪರೇಷನ್ ಅನಡಿರ್ ಎಂದು ವಿವರಿಸಿದರು. ಆದರೆ ಅಧ್ಯಕ್ಷ ಕೆನಡಿ ಯಾವ ಬೇಹುಗಾರಿಕೆ ಏಜೆಂಟನಿಂದ ತಮಗೆ ಮಾಹಿತಿ ದೊರೆಯಿತು ಎಂಬುದನ್ನು ಬಹಿರಂಗಪಡಿಸಲಿಲ್ಲ. ಆಗಿನ ಹದಿಮೂರು ದಿನಗಳ ತೀವ್ರ ಉದ್ವಿಘ್ನದ ಸ್ಥಿತಿಯನ್ನು ಶಮನಗೊಳಿಸುವುದಕ್ಕೆ ಆತ ಕಾರಣ ಎಂಬ ಕೃತಜ್ಞತೆಯ ಭಾವವಿರಬೇಕು. ಅದಾಗಲೆ ಪರಿಸ್ಥಿತಿಯನ್ನು ತಿಳಿಗೊಳಿಸಲು ನಿಕಿತಾ ಖ್ರುಶ್ಚೇವ್ ಕ್ರಮಗಳನ್ನು ಕೈಗೊಂಡಿದ್ದರು. ಈ ಮಾಹಿತಿಯಿಂದ ಕ್ಯೂಬಾದ ಮೇಲೆ ಯುದ್ಧ ಸಾರಬೇಕಾದ ಒತ್ತಡದಿಂದ ಕೆನೆಡಿ ಮುಕ್ತರಾದರು. ಹಾಗೆಯೇ ಸೋವಿಯತ್ ಒಕ್ಕೂಟವು ಅಮೆರಿಕದ ಪಡೆಗಳ ವಿರುದ್ಧ ಲುನಾ ಶ್ರೇಣಿಯ ಪರಮಾಣು ಅಸ್ತ್ರಗಳನ್ನು ಪ್ರಯೋಗಿಸುವ ಸಂಭಾವ್ಯತೆಯಿಂದ ಪಾರುಮಾಡಿತು.
ಬಂಧನ ಮತ್ತು ಶಿಕ್ಷೆ-
ಪೆಂಕೋವ್ಸಕಿಯು ಮಾಸ್ಕೋದಲ್ಲಿದ್ದ ತನ್ನ ಅಮೆರಿಕದ ಸಂಪರ್ಕದ ವ್ಯಕ್ತಿಗೆ ಸಂಕೇತ ಸ್ಥಳವೊಂದರಲ್ಲಿ ಸಂದೇಶದ ಪತ್ರವೊಂದನ್ನು ಬಿಡುತ್ತಾನೆ. ಹೀಗೆ ಮಾಡುವುದಕ್ಕೆ ಬೇಹುಗಾರಿಕೆ ಪರಿಭಾಷೆಯಲ್ಲಿ ಡೆಡ್ ಡ್ರಾಪ್ ಎನ್ನುತ್ತಾರೆ. ಹೀಗೆ ಪತ್ರವನ್ನು ಇಡುವಾಗ ಪೆಂಕೋವ್ಸಕಿಯನ್ನು ಬಂಧಿಸಲಾಗುತ್ತದೆ. ಕೆಜಿಬಿಯ ಮುಖ್ಯಸ್ಥ ಅಲೆಕ್ಸಾಂಡರ್ ಝಗ್ವೋಜ್ಡಿನ್ ತನಿಖೆಯನ್ನು ನಡೆಸುತ್ತಾನೆ. ಪೆಂಕೋವ್ಸಕಿಯನ್ನು ನೂರಾರು ಬಾರಿ ಪ್ರಶ್ನಿಸಲಾಯಿತು. ಕೊನೆಯಲ್ಲಿ ಆತನನ್ನು ಮೇ 16, 1963ರಂದು ಗುಂಡಿಟ್ಟು ಕೊಂದು ಅಂತಿಮ ಸಂಸ್ಕಾರ ಮಾಡಲಾಗಿದೆ ಎಂದು ಆತ ಹೇಳುತ್ತಾನೆ. ಪೆಂಕೋವ್ಸಕಿಯಿಂದಾಗಿ ರಷ್ಯಾಗೆ ತುಂಬ ಮುಖಭಂಗವಾಗಿರುತ್ತದೆ. ಈತನಿಗೆ ನೀಡುವ ಶಿಕ್ಷೆ ಅತ್ಯುಗ್ರವಾಗಿರಬೇಕು, ದ್ರೋಹ ಬಗೆಯುವ ಇತರರಿಗೆ ಭಯವನ್ನುಂಟುಮಾಡಬೇಕು ಎಂದು ಅದು ಬಯಸಿರುತ್ತದೆ. ಈ ಕಾರಣಕ್ಕಾಗಿಯೇ ಅದು ಆತನನ್ನು ಜೀವಂತವಾಗಿ ಸುಟ್ಟುಹಾಕುತ್ತದೆ. ಜಿಆರ್ಯು ಏಜೆಂಟ್ ವ್ಲಡಿಮಿರ್ ರೆಜುನ್ 1978ರಲ್ಲಿ ಇಂಗ್ಲೆಂಡ್ ಪರವಾಗಿ ಕೆಲಸಮಾಡಲು ಅಲ್ಲಿಗೆ ಹೋಗುತ್ತಾನೆ. ಆತ ತನ್ನ ಕೃತಿ ಅಕ್ವೇರಿಯಂ'ನಲ್ಲಿ ಪೆಂಕೋವ್ಸಕಿಗೆ ನೀಡಿದ ಕ್ರೂರ ಶಿಕ್ಷೆಯನ್ನು ವರ್ಣಿಸಿದ್ದಾನೆ. ಅವರಿಗೆ ಒಂದು ಕಪ್ಪು-ಬಿಳುಪಿನ ಸಿನಿಮಾವನ್ನು ತೋರಿಸುತ್ತಾರಂತೆ. ಅದರಲ್ಲಿ ಪೆಂಕೋವ್ಸಕಿಯನ್ನು ಸ್ಟ್ರೆಚರ್ ಒಂದಕ್ಕೆ ಬಿಗಿದಿರುತ್ತಾರಂತೆ. ಹಾಗೆಯೇ ಚಿತಾಗಾರದಲ್ಲಿ ಜೀವಂತವಾಗಿ ದಹಿಸಿಬಿಡುತ್ತಾರಂತೆ. ನಿಷ್ಠೆ ಬದಲಿಸುವ ಏಜೆಂಟರಿಗೆ ಇದೊಂದು ಎಚ್ಚರಿಕೆಯ ಪಾಠ ಎಂಬ ಒಕ್ಕಣೆ ಬೇರೆ. ಇದೇ ರೀತಿಯ ವಿವರಣೆಯನ್ನು ವೋಕ್ಮನ್ ಅವರ ಬೇಹುಗಾರರ ಕುರಿತ ಇತಿಹಾಸ ಪುಸ್ತಕದಲ್ಲಿ ಮತ್ತು ಟಾಮ್ ಕ್ಲಾನ್ಸಿಯ
ರೆಡ್ ರಾಬಿಟ್’ ಎಂಬ ಕಾದಂಬರಿಯಲ್ಲೂ ನೀಡಲಾಗಿದೆ. ಆದರೆ 2010ರಲ್ಲಿ ಸವೋರೋವ್ ಸಂದರ್ಶನವೊಂದರಲ್ಲಿ ಇದನ್ನು ತಳ್ಳಿಹಾಕುತ್ತಾನೆ. ಆತನನ್ನು ಗುಂಡಿಟ್ಟು ಸಾಯಿಸಲಾಯಿತು ಎಂದು ಹೇಳುತ್ತಾನೆ. ಗ್ರೆವಿಲ್ಲೆ ವಿನ್ನೆ ತನ್ನ ಕೃತಿ `ದಿ ಮ್ಯಾನ್ ಫ್ರಂ ಒಡೆಸ್ಸಾ’ದಲ್ಲಿ ಪೆಂಕೋವ್ಸಕಿ ಆತ್ಮಹತ್ಯೆ ಮಾಡಿಕೊಂಡ ಎಂದು ಬರೆದಿದ್ದಾನೆ. ವಿನ್ನೆಯು ಪೆಂಕೋವ್ಸಕಿಯ ಸಂಪರ್ಕದಲ್ಲಿದ್ದು ಆತನ ಪತ್ರಗಳನ್ನು ಸಾಗಿಸುವವನಾಗಿದ್ದನು. ಇವರಿಬ್ಬರನ್ನೂ ಸೋವಿಯತ್ ಅಕ್ಟೋಬರ್ 1963ರಲ್ಲಿ ಬಂಧಿಸಿತ್ತು. ಏನೆ ಇರಲಿ ಪೆಂಕೋವ್ಸಕಿಯನ್ನು ರಷ್ಯಾ ದೇಶದ್ರೋಹಿ ಎಂದು ಪರಿಗಣಿಸಿದರೆ, ಪಶ್ಚಿಮದಲ್ಲಿ ಆತನನ್ನು, ಜಗತ್ತನ್ನು ಬಚಾವು ಮಾಡಿದ ಮಹಾನ್ ಗೂಢಚಾರಿ ಎಂದು ಗೌರವಿಸುತ್ತದೆ. ಆನಂತರದ ದಿನಗಳಲ್ಲಿ ಬೆಳಕಿಗೆ ಬಂದ ಹೊಸ ದಾಖಲೆಗಳಿಂದ ಪೆಂಕೋವ್ಸಕಿಯ ಸ್ನೇಹಿತರಾದ ಬ್ರಿಟಿಷ್ ಸೀಕ್ರೆಟ್ ಇಂಟೆಲಿಜೆನ್ಸ್ ಸರ್ವಿಸ್ನವರು ಆತನಿಗೆ ದ್ರೋಹ ಬಗೆದಿದ್ದರಿಂದಲೇ ಆತ ತನ್ನ ಪ್ರಾಣ ಕಳೆದುಕೊಳ್ಳಬೇಕಾಯಿತು ಎಂಬುದು ತಿಳಿಯುತ್ತದೆ. ಒಟ್ಟಾರೆ ಇದೊಂದು ಬೇಹುಗಾರಿಕೆ ಚಾತುರ್ಯಗಳ ನಡುವಿನ ಮಹಾಯುದ್ಧವಾಗಿರುತ್ತದೆ. ಇದರಲ್ಲಿ ಬ್ರಿಟಿಷರು ಗೆಲ್ಲುತ್ತಾರೆ. ಕೇವಲ ರಷ್ಯಾದ ಮೇಲಲ್ಲ, ತನ್ನ ಜೊತೆಗಾರ ಅಮೆರಿಕವನ್ನೂ ಅವರು ಮೀರಿಸುತ್ತಾರೆ. ಇದರಿಂದ ಪೆಂಕೋವ್ಸಕಿಯಂಥ ಗೂಢಚಾರನ ಪ್ರಾಣಕ್ಕೆ ಸಂಚಕಾರ ಬರುತ್ತದೆ. ಅಮೆರಿಕದ ಸಿಐಎ ಕೂಡ ಇದರಿಂದ ಪಾಠ ಕಲಿಯುತ್ತದೆ. ಬ್ರಿಟಿಷರೊಂದಿಗೆ ಮುಂದೆಂದೂ ಜೊತೆಯಾಗಿ ಕೆಲಸ ಮಾಡಬಾರದು ಎಂಬ ನಿರ್ಧಾರಕ್ಕೆ ಅದು ಬರುತ್ತದೆ.
ಪೆಂಕೋವ್ಸಕಿಯ ಕುರಿತು ಬಿಬಿಸಿ 2007ರಲ್ಲಿ ಒಂದು ಸರಣಿಯನ್ನು ಪ್ರಸಾರ ಮಾಡಿತು. ಅದರಲ್ಲಿ ಮಾಸ್ಕೋದಲ್ಲಿದ್ದ ಬ್ರಿಟಿಷ್ ಎಂಐ6 ಏಜೆಂಟ್ ಜೆನೆಟ್ ಚಿಸ್ಹೋಲ್ಮ್ ಅವರನ್ನು ಪೆಂಕೋವ್ಸಕಿ ಭೇಟಿ ಮಾಡಿದ ಚಿತ್ರವನ್ನು ತೋರಿಸಲಾಗಿದೆ. ಆತನ ಕುರಿತು ಕೆಜಿಬಿ ಬಿಡುಗಡೆ ಮಾಡಿದ ಹಲವು ದಾಖಲೆಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಈತನನ್ನು ನಾಯಕನನ್ನಾಗಿ ಮಾಡಿ ಹಲವು ಸ್ಪೈ ಕಾದಂಬರಿಗಳು ಪ್ರಕಟವಾಗಿವೆ. ಹಾಗೆಯೇ ಸಿನಿಮಾ ಕೂಡ ಬಂದಿದೆ.
ಪೆಂಕೋವ್ಸಕಿ ನಿಜಕ್ಕೂ ದ್ರೋಹಿಯೆ?-
ಪೆಂಕೋವ್ಸಕಿ ಏಕೆ ಹೀಗೆ ಮಾಡಿದ? ಸೋವಿಯತ್ ಒಕ್ಕೂಟದಲ್ಲಿ ಪ್ರತಿಷ್ಠಿತ ಜೀವನವನ್ನು ನಡೆಸುತ್ತಿದ್ದವನು ಅವನು. ಸೋವಿಯತ್ನ ಉನ್ನತ ಸ್ತರದಲ್ಲಿ ಅವನಿಗೆ ಸ್ನೇಹಿತರಿದ್ದರು. ಕೇಂದ್ರ ಸಮಿತಿಯ ಸದಸ್ಯ ಮತ್ತು ಸುಪ್ರೀಂ ಸೋವಿಯತ್ನ ಡೆಪ್ಯೂಟಿಯಾಗಿದ್ದ ಮಾರ್ಷಲ್ ಸೆರ್ಗೆಯಿ ವಾರೆಂತ್ಸೋವ್ ಪೆಂಕೋವ್ಸಕಿಯ ಉತ್ತೇಜಕರಲ್ಲಿ ಒಬ್ಬರಾಗಿದ್ದರು. ಹೀಗಿದ್ದರೂ ಪೆಂಕೋವ್ಸಕಿ ಹೇಗೆ ಬದಲಾದ? ಆತನ ತಂದೆ ರಷ್ಯಾದ ಬಿಳಿ ಸೇನೆಯ ಅಧಿಕಾರಿಯಾಗಿ ಕೆಂಪುಸೇನೆಯ ವಿರುದ್ಧ ಹೋರಾಡಿದ್ದರು. ಈ ಕಾರಣಕ್ಕಾಗಿಯೇ ತನಗೆ ಜನರಲ್ ಆಗಿ ಬಡ್ತಿ ಸಿಕ್ಕಿಲ್ಲ ಎಂಬ ಭಾವನೆ ಅವನಲ್ಲಿ ತುಂಬಿಕೊಂಡಿದ್ದಿರಬಹುದು. 1963ರಲ್ಲಿ ನಡೆದ ವಿಚಾರಣೆಯ ಕಾಲಕ್ಕೆ ಪ್ರಮುಖವಾಗಿ ಒತ್ತು ನೀಡಿದ್ದು ಆತನ ದುರ್ಬಲವಾದ ವ್ಯಕ್ತಿತ್ವದ ಬಗ್ಗೆ. ಆತನ ಸ್ವಮೋಹದ ಬಗ್ಗೆ ಮತ್ತು ಹೆಣ್ಣುಗಳ ವಿಷಯದಲ್ಲಿ ಆತ ತುಂಬ ಸಡಿಲವಾಗಿದ್ದುದರ ಬಗ್ಗೆ.
ಆತನ ವಿದ್ರೋಹದ ಬಗ್ಗೆ ಮನವರಿಕೆ ಮಾಡುವಂಥ ಉದ್ದೇಶವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಇರುವ ಕಾರಣ ಕೆಲವು ಬೇಹುಗಾರಿಕೆ ವಲಯಗಳಲ್ಲಿ ಪೆಂಕೋವ್ಸಕಿಯನ್ನು ಕೆಜಿಬಿಯೇ ಕಳುಹಿಸಿದ್ದು. ಪಶ್ಚಿಮದಲ್ಲಿಯ ಬೇಹುಗಾರಿಕೆ ಅರಿಯುವುದು ಅದರ ಉದ್ದೇಶವಾಗಿತ್ತು. ತನ್ನನ್ನು ಈ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ವತಃ ಪೆಂಕೋವ್ಸಕಿಗೇ ಗೊತ್ತಿರಲಿಲ್ಲ, ಅಥವಾ ಗೊತ್ತಿದ್ದರೂ ಗೊತ್ತಿರಬಹುದು. ಸೋವಿಯತ್ ಬಗ್ಗೆ ಉಳಿದ ಪಶ್ಚಿಮದವರಿಗೆ ಇರುವ ಭಾವನೆಗಳನ್ನು ಕೆಜಿಬಿಗೆ ಕಂಡುಕೊಳ್ಳಬೇಕಿತ್ತು ಎಂಬ ವಾದ ಸರಣಿಗಳಿವೆ. ಅದಕ್ಕೆ ಅವರು ಈ ಮುಂದಿನ ತರ್ಕವನ್ನು ಮಂಡಿಸುತ್ತಾರೆ.
ವಿನ್ನೆ ಮಾಸ್ಕೋಗೆ ಹಲವು ಬಾರಿ ಭೇಟಿ ನೀಡುತ್ತಿರುತ್ತಾನೆ. ಇದು ಸಂಶಯಕ್ಕೆ ಕಾರಣವಾಗಬಹುದು ಎಂದು ಎಸ್ಐಎಸ್ ಪೆಂಕೋವ್ಸಕಿಯನ್ನು ಸಂಪರ್ಕಿಸಲು ಇನ್ನೊಬ್ಬ ವ್ಯಕ್ತಿಯನ್ನು ವ್ಯವಸ್ಥೆ ಮಾಡುತ್ತದೆ. ಅದು ಮಾಸ್ಕೋದ ದೂತಾವಾಸದಲ್ಲಿ ರಾಜತಾಂತ್ರಿಕ ಪದವಿಯ ರಕ್ಷಣೆಯಲ್ಲಿದ್ದ ಬ್ರಿಟಿಷ್ ಎಸ್ಐಎಸ್ ಅಧಿಕಾರಿ ರೌರಿ ಚಿಸ್ಹೋಲ್ಮ್ ಅವರ ಪತ್ನಿ ಜೆನೆತ್ ಚಿಸ್ಹೋಲ್ಮ್. ಆದರೆ ರೌರಿ ಚಿಸ್ಹೋಲ್ಮ್ ಈ ಹಿಂದೆ ಬರ್ಲಿನ್ನಲ್ಲಿದ್ದ ಎಸ್ಐಎಸ್ ಕೇಂದ್ರದಲ್ಲಿ ಕೆಲಸ ಮಾಡಿದವನು. ಅಲ್ಲಿ ಆತನ ಸಹೋದ್ಯೋಗಿಯಾಗಿದ್ದವನು ಜಾರ್ಜ್ ಬ್ಲೇಕ್. ಈತ ಕೆಜಿಬಿ ಪರವಾಗಿ ಕೆಲಸ ಮಾಡಿ ಸಿಕ್ಕಿಬಿದ್ದು 42 ವರ್ಷ ಜೈಲು ಶಿಕ್ಷೆಗೆ ಗುರಿಯಾದವನು ಮತ್ತು ವೋರ್ಮ್ವುಡ್ ಜೈಲಿನಿಂದ ಪರಾರಿಯಾಗಿ ಮಾಸ್ಕೋಗೆ ಬಂದು ನೆಲೆಸಿದವನು. ಆತ ಚಿಸ್ಹೋಲ್ಮ್ ಬಗ್ಗೆ ಕೆಜಿಬಿಗೆ ಮಾಹಿತಿ ನೀಡಿದ್ದನು. ಇದರರ್ಥ ಚಿಸ್ಹೋಲ್ಮ್ ಹೊಸ ಹುದ್ದೆಯನ್ನು ಹೊಂದಿ ಮಾಸ್ಕೋಗೆ ಬಂದಾಗಲೇ ಆತ ಎಸ್ಐಎಸ್ ಅಧಿಕಾರಿ ಎಂಬುದು ಗೊತ್ತಿತ್ತು. ಈ ಕಾರಣಕ್ಕಾಗಿ ಆತ ಮತ್ತು ಆತನ ಪತ್ನಿ ಕೆಜಿಬಿಯ ಸಂಪೂರ್ಣ ಕಣ್ಗಾವಲಿನಲ್ಲಿ ಇದ್ದರು.
ಕೆಜಿಬಿಯ ಪ್ರತಿಬೇಹುಗಾರಿಕೆ ಪಡೆಯ ಅಧಿಕಾರಿಗಳು ಜೆನೆತ್ ಚಿಸ್ಹೋಲ್ಮ್ ತನ್ನ ಮನೆಯಿಂದ ತನ್ನ ಮೂವರು ಮಕ್ಕಳನ್ನು ವಿಹಾರಕ್ಕೆ ಕರೆದೊಯ್ಯುವಾಗಲೋ ಅಥವಾ ಯಾವುದಾದರೂ ಮಾಲ್ಗೆ ಅವಳು ಭೇಟಿ ನೀಡುವಾಗಲೋ ಹಿಂಬಾಲಿಸುತ್ತಿದ್ದರು. ಅಕ್ಟೋಬರ್ 1961ರಿಂದ ಜನವರಿ 1962ರ ಅವಧಿಯಲ್ಲಿ ಒಟ್ಟೂ 12 ಬಾರಿ ಒಬ್ಬ ರಷ್ಯಾದ ವ್ಯಕ್ತಿಯನ್ನು ಅವಳು ಭೇಟಿ ಮಾಡಿದ್ದನ್ನು ಅವರು ನೋಡಿದ್ದರು. ಅವರ ಭೇಟಿಯ ಕೆಲವು ಫೋಟೋಗಳನ್ನು ನಂತರ ಬಿಡುಗಡೆ ಮಾಡಲಾಗಿತ್ತು. ಇದನ್ನು ನೋಡಿಕೊಂಡು ಕೆಜಿಬಿ ಸುಮ್ಮನೆ ಏಕೆ ಕುಳಿತಿತ್ತು. ತಕ್ಷಣವೇ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬುದು ಪ್ರಶ್ನೆ. ಇದರಲ್ಲಿ ಒಳಸಂಚಿನ ವಾಸನೆ ಹೊಡೆಯುತ್ತದೆ. ಇಡೀ ಪ್ರಕರಣವನ್ನು ಕೆಜಿಬಿಯೇ ನಿರ್ವಹಿಸುತ್ತಿತ್ತು. ಪೆಂಕೋವ್ಸಕಿಗೆ ಸಿಗುವ ಹಾಗೆ ರಹಸ್ಯ ದಾಖಲೆಗಳನ್ನು ಅದು ಇರಿಸುತ್ತಿತ್ತು. ಇದಕ್ಕೆ ಎರಡು ಕಾರಣಗಳಿದ್ದವು. ಮೊದಲಿನದು, ರಷ್ಯಾದ ಕ್ಷಿಪಣಿ ಸಿದ್ಧತೆಯ ಬಗ್ಗೆ ಪಶ್ಚಿಮದ ದೇಶಗಳ ಪರಿಕಲ್ಪನೆಯಲ್ಲಿ ಬದಲಾವಣೆಯನ್ನು ತರುವುದು. ಇದರಿಂದ ಅವುಗಳಲ್ಲಿ ತಾವು ಸುರಕ್ಷಿತ ಎಂಬ ತಪ್ಪು ಭಾವನೆಯನ್ನು ಹುಟ್ಟುಹಾಕುವುದು. ಇನ್ನೊಂದು ಕ್ರೆಮ್ಲಿನ್ನಲ್ಲಿದ್ದ ಖ್ರುಶ್ಚೇವ್ ವಿರೋಧಿ ಬಣದವರು, ಖ್ರುಶ್ಚೇವ್ ಎಷ್ಟೇ ಭಯಹುಟ್ಟಿಸುವ ಮಾತುಗಳನ್ನು ಆಡಿದರೂ ಅದನ್ನು ಕಾರ್ಯರೂಪಕ್ಕೆ ತರುವಷ್ಟು ಅವರು ಸಮರ್ಥರಲ್ಲ ಎಂಬ ಸಂದೇಶವನ್ನು ಪಶ್ಚಿಮದ ರಾಷ್ಟ್ರಗಳಿಗೆ ಮುಟ್ಟಿಸುವುದಾಗಿತ್ತು.
ರಷ್ಯಾದ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಜಗತ್ತಿಗೆ ಅನುಮಾನ ಬರುವ ಯಾವುದೇ ಪ್ರಮೇಯ ಆ ಸಮಯದಲ್ಲಿ ಇರಲಿಲ್ಲ. ಏಕೆಂದರೆ ರಷ್ಯಾದ ಯುರಿ ಗಗಾರಿನ 1961ರ ಏಪ್ರಿಲ್12ರಂದು ಭೂಮಿಯ ವಾತಾವರಣದ ಆಚೆ ಸಾಗಿ ಪ್ರದಕ್ಷಿಣೆ ಹಾಕಿದ ಮೊದಲ ಮಾನವ ಎನಿಸಿಕೊಂಡಿದ್ದನು. ಅಮೆರಿಕವೇ ಆಗಲಿ ಬೇರಾವುದೇ ದೇಶ ಇನ್ನೂ ಪ್ರಯತ್ನ ನಡೆಸಿತ್ತು.
ಇನ್ನು, ಪೆಂಕೋವ್ಸಕಿಯ ಮೇಲೆ ಆರೋಪ ಹೊರಿಸಿದ್ದು ಕೆಜಿಬಿ. ಆದರೆ ಪೆಂಕೋವ್ಸಕಿಯು ಜಿಆರ್ಯುಗೆ ಸೇರಿದವನು. ಇವನ ವಿರುದ್ಧ ಆರೋಪ ಕೇಳಿಬಂದಾಗ ಆತನ ಉನ್ನತಿಗೆ ಕಾರಣನಾದ ಜಿಆರ್ಯುನ ಮಾರ್ಷಲ್ ವಾರೆಂತ್ಸೋವ್ ಬಲವಾದ ವಿರೋಧ ವ್ಯಕ್ತಪಡಿಸುತ್ತಾರೆ. ಸುಳ್ಳೇ ಆರೋಪ ಹೊರಿಸಲಾಗಿದೆ ಎಂದು ಅವರು ಹೇಳುತ್ತಾರೆ.
ಇನ್ನು, ಪೆಂಕೋವ್ಸಕಿಗೆ ಕ್ರುಶ್ಚೇವ್ ಅವರ, ಜಗತ್ತಿನಾದ್ಯಂತ ಕಮ್ಯುನಿಸಂನ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಬೇಕೆಂಬ ಮನೋಧರ್ಮ ಸೇರದೆ ಇದ್ದದ್ದು. ಇದರಿಂದ ಪರಮಾಣುವಿನ ಹುಚ್ಚು ಅವರ ತಲೆಯೊಳಗೆ ಸೇರಿಕೊಳ್ಳಬಹುದು ಎಂಬ ಆತಂಕ.
ಈ ಎಲ್ಲ ವಿರೋಧಾಭಾಸಗಳನ್ನು ಗಮನಿಸಿದಾಗ ಪೆಂಕೋವ್ಸಕಿಯನ್ನು ಗುಂಡಿಟ್ಟು ಸಾಯಿಸಿದ್ದಾಗಲಿ, ಬೆಂಕಿ ಹಚ್ಚಿ ಜೀವಂತ ದಹಿಸಿದ್ದಾಗಲಿ ಸುಳ್ಳಿರಬಹುದು. ಇದೊಂದು ಸೋವಿಯತ್ನ ಕಟ್ಟುಕತೆ ಇದ್ದಿರಬಹುದು. ಆತ ಈ ಬೇರಾವುದೋ ದೇಶದಲ್ಲಿ ಬೇರೊಂದು ಕಾರ್ಯಾಚರಣೆಯಲ್ಲಿ ತೊಡಗಿದ್ದಿರಬಹುದು, ಇಲ್ಲವೆ ಗುರುತು ಮರೆಮಾಚಿಕೊಂಡು ನಿವೃತ್ತಿಯ ಬದುಕನ್ನು ಬದುಕುತ್ತಿರಬಹುದು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.