ಓಲೆಗ್ ಆಂಟೋನಿಯೋವಿಚ್ ಗೋರ್ಡಿಯೆವ್ಸಕಿ ಸೋವಿಯತ್ ರಷ್ಯಾದ ಕೆಜಿಬಿಯ ಮಾಜಿ ಕರ್ನಲ್ ಮತ್ತು ಕೆಜಿಬಿಯ ಕೆಲಸ ಮಾಡಲು ಲಂಡನ್ನಿಗೆ ನೇಮಕಗೊಂಡಿದ್ದ ಅಧಿಕಾರಿ ಹಾಗೂ ಲಂಡನ್ ಕಚೇರಿಯ ಮುಖ್ಯಸ್ಥ. ಆತ ಬ್ರಿಟಿಷ್ ರಹಸ್ಯ ಬೇಹುಗಾರಿಕೆ ಸೇವೆಯ ಸೀಕ್ರೆಟ್ ಏಜೆಂಟ್ ಆಗಿ 1974ರಿಂದ 1985ರ ವರೆಗೆ ಕೆಲಸ ಮಾಡಿದ್ದನು.
ಒಬ್ಬ ಎನ್ಕೆವಿಡಿ (ರಷ್ಯಾದ ಒಳಾಡಳಿತ ಸಚಿವಾಲಯ) ಅಧಿಕಾರಿಯ ಮಗನಾಗಿ 1938ರ ಅಕ್ಟೋಬರ್ 10ರಂದು ಜನಿಸಿದ ಓಲೆಗ್ ಶಾಲೆಯಲ್ಲಿ ಅದ್ಭುತ ಪ್ರತಿಭಾವಂತ ವಿದ್ಯಾರ್ಥಿಯೆಂದು ಹೆಸರು ಮಾಡಿದ್ದನು. ಅಲ್ಲಿ ಆತ ಜರ್ಮನ್ ಭಾಷೆಯನ್ನು ಮಾತನಾಡುವುದಕ್ಕೆ ಕಲಿತನು. ಮಾಸ್ಕೋ ಯುನಿವರ್ಸಿಟಿಯಲ್ಲಿ ಅಭ್ಯಾಸ ಮಾಡಿ ನಂತರ ಎನ್ಕೆವಿಡಿ ತರಬೇತಿಯನ್ನು ಪಡೆದನು. ಅಲ್ಲಿ ಬೇಹುಗಾರಿಕೆಯ ಕಲೆಯನ್ನು ಶಾಸ್ತ್ರೀಯವಾಗಿ ಕಲಿತ ಅವನು ಜರ್ಮನ್ ಭಾಷೆಯಲ್ಲಿ ಪರಿಣತಿ ಸಾಧಿಸುವುದರ ಜೊತೆಗೆ ಡ್ಯಾನಿಶ್, ಸ್ವೀಡಿಶ್ ಮತ್ತು ನಾರ್ವೇಜಿಯನ್ ಭಾಷೆಗಳಲ್ಲಿ ಮಾತನಾಡುವುದನ್ನು ಕಲಿತನು. ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ವಿದೇಶಿ ಸೇವೆಗೆ ಭರ್ತಿಗೊಂಡನು. ಈತನ ಸಹೋದರ ಕೂಡ ಕೆಜಿಬಿಯ ಅಧಿಕಾರಿಯಾಗಿದ್ದನು. ತಂದೆಯು ಯನಿಫಾರ್ಮ್ ಬಗ್ಗೆ ತುಂಬ ಗರ್ವ ಹೊಂದಿದ್ದನು. ಆದರೆ ಅವನಲ್ಲಿ ನೈತಿಕತೆ ಕೊರತೆ ಇತ್ತು. ಇದು ಯುವಕ ಗೋರ್ಡಿಯೆವ್ಸಕಿಯಲ್ಲಿ ಹೃದಯದಲ್ಲಿ ಮಾನವೀಯತೆಗೆ ಕಡಿಮೆ ಜಾಗವನ್ನು ನೀಡಿತ್ತು. ಆ ಕಾಲದ ಎಲ್ಲ ಯುವಕರಂತೆ ಕೊಮ್ಸೋಮೋಲ್ ಅಂದರೆ ಯಂಗ್ ಕಮ್ಯುನಿಸ್ಟ್ ಲೀಗ್ಅನ್ನು ಈತನೂ ಸೇರಿಕೊಳ್ಳುತ್ತಾನೆ. ಸ್ಟಾಲಿನ್ರ ರಷ್ಯಾ ಇವನಿಗೆ ಮತ್ತು ಇವನ ಸಹೋದರನಿಗೆ ಸಹಜವಾದ ಬಾಲ್ಯವನ್ನು ಬದುಕಲು ಬಿಡಲಿಲ್ಲ ಎಂಬುದಂತೂ ನಿಜ. 1961ರ ಆಗಸ್ಟ್ನಲ್ಲಿ ಇವನನ್ನು ಪೂರ್ವ ಬರ್ಲಿನ್ಗೆ ಕಳುಹಿಸಲಾಯಿತು. ಆಗಷ್ಟೇ ಬರ್ಲಿನ್ ಗೋಡೆ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿತ್ತು. ಗೋಡೆಯನ್ನು ನಿರ್ಮಾಣ ಮಾಡುತ್ತಿರುವುದು ಓಲೆಗ್ಗೆ ತುಂಬ ನಿರಾಶೆಯನ್ನುಂಟುಮಾಡಿತು. ಸೋವಿಯತ್ ದಬ್ಬಾಳಿಕೆಯನ್ನು ತಪ್ಪಿಸಿಕೊಳ್ಳಲು ಜನರು ಗೋಡೆಯಾಚೆ ತೆರಳಲು ಧಾವಿಸುತ್ತಿದ್ದುದು ಮತ್ತು ಅವರತ್ತ ಅಧಿಕಾರಿಗಳು ಗುಂಡುಗಳನ್ನು ಹಾರಿಸುವುದನ್ನು ಕಂಡನು. ಇದರಿಂದ ಸೋವಿಯತ್ ವ್ಯವಸ್ಥೆಯ ಬಗ್ಗೆ ಆತ ಭ್ರಮನಿರಸನಗೊಂಡನು. ಬರ್ಲಿನ್ನಲ್ಲಿ ಒಂದು ವರ್ಷ ಕಳೆದ ಬಳಿಕ ಅವನು ಮಾಸ್ಕೋಗೆ ಹಿಂತಿರುಗಿದನು. ಬರ್ಲಿನ್ ವಾಸ ಆತನಿಗೆ ಒಂದು ಲಿಟ್ಮಸ್ ಟೆಸ್ಟ್ ಆಗಿತ್ತು. 1963ರಲ್ಲಿ ಇವನು ಕೆಜಿಬಿಗೆ ಸೇರ್ಪಡೆಯಾದನು. ಆತನಿಗೆ ಮಾಸ್ಕೋದ ಉತ್ತರ ಭಾಗದ ದಟ್ಟ ಅಡವಿಯಲ್ಲಿದ್ದ ಸ್ಕೂಲ್ 101ರಲ್ಲಿ ಇತರ 120 ಜನರೊಂದಿಗೆ ತರಬೇತಿಯನ್ನು ನೀಡಲಾಗುತ್ತದೆ. ಕೋಪೆನ್ಹಗೆನ್ನ ಸೋವಿಯತ್ ರಾಯಭಾರ ಕಚೇರಿಯ ಹುದ್ದೆಯನ್ನು ಅವನಿಗೆ ನೀಡಲಾಗುತ್ತದೆ.
ಬ್ರಿಟಿಷ್ ಸೀಕ್ರೆಟ್ ಏಜೆಂಟ್-
ಡೆನ್ಮಾರ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಓಲೆಗ್ ಆಂಟೋನಿಯೋವಿಚ್ ಗೋರ್ಡಿಯೆವ್ಸಕಿಗೆ ಕೆಜಿಬಿಯಲ್ಲಿ ಮನಸಿಟ್ಟು ಕೆಲಸ ಮಾಡುವುದು ಸಾಧ್ಯವಾಗಲಿಲ್ಲ. ಅದರಲ್ಲೂ 1968ರಲ್ಲಿ ಝೆಕೋಸ್ಲೋವಕಿಯಾವನ್ನು ಸೋವಿಯತ್ ಆಕ್ರಮಿಸಿಕೊಂಡ ಬಳಿಕವಂತೂ ಆತ ಬಹಳಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸಿದನು. ಇದನ್ನು ಡ್ಯಾನಿಶ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ (ಡಿಎಸ್ಐಸ್) ಸೂಕ್ಷ್ಮವಾಗಿ ಗಮನಿಸಿತು. ಆತನನ್ನು ತಾವು ನೇಮಕಮಾಡಿಕೊಳ್ಳಬಹುದು ಎಂದು ತಿಳಿದು ಆ ದಿಶೆಯಲ್ಲಿ ತೀವ್ರ ಪ್ರಯತ್ನಗಳನ್ನು ಆರಂಭಿಸಿತು. ಇದು ಯಶಸ್ವಿಯಾಗಬಹುದು ಎಂದು ಡಿಎಸ್ಐಎಸ್ಗೆ ಅನಿಸಿದಾಗ ಅದು ಎಂಐ6ಅನ್ನು ಸಂಪರ್ಕಿಸಿತು. ಸಂಘಟನೆಯ ದೃಷ್ಟಿಯಿಂದ ತಮ್ಮದು ಚಿಕ್ಕ ಸಂಸ್ಥೆ ಎಂಬ ಅರಿವಿದ್ದ ಡಿಎಸ್ಐಎಸ್ ತನ್ನ ಕಾರ್ಯಾಚರಣೆ ಯಶಸ್ವಿಯಾಗಬೇಕಿದ್ದರೆ ದೊಡ್ಡದೊಂದು ಸಂಸ್ಥೆ ಇದರಲ್ಲಿ ಪಾಲುದಾರ ಆಗಿದ್ದರೆ ಒಳಿತು ಎಂದು ಭಾವಿಸಿತು. ಎಂಐ6 ಇದು ಡಿಎಸ್ಐಎಸ್ ಮೂಲಕ ಗೋರ್ಡಿಯೆವ್ಸಕಿಯ ಜೊತೆ ಸಂಪರ್ಕವನ್ನು ಸಾಧಿಸಿತು.
ಅತ್ಯುನ್ನತ ಸ್ಥಾನದಲ್ಲಿದ್ದ ಮೌಲ್ಯಯುತ ಬೇಹುಗಾರಿಕೆ ವ್ಯಕ್ತಿಯೊಬ್ಬನನ್ನು ನೇಮಕಮಾಡಿಕೊಂಡಿದ್ದ ಎಂಐ6ನ ಮೌಲ್ಯವು 1982ರಲ್ಲಿ ನಾಟಕೀಯವಾಗಿ ವೃದ್ಧಿಯಾಗಿಬಿಟ್ಟಿತು. ಏಕೆಂದರೆ ಆ ವರ್ಷ ಗೋರ್ಡಿಯೆವ್ಸಕಿಯನ್ನು ಲಂಡನ್ನಿನ ಸೋವಿಯತ್ ರಾಯಭಾರ ಕಚೇರಿಗೆ ಕೆಜಿಬಿ ರೆಸಿಡೆಂಟ್-ಡೆಸಿಗ್ನೇಟ್ ಎಂದು ನೇಮಕ ಮಾಡಿತು. ಆತ ಇಂಗ್ಲೆಂಡಿನಲ್ಲಿ ಸೋವಿಯತ್ಗಾಗಿ ಬೇಹುಗಾರಿಕೆ ಮಾಹಿತಿಯನ್ನು ಕಲೆಹಾಕುವುದು ಮತ್ತು ಗೂಢಚರ್ಯವನ್ನು ನಡೆಸುವುದರ ಜವಾಬ್ದಾರನಾಗಿದ್ದನು.
ಗೋರ್ಡಿಯೆವ್ಸಕಿಯು ಎರಡು ಅತ್ಯಂತ ಪ್ರಮುಖವಾದ ಕೊಡುಗೆಗಳನ್ನು ನೀಡಿದನು. ಅವುಗಳಲ್ಲಿ ಒಂದು ಸೋವಿಯತ್ ಮತ್ತು ನ್ಯಾಟೋಗಳ ನಡುವೆ ಪರಮಾಣು ಯುದ್ಧ ನಡೆಯುವ ಸಾಧ್ಯತೆಯನ್ನು ತಪ್ಪಿಸಿದ್ದು. ನ್ಯಾಟೋ ಏಬಲ್ ಆರ್ಚರ್ 83ಸಮರಾಭ್ಯಾಸ ನಡೆಸುತ್ತಿದ್ದಾಗ ಸೋವಿಯತ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿತು ಮತ್ತು ಸೋವಿಯತ್ ಮೇಲೆ ನ್ಯಾಟೋ ಮೊದಲ ದಾಳಿ ನಡೆಸುತ್ತದೆ ಎಂದು ಭಾವಿಸಿದೆ ಎಂದು ಆತ ತಿಳಿಯಪಡಿಸಿದ್ದು. ಇದು ನ್ಯಾಟೋಗೆ ರಷ್ಯಾದ ಅನುಮಾನವನ್ನು ಬಗೆಹರಿಸಲು ಸಹಕಾರಿಯಾಯಿತು. ಮತ್ತು ನಿಶ್ಚಿತವಾಗಿದ್ದ ಪರಮಾಣು ಯುದ್ಧವನ್ನು ತಪ್ಪಿಸಲು ಅನುಕೂಲವಾಯಿತು. ಇನ್ನೊಂದು, ಮಿಖಾಯಿಲ್ ಗೊರ್ಬಚೇವ್ ಪ್ರಸಿದ್ಧಿಗೆ ಬರುವುದಕ್ಕೆ ಬಹಳ ಮೊದಲೇ, ಅವರು ರಷ್ಯಾವನ್ನು ಆಳುವ ಕನಸು ಕಾಣುತ್ತಿದ್ದಾರೆ ಎಂದು ಗುರುತಿಸಿದ್ದು. ಗೋರ್ಡಿಯೆವ್ಸಕಿಯು ಕಳುಹಿಸಿದ್ದ ಮಾಹಿತಿಯು ಸೋವಿಯತ್ ನಾಯಕತ್ವವು ಹೇಗೆ ನ್ಯಾಟೋ ಮೊದಲು ಪರಮಾಣು ಬಾಂಬ್ ದಾಳಿಯನ್ನು ನಡೆಸಬಹುದು ಎಂಬ ವಿಷಯವಾಗಿ ಎಷ್ಟು ಚಿಂತಿತವಾಗಿತ್ತು ಎಂಬುದನ್ನು ತೋರಿಸುತ್ತದೆ.
ಸೋವಿಯತ್ ರಷ್ಯಾದಿಂದ ಪಾರಾಗಿದ್ದು-
ಗೋರ್ಡಿಯೆವ್ಸಕಿಯು ಕಳುಹಿಸಿದ ಮಾಹಿತಿಯನ್ನು ಎಂಐ6 ಅಮೆರಿಕದ ಸಿಐಎಗೆ ಒದಗಿಸಿದ್ದರೂ ಅದು ತನ್ನ ಮಾಹಿತಿಯ ಮೂಲವನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಈ ಮಾಹಿತಿಯ ಮೂಲವನ್ನು ಕಂಡುಕೊಳ್ಳಲು ಸಿಐಎ ಒಂದು ರಹಸ್ಯ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಸುಮಾರು ಒಂದು ವರ್ಷದ ಬಳಿಕ ಈ ಮಾಹಿತಯನ್ನು ನೀಡಿದ್ದು ಗೋರ್ಡಿಯೆವ್ಸಕಿಯೇ ಇರಬಹುದು ಎಂಬ ಮನವರಿಕೆ ಅದಕ್ಕೆ ಆಯಿತು. ಆದರೆ ಅಮೆರಿಕದ ಸಿಐಎದಲ್ಲಿ ಉನ್ನತ ಹುದ್ದೆಯಲ್ಲಿದ್ದ ಆಲ್ಡ್ರಿಚ್ ಅಮಿಸ್ ಎಂಬಾತ ಕೆಜಿಬಿಗೆ ರಹಸ್ಯವಾಗಿ ಮಾಹಿತಿಗಳನ್ನು ಮಾರಾಟ ಮಾಡುತ್ತಿದ್ದನು. ಆತ ಕೆಜಿಬಿಗೆ ಗೋರ್ಡಿಯೆವ್ಸಕಿಯ ಹೆಸರನ್ನು ನೀಡುತ್ತಾನೆ. ಆಗ ಗೋರ್ಡಿಯೆವ್ಸಕಿಗೆ ತಕ್ಷಣವೇ ಮಾಸ್ಕೋಗೆ ಮರಳುವಂತೆ ಆದೇಶ ನೀಡಲಾಗುತ್ತದೆ. ಮಾಸ್ಕೋಗೆ ಹೋಗುವುದು ಬೇಡ, ಲಂಡನ್ನಿನಲ್ಲಿಯೇ ಇರುವಂತೆ ಎಂಐ6 ಸಲಹೆಗಳನ್ನು ನೀಡಿದ್ದರೂ ಆತ ಅದನ್ನು ನಿರ್ಲಕ್ಷಿಸಿ 1985ರ ಮೇ 22ರಂದು ಮಾಸ್ಕೋಗೆ ತೆರಳುತ್ತಾನೆ. ಅಲ್ಲಿ ಬಂದಿಳಿಯುತ್ತಿದ್ದಂತೆಯೇ ಕೆಜಿಬಿ ಅವನನ್ನು ಮಾಸ್ಕೋದ ಹೊರವಲಯದ ಒಂದು ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತದೆ. ಆತನಿಗೆ ಔಷಧ ನೀಡಿ ವಿಚಾರಣೆಗೆ ಒಳಪಡಿಸಲಾಗುತ್ತದೆ.
ಸುಮಾರು ಐದು ತಾಸುಗಳ ಕಾಲ ಗೋರ್ಡಿಯೆವ್ಸಕಿಯನ್ನು ವಿಚಾರಣೆಗೆ ಗುರಿಪಡಿಸಲಾಗುತ್ತದೆ. ಅದಾದಬಳಿಕ ಆತನನ್ನು ಬಿಡುಗಡೆ ಮಾಡಲಾಗುತ್ತದೆ. ಮುಂದೆಂದೂ ರಷ್ಯಾದ ಹೊರಗೆ ಆತ ಕೆಲಸ ಮಾಡುವಂತಿಲ್ಲ ಎಂದು ತಿಳಿಸುತ್ತದೆ. ವಿದೇಶಿ ಶಕ್ತಿಗಳ ಪರವಾಗಿ ಆತ ಗೂಢಚರ್ಯ ನಡೆಸುತ್ತಿದ್ದಾನೆ ಎಂಬ ಅನುಮಾನ ಅವರಿಗೆ ಬರುತ್ತದೆ. ಆದರೆ ಆತನ ಉನ್ನತಾಧಿಕಾರಿಗಳು ವಿಚಾರಣೆ ಮುಂದುವರಿಸುವುದನ್ನು ತಡೆಯುತ್ತಾರೆ. 1985ರ ಜೂನ್ ತಿಂಗಳಿನಲ್ಲಿ ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಮಾಸ್ಕೋದಲ್ಲಿ ಅವನನ್ನು ಸೇರಿಕೊಳ್ಳುತ್ತಾರೆ.
ಹೆಚ್ಚೂಕಡಿಮೆ ಸಂಪೂರ್ಣವಾಗಿ ಕೆಜಿಬಿಯ ಕಣ್ಗಾವಲಿನಲ್ಲಿಯೇ ಇದ್ದರೂ ಗೋರ್ಡಿಯೆವ್ಸಕಿಯು ಎಂಐ6ಗೆ ಒಂದು ಸಂದೇಶವನ್ನು ಕಳುಹಿಸುವುದರಲ್ಲಿ ಯಶಸ್ವಿಯಾಗುತ್ತಾನೆ. ಆ ಸಂದೇಶದಲ್ಲಿ, ತಾನು ಮಾಸ್ಕೋದಿಂದ ಹೇಗೆ ತಪ್ಪಿಸಿಕೊಂಡು ಹೋಗುವುದು ಎಂಬ ಕುರಿತು ವಿಸ್ತೃತವಾದ ಯೋಜನೆ ಇದ್ದಿತ್ತು. ಆ ನಿರ್ದಿಷ್ಟ ಪಡಿಸಿದ ದಿನದಂದು ಗೋರ್ಡಿಯೆವ್ಸಕಿಯು ಸಂಜೆ 7-30ರ ಸುಮಾರಿಗೆ ಸೇಫ್ ವೇ ಬ್ಯಾಗೊಂದನ್ನು ತಗುಲಿಹಾಕಿಕೊಂಡು ರಸ್ತೆಯ ತಿರುವೊಂದರಲ್ಲಿ ನಿಂತಿದ್ದನು. ಅದೇ ಸಮಯಕ್ಕೆ ಎಂಐ6 ಏಜೆಂಟನೊಬ್ಬ ಹ್ಯಾರೋಡ್ಸ್ ಬ್ಯಾಗೊಂದನ್ನು ತಗುಲಿಹಾಕಿಕೊಂಡು ಮಾರ್ಸ್ ಬಾರ್ ತಿನ್ನುತ್ತ ವೇಗವಾಗಿ ಆತನನ್ನು ದಾಟಿಕೊಂಡು ಹೋದನು ಇಬ್ಬರ ಕಣ್ಣುಗಳೂ ಒಂದು ಕ್ಷಣ ಸಂಧಿಸಿದವು. ಏನೋ ಸಂದೇಶ ರವಾನೆಯಾಯಿತು. ಪರಾರಿಯಾಗುವ ಯೋಜನೆ ಸಿದ್ಧವಾಗಿದೆ ಎಂದು ಗೋರ್ಡಿಯೆವ್ಸಕಿಯು ಅರಿತನು.
1985ರ ಜುಲೈ 19ರಂದು ಗೋರ್ಡಿಯೆವ್ಸಕಿಯು ತನ್ನ ಮಾಮೂಲು ಜಾಗ್ ಮಾಡುತ್ತ ಸಾಗಿದ್ದನು. ತನ್ನ ಕಾವಲು ಕೆಜಿಬಿಯವರ ಕಣ್ಣು ತಪ್ಪಿಸುವ ಬದಲು ವೈಬೋರ್ಗ್ಗೆ ತೆರಳುವ ರೈಲನ್ನು ಏರಿದನು. ಆ ಊರು ಫಿನ್ಲೆಂಡಿನ ಗಡಿಯಲ್ಲಿತ್ತು. ಅಲ್ಲಿ ಆತ ಬ್ರಿಟಿಷ್ ರಾಯಭಾರ ಕಚೇರಿಯ ಕಾರುಗಳನ್ನು ಸಂಧಿಸಿದನು. ಅಲ್ಲಿ ಅವರು ಕೆಜಿಬಿಯ ಮೂರು ಬೇಹುಗಾರಿಕೆ ಕಾರುಗಳ ಕಣ್ಣು ತಪ್ಪಿಸಿಕೊಂಡು ಫೋರ್ಡ್ ಸಿಯೆರಾ ಸಲೂನ್ ಕಾರಿನ ಡಿಕ್ಕಿಯಲ್ಲಿ ಗೋರ್ಡಿಯೆವ್ಸಕಿಯನ್ನು ಹಾಕಿಕೊಂಡು ಗಡಿ ದಾಟಿ ಫಿನ್ಲೆಂಡಿನಲ್ಲಿ ಪ್ರವೇಶಿಸಿದರು. ಅಲ್ಲಿಂದ ಗೋರ್ಡಿಯೆವ್ಸಕಿಯು ನಾರ್ವೆಯ ಮೂಲಕ ಇಗ್ಲೆಂಡಿಗೆ ತೆರಳಿದನು. ಸೋವಿಯತ್ ಅಧಿಕಾರಿಗಳು ಗೋರ್ಡಿಯೆವ್ಸಕಿಯ ಅನುಪಸ್ಥಿತಿಯಲ್ಲಿಯೇ ವಿಚಾರಣೆಯನ್ನು ನಡೆಸಿ ಆತನಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿದರು. ಸೋವಿಯತ ಒಕ್ಕೂಟದ ಪತನದ ನಂತರ ಈ ಶಿಕ್ಷೆಯನ್ನು ಜಾರಿಗೊಳಿಸುವುದು ಸಾಧ್ಯವಾಗಲಿಲ್ಲ. ಇದಕ್ಕೆ ಮತ್ತೊಂದು ಕಾರಣ ರಷ್ಯಾವು ಯುರೋಪ್ ಮಂಡಳಿಯ ಸದಸ್ಯ ಆಗಿದ್ದುದು.
ಗೋರ್ಡಿಯೆವ್ಸಕಿಯು 1960ರ ಸುಮಾರಿಗೆ ಜರ್ಮನಿಯಲ್ಲಿದ್ದಾಗ ಶಿಕ್ಷಕ ವೃತ್ತಿಯ ತರಬೇತಿಯನ್ನು ಪಡೆದಿದ್ದ ಯೆಲೆನಾ ಅಕೋಪಿಯನ್ ಎಂಬ 22 ವರ್ಷಗಳ ಯುವತಿಯ ಪ್ರೇಮಪಾಶದಲ್ಲಿ ಸಿಲುಕಿದನು. ಇಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಗೋರ್ಡಿಯೆವ್ಸಕಿಗೆ ಮಾಸ್ಕೋದಲ್ಲಿ ಒಂದು ಡೆಸ್ಕ್ ಜಾಬ್ ಸಿಕ್ಕಿತು. ಯೆಲೆನಾ ಬದುಕು ತುಂಬ ಕಷ್ಟದಲ್ಲಿತ್ತು. ಚಿಕ್ಕದಾದ ಮನೆ, ತಂದೆ ತಾಯಿ, ಜೊತೆ ಹುಟ್ಟಿದ ಐವರು. ಈ ಕಷ್ಟದಿಂದ ಪಾರಾಗಬೇಕು ಎಂದು ಅವಳು ಬಯಸುತ್ತಿದ್ದಳು. ಗೋರ್ಡಿಯೆವ್ಸಕಿಯ ಪ್ರಥಮ ವಿದೇಶ ನೇಮಕ ಡೆನ್ಮಾರ್ಕಿಗೆ ಹೋಗುವ ಮೊದಲು ಇವರಿಬ್ಬರೂ ಮದುವೆಯಾಗಿದ್ದರು.
ಗೂಢಚಾರನಾದ ಗೋರ್ಡಿಯೆವ್ಸಕಿ ಕೆಜಿಬಿಯಲ್ಲಿ ಮೇಜರ್ ಆಗಿದ್ದ ಒಬ್ಬರ ಮಗಳು ಲೈಲಾ ಜೊತೆ ರಹಸ್ಯ ಪ್ರೇಮದಾಟ ನಡೆಸಿದ್ದನು. ತನ್ನ ಗೂಢಚರ್ಯದ ಕೈಚಳಕವನ್ನು ಆತ ಪ್ರೇಮದಾಟದಲ್ಲಿಯೂ ತೋರಿಸಿದ್ದನು. ಅವರ ಮದುವೆಯೂ ಆಯಿತು. ಆತನ ಈ ಎರಡನೆ ಪತ್ನಿ ಲೈಲಾ ಅಜರ್ಬೈಜಾನಿನವಳು ಆಗಿದ್ದಳು. ಅವಳೂ ಕೆಜಿಬಿ ಅಧಿಕಾರಿಯಾಗಿದ್ದಳು ಮತ್ತು ಮಾಸ್ಕೋಗೆ ನಿಷ್ಠಳಾಗಿದ್ದಳು. ತನ್ನ ಗಂಡನ ಬೇಹುಗಾರಿಕೆಯ ಕುರಿತು ಅವಳಿಗೆ ಏನೂ ಗೊತ್ತಿರಲಿಲ್ಲ. ಆತ ಇಂಗ್ಲೆಂಡಿಗೆ ಪರಾರಿಯಾದ ವೇಳೆ ಅವಳು ತಮ್ಮ ಮಕ್ಕಳೊಂದಿಗೆ ಅಜರ್ಬೈಜಾನಿನಲ್ಲಿ ರಜೆಯನ್ನು ಕಳೆಯುವುದಕ್ಕೆ ಹೋಗಿದ್ದಳು. ಸೋವಿಯತ್ ಅಧಿಕಾರಿಗಳು ಅವಳ ವಿಚಾರಣೆ ನಡೆಸಿ ಅವಳನ್ನು ಸುಮಾರು 6 ವರ್ಷಗಳ ಕಾಲ ಬಂಧನದಲ್ಲಿಟ್ಟರು. ಗೋರ್ಡಿಯೆವ್ಸಕಿಯ ಕೆಲಸಗಳಿಗೆ ಇವಳ ಸಹಕಾರ ಇದೆ ಎಂದು ಅವರು ತಪ್ಪಾಗಿ ನಿರ್ಣಯಿಸಿದ್ದರು. ಆರು ವರ್ಷಗಳ ನಂತರ ಅವಳು ತನ್ನ ಗಂಡನನ್ನು ಇಂಗ್ಲೆಂಡಿನಲ್ಲಿ ಸೇರಿಕೊಂಡಳು. ಇದಕ್ಕೆ ಬ್ರಿಟಿಷ್ ಸರ್ಕಾರದ ನಿರಂತರ ಲಾಬಿ ಮತ್ತು ಆಗ ಪ್ರಧಾನಿಯಾಗಿದ್ದ ಮಾರ್ಗರೆಟ್ ಥ್ಯಾಚರ್ ಅವರು ಗೊರ್ಬಚೇವ್ ಅವರನ್ನು ಭೇಟಿಯಾದಾಗ ಮಾಡಿಕೊಂಡ ವೈಯಕ್ತಿಕ ಮನವಿಯು ಕಾರಣವಾಯಿತು. ಆದರೆ ಅಷ್ಟೊತ್ತಿಗಾಗಲೆ ದಾಂಪತ್ಯವೆಂಬುದು ಅವರಿಬ್ಬರ ಪಾಲಿಗೆ ಅರ್ಥವಿಲ್ಲದ ಸಂಗತಿಯಾಗಿತ್ತು. ಮದುವೆ ಮುರಿದು ಬಿತ್ತು. ಲಂಡನ್ನಿಗೆ ಬಂದಮೇಲೆ ಇಬ್ಬರೂ ವಿವಾಹ ವಿಚ್ಛೇದನ ಮಾಡಿಕೊಂಡರು. 1990ರಿಂದೀಚೆ ಗೋರ್ಡಿಯೆವ್ಸಕಿಯು ಬ್ರಿಟಿಷ್ ಮಹಿಳೆಯೊಬ್ಬಳ ಸಂಗಡ ವಾಸಿಸುತ್ತಿದ್ದಾನೆ ಎಂದು 2013ರ ವರದಿಯೊಂದು ಹೇಳಿತ್ತು.
ಇಂಗ್ಲೆಂಡಿನಲ್ಲಿಯ ಬದುಕು–
ಗೋರ್ಡಿಯೆವ್ಸಕಿಯು ಕೆಜಿಬಿ ಕುರಿತು ಹಲವು ಕೃತಿಗಳನ್ನು ರಚಿಸಿದನು. ಈ ವಿಷಯದಲ್ಲಿ ಮಾಧ್ಯಮಗಳಲ್ಲಿ ವಿಶ್ಲೇಷಣೆ ನೀಡುವ ಪಂಡಿತ ಆತನಾಗಿದ್ದನು. ಎಂಐ5ನ ಡೈರೆಕ್ಟರ್ ಜನರಲ್ ಆಗಿದ್ದ ರೋಜರ್ ಹೊಲ್ಲಿಸ್ ಒಬ್ಬ ಸೋವಿಯತ್ ಏಜೆಂಟ್ ಎಂದು ಗೋರ್ಡಿಯೆವ್ಸಕಿಯು ಹೇಳಿದನು. ಇದು ಕೆಜಿಬಿಗೆ ಆಶ್ಚರ್ಯವನ್ನುಂಟುಮಾಡಿತು ಅಲ್ಲದೆ ಅದು ನಿರಾಕರಣೆಯ ಹೇಳಿಕೆಯನ್ನೂ ಬಿಡುಗಡೆ ಮಾಡಿತು. 2009ರಲ್ಲಿ ಐಟೀವಿ ಕಾರ್ಯಕ್ರಮ, ಇನ್ಸೈಡ್ ಎಂಐ5: ದಿ ರಿಯಲ್ ಸ್ಪೂಕ್ಸ್ (ಎಐ5ರೊಳಗಿನ ನಿಜವಾದ ಭೂತ)ದಲ್ಲಿ ಗೋರ್ಡಿಯೆವ್ಸಕಿಯು, ರೋಜರ್ ಹೊಲ್ಲಿಸ್ ಒಬ್ಬ ಕೆಜಿಬಿ ಏಜೆಂಟ್ ಎಂಬ ಆರೋಪದ ಕುರಿತು ಕೆಜಿಬಿಯ ಬ್ರಿಟಿಷ್ ವಿಭಾಗದ ಮುಖ್ಯಸ್ಥನು ಹೇಗೆ ಆಶ್ಚರ್ಯವನ್ನು ವ್ಯಕ್ತಪಡಿಸಿದ ಎಂಬುದನ್ನು ತಾನು ಬ್ರಿಟಿಷ್ ಪತ್ರಿಕೆಯೊಂದರಲ್ಲಿ ನೋಡಿದ್ದನ್ನು ವಿವರಿಸುತ್ತಾನೆ. `ಅವರೇಕೆ ರೋಜರ್ ಹೊಲ್ಲಿಸ್ ವಿಷಯ ಮಾತನಾಡುತ್ತಾರೆ, ಅದೊಂದು ತಿಳಿಗೇಡಿತನದ್ದು, ಏನೆಂಬುದೇ ತಿಳಿಯದು, ನಮ್ಮ ವಿರುದ್ಧ ಬ್ರಿಟಿಷರು ಮಾಡುತ್ತಿರುವ ಹೊಸ ತಂತ್ರ ಇದು’ ಎಂಬುದು ಕೆಜಿಬಿ ಪ್ರತಿಕ್ರಿಯೆಯಾಗಿತ್ತು. ಹೊಲ್ಲಿಸ್ ಮೇಲಿನ ಆರೋಪ ಇತಿಹಾಸದಲ್ಲಿ ಇಂದಿಗೂ ಚರ್ಚೆಯ ವಿಷಯವೇ ಆಗಿದೆ. ಆದರೆ ಎಂಐ5 ಅಧಿಕಾರಿಗಳು ತಮ್ಮ ಜಾಲತಾಣದಲ್ಲಿ ಗೋರ್ಡಿಯೆವ್ಸಕಿಯ ಆರೋಪ ಹೊಲ್ಲಿಸ್ ಮೇಲಿನ ದ್ವೇಷದಿಂದ ಮಾಡಿರುವುದು ಎಂದು ಹೇಳಿತು.
1990ರಲ್ಲಿ ಆತ ಇಂಟೆಲಿಜೆನ್ಸ್ ಆ್ಯಂಡ್ ನ್ಯಾಶನಲ್ ಸೆಕ್ಯುರಿಟಿ ಎಂಬ ಪತ್ರಿಕೆಯ ಸಂಪಾದಕನಾಗಿದ್ದನು. 1990ರ ದಶಕದಲ್ಲಿ ಆತ ಇಂಗ್ಲೆಂಡಿನ ಟೀವಿಗಳಲ್ಲಿ ಕೆಲಸ ಮಾಡಿದನು. ಅದರಲ್ಲಿ ಒಂದು ವಾಂಟೆಂಡ್ ಎಂಬ ಗೇಮ್ ಷೋ ಆಗಿತ್ತು. ಗೋರ್ಡಿಯೆವ್ಸಕಿಯ ಕೃತಿಯನ್ನು ಆಧರಿಸಿ ಸಂಡೇ ಟೈಮ್ಸ್ ಪತ್ರಿಕೆಯು 1995ರಲ್ಲಿ ಬ್ರಿಟಿಷ್ ಲೇಬರ್ ಪಾರ್ಟಿಯ ನಾಯಕ ಮೈಖೆಲ್ ಫೂಟ್ ಕೆಜಿಬಿಯ ಪ್ರಭಾವಿ ಏಜೆಂಟ್ ಮತ್ತು ಆತನ ಸಂಕೇತನಾಮವು ಬೂಟ್ ಎಂದಿದೆ ಎಂದು ವಿಶೇಷ ವರದಿಯೊಂದನ್ನು ಪ್ರಕಟಿಸಿತು. ಫೂಟ್ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಕೊನೆಗೆ ನ್ಯಾಯಾಲಯದ ಆಚೆಗೆ ಪತ್ರಿಕೆಯು ಪರಿಹಾರ ನೀಡಿ ಸಂಧಾನ ಮಾಡಿಕೊಂಡಿತು. ಆದರೆ ಫೂಟ್ ನಿಧನದ ಬಳಿಕ ಗೋರ್ಡಿಯೆವ್ಸಕಿಯು ತನಗೆ ನೀಡಿದ ದಾಖಲೆಗಳು ಆರೋಪವನ್ನು ಪುಷ್ಟೀಕರಿಸುತ್ತವೆ ಎಂದು 2010ರಲ್ಲಿ ಡೈಲಿ ಟೆಲಿಗ್ರಾಫ್ನಲ್ಲಿ ಚಾರ್ಲ್ಸ್ ಮೂರ್ ಎಂಬಾತ ವಿವರವಾದ ವರದಿಯನ್ನು ಪ್ರಕಟಿಸುತ್ತಾನೆ. 2005ರ ಫೆಬ್ರವರಿ 26ರಂದು ಬಕಿಂಗ್ಹ್ಯಾಮ್ ಯುನಿವರ್ಸಿಟಿಯು ಗೋರ್ಡಿಯೆವ್ಸಕಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡುತ್ತದೆ. ಇಂಗ್ಲೆಂಡಿನ ಸುರಕ್ಷತೆ ಮತ್ತು ಭದ್ರತೆಗಾಗಿ ಆತ ನೀಡಿದ ಕೊಡುಗೆಗೆ ಈ ಪದವಿ ಎಂದು ಅದು ಹೇಳಿತು.
ಗೋರ್ಡಿಯೆವ್ಸಕಿಯು ಲಂಡನ್ನಿನಲ್ಲಿ ಸುರಕ್ಷಿತ ಮನೆಯಲ್ಲಿ ವಾಸಿಸುತ್ತಿದ್ದಾನೆ. ಸಾಲಿಸ್ಬರಿ ವಿಷವುಣಿಸಿದ ಪ್ರಕಣದ ಬಳಿಕ ಈತನಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಗೋರ್ಡಿಯೆವ್ಸಕಿ ಬಗ್ಗೆ ಪುಟಿನ್ ಹೆಚ್ಚು ಅಸಮಾಧಾನಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಗೋರ್ಡಿಯೆವ್ಸಕಿಯು ಫಿನ್ಲೆಂಡಿಗೆ ಪಲಾಯನ ಮಾಡುವಾಗ ಅದನ್ನು ತಡೆಯಲು ವಿಫಲವಾದ ಕೆಜಿಬಿ ಗುಂಪಿನ ಭಾಗವಾಗಿದ್ದರು ಪುಟಿನ್. ಆದರೆ ಗೋರ್ಡಿಯೆವ್ಸಕಿಯನ್ನು ಹತ್ಯೆ ಮಾಡುವಂಥ ಯಾವುದೇ ಪ್ರಯತ್ನಕ್ಕೆ ಪುಟಿನ್ ಒಪ್ಪಿಗೆ ಕೊಡುವ ಸಾಧ್ಯತೆ ಇಲ್ಲ ಎಂದು ಬೆನ್ ಮೆಸಿನ್ಟೈರ್ ಅಭಿಪ್ರಾಯಪಡುತ್ತಾರೆ.
ವಿಷಪ್ರಯೋಗದ ಅನುಮಾನ–
2008ರ ಏಪ್ರಿಲ್ನಲ್ಲಿ ಪತ್ರಿಕೆಗಳಲ್ಲಿ ಒಂದು ವರದಿ ಪ್ರಕಟವಾಯಿತು. 2007ರ ನವೆಂಬರ್ 2ರಂದು ಗೋರ್ಡಿಯೆವ್ಸಕಿಯನ್ನು ಒಂದು ಅಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಆತ 34 ಗಂಟೆಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂಬುದು ಅದರ ಸಾರ. ಮಾಸ್ಕೋದಲ್ಲಿಯ ದುಷ್ಟ ಶಕ್ತಿಗಳು ತನಗೆ ಥಾಲಿಯಂ ವಿಷಹಾಕಿದ್ದರು ಎಂದು ಗೋರ್ಡಿಯೆವ್ಸಕಿಯು ಹೇಳಿಕೊಂಡನು. ತನ್ನ ಆರೋಪಗಳ ಕುರಿತು ತನಿಖೆ ಮಾಡಲು ನೇಮಿಸಿದ್ದ ವಿಶೇಷ ತನಿಖೆಯನ್ನು ರದ್ದು ಮಾಡಲು ಎಐ6 ಬಲವಂತ ಮಾಡಿದೆ ಎಂದು ಆತ ದೂರಿದನು. ಈ ತನಿಖೆಯು ಪುನರಾರಂಭವಾಗುವುದಕ್ಕೆ ಎಂಐ5ನ ಮಾಜಿ ಡೈರೆಕ್ಟರ್ ಜನರಲ್ ಎಲಿಜಾ ಮ್ಯಾನಿಂಗ್ಹ್ಯಾಂ ಬುಲ್ಲರ್ ಕಾರಣ. ಅವರಿಗೆ ಧನ್ಯವಾದಗಳು ಎಂದು ಹೇಳಿದನು.
ಗೋರ್ಡಿಯೆವ್ಸಕಿಯ ಅಭಿಪ್ರಾಯದಲ್ಲಿ ಇಂಗ್ಲೆಂಡಿನಲ್ಲಿ ನೆಲೆಯಾಗಿರುವ ರಷ್ಯಾದ ಬಿಸಿನೆಸ್ ಅಸೋಸಿಯೇಟ್ ಈ ಘಟನೆಗೆ ಕಾರಣ. ಆತನೇ ಗೋರ್ಡಿಯೆವ್ಸಕಿಗೆ ಮಾತ್ರೆಗಳನ್ನು ಒದಗಿಸುತ್ತಿದ್ದುದು. ಆತ ನೀಡಿದ ಕ್ಷನಾಕ್ಸ್ ಮಾತ್ರೆಯು ನಿದ್ರಾಹೀನತೆಗೆ ಕಾರಣವಾಗುವಂಥದ್ದು ಎಂದು ಹೇಳಿದ. ಆದರೆ ಆ ವ್ಯಕ್ತಿಯ ಹೆಸರನ್ನು ಹೇಳಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಆತನಿಗೆ ಹೆಸರು ಬಹಿರಂಗಪಡಿಸದಂತೆ ಸಲಹೆ ನೀಡಿದ್ದರಂತೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.