ವರ್ಜಿನಿಯಾ ಹಾಲ್ ಅಮೆರಿಕದ ಅತ್ಯಂತ ಮಹತ್ವದ ಬೇಹುಗಾರರಲ್ಲಿ ಒಬ್ಬಳು. ಆದರೆ ಬಹುತೇಕರಿಗೆ ಅವಳ ಕುರಿತು ಗೊತ್ತೇ ಇಲ್ಲ. ಅಮೆರಿಕದ ಬೇಹುಗಾರಿಕೆಯ ಕೇಂದ್ರ ಕಚೇರಿ ಲಾಂಗ್ಲೆಯಲ್ಲಿಯ ಸಿಐಎ ಮ್ಯೂಸಿಯಂನ ಒಳಗೆ ಆಕೆಯ ಸಾಹಸಗಾಥೆಯ ಪ್ರದರ್ಶನವಿದೆ. ಆದರೆ ಇದು ಸಾರ್ವಜನಿಕರಿಗೆ ಸುಲಭದಲ್ಲಿ ಲಭ್ಯವಿಲ್ಲ. ಎರಡನೆ ಮಹಾಯುದ್ದದ ಸಮಯದಲ್ಲಿಯ ಅತ್ಯಂತ ವರ್ಣರಂಜಿತ ಮಹಿಳಾ ನಾಗರಿಕಳು ವರ್ಜಿನಿಯಾ ಹಾಲ್. ಹಾಗೆಂದು ಪ್ರವಾಸಿಗಳಿಗೆ ಮ್ಯೂಸಿಯಂನ ಡೆಪ್ಯೂಟಿ ಡೈರೆಕ್ಟರ್ ಜೆನೆಲ್ಲೆ ನೀಸೆಸ್ ಹೇಳುತ್ತಾರೆ.
ಹಾಗಾದರೆ ವರ್ಜಿನಿಯಾ ಹಾಲ್ ಬಗ್ಗೆ ಬಹಳ ಜನರಿಗೆ ಗೊತ್ತಿರದೆ ಇರುವುದಕ್ಕೆ ಕಾರಣವೇನು? ನನ್ನ ಅನೇಕ ಸ್ನೇಹಿತರು ಜಾಸ್ತಿ ಮಾತನಾಡಿದ ಕಾರಣಕ್ಕೇ ಜೀವ ಕಳೆದುಕೊಂಡರು ಎಂದು ವರ್ಜಿನಿಯಾ ಹಾಲ್ ಹೇಳಿದ ಮಾತೊಂದು ಅತ್ಯಂತ ಪ್ರಸಿದ್ಧವಾಗಿದೆ. ಆದರೆ ಈಗ ಅವಳ ಸಾವಿನ ನಾಲ್ಕು ದಶಕಗಳ ಬಳಿಕ ಮತ್ತು ಎರಡನೆ ಮಹಾಯುದ್ಧದಲ್ಲಿ ಫ್ರಾನ್ಸ್‌ನಲ್ಲಿ ನಾಝಿಗಳ ವಿರುದ್ಧ ಅವಳು ಎಸಗಿದ ಹಲವು ಬುಡಮೇಲು ಕೃತ್ಯಗಳ ಏಳುದಶಕಗಳ ಬಳಿಕ ಅವಳನ್ನು ಸ್ಮರಿಸಿಕೊಳ್ಳುವ ಸುವರ್ಣ ಸಂದರ್ಭ ಒದಗಿ ಬಂದಿದೆ. ಅವಳ ಕುರಿತು ಮೂರು ಕೃತಿಗಳು ಬಂದಿವೆ ಮತ್ತು ಎರಡು ಸಿನಿಮಾಗಳು ಕೂಡ.
ಬ್ರಿಟಿಷ್ ಲೇಖಕಿ ಸೋನಿಯಾ ಪರ್ನೆಲ್ ಬರೆದ ಪುಸ್ತಕದ ಹೆಸರು, ಎ ವುಮನ್ ಆಫ್ ನೋ ಇಂಪೊರ್ಟನ್ಸ್. ತನ್ನ ಪುಸ್ತಕದ ಶೀರ್ಷಿಕೆಯ ವ್ಯಂಗ್ಯಾರ್ಥದ ಬಗ್ಗೆ ವಿವರಿಸುವ ಅವರು, ಆಕೆ ತನ್ನ ಬದುಕಿನಲ್ಲಿ ಬಹಳಷ್ಟನ್ನು ಸಾಧಿಸಿದಳು. ಆದರೆ ಅವಳ ಆರಂಭದ ಬದುಕಿನಲ್ಲಿ ಎಲ್ಲೆಡೆ ತಿರಸ್ಕಾರಕ್ಕೆ ಒಳಗಾದಳು, ಅವಳನ್ನು ಕ್ಷುಲ್ಲಕವಾಗಿ ಕಂಡರು. ಆದರೆ ಅವಳು ನಿರಂತರವಾಗಿ ಕ್ರಿಯಾಶೀಲಳಾಗಿ, ಯಾರೇ ಆಗಲಿ ಅತ್ಯಂತ ಮಹತ್ವದವರು ಎಂದು ಇರುವುದಿಲ್ಲ ಅಥವಾ ಏನೇನೂ ಮಹತ್ವವಿಲ್ಲದವರು ಆಗಿರುವುದಿಲ್ಲ ಎಂಬುದನ್ನು ತೋರಿಸಿಕೊಟ್ಟಳು ಎಂದು ಹೇಳಿದ್ದಾರೆ.
ಹಾಲ್ ಶ್ರೀಮಂತ ಬಾಲ್ಟಿಮೋರ್ ಕುಟುಂಬದಲ್ಲಿ 1906ರಲ್ಲಿ ಜನಿಸಿದಳು. ತಮ್ಮ ಶ್ರೀಮಂತ ಪರಿಸರದಲ್ಲಿಯೇ ವಿವಾಹಕ್ಕೆ ನೆರೆದು ನಿಂತಳು. ಆದರೆ ಸಾಹಸ ಪ್ರವೃತ್ತಿಯ ಅವಳಿಗೆ ಅಷ್ಟು ಬೇಗ ಮದುವೆ ಬೇಡವೆನಿಸಿತು. ತನ್ನನ್ನೇ ತಾನು ಹಾಲ್, ಚಂಚಲ ಪ್ರವೃತ್ತಿಯವಳು ಮತ್ತು ಜಗಳಗಂಟಿ ಎಂದು ಕರೆದುಕೊಂಡಿದ್ದಾಳೆ. ಬೇಟೆಯಾಡುವುದು ಅವಳಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಒಮ್ಮೆ ಅವಳು ಶಾಲೆಗೆ ಜೀವಂತ ಹಾವಿನ ಬ್ರಾಸ್ಲೆಟ್ ಹಾಕಿಕೊಂಡು ಹೋಗಿದ್ದಳಂತೆ.
ಅವಳು ಸ್ವಲ್ಪಕಾಲ ರಾಡ್‌ಕ್ಲಿಫ್ ಮತ್ತು ಬರ್ನಾರ್ಡ್ ಕಾಲೇಜುಗಳಿಗೆ ಹೋಗಿದ್ದಳು. ನಂತರ ಅಭ್ಯಾಸಕ್ಕೆಂದು ಪ್ಯಾರಿಸ್ಸಿಗೆ ತೆರಳಿದಳು. ಆಗಿನಿಂದಲೇ ಅವಳಿಗೆ ಫ್ರಾನ್ಸ್ ಬಗ್ಗೆ ಪ್ರೇಮಾಂಕುರವಾಗಿದ್ದು. ತಾನೊಬ್ಬ ರಾಜತಾಂತ್ರಿಕಳಾಗಬೇಕು ಎಂದು ಅವಳು ಬಯಸಿದ್ದಳಂತೆ. ತಾನು ತನ್ನ ದೇಶದ ರಾಯಭಾರಿಯಾಗಬೇಕು ಎಂಬುದು ಅವಳ ಬಯಕೆಯಾಗಿತ್ತು. ಸರ್ಕಾರದ ಇಲಾಖೆ ಅವಳ ಅರ್ಜಿಯನ್ನು ತಿರಸ್ಕರಿಸಿತ್ತು. ಅವಳು ಹಲವು ಬಾರಿ ಅರ್ಜಿಯನ್ನು ಗುಜರಾಯಿಸಿದಳು. ಆ ಕಾಲದಲ್ಲಿ ಅಮೆರಿಕದಲ್ಲಿದ್ದ ಒಟ್ಟೂ ರಾಜತಾಂತ್ರಿಕರ ಸಂಖ್ಯೆ 1,500 ಮಾತ್ರ. ಅದರಲ್ಲಿದ್ದ ಮಹಿಳೆಯರು ಕೇವಲ ಆರು.
ಹಾಲ್ ತನ್ನ ಮಹತ್ವಾಕಾಂಕ್ಷೆಗೆ ಸಲ್ಲದ ಗುಮಾಸ್ತ ಹುದ್ದೆಯನ್ನು ಟರ್ಕಿಯಲ್ಲಿಯ ಅಮೆರಿಕದ ರಾಯಭಾರ ಕಚೇರಿಯಲ್ಲಿ ನಿರ್ವಹಿಸಬೇಕಾಯಿತು. ಅಲ್ಲಿ ಅವಳು ತನ್ನ ಹವ್ಯಾಸವಾದ ಬೇಟೆಗಾರಿಕೆಯನ್ನು ಮುಂದುವರಿಸಿದ್ದಳು. ಒಂದು ಬಾರಿ ಅವಳು ಹಕ್ಕಿಗಳ ಬೇಟೆಯನ್ನು ನಡೆಸಿದ್ದಾಗ ಆಕಸ್ಮಿಕವಾಗಿ ಸಿಡಿದ ಗುಂಡು ಅವಳ ಕಾಲಿಗೆ ತಗುಲಿತು. ಅದರಿಂದ ಗ್ಯಾಂಗ್ರಿನ್ ಆಯಿತು. ಮೊಣಕಾಲಿನ ವರೆಗೆ ಅವಳ ಎಡಗಾಲನ್ನು ಕತ್ತರಿಸಲಾಯಿತು. ಅದರಿಂದ ಚೇತರಿಸಿಕೊಂಡಿದ್ದು ಒಂದು ಯಾತನಾಮಯ ಕತೆ. ಹಳೆಯ ಕಾಲದ ಕಟ್ಟಿಗೆಯ ಕಾಲನ್ನು ಅವಳು ಬಳಸಲು ಆರಂಭಿಸಿದಳು. ಆದರೆ ಅದು ಅವಳ ಬದುಕಿನಲ್ಲಿ ಒಂದು ದೊಡ್ಡ ತಿರುವು ಆಗಿತ್ತು. ಅವಳಿಗೆ ಬದುಕಿನಲ್ಲಿ ಎರಡನೆ ಅವಕಾಶ ದೊರೆತಿತ್ತು. ಅದನ್ನು ವ್ಯರ್ಥವಾಗಲು ಅವಳು ಬಿಡಲಿಲ್ಲ. ಅವಳ ಕಾಲಿನ ಊನ ಅವಳಲ್ಲಿ ಅಡಗಿದ್ದ ಅದ್ಯಾವುದೋ ಅದಮ್ಯ ಚೇತನವನ್ನು ಬಡಿದೆಬ್ಬಿಸಿತು. ತನ್ನನ್ನು ತಾನೇ ಅವಳು ಪುನರ್ ಅನ್ವೇಷಣೆ ಮಾಡಿಕೊಂಡಳು. ಅದು ಅವಳಿಂದ ಬಹುದೊಡ್ಡ ಕೆಲಸಗಳನ್ನು ಮಾಡಿಸಿತು.
ಎರಡನೆ ಮಹಾಯುದ್ಧ ಆರಂಭವಾದಮೇಲೆ ನಾಝಿ ಜರ್ಮನಿಯು ಫ್ರಾನ್ಸ್ ಮೇಲೆ ದಾಳಿ ನಡೆಸಿತು. ಆಗ ಹಾಲ್ ಫ್ರೆಂಚ್ ಜನರ ನೆರವಿಗಾಗಿ ಸ್ವಯಂಪ್ರೇರಣೆಯಿಂದ ಆ್ಯಂಬುಲೆನ್ಸ್ ಚಾಲಕಳಾಗಿ ಕೆಲಸ ಮಾಡಿದಳು. ಆದರೆ ಫ್ರಾನ್ಸ್ ಬಹುಬೇಗನೆ ಜರ್ಮನಿಯ ವಶವಾಗಲು ಅವಳು ಬ್ರಿಟನ್ನಿಗೆ ಓಡಿಹೋಗಬೇಕಾಯಿತು. ಆಕಸ್ಮಿಕವಾಗಿ ಅವಳಿಗೆ ಒಬ್ಬ ಬೇಹುಗಾರನ ಪರಿಚಯವಾಯಿತು. ಆ ಮೂಲಕ ಅವಳು ಬ್ರಿಟಿಷ್ ಬೇಹುಗಾರಿಕೆಯ ಸಂಪರ್ಕದಲ್ಲಿ ಬಂದಳು. ಅವಳಿಗೆ ಸೀಮಿತ ತರಬೇತಿಯನ್ನು ನೀಡಲಾಯಿತು. ಈ ಒಂಟಿಗಾಲಿನ ಅಮೆರಿಕದ ಮಹಿಳೆ ಪ್ರಥಮ ಬ್ರಿಟಿಷ್ ಬೇಹುಗಾರಳಾಗಿ 1941ರಲ್ಲಿ ನಾಝಿ ಆಕ್ರಮಿತ ಫ್ರಾನ್ಸ್‌ಗೆ ತೆರಳಿದಳು. ನ್ಯೂ ಯಾರ್ಕ್ ಪೋಸ್ಟ್ ಪತ್ರಿಕೆಯ ವರದಿಗಾರಳೆಂಬಂತೆ ಅವಳು ತೋರಿಸಿಕೊಂಡಳು. ಬೆನ್ನಟ್ಟಿದ ಗೆಸ್ಟಾಪೋ ಆರಂಭದ ದಿನಗಳಲ್ಲಿ ವೈಫಲ್ಯಗಳು ಕಾಣಿಸಿಕೊಂಡವು. ಅವಳ ಕಾರ್ಯಜಾಲದ ಸದಸ್ಯರು ಸಿಕ್ಕಿಬಿದ್ದರು ಮತ್ತು ಅವರ ಕೊಲೆಗಳಾಗಿಹೋದವು. ಆದರೆ ಹಾಲ್ ಸಹಜ ಬೇಹುಗಾರಳಾಗಿದ್ದಳು. ಅವಳು ಯಾವಾಗಲೂ ಜರ್ಮನ್ ಸೀಕ್ರೆಟ್ ಪೊಲೀಸ್ ಗೆಸ್ಟಾಪೋಗಿಂತ ಒಂದು ಹೆಜ್ಜೆ ಮುಂದಿರುತ್ತಿದ್ದಳು. ಹಾಲ್ ಆ ಸಮಯದಲ್ಲಿ ಕೆಲಮಟ್ಟಿಗೆ ಅದೃಶ್ಯಳಾಗಿಯೇ ಇದ್ದಳು. ಆಕಾಲದ ಗೆಸ್ಟಾಪೋದ ಅತಿರೇಕದ ದೇಶಾಭಿಮಾನವನ್ನೇ ಅವಳು ತನ್ನ ಬಂಡವಾಳವನ್ನಾಗಿ ಮಾಡಿಕೊಂಡಳು. ಯುದ್ಧದ ಸಮಯದಲ್ಲಿ ಮಹಿಳೆಯೊಬ್ಬಳು ಬೇಹುಗಾರಿಕೆಯನ್ನು ನಡೆಸಬಹುದು ಎಂಬ ಆಲೋಚನೆಯೇ ಯಾವೊಬ್ಬ ಜರ್ಮನಿಯವನ ತಲೆಯಲ್ಲಿ ಬರಲೇ ಇಲ್ಲ. ಹಾಲ್ ಫ್ರಾನ್ಸ್ ದೇಶದ ಪಶ್ಚಿಮ ಭಾಗದಲ್ಲಿದ್ದ ನಗರ ಲಿಯೋನ್‌ನಿಂದ ಕಾರ್ಯನಿರ್ವಹಿಸುತ್ತಿದ್ದಳು. ಆರಂಭದಲ್ಲಿ ಅವಳು ಕಾನ್ವೆಂಟ್ ಒಂದರಲ್ಲಿ ಉಳಿದುಕೊಂಡು ಅಲ್ಲಿದ್ದ ನನ್‌ಗಳನ್ನು ತನಗೆ ಸಹಾಯ ಮಾಡುವಂತೆ ಮನವೊಲಿಸಿದಳು. ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ಒಬ್ಬ ಮಹಿಳೆಯ ಸ್ನೇಹವನ್ನು ಅವಳು ಸಂಪಾದಿಸಿದಳು. ಜರ್ಮನಿಯ ಪಡೆಗಳು ಫ್ರೆಂಚ್ ವೇಶ್ಯೆಯರನ್ನು ಕಲೆಹಾಕುತ್ತಿದ್ದಾರೆ ಎಂಬ ಮಾಹಿತಿಯನ್ನು ಅವಳು ಪಡೆದಳು. ಅದನ್ನು ಪ್ರತಿಭಟಿಸುವ ಹೋರಾಟಗಾರರನ್ನು ಹಾಲ್ ಸಂಘಟಿಸಿದಳು. ಅವರಿಗೆ ಸುರಕ್ಷಿತವಾದ ಮನೆಗಳನ್ನು ಒದಗಿಸಿದಳು. ಬೇಹುಗಾರಿಕೆಯ ಮಾಹಿತಿಯನ್ನು ನೀಡಿದಳು. ಇದು ಗಮನಕ್ಕೆ ಬಾರದೆ ಇರಲಿಲ್ಲ. ಒಬ್ಬ ಕುಂಟುವ ಮಹಿಳೆಯು ನಮಗಿಂತ ಮುಂದಿದ್ದಾಳೆ ಎಂಬುದನ್ನು ಜರ್ಮನಿಗರು ಅರಿತುಕೊಂಡರು. ಹಾಲ್ ನಿರಂತರವಾಗಿ ತನ್ನ ವೇಷವನ್ನು ಬದಲಿಸಿಕೊಳ್ಳುತ್ತಿದ್ದಳು. ಅವಳು ಒಂದು ಮಧ್ಯಾಹ್ನದೊಳಗೆ ನಾಲ್ಕು ವಿಭಿನ್ನ ಮಹಿಳೆಯ ರೂಪದಲ್ಲಿ ಇರುತ್ತಿದ್ದಳು ಮತ್ತು ನಾಲ್ಕು ಸಂಕೇತ ಹೆಸರುಗಳನ್ನು ಹೊಂದಿರುತ್ತಿದ್ದಳು. ಹಾಲ್ ಬೆನ್ನಹಿಂದೆ ಬಿದ್ದವನು ಬೇರಾರೂ ಆಗಿರದೆ ಲಿಯಾನ್‌ನ ಕಟುಕನೆಂದೇ ಕುಖ್ಯಾತನಾಗಿದ್ದ ಗೆಸ್ಟಾಪೋದ ಕ್ಲೌಸ್ ಬಾರ್ಬಿ. ಆತನ ಪಡೆಗಳು ಫ್ರಾನ್ಸ್‌ನಲ್ಲಿ ಸಾವಿರಾರು ಜನರ ಹತ್ಯೆ ಮಾಡಿತ್ತು. ಹಾಲ್‌ಳ ವಾಟೆಂಡ್ ಭಿತ್ತಿಪತ್ರಗಳನ್ನು ಎಲ್ಲೆಡೆ ಅಂಟಿಸಲು ಬಾರ್ಬಿ ಆದೇಶ ನೀಡಿದನು. ಅವಳ ಫೋಟೋದ ಮೇಲೆ ಈ ಬರೆಹ ಇತ್ತು,- ಶತ್ರುವಿನ ಅತ್ಯಂತ ಅಪಾಯಕಾರಿ ಗೂಢಚಾರಿಣಿ. ನಾವು ಕಂಡುಹಿಡಿದು ಅವಳನ್ನು ನಾಶಗೊಳಿಸಬೇಕು! ಕುಂಟುಗಾಲಿನಲ್ಲಿ ಮೂರು ದಿನ ನಡೆದಳು- 1942ರ ಕೊನೆಯಲ್ಲಿ ಬೆನ್ನಟ್ಟಿದ ನಾಝಿಗಳು ಅವಳನ್ನು ಹಿಡಿದೇಬಿಟ್ಟರು ಅನ್ನುವಷ್ಟರಲ್ಲಿ ಹಾಲ್ ತಪ್ಪಿಸಿಕೊಂಡು ಸ್ಪೇನ್ ಗಡಿಯನ್ನು ಪ್ರವೇಶಿಸಿದ್ದಳು. ಅದೊಂದು ಯಾತನಾಮಯ ಪ್ರಯಾಣವಾಗಿತ್ತು. ಸುರಿಯುತ್ತಿರುವ ಮಂಜಿನ ನಡುವೆ ಪೈರೆನೀಸ್ ಪರ್ವತ ಸಾಲಿನಲ್ಲಿ 50 ಮೈಲುಗಳನ್ನು ಮೂರು ದಿನಗಳ ಕಾಲ ನಡೆದುಹೋಗಿದ್ದೂ ಇದರಲ್ಲಿ ಸೇರಿದೆ. ಇದರಲ್ಲಿ ಒಬ್ಬ ಮ್ಯಾರಥಾನ್ ಓಟಗಾರ ಗ್ರಾಲ್ಲಿ ಎಂಬಾತನೂ ಜೊತೆಯಲ್ಲಿದ್ದ. ಇದೊಂದು ಉಸಿರುಗಟ್ಟಿಸುವ ಪ್ರಯಾಣವಾಗಿತ್ತು ಎಂದು ಅವನು ಹೇಳಿದ್ದಾನೆ. ಆ ರೀತಿಯ ಇಚ್ಛಾಶಕ್ತಿ ಮತ್ತು ಪಟ್ಟುಬಿಡದೆ ಸಾಧಿಸುವ ಛಲವನ್ನು ವರ್ಜಿನಿಯಾ ಹಾಲ್ ಅವರಲ್ಲಿ ಮಾತ್ರ ಕಾಣಬಹುದು. ಅದನ್ನು ನಾನು ಕಲ್ಪನೆಮಾಡಿಕೊಳ್ಳಬಲ್ಲೆ. ಅದೇನು ಸುಂದರವಾದ ಅನುಕೂಲಕರವಾದ ದಿನವೇನು ಆಗಿರಲಿಲ್ಲ. ಹೆಪ್ಪುಗಟ್ಟಿಸುವಂಥ ಚಳಿಗಾಲದ ದಿನವಾಗಿತ್ತು. ಅಂಥದರಲ್ಲೂ ತನ್ನ ಕುಂಟುಕಾಲನ್ನು ಎಳೆಯುತ್ತ ಅವಳು ನಡೆದೇ ನಡೆದಳು ಎಂದು ಗ್ರಾಲ್ಲಿ ಹೇಳಿದ್ದಾನೆ. ಹಾಲ್ ಸ್ಪೇನ್ ತಲುಪಿದಾಗ ಅಲ್ಲಿ ಅವಳನ್ನು ಬಂಧಿಸಲಾಯಿತು. ಏಕೆಂದರೆ ಅವಳ ಪಾಸ್ಪೋರ್ಟ್ ಮೇಲೆ ಪ್ರವೇಶ ಪಡೆಯುವ ಸಂಬಂಧದ ಸಿಕ್ಕಾ ಇರಲಿಲ್ಲ. ಆರು ವಾರಗಳ ಬಳಿಕ ಅವಳನ್ನು ಬಿಡುಗಡೆ ಮಾಡಲಾಯಿತು. ನಂತರ ಅವಳು ಅಲ್ಲಿಂದ ಬ್ರಿಟನ್ನಿಗೆ ತೆರಳಿದಳು. ಬಿಡುವಿಲ್ಲದ ಬದುಕನ್ನು ರೂಢಿಸಿಕೊಂಡಿದ್ದ ಅವಳು ಫ್ರಾನ್ಸ್‌ಗೆ ಹಿಂತಿರುಗಲು ಬಯಸಿದಳು. ಆದರೆ ಬ್ರಿಟಿಷರು ಅದಕ್ಕೆ ಒಪ್ಪಲಿಲ್ಲ. ಅದೊಂದು ಅಪಾಯಕಾರಿ ನಡೆಯಾಗಬಹುದು ಎಂದು ಅವರು ಭಾವಿಸಿದ್ದರು. ಮರಳಿ ಫ್ರಾನ್ಸ್‌ಗೆ - ಅಮೆರಿಕದ ಬೇಹುಗಾರಿಕೆ ಸೇವೆಯಲ್ಲಿ ಪರಿಣತರ ಕೊರತೆ ತಲೆದೋರಿತ್ತು. ಕಾರ್ಯತಂತ್ರವನ್ನು ರೂಪಿಸುವ ಕಚೇರಿಯ ಅಸ್ತಿತ್ವ ಫ್ರಾನ್ಸ್‌ನಲ್ಲಿ ಇರಲೇ ಇಲ್ಲ. ಈಗ ಅಮೆರಿಕದವರಿಗೆ ಹಾಲ್ ಅಗತ್ಯ ಅನಿವಾರ್ಯ ಎನಿಸಿತು. ನಾಝಿಗಳು ಎಲ್ಲ ಕಡೆ ಸುತ್ತುವರಿದಿದ್ದರು. ಸರಳವಾಗಿ ಕೆಲಸ ನಿರ್ವಹಿಸುವುದು ಅವಳಿಗೆ ಕಠಿಣವಾಗಿತ್ತು. ಅವಳು ಕೆಲವು ಮೇಕ್‌ಅಪ್ ಆರ್ಟಿಸ್ಟ್‌ಗಳನ್ನು ಇಟ್ಟುಕೊಂಡಿದ್ದಳು. ತನ್ನ ಮುಖದ ಮೇಲೆ ನೆರಿಗೆಗಳು ಕಾಣುವಂತೆ ಮಾಡುವುದು ಹೇಗೆಂಬುದನ್ನು ಅವರಿಂದ ಕಲಿತುಕೊಂಡಳು. ಲಂಡನ್ನಿನ ದಂತವೈದ್ಯರಿಂದ ತನ್ನ ಸುಂದರವಾದ ಬೆಳ್ಳಗಿನ ಅಮೆರಿಕದ ಹಲ್ಲುಗಳನ್ನು ಅರೆಯಿಸಿಕೊಂಡಳು. ಈಗ ಅವಳನ್ನು ನೋಡಿದರೆ ಫ್ರಾನ್ಸಿನ ಹಾಲು ಮಾರುವ ಹೆಂಗಸಿನಂತೆ ಕಾಣಿಸುತ್ತಿದ್ದಳು. ಫ್ರಾನ್ಸ್‌ನಲ್ಲಿ ಹಾಲ್ 1944 ಮತ್ತು 1945ರಲ್ಲಿ ನಡೆಸಿದ ಚಟುವಟಿಕೆಗಳು ಅವಳ ಮೊದಲ ಫ್ರಾನ್ಸ್ ಭೇಟಿಗಿಂತ ಹೆಚ್ಚು ಯಶಸ್ವಿಯಾಗಿದ್ದವು. ಪ್ರತಿಭಟನೆಯ ಹೋರಾಟದಲ್ಲಿ ತೊಡಗಿದ್ದವರಿಗೆ ಆಹಾರದ ಪೊಟ್ಟಣಗಳನ್ನು ವಿಮಾನದಿಂದ ಬೀಳಿಸುವುದರಲ್ಲಿ ಪಾಲ್ಗೊಂಡಳು. ಈ ಪ್ರತಿಭಟನಕಾರರು ಸೇತುವೆಗಳನ್ನು ಉರುಳಿಸುವುದು ಮತ್ತು ರೈಲುಗಳನ್ನು ಉಧ್ವಸ್ತಗೊಳಿಸುವ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಮಿತ್ರಪಡೆಗಳು ಫ್ರಾನ್ಸ್‌ನಲ್ಲಿ ಮುನ್ನಡೆಯನ್ನು ಸಾಧಿಸುವುದಕ್ಕೆ ಪೂರ್ವದಲ್ಲಿಯೇ ಅವರು ಹಲವು ಹಳ್ಳಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಹಾಲ್ ತನ್ನ ಕಾರ್ಯಾಚರಣೆಯ ತುರೀಯಾವಸ್ಥೆಯಲ್ಲಿ ಸುಮಾರು 1,500 ಜನರ ಪಡೆಯನ್ನು ಕಟ್ಟಿದ್ದಳು. ಅವರಲ್ಲಿ ಫ್ರೆಂಚ್-ಅಮೆರಿಕದ ಯೋಧನೊಬ್ಬನಿದ್ದನು. ಆತನ ಹೆಸರು ಪೌಲ್ ಗೋಯಿಲ್ಲೊಟ್. ಈತನನ್ನೇ ಹಾಲ್ ನಂತರ ಮದುವೆಯಾಗುವುದು. ಯುದ್ಧದ ಬಗ್ಗೆ ಹಾಲ್ ಯಾವತ್ತೂ ಮಾತನ್ನೇ ಆಡುತ್ತಿರಲಿಲ್ಲ. ಬ್ರಿಟಿಷ್ ಮತ್ತು ಫ್ರೆಂಚ್ ಜನರು ಖಾಸಗಿಯಾಗಿ ಹಾಲ್ ಕೊಡುಗೆಯನ್ನು ಗುರುತಿಸಿ ಹೊಗಳಿದರು. ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಶ್ವೇತ ಭವನದಲ್ಲಿ ಸಾರ್ವಜನಿಕವಾಗಿ ಅವಳನ್ನು ಸನ್ಮಾನಿಸಲು ನಿರ್ಧರಿಸಿದ್ದರು. ತಾನು ರಹಸ್ಯವಾಗಿಯೇ ಇರಲು ಬಯಸುವುದಾಗಿ ಹೇಳಿ ಹಾಲ್ ಈ ಸನ್ಮಾನವನ್ನು ನಿರಾಕರಿಸಿದಳು. ಅಮೆರಿಕದ ಕಾರ್ಯತಂತ್ರ ರೂಪಿಸುವ ಕಚೇರಿಯ ಮುಖ್ಯಸ್ಥ ವಿಲಿಯಂ ಡೋನೋವಾನ್ ಹಾಲ್‌ಗೆ ವಿಶಿಷ್ಟ ಸೇವಾ ಕ್ರಾಸ್ ನೀಡಿ ಗೌರವಿಸಿದನು. ಎರಡನೆ ಮಹಾಯುದ್ಧದ ಸಮಯದಲ್ಲಿಯ ಸೇವೆಗಾಗಿ ಇಂಥ ಗೌರವ ಪಡೆದ ಏಕೈಕ ಮಹಿಳೆ ಇವಳು. ಈ ಸಮಾರಂಭದಲ್ಲಿದ್ದ ಹೊರಗಿನ ವ್ಯಕ್ತಿ ಎಂದರೆ ಹಾಲ್ ಅವಳ ತಾಯಿ ಮಾತ್ರ. ಎರಡನೆ ಮಹಾಯುದ್ದದಲ್ಲಿ ಅಮೆರಿಕದ ಅತಿ ಶ್ರೇಷ್ಠ ಗೂಢಚಾರಿಣಿ ಅವಳಾಗಿದ್ದಳು ಎಂದು ಗ್ರಾಲ್ಲೆ ಹೇಳಿದ್ದಾನೆ. ಇದಾದ ನಂತರ ಹಾಲ್ ಹೊಸದಾಗಿ ರಚನೆಯಾದ ಸಿಐಎ ಸೇರಿದಳು. ಅಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದಳು. ಅದು ಅವಳ ಸಂತೋಷದಾಯಕ ದಿನಗಳಾಗಿರಲಿಲ್ಲ. ಯುದ್ಧದ ಸಮಯದಲ್ಲಿ ಸ್ವತಂತ್ರವಾಗಿ ಹೊರಗಡೆ ಕೆಲಸ ಮಾಡಿದ್ದ ಅವಳಿಗೆ ಇಲ್ಲಿ ಕೇವಲ ಒಂದು ಡೆಸ್ಕ್‌ಗೆ ಅಂಟಿಕೊಂಡು ಇರುವುದು ಇಷ್ಟವಾಗಲಿಲ್ಲ. ನಿಮ್ಮ ಶ್ರೇಣಿಯಲ್ಲಿ ಉನ್ನತಿಯನ್ನು ಪಡೆದ ಹಾಗೆಲ್ಲ ಅಲ್ಲಿರುವುದು ಹಣ, ವೈಯಕ್ತಿ ಆಶೋತ್ತರಗಳು, ಯೋಜನೆಗಳು, ಅಧಿಕಾರಶಾಹಿಯ ಮೇಲುಗೈ ಸಾಧಿಸುವ ಹಲ್ಲಾಹಲ್ಲಿಯಷ್ಟೇ ಉಳಿಯುವುದು. ಮಹಿಳೆಯಾಗಿ ಹಾಲ್ ತಾರತಮ್ಯಕ್ಕೆ ಒಳಗಾದಳು. ಹಾಲ್ 1966ರಲ್ಲಿ ನಿವೃತ್ತಳಾದಳು. ಸಾರ್ವಜಿನಕವಾಗಿ ಅವಳೆಂದೂ ಮಾತನಾಡಿದ್ದೇ ಇಲ್ಲ. 1982ರಲ್ಲಿ ಅವಳು ಮೇರಿಲ್ಯಾಂಡ್‌ನಲ್ಲಿ ನಿಧನಳಾದಳು. ಹಲವು ಕಡೆಗಳಲ್ಲಿ ಹರಿದು ಚಿಂದಿಯಾಗಿಹೋಗಿರುವ, ಉದ್ದೇಶಪೂರ್ವಕವಾಗಿ ನಾಶಪಡಿಸಿರುವ ದಾಖಲೆಗಳನ್ನೆಲ್ಲ ಕಲೆ ಹಾಕಿ ಅವಳ ಜೀವನ ಚರಿತ್ರೆಯನ್ನು ಕಟ್ಟುವುದೆಂದರೆ ಅವಳು ಮಾಡಿದ ಬೇಹುಗಾರಿಕೆಯಷ್ಟೇ ಕಷ್ಟದ್ದು. ಇದೀಗ ಅವಳ ಕುರಿತು ಸಿನಿಮಾಗಳು ಬರುತ್ತಿವೆ, ಕೃತಿಗಳು ಪ್ರಕಟವಾಗುತ್ತಿವೆ. ಸಂತೋಷ. ಇತ್ತೀಚೆಗೆ ಸಿಐಎಗೆ ನೇಮಕಗೊಳ್ಳುವವರಿಗೆ ತರಬೇತಿಯನ್ನು ನೀಡುವ ಕಟ್ಟಡವೊಂದಕ್ಕೆ
ದಿ ವರ್ಜಿನಿಯಾ ಹಾಲ್ ಎಕ್ಸ್‌ಪೆಡಿಶನರಿ ಸೆಂಟರ್’ ಎಂದು ಹೆಸರಿಡಲಾಗಿದೆ. ವ
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.