ದೇವರು ಬಂದರು ದಾರಿಬಿಡಿ
ಪಲ್ಲಕ್ಕಿ! ಹೌದು, ಪಲ್ಲಕ್ಕಿಯೆಂದರೆ ಪಲ್ಲಕ್ಕಿಯೇ. ಆದು ಬಂತೆಮದರೆ ಇಡೀ ಊರಿಗೆ ಊರೇ ಎಚ್ಚರ. ಪಲ್ಲಕ್ಕಿ ಇದ್ದಾಗ ಕಳ್ಳತನವಿರಲಿಲ್ಲ. ಜನರನ್ನು ರೋಗ ಬಾಧಿಸುತ್ತಿರಲಿಲ್ಲ. ಬರೀ ಮನುಷ್ಯರೇ ಏನು, ದನ ಕರು ಕೋಳಿಗಳಿಗೂ ರೋಗ ತಟ್ಟುತ್ತಿರಲಿಲ್ಲ! ಮಿಂದು ಅದೆಷ್ಟೋ ದಿನಗಳಾದವರೂ ಪಲ್ಲಕ್ಕಿ ಊರಲ್ಲಿ ಇದ್ದಷ್ಟು ದಿನ ಮಿಂದುಬಿಡುತ್ತಿದ್ದರು. ಬೇಲಿಯಲ್ಲಿ ಅರಳಿ ಮುಡಿಗೂ ಜಡೆಗೂ ಸಲ್ಲುವ ಭಾಗ್ಯವಿಲ್ಲದೆ ಬಾಡಿಹೋಗುತ್ತಿದ್ದ ಕೋಟೆ ಹೂವು, ಕೆಂಪುದಾಸವಾಳ, ಹುಲಿಮೀಸೆ ಹೂವುಗಳು ಪಲ್ಲಕ್ಕಿ ಇದ್ದ ಅವಧಿಯಲ್ಲಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದವು.
ನಮ್ಮೂರ ಪುರಾಣ ಬಿಚ್ಚಿದರೆ ಅದರಲ್ಲಿ ಪಲ್ಲಕ್ಕಿಯ ಪ್ರಸ್ತಾಪ ಬಾರದೆ ಅಂತ್ಯ ಕಾಣದು. ಬರೀ ನಮ್ಮೂರೇನು, ಪಲ್ಲಕ್ಕಿ ಬಾರದ ಊರು ಊರು ಈ ಹೊಳೆಸಾಲಿನಲ್ಲಿ ಇಲ್ಲವೇ ಇಲ್ಲ ಅಂದರೂ ನಡೆಯುತ್ತದೆ. ಗೇರುಸೊಪ್ಪೆ ಸೀಮೆಯ ಚಂದಾವರ ಸೀಮೆಯ ಜನರ ಬದುಕಿನಲ್ಲಿ ಪಲ್ಲಕ್ಕಿ ಪೂಜೆಯೂ ಸೇರಿಹೋಗಿಬಿಟ್ಟಿದೆ. ವರ್ಷದಲ್ಲಿ ಒಮ್ಮೆಯಾದರೂ ಊರಲ್ಲಿ ಪಲ್ಲಕ್ಕಿ ಬರಲೇಬೇಕು. ಹಾಗೆ ಬರಲಿಲ್ಲ ಎಂದರೆ ಊರಲ್ಲಿ ಏನೇನೋ ಕೀಳು ಉಪದ್ರವ ತಪ್ಪಿದ್ದಲ್ಲ ಎಂಬ ನಂಬಿಕೆ ಇದೆ.
ಕರ್ಕಿಯ ದುರ್ಗಮ್ಮನ ಪಲ್ಲಕ್ಕಿ ನಮ್ಮೂರಿಗೆ ಪ್ರತಿವರ್ಷ ಬರುವುದು. ಅದೇ ರೀತಿ ಗೇರುಸೊಪ್ಪೆಯ ಹನುಮಂತನ ಪಲ್ಲಕ್ಕಿ, ಚಂದಾವರದ ಅಮ್ಮನ ಪಲ್ಲಕ್ಕಿ ಇವೆಲ್ಲ ಅಪರೂಪಕ್ಕೆ ಒಮ್ಮೆ ಎಂಬಂತೆ ಮೂರ್ನಾಲ್ಕು ವರ್ಷಕ್ಕೊಮ್ಮೆ ಬರುವವು. ಕರ್ಕಿಯ ದುರ್ಗಮ್ಮ ನಮ್ಮೂರ ದೇವತೆಯೂ ಹೌದು. ನಮ್ಮೂರಿನಲ್ಲಿ ಹಳೆಯ ಬಸದಿ, ಮಾಸ್ತಿ ಮನೆ, ಹುಲಿದೇವರ ಗುತ್ತು ಬಿಟ್ಟರೆ ಬೇರೆ ದೇವರುಗಳಿಲ್ಲ. ಕಕರ್ಿ ನಮ್ಮೂರು ಅಲ್ಲದಿದ್ದರೂ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕಾರಣ ಅದನ್ನೇ ಊರ ದೇವತೆ, ಗ್ರಾಮದೇವತೆ ಎರಡನ್ನಾಗಿಯೂ ನಮ್ಮೂರವರು ಸ್ವೀಕರಿಸಿದ್ದಾರೆ.
ಕರ್ಕಿಯ ದುರ್ಗಮ್ಮ ತನ್ನ ಉಗ್ರ ರೂಪಕ್ಕೆ ಹೆಸರಾದದ್ದು. ಅಮ್ಮನ ಗುಡಿಗೆ ಹೋಗಿ ಯಾರಾದರೂ ಹೇಳಿಕೆ ಮಾಡಿಕೊಂಡು ವೀಳ್ಯದೊಂದಿಗೆ ತೆಂಗಿನಕಾಯಿ ಇಟ್ಟು ಬಂದರೆ ಅಮ್ಮನ ಸವಾರಿ ಅವರ ಮನೆಗೆ ಪಲ್ಲಕ್ಕಿಯಲ್ಲಿ ದಯಮಾಡಿಸುತ್ತದೆ. ಹಾಗೆ ಬಂದ ಸವಾರಿ ಒಂದು ವಾರವೋ ಹದಿನೈದು ದಿನವೋ ಒಬ್ಬರ ಮನೆಯಲ್ಲಿ ಠಿಕಾಣಿ ಹೂಡುವುದು. ಅಮ್ಮನ ಪಲ್ಲಕ್ಕಿ ಬಂದಿದೆ ಎಮದರೆ ಊರಲ್ಲಿ ಆ ಮನೆಗೆ ಪ್ರತಿಷ್ಠೆ. ಕಂಡಕಂಡವರೆಲ್ಲ ಅಮ್ಮನ ಸವಾರಿಗೆ ಆತಿಥ್ಯ ನೀಡುವುದುದ ಸಾಧ್ಯವಿರಲಿಲ್ಲ. ದೇವಿಯ ಸವಾರಿಗೆ ಆತಿಥ್ಯ ನೀಡಬಲ್ಲ ಮನೆಗಳು ನಮ್ಮೂರಲ್ಲಿ ನಾಲ್ಕೈದು ಮಾತ್ರ ಇದ್ದವು.
ಪಲ್ಲಕ್ಕಿ ನೋಡುವ ಮಕ್ಕಳಿಗೆ ಅದೊಂದು ಅದ್ಭುತವೇ ಮೈ. ಮಕ್ಕಳು ಮಲಗಿ ಆಡುವ ತೊಟ್ಟಿಲಿಗಿಂತ ಸ್ವಲ್ಪ ದೊಡ್ಡದು. ಬಿದಿಗೆ ಚಂದ್ರನ ರೀತಿಯಲ್ಲಿ ಕತ್ತರಿಸಿದ ಮರದ ತುಂಡು ತೊಟ್ಟಿಲಿನ ಮೇಲ್ಭಾಗದಲ್ಲಿ. ಹಿಂದಕ್ಕೆ ಮುಂದಕ್ಕೆ ನಾಲ್ಕು ನಾಲ್ಕು ಜನ ಹೊರುವ ರೀತಿಯಲ್ಲಿ ಕೋಬು. ಮುಂದಿನ ಕೊಂಬಿಗೆ ಅಡಕೆ ಮರದ ಇಡಿಯ ಸಿಂಗಾರವನ್ನು ಬಿಗಿದು ಕಟ್ಟಿರುತ್ತಾರೆ. ತೊಟ್ಟಿಲಿನ ಮೇಲಿನ ಕಮಾನಿಗೆ ಬಣ್ಣ ಬಣ್ಣದ ಬಟ್ಟೆಯ ಹೊದಿಕೆ ಇರುತ್ತದೆ. ಅದರ ಎರಡೂ ಬದಿಗೆ ನಾಲ್ಕು ಅಂಗುಲಕ್ಕೆ ಒಂದರಂತೆ ಬೆಳ್ಳಿಯ ಬುಗುಟಿಯಲ್ಲಿ ಸೇರಿಸಿದ ಚವರಿ. ಪಲ್ಲಕ್ಕಿಯ ತೊಟ್ಟಿಲಿನ ಭಾಗದಲ್ಲಿ ಅಂದದ ಕುಸುರಿಯ ಚಿತ್ತಾರ. ಅದಕ್ಕೆ ವಿವಿಧ ಬಣ್ಣಗಳ ಲೇಪನ. ಅಮ್ಮನಿಗೆ ನವಿಲು ಗರಿಯಿಂದ ಮಾಡಿದ ಬೀಸಣಿಗೆ, ಬೆಳ್ಳಿಯ ಮಖವಾಡ ಇಲ್ಲವೆ ಫಳಫಳನೆ ಹೊಳೆಯುವ ಕಂಚಿನ ಮುಖವಾಡ. ಅದರ ಮುಂದೆ ದೀಪ ಹಚ್ಚಿದರಂತೂ ಮುಗಿದೇ ಹೋಯಿತು. ಅದೆಂಥದ್ದೋ ಅಪೂರ್ವ ಕಾಂತಿ.
ಪಲ್ಲಕ್ಕಿ ಹೊತ್ತವರಿಗೆ ಒಮ್ಮೊಮ್ಮೆ ಆವೇಶ ಬಂದುಬಿಡುತ್ತದೆ. ರುಯ್ಯಂತ ಓಡಿಯೇ ಬಿಡುತ್ತಾರೆ. ತೇರುಪೇಟೆಯಲ್ಲಂತೂ ಅಮ್ಮನ ಪಲ್ಲಕ್ಕಿ ಹೊತ್ತವರಿಗೆ ಏವೆಶ ಜಾಸ್ತಿ. ಕಟ್ಟುಮಸ್ತಾದ ಹೊಂತ್ಕಾರಿಗಳೇ ಪಲ್ಲಕ್ಕಿಯನ್ನು ಹೊರಬೇಕು. ಪಲ್ಲಕ್ಕಿಯು ಹಿಂದಕ್ಕೆ ಭಾರ ಎನ್ನುವ ನಂಬಿಕೆ. ಹಾಗಾಗಿ ತಮ್ಮ ಪೌರುಷವನ್ನು ಪ್ರದರ್ಶಿಸುವವರು ಹಿಂದಕ್ಕೇ ಹೊರುವುದಕ್ಕೆ ಇಷ್ಟಪಡುತ್ತಾರೆ. ನಮ್ಮೂರಲ್ಲಿ ಒಂದಿಬ್ಬರು ಪಲ್ಲಕ್ಕಿ ಹೊತ್ತು ಹೆಣ್ಚಕ್ಕಳ ಮನಸೂರೆಗೊಂಡಿದ್ದುಂಟು. ನಾಲ್ಕಾಣೆ ಎಂಟಾಣೆ ಹಾಕಿ ಪೂಜಾರಿಯಿಂದ ಕುಂಕುಮ, ಸಿಂಗಾರದ ಹುಸಿಯನ್ನು ಪ್ರಸಾದವಾಗಿ ಪಡೆದು ಓವದಯರಾಗುವ ಹೆಂಗಳೆಯರು ಅದೆಷ್ಟೋ.
ಊರಿಗೆ ಬಂದ ಅಮ್ಮನ ಸವಾರಿ ಮಾಡುವ ಕಾರ್ಯ ಒಂದೇ ಎರಡೇ! ಮನೆ ಕಟ್ಟುವವರಿಗೆ, ಕೊಟ್ಟಿಗೆ ಕಟ್ಟುವವರಿಗೆ ಜಾಗ ತೋರಿಸುತ್ತದೆ. ಬಾವಿ ತೋಡುವವರಿಗೆ ನೀರು ಬರುವ ಜಾಗದ ದರ್ಶನ. ಎಲ್ಲಿಯಾದರೂ ಕಳವು ಸಂಭವಿಸಿದರೆ ಅಮ್ಮನಿಗೆ ಬಾಳೆಹಣ್ಣಿನ ಕೊನೆಯ ಪೂಜೆಯೋ ಕೋಳಿ ಕುಯ್ಯಿಸುವ ಹರಕೆಯನ್ನೋ ಹೊತ್ತರೆ ಕಳ್ಳತನ ಮಾಡಿದವರಿಗೆ ತಕ್ಕ ಶಾಸ್ತಿ ಆಗುವುದೆಂದು ಎಲ್ಲರೂ ತಿಳಿದಿದ್ದಾರೆ. ಒಂದು ಸಲ ಕಳ್ಳನ ತೋರಿಸು ಎಂದು ಹೇಳಿಕೆ ಮಾಡಿಕೊಂಡು ಅಮ್ಮನ ಪಲ್ಲಕ್ಕಿಯನ್ನು ಹೊರಡಿಸಿದಾಗ ಅದು ಯಾರದೋ ಮನೆಯ ಗೋಡೆಯನ್ನು ಹೋಗಿ ಕೊಂಬಿನಿಂದ ತಿವಿದಾಗ ಆ ಮನೆಯವರು ಜಗಳಕ್ಕೆ ಬಂದು ದೊಡ್ಡ ರಾದ್ಧಾಂತ ಆದಮೇಲೆ ಅಮ್ಮನಿಗೆ ಅಂಥ ಸಮಸ್ಯೆಯ ಹೊರೆಯನ್ನು ಹೊರಿಸುವುದಕ್ಕೆ ಅಮ್ಮನ ಪೂಜಾರಿ ಬಿಡುವುದಿಲ್ಲ. ಅಮ್ಮನ ಎದುರು ಶಕುನ ಶಾಸ್ತ್ರ ಕೇಳುವ ಪದ್ಧತಿಯೂ ಇದೆ. ಎಮ್ಮೆ ಖರೀದಿ ಮಾಡುವವರು ತಾವು ನೋಡಿದ ಎಮ್ಮೆ ಸಾರಾವಳಿ ಬರುತ್ತದೆಯೋ ಇಲ್ಲವೋ ಎನ್ನುವುದನ್ನು ಅರಿಯಲು ಪ್ರಯತ್ನಿಸುವರು. ಖರೀದಿ ಅಡ್ಡಿಯಿಲ್ಲ ಅನ್ನುವುದಾದರೆ ಅಮ್ಮನ ಪಲ್ಲಕ್ಕಿ ಐದು ಹೆಜ್ಜೆ ಮುಂದೆ ಸಾಗಲಿ ಎಂದು ಪೂಜಾರಿ ಹೇಳಿಕೆ ಮಾಡಿಕೊಳ್ಳುವನು. ಅಮ್ಮನ ಇಚ್ಛೆ ಹೇಗೆ ಇದೆಯೋ ಬಲ್ಲವರಾರು? ಅಮ್ಮನ ಪ್ರೇರಣೆಯಂತೆ ಪಲ್ಲಕ್ಕಿ ಹೊತ್ತವರು ಹಿಂದಕ್ಕೋ ಮುಂದಕ್ಕೋ ಹೆಜ್ಜೆ ಹಾಕುವರು. ಕೆಲವರು ಗಂಡು ಹೆಣ್ಣು ನೋಡುವುದಕ್ಕೂ ಅಮ್ಮನಲ್ಲಿ ಶಕುನ ಕೇಳುವರು.
ಅಮ್ಮನ ಸವಾರಿ ಊರಿಗೆ ಬಂದಾಗ ಊರವರೆಲ್ಲ ಸೇರಿ ಪೂಜೆ ಮಾಡಿಸುತ್ತಾರೆ. ತಲೆಗೆ ಎಂಟಾಣೆ, ಬಾಲಕ್ಕೆ ನಾಲ್ಕಾಣೆ, ಒಂದು ಕಾಯಿ, ಒಂದು ಶಿದ್ದೆ ಅಕ್ಕಿ ಎಂದು ವರಾಡಿ ಹಾಕುತ್ತಾರೆ. ಇದನ್ನು ತಪ್ಪಿಸುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಅಮ್ಮನ ಕೋಪಕ್ಕೆ ಒಳಗಾಗುವ ಎದೆಗಾರಿಕೆ ಯಾರಿಗೂ ಇಲ್ಲ. ಅಮ್ಮನ ಸವಾರಿಯನ್ನು ಊರ ನಡುವಿನ ಗದ್ದೆ ಬಯಲಿನಲ್ಲಿ ಇರುವ ಅಶ್ವತ್ಥ ಕಟ್ಟೆಯ ಮೇಲೆ ಕೂಡಿಸುವರು. ಅಲ್ಲಿಯೇ ಚಪ್ಪರ ಹಾಕುವರು. ತಳಿರು ತೋರಣ ಎಲ್ಲ ಆಗುವುದು. ಮೊದಲಾದರೆ ಫೋನೋಗ್ರಾಮ್; ಈಗ ಮೈಕು ತಂದು ಹಚ್ಚುವರು. ಅಮ್ಮನ ಮುಂದೆ ಹಗಲೂ ರಾತ್ರಿ ಭಜನೆ ಸಪ್ತಾಹ ನಡೆಯುವುದು.
ಅಮ್ಮನ ಮಹಾಮಂಗಳಾರತಿಗೆ ಊರ ಜನರೆಲ್ಲ ಸೇರುವರು. ಮಂಗಳಾರತಿ ಮುಗಿತ್ತಿದ್ದಂತೆಯೇ ಪೂಜಾರಿಯ ಮೈಮೇಲೆ ಅಮ್ಮನ ಆಹ್ವಾನೆಯಾಗುತ್ತದೆ. ಸಿಂಗಾರದ ಎಸಳನ್ನು ಕೈಯಲ್ಲಿ ಹಿಡಿದುಕೊಂಡು ಪೂಜಾರಿ ನಡುಗುತ್ತಾ ಊಂಊಂಊಂ…. ಮಾಡುತ್ತ ನಿಲ್ಲುವನು. ಊರ ಹಿರಿಯರಲ್ಲಿ ಯಾರಾದರೂ ಅಮ್ಮನ ಆಗಮನದ ಕಾರಣವನ್ನು ಕೇಳುವರು. ಅಸ್ಪಷ್ಟ ಭಾಷೆಯಲ್ಲಿ ಅಮ್ಮ ಅಭಯ ಪ್ರದಾನ ಮಾಡುವಳು. ಅವಾರಿ ಮಾಡದೆ ಎಷ್ಟು ವರ್ಷವಾಯಿತು? ನನ್ನನ್ನು ಮರೆತು ಬಿಟ್ಟಿರಾ ಎಂದು ಪ್ರಶ್ನಿಸುವಳು. ಇಲ್ಲ ತೇಯಿ, ಈ ವರ್ಷ ಅವಾರಿ ಮಾಡಿಯೇ ನಿನ್ನ ಕಳುಹಿಸುತ್ತೇವೆ ಎಂದು ಊರ ಜನರ ಪರವಾಗಿ ಭರವಸೆಯನ್ನು ಅಮ್ಮನಿಗೆ ನೀಡಿದ ಮೇಲೆ ಆಕೆ ಸಮಾಧಾನ ಹೊಂದುವಳು.
ಅಮ್ಮನ ಅವಾರಿಗೆ ಸಿದ್ಧತೆ ನಡೆಯುವುದು. ನಾಲ್ಕು ಹಲ್ಲು ಮೂಡಿರುವ ಗೂಳಿ, ಎಂಟ್ಹತ್ತು ಕೋಳಿಗಳು ಅವಾರಿಗೆ ಬೇಕು. ಗೂಳಿಯನ್ನು ಮುಂದೆ ಇಟ್ಟುಕೊಂಡು ಪಲದಲಕದಕ್ಯ ಸವಾರಿ ಊರನ್ನು ಸುತ್ತುವುದು. ಊರಿನ ಅನಿಷ್ಟಗಳನ್ನೆಲ್ಲ ಆ ಗೂಳಿಯ ಮೇಲೆ ಆವಾಹನೆ ಮಾಡುವುರ. ಊರಿನ ಎಲ್ಲ `ತಳ’ಗಳಿಗೂ ಪಲ್ಲಕ್ಕಿ ಹೋಗುವುದು. ಮಾಸ್ತಿಮನೆ, ಪಟುಗನ ಮನೆ, ನಾಗರಬನ, ಹುಲಿದೇವರ ಗುತ್ತು, ಬಸದಿ ಇಲ್ಲೆಲ್ಲ ಪಲ್ಲಕ್ಕಿ ಹೋದಾಗ ಅಲ್ಲೆಲ್ಲ ಒಂದೊಂದು ಪಂಚರಂಗಿನ ಕೋಳಿಯನ್ನು ಹಾರಿಸಿ ಬಿಡುವರು. ಹೀಗೆ `ಅಮ್ಮನಿಗೆ ಬಿಟ್ಟ ಕೋಳಿ’ಯನ್ನು ಯಾರೂ ತಿನ್ನುವುದಿಲ್ಲ. ಯಾವುದಾದರೂ ಪ್ರಾಣಿ ಹಿಡಿದು ತಿನ್ನಬೇಕು ಅಷ್ಟೇ.
ಊರಿನ ಗಡಿಸುತ್ತುಗಳನ್ನೆಲ್ಲ ಎತ್ತಿನ ಗೂಳಿಯ ಜೊತೆ ಸುತ್ತಿದ ಬಳಿಕ ಪಲ್ಲಕ್ಕಿಯನ್ನು ಊರ ಗಡಿಯಲ್ಲಿ ಬೀಳ್ಕೊಡುವುರ. ಹಾಗೆಯೇ ಎತ್ತನ್ನು ಊರ ಗಡಿದಾಟಿಸಿ ಓಡಿಸಿಬಿಡುವರು. ಏ ಎತ್ತು ಮತ್ತೊಮ್ಮೆ ಊರೊಳಗೆ ಬರದ ಹಾಗೆ ನೋಡಿಕೊಳ್ಳುವುರ. ಏಕೆಮದರೆ ಆ ಗೂಳಿಯ ಜೊತೆಯಲ್ಲಿಯೇ ಊರಿನ ಅನಿಷ್ಟಗಳೆಲ್ಲ ಹೋಗಿಬಿಡುತ್ತದೆ ಎಂಬುದು ಬಲವಾದ ನಂಬಿಕೆ.
ಇದೀಗ ಪಲ್ಲಕ್ಕಿ ಸೇವೆಯೂ ಮೊದಲಿನ ಹಾಗೆ ಸರಳವಾಗಿಲ್ಲ. ಅದೂ ವ್ಯಾಪಾರೀಕರಣಗೊಳ್ಳುತ್ತಿದೆ. ಅಮ್ಮನ ಪೂಜೆಯ ಹಕ್ಕಿಗೆ ಪೂಜಾರಿ ಕುಟುಂಬದವರು ಕೋರ್ಟ್್ ನ ಕಟ್ಟೆ ಹತ್ತಿ ಬಂದರು. ಅಮ್ಮನ ಗರ್ಭಗುಡಿಗೆ ಎರಡೆರಡು ಬೀಗ ಜಡಿದು ಪೊಲೀಸ್ ಠಾಣೆ ಕಂಡು ಬಂದರು. ಈ ಎಲ್ಲ ಆವಾಂತರದ ನಡುವೆ ಊರಿನ ಯುವಕ ಸಂಘಗಳು ಮಧ್ಯಸ್ಥಿಕೆ ಮಾಡಿ ಸಮಿತಿಯನ್ನು ಮಾಡಿದವು. ವರ್ಷಕ್ಕೆ ಒಬ್ಬರ ಪೂಜೆಯಂತೆ ಪೂಜಾರಿ ಕುಟುಂಬಕ್ಕೆ ಹಂಚಿದವು. ಗುಡಿಯಲ್ಲಿ ನವರಾತ್ರಿ ಉತ್ಸವಗಳನ್ನು ಸಾರ್ವಜನಿಕ ಉತ್ಸವಗಳನ್ನಾಗಿ ಮಾಡಿದವು. ಪ್ರತಿಯೊಂದು ಸೇವೆಗೂ ಇಂತಿಷ್ಟು ಹಣ ಎಂದು ನಿಗದಿ ಮಾಡಿಟ್ಟವು.
ಹೀಗಾಗಿ ಅಮ್ಮನ ಪಲ್ಲಕ್ಕಿ ಸೇವೆ ಕೆಲವರಿಗೆ ಈಗ ಗಗನಕುಸುಮ. ಪಲ್ಲಕ್ಕಿ ಯಾರದಾದರೂ ಮನೆಯಲ್ಲಿ ಕೂಡಬೇಕೆಂದರೆ ಐದುನೂರು ರುಪಾಯಿ. ಗ್ರಾಮ ಸೇವೆಗೆ ಬರಬೇಕೆಂದೆ ಸಾವಿರ ರುಪಾಯಿ. ಊರ ಪ್ರದಕ್ಷಿಣೆಗೆ ಪಲ್ಲಕ್ಕಿ ಬಂದಾಗ ಇಳಿಸಿ ಪೂಜೆ ಮಾಡಿದರೆ ಐವತ್ತೊಂದು ರುಪಾಯಿ. ಕರ್ಪೂರದಾರತಿಗೆ ಒಂದು ದರ, ಕಾಯಿ ಒಡೆಸಿದರೆ ಇನ್ನೊಂದು ದರ. ಇಷ್ಟಾಗಿಯೂ ಅಮ್ಮನ ಬಗ್ಗೆ ಬೇಜಾರುಪಟ್ಟುಕೊಳ್ಳುವುದು ಇದೆಯೇ ಮಕ್ಕಳು?
ಇವತ್ತಿಗೂ ನಮ್ಮೂರಲ್ಲಿ ಪಲ್ಲಕ್ಕಿ ಬರುತ್ತಲೇ ಇದೆ. ಜನರು ವರಾಡಿ ಹಾಕಿ ಊರ ಪೂಜೆ ಮಾಡಿಯೇ ಮಾಡುತ್ತಾರೆ. ಅಮ್ಮನ ಎದುರಿಗೆ ನೋವುಗಳಿಗೆ ನುಡಿರೂಪ ಕೊಟ್ಟು ಹಗುರಾಗುತ್ತಾರೆ. ನಿರುಂಬಳದ ಬದುಕಿನ ಕನಸು ಕಾಣುತ್ತಾರೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.