ನಾನು ಒಂದು ಮರ
ನನಗೆ ಗೊತ್ತಾಗುವ ಮೊದಲೇ ಈ ಮಣ್ಣಿನೊಳಗೆ
ನನ್ನ ಬೇರು ಇಳಿಸಿ ಬಿಟ್ಟಿದ್ದೆ
ದಿನವೂ ಇಳಿಯುತ್ತಿದ್ದೇನೆ ಪಾತಾಳಕ್ಕೆ
ಮತ್ತೆ ಬೆಳೆಯುತ್ತಿದ್ದೇನೆ ಆಕಾಶಕ್ಕೆ

ಆಶೆ ತಳೆಯುತ್ತೇನೆ ಸದಾ ಹಸಿರಾಗಿರಲು
ತಳಿರಿಸಲು, ಹೂವಿಸಲು ಕನಸ ಕಾಣುವೆ
ಎಲೆಗೊಂದು ಕಾಯಿ ಪಡೆವ
ಬಯಕೆ, ಬಸಿರು ನನ್ನದು

ಆದರೆ, ನಾ ಬೆಳೆಯುತ್ತಿದ್ದಂತೆ
ಕಾಗೆ, ಗೂಗೆ, ಗಿಡುಗಗಳು
ಚೇಳು ಹಾವುಗಳೆಲ್ಲ ನನ್ನನ್ನೇರಿವೆ
ಇದಕ್ಕೂ ಭಯಂಕರ,
ಜೀವ ಕೋಶ ಕೋಶಗಳೆಲ್ಲ
ವರಲೆಗಳ ಜೀವ ಕ್ಷೇತ್ರಗಳಾಗಿ ಬಿಟ್ಟಿವೆ.

ಬೇರ ಜಾಲವ ಬೀಸಿ
ನೀರು, ಕ್ಷಾರವ ಹೀರಿಯೇ ಹೀರುತ್ತೇನೆ
ಆದರೂ, ಹೂವಿಸಿದರೂ ಫಲಿಸಲಾರದೆ
ಭ್ರೂಣಪಾತವಾದ ನೋವ
ಅನುಭವಿಸುತ್ತಲೇ ಇದ್ದೇನೆ

ಮನೆಯ ಹೆಬ್ಬಾಗಿಲಾಗುವ,
ದೇಗುಲದ ಕಂಭವಾಗುವ ನನ್ನ
ಕನಸು ನನಸಾಗುವುದೊಟ್ಟಿಗಿರಲಿ
ಸುಡುವ ಹೆಣಕ್ಕೆ ಉರುವಲಾಗಲೂ
ನಾ ನಾಲಾಯಕ್ಕು ಆಗುತ್ತಿದ್ದೇನೆ
೧೮-೩-೮೮
(ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನಿತ ಕವನ)