ಶ್ರೀಕೃಷ್ಣನ ಜನ್ಮಸ್ಥಾನ ಮಥುರಾ ಮತ್ತು ಆತನು ಆಡಿ ಬೆಳೆದ ಬೃಂದಾವನಕ್ಕೆ ನೀವು ಕಾಲಿಡುತ್ತಿದ್ದಂತೆ ಕೇಳುವುದು ಒಂದೇ ನಾಮ, ಅದು ರಾಧೆ! ಜೊತೆಯಲ್ಲಿ ಹರೇರಾಮ ಹರೇಕೃಷ್ಣ, ಕೃಷ್ಣಕೃಷ್ಣ ಹರೇಹರೇ ಎಂಬ ನಾಮ ಸಂಕೀರ್ತನ. ನಿಜ ಭಕ್ತರಿಗೆ ಮಾತ್ರ ಬೃಂದಾವನ. ಕೃಷ್ಣ-ರಾಧೆಯರ ನಾಮಸ್ಮರಣೆ ಮಾಡದ ವ್ಯಕ್ತಿ ಅಲ್ಲಿ ಇಲ್ಲವೇ ಇಲ್ಲ. ದಿನ ನಿತ್ಯವೂ ಜಾತ್ರೆ. ದೇವಾಲಯಗಳಲ್ಲಿ ನೂಕುನುಗ್ಗಲು. ಹಲವು ರೀತಿಯ ಪರಿಕ್ರಮಗಳು. ಉದ್ದಂಡ ನಮಸ್ಕಾರ ಹಾಕುತ್ತಲೇ ಪರಿಕ್ರಮ ನಡೆಸುವ ಭಕ್ತಿಯ ಪರಾಕಾಷ್ಠೆ. ವಿದೇಶಗಳಿಂದಲೂ ಭಕ್ತರ ದಂಡು. ಅವರೂ ಹರಿನಾಮ ಧರಿಸಿ, ಮೃದಂಗ, ತಾಳ ಬಾರಿಸುತ್ತ ಕೃಷ್ಣನಾಮ ಸಂಕೀರ್ತನೆಯಲ್ಲಿ ತೊಡಗುವ ಪರಿ, ಶ್ರೀಕೃಷ್ಣನ ಲೀಲೆಗಳ ಪ್ರತಿಯೊಂದು ಸ್ಥಳವನ್ನೂ ಇವತ್ತಿಗೂ ಜೋಪಾನವಾಗಿಟ್ಟುಕೊಂಡು ಅದರ ಕುರಿತು ಹೆಮ್ಮೆಯಿಂದ ಮಾತನಾಡುವ ಸ್ಥಳೀಯರು, ಕೃಷ್ಣ ಸನ್ನಿಧಿಯಲ್ಲೇ ತಮ್ಮ ಅಂತಿಮ ದಿನಗಳನ್ನು ಕಳೆಯಬೇಕು ಎಂದು ಬಯಸಿ ಬರುವ ಬದುಕಿನಂಚಿಲ್ಲಿರುವ ವೃದ್ಧರು, ಇವೆಲ್ಲ ಈ ಭೂಲೋಕದಿಂದ ನಂದಗೋಕುಲವನ್ನು ಪ್ರತ್ಯೇಕವಾಗಿಯೇ ಇರಿಸಿಬಿಡುತ್ತದೆ. ಶ್ರೀಕೃಷ್ಣನ ಬೃಂದಾವನಕ್ಕೆ ನೀವು ಕಾಲಿಟ್ಟ ಕ್ಷಣದಿಂದಲೇ ಹೆಜ್ಜೆ ಹೆಜ್ಜೆಗೂ ರಾಧೆ ನಿಮ್ಮನ್ನು ಆವರಿಸಿಕೊಂಡುಬಿಡುತ್ತಾಳೆ. ನೀವು ಬೃಂದಾವನ ಬಿಡುವ ಹೊತ್ತಿಗೆ ಅದು ರಾಧೆಯ ಬೃಂದಾವನವಾಗಿರುತ್ತದೆ. ರಾಧೆಯ ನೆಲದಲ್ಲಿ ಕೃಷ್ಣನ ಹುಡುಕಹೊರಟವರಿಗೆ ಹಲವು ವಿಸ್ಮಯಗಳು ಎದುರಾಗುತ್ತವೆ. ಪುರಾಣವನ್ನು, ಇತಿಹಾಸವನ್ನು ವರ್ತಮಾನದೊಂದಿಗೆ ತಳಕುಹಾಕುತ್ತ ಅದರ ಸಂದೇಶ ಬೋಧೆಯಾಗುತ್ತಿದ್ದಂತೆ ಮೈ ನವಿರೇಳುತ್ತದೆ. ಎಲ್ಲಿಯೋ ಪುತಿನ ಅವರ ‘ಗೋಕುಲ ನಿರ್ಗಮನ’ ಕವಿತೆಯ ಸಾಲು, ಅಕೋ ಶ್ಯಾಮ ಅವಳೇ ರಾಧೆ ನಲಿಯುತಿಹರು ಕಾಣಿರೇ | ನಾವೆ ರಾಧೆ ಅವನೇ ಶ್ಶಾಮ ಬೇರೆ ಬಗೆಯ ಮಾಣಿರೇ | ಕಿವಿಯಲ್ಲಿ ಅನುರಣಿಸುತ್ತದೆ. ರಾಧೆ ಮತ್ತು ಕೃಷ್ಣರನ್ನು ಬೇರೆಬೇರೆಯಾಗಿ ಮೊದಲು ಕಾಣುವ ನಾವು ಕ್ರಮೇಣ ನಾವೇ ರಾಧೆಯಾಗಿಬಿಡುತ್ತೇವೆ. ‘ನೋಡಿ ತಣಿಯೆ ಹಾಡಿ ತಣೆಯೆ ಲೇಸನಾಡಿ ತಣಿಯೆನೆ | ಕುಣಿದು ತಣಿಯೆ ದಣಿದು ತಣಿಯೆ ದಣಿವಿಲ್ಲದೆ ನಲಿವೆನೆ’ ಎನ್ನುತ್ತದೆ ನಿಮ್ಮ ಮನ. ಅನನ್ಯ ಶರಣಾಗತಿಯೊಂದೇ ಭಗವಂತನೆದುರು ನಮಗಿರುವ ದಾರಿ. ದಾಸ್ಯ ಪ್ರವೃತ್ತಿಯೊಂದೇ ಪ್ರಭುವನ್ನು ಒಲಿಸಿಕೊಳ್ಳುವ ಮಾರ್ಗ. ಗೋಕುಲದಲ್ಲಿ ರಾಧೆಯೊಂದಿಗೆ ಅದೆಷ್ಟೋ ಲೀಲೆಗಳನ್ನು ಪ್ರದರ್ಶಿಸಿದ ಶ್ರೀಕೃಷ್ಣ ಗೋಕುಲದಿಂದ ಮಥುರೆಗೆ ಹೋದಬಳಿಕ ಒಮ್ಮೆಯೂ ಮರಳಿ ಬರುವುದೇ ಇಲ್ಲ. ಕೇವಲ ರಾಧೆ ಏನು, ವ್ರಜ ವಾಸಿಗಳು ಯಾರೂ ಇದನ್ನು ಸಹಿಸಿಕೊಂಂಡಿಲ್ಲ. ರಾಧೆ ಮುಂದೇನಾದಳು ಎಂಬುದು ಎಲ್ಲಿಯೂ ಉಲ್ಲೇಖವಾಗಿಲ್ಲ. ಆದರೆ ವ್ರಜ ವಾಸಿಗಳು ಅವಳನ್ನು ಶ್ರೀಕೃಷ್ಣನೊಂದಿಗೆ ಪ್ರತಿಷ್ಠಾಪಿಸಿ ಆಕೆಯನ್ನು ಅಮರಳನ್ನಾಗಿ ಮಾಡಿಬಿಡುತ್ತಾರೆ. ಇವತ್ತಿನ ಬೃಂದಾವನದ ವೈಭವದಲ್ಲಿ ನಾವು ಮೈಮರೆತಾಗ, ಎಚ್.ಎಸ್.ವೆಂಕಟೇಶಮೂರ್ತಿಯವರ ಕವನದ ಸಾಲು, ‘‘ತೂಗುಮಂಚದಲ್ಲಿ ಕೂತು ಮೇಘಶ್ಯಾಮ ರಾಧೆಗಾತು ಆಡುತಿಹನು ಏನೋ ಮಾತು! ರಾಧೆ ನಾಚುತ್ತಿದ್ದಳು’’ ಕಿವಿಯಲ್ಲಿ ಅನುರಣಿಸುತ್ತದೆ. ದೃಶ್ಯ ಕಣ್ಣಿಗೆ ಕಟ್ಟುತ್ತದೆ. ಅಲ್ಲಿಯ ಹೊಟೇಲ್ಗಳಲ್ಲಿ ಹೊರಗೆ ನಿಂತಿರುವ ಕಾವಲುಗಾರ ನಮ್ಮನ್ನು ಎದುರುಗೊಂಡಾಗ ಹೇಳುವುದು, ರಾಧೇ ರಾಧೇ ಎಂದು. ಪ್ರತಿಯಾಗಿ ನಾವೂ ಆತನಿಗೆ ರಾಧೇರಾಧೇ ಎಂದು ಹೇಳಬೇಕು. ಸೈಕಲ್ ರಿಕ್ಷಾದವನು, ರಿಕ್ಷಾಗಿಂತಲೂ ಚಿಕ್ಕದಾದ ಅದೇ ರೀತಿಯ ವಾಹನ ಓಡಿಸುವವನು ಚಿಕ್ಕ ಗಲ್ಲಿಗಳಲ್ಲಿ ದಾರಿ ಬಿಡಿ ಎಂದು ನಿಮ್ಮನ್ನು ವಿನಂತಿಸಲು ಬೆಲ್ ಅಥವಾ ಹಾರ್ನ್ ಮೊಳಗಿಸುವುದಿಲ್ಲ, ರಾಧೇ ರಾಧೇ ಎಂದೇ ಕೂಗುವುದು. ನಿಮ್ಮ ಗಮನವನ್ನು ಸೆಳೆಯಲು ಅಪರಿಚಿತನೊಬ್ಬ ಕೂಗುವುದು ರಾಧೇ ರಾಧೇ ಎಂದೇ. ಗುಡ್ಮಾರ್ನಿಂಗ್ ಇಲ್ಲ, ಗುಡ್ನೈಟ್ ಇಲ್ಲ, ಅಣ್ಣಾ, ಅಯ್ಯಾ, ಮಗಾ, ಬ್ರದರ್ ಯಾವುದೂ ಇಲ್ಲ. ಎಲ್ಲದಕ್ಕೂ ರಾಧೇ ರಾಧೇ ಪರ್ಯಾಯವಾಗಿಬಿಟ್ಟಿದೆ. ಶ್ರೀಕೃಷ್ಣ ಮರೆತ ರಾಧೆಗೆ ವ್ರಜ ವಾಸಿಗಳು ನೀಡಿರುವ ಅತ್ಯುನ್ನತ ಗೌರವ ಇದಾಗಿದೆ. ನಾವಿದ್ದ ಹೊಟೇಲ್ ಹೊರಗಿನ ಕಾವಲುಗಾರ ಹೇಳಿದ್ದು, ನಾವು ವ್ರಜವಾಸಿಗಳು. ರಾಧೆಯನ್ನು ಹೇಗೆ ಬಿಡುವುದು! ಅವನ ಮಾತಿನಲ್ಲಿ ಯಾವುದೇ ಕಪಟ ಇರಲಿಲ್ಲ. ಕೃಷ್ಣ ಪೂತನಿಯನ್ನು ಕೊಂದ ತಾಣ, ಕೃಷ್ಣ ಕಾಳಿಂಗ ಮರ್ದನ ಮಾಡಿದ ತಾಣ, ಕೃಷ್ಣ ಗೋವುಗಳನ್ನು ಮೇಯಿಸುತ್ತ ಬಂದು, ಆತನ ಮತ್ತು ಆತನ ಗೋವುಗಳು ಮೂಡಿಸಿದ ಪಾದದ ಗುರುತು ಇರುವ ತಾಣ, ಹೆಜ್ಜೆಹೆಜ್ಜೆಗೂ ಕೃಷ್ಣ ಸ್ಮಾರಕಗಳು, ಬೃಂದಾವನ ಸಹಿತ ಹಲವು ಉದ್ಯಾನಗಳು ಇವೆಲ್ಲ ಅಲ್ಲಿಯ ವಿಶೇಷ. ಶ್ರೀಕೃಷ್ಣನ ಮೊಮ್ಮಗ ಅನಿರುದ್ಧನ ಮಗ ವಜ್ರನಾಭನೊಂದಿಗೆ ಈ ವ್ರಜಮಂಡಲ ತಳಕುಗೊಂಡಿದೆ. ಐದೂವರೆ ಸಾವಿರ ವರ್ಷಗಳ ಹಿಂದೆ ವಜ್ರನಾಭ ಇಲ್ಲಿ ನೆಲೆಯಾಗಿದ್ದ. ಕೃಷ್ಣನನ್ನು ಆತನೇ ಇಲ್ಲಿ ಪ್ರತಿಷ್ಠಾಪಿಸಿದ್ದ ಎಂದು ಹೇಳುತ್ತಾರೆ. ಆತನಿಂದಲೇ ಇಂದು ಇದು ವ್ರಜಮಂಡಲವಾಗಿದೆ. ———– ಪರಿಸರ ಪಾಠ ——- ಬೃಂದಾವನದಲ್ಲಿ ಪರಿಸರ ಪಾಠವಿದೆ. ಅಲ್ಲಿ ಗೋವಿಗೆ ಎಲ್ಲಿಲ್ಲದ ಮರ್ಯಾದೆ. ಮೂಲತಃ ಸ್ಥಳೀಯರು ಗೋಪಾಲಕರು. ಕಾಡು, ವನಗಳೆಲ್ಲ ಅಲ್ಲಿನವರಿಗೆ ದೈವತ್ವದ ಭಾಗವಾಗಿದೆ. ಅಲ್ಲಿ ವನಗಳ ಪರಿಕ್ರಮವೂ ಭಕ್ತಿಯ ಭಾಗವಾಗಿದೆ. ವ್ರಜ ಪರಿಕ್ರಮ ೮೪ ಕೋಶಗಳಷ್ಟಾಗುತ್ತದೆ. ಇದಕ್ಕೆ ಒಂದರಿಂದ ಎರಡು ತಿಂಗಳು ಹಿಡಿಯುತ್ತದೆ. ಗೋವರ್ಧನ ಪರಿಕ್ರಮ, ಬೃಂದಾವನ ಪರಿಕ್ರಮಗಳಿವೆ. ಕಾಲುನಡಿಗೆಯಲ್ಲಿ ಪ್ರದಕ್ಷಿಣೆ ಹಾಕುವುದೇ ಪರಿಕ್ರಮ. ನಡೆಯುವಿಕೆ ಮನುಷ್ಯನ ಆರೋಗ್ಯಕ್ಕೆ ಅತ್ಯುತ್ತಮ. ದೇವರ ಹೆಸರಿನಲ್ಲಿರುವ ವನಗಳು ವಾತಾವರಣವನ್ನು ತಂಪಾಗಿ ಶುದ್ಧವಾಗಿ ಇಟ್ಟಿವೆ. ಇಲ್ಲಿ ಸಂಚಾರಕ್ಕೆ ಸೈಕಲ್ ರಿಕ್ಷಾ ಬಳಕೆಯಲ್ಲಿದೆ. ಜೊತೆಗೆ ಬೈಕುಗಳನ್ನು ತ್ರಿಚಕ್ರ ವಾಹನಗಳನ್ನಾಗಿ ಪರಿವರ್ತಿಸಿ ರಿಕ್ಷಾದಂತೆ ಓಡಿಸಲಾಗುತ್ತಿದೆ. ಇದನ್ನು ವಿದ್ಯುತ್ ಚಾಲಿತವಾಗಿ ಪರಿವರ್ತಿಸಲಾಗಿದೆ. ಇದರಿಂದ ವಾತಾವರಣಕ್ಕೆ ಇಂಗಾಲ ಸೇರುವುದು ಕಡಿಮೆಯಾಗಿದೆ. ——— ಸ್ವಚ್ಛತೆಯ ಸಂದೇಶ ——- ಕೃಷ್ಣ ಕಾಳಿಂಗ ಮರ್ದನ ಮಾಡಿದ ಸ್ಥಳ ಈಗ ಊರಿನ ಒಳಗಿದೆ. ನದಿ ಅಲ್ಲಿಂದ ಕಿಲೋಮೀಟರಿನಷ್ಟು ದೂರದಲ್ಲಿದೆ. ಅಂದರೆ ನದಿಯ ಪಾತ್ರ ಬದಲಾಗಿದೆ, ಅಥವಾ ಅದರ ಒತ್ತುವರಿಯಾಗಿದೆ. ಕಾಳಿಂಗ ಮರ್ದನದಲ್ಲಿ ಒಂದು ಸಂದೇಶವಿದೆ. ಕಾಳಿಂಗ ಸರ್ಪ ನದಿಯನ್ನು ವಿಷಪೂರಿತ ಮಾಡಿತ್ತು. ಕೃಷ್ಣ ಅದರ ಹೆಡೆಯ ಮೇಲೆ ನರ್ತನ ಮಾಡಿ ಅದರ ವಿಷವನ್ನು ಕಕ್ಕಿಸಿ ಅದು ನದಿಯನ್ನು ಬಿಟ್ಟು ಹೋಗುವಂತೆ ಮಾಡುತ್ತಾನೆ. ಕೃಷ್ಣ ಮಾಡಿದ್ದು ನದಿಯ ಶುದ್ಧೀಕರಣ. ಯಮುನೆಯ ನೀರು ಇಂದು ಕೂಡ ಕಾಳಿಂಗನ ವಿಷದಂತೆ ಕಲುಷಿತವಾಗಿದೆ. ಯಮುನೆಯನ್ನು ನನ್ನ ಹಾಗೆ ರಕ್ಷಣೆ ಮಾಡಿ ಎಂದು ಕೃಷ್ಣ ಹೇಳುತ್ತಿರುವಂತೆ ಬೋಧೆಯಾಗುತ್ತದೆ. ——– ಇಸ್ಕಾನ್ ಕನ್ನಡಪ್ರೀತಿ ——- ಬೃಂದಾವನದಲ್ಲಿರುವ ಇಸ್ಕಾನ್ ಬೆಂಗಳೂರಿನ ಇಸ್ಕಾನ್ ಶಾಖೆಯಾಗಿದೆ. ಅದರ ಮುಖ್ಯಸ್ಥರು ಕನ್ನಡಬಲ್ಲ ಇಂಜಿನಿಯರ್ ಸುವ್ಯಕ್ತ ನರಸಿಂಹದಾಸ್ ಅವರು. ಲಕ್ನೋ ಇಸ್ಕಾನ್ ಮುಖ್ಯಸ್ಥರೂ ಹೌದು ಇವರು. ಬೆಂಗಳೂರಿನ ಇಸ್ಕಾನ್ ಶಾಖೆಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಕನ್ನಡ ಬಲ್ಲವರೇ ಮುಖ್ಯಸ್ಥರಾಗಿದ್ದಾರೆ. ರಾಜಸ್ಥಾನದಲ್ಲಿ ಸಂಪೂರ್ಣ ಹರೇಕೃಷ್ಣ ಮೂವ್ಮೆಂಟ್ನ ಉಸ್ತುವಾರಿ ರತ್ನಾಂಗದ ಗೋವಿಂದದಾಸ್, ದೆಹಲಿಯ ಭಾರತರ್ಷಭದಾಸ್, ಚೆನ್ನೈನ ಸ್ತೋಕ ಕೃಷ್ಣದಾಸ್, ಭುವನೇಶ್ವರ ಮತ್ತು ಪುರಿಯ ಅಚ್ಯುತಕೃಷ್ಣದಾಸ, ಕೋಯಿಮತ್ತೂರಿನ ರಾಧಾಕಾಂತದಾಸ ಎಲ್ಲರೂ ಕನ್ನಡ ಬಲ್ಲವರು. ಬೆಂಗಳೂರಿನ ಇಸ್ಕಾನ್ ತನ್ನಲ್ಲಿ ಸೇವೆಗೆ ಸೇರುವವರಿಗೆ ಕನ್ನಡವನ್ನು ಕಲಿಸುತ್ತದೆ. —— ವಿಖ್ಯಾತ ಕೋತಿಗಳು ———- ಬೃಂದಾವನದ ಕೋತಿಗಳು ಮನುಷ್ಯ ಸ್ನೇಹಿಗಳಾಗಿವೆ. ಅಲ್ಲಿಯ ಕೆಲವು ದೇವಸ್ಥಾನಗಳ ಬಳಿ ಹೋಗುವಾಗ ನಮ್ಮನ್ನು ಕರೆದುಕೊಂಡು ಹೋದವರು ಕನ್ನಡಕಗಳನ್ನು ತೆಗೆದು ಕಿಸೆಯಲ್ಲಿ ಇಟ್ಟುಕೊಳ್ಳಿ ಎಂದು ಎಚ್ಚರಿಕೆ ಹೇಳಿದ್ದರು. ಕೋತಿಗಳು ಕನ್ನಡಕಗಳನ್ನು ಎತ್ತಿಕೊಂಡು ಹೋಗುತ್ತವೆಯಂತೆ. ನಿಮ್ಮ ಕೈಯಲ್ಲಿ ತಿಂಡಿ, ಪ್ರಸಾದದ ಪೊಟ್ಟಣವಿದ್ದರಂತೂ ಅವು ಬಿಡುವುದೇ ಇಲ್ಲ. ಕೆಲವು ಕೋತಿಗಳು ಚಪ್ಪಲಿಯನ್ನೂ ಎತ್ತಿಕೊಂಡು ಹೋಗುತ್ತವೆ. ಹೆಣ್ಣುಮಕ್ಕಳು ಜಡೆಯಲ್ಲಿ ಹೂವನ್ನು ಮುಡಿದಿದ್ದರೆ ಅವನ್ನೂ ಬಿಡುವುದಿಲ್ಲ. ಈ ಕೋತಿಗಳನ್ನು ಯಾರೂ ಹೊಡೆಯುವುದಿಲ್ಲ. ಇವು ಜೀವಕ್ಕೆ ಅಪಾಯ ಮಾಡದಿದ್ದರೂ ಕಿರಿಕಿರಿಯನ್ನಂತೂ ಮಾಡುತ್ತವೆ. ನ್ಯಾಶನಲ್ ಜಿಯಾಗ್ರಫಿ ಚಾನೆಲ್ನವರು ಈ ಕೋತಿಗಳ ಕುರಿತೇ ಒಂದು ಸರಣಿಯನ್ನು ಸಿದ್ಧಪಡಿಸಿದ್ದರು. ———– ಕಾದಿದೆ ಅಪಾಯ —— ಸುಮಾರು ಎರಡೂವರೆ ನೂರು ವರ್ಷಗಳಲ್ಲಿ ಬೃಂದಾವನ ಕ್ರಮೇಣ ತನ್ನ ಕಾಡನ್ನು ಕಳೆದುಕೊಳ್ಳುತ್ತ ಬಂದಿದೆ. ಹಿಂದೆ ಆಳುವ ರಾಜರುಗಳು ಕೆಲಮಟ್ಟಿಗೆ ಕಾಡನ್ನು ನಾಶಮಾಡಿದರೆ ಇದೀಗ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿಯನ್ನು ನುಂಗಿಹಾಕುತ್ತಿದ್ದಾರೆ. ಬಹುಮಹಡಿ ಅಪಾರ್ಟ್ಮೆಂಟ್ಗಳು ಬೃಂದಾವನದಲ್ಲಿ ತಲೆಯೆತ್ತುತ್ತಿವೆ. ಬೃಂದಾವನ ಅಭಿವೃದ್ಧಿಪ್ರಾಧಿಕಾರವೂ ಇಲ್ಲಿದೆ. ನಗರ ಸುಧಾರಣೆ ಭರದಲ್ಲಿ ಬೃಂದಾವನದ ಮೂಲ ಸೊಗಸು ಕಳೆದುಹೋಗುವ ಅಪಾಯ ಎದುರಾಗಿದೆ. ನವಿಲುಗಳು ಕೋತಿಗಳು, ಗೋವುಗಳು ಸ್ವಚ್ಛಂದವಾಗಿ ಓಡಾಡಿಕೊಂಡಿದ್ದವು. ಇದೀಗ ನವಿಲುಗಳು ದೂರಹೋಗಿವೆ. ಅದೆಷ್ಟೋ ಅಪರೂಪದ ಕೀಟಪ್ರಪಂಚ ಕಣ್ಮರೆಯಾಗಿವೆ. ———- ಚಂದ್ರಚುಂಬಿ ಚಂದ್ರೋದಯ ಮಂದಿರ ———- ಇದು ಕಳೆದ ಶತಮಾನದ ಅರವತ್ತು ಎಪ್ಪತ್ತರ ದಶಕ. ಅಮೆರಿಕ, ರಷ್ಯಾ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನರು ಭೌತಿಕ ಸುಖಗಳನ್ನು ಮೇರೆ ಮೀರಿ ಅನುಭವಿಸಿ ಇನ್ನೂ ಮುಂದೆ ಏನಿದೆ ಏನಿದೆ ಎಂಬ ಹುಡುಕಾಟದಲ್ಲಿದ್ದರು. ಮನಸ್ಸಿಗೆ ಶಾಂತಿ ಸಿಗದೆ ಮಾದಕ ದ್ರವ್ಯಗಳ ವ್ಯಸನಕ್ಕೆ ಸಿಲುಕಿದ್ದರು. ಜೀವನದಲ್ಲಿ ಗೊತ್ತು ಗುರಿ ಇಲ್ಲದೆ ಹಿಪ್ಪಿಗಳಾಗಿ ಅಲೆಯುತ್ತಿದ್ದರು. ಅಂಥವರಿಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳ ಗುರುಪರಂಪರೆಯವರಾದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅಂತಾರಾಷ್ಟ್ರೀಯ ಶ್ರೀಕೃಷ್ಣ ಪ್ರಜ್ಞೆ ಸಂಸ್ಥೆಯನ್ನು (ಇಸ್ಕಾನ್) ನ್ಯೂಯಾರ್ಕ್ನಲ್ಲಿ ೧೯೬೬ರ ಜುಲೈ ೧೩ರಂದು ಸ್ಥಾಪಿಸಿದರು. ಆಗ ಅವರಿಗೆ ೭೦ ವರ್ಷ. ಸನಾತನ ಧರ್ಮದ ಸಾರವನ್ನು ಭಗವದ್ಗೀತೆಯ ಮೂಲಕ ಅವರು ಪ್ರಚುರಪಡಿಸಿದರು. ಕೃಷ್ಣ ಸಂದೇಶವನ್ನು ಸಾರುವುದಕ್ಕಾಗಿ ಅವರು ೧೪ ಬಾರಿ ಜಗತ್ತನ್ನು ಸುತ್ತಿದರು. ಹಲವು ಗ್ರಂಥಗಳನ್ನು ಅವರು ಬರೆದು ಪ್ರಕಟಿಸಿದರು. ವಿದೇಶದಲ್ಲಿಯೇ ಅವರು ಹತ್ತು ಸಾವಿರಕ್ಕೂ ಅಧಿಕ ಶಿಷ್ಯರನ್ನು ಸಂಪಾದಿಸಿದರು. ವಿದೇಶಕ್ಕೆ ಹೋಗುವ ಭಾರತೀಯರ ಅನುಕೂಲಕ್ಕಾಗಿ ಗೋವಿಂದಾ ರೆಸ್ಟೋರೆಂಟ್ ಪ್ರಾರಂಭಿಸಿದರು. ಬೃಂದಾವನದಲ್ಲಿಯೇ ತಮ್ಮ ಧ್ಯಾನ ಕುಟೀರವನ್ನು ಕಟ್ಟಿಕೊಂಡಿದ್ದ ಪ್ರಭುಪಾದರು, ಏನೇ ಮಾಡುವುದಿದ್ದರೂ ಅದನ್ನು ಬೃಹತ್ತಾಗಿಯೇ ಮಾಡಬೇಕು ಎಂದು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. ಶ್ರೀಕೃಷ್ಣನಿಗಾಗಿ ವಿಶೇಷವಾದುದನ್ನು ನೀಡಬೇಕು ಎಂದು ಹೇಳುತ್ತಿದ್ದರು. ಕೃಷ್ಣಜನ್ಮಸ್ಥಾನ ಅನ್ಯಧರ್ಮದವರ ದಾಳಿಗೆ ತುತ್ತಾಗಿರುವದಕ್ಕೆ ಅವರಿಗೆ ವ್ಯಸನವಿತ್ತು. ಜಗತ್ತಿನಲ್ಲಿಯೇ ಅತಿ ಎತ್ತರದ ಗಗನಚುಂಬಿ ಮಂದಿರವನ್ನು ಶ್ರೀಕೃಷ್ಣನಿಗಾಗಿ ನಿರ್ಮಿಸಬೇಕು ಎಂದು ಅವರು ಬಯಸಿದ್ದರು. ಅದೀಗ ಈಡೇರುವ ಸಮಯ ಬಂದಿದೆ. ಜಗತ್ತಿನಲ್ಲೇ ಅತಿ ಎತ್ತರದ ಕೃಷ್ಣ ಮಂದಿರ ಬೃಂದಾವನದಲ್ಲಿ ಇಸ್ಕಾನ್ ನಿರ್ಮಿಸಲಿದೆ. ಇದಕ್ಕೆ ಆಗ ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು ೨೦೧೪ರ ನವೆಂಬರ್ ೧೬ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ೨೦೨೦ರ ಸುಮಾರಿಗೆ ಇದು ಮುಗಿಯಬಹುದು. ಒಟ್ಟಾರೆ ೨೬ ಎಕರೆಯಲ್ಲಿ ಇಡೀ ವ್ರಜಮಂಡಲವನ್ನೇ ಮರು ನಿರ್ಮಿಸಲಾಗುತ್ತದೆ. ೧೨ ವನಗಳು (ದ್ವಾದಶ ಕಾನನ) ಹಣ್ಣು ತರಕಾರಿ ತೋಟಗಳು, ಅದರಲ್ಲಿ ವಿಹರಿಸುವ ಪಕ್ಷಿಗಳು, ಕೃತಕವಾಗಿ ನಿರ್ಮಿಸಿದ ಸರೋವರಗಳು, ಜಲಪಾತಗಳು ಎಲ್ಲವನ್ನೂ ಭಾಗವತ ಮತ್ತು ಕೃಷ್ಣನಿಗೆ ಸಂಬಂಧಿಸಿದ ಇತರ ಗ್ರಂಥಗಳಲ್ಲಿ ದೊರೆಯುವ ವರ್ಣನೆ ಆಧರಿಸಿ ಮರು ನಿರ್ಮಿಸಲಾಗುತ್ತದೆ. ಇಲ್ಲಿಗೆ ಬರುವ ಭಕ್ತರಿಗೆ ಕೃಷ್ಣನ ಕಾಲದ ಬೃಂದಾವನದ ಅನುಭವ ದೊರಕಿಸಿಕೊಡುವುದು ಇದರ ಉದ್ದೇಶ. ದೆಹಲಿ ಐಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಕಟ್ಟಡದ ವಿನ್ಯಾಸ ನೀಡಿದೆ. ನಾಗರೀ ಶೈಲಿಯಲ್ಲಿ ಮಂದಿರದ ನಿರ್ಮಾಣ ಮಾಡಲಾಗುತ್ತದೆ. ಇದರ ಎತ್ತರ ೭೦೦ ಅಡಿ. (೨೧೩ ಮೀಟರ್) ೭೦ ಮಹಡಿಗಳು ಅಂದಾಜು ವೆಚ್ಚ ೩೦೦ ಕೋಟಿ ರು. ಐದು ಎಕರೆ ಪ್ರದೇಶ ಪೂರ್ತಿ ಮಂದಿರ, ೫, ೪೦,೦೦೦ ಚದರ ಅಡಿ ಒಂದ ಹೆಲಿಪ್ಯಾಡ್ ೧೨ ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಒಂದು ಒಳಾಂಗಣ ಕೃಷ್ಣ- ರಾಧೆ ಮನೋರಂಜನ ಉದ್ಯಾನ ಕೃಷ್ಣ ಪರಂಪರೆ ಮ್ಯೂಸಿಯಂ ೭೦ನೆ ಮಹಡಿಯಲ್ಲಿ ದೂರದರ್ಶಕವನ್ನು ಇಟ್ಟು ಇಡೀ ಬೃಂದಾವನವನ್ನು ನೋಡುವ ವ್ಯವಸ್ಥೆ ಒಂದು ಥೀಮ್ಪಾರ್ಕ್ ಪ್ರವಾಸಿಗಳಿಗೆ ತಂಗಲು ವಸತಿಗೃಹಗಳು ರಾತ್ರಿ ಸಫಾರಿ ವ್ಯವಸ್ಥೆ
ರಾಧೆಯ ನೆಲದಲ್ಲಿ ಕೃಷ್ಣನ ಹುಡುಕಾಟ
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.
ಇದೀಗ ರಾಧೆಯ ನಾಡಿನ ಕೃಷ್ಣನ
ಹುಡುಕಾಟ ಓದಿದೆ. ವಿಸ್ತಾರವಾದ ಲೇಖನ
ಚೆನ್ನಾಗಿ ಮೂಡಿ ಬಂದಿದೆ. ಇಷ್ಟವಾಯಿತು.
ನಿಮ್ಮ ಉಳಿದ ಲೇಖನಗಳನ್ನು ಓದುವ
ಆಸಕ್ತಿ ಮೂಡಿತು.
ಧನ್ಯವಾದಗಳು ಶಿವಾನಂದರಿಗೆ