ಹೊಳೆಸಾಲಿನವರ ಜಗಳಗಳು ಕೋರ್ಟು, ಪೊಲೀಸ್ ಠಾಣೆ ಮಟ್ಟಿಲೇರಿದರೆ ಅದನ್ನು ಸುಧಾರಿಸಲು ವಕೀಲರು ಬೇಕಿತ್ತಲ್ಲವೆ, ಹೊನ್ನಾವರದಲ್ಲಿ ಖ್ಯಾತ ನಾಮರಾದ ಮೂರ್ನಾಲ್ಕು ವಕೀಲರಿದ್ದರು. ಅವರಲ್ಲಿ ಒಬ್ಬರು ಎಂ.ಎಂ.ಜಾಲಿಸತ್ಗಿ ವಕೀಲರು. ಇವರ ಕಾನೂನು ಪಾಂಡಿತ್ಯದ ಕುರಿತು ಹೊಳೆಸಾಲಿನಲ್ಲಿ ಹಲವಾರು ಕತೆಗಳು ಹರಿದಾಡುತ್ತಿದ್ದವು. ಜಾಲಿಸತ್ಗಿಯವರು ಕಾಂಗ್ರೆಸ್ ಮುಖಂಡರೂ ಹೌದು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲೇ ಅವರು ವಿದ್ಯಾರ್ಥಿಗಳಾಗಿ ಹೋರಾಟ ನಡೆಸಿದವರಂತೆ. ಒಮ್ಮೆ ಅವರು ರಾಜ್ಯ ವಿಧಾನ ಸಭೆಗೆ ಪ್ರಜಾ ಸೋಶಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯೂ ಆಗಿದ್ದರು.ಆ ಬಳಿಕವೇ ಅವರು ಕಾಂಗ್ರೆಸ್ ಪಕ್ಷ ಸೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಬಹಳ ವರ್ಷ ಕೆಲಸ ಮಾಡಿದ್ದರು. ದೇವರಾಜ ಅರಸು ಅವರ ನಿಕಟವರ್ತಿಗಳಲ್ಲಿ ಇವರೂ ಒಬ್ಬರಾಗಿದ್ದರು. ಭರ್ತಿ ಆಳಾಗಿದ್ದ ಜಾಲಿಸತ್ಗಿಯವರ ಮುಖದಲ್ಲಿ ದೊಡ್ಡದಾದ ಮೀಸೆ ಇತ್ತು. ಗಾಂಧಿ ಟೋಪಿ ಧರಿಸುತ್ತಿದ್ದರು. ಧೋತಿ, ಖಾದಿ ಬಟ್ಟೆಯ ಅಂಗಿ, ಕೋಟು ಅವರ ಸಹಜ ಉಡುಪಾಗಿತ್ತು. ಹೊಳೆಸಾಲಿನ ಯಾರ ಮನೆಯಲ್ಲಿ ಏನು ಜಗಳ ಎಂಬ ಸಣ್ಣ ವಿವರಗಳೂ ಅವರಿಗೆ ಗೊತ್ತಿರುತ್ತಿದ್ದವು. ವಾದಿಯೋ ಪ್ರತಿವಾದಿಯೋ ಇಬ್ಬರಲ್ಲಿ ಒಬ್ಬರು ಇವರ ಕಕ್ಷಿಗಾರರಾಗಿರುತ್ತಿದ್ದರು. ಇವರು ಒಂದು ದಿನ ಕೋರ್ಟಿನಲ್ಲಿ ವಾದಿಸುತ್ತಿದ್ದಾಗ ಏನೋ ಒಂದು ದಾಖಲೆ ಮನೆಯಲ್ಲಿಯೇ ಬಿಟ್ಟು ಬಂದದ್ದು ಗೊತ್ತಾಯಿತು. ಕೋರ್ಟಿಗೂ ಇವರ ಮನೆಗೂ ಐದಾರು ನಿಮಿಷದ ಕಾಲು ದಾರಿಯಾಗಿತ್ತು. ವಾದದ ನಡುವೆಯೇ ಜಡ್ಜ್ ಸಾಹೇಬರಿಗೆ, ತಮಗೆ ಜಲಬಾಧೆಯಾಗಿದೆ, ಹತ್ತು ನಿಮಿಷದ ಬಿಡುವು ಕೊಡಿ. ಮತ್ತೆ ವಾದ ಮಂಡಿಸುತ್ತೇನೆ ಎಂದು ವಿನಂತಿ ಮಾಡಿದರು. ಜಡ್ಜ್ ಒಪ್ಪಿದರು. ಇವರು ಓಡುತ್ತ ಓಡುತ್ತ ಮನೆಗೆ ಬಂದು ಆ ದಾಖಲೆ ಪತ್ರವನ್ನು ತೆಗೆದುಕೊಂಡು ಮತ್ತೆ ಕೋರ್ಟಿಗೆ ವಾಪಸಾದರು. ಕೋರ್ಟಿನಲ್ಲಿ ಆ ದಾಖಲೆಯನ್ನು ಮಂಡಿಸಿದರು. ಹಾಗೆಯೇ ಗಂಧದ ಕೊರಡನ್ನು ಅದು ಗಂಧವೇ ಅಲ್ಲ ಎಂದು ಅವರು ಸಾಬೀತು ಮಾಡಿದ್ದರು. ಒಬ್ಬರ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಗಂಧದ ತುಂಡುಗಳಿದ್ದವು ಎಂದು ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು. ಕೋರ್ಟಿನಲ್ಲಿ ಕೇಸು ನಡೆದಾಗ, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವು ಬೇರೆ ಜಾತಿಯ ಕಟ್ಟಿಗೆ. ಗಂಧದ ಕಟ್ಟಿಗೆ ಜೊತೆ ಇದ್ದು ಅವುಗಳಿಗೂ ಗಂಧದ ವಾಸನೆ ಬಂದಿದೆ ಎಂದು ವಾದಿಸಿದರು. ಕೋರ್ಟ್ ಅವರ ವಾದವನ್ನು ಒಪ್ಪಿಕೊಂಡಿತ್ತು. ಅವರ ಇಂಥ ಪ್ರತ್ಯುತ್ಪನ್ನಮತಿ ಕುರಿತು ಹೊಳೆ ಸಾಲಿನವರು ಹಲವು ಕತೆಗಳನ್ನು ಹೇಳುತ್ತಾರೆ. ಕೋರ್ಟಿನ ಆಚೆಗೆ ವಿವಾದಗಳನ್ನು ಬಗೆಹರಿಸಿಕೊಳ್ಳುವಂತೆ ಅವರು ಸಲಹೆ ನೀಡುತ್ತಿದ್ದರು. ಸಂಬಂಧಗಳು ಮುಖ್ಯ. ವಿವಾದದಿಂದ ಕೋರ್ಟು ಕಚೇರಿ ಅಲೆದಾಟವಾಗುತ್ತದೆ. ಹಣ ಖರ್ಚಾಗುತ್ತದೆ. ಸಂಬಂಧ ಹಾಳಾಗುತ್ತದೆ. ಹತ್ತು ರುಪಾಯಿಯ ಲಾಭಕ್ಕೆ ಏಕೆ ಸಾವಿರ ರುಪಾಯಿ ಖರ್ಚು ಮಾಡುತ್ತೀರಿ ಎಂದು ಕೇಳುತ್ತಿದ್ದರು. ಇಂಥ ಜಾಲಿಸತ್ಗಿ ವಕೀಲರು ತಾವು ಕೋರ್ಟಲ್ಲಿ ಕಂಡ ಒಂದು ಅಪರೂಪದ ಪ್ರಕರಣವನ್ನು ಹೇಳುತ್ತಿದ್ದರು. ಹೊಳೆಸಾಲಿನಲ್ಲಿ ಚಂದ್ರಣ್ಣ ಎನ್ನುವವರು ಒಬ್ಬರಿದ್ದರು. ಮಹಾನ್ ಬುದ್ಧಿಜೀವಿ ಎಂದು ಅವರು ಪ್ರಸಿದ್ಧರಾಗಿದ್ದರು. ಅವರು ತಮ್ಮ ಹರಯದಲ್ಲಿ ಜಾತಿ ವಿನಾಶ ಚಳವಳಿಯಲ್ಲೆಲ್ಲ ಕಾಣಿಸಿಕೊಂಡು ಮಿಂಚುತ್ತಿದ್ದರು. ಅಂತರ್ಜಾತೀಯ ವಿವಾಹವಾದರೆ ಜಾತಿ ನಾಶವಾಗುತ್ತದೆ ಎಂದು ಹೇಳುತ್ತಿದ್ದರು. ಅಂತರ್ಜಾತೀಯ ವಿವಾಹವಾದವರ ಫೋಟೋ ತೆಗೆದುಕೊಂಡು ಪತ್ರಿಕೆಯ ಕಾರ್ಯಾಲಯಕ್ಕೆಲ್ಲ ಭೇಟಿನೀಡಿ ಅದನ್ನು ಪ್ರಕಟಿಸುವಂತೆ ಕೋರಿಕೊಳ್ಳುತ್ತಿದ್ದರು. ಇಂದಿನ ಯುವಕರು ತಮ್ಮ ಕೌಟುಂಬಿಕ ರೂಢಿಗಳಿಗೆ ಜೋತುಬೀಳದೆ ಹೊಸತನವನ್ನು ಅಪ್ಪಿಕೊಳ್ಳಬೇಕು ಎಂದು ವೇದಿಕೆಗಳಲ್ಲಿ ಭಾಷಣ ಮಾಡುತ್ತಿದ್ದರು. ತಮಗೆ ಅರಿವು ಮೂಡುವ ಮೊದಲೇ ತಮ್ಮ ಹೆಗಲಿಗೆ ಜೋತುಬಿದ್ದಿದ್ದ ಜನಿವಾರವನ್ನು ಅವರು ಸಾರ್ವಜನಿಕ ಸಭೆಯೊಂದರಲ್ಲಿ ಕಿತ್ತುಹಾಕಿ, ನಾನು ಇವತ್ತು ಎಲ್ಲ ಬಂಧನಗಳಿಂದ ಮುಕ್ತನಾದ ಸ್ವತಂತ್ರ ಪಕ್ಷಿ ಎಂದು ಘೋಷಿಸಿಕೊಂಡಿದ್ದರು. ಶಾಕಾಹಾರಿಯಾಗಿದ್ದ ಅವರು ಸಾರ್ವಜನಿಕವಾಗಿ ಮಾಂಸ ಸೇವಿಸಿ ಪ್ರಗತಿಪರ ಅನ್ನಿಸಿಕೊಂಡಿದ್ದರು. ಆಹಾರ ಎನ್ನುವುದು ವ್ಯಕ್ತಿಯ ಆಯ್ಕೆ. ವ್ಯಕ್ತಿ ತಿನ್ನುವ ಆಹಾರದ ಮೇಲಿಂದ ಆತನ ಸಾಮಾಜಿಕ ಸ್ಥಾನಮಾನಗಳನ್ನು ನಿರ್ಧಾರ ಮಾಡುವುದು ಸಂವಿಧಾನದ ಪ್ರಕಾರ ಅಪರಾಧ ಎನ್ನುತ್ತಿದ್ದರು. ನನ್ನ ಇಷ್ಟದ ಊಟವನ್ನು ನಾನು ಮಾಡುತ್ತೇನೆ. ಅದನ್ನು ಕೇಳುವುದಕ್ಕೆ ಬೇರೆಯವರಿಗೆ ಯಾವುದೇ ಅಧಿಕಾರವಿಲ್ಲ ಎನ್ನುತ್ತಿದ್ದರು. ಭಾರತದ ಸಂವಿಧಾನವನ್ನು ಅವರು ಚೆನ್ನಾಗಿ ಓದಿಕೊಂಡಿದ್ದರು. ತಮ್ಮ ಪ್ರತಿಯೊಂದು ಮಾತಿಗೂ ಸಂವಿಧಾನದ ಯಾವುದೋ ಕಲಂ ಅನ್ನು ಅವರು ಸಮರ್ಥನೆಗಾಗಿ ನೀಡುತ್ತಿದ್ದರು. ಯಾವುದೋ ತೀವ್ರವಾದ ಆಂತಕದಲ್ಲಿದ್ದವರಂತೆ ಭಾವತೀವ್ರತೆಯಿಂದ ಅವರು ಮಾತನಾಡುತ್ತಿದ್ದರು. ಕಣ್ಣಾಲಿಗಳಲ್ಲಿ ನೀರು ಪಸೆಗಟ್ಟುತ್ತಿದ್ದುದರಿಂದ ಅವರ ಕಣ್ಣುಗಳು ಹೊಳೆಯುತ್ತಿದ್ದವು. ಒಂದು ಆಳವಾದ ಆಪ್ತತೆ ಎದುರು ಕುಳಿತವರಿಗೆ ಬೋಧೆಯಾಗಿ ವಶೀಕರಣಕ್ಕೆ ಒಳಗಾದವರಂತೆ ಇವರ ಮಾತನ್ನು ಅನುಮೋದಿಸುತ್ತಿದ್ದರು. ಹೊಳೆಸಾಲಿನಲ್ಲಿ ಅವರ ಅಭಿಮಾನಿಗಳ ಒಂದು ಪಡೆಯೇ ಹುಟ್ಟಿಕೊಂಡಿತ್ತು. ಯಾವುದಾದರೂ ಸಾರ್ವಜನಿಕ ಸಭೆಗಳಿದ್ದರೆ ಅವರಿಗೆ ವಿಶೇಷ ಆಮಂತ್ರಣವಿರುತ್ತಿತ್ತು. ವೇದಿಕೆಯ ಮುಂದೆ ಜನರನ್ನು ಕಂಡ ಕೂಡಲೇ ಅವರಿಗೆ ಮೈಯಲ್ಲಿ ಆವೇಶ ತುಂಬಿಕೊಳ್ಳುತ್ತಿತ್ತು. ತಮ್ಮ ಎಲ್ಲ ವಿಚಾರಗಳನ್ನು ಅವರು ಹರಿಯಬಿಡುತ್ತಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ಹೊಳೆಸಾಲಿನ ಲೋಹಿಯಾ ಎಂದು ಅವರ ಆಪ್ತ ವಲಯದವರು ಗುಂಡು ಪಾರ್ಟಿಗಳಲ್ಲಿ ಹೊಗಳುತ್ತಿದ್ದರು. ಇಂಥ ಒಂದು ಗುಂಡುಪಾರ್ಟಿಯಲ್ಲಿರುವಾಗಲೇ ಒಂದು ದಿನ ಅಚಾತುರ್ಯ ನಡೆದುಹೋಗುತ್ತದೆ. ಸದಾ ಅವರ ಜೊತೆ ಇರುತ್ತಿದ್ದ ನಾಲ್ಕೈದು ಜನರೊಂದಿಗೆ ಅವರು ಗುಂಡುಹಾಕಿ ನಂತರ ಊಟ ಮಾಡುತ್ತಿರುತ್ತಾರೆ. ಬಿಸಿಬಿಸಿ ಪಕೋಡಾ, ಒಂದಿಷ್ಟು ವಿಸ್ಕಿ. ಪೆಗ್ ಮೇಲೆ ಪೆಗ್. ಚಂದ್ರಣ್ಣಗೆ ಪಕೋಡಾ ರುಚಿ ಎನಿಸಿತು. ಎದುರಿಗೆ ಕುಳಿತ ವಿಲ್ಸನ್ಗೆ ಕೇಳಿದರು, ಎಂಥ ಇದು, ಚಲೋ ರುಚಿ ಇದೆ, ಮೊದ್ಲು ಯಾವತ್ತೂ ಇಷ್ಟು ರುಚಿ ಮಾಡಿರಲಿಲ್ಲ ! ವಿಲ್ಸನ್, ಹೇಳಬೇಕೋ ಬೇಡವೋ ಎಂದು ತುಸು ಗೊಂದಲದಲ್ಲಿ ಬಿದ್ದರು. ಕೊನೆಗೆ ಹೇಳಿದರು, ಚಂದ್ರಣ್ಣ, ಇದು ಬೀಫ್ ಪಕೋಡಾ. ಈ ಬಾರ್ನಲ್ಲಿ ಮಾತ್ರ ಸಿಗುತ್ತೆ. ಚಂದ್ರಣ್ಣನ ಮುಖ ವಿಕಾರವಾಯಿತು. ಮೈ ಬೆವರಿತು. ಕೈ ಬೆರಳುಗಳು ಸೆಟೆದುಕೊಳ್ಳಲಾರಂಭಿಸಿದವು. ಚಂದ್ರಣ್ಣನ ಕೈ ಫೋರ್ಕ್ಅನ್ನು ಗಟ್ಟಿಯಾಗಿ ಹಿಡಿದುಕೊಂಡಿತು. ಅವರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುವಷ್ಟರಲ್ಲಿ ಫೋರ್ಕ್ ವಿಲ್ಸನ್ ಅವರ ಕುತ್ತಿಗೆಯನ್ನು ಎರಡು ಮೂರು ಬಾರಿ ಇರಿದಿತ್ತು. ನನ್ ಮಗ್ನೆ, ಬೀಫ್ ಅಂತ ಮೊದ್ಲೇ ಹೇಳಬಾರದಿತ್ತೆ? ನಾನು ಬೀಫ್ ತಿಂತಾ ಇರ್ಲಿಲ್ಲ. ಮೋಸ ಮಾಡ್ಬಿಟ್ಟೆಯಲ್ಲೋ ಎಂದು ಒದರಾಡಿದರು. ಅವರ ಹೊಡೆತಕ್ಕೆ ವಿಲ್ಸನ್ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು. ಚಂದ್ರಣ್ಣ ಜೈಲಿಗೂ ಹೋಗಿದ್ದರು. ಮದ್ಯದ ಅಮಲಿನಲ್ಲಿ ನಡೆದ ಕೊಲೆ ಎಂದು ಶಿಕ್ಷೆಯ ಪ್ರಮಾಣ ಕಡಿಮೆಯಾಗಿ ಕೆಲವೇ ವರ್ಷಗಳಲ್ಲಿ ಅವರು ಹೊರಬಂದರು. ಆದರೆ ಮತ್ತೆಂದೂ ಅವರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದನ್ನೆಲ್ಲ ಹೇಳಿದ ಮೇಲೆ ವಕೀಲರು ಕೇಳುತ್ತಿದ್ದರು, ಅದು ವಿಲ್ಸನ್ ಅವರ ಕೊಲೆಯೋ ಇಲ್ಲ ಚಂದ್ರಣ್ಣನ ಆತ್ಮಹತ್ಯೆಯೋ? ಮನುಷ್ಯನನ್ನು ತೀವ್ರವಾಗಿ ಹಿಡಿದಿಟ್ಟಿರುವುದು ಯಾವುದು? ತಾನು ಓದಿ ಸಂಪಾದಿಸಿದ ಜ್ಞಾನದಿಂದ ರೂಪಿಸಿಕೊಂಡ ಜೀವನ ಶೈಲಿಯೋ ಅಥವಾ ಹುಟ್ಟಿನಿಂದ ಬಂದಿರುವ ಅಂತರಂಗದಲ್ಲಿ ಸುಪ್ತವಾಗಿರುವ ನಂಬಿಕೆಯೋ?
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.