ಇದು ಎಂದಿನ ಭಾನುವಾರವಲ್ಲ. ಕಲಬುರ್ಗಿಯವರ ಹತ್ಯೆಯ ಸುದ್ದಿಯನ್ನು ಸಿದ್ದಣ್ಣನವರ ಹೇಳುತ್ತಿದ್ದಂತೆಯೇ ಒಂದು ಕ್ಷಣ ಕಂಪಿಸಿದೆ. ಬಹುಶಃ ಕಲಬುರ್ಗಿಯವರ ಎಲ್ಲ ಶಿಷ್ಯಕೋಟಿಯ ಸ್ಥಿತಿಯೂ ಅದೇ ಆಗಿರಬಹುದು. ನೆನಪುಗಳು ಕಳೆದ ಶತಮಾನದ ೮೦ರ ದಶಕಕ್ಕೆ ಜಾರಿತು. ೮೩-೮೫ರ ಅವಧಿಯಲ್ಲಿ ಅವರು ಕವಿವಿಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿದ್ದರು. ಅದೇ ಅವಧಿಯಲ್ಲಿ ನಾನು ಕೂಡ ಅಲ್ಲಿ ಎಂ.ಎ.ವಿದ್ಯಾರ್ಥಿಯಾಗಿದ್ದೆ. ಅದೇ ವರ್ಷದಿಂದ ವಿವಿಧ ಡೀನ್ಗಳಿಗೆ ಎರಡು ವರ್ಷಗಳ ರೊಟೇಶನ್ ಪದ್ಧತಿ ಆರಂಭವಾಗಿತ್ತು. ಇವರಿಗಿಂತ ಮೊದಲು ಎಸ್.ಎಂ.ವೃಷಭೇಂದ್ರಸ್ವಾಮಿಯವರು ವಿಭಾಗದ ಮುಖ್ಯಸ್ಥರಾಗಿದ್ದರು. ಹೊಸ ಪದ್ಧತಿಯಿಂದಾಗಿ ವೃಷಭೇಂದ್ರ ಸ್ವಾಮಿಯವರು ತಮ್ಮ ಶಿಷ್ಯನ ನಾಯಕತ್ವದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಬಂತು. ಇದರಿಂದ ಒಂದು ರೀತಿಯ ಒಳಗುದಿ, ಗುಂಪುಗಾರಿಕೆ ಅಧ್ಯಯನಪೀಠದಲ್ಲಿತ್ತು. ಯಾರ ಛೇಂಬರಿಗೆ ಯಾರು ಬಹಳ ಸಲ ಹೋದರೆ ಏನಾದರೂ ಹಣೆಪಟ್ಟಿ ಕಟ್ಟಿಬಿಡುತ್ತಾರೋ ಎಂಬ ಆತಂಕ ವಿದ್ಯಾರ್ಥಿಗಳಲ್ಲಿತ್ತು. ಕಲಬುರ್ಗಿ ಸರ್ ವಿದ್ವತ್ತಿನ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೂ ಗೌರವವಿತ್ತು. ಅವರು ಸಮಯಪಾಲನೆಯಲ್ಲಿ ಅಪ್ಟುಡೇಟ್. ಗಂಟೆಯ ಅನುರಣನ ಇನ್ನೂ ಮುಗಿಯುವ ಮೊದಲೇ ಕ್ಲಾಸ್ರೂಮಿನ ಬಾಗಿಲಲ್ಲಿ ಅವರು ಹಾಜರಾಗುತ್ತಿದ್ದರು. ಮೊದಲ ಪಿರಿಯಡ್ ವೃಷಭೇಂದ್ರ ಸ್ವಾಮಿಯವರದ್ದು. ಅವರು ಕಾವ್ಯಮೀಮಾಂಸೆಯನ್ನು ಹೇಳುತ್ತಿದ್ದರು. ಕಲಬುರ್ಗಿ ಸರ್ ಬಂದು ಬಾಗಿಲು ಕಟ್ಕಟ್ ಮಾಡಿದ ಕೂಡಲೆ ಇವರಿಗೆ ಇರುಸುಮುರಿಸು. ತಮ್ಮ ದಫ್ತರನ್ನು ಮಡಚಿಕೊಂಡು ಅವರು ಹೋಗುತ್ತಿದ್ದರು. ಇವರು ಒಳಗೆ ಪ್ರವೇಶಿಸುತ್ತಿದ್ದರು. ಮೊದಲ ವರ್ಷ ನಮಗೆ ಛಂದಸ್ಸು ಹಾಗೂ ಎರಡನೆ ವರ್ಷ ಸಂಶೋಧನೆ ಹಾಗೂ ಗ್ರಂಥಸಂಪಾದನೆಯನ್ನು ಅವರು ಬೋಧಿಸುತ್ತಿದ್ದರು. ಅವರ ಕಂಠ ಸಿರಿ ಅಪೂರ್ವವಾಗಿತ್ತು. ತ್ರಿಪದಿಗಳನ್ನು ಅವರು ಅದ್ಭುತವಾಗಿ ಹಾಡುತ್ತಿದ್ದರು. ಕಲಿಸುವಾಗ ಹಲವು ಉದಾಹರಣೆ ಪದ್ಯಗಳನ್ನು ಅವರು ಹೇಳುತ್ತಿದ್ದರು. ಯಾವುದನ್ನೂ ಅವರು ನೋಡಿಕೊಂಡು ಹೇಳುತ್ತಿರಲಿಲ್ಲ. ಅವೆಲ್ಲ ಅವರ ನಾಲಿಗೆಯ ತುದಿಯಲ್ಲಿಯೇ ಇರುತ್ತಿದ್ದವು. ಸಂಶೋಧನೆ ಎಂದರೆ ಅಲ್ಪ ವಿರಾಮದಿಂದ ಪೂರ್ಣ ವಿರಾಮದ ಕಡೆ ಮಾಡುವ ಮಾಡುವ ಪಯಣ. ಸಂಶೋಧಕ ಹೇಳಿದ್ದು ತಪ್ಪಾಗಬಹುದು, ಆದರೆ ಆತ ಉದ್ದೇಶಪೂರ್ವಕ ಸುಳ್ಳನ್ನು ಹೇಳಲಾರ ಎನ್ನುತ್ತಿದ್ದರು. ನಿಂತುಹೋಗಿದ್ದ ‘ವಿದ್ಯಾರ್ಥಿ ಭಾರತಿ’ ತ್ರೈಮಾಸಿಕವನ್ನು ಮತ್ತೆ ಆರಂಭಿಸಿ ವಿದ್ಯಾರ್ಥಿಗಳ ಪ್ರತಿಭೆ ಹೊರಬರುವುದಕ್ಕೆ ಅವರು ಕಾರಣರಾದರು. ಸಮಕಾಲೀನ ವಿದ್ವಾಂಸರನ್ನೆಲ್ಲ ಅಧ್ಯಯನ ಪೀಠಕ್ಕೆ ಕರೆಯಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ನಾನು ಅಂತಿಮ ವರ್ಷದ ಎಂ.ಎ.ದಲ್ಲಿದ್ದಾಗ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿದ್ದೆ. ಅವರ ಅನುಮತಿಯನ್ನು ಪಡೆಯದೆಯೇ ಧಾರವಾಡಕ್ಕೆ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಕಲಾವಿದರನ್ನು ಅಧ್ಯಯನ ಪೀಠಕ್ಕೆ ಆಹ್ವಾನಿಸಿದ್ದೆ. ನಂತರ ಹೇಳಿದಾಗ ಅವರಿಗೆ ಕೋಪವೂ ಬಂತು. ಕೊನೆಗೆ, ಅವರ ಭಾಷಣ ಕೇಳುವುದು ಬೇಡ. ಅವರಿಂದ ತಾಳಮದ್ದಳೆಯನ್ನು ಮಾಡಿಸೋಣ ಎಂದರು. ಕಲಬುರ್ಗಿ ಸರ್ ಅದುವರೆಗೂ ತಾಳಮದ್ದಳೆಯನ್ನು ನೋಡಿರಲಿಲ್ಲ. ಚಿಟ್ಟಾಣಿ ರಾಮಚಂದ್ರ ಹೆಗಡೆ, ಪಿ.ವಿ.ಹಾಸ್ಯಗಾರ ಕಲಾವಿದರು, ಕೃಷ್ಣಯಾಜಿ ಚಂಡೆ, ಸುಬ್ರಹ್ಮಣ್ಯ ಧಾರೇಶ್ವರ ಭಾಗವತರು. ಕೊನೆಯಲ್ಲಿ ಕಲಾವಿದರನ್ನು ಅಭಿನಂದಿಸಿ ಮಾತನಾಡಿದ ಕಲಬುರ್ಗಿ ಸರ್, ತಾಳಮದ್ದಳೆಗೆ ಕಾರಣನಾದ ನನ್ನನ್ನೂ ಅಭಿನಂದಿಸಿದ್ದರು. ಪ್ರತಿಭೆಯನ್ನು ಮೊಳಕೆಯಲ್ಲೇ ಗುರುತಿಸುವ ಶಕ್ತಿ ಅವರಲ್ಲಿತ್ತು. ಅದನ್ನು ಎಲ್ಲರೆದುರೂ ಹೇಳುತ್ತಿದ್ದರು. ಹಾಗೆಯೇ ಅವರು ನಿಷ್ಠುರ ಶಿಸ್ತಿನವರು. ಅವರಲ್ಲಿ ಪಿಎಚ್.ಡಿ.ಗೆ ನೊಂದಣಿ ಮಾಡಿಸುವುದೆಂದರೇ ಹೆಚ್ಚುಗಾರಿಕೆಯಾಗಿತ್ತು. ಹಾಗೆ ಒಬ್ಬರು ಅವರಲ್ಲಿ ನೊಂದಣಿ ಮಾಡಿಸಿಕೊಂಡು ಹಾಗೇ ಕಾಲಯಾಪನೆ ಮಾಡುತ್ತಿದ್ದರು. ಹೇಳುವಷ್ಟು ಹೇಳಿದರು. ಕೊನೆಗೆ ಸಾಧ್ಯವಿಲ್ಲ ಎಂದು ಅವರ ನೊಂದಣಿಯನ್ನೇ ರದ್ದುಮಾಡಲು ಶಿಫಾರ್ಸು ಮಾಡಿದ್ದರು. ಅವರು ಹಂಪಿ ಕನ್ನಡ ವಿವಿಯಲ್ಲಿ ಕುಲಪತಿಗಳಾಗಿದ್ದಾಗಲೇ ನಾನು ಮೋಹನ ಕುಂಟಾರ್ ಅವರಲ್ಲಿ ಪಿಎಚ್.ಡಿ. ನೊಂದಣಿ ಮಾಡಿಸಿದ್ದೆ. ಎಂ.ಎ. ಮುಗಿದ ಮೇಲೆ ನಾನೊಂದು ಕವನ ಅವರ ಮೇಲೆ ಬರೆದಿದ್ದೆ. ಅದು ನನ್ನ ‘ಅವಸ್ಥೆ’ ಸಂಕಲನದಲ್ಲಿ ಪ್ರಕಟವಾಗಿತ್ತು. ಅವರಿಗೆ ಅದು ತುಂಬಾ ಇಷ್ಟವಾಗಿತ್ತು. ನಾನು ಎಲ್ಲಿಯೇ ಭೆಟ್ಟಿಯಾದರೂ, ಇವನು ನನ್ನ ಶಿಷ್ಯ. ನನ್ನ ಮೇಲೆ ಇವನೊಂದು ಕವನ ಬರೆದಿದ್ದ ಎಂದು ಹೇಳುತ್ತಿದ್ದರು. ಎರಡು ತಿಂಗಳ ಹಿಂದೆ ಕೂಡ ನಮ್ಮ ಕಚೇರಿಗೆ ಬಂದಿದ್ದರು. ಆಗಲೂ ಅವರು, ಇವ ನಮ್ಮ ಹುಡುಗ ಎಂದು ಹೇಳಿ, ನಾನು ಅವರ ಮೇಲೆ ಬರೆದ ಕವನದ ಸಾಲುಗಳನ್ನು ನೆನಪಿನಿಂದ ಹೇಳಿದ್ದರು. ತೆರಳುವಾಗ ನಾನು ಸ್ವಲ್ಪ ಹಿಂದೆಯೇ ಉಳಿದೆ. ಅವರೇ ಕರೆದು, ನಿನ್ನ ಹೆಗಲ ಮೇಲೆ ಕೈ ಹಾಕಲಿಲ್ಲ, ಬಾ ಎಂದು ಕರೆದರು. ಹತ್ತಿರ ಹೋದಾಗ ಪ್ರೀತಿಯಿಂದ ಹೆಗಲ ಮೇಲೆ ಕೈ ಹಾಕಿದರು. ಅವರ ಪ್ರೀತಿಗೆ ನನ್ನ ಕಣ್ಣು ತುಂಬಿ ಬಂದಿತ್ತು. ಹೆಗಲ ಮೇಲಿನ ಅವರ ಕೈ ಭಾರದ ಬಿಸಿ ನನ್ನ ಕೊನೆ ವರೆಗೂ ಇರಲಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.