ನಮ್ಮ ಪುರಾಣದಲ್ಲಿ ಚಂದ್ರ ಒಬ್ಬ ಖಳನಾಯಕ, ಗುರುದ್ರೋಹಿ. ತನ್ನ ಗುರು ಬೃಹಸ್ಪತಿಯ ಪತ್ನಿಯನ್ನೇ ಅಪಹರಿಸಿ ಇಟ್ಟುಕೊಂಡವನು ಅವನು. ಈತನಿಗೆ ಇಪ್ಪತ್ತೇಳು ಪತ್ನಿಯರೂ (ದಕ್ಷನ ಪುತ್ರಿಯರು) ಇದ್ದರು. ಈ ಚಂದ್ರ ತನ್ನ ಮೋಹಕ ರೂಪದಿಂದಾಗಿಯೇ ಪ್ರೇಮಿಗಳಲ್ಲಿ ಕಾಮನೆಗಳನ್ನು ಕೆರಳಿಸಬಲ್ಲ. ಆತನ ಬೆಳದಿಂಗಳು, ತಂಪುಗಾಳಿ ಮನದಲ್ಲಿ ಪ್ರೇಮದ ಬೀಜಗಳು ಮೊಳೆಯುವುದಕ್ಕೆ ಪೂರಕವಾದವು. ಈ ಕಾರಣಕ್ಕೇ ಇರಬೇಕು ಪ್ರೀತಿ ಎಂಬುದು ಚಂದ್ರನ ದಯೆ ಎಂದು ಕೆಲವರು ಭಾವಿಸುವುದು. ಎಸ್.ಎಫ್. ಯೋಗಪ್ಪನವರ್ ತಮ್ಮ ಹೊಸ ಕಾದಂಬರಿಗೆ ‘ಪ್ರೀತಿ ಎಂಬುದು ಚಂದ್ರನ ದಯೆ’ ಎಂದೇ ಹೆಸರಿಟ್ಟಿದ್ದಾರೆ. ಲೇಖಕರ ವರ್ಣನಾಶಕ್ತಿ, ಕಲ್ಪನಾಪ್ರತಿಭೆ, ನವಿರೇಳಿಸುವ ತಣ್ಣಗಿನ ಶೈಲಿ, ಜೋಗುಳ ಹಾಡುವಹಾಗಿನ ಕಥನ ಕಲೆಯಿಂದಾಗಿ ಓದುಗನನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಇದನ್ನು ಅವರು ಕಾದಂಬರಿ ಎಂದು ಕರೆದಿರುವ ಕಾರಣಕ್ಕೆ ನಾವು ಕಾದಂಬರಿ ಎಂದು ಓದಿಕೊಳ್ಳುತ್ತೇವೆ ಅಷ್ಟೇ. ಇಲ್ಲದಿದ್ದರೆ ಇದು ಪ್ರತ್ಯೇಕವಾದ ಕವಿತೆಗಳು ಅನಿಸಿಕೊಳ್ಳುವಷ್ಟು ಗದ್ಯಗಂಧಿಯಾಗಿದೆ. ಅಧ್ಯಾಯಗಳೂ ಪುಟ್ಟಪುಟ್ಟವು. ಇದರಲ್ಲಿರುವುದು ಒಂದೇ ವಾಕ್ಯಗುಚ್ಛದ ಕತೆ. ಕಾದಂಬರಿಯಲ್ಲಿಯ ನಿರೂಪಕಿ – ಅವಳೇ ನಾಯಕಿ- (ಅವಳ ಹೆಸರು ಎಲ್ಲಿಯೂ ಉಲ್ಲೇಖಗೊಂಡಿಲ್ಲ) ಮೋಹನ ಎಂಬವನನ್ನು ಗಾಢವಾಗಿ ಪ್ರೀತಿಸಿ ತನ್ನನ್ನು ಅವನಿಗೆ ಸರ್ವರೀತಿಯಿಂದಲೂ ಅರ್ಪಿಸಿಕೊಂಡುಬಿಟ್ಟವಳು. ಆದರೆ ಈ ಮೋಹನ ಅವಳಿಗೆ ಕೈಕೊಟ್ಟು ಬೇರೆಯವಳನ್ನು ಮದುವೆಯಾಗುತ್ತಾನೆ. ಆದರೆ ಅವನಿಗೆ ಅಲ್ಲಿ ಯಾವುದೇ ಸುಖ ಸಿಕ್ಕುವುದಿಲ್ಲ. ಅವಳು ಸತ್ತ ಮೇಲೆಯೇ ಅವನ ಆತ್ಮನಿವೇದನೆಯ ಒಂದು ಅಧ್ಯಾಯ ಮಾತ್ರ ಇರುವುದು. ಪ್ರಿಯತಮನ ಹೆಂಡತಿಯ ಆತ್ಮನಿವೇದನೆಯ ಒಂದು ಅಧ್ಯಾಯವೂ ಇಲ್ಲಿದೆ. ಈ ನಡುವಿನದು ಮಾತ್ರ ಲೇಖಕರ ಕಥನ ವೈಭವ, ವರ್ಣನ ವೈಖರಿ, ಭಾಷಾ ಪ್ರೌಢಿಮೆಯಿಂದಾಗಿ ಚಂದಿರನ ಬೆಳದಿಂಗಳ ರಾತ್ರಿಯ ಹಬ್ಬದೂಟ. ಅರ್ಧ ವಾಸ್ತವದೊಂದಿಗೆ ಅರ್ಧ ಕಲ್ಪನೆಯೊಂದಿಗೆ, ಅರ್ಧ ಎಚ್ಚರದಲ್ಲಿ ಇನ್ನರ್ಧ ಕನಸಿನಲ್ಲಿ ರೆಕ್ಕೆ ಪಡೆದುಕೊಳ್ಳುವ ಕಥನದ ಓಘ ಹಗ್ಗ ಬಿಚ್ಚಿದ ಅಶ್ವಮೇಧದ ಕುದುರೆಯಂತೆ ಸಿಕ್ಕಸಿಕ್ಕಲ್ಲಿ ಚಲಿಸುತ್ತದೆ. ಕೆಲವು ಅಧ್ಯಾಯಗಳಂತೂ ಅನಗತ್ಯವೆಂದು ಆ ಓದಿನ ಕ್ಷಣಕ್ಕೆ ಅನಿಸಿದರೂ ಇಡೀ ಕಾದಂಬರಿಯನ್ನು ಒಟ್ಟಾಗಿ ಪರಿಭಾವಿಸಿದಾಗ ಕುವೆಂಪು ರಾಮಾಯಣದ ಮಹೋಪಮೆಗಳಂತೆ ಕಥಾವಸ್ತುವಿನಲ್ಲಿ ಸಂಗತವಾಗಿಬಿಡುತ್ತವೆ. ಇಡೀ ಕಾದಂಬರಿ ರೂಪಕಾತ್ಮಕವಾಗಿ ಒಂದು ಬೆಚ್ಚಗಿನ ಅನುಭವವನ್ನು ಕೊಡುತ್ತದೆ. ಯೋಗಪ್ಪನವರ್ ಅವರ ಅನನ್ಯ ಶೈಲಿ ನಿಮ್ಮನ್ನು ಹಿಡಿದಿಡುತ್ತದೆ. ಹೆಣ್ಣು ಗಂಡಿನ ಸಂಬಂಧದ ಶೋಧ ಕಾದಂಬರಿಯ ಚೌಕಟ್ಟಿನಲ್ಲಿ ನಡೆದಿದೆ. ಪ್ರೀತಿಸಿದ್ದು ಒಬ್ಬಳನ್ನು, ಮದುವೆಯಾಗಿದ್ದು ಇನ್ನೊಬ್ಬಳನ್ನು. ಈ ಸಂಸಾರದಲ್ಲಿ ಸಮರಸ ಎನ್ನುವುದು ಎಲ್ಲಿಂದ ಬರುವುದು ಸಾಧ್ಯ? ಇಲ್ಲಿರುವುದು ವ್ಯಾಧಿ. ವ್ಯಾಧಿಯ ಜೊತೆ ಸಂಧಾನ ಮಾಡಿಕೊಳ್ಳುವವರಿಗೆ ಸಂತೋಷವೂ ಇದೆ. ಊರಿಗೆ ಹಲವು ದಾರಿ ಇರುವಂತೆ ಬದುಕಿನ ಅರ್ಥ ಕಂಡುಕೊಳ್ಳುವ ಮಾರ್ಗವೂ ಹಲವು. ಕಥಾನಾಯಕಿಯ ಹೆಸರು ನಮಗೆ ಗೊತ್ತಿಲ್ಲ ಎಂದು ಚಿಂತಿಸುವುದು ಬೇಡ. ಶ್ಯಾವಂತ್ರವ್ವತ್ತಿಯ ವರ್ಣನೆಯು ಅವಳನ್ನು ನಿಮ್ಮೆದುರು ಮೂರ್ತಿಯನ್ನಾಗಿ ಕಟೆದು ನಿಲ್ಲಿಸುತ್ತದೆ. ಅವಳು ಇವಳ ಪ್ರಿಯಕರ ಮೋಹನನಿಗೆ ಹೇಳುವ ಮಾತುಗಳು ಇವು: ‘‘ತಮ್ಮ, ಆ ಹುಡುಗಿ ಸಾಕ್ಷಾತ್ ಪರಮಾತ್ಮನ ಮಗಳು. ಅಕಿನ್ನ ಆಟ ಆಡೋ ವಸ್ತು ಎಂದು ತಿಳಿಬ್ಯಾಡ. ಆಕೆಯ ಚೆಲುವಿನ ಮುಂದ ಭೂದೇವಿ ಕೂಡ ನಾಚಿ ನಿಲ್ಲತಾಳ. ಆಕೆ ನಮ್ಮ ತೋಟದ ನಿಂಬೆ ಹಣ್ಣಿನ ಫಸಲು. ಯಾವಾಗಾದ್ರು ಬನಶಂಕರಮ್ಮನ ದರ್ಶನ ಮಾಡಿಕೊಂಡಿಯೇನು? ಆ ದೇವಿಯಲ್ಲಿರಲಾರದ ಚೆಲುವು ಈ ನನ್ನವ್ವನಲ್ಲಿದೆ. ಈಕಿನ್ನ ಬರಿ ಹುಡುಗಿಯಂತ ತಿಳಿಬ್ಯಾಡ, ಸಮುದ್ರ ಕಡದಾಗ ಹುಟ್ಟಿದ ಅಮೃತ ಇದು. ಹ್ಯಾಗೂ ಪ್ರೀತಿ ಮಾಡಿ, ಆದಷ್ಟು ಬೇಗ ಮದುವ್ಯಾಗು, ಅಕಿನ್ನ ಸರಿಯಾಗಿ ಸಂಭಾಳಿಸು. ಅಕಿ ನಡಿದಾಡೋ ದೀಪ ಇದ್ದಾಂಗ, ಅದು ಎಂದೂ ಆರದ್ಹಂಗ ಜೋಪಾನ ಮಾಡು. ಅಕಿ ನನ್ನ ಕಣ್ಣಾಗ ಹೂವು ಹಣ್ಣು ತುಂಬಿದ ವನ ಕಂಡ್ಹಾಂಗ ಆಗ್ತಾಳ. ಆದ್ರ ವನದಾಗ ಮಂಗ್ಯಾ ಮುಶ್ಯಾ ಬಂದ ಹೋಗಾಕ ನಾನು ಬಿಡೂದಿಲ್ಲ. ನನ್ನ ಎದಿಯೊಳಗಿನ ಜೀವ ಅಕಿ ದೇಹದಾಂಗ ಹರಿದ್ಯಾಡಕ ಹತ್ತೈತಿ ಅಂತ ತಿಳಕೊ. ನಾನು ಒಳ್ಳೇದಕ ಭಾಳ ಒಳ್ಯಾಕಿ, ಸಿಟ್ಟ ಬಂದ್ರ ಮನಸ್ಯಾಳಲ್ಲ. ಅಕಿ ಹಾಲಕೇರಿ ಅನ್ನದಾನಸ್ವಾಮಿ ಆ ಮನೆತನಕ ಆಶೀರ್ವಾದ ಮಾಡಿದ ಪುಣ್ಯದ ಫಲ. ನೀನು ಅಕಿ ಮುಖ ಒಮ್ಮೆರ ಬೇಸ್ಯಾಗ ನೋಡಿ ಏನು? ಅಲ್ಲಿ ಒಮ್ಮೊಮ್ಮೆ ಚಂದ್ರನ ಬೆಳಕು ಚೆಲ್ಲಿದ್ಹಾಂಗ ಕಂಡ್ರ, ಮತ್ತೊಮ್ಮೆ ಹುಲಿಗಳು ಸಾಲುಗಟ್ಟಿ ನಿಂತ್ಹಾಂಗ ಕಾಣಸ್ತೈತಿ. ಅಕಿ ದೇವತಾ ಮನುಷ್ಯಳದಾಳ. ಆಕಿಗೆ ನಿನ್ನಿಂದ ಏನಾದ್ರೂ ಧೋಕಾ ಆಯ್ತಂದ್ರ ನಾನು ನಿನ್ನ ಬಿಡಾಕಿ ಅಲ್ಲ, ಆಕಿ ನನ್ನ ಮಗಳ ಅಂತ ತಿಳಿ…..’’ ಹೀಗೆ ಶ್ಯಾವಂತ್ರವ್ವತ್ತಿ ತನ್ನ ಮಗಳಂಥವಳ ಬಾಳಿನಲ್ಲಿ ಯಾವುದೇ ಧೋಕಾ ಮಾಡದಂತೆ ಮೋಹನನಿಗೆ ಎಚ್ಚರಿಕೆ ನೀಡುತ್ತಲೇ ಆಕೆಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾಳೆ. ಹಲವು ಮಂಡಲಗಳನ್ನು ದಾಟಿ ಈ ಮೋಹನನನ್ನು ಸಾಕ್ಷಾತ್ಕರಿಸಿಕೊಳ್ಳುವ ಅವಳ ಪ್ರಯತ್ನ ಸಾಧ್ಯವಾಗುವುದೇ ಇಲ್ಲ. ಎಲ್ಲಿಗೋ ಹೋದವನು ಮತ್ತೆ ಬರಲೇ ಇಲ್ಲ. ಆತನಿಗೆ ಹುಡುಗಿ ನೋಡಿದ ಸುದ್ದಿ ತಿಳಿಯುತ್ತದೆ. ಮದುವೆಯೂ ನಡೆದುಹೋದದ್ದು ತಿಳಿಯುತ್ತದೆ. ಇವಳು ಹಾಗೆಯೇ ಕಾಯುತ್ತಲೇ ಕಾಯುತ್ತಲೇ ದಿನಗಳೆಯುತ್ತ ವೃದ್ಧೆಯಾಗುತ್ತ ಒಂದು ದಿನ ಇಲ್ಲವಾಗುತ್ತಾಳೆ. ಸಂಬಂಧಗಳು ಹಲವು ತೀರಗಳ ಮಧ್ಯೆ ಸಂಪರ್ಕ ಕಲ್ಪಿಸಲು ಕಟ್ಟಿದ ಸೇತುವೆಗಳು. ಇವು ಧ್ವಂಸವಾದಾಗ ತೀರಗಳು ದೂರವಾಗುತ್ತವೆ. ಸೇತುವೆಗಳು ಕಳಚಿ ಬೀಳುತ್ತವೆ. ಇವುಗಳನ್ನು ಮತ್ತೆ ಕಟ್ಟುವುದು ಅಷ್ಟು ಸುಲಭವಲ್ಲ. ವಿಧ್ವಂಸಕ ಕೃತ್ಯದಲ್ಲಿಯ ಪಾಲುದಾರರು ಕಟ್ಟುವ ಕೆಲಸವನ್ನು ಮತ್ತೆ ಮಾಡಲಾರರು. ಕಟ್ಟಿದರೂ ಅದು ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ದಾರಿ ಮಾಡಿಕೊಡುತ್ತದೆ. ಸಂಬಂಧ ಒಂದು ಅಂಗಕ್ಕೆ ಬೇರೆ ಅಂಗವನ್ನು ಕಸಿ ಮಾಡಿದಂತಿರುತ್ತದೆ. ಆ ಕಸಿ ಫಲ ಕೊಡದೇ ಹೋದಾಗ ಪ್ರಾಣ ಕಳೆದುಕೊಂಡ ಸಂಕಟವಾಗುತ್ತದೆ. ಇಲ್ಲಿ ಘಟನೆಗಳೆಲ್ಲ ಬೆಳದಿಂಗಳ ಸಾಕ್ಷಿಯಲ್ಲಿಯೇ ನಡೆಯುವುದು. ಆಕೆಯ ಸಾವಿನ ಸುದ್ದಿಯೊಂದಿಗೇ ಕತೆ ಶುರುವಿಟ್ಟುಕೊಳ್ಳುವುದು. ಆಕೆ ಮಸಾರಿ ಮಣ್ಣಿನ ಜೀವಂತ ಪುತ್ಥಳಿ ಎಂದು ಆಕೆಯ ವರ್ಣನೆ ಆರಂಭಿಸುವ ಲೇಖಕರು, ಬದುಕಿದ್ದಾಗ ಬಂಗಾರದ ಒಡವೆ ಎಂದು ಹೊಗಳಿಸಿಕೊಳ್ಳುವ ಹೆಣ್ಣು ಹೆಣವಾದಾಗ ದುರ್ಘಟನೆಗೀಡಾದಂತೆ, ಆಕಾರ ಕಳೆದುಕೊಂಡು ನೀರು ಹತ್ತಿದ ಮಣ್ಣಿನಂತೆ ಕರಗುತ್ತಾಳೆ ಎಂದು ಹೇಳುವರು. ವರ್ಣನೆಯ ಧಾವಂತದಲ್ಲಿ ಅವರು ಮಣ್ಣಿನ ಸಂಬಂಧವನ್ನು ಮರೆಯದಿರುವುದು ಮಹತ್ವದ್ದು. ಇಲ್ಲಿ ನಡೆದಿರುವುದು ಒಂದು ವಿಶ್ವಾಸಘಾತ. ನಂಬಿಕೆ, ವಿಶ್ವಾಸದ ತುದಿಯಲ್ಲಿ ವಿಷದ ಹಲ್ಲು. ಸಂಬಂಧಿಕರು, ಬೀಗರು, ತಂದೆ ತಾಯಿಗಳು ಎನ್ನುವ ಸಂತೆಯಲ್ಲಿ ಕಳೆದುಹೋಗುವವನನ್ನು ಹಿಡಿದು ನಿಲ್ಲಿಸಲಾಗದ ಅಸಹಾಯಕತೆ ಗಾಢವಾಗಿ ಇಲ್ಲಿ ತಟ್ಟುತ್ತದೆ. ಪ್ರೇಮ ಭಾರಿ ಮಂಜಿನಂತೆ ಕರಗಿ ಹೋಗುತ್ತದೆ, ಬಿದ್ದ ನೀರಿನಂತೆ ಇಲ್ಲವಾಗುತ್ತದೆ ಎಂಬ ಸತ್ಯ ಮುಖಕ್ಕೆ ರಾಚುತ್ತದೆ. ನಿನ್ನ ಪತ್ನಿಯ ಜೊತೆ ಮಲಗುವಾಗ ನನ್ನ ಮುಖದ ಒಂದು ಪ್ರತಿ ಛಾಯೆಯು ನಿನ್ನ ಬಳಿ ಸುಳಿಯುವುದಿಲ್ಲವಾ. ಹೇಳು, ಸತ್ಯ ಹೇಳು ಎಂದು ಒತ್ತಾಯಿಸಿದರೆ ಆತನ ಬಳಿ ಉತ್ತರವಿಲ್ಲ. ಅವಳು ಹೇಳುತ್ತಾಳೆ, ‘ಬನದ ಹುಣ್ಣಿಮೆಯ ಬಿದಿಗೆಯ ಚಂದ್ರ ಪ್ರೇಮದ ಬಂಧಮುಕ್ತನಂತೆ ಎಷ್ಟೇ ಆಟವಾಡಿದರೂ ಮರುದಿನದಿಂದ ಕ್ಷಯಿಸಹತ್ತುತ್ತಾನೆ. ನಿಮ್ಮಂಥವರ ಸ್ವಭಾವ ಭೂಮಿಯ ಮೇಲೆ ಇರುವ ವರೆಗೂ ಚಂದ್ರನ ಕ್ಷಯ ಗುಣವಾಗಲಾರದು.’ ನಾನು ಸತ್ತ ನಂತರ ನನ್ನ ಹೆಣವನ್ನಾದರೂ ಪ್ರೀತಿಯಲ್ಲಿ ನೋಡು ಎನ್ನುವ ಹೆಣ್ಣಿನ ಆರ್ತತೆ ಜಗತ್ತೇ ಸ್ಥಗಿತಗೊಂಡ ಒಂದು ಕ್ಷಣದ ಅನುಭೂತಿಯನ್ನು ಹುಟ್ಟಿಸದೆ ಇರದು. ಎಲ್ಲಿಯೋ ಬಾಣನ ಕಾದಂಬರಿ, ಆಕೆಯ ಚಂದ್ರಾಪೀಡ, ಮಹಾಶ್ವೇತೆ, ವೈಶಂಪಾಯನರ ಅಗಲಿಕೆ ಕೂಡುವಿಕೆ ಜನ್ಮಾಂತರದ ಪ್ರಲಾಪ, ಬೋದಿಲೇರನ ಪಾಪದ ಹೂಗಳ ಬಿಕ್ಕಳಿಕೆಗಳು ನಿಮಗೆ ನೆನಪಿಗೆ ಬಂದರೆ ಅದು ಆಕಸ್ಮಿಕವಲ್ಲ. ಕನ್ನಡದಲ್ಲಿ ಇದೊಂದು ಅಪರೂಪದ ಬರೆವಣಿಗೆ. ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಪುಟಗಳು ೨೫೮, ಬೆಲೆ ₹ ೧೮೦.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.