ರಾಮಾಯಣದ ಮೇಲೆ ಈಗಾಗಲೆ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕೃತಿಗಳು ಬಂದಿವೆ. ವಾಲ್ಮೀಕಿ ರಾಮಾಯಣವೇ ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ವಿವಿಧ ಲೇಖಕರಿಂದ ಗದ್ಯವೋ ಪದ್ಯ ರೂಪದಲ್ಲೋ ಬಂದಿದೆ. ಈ ಸಾಲಿಗೆ ಡಾ.ಪದ್ಮಾಕರ ವಿ. ವರ್ತಕ ಅವರು ಬರೆದಿರುವ ‘ವಾಸ್ತವ ರಾಮಾಯಣ’ವು ಸೇರಿದೆ. ಇದೊಂದು ವಸ್ತುನಿಷ್ಠ ಸಂಶೋಧನಾ ಗ್ರಂಥ ಎಂದು ಹೇಳಲಾಗಿದೆ. ಇದನ್ನು ಹೇಮಂತರಾಜ ಕುಲಕರ್ಣಿಯವರು ಕನ್ನಡಕ್ಕೆ ತಂದಿದ್ದಾರೆ. ವರ್ತಕ ಅವರು ಕೃತಿಯಲ್ಲಿ ವಿವಿಧ ಅಂಶಗಳ ಮೂಲವನ್ನು ಶೋಧಿಸುವುದರಲ್ಲಿ ಯಾವುದೇ ಚೌಕಾಶಿಗೆ ಒಪ್ಪಿಕೊಂಡಿಲ್ಲ. ‘ಸತ್ಯನಿಷ್ಠತೆ ಹಾಗೂ ಸತ್ಯಶೋಧನೆ ಇವು ವರ್ತಕರ ಏಕಮೇವ ಗುರಿಯಾಗಿದೆ’ ಎಂದು ಕೃತಿಗೆ ಬರೆದ ಮುನ್ನುಡಿಯಲ್ಲಿ ಡಾ.ಶ್ರೀನಿವಾಸ ಹಾವನೂರು ಅವರು ಹೇಳಿದ್ದಾರೆ, ಮುಂದುವರಿದು ಅವರು, ಆದರೆ ವಿವೇಚನೆಯಲ್ಲಿ ಯಾವಾಗಲೂ ಸತ್ಯವೇ ಹೊರಡುವುದೆಂಬ ಖಾತ್ರಿಯಿರಲಿಕ್ಕಿಲ್ಲ ಎಂಬುದನ್ನೂ ಸೇರಿಸುತ್ತಾರೆ. ವರ್ತಕರ ಸಂಶೋಧನೆಯಲ್ಲಿ ರಾಮ ಹುಟ್ಟಿದ್ದು ಕ್ರಿ.ಪೂ. ೪-೧೨-೭೩೨೩ರಲ್ಲಿ. ಅಂದು ಚೈತ್ರಶುದ್ಧ ನವಮಿ. ರಾಮನ ಮದುವೆ ನಡೆದದ್ದು ಕ್ರಿ.ಪೂ. ೭-೪-೭೩೦೭ರಂದು. ಆತನ ವನವಾಸ ಆರಂಭವಾಗಿದ್ದು ಕ್ರಿ.ಪೂ. ೧೫-೧೧-೭೨೯೨. ಹನುಮಂತ ಲಂಕೆಯಲ್ಲಿ ಸೀತೆಯನ್ನು ಭೆಟ್ಟಿ ಮಾಡಿದ್ದು ಕ್ರಿ.ಪೂ. ೨-೯-೭೨೯೨ರಂದು. ಕ್ರಿ.ಪೂ. ೧೫-೧೧-೭೨೯೨ರಂದು ರಾವಣನ ವಧೆ ನಡೆಯಿತು. ರಾಮನು ಅಯೋಧ್ಯೆಯನ್ನು ಪ್ರವೇಶ ಮಾಡಿದ್ದು ಕ್ರಿ.ಪೂ.೯-೧೨-೭೨೯೨ರಂದು. ಇವನ್ನೆಲ್ಲ ಹೇಗೆ ಕರಾರುವಾಕ್ಕಾಗಿ ವರ್ತಕ ಅವರಿಗೆ ಹೇಳುವುದು ಸಾಧ್ಯವಾಯಿತು? ಅವರೊಬ್ಬ ಅಪ್ರತಿಮ ಅಂಕಿಅಂಶ ತಜ್ಞರು. ಜ್ಯೋತಿರ್ವಿಜ್ಞಾನಿ. ಅವರೇ ಕಾಲನಿರ್ಣಯ ಕೋಷ್ಠಕವನ್ನು ಸಿದ್ಧಪಡಿಸಿದ್ದಾರೆ. ಕಾಲನಿರ್ಣಯಕ್ಕೆ ಸಾಂಪ್ರದಾಯಿಕ ವಿಜ್ಞಾನದಲ್ಲಿ ಬಳಸುವ ವಿಧಾನಗಳನ್ನೂ ಅವರು ಬಳಸಿಕೊಂಡಿದ್ದಾರೆ. ಪಾತ್ರಗಳನ್ನು ಉದಾತ್ತೀಕರಿಸುವ ಪ್ರಯೋಗವನ್ನೂ ವರ್ತಕ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಗೌತಮರ ಶಾಪದಿಂದ ಅಹಲ್ಯೆ ಶಿಲೆಯಾಗಲಿಲ್ಲ. ಶೀಲೆಯಾಗು ಎಂದು ಗೌತಮರು ಹೇಳಿದರು ಎಂಬ ವ್ಯಾಖ್ಯಾನ ಅರ್ಥಪೂರ್ಣ. ಶೀಲ ಕಳೆದುಕೊಂಡವಳು ಪಶ್ಚಾತ್ತಾಪದಿಂದ ಪಾಪವನ್ನು ತೊಳೆದುಕೊಳ್ಳುತ್ತಾಳೆ. ಶಿಲೆಯಾಗುವುದು ಎಂದರೆ ಮಹಾಮೌನಿಯಾಗುವುದು. ಅವಳನ್ನು ರಾಮನು ಮಾತನಾಡಿಸುವ ಮೂಲಕ ಅವಳಲ್ಲಿ ನೈತಿಕ ಶಕ್ತಿಯನ್ನು ತುಂಬುತ್ತಾನೆ. ತ್ರಿಲೋಕಗಳೆಂದರೆ ಏಶಿಯಾ, ಯುರೋಪ್ ಮತ್ತು ಆಫ್ರಿಕಾ ಎಂದೂ ವರ್ತಕ ಅವರು ಇಲ್ಲಿ ಪ್ರತಿಪಾದಿಸಿದ್ದಾರೆ. ಬಲಿ ಚಕ್ರವರ್ತಿಯು ಪಾತಾಳದಲ್ಲಿ ಇದ್ದ ಎಂದರೆ ಅದು ದಕ್ಷಿಣ ಅಮೆರಿಕ ಎಂದು ಅವರು ನಿರ್ಣಯಿಸುತ್ತಾರೆ. ಹಿಂದಿನವರ ಬಳಿ ಅಂತರಿಕ್ಷದಲ್ಲಿ ಸಂಚರಿಸುವ ವಾಹನ ಇತ್ತು ಎಂಬುದನ್ನು ಪುಷ್ಪಕ ವಿಮಾನದ ಹಿನ್ನೆಲೆಯಲ್ಲಿ ಅವರು ತರ್ಕಿಸುತ್ತಾರೆ. ರಾಮಾಯಣದಲ್ಲಿ ಬರುವ ದೂರದ ಪ್ರಮಾಣ, ಬೆಟ್ಟದ ಎತ್ತರ, ಸಮುದ್ರದ ಅಗಲ ಇತ್ಯಾದಿಗಳನ್ನು ಆಯುರ್ಮಾನ, ಗಣಿತ ಶಾಸ್ತ್ರದ ಮೂಲಕ ವರ್ತಕ ಅವರು ನಿರ್ಣಯಿಸುತ್ತಾರೆ. ಸಾಹಿತ್ಯ ಎನ್ನುವುದು ಬದುಕಿನ ಪ್ರತಿಬಿಂಬ ಎಂಬುದನ್ನು ಇಡಿಯಾಗಿ ಸಮ್ಮತಿಸುವ ಲೇಖಕರು ಆ ಕಾಲದ ಜನಜೀವನವನ್ನು ಮಹಾಕಾವ್ಯದ ಮೂಲಕ ಕಟ್ಟಿಕೊಡವ ಯತ್ನ ಮಾಡಿದ್ದಾರೆ. ಹರಿವಂಶದ ಆಧಾರದ ಮೇಲೆ ಆರ್ಯರು ಭಾರತದಿಂದ ಹೇಗೆ ಪಶ್ಚಿಮ ದೇಶಗಳಿಗೆ ವಲಸೆ ಹೋದರು ಎಂಬುದನ್ನು ದಾಖಲಿಸುತ್ತಾರೆ. ಯವನ ಎನ್ನುವ ಪದವನ್ನು ಇಂದು ವಿದೇಶಿ ಎಂಬ ಅರ್ಥದಲ್ಲಿ ಬಳಸುತ್ತಿದ್ದೇವೆ, ಯಯಾತಿ ಮ್ತತು ಶರ್ಮಿಷ್ಠೆಯ ಪುತ್ರ ಅನುವಿನ ವಂಶದಲ್ಲಿ ಅವನ ಪುತ್ರ ಅನ್ವಯನ, ಅವನ ಮಗ ಅಯೋನಿಯವನ ಹಾಗೂ ಇವನ ಮಗ ಯವನ. ಈತ ಗ್ರೀಸ್ ದೇಶದ ಆಸುಪಾಸಿನಲ್ಲಿ ರಾಜ್ಯವನ್ನು ಸ್ಥಾಪಿಸಿದ ಎಂದು ವರ್ತಕ ಹೇಳಿದ್ದಾರೆ. ಆರ್ಯರು ಮಧ್ಯ ಏಶಿಯಾದಿಂದ ಭಾರತಕ್ಕೆ ಬಂದಿರದೆ ಭಾರತದಿಂದಲೇ ಮಧ್ಯ ಏಶಿಯಾಕ್ಕೆ ವಲಸೆ ಹೋದರೆಂದು ಅವರು ಪ್ರತಿಪಾದಿಸುತ್ತಾರೆ. ವಿಶ್ವಾಮಿತ್ರನು ತ್ರಿಶಂಕುವನ್ನು ಸ್ವರ್ಗಕ್ಕೆ ಕಳುಹಿಸಿದ ಕತೆಯನ್ನು ಪರಗ್ರಹ ಯಾನದ ಪ್ರಥಮ ಪ್ರಯೋಗವಿರಲು ಸಾಕು. ಅದು ವಿಫಲವಾಗಿ ತ್ರಿಶಂಕು ಮಧ್ಯದಲ್ಲೇ ಸಾವನ್ನಪ್ಪಿರಬಹುದು ಎಂದು ಹೇಳುತ್ತಾರೆ ವರ್ತಕರು. ತ್ರಿಶಂಕು ಎಂಬ ಹೆಸರನ್ನು ವಿಶ್ವಾಮಿತ್ರನು ಒಂದು ನಕ್ಷತ್ರಕ್ಕೆ ಇಟ್ಟಿದ್ದನು. ವಿಶ್ವಾಮಿತ್ರ ಖಗೋಳಶಾಸ್ತ್ರದಲ್ಲಿ ಪಂಡಿತನಿದ್ದನು. ದೂರವನ್ನು ಅಳೆಯುವ ಒಂದು ಮಾನದಂಡ ‘ಮಹಾಯೋಜನೆ’. ಒಂದು ಮಹಾಯೋಜನವೆಂದರೆ ನಲವತ್ತು ಮೈಲುಗಳು (೬೪ ಕಿ.ಮೀ.). ಒಂದು ಶಂಕು ಮಹಾಯೋಜನವೆಂದರೆ ೬೮ ಪ್ರಕಾಶ ವರ್ಷಗಳು. ತ್ರಿಶಂಕುವೆಂದರೆ ೨೦೪ ಪ್ರಕಾಶ ವರ್ಷಗಳು. ಈಗಿನ ಖಗೋಲ ತಜ್ಞರು ತ್ರಿಶಂಕು ನಕ್ಷತ ೨೦೫ ಪ್ರಕಾಶ ವರ್ಷಗಳಷ್ಟು ದೂರದಲ್ಲಿದೆ ಎಂದು ನಿರ್ಧರಿಸಿದ್ದಾರೆ. ಸೀತಾಪಹರಣದ ವಿಷಯವಾಗಿ ಕುಂಭಕರ್ಣನು ರಾವಣನನ್ನು ವಿರೋಧಿಸುತ್ತಾನೆ. ಆದರೆ ಆತ ರಾಷ್ಟ್ರನಿಷ್ಠನಾದುದರಿಂದ ರಾವಣನ ಪರವಾಗಿ ರಾಮನ ವಿರುದ್ಧ ಹೋರಾಡಿ ಸಾಯುತ್ತಾನೆ ಪ್ರತಿಯೊಬ್ಬ ರಾಷ್ಟ್ರನಿಷ್ಠ ವ್ಯಕ್ತಿಯು ವಿಭೀಷಣನನ್ನು ಧಿಕ್ಕರಿಸಿ ಕುಂಭಕರ್ಣನ ಆದರ್ಶವನ್ನು ಪಾಲಿಸಬೇಕು ಎಂಬುದೇ ಸಂದೇಶ ಎಂದು ಹೇಳುತ್ತಾರೆ ವರ್ತಕರು. ರಾವಣನಿಗೆ ಒಂದೇ ಶಿರವಿತ್ತು ಎಂಂಬುದನ್ನೂ ಅವರು ಆ ಕಾವ್ಯದ ಒಡಲಿನಿಂದಲೇ ಪುರಾವೆಗಳನ್ನು ನೀಡಿ ಸಾಧಿಸುತ್ತಾರೆ. ಸ್ತ್ರೀಯನ್ನು ರಾಷ್ಟ್ರೀಯ ಮಾನದಂಡವಾಗಿ ಪರಿಗಣಿಸಬೇಕು ಎಂಬುದು ಆದರ್ಶವಾಗಿತ್ತು. ತನ್ನ ರಾಜ್ಯದಲ್ಲಿ ಸ್ತ್ರೀಯ ಮಾನವನ್ನು ರಕ್ಷಿಸುವುದು ಕರ್ತವ್ಯ ಎಂದು ಆತ ತಿಳಿದಿದ್ದ. ರಾಮನು ಪ್ರಜಾಪ್ರಭುತ್ವವಾದಿಯಾಗಿದ್ದ ಎಂದು ವರ್ತಕ ಅವರು ಹೇಳಿದ್ದಾರೆ. ಮನುಷ್ಯರು, ರಾಕ್ಷಸರು, ಯಕ್ಷರು, ವಾನರರು ಇವರೆಲ್ಲ ಬೇರೆಬೇರೆ ಜನಾಂಗಗಳಿಗೆ ಸೇರಿದವರು ಎಂದು ಹೇಳುವರು. ರಾಕ್ಷಸ ಕುಲ ಹೇಗೆ ನಾಶವಾಯಿತು ಎಂಬ ಚರ್ಚೆ ಇದೆ. ವಾಲ್ಮೀಕಿ ಬೇಡನಲ್ಲ, ಉಚ್ಚಕುಲದಲ್ಲಿಯೇ ಹುಟ್ಟಿದವನು ಎಂದು ಹೇಳುತ್ತಾರೆ. ತಮ್ಮ ಪೂರ್ವಜರು ಈಗಾಗಲೆ ಕಂಡುಕೊಂಡಿರುವ ಅಂಶಗಳನ್ನು ನಿಕಷಕ್ಕೆ ಒಡ್ಡಿದ್ದಾರೆ. ಕನ್ನಡದಲ್ಲಿ ಈ ಪ್ರಕಾರದ ಗ್ರಂಥಗಳಲ್ಲಿ ಇದು ಹೊಸದು ಎನ್ನಬೇಕು. ಇಲ್ಲಿ ವರ್ತಕರು ಕಂಡುಕೊಂಡಿರುವ ಅಂಶಗಳನ್ನು ಕಣ್ಣುಮುಚ್ಚಿಕೊಂಡು ಒಪ್ಪಲೇಬೇಕು ಎಂದೇನಿಲ್ಲ. ಸಂಶೋಧನೆ ಎನ್ನುವುದು ಅಲ್ಪವಿರಾಮದಿಂದ ಪೂರ್ಣವಿರಾಮದ ವರೆಗೆ ಸಾಗುವ ಪ್ರಕ್ರಿಯೆ ಎಂಬ ಮಾತನ್ನು ಡಾ.ಎಂ.ಎಂ.ಕಲಬುರ್ಗಿಯವರು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ. ಇಂಥ ಅಪರೂಪದ ಕೃತಿಯನ್ನು ಕನ್ನಡಿಗರಿಗೆ ಕೊಟ್ಟ ಹೇಮಂತರಾಜ ಕುಲಕರ್ಣಿಯವರಿಗೆ ಅಭಿನಂದನೆಗಳು ಪ್ರ: ಪ್ರಚೇತ ಬುಕ್ ಹೌಸ್, ಬೆಂಗಳೂರು, ಪುಟಗಳು ೫೧೬, ಬೆಲೆ ₹ ೩೫೦.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.