ಶ್ರೀ ಶಿವಾನಂದ ಹೊಂಬಳ ಮತ್ತು ನನ್ನ ಸ್ನೇಹ ಸುಮಾರು ನಾಲ್ಕು ದಶಕಗಳಿಗೂ ಹಿಂದಿನಿಂದ ಉಳಿದು ಬಂದದ್ದು. 1983ರಲ್ಲಿ ಧಾರವಾಡದ ಕನ್ನಡ ಅಧ್ಯಯನ ಪೀಠದಲ್ಲಿ  ನಾನು ಅವರು ಸಹಪಾಠಿಗಳು. ಆ ವರ್ಷದ ಬಿ.ಎ. ಕನ್ನಡ ಮೇಜರ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ಅತ್ಯಧಿಕ ಅಂಕ ಪಡೆದು ಚಿನ್ನದ ಪದಕ ಪಡೆದ ವಿದ್ಯಾರ್ಥಿ ಅವರಾಗಿದ್ದರು. ತುಂಬ  ನಿಚ್ಚಳವಾಗಿ ಅಳೆದು ತೂಗಿ ಮಾತನಾಡುತ್ತಿದ್ದ ಅವರು ಈಗಲೂ ಹಾಗೆಯೇ ಇದ್ದಾರೆ. ಕೃತಿಯ ಅಂತರಂಗವನ್ನು ಬಗೆದು ನೋಡುವ ಅವರ ಬಗೆ ಅವರಿಗೇ ವಿಶಿಷ್ಟವಾದದ್ದು. 
ಶಿವಾನಂದರು ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿಯವರ ಪ್ರಭಾವ ತಮ್ಮ ಮೇಲೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಸತ್ಯವೆನ್ನುವುದು ಮಾರ್ಗವಿಲ್ಲದ ಮೇರು ಎಂದವರು ಜಿಡ್ಡು. ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯವೆನ್ನುವುದು ಸಾಮಾಜಿಕ ಅಥವಾ ರಾಜಕೀಯ ಸ್ವಾತಂತ್ರ್ಯವಲ್ಲ. ತನ್ನಾತ್ಮದ ಬಂಧನಗಳಿಂದ, ಭಯದಿಂದ ಮತ್ತು ಭ್ರಮೆಯಿಂದ ಸ್ವಾತಂತ್ರ್ಯ. ಈ ಹಿನ್ನೆಲೆಯಲ್ಲಿ ಶಿವಾನಂದ ಅವರ ಹೊಸ ಸಂಕಲನ `ಎದೆಯ ತುಂಬ ಆಕಾಶ' ಸಂಕಲನವನ್ನು ಪರಿಶೀಲಿಸಬೇಕು. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿರುವ ಅವರು ಹಳೆಗನ್ನಡ ಹಾಗೆಯೇ ಹೊಸಗನ್ನಡದ ಸಾಹಿತ್ಯವನ್ನು ಗಂಭೀರವಾಗಿ ಓದಿದ್ದಾರೆ. ವಚನಗಳ ಹಾಗೆಯೇ ಬೇಂದ್ರೆಯವರ ಅನುಕರಣದ ರಚನೆಗಳೂ, ಸಂತ ಶಿಶುನಾಳ ಶರೀಫರ, ಜಿಎಸ್ಸೆಸ್‌ರ ವಿಚಾರಗಳ ಪ್ರಭಾವವೂ ಅವರ ಮೇಲಾಗಿದೆ.
`ಎದೆಯ ತುಂಬ ಆಕಾಶ'ವನ್ನು ಅವರು ಕಂಡುಂಡ ಸತ್ಯದ ಸರಳ ನುಡಿ ರೂಪಗಳು ಎಂದೂ, ಸಹಜ ಅಭಿವ್ಯಕ್ತಿಗಳು ಎಂದೂ ಕರೆದುಕೊಂಡಿದ್ದಾರೆ. ಎಲ್ಲಿಯೂ ಅವರು ಅವುಗಳನ್ನು ಕವಿತೆಗಳೆಂದಾಗಲಿ ವಚನಗಳೆಂದಾಗಲಿ ನಿರ್ದಿಷ್ಟ ಹಣೆಪಟ್ಟಿ ಹಚ್ಚಿಲ್ಲ. ಮುದ್ರಣದಲ್ಲಿ ತುಂಡು ತುಂಡು ಸಾಲುಗಳು ಒಂದರ ಕೆಳಗೆ ಒಂದಿರುವುದರಿಂದ ಅವುಗಳನ್ನು ಪದ್ಯಗಳೆಂದು ಪರಿಗಣಿಸಿ ಆ ನೆಲೆಯಲ್ಲಿ ಅವುಗಳ ವ್ಯಾಖ್ಯಾನ ಮಾಡುವುದು ತಪ್ಪು.
`ಎದೆಯ ತುಂಬ ಆಕಾಶ'ದಲ್ಲಿ ಶಿವಾನಂದರು ಎಡೆಬಿಡದೆ ತನ್ನನ್ನು ತಾನು ಅನ್ವೇಷಿಸಿಕೊಳ್ಳುತ್ತಾರೆ. ಕಾವ್ಯವೆನ್ನುವುದು ಬುದ್ಧಿ ಭಾವಗಳ ವಿದ್ಯುದ್ದಾಲಿಂಗನ ಎಂದು ಪ್ರಾಜ್ಞರು ಸೂತ್ರೀಕರಿಸಿದ್ದಾರೆ. ಇಲ್ಲಿ ಭಾವ ಬುದ್ಧಿಯ ಸೆಣಸಾಟದಲ್ಲಿ ಬುದ್ಧಿ ಮೇಲುಗೈ ಸಾಧಿಸಿದೆ. ಬುದ್ಧಿಯ ಧೃತರಾಷ್ಟ್ರಾಲಿಂಗನದಲ್ಲಿ ಭಾವ ಏದುಸಿರುಬಿಡುತ್ತಿದೆ. ಭಾವಗಳ ಮೆರವಣಿಗೆ ಶಿವಾನಂದರ ಉದ್ದೇಶವಲ್ಲ. ತನ್ನ ವಿಚಾರಗಳು ಗೊಂದಲವಿಲ್ಲದೆ ನೇರವಾಗಿ ಸಂವಹನಗೊಳ್ಳಬೇಕೆಂಬ ಕಾಳಜಿ ಇಲ್ಲಿ ಕಾಣುತ್ತದೆ. ಸಂಸಾರ ಸಾಗರದಲ್ಲಿ ತನ್ನಿಷ್ಟದಂತೆ ಈಜ ಬಯಸುವ ಸ್ವಾತಂತ್ರ್ಯ ಪ್ರೇಮಿ ಅವರು. ತಾನು ಹೇಗಿದ್ದೆ, ಹೇಗಿದ್ದೇನೆ, ಹೇಗಿರಬೇಕು ಎಂಬ ಚಿಂತನೆ ಇಲ್ಲಿಯ ವಿಚಾರಗಳಲ್ಲಿ ತುಂಬಿದೆ. ತನ್ನನ್ನು ತಾನು ಅನ್ವೇಷಿಸುವ ನವ್ಯರ ಬುದ್ಧಿವಂತಿಕೆ ಒಮ್ಮೊಮ್ಮೆ ಅನಾಥ ಪ್ರಜ್ಞೆಯನ್ನು ಹುಟ್ಟುಹಾಕಿದರೆ ಮತ್ತೆ ಕೆಲವೊಮ್ಮೆ ಹೀಗೇ ನಡೆಯಬೇಕೆಂಬ ದೃಢನಿಶ್ಚಯವನ್ನು ಪೊರೆಯುತ್ತದೆ. 

ಇದೀಗ ತಾನೆ ತಿಳಿಯಿತು;
ನಾನು ಬಂದ ಈ ದಾರಿ
ನಾನು ಬರಬೇಕೆಂದುಕೊಂಡುದಲ್ಲ!
ತಲುಪಿದ ಈ ತಾಣ
ನಾನು ಬರಬೇಕೆಂದುಕೊಂಡುದಲ್ಲ!…. ಇದರಿಂದಾಗುವುದು ಬೇಜಾರು, ಸಿಟ್ಟು. ಯಾರ ಮೇಲೆ, ತನ್ನ ಮೇಲೆ. ಇದೊಂದು ಅಸಹಾಯಕ ಸ್ಥಿತಿ. ಈ ಸಂದರ್ಭದಲ್ಲಿ ನನಗೆ ಮಹಾಕವಿ ಕುವೆಂಪುರವರ ಒಂದು ಮಾತು ನೆನಪಾಗುತ್ತಿದೆ….
ಬಂದವರು ಬಂದಂತೆ
ಹೋದವರು ಹೋದಂತೆ
ಬಿಡು ನೀ ಅವರಿವರ ಚಿಂತೆ
ಬದುಕು ನೀ ನಿನ್ನಂತೆ!
ಅವರಿವರ ಚಿಂತೆ ಮಾಡದೆ ತಾನು ಹೇಗೆ ಬದುಕಿದೆ ಎಂಬ ಪರೀಕ್ಷಣೆ ಇಲ್ಲಿಯ ಬರೆಹಗಳಲ್ಲಿ ಇದೆ. ಹುತ್ತದ ಕತೆ ಹೇಳುವ ಶಿವಾನಂದರು,
ಅಲ್ಲಿಲ್ಲ ಮನುಷ್ಯ ಲೋಕದ
ಶ್ರೇಷ್ಠ-ಕನಿಷ್ಠದ ಅನಿಷ್ಟಗಳು;
ಸಮಾನತೆಯ ಹುಚ್ಚೂ ಅಲ್ಲಿಲ್ಲ!
….. … ..
ಪ್ರಶ್ನೆಗಳೇ ಅಲ್ಲಿಲ್ಲ
ಉತ್ತರ ಪಡೆಯುವ ಗೋಜು ಇನ್ನೆಲ್ಲಿ?
ಹೀಗೆ ಪ್ರಶ್ನಾತೀತವಾದ ಒಂದು ಗಮ್ಯದ ನೆಲೆಯನ್ನು ರೂಪಕದಲ್ಲಿ ಹುಡುಕುತ್ತಾರೆ.
ಸ್ವರ್ಗಕ್ಕೆ ದಾರಿ ಯಾವುದು ಎಂದರೆ ಹಲವು ದಾರಿಗಳು ಗೋಚರಿಸುತ್ತವೆ. ಆದರೆ ತನ್ನಂತೆ ಆಲೋಚಿಸುವ ತನ್ನ ಮಗಳನ್ನು ಕಂಡಾಗ ಕಣ್ಣಲ್ಲಿ ಹನಿಯಾಡುತ್ತದೆ. ಅದೇ ಕ್ಷಣ ಅವರಿಗೆ ಸ್ವರ್ಗ ಸಿಕ್ಕ ಸಂತಸ. ಜೀವನ ನಾಟಕಕ್ಕೆ ನಿರ್ದೇಶಕರೂ ಇಲ್ಲ, ಪ್ರೇಕ್ಷಕರೂ ಇಲ್ಲ, ನಟರೂ ಇಲ್ಲ, ಸೂತ್ರಧಾರರೂ ಇಲ್ಲ. ಇರುವುದು ನಾಟಕವೊಂದೇ ಎನ್ನವ ಅವರು ಬದುಕಿನ ಸ್ವಯಂಭೂ ಆಟಕ್ಕೆ ಪರ್ಯಾಯವೇ ಇಲ್ಲ ಎಂಬ ಉದ್ಗಾರ ತೆಗೆಯುತ್ತಾರೆ
ಮನುಷ್ಯನ ಸ್ವಾರ್ಥದಿಂದ ಸುವರ್ಣವತಿ ನದಿ ಹೇಗೆ ಕೃಶಗೊಂಡು ಸಣ್ಣ ಕೊಳೆಝರಿಯಾಗಿದ್ದಾಳೆ ಎಂಬ ವಿಷಾದದ ಚಿತ್ರಣವನ್ನು ಅವರು ನೀಡುತ್ತಾರೆ. ಕಾಗದದ ದೋಣಿಯನು ಈಗ ಬಿಡಲಾಗದು, ಕೊಳೆ ವಾಸನೆ ತಡೆಯಲಾಗುತ್ತಿಲ್ಲ. ನಿಟ್ಟುಸಿರು ಮಾತ್ರ ನಾನೀಗ ಆಕೆಗೆ ನೀಡಬಲ್ಲ ಕಾಣಿಕೆ ಎನ್ನುವಲ್ಲಿ ಅಸಹಾಯಕತೆಯನ್ನು ಕಾಣಬಹುದು. ಕಾಲ ಚಕ್ರವು ಇತಿಹಾಸವು ವರ್ತಮಾನದಲ್ಲಿ ಮರುಹುಟ್ಟು ಪಡೆಯುವ ಸಾಧ್ಯತೆಯನ್ನು ಈಗ'ದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ... ಕಟ್ಟಿಗೆ ಹೊರೆ ಹೊತ್ತ ಅಜ್ಜನಿಗೆ ಮೊಮ್ಮಗಳು ನೀರು ಕೊಡುವಾಗ ಯಾಕೋ ಏನೋ ಈ ಚಿತ್ರ- ಶಿಲ್ಪಗಳಲ್ಲಿನ ಮೂಲ ಪುರುಷನ ಆತ್ಮದ ವರ್ತಮಾನದ ರೂಪಗಳು ಎನಿಸುತ್ತದೆ... ಕಾಲ ಬದಲಾದರೂ ಜೀವನದ ನಿರಂತರತೆಯನ್ನು ಇದು ಸೂಚಿಸುತ್ತದೆ. ಹುಲಿ ಸಿಂಹ ಚಿರತೆಗಳು, ಚಿಟ್ಟೆ, ಬಸವನ ಹುಳು, ಹುಲ್ಲೆಗಳ ಜೊತೆಗೆ ನಾನೂ ಇದ್ದೇನೆ ಎನ್ನುವುದರ ಮೂಲಕ ಈ ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ವ್ಯಷ್ಟಿ ವೈಶಿಷ್ಟ್ಯಗಳಿವೆ. ಅವರವರು ಅವರವರ ಕಾರ್ಯ ಮಾಡಿದರೆ ಪರಿಸರದಲ್ಲಿ ಸಮತೋಲನ ಸಾಧ್ಯ. ಮನುಷ್ಯನೆನ್ನಿಸಿಕೊಂಡವನಿಗೆ ವಿಶೇಷ ಸ್ಥಾನವೆನ್ನುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ನೀಡುತ್ತಾರೆ. ರಾಮನ ಬಗೆಗಿನ ಅವರ ಧ್ಯಾನ ಮನೋಜ್ಞವಾಗಿದೆ. ಇವನಾರವ ಇವನಾರವ ಎನ್ನದ ರಾಮ ನನ್ನ ರಾಮ ಎಂದು ಹೇಳುತ್ತ ಕೊನೆಯಲ್ಲಿ ಸರ್ವ ಪ್ರೀತಿಯ ಸೌಖ್ಯಗಳ ಐಕ್ಯ ನನ್ನ ರಾಮ ಎನ್ನುವ ಮೂಲಕ ವಿಭಜಕ ಶಕ್ತಿಗಳ ಕೈವಶವಾಗಿರುವ ರಾಮನನ್ನು ಪ್ರತ್ಯೇಕಗೊಳಿಸುತ್ತಾರೆ. ಈ ಸಂಗ್ರಹದ ಅತ್ಯುತ್ತಮಗಳಲ್ಲಿ ಇದೂ ಒಂದು. ಇಲ್ಲಿ ಕೆಲವು ವ್ಯಕ್ತಿಚಿತ್ರಗಳಿವೆ, ತಂದೆ, ಮಗಳು, ಪತ್ನಿ ಹೀಗೆ. ಪತ್ನಿಯ ಕುರಿತನನ್ನ ಯಜಮಾನತಿ’ಯಲ್ಲಿ..
ಈಕೆಯ ನಗು
ಕಾರಣ ರಹಿತ ವಿಶ್ವದಂತೆ
ತಂತಾನೆ ಚಿಮ್ಮುವುದು, ತಂತಾನೆ ಹೊಮ್ಮುವುದು,
ಪುಟಿವುದು, ಹರಿವುದು ಗಾವುದ ಗಾವುದ.
ಈಕೆಯ ನಗುವಿನಲಿ ವಿಶ್ವದ ವಿಮರ್ಶೆಯಿಲ್ಲ
ಇದ್ದರೆ ಒಮ್ಮೊಮ್ಮೆ ಸ್ವ-ವಿಮರ್ಶೆ ಅಷ್ಟೇ…
ಇಲ್ಲಿ ಬುದ್ಧಿಯ ಹಿಡಿತದಿಂದ ತಪ್ಪಿಸಿಕೊಂಡ ಭಾವ ಭೃಂಗದ ಬೆನ್ನೇರಿದೆ. `ಕತ್ತಲೆಯೆ ಬೆಳಕು’ದಲ್ಲಿ
ಕತ್ತಲೆಯೆ ಬೆಳಕು
ಬೆಳಕೇ ಕತ್ತಲೆ
ತಿಳಿಯದಿರೆ
ನೀನು ಇತ್ತಲೆ
ನಾನು ಅತ್ತಲೆ
ಮುಚ್ಚಿದ್ದರೂ ಹೊರಗೆ
ಒಳಗೆ ಎಲ್ಲವೂ ಬೆತ್ತಲೆ…. ಅಲ್ಲಮನ ಬೆಡಗಿನ ವಚನದಂತಹ ಈ ಮಾತುಗಳು ಪುಟಗಟ್ಟಲೆ ವಿವರಣೆ ಬೇಡುತ್ತದೆ.
ಆಗಸವೆಂಬುದು ಅಗಾಧತೆಯ ಸಂಕೇತ. ಅದೊಂದು ಅನೂಹ್ಯ ವಿಶ್ವ ವ್ಯಾಪಾರ. ಆಕಾಶದ ವ್ಯಾಪಾರವೆಲ್ಲ ಸಾಪೇಕ್ಷ. ಅವರವರ ಕಲ್ಪನೆಗೆ ನಿಲುಕುವ ಬಟ್ಟೆಯೊಳಗೆ ಮಡಚಿದ ಬೆರಳುಗಳು. ಆಗಸದ ಶುಭ್ರ ಸಭಾಂಗಣದಲ್ಲಿ ಏನೇನೋ ಚಿತ್ತಾರಗಳ ಸಂತೆ ನಿರಂತರ. ಅದನ್ನೊಂದು ನೋಡುತ್ತಿದ್ದ ಇವರ ಮನದಲ್ಲೂ ಎಷ್ಟೊಂದು ವ್ಯಾಪಾರ? ಮಾರಾಟವೂ ಇಲ್ಲ, ಕೊಳ್ಳಾಟವೂ ಇಲ್ಲ. ಕೇವಲ ನೋಡಾಟ. ಅದೂ ಕಣ್ಣು ಮುಚ್ಚಿ. ಆಗ ಆಗಸಕೆ ಆಗಸವೇ ಬಂದು ಎದೆಯಲ್ಲಿ ಮಲಗುವ ಪವಾಡ ಸಾಧ್ಯ. ಅನಂತವನ್ನು ಸ್ವಂತವನ್ನಾಗಿ ಮಾಡಿಕೊಳ್ಳುವ ಅದಮ್ಯ ಬಯಕೆ ಇದು.
ಇಂಥ ಬಯಕೆಯ ಚಿಂತನೆಗಳು ಈ ಕೃತಿಯಲ್ಲಿ ಪುಟಪುಟಗಳಲ್ಲಿಯೂ ಎದುರಾಗುತ್ತವೆ. ಓದಿದ ಸುಖ ನನ್ನದಾಗಿದೆ. ಅದು ನಿಮ್ಮದೂ ಆಗಲಿ ಎಂಬುದು ನನ್ನ ಬಯಕೆ. ಶಿವಾನಂದ ಹೊಂಬಳರು ಇನ್ನಷ್ಟು ಪ್ರಖರ ವಿಚಾರಗಳೊಂದಿಗೆ ಮುಂಬರುವ ದಿನಗಳಲ್ಲೂ ಹೊರಹೊಮ್ಮಲಿ ಎಂಬುದು ನನ್ನ ಹಾರೈಕೆ.