ಬಹುವಿಧ ಜೀವನಾನುಭವವನ್ನು ಹೊಂದಿರುವ ಕೆ.ಸತ್ಯನಾರಾಯಣ ಅವರು ``ನೆದರ್ಲ್ಯಾಂಡ್ಸ್ ಬಾಣಂತನ'' ಎನ್ನುವ ಪ್ರವಾಸ ಪ್ರಬಂಧ ಪುಸ್ತಕವನ್ನು ಇತ್ತೀಚೆ ಬರೆದಿರುವರು. ಪ್ರವಾಸ ಕಥನ ಎನ್ನದೆ ಪ್ರವಾಸ ಪ್ರಬಂಧ ಎಂದು ಅವರು ಇದನ್ನು ಕರೆದಿರುವುದು ವಿಶೇಷ. ಈ ಹಿಂದೆಯೂ ಅವರು ಪ್ರವಾಸಕ್ಕೆ ಸಂಬಂಧಿಸಿದ ಕೆಲವು ಪುಸ್ತಕಗಳನ್ನು ಬರೆದಿರುವರು. ಈ ಕೃತಿಯ ಮೊದಲ ಅಧ್ಯಾಯವೇ `ವಿದೇಶಿ ಪ್ರವಾಸಾನುಭವ ಅಂದರೇನು?' ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವಾಗಿದೆ. ಪರದೇಶಗಳಿಗೆ ಹೋಗುವುದು, ಪ್ರವಾಸ ಸಮಯದಲ್ಲಿ ಪಡೆದ ಅನುಭವಗಳನ್ನು ಕುರಿತು ಬರೆಯುವುದು, ಮಾತನಾಡುವುದು ಎಂದುಕೊಂಡಿದ್ದ ಅವರು `ಅದೊಂದು ತಪ್ಪು ಕಲ್ಪನೆಯಾಗಿತ್ತು. ಇದು ನಮ್ಮ ಸಾಮಾಜಿಕ ಚಿಂತನೆಯ ಭಾಗವಷ್ಟೇ' ಎಂದು ಹೇಳುತ್ತಾರೆ. ಆ ಮೂಲಕ ಪ್ರವಾಸ ಕಥನದ ಸಿದ್ಧ ಮಾದರಿಗಳಿಂದ ಹೊರಗೆ ಬರುವುದಕ್ಕೆ ಪ್ರಯತ್ನಿಸುತ್ತಾರೆ. `ಯಾರೊಬ್ಬರ ಬದುಕೂ ಸಿದ್ಧ ಮಾದರಿಯಲ್ಲಿ ನಡೆಯುವುದಿಲ್ಲ. ನಾವೇ ಬಯಸಿದಾಗಲೂ, ಪ್ರತಿಯೊಂದು ಪ್ರವಾಸ, ಪ್ರತಿಯೊಂದು ಕುಟುಂಬದ ಸಂದರ್ಭವೂ ಬೇರೆಬೇರೆ ಇರುತ್ತದೆ. ಇಂತಹ ಸನ್ನಿವೇಶಕ್ಕೆ ನಾವು ಮುಕ್ತವಾಗಿ ತೆರೆದುಕೊಂಡು ಬರೆಯುವುದೇ ವಿದೇಶಿ ಪ್ರವಾಸಾನುಭವ ಎಂದು ನನಗನಿಸಿದೆ' ಎಂದು ಹೇಳುತ್ತ ತಮ್ಮ ಬರೆವಣಿಗೆಗೆ ಒಂದು ನೆಲೆಗಟ್ಟನ್ನು ಸಿದ್ಧಪಡಿಸಿಕೊಳ್ಳುತ್ತಾರೆ, ಹಾಗೆಯೇ, ``ಪ್ರವಾಸದ ಸಂದರ್ಭದಲ್ಲಿ ನಾವು ಹೊಸದಾಗಿ ನೋಡುವುದು, ಕಲಿಯುವುದು ಎಷ್ಟಿರುತ್ತದೆ ಅನ್ನುವುದು ಪ್ರವಾಸಿಗಳ ವೈಯಕ್ತಿಕ ಆಯ್ಕೆ. ಅದಕ್ಕಿಂತ ಮುಖ್ಯವಾಗಿ ನಾವು ನಮ್ಮ ಪೂರ್ವಗ್ರಹಗಳನ್ನು ತಿದ್ದಿಕೊಳ್ಳುವ, ತಪ್ಪೊಪ್ಪಿಕೊಳ್ಳುವ, ನಾಚಿಕೆಪಟ್ಟುಕೊಳ್ಳುವ ಸಂಗತಿಗಳು, ಅವಕಾಶಗಳು ಕೂಡ ಅಷ್ಟೇ ಇರುತ್ತವೆ ಎಂಬುದನ್ನು ನಾನು ಅನುಭವದಿಂದ ಕಂಡುಕೊಂಡಿದ್ದೇನೆ'' ಎನ್ನುವ ಮಾತನ್ನೂ ಅವರು ವಿವರವಾಗಿ ನಮೂದಿಸಿದ್ದಾರೆ. ನೆದರ್ಲ್ಯಾಂಡ್ಸ್ಗೆ ಅವರು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಸಲ ತೆರಳಿದ್ದರು. ಇದರ ಒಟ್ಟೂ ಅವಧಿ ಸರಿಸುಮಾರು ಹತ್ತು ತಿಂಗಳು. ಒಂದು ದೇಶ, ಅಲ್ಲಿಯ ಜನರ ಬದುಕಿನ ರೀತಿ ನೀತಿಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇದು ಸಾಕಷ್ಟು ದೊಡ್ಡ ಅವಧಿಯೇ ಆಗಿದೆ. ತಮ್ಮ ಮಗಳು ಎರಡನೆ ಬಾರಿ ಗರ್ಭಿಣಿಯಾದಾಗ ಮಗಳ ನೆರವಿಗೆ ಇವರು ಮತ್ತು ಇವರ ಪತ್ನಿ ಅಲ್ಲಿಗೆ ತೆರಳಿದ್ದರು. ನೆದರ್ಲ್ಯಾಂಡ್ಸ್ನಲ್ಲಿ ಮಗಳ ಬಾಣಂತನ ಮಾಡುತ್ತ ಆ ದೇಶದ ಬಾಣಂತನವನ್ನೂ ಮಾಡಿದುದರ ಪ್ರತೀಕವೇ ಈ ಕೃತಿ. ಈ ಅರ್ಥದಲ್ಲಿ ನೋಡಿದಾಗ ಕೃತಿಯ ಶೀರ್ಷಿಕೆ ಶ್ಲೇಷಾರ್ಥದಿಂದ ಕೂಡಿರುವ ಹಾಗೆ ಭಾಸವಾಗುವುದು. ಒಂದು ದೇಶವನ್ನು ಅರಿಯುವುದೆಂದರೆ ಪುಟ್ಟ ಮಗುವೊಂದನ್ನು ಬೆಳೆಸುವಾಗ ಬೇಕಾಗುವ ಸೂಕ್ಷ್ಮ ಮನಸ್ಸು ಮತ್ತು ತಾಯಿ ಹೃದಯ ಬೇಕಾಗುತ್ತದೆ. ಮೊಮ್ಮಗುವನ್ನು ಆರೈಕೆ ಮಾಡುವಾಗ ಯಾವೊಂದು ನಿಷ್ಕಲ್ಮಶ ಮನಸ್ಸಿರುವುದೋ ಅಂಥದ್ದೇ ಮನಸ್ಸು ಒಂದು ದೇಶವನ್ನು ಅರಿಯುವಾಗಲೂ ಬೇಕಾಗುತ್ತದೆ. ಹೆಣ್ಣಿಗೆ ಹೆರಿಗೆ ಮಾಡಿಸುವುದಕ್ಕೆ ಪರಿಣತ ವೈದ್ಯರೋ ಪರಿಣತ ಸೂಲಗಿತ್ತಿಯೋ ಬೇಕಾಗುತ್ತದೆ. ಹಾಗೆಯೇ ಕೃತಿಯೊಂದು ಹೊರ ಬರುವಾಗಲೂ ಸೂಲಗಿತ್ತಿಯ ಪರಿಣತಿ ಅಗತ್ಯ. ನೆದರ್ಲ್ಯಾಂಡ್ಸ್ಅನ್ನು ಒಂದು ಗರ್ಭಿಣಿ ಎಂದು ಭಾವಿಸಿದರೆ ಅದರ ಒಳಹೊರಗನ್ನು ಅನಾವರಣಗೊಳಿಸುವ ಕೃತಿರಚನೆಯು ಒಂದು ಬಾಣಂತನವೇ ಸರಿ. ಕೆ.ಸತ್ಯನಾರಾಯಣ ಅವರು ಪರಿಪಕ್ವ ಸೂಲಗಿತ್ತಿಯ ಹಾಗೆ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಕೃತಿಯ ಹೆರಿಗೆ ಮಾಡಿಸಿದ್ದಾರೆ. ಕೃತಿಯ ಒಂದು ಭಾಗದಲ್ಲಿ ಅವರು, ತನಗೇಕೆ ಬಿಳಿಯರನ್ನು ಕಂಡರೆ ದ್ವೇಷ ಮೂಡುತ್ತಿದೆ ಎಂಬುದರ ವಿಶ್ಲೇಷಣೆಗೆ ತೊಡಗುತ್ತಾರೆ. ನಮ್ಮನ್ನು ಕೊಳ್ಳೆ ಹೊಡೆದುಕೊಂಡು ಹೋಗಿ ನಮ್ಮ ಸಂಪತ್ತಿನಿಂದ ಅವರು ಸುಖವಾಗಿದ್ದಾರೆ ಎಂಬ ನಂಬಿಕೆ ಮನದಲ್ಲಿ ಅಚ್ಚೊತ್ತಿರುವುದೇ ಅದಕ್ಕೆ ಕಾರಣ ಎಂಬುದನ್ನು ಕಂಡುಕೊಳ್ಳುತ್ತಾರೆ. ಅವರು ನಮಗಿಂತ ನೂರಾರು ವರ್ಷ, ನಾಲ್ಕಾರು ತಲೆಮಾರು ಮುಂದುವರಿದಿರುವುದಕ್ಕೆ ಇವರು, ಈಗಿನವರು ಹೇಗೆ ಹೊಣೆ? ಇತಿಹಾಸದ ತಪ್ಪುಗಳಿಗೆಲ್ಲ ಒಂದು ದೇಶ, ಒಂದು ಸಮಾಜ ಹೊಣೆಯಾಗಬಹುದೇ ಹೊರತು ಮನುಷ್ಯರಲ್ಲ, ವ್ಯಕ್ತಿಗಳಲ್ಲ ಎಂದು ತರ್ಕಿಸುತ್ತಾರೆ. ಅವರ ಮುಂದುವರಿಕೆಯ ಫಲಾನುಭವಿಗಳಲ್ಲಿ ತಮ್ಮ ಮಕ್ಕಳೂ ಸೇರಿದ್ದಾರೆ ಎನ್ನುವ ಅರಿವಿನೊಂದಿಗೆ ನಕಾರಾತ್ಮಕ ಭಾವನೆಯಿಂದ ಹೊರಬರುತ್ತಾರೆ. ನೆದರ್ಲ್ಯಾಂಡ್ಸ್ನಲ್ಲಿ ಸರ್ಕಾರವೇ ಗರ್ಭಿಣಿಯರನ್ನು ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವುದು. ಹೆರಿಗೆ ನೈಸರ್ಗಿಕವಾಗಿರುವಂತೆ ನೋಡಿಕೊಳ್ಳುವುದು ಸರ್ಕಾರದ ಮತ್ತು ಸಮಾಜದ ತಾತ್ವಿಕತೆಯಾಗಿದೆ. ಅಲ್ಲಿಯ ವಿಮೆ ವ್ಯವಸ್ಥೆ ತುಂಬ ಚೆನ್ನಾಗಿದೆ. ಆ ದೇಶದಲ್ಲಿ ಡಚ್ ಭಾಷೆಯ ಜೊತೆಗೆ ಇಂಗ್ಲಿಷ್ ಕೂಡ ಬಳಕೆಯಲ್ಲಿದೆ. ಶಾಲೆಗಳಲ್ಲಿ ಕಲಿಸುತ್ತಾರೆ ಕೂಡ. ವ್ಯವಹರಿಸುವುದಕ್ಕೆ ಭಾಷೆ ಬರಲೇಬೇಕೆಂದೇನಿಲ್ಲ ಎನ್ನುವುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಮಗಳ ಆರೈಕೆಗೆ ಬರುತ್ತಿದ್ದ ಮಿಡ್ವೈಫ್ ಮತ್ತು ಸಹಾಯಕಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಇವರಿಗೆ ಡಚ್ ಬರುತ್ತಿರಲಿಲ್ಲ. ಆದರೂ ಎಷ್ಟೊಂದು ಮಾತನಾಡುತ್ತಿದ್ದೆವು, ನಗುತ್ತಿದ್ದೆವು. ಚುಡಾಯಿಸುತ್ತಿದ್ದೆವು ಎಂದು ವಿವರ ಬರೆದಿರುವುದು. ನೆದರ್ಲ್ಯಾಂಡ್ಸ್ನ ಶಿಕ್ಷಣ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುವ ಲೇಖಕರು, ಪ್ರತಿಯೊಂದು ಮಗುವಿನ/ನಾಗರಿಕನ ವ್ಯಕ್ತಿ ವೈಶಿಷ್ಟ್ಯವನ್ನು ಗುರುತಿಸಬೇಕು, ಹಾಗೆ ಅವರವರೇ ಗುರುತಿಸಿಕೊಳ್ಳುವ ಹಾಗೆ ಪ್ರೋತ್ಸಾಹಿಸಬೇಕು ಎಂಬುದು ನೆದರ್ಲ್ಯಾಂಡ್ಸ್ ಶಿಕ್ಷಣ ಸಂಸ್ಕೃತಿಯ ಮೂಲ ತಿಳುವಳಿಕೆ, ಆದ್ಯತೆಯ ಮೊದಲ ಸೂತ್ರ ಎಂದು ಹೇಳುತ್ತಾರೆ. ಮಕ್ಕಳು ಪ್ರವಾಸ ಹೋಗುವುದರ ಮಹತ್ವವನ್ನು ಹೇಳುವ ಲೇಖಕರು, ಮಕ್ಕಳು ಪಡೆಯುವ ಜೀವನ ಶಿಕ್ಷಣವೇ ತುಂಬಾ ಮುಖ್ಯ ಎಂದು ಹೇಳುತ್ತಾರೆ. ನೆದರ್ಲ್ಯಾಂಡ್ಸ್ನಲ್ಲಿ ಬೈಸಿಕಲ್ ಬಳಕೆ ಬಹಳ. ಹಾಗೆಯೇ ಕಾರುಗಳನ್ನು ಬಳಸುವುದಕ್ಕಿಂತ ಸಾರ್ವಜನಿಕ ಸಂಪರ್ಕ ವಾಹನಗಳನ್ನು ಜನರು ಬಳಸುತ್ತಾರೆ ಎಂಬುದನ್ನು ಗುರುತಿಸುತ್ತಾರೆ. ಇದರಿಂದ ಇಂಧನ ಬಳಕೆ ಕಡಿಮೆ. ಅಪಘಾತಗಳ ಸಂಖ್ಯೆ ಕಡಿಮೆ. ಜೊತೆಗೆ ಪರಿಸರ ಮಾಲಿನ್ಯವೂ ಕಡಿಮೆ. ಇಡೀ ಪುಸ್ತಕವು ಮಕ್ಕಳನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ಅಲ್ಲಿಯ ವೈದ್ಯಕೀಯ ಸೇವೆ, ಆರೋಗ್ಯ ವ್ಯವಸ್ಥೆ, ಶಿಕ್ಷಣ ಕ್ರಮಗಳು, ಸಾರಿಗೆ ಸಂಚಾರ, ರಾಜಕೀಯ ಎಲ್ಲವನ್ನೂ ನಿರ್ವಚಿಸಲು ಪ್ರಯತ್ನಿಸಿದೆ. ಹೇಳಿಕೇಳಿ ಬಾಣಂತನದ ಅನುಭವಗಳು. ನುರಿತ ಸೂಲಿಗಿತ್ತಿ ಬಾಣಂತನದಲ್ಲಿ ಮಗುವನ್ನು ವಿಶೇಷ ಕಾಳಜಿಯಿಂದ ಪೊರೆಯುವಂತೆ ಸತ್ಯನಾರಾಯಣ ಅವರು ತಮ್ಮ ಈ ಕೃತಿಯನ್ನು ಜೀವಂತಿಕೆಯಿಂದ ಮಿಡಿಯುವಂತೆ ಮಾಡಿದ್ದಾರೆ. ಕೃತಿ- ನೆದರ್ಲ್ಯಾಂಡ್ಸ್ ಬಾಣಂತನ ಲೇಖಕ- ಕೆ.ಸತ್ಯನಾರಾಯಣ ಪ್ರ- ನ್ಯೂ ವೇವ್ ಬುಕ್ಸ್ ಪುಟಗಳು- 124 ಬೆಲೆ- 150 ರು.

ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.