ಮೌಲ್ಯದ ಮಾತು-1
ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಹೊಸ ಮಾಧ್ಯಮವಾದ ಪತ್ರಿಕೆಯ ಪಾತ್ರವನ್ನು ಕುರಿತು ಈ ಸಂಶೋಧನ ಪ್ರಬಂಧದಲ್ಲಿ, ಸಂಶೋಧಕರಾದ ವಾಸುದೇವ ಶೆಟ್ಟಿಯವರು ಚರ್ಚೆಯನ್ನು ನಡೆಸಿದ್ದಾರೆ. ಐದು ಅಧ್ಯಾಯಗಳಿರುವ ಈ ಪ್ರಬಂಧದಲ್ಲಿ ಸ್ಥೂಲವಾಗಿ ಕಾಲಾನುಕ್ರಮಣಿಕೆಯನ್ನು ಸಂಶೋಧಕರು ಅಧ್ಯಯನ ವಿಧಾನವನ್ನಾಗಿ ಬಳಸಿಕೊಳ್ಳುತ್ತಾರಾದರೂ, ಕನ್ನಡ ಭಾಷೆ ಮತ್ತು ಬದುಕನ್ನು ಚಿತ್ರಿಸಿರುವ ಸಾಹಿತ್ಯ ಮತ್ತು ಪತ್ರಿಕೆಯ ಸಂಬಂಧವನ್ನು ನಿರ್ವಚಿಸುವಾಗ ಕರ್ನಾಟಕ ಏಕೀಕರಣದ ಘಟ್ಟವನ್ನು ಒಂದು ಕೇಂದ್ರಬಿಂದುವಾಗಿ ಬಳಸಿಕೊಂಡಿದ್ದಾರೆ.
ಆಧುನಿಕ ಕನ್ನಡ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿ ಕನ್ನಡದ ಸಣ್ಣನಿಯತಕಾಲಿಕೆಗಳು ಹಾಗೂ ಪತ್ರಿಕೆಗಳು ವಹಿಸಿದ ಪಾತ್ರವು ಅಗಾಧವಾದದ್ದು. ಈಗಲೂ ಸಾಹಿತ್ಯ ಮತ್ತು ಭಾಷೆಯನ್ನು ಹಾಗೂ ತತ್‌ಪರಿಣಾಮದ ಸಂಸ್ಕೃತಿಯ ಬಹುಮುಖ್ಯ ಚರ್ಚೆಯನ್ನು ಹಾಗೂ ಚಿಂತನೆಯನ್ನು ನಿರ್ವಹಿಸುತ್ತಿರುವ ಈ ಸಣ್ಣ ಪತ್ರಿಕೆಗಳ ಪಾತ್ರಗಳನ್ನು ಪರಿಶೀಲನೆಗೆ ಗುರಿಪಡಿಸುವುದು ಒಂದು ಮುಖ್ಯ ಕೆಲಸವೇ ಆಗಿದೆ. ಪ್ರಸ್ತುತ ಅಧ್ಯಯನವು ಆ ಕೆಲಸವನ್ನು ಬಹುಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸಿದೆ.
ಆಧುನಿಕ ಸಾಹಿತ್ಯ ಮತ್ತು ಪತ್ರಿಕೆಗಳ ಸಂಬಂಧವು ಕನ್ನಡದ ಸಂದರ್ಭದಲ್ಲಿ ಹೊಂದಿರುವ ಅವಿನಾಸಂಬಂಧವು ಗಮನಾರ್ಹವಾದುದು. ಕನ್ನಡ ಭಾಷೆಯ ಬಳಕೆಯ ಪುನರುಜ್ಜೀವನದ ಆಶಯವೂ ಹಾಗೂ ಸಾಹಿತ್ಯಕ ಅಭಿವ್ಯಕ್ತಿಯ ಉತ್ತೇಜನವೂ- ಇವೆರೆಡು ನೆಲೆಗಳಲ್ಲಿ ಪ್ರಾರಂಭದ ಪತ್ರಿಕೆಗಳು ಗಮನಾರ್ಹವಾದ ಸಾಧನೆಯನ್ನು ಮಾಡಿವೆ. ಹೊಸಗನ್ನಡದ ಪ್ರಾರಂಭದ ಕಾಲದಲ್ಲಿ, ಏಕೀಕರಣದ ಚಳವಳಿಯ ಜೊತೆಗೆಯೇ ಕನ್ನಡ ಭಾಷೆ ಮತ್ತು ಸಾಹಿತ್ಯದ ಸೃಷ್ಟಿಗಾಗಿಯೇ ಸಣ್ಣ ಪತ್ರಿಕೆಗಳ ಒಂದು ಸಮೂಹವೇ ಹುಟ್ಟಿಕೊಂಡಿತು. ಸಾಹಿತ್ಯದ ವಿವಿಧ ಪ್ರಕಾರಗಳು ಹಾಗೂ ಸಾಹಿತ್ಯ ಕ್ಷೇತ್ರದ ಪ್ರಮುಖ ಚಿಂತನೆಗಳು- ಇವುಗಳೆಲ್ಲವನ್ನೂ ಪ್ರೇರೇಪಿಸಿ- ಬೆಳೆಸಿದ ಹಲವಾರು ಪತ್ರಿಕೆಗಳು ಇವೆ. ಈ ಪ್ರಾರಂಭದ ಮುಖ್ಯ ಕೆಲಸವನ್ನು ಸಂಶೋಧಕರು ಗುರುತಿಸಿದ್ದಾರೆ.
ಕನ್ನಡ ಸಾಹಿತ್ಯಕ್ಕಿರುವ ಸಾತತ್ಯವನ್ನು ಗುರುತಿಸುವಲ್ಲಿ ಈ ಸಣ್ಣ ಪತ್ರಿಕೆಗಳ ಪಾತ್ರವೂ ಬಹು ಮುಖ್ಯವಾದದ್ದಾಗಿತ್ತು. ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ಕೃತಿಗಳ ಸ್ವರೂಪ, ಅವುಗಳ ಬದುಕು ಹಾಗೂ ಸಂಸ್ಕೃತಿಯ ಸ್ವರೂಪವನ್ನು ಗುರುತಿಸುವಲ್ಲಿ ವಹಿಸಿದ ಪಾತ್ರ- ಇಂಥ ಮುಖ್ಯ ಅಂಶಗಳನ್ನು ಅಂದಿನ ಸಣ್ಣ ಪತ್ರಿಕೆಗಳು ಚರ್ಚೆಗೆ ತೆಗೆದುಕೊಂಡವು. ಈ ಅಂಶವೂ ಹೊಸಗನ್ನಡ ಭಾಷೆ ಮತ್ತು ಸಾಹಿತ್ಯ ಸೃಷ್ಟ್ಟಿಯಲ್ಲಿ ಒಂದು ಬಲವನ್ನು ಒದಗಿಸುವ ನೆಲೆಯಾಗಿಸಿದ್ದು ಸಂಶೋಧಕರಾದ ವಾಸುದೇವ ಶೆಟ್ಟಿಯವರು ಇದರ ಪ್ರಮುಖ ಆಯಯಾಮಗಳನ್ನೂ ತಮ್ಮ ಪ್ರಬಂಧದಲ್ಲಿ ಗುರುತಿಸಿದ್ದಾರೆ.
ಭೌಗೋಳಿಕವಾಗಿ ಕರ್ನಾಟಕವು ಹಲವು ವಿಶೇಷ ವೈಲಕ್ಷಣ್ಯಗಳನ್ನು ಹೊಂದಿದ್ದರೂ ಸಾಂಸ್ಕೃತಿಕವಾಗಿ ಒಂದು ಏಕಾತ್ಮಕ ಭಾವನೆಯನ್ನು ಮೂಡಿಸುವ ಪ್ರಯತ್ನಗಳನ್ನು ಸಣ್ಣ ಪತ್ರಿಕೆಗಳು ಮಾಡಿವೆ. ಈ ಕರ್ಮ ಸ್ವರೂಪದ ಚಟುವಟಿಕೆ ವ್ಯಾಪ್ತಿಯನ್ನೂ ಪ್ರಬಂಧಕಾರರು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರು ಬರೆದ ಮೂರನೆಯ ಅಧ್ಯಾಯ ಮಹತ್ವದ ಸಂಗತಿಗಳನ್ನು ಹೊರಗೆಡಹುತ್ತದೆ.
ನವೋದಯ ಮತ್ತು ನವ್ಯ ಹಾಗೂ ಪ್ರಗತಿಶೀಲ ಸಾಹಿತ್ಯ ಚಳವಳಿಗಳು ನಡೆದ ಸಂದರ್ಭದಲ್ಲಿಯೂ ಸಾಹಿತ್ಯ – ಜೀವನ ಕುರಿತು ಬಹು ಮುಖ್ಯ ಚಿಂತನೆಗಳನ್ನು ವಾಗ್ವಾದಕ್ಕೆ ಎಳೆದವುಗಳೇ ಈ ಸಣ್ಣ ನಿಯತಕಾಲಿಕೆಗಳು. ಈ ಅಂಶಗಳ ಮುಖ್ಯ ಗುಣಗಳನ್ನು ಪ್ರಬಂಧಕಾರರು ನಾಲ್ಕು ಮತ್ತು ಐದನೆಯ ಅಧ್ಯಾಯಗಳಲ್ಲಿ ಚರ್ಚಿಸಿದ್ದಾರೆ. ಕಾವ್ಯಮೀಮಾಂಸೆ ಮತ್ತು ಸಂಸ್ಕೃತಿ ಮೀಮಾಂಸೆಯನ್ನು ಕುರಿತ ಚರ್ಚೆಯು ದಲಿತ, ಬಂಡಾಯ ಸಾಹಿತ್ಯ ಸೃಷ್ಟಿಯ ಸಂದರ್ಭದಲ್ಲಿಯೂ ಒಂದು ಮುಖ್ಯ ನೆಲೆಗೆ ಬಂದದ್ದು ಮುಖ್ಯವಾಗಿ ಸಾಹಿತ್ಯಕ ಕಿರುಪತ್ರಿಕೆಗಳಿಂದಲೇ ಎನ್ನುವುದನ್ನು ವಾಸುದೇವ ಶೆಟ್ಟಿಯವರು ಗುರುತಿಸಿದ್ದಾರೆ. ಪ್ರಬಂಧದ ಒಂದು ಭಾಗದಲ್ಲಿ ಅವರು ಹೀಗೆ ಹೇಳುತ್ತಾರೆ, “ಹೊಸಗನ್ನಡದ ಎಲ್ಲ ಸಾಹಿತ್ಯ ಪಂಥಗಳು ಬೇರುಬಿಡುವ ಸಂದರ್ಭದಲ್ಲಿ ಸಾಹಿತ್ಯ ಪತ್ರಿಕೆಗಳು ನಿರ್ಣಾಯಕ ಪಾತ್ರ ವಹಿಸಿವೆ. ಒಂದು ರೀತಿಯಲ್ಲಿ ಪತ್ರಿಕೆಗಳು ಸಾಹಿತ್ಯ ಬೆಳವಣಿಗೆಯನ್ನು ತಮ್ಮ ಕಣ್ಗಾವಲಿನಲ್ಲಿ ನಿರಂತರ ಇರಿಸಿವೆ. ಹಾಗೆಯೇ ಸಾಹಿತ್ಯ ಮತ್ತು ಸಮಾಜದ ನಡುವೆ ಬೆಸೆಯುವ, ನಿಯಂತ್ರಿಸುವ ಕೊಂಡಿಯಂತೆ ಕೆಲಸ ನಿರ್ವಹಿಸಿವೆ”
ಪ್ರಬಂಧಕಾರರು ಹೇಳುವ ಈ ಮಾತುಗಳನ್ನು ನಿದರ್ಶನಪೂರ್ವಕವಾಗಿ ಅವರು ತಮ್ಮ ಪ್ರಬಂಧದುದ್ದಕ್ಕೂ ಚರ್ಚಿಸಿದ್ದಾರೆ. ಕೇವಲ ಈ ಪ್ರಬಂಧವು ಸಾಹಿತ್ಯ ಪತ್ರಿಕೆಗಳ ಕಾಲಾನುಕ್ರಮಣಿಕೆಯ, ಐತಿಹಾಸಿಕ ವಿಶೇಷದ ಚರ್ಚೆಮಾತ್ರವಾಗದೆ ಬಹುಮುಖ್ಯ ಸಾಹಿತ್ಯಕ ಹಾಗೂ ವಿಮರ್ಶಾತ್ಮಕ ಪರಿಭಾಷೆಗಳ ವಾಗ್ವಾದದ ಚರ್ಚೆಯ ಸ್ವರೂಪವನ್ನೂ ದಾಖಲಿಸುತ್ತ, ವಿಶ್ಲೇಷಿಸಿದ್ದಾರೆ. ಉದಾಹರಣೆ- ಸಾಹಿತ್ಯ ಮತ್ತು ಜೀವನ ಕುರಿತ ಸಂಬಂಧ; ಸಾಹಿತ್ಯ ಶ್ರೇಷ್ಠತೆಯನ್ನು ಕುರಿತ ವಿಶ್ಲೇಷಣೆ; ಸಾಹಿತ್ಯ ಮತ್ತು ಕೃತಿಕಾರನ ಸಂಬಂಧ- ಹೀಗೆ ಹಲವು ಸೃಜನಕ್ರಿಯೆಯ ಮೂಲಭೂತ ಭಿತ್ತಿಯ ವಾಗ್ವಾದಗಳ ಸ್ವರೂಪಗಳನ್ನು ಪ್ರಬಂಧವು ತನ್ನ ಚರ್ಚೆಯ ವ್ಯಾಪ್ತಿಗೆ ತೆಗೆದುಕೊಳ್ಳುತ್ತದೆ.
ಈ ಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌.ಡಿ. ಪುರಸ್ಕಾರವನ್ನು ಮೇಲೆ ಸೂಚಿಸಿದ ಎಲ್ಲ ಕಾರಣಗಳಿಗಾಗಿ ಕೊಡಬಹುದೆಂದು ನಾನು ಶಿಫಾರಸ್ಸು ಮಾಡುತ್ತೇನೆ. ಪ್ರಬಂಧದ ಮುದ್ರಣದ ಸಂದರ್ಭದಲ್ಲಿ ಕಣ್ತಪ್ಪಿನಿಂದ ಬಿಟ್ಟುಹೋಗಿರುವ ಇನ್ನಷ್ಟು ಕಿರುಪತ್ರಿಕೆಗಳನ್ನು ಚರ್ಚೆಗಾಗಿ ಗುರುತಿಸಬಹುದೆನ್ನಿಸುತ್ತದೆ.
16-11-02
ಡಾ.ಬಸವರಾಜ ಕಲ್ಗುಡಿ
ಪ್ರವಾಚಕರು
ಕನ್ನಡ ಅಧ್ಯಯನ ಕೇಂದ್ರ, ಜ್ಞಾನಗಂಗೋತ್ರಿ, ಬೆಂಗಳೂರು

ಮೌಲ್ಯದ ಮಾತು- 2
ಐದು ಅಧ್ಯಾಯಗಳಲ್ಲಿ ರಚನೆಗೊಂಡಿರುವ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ' ಮಹಾಪ್ರಬಂಧ ಅತ್ಯಂತ ವಿಚಾರಪೂರ್ಣವೂ ಮಾಹಿತಿಪೂರ್ಣವೂ ಆದ ಒಂದು ಮಹಾಪ್ರಬಂಧವಾಗಿದೆ. ಕನ್ನಡ ಸಾಹಿತ್ಯವನ್ನು ಕುರಿತಂತೆ ಕರ್ನಾಟಕ ಪತ್ರಿಕೆಗಳ ಪಾತ್ರವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಒಂದು ಸಾಹಿತ್ಯ ಪರಂಪರೆ ಬೆಳೆಯುವುದೇ ವಾಗ್ವಾದಗಳಿಂದ; ಚರ್ಚೆಯಿಂದ. ಇದು ದಿನಪತ್ರಿಕೆಗಳಿಂದ ಇರಬಹುದು, ವಾರಪತ್ರಿಕೆ, ಮಾಸಪತ್ರಿಕೆ, ಪಾಕ್ಷಿಕ, ದ್ವೈವಾರ್ಷಿಕ ಯಾವುದೇ ಪತ್ರಿಕೆ ಇರಬಹುದು. ನಾವೆಲ್ಲ ತಿಳಿದಂತೆ ಪತ್ರಿಕೆಗಳಲ್ಲಿ ನಡೆದಿರುವ ಚರ್ಚೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ತುಂಬಾ ಸಹಾಯವಾಗಿದೆ. ಸಾಹಿತ್ಯದ ಕಾಲಘಟ್ಟವನ್ನು ಅಭ್ಯಾಸಮಾಡಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. ವಿಶ್ವವಿದ್ಯಾನಿಲಯಗಳು ಈ ಹಿಂದೆ ತರುತ್ತಿದ್ದ ಸಾಧನೆ, ಕರ್ನಾಟಕ ಭಾರತಿ, ಪ್ರಬುದ್ಧ ಕರ್ನಾಟಕದಂಥ ಪತ್ರಿಕೆಗಳು ಸಂಪೂರ್ಣವಾಗಿ ಸಾಹಿತ್ಯಾತ್ಮಕ ಚರ್ಚೆಗಳಿಗೇ ಮೀಸಲಾಗಿದ್ದವು. ಹಾಗೆ ನೋಡಿದರೆ ಒಂದು ಕೃತಿಯೊಳಗೆ ಪ್ರಸ್ತಾಪವಾದ ಸಂಗತಿ, ಅದನ್ನು ಓದುಗರು ಓದಿಯೇ ಮನನ ಮಾಡಿಕೊಳ್ಳುವುದಕ್ಕಿಂತ ಮುಖ್ಯವಾಗಿ ಆ ಕೃತಿಯೊಳಗಿನ ಸಂಗತಿ ಪತ್ರಿಕೆಗಳಲ್ಲಿ ಚರ್ಚೆಗೆ ಬಂದಾಗಲೇ ಆ ಪುಸ್ತಕದ ವಿಚಾರಗಳು ಬೆಳಕಿಗೆ ಬರುತ್ತಿದ್ದವು. ಅಂದರೆ ಅನೇಕ ಪ್ರಮುಖ ಕೃತಿಗಳು ಪತ್ರಿಕೆಗಳಲ್ಲಿ ಚರ್ಚೆಗೆ ಬಂದ ನಂತರವೇ ಬೆಳಕಿಗೆ ಬರುತ್ತಿದ್ದವು ಎಂಬುದನ್ನು ನಾವು ಮನಗಾಣಬೇಕಾಗಿದೆ. ಹೀಗಾಗಿ ಪತ್ರಿಕೆ ಪ್ರಕಟಣೆ ಎಂಬುದು ಕನ್ನಡ ನಾಡಿನ ಸಾಂಸ್ಕೃತಿಕ ಬದುಕಿನ ಒಂದು ಅಂಗವಾಗಿದ್ದಿತು ಎಂದು ಪ್ರಬಂಧಕಾರರಾದ ವಾಸುದೇವ ಶೆಟ್ಟಿ ಅವರು ಗುರುತಿಸುವುದು ಬಹು ಮುಖ್ಯ ಸಂಗತಿಯೇ ಆಗಿದೆ. ``ಹೊಸಗನ್ನಡ ಸಾಹಿತ್ಯ ಪಂಥಗಳು ಬೇರು ಬಿಡುವ ಸಂದರ್ಭಗಳಲ್ಲಿ ಸಾಹಿತ್ಯ ಪತ್ರಿಕೆಗಳು ನಿರ್ಣಾಯಕ ಪಾತ್ರವಹಿಸಿವೆ. ಒಂದು ರೀತಿಯಲ್ಲಿ ಪತ್ರಿಕೆಗಳು ಸಾಹಿತ್ಯ ಬೆಳವಣಿಗೆಯನ್ನು ತಮ್ಮ ಕಣ್ಗಾವಲಲ್ಲಿ ನಿರಂತರವಾಗಿ ಇರಿಸಿವೆ. ಹಾಗೆ ಸಾಹಿತ್ಯ ಮತ್ತು ಸಮಾಜದ ನಡುವೆ ಬೆಸೆಯುವ ನಿಯಂತ್ರಿಸುವ ಕೊಂಡಿಯಂತೆ ಕೆಲಸ ನಿರ್ವಹಿಸಿವೆ. ಇದು ನೇರವಾಗಿ ಮತ್ತು ಮೂರ್ತವಾಗಿ ಕಾಣಿಸಿಕೊಳ್ಳದಿದ್ದರೂ ಪತ್ರಿಕೆಗಳು ಆಧುನಿಕ ಸಾಹಿತ್ಯದ ಬೆಳವಣಿಗೆಯಲ್ಲಿ ಸ್ಪಷ್ಟವಾದ ಪ್ರಭಾವಗಳನ್ನು ಬೀರಿವೆ'' ಎಂಬ ನಿಬಂಧಕಾರರ ಮಾತು ಪತ್ರಿಕೆ ಮತ್ತು ಸಾಹಿತ್ಯದ ಅನನ್ಯ ಸಂಬಂಧ ಕುರಿತ ಭಾಷ್ಯವಾಗಿದೆ. ಪತ್ರಿಕೆಗಳನ್ನು ಸಾಹಿತ್ಯಿಕ ಅಸಾಹಿತ್ಯಿಕ ಎಂದು ವಿಂಗಡಿಸದೆ ಒಟ್ಟು ನೆಲೆಯನ್ನು ಕಂಡಿರಿಸಿರುವ ರೀತಿ ಸಮಂಜಸ ಹಾಗೂ ಔಚಿತ್ಯಪೂರ್ಣ. ಈ ಹೊತ್ತು ಅನೇಕ ಪತ್ರಿಕೆಗಳು ರಾಜಕೀಯ ವಿದ್ಯಮಾನಗಳನ್ನು ಹೇಳುವ ಪತ್ರಿಕೆಗಳು ಎಂದೇ ಇಟ್ಟುಕೊಂಡರೂ ನಿಗದಿತ ದಿನಗಳಲ್ಲಿ ಅವು ಸಾಹಿತ್ಯಾತ್ಮಕ ಸಂಗತಿಗಳಿಗೇ ಹೆಚ್ಚು ಒತ್ತು ಕೊಡುತ್ತ ಬಂದಿವೆ. ಸಾಹಿತ್ಯಕ್ಕೆ ಸಂಬಂಧಪಟ್ಟ ಸ್ಪರ್ಧೆಗಳನ್ನು ಏರ್ಪಡಿಸುವುದಲ್ಲದೆ, ಸಾಹಿತ್ಯದ ಬೆಳವಣಿಗೆಯಲ್ಲಿ ಆಗುವ ಪ್ರಮುಖ ಬದಲಾವಣೆಗಳನ್ನು ಗುರುತಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡೇ ಬಂದಿವೆ. ಮುಖ್ಯವಾಗಿ ಕಥೆಯ ಪ್ರಕಾರ. ಇದು ಕೂಡ ಒಂದು ಪ್ರಕಾರಕ್ಕೆ ಪತ್ರಿಕೆಗಳು ನೀಡಿದ ಮಹತ್ವದ ಕೊಡುಗೆಯೇ ಆಗಿದೆ. ಇವನ್ನೆಲ್ಲ ನಿಬಂಧಕಾರರು ದಾಖಲಿಸಿದ್ದಾರೆ. ಸುಮಾರು ನೂರೈವತ್ತು ವರ್ಷಗಳ ಇತಿಹಾಸದಲ್ಲಿ ಪತ್ರಿಕೆಗಳು ಅನೇಕ ಹುಟ್ಟಿವೆ; ಬೆಳೆದಿವೆ; ಸತ್ತಿವೆ. ಅನೇಕವು ಅಲ್ಪಾಯುಷಿಯಾಗಿದ್ದವು. ಹಾಗೆ ನೋಡಿಕೊಂಡರೆ ಅನೇಕಾನೇಕ ಹಿರಿಯ ಸಾಹಿತಿಗಳು ಪತ್ರಿಕೆ ನಡೆಸಿದವರಾಗಿದ್ದಾರೆ. ಮಾಸ್ತಿ, ಬೆಟಗೇರಿ ಕೃಷ್ಣಶರ್ಮ, ಕಾರಂತರು, ಅಡಿಗರು ಇವರೆಲ್ಲ ಪತ್ರಿಕೆ ನಡೆಸಿದವರು; ಸಾಹಿತ್ಯಕ್ಕೆ ಮೀಸಲಾಗಿಟ್ಟು. ಇವುಗಳು ಅಲ್ಪಾಯುಷಿಗಳಾದರೂ, ಕನ್ನಡ ಸಾಹಿತ್ಯಕ್ಕೆ ಇವುಗಳ ಕೊಡುಗೆ ಮಹತ್ವಪೂರ್ಣ. ಅಡಿಗರು ಸಂಪಾದಕರಾಗಿದ್ದಸಾಕ್ಷಿ’ ಪತ್ರಿಕೆ ನವ್ಯ ಸಾಹಿತ್ಯದ ಬೆಳವಣಿಗೆಗೆ ಕೊಟ್ಟ ಕಾಣ್ಕೆ ಅಪಾರ. ಹೀಗೆ ಸಂಶೋಧಕರಾದ ವಾಸುದೇವ ಶೆಟ್ಟಿಯವರು ಮರೆತು ಹೋಗಿರುವ, ಹೋಗಬಹುದಾದ ಅನೇಕ ಅಂಶಗಳನ್ನು ಅಪಾರ ಶ್ರಮವಹಿಸಿ ಅತ್ಯಂತ ತಾಳ್ಮೆಯಿಂದ ಗ್ರಹಿಸಿ, ಕನ್ನಡದಲ್ಲಿ 150 ವರ್ಷಗಳಿಂದ ಬೆಳೆದು ಬಂದ ಪತ್ರಿಕೋದ್ಯಮದ ವಿವಿಧ ಮಜಲುಗಳನ್ನು ಗುರುತಿಸುತ್ತಲೇ, ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಗುರುತಿಸಿರುವುದು ಶ್ಲಾಘನೀಯವಾದ ಕೆಲಸವಾಗಿದೆ. ಈ ಬಗೆಯ ಕೆಲಸ ಕನ್ನಡಕ್ಕೆ ತುಂಬಾ ಅಗತ್ಯವಿತ್ತು. ಈ ದಿಕ್ಕಿನಲ್ಲಿ ಕೆಲಸ ಮಾಡಿ ಪತ್ರಿಕೆ- ಸಾಹಿತ್ಯದ ನಂಟನ್ನು ತುಂಬ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ.
ಪತ್ರಿಕೋದ್ಯಮ ಹಾಗೂ ಸಾಹಿತ್ಯ ಹೂವು ದಾರದ ಸಂಬಂಧವಿದ್ದಂತೆ. ಅರಿವಿಲ್ಲದೆಯೇ ದಾರ ಹೂವನ್ನು ಹಿಡಿದಿರುತ್ತದೆ. ಹಾಗೆ ನಮಗರಿಯದಂತೆಯೇ ಪತ್ರಿಕೆಗಳು ಸಾಹಿತ್ಯದ ಬೆಳವಣಿಗೆಯನ್ನು ಕಾಪಾಡಿಕೊಂಡು ಬಂದಿವೆ. ಇದನ್ನು ನಿಬಂಧದ ಉದ್ದಕ್ಕೂ ಮನಗಾಣಿಸಲು ಯತ್ನಿಸುತ್ತಾರೆ ವಾಸುದೇವ ಶೆಟ್ಟಿಯವರು. ಹೀಗೆ ಮಾಡುವಾಗ ಪತ್ರಿಕೆಗಳ ಧ್ಯೇಯ ಧೋರಣೆ, ಸಾಹಿತ್ಯಿಕ ನಿಲುವು, ಸಿದ್ಧಾಂತ ಮಂಡನೆ, ಚರ್ಚೆ ಸಮರ್ಥನೆಗಾಗಿ ಬಳಕೆಗೊಂಡ ರೀತಿ ರಿವಾಜುಗಳನ್ನು ತಾರ್ಕಿಕವಾಗಿ, ವಿಮರ್ಶನಾ ಪ್ರಜ್ಞೆಯ ನೆರಳಲ್ಲಿ ಅವನ್ನೆಲ್ಲ ಕಂಡಿರಿಸುವ ಪ್ರಯತ್ನದಲ್ಲಿ ವಾಸುದೇವ ಶೆಟ್ಟಿಯವರು ಪೂರ್ಣ ಯಶಸ್ವಿಯಾಗುತ್ತಾರೆ. ದೀರ್ಘವಾಗಿ ಹಿಗ್ಗಲಿಸಬಹುದಾದ ಸಂಗತಿಗಳನ್ನು ಒಂದೊಂದೇ ವಾಕ್ಯದಲ್ಲಿ ಕರಾರುವಕ್ಕಾಗಿ ಸೂತ್ರೀಕರಿಸಿದ್ದಾರೆ. ಭಾಷೆಯ ದುಂದುಗಾರಿಕೆ ಮಾಡದೆ ನಿರೂಪಣೆ ಮತ್ತು ನಿರ್ವಹಣೆ ಜಾಳಾಗದಂತೆ ಕಾಯ್ದುಕೊಂಡಿದ್ದಾರೆ. ಪತ್ರಿಕೆಗಳು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಿಕೆ, ಸಾಂಸ್ಕೃತಿಕ ವಾಹಕಗಳಾಗಿ ಕೆಲಸಮಾಡುವಿಕೆ, ಸಮಕಾಲೀನ ಸವಾಲುಗಳಿಗೆ, ಅಭಿವ್ಯಕ್ತಿಯ ವಿಸ್ತಾರಕ್ಕೆ ಮುಖಮಾಡಲು ಪ್ರಯತ್ನಿಸುವಿಕೆ, ಹೊಸ ಚಿಂತನೆಗಳನ್ನು ನಿಕಷಮತಿತ್ವಕ್ಕೆ ಒಡ್ಡುವಿಕೆ- ಹೀಗೆ ಆಧುನಿಕ ಬದುಕಿಗೆ ಕನ್ನಡಿ ಹಿಡಿವ ಕೆಲಸವನ್ನು ವಾಸುದೇವ ಶೆಟ್ಟಿಯವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪದವಿಗಾಗೇ ಹುಟ್ಟಿಕೊಳ್ಳುತ್ತಿರುವ ನಿಬಂಧಗಳ ಸಾಲಿಗಿದು ಸೇರದೆ ಪ್ರೌಢಪ್ರಬಂಧವಾಗಿ ಹೊರಹೊಮ್ಮಿದೆ ಎಂಬುದನ್ನು ಒತ್ತುಕೊಟ್ಟು ಹೇಳುವಂತಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನಿಜಕ್ಕೂ ಒಳ್ಳೆಯ ಕಾಣಿಕೆ ಇದಾಗಿದೆ.
ಈ ಎಲ್ಲಾ ಕಾರಣಗಳಿಂದ “ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ”- ನಿಬಂಧಕ್ಕೆ ಪಿಎಚ್‌.ಡಿ. ಪದವಿ ನೀಡಲು ಶಿಫಾರಸ್ಸು ಮಾಡುತ್ತೇನೆ. ಯಾವ ಬದಲಾವಣೆಯ ಅಗತ್ಯವಿಲ್ಲದೆ ಪ್ರಕಟಿಸಲು ಯೋಗ್ಯವಾಗಿದೆ. ಇಂಥದ್ದೊಂದು ನಿಬಂಧವನ್ನು ಸಿದ್ಧಪಡಿಸಿದ ವಾಸುದೇವ ಶೆಟ್ಟಿಯವರಿಗೆ, ಮಾರ್ಗದರ್ಶನ ಮಾಡಿದ ಡಾ.ಮೋಹನ ಕುಂಟಾರ್‌ ಅವರಿಗೆ ಅಭಿನಂದನೆಗಳು.
ದಿ.29-11-02
ಸ್ಥಳ- ಮೈಸೂರು
ಡಾ.ಪದ್ಮಾ ಶೇಖರ್‌
ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗ, ಮಾನಸಗಂಗೋತ್ರಿ, ಮೈಸೂರು-6

ಮೌಲ್ಯದ ಮಾತು- 3
ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅಲ್ಲಲ್ಲಿ ಬಿಡಿಬಿಡಿಯಾಗಿ ಅಧ್ಯಯನಗಳು ನಡೆದಿದ್ದರೂ ಪತ್ರಿಕೆಗಳು ಸಾಹಿತ್ಯದ ಬೆಳವಣಿಗೆಯನ್ನು ಪ್ರೇರಿಸಿದ ಬಗೆಗೆ ಸಮಗ್ರವಾಗಿ ಅಧ್ಯಯನಗಳು ನಡೆದುದಿಲ್ಲ. ಪ್ರಸ್ತುತ ಪ್ರಬಂಧವು ಈ ಕಾರಣಕ್ಕಾಗಿ ಬಹಳ ಮುಖ್ಯವಾಗಿದೆ. ಪ್ರಬಂಧಕಾರರು ಪತ್ರಿಕೆಗಳನ್ನು ವಿವಿಧ ಹಂತಗಳಲ್ಲಿ ಸಾಹಿತ್ಯ ಪ್ರವೃತ್ತಿಗಳನ್ನು ಪೋಷಿಸಿ ನಿಯಂತ್ರಿಸಿದ್ದನ್ನು ಹಾಗೂ ಆಧುನಿಕ ಸಾಹಿತ್ಯ ಪ್ರಕಾರಗಳ ಬೆಳವಣಿಗೆಗಳಿಗೂ ಕಾರಣವಾದುದನ್ನು ಸೋದಾಹರಣವಾಗಿ ಚರ್ಚಿಸಿದ್ದಾರೆ.
ಆಧುನಿಕ ಗದ್ಯ ಬರವಣಿಗೆ ರೂಪುಗೊಂಡ ಬಗೆ, ಅದರಲ್ಲೂ ವಿಮರ್ಶೆ, ಸಣ್ಣಕಥೆ ಮೊದಲಾದ ಪ್ರಕಾರಗಳು ಪತ್ರಿಕೆಗಳ ಮೂಲಕ ರೂಪು ಪಡೆದ ಬಗೆ ಇತ್ಯಾದಿಗಳನ್ನು ಪ್ರಬಂಧಕಾರರು ಸಾಕಷ್ಟು ಮಾಹಿತಿಗಳ ಮೂಲಕ ಉಲ್ಲೇಖಿಸಿದ್ದಾರೆ. ಇದು ಸಾಹಿತ್ಯ ಪ್ರವೃತ್ತಿಗಳ ಹಾಗೂ ಪತ್ರಿಕೆಗಳ ಪರಸ್ಪರ ಪೂರಕ ಅಧ್ಯಯನವಾಗುವುದರ ಜೊತೆಗೆ ಏಕಕಾಲಕ್ಕೆ ಲೇಖಕ ಹಾಗೂ ಓದುಗರ ನಡುವಿನ ಸಾಹಿತ್ಯ ಸಂವಹನ ಪ್ರಕ್ರಿಯೆಯ ಅಧ್ಯಯನವೂ ಆಗಿದೆ. ಅನುವಾದಗಳ ಮೂಲಕ ಹೊಸ ಬರವಣಿಗೆಯ ಶೈಲಿಯು ರೂಪುಗೊಂಡ ರೀತಿ ಹಾಗೂ ಹೊಸ ವೈಚಾರಿಕ ಆಯಾಮವನ್ನು ಕನ್ನಡ ಸಾಹಿತ್ಯ ಪಡೆದುಕೊಂಡುದನ್ನು ಸಂಶೋಧಕರು ಸರಿಯಾಗಿಯೇ ಗುರುತಿಸಿದ್ದಾರೆ. ಕನ್ನಡ ಭಾಷೆ ಸಂಸ್ಕೃತಿಗಳ ಕುರಿತ ಪ್ರೇಮವನ್ನು ಕನ್ನಡಿಗರಲ್ಲಿ ಉದ್ದೀಪಿಸಲು ಪತ್ರಿಕೆಗಳು ಪಟ್ಟ ಶ್ರಮ, ಅನ್ಯ ಭಾಷೆಗಳ ಜೊತೆಗೆ ಕನ್ನಡ ಸೆಣೆಸುತ್ತ ತನ್ನತನವನ್ನು ಉಳಿಸಿಕೊಳ್ಳುವಲ್ಲಿ ತೋರಿದ ಕಾಳಜಿ ಇತ್ಯಾದಿ ಸಾಂಸ್ಕೃತಿಕ ವಿಚಾರಗಳು ಅಧ್ಯಯನದ ಆನುಷಂಗಿಕ ಸಂಗತಿಗಳಾಗಿ ಪ್ರಬಂಧದಲ್ಲಿ ದಾಖಲಾಗಿರುವುದುಗಮನಾರ್ಹವಾಗಿದೆ.
ಒಟ್ಟಿನಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಪೋಷಿಸಿದ ಬಹುತೇಕ ಪತ್ರಿಕೆಗಳ ಸಾಧನೆಯನ್ನು ಪ್ರಸ್ತುತ ಅಧ್ಯಯನವು ಸಮರ್ಥವಾಗಿ ಪ್ರಕಟಿಸುತ್ತದೆ. ಇಲ್ಲಿ ಮಾಹಿತಿಗಳನ್ನು ಸಂಗ್ರಹಿಸಿದ ಸಂಶೋಧಕರ ಶ್ರಮ, ವಿಶ್ಲೇಷಣ ವಿಧಾನ ಇವು ಪ್ರಬಂಧದ ಮೌಲಿಕತೆಯನ್ನು ಹೆಚ್ಚಿಸಿವೆ. ಈ ಎಲ್ಲ ಕಾರಣಗಳಿಂದಾಗಿ `ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ’ ಎಂಬ ಪ್ರಬಂಧಕ್ಕೆ ಪಿಎಚ್‌.ಡಿ ಪದವಿಯನ್ನು ಕೊಡಬಹುದಾಗಿದೆ.
03-12-02
ಡಾ.ಮೋಹನ ಕುಂಟಾರ್‌,
ಪ್ರವಾಚಕರು, ಭಾಷಾಂತರ ವಿಭಾಗ
ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ವಿದ್ಯಾರಣ್ಯ
ಕಾಮಲಾಪುರ