ಹಿಂದೆಲ್ಲ ಹೊಳೆಸಾಲಿನಲ್ಲಿ ಹೆಂಚಿನ ಮನೆಗಳು ಅಪರೂಪ. ಒಂದೂರಿನಲ್ಲಿ ಹೆಂಚಿನ ಮನೆಗಳು ಎಷ್ಟು ಎಂದು ಕೇಳಿದರೆ ಕೈಬೆರಳಿನಲ್ಲಿ ಎಣಿಕೆ ಮಾಡಿ ಹೇಳಬಹುದಾಗಿತ್ತು. ಕಾಸರಕೋಡು, ಮಾವಿನಕುರ್ವೆಗಳಲ್ಲಿ ಹೆಂಚಿನ ಕಾರ್ಖಾನೆಗಳಿದ್ದರೂ ಮಚ್ವೆಯಲ್ಲಿ ತಂದ ಮಂಗಳೂರು ಹೆಂಚಿನ ಮನೆಯೇ ಶ್ರೇಷ್ಠ ಎಂಬ ನಂಬಿಕೆಯೂ ಇತ್ತು. ಅಂಥ ಒಂದೆರಡು ಮನೆಗಳೂ ಹೊಳೆಸಾಲಿನಲ್ಲಿದ್ದವು. ಅದು ಬಿಟ್ಟರೆ ಉಳಿದವು ಹೊದಿಕೆಯ ಮನೆಗಳಾಗಿದ್ದವು. ಹೊದಿಕೆಯ ಮನೆಗಳೆಂದರೆ ತೆಂಗಿನ ಮಡ್ಲು ನೇಯ್ದು ಮಾಡಿದ ತಡಿಕೆಯನ್ನು ಹೊದಿಸಿದ್ದು, ಕಬ್ಬಿನ ಗರಿಗಳನ್ನು ಹೊದೆಸಿದ್ದು, ಅಡಕೆ ಮರದ ಸೋಗೆಯನ್ನು ಹೊದೆಸಿದ್ದು, ತಾಳೆ ಮರದ ಗರಿಯನ್ನು...