ನನಗೆ ಅರ್ಥವಾಗದ ಅದೆಷ್ಟೋ ಸಂಗತಿಗಳು ಈ ಜಗತ್ತಿನಲ್ಲಿ ಇವೆ ಎಂಬುದು ನನಗೆ ಅರ್ಥವಾಗಿದ್ದು ಅವತ್ತೇ, ಅದೇಕ್ಷಣದಲ್ಲಿ. ಅದು ಅರಿವಾದೊಡನೆಯೇ ನನ್ನ ಬಗೆಗೇ ನನಗೆ ಕ್ಷುಲ್ಲಕ ಅನ್ನಿಸಿಬಿಟ್ಟಿತು. ಬಾವಿಯೊಳಗಿನ ಕಪ್ಪೆಯಂತೆ ಬದುಕಿದ್ದೆನಲ್ಲ ಇಷ್ಟು ದಿನ ಅನ್ನಿಸಿತು. ಮೆಲ್ಲನೆ ಅತ್ತ ಇತ್ತ ಕಣ್ಣು ಹೊರಳಿಸಿದೆ. ನಿಜಕ್ಕೂ ಆ ಕ್ಷಣದಲ್ಲಿ ನಿನ್ನ ನೆನಪು ಬಂದುಬಿಟ್ಟಿತು. ಇದೀಗ ನೀನು ನನ್ನ ಜೊತೆಯಲ್ಲಿ ಇದ್ದಿದ್ದರೆ.. ನಿನ್ನ ಕೋಮಲ ಕೈ ಬೆರಳುಗಳು ನನ್ನ ಭುಜವನ್ನು ಮೆಲ್ಲಾತಿಮೆಲ್ಲನೆ ಅದುಮದೆ ಇರುತ್ತಿರಲಿಲ್ಲ. ಭರವಸೆಯ ಬೆಳಕಿನ ಕಿಡಿ ನಿನ್ನ ಕಣ್ಣಿಂದ ಹೊಮ್ಮದೆ ಇರುತ್ತಿರಲಿಲ್ಲ. ಹೌದೋ ಅಲ್ಲವೋ ಎನ್ನುವಂತೆ ಬಿದಿಗೆಯ ಚಂದ್ರಮನಂತೆ ಒಂದು ಕಿರು ಮಂದಹಾಸ ನಿನ್ನ ತುಟಿಗಳ ಅಂಚಿನಲ್ಲಿ ಮೂಡದೆ ಇರುತ್ತಿರಲಿಲ್ಲ. ಅದು ನನ್ನೆಲ್ಲ ನಿರಾಸೆಗಳನ್ನು ಅಲ್ಲೇ ಆ ಕ್ಷಣದಲ್ಲೇ ಸುಟ್ಟು ಬೂದಿಮಾಡುತ್ತಿತ್ತು ಎಂಬ ನಂಬುಗೆ ನನ್ನದಾಗಿತ್ತು.
ಸುತ್ತ ನೋಡಿದೆ. ಅದೆಷ್ಟು ಜನ! ಅದೇನೋ ಧಾವಂತದಲ್ಲಿದ್ದಂತೆ ಕಾಣಿಸುತ್ತಾರೆ. ಅದೇ ಬೆಳಗು, ಅದೇ ಬೈಗು, ಅದೇ ಹೊತ್ತು, ಸ್ವಲ್ಪವೂ ಹೆಚ್ಚಿಲ್ಲ ಕಡಿಮೆ ಇಲ್ಲ. ನಮ್ಮೂರ ಹೊಳೆಯ ಬದಿಯಲ್ಲಿ ಕುಳಿತಾಗ ಹಕ್ಕಿಗಳು ತಂಡೋಪತಂಡವಾಗಿ ನದಿಯ ಮೇಲೆ ರೆಕ್ಕೆ ಬಡಿಯುತ್ತ ಎತ್ತಲೋ ಹೋಗುತ್ತ ಬರುತ್ತ ಇರುತ್ತವೆಯಲ್ಲ, ನನಗೆ ತಟ್ಟನೆ ನೆನಪಾಗಿದ್ದು ಅದೇ. ಆದರೆ ಆ ಹಕ್ಕಿಗಳ ನಿರುಂಬಳತೆ ಇವರುಗಳಿಗೆ ಇಲ್ಲ ಅನ್ನಿಸುವುದು. ಅವರ ದುಗುಡ ತುಂಬಿದ ಮುಖವನ್ನು ನೋಡಿದಾಗ ಅವರೆಲ್ಲ ನನ್ನಂತೆಯೇ ಅನ್ನಿಸಿಬಿಟ್ಟರು ಆ ಕ್ಷಣ. ಜನ್ಮಜನ್ಮಾಂತರದ ಬಂಧುಗಳ ಹಾಗೆ ಕಂಡರು ಅವರು. ಅದೋ ಓ ಅಲ್ಲಿ ಕಂಬದ ಪಕ್ಕದಲ್ಲಿ ನನಗೆ ನಿನ್ನನ್ನೇ ನೋಡಿದಹಾಗೆ ಅನ್ನಿಸಿತು. ಅದು ಭ್ರಮೆ ಎಂದು ಬುದ್ಧಿ ಮನಸ್ಸಿಗೆ ಹೇಳುತ್ತಿದ್ದರೂ ಅದನ್ನು ಖಚಿತಪಡಿಸಿಕೊಳ್ಳಲೋಸುಗ ನಾನು ನಿಂತಲ್ಲಿಯೇ ಕತ್ತನ್ನು ನಿಲುಕಿಸಿ ಪಾದದ ತುದಿಬೆರಳುಗಳ ಮೇಲೆ ದೇಹದ ಭಾರ ಹೇರಿ ನನ್ನ ಎತ್ತರ ಹೆಚ್ಚಿಸಿಕೊಂಡು ನೋಡಿದೆ. ಹಾಗೆ ನೋಡುತ್ತಿರುವಾಗಲೇ ಧಾವಂತದಲ್ಲಿದ್ದ ಒಬ್ಬನ ಭುಜ ನನಗೆ ತಗುಲಿ ನಾನು ಮುಗ್ಗರಿಸಿ ಬೀಳುವವನಿದ್ದೆ. ಅದೇ ಹೊತ್ತಿಗೆ ಮುಂದಿದ್ದ ಆಜಾನುಬಾಹುವಿನ ಮೇಲೆ ಒರಗಿದ್ದೆ. ಆತನಿಗೆ ಕೋಪ ಬಂತೋ ಏನೋ ನಾನು ನೆಲಕ್ಕೆ ಬೀಳದಂತೆ ತಡೆದ. ನಾನು ಕುಡಿದು ಅಮಲಿನಲ್ಲಿರುವೆನೋ ಎಂಬುದನ್ನು ಪರೀಕ್ಷಿಸುವವನಂತೆ ನನ್ನನ್ನು ನೋಡಿದ. ನನ್ನನ್ನು ಕ್ಷಮಿಸುವಂತೆ ನಾನು ಕೈ ಜೋಡಿಸಿ ಬೇಡಿಕೊಂಡೆ.
ನನಗೆ ಬಹಳ ಸಲ ಹೀಗೆಯೇ ಆಗಿದೆ. ಎಲ್ಲವೂ ಮುಗಿದೇ ಹೋಯಿತು ಎನ್ನುವಾಗ ಯಾರೋ ಬಂದು ನೆರವಿನ ಹಸ್ತ ನೀಡುತ್ತಾರೆ. ಅದು ಈ ಸಲವೂ ನಿಜವಾಯಿತು. ಆತ ನನಗೆ ಬಯ್ಯುವುದರಲ್ಲಿ ಇದ್ದನೋ ಏನೋ ಅದೇ ಹೊತ್ತಿಗೆ ಅವನು ಏರಬೇಕಿದ್ದ ಬಸ್ಸು ಬಂದಿತು. ಸೀಟು ಹಿಡಿಯುವ ಅವಸರದಲ್ಲಿ ಅವನು ಮುಂದೆ ಸಾಗಿದ. ಈ ವೇಗದ ಬದುಕಿಗೆ ನಾನು ತಕ್ಕವನಲ್ಲವೇನೋ ಎಂದು ಅನ್ನಿಸಿತು ನನಗೆ. ಒಂದೈದು ನಿಮಿಷ ಕುಳಿತು ಸಾವರಿಸಿಕೊಳ್ಳಬೇಕು ಅಂದುಕೊಂಡೆ. ಪ್ರಯಾಣಿಕರು ಕುಳಿತುಕೊಳ್ಳಲು ಹಾಕಿದ ಸೀಟಿನ ಮೇಲೆ ನಿಧಾನಕ್ಕೆ ಅಂಡು ಊರಿದೆ. ಅದೇ ಮೊದಲ ಬಾರಿಗೆ ನೋಡು ಒಂದು ಹತ್ತು ವರ್ಷ ಹೆಚ್ಚಾದಂತೆ ಭಾಸವಾಯಿತು. ಅದೇನೋ ಬದುಕು ಕಟ್ಟುವ ಹಠದೊಂದಿಗೆ ಏಕಾಏಕಿ ನಿಮ್ಮನ್ನೆಲ್ಲ ಬಿಟ್ಟುಬಂದಿದ್ದೆನಲ್ಲ. ಕುಳಿತಲ್ಲಿಯೇ ದುಃಖ ಒತ್ತರಿಸಿ ಬಂತು. ಕಣ್ಣಾಲಿಗಳು ತೇವವಾದವು. ನನ್ನ ಸುತ್ತ ಮುತ್ತ ಇದ್ದವರೆಲ್ಲ ನನ್ನ ಹಾಗೆಯೇ ಎಂದು ಅದೇ ಮೊದಲ ಬಾರಿಗೆ ತೋರಿತು. ಅದ್ಯಾವುದೋ ಜನ್ಮಜನ್ಮಾಂತರದ ಸಂಬಂಧ ಅವರೆಲ್ಲರೊಡನೆ ಬೆಸೆದುಕೊಂಡುಬಿಟ್ಟಿತು. ಆ ಪ್ರತಿಯೊಬ್ಬರಲ್ಲೂ ನನ್ನೂರಿನ ಜನರೇ ಕಾಣಿಸತೊಡಗಿದರು. ಹಾಗೆಯೇ ಈ ಜನಸಾಗರದಲ್ಲಿ ನಾನು ಒಬ್ಬೊಂಟಿಯಲ್ಲ ಎಂಬ ಭಾವ ಕೂಡ. ಬಿಂದು ನೀರು ಸಿಂಧುವಿನೊಂದಿಗೆ ಹೊಂದಿಕೊಂಡಂತೆ. ಮುದುಡಿದ ಮನಸ್ಸು ಉಲ್ಲಸಿತಗೊಂಡಿತು.
ನನ್ನಂಥವನು ಮನಸ್ಸನ್ನು ಕುಗ್ಗಿಸಿಕೊಳ್ಳುವುದೂ ಒಂದು ಬೇಜವಾಬ್ದಾರಿಯೇ. ನನ್ನ ಕೆಲಸವೋ ದಿನದ ಇಪ್ಪತ್ತನಾಲ್ಕು ಗಂಟೆಯೂ ಎಚ್ಚೆತ್ತಿರಬೇಕು. ಮೈಯೆಲ್ಲ ಕಣ್ಣಾಗಿರಬೇಕು. ಒಮ್ಮೊಮ್ಮೆ ನಿನ್ನ ನೆನಪು ಮಾಡಿಕೊಳ್ಳುವುದಕ್ಕೂ ಪುರುಸೊತ್ತು ಇರುವುದಿಲ್ಲ ಎಂದರೆ ನೀನು ಸಿಟ್ಟಾಗಕೂಡದು. ಸತ್ಯವನ್ನೇ ಹೇಳಬೇಕು, ಸತ್ಯವನ್ನಲ್ಲದೆ ಬೇರೇನೂ ಹೇಳಬಾರದು ಎಂದುಕೊಂಡವ ನಾನು. ಸತ್ಯ ಹೇಳುವ ಸಂಕಲ್ಪ ಮಾಡುವವನಿಗೆ ಸತ್ಯವನ್ನು ಕೇಳುವ ಧೈರ್ಯವೂ ಇರಬೇಕು. ಅದು ಅಪ್ರಿಯವಾದರೂ ಕೇಳಿಸಿಕೊಳ್ಳಲೇಬೇಕು. ಹಾಗೆ ಕೇಳಿಸಿಕೊಂಡಿದ್ದರಲ್ಲಿ ಕೆಲವಷ್ಟನ್ನು ತನ್ನಲ್ಲಿಯೇ ಅಡಗಿಸಿಟ್ಟುಕೊಳ್ಳಬೇಕು. ಬಾಯಿಚಪಲ ಎನ್ನುವುದು ದೊಡ್ಡ ಶತ್ರು. ಅದು ತಿನ್ನುವುದೇ ಇರಲಿ, ಆಡುವುದೇ ಇರಲಿ. ಅಳೆಯುವಾಗ ಅಳೆಯಬೇಕು, ತೂಗುವಾಗ ತೂಗಬೇಕು. ಇಲ್ಲಿ ಉದಾರತೆ ಎಂಬುದು ಬಹಳ ಸಲ ದುಬಾರಿಯಾಗುತ್ತದೆ.
ಇದೇನು ಒಮ್ಮೆಲೇ ವ್ಯಾಪಾರಿಯ ಶೈಲಿಯಲ್ಲಿ ಮಾತನಾಡುತ್ತಿರುವೆಯಲ್ಲ ಎನ್ನಬೇಡ. ವ್ಯಾಪಾರ ಎಲ್ಲಿಲ್ಲ ಹೇಳು? ಎಲ್ಲೆಲ್ಲಿ ನಾವು ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೋ ಅಲ್ಲೆಲ್ಲ ನಮ್ಮೊಳಗಿನ ವ್ಯಾಪಾರಿ ಜಾಗೃತನಾಗುತ್ತಾನೆ. ಯಾವ ಬೀಜ ಚೆನ್ನಾಗಿ ಮೊಳಕೆಯೊಡೆಯಬಲ್ಲದು ಎಂಬುದನ್ನು ನಿರ್ಧರಿಸುವ ಸಂದರ್ಭದಲ್ಲಿ ರೈತ ಕೂಡ ಒಬ್ಬ ವ್ಯಾಪಾರಿಯಾಗುತ್ತಾನೆ. ಯಾವ ಬೆಳೆಗೆ ಎಷ್ಟು ದಿನಕ್ಕೆ ಎಷ್ಟು ನೀರು ಹಾಯಿಸಬೇಕು ಎಂಬ ಲೆಕ್ಕಾಚಾರವೂ ಅದೇ. ಅದೇ ಒಬ್ಬ ರತ್ನದ ವ್ಯಾಪಾರಿ ತನ್ನ ಕಡೆ ಬಂದ ಹರಳನ್ನು ಕಲ್ಲೋ ಅಥವಾ ವಜ್ರವೋ ಎಂದು ಪರೀಕ್ಷಿಸಬೇಕಲ್ಲ, ಆಗಲೂ ಅವನೊಬ್ಬ ವ್ಯಾಪಾರಿಯೇ. ಔಷಧದ ಗುಳಿಗೆಯಲ್ಲಿ ಯಾವ ರಾಸಾಯನಿಕವನ್ನು ಎಷ್ಟು ಪ್ರಮಾಣದಲ್ಲಿ ಸೇರಿಸಬೇಕು ಎಂದು ನಿರ್ಧರಿಸುವ ವಿಜ್ಞಾನಿಯೂ ವ್ಯಾಪಾರಿಯೇ. ಸ್ವಲ್ಪ ಅತಿ ಆಯಿತು ಎನ್ನುತ್ತೀಯಾ, ಹಾಗೇನಿಲ್ಲ. ಒಂದು ಪತ್ರಿಕೆಯಲ್ಲಿ ಯಾವ ಸುದ್ದಿಗೆ ಎಷ್ಟು ತೂಕ ಇದೆ ಎಂದು ನಿರ್ಧರಿಸುವುದೂ ವ್ಯಾಪಾರಿ ಕಲೆಯೇ. ಅದೊಂದು ಕಸಬುಗಾರಿಕೆ. ಹೆಚ್ಚು ತೂಕದ ಸುದ್ದಿಯನ್ನು ಮುಖಪುಟದಲ್ಲಿ, ಕಡಿಮೆ ತೂಕದ ಸುದ್ದಿಯನ್ನು ಒಳಗಿನ ಪುಟದಲ್ಲಿ, ಹೆಚ್ಚು ಜನರನ್ನು ಸೆಳೆಯುವ ಫೋಟೋ ಮುಖಪುಟದಲ್ಲಿ, ಯಾವ ಸುದ್ದಿಯನ್ನು ಎಷ್ಟು ಪದಗಳಲ್ಲಿ ಬರೆಯಬೇಕು, ಎಷ್ಟು ಅಕ್ಷರಗಳ ತಲೆಬರೆಹ ನೀಡಬೇಕು, ಯಾವ ತಲೆಬರೆಹ ಕೊಟ್ಟರೆ ಪತ್ರಿಕೆಯನ್ನು ಅಂಗಡಿಯಲ್ಲಿ ನೇತುಹಾಕಿದಾಗ ಓದುವವನು ಹಣಕೊಟ್ಟು ಕೊಂಡುಕೊಳ್ಳುತ್ತಾನೆ ಇವೆಲ್ಲವನ್ನು ಆಲೋಚಿಸುವವನು ವ್ಯಾಪಾರಿಯಲ್ಲದೆ ಮತ್ತೇನು?
ಮನಸ್ಸಿನ ವ್ಯಾಪಾರ ಎಂಬ ಮಾತು ಆಗಾಗ ಕಿವಿಯ ಮೇಲೆ ಬೀಳುತ್ತಿರುತ್ತದೆಯಲ್ಲ. ಮನಸ್ಸಿಗಿಂತ ದೊಡ್ಡ ವ್ಯಾಪಾರಿ ಈ ಜಗತ್ತಿನಲ್ಲಿ ಯಾರೂ ಇಲ್ಲ ನೋಡು. ಈಗೊಂದು ಲೆಕ್ಕಾಚಾರ, ಕ್ಷಣ ಬಿಟ್ಟು ಇನ್ನೊಂದು ಲೆಕ್ಕಾಚಾರ. ಈ ಕೂಡುವ ಕಳೆಯುವ ಆಟವನ್ನು ಮನಸ್ಸಿಗಿಂತ ಚೆನ್ನಾಗಿ ಇನ್ನಾರೂ ಮಾಡಲಾರರು. ಈ ಮನೋ ವ್ಯಾಪಾರದಲ್ಲಿ ಎಲ್ಲ ಕಾಲಕ್ಕೂ ಲಾಭವೇ ಆಗುತ್ತದೆ ಎಂದೇನೂ ಇಲ್ಲ. ಆದರೆ ಲಾಭ ನಷ್ಟದ ಚಿಂತೆ ಇಲ್ಲದೆ ಸಮಾಹಿತದ ಸ್ಥಿತಿ ಸಾಧಿಸುವುದು ಇದೆಯಲ್ಲ, ಅದು ದೊಡ್ಡದು. ಇಂಥ ಸ್ಥಿತಿ ಒಂದು ಸಾಧನೆಯೇ ಸೈ. ನಾನು, ನನ್ನವರು, ನನಗೆ ಬೇಕಾದವರು, ನಾನೇನೋ ಅವರಿಗೆ ಮಾಡಬೇಕಾಗಿರುವುದು ಇದೆ, ಇದನ್ನೆಲ್ಲ ನಾನೊಬ್ಬನೇ ಮಾಡಬಲ್ಲೆ, ಇದನ್ನು ನಾನು ಹೀಗೇ ಮಾಡದಿದ್ದರೆ ನನ್ನನ್ನು ನಂಬಿದವರು ಬೀದಿಗೆ ಬೀಳುತ್ತಾರೆ ಎಂಬಿತ್ಯಾದಿ ಭಾವನೆಗಳಿಂದ ದೂರ ಅತಿದೂರ ಹೋದಾಗಲಷ್ಟೇ ಇಂಥ ಸ್ಥಿತಿ ಸಾಧ್ಯ. ಹಾಗೆ ಸಾಧಿಸಿದವನು ಘನಸ್ಥ.
ಇದನ್ನೆಲ್ಲ ಕೇಳಿದ ಮೇಲೆ ನಿನಗೆ ನಾನು ವೇದಾಂತಿಯಾಗುತ್ತಿದ್ದೇನೆ ಎಂಬ ಸಣ್ಣ ಗುಮಾನಿ ಬಂದಿರಬಹುದು. ಬದುಕಿಗಿಂತ ದೊಡ್ಡ ವೇದ ಯಾವುದಿದೆ ಹೇಳು? ಬದುಕೇ ಒಂದು ವೇದ ಶಾಲೆ. ಬದುಕು ತೆರೆದುಕೊಳ್ಳುವ ಒಂದೊಂದು ತಿರುವುಗಳೂ ಒಂದೊಂದು ಉಪನಿಷತ್ತುಗಳು. ಅದಕ್ಕೆ ಎಷ್ಟೊಂದು ಟೀಕೆಗಳು, ವ್ಯಾಖ್ಯಾನಗಳು. ಇಲ್ಲಿ ಎದುರಾಗುವ ಟೀಕಾಚಾರ್ಯರು ಮತ್ತೆಲ್ಲಿಯೂ ದೊರೆಯುವುದಿಲ್ಲ. ಇವರೆಲ್ಲ ಯಾವ ಸಂಭಾವನೆಯೂ ಇಲ್ಲದೆಯೆ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವರು. ಈ ಸುಗುಣ ಇದ್ದಾನಲ್ಲ ಆಗಾಗ ಅವನು ಇಂಥದ್ದನ್ನು ಮಾಡುತ್ತ ಇರುತ್ತಾನೆ. ಸುಮ್ಮಸುಮ್ಮನೆ ನನ್ನ ಮೇಲೆ ಅವನು ಟಿಪ್ಪಣಿಯನ್ನು ಒಪ್ಪಿಸುವನು. ನಾನು ಉದ್ರೇಕಗೊಳ್ಳಬೇಕು, ಅವನೊಂದಿಗೆ ಜಗಳಕ್ಕೆ ನಿಲ್ಲಬೇಕು ಎಂದು ಅವನು ಬಯಸುತ್ತಾನೆ. ವ್ಯರ್ಥ ಪ್ರಯತ್ನ ಮಾಡಬೇಡ ಎಂದು ನಾನೂ ಅವನನ್ನು ರೇಗಿಸುತ್ತ ಇರುತ್ತೇನೆ. ಸುಗುಣ ಒಳ್ಳೆಯವನೇ. ನನ್ನ ಹಾಗೆಯೇ ಅವನೂ ಅನೇಕ ಕನಸುಗಳನ್ನು ಕಟ್ಟಿಕೊಂಡು ಬಂದವನು. ನಾನು ನನ್ನ ಸುತ್ತಲಿನದನ್ನು ನೋಡುವುದು ಮತ್ತು ಆಡುವುದನ್ನು ಕೇಳಿಸಿಕೊಳ್ಳುವುದನ್ನು ಮಾಡುತ್ತಿದ್ದರೆ ಅವನು ಪುಸ್ತಕದ ಹುಳು. ಯಾವಾಗ ನೋಡಿದರೂ ಅವನ ಕೈಯಲ್ಲಿ ಒಂದು ಪುಸ್ತಕ ಇರುವುದು. ಮಲಗುವಾಗಲೂ ಎದೆಯ ಮೇಲೆ ಪುಸ್ತಕವನ್ನು ನಿಲ್ಲಿಸಿ ಓದುತ್ತಿರುತ್ತಾನೆ. ಯಾವಾಗ ನಿದ್ದೆ ಬರುತ್ತದೋ ಗೊತ್ತಿಲ್ಲ. ಪುಸ್ತಕ ಹಾಗೆಯೇ ಹಾಸುಗೆಯ ಮೇಲೆ ಉರುಳಿರುತ್ತದೆ. ನನಗೂ ಓದುವಂತೆ ಕೆಲವು ಪುಸ್ತಕಗಳನ್ನು ಅವನು ಶಿಫಾರ್ಸು ಮಾಡುತ್ತಾನೆ. ಅದೆಷ್ಟೋ ರಷ್ಯಾದ ಸಾಹಿತ್ಯವನ್ನು ಅವನು ಓದಿ ಅರಗಿಸಿಕೊಂಡಿದ್ದ. ಮಾರ್ಕ್ಸ್, ಏಂಗೆಲ್ಸ್, ಟಾಲ್ಸ್ಟಾಯ್, ದಾಸ್ತೋವಸ್ಕಿ, ಗಾರ್ಕಿ ಇವರೆಲ್ಲ ಆತನಿಗೆ ಪ್ರೀತಿಪಾತ್ರರು. ಅವನ ಒತ್ತಾಯಕ್ಕೆ ಒಮ್ಮೊಮ್ಮೆ ನಾನೂ ಓದುತ್ತೇನೆ. ಇಲ್ಲದಿದ್ದರೆ, ನೀನು ಓದಿರುವಿಯಲ್ಲ, ಅದರ ಸಾರಾಂಶವನ್ನು ನನಗೆ ಹೇಳು, ಸಾಕು ಎನ್ನುತ್ತೇನೆ. ನನ್ನ ಮಾತನ್ನು ಕೇಳಿ ಅವನಿಗೆ ಕೋಪ ಬರುತ್ತದೆ. ಆದರೂ ನನ್ನ ಮೇಲೆ ಮರುಕ ತೋರುವವನಂತೆ ಪುಸ್ತಕದ ಸಾರವನ್ನು ಅವನು ಹೇಳಿಬಿಡುತ್ತಾನೆ. ಪುಸ್ತಕದ ಓದಿನಿಂದ ಅವನು ಎಷ್ಟು ಜ್ಞಾನ ವೃದ್ಧಿ ಮಾಡಿಕೊಂಡನೋ ಗೊತ್ತಿಲ್ಲ. ನಾನಂತೂ ನನ್ನ ಸುತ್ತ ಮುತ್ತಲಿನದನ್ನು ನೋಡುತ್ತ ನೋಡುತ್ತ ನನ್ನ ಮನದ ದುಗುಡವನ್ನು ಕಳೆದುಕೊಳ್ಳುತ್ತೇನೆ. ಹೀಗೆ ಹೇಳುತ್ತ ನಾನು ಸುಗುಣನನ್ನು ಹೀಗಳೆಯುತ್ತಿಲ್ಲ, ಅಥವಾ ನನ್ನ ಬೆನ್ನು ನಾನೇ ತಟ್ಟಿಕೊಳ್ಳುತ್ತಿಲ್ಲ. ನನ್ನದು ಸರಳ ಸತ್ಯ. ಬೆಳಿಗ್ಗೆ ಸೂರ್ಯೋದಯ ನೋಡುತ್ತೇನೆ. ಸಂಜೆ ಸೂರ್ಯಾಸ್ತ ನೋಡುತ್ತೇನೆ. ನಿನ್ನೆಯೂ ನೋಡಿದ್ದೆ, ಇವತ್ತೂ ನೋಡುತ್ತಿದ್ದೇನೆ, ನಾಳೆಯೂ ನೋಡುತ್ತೇನೆ. ಆದರೂ ಮನಸ್ಸಿಗೆ ಒಂದು ನವೀನವಾದ ಆನಂದ, ಅದೇನೋ ಹೊಸ ಅನುಭೂತಿ. ಇಂದಿನದನ್ನು ನೋಡುತ್ತಿರುವಾಗ ನಿನ್ನೆಯದು ನೆನಪಿಗೆ ಬರುವುದಿಲ್ಲ, ನಾಳೆಯದರ ಕಲ್ಪನೆ ಇರುವುದಿಲ್ಲ. ಕೇವಲ ಸೂರ್ಯೋದಯವಲ್ಲ, ಅರಳಿದ ಒಂದು ಹೂವನ್ನು ನೋಡು. ಅದೇ ತಾಜಾತನ. ಅದೇ ಒಂದು ಹಕ್ಕಿಯ ಇಂಚರವನ್ನು ಆಲಿಸು. ಗಿಡಮರಗಳ ಸಂದಿಯಿಂದ ಸುಳಿವ ಗಾಳಿಗೆ ನಿನ್ನ ಕಿವಿಯನ್ನು ತೆರೆದಿಡು, ಹೊಳೆಯಂಚಿನಲ್ಲಿ ಕುಳಿತು ನೀರಿನ ಸೆಳೆತ ಕೇಳಿಸಿಕೋ. ಇಲ್ಲೆಲ್ಲ ಒಂದು ಸಂದೇಶ ನನಗೆ ಬೋಧೆಯಾಗುತ್ತದೆ. ಅನುದಿನ ಅನುಕ್ಷಣ ಹೊಸದನ್ನು ಬರಮಾಡಿಕೋ, ಹಳೆಯದಕ್ಕೆ ಕೊರಗುತ್ತ ಕೂಡಬೇಡ ಅಥವಾ ಹಳೆಯದರ ವೈಭವವನ್ನು ನೆನೆಯುತ್ತ ಸದ್ಯದ ಸೌಂದರ್ಯವನ್ನು ಅವಗಣನೆ ಮಾಡಬೇಡ ಎಂದು ಹೇಳಿದಂತೆ ಭಾಸವಾಗುತ್ತದೆ. ಇಂಥ ಒಂದು ಅನುಭೂತಿಯೇ ನಿತ್ಯ ಕಾಲೆಳೆಯುವವರ ನಡುವೆ ಕೆಲಸ ಮಾಡುವುದಕ್ಕೆ ಹೊಸ ಕಸುವನ್ನು ನೀಡುತ್ತದೆ.
ಕಾಲೆಳೆಯುವವರ ಕಾಟ ತುಂಬ ಹೆಚ್ಚಾದಾಗ ಸುಗುಣ ಕುಗ್ಗಿಹೋಗಿಬಿಡುತ್ತಾನೆ. ನಾನೇ ಅವನನ್ನು ಸಂತೈಸಬೇಕು. ಅವನಿಂದ ಇಷ್ಟವಿಲ್ಲದ ಕೆಲಸವನ್ನು ಮಾಡಲು ಹೇಳಿದಾಗ ತುಂಬ ಸಂಕಟಪಡುತ್ತಾನೆ. ನನ್ನಿಂದ ಇದು ಸಾಧ್ಯವಿಲ್ಲ ಎಂದು ಹೇಳುವುದು ಅವನಿಂದ ಸಾಧ್ಯವಾಗುವುದಿಲ್ಲ. ಅವನು ಎಲ್ಲವನ್ನೂ ತೀವ್ರವಾಗಿ ಅನುಭವಿಸುತ್ತಾನೆ. ಚಹಾ ಕುಡಿಯುವ ಕ್ರಿಯೆ ಕೆಲವರ ಪಾಲಿಗೆ ಯಾಂತ್ರಿಕ. ಕುಡಿಯುತ್ತಿದ್ದೇನೆ ಎಂಬುದರ ಅರಿವಿಲ್ಲದೆಯೇ ಅದು ಕೆಲವರ ಗಂಟಲಲ್ಲಿ ಇಳಿದು ಹೋಗುತ್ತದೆ. ಆದರೆ ಸುಗುಣ ಹಾಗಲ್ಲ, ಕಪ್ಪಿನಲ್ಲಿಯ ಚಹಾವನ್ನು ಬಸಿಯಲ್ಲಿ ಬಸಿದುಕೊಂಡು ನಿಧಾನಕ್ಕೆ ತುಟಿಗೆ ಹಚ್ಚಿ ಹನಿಹನಿಯಾಗಿ ಹೀರುತ್ತಾನೆ. ಹಾಗೆ ಹೀರುವಾಗ ಹನಿಯನ್ನು ಗಂಟಲಿನೊಳಕ್ಕೆ ಇಳಿಸಿಕೊಳ್ಳುವಾಗ ತಾನು ಅನುಭವಿಸುವ ಆನಂದ ತನಗಷ್ಟೇ ಅಲ್ಲ ತನ್ನ ಎದುರಿಗೆ ಕುಳಿತವರಿಗೂ ಅವನು ಸಂವಹನಗೊಳಿಸಬಲ್ಲ. ಅಷ್ಟಕ್ಕೂ ಸುಗುಣ ನನಗೆ ಹೊರಗಿನವನೇನಲ್ಲ. ನಾವಿಬ್ಬರೂ ಒಂದೇ ಊರಿನವರು. ಒಂದೇ ಶಾಲೆಯಲ್ಲಿ ಓದಿದವರು. ಒಂದೇ ತರಗತಿಯಲ್ಲಿ ಒಂದೇ ಬಾಕಿನ ಮೇಲೆ ಕುಳಿತವರು. ಮತ್ತೆ ಅವನು ನಮ್ಮ ಕುಟುಂಬಕ್ಕೆ ದೂರದ ಸಂಬಂಧಿಕನೂ ಹೌದು. ಹೀಗಾಗಿ ಅವನ ಬಗ್ಗೆ ಉಳಿದವರಿಗಿಂತ ನನಗೇ ಹೆಚ್ಚು ಗೊತ್ತಿರುವುದು. ಅದೇ ರೀತಿ ನನ್ನ ಕುರಿತು ಅವನಿಗೆ. ಕಾಲೇಜಿನಲ್ಲೂ ಅವನು ನನ್ನ ಬೆನ್ನುಹತ್ತಿದ, ಹಾಗೆಯೇ ಉದ್ಯೋಗದಲ್ಲಿಯೂ. ಅವನೂ ನನ್ನ ಕುರಿತು ಹೀಗೆಯೇ ಹೇಳಬಹುದೇನೋ. ಇದರಿಂದ ಪರಸ್ಪರ ಲಾಭವಂತೂ ಆಗಿದೆ. ನನ್ನನ್ನು ನಾನು ನೋಡಿಕೊಳ್ಳುವುದಕ್ಕೆ ನನಗೆ ಕನ್ನಡಿಯಂತೂ ಸಹಾಯ ಮಾಡುತ್ತದೆ. ಆದರೆ ನನ್ನ ಒಳಗಿನದನ್ನು ತೋರಿಸಲು ಸುಗುಣ ಅಂತರಾತ್ಮದ ಕನ್ನಡಿಯಾಗುತ್ತಾನೆ. ನನ್ನ ಚಾರಿತ್ರ್ಯಕ್ಕೆ ಅವನು ಒರೆಗಲ್ಲು ಆಗುತ್ತಾನೆ. ವಾಗ್ವಾದಕ್ಕೆ ನಿಂತರೆ ನಾವಿಬ್ಬರೂ ಬಾಲ್ಯದ ಗೆಳೆಯರು ಎಂಬುದನ್ನು ಮರೆತು ಹೊಯ್ಕಯ್ ಮಾಡಿಕೊಳ್ಳುತ್ತೇವೆ. ಕೊನೆಯಲ್ಲಿ ಯಾರೊಬ್ಬರಿಗೂ ಗೆದ್ದ ಹಮ್ಮಿರುವುದಿಲ್ಲ, ಸೋತ ಬಿಮ್ಮಿರುವುದಿಲ್ಲ. ನಮ್ಮ ನಂಬಿಕೆ ಒಂದಿರುವಾಗ ಬದುಕುವ ಅನಿವಾರ್ಯತೆ ಇನ್ನೊಂದಾಗಿರುವಾಗ ಅಂಥ ಬದುಕಿಗೆ ಯಾವುದೇ ಅರ್ಥವಿರುವುದಿಲ್ಲ ಎಂದು ಅವನು ಆಗಾಗ ಹೇಳುತ್ತಿದ್ದ. ಅಂಥದ್ದೇನಾದರೂ ಸ್ಥಿತಿ ತನಗೊದಗಿ ಬಂದರೆ ಎಂದು ತನ್ನನ್ನೇ ತಾನು ಪ್ರಶ್ನಿಸಿಕೊಂಡು ವಿಹ್ವಲತೆ ಅನುಭವಿಸುತ್ತಿದ್ದ. ಇಂಥ ಪರಿಸ್ಥಿತಿ ಎದುರಾದಾಗ ಜೋರಾಗಿ ಮೈ ಕೊಡವಿಕೊಂಡು ಎಲ್ಲದರಿಂದ ದೂರ ಓಡಿಹೋಗಬೇಕು ಎನ್ನುತ್ತಿದ್ದ. ದುಡ್ಡು ಅನಿವಾರ್ಯ ನಿಜ, ಆದರೆ ದುಡ್ಡೇ ಎಲ್ಲವೂ ಅಲ್ಲವಲ್ಲ. ನಾನಂತೂ ಅಂಥ ಜಾಗದಲ್ಲಿ ಇರಲಾರೆ. ಮನಸ್ಸಿಗೆ ಒಪ್ಪದ್ದನ್ನು ನಾನು ಮಾಡಲಾರೆ ಎನ್ನುತ್ತಿದ್ದ.
ಹೀಗೆ ಹೇಳುವಾಗ ಆತನ ಪತ್ನಿ ಸ್ವರ್ಣಾ, ಮಗ ಅನೂಪ ಅವನಿಗೆ ನೆನಪಾಗುವುದಿಲ್ಲವೆ ಎಂದುಕೊಳ್ಳುತ್ತೇನೆ ನಾನು. ಅದೆಷ್ಟು ವರ್ಷ ಅವನು ಸ್ವರ್ಣಾಳ ಹಿಂದೆ ಬಿದ್ದಿದ್ದ! ಅವಳನ್ನು ಒಲಿಸಿಕೊಳ್ಳುವುದಕ್ಕೆ ಅವನು ಓದಿದ ಯಾವ ಪುಸ್ತಕದ ಜ್ಞಾನವೂ ಅವನ ನೆರವಿಗೆ ಬಂದಿರಲಿಲ್ಲ. ಕನ್ನಡ, ಇಂಗ್ಲಿಷಿನಲ್ಲಿಯ ಅತಿ ಸುಂದರವಾದ ಪ್ರೇಮ ಕವಿತೆಗಳ ಸಾಲುಗಳನ್ನು ಅವಳಿಗೆ ಎಸ್ಸೆಮ್ಮೆಸ್ ಮಾಡುತ್ತಿದ್ದ. ಹೀಗೆ ಹುಡುಗರನ್ನು ಕಾಡಿಸುವದರಲ್ಲಿ ಹುಡುಗಿಯರಿಗೆ ಏನು ಸುಖವೋ ಯಾರು ಬಲ್ಲ? ಕೊನೆಗೊಂದು ದಿನ ದಯೆ ತೋರುವವಳ ಹಾಗೆ ಸ್ವರ್ಣಾ ಅವನ ಪ್ರೀತಿಯನ್ನು ಒಪ್ಪಿಕೊಂಡಳು. ಈ ಮಹಾನಗರಿಯ ಸಂದುಗೊಂದಿಗಳಲ್ಲಿಯ ರೆಸ್ಟೋರೆಂಟುಗಳಲ್ಲಿ, ಕಾಫಿ ಪಬ್ಗಳಲ್ಲಿ, ಉದ್ಯಾನಗಳಲ್ಲಿ ಎಲ್ಲೆಂದರಲ್ಲಿ ಸುತ್ತಿದರು. ಸುತ್ತಾಟ ಸಾಕೆನ್ನಿಸಿತು. ಬದುಕಿನುದ್ದಕ್ಕೂ ಒಟ್ಟಿಗೆ ಹೆಜ್ಜೆ ಹಾಕೋಣ ಎಂದು ನಿರ್ಧರಿಸಿ ಸಪ್ತಪದಿ ತುಳಿದರು. ಆ ಮೇಲೆ ಅನೂಪ ಹುಟ್ಟಿದ್ದು.
ಅವನ ಮದುವೆಯಲ್ಲಿಯೇ ಅಲ್ಲವೆ ನಾನು ನಿನ್ನನ್ನು ಮೊದಲ ಬಾರಿಗೆ ಕಂಡಿದ್ದು. ನಾನು ನಿನ್ನ ನೋಡಿ ಮುಗುಳುನಗೆ ನಕ್ಕಿದ್ದು ನೀನು ತುಟಿ ಕೊಂಕಿಸಿದ್ದು, ಮುಂಗುರುಳನ್ನು ಹಿಂದಕ್ಕೆ ಸರಿಸುತ್ತ ನನ್ನ ಕಡೆ ಒಯ್ಯಾರದಿಂದ ಕತ್ತು ತಿರುಗಿಸಿದ್ದು, ನಂತರದ ದಿನಗಳಲ್ಲಿ ನನ್ನ ನಿನ್ನ ಮದುವೆಗೆ ಸ್ವರ್ಣಾಳೇ ಪೌರೋಹಿತ್ಯ ವಹಿಸಿದ್ದು, ಇದರಿಂದಾಗಿ ಮದುವೆಯಾದ ನಂತರದ ದಿನಗಳಲ್ಲಿ ಬಡವಾಗಬಹುದಾಗಿದ್ದ ನನ್ನ ಮತ್ತು ಸುಗುಣನ ಸ್ನೇಹ ಇನ್ನಷ್ಟು ಗಟ್ಟಿಯಾಗಿದ್ದು. ಎಲ್ಲವೂ ಜನಪದರ ಕತೆಗಳಲ್ಲಿ ಬರುವಹಾಗೆ ಸುಖವಾಗಿ ಸಾಗುತ್ತಿರಲಾಗಿ…
ನನಗೊಂದು ಸಲ ಸುಗುಣ ತುಂಬ ಬೇಜಾರಿನಿಂದ ಹೇಳಿದ್ದ, ಗೆಳೆಯ ಯಾಕೋ ಕೆಲಸದಲ್ಲಿ ಮೊದಲಿನ ಉತ್ಸಾಹ ಉಳಿದುಕೊಂಡಿಲ್ಲ. ಕೆಲವು ಬಾರಿ ಕೆಲಸ ಬಿಡಬೇಕು ಎಂದುಕೊಳ್ಳುತ್ತೇನೆ. ಆದರೆ ಸ್ವರ್ಣಾ ಮತ್ತು ಅನೂಪನ ಮುಖ ಕಣ್ಣ ಮುಂದೆ ಬಂದಾಗ ಕೆಲಸ ಬಿಡುವ ನಿರ್ಧಾರ ಸಡಿಲವಾಗಿಬಿಡುತ್ತದೆ. ಸ್ವರ್ಣಾಳ ಕೆಲಸ ಬಿಡಿಸಿ ಮೂರ್ಖತನ ಮಾಡಿದೆ ಎನ್ನಿಸುತ್ತಿದೆ. ಅನೂಪ ಈಗ ಹತ್ತನೆ ತರಗತಿ. ಮುಂದಿನ ವರ್ಷ ಕಾಲೇಜು, ಆ ಮೇಲೆ ಯಾವುದಾದರೂ ವೃತ್ತಿಪರ ಕೋರ್ಸ್ ಓದಿಸಬೇಕು. ಹುಲ್ಲುಗಾವಲಿನಲ್ಲಿ ದಿಕ್ಕು ಗೊತ್ತಿಲ್ಲದೆ ಓಡುತ್ತಿದ್ದೇನೆ ಅನ್ನಿಸುತ್ತಿದೆ ಎಂದು. ಸುಗುಣ ತನ್ನ ಹೆಂಡತಿಯ ಕೆಲಸ ಬಿಡಿಸುವ ಮೊದಲು ನನ್ನ ಮತ್ತು ನಿನ್ನ ಎದುರಿಗೂ ಚರ್ಚಿಸಿದ್ದು ನಿನಗೂ ಗೊತ್ತಿದೆ. ಅನೂಪ ಬಸಿರಿನಲ್ಲಿದ್ದಾಗ ಬಯಕೆಯ ಶಾಸ್ತ್ರ ಮಾಡುವಾಗ ನಾನು ಮತ್ತು ನೀನು ಅವನ ಮನೆಗೆ ಹೋಗಿದ್ದೆವಲ್ಲ, ಅವತ್ತೇ ಅವನು ಹೇಳಿದ್ದ. ಅದಕ್ಕೂ ಮೊದಲು ಅವನು ಸ್ವರ್ಣಾ ಜೊತೆಗೂ ಚರ್ಚಿಸಿದ್ದ ಎಂದು ಕಾಣುತ್ತದೆ. ಹುಟ್ಟುವ ಮಗುವಿನ ಭವಿಷ್ಯ ಅವನಿಗೆ ಮುಖ್ಯವಾಗಿತ್ತು. ನನ್ನೊಬ್ಬನ ದುಡಿಮೆ ಸಾಕು. ಗಂಡಾಗಲಿ ಹೆಣ್ಣಾಗಲಿ ನಮಗೊಂದೇ ಮಗು. ಇದು ತನ್ನ ಮತ್ತು ಸ್ವರ್ಣಾಳ ನಿರ್ಧಾರ ಎಂದೂ ಹೇಳಿದ್ದ. ನಾನಾಗಲಿ ನೀನಾಗಲಿ ಏನು ಹೇಳಬಹುದಿತ್ತು ಅವನಿಗೆ? ಇದೀಗ ಎಷ್ಟೊಂದು ವರ್ಷಗಳು ಕಳೆದು ಹೋದವು ಅಲ್ಲವೆ? ಎರಡು ವರ್ಷಗಳ ಹಿಂದೆ ಬ್ಯಾಂಕ್ ಸಾಲ ಮಾಡಿ ನಿವೇಶನ ಖರೀದಿಸಿ ಮನೆಯನ್ನೂ ಕಟ್ಟಿಸಿಕೊಂಡಿದ್ದನಲ್ಲ. ನೀನಂತೂ ಇಲ್ಲಿರಲಿಲ್ಲ. ನಾನೊಬ್ಬನೇ ಗೃಹಪ್ರವೇಶಕ್ಕೆ ಹೋಗಿದ್ದೆ. ಅವನ ಅಪ್ಪ ಅಮ್ಮ ಊರ ಕಡೆಯ ನೆಂಟರು ಎಲ್ಲರೂ ಅಲ್ಲಿ ಭೇಟಿಯಾಗಿದ್ದರು. ನೀನು ಯಾವಾಗ ಮನೆ ಕಟ್ಟಿಸುವುದು ಎಂದು ಕೇಳಿದ್ದರು. ನಾನು ಹಾಗೆಯೇ ನಕ್ಕು ಅವರ ಪ್ರಶ್ನೆಗೆ ಉತ್ತರಿಸುವುದರಿಂದ ತಪ್ಪಿಸಿಕೊಂಡಿದ್ದೆ. ನಾವು ಎರಡೆಕರೆ ಭೂಮಿ ಖರೀದಿಸಿದ್ದು, ಪುಟ್ಟ ಮನೆ ಕಟ್ಟಿಕೊಂಡು ಅಲ್ಲಿ ನೀನು ನಾಲ್ಕು ಹಸುಗಳನ್ನು ಸಾಕಿರುವುದು, ತರಕಾರಿ ಬೆಳೆಯುತ್ತಿರುವುದು, ನಾನು ವಾರಾಂತ್ಯದಲ್ಲಿ ನಿನ್ನಲ್ಲಿಗೆ ಬಂದು ಹೋಗುತ್ತಿರುವುದು ಇವನ್ನೆಲ್ಲ ಅವರಿಗೇಕೆ ಹೇಳಬೇಕು ಅಂದುಕೊಂಡೆ. ತುಂಬ ದೂರವೇನಲ್ಲ, ಬಸ್ಸಿನಲ್ಲಿ ಒಂದು ತಾಸಿನ ದಾರಿಯೇ ಆದರೂ ನಿನ್ನ ಬಿಟ್ಟು ನಾನು ಇಲ್ಲಿರುತ್ತೇನೆ ಎಂದರೆ ಅದಕ್ಕೆ ಹತ್ತು ಪ್ರಶ್ನೆಗಳು, ಅದಕ್ಕೆ ನನ್ನ ಸಮಜಾಯಿಷಿ, ಅದು ಅವರಿಗೆ ಇಷ್ಟವಾಗದೆ ಹೋಗಬಹುದು. ನನ್ನೆದುರಿಗೆ ಒಂದು ಹೇಳಿ ಬೆನ್ನಹಿಂದೆ ಇನ್ನೊಂದು ಹೇಳಬಹುದು. ಅವೆಲ್ಲ ರಗಳೆ ಏಕೆ ಎಂದು ನಾನು ಹಿಂಜರಿದಿದ್ದು.
ಕಚೇರಿ ಕೆಲಸದ ಮುಜುಗರಗಳು ನಮ್ಮನ್ನು ತೀವ್ರವಾಗಿ ಬಾಧಿಸುತ್ತವೆ. ಒಮ್ಮೆ ನನಗೆ ಒಮ್ಮೆ ಸುಗುಣಂಗೆ. ನಾನು ಎಲ್ಲವನ್ನೂ ನಿನ್ನ ಜೊತೆ ಹೇಳಿಕೊಳ್ಳಲು ಆಗದಿದ್ದರೂ ಸುಗುಣನ ಜೊತೆಯಲ್ಲಂತೂ ಹೇಳಿಕೊಳ್ಳುತ್ತೇನೆ. ಹೇಳಿಕೊಳ್ಳದೆ ಹೇಗೆ ಇರಲಿ. ನಾನು ಎಷ್ಟೊಂದು ತೀವ್ರ ಭಾವುಕನಾಗಿದ್ದೆ ಎಂದರೆ ನಾನು ಬರೆದ ಅಲ್ಪಪ್ರಾಣ ಅಕ್ಷರವನ್ನು ನನ್ನ ಉಸ್ತುವಾರಿ ಮಹಾಪ್ರಾಣವನ್ನಾಗಿ ತಪ್ಪಾಗಿ ತಿದ್ದಿದಾಗ ಪ್ರತಿಭಟಿಸಿ ನೌಕರಿಯನ್ನೇ ಬಿಡಬೇಕು ಅಂದುಕೊಂಡಿದ್ದೆ. ಆಗ ನನ್ನನ್ನು ತಡೆದಿದ್ದು ಇದೇ ಸುಗುಣ. ಇಲ್ಲದಿದ್ದರೆ ವಾರಾಂತ್ಯದಲ್ಲಿ ನಿನ್ನ ಬಳಿಗೆ ಬರುವಾಗ ಕೆಲಸವಿಲ್ಲದವನಾಗಿರುತ್ತಿದ್ದೆ. ಇಂಥ ವಿಹ್ವಲಗೊಂಡ ಮನಸ್ಥಿತಿಯಲ್ಲಿಯೇ ಬಸ್ ನಿಲ್ದಾಣದಲ್ಲಿ ನಾನು ಆ ಆಜಾನುಬಾಹುವಿಗೆ ಡಿಕ್ಕಿ ಹೊಡೆದದ್ದು.
ಸ್ವಲ್ಪ ಹೊತ್ತು ನಾನು ಆ ಬಸ್ ನಿಲ್ದಾಣದಲ್ಲಿಯೇ ಕುಳಿತು ಸಾವರಿಸಿಕೊಂಡೆ. ಬಳಿಕ ನನ್ನ ಬಸ್ ಬಂದ ಕೂಡಲೆ ಆ ಜಂಗುಳಿಯಲ್ಲಿಯೇ ನಾನೂ ನುಸುಳಿಕೊಂಡು ಹತ್ತಿಕೊಂಡೆ. ಕಷ್ಟಪಟ್ಟು ಸೀಟನ್ನೂ ಹಿಡಿದು ಕುಳಿತುಕೊಂಡೆ. ಮನಸ್ಸಿಗೆ ನಿರಾಳ ಅನ್ನಿಸಿತು. ಸೀಟು ಅಂದಕೂಡಲೆ ಮತ್ತೆ ಸುಗುಣನೇ ನೆನಪಾದ. ಅವನು ತನ್ನ ಕಚೇರಿಯ ಸೀಟಿನ ಅವಾಂತರ ಹೇಳಿದ್ದ. ಅವನ ಕಂಪನಿಯಲ್ಲಿ ಇತ್ತೀಚೆ ಕೆಲವು ಬದಲಾವಣೆಗಳು ಆಗಿದ್ದವು. ಯಾವುದೇ ಕಂಪನಿ ಇರಲಿ ಅಲ್ಲಿಯ ಆಡಳಿತದಲ್ಲಿಯ ಬದಲಾವಣೆಗಳು ಅಲ್ಲಿ ಕೆಲಸ ಮಾಡುವವರನ್ನು ಕೇಳಿ ಆಗುವುದಿಲ್ಲ. ಇದು ನಿನಗೂ ಗೊತ್ತಿದೆ. ಹೊಸಬ ಆಡಳಿತಾಧಿಕಾರಿ ಬಂದಿದ್ದ. ಅವನು ತನ್ನ ಜೊತೆಗೆ ತನ್ನದೇ ಒಂದು ಸಣ್ಣ ತಂಡವನ್ನೂ ತಂದಿದ್ದ. ತನ್ನ ಆಲೋಚನೆಗಳನ್ನು ಜಾರಿ ಮಾಡುವುದಕ್ಕೆ ಅವರೆಲ್ಲ ಬೇಕಾಗುತ್ತಾರೆ ಎಂದು ಕಂಪನಿಯ ಮಾಲೀಕರನ್ನು ಒಪ್ಪಿಸಿದ್ದ. ಇದ್ದವರಲ್ಲಿ ಕೆಲವರನ್ನು ತೆಗೆಯದೆ ತನ್ನೊಂದಿಗೆ ಬಂದವರಿಗೆ ಸೀಟುಗಳ ವ್ಯವಸ್ಥೆ ಮಾಡುವುದು ಅವನಿಗೆ ಅಸಾಧ್ಯವಾಯಿತು. ಕಾರಣ ಕೆಲವರನ್ನು ಎರಡು ಮೂರು ತಿಂಗಳ ಸಂಬಳ ನೀಡಿ ಬೇರೆ ಉದ್ಯೋಗ ನೋಡಿಕೊಳ್ಳಿ ಎಂದು ಕಳುಹಿಸಲಾಯಿತು. ಸುಗುಣನ ಮೇಲೆ ಮಾಲೀಕರಿಗೆ ಒಳ್ಳೆಯ ಅಭಿಪ್ರಾಯವಿತ್ತು. ಇದನ್ನು ಅರಿತ ಹೊಸಬ ಆಡಳಿತಾಧಿಕಾರಿ ಸುಗುಣ ತಾನಾಗಿಯೇ ಕೆಲಸ ಬಿಡುವಂತೆ ಕೆಲವು ತಂತ್ರಗಳನ್ನು ಅನುಸರಿಸಿದ. ಮೊದಲು ಆತನು ಕುಳಿತ ಸೀಟಿನಿಂದ ಬೇರೆಕಡೆ ಕುಳಿತುಕೊಳ್ಳುವಂತೆ ಬೇರೆಯವರಿಂದ ಹೇಳಿಸಿದ. ಆತನ ಮೇಲೆ ತನಗೆ ತುಂಬ ವಿಶ್ವಾಸವಿದೆ ಎನ್ನುವಂತೆ ತೋರಿಸಿಕೊಂಡು ಆತ ಒಬ್ಬನನ್ನೇ ತನ್ನ ಗರ್ಭಗುಡಿಗೆ ಕರೆಯಿಸಿಕೊಂಡು ಕಂಪನಿಯ ಎಲ್ಲ ವಿಚಾರಗಳನ್ನು ಚರ್ಚಿಸಿದನಂತೆ. ನಿನಗೆ ಬರುತ್ತಿರುವ ಸಂಬಳ ತುಂಬ ದೊಡ್ಡದು. ನೀನು ತುಂಬ ನಿಷ್ಠಾವಂತ ಕೆಲಸಗಾರ. ಅದಕ್ಕೇ ಕಂಪನಿ ನಿನ್ನನ್ನು ಇಷ್ಟೊಂದು ಚೆನ್ನಾಗಿ ನೋಡಿಕೊಂಡಿದೆ ಎಂದೆಲ್ಲ ಹೇಳಿದನಂತೆ. ಮತ್ತೊಂದು ದಿನ ಹೀಗೆಯೇ ಕರೆದು ಕಂಪನಿಯ ಆರ್ಥಿಕ ಸ್ಥಿತಿ ಏನೇನೂ ಚೆನ್ನಾಗಿಲ್ಲ. ಎಲ್ಲವೂ ಸರಿ ಇದೆ ಎಂದು ನಾನು ಬಂದೆ. ಇಲ್ಲಿಗೆ ಬಂದ ಮೇಲೆಯೇ ತಿಳಿದಿದ್ದು, ಹಿಂದಿನವರು ಎಲ್ಲವನ್ನೂ ಹದಗೆಡಿಸಿ ಹೋಗಿದ್ದಾರೆ ಎಂದು. ಈ ಬಾರಿ ಕಂಪನಿಯು ಯಾರಿಗೂ ವಾರ್ಷಿಕ ವೇತನ ಬಡ್ತಿಯನ್ನು ನೀಡದಿರಲು ನಿರ್ಧರಿಸಿದೆ. ಕಂಪನಿಯು ತುಂಬ ಆರ್ಥಿಕ ನಷ್ಟದಲ್ಲಿದೆ. ಸ್ವಲ್ಪ ದಿನ ಅಷ್ಟೇ, ಪರಿಸ್ಥಿತಿ ಸುಧಾರಿಸಿದ ಬಳಿಕ ಎಲ್ಲವನ್ನೂ ಸರಿಮಾಡುತ್ತೇನೆ ಎಂದನಂತೆ. ಮತ್ತೆ ಕೆಲವು ದಿನ ಕಳೆದ ಮೇಲೆ, ಮಾಲೀಕರು ಕಂಪನಿಯನ್ನು ಮುಚ್ಚುವ ಆಲೋಚನೆಯಲ್ಲಿದ್ದಾರೆ. ನಷ್ಟ ಮಾಡಿಕೊಂಡು ಯಾರು ತಾನೆ ಕಂಪನಿಯನ್ನು ನಡೆಸುತ್ತಾರೆ ಹೇಳು? ತಾನು ತಕ್ಷಣ ಹಾಗೆ ಮಾಡದಂತೆ, ಕಂಪನಿಯು ತನ್ನ ಕಾಲಮೇಲೆ ತಾನು ನಿಲ್ಲುವಂತೆ ಮಾಡುತ್ತೇನೆ ಎಂಬ ಭರವಸೆ ನೀಡಿದ್ದೇನೆ ಎಂದನಂತೆ. ಕ್ರಮೇಣ ಸುಗುಣನಿಗೆ ಯಾವುದೇ ಜವಾಬ್ದಾರಿಯ ಕೆಲಸಗಳನ್ನು ಕೊಡುವುದನ್ನು ನಿಲ್ಲಿಸಿಬಿಟ್ಟನಂತೆ.
ಸುಗುಣ ತುಂಬ ದುಃಖದಿಂದ ಹೇಳಿದ್ದ ಅವತ್ತು, ಯಾವನಿಗೆ ಅವನ ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸವನ್ನು ನೀಡುವುದಿಲ್ಲವೋ ಅದು ಅವನಿಗೆ ಅಪಮಾನ ಮಾಡಿದಂತೆ ಎಂದು. ಇದು ಅವನನ್ನು ಕಂಪನಿಯಿಂದ ಹೊರಕ್ಕೆ ಹಾಕುವ ತಂತ್ರದ ಒಂದು ಭಾಗವಾಗಿತ್ತು ಅಷ್ಟೇ. ವಾರ್ಷಿಕ ಬಡ್ತಿ ತಡೆಹಿಡಿದ ಮುಂದಿನ ಹೆಜ್ಜೆಯಾಗಿ ವೇತನ ಕಡಿತ. ಆಗಂತೂ ಸುಗುಣ ಮತ್ತೂ ಕುಗ್ಗಿಹೋದ. ಆಡಳಿತಾಧಿಕಾರಿಯಂತೂ ತಣ್ಣಗೆ ಎಸಿ ಕೋಣೆಯಲ್ಲಿ ಕುಳಿತುಕೊಂಡು ಗಾಜಿನ ಮೂಲಕ ಇಡೀ ಕಚೇರಿಯನ್ನು ನೋಡುತ್ತಿದ್ದ. ನಿಮ್ಮ ಉದ್ಧಾರಕ್ಕಾಗಿಯೇ ನಾನು ಇಲ್ಲಿಗೆ ಬಂದದ್ದು. ನಾನಿಲ್ಲದಿದ್ದರೆ ಕಂಪನಿಯೇ ಮುಳುಗಿಹೋಗುತ್ತಿತ್ತು ಎಂದು ಮೇಲಿಂದ ಮೇಲೆ ಹೇಳುತ್ತ ಕೇಳುವವರು ತಮ್ಮಷ್ಟಕ್ಕೆ ತಮ್ಮನ್ನೇ ನಿಕೃಷ್ಟ ಎಂದುಕೊಳ್ಳುವಹಾಗೆ ಮಾಡುತ್ತಿದ್ದ. ಆತನ ಕೃಪೆಯಲ್ಲಿ ತಾನು ಬದುಕುತ್ತಿದ್ದೇನೆ ಎಂಬ ಭಾವ ಬರುತ್ತಿದ್ದಂತೆ ಸುಗುಣಂಗೆ ಬದುಕೇ ಬೇಡವೆನ್ನಿಸಿಬಿಟ್ಟಿತ್ತು.
ಮತ್ತೊಂದು ದಿನ ಸುಗುಣ ತುಂಬ ಅಸ್ವಸ್ಥನಂತೆ ಕಾಣುತ್ತಿದ್ದ. ಕಚೇರಿಯನ್ನು ಎರಡು ಗಂಟೆ ಮೊದಲೇ ಬಿಟ್ಟು ಬಂದಿದ್ದ. ಯಾಕೋ ಬೇಗ ಬಂದುಬಿಟ್ಟೆಯಲ್ಲೋ? ನಿನ್ನನ್ನು ಯಾರೂ ಕೇಳುವವರಿಲ್ಲವೇನೋ ಎಂದು ಪ್ರಶ್ನಿಸಿದೆ. ಮಾಡಲು ಕೆಲಸವಿದ್ದರೆ ತಾನೆ? ಹಿಂಸೆಯಾಗುತ್ತಿತ್ತು, ಬಂದುಬಿಟ್ಟೆ ಎಂದ. ನನ್ನನ್ನು ಒಂದು ಬಾರ್ಗೆ ಕರೆದುಕೊಂಡು ಹೋದ. ನಾನಾಗಲಿ ಸುಗುಣ ಆಗಲಿ ಕುಡುಕರೇನಲ್ಲ. ಅದು ನಿನಗೂ ಗೊತ್ತಿದೆ. ಹೀಗೆ ನಾವು ಬಾರ್ಗೆ ಹೋಗದೆ ಆರು ತಿಂಗಳಿಗೂ ಹೆಚ್ಚು ಸಮಯವೇ ಆಗಿತ್ತು. ಕುಡಿದು ಅವನು ತುಂಬ ಮಾತನಾಡುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅವನು ಏನೂ ಮಾತನಾಡಲೇ ಇಲ್ಲ. ರಿಕ್ಷಾದಲ್ಲಿ ನಾನೇ ಅವನನ್ನು ಮನೆಯವರೆಗೂ ಬಿಟ್ಟು ಬಂದಿದ್ದೆ. ಮಾರನೆ ದಿನ ಅವನು ಒಂದು ಹೊಸ ಬೆಳಗಿನೊಂದಿಗೆ ನನಗೆ ಮುಖಾಮುಖಿಯಾದ. ಕಳೆದ ರಾತ್ರಿ ಏನಾಯಿತು ಎಂಬುದನ್ನು ಅವನು ಹೇಳಿದ….
ಸುಗುಣಗೆ ತಟ್ಟನೆ ಎಚ್ಚರವಾಗಿಬಿಟ್ಟಿತು. ಮೈಯೆಲ್ಲ ಬೆವತಿತ್ತು. ಕಾಲುಗಳಲ್ಲಿ ಸಣ್ಣಗೆ ಕಂಪನ. ತಲೆಯ ಬಳಿ ದಿಂಬಿನ ಹಿಂದೆ ಇಟ್ಟುಕೊಂಡ ಮೊಬೈಲ್ಗೆ ಕೈಚಾಚಿ ಅದರ ಗುಂಡಿ ಅದುಮಿ ಸಮಯ ನೋಡಿದ.ಎರಡು ಗಂಟೆಯಾಗಿತ್ತು. ಪಕ್ಕದಲ್ಲಿ ನೋಡಿದ. ಹೆಂಡತಿ ಸ್ವರ್ಣಾ ಸುಖವಾಗಿ ಗಾಢ ನಿದ್ದೆಯಲ್ಲಿದ್ದಳು. ಮೂಗಿನ ಬಳಿ ವಾಲಿಕೊಂಡಿದ್ದ ಅವಳ ಮುಂಗುರುಳು ಅವಳು ತನ್ನ ಶ್ವಾಸವನ್ನು ಎಳೆದುಕೊಂಡಾಗೊಮ್ಮ ಬಿಟ್ಟಾಗೊಮ್ಮೆ ಜೋಕಾಲಿ ಜೀಕಿದ ಹಾಗೆ ಹಿಂದಕ್ಕೂ ಮುಂದಕ್ಕೂ ಓಲಾಡುತ್ತಿತ್ತು. ಮೆಲ್ಲಗೆ ಅವಳ ಮುಂಗುರಳನ್ನು ಹಿಂದಕ್ಕೆ ಸರಿಸಿದನು. ಮೂತ್ರದ ಅವಸರವಾದಂತೆ ಅನಿಸಿತು. ಬಚ್ಚಲಿಗೆ ಹೋಗಿ ಬಂದ. ಸ್ವಲ್ಪ ಮನಸ್ಸಿಗೆ ಹಿತ ಅನಿಸಿತು. ತುಂಬ ಕೆಟ್ಟ ಸ್ವಪ್ನವನ್ನು ಅವನು ನೋಡಿದ್ದನು.
ತಾನು ಕಂಡ ಸ್ವಪ್ನವನ್ನು ಮತ್ತೆ ನೆನಪಿಸಿಕೊಂಡನು. ನಿರ್ದಿಷ್ಟವಾದ ಜಾಗ ಯಾವುದು ಎಂಬುದು ಅವನಿಗೆ ತಿಳಿಯಲಿಲ್ಲ. ಮನೆಯ ಟೆರೆಸ್ಸೋ ಅಥವಾ ಬಯಲೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸಿದನು . ಸಾಧ್ಯವಾಗಲಿಲ್ಲ. ಜಾಗ ವಿಶಾಲವಾಗಿತ್ತು. ಇವನು ಒಂದು ಪುಸ್ತಕವನ್ನು ತೆಗೆದುಕೊಂಡು ಓದುತ್ತ ಕುಳಿತಿದ್ದನು. ಖುರ್ಚಿಯ ಮೇಲೆ ಕುಳಿತಿದ್ದೆನೋ ಇಲ್ಲ ನೆಲದ ಮೇಲೆ ಕುಳಿತುಕೊಂಡು ಗೋಡೆಗೆ ಒರಗಿಕೊಂಡಿದ್ದೆನೋ ಎಂಬುದನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದ. ಹೌದು ಗೋಡೆಗೇ ಒರಗಿಕೊಂಡು ಕುಳಿತಿದ್ದು ಎಂಬುದನ್ನು ಪಕ್ಕಾ ಮಾಡಿಕೊಂಡ. ಪುಸ್ತಕದ ಮೇಲಿದ್ದ ಅವನ ಗಮನವನ್ನು ಒಂದು ಕಿರುಚಾಟ ಕದಲಿಸಿತು. ಒಬ್ಬ ದಷ್ಟಪುಷ್ಟನಾಗಿದ್ದ ವ್ಯಕ್ತಿ ಇನ್ನೊಬ್ಬನನ್ನು ಎಳೆದುಕೊಂಡು ಬರುತ್ತಿದ್ದ. ನಡುನಡುವೆ ಆತನಿಗೆ ಮುಷ್ಟಿಯಿಂದ ಗುದ್ದುತ್ತಿದ್ದನು. ಹಿಡಿತದಲ್ಲಿದ್ದ ವ್ಯಕ್ತಿ ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದನು. ಬಲಿಷ್ಠ ವ್ಯಕ್ತಿಯು ಆತನನ್ನು ಕೆಳಕ್ಕೆ ಕೆಡವಿ ಆತನ ಎದೆಯ ಮೇಲೆ ಕುಳಿತುಕೊಂಡನು. ತನ್ನ ಬಲವಾದ ಕೈಗಳಿಂದ ಆತನ ಕತ್ತನ್ನು ಹಿಸುಕತೊಡಗಿದನು.. ಆ ಠೊಣೆಯ ಅವನನ್ನು ಸಾಯಿಸುತ್ತಿದ್ದಾನೆ ಎಂಬುದು ಸುಗುಣಗೆ ಗೊತ್ತಾಯಿತು. ತಾನು ಕುಳಿತಲ್ಲಿಂದ ಮೆಲ್ಲಗೆ ಏಳಲು ಯತ್ನಿಸಿದ. ಆ ಏಳುವ ಪ್ರಯತ್ನದ ಹಿಂದೆ ಕೆಳಕ್ಕೆ ಬಿದ್ದ ವ್ಯಕ್ತಿಯನ್ನು ಕಾಪಾಡುವ ಉದ್ದೇಶ ಇತ್ತೆ ಇಲ್ಲವೆ ಎಂಬುದು ಆತನಿಗೇ ಸ್ಪಷ್ಟವಾಗಲಿಲ್ಲ. ಆತನನ್ನು ಬಿಡೋ ಎಂದು ಕೂಗಬೇಕೆಂದರೆ ಈತನ ಗಂಟಲಿನಿಂದ ದನಿಯೇ ಹೊರಡುತ್ತಿರಲಿಲ್ಲ. ಇವನ ಕೈ ಕೂಡ ಮೇಲೆ ಏಳುತ್ತಿರಲಿಲ್ಲ. ಇವನ ಕಣ್ಣ ಮುಂದೆಯೇ ಅವನು ಸಾಯಿಸಿಬಿಟ್ಟನು. ಮುಂದೆ ಬರಬಹುದಾದ ಅಪಾಯದ ಅರಿವು ಸುಗುಣನಿಗೆ ಆಯಿತು. ಅಲ್ಲಿಯೇ ಇದ್ದರೆ ಸಾಕ್ಷಿ ಹೇಳಬೇಕಾಗುತ್ತದೆ. ಪೊಲೀಸರ ಕಿರಿಕಿರಿ, ಕೋರ್ಟು ಅಲೆದಾಟ ಎಲ್ಲ ಒಂದು ಕ್ಷಣ ಕಣ್ಣಮುಂದೆ ಸುಳಿದು ಅಲ್ಲಿಂದ ಹೊರಡುವುದೇ ಸರಿ ಎಂದು ಬಸವಳಿದವನಂತೆ ಬರುತ್ತಿದ್ದವನು ಏನೋ ಎಡವಿ ಬಿದ್ದುಬಿಡುತ್ತಾನೆ. ನೋವಿಗೆ ಹಾ.. ಎಂದು ಕಿರುಚಿಕೊಳ್ಳುತ್ತಾನೆ. ಆಗಲೇ ಅವನು ಗಾಢ ನಿದ್ದೆಯಿಂದ ಮಂಪರಿಗೆ ಜಾರಿದ್ದು ಮತ್ತು ಎಚ್ಚರಗೊಂಡಿದ್ದು.
—
ಸುಗುಣ ನನ್ನನ್ನು ಪ್ರಶ್ನಿಸಿದ, `ನಾನೇಕೆ ಅವನನ್ನು ರಕ್ಷಿಸಲು ಹೋಗಲಿಲ್ಲ, ಅದೂ ಕನಸಿನಲ್ಲಿ?’ ಅದು ಸುಗುಣನ ಕನಸೋ ಅಥವಾ ನನ್ನ ಕನಸಿನಲ್ಲಿ ಸುಗುಣನೋ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.