ಬೆಲ್ಲೆ ಬೌಯ್ಡ್ ಅಮೆರಿಕದ ಯಾದವೀ ಕಲಹದ ಸಮಯದಲ್ಲಿ ಒಬ್ಬ ಗೂಢಚಾರಿಣಿಯಾಗಿದ್ದಳು. ಪ್ರತ್ಯೇಕವಾದಿ ಅಮೆರಿಕದ ಕ್ಲಿಯೋಪಾತ್ರ ಎಂದು ಆಕೆಯನ್ನು ಕರೆಯುತ್ತಿದ್ದರು ಎಂದರೆ ಅವಳ ಸೌಂದರ್ಯವನ್ನು ಊಹಿಸಿಕೊಳ್ಳಿ. ನಂತರದ ದಿನಗಳಲ್ಲಿ ಅವಳು ತನ್ನ ಅನುಭವವನ್ನು ಕೃತಿಯ ರೂಪದಲ್ಲಿ ತಂದಳು.
ಬೆಲ್ಲೆ ಬೌ್ಯ್ಡ್ ಅಮೆರಿಕದಲ್ಲಿ ಈಗ ಪಶ್ಚಿಮ ವರ್ಜೀನಿಯಾ ಎಂದು ಕರೆಯುವ ಪ್ರದೇಶದಲ್ಲಿ 1844ರ ಮೇ ತಿಂಗಳಿನಲ್ಲಿ ಜನಿಸಿದಳು. ತನಗೆ ಹದಿನೆಂಟು ತುಂಬುವ ಮೊದಲೇ ಅವಳು ಒಕ್ಕೂಟದ ಗೂಢಚಾರಿಣಿಯಾಗಿದ್ದಳು. ಯಾದವೀ ಕಲಹದ ಆ ದಿನಗಳಲ್ಲಿ ಅವಳ ಮುಖ್ಯ ಕಾರ್ಯ ಮಾಹಿತಿಗಳನ್ನು ಕಲೆಹಾಕಿ ಅದನ್ನು ದಕ್ಷಿಣದ ಪಡೆಗಳಿಗೆ ಒದಗಿಸುವುದಾಗಿತ್ತು. ಅಮೆರಿಕದ ಯಾದವೀ ಕಲಹವು 1860-61ರಲ್ಲಿ ನಡೆದಿತ್ತು. ಆಗ ದಕ್ಷಿಣದ 11 ರಾಜ್ಯಗಳು ಅಮೆರಿಕದ ಸಂಯುಕ್ತ ಸಂಸ್ಥಾನಗಳಿಂದ ಪ್ರತ್ಯೇಕಗೊಂಡಿದ್ದವು. ಮೂಲ ಅಮೆರಿಕಕ್ಕೂ ಪ್ರತ್ಯೇಕಗೊಂಡ 11 ರಾಜ್ಯಗಳ ಒಕ್ಕೂಟಕ್ಕೂ ಕದನ ಆರಂಭವಾಗಿತ್ತು. ಬೆಲ್ಲೆ ಬೌಯ್ಡ್ ತನ್ನ ಗೂಢಚರ್ಯದಲ್ಲಿ ಯಶಸ್ವಿಯಾಗಲು ಪ್ರಮುಖ ಕಾರಣವೆಂದರೆ ಅವಳ ಚಿಕ್ಕ ವಯಸ್ಸು. ಚಿಕ್ಕ ಹುಡುಗಿ ಗೂಢಚರ್ಯೆ ನಡೆಸುತ್ತಾಳೆ ಎಂಬ ಊಹೆಯೂ ಅಮೆರಿಕದ ಅಧಿಕಾರಿಗಳಿಗೆ ಇರಲಿಲ್ಲ. ಒಮ್ಮೆ ಪತ್ರಿಕೆಯವರಿಗೆ ಅವಳ ಬಗ್ಗೆ ಗೊತ್ತಾಗಿ ಅದನ್ನು ದೊಡ್ಡ ಕತೆಯಾಗಿ ಬರೆದು ಅವಳಿಗೆ ಪ್ರಸಿದ್ಧಿಯನ್ನು ತಂದುಕೊಟ್ಟರು. ಬೌಯ್ಡ್ಳನ್ನು ಆಗಾಗ ಬಂಧಿಸಲಾಗುತ್ತಿತ್ತು. ಆದರೆ ಕೆಲವು ತಿಂಗಳುಗಳಿಗಿಂತ ಹೆಚ್ಚು ಆಕೆ ಜೈಲಿನಲ್ಲಿ ಇರುತ್ತಿರಲಿಲ್ಲ. ನಂತರದ ದಿನಗಳಲ್ಲಿ ಅವಳು ಇಂಗ್ಲೆಂಡಿಗೆ ವಲಸೆ ಬಂದಳು. ಅಲ್ಲಿ ಅವಳು ತನ್ನ ಬೇಹುಗಾರಿಕೆಯ ಸಾಹಸಗಳ ಕುರಿತು ಕೃತಿಯೊಂದನ್ನು ಬರೆದಳು. ಬಳಿಕ ಅವಳು ಒಬ್ಬ ನಟಿಯೂ ಆಗಿದ್ದಳು. ಅವಳು ವಿಸ್ಕಾನ್ಸಿನ್ ಎಂಬಲ್ಲಿ ರಂಗದಲ್ಲಿ ಅಭಿನಯಿಸುತ್ತಿದ್ದಾಗಲೇ ತನ್ನ 56ನೆ ವಯಸ್ಸಿನಲ್ಲಿ 1900ರ ಜೂನ್ ತಿಂಗಳಲ್ಲಿ ನಿಧನಳಾದಳು.
ಮರಿಯಾ ಇಸಾಬೆಲ್ಲಾಳೇ `ಬೆಲ್ಲೆ’ ಬೌಯ್ಡ್, ವರ್ಜಿನಿಯಾದ ಮಾರ್ಟಿನ್ಸ್ಬರ್ಗ್ ಎಂಬಲ್ಲಿ 1844ರ ಮೇ 9ರಂದು ಜನಿಸಿದಳು. ತಂದೆ ಬೆಂಜಾಮಿನ್ ರೀಡ್ ಬೌಯ್ಡ್ ತಾಯಿ ಮೇರಿ ರಿಬೇಕಾ ಗ್ಲೆನ್ ಬೌಯ್ಡ್. ತಂದೆ ಒಂದು ಅಂಗಡಿಯನ್ನು ನಡೆಸುತ್ತಿದ್ದನು. ದಕ್ಷಿಣದಲ್ಲಿ ಆಳವಾದ ಸಂಬಂಧಗಳ ಬೇರುಗಳಿದ್ದ ತುಂಬ ಶ್ರೀಮಂತ ಕುಟುಂಬ ಅವರದು. ಬಾಲ್ಯದಲ್ಲಿಯೇ ಬೌಯ್ಡ್ ಬಲವಾದ ಇಚ್ಛಾಶಕ್ತಿಯನ್ನು ಹೊಂದಿದವಳಾಗಿದ್ದಳು. ಸ್ಫೂರ್ತಿಯ ಚಿಲುಮೆಯಾಗಿದ್ದಳು. ಅವಳ ಪ್ರತ್ಯುತ್ಪನ್ನಮತಿ ಅಸಾಧಾರಣವಾಗಿತ್ತು. ಅವಳು ಚಿಕ್ಕವಳಿದ್ದಾಗ ಕುಟುಂಬದವರು ಒಂದು ಪಾರ್ಟಿಯಲ್ಲಿ ಭಾಗವಹಿಸಬೇಕಿತ್ತು. ನೀನು ಚಿಕ್ಕವಳು, ಪಾರ್ಟಿಯಲ್ಲಿ ಭಾಗವಹಿಸುವ ವಯಸ್ಸು ನಿನ್ನದಲ್ಲ ಎಂದು ಮನೆಯವರು ಹೇಳಿದಾಗ ಅವಳು ಪಾರ್ಟಿಗೆ ತಾನೇ ಕುದುರೆ ಸವಾರಿ ಮಾಡಿಕೊಂಡು ಹೋಗಿದ್ದಳಂತೆ. ನಾನು ಚಿಕ್ಕವಳಾದರೂ ನನ್ನ ಕುದುರೆಗೆ ಸಾಕಷ್ಟು ವಯಸ್ಸಾಗಿದೆ. ಅದು ಪಾರ್ಟಿಯಲ್ಲಿ ಭಾಗವಹಿಸಬಹುದಲ್ಲವೆ ಎಂದು ಅವಳು ಪ್ರಶ್ನೆ ಮಾಡಿದ್ದಳಂತೆ. ತುಂಬ ಶ್ರೀಮಂತಿಕೆಯಲ್ಲಿಯೇ ಬೆಳೆದು ದೊಡ್ಡವಳಾದ ಅವಳು ಮೇರಿಲ್ಯಾಂಡ್ನ ಬಾಲ್ಟಿಮೋರ್ನಲ್ಲಿರುವ ಮೌಂಟ್ ವಾಷಿಂಗ್ಟನ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡದಳು. ಯಾದವೀ ಕಲಹವು ಆರಂಭವಾಗುವುದಕ್ಕೆ ಮೊದಲಿನ ಚಳಿಗಾಲದಲ್ಲಿ ಅವಳು ವಾಷಿಂಗ್ಟನ್ ಡಿ.ಸಿ.ಗೆ ಹೊಸಬಳಾಗಿ ತುಂಬ ಮಜಾದಲ್ಲಿ ಕಾಲ ಕಳೆದಿದ್ದಳು.
ಅವಳು ಹುಟ್ಟಿ ಬೆಳೆದ ನಗರ ಮಾರ್ಟಿನ್ಸ್ಬರ್ಗ್ನಲ್ಲಿ ಕೇಂದ್ರ ಸರ್ಕಾರದ ಬೆಂಬಲಿಗರೇ ತುಂಬಿಕೊಂಡಿದ್ದರ. ಆದರೆ ಅವಳ ಕುಟುಂಬದವರು ಮಾತ್ರ ದಕ್ಷಿಣದ ಒಕ್ಕೂಟದ ಪರವಾಗಿದ್ದರು. ಅವಳ ತಂದೆ ವರ್ಜೀನಿಯಾ ಕಾಲ್ದಳಕ್ಕೆ ಸ್ವಯಂಸೇವಕನಾಗಿ ದುಡಿಯುತ್ತಿದ್ದ. ಯಾದವೀ ಕಲಹ ಆರಂಭವಾದಾಗ ಕೇಂದ್ರ ಒಕ್ಕೂಟವು ತನ್ನ ವಶಕ್ಕೆ ಪಡೆದ ಮೊದಲ ನಗರ ಇವರದಾಗಿತ್ತು. 1861ರ ಜುಲೈ 3ರಂದು ಕೇಂದ್ರ ಒಕ್ಕೂಟದ ಸೈನಿಕರು ಮಾರ್ಟಿನ್ಸ್ಬರ್ಗ್ ಪ್ರವೇಶಿಸಿದರು. ಹತ್ತಿರದ ಪಟ್ಟಣ ಫಾಲಿಂಗ್ ವಾಟರ್ಸ್ನಲ್ಲಿ ಅದರ ಹಿಂದಿನ ದಿನ ಸೇನೆ ವಿಜಯ ಪಡೆದಿತ್ತು. ಮರುದಿನ ಸೈನಿಕರ ಒಂದು ಗುಂಪು ಬೌಯ್ಡ್ ಮನೆಗೆ ಬಂತು. ಅವರ ಮನೆಯಲ್ಲಿ ದಕ್ಷಿಣ ಒಕ್ಕೂಟ ಪಡೆಗಳ ಬಾವುಟ ಇದೆ ಎಂಬ ಮಾಹಿತಿ ಅವರಿಗೆ ದೊರೆತಿತ್ತು. ಅವರಲ್ಲಿದ್ದ ಒಬ್ಬನು ಬೌಯ್ಡ್ಳ ತಾಯಿಯ ಹತ್ತಿರ ಜಗಳದ ಮಾತುಗಳನ್ನು ಆಡಿದನು. ಆತನ ಮಾತುಗಳು ಇವರನ್ನು ನಿಂದಿಸುವಂತಿದ್ದವು. ಯುವತಿ ಬೌಯ್ಡ್ಗೆ ಬಹಳ ಹೊತ್ತು ಅದನ್ನು ಸಹಿಸಿಕೊಂಡು ನಿಲ್ಲಲು ಆಗಲಿಲ್ಲ. ಅವಳು ಗುಂಡು ಹಾರಿಸಿ ಅವನನ್ನು ಕೊಂದೇ ಬಿಟ್ಟಳು. ನಂತರ ತನಿಖೆ ನಡೆಸಿದ ಕೇಂದ್ರ ಸೈನ್ಯದ ಕಮಾಂಡಿಂಗ್ ಆಫೀಸರ್ನು ಬೌಯ್ಡ್ ಆ ಕ್ಷಣದಲ್ಲಿ ಸರಿಯಾದುದನ್ನೇ ಮಾಡಿದ್ದಾಳೆ. ಹಾಗೆ ಅವಳು ಮಾಡಿದ್ದರಿಂದ ಅವಳಿಗೆ ಹೆಚ್ಚಿನ ಏಟುಗಳು ಬೀಳಲಿಲ್ಲ ಎಂದು ಆತ ಅಭಿಪ್ರಾಯ ಪಟ್ಟನು. ಈತನ ಹೆಸರನ್ನು ಡೇನಿಯಲ್ ಕೆಲಿ ಎಂದು ಅವಳು ನಂತರ ತನ್ನ ಸ್ಮೃತಿಯಲ್ಲಿ ನೆನಪಿಸಿಕೊಂಡಿದ್ದಾಳೆ. ಇವಳ ಸೌಂದರ್ಯಕ್ಕೆ ಆತ ಮಾರುಹೋಗಿದ್ದ. ಇವಳ ಮನೆಯ ಸುತ್ತ ಸೈನಿಕರ ಪಹರೆ ಇದ್ದುದರಿಂದ ಅವರಿಂದ ಮಾಹಿತಿಯನ್ನು ಪಡೆಯುವುದು ಅವಳಿಗೆ ಸುಲಭವಾಯಿತು. ಗುಂಡು ಹೊಡೆದ ಈ ಒಂದು ಘಟನೆ ಅವಳ ಬದುಕಿನಲ್ಲಿ ಬಹುದೊಡ್ಡ ತಿರುವನ್ನು ತಂದಿತು. 17ನೆ ವಯಸ್ಸಿನಲ್ಲಿಯೇ ಅವಳು ಬಂಡುಕೋರ ಗೂಢಚಾರಿಣಿಯಾಗಿ ಮಾರ್ಪಟ್ಟಳು.
ಪ್ರತ್ಯೇಕವಾದಿಗಳ ಕ್ಲಿಯೋಪಾತ್ರ-
ಬೌಯ್ಡ್ ಮಾಹಿತಿಯನ್ನು ಕಲೆಹಾಕುವ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ತನ್ನ ಗೂಢಚರ್ಯದ ಬದುಕನ್ನು ಆರಂಭಿಸಿದಳು. ತನಗೆ ಯಾವ ಯಾವ ಮಾಹಿತಿಗಳು ದೊರೆಯುತ್ತವೋ ಅವನ್ನು ಅವಳು ಸಂಗ್ರಹಿಸುತ್ತಿದ್ದಳು. ಇತರರನ್ನು ಮರಳುಗೊಳಿಸುವ ಅವಳ ಸಾಮರ್ಥ್ಯವು ಕೇಂದ್ರ ಪಡೆಯ ಸೈನಿಕರಿಂದ ಮಾಹಿತಿಗಳನ್ನು ಸಂಗ್ರಹಿಸುವ ಅವಳ ಕೆಲಸವನ್ನು ಹಗುರಗೊಳಿಸಿತು. ತನಗೆ ಲಭಿಸಿದ ಮಾಹಿತಿಗಳನ್ನು ಅವಳು ಪತ್ರರೂಪದಲ್ಲಿ ಬರೆದು ತಮ್ಮ ಗುಲಾಮ ಸೇವಕರಿಂದ ಅಥವಾ ನೆರೆಹೊರೆಯ ಯುವಕರಿಂದ ಪ್ರತ್ಯೇಕತಾವಾದಿಗಳಿಗೆ ಕಳುಹಿಸುತ್ತಿದ್ದಳು. ಕೈಗಡಿಯಾರದ ಪೊಳ್ಳು ಪೆಟ್ಟಿಗೆಯಲ್ಲಿ ಅವಳು ಮಾಹಿತಿಯನ್ನು ಕಳುಹಿಸಿದ್ದಳು. ಇಂಥ ಒಂದು ಪತ್ರವು ಕೇಂದ್ರ ಪಡೆಯವರ ಕೈಗೆ ಸಿಕ್ಕಿ ಬೌಯ್ಡ್ ತುಂಬ ತೊಂದರೆಯಲ್ಲಿ ಸಿಕ್ಕಿಬಿದ್ದಳು. ಇಂಥ ಅಪರಾಧಗಳಿಗೆ ತಲೆ ತೆಗೆಯುವುದೇ ಶಿಕ್ಷೆಯಾಗಿದ್ದರೂ ಬೌಯ್ಡ್ಗೆ ಕೇವಲ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡಲಾಯಿತು.
ಇದರಿಂದ ಸ್ವಲ್ಪವೂ ವಿಚಲಿತಳಾಗದ ಬೌಯ್ಡ್ ಇನ್ನಷ್ಟು ಹುರುಪಿನಿಂದ ಮತ್ತು ಅಧಿಕೃತವಾಗಿ ದಕ್ಷಿಣ ಪಡೆಗಳ ಪರವಾಗಿ ಸೇವೆ ಸಲ್ಲಿಸುವ ಸಂಕಲ್ಪ ಮಾಡಿದಳು. ದಕ್ಷಿಣದ ಪಡೆಗಳ ಜನರಲ್ಗಳಾದ ಪಿ.ಜಿ.ಟಿ. ಬ್ಯೂರೆಗಾರ್ಡ್ ಮತ್ತು ಥಾಮಸ್ ಸ್ಟೋನ್ವಾಲ್ ಜಾಕ್ಸನ್ ಇವರಿಗೆ ಸಂದೇಶವಾಹಕಳಾದಳು. ವಸ್ತುಗಳನ್ನು ಸಾಗಿಸುವ ಒಂದು ಕೊರಿಯರ್ ಸೇವೆಯನ್ನು ಬೌಯ್ಡ್ ಆರಂಭಿಸಿದಳು. ಆ ಮೂಲಕ ಅವಳು ಮಾಹಿತಿಗಳನ್ನು ಮತ್ತು ಔಷಧ ಸಾಮಗ್ರಿಗಳನ್ನು ದಕ್ಷಿಣದ ಪಡೆಗಳಿಗೆ ತಲುಪಿಸಲು ಶುರುಮಾಡಿದಳು. ಆ ವೇಳೆಗೆ ಅವಳ ವಯಸ್ಸು 18 ಮಾತ್ರ. ಅವಳ ಮಾತು ಮತ್ತು ವ್ಯಕ್ತಿತ್ವವು ಜನಜನಿತವಾಗಿ ಅವಳಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪತ್ರಿಕೆಯವರು ಅವಳನ್ನು ಹೊಗಳುವುದಕ್ಕೆ ಶಬ್ದಗಳಿಗೆ ತಡಕಾಡಿ ಕೊನೆಗೆ ಪ್ರತ್ಯೇಕವಾದಿಗಳ ಕ್ಲಿಯೋಪಾತ್ರ ಎಂದು ಅವಳನ್ನು ವರ್ಣಿಸಿದರು. ಲ ಬೆಲ್ಲೆ ರೆಬೆಲ್ಲೆ , ಸಿರೆನ್ ಆಫ್ ದಿ ಶೆನನ್ದೋಹ, ರೆಬೆಲ್ ಜಾನ್ ಆಫ್ ಆರ್ಕ್ ಎಂದೆಲ್ಲ ಕೊಂಡಾಡಿದರು. ಅವಳ ಇಷ್ಟೊಂದು ಪ್ರಸಿದ್ಧಿಯು ಅವಳನ್ನು ಶಿಕ್ಷೆಗೆ ಒಳಗಾಗುವಂತೆ ಮಾಡಿತು. ಆದರೆ ಈ ಬಂಧನ ಕೇವಲ ಒಂದು ವಾರ ಮಾತ್ರ ಆಗಿತ್ತು. ತನ್ನ ಬಿಡುಗಡೆಯ ಬಳಿಕ ಅವಳು ಮತ್ತೆ ತನ್ನ ಬೇಹುಗಾರಿಕೆಯ ಕೆಲಸವನ್ನು ಮುಂದುವರಿಸಿದಳು.
ಗೂಢಚಾರಿಣಿಯಾಗಿ ಅವಳ ಅತ್ಯಂತ ಮಹತ್ವದ ಸಾಧನೆಯು 1862ರಲ್ಲಿ ಒದಗಿ ಬಂತು. ದಕ್ಷಿಣದ ಒಕ್ಕೂಟ ಪಡೆಗಳಿಗೆ ಅತ್ಯಮೂಲ್ಯವಾದ ಮಾಹಿತಿಯನ್ನು ಅವಳು ಒದಗಿಸಿದಳು. ಆ ವರ್ಷ ಮೇ ತಿಂಗಳಿನಲ್ಲಿ ಕೇಂದ್ರ ಪಡೆಗಳ ಜನರಲ್ ಜೇಮ್ಸ್ ಶೀಲ್ಡ್ಸ್ ಮತ್ತು ಅವನ ಸಿಬ್ಬಂದಿ ಸ್ಥಳೀಯ ಹೊಟೇಲ್ ಒಂದರ ಪಾರ್ಲರ್ನಲ್ಲಿ ಸಭೆ ಸೇರಿದ್ದರು. ಬೌಯ್ಡ್ ಅವರಿಗೆ ಕಾಣದಂತೆ ಅಲ್ಲಿ ಕೋಣೆಯೊಂದರ ಬಾಗಿಲ ಹಿಂದೆ ಅಡಗಿದ್ದಳು. ಬಾಗಿಲಿನ ಸಣ್ಣ ರಂಧ್ರದ ಮೂಲಕ ಒಳಗಿನದನ್ನು ನೋಡುತ್ತಿದ್ದಳು. ವರ್ಜೀನಿಯಾದ ಫ್ರಂಟ್ ರಾಯಲ್ ಮೇಲೆ ದಾಳಿ ಮಾಡುವುದಕ್ಕೆ ಶೀಲ್ಡ್ಸ್ ಆದೇಶ ನೀಡಿದ್ದು ಅವಳಿಗೆ ತಿಳಿಯಿತು. ಆ ರಾತ್ರಿ ಅವಳು ಕೇಂದ್ರ ಪಡೆಗಳ ಸ್ವಾಧೀನದಲ್ಲಿದ್ದ ಪ್ರದೇಶದಲ್ಲಿಯೇ ಕುದುರೆ ಸವಾರಿ ಮಾಡಿಕೊಂಡು ಹೋದಳು. ಸೆಂಟ್ರಿಗಳನ್ನು ಯಾಮಾರಿಸಲು ಖೊಟ್ಟಿ ದಾಖಲೆಗಳನ್ನು ಇಟ್ಟಿಕೊಂಡಿದ್ದಳು. ದಾಳಿ ನಡೆಸುವ ವಿಷಯವನ್ನು ಅವಳು ಕರ್ನಲ್ ಆಶ್ಬಿಗೆ ತಿಳಿಸಿದಳು. ಬಳಿಕ ಅವಳು ತನ್ನ ನಗರಕ್ಕೆ ಹಿಂತಿರುಗಿದಳು. ಫ್ರಂಟ್ ರಾಯಲ್ ಮೇಲೆ ದಕ್ಷಿಣದ ಪಡೆಗಳು ಮೇಲುಗೈ ಸಾಧಿಸಿದಾಗ ಬೌಯ್ಡ್ ಸ್ಟೋನ್ವಾಲ್ ಜಾಕ್ಸನ್ನ ಪಡೆಯವರಿಗೆ ಅಭಿನಂದನೆ ಹೇಳುವುದಕ್ಕೆ ಧಾವಿಸಿದಳು. ಯಾಂಕಿ ಪಡೆಗಳು ಸಣ್ಣದಿವೆ. ಅವರನ್ನು ಹಿಮ್ಮೆಟ್ಟಿಸಲು ಇದು ಸಕಾಲ ಎಂಬ ಸಂದೇಶವನ್ನು ಅವಳು ಕಳುಹಿಸಿದಳು. ಇದರಿಂದಾಗಿ ಸ್ಟೋನ್ವಾಲ್ ಜಾಕ್ಸನ್ನ ಪಡೆಗಳು ಫ್ರಂಟ್ ರಾಯಲ್ ಪಟ್ಟಣವನ್ನು ಮರಳಿ ವಶಪಡಿಸಿಕೊಂಡವು. ಈ ಮಹತ್ವದ ಸುದ್ದಿಯನ್ನು ತಿಳಿಸಿ ಹಿಂದಕ್ಕೆ ಬರುವಾಗ ಶತ್ರುಪಡೆಯವರು ಹಾರಿಸಿದ ಗುಂಡು ಬೌಯ್ಡಳ ಸ್ಕರ್ಟ್ನಲ್ಲಿ ರಂಧ್ರವನ್ನುಂಟುಮಾಡಿತ್ತು. ಅವಳ ನೆರವನ್ನು ಸ್ಮರಿಸಿ ಜಾಕ್ಸನ್ ಅವಳಿಗೆ ಕೃತಜ್ಞತೆಯ ಒಂದು ಪತ್ರವನ್ನು ಬರೆಯುತ್ತಾನೆ. ಅವಳಿಗೆ ಸದರ್ನ್ ಕ್ರಾಸ್ ಗೌರವ ನೀಡಲಾಗುತ್ತದೆ. ಅಲ್ಲದೆ ಅವಳಿಗೆ ಕ್ಯಾಪ್ಟನ್ ಮತ್ತು ಗೌರವ ಏಡ್-ಡೆ-ಕ್ಯಾಂಪ್ ಪದವಿ ನೀಡುತ್ತಾನೆ. ಎರಡು ತಿಂಗಳುಗಳ ಬಳಿಕ ದಕ್ಷಿಣದ ಪಡೆಗಳ ಪರವಾಗಿ ಕೆಲಸ ಮಾಡಿದ್ದಾಳೆಂದು ಬೌಯ್ಡ್ಳನ್ನು ಬಂಧಿಸಲಾಯಿತು.
ಬಂಧನ ಮತ್ತು ಗಡೀಪಾರು-
ಈ ಬಂಧನದ ಬಳಿಕ ಬೌಯ್ಡ್ಳನ್ನು ವಾಷಿಂಗ್ಟನ್ ಡಿ.ಸಿ.ಯ ಓಲ್ಡ್ ಕ್ಯಾಪಿಟೋಲ್ ಜೈಲಿಗೆ ಕಳುಹಿಸಲಾಯಿತು. ಅಲ್ಲಿ ಸರಳುಗಳ ಹಿಂದೆ ಒಂದು ತಿಂಗಳನ್ನು ಕಳೆದಳು. ಮುಂದಿನ ವರ್ಷ ಐದು ತಿಂಗಳುಗಳ ಕಾಲ ವಿಚಾರಣೆಯನ್ನು ನಡೆಸಿ ದೀರ್ಘ ಕಾಲ ಜೈಲಿನಲ್ಲಿ ಇರುವಂತೆ ಮಾಡಲಾಯಿತು. ಬೌಯ್ಡ್ಳನ್ನು ದಕ್ಷಿಣಕ್ಕೆ ಗಡಿಪಾರು ಮಾಡಲಾಯಿತು. ಅವಳು ತನ್ನ ಕೆಲಸವನ್ನು ಮುಂದುವರಿಸದಿರಲು ನಿರಾಕರಿಸಿದಳು. ಸದಾ ಕಾಲ ತನ್ನ ಸುತ್ತುವರಿದಿರುವ ಕೇಂದ್ರ ಪಡೆಯವರಿಂದ ತಪ್ಪಿಸಿಕೊಳ್ಳಲು ಅವಳು 1864ರ ಮೇ ತಿಂಗಳಿನಲ್ಲಿ ಇಂಗ್ಲೆಂಡಿಗೆ ತೆರಳಲು ಹಡಗನ್ನು ಏರಿದಳು. ಅಲ್ಲಿಂದಲೇ ದಕ್ಷಿಣದ ಪಡೆಗಳಿಗೆ ಮಾಹಿತಿಯನ್ನು ಕಳುಹಿಸಿದಳು. ಅವಳು ಪ್ರಯಾಣಿಸುತ್ತಿದ್ದ ಹಡಗನ್ನು ಅಮೆರಿಕದ ಪಡೆಗಳು ತಡೆದವು. ಮತ್ತೆ ಅವಳನ್ನು ಗೂಢಚರ್ಯದ ಆರೋಪದ ಮೇಲೆ ಬಂಧಿಸಲಾಯಿತು. ಈ ವೇಳೆ ಬೌಯ್ಡ್ ತನ್ನನ್ನು ಸೆರೆ ಹಿಡಿದ ಕೇಂದ್ರ ಪಡೆಯ ಒಬ್ಬ ಅಧಿಕಾರಿ ಸ್ಯಾಮುಯೆಲ್ ಹಾರ್ಡಿಂಜ್ನ ಪ್ರೇಮಕ್ಕೆ ಸಿಲುಕಿದಳು. ಇವರು ನಂತರ ಮದುವೆ ಮಾಡಿಕೊಳ್ಳುತ್ತಾರೆ. ಈ ಜೋಡಿಗೆ ಒಬ್ಬ ಮಗಳು ಹುಟ್ಟಿದಳು. ತನ್ನ ಪತಿಯನ್ನು ದಕ್ಷಿಣದ ಪಡೆಗಳ ಪರವಾಗಿ ಒಲಿಸಿಕೊಳ್ಳಬಹುದು ಎಂದು ಅವಳು ತಿಳಿದಿದ್ದಳು. ಬೌಯ್ಡ್ಗೆ ಅಗತ್ಯ ನೆರವು ನೀಡುವುದಕ್ಕಾಗಿ ಹಾರ್ಡಿಂಜ್ ತನ್ನ ಸೇವೆಯನ್ನು ಜೈಲಿಗೇ ಹಾಕಿಸಿಕೊಂಡಿದ್ದನು.
ಮತ್ತೊಮ್ಮೆ ಬಂಧನಕ್ಕೆ ಒಳಗಾದರೂ ಬೌಯ್ಡ್ ಕೇಂದ್ರ ಅಮೆರಿಕದ ಅಧಿಕಾರಿಗೆ ತನ್ನನ್ನು ಕೆನಡಾಕ್ಕೆ ಹೋಗಲು ಅವಕಾಶಮಾಡಿಕೊಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದಳು. ಕೆನಡಾದಿಂದ ಅವಳು ಇಂಗ್ಲೆಂಡಿಗೆ ತೆರಳಿದಳು. ಹಣ ಮಾಡುವುದಕ್ಕಾಗಿ ಅವಳು ಯುದ್ಧದ ತನ್ನ ಸಾಹಸದ ಅನುಭವಗಳನ್ನು ಬರೆಹರೂಪದಲ್ಲಿ ಇಳಿಸಿದಳು. ಜೈಲಿನಲ್ಲಿ ಇದ್ದಾಗ ತನ್ನ ಪತಿ ಹಾರ್ಡಿಂಜನು ತನಗೆ ಮಾಡಿದ ಸಹಾಯವನ್ನು ಅವಳು ಅದರಲ್ಲಿ ಸ್ಮರಿಸಿದಳು. ಅಲ್ಲದೆ ಬೌಯ್ಡ್ ಒಬ್ಬ ನಟಿಯಾಗಿ ತನ್ನ ವೃತ್ತಿಯನ್ನು ಆರಂಭಿಸಿದಳು. ರಂಗದ ಮೇಲಿನ ಅವಳ ಹೆಸರು ನಿನಾ ಬೆಂಜಾಮಿನ್ ಆಗಿತ್ತು.
ಅಮೆರಿಕಕ್ಕೆ ಹಿಂತಿರುಗಿ ಬಳಿಕವೂ ಬೌಯ್ಡ್ ತನ್ನ ನಟನೆಯನ್ನು ಮುಂದುವರಿಸಿದಳು. ಕೇಂದ್ರ ಪಡೆಯ ಮಾಜಿ ಅಧಿಕಾರಿ ಜಾನ್ ಸ್ವೈನ್ಸಟನ್ ಅವಳ ಒಂದು ಪ್ರದರ್ಶನವನ್ನು ನೋಡುವುದಕ್ಕೆ ಆಗಮಿಸಿದ್ದನು. ಅವಳ ನಟನೆಯನ್ನು ನೋಡಿ ಅವಳಲ್ಲಿ ಪ್ರೇಮಭಿಕ್ಷೆಯನ್ನು ಬೇಡುತ್ತಾನೆ. ಇವರು ನಂತರ 1869ರಲ್ಲಿ ಮದುವೆಯಾಗುತ್ತಾರೆ. ಇವರಿಗೆ ನಾಲ್ವರು ಮಕ್ಕಳು ಜನಿಸುತ್ತಾರೆ. 1884ರಲ್ಲಿ ಇವರಿಗೆ ವಿಚ್ಛೇದನವಾಗುತ್ತದೆ. ಇನ್ನೂ ಸುಂದರಿಯಾಗಿಯೇ ಇದ್ದ ಬೆಲ್ಲೆ ಬಹುಕಾಲ ಒಂಟಿಯಾಗಿ ಉಳಿಯಲಿಲ್ಲ. 1885ರಲ್ಲಿ ಅವಳು ನಥಾನಿಯೆಲ್ ರು ಹೈ ಎಂಬ ಯುವ ನಟನನ್ನು ಮದುವೆಯಾಗುತ್ತಾಳೆ. ತನ್ನ ಮತ್ತು ತನ್ನ ಕುಟುಂಬದ ನಿರ್ವಣೆಗಾಗಿ ಅವಳು ಮತ್ತೆ ನಟನಾವೃತ್ತಿಗೆ 1886ರಲ್ಲಿ ಮರಳುತ್ತಾಳೆ. ಹದಿನಾಲ್ಕು ವರ್ಷಗಳ ನಂತರ ರಂಗದ ಮೇಲೆಯೇ ಅವಳ ಬದುಕಿನ ಅಂತಿಮ ಪರದೆ ಬೀಳುತ್ತದೆ. ವಿಸ್ಕೋಸಿನ್ ಎಂಬಲ್ಲಿ ಅವಳ ನಾಟಕ ಪ್ರದರ್ಶನ 1900ರ ಜೂನ್ 11ರಂದು ಇತ್ತು. ರಂಗದ ಮೇಲೆಯೇ ಅವಳು ಹೃದಯಾಘಾತದಿಂದ ತನ್ನ ಕೊನೆಯುಸಿರು ಎಳೆಯುತ್ತಾಳೆ. ಅವಳಿಗೆ 56 ವರ್ಷಗಳಾಗಿತ್ತು. ಬೆಲ್ಲೆ ಬಾಯ್ಡ್ ಕುರಿತು ಹಲವು ಕೃತಿಗಳು ಬಂದಿವೆ ಅದರಲ್ಲಿ ಪ್ರಮುಖವಾದದ್ದು ಹಾರ್ನೆಟ್ ಕಾನೆಯ 1955ರ ಕಾದಂಬರಿ ದಿ ಸ್ಮೈಲಿಂಗ್ ರೆಬೆಲ್.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.