ಮಾತಾಹರಿ ಒಬ್ಬಳು ವೃತ್ತಿನಿರತ ನೃತ್ಯಗಾತಿಯಾಗಿದ್ದಳು. ಹಾಗೆಯೇ ತನ್ನ ವ್ಯಾಮೋಹ ಮತ್ತು ಹಣದ ಅಗತ್ಯಕ್ಕಾಗಿ ಮೈಯನ್ನೂ ಮಾರಿಕೊಳ್ಳುತ್ತಿದ್ದಳು. ಮೊದಲ ಮಹಾಯುದ್ಧದ ಸಮಯದಲ್ಲಿ ಅವಳು ಫ್ರಾನ್ಸ್ ಪರವಾಗಿ ಗೂಢಚರ್ಯದ ಕೆಲಸ ಮಾಡಿದಳು. ಅವಳು ಡಬ್ಬಲ್ ಏಜೆಂಟ್ ಇದ್ದಿರಬೇಕು ಎಂಬ ಅನುಮಾನದ ಮೇಲೆ 1917ರಲ್ಲಿ ಅವಳನ್ನು ಗುಂಡಿಟ್ಟು ಸಾಯಿಸಲಾಯಿತು.
ಹಾಲೆಂಡಿನ ಲ್ಯುವಾರ್ಡನ್ನಲ್ಲಿ 1876ರ ಆಗಸ್ಟ್ 7ರಂದು ಜನಿಸಿದ ಮಾತಾಹರಿ ವೃತ್ತಿನಿರತ ನೃತ್ಯಗಾತಿಯಲ್ಲದೆ ಹಲವರ ಪ್ರಣಯಿನಿಯಾಗಿದ್ದಳು. 1916ರಲ್ಲಿ ಫ್ರಾನ್ಸ್ ಪರವಾಗಿ ಬೇಹುಗಾರಿಕೆ ನಡೆಸುವ ಕಾರ್ಯವನ್ನು ಒಪ್ಪಿಕೊಂಡಿದ್ದಳು. ಅವಳನ್ನು ಈ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದು ಸೇನೆಯ ಕ್ಯಾಪ್ಟನ್ ಜಾರ್ಜಸ್ ಲಡೌಕ್ಸ್. ತನ್ನ ಪ್ರೇಮಜಾಲಕ್ಕೆ ಬಿದ್ದವರಿಂದ ಸೇನೆಯ ಮಾಹಿತಿಯನ್ನು ಒಂದೊಂದಾಗಿ ಹೆಕ್ಕಿ ತೆಗೆದು ಫ್ರೆಂಚ್ ಸರ್ಕಾರಕ್ಕೆ ನೀಡುವ ಕೆಲಸವನ್ನು ಅವಳು ಒಪ್ಪಿಕೊಂಡಳು. ಈ ಕೆಲಸ ಒಪ್ಪಿಕೊಂಡು ಬಹಳ ಕಾಲವೇನಾಗಿರಲಿಲ್ಲ, ಅವಳು ಜರ್ಮನಿಯ ಗೂಢಚಾರಿಣಿ ಎಂಬ ಆರೋಪ ಕೇಳಿಬಂತು. ಅವಳು ಡಬ್ಬಲ್ ಏಜೆಂಟ್ ಆಗಿದ್ದಾಳೆ ಎಂಬ ಸಂಗತಿ ಫ್ರೆಂಚ್ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಫೈರಿಂಗ್ ಸ್ಕ್ವಾಡ್ನವರು 1917ರ ಅಕ್ಟೋಬರ್ 15ರಂದು ಅವಳನ್ನು ಗುಂಡಿಟ್ಟು ಸಾಯಿಸುತ್ತಾರೆ.
ಮಾತಾಹರಿಯ ಜನ್ಮನಾಮ ಮಾರ್ಗರಿಟಾ ಗೀರ್ಟ್ರುಯಿಡಾ ಝೆಲ್ಲೆ. ತಂದೆ ಆಡಂ ಝೆಲ್ಲೆ. ಅವನೊಬ್ಬ ಹ್ಯಾಟ್ ವ್ಯಾಪಾರಿ. ತಪ್ಪಾದ ಕಡೆಗೆಲ್ಲ ಹೂಡಿಕೆ ಮಾಡಿ ದಿವಾಳಿಯಾಗಿದ್ದನು. ಅವಳ ತಾಯಿ ಆಂಟ್ಜೆ ಝೆಲ್ಲೆ. ಮಾತಾಹರಿಗೆ 15 ವರ್ಷವಾದಾಗ ಅನಾರೋಗ್ಯದಿಂದಾಗಿ ಅವಳ ತಾಯಿ ತೀರಿಕೊಂಡಳು. ತಾಯಿಯ ಸಾವಿನ ಬಳಿಕ ಅವಳು ಮತ್ತು ಅವಳ ಮೂವರು ಸಹೋದರರು ಬೇರೆಬೇರೆ ಸಂಬಂಧಿಕರ ಬಳಿಗೆ ತೆರಳಬೇಕಾಯಿತು. ತನ್ನ ಮೋಹಕ ಸೌಂದರ್ಯದಿಂದ ಇತರರನ್ನು ಬಲೆಗೆ ಬೀಳಿಸಿಕೊಳ್ಳುವುದೇ ತನ್ನ ಬದುಕಿನ ರಹದಾರಿ ಎಂಬುದನ್ನು ಮಾತಾಹರಿ ತನ್ನ ಬದುಕಿನ ಆರಂಭಿಕ ದಿನಗಳಲ್ಲಿಯೇ ಅರಿತುಕೊಂಡಳು. 1890ರ ದಶಕದ ಮಧ್ಯದಲ್ಲಿ ಡಚ್ ಈಸ್ಟ್ ಇಂಡೀಸ್ನಲ್ಲಿದ್ದ ಮಿಲಿಟರಿ ಕ್ಯಾಪ್ಟನ್ ರುಡೋಲ್ಫ್ ಮ್ಯಾಕ್ಲಿಯೋಡ್ ತನಗೊಂದು ವಧು ಬೇಕೆಂದು ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದನು. ಈತನ ತಲೆಯಲ್ಲಿ ಕೂದಲು ಇರಲಿಲ್ಲ, ಮೀಸೆ ಮಾತ್ರ ಭರ್ಜರಿಯಾಗಿತ್ತು. ಆತನ ಜಾಹೀರಾತಿಗೆ ಪ್ರತಿಯಾಗಿ ಮಾತಾಹರಿ ತನ್ನದೊಂದು ಅತ್ಯಂತ ಆಕರ್ಷಕವಾದ ಭಾವಚಿತ್ರವನ್ನು ಆತನಿಗೆ ಕಳುಹಿಸಿದಳು. ಮಾತಾಹರಿಗೆ ಕೇವಲ 19 ವರ್ಷ. ಅವರಿಬ್ಬರ ನಡುವೆ 21 ವರ್ಷಗಳ ಅಂತರವಿತ್ತು. ಹೀಗಿದ್ದೂ 1895ರ ಜುಲೈ 11ರಂದು ಅವರಿಬ್ಬರ ಮದುವೆಯಾಗಿಬಿಟ್ಟಿತು. ಮದುವೆಯ ಬಳಿಕ ಅವಳು ಇಂಡೋನೇಷ್ಯಾದ ಪೂರ್ವದ ದ್ವೀಪ ಜಾವಾಕ್ಕೆ ತರಳಿದಳು. ಗಂಡನ ಕೆಲಸ ಅಲ್ಲಿಯೇ. ಕ್ಯಾಪ್ಟನ್ ರುಡೋಲ್ಫ್ ಭಾರೀ ಕುಡುಕನಾಗಿದ್ದನು. ಮುಂಗೋಪಿ. ಹೆಂಡತಿಯ ಮೇಲೆ ಸಿಡುಕುತ್ತಿದ್ದನು. ಒಂಬತ್ತು ವರ್ಷಗಳ ಕಲ್ಲು ಮುಳ್ಳಿನ ಹಾದಿಯಾದ ಅವರ ದಾಂಪತ್ಯದಲ್ಲಿ ಒಬ್ಬ ಮಗ ಮತ್ತು ಒಬ್ಬ ಮಗಳು ಜನಿಸಿದರು. ಮಗನಿಗೆ ಎರಡು ವರ್ಷವಾಗಿದ್ದಾಗ ಮನೆಯ ಕೆಲಸದವಳು ವಿಷವುಣಿಸಿ ಸಾಯಿಸಿದಳು ಎನ್ನುತ್ತಾರೆ. ಇದರ ಕುರಿತು ಖಚಿತತೆ ಇಲ್ಲ.
1900ರ ಆರಂಭದ ವರ್ಷಗಳಲ್ಲಿ ಅವಳ ದಾಂಪತ್ಯದ ಹಾಯಿದೋಣಿ ಬಿರುಗಾಳಿಗೆ ಸಿಲುಕಿತ್ತು. ಗಂಡ ಅವಳನ್ನು ಬಿಟ್ಟುಬಿಟ್ಟ. ಮಗಳನ್ನು ತನ್ನ ಜೊತೆ ಇರಿಸಿಕೊಂಡ. ವಿಚ್ಛೇದನ ಪ್ರಕರಣ ನ್ಯಾಯಾಲಯಕ್ಕೆ ಹೋಯಿತು. 1906ರಲ್ಲಿ ಅವಳಿಗೆ ವಿಚ್ಛೇದನ ದೊರೆಯಿತು. ಗಂಡ ಇವಳಿಗೆ ಜೀವನಾಂಶ ಕೊಡಬೇಕಿತ್ತು. ಆರ್ಥಿಕ ಸಂಕಷ್ಟದಲ್ಲಿ ಮಗಳನ್ನು ಸಾಕುವುದು ತನ್ನಿಂದ ಸಾಧ್ಯವಿಲ್ಲವೆಂದು ತಿಳಿದು ಅವಳು ಮಗಳ ಮೇಲೆ ಹಕ್ಕು ಸಾಧಿಸಲು ಹೋಗಲಿಲ್ಲ. ರುಡೋಲ್ಫ್ ತನಗೆ ಒಳ್ಳೆಯ ಗಂಡ ಆಗದಿದ್ದರೂ ಮಗಳಿಗೆ ಒಳ್ಳೆಯ ತಂದೆಯಾಗುತ್ತಾನೆ ಎಂಬ ನಂಬಿಕೆ ಅವಳಿಗೆ ಇತ್ತು. ಮಾತಾಹರಿ ನಂತರ ಪ್ಯಾರಿಸ್ಸಿಗೆ ತೆರಳಿದಳು. ಅಲ್ಲಿ ಅವಳು ಫ್ರೆಂಚ್ ರಾಜತಾಂತ್ರಿಕನೊಬ್ಬನಿಗೆ ಪ್ರಣಯಿನಿಯಾದಳು. ಆತ ಅವಳಿಗೆ ಡಾನ್ಸರ್ ಆಗುವುದಕ್ಕೆ ಸಹಾಯ ಮಾಡುತ್ತಾನೆ.
ನಗ್ನ ನರ್ತಕಿ ಮತ್ತು ಪ್ರಣಯಿನಿ-
ಪ್ಯಾರಿಸ್ಸಿನಲ್ಲಿ 1905ರ ವೇಳೆಗೆ ಪೌರಾತ್ಯದ್ದು ಯಾವುದೇ ಇದ್ದರೂ ಅದರ ಬಗ್ಗೆ ಒಂದು ಮೋಹ ಬೆಳೆಸಿಕೊಂಡಿದ್ದ ಜನರಿದ್ದರು. ಮಾತಾಹರಿಯು ನಗ್ನ ರೂಪದಲ್ಲಿ (ಕ್ಯಾಬರೆ ಡಾನ್ಸ್) ರಂಗಪ್ರವೇಶ ಮಾಡುವುದಕ್ಕೆ ಮತ್ತು ದೇವಾಲಯದ ನೃತ್ಯವನ್ನು ಮಾಡುವುದಕ್ಕೆ ಕಾಲ ಪಕ್ವವಾಗಿತ್ತು. ಅವಳು ಈ ನೃತ್ಯವನ್ನು ಜಾವಾದಲ್ಲಿದ್ದಾಗ ಕಲಿತುಕೊಂಡಿದ್ದಳು. ಅದಕ್ಕೆ ಅವಳು ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಕೇತವನ್ನು ನೀಡಿದಳು. ತನ್ನ ವಿಲಕ್ಷಣವಾದ ಆತ್ಮವಿಶ್ವಾಸದೊಂದಿಗೆ ಅವಳು ಆ ಅವಕಾಶವನ್ನು ತನ್ನದನ್ನಾಗಿ ಮಾಡಿಕೊಂಡಳು. ತನ್ನನ್ನು ತಾನು ಹಿಂದೂ ಕಲಾವಿದೆ ಎಂಬಂತೆ ಬಿಂಬಿಸಿಕೊಂಡಳು. ಅವಳು ತನ್ನ ಶರೀರದ ಬಣ್ಣದ್ದೇ ತೆಳುವಾದ ಬಟ್ಟೆಯನ್ನು ಧರಿಸುತ್ತಿದ್ದಳು. ಅದೇ ರೀತಿಯ ಉತ್ತರೀಯಗಳು ಅವಳ ಶರೀರದಿಂದ ಜಾರಿಬೀಳುತ್ತಿದ್ದವು. ಒಂದು ಸ್ಮರಣೀಯ ಉದ್ಯಾನ ಪ್ರದರ್ಶನದಲ್ಲಂತೂ ಮಾತಾಹರಿಯು ಬಿಳಿಯ ಕುದುರೆಯ ಮೇಲೆ ನಗ್ನಳಾಗಿ ಬಂದಂತೆ ಕಾಣಿಸಿಕೊಂಡಳು. ಅವಳು ತನ್ನ ಶರೀರದ ಉಳಿದೆಲ್ಲ ಭಾಗಗಳನ್ನು ತೋರಿಸಲು ಹಿಂಜರಿಯುತ್ತಿರಲಿಲ್ಲ. ಆದರೆ ತನ್ನ ಸ್ತನಗಳನ್ನು ಮಾತ್ರ ಯಾವತ್ತೂ ಸಾರ್ವಜನಿಕವಾಗಿ ತೋರಿಸುತ್ತಿರಲಿಲ್ಲ ಅದಕ್ಕೆ ಯಾವತ್ತೂ ಆಭರಣಗಳ ಕವಚ ಇರುತ್ತಿತ್ತು. ಅವಳ ಸ್ತನಗಳು ಸಾಧಾರಣ ಗಾತ್ರದವಾಗಿದ್ದುದೇ ಇದಕ್ಕೆ ಕಾರಣ ಎನ್ನುತ್ತಾರೆ. ಮಿಲಿಟರಿ ಅಧಿಕಾರಿಯ ಪತ್ನಿಯಾಗಿದ್ದ ಮಾರ್ಗರೀಟಾ ಸ್ವಂತ ಪರಿಶ್ರಮದಿಂದ ಪ್ರಖ್ಯಾತ ನರ್ತಕಿ ಮಾತಾಹರಿ ಎಂದು ಗುರುತಿಸಿಕೊಂಡಳು. ಅವಳ ಈ ರಂಗ ನಾಮ ಜಾವಾದ ಮಲಯ ಭಾಷೆಯದು. ಮಾತಾಹರಿ ಎಂಬುದು ಸೂರ್ಯನ ಹೆಸರು. ಹಗಲಿನ ಕಣ್ಣು ಎಂಬ ಅರ್ಥ ಇದಕ್ಕಿದೆ.
ಪ್ಯಾರಿಸ್ಸಿನ ಸಲೂನುಗಳಲ್ಲಿ ಬಿರುಗಾಳಿಯಂತೆ ಕಂಪನ ಉಂಟುಮಾಡಿದ ಮಾತಾಹರಿ ನಂತರ ಇತರ ನಗರಗಳ ಕಣ್ಣು ಕೋರೈಸುವ ಬೆಳಕಿನಲ್ಲೂ ತನ್ನ ಪ್ರದರ್ಶನ ನೀಡಿದಳು. ಪಶ್ಚಿಮದಲ್ಲಿ ಸಲೂನು ಎಂದರೆ ಸಾರ್ವಜನಿಕ ಬಳಕೆಯ ಮನರಂಜನೆಯ ತಾಣ. ಇಲ್ಲಿ ದೊಡ್ಡದಾದ ಒಂದು ಹಜಾರ ನೃತ್ಯ ಪ್ರದರ್ಶನ ಇತ್ಯಾದಿಗಳಿಗೆ ಇರುತ್ತದೆ. ತನ್ನ ಅದ್ಭುತ ಪ್ರದರ್ಶನಗಳಿಂದ ಅವಳು ನೃತ್ಯ ಮಾಡುತ್ತ ಒಂದೊಂದಾಗಿಯೇ ಬಟ್ಟೆಯನ್ನು ಕಳಚುತ್ತ ಹೋಗುವ ನಗ್ನ ನೃತ್ಯಕ್ಕೆ ಒಂದು ಕಲೆಯ ಗೌರವವನ್ನು ತಂದುಕೊಟ್ಟಳು. ವಿಯೆನ್ನಾದ ಕಲಾ ವಿಮರ್ಶಕನೊಬ್ಬನು ಮಾತಾಹರಿಯನ್ನು ತೆಳ್ಳಗೆ ಬೆಳ್ಳಗೆ ಎತ್ತರದ ಬಳಕುವ, ಬೇಕಾದಂತೆ ಬಾಗುವ, ಬೂದು ಮತ್ತು ಕಪ್ಪನೆಯ ಕೂದಲಿನ ವನ್ಯಜೀವಿಯಂಥವಳು. ಅವಳ ಮುಖವು ವಿಚಿತ್ರವಾದ ವಿದೇಶಿ ಹೊಳಹನ್ನು ನೀಡುತ್ತದೆ ಎಂದು ಬರೆದನು. ರೋಮಾಂಚಿತನಾದ ಇನ್ನೊಬ್ಬ ಪತ್ರಕರ್ತನು, ಮಾರ್ಜಾಲ ಜಾತಿಯ ಅತ್ಯುನ್ನತ ಮಹಿಳೆ ಇವಳು, ದುರಂತಲ್ಲೂ ಘನಗಾಂಭೀರ್ಯದಿಂದ ಕೂಡಿರುತ್ತದೆ, ಅವಳ ಶರೀರದ ಸಾವಿರ ಬಾಗುಗಳು ಮತ್ತು ಬಳಕುಗಳು ಸಾವಿರ ನಾದ ತರಂಗಗಳನ್ನು ಬಡಿದೇಳಿಸುತ್ತವೆ ಎಂದು ಬರೆದನು.
ಕಾಲ ಕಳೆಯಿತು. ಕೆಲವೇ ವರ್ಷಗಳಲ್ಲಿ ಮಾತಾಹರಿಯು ಮೂಡಿಸಿದ್ದ ಛಾಪು ಮಾಸತೊಡಗಿತು. ಇತರ ಹಲವು ಯುವ ನರ್ತಕಿಯರು ಅವಳ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಬಂದರು. ಇವಳನ್ನು ಆಮಂತ್ರಿಸುವವರು ಕಡಿಮೆಯಾಗತೊಡಗಿದರು. ಸರ್ಕಾರದ ಮತ್ತು ಸೇನೆಯ ಪುರುಷರಿಗೆ ಮೈಮಾರಿಕೊಂಡು ತನ್ನ ಆದಾಯವನ್ನು ಅವಳು ಸರಿದೂಗಿಸತೊಡಗಿದಳು. ಹಣಕ್ಕಾಗಿ ಮೈ ಮಾರಿಕೊಳ್ಳುವುದು ಅವಳ ಪಾಲಿಗೆ ವ್ಯಾವಹಾರಿಕ ವಿಷಯವಾಗಿತ್ತು. ಯುರೋಪಿನಲ್ಲಿ ಉದ್ವಿಘ್ನ ಪರಿಸ್ಥಿತಿ ತಲೆದೋರಿತ್ತು. ಅದು ಮೊದಲ ಮಹಾಯುದ್ಧಕ್ಕೆ ದಾರಿ ಮಾಡಿತ್ತು. ಆದರೆ ಮಾತಾ ಹರಿ ತನ್ನ ಪ್ರಿಯತಮರಿಗೆ ಯಾವುದೇ ಗಡಿಗಳಿಲ್ಲ, ಅವರು ಜರ್ಮನಿಯವರಾದರೂ ತಪ್ಪೇನು ಎಂಬ ಮೂರ್ಖತನದ ಚಿಂತನೆ ಮಾಡಿದಳು. ಯುದ್ಧವು ಇಡೀ ಯುರೋಪ್ ಖಂಡವನ್ನು ಆವರಿಸಿಕೊಂಡಿತು. ಅವಳು ತಟಸ್ಥ ರಾಷ್ಟ್ರ ಹಾಲೆಂಡಿನ ಪ್ರಜೆಯಾಗಿದ್ದ ಕಾರಣ ಮುಕ್ತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಪಡೆದಿದ್ದಳು. ಅವಳು ಅದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡಳು. ಬಟ್ಟೆಗಳನ್ನು ತುಂಬಿದ ತನ್ನ ಟ್ರಂಕ್ನೊಂದಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತಿದ್ದ ಅವಳ ಮೇಲೆ ಬ್ರಿಟಿಷ್ ಮತ್ತು ಫ್ರೆಂಚ್ ಬೇಹುಗಾರಿಕೆಯವರ ಕಣ್ಣು ಬಿತ್ತು. ಗೂಢಚಾರಿಣಿ ಕೆಲಸಕ್ಕೆ ಅವಳನ್ನು ಬಳಸಿಕೊಳ್ಳಲು ಅವರು ನೋಡಿದರು.
ಫ್ರಾನ್ಸ್ ಗೂಢಚಾರಿಣಿ-
ಮಾತಾ ಹರಿಗೆ ಈಗ 40 ವರ್ಷವಾಗಿತ್ತು. ನೋಡುಗರ ಹುಚ್ಚೆಬ್ಬಿಸುವ ಅವಳ ನರ್ತನ ಹಳೆಯ ಮಾತಾಗಿತ್ತು. 1916ರಲ್ಲಿ ಅವಳು ರಷ್ಯಾದ ಕ್ಯಾಪ್ಟನ್ ವ್ಲಡಿಮಿರ್ ಡೆ ಮಾಸ್ಲೋಫ್ ಎಂಬ 21 ವರ್ಷದ ಯುವಕನ ಪ್ರೇಮಪಾಶದಲ್ಲಿ ಬಿದ್ದಳು. ಅವರು ಜೊತೆ ಜೀವಿಸುತ್ತಿದ್ದಾಗ ಮಾಸ್ಲೋಫ್ನನ್ನು ಯುದ್ಧರಂಗಕ್ಕೆ ಕಳುಹಿಸಲಾಯಿತು. ಯುದ್ಧದಲ್ಲಿ ಗಾಯಗೊಂಡ ಅವನಿಗೆ ಒಂದು ಕಣ್ಣಿನ ದೃಷ್ಟಿ ಹೋಯಿತು. ಅವನ ಸಹಾಯಕ್ಕೆ ನಿಂತರೆ ಹಣ ಗಳಿಸಬಹುದೆಂದು ಅವಳು ಅವನ ಜೊತೆ ನಿಂತಳು. ಇದೇ ವೇಳೆ ಫ್ರೆಂಚ್ ಸೇನೆಯ ಕ್ಯಾಪ್ಟನ್ ಜಾರ್ಜೆಸ್ ಲಡೌಕ್ಸ್ ಫ್ರಾನ್ಸ್ ಪರವಾಗಿ ಗೂಢಚರ್ಯ ನಡೆಸುವ ಆಕರ್ಷಕ ಕೆಲಸವನ್ನು ಒಪ್ಪಿಸಿದನು. ಅವನೇ ಅವಳ ಪೋಷಕನಾಗಿದ್ದನು.
ತನ್ನ ಸಂಪರ್ಕಗಳ ಬಲದಿಂದ ಜರ್ಮನಿಯ ವರಿಷ್ಠರನ್ನು ಭ್ರಷ್ಟಗೊಳಿಸುವ ಯೋಜನೆಯೊಂದು ತನ್ನ ಬಳಿ ಇದೆ ಎಂದು ಮಾತಾ ಹರಿ ನಂತರ ಹೇಳಿದಳು. ಅವರ ಮೂಲಕ ರಹಸ್ಯ ಸಂಗತಿಗಳನ್ನು ಪಡೆದು ಫ್ರೆಂಚ್ ಸೈನ್ಯಕ್ಕೆ ಹಸ್ತಾಂತರಿಸುವುದು ಅವಳ ಉದ್ದೇಶವಾಗಿತ್ತು. ಆದರೆ ಅವಳು ಆ ಮಟ್ಟದ ಸಂಪರ್ಕವನ್ನು ಸಾಧಿಸಲೇ ಇಲ್ಲ. ಅವಳು ಜರ್ಮನಿಯ ರಾಯಭಾರ ಕಚೇರಿಯ ಒಬ್ಬ ಸಿಬ್ಬಂದಿಯನ್ನು ಭೇಟಿ ಮಾಡಿದಳು. ಆತನಿಂದ ಮಹತ್ವದ ದಾಖಲೆಗಳನ್ನು ಪಡೆಯಬಹುದು ಎಂದುಕೊಂಡು ಅವನೊಂದಿಗೆ ಸುತ್ತಾಟ ನಡೆಸಿ ಗಾಸಿಪ್ ಹುಟ್ಟುವಂತೆ ಮಾಡಿದಳು. ಬದಲಿಗೆ ಇವಳು ಜರ್ಮನಿಯ ಬೇಹುಗಾರಳು ಎಂಬ ಹಣೆಪಟ್ಟಿ ಅಂಟಿತು. ಅವಳು ಆತನೊಂದಿಗೆ ಆಡಿದ ಮಾತುಗಳೆಲ್ಲ ಬರ್ಲಿನ್ಗೆ ತಲುಪುತ್ತಿತ್ತು. ಅದನ್ನು ಫ್ರೆಂಚ್ ಬೇಹುಗಾರಿಕೆ ಆಲಿಸುತ್ತಿತ್ತು. ಕೆಲವು ಇತಿಹಾಸಕಾರರ ಪ್ರಕಾರ ಜರ್ಮನಿಯವರಿಗೆ ಮಾತಾಹರಿಯು ಫ್ರೆಂಚ್ ಬೇಹುಗಾರಳು ಎಂಬ ಅನುಮಾನವಿತ್ತು. ಕಾರಣ ಅವಳು ಜರ್ಮನಿಯ ಬೇಹುಗಾರಳು ಎನ್ನುವಂತೆ ಸುಳ್ಳುಸಂದೇಶಗಳನ್ನು ಕಳುಹಿಸುತ್ತಿದ್ದರು. ಮತ್ತು ಅದು ಫ್ರೆಂಚ್ ಬೇಹುಗಾರರಿಗೆ ಲಭ್ಯವಾಗುವಂತೆ ನೋಡಿಕೊಂಡರು. ಇನ್ನು ಕೆಲವರ ಪ್ರಕಾರ ಅವಳು ಜರ್ಮನಿಯ ಪರವಾಗಿಯೂ ಕೆಲಸ ಮಾಡಿದ ಡಬ್ಬಲ್ ಏಜೆಂಟ್ ಆಗಿದ್ದಳು. ಏನೇ ಇರಲಿ ಫ್ರೆಂಚ್ ಅಧಿಕಾರಿಗಳು ಬೇಹುಗಾರಿಕೆಯ ಆರೋಪದ ಮೇಲೆ ಅವಳನ್ನು 1917ರ ಫೆಬ್ರವರಿ 13ರಂದು ಬಂಧಿಸಿದರು. ಸೇಂಟ್ ಲಜಾರೆಯ ಜೈಲಿನಲ್ಲಿ ಅವಳನ್ನು ಇರಿಸಲಾಯಿತು. ಜೈಲಿನ ಕೋಣೆಯಲ್ಲಿ ಇಲಿಗಳು ಓಡಾಡುತ್ತಿದ್ದವು. ಮಾರ್ಜಾಲ ಸುಂದರಿಯೆಂದು ಅವಳು ಹೆಸರಾಗಿದ್ದರೂ ಈಗ ಇಲಿಗಳನ್ನು ನೋಡುತ್ತ ಸುಮ್ಮನೆ ಕಾಲಕಳೆಯಬೇಕಾಗಿತ್ತು. ಅವಳ ಲಾಯರ್ ಒಬ್ಬರಿಗೆ ಮಾತ್ರ ಅವಳನ್ನು ಭೇಟಿ ಮಾಡುವುದಕ್ಕೆ ಅವಕಾಶ ನೀಡಲಾಯಿತು. ಆತ ಕೂಡ ಅವಳ ಪ್ರೇಮಿಗಳಲ್ಲಿ ಒಬ್ಬನಾಗಿದ್ದನು.
ಸುದೀರ್ಘವಾದ ತನಿಖೆಯನ್ನು ಮಿಲಟರಿ ಪ್ರಾಸಿಕ್ಯೂಟರ್ ಕ್ಯಾಪ್ಟನ್ ಪಿಯೆರೆ ಬೌಚರ್ಡೋನ್ ನಡೆಸಿದನು. ಈತ ಆಕೆಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದವನು, ಅವಳ ಹಿಂದಿನ ಬದುಕಿನ ಬಗ್ಗೆ ಸಾಕಷ್ಟು ತಿಳಿದವನು. ಅವಳು ಎಲ್ಲಿದ್ದಳು, ಅವಳ ಚಟುವಟಿಕೆಗಳು ಏನೇನು ಎಂಬುದನ್ನು ತಿಳಿದಿದ್ದನು. ಅವಳು ತಪ್ಪೊಪ್ಪಿಗೆಯ ಒಂದು ಹೇಳಿಕೆಯನ್ನು ನೀಡಿದಳು, ಒಬ್ಬ ಜರ್ಮನಿಯ ರಾಜತಾಂತ್ರಿಕನು ಅವಳಿಗೆ ಪ್ಯಾರಿಸ್ಸಿಗೆ ಹಲವು ಬಾರಿ ಹೋಗಿ ಬಂದು ಮಾಹಿತಿಯನ್ನು ಕಲೆಹಾಕುವುದಕ್ಕೆ 20,000 ಫ್ರಾಂಕ್ಗಳನ್ನು ನೀಡಿದ್ದ ಎಂಬುದು ಅದರ ಸಾರ. ಆದರೆ ತಾನೆಂದೂ ಅವರ ಚೌಕಾಶಿಗೆ ಬಲಿಬೀಳಲಿಲ್ಲ. ತಾನು ಯಾವತ್ತೂ ಫ್ರಾನ್ಸ್ಗೆ ನಿಷ್ಠಳಾಗಿಯೇ ಇದ್ದೆ ಎಂದು ಶಪಥಪೂರ್ವಕ ತನಿಖಾಧಿಕಾರಿಗಳಿಗೆ ಹೇಳಿದಳು. ಒಮ್ಮೆ ರೈಲಿನಲ್ಲಿ ಹೋಗುವಾಗ ತನ್ನ ಸಾಮಾನುಗಳಿದ್ದ ಬ್ಯಾಗ್ ಮತ್ತು ಫರ್ಸ್ ಕಳೆದುಹೋಯಿತು. ಜರ್ಮನಿಯ ಗಾರ್ಡ್ಗಳು ತನ್ನನ್ನು ತಡೆದು ವಿಚಾರಿಸಿದ್ದರು. ಕಳೆದುಹೋಗಿದ್ದಕ್ಕೆ ಪರಿಹಾರವಾಗಿ ಅವರು ಅದನ್ನು ನೀಡಿರಬಹುದು ಎಂದು ಆ ಹಣ ಸ್ವೀಕರಿಸಿದ್ದೆ ಎಂದು ಹೇಳಿದಳು. ನೀವು ನನ್ನನ್ನು ವೇಶ್ಯೆ ಎಂದು ಕರೆಯಿರಿ, ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಗೂಢಚಾರಿಣಿ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದಳು. ನಾನು ಯಾವತ್ತೂ ಬದುಕಿದ್ದು ಪ್ರೀತಿಗಾಗಿ ಮತ್ತು ಆನಂದಕ್ಕಾಗಿ ಎಂದು ಹೇಳಿದಳು.
ಗೂಢಚರ್ಯದ ತನಿಖೆ-
ಮಾತಾಹರಿಯ ವಿಚಾರಣೆಯು ಯಾವ ಸಂದರ್ಭದಲ್ಲಿ ನಡೆದಿತ್ತು ಎಂದರೆ ಮಿತ್ರಪಡೆಗಳು ಜರ್ಮನಿಯ ಮುನ್ನಡೆಯನ್ನು ಹಿಮ್ಮೆಟ್ಟಿಸಲು ವಿಫಲವಾಗುತ್ತಿದ್ದ ಸಮಯವದು. ನಿಜವಾದ ಮತ್ತು ಕಲ್ಪನೆಯ ಗೂಢಚಾರರನ್ನು ಮಿಲಿಟರಿಗೆ ಆದ ಹಾನಿಯನ್ನು ವಿವರಿಸುವಾಗ ಬಲಿಪಶುಗಳನ್ನಾಗಿ ಮಾಡಿಕೊಳ್ಳಲಾಗುತ್ತಿತ್ತು. ಅಂಥ ಹಲವು ಘಟನೆಗಳಲ್ಲಿ ಮಾತಾಹರಿಯ ಬಂಧನವೂ ಒಂದಾಗಿತ್ತು. ಅವಳನ್ನು ಬೇಹುಗಾರಿಕೆಗೆ ಇಳಿಸಿದ ಕ್ಯಾಪ್ಟನ್ ಜಾರ್ಜಸ್ ಲೌಡೆಕ್ಸ್ಗೆ ಇದು ಚೆನ್ನಾಗಿ ಗೊತ್ತಿತ್ತು. ಅವಳ ವಿರುದ್ಧ ಇರುವ ಸಾಕ್ಷ್ಯಗಳನ್ನೆಲ್ಲ ಮನಸ್ಸಿಗೆ ಬಂದಂತೆ ಸೃಷ್ಟಿಸಿದ್ದು, ಹಾಗೂ ಮೂಲವನ್ನು ತಿರುಚಿ ರೂಪಿಸಿದ್ದು, ಅವಳನ್ನು ಸಿಲುಕಿಹಾಕಿಸಲೆಂದೇ ಮಾಡಿದ್ದು ಎಂಬುದನ್ನು ಅರಿತಿದ್ದನು.
ಸಾವು ಮತ್ತು ಸಂಪ್ರದಾಯ-
ಮಾತಾಹರಿಯನ್ನು ಫೈರಿಂಗ್ ಸ್ಕ್ವಾಡ್ನವರು 1917ರ ಅಕ್ಟೋಬರ್ 15ರಂದು ಸಾಯಿಸಿದರು. ನೀಲಿ ಬಣ್ಣದ ಕೋಟು, ತ್ರಿವರ್ಣದ ಹ್ಯಾಟ್ ಆಕೆಗೆ ತೊಡಿಸಿದ್ದರು. ಹತ್ಯೆ ನಡೆಯುವ ಸ್ಥಳಕ್ಕೆ ಒಬ್ಬ ಮಂತ್ರಿ ಮತ್ತು ಇಬ್ಬರು ನನ್ಗಳು ಅವಳ ಜೊತೆ ಬಂದರು. ಅವರಿಗೆ ವಿದಾಯ ಹೇಳಿದ ಮಾತಾಹರಿ ನಿಗದಿತ ಸ್ಥಳಕ್ಕೆ ಲಗುಬಗೆಯಿಂದ ಹೆಜ್ಜೆ ಹಾಕಿದಳು. ಅಲ್ಲಿ ನಿಂತ ಅವಳು ಗುಂಡಿಕ್ಕುವ ಸೈನಿಕರತ್ತ ಮುಖ ಮಾಡಿ ಅವರೆಡೆಗೆ ಒಂದು ತೇಲು ಮುತ್ತು ಹರಿಸಿದಳು. ಕಣ್ಣಿಗೆ ಪಟ್ಟಿ ಕಟ್ಟಿಕೊಂಡಳು. ತಕ್ಷಣ ಹಲವು ಸೈನಿಕರು ಅವಳ ಶರೀರಕ್ಕೆ ಏಕಕಾಲಕ್ಕೆ ಗುಂಡು ಹಾರಿಸಿದರು.
ಒಬ್ಬ ಕ್ಯಾಬರೇ ನರ್ತಕಿ ಮತ್ತು ವೇಶ್ಯೆಗೆ ಇದೊಂದು ಅಸಾಮಾನ್ಯವಾದ ಸಾವಾಗಿತ್ತು. ತನ್ನ ಮೋಹಕ ರೂಪದಿಂದ ಪ್ರಿಯತಮರ ಕಡೆಯಿಂದ ರಹಸ್ಯ ಸಂಗತಿಗಳನ್ನು ಅರಿಯುವ ಗೂಢಚರ್ಯದ ಹೊಸ ಕ್ರಮಕ್ಕೆ ಅವಳ ಹೆಸರು ಒಂದು ರೂಪಕವಾಯಿತು. ಅವಳ ಮರಣದಂಡನೆಯನ್ನು ನ್ಯೂಯಾರ್ಕ್ ಟೈಮ್ಸ್ ಒಳಪುಟದಲ್ಲಿ ನಾಲ್ಕು ಪ್ಯಾರಾಗಳಲ್ಲಿ ಸುದ್ದಿ ಮಾಡಿತ್ತು. ಅದ್ಭುತವಾದ ಆಕರ್ಷಣೆ ಮತ್ತು ರಮ್ಯ ಇತಿಹಾಸವನ್ನು ಹೊಂದಿದ ಒಬ್ಬ ಮಹಿಳೆ ಅವಳು ಎಂದು ಬರೆದಿತ್ತು.
ಮಾತಾಹರಿಯ ಜೀವನ ಮತ್ತು ಅವಳು ಡಬ್ಬಲ್ ಏಜೆಂಟ್ ಆಗಿದ್ದಳು ಎಂಬುದರ ಸುತ್ತಲಿನ ರಹಸ್ಯ ಹಾಗೆಯೇ ಮುಂದುವರಿದಿದೆ. ಅವಳ ಬದುಕಿನ ಇತಿಹಾಸ ಒಂದು ದಂತಕತೆಯಾಗಿದೆ. ಅವಳ ಬದುಕು ಹಲವು ಜೀವನಚರಿತ್ರೆಗಳು ಮತ್ತು ಸಿನಿಮಾಗಳಿಗೆ ವಸ್ತುವಾಗಿದೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು 1931ರಲ್ಲಿ ಬಂದ ಮಾತಾಹರಿ. ಇದರಲ್ಲಿ ಮಾತಾಹರಿಯ ಪಾತ್ರವನ್ನು ಗ್ರೇಟ್ ಗಾರ್ಬೋ ಮತ್ತು ಲೆಫ್ಟಿನೆಂಟ್ ಅಲೆಕ್ಸಿಸ್ ರೋಸನೋಫ್ ಪಾತ್ರವನ್ನು ರಮೋನ್ ನೋವಾರೋ ನಿರ್ವಹಿಸಿದ್ದರು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.