*ಕಠಿಣವಾದ ಆದೇಶ
ಸುಗ್ರೀವಾಜ್ಞೆ ಎಂಬ ಪದವನ್ನು ಆಗಾಗ ಕೇಳುತ್ತಿರುತ್ತೇವೆ, ಓದುತ್ತಿರುತ್ತೇವೆ. ಯಾರಾದರೂ ಹೀಗೇ ಮಾಡು ಎಂದು ಕಟ್ಟುನಿಟ್ಟಾಗಿ ಹೇಳಿದರೆ, ನಿಂದೇನು ಸುಗ್ರೀವಾಜ್ಞೆನಾ ಎಂದು ಕೇಳುತ್ತಾರೆ. ಯಾವುದೋ ವಿಷಯದ ಕುರಿತು ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಿದೆ ಎಂದು ಪತ್ರಿಕೆಯಲ್ಲಿ ಬಂದುದನ್ನು ಓದುತ್ತೇವೆ.
ಹಿಂದೆ ರಾಮಾಯಣದಲ್ಲಿ ಶ್ರೀರಾಮ ಸೀತೆಯನ್ನು ಕಳೆದುಕೊಂಡು ಆಕೆಯನ್ನು ಹುಡುಕುತ್ತ ಸುಗ್ರೀವನ ಸ್ನೇಹವನ್ನು ಸಂಪಾದಿಸುತ್ತಾನೆ. ವಾಲಿಯನ್ನು ಕೊಂದ ಶ್ರೀರಾಮನು ಸುಗ್ರೀವನಿಗೆ ಆತನ ಪತ್ನಿಯನ್ನು ಮರಳಿ ಕೊಡಿಸುತ್ತಾನೆ. ಸೀತೆಯನ್ನು ಹುಡುಕಿಕೊಡಬೇಕಾದ ಅನಿವಾರ್ಯತೆ ಈಗ ಸುಗ್ರೀವನ ಮೇಲೆ.
ಸುಗ್ರೀವನು ವಾನರರನ್ನೆಲ್ಲ ಕರೆದು ಸೀತೆಯನ್ನು ಒಂದು ತಿಂಗಳೊಳಗೆ ಹುಡುಕಿ ತರಬೇಕು. ಒಂದು ತಿಂಗಳ ಮೇಲೆ ಒಂದು ದಿನವಾದರೂ ಅವರಿಗೆ ಮರಣದಂಡನೆ ವಿಧಿಸಲಾಗುವುದು ಎಂದು ಆದೇಶ ನೀಡಿ ಅವರನ್ನೆಲ್ಲ ನಾಲ್ಕೂ ದಿಕ್ಕುಗಳಿಗೆ ನಾಲ್ಕು ತಂಡಗಳಲ್ಲಿ ಕಳುಹಿಸುತ್ತಾನೆ.
ಇಂಥ ಕಠಿಣವಾದ ಆದೇಶವನ್ನು ಸುಗ್ರೀವ ನೀಡಿದ್ದರಿಂದ ಅದು ಸುಗ್ರೀವಾಜ್ಞೆಯೆಂದು ಪ್ರಸಿದ್ಧವಾಯಿತು.
ಸಂಸತ್ತಿನಲ್ಲಿ ಅಥವಾ ವಿಧಾನ ಮಂಡಲದಲ್ಲಿ ಮಸೂದೆಯನ್ನು ಮಂಡಿಸದೆಯೇ ತುರ್ತಾಗಿ ಯಾವುದಾದರೂ ಆದೇಶವನ್ನು ಜಾರಿಗೆ ತರುವುದಿದ್ದರೆ ಅದನ್ನು ರಾಷ್ಟ್ರಪತಿಗಳ ಇಲ್ಲವೆ ರಾಜ್ಯಪಾಲರ ಸಹಿ ಪಡೆದು ಜಾರಿಗೆ ತರುತ್ತಾರೆ. ಇಂಥ ಆದೇಶಕ್ಕೆ ಸುಗ್ರೀವಾಜ್ಞೆ ಎಂದು ಕರೆಯುತ್ತಾರೆ. ಈ ಸುಗ್ರೀವಾಜ್ಞೆ ಆರು ತಿಂಗಳೊಳಗೆ ಶಾಸನಸಭೆಯ ಅನುಮತಿಯನ್ನು ಪಡೆಯಬೇಕು. ಇಲ್ಲದೆ ಹೋದರೆ ಅದು ತನ್ನಷ್ಟಕ್ಕೆ ಅನೂರ್ಜಿತಗೊಳ್ಳುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.