ಸಾವು ಸಾವಲ್ಲ ಗೆಳೆಯ
ಅದು ನಿನ್ನ ಮರುಹುಟ್ಟು
ಸತ್ತು ನೀ ಬಿಚ್ಚಿಟ್ಟ
ನೆನಪುಗಳ ಬುತ್ತಿ
ಕಣ್ಣೀರಲ್ಲಿ ಕಲಸಿ
ತುತ್ತು ಮಾಡಿ ಜೀವ ಹಿಡಿದಿದ್ದೇನೆ
ಗೆಳೆಯ ಅದು ನಿನ್ನ ಸಾವಲ್ಲ

ನಿಂತಲ್ಲಿ ನೀ ಬಂದು
ಕಥೆ ಹೇಳುವೆ
ಕುಂತಲ್ಲಿ ನೀ ಬಂದು
ಕುರುಳು ನೇವರಿಸುವೆ
ಮಲಗಿದರೆ ನೀ ಬಂದು
ಮುಸುಕೆಳೆದು ಕಚಗುಳಿ
ಇಡುವೆ ಗೆಳೆಯ ನಾ ಬದುಕಿಯೂ
ಕ್ಷಣ ಕ್ಷಣವೂ ಸಾಯುತ್ತಿರುವೆ

ಇದ್ದಾಗ ನೀ ಕಾಡಲಿಲ್ಲ ನನ್ನ
ನಾನೇ ನಿನ್ನ ಗೋಳುಗೆರೆದೆ
ನನ್ನ ನಗುವಿನಲ್ಲೇ ನೀ
ನಿನ್ನ ಹರುಷ ಕಂಡೆ
ನೀ ನಿನಗಾಗಿ ಬದುಕದೆ
ನನಗಾಗಿ ಬದುಕಿದೆ
ಈಗೇಕೆ ಬಾರದ ಲೋಕಕೆ ಹೋದೆ?

ಇದ್ದಾಗ ಏನೂ ಅನ್ನಿಸದ ನೀನು
ಹೋದಾಗ ಎಲ್ಲವೂ ಆದೆ
ಇನ್ನಾರ ಮುಂದೆ ಮುನಿವೆ ನಾ
ಇನ್ನಾರಿಗೆ ಶರಣೆಂಬೆ ನಾ
ಒಲಿವ ಒಲಿಸುವ
ಕಣ್ಣುಮುಚ್ಚಾಲೆಯಲ್ಲಿ
ಆಗ ಅಡಗುವ ಸರದಿ ನನ್ನದಾಗಿತ್ತು
ಈಗ ನಿನ್ನ ಸರದಿ
ನಿನ್ನ ನಾ ತಲುಪಲಾರೆ
ನಿನ್ನ ನಾ ಹುಡುಕಲಾರೆ
ನಾ ಸೋತೆ, ಶರಣು