- ಇವನನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ಸ್ಟಾಲಿನ್ ಕೈಬಿಟ್ಟ
ಪತ್ರಕರ್ತನ ಸೋಗಿನಲ್ಲಿ ಸೋವಿಯತ್ ರಷ್ಯಾದ ಪರವಾಗಿ ಜಪಾನಿನಲ್ಲಿ ಬೇಹುಗಾರಿಕೆ ನಡೆಸಿದ ಜರ್ಮನ್ ಸಂಜಾತ ರಿಚರ್ಡ್ ಸೋರ್ಜ್ ವರ್ಣರಂಜಿತ ಬದುಕನ್ನು ಬದುಕಿದವನು. ರಸಿಕ ಶಿಖಾಮಣಿಯೇ ಆಗಿದ್ದ ಈತ ಎರಡನೆ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನ ದೇಶವು ರಷ್ಯಾದ ಮೇಲೆ ಪೂರ್ವ ಭಾಗದಲ್ಲಿ ದಾಳಿ ಮಾಡುವುದಿಲ್ಲ, ಆದರೆ ಜರ್ಮನಿಯು ಮಾಸ್ಕೋ ಮೇಲೆ ದಾಳಿಗೆ ಸಿದ್ಧವಾಗಿದೆ ಎಂಬ ಮಹತ್ವದ ಸಂದೇಶವನ್ನು ತಲುಪಿಸಿದನು. ನಾಝಿ ಜರ್ಮನಿ ಮತ್ತು ಜಪಾನ್ ಚಕ್ರಾಧಿಪತ್ಯದಲ್ಲಿ ಒಬ್ಬ ಜರ್ಮನಿಯ ಪತ್ರಕರ್ತನಂತೆ ನಟಿಸುತ್ತ ಎಲ್ಲರಿಗೂ ಆಪ್ತನಾಗಿದ್ದವನು. ರಾಮ್ಸೇ ಎಂಬ ಗೂಢನಾಮದಿಂದ ಕಾರ್ಯ ನಿರ್ವಹಿಸುತ್ತಿದ್ದ ಇವನ ಖಯಾಲಿ ಎಂದರೆ ಕುಡಿತ ಮತ್ತು ವೇಗವಾಗಿ ಬೇಕನ್ನು ಓಡಿಸುವುದು. ಈತನೊಬ್ಬ ಸರ್ವಾಂಗ ಪರಿಣತ ಗೂಢಚಾರ ಎಂದು ಅನೇಕ ಗಣ್ಯಮಾನ್ಯರು ಇವನನ್ನು ಹೊಗಳಿದ್ದಾರೆ.
ಜಪಾನಿನಲ್ಲಿ 1940-41ರಲ್ಲಿ ಕೆಲಸ ನಿರ್ವಹಿಸಿದ ಸೋರ್ಜ್, ಅಡಾಲ್ಫ್ ಹಿಟ್ಲರನು ಸೋವಿಯತ್ ಒಕ್ಕೂಟದ ಮೇಲೆ ದಾಳಿ ನಡೆಸುವ ಸಿದ್ಧತೆ ಮಾಡಿಕೊಂಡಿದ್ದಾನೆ ಎಂಬ ಮಾಹಿತಿಯನ್ನು ಮುಂದಾಗಿಯೇ ತಿಳಿಸಿದ್ದನು. ಜಪಾನ್ ದಾಳಿ ನಡೆಸಬಹುದೆಂಬ ಆತಂಕದಲ್ಲಿ ಪೂರ್ವಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಿಯೋಜಿಸಿದ್ದ ಸೇನಾಪಡೆ ಮತ್ತು ಟ್ಯಾಂಕರುಗಳನ್ನು ಪಶ್ಚಿಮದ ಕಡೆ ಸಾಗಿಸುವುದಕ್ಕೆ ಇದರಿಂದ ರಷ್ಯಾಕ್ಕೆ ಅನುಕೂಲವಾಯಿತು. ಸೋರ್ಜ್ ಮಾಹಿತಿ ಆಧರಿಸಿ ಸ್ಟಾಲಿನ್ ಸೇನೆಯ 18 ಡಿವಿಸನ್ಗಳನ್ನು, 1700 ಟ್ಯಾಂಕುಗಳನ್ನು, 1,500 ವಿಮಾನಗಳನ್ನು ಮಾಸ್ಕೋ ಕಡೆ ತಿರುಗಿಸಿದರು. ಅದೇ ಸಮಯಕ್ಕೆ ಜಪಾನಿನ ಸಂಕೇತ ಭಾಷೆಯನ್ನು ರಷ್ಯಾದ ಪರಿಣತರು ಭೇದಿಸಿದ್ದು. ಸೋರ್ಜ್ ನೀಡಿದ ಮಾಹಿತಿ ಇದನ್ನು ಇನ್ನಷ್ಟು ಖಚಿತಪಡಿಸಿತು.
ಸೋರ್ಜ್ ಜನಿಸಿದ್ದು 1895ರ ಅಕ್ಟೋಬರ್ 4ರಂದು ರಷ್ಯಾ ಸಾಮ್ರಾಜ್ಯದ ಬಾಕು ಉಪನಗರದ ಸಬುಂಚಿ ಎಂಬಲ್ಲಿ. ಇದು ಆಧುನಿಕ ಅಜರ್ಬೈಜಾನ್. ತಂದೆ ಗುಸ್ತಾವ್ ವಿಲ್ಹೆಲ್ಮ್ ರಿಚರ್ಡ್ ಸೋರ್ಜ್, ಜರ್ಮನಿಯಿಂದ ಬಂದಿದ್ದ ಗಣಿ ಎಂಜಿನಿಯರ್. ಇವನ ಒಂಬತ್ತು ಮಕ್ಕಳಲ್ಲಿ ಕಿರಿಯವನೇ ಸೋರ್ಜ್. ತಾಯಿ ರಷ್ಯಾದವಳು, ನಿನಾ ಸೆಮಿಯೋನೋವ್ನಾ ಕೋಬಿಯೆಲೆವಾ. ಸೋರ್ಜೋಗೆ ಮೂರು ವರ್ಷವಾದಾಗ 1898ರಲ್ಲಿ ಆತನ ಕುಟುಂಬದವರು ಜರ್ಮನಿಯ ಬರ್ಲಿನ್ಗೆ ವಾಪಸಾಗುತ್ತಾರೆ. ರಷ್ಯಾದಲ್ಲಿಯ ಆಕರ್ಷಕ ಸಂಬಳದ ಗುತ್ತಿಗೆ ಮುಕ್ತಾಯವಾಗಿದ್ದೇ ಇದಕ್ಕೆ ಕಾರಣ. ಸೋರ್ಜ್ ತಂದೆಯು ರಾಷ್ಟ್ರೀಯವಾದಿ ಮತ್ತು ಸಾಮ್ರಾಜ್ಯಶಾಹಿಯನ್ನು ಬೆಂಬಲಿಸುವ ರಾಜಕೀಯ ನಿಲವನ್ನು ಹೊಂದಿದ್ದನು. ಇದು ಬಾಲಕ ಸೋರ್ಜ್ ಮೇಲೂ ಪ್ರಭಾವ ಬೀರಿತು. ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಏಂಗಲ್ಸ್ರ ಜೊತೆಗಾರ ಫ್ರೆಡ್ರಿಕ್ ಅಡಾಲ್ಫ್ ಸೋರ್ಜ್ ತನ್ನ ಅಜ್ಜ ಎಂದು ಸೋರ್ಜ್ ಹೇಳುತ್ತಿದ್ದ. ನಿಜ ಹೇಳಬೇಕೆಂದರೆ ಆತ ಅವನ ಅಜ್ಜಿಯ ತಮ್ಮನಾಗಿದ್ದನು.
ಮೊದಲ ಮಹಾಯುದ್ಧ ಆರಂಭವಾದ ಅಲ್ಪಕಾಲದಲ್ಲಿಯೇ ತನ್ನ 18ನೆ ವಯಸ್ಸಿಗೇ 1914ರ ಅಕ್ಟೋಬರ್ನಲ್ಲಿ ಸೋರ್ಜ್ ಜರ್ಮನಿಯ ಸೇನೆಗೆ ಸೇರ್ಪಡೆಯಾಗುತ್ತಾನೆ. 1916ರ ಮಾರ್ಚ್ನಲ್ಲಿ ನಡೆದ ಕಾಳಗದಲ್ಲಿ ಆತನಿಗೆ ತೀವ್ರವಾದ ಗಾಯವಾಗುತ್ತದೆ. ಸಿಡಿದ ಬಾಂಬಿನ ಚೂರುಗಳು ತಾಗಿ ಆತನ ಮೂರು ಬೆರಳುಗಳಿಗೆ ಮತ್ತು ಎರಡೂ ಕಾಲುಗಳಿಗೆ ಗಾಯವಾಗುತ್ತದೆ. ಇದರಿಂದಾಗಿ ಆತ ಜೀವನಪೂರ್ತಿ ಕುಂಟನಾಗಬೇಕಾಗುತ್ತದೆ. ಈತನಿಗೆ ಕಾರ್ಪೋರಲ್ ಹುದ್ದೆಗೆ ಬಡ್ತಿ ನೀಡಿ ಐರನ್ ಕ್ರಾಸ್ ಗೌರವ ನೀಡುತ್ತಾರೆ. ಬಳಿಕ ವೈದ್ಯಕೀಯ ಆಧಾರದ ಮೇಲೆ ಆತನಿಗೆ ಸೇನೆಯಿಂದ ಬಿಡುಗಡೆ ಮಾಡುತ್ತಾರೆ. ಬಲಪಂಥೀಯ ರಾಷ್ಟ್ರೀಯವಾದಿಯಾಗಿ ಸೇನೆಯನ್ನು ಸೇರಿದ್ದ ಆತನಿಗೆ ಭ್ರಮನಿರಸನವಾಗುತ್ತದೆ. ಯುದ್ಧವನ್ನು ಅರ್ಥಹೀನವೆಂದು ಕರೆದ ಆತನು ಎಡಪಂಥದ ತತ್ವಗಳಿಂದ ಆಕರ್ಷಿತನಾಗುತ್ತಾನೆ.
ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಆತ ಮಾರ್ಕ್ಸ್ನ ಕೃತಿಗಳನ್ನು ಓದುತ್ತಾನೆ. ತನಗೆ ಆರೈಕೆ ಮಾಡುತ್ತಿದ್ದ ನರ್ಸ್ ಒಬ್ಬಳ ತಂದೆಯ ಪ್ರಭಾವದಿಂದ ಆತ ಕಮ್ಯುನಿಸ್ಟ್ ಆಗುತ್ತಾನೆ. ಈ ನರ್ಸ್ ಜೊತೆ ಇವನ ಸಂಬಂಧ ಬೆಳೆಯುತ್ತದೆ. ಯುದ್ಧದ ಉಳಿದ ಸಮಯವನ್ನು ಇವನು ಬರ್ಲಿನ್, ಕೀಲ್ ಮತ್ತು ಹ್ಯಾಂಬರ್ಗ್ ವಿಶ್ವವಿದ್ಯಾನಿಲಯಗಳಲ್ಲಿ ಅರ್ಥಶಾಸ್ತ್ರವನ್ನು ಓದುವುದರಲ್ಲಿ ಕಳೆಯುತ್ತಾನೆ. ಹ್ಯಾಂಬರ್ಗ್ ವಿವಿಯಿಂದ 1919ರ ಆಗಸ್ಟ್ನಲ್ಲಿ ಇವನು ರಾಜಕೀಯಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದುಕೊಳ್ಳುತ್ತಾನೆ. ಅದೇ ಸಮಯದಲ್ಲಿ ಜರ್ಮನಿಯ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿಕೊಳ್ಳುತ್ತಾನೆ. ತನ್ನ ರಾಜಕೀಯ ನಿಲವುಗಳಿಂದಾಗಿ ಅವನು ಅಧ್ಯಾಪನ ವೃತ್ತಿ ಮತ್ತು ಗಣಿ ಕೆಲಸ ಎರಡರಿಂದಲೂ ವಂಚಿತನಾಗುತ್ತಾನೆ. ಆಗ ಅನಿವಾರ್ಯವಾಗಿ ಸೋವಿಯತ್ ಒಕ್ಕೂಟಕ್ಕೆ ವಲಸೆ ಹೋಗುತ್ತಾನೆ. ಮಾಸ್ಕೋದಲ್ಲಿ ಕಮ್ಯೂನಿಸ್ಟ್ ಇಂಟರ್ ನ್ಯಾಶನಲ್ನ ಜೂನಿಯರ್ ಏಜೆಂಟ್ ಆಗುತ್ತಾನೆ.
ನಂತರ ಸೋರ್ಜ್ ಸೋವಿಯತ್ ಇಂಟೆಲಿಜೆನ್ಸ್ನ ಏಜೆಂಟ್ ಆಗಿ ನೇಮಕಗೊಳ್ಳುತ್ತಾನೆ. ತೋರಿಕೆಗೆ ಪತ್ರಕರ್ತನಾಗಿದ್ದ ಆತನ ಕೆಲಸ ಯುರೋಪಿನ ದೇಶಗಳಲ್ಲಿ ಸಂಚರಿಸಿ ಕಮ್ಯುನಿಸ್ಟ್ ಕ್ರಾಂತಿ ನಡೆಸುವುದಕ್ಕೆ ಅನುಕೂಲಕರವಾದ ವಾತಾವರಣ ಎಲ್ಲೆಲ್ಲಿ ಇದೆ ಎಂದು ಅಂದಾಜುಮಾಡುವುದಾಗಿತ್ತು. 1920ರಿಂದ 22ರ ವರೆಗೆ ಸೋರ್ಜ್ ಜರ್ಮನಿಯಲ್ಲಿ ಕಳೆದನು. ಅಲ್ಲಿ ಅವನಿಗೆ ಕ್ರಿಶ್ಚಿಯಾನೆ ಗೆರ್ಲೆಚ್ಳ ಭೇಟಿಯಾಗುತ್ತದೆ. ಇವಳು ಶ್ರೀಮಂತ ಕಮ್ಯುನಿಸ್ಟ್ ಮತ್ತು ಕೀಲ್ನಲ್ಲಿ ರಾಜ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದ ಡಾ.ಕರ್ಟ್ ಆಲ್ಬರ್ಟ್ ಗರ್ಲೇಚ್ ಅವರ ಮಾಜಿ ಪತ್ನಿ. ಸೋರ್ಜ್ ಮೊದಲ ಭೇಟಿಯಲ್ಲಿ ಕ್ರಿಶ್ಚಿಯಾನೆ ಗೆರ್ಲೇಚ್ಗೆ ವಿದ್ಯುತ್ಸಂಚಾರವಾದಂತೆ ಆಗುತ್ತದೆ. ಒಂದು ಕ್ಷಣ ದಿಗ್ಮೂಢಳಾಗಿ ನಿಲ್ಲುತ್ತಾಳೆ. ಆ ಒಂದು ತಲ್ಲಣ ಅವಳಲ್ಲಿ ಬಹು ಕಾಲದ ವರೆಗೆ ಮರೆಯಾಗುವುದೇ ಇಲ್ಲ. ಅದೇನೋ ಅವ್ಯಕ್ತವಾದ ಭಯ, ಕತ್ತಲೆ, ತಪ್ಪಿಸಿಕೊಂಡು ಹೋಗಲಾಗದ ಅವಸ್ಥೆ ಅವಳದಾಗಿತ್ತು. ಕ್ರಿಶ್ಚಿಯಾನೆ ಮತ್ತು ಸೋರ್ಜ್ 1921ರ ಮೇ ತಿಂಗಳಿನಲ್ಲಿ ಮದುವೆಯಾಗುತ್ತಾರೆ. 1922ರಲ್ಲಿ ಅವನನ್ನು ಫ್ರಾಂಕ್ಫರ್ಟ್ಗೆ ಕಳುಹಿಸುತ್ತಾರೆ. ಅಲ್ಲಿ ಉದ್ಯಮಿಗಳ ಸಮೂಹದ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಾನೆ. 1923ರ ಬೇಸಿಗೆಯಲ್ಲಿ ಆತ ಮಾರ್ಕ್ಸ್ವಾದಿಗಳ ಮೊದಲ ಕಾರ್ಯ ಸಪ್ತಾಹದಲ್ಲಿ ಪಾಲ್ಗೊಳ್ಳುತ್ತಾನೆ. ಫ್ರಾಂಕ್ಫರ್ಟ್ನಲ್ಲಿ ಇನ್ಸ್ಟಿಟ್ಯೂಟ್ ಫಾರ್ ಸೋಶಿಯಲ್ ರಿಸರ್ಚ್ಗೆ ಒಂದು ಲೈಬ್ರರಿಯನ್ನು ಮಾಡಿಕೊಡುತ್ತಾನೆ.
1924ರಲ್ಲಿ ಸೋರ್ಜ್ ಮತ್ತು ಕ್ರಿಶ್ಚಿಯಾನೆ ಮಾಸ್ಕೋಗೆ ತೆರಳುತ್ತಾರೆ. ಅಲ್ಲಿ ಆತ ಅಧಿಕೃತವಾಗಿ ಕಮ್ಯುನಿಸ್ಟ್ ಇಂಟರ್ನ್ಯಾಶನಲ್ನ ಅಂತಾರಾಷ್ಟ್ರೀಯ ಸಂಬಂಧಗಳ ಇಲಾಖೆಯನ್ನು ಸೇರುತ್ತಾನೆ. ಆತ ತನ್ನ ಕೆಲಸದಲ್ಲಿ ಅದೆಷ್ಟೊಂದು ತನ್ಮಯನಾಗಿದ್ದನೆಂದರೆ ತನ್ನ ಸಾಂಸಾರಿಕ ಜೀವನಕ್ಕೆ ಸಾಕಷ್ಟು ಸಮಯವನ್ನು ನೀಡುವುದು ಅವನಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯವಾಗುತ್ತದೆ. 1929ರಲ್ಲಿ ಸೋರ್ಜ್ ರೆಡ್ ಆರ್ಮಿಯ ನಾಲ್ಕನೆ ಇಲಾಖೆಯ ಅಂದರೆ ಮಿಲಿಟರಿ ಬೇಹುಗಾರಿಕೆಯ ಭಾಗವಾಗುತ್ತಾನೆ. ತನ್ನ ಜೀವನದ ಉಳಿದ ಭಾಗವನ್ನು ಆತ ಅದಕ್ಕಾಗಿಯೇ ಮೀಸಲಿಡುತ್ತಾನೆ. ಅದೇ ವರ್ಷ ಅವನು ಇಂಗ್ಲೆಂಡಿಗೆ ಅಲ್ಲಿಯ ಕಾರ್ಮಿಕರ ಭಾವನೆಗಳನ್ನು, ಮತ್ತು ಕಮ್ಯುನಿಸ್ಟ್ ಪಕ್ಷದ ಸ್ಥಿತಿಯನ್ನು ಅರಿಯುವುದಕ್ಕೆ ತೆರಳುತ್ತಾನೆ. ಹಾಗೆಯೇ ಆ ದೇಶದ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗಳನ್ನು ಅರಿಯುವುದು ಅವನ ಉದ್ದೇಶವಾಗಿತ್ತು. ತನ್ನ ಗುರುತನ್ನು ಮರೆಮಾಚಿಕೊಂಡು ರಾಜಕೀಯದಿಂದ ದೂರವಿರುವಂತೆ ಆತನಿಗೆ ಸೂಚಿಸಲಾಗಿತ್ತು.
1929ರ ನವೆಂಬರ್ನಲ್ಲಿ ಸೋರ್ಜ್ನನ್ನು ಜರ್ಮನಿಗೆ ಕಳುಹಿಸುತ್ತಾರೆ. ಅಲ್ಲಿ ನಾಝಿ ಪಕ್ಷವನ್ನು ಸೇರುವಂತೆ ಮತ್ತು ಎಡಪಕ್ಷದ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳದಂತೆ ಸೂಚಿಸಲಾಗುತ್ತದೆ. ತನ್ನ ಗುರುತನ್ನು ಮರೆಮಾಚಿಕೊಂಡ ಅವನಿಗೆ ಕೃಷಿ ಸುದ್ದಿಪತ್ರಿಕೆ ಡ್ಯುಶ್ಚೆ ಗೆಟ್ರೀಡ್-ಝೈತುಂಗ್'ನಲ್ಲಿ ಕೆಲಸ ಸಿಗುತ್ತದೆ. 1930ರಲ್ಲಿ ಸೋರ್ಜ್ನನ್ನು ಚೀನಾದ ಶಾಂಘೈಗೆ ಕಳುಹಿಸಲಾಗುತ್ತದೆ. ತನ್ನ ಗುರುತನ್ನು ಮರೆಮಾಚಲು ಆತನು ಜರ್ಮನ್ ನ್ಯೂಸ್ ಸರ್ವಿಸ್ ಒಂದರ ಸಂಪಾದಕ ಮತ್ತು ಫ್ರಾಂಕ್ಫರ್ಟರ್ ಝೈತುಂಗ್ ಪತ್ರಿಕೆಗೆ ಸುದ್ದಿ ಕಳುಹಿಸುವವನಂತೆ ಪರಿಚಯಿಸಿಕೊಳ್ಳುತ್ತಾನೆ. ಆತನಿಗೆ ಇನ್ನೊಬ್ಬ ಏಜೆಂಟ್ ಮ್ಯಾಕ್ಸ್ ಕ್ಲೌಸೆನ್ ಎಂಬಾತನ ಸಂಪರ್ಕ ಒದಗುತ್ತದೆ. ಅಲ್ಲದೆ ಜರ್ಮನ್ ಸೋವಿಯತ್ ಏಜೆಂಟ್ ಉರ್ಸುಲ ಕುಕ್ಝಿಂಸ್ಕಿ ಎಂಬಾತನನ್ನೂ ಭೇಟಿ ಮಾಡುತ್ತಾನೆ. ಅಮೆರಿಕದ ಪತ್ರಕರ್ತೆ ಅಗ್ನೆಸ್ ಸ್ಮೆಡ್ಲಿ ಎಂಬವಳೂ ಇವನ ಸಂಪರ್ಕಕ್ಕೆ ಬರುತ್ತಾಳೆ. ಈ ಸ್ಮೆಡ್ಲಿ ತನ್ನ ಎಡಪಂಥೀಯ ವಿಚಾರಧಾರೆಗೆ ಹೆಸರಾದವಳು. ಅವಳು
ಫ್ರಾಂಕ್ಫರ್ಟರ್ ಝೈತುಂಗ್’ಗೆ ಕೂಡ ಕೆಲಸ ಮಾಡುತ್ತಿದ್ದಳು. ಅವಳ ಮೂಲಕ ಸೋರ್ಜ್ಗೆ ಜಪಾನಿನ ಪತ್ರಿಕೆ ಅಸಾಹಿ ಶಿಂಬುನ್ನ ಹೋಟ್ಸುಮಿ ಒಝಾಕಿ ಮತ್ತು ಹನಾಕೋ ಇಶಿ ಇವರ ಪರಿಚಯವಾಗುತ್ತದೆ. ಒಝಾಕಿ ಮುಂದೆ ಸೋರ್ಜ್ಗೆ ಕೆಲಸ ಕೊಡುತ್ತಾನೆ. ಮತ್ತು ಹನಾಕೋ ಇಶಿ ಜೊತೆ ಸೋರ್ಜ್ ಪ್ರಣಯ ಸಂಬಂಧ ಬೆಳೆಸುತ್ತಾನೆ. ಒಬ್ಬ ಪತ್ರಕರ್ತನಾಗಿ ಸೋರ್ಜ್ ಚೀನಾದ ಕೃಷಿ ವಿಷಯದಲ್ಲಿ ತಾನು ಪರಿಣತ ಎಂಬುದನ್ನು ಸಿದ್ಧಮಾಡುತ್ತಾನೆ. ಪತ್ರಕರ್ತನ ಅವತಾರದಲ್ಲಿ ಆತನು ಚೀನಾದಲ್ಲೆಲ್ಲ ಸುತ್ತಾಡುತ್ತಾನೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಸದಸ್ಯರೊಂದಿಗೆ ಸಂಪರ್ಕ ಬೆಳೆಸುತ್ತಾನೆ. ಚೀನಾದ ಮತ್ತು ಜಪಾನಿನ ಪಡೆಗಳು ಶಾಂಘೈನ ಬೀದಿಗಳಲ್ಲಿ ಬಡಿದಾಡಿಕೊಳ್ಳುತ್ತಿದ್ದುದರ ಬಗ್ಗೆ ಸೋರ್ಜ್ 1932ರ ಜನವರಿಯಲ್ಲಿ ವರದಿ ಮಾಡುತ್ತಾನೆ. ಅದೇ ವರ್ಷ ಡಿಸೆಂಬರ್ನಲ್ಲಿ ಅವನಿಗೆ ಮಾಸ್ಕೋಗೆ ಮರಳುವಂತೆ ಆದೇಶವಾಗುತ್ತದೆ. ಸೋರ್ಜ್ ಮಾಸ್ಕೋಗೆ ಮರಳುತ್ತಾನೆ. ಜೊತೆಗೆ ತಾನು ಚೀನಾದಲ್ಲಿ ಮದುವೆಯಾದ ಯೆಕಟೆರಿನಾ ಮ್ಯಾಕ್ಸಿಮೋವಾ (ಕಾತ್ಯಾ)ಳನ್ನೂ ರಷ್ಯಾಕ್ಕೆ ಕರೆತರುತ್ತಾನೆ. ಚೀನಾದ ಕೃಷಿ ವ್ಯವಸ್ಥೆಯ ಕುರಿತು ಆತ ಒಂದು ಕೃತಿಯನ್ನು ರಚಿಸುತ್ತಾನೆ.
ರಷ್ಯಾದ ಬೇಹುಗಾರಿಕೆ ಸಂಸ್ಥೆ ಜಿಆರ್ಯು 1933ರ ಮೇ ತಿಂಗಳಿನಲ್ಲಿ ಜಪಾನಿನಲ್ಲಿ ಒಂದು ಬೇಹುಗಾರಿಕೆ ಜಾಲವನ್ನು ಸೋರ್ಜ್ ಸಂಘಟಿಸಬೇಕು ಎಂದು ನಿರ್ಧರಿಸುತ್ತದೆ. ಆತನಿಗೆ ರಾಮ್ಸೆ ಎಂಬ ಸಂಕೇತ ನಾಮವನ್ನು ನೀಡುತ್ತದೆ. ಸೋರ್ಜ್ ಮೊದಲು ಬರ್ಲಿನ್ಗೆ ತೆರಳುತ್ತಾನೆ. ಜರ್ಮನಿಯಲ್ಲಿಯ ತನ್ನ ಹಳೆಯ ಸಂಪರ್ಕವನ್ನೆಲ್ಲ ಸಜೀವಗೊಳಿಸುತ್ತಾನೆ. ಜಪಾನಿನಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ಹೊಸ ಪತ್ರಿಕೆಯೊಂದರ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾನೆ. 1931ರಲ್ಲಿ ಜಪಾನಿನ ಕ್ವಾಂತುಂಗ್ ಆರ್ಮಿಯು ಚೀನಾದ ಮಂಚೂರಿಯಾ ಪ್ರದೇಶವನ್ನು ವಶಪಡಿಸಿಕೊಳ್ಳುತ್ತದೆ. ಈ ಮೂಲಕ ಏಷ್ಯಾದ ಮುಖ್ಯ ಭೂಭಾಗದಲ್ಲಿ ಅದಕ್ಕೆ ನೆಲೆಯೊಂದು ದೊರೆಯುತ್ತದೆ. ಕ್ವಾಂತುಂಗ್ ಆರ್ಮಿಯ ಬಹುತೇಕ ಜನರಲ್ಗಳು ಮಂಚೂರಿಯಾ ವಶವಾದ ಮೇಲೆ ರಷ್ಯಾದ ಪೂರ್ವ ಭಾಗದ ಮೇಲೆ ದಾಳಿ ಮಾಡಬೇಕು ಎಂಬ ಉತ್ಸಾಹದಲ್ಲಿರುತ್ತಾರೆ. ಒಂದು ಕಡೆ ಜಪಾನ್, ಇನ್ನೊಂದು ಕಡೆ ಜರ್ಮನಿಯ ದಾಳಿಯ ಆತಂಕ ಮಾಸ್ಕೋವನ್ನು ಕಾಡುತ್ತಿರುತ್ತದೆ. ಜಪಾನಿನ ಸೇನೆಯ ಸಂಕೇತ ಸಂದೇಶಗಳನ್ನು ಸೋವಿಯತ್ ಬೇಹುಗಾರರು ಭೇದಿಸಿ ಹಲವು ವಿಚಾರ ಅರಿತಿದ್ದರು.
ಬರ್ಲಿನ್ನಲ್ಲಿ ಸೋರ್ಜ್ ತನ್ನನ್ನು ತಾನೇ ನಾಝಿ ಪಕ್ಷದಲ್ಲಿ ಸೇರಿಸಿಕೊಂಡಿದ್ದನು. ಮತ್ತು ನಾಝಿಗಳ ಪ್ರಚಾರ ಸಾಹಿತ್ಯವನ್ನು, ಅದರಲ್ಲೂ ಮುಖ್ಯವಾಗಿ ಅಡಾಲ್ಫ್ ಹಿಟ್ಲರನ ಮೇನ್ ಕಾಂಪ್ಫ್'ಅನ್ನು ಓದಿಕೊಂಡಿದ್ದನು. ಈಗ ಆತ ಮದ್ಯದ ಕುಡಿತವನ್ನು ಬಿಟ್ಟು ಕೇವಲ ಬೀಯರ್ ಕುಡಿಯುತ್ತಿದ್ದನು. ಕುಡಿದ ಅಮಲಿನಲ್ಲಿ ತನ್ನ ಬಾಯಿಂದ ಏನಾದರೂ ಅಸಂಬದ್ಧ ಬರಬಾರದು ಎಂದು ಈ ಮುನ್ನೆಚ್ಚರಿಕೆಯಾಗಿತ್ತು. ತನಗೆ ವಹಿಸಲಾದ ಕಾರ್ಯದಲ್ಲಿ ತನ್ನನ್ನು ಅದೆಷ್ಟು ಗಾಢವಾಗಿ ತೊಡಗಿಸಿಕೊಂಡಿದ್ದ ಎಂಬುದನ್ನು ಇದು ತೋರಿಸುತ್ತದೆ. ನಂತರದ ದಿನಗಳಲ್ಲಿ ತನ್ನ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅವನು ಕುಡಿತವನ್ನು ಮತ್ತೆ ಆರಂಭಿಸುತ್ತಾನೆ. ಜಪಾನಿನಿಂದ ವರದಿ ಮಾಡುವುದಕ್ಕೆ ಆತ ನಾಝಿ ಜರ್ಮನಿಯ ಎರಡು ಪತ್ರಿಕೆಗಳಿಂದ ಕಮಿಷನ್ ಪಡೆಯುತ್ತಾನೆ. ಅದಲ್ಲದೆ ನಾಝಿ ಸಿದ್ಧಾಂತದ ನಿಯತಕಾಲಿಕ
ಜಿಯೋಪೊಲಿಟಿಕ್’ಗೂ ಆತ ಬರೆಯುತ್ತಿದ್ದ. ತಾನೊಬ್ಬ ಅಪ್ಪಟ ನಾಝಿ ಪತ್ರಕರ್ತ ಎಂಬ ಗುರುತಿನಲ್ಲಿ ಮರೆಯಾಗುವುದರಲ್ಲಿ ಆತ ಎಷ್ಟೊಂದು ಯಶಸ್ವಿಯಾಗಿದ್ದ ಎಂದರೆ, ಜಪಾನಿಗೆ ತೆರಳುವ ಅವನಿಗೆ ನೀಡಲಾದ ವಿದಾಯದ ರಾತ್ರಿಯೂಟಕ್ಕೆ ಜೋಸೆಫ್ ಜಿಯೋಬೆಲ್ಸ್ ಕೂಡ ಆಗಮಿಸಿದ್ದನು. 1933ರ ಆಗಸ್ಟ್ನಲ್ಲಿ ಅವನು ನ್ಯೂಯಾರ್ಕ್ ಮೂಲಕ ಜಪಾನಿಗೆ ತೆರಳುತ್ತಾನೆ.
ಸೋರ್ಜ್ ಯೋಕೋಹಾಮಾಕ್ಕೆ 1933ರ ಸೆಪ್ಟೆಂಬರ್ 6ರಂದು ಆಗಮಿಸುತ್ತಾನೆ. ಜಪಾನಿಗೆ ಆಗಮಿಸಿದ ನಂತರ ಆತ ಫ್ರಾಂಕ್ಫರ್ಟರ್ ಝೈತುಂಗ್ಗೆ ಜಪಾನಿನ ವರದಿಗಾರನಾಗುತ್ತಾನೆ. ಇದು ಜರ್ಮನಿಯ ಪ್ರತಿಷ್ಠಿತ ಪತ್ರಿಕೆಯಾಗಿದ್ದ ಕಾರಣ ಇದಕ್ಕೆ ಟೋಕಿಯೋದಿಂದ ಪ್ರತಿನಿಧಿಯಾದ ಸೋರ್ಜ್ನ ಅಂತಸ್ತು ಜಪಾನಿನಲ್ಲಿ ಜರ್ಮನಿಯ ಹಿರಿಯ ವರದಿಗಾರ ಎನ್ನುವ ಮಟ್ಟಕ್ಕೆ ಹೆಚ್ಚುತ್ತದೆ. ಇದು ಸೋವಿಯತ್ ಒಕ್ಕೂಟದ ಪರವಾಗಿ ಗೂಢಚರ್ಯೆ ನಡೆಸುವುದಕ್ಕೆ ಆತನಿಗೆ ತುಂಬ ಸಹಕಾರಿಯಾಗುತ್ತದೆ. ಆತನ ಕೆಲಸ ಜಪಾನವು ರಷ್ಯಾದ ಮೇಲೆ ದಾಳಿ ಮಾಡಲು ಯೋಜನೆ ಹಾಕಿಕೊಂಡಿದೆಯೇ ಎಂಬುದನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದಾಗಿತ್ತು. ಜಪಾನಿನಲ್ಲಿ ಅದೊಂದೇ ಆತನ ಕೆಲಸವಾಗಿತ್ತು. ಮಂಚೂರಿಯಾವನ್ನು ಜಪಾನವು ಆಕ್ರಮಿಸಿಕೊಂಡ ಬಳಿಕ ಅದರ ವಿದೇಶಾಂಗ ನೀತಿಯಲ್ಲಿ ಆಗುವ ಪ್ರಮುಖ ಬದಲಾವಣೆಯನ್ನು ಇವನು ಗಮನಿಸಬೇಕಿತ್ತು. ದಾಳಿಯ ಆತಂಕ ಬೇಡ ಎಂದು ಆತ ಮೇಲಿಂದ ಮೇಲೆ ತನ್ನ ಅಭಿಪ್ರಾಯವನ್ನು ತಿಳಿಸಿದ್ದು ಮಾಸ್ಕೋಗೆ ಮೆಚ್ಚುಗೆಯಾಗಿತ್ತು. ಟೋಕಿಯೋದಲ್ಲಿರುವ ಸೋವಿಯತ್ನ ರಾಯಭಾರ ಕಚೇರಿಯನ್ನಾಗಲಿ, ಜಪಾನಿನಲ್ಲಿ ಭೂಗತರಾಗಿರುವ ಕಮ್ಯುನಿಸ್ಟ್ ಕಾರ್ಯಕರ್ತರನ್ನಾಗಲಿ ಸಂಪರ್ಕಿಸಬಾರದು ಎಂದು ಆತನ ಕಮಾಂಡರುಗಳು ಆತನಿಗೆ ಎಚ್ಚರಿಕೆಯನ್ನು ನೀಡಿದ್ದರು. ಜಪಾನಿನ ಆತನ ಬೇಹುಗಾರಿಕೆ ಜಾಲದಲ್ಲಿ ರೆಡ್ ಆರ್ಮಿ ಅಧಿಕಾರಿ ಮತ್ತು ರೇಡಿಯೋ ಆಪರೇಟರ್ ಮ್ಯಾಕ್ಸ್ ಕ್ಲೌಸೆನ್, ಹೋಟ್ಸುಮಿ ಒಝಾಕಿ ಮತ್ತು ಕಮ್ಯುನಿಸ್ಟ್ ಇಂಟರ್ನ್ಯಾಶನಲ್ನ ಇಬ್ಬರು ಏಜೆಂಟರು, ಫ್ರೆಂಚ್ ಪತ್ರಿಕೆ ವು ಇದಕ್ಕೆ ಕೆಲಸ ಮಾಡುವ ಬ್ರಾಂಕೋ ವುಕೆಲಿಕ್, ಜಪಾನಿನ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತ ಮಿಯಾಗಿ ಯೋಟುಕು ಇದ್ದರು. ಮ್ಯಾಕ್ಸ್ ಕ್ಲೌಸೆನ್ನ ಪತ್ನಿ ಅನ್ನಾ ಕಾಲಕಾಲಕ್ಕೆ ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಿಸುವ ಕೆಲಸ ಮಾಡುತ್ತಿದ್ದಳು.
1937ರ ಬೇಸಿಗೆಯಿಂದ ಕ್ಲೌಸೆನ್ನು ಎಂ ಕ್ಲೌಸೆನ್ ಶೋಕೈ ಎಂಬ ಬ್ಲೂಪ್ರಿಂಟ್ ಯಂತ್ರಗಳನ್ನು ಪೂರೈಸುವ ಮತ್ತು ರಿಪ್ರೊಡಕ್ಷನ್ ಸೇವೆಗಳನ್ನು ನೀಡುವ ಒಂದು ಉದ್ಯಮವನ್ನು ಆರಂಭಿಸುತ್ತಾನೆ. ಇದಕ್ಕೆ ಸೋವಿಯತ್ ಹಣಕಾಸಿನ ನೆರವನ್ನು ನೀಡಿರುತ್ತದೆ. ಕಾಲಕ್ರಮೇಣ ಈ ಉದ್ಯಮ ವಾಣಿಜ್ಯಿಕ ಯಶಸ್ಸನ್ನೂ ಗಳಿಸುತ್ತದೆ. ಒಝಾಕಿಯು ಪ್ರತಿಷ್ಠಿತ ಜಪಾನಿ ಕುಟುಂಬದಿಂದ ಬಂದವನು. ಜಪಾನಿನಲ್ಲಿ ಆಧುನೀಕರಣ ಆರಂಭವಾಗಿದ್ದು ಮೈಜಿಯು ಜಪಾನಿನ ಚಕ್ರವರ್ತಿಯಾಗಿ ಪುನಃಸ್ಥಾಪನೆಯಾದಬಳಿಕ ಎಂದು ಈತ ನಂಬಿದ್ದನು. ಚೀನಾಕ್ಕೆ ತಾವು ಕಲಿಸಬೇಕಾಗಿರುವುದು ಬಹಳ ಇದೆ ಎಂದು ತಿಳಿದಿದ್ದ. ಹೀಗಿದ್ದರೂ ಜಪಾನವು ಚೀನಾದ ಬಗ್ಗೆ ಹೊಂದಿದ್ದ ಜನಾಂಗೀಯ ತಾರತಮ್ಯ ಭಾವ, ಚೀನಿಯರು ಕೇವಲ ಗುಲಾಮರಾಗಿರುವುದಕ್ಕಷ್ಟೇ ಪಕ್ಕಾದವರು ಎಂಬ ಧೋರಣೆಯಿಂದ ಈತ ಆಘಾತಗೊಂಡಿದ್ದನು. ಜಪಾನಿನಲ್ಲಿ ಆಗ ಇದ್ದ ಚಕ್ರವರ್ತಿಯೇ ದೇವರು ಎಂದು ಪೂಜಿಸುವ ರಾಜಕೀಯ ವ್ಯವಸ್ಥೆಯು ತೊಲಗಬೇಕು ಮತ್ತು ಜಪಾನಿನಲ್ಲಿ ಸರ್ವಾಧಿಕಾರವನ್ನು ಕೊನೆಗೊಳಿಸಲು ಸಮಾಜವಾದಿ ರಾಷ್ಟ್ರವನ್ನು ಪುನರ್ರೂಪಿಸಬೇಕು ಎಂಬ ಕನಸು ಕಂಡಿದ್ದನು.
1933 ಮತ್ತು 1934ರ ನಡುವೆ ಸೋರ್ಜ್ ಮಾಹಿತಿದಾರರ ಒಂದು ಜಾಲವನ್ನು ಸ್ಥಾಪಿಸಿಕೊಂಡನು. ಈತನ ಏಜೆಂಟರು ಹಿರಿಯ ರಾಜಕಾರಣಿಗಳ ಜೊತೆ ಸಂಪರ್ಕ ಸಾಧಿಸಿ ಜಪಾನಿನ ವಿದೇಶಾಂಗ ನೀತಿಯ ಬಗ್ಗೆ ಮಾಹಿತಿಯನ್ನು ಕಲೆಹಾಕಿದರು. ಈತನ ಏಜೆಂಟ್ ಒಜಾಕಿಯು ಪ್ರಧಾನಿ ಫುಮಿಮಾರೋ ಕೋನೋಯಿ ಜೊತೆ ನಿಕಟ ಸಂಪರ್ಕ ಸಾಧಿಸಿದನು. ಆತ ಸೋರ್ಜ್ಗಾಗಿ ರಹಸ್ಯ ದಾಖಲೆಗಳನ್ನು ನಕಲು ಮಾಡಿ ತಂದನು.
ಕಟ್ಟಾ ನಾಝಿ ಎಂದು ಗುರುತಿಸಿಕೊಂಡಿದ್ದ ಸೋರ್ಜ್ಗೆ ಜರ್ಮನಿಯ ದೂತಾವಾಸದಲ್ಲಿ ಸ್ವಾಗತ ದೊರೆಯುವುದು ಕಷ್ಟವೇನಾಗಲಿಲ್ಲ. ಅವನೊಬ್ಬ ವಿಶಿಷ್ಟ, ಅಬ್ಬರದ, ಅಹಂಕಾರಿಯಾದ ನಾಝಿ… ಮೂಗಿನ ತುದಿಯಲ್ಲೇ ಕೋಪ, ಸಿಕ್ಕಾಪಟ್ಟೆ ಕುಡುಕ ಎಂದು ಜಪಾನಿನ ಪತ್ರಕರ್ತನೊಬ್ಬ ಸೋರ್ಜ್ನನ್ನು 1935ರಲ್ಲಿ ವರ್ಣಿಸಿದ್ದ. ಫ್ರಾಂಕ್ಫರ್ಟ್ ಝೈತುಂಗ್'ನ ಜಪಾನಿನ ವರದಿಗಾರನಾಗಿ ಸೋರ್ಜ್ ಜಪಾನಿನ ರಾಜಕೀಯದ ಬಗ್ಗೆ ತನ್ನದೇ ಒಂದು ಜಾಲವನ್ನು ಅಭಿವೃದ್ಧಿಪಡಿಸಿಕೊಂಡಿದ್ದನು. ಇದರಿಂದಾಗಿ ರಾಯಭಾರಿ ಹರ್ಬರ್ಟ್ ವೊನ್ ಡರ್ಕ್ಸೆನ್ ಒಳಗೊಂಡಂತೆ ಜರ್ಮನಿಯ ರಾಜತಾಂತ್ರಿಕರು ಜಪಾನಿನ ಅಂದಾಜಿಗೆ ನಿಲುಕದ ಮತ್ತು ರಹಸ್ಯ ರಾಜಕೀಯ ಜಗತ್ತನ್ನು ಅರಿಯುವುದಕ್ಕೆ ಸೋರ್ಜ್ನನ್ನು ಒಂದು ಬೇಹುಗಾರಿಕೆಯ ಮೂಲವನ್ನಾಗಿ ಪರಿಗಣಿಸುತ್ತಾರೆ. ಜಪಾನಿನಲ್ಲಿ ಯಾವುದು ಹೇಗೆ ಕಾಣಿಸುತ್ತದೆ ಮತ್ತು ಯಾವುದು ಹೇಗೆ ಇದೆ ಎಂದು ಅರಿಯುವುದು ಕಷ್ಟವಾಗಿತ್ತು. ಏಕೆಂದರೆ ಜಪಾನಿಗರು ಸ್ವಭಾವತಃ ತಾವು ಹೇಗೆ ಇದ್ದೇವೋ ಹಾಗೆ ತೋರಿಸಿಕೊಳ್ಳಲು ಇಷ್ಟಪಡದವರು. ಸೋರ್ಜ್ ಜಪಾನಿ ಭಾಷೆಯನ್ನು ತುಂಬ ಚೆನ್ನಾಗಿ ಮಾತನಾಡುತ್ತಿದ್ದುದರಿಂದ ಜಪಾನ ವಿಷಯದಲ್ಲಿ ಒಬ್ಬ ತಜ್ಞನಾಗಿ ಆತನ ಸ್ಥಾನಗೌರವ ಇನ್ನಷ್ಟು ಹೆಚ್ಚಿತ್ತು. ಸೋರ್ಜ್ಗೆ ಏಷ್ಯಾದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ತುಂಬ ಆಸಕ್ತಿ ಇತ್ತು. ಅದರಲ್ಲೂ ಚೀನಾ ಮತ್ತು ಜಪಾನಿನ ಬಗ್ಗೆ ವಿಶೇಷ ಕುತೂಹಲ. ಕಾರಣ ಅವನು ಶಾಂತನಾಗಿದ್ದಾಗ ಅದರ ಬಗ್ಗೆ ತನಗೆ ಸಾಧ್ಯವಿದ್ದಷ್ಟನ್ನು ಅರಿತುಕೊಂಡಿದ್ದನು. ಈ ಸಮಯದಲ್ಲಿ ಸೋರ್ಜ್ ಜಪಾನಿಗೆ ಸಂಬಂಧಿಸಿದ ಜರ್ಮನ್ ಪಡೆಯ ಜನರಲ್ ಆಗಿದ್ದ ಯುಗೆನ್ ಒಟ್ಟ್ ಜೊತೆ ಸ್ನೇಹವನ್ನು ಸಾಧಿಸಿದನು. ಇದಕ್ಕಾಗಿ ಅವನ ಪತ್ನಿ ಹೆಲ್ಮಾಗೆ ಪ್ರಲೋಭನೆಯನ್ನು ಸೋರ್ಜ್ ಒಡ್ಡಬೇಕಾಯಿತು. ಮಿಲಿಟರಿಗೆ ಸಂಬಂಧಿಸಿದಂತೆ ಜಪಾನಿನ ಸೇನೆ ಇತ್ಯಾದಿಗಳ ಕುರಿತು ತಾನು ಸಂಗ್ರಹಿಸಿದ ಮಾಹಿತಿಯನ್ನುಒಟ್ಟ್ ಬರ್ಲಿನ್ಗೆ ಕಳುಹಿಸುತ್ತಿದ್ದನು. ಅದನ್ನು ಹೆಲ್ಮಾ ಒಟ್ಟ್ ನಕಲು ಮಾಡಿ ಸೋರ್ಜ್ಗೆ ನೀಡುತ್ತಿದ್ದಳು. ಅದನ್ನು ಅವನು ಮಾಸ್ಕೋಗೆ ಕಳುಹಿಸುತ್ತಿದ್ದನು. ಸೋರ್ಜ್ ನಾಝಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೆಲ್ಮಾ ಒಟ್ಟ್ ನಂಬಿದ್ದಳು. ಜರ್ಮನಿಯ ಸೇನೆಯು ಜಪಾನಿನ ಸೇನೆಗೆ 19ನೆ ಶತಮಾನದಲ್ಲಿ ತರಬೇತಿಯನ್ನು ನೀಡುತ್ತಿದ್ದಾಗ ಜಪಾನಿನ ಸೇನೆಯ ಮೇಲೆ ಜರ್ಮನಿಯ ಪ್ರಭಾವ ಬಲವಾಗಿತ್ತು ಮತ್ತು ಒಟ್ಟ್ ಜಪಾನಿನ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದನು. 1934ರ ಅಕ್ಟೋಬರ್ನಲ್ಲಿ ಜನರಲ್ ಒಟ್ಟ್ ಮತ್ತು ಸೋರ್ಜ್ ಜಪಾನಿನ ನಿಯಂತ್ರಣಕ್ಕೆ ಒಳಪಟ್ಟಿದ್ದ ಮಂಚುಕೋ ಸಾಮ್ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಆ ಪ್ರದೇಶದ ಬಗ್ಗೆ ಒಟ್ಟ್ಗಿಂತ ಚೆನ್ನಾಗಿ ಅರಿತಿದ್ದ ಸೋರ್ಜ್ ಅದರ ಕುರಿತು ತಾನೇ ಒಂದು ವರದಿಯನ್ನು ತಯಾರಿಸುತ್ತಾನೆ. ಅದನ್ನು ಒಟ್ಟ್ ತನ್ನದೇ ಹೆಸರಿನಲ್ಲಿ ಬರ್ಲಿನ್ಗೆ ಕಳುಹಿಸುತ್ತಾನೆ. ಅಲ್ಲಿ ಅದಕ್ಕೆ ಮೆಚ್ಚುಗೆ ದೊರೆತ ಮೇಲೆ ಸೋರ್ಜ್ ಮತ್ತು ಒಟ್ಟ್ ಗಳಸ್ಯ ಕಂಠಸ್ಯ ಎಂಬಂತಾದರು. ಜಪಾನಿನ ಸಾಮ್ರಾಜ್ಯದ ಕುರಿತ ಯಾವುದೇ ಮಾಹಿತಿಗೆ ಸೋರ್ಜ್ ಪ್ರಮುಖ ಆಕರ ಎಂಬಂತಾದನು. 1935ರಲ್ಲಿ ಸೋರ್ಜ್ ಮಾಸ್ಕೋಗೆ ಒಝಾಕಿ ನೀಡಿದ ಮಾಹಿತಿ ಆಧರಿಸಿ ಒಂದು ವರದಿಯನ್ನು ಕಳುಹಿಸುತ್ತಾನೆ. ಜಪಾನ್ 1936ರಲ್ಲಿ ಸೋವಿಯತ್ ಒಕ್ಕೂಟದ ಮೇಲೆ ದಾಳಿ ಮಾಡುವ ಯೋಜನೆಯಲ್ಲಿಲ್ಲ ಎಂದು ಅವನು ಬಲವಾಗಿ ಪ್ರತಿಪಾದಿಸುತ್ತಾನೆ. ಜಪಾನ್ 1937ರ ಜುಲೈನಲ್ಲಿ ಚೀನಾದ ಮೇಲೆ ಆಕ್ರಮಣವನ್ನು ಮಾಡುತ್ತದೆ ಎಂದು ಸೋರ್ಜ್ ಸರಿಯಾಗಿಯೇ ಊಹಿಸಿದ್ದನು. ಸೈಬೀರಿಯಾದ ಮೇಲೆ ಜಪಾನಿನ ದಾಳಿಯ ಅಪಾಯವಿಲ್ಲ ಎಂದು ಆತ ಹೇಳಿದ್ದನು. 1936ರ ಫೆಬ್ರವರಿ 26ರಂದು ಟೋಕಿಯೋದಲ್ಲಿ ಸೇನೆಯ ಒಂದು ಕ್ಷಿಪ್ರ ಬಂಡಾಯ ನಡೆಯಿತು. ಇದರಲ್ಲಿ ಹಲವು ಹಿರಿಯ ಅಧಿಕಾರಿಗಳ ಹತ್ಯೆ ನಡೆಯಿತು. ಪಕ್ಷ ರಾಜಕೀಯವನ್ನು ವಿರೋಧಿಸಿ ಮತ್ತು ರಾಜಪ್ರಭುತ್ವದ ಮೇಲ್ಮೆಯನ್ನು ಪ್ರತಿಷ್ಠಾಪಿಸುವ ಉದ್ದೇಶದ ಕ್ಷಿಪ್ರಕ್ರಾಂತಿ ಇದಾಗಿತ್ತು. ಡಿರ್ಕ್ಸೆನ್, ಒಟ್ಟ್ ಮತ್ತು ಜರ್ಮನ್ ದೂತಾವಾಸದ ಇತರರಿಗೆ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗಲಿಲ್ಲ. ಇದನ್ನು ಬರ್ಲಿನ್ಗೆ ಹೇಗೆ ವರದಿ ಮಾಡುವುದೆಂದು ಅರಿಯದೆ ಒದ್ದಾಡುತ್ತಿದ್ದಾಗ ಅವರಿಗೆ ಜಪಾನ ವಿಷಯದಲ್ಲಿ ಪರಿಣತನಾದ ಸೋರ್ಜ್ ನೆರವಿಗೆ ಬಂದನು. ಒಝಾಕಿ ತನಗೆ ನೀಡಿದ ಮಾಹಿತಿಯನ್ನು ಆಧರಿಸಿ ಸೋರ್ಜ್ ಒಂದು ವರದಿಯನ್ನು ತಯಾರಿಸುತ್ತಾನೆ. ಜಪಾನಿನ ಸೇನೆಯಲ್ಲಿದ್ದ ಸಾಮ್ರಾಜ್ಯಶಾಹಿ ಪರ ಗುಂಪು ಈ ಕ್ರಾಂತಿಯ ಯತ್ನ ನಡೆಸಿತ್ತು. ಇದರಲ್ಲಿ ಗ್ರಾಮೀಣ ಭಾಗದಿಂದ ಬಂದ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರದಾಚೆಯ ಪ್ರದೇಶದ ಅಭಿವೃದ್ಧಿಯಲ್ಲಿ ಆಗಿರುವ ನಿರ್ಲಕ್ಷ್ಯ ಅವರ ಕೋಪಕ್ಕೆ ಕಾರಣ. ಸಾಮ್ರಾಜ್ಯಶಾಹಿ ಪರ ಗುಂಪು ಕಮ್ಯುನಿಸ್ಟರಾಗಲಿ, ಸಮಾಜವಾದಿಗಳಾಗಲಿ ಅಲ್ಲ. ಕೇವಲ ಬಂಡವಾಳಶಾಹಿಗಳ ವಿರೋಧಿಗಳು. ಭಾರೀ ಉದ್ಯಮಗಳು ಚಕ್ರವರ್ತಿಯ ಇಚ್ಛೆಗೆ ವಿರೋಧವಾಗಿವೆ ಎಂಬುದು ಅವರ ಭಾವನೆಯಾಗಿದೆ ಎಂದು ಆತನ ವರದಿ ಹೇಳಿತ್ತು.ಇದರ ಆಧಾರದ ಮೇಲೆಯೇ ಡಿರ್ಕ್ಸೆನ್ ತನ್ನ ವರದಿಯನ್ನು ಬರ್ಲಿನ್ಗೆ ಕಳುಹಿಸುತ್ತಾನೆ. ಇದು ಆತನಿಗೆ ಅತ್ಯಂತ ಮೇಧಾವಿ ಎಂಬ ಪ್ರಶಂಸೆಯನ್ನು ತಂದುಕೊಟ್ಟಿತು. ಟೋಕಿಯೋದಲ್ಲಿ ಅತ್ಯಂತ ಗೌರವಾನ್ವಿತ ನೆರೆಹೊರೆಯವರಿದ್ದ ಮನೆಯೊಂದರಲ್ಲಿ ಸೋರ್ಜ್ ನೆಲೆಸಿದ್ದನು. ಅಲ್ಲಿ ಆತ ಭಾರೀ ಕುಡುಕನೆಂದೂ, ಮೈಮೇಲೆ ಪ್ರಜ್ಞೆ ಇಲ್ಲದೆ ಮೋಟಾರ್ಸೈಕಲ್ ಓಡಿಸುವವನೆಂದೂ ಪರಿಚಿತನಾಗಿದ್ದನು. ಸೋರ್ಜ್ ಕುಡಿಯುವುದಕ್ಕೆಂದು ಒಂದು ಬಾರ್ಗೆ ಕಾಯಂ ಹೋಗುತ್ತಿದ್ದನು. ಅಲ್ಲಿ ವೇಟ್ರೆಸ್ ಆಗಿ ಕೆಲಸ ಮಾಡುತ್ತಿದ್ದ ಜಪಾನಿ ಮಹಿಳೆ ಹನಾಕೋ ಇಶಿ ಮೇಲೆ ಇವನಿಗೆ ಮೋಹ ಉಂಟಾಯಿತು. 1936ರ ಬೇಸಿಗೆಯಲ್ಲಿ ಅವಳು ಇವನ ಮನೆಗೆ ಬಂದಳು, ಕಾನೂನು ಪ್ರಕಾರ ಗಂಡ ಹೆಂಡತಿಯಂತೆ ಇಬ್ಬರೂ ಉಳಿಯಲಾರಂಭಿಸಿದರು. ಆತ ಹಲವು ಮಹಿಳೆಯರ ಜೊತೆ ಜೀವನ ಸಾಗಿಸಿದ್ದ. ಆದರೆ ಇಶಿ ಜೊತೆಗಿನ ಆತನ ಸಂಬಂಧ ದೀರ್ಘ ಕಾಲ ಉಳಿದು ಬಂತು. ಅವಳು ಸೋರ್ಜ್ನ ವಿಪರೀತ ಕುಡಿತಕ್ಕೆ ಲಗಾಮು ಹಾಕಲು ಪ್ರಯತ್ನಿಸಿದಳು. ಅಲ್ಲದೆ ಇತರರ ಕಣ್ಣಿಗೆ ಆತ್ಮಹತ್ಯೆಕಾರಕ ಎನಿಸಿದ್ದ ಆತನ ಅತಿ ವೇಗದ ಮೋಟಾರ್ಸೈಕಲ್ ಚಾಲನೆಗೂ ನಿಯಂತ್ರಣ ಹೇರಲು ಯತ್ನಿಸಿದಳು. ಆತ ಇತರರ ಕಣ್ಣಿಗೆ ಒಬ್ಬ ಪ್ಲೇಬಾಯ್ ಥರ, ದಿಕ್ಕಿಲ್ಲದ ಅನಾಥ ಶಿಶುವಿನ ಥರ ಕಾಣಿಸಿಕೊಂಡರೂ, ಸ್ವಭಾವದಲ್ಲಿ ಭಿನ್ನ ಧ್ರುವಗಳಂತೆ ಕಾಣಿಸಿಕೊಂಡರೂ ಆತನೊಬ್ಬ ಅಪಾಯಕಾರಿಯಾದ ಬೇಹುಗಾರನಾಗಿದ್ದ ಎಂದು ಸೋರ್ಜ್ಗೆ ಪರಿಚಯವಿದ್ದ ಅಮೆರಿಕದ ಪತ್ರಕರ್ತನೊಬ್ಬ ಆತನನ್ನು ವರ್ಣಿಸಿದ್ದನು. ಸೋರ್ಜ್ ಸೋವಿಯತ್ ಪರವಾಗಿ 1930ರ ದಶಕದಲ್ಲಿ ಜಪಾನಿನಲ್ಲಿ ಬೇಹುಗಾರಿಕೆಯನ್ನು ನಡೆಸುತ್ತಿದ್ದರೂ ಆತ ಮಾಸ್ಕೋದಲ್ಲಿದ್ದುದಕ್ಕಿಂತ ಹೆಚ್ಚು ಸುರಕ್ಷಿತವಾಗಿ ಟೋಕಿಯೋದಲ್ಲಿದ್ದ ಎಂಬುದು ಪರಿಸ್ಥಿತಿಯ ವ್ಯಂಗ್ಯವನ್ನು ಸೂಚಿಸುತ್ತದೆ. ಈ ಸಮಯದಲ್ಲಿ ರಷ್ಯಾದಲ್ಲಿ ಸ್ಟಾಲಿನ್ ರಾಜಕೀಯ ದಬ್ಬಾಳಿಕೆಯನ್ನು ನಡೆಸಿದ್ದನು. ರಾಜಕೀಯ ವಿರೋಧಿಗಳ ಹತ್ಯಾಕಾಂಡ ನಡೆದಿತ್ತು. ಸೋರ್ಜ್ಗೆ ಮಾಸ್ಕೋಗೆ ಮರಳುವಂತೆ 1937ರಲ್ಲಿ ಸ್ಟಾಲಿನ್ ಆದೇಶಿಸಿದ್ದ. ಆದರೆ ಸೋರ್ಜ್ ಅದನ್ನು ನಿರ್ಲಕ್ಷಿಸಿದ. ಏಕೆಂದರೆ ಅವನು ಜರ್ಮನಿಯ ನಾಗರಿಕತ್ವ ಹೊಂದಿದ್ದರಿಂದ ಅವನ ಬಂಧನವಾಗುವ ಸಾಧ್ಯತೆ ಇತ್ತು. ಸೋರ್ಜ್ ಜೊತೆ ವ್ಯವಹರಿಸುತ್ತಿದ್ದ ಜಿಆರ್ಯುನ ಯಾನ್ ಕಾರ್ಲೋವಿಚ್ ಬೆರ್ಜಿನ್ ಮತ್ತು ಆತನ ಉತ್ತರಾಧಿಕಾರಿ ಅರ್ಥರ್ ಆರ್ಥುಝೋವ್ ಅವರನ್ನು ಗುಂಡಿಟ್ಟು ಸಾಯಿಸಲಾಗಿತ್ತು. 1938ರಲ್ಲಿ ಬ್ರಿಟನ್ನಿನಲ್ಲಿ ಜರ್ಮನಿಯ ರಾಯಭಾರಿಯಾಗಿದ್ದ ಜೋಚಿಮ್ ವಾನ್ ರಿಬ್ಬನ್ಟ್ರೋಪ್ನನ್ನು ಜರ್ಮನಿಯ ವಿದೇಶಾಂಗ ಸಚಿವನನ್ನಾಗಿ ಮಾಡಲಾಯಿತು. ಆತನ ಸ್ಥಾನವನ್ನು ತುಂಬಲು ಲಂಡನ್ನಿಗೆ ಡರ್ಕ್ಸೆನ್ನನ್ನು ಕಳುಹಿಸಲಾಯಿತು. ಈ ಹೊತ್ತಿಗೆ ಒಟ್ಟ್ಗೆ ಸೋರ್ಜ್ ತನ್ನ ಹೆಂಡತಿಯ ಜೊತೆಗೆ ಮಲಗುತ್ತಿದ್ದಾನೆ ಎಂಬುದು ಗೊತ್ತಾಗಿತ್ತು. ಸೋರ್ಜ್ನ ವ್ಯಕ್ತಿತ್ವ ಎಂಥದ್ದೆಂದರೆ ಯಾವ ಹೆಂಗಸೇ ಆದರೂ ಅವನ ಆಕರ್ಷಣೆಗೆ ಸಿಲುಕದೆ ಇರುತ್ತಿರಲಿಲ್ಲ. ಹೀಗಿದ್ದರೂ ಸೋರ್ಜ್ಗೆ ಜರ್ಮನಿಯ ದೂತಾವಾಸವನ್ನು ಹಗಲುರಾತ್ರಿ ಹೇಗೆಬೇಕೋ ಹಾಗೆ ಬಳಸಿಕೊಳ್ಳಲು ಒಟ್ಟ್ ಬಿಟ್ಟುಬಿಟ್ಟನು. ಮಾಹಿತಿಯ ಮೂಲವಾಗಿ ಸೋರ್ಜ್ನ ಮೌಲ್ಯವನ್ನು ಒಟ್ಟ್ ಚೆನ್ನಾಗಿ ಅರಿತಿದ್ದನು. ಜಪಾನಿನ ರಹಸ್ಯ ರಾಜಕೀಯ ವಿಶ್ವವನ್ನು ಸೋರ್ಜ್ನಷ್ಟು ಚೆನ್ನಾಗಿ ಯಾರೂ ವಿವರಿಸಲಾರರು ಎಂಬುದು ಅವನಿಗೆ ಗೊತ್ತಿತ್ತು. ಜಪಾನ್ ಚೀನಾದ ಮೇಲೆ ಮಾಡಿದ ದಾಳಿಯ ಬಗ್ಗೆಬೇರೆ ಯಾರೇ ಪಾಶ್ಚಾತ್ಯನಿಗಿಂತ ಸೋರ್ಜ್ಗೆ ಹೆಚ್ಚು ಜ್ಞಾನವಿದೆ ಎಂಬುದು ಅವನ ತಿಳಿವಳಿಕೆಯಾಗಿತ್ತು. ಈ ಕಾರಣಕ್ಕೆ ಆತನು ತನ್ನ ಪತ್ನಿಯೊಂದಿಗಿನ ಸೋರ್ಜ್ ಸಂಬಂಧವನ್ನು ನಿರ್ಲಕ್ಷಿಸಿಬಿಟ್ಟನು. 1938ರ ಏಪ್ರಿಲ್ನಲ್ಲಿ ಒಟ್ಟ್ ಜಪಾನಿನಲ್ಲಿ ಜರ್ಮನಿಯ ರಾಯಭಾರಿಯಾದನು. ಆಗಂತೂ ಪ್ರತಿದಿನವೂ ಬೆಳಗಿನ ಉಪಾಹಾರವನ್ನು ಸೋರ್ಜ್ ಮತ್ತು ಒಟ್ಟ್ ಒಟ್ಟೊಟ್ಟಿಗೆ ಮಾಡುತ್ತಿದ್ದರು ಮತ್ತು ಜರ್ಮನ್- ಜಪಾನ್ ಸಂಬಂಧಗಳ ಬಗ್ಗೆ ವಿವರವಾಗಿ ಚರ್ಚಿಸುತ್ತಿದ್ದರು. ಬರ್ಲಿನ್ಗೆ ಕಳುಹಿಸುವ ಕೇಬಲ್ನ ಒಕ್ಕಣೆಯನ್ನು ಎಷ್ಟೋ ಸಲ ಸೋರ್ಜ್ ಬರೆಯುತ್ತಿದ್ದನು ಮತ್ತು ಒಟ್ಟ್ ಅದನ್ನು ತನ್ನ ಹೆಸರಿನಲ್ಲಿ ಕಳುಹಿಸುತ್ತಿದ್ದನು. ಒಟ್ಟ್ ಸೋರ್ಜ್ ಮೇಲೆ ಎಷ್ಟೊಂದು ವಿಶ್ವಾಸವನ್ನು ಇಟ್ಟಿದ್ದನೆಂದರೆ ಕ್ಯಾಂಟನ್, ಹಾಂಗ್ಕಾಂಗ್ ಮತ್ತು ಮನಿಲಾಗಳಲ್ಲಿಯ ಜರ್ಮನಿಯ ಕನ್ಸುಲೇಟ್ಗಳಿಗೆ ರಹಸ್ಯ ಸಂದೇಶಗಳನ್ನು ತಲುಪಿಸಲು ಸೋರ್ಜ್ನನ್ನೇ ಕಳುಹಿಸುತ್ತಿದ್ದನು. ಜರ್ಮನ್ ದೂತಾವಾಸದಲ್ಲಿ ಸೋರ್ಜ್ ಪ್ರಭಾವ ಎಷ್ಟೊಂದು ವ್ಯಾಪಕವಾಗಿತ್ತು ಎಂದರೆ, ಅಲ್ಲಿರುವವರು, ನಾವು ಇದನ್ನು ಕಂಡುಹಿಡಿದಿದ್ದೇವೆ, ನಿನಗೆ ಇದು ಗೊತ್ತೆ, ಇದರ ಬಗ್ಗೆ ನಿನ್ನ ಅಭಿಪ್ರಾಯವೇನು ಎಂದು ಅವನನ್ನು ಕೇಳುತ್ತಿದ್ದರು. 1938ರ ಮೇ 13ರಂದು ಸೋರ್ಜ್ ತನ್ನ ಎಂದಿನ ವೇಗದಲ್ಲಿ ಮೋಟಾರ್ಸೈಕಲ್ ಮೇಲೆ ಹೋಗುತ್ತಿದ್ದಾಗ ಆಯತಪ್ಪಿ ಒಂದು ಗೋಡೆಗೆ ಡಿಕ್ಕಿಹೊಡೆದು ಬಿದ್ದು ತೀವ್ರವಾಗಿ ಗಾಯಗೊಳ್ಳುತ್ತಾನೆ. ಆ ಸಮಯದಲ್ಲಿ ಅವನ ಬಳಿ ಒಝಾಕಿ ನೀಡಿದ್ದ ರಹಸ್ಯ ದಾಖಲೆಗಳಿದ್ದವು. ಅವನ ಅದೃಷ್ಟಕ್ಕೆ ಪೊಲೀಸರು ಸ್ಥಳಕ್ಕೆ ಬರುವುದಕ್ಕೆ ಮೊದಲು ಅವನ ಸ್ಪೈ ರಿಂಗ್ನ ಒಬ್ಬ ಸದಸ್ಯ ಬಂದು ಅವನನ್ನು ಆಸ್ಪತ್ರೆಗೆ ಸೇರಿಸಿ ಆ ದಾಖಲೆಗಳನ್ನು ತೆಗೆದುಕೊಂಡನು. 1938ರಲ್ಲಿ ಸೋರ್ಜ್ ಲೇಕ್ ಖಸಾನ್ ಕದನದ ಬಗ್ಗೆ ಒಂದು ವರದಿಯನ್ನು ಮಾಸ್ಕೋಗೆ ಕಳುಹಿಸುತ್ತಾನೆ. ಅದು ಕ್ವಾಂತುಂಗ್ ಸೇನೆಯಲ್ಲಿದ್ದ ಅತ್ಯುತ್ಸಾಹಿ ಅಧಿಕಾರಿಗಳಿಂದಾದದ್ದು. ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಮಾಡುವ ಯಾವ ಆಲೋಚನೆಯೂ ಟೋಕಿಯೋ ಬಳಿ ಇಲ್ಲ ಎಂದು ತಿಳಿಸಿದನು. ತನ್ನ ಸ್ನೇಹಿತ ಬರ್ಜಿನ್ನನ್ನು ಟ್ರಾಯ್ಟಸ್ಕಿಯ ಅನುಯಾಯಿಯೆಂದು ದೇಶದ್ರೋಹದ ಆರೋಪದ ಮೇಲೆ ಗುಂಡಿಟ್ಟು ಕೊಂದಿದ್ದಾರೆ ಎಂಬ ಅರಿವಿಲ್ಲದ ಸೋರ್ಜ್ 1938ರ ಅಕ್ಟೋಬರ್ನಲ್ಲಿ ಆತನಿಗೊಂದು ಪತ್ರವನ್ನು ಬರೆಯುತ್ತಾನೆ.. ಪ್ರಿಯ ಕಾಮ್ರೇಡ್. ನಮ್ಮ ಬಗ್ಗೆ ಕಾಳಜಿ ಮಾಡುವುದು ಬೇಡ. ನಾವು ತುಂಬ ದಣಿದಿದ್ದರೂ, ಒತ್ತಡದಲ್ಲಿದ್ದರೂ ಶಿಸ್ತಿನ ಸಿಪಾಯಿಗಳು, ವಿಧೇಯರು, ನಮಗೆ ಸಂಬಂಧಿಸಿದ ಕಾರ್ಯಭಾರವನ್ನು ನಿರ್ವಂಚನೆಯಿಂದ ಮಾಡುವುದಕ್ಕೆ ನಮ್ಮನ್ನು ನಾವೇ ಸಮರ್ಪಿಸಿಕೊಂಡವರು. ನಿನಗೆ ಮತ್ತು ನಿನ್ನ ಸ್ನೇಹಿತರಿಗೆ ನನ್ನ ವಿನಮ್ರ ಅಭಿನಂದನೆಗಳು. ಇದರ ಜೊತೆಗಿರುವ ಪತ್ರವನ್ನು ನನ್ನ ಪತ್ನಿಗೆ ತಲುಪಿಸು. ಅವಳಿಗೆ ಅನುಕೂಲ ಕಲ್ಪಿಸಲು ನಿನ್ನ ಸ್ವಲ್ಪ ಸಮಯವನ್ನು ಬಳಸು... ಬರ್ಜಿನ್ನನ್ನು ಹತ್ಯೆ ಮಾಡಿದ ವಿಷಯ ಸೋರ್ಜ್ಗೆ ಕೊನೆಯವರೆಗೂ ತಿಳಿಯಲೇ ಇಲ್ಲ. ಅಂತಾರಾಷ್ಟ್ರೀಯ ಕಮ್ಯುನಿಸ್ಟ್ ವಿರೋಧಿ ಒಪ್ಪಂದ ಮತ್ತು ಜರ್ಮನ್-ಜಪಾನಿ ಒಪ್ಪಂದದ ಬಗ್ಗೆ ಸೋವಿಯತ್ ಬೇಹುಗಾರಿಕೆಗೆ ಸೋರ್ಜ್ ಮಾಹಿತಿ ನೀಡುತ್ತಾನೆ. ಜರ್ಮನಿಯು ರಷ್ಯಾದ ಮೇಲೆ ದಾಳಿ ಮಾಡುವ ಆಪರೇಷನ್ ಬಾರ್ಬರೋಸ್ಸಾ ಕುರಿತು ಸೋರ್ಜ್ ರಷ್ಯಾಕ್ಕೆ ತಿಳಿಸಿರುತ್ತಾನೆ. ಹೆಚ್ಚೂಕಡಿಮೆ ನಿಶ್ಚಿತ ದಿನಾಂಕಗಳನ್ನೇ ತಿಳಿಸಿರುತ್ತಾನೆ. 1941ರ ಮೇ 30ರಂದು ಮಾಸ್ಕೋಗೆ ಕಳುಹಿಸಿದ ಸಂದೇಶದಲ್ಲಿ, ಜರ್ಮನಿಯು ರಷ್ಯಾದ ಮೇಲೆ ದಾಳಿ ಮಾಡುವುದು ಮೇ ನಂತರದ ಭಾಗದಲ್ಲಿ ಎಂದು ಒಟ್ಟ್ಗೆ ಬರ್ಲಿನ್ ತಿಳಿಸಿದೆ. ಯುದ್ಧ ನಡೆಯುವುದು ಶೇ.95 ಖಚಿತ ಎಂದು ಒಟ್ಟ್ ನಂಬಿದ್ದಾನೆ ಎಂದು ತಿಳಿಸಿದನು. ಯುದ್ಧ ನಡೆದರೆ ತಾವೇನು ಮಾಡಬೇಕು ಎಂಬ ಸಂಬಂಧದಲ್ಲಿ ಜಪಾನಿನ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ ಎಂದು ಇನ್ವೆಸ್ಟ್ (ಇದು ಒಝಾಕಿಯ ಸಂಕೇತ ನಾಮ) ತಿಳಿಸಿದ್ದಾನೆ ಎಂದು ಜೂನ್ 20, 1942ರಂದು ಮಾಸ್ಕೋಗೆ ಮಾಹಿತಿ ರವಾನಿಸುತ್ತಾನೆ. ಆದರೆ ಜೋಸೆಫ್ ಸ್ಟಾಲಿನ್ ಸೇರಿದಂತೆ ಹಿರಿಯ ನಾಯಕರು ಇದನ್ನು ನಿರ್ಲಕ್ಷಿಸುತ್ತಾರೆ. 1941ರ ಜೂನ್ ಕೊನೆಯಲ್ಲಿ ಸೋರ್ಜ್ ಕಳುಹಿಸಿದ ಮಾಹಿತಿಯಲ್ಲಿ, ಜಪಾನ್ ಸದ್ಯಕ್ಕೆ ಫ್ರೆಂಚ್ ಇಂಡೋಚೀನಾವನ್ನು (ಈಗಿನ ವಿಯೆಟ್ನಾಂ) ಆಕ್ರಮಿಸುವ ಯೋಚನೆಯಲ್ಲಿದೆ. ರಷ್ಯಾ ವಿಷಯದಲ್ಲಿ ಸದ್ಯಕ್ಕೆ ತಟಸ್ಥವಾಗಿರಲು ಪ್ರಧಾನಿ ಕೊನೋಯಿ ನಿರ್ಧರಿಸಿದ್ದಾನೆ ಎಂದು ತಿಳಿಸಿದನು. 1941ರ ಜುಲೈನಲ್ಲಿ ಕಳುಹಿಸಿದ ಸಂದೇಶದಲ್ಲಿ, ಜರ್ಮನಿಯ ವಿದೇಶಾಂಗ ಸಚಿವ ಜೋಕಿಂ ವಾನ್ ರಿಬ್ಬನ್ಟ್ರೋಪ್, ರಷ್ಯಾದ ಮೇಲೆ ದಾಳಿ ನಡೆಸುವಂತೆ ಜಪಾನಿನ ಮನವೊಲಿಸುವಂತೆ ಒಟ್ಟ್ಗೆ ತಿಳಿಸಿದ್ದಾನೆ ಎಂದು ಬರೆದನು. 1941ರ ಆಗಸ್ಟ್ 25ರಂದು ಕಳುಹಿಸಿದ ಸಂದೇಶದಲ್ಲಿ, ಜಪಾನ್ ಈ ವರ್ಷ ರಷ್ಯಾದ ಮೇಲೆ ದಾಳಿ ಮಾಡುವುದಿಲ್ಲ ಎಂದು ಪ್ರಧಾನಿಯ ನಿಕಟ ಮೂಲಗಳಿಂದ ಒಝಾಕಿ ಅರಿತಿದ್ದಾನೆ ಎಂದೂ, ಸೆಪ್ಟೆಂಬರ್ 6ರಂದು, ಸಾಮ್ರಾಜ್ಯದ ಸಮ್ಮೇಳನ ಸಭೆಯಲ್ಲಿ ರಷ್ಯಾದ ಮೇಲೆ ಯುದ್ಧ ಮಾಡದಿರಲು ಮತ್ತು ಅಮೆರಿಕ ಹಾಗೂ ಬ್ರಿಟಿಷರ ಮೇಲೆ ಯುದ್ಧ ಮಾಡಲು ಸಿದ್ಧತೆಗಳನ್ನು ನಡೆಸುವುದಕ್ಕೆ ನಿರ್ಧರಿಸಲಾಗಿದೆ ಎಂದು ತಿಳಿಸಿದನು. ಅದೇ ವೇಳೆ ಒಟ್ಟ್, ರಷ್ಯಾದ ಮೇಲೆ ದಾಳಿ ನಡೆಸುವುದಕ್ಕೆ ಜಪಾನಿನ ಮನವೊಲಿಸುವ ತನ್ನ ಪ್ರಯತ್ನಗಳೆಲ್ಲ ವಿಫಲವಾದವು ಎಂದು ಸೋರ್ಜ್ಗೆ ತಿಳಿಸಿದನು. ಎರಡನೆ ಜಾಗತಿಕ ಯುದ್ಧ ಮುಂದುವರಿದಂತೆ ಸೋರ್ಜ್ಗೆ ಅಪಾಯವೂ ಹೆಚ್ಚಾಗತೊಡಗಿತು. ಆದರೆ ಆತ ತನ್ನ ಕೆಲಸವನ್ನು ಮುಂದುವರಿಸಿದ್ದನು. ಆತನ ರೇಡಿಯೋ ಸಂದೇಶಗಳು ಭೇದಿಸಲು ಅಸಾಧ್ಯವಾಗಿದ್ದರೂ ಸಂದೇಶ ರವಾನೆಯಾಗುತ್ತಿದೆ ಎಂಬ ಸಂಗತಿ ಜಪಾನಿನ ಬೇಹುಗಾರರಿಗೆ ತಿಳಿಯಿತು. ಆದರೆ ಕಳುಹಿಸುವವರು ಯಾರು ಎಂಬುದು ತಿಳಿಯಲಿಲ್ಲ. ಇದರಿಂದಾಗಿ ಸೋರ್ಜ್ ಕುರಿತೂ ಅನುಮಾನಗಳು ಮೂಡಿದವು. ಬರ್ಲಿನ್ದಲ್ಲಿಯೂ ಸೋರ್ಜ್ ಬಗ್ಗೆ ಅನುಮಾನಗಳು ವ್ಯಕ್ತವಾದವು. 1941ರ ವೇಳೆಗೆ ಟೋಕಿಯೋದ ಜರ್ಮನಿ ದೂತಾವಾಸದಲ್ಲಿದ್ದ ಗೆಸ್ಟಾಪೋದ ಜೋಸೆಫ್ ಅಲ್ಬರ್ಟ್ ಮೆಸ್ಸಿಂಜರ್ಗೆ ಸೋರ್ಜ್ನ ಚಟುವಟಿಕೆಗಳನ್ನು ಗಮನಿಸಲು ಸೂಚನೆ ಬಂತು. ಸೋರ್ಜ್ ತನ್ನ ಪ್ರೇಮಿಗಳಲ್ಲಿ ಒಬ್ಬಳಾದ ಜಪಾನಿನಲ್ಲಿ ವಾಸಿಸುತ್ತಿದ್ದ ಜರ್ಮನಿಯ ಸಂಗೀತಗಾರ್ತಿಯ ಮೂಲಕ ಮೆಸ್ಸಿಂಜರ್ನ ಅಪಾರ್ಟ್ಮೆಂಟಿನ ಕೀಯನ್ನು ಪಡೆದುಕೊಳ್ಳುತ್ತಾನೆ. ಈ ಅಪಾರ್ಟ್ಮೆಂಟಿನಲ್ಲಿ ಅವಳು ಮೊದಲು ವಾಸಿಸುತ್ತಿದ್ದಳು. ಆತನ ಅಪಾರ್ಟ್ಮೆಂಟ್ ತಪಾಸಣೆ ಮಾಡಿದಾಗ ಸೋರ್ಜ್ಗೆ ನಿರಾಳವಾಯಿತು. ಏಕೆಂದರೆ ಮೆಸ್ಸಿಂಜರ್
ಈತನು ಸೋವಿಯತ್ ಏಜೆಂಟ್ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ನಿರ್ಧರಿಸಿದ್ದನು. ಸೋರ್ಜ್ ನಿಷ್ಠೆ ಪಿತೃಭೂಮಿಗೇ ಎಂಬ ವರದಿಯನ್ನು ಆತ ಸಿದ್ಧಪಡಿಸಿದ್ದನು. ಸೋರ್ಜ್ ಮಸ್ಸಿಂಜರ್ ಜೊತೆ ಸ್ನೇಹದಿಂದಲೇ ಇದ್ದನು. ಆತನ ದೌರ್ಬಲ್ಯವಾದ ಕುಡುಕುತನಕ್ಕೆ ಇವನು ಇನ್ನಷ್ಟು ಮದ್ಯವೆರೆದನು. ಹೆಚ್ಚು ಕಾಲ ಅವನು ಅಮಲಿನಲ್ಲಿಯೇ ಇರುವಂತೆ ನೋಡಿಕೊಂಡನು. ಮೆಸ್ಸಿಂಜರ್ ಬರ್ಲಿನ್ಗೆ ಕಳುಹಿಸಿದ ವರದಿಯಲ್ಲಿ ಒಟ್ಟ್ ಮತ್ತು ಸೋರ್ಜ್ ಸ್ನೇಹದ ಬಗ್ಗೆಯೂ ಉಲ್ಲೇಖಿಸಿದ್ದನು. ವರದಿಗಳನ್ನೆಲ್ಲ ಸಿದ್ಧಪಡಿಸುವುದು ಸೋರ್ಜ್. ಅದಕ್ಕೆ ಸಹಿ ಮಾಡಿ ಕಳುಹಿಸುವವನು ಒಟ್ಟ್ ಎಂದು ತಿಳಿಸಿದ್ದನು.
ಜಪಾನಿನ ರಹಸ್ಯ ಪೊಲೀಸ್ ಕೆಂಪೆತಾಯ್ ಹಲವು ಸಂದೇಶಗಳನ್ನು ಭೇದಿಸಿತ್ತು. ಅದು ಸೋರ್ಜ್ ಬಂಧನಕ್ಕೆ ಹೊಂಚುಹಾಕುತ್ತಿತ್ತು. ಮಾಸ್ಕೋಗೆ ಕಳುಹಿಸಿದ ತನ್ನ ಕೊನೆಯ ಸಂದೇಶದಲ್ಲಿ ಅವನು, ತನ್ನನ್ನು ಮರಳಿ ಜರ್ಮನಿಗೆ ಕಳುಹಿಸಿದರೆ ತಾನು ಅಲ್ಲಿ ಜರ್ಮನಿಯ ಯುದ್ಧಸಿದ್ಧತೆಗಳ ಕುರಿತು ಮಾಹಿತಿ ನೀಡಬಹುದು. ಪೂರ್ವದಲ್ಲಿ ಸದ್ಯಕಂತೂ ಜಪಾನಿನ ಆಕ್ರಮಣದ ಭೀತಿ ಇಲ್ಲ ಎಂದು ತಿಳಿಸಿದ್ದನು. 1941ರ ಅಕ್ಟೋಬರ್ 14ರಂದು ಒಝಾಕಿಯನ್ನು ಬಂಧಿಸಲಾಗುತ್ತದೆ. ತಕ್ಷಣವೇ ಅವನ ವಿಚಾರಣೆ ನಡೆಯುತ್ತದೆ. ಕೆಂಪೆತಾಯ್ ಸೋರ್ಜ್ನ ಸುತ್ತ ತಿರುಗಿದಾಗ ಒಟ್ಟ್ನ ಪತ್ನಿ ಸೋರ್ಜ್ನ ಮನೆಗೆ ನಿಯಮಿತವಾಗಿ ಬಂದುಹೋಗುತ್ತಾಳೆ ಎಂಬುದು ತಿಳಿಯುತ್ತದೆ. ಆತ ತನ್ನ ಕೊನೆಯ ರಾತ್ರಿಯನ್ನು ಅವಳೊಂದಿಗೆ ಯಾವ ಚಿಂತೆಯೂ ಇಲ್ಲದೆ ಕಳೆಯುತ್ತಾನೆ. ಒಝಾಕಿ ಬಂಧನದ ನಾಲ್ಕು ದಿನಗಳ ನಂತರ ಸೋರ್ಜ್ ಬಂಧನವಾಗುತ್ತದೆ. ಈ ಬಗ್ಗೆ ಅವರು ರಾಯಭಾರಿ ಒಟ್ಟ್ಗೆ ತಿಳಿಸುತ್ತಾರೆ. ಸೋರ್ಜ್ ಜೊತೆ ಮ್ಯಾಕ್ಸ್ ಕ್ಲೌಸೆನ್ ಬಂಧನ ಕೂಡ ನಡೆಯುತ್ತದೆ. ಒಟ್ಟ್ಗೆ ಆಶ್ಚರ್ಯ ಮತ್ತು ಕೋಪ ಎರಡೂ ಬರುತ್ತದೆ. ಜಪಾನ್-ಅಮೆರಿಕ ಮಾತುಕತೆಗಳ ರಹಸ್ಯ ಮಾಹಿತಿಯನ್ನು ಇವನು ಒಯ್ಯುವಾಗ ಸಿಕ್ಕಿಬಿದ್ದಿರಬೇಕು ಎಂದು ಆತ ತಿಳಿಯುತ್ತಾನೆ. ಮತ್ತು ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸುತ್ತಾನೆ. ಕೆಲವು ತಿಂಗಳುಗಳ ಬಳಿಕ ಆತ ಸೋವಿಯತ್ ಏಜೆಂಟ್ ಎಂಬ ಸಂಗತಿಯನ್ನು ಒಟ್ಟ್ಗೆ ತಿಳಿಸುತ್ತಾರೆ.
ಸೋರ್ಜ್ನನ್ನು ಸುಗಾಮೋ ಕಾರಾಗೃಹದಲ್ಲಿ ಇಡುತ್ತಾರೆ. ಆತನಿಗೆ ಚಿತ್ರಹಿಂಸೆ ನೀಡುತ್ತಾರೆ. ಕೊನೆಗೆ ಆತ ತಪ್ಪೊಪ್ಪಿಕೊಳ್ಳುತ್ತಾನೆ. ಆದರೆ ಸೋವಿಯತ್ ಸೋರ್ಜ್ನನ್ನು ತನ್ನ ಏಜೆಂಟ್ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ರಷ್ಯಾದ ಬಂಧನದಲ್ಲಿರುವ ತಮ್ಮೊಬ್ಬ ಬೇಹುಗಾರನ ಬದಲಿಗೆ ಇವನ್ನು ಬದಲಾಯಿಸಿಕೊಳ್ಳುವ ಪ್ರಸ್ತಾವವನ್ನು ಜಪಾನ್ ಮುಂದಿಡುತ್ತದೆ. ಆದರೆ ರಷ್ಯಾ ಸೋರ್ಜ್ನನ್ನು ತಮ್ಮವನೆಂದು ಒಪ್ಪಿಕೊಳ್ಳುವುದಕ್ಕೆ ನಿರಾಕರಿಸುತ್ತದೆ. 1942ರ ಸೆಪ್ಟೆಂಬರ್ನಲ್ಲಿ ಸೋರ್ಜ್ನ ಪತ್ನಿ ಕಾತ್ಯಾ ಮ್ಯಾಕ್ಸಿಮೋವಾಳನ್ನು ಜರ್ಮನಿಯ ಬೇಹುಗಾರ್ತಿ ಎಂಬ ಆರೋಪದ ಮೇಲೆ ಎನ್ಕೆವಿಡಿ ಬಂಧಿಸುತ್ತದೆ ಮತ್ತು ಅವಳು ಜರ್ಮನಿಯ ನಾಗರಿಕ ಸೋರ್ಜ್ನನ್ನು ಮದುವೆಯಾದ ಕಾರಣಕ್ಕೆ ಗುಲಾಗ್ಗೆ ಗಡಿಪಾರು ಮಾಡುತ್ತಾರೆ. ಅವಳು ಅಲ್ಲಿ 1943ರಲ್ಲಿ ಸಾಯುತ್ತಾಳೆ.
ಸೋರ್ಜ್ನನ್ನು ಪ್ರೀತಿಸಿದ ಮತ್ತು ಪ್ರತಿಯಾಗಿ ಸೋರ್ಜ್ ಪ್ರೀತಿಸಿದ ಜಪಾನಿ ಮಹಿಳೆ ಹನಾಕೋ ಇಶಿಯು ಸೋರ್ಜ್ನನ್ನು ಜೈಲಿನಲ್ಲಿ ಭೇಟಿಯಾಗಲು ಪ್ರಯತ್ನಿಸಿದಳು. ತನ್ನದೊಂದು ಭೇಟಿಯಲ್ಲಿ ಅವಳು ಕೆಂಪೆತಾಯ್ ಹಿಂಸೆಗೆ ಅಂಜಿ ತನ್ನ ಹೆಸರನ್ನು ಹೇಳಬೇಡ ಎಂದು ವಿನಂತಿಸುತ್ತಾಳೆ. ಅವಳನ್ನು ಈ ವಿವಾದದಲ್ಲಿ ಎಳೆಯುವುದಿಲ್ಲ ಎಂಬ ಭರವಸೆಯನ್ನು ಸೋರ್ಜ್ ಆಕೆಗೆ ನೀಡುತ್ತಾನೆ. ಸೋರ್ಜ್ ಅಂತಿಮವಾಗಿ ಕೆಂಪೆತಾಯ್ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾನೆ. ಈ ವಿವಾದದಿಂದ ತನ್ನ ಪತ್ನಿ ಇಶಿ ಮತ್ತು ಸ್ಪೈರಿಂಗ್ನ ಎಲ್ಲ ಸದಸ್ಯರ ಪತ್ನಿಯರನ್ನು ದೂರವಿಡಬೇಕು ಎಂಬ ಷರತ್ತನ್ನು ವಿಧಿಸುತ್ತಾನೆ. ಕೆಂಪೆತಾಯ್ ಇಶಿಯನ್ನು ಯಾವತ್ತೂ ಬಂಧಿಸುವುದಿಲ್ಲ. ತನ್ನ ತಪ್ಪೊಪ್ಪಿಗೆಯ ಹೇಳಿಕೆಯಲ್ಲಿ ಸೋರ್ಜ್, ಒಂದು ರಾಯಭಾರ ಕಚೇರಿಯನ್ನೇ ಬೇಹುಗಾರಿಕೆಯ ತಾಣವನ್ನಾಗಿ ಮಾಡಿಕೊಂಡಿದ್ದು ನಭೂತೋ ನಭವಿಷ್ಯತಿ. ಇತಿಹಾಸದಲ್ಲಿ ಇದೊಂದು ದಾಖಲೆಯಾಗುಳಿಯುತ್ತದೆ ಎಂದು ಹೇಳಿದನು.
1944ರ ನವೆಂಬರ್ 7ರಂದು ಸುಗಾಮೋ ಜೈಲಿನಲ್ಲಿ ಬೆಳಿಗ್ಗೆ 10-20ಕ್ಕೆ ಸೋರ್ಜ್ನನ್ನು ನೇಣಿಗೆ ಹಾಕಲಾಗುತ್ತದೆ. ಅದಕ್ಕಿಂತ ಸ್ವಲ್ಪ ಮೊದಲು ಹೊಟ್ಸುಮಿ ಒಝಾಕಿಯನ್ನು ಗಲ್ಲಿಗೇರಿಸಿರುತ್ತಾರೆ. ಯುದ್ಧ ಕಾಲದ ಇಂಧನದ ಸಮಸ್ಯೆಯಿಂದ ಸೋರ್ಜ್ ಶರೀರವನ್ನು ಸುಡುವುದಿಲ್ಲ. ಬದಲಿಗೆ ಅದನ್ನು ಹತ್ತಿರದ ಝೋಶಿಂಗ್ಯಾ ಶ್ಮಶಾನದಲ್ಲಿ ಹೂತುಹಾಕುತ್ತಾರೆ. ಸೋರ್ಜ್ಗೆ ಜರ್ಮನಿಯಲ್ಲಿ ತಾಯಿ ಇರುತ್ತಾಳೆ. ಆತ ತನ್ನ ಆಸ್ತಿಯನ್ನು ರೇಡಿಯೋ ಆಪರೇಟರ್ ಕ್ಲೌಸೆನ್ನ ಪತ್ನಿಯ ಹೆಸರಿಗೆ ಬಿಟ್ಟುಹೋಗುತ್ತಾನೆ. 1964ರ ವರೆಗೂ ಸೋವಿಯತ್ ಸೋರ್ಜ್ನನ್ನು ಅಧಿಕೃತವಾಗಿ ತಮ್ಮವನೆಂದು ಒಪ್ಪಿಕೊಂಡಿರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಸೋರ್ಜ್ ಕಳುಹಿಸಿದ ಮಾಹಿತಿಯನ್ನು ತಾನು ನಂಬದಿದ್ದುದೇ ಜರ್ಮನಿಯ ವಿರುದ್ಧ ಯುದ್ಧದಲ್ಲಿ ಹಿನ್ನಡೆಗೆ ಕಾರಣವಾಯಿತು ಎಂಬ ಅಂಶ ಜಗತ್ತಿಗೆ ತಿಳಿಯುವುದು ಸ್ಟಾಲಿನ್ಗೆ ಇಷ್ಟವಿರಲಿಲ್ಲ. ಆದರೆ ಈಗ1895ರಿಂದ 1898ರವರೆಗೆ ಆತ ವಾಸಿಸಿದ್ದ ಸಬುಂಚಿನ್ ಮನೆಯಲ್ಲಿ ರಿಚರ್ಡ್ ಸೋರ್ಜ್ನ ಸ್ಮಾರಕ ಫಲಕವನ್ನು ನೆಡಲಾಗಿದೆ. 1964ರ ನವೆಂಬರ್ನಲ್ಲಿ ಸೋವಿಯತ್ ಸರ್ಕಾರವು ಸೋರ್ಜ್ಗೆ ಹೀರೋ ಆಫ್ ದಿ ಸೋವಿಯತ್ ಯೂನಿಯನ್ ಎಂಬ ಬಿರುದನ್ನು ನೀಡಿತು. ಅಲ್ಲದೆ ಆತನ ಜಪಾನಿ ಪತ್ನಿ ಹನಾಕೋ ಇಶಿಗೆ ಅವಳು ಸಾಯುವವರೆಗೂ ಪಿಂಚಣಿಯನ್ನು ನೀಡಿತು. 2016ರಲ್ಲಿ ಮಾಸ್ಕೋದ ಒಂದು ಎಂಸಿಸಿ ರೈಲು ನಿಲ್ದಾಣಕ್ಕೆ ಸೋರ್ಜ್ ಹೆಸರನ್ನು ಇಡಲಾಗಿದೆ. ಜರ್ಮನಿಯಲ್ಲಿ ಕೂಡ ಸೋರ್ಜ್ನನ್ನು ದೇಶಪ್ರೇಮಿ ಎಂದು ಅರ್ಥೈಸುವ ಪ್ರಯತ್ನಗಳು ನಡೆದವು. ನಾಝಿಗಳಿಂದ ಜರ್ಮನಿಯನ್ನು ರಕ್ಷಿಸುವುದಕ್ಕಾಗಿ ಆತ ಸೋವಿಯತ್ಗೆ ಮಾಹಿತಿಗಳನ್ನು ನೀಡಿದ. ಅದರಲ್ಲಿ ಹಿಟ್ಲರನನ್ನು ಸೋಲಿಸಬೇಕು ಎಂಬ ಬಯಕೆ ಇತ್ತೇ ಹೊರತು ಸ್ಟಾಲಿನ್ನನ್ನು ಬೆಂಬಲಿಸುವುದಾಗಿರಲಿಲ್ಲ ಎಂಬ ವಾದಗಳು ಮಾಡನೆಯಾದವು. ಸೋರ್ಜ್ ಕುರಿತು ಹಲವು ಸಿನಿಮಾಗಳು ಬಂದವು. ಬಂದ ಕೃತಿಗಳಿಗೆ ಲೆಕ್ಕವೇ ಇಲ್ಲ.
ಜಪಾನ್ ಅಮೆರಿಕಕ್ಕೆ ಶರಣಾದ ಬಳಿಕ ಸೋರ್ಜ್ನ ಜಪಾನಿನ ಪತ್ನಿ ಹನಾಕೋ ಇಶಿ ಆತನ ಅಸ್ಥಿಪಂಜರವನ್ನು ಹುಡುಕಿ 1949ರ ನವೆಂಬರ್ 16ರಂದು ಶಿಮೋ-ಒಚಿಯಿ ಶ್ಮಶಾನದಲ್ಲಿ ಮರಳಿ ಸಂಸ್ಕಾರ ಮಾಡುತ್ತಾಳೆ. ಆತನ ವಿಶಿಷ್ಟವಾದ ಹಲ್ಲುಗಳು ಮತ್ತು ಮುರಿದ ಕಾಲುಗಳ ಮೇಲಿಂದ ಅವಳು ಅದನ್ನು ಪತ್ತೆ ಮಾಡಿರುತ್ತಾಳೆ. ಅವನ ಹಲ್ಲು, ಬೆಲ್ಟ್ ಮತ್ತು ಕನ್ನಡಕಗಳನ್ನು ಅವಳು ತನ್ನ ಬಳಿ ಕೊನೆಯವರೆಗೂ ಇಟ್ಟುಕೊಂಡಿರುತ್ತಾಳೆ. ಆತನ ಸಮಾಧಿಯ ಮೇಲೆ ಒಂದು ಕಪ್ಪು ಸಂಗಮವರಿ ಕಲ್ಲನ್ನು ನೆಟ್ಟಿರುವ ಅವಳು ಅದರ ಮೇಲೆ ಜಪಾನಿ ಭಾಷೆಯಲ್ಲಿ `ಯುದ್ದದ ವಿರುದ್ಧ ಮತ್ತು ಜಗತ್ತಿನ ಶಾಂತಿಗಾಗಿ ಹೋರಾಡಿ ಬಲಿದಾನ ಮಾಡಿದ ವೀರ ಇಲ್ಲಿ ಮಲಗಿದ್ದಾನೆ’ ಎಂದು ಬರೆಸಿದ್ದಾಳೆ. 2000ನೆ ಇಸ್ವಿಯಲ್ಲಿ ಅವಳು ನಿಧನಳಾದ ಬಳಿಕ ಅವಳ ಚಿತಾಭಸ್ಮವನ್ನೂ ಅಲ್ಲಿಯೇ ಹೂಳಲಾಗಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.