*ದುಷ್ಟ ಸಂತತಿಗೆ ಸಾವಿಲ್ಲವಂತೆ
ಸಮಾಜಕ್ಕೆ ಸದಾ ಕೆಡುಕನ್ನು ಮಾಡುತ್ತಿರುವ ಜನರು ಇರುತ್ತಾರೆ. ಅವರಿಂದ ಎಂದಿಗೂ ಯಾರಿಗೂ ಒಳಿತು ಆಗುವುದಿಲ್ಲ. ಅವನು ಸಾಯಲಿ ಎಂದು ಜನ ದಿನವೂ ಬಯಸುತ್ತಿರುತ್ತಾರೆ. ಒಬ್ಬ ದುಷ್ಟ ಹೋದರೆ ಅವನ ಹೆಜ್ಜೆಯಲ್ಲೇ ಕಾಲಿಟ್ಟು ಇನ್ನೊಬ್ಬ ದುಷ್ಟ ಬರುತ್ತಾನೆ. ಇಂಥ ದುಷ್ಟ ಪರಂಪರೆ ಮುಂದುವರಿಯುವುದನ್ನು ಕಂಡಾಗ ನೊಂದವರು ರಕ್ತಬೀಜಾಸುರ ಸಂತತಿ ಎಂದು ಕರೆಯುತ್ತಾರೆ.
ಯಾರೀತ ರಕ್ತಬೀಜಾಸುರ? ದೇವೀಪುರಾಣದಲ್ಲಿ ಈ ರಕ್ತಬೀಜಾಸುರನ ಪ್ರಸ್ತಾಪ ಬರುತ್ತದೆ. ಮಹಿಷಾಸುರನ ಸೇನಾಪತಿಗಳಲ್ಲಿ ಒಬ್ಬ ಈ ರಕ್ತಬೀಜಾಸುರ. ಇವನ ಮೈಯಿಂದ ಬಿದ್ದ ಹನಿ ರಕ್ತದಿಂದ ಮತ್ತೊಬ್ಬ ರಕ್ತಬೀಜಾಸುರ ಹುಟ್ಟಿ ಬರುತ್ತಿದ್ದ. ಅವನ ನಾಶ ಸಾಧ್ಯವೇ ಇರಲಿಲ್ಲ.
ಆಗ ದೇವಿ ಉಪಾಯ ಮಾಡಿ ತನ್ನ ನಾಲಿಗೆಯನ್ನು ಉದ್ದಕ್ಕೆ ಚಾಚಿ ರಕ್ತಬೀಜಾಸುರನ ಹನಿ ರಕ್ತವೂ ನೆಲದ ಮೇಲೆ ಬೀಳದಂತೆ ಕುಡಿದುಬಿಡುತ್ತಾಳೆ. ರಕ್ತ ಕಳೆದುಕೊಂಡ ರಕ್ತಬೀಜಾಸುರ ಸಾವನ್ನಪ್ಪುತ್ತಾನೆ.
ಅವನೇನೋ ಸತ್ತ. ಆದರೆ ದುಷ್ಟ ಸಂತತಿಯನ್ನು ಇಲ್ಲದಂತೆ ಮಾಡುವುದು ಸಾಧ್ಯವೆ?
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.