*ತೋರಿಕೆಯ ದುಃಖ ಪ್ರದರ್ಶನ
ಮೊಸಳೆ ಕಣ್ಣೀರು ಸುರಿಸುತ್ತಾನೆ ಅವನು, ನಂಬಬೇಡಿ ಅವನನ್ನು ಎಂದೋ, ನಿನ್ನ ಮೊಸಳೆ ಕಣ್ಣೀರಿಗೆ ನಾವೇನು ಕರಗಿ ಬಿಡುತ್ತೇವೆ ಅಂದುಕೊಂಡಿದ್ದೀಯಾ ಎಂದೋ ಹೇಳುವುದನ್ನು ಕೇಳಿದ್ದೇವೆ.
ಏನಿದು ಮೊಸಳೆ ಕಣ್ಣೀರು? ಯಾವುದಾದರೂ ಮೃಗಾಲಯಕ್ಕೆ ಹೋದಾಗ ನೀವು ಮೊಸಳೆಯನ್ನು ನೋಡಿರಬಹುದು. ಕಣ್ಣು ಮುಚ್ಚಿ ಮಲಗಿರುವ ಮೊಸಳೆಯ ಕಣ್ಣಿಂದ ನೀರು ಹರಿಯುತ್ತಿರುವುದನ್ನೂ ನೀವು ಕಂಡಿರಬಹುದು. ಮೊಸಳೆ ತನ್ನ ಆಹಾರವನ್ನು ಆಕರ್ಷಿಸಲು ಕಣ್ಣೀರು ಸುರಿಸುತ್ತದೆ ಎಂಬ ಕತೆ ಇದೆ. ಮೊಸಳೆಯ ಕಣ್ಣಿಂದ ನೀರು ನಿರಂತರವಾಗಿ ಹರಿಯುತ್ತಿರುತ್ತದೆ. ಮೊಸಳೆಗೆ ದುಃಖವಾಗಿ ಅದು ಕಣ್ಣೀರು ಸುರಿಸುವುದಿಲ್ಲ. ಅದರ ದೇಹ ರಚನೆಯ ಕಾರಣದಿಂದ ಕಣ್ಣೀರು ಬರುತ್ತಿರುತ್ತದೆ. ಮೊಸಳೆ ನೀರಿನಿಂದ ಹೊರಬಂದು ಬಹಳ ಹೊತ್ತಾದ ಬಳಿಕ ಮೈಯೆಲ್ಲ ಒಣಗಿದಾಗ ಕಣ್ಣಿನ ನೀರು ಕಾಣುತ್ತದೆ. ಲೆಕ್ರಿಮಲ್ ಗ್ಲಾಂಡ್ಗಳು ಎರಡೂ ಕಣ್ಣುಗಳ ಪರೆಯಲ್ಲಿಇರುತ್ತವೆ. ಇವುಗಳಿಂದ ನೀರು ಬರುತ್ತದೆ. ಇದು ವೈಜ್ಞಾನಿಕ ವಿವರಣೆ.
ಕೆಲವರು ತಮಗೆ ದುಃಖ ಆಗದೆ ಇದ್ದರೂ ದುಃಖವಾಗಿದೆ ಎಂದು ತೋರಿಸಿಕೊಳ್ಳಲು ಕಣ್ಣೀರು ಸುರಿಸುತ್ತಾರೆ. ಮೊಸಳೆಯ ಕಣ್ಣೀರಿಗೂ ಇವರ ಕಣ್ಣೀರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ತೋರಿಕೆಯ ದುಃಖ ಪ್ರದರ್ಶನವನ್ನು ಹೀಗೆ ಮೊಸಳೆಯ ಕಣ್ಣೀರಿಗೆ ಹೋಲಿಸುವುದು ರೂಢಿಗೆ ಬಂದಿದೆ. ಷೇಕ್ಸ್ಪಿಯರ್ ಕೂಡ ತನ್ನ ಒಥೆಲೋ ನಾಟಕದಲ್ಲಿ ಮೊಸಳೆ ಕಣ್ಣೀರನ್ನು ಬಳಸಿದ್ದಾನೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.