ಅಶ್ವಿನಿ ಇಲ್ಲ
ಭರಣಿ ಇಲ್ಲ
ಕೃತ್ತಿಕೆಯಲ್ಲಿ ಬಿಳಿ ಮೋಡ
ಕರಿದಾಗತೊಡಗಿದೆ

ನೆಲದೊಳಗಿನ ಕಪ್ಪೆ
ಮುಗಿಲು ಹನಿಸುವ ಹನಿಗೆ
ಕೂಗಿಯೇ ಕೂಗುತ್ತ್ತದೆ

ಕಪ್ಪೆ ಕೂಗಿಗೆ ಮನಕರಗಿತೋ ಎಂಬಂತೆ
ರೋಹಿಣಿಯು ಹನಿಸುವುದು
ನಾಲ್ಕೇ ನಾಲ್ಕು ಹನಿ

ಆಗ,
ಗಡುಗಾಲ ಬಂತೆಂದು ಗಡಿಬಿಡಿಯ
ಮಾಡುವರು ನಮ್ಮೂರ ಜನರು
ಹೊದಿಕೆ ಹೂಂಟಿಯು ಎಂದು
ಬಿದಿರು ಬೀಜವು ಎಂದು
ಧೂಳು ತುಂಬಿದ ಹಾಳೆಯಲ್ಲಿ
ಇನಿತು ಬೇಸರ ಪಡದೆ
ಮೂಡಿಸುವರು ಹೆಜ್ಜೆ ಗುರುತು

ಮೃಗ-
ಶಿರ
ಬಿತ್ತೆನ್ನುವದೇ ತಡ
ನಮ್ಮೂರಲ್ಲಿ ದೊಡ್ಡ ಬೊಬ್ಬೆ
ಎತ್ತು, ಕೋಣ ಹೂಡುವವರ ಕೊಂಗೆ
ಹಾಡು ಹಾಡುತ್ತ್ತ ಭೂ ತಾಯ
ಕೆಸರೊಡಲಿಗೆ ಹಸಿರ ಚಿತ್ತಾರ
ಬಿಡಿಸುವ ಹೆಣ್ಣುಗಳ ದಂಡು

‘ಆರಿದ್ರಾ ಸರಿಯಾದರೆ ದಾರಿದ್ರ್ಯವಿಲ್ಲ’ವೆಂದು
ಕಂಡ ದೇವರು ದೆವ್ವಗಳಿಗೆಲ್ಲ ಹರಕೆ

ಶರಾವತಿ ಕೆಂಪಾದ ಕೂಡಲೆ
ಗಡುಗಾಲದ ಬಲಿಗೆ ಊರೇ ಸಿದ್ಧ
ಹಾನ, ಬೊಕ್ಕಳ, ಮಾಗ ಬಲಿಗಳ ನೆವದಿ
ನಮ್ಮೂರ ಹುಂಜಗಳಿಗೆ ಅಂತ್ಯಕಾಲ

ಪುಷ್ಯ ಪುನರ್ವಸು
ಸತತ ಸುರಿಯುತ್ತಿರಲು ಮನೆಯ ಜಗುಲಿಯೇ
ತಾಳ ಮದ್ದಳೆಗಳಿಗೆ ತಾಣ

ಇದು ಆಶ್ಲೇಷಾ,
ನಮ್ಮೂರ ಬಳಸಿದ ಶರಾವತಿಗೆ
ಈಗ ತುಂಬು ಬಸಿರು
ಬಯಕೆ ಊಟವ ಉಂಡ
ತೃಪ್ತಿಯ ತೇಗು. ಕೈತೊಳೆಯುತ್ತಲೇ
ಸೀರೆ ಬದಲಿಸಿದ್ದಾಳೆ ಯಾರೂ
ಅಷ್ಟಾಗಿ ಲಾಯಕ್ಕು ಮಾಡದ ಕೆಂಪು

ಹೆರಿಗೆ ಗಳಿಗೆಯ ಭವಿಷ್ಯ ಹೇಳುವವರಿಲ್ಲ
ಆಸ್ಪತ್ರೆ ಬಲು ದೂರ, ನರ್ಸು
ಹಗಲಾದರೆ ಸೈ, ರಾತ್ರಿ ‘ಊಹೂಂ’

ಊರು ತುದಿಗಾಲಲ್ಲಿ ನಿಂತಿದೆ
ಹುಟ್ಟುವುದು ಗಂಡೋ ಹೆಣ್ಣೋ?
ಎಲ್ಲರದೂ ಹರಕೆ ಒಂದೇ
‘ಯಾವುದಾದರೂ ಆಗಲಪ್ಪ
ರಾಕ್ಷಸ ಮಗು ಆಗುವುದು ಬೇಡಪ್ಪ’

ಮಘಾ ಕಳೆಯುವುದೇ ತಡ,
ಗದ್ದೆಯೆಲ್ಲ ಹೊಡೆ
ಸೊಸೆಯೋ, ಮಗಳೋ, ಮಡದಿಯೋ ಮನೆಯಲ್ಲಿ
ಬಸಿರಾದಷ್ಟೇ ಸಂತಸ ಎಲ್ಲ ಕಡೆ

ಬಂದು ಬಹಳ ದಿನವಾಯಿತು
ಎನ್ನುತ್ತ ಚಡಪಡಿಸುವ ತೆರದಿ
ವಿರಳವಾಗುವ ಮಳೆರಾಯನಿಗೆ
‘ಹೋಗಿ ಬಾ’ ಎಂದು ಕೈ ಬೀಸಿ
ಹೊಗೆಯಟ್ಟಕ್ಕೇರಿಸುವರು ಗೊರಬು, ಕಂಬಳಿಯ

ಇನ್ನೇನು ಕೊಯಿಲು, ಕತ್ತಿಗೆ ಹದವಿಲ್ಲ
ಎನ್ನುತ್ತ್ತ ಓಡುವರು ಆಚಾರಿ ಮೊನ್ನನ ಸಾಲಿಗೆ
೧೪-೦೭-೮೮