ದಲಿತ ಆತ್ಮಕಥನಗಳು ಮರಾಠಿಯಲ್ಲಿ ವಿಶಿಷ್ಟವಾದದ್ದು. ಒಂದು ತಳ ಸಮುದಾಯದ ನಿಗಿ ನಿಗಿ ಕೆಂಡದಂಥ ನೋವನ್ನು ಅಲ್ಲಿ ದಾಖಲಿಸುವ ರೀತಿ ಎದೆಯನ್ನು ಜಲ್ಲೆನ್ನಿಸುತ್ತದೆ. ಆರಂಭದ ರೋಷ, ರೊಚ್ಚು ಮಾಯವಾಗಿ ಸಮಾಹಿತವಾದ ಮನಃಸ್ಥಿತಿಯಲ್ಲಿ ತಮ್ಮ ಪಾಡು ತಮ್ಮದು ಎಂಬಂತೆ, ದಟ್ಟ ಕಾಡಿನ ನಡುವೆ ಮೈತುಂಬಿ ಹರಿವ ನದಿಯಂಥ ಪಕ್ವಗೊಂಡ ಶೈಲಿಯನ್ನು ಇತ್ತೀಚಿನ ಅಲ್ಲಿಯ ಇಂಥ ಬರೆಹಗಳಲ್ಲಿ ಕಾಣಬಹುದು. ಇತ್ತೀಚೆಗೆ ನಾನು ಭಾಲಚಂದ್ರ ಮುಣಗೇಕರ ಅವರ ‘ಮೀ ಅಸಾ ಘಡಲೋ’ ಎಂಬುದರ ಕನ್ನಡ ಅನುವಾದ ‘ನಾನು ಹೀಗೆ ರೂಪುಗೊಂಡೆ’ ಎಂಬುದನ್ನು ಓದಿದ್ದೆ. ಅದರಲ್ಲಿ ಇಂಥ ಬದಲಾದ ಶೈಲಿಯನ್ನು ಕಂಡಿದ್ದೆ. ಇದೀಗ ತೆಲುಗಿನಿಂದ ಕನ್ನಡಕ್ಕೆ ಬಂದಿರುವ ‘ಮೈ ಫಾದರ್ ಬಾಲಯ್ಯ’ ಎಂಬ ಕೃತಿಯನ್ನು ಓದಿದೆ. ಇದು ಮಗನೊಬ್ಬ ತನ್ನ ತಂದೆಯ ಕತೆಯನ್ನು ಹೇಳುತ್ತ ತಾನೂ ಅದರಲ್ಲಿ ಒಳಗೊಳ್ಳುತ್ತ ಒಂದು ಮನಮಿಡಿಯುವ ಚರಿತ್ರೆಯನ್ನು ಹೇಳುತ್ತಾರೆ. ಇದನ್ನು ಬರೆದವರು ವೈ.ಬಿ.ಸತ್ಯನಾರಾಯಣ ಅವರು. ಟಿ.ಡಿ.ರಾಜಣ್ಣ ತಗ್ಗಿಯವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. ಇದು ಇಂಗ್ಲಿಷಿನಲ್ಲಿ ಮತ್ತು ತೆಲುಗಿನಲ್ಲಿ ಬಂದ ಮೊದಲ ದಲಿತ ಆತ್ಮಕಥನ. ಇದು ಕೂಡ ತಣ್ಣಗಿನ ದನಿಯಲ್ಲಿ ಮನಮುಟ್ಟುತ್ತದೆ. ಜಾತಿ ಎನ್ನುವುದು ಒಂದು ಕಲ್ಪನೆ; ಒಂದು ಮನಃಸ್ಥಿತಿಯ ದ್ಯೋತಕ. ಈ ಕಲ್ಪನೆ ಅಥವಾ ಮನುಃಸ್ಥಿತಿ ಮಾಯವಾಗದ ಹೊರತು ಜಾತಿಪದ್ಧತಿ ಅಳಿಯಲಾರದು ಎಂದು ಅಂಬೇಡ್ಕರರು ಒಂದು ಸಂದರ್ಭದಲ್ಲಿ ಹೇಳಿದ್ದರು. ಈ ಜಾತಿಪದ್ಧತಿಯನ್ನು ಇಲ್ಲವಾಗಿಸುವುದು ಹೇಗೆ? ಚಾತುರ್ವರ್ಣ ವ್ಯವಸ್ಥೆಯಲ್ಲಿ ನಲುಗಿದ ಈ ದೇಶದ ತಳಸಮುದಾಯದವರಿಗೆ ಬಿಡುಗಡೆಯ ಭಾಗ್ಯದ ರೂಪದಲ್ಲಿ ಬಂದವರು ಬ್ರಿಟಿಷರು. ಬ್ರಿಟಿಷರ ಆಡಳಿತವನ್ನು ದ್ವೇಷಿಸುವವರೂ ಅದೆಷ್ಟೋ ಕಾರಣಗಳಿಗೆ ಅವರನ್ನು ಮೆಚ್ಚಿಕೊಂಡೂ ಇದ್ದಾರೆ. ಯುರೋಪಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮ ನಮ್ಮ ದೇಶದಲ್ಲೂ ಆಯಿತು. ದೇಶದಲ್ಲಿ ಉದ್ಯಮಗಳು ಪ್ರಾರಂಭವಾದವು. ಕಲ್ಲಿದ್ದಲು ಗಣಿಗಳು, ರೈಲುಸೇವೆ ಪ್ರಾರಂಭವಾದವು, ದೊಡ್ಡದೊಡ್ಡ ಕಾರ್ಖಾನೆಗಳು ಬಂದವು. ಇದಕ್ಕೆಲ್ಲ ದುಡಿಯುವ ಒಂದು ವರ್ಗ ರೂಪುಗೊಳ್ಳುವುದು ಅನಿವಾರ್ಯವಾಗಿತ್ತು. ಅದುವರೆಗೆ ವಿದ್ಯೆಯನ್ನು ಗುತ್ತಿಗೆ ಹಿಡಿದಿದ್ದ ವರ್ಗದವರಿಗೆ ಇಂಥ ಶ್ರಮಸಂಸ್ಕೃತಿಯ ಕೆಲಸಗಳು ಒಗ್ಗಲಿಲ್ಲ. ಆಗ ದಲಿತ ವರ್ಗದವರು ಈ ಕೆಲಸಗಳಲ್ಲಿ ಸೇರಿಕೊಂಡರು. ಹೊಸ ಶಿಕ್ಷಣ ಪದ್ಧತಿ ಬಂತು. ಅಲ್ಪಸ್ವಲ್ಪ ವಿದ್ಯೆ ಕಲಿತ ಮೊದಲ ತಲೆಮಾರಿನ ದಲಿತರು ಇಂಥ ಹೊಸ ಉದ್ಯೋಗದಲ್ಲಿ ಸೇರಿಕೊಂಡು ತಮ್ಮ ಮಕ್ಕಳಿಗೆ ವಿದ್ಯೆ ಕಲಿಸಿ ಅವರು ಸಮಾಜದಲ್ಲಿ ಮೇಲೆ ಬರುವಂತೆ ಮಾಡಿದರು. ಅಂಥ ಒಂದು ಮೂರು ತಲೆಮಾರಿನ ಕತೆ ಈ ಕೃತಿ. ಇದನ್ನು ಆ ಕ್ಷಣದ ಕ್ರಿಯೆಗೆ ಪ್ರತಿಕ್ರಿಯೆಂಬಂತೆ ಹಸಿಹಸಿಯಾಗಿ ಬರೆದಿಲ್ಲ. ಕೃತಿಕಾರ ವೈ.ಬಿ.ಸತ್ಯನಾರಾಯಣ ಉನ್ನತ ವಿದ್ಯೆಯನ್ನು ಪಡೆದು ಸುಮಾರು ಮೂರು ದಶಕಗಳ ಕಾಲ ಕಾಲೇಜೊಂದರಲ್ಲಿ ಪ್ರಿನ್ಸಿಪಾಲರಾಗಿದ್ದು ನಿವೃತ್ತರಾದವರು. ನಂತರವೂ ಬೇರೆ ಬೇರೆ ಹುದ್ದೆಗಳಲ್ಲಿ ಸಮರ್ಥವಾಗಿ ಜವಾಬ್ದಾರಿಯನ್ನು ನಿರ್ವಹಿಸಿದವರು. ಅವರ ಮಕ್ಕಳು ಮೊಮ್ಮಕ್ಕಳೆಲ್ಲ ವಿದೇಶದಲ್ಲಿದ್ದಾರೆ. ಮಾಗಿದ ವಯಸ್ಸಿನಲ್ಲಿ, ನಿರ್ಮಲವಾದ ಮನಸ್ಸಿನಿಂದ ತಮ್ಮ ಅಸ್ಪಶ್ಯ ಬದುಕಿನ ಪುನರಾವಲೋಕನ ಮಾಡಿದ್ದಾರೆ. ತಮ್ಮ ಅಜ್ಜ, ತಮ್ಮ ತಂದೆ ಮತ್ತು ತಮ್ಮ ಅಕ್ಕನ ನೆನಪುಗಳನ್ನು ಕೇಳಿಸಿಕೊಂಡು ತಮ್ಮ ಅನುಭವವನ್ನೂ ಸೇರಿಸಿಕೊಂಡು ರಚಿಸಿರುವ ಈ ಕೃತಿ ಓದುಗನ ಸಹಾನುಭೂತಿಯನ್ನು ಗಳಿಸದೆ ಇರದು. ಯೆಲುಕಟಿ ಕುಟುಂಬದ ರಾಮಸ್ವಾಮಿ (ಬಾಲಯ್ಯ) ಈ ಕೃತಿಯ ಲೇಖಕರಾದ ವೈ.ಬಿ.ಸತ್ಯನಾರಾಯಣ ಅವರ ತಂದೆ. ಅಜ್ಜ ನರಸಯ್ಯ. ಮುತ್ತಜ್ಜನ ಹೆಸರೂ ನರಸಯ್ಯ ಅಂತಲೇ. ಆತ ಕೂಡ ಕುಶಲಕರ್ಮಿಯೇ. ಆತ ಹೈದ್ರಾಬಾದಿನ ನಿಜಾಮನಿಗೆ ಎಳೆಯ ಹಸುವಿನ ಚರ್ಮದಿಂದ ಚಪ್ಪಲಿಯನ್ನು ಮಾಡಿಕೊಟ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಾನೆ. ಚಪ್ಪಲಿಯಿಂದ ಸಂತುಷ್ಟನಾದ ನಿಜಾಮನು ಆತನಿಗೆ ಐವತ್ತು ಎಕರೆ ಭೂಮಿಯನ್ನು ಇನಾಮಾಗಿ ನೀಡುತ್ತಾನೆ. ಆದರೆ ಇನಾಮನ್ನು ಭೋಗಿಸುವ ಅವಕಾಶ ಅವರಿಗಿರಲಿಲ್ಲ. ಕೇವಲ ಎರಡು ಎಕರೆ ಮಾತ್ರ ಇವರ ಉಪಭೋಗಕ್ಕೆ ಬರುತ್ತದೆ. ಇದು ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿದ್ದ ಆಗಿನ ಪರಿಸ್ಥಿತಿ. ಹದಿನೈದನೆ ವಯಸ್ಸಿನಲ್ಲಿಯೇ ಬಾಲಯ್ಯ ಬೆಲ್ಲಂಪಲ್ಲಿ ಸ್ಟೇಷನ್ನಲ್ಲಿ ಬಾಕ್ಸ್ಮ್ಯಾನ್ ಆಗಿ ನೌಕರಿಗೆ ಸೇರುತ್ತಾನೆ. ಆಗಿನ ಅಸ್ಪಶ್ಯತೆ ಆಚರಣೆಯ ಒಂದು ಚಿತ್ರವನ್ನು ಲೇಖಕರು ಕೊಡುತ್ತಾರೆ- ಶಾಲೆಗೆ ಬರುತ್ತಿದ್ದ ಅಸ್ಪಶ್ಯರ ಮಕ್ಕಳು ಇವರು ಮಾತ್ರವೇ ಆದ್ದರಿಂದ ಇವರು ಅಲ್ಲಿ ತುಂಬ ಸಲ ಅವಮಾನಕ್ಕೆ ಗುರಿಯಾಗುತ್ತಿದ್ದರು. ಇವರನ್ನು ತರಗತಿಗಳಲ್ಲಿ ಬೇರೆಯಾಗಿ ಕೂರಿಸುತ್ತಿದ್ದರು. ಅಲ್ಲಿ ಎಲ್ಲರೂ ಕುಡಿಯುವ ಗಡಿಗೆಯ ನೀರನ್ನು ಮುಟ್ಟುವುದಕ್ಕೆ ಬಿಡುತ್ತಿರಲಿಲ್ಲ. ಇವರು ನೀರು ಕುಡಿಯಲು ತುಂಬ ದೂರದ ಹರಿಜನ ಕೇರಿಗೆ ಬರಬೇಕಾಗಿತ್ತು. ಆಗತಾನೇ ಭಾರತಕ್ಕೆ ಸ್ವಾತಂತ್ರ್ಯ ಬಂದಿತ್ತು. ಆದರೆ ಗ್ರಾಮೀಣ ಜನರ ಬದುಕಿನಲ್ಲಿ ಯಾವ ಬದಲಾವಣೆಗಳೂ ಆಗಿರಲಿಲ್ಲ…. ಇಂಗ್ಲಿಷ್ ಶಿಕ್ಷಣ ಹೇಗೆ ದಲಿತರ ಬಾಳಿನಲ್ಲಿ ಬದಲಾವಣೆ ತರುತ್ತದೆ ಎಂಬುದನ್ನು ಲೇಖಕರು ಪರಿಣಾಮಕಾರಿಯಾಗಿ ಹೇಳುತ್ತಾರೆ. ಎಷ್ಟೋ ಮಳೆಗಾಲದಲ್ಲಿ ಮನೆ ಸೋರುತ್ತಿದ್ದುದರಿಂದ ರಾತ್ರಿ ಕುಳಿತೇ ಬೆಳಗು ಮಾಡಿದ್ದನ್ನು ವಿವರಿಸುತ್ತಾರೆ. ಶಾಲೆಯಲ್ಲಿ ತಮ್ಮ ಸಹಪಾಠಿಗಳು ತಮ್ಮನ್ನು ಮಾದಿಗ ಎಂದು ಹೀಯಾಳಿಸುತ್ತಿದ್ದುದನ್ನು ಮತ್ತು ತಾವು ಆ ಅಪಮಾನವನ್ನು ಸಹಿಸಿಕೊಂಡಿದ್ದನ್ನು ಹೇಳುತ್ತಾರೆ. ಬಾಲಯ್ಯನ ಸಾವಿನ ವಿವರಗಳೊಂದಿಗೆ ಕೃತಿ ಮುಕ್ತಾಯವಾಗುತ್ತದೆ. ಇದು ಬಡತನ, ಅಪಮಾನ, ಶೋಷಣೆ, ಕ್ರೌರ್ಯಗಳ ವಿರುದ್ಧ ದಲಿತ ಕುಟುಂಬವೊಂದು ನಡೆಸಿದ ಗಟ್ಟಿ ಹೃದಯದ ಹೋರಾಟದ ಕತೆ. ಇದು ಆ ಒಂದು ಕುಟುಂಬದ ಕತೆಯಾಗುವ ಹೊತ್ತಿಗೇ ಸಮಕಾಲೀನ ಭಾರತದ ಕತೆಯೂ ಆಗಿರುವುದರಿಂದ ಇದರ ಮಹತ್ವ ಇನ್ನಷ್ಟು ಹೆಚ್ಚಿದೆ. ಪ್ರ: ದೇಸಿ ಪುಸ್ತಕ, ಬೆಂಗಳೂರು, ಪುಟಗಳು ೨೪೮, ಬೆಲೆ ₹ ೧೮೦
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.