ಮಗಳು ಹೇಳಿದಳು-
ನಿನ್ನೆಯೂ ದೋಸೆ ಇವತ್ತೂ ದೋಸೆ
ಅಮ್ಮ ನಿನ್ನದೇನು ವರಸೆ?
ನೀ ಬದಲಾಗಬೇಕು
ರುಚಿ ಬದಲಾಯಿಸಬೇಕು

ಮಗ ಹೇಳಿದ-
ಮೊನ್ನೆಯೂ ಇದೇ ಚಡ್ಡಿ
ಇವತ್ತೂ ಇದೇ ಚಡ್ಡಿ
ಬೆವರು ನಾರುತ್ತಿದೆ
ಗೆಳೆಯರು ಮೂಗು ಮುಚ್ಚಿಕೊಳ್ಳುತ್ತಿದ್ದಾರೆ
ಬದಲಾಯಿಸು ಅನ್ನುತ್ತಿದ್ದಾರೆ
ಅಮ್ಮ ಬೇರೆಯದು ಕೊಡು
ಸ್ವಲ್ಪ ಹರಿದಿದ್ದರೂ ಅಡ್ಡಿಯಿಲ್ಲ
ಕೊಳಕಾದುದು ಬೇಡವೇ ಬೇಡ

ಅತ್ತೆ ಹೇಳಿದಳು-
ಈ ಚಾಳೀಸು ಬದಲಿಸಬೇಕು ಮಗಳೆ
ಹತ್ತು ವರ್ಷದ ಹಿಂದೆ ಖರೀದಿಸಿದ್ದು
ನಂಬರು ಬದಲಾಗಿದೆ ದೃಷ್ಟಿ ಮಂಜಾಗಿದೆ
ಟೀವಿಯಲ್ಲಿ ಯಾರನ್ನೋ ಕಂಡರೆ
ಯಾರನ್ನೋ ಕಂಡಂತೆ
ಮುಖವಿದ್ದರೂ ಮಖವಾಡ ಧರಿಸಿದವರಂತೆ
ರಾಮನ ಮಾತು ಕೇಳುತ್ತದೆ
ಆದರೆ ಚಹರೆ ರಾವಣನದು
ಸೀತೆಯೋ ಶೂರ್ಪನಖಿಯೋ
ಒಂದೂ ತಿಳಿಯುತ್ತಿಲ್ಲ
ಚಾಳೀಸು ಮೊದಲು ಬದಲಾಯಿಸಬೇಕು

ಗಂಡ ಹೇಳಿದ-
ಅದೇನು ನಿನ್ನ ಹಾಡು ನಿತ್ಯ
ಸುಳ್ಳು ಹೇಳಿದ್ದೇ ಹೇಳಿದರೆ ಆಗುವುದೇ ಸತ್ಯ?
ಆಶಾನೋ, ಲತಾನೋ, ರೆಹಮಾನೋ
ಕೇಳಿದ್ದೇ ಕೇಳುತ್ತಿದ್ದರೆ ಕರ್ಣ ಕಠೋರ
ಮೊದಲು ಬದಲಾಯಿಸು ಹಳೆಯ ಕ್ಯಾಸೆಟ್ಟು
ಅದರ ಜಾಗ ಏನಿದ್ದರೂ ಈಗ ಕಸದ ಬಕೆಟ್ಟು

ಈಗ ಅವಳದೇ ಸ್ವಗತ-
ಯಾರಿಗೂ ನನ್ನ ಮಾತು ಕೇಳಲು
ಇಲ್ಲ ಪುರುಸೊತ್ತು
ಹಂದಿಗಳು ಬೇಲಿ ಮುರಿದು ಒಳಗೆ ಬರುತ್ತಿವೆ
ಪಕ್ಕದ ಸೈಟಿನವನು ಬೇಲಿಯನ್ನೇ
ಕಿತ್ತು ಒತ್ತುವರಿ ಮಾಡಿದ್ದಾನೆ
ಮನೆಯ ಕೀಲಿ ಹಾಕಿದ್ದು ಹಾಕಿದ್ದಂತೆಯೇ ಇದೆ
ಅಜ್ಜನ ಕಾಲದ ಹಂಡೆ ಕೊಡಪಾನ
ಕಲಬಿಯಲ್ಲಿಟ್ಟ ದೇವರ ಸಾಮಾನ
ಕಪಾಟಿನಲ್ಲಿ ಬಚ್ಚಿಟ್ಟ ನವರತ್ನದ ಹಾರ
ಕದ್ದು ಹೋದನೆ ಚೋರ?
ಎಲ್ಲಿ ಹೋದ ಚೌಕಿದಾರ?
ಅಂದಿದ್ದನಲ್ಲ ನೀವೇ ನನ್ನ ಪರಿವಾರ!
ಕಂಡುಕೊಳ್ಳಲೇಬೇಕು
ನಮಗೆ ನಾವೇ ಪರಿಹಾರ

ನಾಳೆಯೇ ಇದೆ ಬಡಾವಣೆಯ
ಮ್ಯಾನೇಜ್‌ಮೆಂಟ್‌ ಕಮಿಟಿಯ
ಜನರಲ್‌ ಬಾಡಿ ಮೀಟಿಂಗು
ನನ್ನದೊಂದೇ ಡಿಮಾಂಡು
ಬದಲಾಯಿಸಲೇ ಬೇಕು ಕಮಾಂಡು
ನಿಮಗೊಪ್ಪಿಗೆಯಾದರೆ ಎತ್ತಿ ಕೈ

ನಾವು ಬದಲಾಗಬೇಕು
ನಾವು ಬದಲಾಯಿಸಬೇಕು