ಹೊಳೆಸಾಲಿನವರಿಗೆ ನಮ್ಮೂರಿನ ನಾಗಪ್ಪಯ್ಯನವರ ಪರಿಚಯ ಇಲ್ಲದೇ ಇಲ್ಲ. ಸ್ವಾತಂತ್ರ್ಯ ಬರುವುದಕ್ಕೆ ಪೂರ್ವದಲ್ಲಿಯೇ ಅವರು ಮೂಲ್ಕಿ ಪರೀಕ್ಷೆಗೆ ಕಟ್ಟಿದ್ದವರಂತೆ. ಆದರೆ ಪಾಸಾಗಿರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಸರ್ಕಾರಿ ನೌಕರಿಯನ್ನು ಪಡೆಯಬಹುದಿತ್ತು. ಆದರೆ ಏಕೋ ಏನೋ ಅವರು ಸರ್ಕಾರಿ ನೌಕರಿಗೆ ಹೋಗಲಿಲ್ಲ. ನಮ್ಮೂರಿನ ಅಕ್ಷರ ಬಲ್ಲ ಕೆಲವೇ ಕೆಲವು ಜನರಲ್ಲಿ ನಾಗಪ್ಪಯ್ಯ ಪ್ರಮುಖರಾಗಿದ್ದರು. ನಮ್ಮೂರಿಗೆ ಬರುವ ಶಾಲೆಯ ಮೇಸ್ಟ್ರು, ಕಂದಾಯ ಇಲಾಖೆಯ ಶಾನುಭೋಗರನ್ನು ಬಿಟ್ಟರೆ ಹೆಚ್ಚು ಕಾಯಿದೆ ಜ್ಞಾನ ನಾಗಪ್ಪಯ್ಯನವರಲ್ಲಿತ್ತು. ಊರ ಜನರು ತಮಗೆ ಸರ್ಕಾರದಿಂದ ಏನಾದರೂ ಕೆಲಸವಾಗಬೇಕಿದ್ದರೆ ಅದಕ್ಕೆ ಅರ್ಜಿಯನ್ನು ಬರೆದುಕೊಂಡುವಂತೆ ನಾಗಪ್ಪಯ್ಯನವರಿಗೆ ದುಂಬಾಲು ಬೀಳುತ್ತಿದ್ದರು. ನಾಗಪ್ಪಯ್ಯ ಯಾವುದೇ ಬೇಜಾರು ಮಾಡಿಕೊಳ್ಳದೆ ಬಂದವರಿಗೆಲ್ಲ ಅವರು ಹೇಳಿದಂತೆ ಅರ್ಜಿಯನ್ನು ಬರೆದುಕೊಡುತ್ತಿದ್ದರು. ಜೊತೆಗೆ ತಮಗೆ ಗೊತ್ತಿರುವ ಕಾಯಿದೆಯ ಜ್ಞಾನವನ್ನು ಬಳಸಿಕೊಂಡು ಆ ಅರ್ಜಿಗೆ ಜೀವ ತುಂಬುತ್ತಿದ್ದರು. ಸರಸ್ವತಿಯ ದೆಸೆಯಿಂದಾಗಿ ಊರಲ್ಲಿ ಅವರ ವಜನು ಒಂದು ಗುಂಜಿ ಮೇಲೇಯೇ ಇತ್ತು. ಅವರು ಹೇಳಿದ ಕೆಲಸವನ್ನು ಯಾರೂ ಮಾಡದೆ ಇರುತ್ತಿರಲಿಲ್ಲ. ಹೀಗಾಗಿ ನಾಗಪ್ಪಯ್ಯನವರ ತೋಟ, ಗದ್ದೆಗಳಲ್ಲಿ ಎಷ್ಟೋ ಕೆಲಸ ಬಿಟ್ಟಿಯಾಗಿಯೇ ಮುಗಿದುಹೋಗುತ್ತಿದ್ದವು. ಊರಿಗೆ ಏನಾದರೂ ಸವಲತ್ತು ಬೇಕಿದ್ದರೆ ಸಂಬಂಧಿಸಿದ ಕಚೇರಿಗೆ ಪತ್ರವ್ಯವಹಾರವನ್ನು ತಾವು ಖುದ್ದಾಗಿ ಆಸಕ್ತಿ ವಹಿಸಿ ಮಾಡುತ್ತಿದ್ದರು. ಅವರು ಬರೆದ ಅರ್ಜಿಯ ಮೇಲಿಂದಲೇ ನಮ್ಮೂರಲ್ಲಿ ಕೆಲವು ಕೆಲಸಗಳು ಆಗಿದ್ದವು. ಬಿಡಾಡಿ ದನಗಳಿಗೆ ಹಟ್ಟಿ ಮಂಜೂರು ಆಗಿದ್ದು, ನಾಲ್ಕಾರು ಕಾಲುದಾರಿಗಳಿಗೆ ಗೊಜ್ಜು ಹಾಸು ಬಂದದ್ದು, ನಮ್ಮೂರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಂದದ್ದು, ಪ್ರಾಥಮಿಕ ಶಾಲೆಗೆ ಹೊಸ ಕೊಠಡಿ ಮಂಜೂರಾಗಿದ್ದು ಎಲ್ಲ ಅವರು ಬರೆದ ಅರ್ಜಿಯ ಪರಿಣಾಮವೇ ಆಗಿತ್ತು. ನಾಗಪ್ಪಯ್ಯ ಊರಿನ ಇನ್ನಾರದೋ ಹೆಸರಿನಲ್ಲಿ ತಳ್ಳಿ ಅರ್ಜಿಗಳನ್ನು ಬರೆಯುತ್ತಿದ್ದುದೂ ಉಂಟು. ಇದರಿಂದ ಕೆಲವೊಮ್ಮೆ ಲಾಭವಾಗಿದ್ದೂ ಇತ್ತು. ಊರಲ್ಲಿ ಕಳ್ಳತನವೋ, ದರೋಡೆಯೋ ಇನ್ನೇನೋ ಅಪರಾಧ ಕೃತ್ಯಗಳು ಸಂಭವಿಸಿದರೆ ಅದು ಯಾರು ಮಾಡಿದ್ದು ಎಂಬಿತ್ಯಾದಿ ವಿವರಗಳು ಅವರಿಗೆ ಅವರದೇ ಮೂಲಗಳಿಂದ ತಿಳಿದುಬರುತ್ತಿದ್ದವು. ಅವರನ್ನು ಹೇಗಾದರೂ ಮಾಡಿ ಸಿಗಿಸಿಹಾಕಬೇಕೆಂದು ಯಾರದೋ ಹೆಸರಿನಲ್ಲಿ, ಕೆಲವೊಮ್ಮೆ ಹೆಸರಿಲ್ಲದೆ ಮೂಗರ್ಜಿಗಳನ್ನು ಪೊಲೀಸ್ ಠಾಣೆಗೆ ಬರೆದುಬಿಡುತ್ತಿದ್ದರು. ಇದರಿಂದ ಕೆಲವು ಅಪರಾಧಿಗಳು ಸಿಕ್ಕಿಬಿದ್ದು ಜೈಲಿಗೂ ಹೋಗುವಂತೆ ಆಗಿತ್ತು. ನಮ್ಮೂರಿನ ಗುಡ್ಡದ ಮೇಲೆ ದನಕರುಗಳಿಗೆ ಮೇಯಲು ತುಂಬ ಜಾಗ ಇತ್ತು. ಸರ್ಕಾರ ಆ ಜಾಗದಲ್ಲಿ ಗೇರು ಮತ್ತು ನೀಲಗಿರಿ ಮರಗಳನ್ನು ಹಾಕಬೇಕೆಂದು ನಿರ್ಧಾರ ಮಾಡಿತ್ತು. ಈ ಮರಗಳನ್ನು ಬೆಳೆಯುವುದರಿಂದ ದನಕರುಗಳಿಗೆ ಮೇವಿನ ಅಭಾವ ಉಂಟಾಗುತ್ತದೆ ಎಂಬುದು ನಾಗಪ್ಪಯ್ಯನವರ ವಾದ. ಒಂದು ಬಾರಿ ಆ ಭಾಗದ ಶಾಸಕರು ಮಂತ್ರಿಯೂ ಆಗಿದ್ದವರು ನಮ್ಮೂರಿಗೆ ಬಂದಿದ್ದರಂತೆ. ನಾಗಪ್ಪಯ್ಯನವರು ಮರ ನೆಟ್ಟರೆ ಅಲ್ಲಿ ಹುಲ್ಲು ಹೇಗೆ ಬೆಳೆಯುವುದಿಲ್ಲ ಎಂಬುದನ್ನು ಸಚಿವರಿಗೆ ತೋರಿಸಿಕೊಟ್ಟರಂತೆ. ತಮ್ಮದೇ ಗುಡ್ಡದ ಮೇಲೆ ಮರ ನೆಟ್ಟ ಜಾಗದಲ್ಲಿ ಅವುಗಳ ಎಲೆ ಬಿದ್ದು ಅಲ್ಲಿ ಯಾವುದೇ ಹುಲ್ಲು ಬೆಳೆಯುವುದಿಲ್ಲ ಎಂಬುದನ್ನು ತೋರಿಸಿದರು. ಹುಲ್ಲು ಬೆಳೆಯದಿದ್ದಮೇಲೆ ದನಗಳು ಹೇಗೆ ಹಾಲನ್ನು ಕೊಡುತ್ತವೆ? ದನಗಳು ಹಾಲು ಕೊಡದಿದ್ದರೆ ನಮ್ಮ ಮಕ್ಕಳು ಹೇಗೆ ಅದನ್ನು ಕುಡಿಯುತ್ತಾರೆ? ಹಾಲು ಕುಡಿಯದ ಮಕ್ಕಳು ಹೇಗೆ ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಾರೆ? ಇವೆಲ್ಲ ಹೇಗೆ ಸರಣಿ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂಬುದನ್ನೆಲ್ಲ ವಿವರಿಸಿದರಂತೆ. ಇದಕ್ಕೆ ತಲೆದೂಗಿದ ಸಚಿವರು ಯೋಜನೆಯನ್ನೇ ರದ್ದು ಮಾಡಿದರಂತೆ. ಈಗಲೂ ನಮ್ಮೂರಿನ ಹಳೆಯ ತಲೆಗಳು ನಾಗಪ್ಪಯ್ಯನವರ ಇಂಥ ಸಾಹಸಗಳನ್ನು ನೆನಪಿಸಿಕೊಳ್ಳುತ್ತಾರೆ. ಒಂದು ಬಾರಿ ನಮ್ಮೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿದ್ದ ವೈದ್ಯರು ರೋಗಿಯೊಬ್ಬನನ್ನು ನೋಡಲು ಮನೆಗೆ ಬರುವುದಕ್ಕೆ ನಿರಾಕರಿಸಿದರಂತೆ. ಆ ವೈದ್ಯರ ವಿರುದ್ಧ ಸ್ಥಳೀಯ ಪತ್ರಿಕೆಯೊಂದರಲ್ಲಿ ಒಂದು ವರದಿ ಪ್ರಕಟವಾಯಿತು. ಆರೋಗ್ಯ ಕೇಂದ್ರದಲ್ಲಿ ನರ್ಸ್ ಜೊತೆ ಕೊಮಣಿ ಮಾಡುತ್ತಿದ್ದ ವೈದ್ಯರಿಗೆ ರೋಗಿಯನ್ನು ನೋಡುವುದಕ್ಕೆ ಬರಲು ಪುರುಸೊತ್ತಿಲ್ಲವಂತೆ ಎಂಬುದು ವರದಿಯ ಸಾರಾಂಶ. ವೈದ್ಯನಿಗೆ ಮೇಲಧಿಕಾರಿಗಳಿಂದ ವಿವರಣೆ ಕೇಳಿ ನೋಟಿಸಿನ ಮೇಲೆ ನೋಟಿಸು. ಈ ಸುದ್ದಿಯ ಹಿಂದೆ ನಾಗಪ್ಪಯ್ಯನವರ ಕೈವಾಡವಿದೆ ಎಂಬುದು ವೈದ್ಯನ ಬಲವಾದ ನಂಬಿಕೆಯಾಗಿತ್ತು. ದೇವರು ದಿಂಡರನ್ನು ನಾಗಪ್ಪಯ್ಯ ನಂಬುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಮೌಢ್ಯಕ್ಕೆ ಮಣೆಹಾಕುತ್ತಿರಲಿಲ್ಲ. ಯಾವುದನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿರಲಿಲ್ಲ. ತಮ್ಮ ವಿದ್ಯೆ, ಹಿಕ್ಮತ್ತುಗಳಿಂದ ಊರಲ್ಲಿ ಒಂದು ಸ್ಥಾನವನ್ನು ಗಳಿಸಿಕೊಂಡಿದ್ದ ಅವರಿಗೆ ಒಳಗೊಳಗೇ ಶತ್ರುಗಳೂ ಇದ್ದರು. ತಮ್ಮನ್ನು ಮುಂದೆಂದಾದರೂ ಯಾವುದಾದರೂ ಕೇಸಲ್ಲಿ ಸಿಕ್ಕಿಸಿಹಾಕಬಹುದು ಎಂಬ ಭಯದಿಂದ ಅವರ ವಿರೋಧಿಗಳೂ ಸೊಲ್ಲೆತ್ತುತ್ತಿರಲಿಲ್ಲ. ಹೀಗಿರುತ್ತ ನಮ್ಮೂರಿನ ಮಾಸ್ತಿಮನೆಯಲ್ಲಿ ಮೂರ್ತಿಗಳ ಪುನರ್ಪ್ರತಿಷ್ಠಾಪನೆ ಮತ್ತು ಕಲಾವೃದ್ಧಿ ಕಾರ್ಯಕ್ರಮವನ್ನು ಊರವರು ಹಮ್ಮಿಕೊಂಡಿದ್ದರು. ಪೂಜೆಯ ದಿನ ತುಂಬ ಜನ ಸೇರಿದ್ದರು. ಊರವರೆಲ್ಲ ಮಾಸ್ತಿ ಮನೆಯ ಪೂಜಾರಿಗೆ ದೇವರನ್ನು ಯಾರದಾದರೂ ಮೈಮೇಲೆ ಬರಿಸು ಎಂದು ಒತ್ತಾಯ ಮಾಡತೊಡಗಿದರು. ಮೈಮೇಲೆ ದೇವರು ಬರುವುದು ಇತ್ಯಾದಿಯೆಲ್ಲ ಮೂಢನಂಬಿಕೆ ಎಂದು ನಂಬಿದವರು ನಾಗಪ್ಪಯ್ಯ. ನನ್ನ ಮೈಮೇಲೆ ದೇವರು ಬರುವ ಹಾಗೆ ಮಾಡಿ ಎಂದು ಅವರು ಪೂಜಾರಿಗೆ ಕೇಳಿದರು. ಊರ ಜನರೆಲ್ಲ ಹಾಗೇ ಮಾಡಿ ಎಂದರು. ಪೂಜಾರಿ ಅಡಕೆ ಮರದ ಸಿಂಗಾರವನ್ನು ನಾಗಪ್ಪಯ್ಯನವರ ಕೈಯಲ್ಲಿ ಕೊಟ್ಟು ತೀರ್ಥವನ್ನು ಅವರ ಮೈಮೇಲೆ ಚಿಮುಕಿಸಿ ದೊಡ್ಡ ಧ್ವನಿಯಲ್ಲಿ ಹೇಳಿಕೆ ಮಾಡಿಕೊಂಡರು. ಚೌಡಮ್ಮನನ್ನು ನಾಗಪ್ಪಯ್ಯನವರ ಮೈಮೇಲೆ ಆವಾಹಿಸಬೇಕೆಂಬ ಪೂಜಾರಿಯ ಪ್ರಯತ್ನ ಫಲಿಸಲೇ ಇಲ್ಲ. ಅಕ್ಕಿಕಾಳನ್ನು ಅವರ ಮೇಲೆ ಜೋರಾಗಿ ಎಸೆದು ಸ್ವಲ್ಪವಾದರೂ ಮೈ ಅಲುಗುತ್ತದೆಯೋ ನೋಡೋಣ ಎಂದು ಆತ ಪ್ರಯತ್ನಿಸಿದ. ಸ್ವಲ್ಪವೇನಾದರೂ ಅಲುಗಾಡಿದ್ದರೂ ದೇವಿ ಮೈಮೇಲೆ ಬಂತು ಎಂದು ಆತ ಸಂಭ್ರಮಿಸುತ್ತಿದ್ದ. ಹಾಗೇನೂ ಆಗದೆ ಇದ್ದಾಗ ಪೂಜಾರಿ ಜನರ ಕಡೆ ನೋಡಿದ. ಗುಂಪಿನಿಂದ ಲೇಶಯ್ಯ ಮುಂದೆ ಬಂದ. ಸ್ನಾನ ಮಾಡಿದ್ದೇನಯ್ಯ ಎಂದು ಪೂಜಾರಿ ಕೇಳಿದ. ಆತ ಹೌದು ಎಂದ ಮೇಲೆ ಆತನ ಕೈಯಲ್ಲಿ ಸಿಂಗಾರವನ್ನು ಕೊಟ್ಟು ತೀರ್ಥ ಪ್ರೋಕ್ಷಣೆ ಮಾಡುತ್ತಿದ್ದಂತೆ ಲೇಶಯ್ಯನ ಮೈ ನಡುಗತೊಡಗಿತು. ನಿಂತಲ್ಲೇ ಆತ ಹಿಂದಕ್ಕೂ ಮುಂದಕ್ಕೂ ತನ್ನ ದೇಹವನ್ನು ತೂಗತೊಡಗಿದ. ಆತನ ಮೈಮೇಲೆ ದೇವಿ ಬಂದಿದ್ದಾಳೆ ಎಂದು ಪೂಜಾರಿ ಘೋಷಿಸಿದ. ಲೇಶಯ್ಯ ಏನೇನೋ ಬಡಬಡಿಸತೊಡಗಿದ. ಪೂಜೆಯಲ್ಲಿ, ಸೇವೆಯಲ್ಲಿ ಏನಾದರೂ ಲೋಪ ಇದ್ದರೂ ತಪ್ಪು ಮನ್ನಿಸಿ ಒಪ್ಪಿಕೊಳ್ಳೇ ದೇವಿ ಎಂದು ಪೂಜಾರಿ ಹೇಳತೊಡಗಿದ. ಆಯಿತು ಮಗನೆ, ಎಲ್ಲ ಒಳ್ಳೆಯದಾಗುತ್ತದೆ ಎಂದು ಆಶೀರ್ವದಿಸಿದ. ಜನರೆಲ್ಲ ದೇವಿ ಬಂದ ಲೇಶಯ್ಯನಿಗೆ ನಮಸ್ಕಾರ ಮಾಡತೊಡಗಿದರು. ಮಗನೆ, ನಾನು ಯಾರಯಾರದೋ ಮೈಯಲ್ಲಿ ಆವಾಹನೆಗೊಳ್ಳುವುದಿಲ್ಲ ಮಗನೆ. ಪಾತ್ರ ಶುದ್ಧ ಇರಬೇಕು, ನಿಯತ್ತು ಖೋಟಾ ಇರಬಾರದು. ಯಾರಯಾರದೋ ಮೈಯಲ್ಲಿ ಬಾ ಎಂದರೆ ಹೇಗೆ ಬರಲಿ ಮಗನೆ ಎಂದು ಲೇಶಯ್ಯ ಹೇಳತೊಡಗಿದ. ತಪ್ಪಾಯಿತು ತಾಯಿ, ಕ್ಷಮಿಸು ಇನ್ನೆಂದೂ ಹಾಗೆ ಮಾಡುವುದಿಲ್ಲ ಎಂದ ಪೂಜಾರಿ. ನಾಗಪ್ಪಯ್ಯಗೆ ಮುಖಭಂಗವಾದಂತೆ ಆಯಿತು. ತನ್ನ ಪಾತ್ರದ ಬಗ್ಗೆ ಈ ಲೇಶಯ್ಯ ಮಾತನಾಡಿದನಲ್ಲ ಎಂದು ಕಟಕಟನೆ ಹಲ್ಲು ಕಡಿದರು. ಆದರೆ ಏನೂ ಮಾಡುವಂತೆ ಇರಲಿಲ್ಲ. ಲೇಶಯ್ಯನ ವಿರುದ್ಧ ನಾಗಪ್ಪಯ್ಯ ಹಿಂದೊಮ್ಮೆ ತಳ್ಳಿ ಅರ್ಜಿ ಬರೆದು ಪೊಲೀಸ್ಠಾಣೆಗೆ ಅಲೆಯುವ ಹಾಗೆ ಮಾಡಿದ್ದರು. ಲೇಶಯ್ಯ ಈ ರೀತಿಯಲ್ಲಿ ತನ್ನ ಸೇಡು ತೀರಿಸಿಕೊಂಡಿದ್ದ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.