*ನಂಬಿದವರಿಗೆ ದ್ರೋಹ ಬಗೆಯುವುದು
ನಮಕ್ ಅಂದರೆ ಹಿಂದಿಯಲ್ಲಿ ಉಪ್ಪು ಎಂಬ ಅರ್ಥ. ನಮಕ್ ಹರಾಮ್ ಎಂದರೆ ನಂಬಿಕೆ ದ್ರೋಹಿ ಎಂಬ ಅರ್ಥ. ಹಿಂದಿಯಲ್ಲಿ ಇದೊಂದು ಸಾಮಾನ್ಯ ಬೈಗುಳ. ಹಿಂದಿ ಭಾಷೆಯ, ಹಿಂದಿ ಸಿನಿಮಾಗಳ ಪ್ರಭಾವದಿಂದ ಕನ್ನಡದಲ್ಲೂ ಇದು ಇಂದು ವ್ಯಾಪಕವಾಗಿ ಬಳಕೆಯಾಗುತ್ತಿದೆ.
ಉಂಡ ಮನೆಗೆ ದ್ರೋಹ ಬಗೆದ, ಉಂಡ ಮನೆ ಗಳ ಎಣಿಸಿದ, ಬೆನ್ನಲ್ಲಿ ಚೂರಿ ಹಾಕಿದ ಎನ್ನುವುದೂ ಇದೇ ಅರ್ಥವನ್ನು ನೀಡುತ್ತದೆ.
ನಮಕ್ ಹಲಾಲ್ ಎಂಬ ಮಾತೂ ಇದೆ. ಹಲಾಲ್ ಎಂದರೆ ಮುಸ್ಲಿಂ ಧರ್ಮದಲ್ಲಿ ಸೇವಿಸಬಹುದು ಎಂದು ಸೂಚಿಸಿರುವ ಆಹಾರಗಳು. ಹರಾಮ್ ಎಂದರೆ ಈ ಸೂಚಿತ ಆಹಾರವನ್ನು ಬಿಟ್ಟು ನಿಯಮ ಉಲ್ಲಂಘಿಸಿ ತಿನ್ನುವುದು. ಅಂದರೆ ಧರ್ಮಭ್ರಷ್ಟ ಎಂದರ್ಥ.
ಉಪ್ಪಿಲ್ಲದ ಅಡುಗೆ ಇಲ್ಲ. ಉಪ್ಪು ಹಾಕದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ. ಉಪ್ಪು ತಿಂದ ಮನೆಗೆ ದ್ರೋಹ ಬಗೆಯುವುದು ಎಂದರೆ ಮಹಾ ಅಪರಾಧ ಎನ್ನುವ ಭಾವನೆ ನಮ್ಮ ಸಂಸ್ಕೃತಿಯಲ್ಲಿದೆ. ಅನ್ನವಿಟ್ಟ ದಣಿಗೆ ದ್ರೋಹ ಬಗೆಯಬಾರದು ಎಂಬ ಅರಿವು ಬಹು ದೊಡ್ಡದು. ಅನ್ನದ ಋಣಕ್ಕೆ ಮಿಗಿಲಾದ ಋಣ ಬೇರೊಂದಿಲ್ಲ ಎಂದು ಹೇಳುತ್ತಾರೆ.
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂಬ ಮಾತಿದೆ. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎಂಬ ತಾತ್ಪರ್ಯ ಇಲ್ಲಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.