ಮನುಷ್ಯನ ವ್ಯಾವಹಾರಿಕ ಕ್ಷೇತ್ರ ದೊಡ್ಡದಾದಂತೆ ಆತನ ಸಂಪರ್ಕಗಳು ಹೆಚ್ಚುತ್ತವೆ. ಅದಕ್ಕಾಗಿ ಆತನ ಸಂವಹನದ ಕ್ಷಮತೆ ಹೆಚ್ಚಬೇಕಾಗುತ್ತದೆ. ಇದಕ್ಕಾಗಿ ಬೇರೆಬೇರೆ ಭಾಷೆಗಳನ್ನು ಕಲಿಯುವುದು, ತನ್ನ ಭಾಷೆಯಲ್ಲಿಲ್ಲದ ಆ ಭಾಷೆಯ ಪದಗಳನ್ನು ತನ್ನ ಭಾಷೆಗೆ ತರುವುದು ಇವೆಲ್ಲ ಮಾಡಬೇಕಾಗುತ್ತದೆ. ಬ್ರಿಟಿಷರು ನಮ್ಮ ದೇಶವನ್ನು ಎರಡು ಶತಮಾನಗಳ ಕಾಲ ಆಳಿದ್ದರಿಂದ ಇಂಗ್ಲಿಷ್ ಈ ದೇಶದಲ್ಲಿ ಸಂಪರ್ಕ ಭಾಷೆಯಾಗಿದೆ. ಹೀಗಾಗಿ ಆ ಭಾಷೆಯ ಹಲವು ಪದಗಳನ್ನು ನಮ್ಮ ಭಾಷೆಗೆ ಹೊಂದುವಂತೆ ಪರಿವರ್ತಿಸಿ ಬಳಸಲಾಗುತ್ತಿದೆ. ಅಂಥ ಪದಗಳಲ್ಲಿ ಒಂದು ರೌಡ್ ಟೇಬಲ್ ಕಾನ್ಫರೆನ್ಸ್.
ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭಾರತದಲ್ಲಿ ನಾಗರಿಕರಿಗೆ ಉತ್ತಮ ಆಡಳಿತವನ್ನು ನೀಡುವ ಉದ್ದೇಶದಿಂದ ಯಾವ ಬದಲಾವಣೆಗಳನ್ನು ತರಬೇಕು ಎಂದು ಅಭಿಪ್ರಾಯ ಸಂಗ್ರಹಕ್ಕೆ ಬ್ರಿಟಿಷರು ಇಂಗ್ಲೆಂಡಿನಲ್ಲಿ ಭಾರತದ ಎಲ್ಲ ಪ್ರಮುಖ ನಾಯಕರ ಸಭೆ ಕರೆದಿದ್ದರು. ಇದಕ್ಕೆ ಅವರು ರೌಂಡ್ ಟೇಬಲ್ ಕಾನ್ಫರೆನ್ಸ್ ಎಂದು ಕರೆದಿದ್ದರು. ಇದನ್ನು ಕನ್ನಡಕ್ಕೆ ತರುವಾಗ ರೌಂಡ್ ಎಂದರೆ ದುಂಡಾಗಿರುವುದ ಟೇಬಲ್ ಅಂದರೆ ಮೇಜು ಹಾಗೂ ಕಾನ್ಫರೆನ್ಸ್ ಎಂದರೆ ಪರಿಷತ್ತು ಎಂದು ಅನುವಾದ ಮಾಡಿ ದುಂಡು ಮೇಜಿನ ಪರಿಷತ್ತು ಎಂಬ ಪದವನ್ನು ಸೃಷ್ಟಿಸಲಾಯಿತು. ಈ ಪದ ಬಳಕೆ ಮೊದಲು ಪತ್ರಿಕೆಗಳಿಂದ ಪ್ರಾರಂಭವಾಯಿತು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.