*ಇವರನ್ನು ಊಸರವಳ್ಳಿ ಎಂದೂ ಕರೆಯುತ್ತಾರೆ
ಕೆಲವರನ್ನು ಗೋಸುಂಬೆ ಅಂತಲೋ ಊಸರವಳ್ಳಿ ಅಂತಲೋ ಕರಯುತ್ತೇವೆ. ಮಾತಿಗೊಮ್ಮೆ ಬಣ್ಣ ಬದಲಾಯಿಸುತ್ತಾನೆ ಎಂದು ತಿವಿಯುತ್ತೇವೆ. ಗೋಸುಂಬೆ ಎಂದು ಕರೆಯುವುದರಲ್ಲಿ ಏನಿದೆ ವಿಶೇಷ?
ಗೋಸುಂಬೆ ಓತಿಯಂಥ ಪ್ರಾಣಿ. ಸದಾ ಗಿಡಮರಗಳ ಮೇಲೆ ಇರುವಂಥದ್ದು. ಶತ್ರುಗಳಿಂದ ರಕ್ಷಣೆ ಪಡೆಯಲು ತನ್ನ ಚರ್ಮದ ಬಣ್ಣವನ್ನು ಬದಲಾಯಿಸುವ ನಿಸರ್ಗ ಸಹಜವಾದ ಶಕ್ತಿಯನ್ನು ಅದು ಪಡೆದುಕೊಂಡಿದೆ. ಹಸಿರು ಎಲೆಗಳ ನಡುವೆ ಅದು ತನ್ನ ಮೈಬಣ್ಣವನ್ನು ಹಸಿರನ್ನಾಗಿ ಮಾಡಿಕೊಳ್ಳಬಹುದು. ಮರದ ಕಾಂಡದ ಮೇಲೆ ಇದ್ದಾಗ ಅದರ ಬಣ್ಣವನ್ನೇ ತಾನು ಪಡೆಯಬಲ್ಲುದು. ಇದರಿಂದ ಇತರ ಪ್ರಾಣಿಗಳು ಅದನ್ನು ಸುಲಭವಾಗಿ ಗುರುತಿಸಿ ಬೇಟೆಯಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಶಕ್ತಿಯಿಂದಾಗಿಯೇ ಇತರ ಪ್ರಾಣಿಗಳು ಅದನ್ನು ಸುಲಭವಾಗಿ ಗುರುತಿಸಿ ಬೇಟೆಯಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಶಕ್ತಿಯಿಂದಾಗಿಯೇ ಇತರ ಪ್ರಾಣಿಗಳನ್ನು ಅದು ಸುಲಭವಾಗಿ ಬೇಟೆಯಾಡಬಲ್ಲುದು.
ಮನುಷ್ಯರು ಕೂಡ ಅನೇಕ ವೇಳೆ ಮಳೆಯಲ್ಲಿ ಗಾಳಿ ಬಂದ ದಿಕ್ಕಿಗೆ ಕೊಡೆಯನ್ನು ತಿರುಗಿಸಿ ರಕ್ಷಣೆ ಪಡೆದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಸಮಯ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ಹೇಳಿಕೆಗಳನ್ನು, ಬದುಕಿನ ಶೈಲಿಯನ್ನು ಬದಲಿಸುತ್ತಾ ಹೋಗುತ್ತಾರೆ, ನಿರ್ದಿಷ್ಟ ನಿಲುವು ಎನ್ನುವುದು ಅವರಿಗೆ ಇರುವುದಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವವರಂತೆ ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುತ್ತಾರೆ. ಬಣ್ಣ ಬದಲಿಸುವ ಗೋಸುಂಬೆಗೂ ಇವರಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.