*ಸೋಲನ್ನು ಒಪ್ಪಿಕೊಳ್ಳಲಾಗದ ದೊಡ್ಡಸ್ಥಿಕೆ ಇದು
ಒಬ್ಬ ಜಟ್ಟಿ ಇದ್ದನಂತೆ. ಕುಸ್ತಿ ನಡೆಯಿತು. ಎದುರಾಳಿ ಅವನನ್ನು ಎತ್ತಿ ಒಗೆದು ಚಿತ್ ಮಾಡಿಬಿಟ್ಟ. ಅಖಾಡಾದಿಂದ ಹೊರಕ್ಕೆ ಬಂದ ಸೋತ ಜಟ್ಟಿ, ನನ್ನನ್ನೇನೋ ಅವನು ಕೆಳಕ್ಕೆ ಹಾಕಿದ. ಆದರೆ ನನ್ನ ಮೀಸೆಗೆ ಮಾತ್ರ ಮಣ್ಣು ಹತ್ತಲಿಲ್ಲ ಎಂದು ತನ್ನ ಪೊಗದಸ್ತಾದ ಮೀಸೆಯ ಮೇಲೆ ಕೈಯಾಡಿಸಿಕೊಂಡನಂತೆ.
ರಾಜಕಾರಣಿಗಳು ಚುನಾವಣೆಯ ಫಲಿತಾಂಶ ಬಂದ ಬಳಿಕ ತಮ್ಮ ಸೋಲನ್ನು ವಿಶ್ಲೇಷಿಸುವುದನ್ನು ಕೇಳಿದಾಗ ಈ ಮಾತು ನೆನಪಾಗುತ್ತದೆ. ತಮಗೆ ಸ್ಥಾನಗಳು ಕಡಿಮೆ ಬಂದಿವೆ ನಿಜ, ಆದರೆ ಪಡೆದ ಮತಗಳ ಶೇಕಡಾವಾರು ಪ್ರಮಾಣ ಹೆಚ್ಚಿದೆ. ಒಂದು ಜಾತಿ ವರ್ಗದವರಲ್ಲಿ ತಮ್ಮ ಪಕ್ಷದ ಜನಪ್ರಿಯತೆ ಹೆಚ್ಚಿದೆ, ಯಾವುದೋ ಒಂದು ಪ್ರದೇಶದಲ್ಲಿ ಪಕ್ಷದ ಬೇರುಗಳು ಗಟ್ಟಿಯಾಗಿವೆ ಎಂದೆಲ್ಲ ಹೇಳಿಕೆ ನೀಡುತ್ತಾರೆ.
ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರದಲ್ಲೂ ಸೋಲನ್ನು ಸ್ವೀಕರಿಸದ ಪ್ರಭೃತಿಗಳು ಇದ್ದಾರೆ. ಸೋಲು ಯಾರಿಗೂ ಪ್ರಿಯವಲ್ಲ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.