*ಷಡ್ಯಂತ್ರಗಳಿಗೆ ಭಗವಂತನ ಸಂಬಂಧ
ಇಬ್ಬರು ಏನನ್ನೋ ಗುಟ್ಟಾಗಿ ಮಾತನಾಡುತ್ತಿದ್ದರೆ ಅದೇನು ಕಾರಸ್ಥಾನ ನಡೆಸುತ್ತಿದ್ದೀರಿ ಎಂದು ಕೇಳುತ್ತೇವೆ. ಕಾರಸ್ಥಾನ ಎಂದರೆ ಒಳಸಂಚು, ಕುಟಿಲ ನೀತಿ ಎಂಬ ಅರ್ಥ. ನಮ್ಮ ಪುರಾಣಪುರುಷ ಶ್ರೀಕೃಷ್ಣ ಇಂಥ ಕುಟಿಲ ನೀತಿಯಲ್ಲಿ ಎತ್ತಿದ ಕೈ. ರಾಜಕಾರಣದಲ್ಲಿ ಶ್ರೀಕೃಷ್ಣನಂಥ ಚಾಣಾಕ್ಷ ಮತ್ತೊಬ್ಬನನ್ನು ನಾವು ಕಾಣುವುದಿಲ್ಲ. ಭೂಮಿಯ ಮೇಲೆ ಜನಿಸುವಾಗಲೇ ತನ್ನ ಕಾರಸ್ಥಾನ ತೋರಿಸಿದ್ದಾನೆ. ಎಷ್ಟೆಂದರೂ ಭಗವಂತನಲ್ಲವೆ ಆತ.
ಜರಾಸಂಧನ ವಿರುದ್ಧ ಯುದ್ಧ ಮಾಡುವಾಗ, ಪಾಂಡವರ ಪಕ್ಷವನ್ನು ವಹಿಸಿದಾಗ ಹೀಗೆ ಎಲ್ಲಿ ನೋಡಿದರೂ ಕೃಷ್ಣನ ರಾಜಕೀಯ ಮುತ್ಸದ್ಧಿತನ ಎದ್ದುತೋರುತ್ತದೆ. ಇಡೀ ದ್ವಾಪರ ಯುಗದ ರಾಜಕೀಯವೇ ಕೃಷ್ಣ ನೀತಿಯಿಂದ ತುಂಬಿ ತುಳುಕಿದೆ.
ಸಾಮ ದಾನ ಭೇದ ದಂಡ ನೀತಿಗಳನ್ನೆಲ್ಲ ಪರಿಣಾಮಕಾರಿಯಾಗಿ ಬಳಸಿ ಯಶಸ್ವಿಯಾದವನು ಕೃಷ್ಣ. ಕೃಷ್ಣ ಕಾರಸ್ಥಾನದ ಮುಂದೆ ಶಕುನಿ ತಂತ್ರಗಳೆಲ್ಲ ವಿಫಲವಾಗಿ ಹೋಯಿತು.
ಕೃಷ್ಣನ ಕಾರಸ್ಥಾನವೆಲ್ಲ ಧರ್ಮದ ವಿಜಯಕ್ಕೆ ದಾರಿ ಮಾಡುವುದಾಗಿತ್ತು. ಆದರೆ ಇಂದು ಕಾರಸ್ಥಾನ ಎಂದರೆ ಒಳ್ಳೆಯ ಅರ್ಥದಲ್ಲಿ ಬಳಕೆಯಾಗುತ್ತಿಲ್ಲ. ಯಾರನ್ನೋ ನಾಶಮಾಡುವ ದುಷ್ಟ ಪ್ರಯತ್ನ ನಡೆಸಿದ್ದಾರೆ ಎಂಬ ಅರ್ಥವನ್ನು ಇದು ಸೂಚಿಸುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.