*ಬಹಳ ಅವಸರ ಮಾಡುವ ವ್ಯಕ್ತಿ
ಬಹಳ ಅವಸರ ಮಾಡುವ, ದರ್ಪ ತೋರುವ ವ್ಯಕ್ತಿಯನ್ನು ನೋಡಿದಾಗ, `ಏನು, ಕುದುರೆ ಮೇಲೆ ಬಂದವನ ಹಾಗೆ ಮಾಡ್ತಾ ಇದ್ದೀಯಲ್ಲೋ, ಸ್ವಲ್ಪ ತಡ್ಕೋ' ಎಂದು ಹೇಳುವುದನ್ನು ಕೇಳಿದ್ದೇವೆ. ನಾವೇ ಎಷ್ಟೋ ಸಲ ಇದನ್ನು ಬಳಸಿರಬಹುದು. ಮಾವನ ಮನೆಗೆ ಬಂದ ಅಳಿಯ ತಿರುಗಿ ಹೋಗಲು ಗಡಿಬಿಡಿ ಮಾಡತೊಡಗಿದರೆ,
ಕುದುರೆ ಕಟ್ಟಿಹಾಕಿ ಬಂದೆಯೋ ಇಲ್ಲ ಹಾಗೇ ಬಿಟ್ಟು ಇಟ್ಟಿದ್ದೀಯೋ’ ಎಂದು ಹೇಳುವುದನ್ನೂ ಕೇಳಿರಬಹುದು.
ಬಸ್ಸು, ಕಾರುಗಳು ಇಲ್ಲದ ಕಾಲದಲ್ಲಿ ಕುದುರೆಯೇ ಬಹಳ ವೇಗದ ಸಂಚಾರ ವ್ಯವಸ್ಥೆಯಾಗಿತ್ತು. ಕುದುರೆಯ ಮೇಲೆ ಬರುವವರು ಸಾಮಾನ್ಯರಂತೂ ಅಲ್ಲವೇ ಅಲ್ಲ. ರಾಜನ ದೂತರೋ ಅಮಲು ಜಾರಿ ಮಾಡುವವರೋ ಬರುತ್ತಾರೆ. ಕುದುರೆ ಮೇಲೆ ಬಂದವರು ಎಂದ ಮೇಲೆ ಅದಕ್ಕೆ ತಕ್ಕಾಗಿ ದರ್ಪವನ್ನೂ ಅವರು ತೋರಿಸುತ್ತಾರೆ. ದಂಡನೆಯ ಅಧಿಕಾರ ತಮ್ಮಲ್ಲೇ ಇದೆ ಎನ್ನುವಂತೆ ವರ್ತಿಸುತ್ತಾರೆ ಅವರು.
ಸಾಮಾನ್ಯ ಜನರು ದಂಡನೆಯ ಅಧಿಕಾರ ತಮ್ಮಲ್ಲೇ ಇದೆ ಎಂದು ತೋರಿಸಿದಾಗ ಅಂಥವರಿಗೆ ಕುದುರೆ ಮೇಲೆ ಬಂದವನಂತೆ ಮಾಡುತ್ತಾನೆ ಎಂದು ಹೇಳುತ್ತಾರೆ.
ಕುದುರೆ ಸಂಚಾರದ ಸಾಧನವಾಗಿ ಇಂದು ಇಲ್ಲದಿದ್ದರೂ, ರಾಜಾಧಿರಾಜರ ಕಾಲ ಮುಗಿದು ಹೋಗಿದ್ದರೂ ಆ ಕಾಲದ ನುಡಿಗಟ್ಟು ಮಾತ್ರ ಇಂದಿಗೂ ಉಳಿದುಕೊಂಡು ಬಂದಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.