*ಸುಗ್ರೀವನ ರಾಜ್ಯ ಇಕ್ಕಟ್ಟಿನ ದಟ್ಟಣೆಗೆ ರೂಪಕ
ಬಹಳ ಇಕ್ಕಟ್ಟಾದ ಪ್ರದೇಶವನ್ನು ಕಿಷ್ಕಿಂದೆ ಎಂದು ಕರೆಯುವುದಿದೆ. ಚಿಕ್ಕ ಹಾಲ್, ಒಂದೇ ಬೆಡ್ರೂಂ, ಅಲ್ಲೇ ಬಾತ್ರೂಂ, ಸಂಡಾಸ್ ಎಲ್ಲವೂ. ಒಬ್ಬರು ಒಳಗೆ ಬಂದರೆ ಇಬ್ಬರು ಹೊರಗೆ ಹೋಗಬೇಕು ಎಂಬಂಥ ಸ್ಥಿತಿ ಇರುವ ಮನೆಯನ್ನು ಕಂಡಾಗಲೂ ಅದೊಂದು ಕಿಷ್ಕಿಂದೆ, ಹೇಗೆ ಉಳಿಯುತ್ತಾರೋ ಅದರಲ್ಲಿ ಎಂದು ಮೂಗೆಳೆಯುವವರು ಇದ್ದಾರೆ.
ಏನಿದು ಕಿಷ್ಕಿಂದೆ? ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಗೊತ್ತಲ್ಲವೆ? ಅವರ ರಾಜಧಾನಿಯೇ ಈ ಕಿಷ್ಕಿಂದೆ. ಇಕ್ಕಟ್ಟಾದ ಕಣಿವೆಗಳು, ಏರಲಸಾಧ್ಯವಾದ ಇಳಿಜಾರಿನ ಗುಡ್ಡಗಳು, ಗುಹೆಗಳು, ಭಾರೀ ಗಾತ್ರದ ಶಿಲೆಗಳು ಹೀಗೆ ಮನುಷ್ಯ ಮಾತ್ರದವರಿಗೆ ಸಹ್ಯವಾಗದ ತಾಣ.
ಕಪಿಗಳ ವಾಸಕ್ಕೆ ಸೂಕ್ತವಾದ ಪ್ರದೇಶ ಅದು. ಏಕೆಂದರೆ ಜನರು ಅಲ್ಲಿಗೆ ಬರುವುದು ವಿರಳ. ಶತ್ರು ದಾಳಿಯಾದರೆ ಮರದಿಂದ ಮರಕ್ಕೆ ಜಿಗಿದು, ಶಿಲೆಯಿಂದ ಶಿಲೆಗೆ ಕುಪ್ಪಳಿಸಿ ತಪ್ಪಿಸಿಕೊಳ್ಳಬಹುದು. ಕಿಷ್ಕಿಂದೆಯ ವರ್ಣನೆಯನ್ನು ಮಹಾಕವಿ ವಾಲ್ಮೀಕಿ ತುಂಬ ಸುಂದರವಾಗಿ ಮಾಡಿದ್ದಾರೆ. ರಾಮಾಯಣದ ಪ್ರಭಾವದಿಂದ ಜನಸಾಮಾನ್ಯರ ಬಾಯಲ್ಲೂ ಉಪಮೆಯ ರೂಪದಲ್ಲಿ ಕಿಷ್ಕಿಂದೆ ಚಲಾವಣೆಗೆ ಬಂದಿದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.