*ಯಾಮಾರಿಸುವುದು

ಯಾರನ್ನಾದರೂ ಪುಸಲಾಯಿಸಿ ಕೆಲಸ ಮಾಡಿಸಿಕೊಳ್ಳಲು ಯತ್ನಿಸಿದಾಗ, `ಏನ್‌ ನನ್ನ ಕಿವಿಲಿ ಹೂ ಇಡ್ತಿಯಾ?' ಎಂದು ಹೇಳುವುದಿದೆ. ಇರುವುದೊಂದು ಹೇಳುವುದೊಂದು. ಹಾಗೆ ಹೇಳಿ ಯಾಮಾರಿಸಲು ನೋಡುವವರಿಗೂ ಇದೇ ಮಾತು ಹೇಳುತ್ತಾರೆ.ನಾವೇನು ಕಿವಿಯಲ್ಲಿ ಹೂವಿಟ್ಟುಕೊಂಡು ಕುಳಿತಿದ್ದೇವಾ?’ ಎಂದು ಹೇಳುವುದನ್ನೂ ಕೇಳಿರುತ್ತೀರಿ.
ಕಿವಿಯಲ್ಲಿ ಯಾರು ಹೂವು ಇಟ್ಟುಕೊಳ್ಳುವವರು? ದೇವಸ್ಥಾನದಲ್ಲಿ ಕೊಡುವ ಪ್ರಸಾದ ರೂಪದ ಹೂವನ್ನು ಭಕ್ತರು ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಕಿವಿಯಲ್ಲಿ ಇರುವ ಹೂವನ್ನು ನೋಡಿದ ಕೂಡಲೆ ಆತನನ್ನು ಪರಮ ದೈವಭಕ್ತ ಎಂದು ನಿರ್ಧರಿಸಿಬಿಡುವವರು ಇದ್ದಾರೆ. ಕಿವಿಯಲ್ಲಿ ಹೂವಿಟ್ಟುಕೊಳ್ಳುವವರೆಲ್ಲರೂ ನಿಜವಾದ ಭಕ್ತರಾಗಿರುವುದಿಲ್ಲ. ಅದೊಂದು ರೀತಿಯ ಡಾಂಬಿಕ ಭಕ್ತಿ.
ಕಿವಿಯಲ್ಲಿ ಹೂವಿಟ್ಟುಕೊಳ್ಳುವವರು ಒಂದು ರೀತಿಯಲ್ಲಿ ಬೋಳೆ ಅಂದರೆ ಸಾಧು ಪ್ರಾಣಿ. ಸುಲಭವಾಗಿ ಮೋಸಹೋಗುವಂಥ ವ್ಯಕ್ತಿ ಎಂಬ ವಿವರಣೆಯೂ ಇದೆ. ಹೀಗಿದ್ದಾಗ ಕಿವಿಯಲ್ಲಿ ಹೂವಿರಿಸಿಕೊಳ್ಳಲು ಯಾರು ಇಷ್ಟಪಡುತ್ತಾರೆ ಹೇಳಿ?
ತುಂಬಾ ಯಾಮಾರಿಸುವವರನ್ನು ನೋಡಿದಾಗ, `ಎಲ್ಲರೂ ಕಿವಿಯಲ್ಲಿ ಹೂವು ಇಟ್ಟರೆ ನೀನು ಗಾರ್ಡನನ್ನೇ ತಂದು ಇಡುವ ಹಾಗೆ ಕಾಣ್ತಿದೆ’ ಎಂದು ಹೇಳುವ ಮಾತೂ ಪ್ರಚಲಿತದಲ್ಲಿದೆ.