ಕವನ ಬರೆಯುವುದು ಸುಲಭವಲ್ಲ ಗೆಳೆಯ
ಕವನಕ್ಕಾಗಿ ನೀ ಕಾಯಬೇಕು
ಕುದಿಯಬೇಕು ಉಕ್ಕಬೇಕು ಆವಿಯಾಗಬೇಕು
ಆರ್ದ್ರವಾಗಿ ಹನಿಯಬೇಕು
ಅದು ನೆಲ ಸೇರಬೇಕು ಬೀಜವ ನೆನೆಸ ಬೇಕು
ಸಸಿಯೊಂದು ಭೂ ಬಸಿರ ಬಗೆದು
ಹೊರ ಹೊಮ್ಮಿದಾಗ ಅದು
ನಿನ್ನ
ಕವನ
ಗೆಳೆಯ

ಕವನ ಬರೆಯುವುದು ಸುಲಭವಲ್ಲ ಗೆಳೆಯ
ಕವನಿಸುವ ಬೆದೆ ಹದವಾಗಿ ಇರಬೇಕು
ಬೆದೆ ಸಮಯಕ್ಕೆ ಕಾಯಬೇಕು
ಕ್ಷೇತ್ರ ಫಲವತ್ತಾಗಿರಬೇಕು
ತನು ಬೆರೆಯಬೇಕು ಮನ ತೆರೆಯಬೇಕು
ಆಗ ಬಿತ್ತಿದ ಬೀಜ ಭ್ರೂಣವಾದರೆ ಅದು
ನಿನ್ನ
ಕವನ
ಗೆಳೆಯ

1-09-2005