ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಪ್ರೇಮ ಸಂಬಂಧವನ್ನು ಹೊಂದುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಹಾದರ ಎಂದು ಕರೆಯುತ್ತಾರೆ. ಆದರೆ ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಪರಸ್ಪರ ಒಪ್ಪಿಗೆಯ ಮೇಲೆ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಪರಿಪಾಠವೊಂದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಹಾದರದ ಸಂಬಂಧ ಅಲ್ಲಿ ಆದರದ ಸಂಬಂಧವಾಗುತ್ತಿದೆ. ಈ ಸಂಬಂಧ ಪರಸ್ಪರ ಒಪ್ಪಿಗೆಯದು, ನೈತಿಕವಾದದ್ದು ಮತ್ತು ಜವಾಬ್ದಾರಿಯುತವಾದದ್ದು. ಒಬ್ಬರಿಗೊಬ್ಬರು ಇಲ್ಲಿ ಮೋಸ ಮಾಡುವ ಪ್ರಶ್ನೆಯೇ ಇಲ್ಲ. ಈ ಬಹುಮುಖಿ ಪ್ರೇಮಸಂಬಂಧದಲ್ಲಿ ಒಳಗೊಳ್ಳುವವರಿಗೆ ಪರಸ್ಪರರ ಅನ್ಯ ಸಂಬಂಧಗಳ ಕುರಿತು ಗೊತ್ತಿರುತ್ತದೆ. ಅಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ. ಅಸೂಯೆ, ದ್ವೇಷದ ಪ್ರಶ್ನೆಯೇ ಇಲ್ಲ. ಈ ಸಂಬಂಧ ತಾತ್ಕಾಲಿಕ ವಾದದ್ದೂ ಆಗಿರುವುದಿಲ್ಲ. ಬಹುಕೋನಗಳ ಈ ಸಂಬಂಧ ಸುದೀರ್ಘ ಅವಧಿಯ ವರೆಗೆ ಮುಂದುವರಿದಿರುತ್ತವೆ. ಈ ಸಂಬಂಧದಲ್ಲಿ ಮಕ್ಕಳೂ ಆಗುತ್ತಾರೆ. ನಿಜ ಹೇಳಬೇಕೆಂದರೆ ಆ ಮಗುವಿನ ತಂದೆ ಯಾರು ಎಂಬುದು ಆ ತಾಯಿಗೂ ಗೊತ್ತಿರುವುದಿಲ್ಲ. ಅದನ್ನು ಗೊತ್ತುಮಾಡಿಕೊಳ್ಳುವ ಅನಿವಾರ್ಯತೆಯೂ ಅವರಿಗೆ ಇರುವುದಿಲ್ಲ. ಆ ಸಂಬಂಧದಲ್ಲಿರುವವರೆಲ್ಲ ಆ ಮಗು ತಮ್ಮದೇ ಎನ್ನುವಂತೆ ನೋಡಿಕೊಳ್ಳುತ್ತಾರೆ. ಮಗುವಿನ ತಾಯಿಗೆ ಆರ್ಥಿಕವಾಗಿ ಸಹಾಯವನ್ನೂ ಮಾಡುತ್ತಾರೆ. ಈ ಬಹುಕೋನ ಸಂಬಂಧದಲ್ಲಿ ಬೀಳುವವರು ಮದುವೆ ಆಗದವರು ಮಾತ್ರವೇ ಆಗಿರುವುದಿಲ್ಲ. ಮದುವೆಯಾದವರೂ ಇಂಥ ಸಂಬಂಧಗಳನ್ನು ಇಷ್ಟಪಡುತ್ತಾರೆ. ಒಂದು ಮದುವೆ ಮಾಡಿಕೊಂಡು ಸಾಯುವವರೆಗೂ ಅದಕ್ಕೇ ಬದ್ಧರಾಗಿ ಇರುವುದಕ್ಕೆ ಹಲವು ದಂಪತಿಗೆ ಇಷ್ಟವಿರುವುದಿಲ್ಲ. ಅಂಥ ಸಂದರ್ಭದಲ್ಲಿ ಅವರು ಹೊಸತನಕ್ಕಾಗಿ ಹಾತೊರೆಯುತ್ತಿರುತ್ತಾರೆ. ಇದರಲ್ಲಿ ದೈಹಿಕ ಕಾಮನೆಯೂ ಇರಬಹುದು, ಮಾನಸಿಕ ಗ್ಲಾನಿಯ ಶಮನಕ್ಕಾಗಿ ಮಾಡುವ ಸಾಹಸವೂ ಇರಬಹುದು. ಆದರೆ ಈ ಸಂಬಂಧದಲ್ಲಿ ಇರುವವರು ತಮ್ಮ ಹೊಸ ಸಂಬಂಧಗಳ ಬಗ್ಗೆ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. ಅನ್ಯ ಸಂಬಂಧವನ್ನು ಸಂದೇಹಿಸಿಯೇ ಕೊಲೆಗಳಾಗುವ, ವಿಚ್ಛೇದನಗಳಾಗುವ ದೇಶದಲ್ಲಿ ಇಂಥವನ್ನು ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಈ ಬಹುಮುಖಿ ಸಂಬಂಧಕ್ಕೆ ಇಂಗ್ಲಿಷಿನಲ್ಲಿ ಪೊಲಿಯಮೋರಿ ಎಂಬ ಪದವನ್ನು ಬಳಸುತ್ತಾರೆ, ನಮಗೆ ಪೊಲಿಗಾಮಿ ಎಂಬ ಪದ ಪರಿಚಿತವಾದದ್ದು. ಇದು ಬಹುಪತ್ನಿತ್ವ ಮತ್ತು ಬಹುಪತಿತ್ವದ ಕುರಿತು ಬಳಸುವ ಪದ. ಇತ್ತೀಚೆ ನಮ್ಮ ದೇಶದ ಸುಪ್ರೀಂ ಕೋರ್ಟ್ ಪೊಲಿಗಾಮಿ ಕುರಿತು ತನ್ನ ನಿರ್ಧಾರವನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇದು ಸರಿಯೋ ತಪ್ಪೋ ಎಂಬ ಕುರಿತು ಕೋರ್ಟ್ ತೀರ್ಮಾನ ಹೇಳಲಿದೆ. ಜಗತ್ತಿನ ಯಾವ ಧರ್ಮವೂ ಇಂಥ ಬಹುಕೋನ ಸಂಬಂಧಗಳ ಬಗ್ಗೆ ಒಪ್ಪಿಗೆ ನೀಡಿಲ್ಲ. ಯಾರು ಯಾರನ್ನು ಮದುವೆಯಾಗಬೇಕು ಎಂಬುದು ಸ್ವರ್ಗದಲ್ಲಿಯೇ ನಿರ್ಧಾರವಾಗಿರುತ್ತದೆ ಎಂದು ಬಹುತೇಕರು ನಂಬಿರುತ್ತಾರೆ. ಕಷ್ಟವೋ ನಷ್ಟವೋ ಕಟ್ಟಿಕೊಂಡಮೇಲೆ ಹೇಗೋ ಏನೋ ಹೊಂದಿಕೊಂಡು ಹೋಗಬೇಕು ಎಂದು ಮದುವೆ ಬಂಧನದಲ್ಲಿ ಸಾಯುವವರೆಗೂ ಕೊರಗುತ್ತ ಇರುವವರಿದ್ದಾರೆ. ಈ ಬಂಧನದ ಕೊಂಡಿಯಲ್ಲೊಂದು ಬಿರುಕು ಮೂಡಿಸಿ ಪ್ರೇಮದ ಅನ್ಯಸಾಧ್ಯತೆಗಳ ಕಡೆಗೆ ಪೊಲಿಯಮೋರಿ ಬಾಗಿಲು ತೆರೆಯುತ್ತದೆ. ಭಾರತೀಯ ಸಮಾಜದಲ್ಲಿ ಕದ್ದುಮುಚ್ಚಿ ಇಂಥ ಲೈಂಗಿಕ ಸಾಹಸಗಳು ನಡೆದಿರುತ್ತವೆ. ಹೆಂಡತಿ ಅನ್ಯಪುರುಷರೊಂದಿಗೆ ಅತಿ ಸಲುಗೆಯಿಂದ ಇರುವುದನ್ನು ಗಂಡ ನೋಡಿಯೂ ನೋಡದಂತೆ ಇರುತ್ತಾನೆ. ಗಂಡ ಬೇಲಿಯ ಮೇಲಿನ ಓತಿಕಾಟ ಎಂಬ ಸಂಗತಿ ಹೆಂಡತಿಗೆ ಗೊತ್ತಿದ್ದರೂ ಕೆಲವೊಮ್ಮೆ ಸುಮ್ಮನಿದ್ದುಬಿಡುತ್ತಾಳೆ. ಆದರೆ ಈ ಕುರಿತು ಇಬ್ಬರೂ ಕುಳಿತು ಮುಕ್ತವಾಗಿ ಚರ್ಚಿಸುವಂಥ ವಾತಾವರಣ ನಮ್ಮ ದೇಶದಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ಯುರೋಪಿನಲ್ಲಿ ಮದುವೆಗಳು ಮತ್ತು ನೈತಿಕತೆಯ ಕುರಿತು 1929ರಲ್ಲಿ ಬಟ್ರೆಂಡ್ ರಸ್ಸೆಲ್ ಪ್ರಶ್ನೆ ಮಾಡುತ್ತಾರೆ. ಅವರು ಪ್ರಶ್ನಿಸಿದ ರೀತಿಗೆ ಆಗ ತೀವ್ರ ಖಂಡನೆಗಳು ವ್ಯಕ್ತವಾದವು. ಆದರೆ ವರ್ಜಿನಿಯಾ ವೂಲ್ಫ್, ಡಿ.ಎಚ್.ಲಾರೆನ್ಸ್ ಮತ್ತಿರರು ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿವಾಹ ಎಂಬ ಸಂಸ್ಥೆಯನ್ನು ರೂಪಿಸಿದ್ದು ಸಮಾಜವೇ. ಕೆಲವು ಕಟ್ಟಳೆಗಳಿಗೆ ಒಳಪಟ್ಟು ಬದುಕಬೇಕು ಎಂದು ಒಂದು ಕಾಲದ ಜನರಿಗೆ ಅನಿಸಿತ್ತು. ಹೆಣ್ಣನ್ನು ಖಾಸಗಿ ಆಸ್ತಿಯೆಂದು ಭಾವಿಸುವ ಸಮಾಜದಲ್ಲಿ ಬಹುಕೋನ ಸಂಬಂಧಗಳು ಮಾನ್ಯತೆಯನ್ನು ಪಡೆಯುವುದು ಸಾಧ್ಯವಿಲ್ಲ. ಜಾಗತೀಕರಣ ಎಂಬುದು ಉಳಿದೆಲ್ಲ ವಿಷಯಗಳಲ್ಲಿ ನಮ್ಮನ್ನು ಹೇಗೆ ಆಕ್ರಮಿಸಿಕೊಂಡಿದೆಯೋ ಅದೇ ರೀತಿ ಮನುಷ್ಯ ಸಂಬಂಧಗಳ ಮೇಲೆಯೂ ಪರಿಣಾಮ ಬೀರಿದೆ. ಪಾಶ್ಚಾತ್ಯ ಆಗುಹೋಗುಗಳ ಹಿನ್ನೆಲೆಯಲ್ಲಿ ತಮ್ಮ ಸಾಂಪ್ರದಾಯಿಕ ಬದುಕಿನ ಶೈಲಿಯಲ್ಲಿ, ಜೀವನಕ್ರಮದಲ್ಲಿ ಬದಲಾವಣೆ ಸಾಧ್ಯವೆ ಎಂದು ಕೆಲವರು ಪ್ರಶ್ನೆಹಾಕಿಕೊಂಡರು. ಅದರ ಫಲವಾಗಿ ಆಧುನಿಕ ಇಂಡಿಯಾದಲ್ಲಿ ಪೊಲಿಯೋಮರಿ ತಲೆ ಎತ್ತಿದೆ. ಬೆಂಗಳೂರಿನಂಥ ಮಹಾನಗರದಲ್ಲೂ ಬಹುಕೋನ ಸಂಬಂಧ ಬಯಸಿ ಬದುಕುತ್ತಿರುವವರು ಇದ್ದಾರೆ. ಅವರದೇ ಒಂದು ಫೇಸ್ಬುಕ್ ಗ್ರುಪ್ ಕೂಡ ಇದೆ. ಭಾರತೀಯ ಕಾನೂನಿನಲ್ಲಿ ಇದು ಅಪರಾಧವೋ ಅಲ್ಲವೋ ಗೊತ್ತಿಲ್ಲ. ಇದರಲ್ಲಿ ಒಳಗೊಳ್ಳುವ ಎಲ್ಲರ ಒಪ್ಪಿಗೆಯ ಮೇರೆಗೆ ನಡೆಯುವ ಸಂಬಂಧ ಇದಾಗಿರುವುದರಿಂದ ದೂರುಗಳು ದಾಖಲಾಗುವುದಿಲ್ಲ. ಎಲ್ಲ ನೇಮದೆಲ್ಲೆ ಮೀರಿ ಅನಂತ ಸುಖದೆಡೆ ಮುಖವ ಮಾಡಿ ಹಾಗೂ ಹೀಗೂ ಎಂಥೋ ಏನೋ ಬದುಕ ಪಡೆದು ಬದುಕ ಕಳೆವ ರೀತಿಯು. ಸ್ವರ್ಗ ನರಕ ಪುನರ್ಜನ್ಮ ಇತ್ಯಾದಿ ಪುರಾಣ ಪುಣ್ಯಕತೆ ನಂಬಿಕೆಗಳನ್ನೆಲ್ಲ ಮೀರಿ ಇರುವುದೊಂದೇ ಜನ್ಮ, ಬದುಕನ್ನು ಸಂಪೂರ್ಣ ಇಲ್ಲಿಯೇ ಈಗಲೇ ಅನುಭವಿಸಬೇಕು ಎಂಬ ತಾನಾಶಾಹಿ ಮೊಳೆತಾಗ, ಚಾರ್ವಾಕತನ ರೂಢಿಸಿಕೊಂಡಾಗ ಬಹುಕೋನ ಸಂಬಂಧಗಳು ಸಾಧ್ಯವಾಗುತ್ತವೆ. ಈ ಸಂಬಂಧ ಸಾಧ್ಯವಾಗಬೇಕೆಂದರೆ ನಿಮ್ಮಲ್ಲಿಯ ಅಹಂ ತೊಲಗಬೇಕು, ಅಸೂಯೆ ಇಲ್ಲವಾಗಬೇಕು, ಸಹನೆ ಮರವಾಗಬೇಕು.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.