ಡಾ.ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯ ಕುರಿತು

ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿ ಕೃತಿ ರಚನೆಯಲ್ಲಿ ತೊಡಗಿರುವವರಲ್ಲಿ ಡಾ.ನಾ ಮೊಗಸಾಲೆಯವರು ಮೊದಲ ಶ್ರೇಣಿಯಲ್ಲಿ ನಿಲ್ಲುತ್ತಾರೆ. ನಾನು ಕಳೆದ ಒಂದೂವರೆ ದಶಕದಿಂದ ಡಾ.ನಾ.ಮೊಗಸಾಲೆಯವರು ರಚಿಸಿದ ಎಲ್ಲ ಕೃತಿಗಳನ್ನೂ ಬಹುತೇಕ ಓದಿದ್ದೇನೆ. ಕಾಂತಾವರದಲ್ಲಿ ಕುಳಿತು ಕನ್ನಡ ಕಟ್ಟುವ ಕೆಲಸವನ್ನು ಅವರು ಬಹಳ ಶ್ರದ್ಧೆಯಿಂದ ಮಾಡುತ್ತ ಬಂದಿದ್ದಾರೆ. ಈ ಅವಧಿಯಲ್ಲಿ ಅವರ ಪರಿಸರದಲ್ಲಿ ಬಹಳಷ್ಟು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ ಸ್ಥಿತ್ಯಂತರಗಳು ನಡೆದಿವೆ. ಇವುಗಳಲ್ಲಿ ಮೊಗಸಾಲೆಯವರು ಬಹಿರಂಗದಲ್ಲಿ ಯಾವುದೇ ಚಳವಳಿಯಲ್ಲಿ ಕಾಣಿಸಿಕೊಂಡು ತಮ್ಮ ನಿಲವನ್ನು ಸಾರಿದ್ದು ನಾನು ಕಂಡಿಲ್ಲ. ಇದಕ್ಕೆ ಅವರು ಸರ್ಕಾರಿ ನೌಕರಿಯಲ್ಲಿ ಇದ್ದದ್ದು ಕಾರಣವಾಗಿರಬಹುದು. ಹಾಗಂತ ಈ ಬದಲಾವಣೆಗಳಿಗೆ ಅವರು ಕುರುಡಾಗಿದ್ದರು, ಕಿವುಡಾಗಿದ್ದರು ಎಂದೇನಲ್ಲ. ತಮ್ಮ ಪ್ರತಿಕ್ರಿಯೆಗಳನ್ನು ಅವರು ಕೃತಿಗಳ ರೂಪದಲ್ಲಿ ದಾಖಲಿಸಿದ್ದಾರೆ. ಹಾಗೆ ಪ್ರತಿಕ್ರಿಯಿಸದೆ ಇರುವುದು ಸೃಜನಶೀಲ ವ್ಯಕ್ತಿಯೊಬ್ಬನಿಗೆ ಸಾಧ್ಯವಾಗುವುದೇ ಇಲ್ಲ. ಅಂಥ ಒಂದು ಪ್ರತಿಕ್ರಿಯಾತ್ಮಕ ಕೃತಿ ಅವರ `ಇದ್ದೂ ಇಲ್ಲದ್ದು’ ಕಾದಂಬರಿ.

`ಇದ್ದೂ ಇಲ್ಲದ್ದು' ಕುರಿತು ರಮೇಶ ಭಟ್‌ ಬೆಳಗೋಡು ಅವರು ವಿವೇಚನಾಪೂರ್ಣವಾದ ವಿಸ್ತೃತ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ವಿವೇಚನೆಗೆ ಒಳಪಡಿಸಿದ ಅಂಶಗಳನ್ನು ಹೊರತುಪಡಿಸಿ ಅನ್ಯ ನೆಲೆಯಲ್ಲಿ ಈ ಕಾದಂಬರಿಯನ್ನು ಗ್ರಹಿಸಬಹುದೇನೋ ಎಂಬ ಆಲೋಚನೆಯಿಂದ ಇದನ್ನು ಎರಡನೆಯ ಬಾರಿಗೆ ಓದಿದೆ. ಎರಡನೆಯ ಓದಿನ ಸಮಯದಲ್ಲಿ ಅನ್ನಿಸಿದ್ದನ್ನು ನಾನಿಲ್ಲಿ ದಾಖಲಿಸುತ್ತಿದ್ದೇನೆ.

ದೇವರಮನೆಯು ಮೊಗಸಾಲೆಯವರ ಸೃಷ್ಟಿಯ ಸೀತಾಪುರದ ಒಂದು ಮೂಲೆಯಲ್ಲಿದೆ. ಆ ದೇವರ ಮನೆಯ ಮೂರು ತಲೆಮಾರುಗಳ ಜೀವನ ಸಂಘರ್ಷ `ಇದ್ದೂ ಇಲ್ಲದ್ದು' ಕಾದಂಬರಿಯ ವಸ್ತು. ದೊಡ್ಡರಮಾನಂದಭಟ್ಟರು, ಅವರ ಮಗ ಹರಿದಾಸ ಭಟ್ಟರು ಮತ್ತು ಪ್ರಸ್ತುತದ ರಮಾನಂದ ಈ ಮೂವರ ಬದುಕಿನ ಸುತ್ತಮುತ್ತ ನಡೆಯುವ ಕ್ರಿಯೆ ಪ್ರತಿಕ್ರಿಯೆಗಳು ಕಾದಂಬರಿಯಲ್ಲಿ ವಿಸ್ತೃತವಾಗಿ ಬಂದಿವೆ. ತುಂಗಾನದಿ ಮೂಲದಿಂದ ಬಂದ ಸುದರ್ಶನ ಸಾಲಿಗ್ರಾಮ ಶಿಲೆ ಮತ್ತು ವೆಂಕಟರಮಣ ಇವರ ಮನೆದೇವರು. ಇದರ ಪೂಜೆ ನಿರಂತವಾಗಿ ನಡೆಯಬೇಕು ಎಂಬುದು ರಮಾನಂದನ ತಂದೆ ತಾಯಿಯ ಬಯಕೆ. ಈ ಬಯಕೆಯ  ಈಡೇರಿಕೆಗಾಗಿಯೇ ದೇವರು ತಮಗೆ ಮೂರು ಹೆಣ್ಣುಮಕ್ಕಳ ನಂತರ ಪುತ್ರನನ್ನು ಕರುಣಿಸಿದ್ದಾನೆ ಎಂದು ನಂಬಿಕೊಂಡವರು ಅವರು. ಆದರೆ ಅದು ಈಡೇರದೆ ಇರುವುದೇ ದೇವರಮನೆಯವರ ಪಾಲಿಗೆ ದೊಡ್ಡ ಸಮಸ್ಯೆ.

ಕಾದಂಬರಿಯಲ್ಲಿಯೇ ದೇವರ ಬಗ್ಗೆ ಜಿಜ್ಞಾಸೆ ನಡೆದಿದೆ. ರಮಾನಂದನಿಗೆ, `ದೇವರು ಎನ್ನುವುದು ಈ ಮೂರ್ತಿಯಲ್ಲಿ ಕಾಣುವಷ್ಟು ಸರಳವೆ?'(ಪುಟ 61) ಎಂಬ ಪ್ರಶ್ನೆ ಕಾಡುತ್ತದೆ. ಹಾಗೆಯೇ ಗೋವಿಂದಾಚಾರ್ಯರ ಈ ಮಾತು ಗಮನಿಸಿ, `ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದ ಮೇಲೆ ಕನಿಷ್ಠ ದೇವರ ತಲೆಗೆ ನೀರು ಹೊಯ್ದು ತೀರ್ಥವನ್ನು ಸೇವಿಸಬೇಕು. ಇಲ್ಲವಾದರೆ ಈ ಜಾತಿಯಲ್ಲಿ ನಮ್ಮನ್ನು ಹುಟ್ಟಿಸಿದ ದೇವರಿಗೆ ನಾವು ಅವಮಾನ  ಮಾಡಿದ ಹಾಗಾಗುತ್ತದೆ.' (ಪುಟ 36) ಈ ದೇವರು ಬ್ರಾಹ್ಮಣ  ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರವೇ ಇರುವುದೆ?  ಬ್ರಾಹ್ಮಣ ಜಾತಿಯಲ್ಲಿ ದೇವರು ಹುಟ್ಟಿಸಿದ್ದಕ್ಕೆ ಪ್ರತಿಯಾಗಿ ಮಾಡುತ್ತಿರುವುದು ಪೂಜೆ ಪುನಸ್ಕಾರಗಳೆ? ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಿವೃತ್ತರಾದ ಗೋವಿಂದಾಚಾರ್ಯರು ದೇವರನ್ನು  ಗ್ರಹಿಸಿದ ರೀತಿ ಇದು. ಇದು ಶುದ್ಧ ವ್ಯವಹಾರದ ಮಾತಾಗಿ ಕಾಣುತ್ತದೆ. ಹಾಗೆಯೇ, `ನನಗೆ ಬೇರೆ ಉದ್ಯೋಗ ಗೊತ್ತಿರಲಿಲ್ಲ ಮತ್ತು ಇರಲೂ ಇಲ್ಲ. ಹಾಗಾಗಿ ದೇವರ ಪೂಜೆಯೇ ನನ್ನ ಉದ್ಯೋಗವಾಯಿತು' ಎನ್ನುವ ಕುಪ್ಪಣ್ಣಾಚಾರ್ಯರ ಮಾತನ್ನು ನೋಡಿ. ದೇವರ ಪೂಜೆ ಇವರಿಗೆ ಹೊಟ್ಟೆಪಾಡು. ಗೋವಿಂದಾಚಾರ್ಯರು ಕುಪ್ಪಣ್ಣಾಚಾರ್ಯರಿಗೆ ಹೇಳುವ ಈ ಮಾತುಗಳನ್ನೂ ನೋಡಿ, `.... ದೇವರ ಕಲ್ಪನೆಯನ್ನು ನಮ್ಮ ಹಿರಿಯರು ಸೃಷ್ಟಿಸಿದ್ದು ನಾವು ನಮ್ಮ ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಅಥವಾ ಗುರುಹಿರಿಯರಲ್ಲಿ ಹೇಳಬೇಕಾದದ್ದನ್ನು ಹೇಳಲಿಕ್ಕೆ ಆಗದೇ ಇದ್ದಾಗ ಅದನ್ನು ಮನಬಿಚ್ಚಿ ನಿಷ್ಕಪಟವಾಗಿ ಹೇಳಲಿಕ್ಕೆ ಅಥವಾ ಹಂಚಿಕೊಳ್ಳಲಿಕ್ಕೆ. ಅದನ್ನು ಆತ ಕೇಳುತ್ತಾನೋ ಇಲ್ಲವೋ ಎನ್ನುವುದು ಮುಖ್ಯವಲ್ಲ, ನಾವು ಅವನಿಗೆ ಹೇಳುವುದೇ ಮುಖ್ಯ. ಇನ್ನೊಂದು ಅರ್ಥದಲ್ಲಿ ದೇವರಿಗೆ ನಡೆದುಕೊಳ್ಳುವುದು ಅಂದರೆ ನಮ್ಮ ಆತ್ಮಸಾಕ್ಷಿಗೆ ಸರಿಯಾಗಿ ನಾವು ನಡೆದುಕೊಳ್ಳುವುದು...' ಇಲ್ಲಿ ವಿವೇಕದ, ಮಾನವೀಯತೆಯ ಮಾತನ್ನು ಗುರುತಿಸಬಹುದು. ರಮಾನಂದ ಕನಸಿನಲ್ಲಿ ಅಪ್ಪನಿಗೆ, `ದೇವರಿಗೆ ಜಾತಿ ಇದೆ ಎಂದು ನಿಮಗೆ ಹೇಳಿದವರು ಯಾರು ಅಪ್ಪಯ್ಯ?' ಎಂಬ ಪ್ರಶ್ನೆಯನ್ನು ಮಾಡುತ್ತಾನೆ. ಹಾಗಾದರೆ ದೇವರು ಎಂದರೆ ಏನು? ಆಲ್ಬರ್ಟ್‌ ಐನ್‌ಸ್ಟೈನ್‌ ದೇವರ ಕುರಿತು ಒಂದು ಮಾತನ್ನು ಹೇಳುತ್ತಾರೆ. `ಅಸ್ತಿತ್ವದಲ್ಲಿರುವುದೆಲ್ಲದರ ಏಕತಾನತೆಯಲ್ಲಿ ಗೋಚರವಾಗುವ ಸ್ಪಿನೋಜನ ದೇವರನ್ನು ನಾನು ನಂಬುತ್ತೇನೆ. ಮನುಷ್ಯ ವ್ಯಾಪಾರಗಳ ಮತ್ತು ಹಣೆಬರೆಹಗಳ ಬಗೆಗೆ ಮಾತ್ರ ಕಾಳಜಿ  ತೋರಿಸುವ ದೇವರನ್ನಲ್ಲ' ಎಂದು. ಸ್ಪಿನೋಜ ಹಾಲೆಂಡಿನ ಖ್ಯಾತ ತತ್ತ್ವಜ್ಞಾನಿ. ಗಣಿತದ ಪ್ರಮೇಯದ ರೀತಿಯಲ್ಲಿ ದೇವರನ್ನು ಸಿದ್ಧಮಾಡಬಹುದು ಎಂದು ಎಡ್ವಿನ್‌ ಎ. ಬರ್ಟ್‌ ಹೇಳುತ್ತಾನೆ. ತ್ರಿಮತಸ್ಥ ಆಚಾರ್ಯರು ದೇವರ ಪ್ರಮೇಯವನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಿದ್ದಾರೆ. ಪ್ರತಿ ಧರ್ಮ, ಆ ಧರ್ಮದ ಜಾತಿ, ಒಳಜಾತಿಗಳಲ್ಲಿ ದೇವರ ಕಲ್ಪನೆ ಬೇರೆಬೇರೆಯಾಗಿಯೇ ಇದೆ. ಅದು ಅವರವರ ನಂಬಿಕೆ. ಮನೆ ದೇವರ ಪೂಜೆಯ ಮುಂದುವರಿಕೆಯ ಸಮಸ್ಯೆ ಕೇವಲ ದೇವರಮನೆಯದು ಮಾತ್ರವಲ್ಲ. ಸೀತಾಪುರದ ಸುತ್ತಮುತ್ತ ಅಂಥ ಹತ್ತಾರು ಮನೆಗಳನ್ನು  ಕಾಣಬಹುದಾಗಿದೆ ಎಂಬುದು ಕಾದಂಬರಿಯಲ್ಲಿಯೇ ಇದೆ. ದೇವರು ನಂಬಿಕೆಯ ಮೂಲವಾಗಿರುವ ಕಾರಣ ನಂಬಿಕೆ ಇದ್ದವರು ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳುತ್ತಾರೆ. ನಂಬಿಕೆ ಇಲ್ಲದ ರಮಾನಂದನಂಥವರೂ ಪರಿಹಾರ ಕಂಡುಕೊಳ್ಳುತ್ತಾರೆ. ಯಾವುದೋ ಮನೆಯಲ್ಲಿ ದೇವರಿಗೆ ಪೂಜೆ ನಿಲ್ಲುವುದರಿಂದ ಯಾವುದೇ ಸಾಮಾಜಿಕ ಏರುಪೇರು ಆಗುವುದಿಲ್ಲ ಎಂಬುದೂ ನಿಜ. 
***
ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಅದು ಶೋಧಗೊಳ್ಳುವ ವರೆಗೆ ಇಲ್ಲದಂತೆ. ಇಲ್ಲದ್ದನ್ನು ಶೋಧಿಸುವ ಸವಾಲು, ತುರ್ತು ಎಲ್ಲ  ಕಾಲದಲ್ಲೂ ಎಲ್ಲರ ಎದುರೂ ಇರುತ್ತದೆ. ನೀರಿನಲ್ಲಿ, ಗಾಳಿಯಲ್ಲಿ ವಿದ್ಯುತ್‌ ಇದೆ ಎಂದು ಯಾರಿಗೆ ಗೊತ್ತಿತ್ತು? ಯಾರೋ ಮಹಾನುಭಾವರು ಅದು ಇದೆ ಎಂದು ತೋರಿಸಿದರು. ಆ ಬಳಿಕ ಎಲ್ಲರಿಗೂ ಬೆಳಕು ಸಿಕ್ಕಿತು. ಇದಕ್ಕೆ ಸದೃಶವಾದ ನೂರಾರು ಉದಾಹರಣೆಗಳನ್ನು ಕೊಡಬಹುದು. ಛಾಂದೋಗ್ಯೋಪನಿಷತ್ತಿನಲ್ಲಿ ಉದ್ದಾಲಕ ಮತ್ತು ಅವರ ಮಗ ಶ್ವೇತಕೇತುವಿನ ನಡುವೆ ನಡೆದ ಸಂಭಾಷಣೆ ಈ ಮೇಲಿನ ಮಾತನ್ನು ಸಮರ್ಥಿಸುತ್ತದೆ.  “ಹೌದು ಮಗನೆ, ನಮಗೆ ಕಾಣದ, ಕೇಳಿಸದ ಅಥವಾ ಅರ್ಥವಾಗದ ಮಾತ್ರಕ್ಕೆ ಏನೂ ಇಲ್ಲ  ಎಂದು ಹೇಳುವುದು ದಡ್ಡತನವಾದೀತು. ಅಗೋಚರವಾದರೂ, ನಾವು ಅದನ್ನು ಆಲಿಸದಿದ್ದರೂ, ಜಗತ್ತಿನಲ್ಲಿ ನಮಗೆ ಅರ್ಥವಾಗದ ಸೂಕ್ಷ್ಮ ಅಂಶವೊಂದಿದೆ. ಅದು ಸರ್ವವ್ಯಾಪಿಯಾಗಿ ಇಲ್ಲೇ ಇದೆ. ಇರುವ ಎಲ್ಲ ಜೀವಿಗಳ ಆತ್ಮವೂ ಅದೇ ಆಗಿದೆ. ಅದೇ ಸತ್ಯ. ಅದೇ ಚೇತನ. ಅದೇ  ಆತ್ಮದ ನಿಜಸ್ವರೂಪ.  ಓ ಶ್ವೇತಕೇತು, ಅದೇ ನೀನು (ತತ್ತ್ವಮಸಿ)”(ವಿಕಿಪೀಡಿಯಾ). ಆರನೆಯ ಅಧ್ಯಾಯದಲ್ಲಿ ಬರುವ ಮಾತು ಇದು. ಉದ್ದಾಲಕರು ಶ್ವೇತಕೇತುವಿಗೆ ಒಂದು ಚಿಟಿಕೆ ಉಪ್ಪನ್ನು ತರಲು ಹೇಳಿ ಅದನ್ನು ಒಂದು ನೀರಿನ ಪಾತ್ರೆಯಲ್ಲಿ ಹಾಕಿಸುತ್ತಾರೆ. ಮರುದಿನ ಅದನ್ನು ತೆರೆಯಲು ಹೇಳುತ್ತಾರೆ. ಉಪ್ಪು ನೀರಿನಲ್ಲಿ ಕಾಣುವುದಿಲ್ಲ. ಹಾಗಾದರೆ ಉಪ್ಪು ಎಲ್ಲಿ ಹೋಯಿತು? ಕಣ್ಣಿಗೆ ಕಾಣದ ಮಾತ್ರಕ್ಕೆ ಉಪ್ಪಿನ ಅಸ್ತಿತ್ವವನ್ನು ಅಲ್ಲಗಳೆಯಲು ಸಾಧ್ಯವೆ? ಆ ನೀರನ್ನು ಕುಡಿಯಲು ಉದ್ದಾಲಕರು ಶ್ವೇತಕೇತುವಿಗೆ ಹೇಳುತ್ತಾರೆ. ಆ ನೀರು ಉಪ್ಪಿನ ರುಚಿಯನ್ನು ಹೊಂದಿರುತ್ತದೆ. ಅಂದರೆ ನೀರಿನಲ್ಲಿ ಉಪ್ಪಿದೆ. ಕಣ್ಣಿಗೆ ಕಾಣದೆ ಇರುವುದರ ಅಸ್ತಿತ್ವವನ್ನು ಅನುಭವಕ್ಕೆ ತಂದುಕೊಳ್ಳುವುದನ್ನು ಅವರು ಹೇಳುತ್ತಾರೆ. ಅದೇ ರೀತಿ ದೇವರ ಅಸ್ತಿತ್ವ ಕೂಡ.

`ಇದ್ದೂ ಇಲ್ಲದ್ದು' ಕೃತಿ ಇಂಥ ಶೋಧದಲ್ಲಿ ತೊಡಗಿಕೊಳ್ಳುತ್ತದೆಯೆ? ಅದು ಮೌಲ್ಯಗಳ ನೆಲೆಯಲ್ಲಿ, ನಂಬಿಕೆಗಳ ನೆಲೆಯಲ್ಲಿ ಹಾಗೂ ಮಾನವೀಯತೆಯ ನೆಲೆಯಲ್ಲಿ? ಮಾನವೀಯತೆಯ ಆಧಾರವಿಲ್ಲದ ಮೌಲ್ಯಗಳು ಅಸಲಿಗೆ ಮೌಲ್ಯವೇ ಆಗಿರುವುದಿಲ್ಲ. ಅದೇ ರೀತಿ ಮಾನವೀಯತೆಗೆ ಇಂಬಿಲ್ಲದ ನಂಬಿಕೆಯೂ ಅರ್ಥವಿಲ್ಲದ್ದು. ಮಾನವೀಯತೆಗೆ ಯಾವುದೇ ಧರ್ಮವಿಲ್ಲ ಅಥವಾ ಅದಕ್ಕೆ ಯಾವುದೇ ಧರ್ಮದ ಹಂಗಿಲ್ಲ. ಮಾನವೀಯತೆ ಎಂಬುದು ಅದರಷ್ಟಕ್ಕೆ ಅದೇ ಒಂದು ಬಹುದೊಡ್ಡ ಮೌಲ್ಯ. ಯಾವುದೇ ಸೃಜನಶೀಲ ಕೃತಿ ಯಶಸ್ವಿ ಎನ್ನಿಸಿಕೊಳ್ಳಬೇಕಾದರೆ ಈ ಬಹುದೊಡ್ಡ ಮೌಲ್ಯದ ಸಮರ್ಥನೆಯಾಗಬೇಕು, ಸ್ಥಾಪನೆಯಾಗಬೇಕು. ದೇವರು ಇದೆ ಎಂದು ನಂಬುವುದು, ದೇವರು ಇದ್ದರೂ ಅವನ ಅಗತ್ಯ ನನಗಿಲ್ಲ ಎಂದು ಹೇಳುವುದು ವೈಯಕ್ತಿಕ ನೆಲೆಗೆ ಸೀಮಿತವಾದ್ದು. ನೀರಿಗೆ ಜೀವನ ಎಂಬ ಪರ್ಯಾಯ ಪದವಿದೆ. ತುಂಗಾ ನದಿಯ ನೀರಿನ ಮೂಲದಲ್ಲಿ ದೊರಕುವ ಸುದರ್ಶನ ಸಾಲಿಗ್ರಾಮವು ತಿರುಗಿ ಮನೆಯ ಬಾವಿಯ ನೀರನ್ನು ಸೇರುವ ಸಾಧ್ಯತೆ ಏನು ಹೇಳುತ್ತಿರಬಹುದು? ದೇವರಿಗಿಂತ ಜೀವನ ಮುಖ್ಯ ಎಂಬ ಸಂದೇಶವಾಗಿರಬಹುದೆ?

ತನ್ನ ಪತ್ನಿಯ ನಂಬಿಕೆಯನ್ನು ಗೌರವಿಸುವ ರಮಾನಂದ, ತನ್ನ ತಮ್ಮನ ಕಷ್ಟಕಾಲದಲ್ಲಿ ನೆರವಿಗೆ ಬರುವ ರಾಧಕ್ಕ, ತನ್ನ ಸೋದರಮಾವ ದಾಸಭಟ್ಟರ ಅಂತಿಮ ಇಚ್ಛೆಯನ್ನು ಇಷ್ಟವಿದ್ದೋ ಇಲ್ಲದೆಯೋ ನೆರವೇರಿಸಲು ಮುಂದಾಗುವ ಗೋವಿಂದಾಚಾರ್ಯರು, ಎಲ್ಲ ಆಸ್ತಿ ಕೊಟ್ಟರೂ ಬೇಡ, ತನಗೆ ತನ್ನ ಹೆಂಡತಿಯ ಮನಸ್ಸಿನ ಶಾಂತಿ ಮುಖ್ಯ ಎಂದು ಹೇಳುವ ಕುಪ್ಪಣ್ಣಾಚಾರ್ಯರು, ಅವರ ಭಾವನೆಯನ್ನು ಗೌರವಿಸುವ ರಮಾನಂದ ಇವರಲ್ಲೆಲ್ಲ ಮಾನವೀಯ ತುಡಿತವನ್ನು ನಾವು ಗಮನಿಸಬಹುದು.

ಇದ್ದೂ ಇಲ್ಲದ್ದು ಯಾರಿಗೆ ಯಾವುದು ಎಂಬುದನ್ನು ಇಲ್ಲಿ ನಾವು ನೋಡಬಹುದು. ದೊಡ್ಡ ರಮಾನಂದ ಭಟ್ಟರಿಗೆ ಪತ್ನಿ ಸೀತೆ ಇದ್ದೂ ಇಲ್ಲದಂತೆ. ಅದನ್ನು ಅವರು ತಮ್ಮ ಜೀವನದಲ್ಲೇ ಅರಿತುಕೊಂಡರು. ಸುಂದರಿಯಾದ ಪತ್ನಿ ಮನೆಯಲ್ಲಿ ಇದ್ದರೂ  ಕೆಲಸದಾಳು ಸುಂದರಿಯ ಮೋಹದಲ್ಲಿ ಬಿದ್ದರು. ಒಂದು ಹಂತದಲ್ಲಿ ಅವರ ಸಹೋದರಿ ರಾಧಕ್ಕ ಸೀತೆಯ ಜೊತೆ ಮಾತನಾಡಿ ಅವಳಲ್ಲಿ ಇದ್ದೂ ಇಲ್ಲದ್ದು ಏನೆಂದು ಮನವರಿಕೆ ಮಾಡಿಕೊಡುತ್ತಾಳೆ. ಅದನ್ನು ಅರಿತು ನಡೆದಾಗ ತನ್ನಲ್ಲಿ ಇಲ್ಲದ್ದು ಅಂದುಕೊಂಡಿರುವುದು ಇದೆ ಎಂಬ ಅರಿವನ್ನು ಅವಳು ಪಡೆದುಕೊಳ್ಳುತ್ತಾಳೆ. ಆ ಮೂಲಕ ತನ್ನ ಪತಿಯನ್ನು. ಇನ್ನು, ದಾಸ ಭಟ್ಟರಿಗೆ ಮಗ ರಮಾನಂದ ಇದ್ದೂ ಇಲ್ಲದಂತಾದ. ರಮಾನಂದನನ್ನು ಅವರು ತಮ್ಮ ಮಗನಾಗಿ ನೋಡದೆ  ಕೇವಲ ತಮ್ಮ  ಕುಲದೈವಕ್ಕೆ ತಮ್ಮ ನಂತರ ಪೂಜೆ ಮಾಡುವ ಒಬ್ಬ ಉತ್ತರಾಧಿಕಾರಿ ಎಂಬಂತೆ ನೋಡಿದರು. ಅವರಿಗೆ ಪುತ್ರವಾತ್ಸಲ್ಯವೇ ಇರಲಿಲ್ಲ. ತಮ್ಮ ಸೈಕಲ್ಲಿಗೆ ಮತ್ತು ತಮ್ಮ ಸ್ಕೂಟರಿಗೆ ಅವರು ತೋರಿಸಿದ ಪ್ರೀತಿಯಲ್ಲಿ ಒಂದು ಭಾಗವನ್ನಾದರೂ ಅವರು ಮಗನ ಮೇಲೆ ತೋರಿಸಿದ್ದರೆ ಅವನು ಕೈತಪ್ಪಿ ಹೋಗುತ್ತಿರಲಿಲ್ಲವೇನೋ? ತಮ್ಮ ಮಗನಿಗೆ ಎಂಟು ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಸಂಗತಿಯನ್ನು ಅವರು ಸ್ವೀಕರಿಸುವ ಪರಿ ನೋಡಿ, ತನ್ನ ಹೊಟ್ಟೆಯುರಿಯ ಶಾಪದಿಂದಲೇ ಅವನಿಗೆ ಮಕ್ಕಳಾಗಿಲ್ಲ ಎಂದು ಸಂತೋಷ ಪಡುತ್ತಾರೆ. ಇಲ್ಲಿ ಮನುಷ್ಯತ್ವ ಇದೆಯೆ? ಇನ್ನು ಪ್ರಸ್ತುತದ ರಮಾನಂದನಿಗೆ ಅಪ್ಪ ಆಸ್ತಿಯನ್ನು ಮಾಡಿಟ್ಟಿದ್ದ. ಊರಲ್ಲಿಯೇ ಇದ್ದರೂ ಅವನ ಬದುಕು ಸಾಗಿಹೋಗುತ್ತಿತ್ತು. ಆದರೆ ಅವನು ಅದನ್ನು ಧಿಕ್ಕರಿಸಿ, ಅನ್ಯಧರ್ಮದ ಹುಡುಗಿಯನ್ನು ಮದುವೆಯಾಗಿ ಹೋಗುತ್ತಾನೆ. ಈ ಧಿಕ್ಕರಿಸುವಿಕೆಗೆ ಆರ್ಥಿಕವಾಗಿ ಅವನು ಸ್ವತಂತ್ರನಾಗಿದ್ದುದೇ ಕಾರಣ. ಹಾಗೆಯೇ ದಾಸಭಟ್ಟರು ಪೂಜೆಗೆ ನೇಮಿಸಿದ ಕುಪ್ಪಣ್ಣಭಟ್ಟರಿಗೆ ಅಯಾಚಿತವಾಗಿ ಮನೆ, ಜಮೀನು ಎಲ್ಲವೂ ಸಿಕ್ಕಿದರೂ ಅವರಿಗೆ ಅದು ಬೇಡವಾಗಿದೆ. ಪುಕ್ಕಟೆ ಎಲ್ಲ ಆಸ್ತಿಯನ್ನು ಕೊಟ್ಟರೂ ತಮಗೆ ಬೇಡ ಎನ್ನುತ್ತಾರೆ ಅವರು. ಇದು ಅವರ  ಇದ್ದೂ  ಇಲ್ಲದ ಸ್ಥಿತಿ. ಒಟ್ಟಾರೆಯಾಗಿ ಇವರೆಲ್ಲರೂ ಅಡಿಗರ  ಕವಿತೆಯ ಸಾಲಿನಲ್ಲಿ ಬರುವ, ಇರುವುದೆಲ್ಲವ ಬಿಟ್ಟು ಇರದುದರತ್ತ ತುಡಿವುದೆ ಜೀವನ(.)(?)! ಅಂದುಕೊಂಡವರಂತೆ ಭಾಸವಾಗುತ್ತದೆ.

ಇನ್ನು, ದೇವರಮನೆಯವರು ವೇದಾಧ್ಯಯನ ಮಾಡಿದವರು. ಹಿಂದೆ ಅವರ ಕುಟುಂಬದವರೊಬ್ಬರು ಅಷ್ಟಮಠಗಳಲ್ಲಿ ಒಂದಕ್ಕೆ ಯತಿಗಳಾದವರು. ಹರಿದಾಸ ಭಟ್ಟರು ಈಗಲೂ ಮಠದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದವರು. ಇಂಥವರಿಗೆ ಉದ್ದಾಲಕರು ತಮ್ಮ ಮಗ ಶ್ವೇತಕೇತುವಿಗೆ ಹೇಳಿದ ತತ್ತ್ವಮಸಿ ಸಿದ್ಧಾಂತದ ಅರಿವು ಇರಲಿಲ್ಲವೆ? ಅಥವಾ ಮಠದ ಸ್ವಾಮಿಗಳಾದರೂ ಅವರಿಗೆ ತಿಳಿಸಿ ಹೇಳಬಹುದಿತ್ತಲ್ಲವೆ? ಸಾವಿರಾರು ಮಕ್ಕಳಿಗೆ ಪಾಠ ಹೇಳಿದ ಈ ಮೇಸ್ಚ್ರು, ಊರು ಉದ್ಧಾರ ಮಾಡಿದ, ಅದಕ್ಕಾಗಿ ಸನ್ಮಾನವನ್ನೂ ಮಾಡಿಸಿಕೊಂಡ ಮೇಸ್ಟ್ರು, ಕಾಡು ಕಡಿದು ಬೇಸಾಯ ಮಾಡಿ ಅಧಿಕ ಉತ್ಪನ್ನ ತೆಗೆದು ಒಳ್ಳೆಯ ಕೃಷಿಕ ಅನ್ನಿಸಿಕೊಂಡರೂ ಕಾದಂಬರಿಯ ಸಂವಿಧಾನದಲ್ಲಿ ಒಂದು  ಭಾರವಾದ ಪಾತ್ರ  ಎನ್ನಿಸಿಕೊಳ್ಳುತ್ತಾರೆ. ಈ ಪಾತ್ರದ ಸೃಷ್ಟಿಗಾಗಿಯೇ ಕಾರಂತರ ಕಾದಂಬರಿಗಳ ಪ್ರಸ್ತಾಪವನ್ನು ಮತ್ತೆ ಮತ್ತೆ ಲೇಖಕರು ತರುತ್ತಾರೆ. ಇದೊಂದು ರೀತಿಯಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಂತೆ. ಕಾರಂತರನ್ನು ಅನುಕರಿಸಿದರು ಎಂದು ಮುಂದೆ ಯಾರೂ ದೂರಬಾರದು ಎಂಬ ದೂರಾಲೋಚನೆ ಇರಬಹುದು. ದಾಸಭಟ್ಟರ ಈ ಕೃಷಿಯ ಕುರಿತ ತಹತಹ ಕಾದಂಬರಿಯ ಸಂವಿಧಾನದಲ್ಲಿ ಮೊಲೆಗಳ ಭಾರಕ್ಕೆ ಸೊಂಟ ಭಾಗಿಹೋದ ಯುವತಿಯ ಹಾಗೆ ಕಾಣುತ್ತದೆ.

ಕಾರಂತರು ತಮ್ಮ ಕಾದಂಬರಿಯ ಪಾತ್ರಗಳನ್ನು ಸೃಷ್ಟಿಸಿದ ಕಾಲಕ್ಕೂ ಈಗಿನ ಕಾಲಕ್ಕೂ ತುಂಬ ವ್ಯತ್ಯಾಸವಿದೆ. ಕಾರಂತರ ಕಾಲಕ್ಕಿಂತ ಈಗ  ಮೂಲಭೂತ ಸೌಲಭ್ಯಗಳು ತುಂಬ ಹೆಚ್ಚಿವೆ. ಹಳ್ಳಿಹಳ್ಳಿಗಳಿಗೆ ರಸ್ತೆ, ವಿದ್ಯುತ್ತು, ಸಹಕಾರ ಸಂಘಗಳು, ಸಾಲಕೊಡುವ ವ್ಯವಸ್ಥೆ, ಬೆಳೆದ ಕೃಷಿಉತ್ಪನ್ನಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು  ಸೃಷ್ಚಿಸಿಕೊಳ್ಳುವ ಸಂವಹನ ವ್ಯವಸ್ಥೆಗಳು ಇವೆಲ್ಲವನ್ನು ಗಮನಿಸಬೇಕು. ವಿದೇಶಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವದೇಶಕ್ಕೆ ಹಿಂತಿರುಗಿದವರು ತಮ್ಮ ಸ್ವಂತ ಊರಿನಲ್ಲಿ ಕೃಷಿಕರಾಗಿ ನೆಲೆಯಾದ  ಹಲವು ಸಾಹಸಿಗಳ ಬಗ್ಗೆ ನಾವು ಕೇಳಿದ್ದೇವೆ. ಕರಾವಳಿ ಭಾಗದ ಶಿವಳ್ಳಿ ಬ್ರಾಹ್ಮಣರ ಮನೆದೇವರ ಪೂಜೆಯೇ ಕಾದಂಬರಿಯ ಪ್ರಮುಖ ಸಮಸ್ಯೆಯಾಗಿರುವಾಗ  ಹರಿದಾಸ ಭಟ್ಟರ ಕೃಷಿ ಸಾಹಸದ ವಿವರಗಳು ಬೇಕಿರಲಿಲ್ಲವೇನೋ ಎನಿಸುವುದು.

ಹಾಗಾದರೆ `ಇದ್ದೂ ಇಲ್ಲದ್ದು' ಏನನ್ನು ಧ್ವನಿಸುತ್ತದೆ? ನನಗನಿಸುವ ಹಾಗೆ ಅದು ತತ್ತ್ವಮಸಿ. ಪ್ರತಿಯೊಬ್ಬರೂ ತಮ್ಮನ್ನು ತಾವು ಅರಿತುಕೊಳ್ಳಬೇಕು. ಯಾರಿಗೋಸ್ಕರವೋ ಯಾರೂ ಏನನ್ನೂ ಮಾಡಿಡುವ ಅಗತ್ಯವಿಲ್ಲ. ಹಾಗೆ ಮಾಡಿಡುವುದರ ಉದ್ದೇಶದ ಹಿಂದೆ ಯಾರಿದ್ದಾರೋ ಅವರ ಸ್ವಾತಂತ್ರ್ಯದ ಅತಿಕ್ರಮಣ ನಡೆಯುತ್ತದೆ. ಆ ಅರಿವಿಲ್ಲದಿದ್ದರೆ ನಾವೇನು `ಇದೆ' ಎನ್ನುವುದನ್ನು ಕಟ್ಟಿಕೊಂಡಿರುತ್ತೇವಲ್ಲ ಆ `ಅದು' ಇಲ್ಲದಂತೆ. 
***
ಮೊಗಸಾಲೆಯವರು ಬಿಡುಬೀಸಾಗಿ ಕತೆಯನ್ನು ಕಟ್ಟುತ್ತ ಹೋಗಿದ್ದಾರೆ. ಈ ಕಟ್ಟುವ ಕ್ರಿಯೆ ಅವರಿಗೆ ಅದೆಷ್ಟು ಸಲೀಸಾಗಿದೆ ಎಂದರೆ ಅದನ್ನ Criative Arrogance (ಸೃಜನಶೀಲ ಧಾರ್ಷ್ಟ್ಯ) ಎಂದು ಕರೆಯಬೇಕೆನಿಸುತ್ತದೆ. ಪೂರ್ಣ ಸಿದ್ಧತೆಯೊಂದಿಗೆ ರಣಕ್ಕೆ ಧುಮುಕುವ ಯೋಧನಂತೆ ಅವರು. ಅವರ ಬರೆವಣಿಗೆಯ ಧಾವಂತ ಬೆರಗು ಮೂಡಿಸುವ ಹಾಗಿದೆ.  ಹಿಂದೆ ಪತ್ತೇದಾರಿ ಕಾದಂಬರಿಕಾರ ಎನ್‌. ನರಸಿಂಹಯ್ಯನವರ ಕುರಿತು ಒಂದು ಕತೆ ಚಲಾವಣೆಯಲ್ಲಿತ್ತು. ಪ್ರಕಾಶಕರು ಕೇಳಿದ ಒಂದು ವಾರದಲ್ಲಿ ಅವರು  ಒಂದು ಕಾದಂಬರಿಯನ್ನು ಬರೆದು ಕೊಡುತ್ತಿದ್ದರಂತೆ. ಅದನ್ನು ಪರೀಕ್ಷಿಸಲು ಒಬ್ಬರು 200 ಪುಟಗಳ ಒಂದು ನೋಟ್‌ ಬುಕ್‌ ಖರೀದಿಸಿ ಅದರ  ಮೇಲೆ ತಮ್ಮ ಸಹಿ ಹಾಕಿ  ನರಸಿಂಹಯಯ್ಯನವರಿಗೆ ಕೊಟ್ಟು ಮುಂದಿನ ವಾರ ನನಗೊಂದು ಕಾದಂಬರಿಯನ್ನು ಇದೇ ನೋಟ್‌ ಬುಕ್‌ನಲ್ಲಿ ಬರೆದುಕೊಡಿ ಎಂದು ಕೇಳಿದರಂತೆ. ನರಸಿಂಹಯ್ಯನವರು ಬರೆದೂ ಕೊಟ್ಟರಂತೆ. ಇದೊಂದು ರೀತಿಯ ಬರೆವಣಿಗೆಯ ಹಸಿವು. ಬರೆಯದೆ ಉಳಿದರೆ ತಾವೇನೋ ತಪ್ಪು ಮಾಡುತ್ತಿದ್ದೇವೆ ಎಂಬ ಅಪರಾಧಿ ಭಾವ. ಈ ಬರೆಯದೆ ಇರಲಾರೆನೆಂಬ ಮನಸ್ಥಿತಿಗೆ ಕಾರಣ ತಮ್ಮ ಸುತ್ತಲಿನ ಬದಲಾವಣೆಗೆ ಪ್ರತಿಕ್ರಿಯಿಸಲು ಅವರಿಗೆ ತಿಳಿದಿರುವ ಸರಳ ಮಾರ್ಗ ಸೃಜನಕ್ರಿಯೆ. ಹೇಗೆ ಬದಲಾವಣೆಗಳು ನಿರಂತರ ಪ್ರಕ್ರಿಯೆಗಳಾಗಿರುತ್ತವೆಯೋ ಇವರ ಬರೆವಣಿಗೆಯೂ ನಿರಂತರವಾಗಿರುತ್ತವೆ. ಪ್ರಗತಿಶೀಲ ಪಂಥದ ಸಾಹಿತಿಗಳಲ್ಲಿ ಈ ಬರೆವಣಿಗೆಯ ಹಸಿವು ಇತ್ತು. ಅವರು ಕೇವಲ ಬರೆಯಲಿಲ್ಲ ಬೀದಿಹೋರಾಟಗಳಿಗಿಳಿದೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮೊಗಸಾಲೆಯವರು ಕಾಂತಾವರದಲ್ಲಿ ಅಪೂರ್ವ ರೀತಿಯಲ್ಲಿ ಕನ್ನಡದ ಕೆಲಸ ಮಾಡುತ್ತಿದ್ದಾರೆ. ಬರೆವಣಿಗೆ ಕೂಡ ಅವರ ಕನ್ನಡ ಕಟ್ಟುವ ಕ್ರಿಯೆಗಳಲ್ಲಿ ಒಂದಾಗಿದೆ. ಅವರ ಬರೆವಣಿಗೆಯ ಹಸಿವು ಎಂದಿಗೂ ಹಿಂಗದಿರಲಿ.