ಅಂಗಳ ಇಲ್ಲದ ಮನೆ ಇರುವುದೆ? ನಮ್ಮೂರಂಥ ಹಳ್ಳಿಗಳಲ್ಲಿ ಮನೆಯ ಮುಂದೊಂದುಪುಟ್ಟ ಅಂಗಳವಿದ್ದರೆ ಅದರ ಶೋಭೆಯೇ ಬೇರೆ. ನಮ್ಮ ಕರಾವಳಿಯಲ್ಲಾಗಲಿ, ಮಗ್ಗುಲಿನ ಮಲೆನಾಡಿನಲ್ಲಾಗಲಿ ಬಯಲುಸೀಮೆಯಂತೆ ಗುಂಪು ಗುಂಪಾಗಿ ಮನೆಗಳು ಇರುವುದಿಲ್ಲ. ಎಲ್ಲರದೂ ಪ್ರತ್ಯೇಕ ಅಡಕೆ ಅಥವಾ ತೆಂಗಿನ ತೋಟ, ಇಲ್ಲವೆ ಎರಡರ ಬೆರಕೆಯ ಹಿತ್ತಿಲು. ಇದರಲ್ಲಿಯೇ ನಮ್ಮದು ಎನ್ನುವ ಮನೆ.
ಕಾತರ್ಿಕ ಮುಗಿಯಿತು ಎನ್ನುವುದೇ ತಡ ಮನೆಯ ಮುಂದೆ ಒಂದು ಅಂಗಳ ಸಿದ್ಧಪಡಿಸುವ ಚಡಪಡಿಕೆ ಎಲ್ಲರ ಮನೆಯ ಹೆಂಗಸರಿಗೆ. ಮುಂದೆ ಒಂದೊಂದೇ ಹಬ್ಬ ಹುಣ್ಣಿಮೆಗಳು, ತೇರು ಜಾತ್ರೆಗಳು, ಮದುವೆ ಮುಂಜಿಗಳು ಬರುವುದಲ್ಲವೆ? ಕಾರ್ಯ- ಖಟ್ಲೆ ತಮ್ಮದೇ ಮನೆಯಲ್ಲಿ ಅಲ್ಲದಿದ್ದರೂ ಊರಿಗೆ ಬಂದವರು ತಮ್ಮ ಮನೆಗೆ ಬಂದರೆ ಮನೆಯ ಮುಂದೆ ಚಂದದ ಅಂಗಳ ಇದ್ದರೆ ಮನೆಯೊಡತಿಗೆ ಅದೆಷ್ಟು ಸಂಭ್ರಮ? ಅಂಗಳ ಎಷ್ಟೊಂದು ಚಂದಾಗಿ ಇಟ್ಟಿದ್ದೀರಿ ಎಂದು ಯಾರಾದರೂ ಮನೆಗೆ ಬಂದ ಅತಿಥಿಗಳು ಹೇಳಿದರೆ ಬೆನ್ನು ಮೂಳೆಯಲ್ಲಿ ನೋವೆದ್ದು ಸೊಂಟದಲ್ಲಿ ಕಸು ಕಾಣಿಸಿಕೊಳ್ಳುವವರೆಗೆ ಅದನ್ನು ತಿಕ್ಕಿ ಒರೆದು ಸಾರಿಸಿ ರೂಪು ಕೊಟ್ಟವರಿಗೆ ಅದೆಷ್ಟು ಖುಷಿಯೋ.
ಗಂಡಸರನ್ನು ಕಾಡಿ ಬೇಡಿ ನಾಲ್ಕು ಬುಟ್ಟಿ ಕೆಂಪು ಮಣ್ಣು ತರಿಸಿಕೊಂಡು ಹಳೆಯ ಮಣ್ಣನ್ನು ಕೊಚ್ಚಿ ನೀರುಣಿಸಿ ಅದರ ಮೇಲೆ ಹೊಸ ಮಣ್ಣು ಹರಡಿ ಪೆಟ್ಟುಮಣೆ ತಗೊಂಡು ಸಮತಟ್ಟಾಗುವ ಹಾಗೆ ಪೆಟ್ಟಿಸುವರು. ಅಂಗಳ ಮಾಡುವ ಕಾಲದಲ್ಲಿ ರಾತ್ರಿ ಬಿದ್ದ ಹನಿ ಆರುವುದರೊಳಗೆ ನಸುಕಿನಲ್ಲಿ ಊರ ತುಂಬೆಲ್ಲ ಅಂಗಳ ಪೆಟ್ಟಿಸುವ ಸದ್ದೇ ಸದ್ದು. ಪಟ್ಪಟ್ ಸದ್ದಿಗೆ ಅದೇನೋ ಹಾಡು. ಆ ಹಾಡಿನ ಹಿನ್ನೆಲೆ ಸಂಗೀತವೋ ಎಂಬಂತೆ ವಿವಿಧ ಜಾತಿಯ ಹಕ್ಕಿಗಳ ಇಂಚರ. ಒಟ್ಟಾರೆ ಆಗಿನ ಮುಂಜಾವಿಗೆ ಅದೊಂದು ಬಗೆಯ ಸೇವೆ.
ಅಂಗಳ ಒಮ್ಮೆ ಸಮತಟ್ಟಾದ ಮೇಲೆ ಅದನ್ನು ನುಣುಪು ಮಾಡುವ ಕಾರ್ಯ. ಅಂಗಳ ನೂಣುಪು ಮಾಡುವುದಕ್ಕಾಗಿ ಒರೆಯಲು ತಿಕ್ಕಲು ಪ್ರತ್ಯೇಕ ಕಲ್ಲುಗಳನ್ನು ಇಟ್ಟಿರುತ್ತಾರೆ. ಪ್ರತಿ ವರ್ಷ ಬೇಕಲ್ಲ ಮತ್ತೆ? ಮಳೆಗಾಲದಲ್ಲಿ ಹೊಳೆಯಲ್ಲಿ ತೇಲಿಬರುವ ನುಣುಪು ಮೈಯ ಚಪ್ಪಟೆಯಾದ ಆಣೆಕಾಯಿಗಳನ್ನೂ ಅಂಗಳ ಒರೆಯಲು ಎತ್ತಿಟ್ಟಿರುತ್ತಾರೆ. ಬರಿಯ ನೀರು ಹಾಕಿ ಒರೆದರೆ ಚೆನ್ನಾಗಿ ನುಣುಪು ಆಗುವುದಿಲ್ಲವೆಂದು ಆಲಿ ಮರದ ಚೆಕ್ಕೆ ತಂದು ಅದನ್ನು ನೀರಿನಲ್ಲಿ ನೆನೆಸಿಟ್ಟು ಅಂಟು ನೀರಿನಿಂದ (ಇದಕ್ಕೆ ಬಂಪು ಅನ್ನುತ್ತಾರೆ) ಒರೆಯುತ್ತಾರೆ. ನಸುಕಿನಲ್ಲಿ, ರಾತ್ರಿಯಲ್ಲಿ ಹೀಗೆ ಒರೆದು ಆದ ಮೇಲೆ ಸೆಗಣಿಗೆ ಹಳೆಯ ಬ್ಯಾಟರಿ ಸೆಲ್ಲು ಒಡೆದು ಅದರ ಮಸಿ ಸೆರಿಸಿ ಕರ್ರಗೆ ಮಾಡಿ ಸಾರಿಸುತ್ತಾರೆ. ಅಲ್ಲಿಗೆ ಅಂಗಳ ಅಣಿಯಾಯಿತು.
ಹಳ್ಳಿಯಲ್ಲಿ ಹಳೆಕಾಲದ ಒಂಬತ್ತು ಅಂಕಣದ ಮನೆ. ಅದರ ಮುಂದೆ ಆರಂಕಣದ ಅಂಗಳ. ಊಹಿಸಿ ನೋಡಿ, ಅಷ್ಟು ದೊಡ್ಡ ಮನೆಗೆ ಇಷ್ಟು ದೊಡ್ಡ ಅಂಗಳ ಸಾಪೇಕ್ಷವಾಗಿ ಅನುಗುಣವಾದುದೆ. ಬಾಲ್ಯದೊಂದಿಗೆ ಅಂಗಳ ಬಿಡಿಸದ ನಂಟಾಗಿ ಅಂಟಿಕೊಂಡುಬಿಟ್ಟಿದೆ. ನಮ್ಮ ಮನೆಯಂಗಳದ ಮೂಲೆಯಲ್ಲಿ ಒಂದು ದೊಡ್ಡ ಅಮಟೆ ಮರ ಇದ್ದದ್ದು ಇನ್ನೂ ನೆನಪಿನಲ್ಲಿದೆ. ಅದೀಗ ಇಲ್ಲ. ಆದರೆ ಅಮಟೆಯ ಹುಳಿ, ಅದರ ಎಳೆಯ ಚಿಗುರಿನಲ್ಲಿರುತ್ತಿದ್ದ ಸಾದ ನೆನಪಾದಾಗೊಮ್ಮೆ ಬಾಯಲ್ಲಿ ನೀರೂರಿಸುತ್ತದೆ.
ಅಂಗಳದ ಇನ್ನೊಂದು ಮೂಲೆಯಲ್ಲಿ ತುಳಸಿಕಟ್ಟೆ, ಸ್ವಲ್ಪ ದೊಡ್ಡದೇ ಎನ್ನಬೇಕು. ಅದು ಈಗಲೂ ಇದೆ. ಅದರ ಬೆನ್ನಲ್ಲೇ ಪಾರಿಜಾತ ವೃಕ್ಷ.
ಪಾರಿಜಾತಕ್ಕಾಗಿ ಕೃಷ್ಣ ದೇವಲೋಕಕ್ಕೇ ದಾಳಿ ಮಾಡಿದನಂತೆ. ನಮಗೋ ನಮ್ಮ ಮನೆಯಂಗಳದಲ್ಲೇ ಅನಾಯಾಸವಾಗಿ ಪಾರಿಜಾತ ಬೀಳುತ್ತದೆ. ಅಂಗಳದ ತುಂಬೆಲ್ಲ ಅದು ಹರಡಿಕೊಂಡು ಬಿದ್ದುದನ್ನು ನೋಡಿದವರಿಗೆ ಹೂವಿನ ಹಾಸುಗೆ ಎಂದರೆ ಇದೇ ಎಂದು ಅನ್ನಿಸದೆ ಇರದು. ಹಾಲುಬಣ್ನದ ಪಕಳೆಗಳು, ಹವಳದ ಬಣ್ನದ ದೇಟು. ಅದೆಂಥ ಸೊಗಸು! ಬೆಳಿಗ್ಗೆ ಕಣ್ಣುಜ್ಜಿಕೊಳ್ಳುತ್ತ ಹಾಸುಗೆಯಿಂದ ಎದ್ದು ಅಂಗಳಕ್ಕೆ ಬಂದೆವೆಮದರೆ ಪಾರಿಜಾತದ ಗಮಗಮಿಸುವ ಪರಿಮಳ ಮೂಗು ತುಂಬುತ್ತದೆ.
ಇದೇ ಪಾರಿಜಾತವನ್ನು ಹುಡುಗರೆಲ್ಲ ಸೇರಿ ಒಟ್ಟು ಮಾಡಿ ನೂಲಿನಲ್ಲೋ ಪೊರಕೆಯ ಕಡ್ಡಿಗೋ ಪೋಣಿಸಿ ಹಾರ ಮಾಡಿಕೊಂಡು ಕುಣಿದು ಖುಷಿಪಟ್ಟಿದ್ದೇವೆ. ಲಾಂಚು ಬರುವ ವೇಳೆಗೆ ಬಂದರಿಗೆ ಹೋಗಿ ಲಾಂಚಿನಲ್ಲಿ ಕುಳಿತ ಹೆಂಗಸರಿಗೆ ಮಾರುವ ಪ್ರಯತ್ನ ಮಾಡಿದ್ದೇವೆ. ಹಾಲುಬೆಳ್ಳಗಿನ ಪಾರಿಜಾತದ ಪಕಳೆಗಳು ಹೊತ್ತು ಕಳೆದಂತೆ ಅದರ ಹವಳದ ದೇಟಿನ ಬಣ್ಣಕ್ಕೆ ತಿರುಗುವುದನ್ನು ಕಂಡು ನಾವೂ ಮುಖ ಒಣಗಿಸಿಕೊಂಡಿದ್ದೇವೆ.
ಈ ಅಮಟೆ ಮರವನ್ನು ಏರುವುರಿಂದಲೇ ನಮ್ಮ ಮರ ಹತ್ತುವ ಕಸಬುಗಾರಿಕೆ ಆರಂಭವಾದದ್ದು. ನಾವೆಲ್ಲ ಹುಡುಗರು ಈ ಅಮಟೆ ಮರವನ್ನೊಳಗೊಂಡು ವಿವಿಧ ಆಟಗಳನ್ನು ಆಡುತ್ತಿದ್ದೆವು. `ಅಜ್ಜನ ಬೆನ್ನಿಗೆ ಗುದ್ದು ಕೊಟ್ರೆ ಅದೊಂದುಪಾಯ, ಅಮಟೆ ಮರಕ್ಕರ ಗುಮಟೆ ಕಟ್ಟಿದ್ರೆ ಅದೊಂದುಪಾಯ’ ಎಂದು ಹಾಡಿಕೊಳ್ಳುತ್ತ ಆ ಮರವನ್ನು ಸುತ್ತುಹಾಕುತ್ತಿದ್ದೆವು. ಒಮ್ಮೆ ಅಕ್ಕ ಚಂಡಿ ಹಿಡಿದವಳಂತೆ ಹಟ ಮಾಡಿದಾಗ ಅಪ್ಪ ಅವಳನ್ನು ಈ ಅಮಟೆ ಮರದ ಹೆಗೆಯ ಮೇಲೆ ಕುಳ್ಳಿರಿಸಿ, ಕೆಳಗೆ ಇಳಿದರೆ ಕಾಲು ಮುರಿಯುತ್ತೇನೆ ಎಂದು ಅಬ್ಬರಿಸಿದ್ದ.
ಅಂಳದಲ್ಲಿ ನೆರಳಿಗೆ ಚಪ್ಪರ ಹಾಕುವರು. ಚಪ್ಪರದ ಕಂಬ ನೆಡುವುದಕ್ಕೂ ಮುಹೂರ್ತ ಇದೆ. ಒಳ್ಳೆಯ ದಿನ ಮುಹೂರ್ತ ನೋಡಿ ಕಂಬ ನೆಟ್ಟ ಮೇಲೆ ಚಪ್ಪರ. ಚಪ್ಪರದ ನೆರಳು ಮನೆಯ ಮುಂದೆ ಇದ್ದಾಗ ತಲೆಗೂ ತಂಪು, ಎದೆಗೂ ತಂಪು. ಈ ನೆರಳಿನಲ್ಲಿಯೇ ಸಂಜೆಯ ಹೊತ್ತು ಅವ್ವ ಹೆಣ್ಣುಮಕ್ಕಳನ್ನು ಕುಳ್ಳಿರಿಸಿಕೊಂಡು ತಲೆ ಬಾಚಿ ಹೇನು ತೆಗೆದಿದ್ದಾಳೆ. ಹೇನು ತೆಗೆದು ಹಣಿಗೆಯ ಮೇಲೆ ಇಟ್ಟು ಚಟ್ ಎಂದು ಒರೆದು, `ರಕ್ತ ಕುಡಿದು ಎಷ್ಟು ದಪ್ಪ ಆಗಿದೆ ನೋಡು’ ಎಂದು ಮಕ್ಕಳಿಗೆ ಹೇಳುತ್ತಿದ್ದುದು ನಿನ್ನೆಯೋ ಮೊನ್ನೆಯೋ ಎಂಬಂತೆ ಮನಸ್ಸಿನಲ್ಲಿ ಅಚ್ಚೊತ್ತಿದೆ.
ಚಪ್ಪರದ ಎಳೆಗೆ ಜೋಕಾಲಿ ಕಟ್ಟಿ ಜೀಕಿದವರಲ್ಲವೆ ನಾವೆಲ್ಲ. ಇಲ್ಲಿಯೇ ಅಲ್ಲವಾ ನಾವು ಮೂರು ಚಕ್ರದ ಗಾಡಿ ಹಿಡಿದು ಅಂಬೆಗಾಲಿಡುತ್ತ ನಡೆಯುವುದನ್ನು ರೂಢಿ ಮಾಡಿಕೊಂಡಿದ್ದು. ಚಪ್ಪರದ ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಓಡುತ್ತ ಆಡಿದ್ದು ನಾವೇ ಅಲ್ಲವಾ. ಕಂಬಕ್ಕೆ ತಲೆ ಡಿಕ್ಕಿ ಹೊಡೆದು ಉಬ್ಬು ಬಂದು ಅತ್ತಿದ್ದು ನಾವೇ ಅಲ್ಲವಾ.
ಅಂಗಳದ ಒಂದು ಕಡೆ ಒರಳು. ಈ ಒರಳಿನಲ್ಲಿಯೇ ಕೊರಸಿದ ಬತ್ತವನ್ನು ಒನಕೆಯಿಂದ ಮೆರಿದು ಅಕ್ಕಿ ಮಾಡುತ್ತಿದ್ದರು. ಒನಕೆಯ ಏರು ಇಳಿತಕ್ಕೆ ಅನುಗುಣವಾಗಿ ಹಾಡು ಹೇಳುತ್ತಿದ್ದ ಬತ್ತ ಮೆರಿಯುವುದಕ್ಕೆ ಬರುತ್ತಿದ್ದ ತನ್ಮಡಗಿ, ಮರಬಳ್ಳಿ ಮೊದಲಾದವರು ಈಗ ಮುದುಕಿಯರಾಗಿರಬೇಕು. ಈಗ ಒರಳಿಗೆ ಕೆಲಸವೇ ಇಲ್ಲ. ಸುಗ್ಗಿಯ ನಮತರ ಮಿಲ್ಲಿಗೆ ಬತ್ತ ಒಯ್ದು ಅಕ್ಕಿ ಮಾಡಿಸುವರು. `ನಿರುಪಯುಕ್ತ’ ಒರಳು ಮುಚ್ಚಿ ಹೋದರೆ ಒನಕೆ ಅಟ್ಟ ಸೇರಿದೆ.
ಇದೇ ಅಂಗಳದಲ್ಲಿಯೇ ನಮ್ಮೆಲ್ಲ ಅಕ್ಕತಂಗಿಯರ ಮದುವೆ ಆದದ್ದು. `ನಮ್ಮ ಮನೆಯಂಗಳದಿ ಬೆಳೆದೊಂದು ಹೂವ ನಿಮ್ಮ ಕೈಯೊಳಗಿಡುತಿಹೆವು ಇಂದು’ ಎಂದು ದುಃಖ ಒತ್ತರಿಸಿ ಹೆಣ್ಣು ಒಪ್ಪಿಸಿಕೊಡುವ ದೃಶ್ಯ ನೆನಪಿಸಿಕೊಂಡಾಗ ಈಗಲೂ ಕಣ್ಣು ತೇವವಾಗುವುದು. ಅವ್ವ, ಅಕ್ಕ, ತಂಗಿ ಇವರೆಲ್ಲ ಸುರಿಸಿದ ಕಣ್ಣೀರು ಈ ಅಂಗಳದ ಮಣ್ಣಿನಲ್ಲಿ ಇಂಗಿ ಹೋಗಿದೆ.
ಗೋ ಪೂಜೆಯ ಹಬ್ಬದಂದು ಮನೆಯ ಅಂಗಳದಿಂದ ಕೊಟ್ಟಿಗೆಯ ತನಕ ಆಕಳ ಕೊಳಚಿನ ರೂಪದ ರಂಗೋಲಿ, ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಂಬರೆಯುತ್ತಿದ್ದೆವು. ಸಣ್ಣ ಮಕ್ಕಳಾದ ನಮಗೆ ನಸುಕಿನಿಂದ ಅದೇ ಒಂದು ದೊಡ್ಡ ಕೆಲಸ. ಆ ಕೆಲಸದಲ್ಲಿ ತೊಡಗಿದ್ದಾಗ ಬೇರೆ ಯಾವುದಾದರೂ ಕೆಲಸ ಯಾರಾದರೂ ಹೇಳಿದರೆಂದರೆ ನಮಗೆ ದೊಡ್ಡ ಕೋಪ. ತುಳಸಿಯ ಮುಂದೆ ನಿತ್ಯವೂ ಹೆಣ್ಣು ಮಕದಕಳು ದೊಡ್ಡ ರಂಗೋಲಿ ಹಾಕುವರು. ಒಂದೊಂದು ದಿನ ಒಬ್ಬೊಬ್ಬರು. ನಿನ್ನೆ ಆಕೆ ಬಿಡಿಸಿದ್ದಕ್ಕಿಂತ ಇಂದು ನಾನು ಚೆನ್ನಾಗಿ ಬಿಡಿಸಬೇಕೆಂಬ ಪೈಪೋಟಿಯ ಮೇಲೆ ಬಿಡಿಸುತ್ತಿದ್ದುದರಿಂದ ಅಂಗಳದಲ್ಲಿಯ ರಂಗೋಲಿಯನ್ನು ದಾರಿಯಲ್ಲಿ ಹೋಗುವವರು ಒಂದು ಕ್ಷಣ ನಿಂತು ನೋಡಿ ಹೋಗುತ್ತಿದ್ದರು. ದೇವರ ಕಾರ್ಯ ಇದ್ದಾಗಲಂತೂ ರಂಗೋಲಿಗೆ ವಿಶೇಷ ಮೆರಗು.
ಕಳ್ಳುಬಳ್ಳಿಯ ನಂಟು
ಅಂಗಳಕ್ಕೂ ಕಳ್ಳುಬಳ್ಳಿಗೂ ಅದೇನೋ ನಂಟು. ನಾವು ಹುಟ್ಟಿ ಬಂದಾಗ ನಮ್ಮ ಹೊಕ್ಕುಳ ಹುರಿಯನ್ನು ಈ ಅಂಗಳದ ಮೂಲೆಯಲ್ಲೆಲ್ಲೋ ಹುಗಿದಿರುತ್ತಾರಂತೆ. ಈ ಕಳ್ಳುಬಳ್ಳಿಯ ನಂಟು ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತದೆ. ಮದುವೆಯಂಥ ಸಂಭ್ರಮದ ಕಾಲದಲಿ ಒಂದು ರೀರಿಯ ಕಣ್ಣೀರು ಚಿಮ್ಮಿದ್ದರೆ ಹೆತ್ತವರನ್ನು ಕಳೆದುಕೊಂಡಾಗ ಈ ಅಂಗಳದಲ್ಲಿಯೇ ದುಃಖದಿಂದ ಕಣ್ಣೀರು ಸುರಿಸಿದ್ದೇವೆ. ನಮ್ಮ ಅಪ್ಪ, ಅವ್ವ ತೀರಿಕೊಂಡಾಗ ಅವರು ನಮಗೆ ಕೈತುತ್ತು ನೀಡಿ ಮುದ್ದು ಮಾಡಿದ ಅಂಗಳದಲ್ಲೇ ಹೆಣವಾಗಿ ಮಲಗಿದ್ದಾಗ ನಾವು ನಮ್ಮ ಹಮ್ಮು ಬಿಮ್ಮು ತೊರೆದು ಮನಸ್ಸು ಹಗುರಾಗುವ ವರೆಗೆ ಅತ್ತಿದ್ದೇವೆ. ಆ ಕರುಳ ಬಳ್ಳಿಯನ್ನು ಹರಿದುಕೊಂಡ ದುಃಖದ ಸಮಯದಲ್ಲಿ ನಮ್ಮವರೆನ್ನುವವರು ಸೇರಿ ನಮ್ಮನ್ನು ಸಮಾಧಾನಪಡಿಸಿ ಅನಾಥ ಪ್ರಜ್ಞೆಯನ್ನು ಕೆಲ ಮಟ್ಟಿಗೆ ದೂರ ಮಾಡಿದ್ದೂ ಇದೇ ಅಂಗಳದಲ್ಲಿಯೇ.
ಗಡುಗಾಲದ ಗುಡುಗು ಕೇಳಿದ ಕೂಡಲೆ ಹೆಂಗಸರಿಗೆ ಆತಂಕ. ಅದೆಷ್ಟು ಕಷ್ಟಪಟ್ಟು ಮಾಡಿದ ಅಂಗಳ ಈ ಮಳೆಗಾಲದಲ್ಲಿ ಕೆಸರೆದ್ದು ಹೋಗಿಬಿಡುವುದಲ್ಲ ಎಂದು. ಪ್ರಕೃತಿ ಚಕ್ರಕ್ಕೆ ಅಡ್ಡಿ ಒಡ್ಡುವುದು ಸಾಧ್ಯವೆ? ಮಾತನಾಡದ ಅಂಗಳ ಮನದಟ್ಟು ಮಾಡಿಸುವ ವೇದಾಂತವದು. ಮಳೆ ಸುರಿದೇ ಸುರಿಯುತ್ತದೆ. ಆಸ್ಥೆಯಿಂದ ಪೆಟ್ಟಿಸಿ, ಒರೆದು ರೂಪಿಸಿದ ಅಂಗಳದಲ್ಲಿ ನೀರು ನಿಂತು ಕಪ್ಪೆಗಳು ವಟರ್ ವಟರ್ ಎನ್ನುತ್ತ ಹಾರಾಡುವುದನ್ನು ನೋಡುತ್ತ ನಿಡುಸುಯ್ಯುವರು.
ಈ ಅಂಗಳಕ್ಕೆ ಒಂದೂವರೆ ಅಡಿ ಎತ್ತರದ ಕಲ್ಲು ಕಟ್ಟೆ. ಈ ಕಟ್ಟೆ ಕಲ್ಲುಗಳು ನಮ್ಮ ಮನೆಯವರ ಎಲ್ಲ ನೋವು ನಲಿವುಗಳಿಗೆ ಸಾಕ್ಷಿಯಾಗಿ ಉಳಿದಿವೆ. ಮುಂದೆಯೂ ಉಳಿಯಲಿವೆ, ಉಳಿದವರ ಅಳಿದವರ ನಡುವೆ ಸಂಬಂಧ ಕುದುರಿಸುವ ಮಧ್ಯಸ್ಥನಂತೆ. ನಮ್ಮ ಬಿಕ್ಕಳಿಕೆ, ನಗುವಿನ ಕೇಕೆಗಳನ್ನು ಆಗಾಗ ಪ್ರತಿಧ್ವನಿಸುತ್ತ, ಇರುವವರ ನಡುವೆ ಇಲ್ಲದವರ ನೆನಪಿಸುತ್ತ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.