ಏಕೀಕರಣದ ವರೆಗಿನ ಪತ್ರಿಕೆಗಳು ಮತ್ತು ಸಾಹಿತ್ಯ
ಬಂಗಾಳ ವಿಭಜನೆಯ ಕಾಲಕ್ಕೆ ಕನ್ನಡ ಸಾಹಿತ್ಯ ಆಧುನಿಕ ರೂಪವನ್ನು
ಪಡೆದುಕೊಳ್ಳುವ ನಿಟ್ಟಿನಲ್ಲಿ ತೀವ್ರ ಪ್ರಯತ್ನವನ್ನು ನಡೆಸಿತ್ತು. ಅದೇ ರೀತಿ ಕನ್ನಡ
ಪತ್ರಿಕೋದ್ಯಮಕ್ಕೂ ಅರವತ್ತು ವರ್ಷಗಳ ಪರಂಪರೆಯೊಂದು ನಿರ್ಮಾಣವಾಗಿತ್ತು.
ಪತ್ರಿಕೆಯ ಪ್ರಯೋಜನವನ್ನು ಹಲವು ರೀತಿಗಳಲ್ಲಿ ಕಂಡುಕೊಳ್ಳಲಾಗಿತ್ತು. ಸಾಹಿತ್ಯ
ಪೋಷಣೆಗಾಗಿಯೇ, ಸಾಹಿತ್ಯದಲ್ಲಿ ಹಳೆಯದಕ್ಕಿಂತ ಭಿನ್ನವಾಗಿ ಹೊಸ ರೂಪದಲ್ಲಿ
ಅಭಿವ್ಯಕ್ತಿಯನ್ನು ತರಬೇಕು ಎಂಬ ಉದ್ದೇಶದಿಂದಲೇ ಪತ್ರಿಕೆಗಳೂ ಹೊರಟಿದ್ದನ್ನು
ನೋಡಿದೆವು. ಸಾಹಿತ್ಯ ಪೋಷಣೆಯ ಹಂಬಲದೊಂದಿಗೆ ಪತ್ರಿಕೆಯನ್ನು ಆರಂಭಿಸುವುದು
ಈಗಲೂ ಮುಂದುವರಿಯಿತು. ಆರಂಭಕಾಲದ ಪತ್ರಿಕೆಗಳಿಗೆ ಹೇಗೆ ಕರ್ನಾಟಕ ಮತ್ತು
ಕನ್ನಡತನ ಪ್ರಾಮುಖ್ಯವಾಗಿದ್ದವೋ ಈ ಕಾಲದ ಪತ್ರಿಕೆಗಳಿಗೆ ಅವುಗಳ ಜೊತೆಯಲ್ಲಿ
ರಾಷ್ಟ್ರೀಯತೆ ಸೇರಿಕೊಂಡಿತು.
ಬಂಗಾಳ ವಿಭಜನೆಯಿಂದ ಏಕೀಕರಣದ ವರೆಗಿನ ಕಾಲಘಟ್ಟ ಕನ್ನಡ ನಾಡಿನ
ರಾಜಕೀಯ, ಸಾಂಸ್ಕೃತಿಕ ರಂಗದಲ್ಲಿ ಅತ್ಯಂತ ಮಹತ್ವದ ಕಾಲವಾಗಿದೆ. ಈ
ಕಾಲಘಟ್ಟದಲ್ಲಿಯೂ ಪತ್ರಿಕೆ ಮತ್ತು ಸಾಹಿತ್ಯದ ಆಶಯ ಒಂದೇ ಆಗಿತ್ತು. ಈ ಐದು
ದಶಕಗಳ ಅವಧಿಯಲ್ಲಿ ಆಧುನಿಕ ಕನ್ನಡ ಸಾಹಿತ್ಯದ ಮೂರು ಪ್ರಮಖ ಪಂಥಗಳು
ಆರಂಭಗೊಂಡವು. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಪಂಥಗಳು ತಮ್ಮ
ನೆಲೆಗಳನ್ನು ಭದ್ರಪಡಿಸಿಕೊಂಡಿದ್ದು ಪತ್ರಿಕೆಗಳ ಮೂಲಕವೇ. ಈ ಸಾಹಿತ್ಯ ಪಂಥಗಳ
ತತ್ವಗಳು, ಸಾಹಿತ್ಯ ಮೀಮಾಂಸೆ, ವಿಮರ್ಶೆಗಳೆಲ್ಲ ಪತ್ರಿಕೆಯ ಮಾಧ್ಯಮದಿಂದಲೇ
ಸ್ಥಾಪನೆಗೊಂಡವುಗಳು. ಏಕೀಕರಣದ ವರೆಗಿನ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ನಾಡಿನ
ಏಕೀಕರಣ, ನುಡಿಯನ್ನು ಬಲಗೊಳಿಸಬೇಕೆಂಬ ಕಳಕಳಿ ಒಟ್ಟೊಟ್ಟಿಗೆ ಕಂಡು ಬರುತ್ತದೆ.
ಇವೆಲ್ಲ ನವೋದಯ ಸಾಹಿತ್ಯದ ಪ್ರಮುಖ ಆಶಯವೂ ಹೌದು. ಜೊತೆಯಲ್ಲಿ ದೇಶದ
ಸ್ವಾತಂತ್ಯ್ರದ ಹೋರಾಟದ ಬಗೆಗೆ, ಗಾಂಧೀ ಚಿಂತನೆಗಳ ಬಗೆಗೆ ಸಾಹಿತಿಗಳು ಕೃತಿ ರಚನೆ
ಮಾಡಿದ್ದಾರೆ. ಸ್ವಾತಂತ್ಯ್ರದ ಬಗೆಗಿನ ಕೃತಿಗಳಲ್ಲಿ ಪ್ರಗತಿಶೀಲರಲ್ಲಿ ಪ್ರಮುಖರಾದ
ಬಸವರಾಜ ಕಟ್ಟಿಮನಿಯವರ ಮಾಡಿ ಮಡಿದವರು' ಪ್ರಮುಖವಾದುದು. ಈ ಕೃತಿಯನ್ನು ಉಲ್ಲೇಖಿಸುವ ಕಾರಣ ಇಷ್ಟೇ, ದೇಶದ ಸ್ವಾತಂತ್ಯ್ರ ಕೇವಲ ನವೋದಯ ಸಾಹಿತಿಗಳ ಕಾಳಜಿ ಆಗಿರಲಿಲ್ಲ ಎನ್ನುವುದು. ಈ ಸ್ವಾತಂತ್ಯ್ರವನ್ನು ಗಳಿಸಿಕೊಂಡ ಬಳಿಕ ಅಪಾರವಾದ ನಿರೀಕ್ಷೆಗಳು ಈಡೇರದೆ ಆದ ಹತಾಶೆಯನ್ನು ನವ್ಯ ಸಾಹಿತ್ಯದಲ್ಲಿ ಕಾಣಬಹುದು. ಪ್ರಗತಿಶೀಲರ ಧೋರಣೆಗಳ ಮಂಡನೆ ಖಂಡನೆಗಳು, ನವ್ಯ ಬಗೆಗಿನ ಟೀಕೆಗಳು, ಸಮರ್ಥನೆಗಳೆಲ್ಲ ಪತ್ರಿಕೆಗಳಲ್ಲಿ ದಾಖಲಾಗಿವೆ. ಇವುಗಳಿಗೆ ಪತ್ರಿಕೆಗಳು ವೇದಿಕೆಯಾಗಿವೆ. ಬಂಗಾಳ ವಿಭಜನೆಯಿಂದ ಏಕೀಕರಣದ ವರೆಗಿನ ಸಾಹಿತ್ಯಕ ಕಾಳಜಿ ಮುಖ್ಯವಾಗಿ ಒಂದೇ ಆಗಿರುವುದರಿಂದ ಈ ಕಾಲಘಟ್ಟವನ್ನು ಪ್ರತ್ಯೇಕ ಅಧ್ಯಾಯದಲ್ಲಿ ಅಭ್ಯಾಸಕ್ಕೆ ವಿಭಾಗಿಸಿಕೊಂಡಿದ್ದು ಸರಿ ಎಂದು ಭಾವಿಸಲಾಗಿದೆ. ಮುದವೀಡು ಕೃಷ್ಣರಾಯರು ಕರ್ನಾಟಕ ಏಕೀಕರಣದ ಮಹತ್ವ ಪ್ರತಿಪಾದಿಸಿದ ಆದ್ಯರಲ್ಲಿ ಒಬ್ಬರು. ಅವರು ತಮ್ಮ
ಕರ್ನಾಟಕ ವೃತ್ತ’ ಮತ್ತು ಹೊಸಕೇರಿ ಅಣ್ಣಾಚಾರ್ಯ
ರ ಧನಂಜಯ' ಪತ್ರಿಕೆಗಳಲ್ಲಿ ಬಂಗಾಳ ವಿಭಜನೆಯನ್ನು ಖಂಡಿಸಿ ಬರೆದರು. ಬಂಗಾಳ ವಿಭಜನೆ ವಿರೋಧಿಸಿ ಉತ್ತರ ಕರ್ನಾಟದಲ್ಲಿ ನಡೆದ ಆಂದೋಲನದ ವರದಿ ಅವರ ಪತ್ರಿಕೆಯಲ್ಲಿ ದೊರೆಯುತ್ತದೆ. ಇದೊಂದೇ ಅಲ್ಲ ಆ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಕಟ ಗೊಳ್ಳುತ್ತಿದ್ದ ಬಹುತೇಕ ಪತ್ರಿಕೆಗಳಲ್ಲಿ ಈ ಬಗೆಗೆ ವಿರೋಧ ವ್ಯಕ್ತವಾಗಿದೆ. ಇದೇ ಸಮಯಕ್ಕೆ ಬಂಗಾಲಿ ಸಾಹಿತ್ಯದ ಬಗೆಗಿನ ಆಸಕ್ತಿ ಇನ್ನಷ್ಟು ಹೆಚ್ಚಿತು. ಬಂಗಾಲಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸುವ ಪರಿಪಾಠ ಮೊದಲಾಯಿತು. ಪರಭಾಷೆಯ ದಬ್ಬಾಳಿಕೆ ವಿರುದ್ಧ ಧ್ವನಿ: ಬಂಗಾಲಿಯ ಜೊತೆಯಲ್ಲಿ ಯೇ ಇಂಗ್ಲಿಷ್ ಸಾಹಿತ್ಯದಿಂದಲೂ ಅನುವಾದಗಳು ನಡೆದವು. ಇವುಗಳ ಹಿಂದಿನ ಉದ್ದೇ ಶ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವುದು. ಕನ್ನಡದಲ್ಲಿ ಅದಿಲ್ಲ ಇದಿಲ್ಲ ಎಂಬ ಕೊರತೆ ಕಾಣಬಾರದು. ಕನ್ನಡದ ಬಗೆಗೆ ಅಭಿಮಾನ ಕಡಿಮೆಯಾಗಬಾರದು ಎನ್ನುವುದು. ಇಷ್ಟಾಗಿಯೂ ಕನ್ನಡಿಗರ ನಿರಭಿಮಾನದ ಬಗೆಗೆ ಒಮ್ಮೊಮ್ಮೆ ಸಿಟ್ಟು ಕಾಣಿಸಿಕೊಂಡಿದೆ.
ಸ್ವತ್ವ ಇರಲಿಲ್ಲ.’ ತಾವು ಮರಾಠಿಗರು, ತೆಲುಗರು, ಮದ್ರಾಸಿಗಳು ಎಂದೇ ಕನ್ನಡದ ಜನ ಸಂತೋಷವಾಗಿ ತಮ್ಮ ಕುಲಗೆಡಿಸಿಕೊಳ್ಳಲೂ ಸಿದ್ಧರಾಗಿದ್ದರು ಎಂದು ಒಬ್ಬರು ಬರೆಯುತ್ತಾರೆ.1
ಇದಕ್ಕೆ ಅಂದಿನ ವಿದ್ಯಾಭ್ಯಾಸವೂ ಒಂದು ಕಾರಣವಾಗಿರಬಹುದು. ಸಾಕಷ್ಟು ಶಾಲೆಗಳು
ಇಲ್ಲದಿರುವುದು ಒಂದು. ಜೊತೆಗೆ ಇದ್ದ ಶಾಲೆಗಳಲ್ಲಿ ಮರಾಠಿ ಬೋಧನೆ ಪ್ರಾಥಮಿಕ
ಹಂತದಲ್ಲಿ. ದೊಡ್ಡವರಾದ ಬಳಿಕ ಇಂಗ್ಲಿಷ್, ನೌಕರಿ ಪಡೆದುಕೊಳ್ಳಲು. ಕನ್ನಡ
ಭಾಷಿಕರಿಗೊಂದು ಭೌಗೋಳಿಕ ಸಮಗ್ರತೆ, ರಾಜಕೀಯ ಮುಂದಾಳತ್ವ ಇಲ್ಲದಿರುವುದೂ
ಪರದೇಶಿ ಭಾವನೆ ಮೂಡಲು ಕಾರಣವಾಗಿತ್ತು. ಪರಸತ್ತೆ, ಪರಭಾಷಾಭ್ಯಾಸ, ಪರಭಾಷೆಯ ಪುಸ್ತಕ- ಪತ್ರಿಕೆಗಳ ಮೇಲಿನ ಮೋಹ ಇವು ನಮ್ಮನ್ನು ಪರದೇಶಿಗಳನ್ನಾಗಿ ಮಾಡಿವೆ''2 ಎಂಬುದು ನಾ.ವೆ. ಕುರಡಿಯವರ ಆತ್ಮನಿವೇದನೆ. ಇದು ಕೇವಲ ಧಾರವಾಡದಲ್ಲಿ ಮಾತ್ರವಲ್ಲ, ಎಲ್ಲ ಕನ್ನಡ ಭಾಷಿಕ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಇತ್ತು. `ಪ್ರಬುದ್ಧ ಕರ್ನಾಟಕ'ಕ್ಕೆ ಐವತ್ತು ವರ್ಷತುಂಬಿದ ಸಂದರ್ಭದಲ್ಲಿ `ಕನ್ನಡ ಪ್ರಭ'ದ ತಮ್ಮ `ಸಾಹಿತ್ಯ ಸಲ್ಲಾಪ' ಅಂಕಣದಲ್ಲಿ ಡಾ.ಹಾ.ಮಾ.ನಾಯಕರು `ಕನ್ನಡದಲ್ಲಿಯೂ ಕಲಿಯುವುದು ಇದೆ; ಇಂಗ್ಲಿಷಿನ ಹಾಗೆಯೇ ಕಲಿಯುವುದು ಇದೆ. ಬಂಗಾಳಿಗಳಲ್ಲಿ, ಮರಾಠಿಗರಲ್ಲಿ ಇರುವ ಅಭಿಮಾನ ನಮ್ಮಲ್ಲೂ ಮೂಡಬೇಕು; ನಮ್ಮ ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಎಚ್ಚರವಾಗಬೇಕು- ಎಂದು ಆ ದಿಕ್ಕಿನಲ್ಲಿ ಪ್ರವಾದಿಯಾದ ಕೃಷ್ಣಶಾಸ್ತ್ರಿಗಳು ಎರಡು ಪ್ರಬಲ ಸಾಧನಗಳನ್ನು ಬಳಸಿದರು; ಒಂದು ಬೆಂಗಳೂರು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ, ಇನ್ನೊಂದು ಅದರ ಮುಖಪತ್ರವಾಗಿ ಆರಂಭಗೊಂಡ ಪ್ರಬುದ್ಧ ಕರ್ನಾಟಕ'3 ಎಂಬ ಮಾತನ್ನು ಹೇಳಿದ್ದಾರೆ. ಹಾ.ಮಾ.ನಾಯಕರ ಅನಿಸಿಕೆ ಕುರಡಿಯವರ ಅಭಿಪ್ರಾಯದ ಮುಂದುವರಿಕೆ ಎಂದೇ ಹೇಳಬೇಕು. `ಕರ್ನಾಟಕದ ಗರ್ಭದಂತಿರುವ ಧಾರವಾಡದಲ್ಲಿಯೂ ಕನ್ನಡ ಸಾಲೆಗಳಲ್ಲಿ ಮರಾಠಿಯನ್ನೂ ಬಾಲಬೋಧ ಲಿಪಿಯನ್ನೂ ಕಲಿಸಬೇಕೆಂಬುದು ಸರ್ಕಾರದ ಧೋರಣೆಯಾಗಿ ಕುಳಿತಿತ್ತು'4 ಎಂಬುದು ಕುರಡಿಯವರ ಕೊರಗಾಗಿತ್ತು. ಧಾರವಾಡದ ಕಡೆ ಹೀಗಾದರೆ ದಕ್ಷಿಣದ ಕಡೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿರಲಿಲ್ಲ. ಪುಟ್ಟಮ್ಮನೆಂಬ ಹೆಂಗಸೊಬ್ಬಳ ಕಷ್ಟದ ಕಥೆಯನ್ನು ೩೬ ಭಾಮಿನಿ ಷಟ್ಪದಿಗಳಲ್ಲಿ ಹೇಳಿದ ಕವಿಯು ೩೭ನೆ ಷಟ್ಪದಿಯಲ್ಲಿ- `ನಮ್ಮ ಕನ್ನಡ ದೇವಿಗೂ ಪು ಟ್ಟಮ್ಮನಂತಾಪತ್ತು ಬಂದಿದೆ ಬಿಮ್ಮನಾ ಇಂಗ್ರಜಿಯ ಕತ್ತಲೆಯನ್ನು ಕನ್ನಡಕೆ॥' ಎನ್ನುವರು. ಕನ್ನಡದ ಬಗ್ಗೆ ಇಂಥ ಕಳಕಳಿ ವ್ಯಕ್ತಪಡಿಸಿದವರು ಎಂ.ತಿಮ್ಮಪ್ಪಯ್ಯನವರು.5 ಇಂಥ ನುಡಿಯ ಬಗೆಗಿನ ಅಭಿಮಾನವೇ ಕರ್ನಾಟಕ ಏಕೀಕರಣದ ಹಿಂದಿನ ಸತ್ವವೂ ಆಗಿತ್ತು. ಕನ್ನಡತನ, ಕನ್ನಡಿಗರ ಅಭಿಮಾನವನ್ನು ಕೆರಳಿಸುವ ಪದ್ಯವೊಂದನ್ನು ಶಾಂತಕವಿಗಳು ಬರೆದದ್ದು ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿದೆ.6 `ಎಲ್ಲಿರುವುದಭಿಮಾನ? ಕನ್ನಡಿಗರೇ! ಪೇಳಿ ಸುಳ್ಳೆ ಬಡಬಡಿಸುವಿರಿ ಸಭೆಗಳಲ್ಲಿ |ಪ| ಗುರು ಪರಿಶ್ರಮದಿನಾಂಗ್ಲೇಯ ಭಾಷೆಯ ಕಲಿತು ಧರಿಸಿ ಪದವಿಗಳನುಪಜೀವಿಸುವಿರೇ॥ ಹೊರತು ತದ್ಭಾಷೆಯುದ್ಗ್ರಂಥಗಳ ಕನ್ನಡದಿ ಪರಿವರ್ತನಂಗೊಳಿಸಲಿಲ್ಲವಲ್ಲಾ ॥' `ಕನ್ನಡಿಗರೇ! ಅಭಿಮಾನ ಎಲ್ಲಿರುವುದು?' ಎಂಬ ಈ ಕವಿತೆಯ ಎರಡು ಭಾಗಗಳಲ್ಲಿಯೂ ಕನ್ನಡ ದೀಕ್ಷೆಯನ್ನು ಅವರು ಚೆನ್ನಾಗಿ ಬೋಧಿಸುವರು. ಕನ್ನಡವನ್ನು ಬರೆಯುವ ಮೂಲಕ, ಕನ್ನಡವನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸಲು ಬೇಡಿಕೊಳ್ಳುವ ಅವರು ಸಭೆಗಳಲ್ಲಿ ಬಡಬಡಿಸುವುದರ ಮಾತ್ರಕ್ಕೆ ಕನ್ನಡ ಅಭಿಮಾನವನ್ನು ಸಾಬೀತುಪಡಿಸಿದಂತೆ ಆಗಲಿಲ್ಲ ಎಂಬ ಕಟೂಕ್ತಿಯನ್ನೂ ನುಡಿಯುವರು. ಇಂಗ್ಲಿಷ್ ಭಾಷೆಯನ್ನು ಕಲಿತವರು ಆ ಭಾಷೆಯ ಗ್ರಂಥಗಳನ್ನು ಕನ್ನಡದಲ್ಲಿ ತರಲಿಲ್ಲ ಎಂದು ಕೊರಗುವರು. ಕನ್ನಡದ ಮೇಲೆ ಮರಾಠಿಯು ಹೇಗೆ ದಬ್ಬಾಳಿಕೆಯನ್ನು ಮಾಡುತ್ತಿತ್ತು ಎಂಬುದನ್ನು ಶಾಂತಕವಿಗಳು ೧೯೧೦ರಲ್ಲಿ ಬರೆದ ಪದ್ಯದಲ್ಲಿ ವಿವರಿಸಿದ್ದನ್ನು ಬೇಂದ್ರೆಯವರು `ವಾಗ್ಭೂಷಣ' ದಲ್ಲಿ ಉಲ್ಲೇಖಿಸಿದ್ದಾರೆ. `ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕ ಕೀರ್ತಿ; ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕದರ್ಥಿ; ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕ ನಟರ ಮೂರ್ತಿಗಳ ಸಂಚಾರವು॥ ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕದಾಟ; ಎಲ್ಲಿ ನೋಡಲು ಮಹಾರಾಷ್ಟ್ರ ನಾಟಕ ಕೂಟ; ಎಲ್ಲಿ ನೋಡಲು ಮಹಾರಾಷ್ಟ್ರ ಭಾಷಾಮಯಂ ತಾನಾಯ್ತು ಕರ್ನಾಟಕಂ ॥'೭ ಹೀಗೆ ಸರ್ವವೂ ಮಹಾರಾಷ್ಟ್ರಮಯವಾಗಿರಲು ಕನ್ನಡದ ಉಸಿರು ಕಟ್ಟುವುದು ಸಹಜವೇ. `ಎಲ್ಲಿ ನೋಡಲು ಕನ್ನಡದ ಭಾಷೆಯಟ್ಟಿಯದ| ರಲ್ಲಿಲ್ಲ ಮೃದು ಶಬ್ದವಿಲ್ಲ, ಭಾಷಾ ಸರಣಿ| ಯಿಲ್ಲವೈ, ಸ್ವಾರಸ್ಯವಿಲ್ಲ, ನಾಟಕವಿಲ್ಲ, ನಟನಟಿಗಳಿಲ್ಲವಿನ್ನು;| ಇಲ್ಲವವು ಮುಂದಾಗುವಾಶೆ ಕೂಡಾ ಇಲ್ಲ ॥' ಎಂದು ಶಾಂತ ಕವಿಗಳಿಗೆ ಅನ್ನಿಸಿದ ಬಳಿಕ ಉಳಿದ ಸಾಮಾನ್ಯರಿಗೂ ಆ ರೀತಿ ಅನ್ನಿಸಿದರೆ ಆಶ್ಚರ್ಯವೇನಿಲ್ಲ. ಇಂಥ ಒಂದು ಸಂದರ್ಭದಲ್ಲಿಯೇ ದಕ್ಪಿಣ ಕರ್ನಾಟಕದ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ ಮತ್ತು `ಪ್ರಬುದ್ಧ ಕರ್ನಾಟಕ' ಹಾಗೂ ಉತ್ತರ ಕರ್ನಾಟಕದ ಧಾರವಾಡದಲ್ಲಿ ಗೆಳೆಯರ ಗುಂಪು ಮತ್ತು `ಜಯಕರ್ನಾಟಕ'ಗಳು ಹುಟ್ಟು ಪಡೆದವು. ಈಗಾಗಲೆ ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಮತ್ತು `ವಾಗ್ಭೂಷಣ' ಹುಟ್ಟಿ ಕೊಂಡಿದ್ದವು. ಇದಕ್ಕೆ ಪೂರಕವಾಗಿಯೇ ಇವುಗಳೂ ಕಾರ್ಯ ನಿರ್ವಹಿಸಿದವು. ಕನ್ನಡದ ಪ್ರಮುಖ ಬರೆಹಗಾರರೆಲ್ಲ `ಜಯಕರ್ನಾಟಕ' ಮತ್ತು `ಪ್ರಬುದ್ಧ ಕರ್ನಾಟಕ'ಗಳಲ್ಲಿ ತಮ್ಮ ಲೇಖನ ಪ್ರಕಟಿಸಿರುವರು. `ಪ್ರಬುದ್ಧ ಕರ್ನಾಟಕ'ವನ್ನು ಟಿ.ಎಸ್.ವೆಂಕಣ್ಣಯ್ಯನವರೂ ಎ.ಆರ್.ಕೃಷ್ಣ ಶಾಸ್ತ್ರಿಗಳೂ ನಡೆಸಿದರು. ಬಿ.ಎಂ.ಶ್ರೀಕಂಠಯ್ಯನವರ ಬೆಂಬಲ ಇವರಿಗೆ ಇದ್ದೇ ಇತ್ತು. ಸಾಹಿತ್ಯ ಕ್ಪೇತ್ರಕ್ಕೆ ಹೊಸದಾಗಿ ಬಂದವರನ್ನು ತಿದ್ದಿ ಬೆನ್ನು ತಟ್ಟುವ, ಹೊಸತನ್ನು ಪರಿಚಯಿಸುವ ಕೆಲಸವನ್ನು ಅವರು ಮಾಡಿದರು.
ಕಾವ್ಯಗಳನ್ನು ನಮ್ಮದು ತಮ್ಮದು ಎಂಬ
ಸುಳ್ಳು ಅಭಿಮಾನವನ್ನಾಗಲಿ, ಕನ್ನಡ ಕಾಡು ಭಾಷೆ' ಎಂಬ ಒಂದು ಕೀಳು ಬುದ್ಧಿಯನ್ನಾಗಲಿ ಇಟ್ಟುಕೊಳ್ಳದೆ ನಿರ್ದಾಕ್ಷಿಣ್ಯವಾಗಿಯೂ, ನಿಷ್ಪಕ್ಷಪಾತವಾಗಿಯೂ ವಿಚಾರ ಮಾಡಿ, ದೋಷಗಳನ್ನು ಕಿತ್ತು ಒಗೆದು, ಗುಣಗಳನ್ನು ಗ್ರಹಿಸಿ, ಒಂದು ಕಡೆ ವಿಮರ್ಶೆಯನ್ನೂ ಮತ್ತೊಂದು ಕಡೆ ರಚನೆಯನ್ನೂ ಮಾಡಬೇಕೆಂಬುದು ನಮ್ಮ ಉದ್ದೇಶ''8 ಎಂದು ಕೃಷ್ಣ ಶಾಸ್ತ್ರಿಗಳು ವ್ಯಕ್ತಪಡಿಸಿದ ಉದ್ದೇಶಕ್ಕೆ ಅನುಗುಣವಾಗಿಯೇ ನಡೆದುಕೊಂಡರು. ೧೯೧೮ರಲ್ಲಿ ಯಶವಂತರಾವ್ ವಿ. ಜಠಾರ ಎನ್ನುವವರು
ಪ್ರಭಾತ’ ಎಂಬ
ಪತ್ರಿಕೆಯನ್ನು ಆರಂಭಿಸಿದರು. ಇದರ ವಿಶೇಷ ಎಂದರೆ ಇದು ಕೇವಲ ಪದ್ಯಗಳನ್ನು ಪ್ರಕ
ಟಿಸುತ್ತಿತ್ತು. ಪ್ರಭಾತ'ದ ಸಂಚಿಕೆಗಳನ್ನು ನೋಡಿದಾಗ, ಬೇಂದ್ರೆ, ಬೆಟಗೇರಿ ಮೊದಲಾದ, ಮುಂದೆ ಪ್ರಸಿದ್ಧಿಗೆ ಬಂದವರೆಲ್ಲ ಇದರಲ್ಲಿ ಹಳೆಯ ರೀತಿಯಲ್ಲಿಯೇ ಕವಿತೆಗಳನ್ನು ಬರೆದುದನ್ನು ಕಾಣಬಹುದು. ಈ ಪತ್ರಿಕೆಯ ಆಯುಷ್ಯ ಕೇವಲ ೨ ವರ್ಷಗಳೇ ಆದರೂ ಅದರಿಂದ ಆದ ಕಾರ್ಯ ಮಹತ್ತರವಾದದ್ದು.
ಪ್ರಭಾತ’ದಲ್ಲಿ ಕವಿತೆಗಳನ್ನು ಬರೆಯುತ್ತಿದ್ದ
ಕವಿಗಳಲ್ಲಿ ಕೆಲವರು ಮುಂದಾಗಿ ಗೆಳೆಯರ ಗುಂಪಿ'ನ ರಚನೆಗೆ ಕಾರಣರಾದರು. ದ.ರಾ.ಬೇಂದ್ರೆ, ಶ್ರೀಧರ ಖಾನೋಳ್ಕರ, ಬುರ್ಲಿ ಬಿಂದು ಮಾಧವ, ಶಂ.ಬಾ. ಜೋಶಿ ಆರಂಭದಲ್ಲಿ ಈ ಗುಂಪಿನ ಸದಸ್ಯರಾಗಿದ್ದರು. ಗೆಳೆಯರ ಗುಂಪು
ಕಾವ್ಯ ಕರ್ತಾರನ
ಕಮ್ಮಟ’ ಆಯಿತು. ಇವರಿಗೆ ಹಿರಿಯರಾಗಿ ಆಲೂರ ವೆಂಕಟರಾಯರು ನಿಂತರು.
ಆಲೂರರು ಜಯಕರ್ನಾಟಕ' ಪತ್ರಿಕೆಯನ್ನು ಆರಂಭಿಸಿದ್ದರು. ನಂತರ ಅವರು ಅದನ್ನು ಗೆಳೆಯರ ಗುಂಪಿಗೆ ನಡೆಸಲು ಕೊಟ್ಟರು. ಬೇಂದ್ರೆ ಮತ್ತು ಖಾನೋಳ್ಕರ ಅವರು ಧಾರ ವಾಡದ ರಾಷ್ಟ್ರೀಯ ವಿದ್ಯಾಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಲ್ಲಿಯೇ ಅವರು
ಕಾವ್ಯಸೇವೆ’ ಎಂಬ ಕೈ ಬರೆಹದ ಪತ್ರಿಕೆ ಆರಂಭಿಸಿ ವಿದ್ಯಾರ್ಥಿಗಳು ಕಾವ್ಯ ಬರೆ
ಯುವುದಕ್ಕೆ ಉತ್ತೇಜನ ನೀಡಿದರು.
ಅನುವಾದಗಳು: ಪ್ರಬುದ್ಧ ಕರ್ನಾಟಕ',
ಜಯಕರ್ನಾಟಕ’ಗಳು ಹುಟ್ಟಿದ್ದು
ಇಪ್ಪತ್ತನೆ ಶತಮಾನದ ಎರಡನೆ ದಶಕದಲ್ಲಿ. ಆರಂಭದ ದಶಕದಲ್ಲಿ ಬಂಗಾಲಿಯ
ಪ್ರಭಾವದಿಂದ, ಬಂಗಾಲಿ ಅನುವಾದಿತ ಕಾದಂಬರಿಗಳ ಪ್ರಕಟಣೆಗಾಗಿಯೇ ಮೈಸೂರಿನ
ಬಿ.ವೆಂಕಟಾಚಾರ್ಯರು ಅವಕಾಶ ತೋಷಿಣಿ' (೧೯೦೬-೦೭) ಎಂಬ ಪತ್ರಿಕೆಯನ್ನು ಆಂರಭಿಸಿದರು. ೧೯೦೭ರಲ್ಲಿಯೇ ಆರಂಭಗೊಂಡು ಮೂರು ದಶಕಗಳ ಕಾಲ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಸೇವೆ ಸಲ್ಲಿಸಿದ ಇನ್ನೊಂದು ಪತ್ರಿಕೆ ಗಳಗನಾಥರ (ವೆಂಕಟೇಶ ತಿರಕೋ ಕುಲಕರ್ಣಿ)
ಸದ್ಬೋಧ ಚಂದ್ರಿಕೆ’. ಹಾವೇರಿ ಜಿಲ್ಲೆಯ ಅಗಡಿಯಿಂದ ಹೊರಡುತ್ತಿದ್ದ
ಇದು ಕಮಲ ಕುಮಾರಿ'ಯನ್ನು ಪ್ರಕಟಿಸುತ್ತಿದ್ದ ಕಾಲಕ್ಕೆ ೭ ಸಾವಿರ ಪ್ರಸಾರ ಸಂಖ್ಯೆಯನ್ನು ತಲುಪಿತ್ತು. ಮೂರು ದಶಕಗಳ ಅವಧಿಯಲ್ಲಿ ಅದು ಕನ್ನಡಿಗರಿಗೆ ನೀಡಿದ ಕಾದಂಬರಿಗಳು, ಕಥೆಗಳು, ಜೀವನ ಚರಿತ್ರೆಗಳು, ಕವನಗಳು, ಕ್ಷೇತ್ರ ಮಹಾತ್ಮ್ಯ, ಧಾರ್ಮಿಕ ಸಾಂಸ್ಕೃತಿಕ ವಿಷಯಕ ಲೇಖನಗಳ ಸಂಖ್ಯೆ ಅಪಾರವಾಗಿದೆ. ಆರಂಭದ ಮೂರು ವರ್ಷ ಕಾಲ ಗಳಗನಾಥರೇ ತಮ್ಮ ಕಾದಂಬರಿಗಳು, ಲೇಖನಗಳಿಂದ ಪತ್ರಿಕೆಯನ್ನು ತುಂಬುತ್ತಿದ್ದರು. ಮುಂದೆ ಭೀ.ಪ. ಕಾಳೆ, ಆರ್.ಟಿ. ಕರ್ಪೂರ, ಅಮ್ಮಿನಭಾವಿ, ತಟ್ಟಿ ಸೇರಿದಂತೆ ಹಲವು ಲೇಖಕರು ತಮ್ಮ ಲೇಖನಗಳು ಕಾದಂಬರಿಗಳನ್ನು ಚಂದ್ರಿಕೆಯಲ್ಲಿ ಪ್ರಕಟಿಸಿದರು. ಇವರಲ್ಲಿ ಕಾಳೆ ಮತ್ತು ಕರ್ಪೂರ ಬರೆದ ಕಾದಂಬರಿಗಳು, ಜೀವನ ಚರಿತ್ರೆಗಳು ಉಳಿದವುಗಳಿಗಿಂತ ಭಿನ್ನವಾದವು. ಚಂದ್ರಿಕೆಯ ವಸ್ತುವಿನಲ್ಲಿ ವೈವಿಧ್ಯವಿದೆ. ರೋಮಾಂಚಕತೆ ಇದೆ. ಐತಿಹಾಸಿಕ, ಜೊತೆಗೆ ಪತ್ತೇದಾರಿ, ಅಲ್ಲದೆ ಸಮಾಜಿಕ ಕಾದಂಬರಿಗಳು, ಹಲವು ಬಗೆಯ, ಆ ಕಾಲಕ್ಕೆ ವಿನೂತನ ಎನ್ನಿಸುವ ಲೇಖನಗಳು ಅದರಲ್ಲಿ ಪ್ರಕಟಗೊಂಡಿವೆ. ಸೂರ್ಯಗ್ರಹಣ, ಮರಾಠರ ಅವನತಿ, ಶಕ್ತಿಮಾಯಿ, ಭಗವಾನದಾಸ, ಸೌಭಾಗ್ಯ ತಿಲಕ, ಶೌರ್ಯ ಸಂಜೀವನ, ಕಂಕಣ ಚೋರ, ಜಯ ಪರಾಜಯ, ಕೃಷ್ಣಾಕುಮಾರಿ, ನರವೀರ ಕಾಸೀಮ, ಚಿಮಣಾಜಿ ಅಪ್ಪಾ, ಅಂಬಿಕೆ, ಪಿರಂಗಿಗಳ ಉತ್ಪಾತ, ಸಾಧನ ಕುಟೀರ, ಭಾಗ್ಯೋದಯ, ಮರಾಠರೂ ಇಂಗ್ಲಿಷರೂ, ಅಪರಾಜಿತಾ, ಭಾಗ್ಯೋದಯ, ಪಿರಂಗಿಯ ಪ್ರತಿಹಿಂಸೆ, ನನ್ನ ಗತಿ- ಇವೇ ಮೊದಲಾದ ಐತಿಹಾಸಿಕ, ಸಾಮಾಜಿಕ ಮತ್ತು ಪತ್ತೇದಾರಿ ಕಾದಂಬರಿಗಳು ಪ್ರಕಟಗೊಂಡವುಗಳಲ್ಲಿ ಮುಖ್ಯವಾದವು. ಕರ್ನಾಟಕದ ವಿವಿಧ ಸಾಧು ಸಂತರ ಚರಿತ್ರೆಯನ್ನು ಇದರಲ್ಲಿ ಪ್ರಕಟಿಸಲಾಗಿದೆ. ಐತಿಹಾಸಿಕ ಮತ್ತು ಕಾಲ್ಪನಿಕ ಅಂಶಗಳ ಸಮ್ಮಿಶ್ರಣವಾದ ಇದು ಆ ಪ್ರಕಾರದ ಬರೆಹಗಳಿಗೆ ಮಾದರಿಯಾಗಿ ನಿಂತಿವೆ. ಶ್ರೀರಂಗನಾಥ ಸ್ವಾಮಿಗಳು, ಶ್ರೀಮದ್ರಾಘವೇಂದ್ರ ವಿಜಯ, ಶ್ರೀಕೃಷ್ಣಾವಧೂತರ ಚರಿತ್ರ, ಶ್ರೀಅಕ್ಕಲಕೋಟೆ ಸ್ವಾಮಿಗಳ ಚರಿತ್ರೆ, ಬೋಠೆ ಮಹಾರಾಜರು, ಶ್ರೀಮಾಣಿಕ ಪ್ರಭು, ಶ್ರೀಪಂತ ಮಹಾರಾಜರು ತಿಪ್ಪೇರುದ್ರಸ್ವಾಮಿ ಚರಿತ್ರೆ, ತ್ರೈಲಿಂಗ ಸ್ವಾಮಿಗಳ ಚರಿತ್ರೆ ಅವುಗಳಲ್ಲಿ ಕೆಲವು. ಸಂಸ್ಕೃತಿ ಮತ್ತು ಧರ್ಮವನ್ನು ಬಿಂಬಿಸುವ
ಹಿಂದುಗಳು ಬಲಿಷ್ಠರಾಗುವುದೆಂತು?’, ಕರ್ನಾಟಕಕ್ಕೆ ದೇವತೆಗಳ ಆಗಮನ',
ಮಡಿ ಮೈಲಿಗೆಯ ಗುಟ್ಟು’, ಸೃಷ್ಟಿಯ ಸದುಪದೇಶ',
ನಮ್ಮ ಪುರಾಣ ಶ್ರವಣ’,
ಯಾಜ್ಞವಲ್ಕ್ಯ ಸ್ಮೃತಿ' ಲೇಖನಗಳು ಹೊಸ ವಿಚಾರಗಳನ್ನು ಮಂಡಿಸುತ್ತವೆ. ನಾನಾಸಾಹೇಬನ ಮಗಳಾದ ಮೈನಾದೇವಿಯನ್ನು ಬ್ರಿಟಿಷರು ಜೀವಂತ ಸುಟ್ಟು ಹಾಕಿದ ಮೈನವಿರೇಳಿಸುವ ಪ್ರಸಂಗದ ವಸ್ತುವನ್ನು ಒಳಗೊಂಡ
ವೀರಕುಮಾರಿ ಮೈನಾದೇವಿ’
ಒಂದು ಉತ್ತಮ ಕಥೆ. ಅಮೆರಿಕದ ಮದ್ಯಪಾನ ನಿಷೇಧಕ ಫುಸಿಫುಟ್ ಜಾನ್ಸನ್ನನ ಚರಿತ್ರೆ
ಯನ್ನೂ ಸದ್ಬೋಧ ಚಂದ್ರಿಕೆ'ಯಲ್ಲಿ ಪ್ರಕಟಿಸಲಾಗಿದೆ. ಗಂಡು ಸಂತತಿ ಹೆಣ್ಣು ಸಂತತಿ ಯನ್ನು ಆಯ್ಕೆಮಾಡುವ ವಿಜ್ಞಾನದ ಬೆಳವಣಿಗೆ ಇಪ್ಪತ್ತನೆ ಶತಮಾನದ ಕೊನೆಯಲ್ಲಿ ಅಭಿವೃ ದ್ಧಿಗೊಂಡಿದ್ದು. ಆದರೆ ೧೯೨೫ರಲ್ಲಿಯೇ ಜರ್ಮನ್ ವಿಜ್ಞಾನಿಯೊಬ್ಬನ
ಗಂಡು ಸಂತತಿ
ಬೇಕೋ ಹೆಣ್ಣು ಸಂತತಿ ಬೇಕೋ’ ಎಂಬ ಲೇಖನ ಇದರಲ್ಲಿ ಪ್ರಕಟವಾಗಿದ್ದು ಆಶ್ಚರ್ಯ
ಮೂಡಿಸುತ್ತದೆ.
ಸದ್ಬೋಧ ಚಂದ್ರಿಕೆ'ಯ ಹಿರಿಮೆ ಇರುವುದು ಕನ್ನಡ ಸಾಹಿತ್ಯಕ್ಕೆ ಹೊಸ ಲೇಖಕರನ್ನು ಅದು ಪರಿಚಯಿಸಿರುವುದರಲ್ಲಿ. ಇದರಲ್ಲಿ ಬಂದಿರುವ ಕತೆ, ಕಾದಂಬರಿಗಳು ಲೇಖನಗಳನ್ನು ನೋಡಿದಾಗ ಪ್ರಸಾರ ಸಂಖ್ಯೆಯನ್ನು ಗಮನಿಸಿದಾಗ ಅದಕ್ಕೆ ದೊಡ್ಡ ಓದುಗ ಪಡೆಯೇ ಇತ್ತು ಎನ್ನುವುದು ತಿಳಿಯುವುದು. ಹೊಸ ಸಾಹಿತ್ಯಕ್ಕೆ ಓದುಗ ಪಡೆಯನ್ನು ನಿರ್ಮಿಸುವ ಮಹತ್ವದ ಕೆಲಸ
ಸದ್ಬೋಧ ಚಂದ್ರಿಕೆ’ಯಂಥ ಪತ್ರಿಕೆಗಳು ಮಾಡಿವೆ. ಇದೇ
ಅವುಗಳ ಹಿರಿಮೆ. ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಚಾರಿತ್ರಿಕವಾಗಿ ಹುಟ್ಟಿದ ಮಧ್ಯಮ ವರ್ಗವೆ ಆಧುನಿಕ ಸಾಹಿತ್ಯದ ಹಿಂದಿನ ಪ್ರಮುಖ ಶಕ್ತಿ. ಮಧ್ಯಮ ಜಾತಿ, ಕೆಳ ಜಾತಿಗಳ ಕೆಲವು ಕವಲುಗಳು, ನೌಕರಶಾಹಿ ಮತ್ತು ಮಧ್ಯಮ ವರ್ಗಗಳಿಗೆ ಸೇರಿಹೋದದ್ದು, ತನ್ಮೂಲಕ ಸಾಹಿತ್ಯದಲ್ಲಿ ಕೂಡ ಹೊಸ ಅನುಭವ ಲೋಕಗಳು ಬಂದದ್ದು ಆಧುನಿಕ ಸಾಹಿತ್ಯದ ಪ್ರಮುಖ ವೈಶಿಷ್ಟ್ಯ' ಎಂಬ ಡಿ.ಆರ್.ನಾಗರಾಜ ೯ ಅವರ ಮಾತು ಅಂದಿನ ಓದುಗ ವರ್ಗವನ್ನು ಪರಿಚಯಿಸುತ್ತದೆ. ಈ ಓದುಗ ವರ್ಗ ಮತ್ತು ಲೇಖಕರ ನಡುವೆ ಯಾವುದೇ ರೀತಿಯ ಮೌಲ್ಯ ಘರ್ಷಣೆ ನಡೆಯಲಿಲ್ಲ ಎನ್ನುವ ಮಾತನ್ನು ಡಿ.ಆರ್.ನಾಗರಾಜ ಹೇಳುವರು. ಇದಕ್ಕೆ ಕಾರಣ ಬರೆಯುವವರೂ ಓದುವವರೂ ಇಂಗ್ಲಿಷ್ ವಿದ್ಯಭ್ಯಾಸ ಮಾಡಿದವರಾದ್ದರಿಂದ ಇಬ್ಬರ ಮನೋಧರ್ಮವೂ ಒಂದೇ ಆಗಿತ್ತು. ನವೋದಯ ಸಾಹಿತ್ಯದ ಓದುಗ ವರ್ಗ ವೈದಿಕರು ಮತ್ತು ಶತಮಾನಗಳಿಂದ ವಿದ್ಯೆಯಿಂದ ವಂಚಿತರಾಗಿದ್ದು ಆಗತಾನೆ ಇಂಗ್ಲಿಷ್ ವಿದ್ಯಾಭ್ಯಾಸ ಪಡೆದ ಶೂದ್ರರು ಆಗಿದ್ದರು. ವಿದ್ಯಾಭ್ಯಾಸದಿಂದ ಶೂದ್ರರೂ ಸಂಸ್ಕೃತೀಕರಣ ಪ್ರಕ್ರಿಯೆಗೆ ಒಳಗಾಗಿ ಪಾಶ್ಚಾತ್ಯೀಕರಣ ಹೊಂದಿಬಿಟ್ಟರು. ಇಬ್ಬರ ಆಲೋಚನಾ ಕ್ರಮವೂ ಒಂದೇ ಇದ್ದಾಗ ಮೌಲ್ಯ ಘರ್ಷಣೆ ಎಂಬುದು ಇರುವುದಿಲ್ಲ ಎಂಬುದು ಅವರ ವಿಶ್ಲೇಷಣೆ. ಒಟ್ಟಾರೆ ಇದರ ತಾತ್ಪರ್ಯ ಎಂದರೆ ಆ ಕಾಲದ ಬರೆಹಗಾರರು ಓದುಗ ವರ್ಗದಿಂದ ಯಾವುದೇ ರೀತಿಯ ಸವಾಲನ್ನು ಎದುರಿಸುವ ಪ್ರಮೇಯ ಬರಲಿಲ್ಲ ಎನ್ನುವುದು. ಡಿ.ಆರ್.ನಾಗರಾಜ್ ಅವರ ಮಾತನ್ನು ಅಕ್ಷರಶಃ ನಾವು ಒಪ್ಪಿಕೊಳ್ಳಬೇಕಾಗಿಲ್ಲ. ಆ ಕಾಲದ ಓದುಗ ವರ್ಗ ನಿರ್ಲಿಪ್ತ ಆಗಿರಲಿಲ್ಲ. ಕ್ರಿಯೆಗೆ ಪ್ರತಿಕ್ರಿಯಾತ್ಮಕವಾಗಿಯೇ ಹೊಸ ಪತ್ರಿಕೆಗಳು ಹೊರಟಿದ್ದನ್ನು ನಾವು ಹಿಂದಿನ ಭಾಗದಲ್ಲಿ ಗಮನಿಸಿದ್ದೇವೆ. ಕೇಸರಿ ಪತ್ರಿಕೆ ಪ್ರಭಾವ:
ಸದ್ಬೋಧ ಚಂದ್ರಿಕೆ’ ಆರಂಭವಾದ ಸುಮಾರಿ
ಗೇ ಮೈಸೂರಿನಲ್ಲಿ ಸಿದ್ಧಾಂತಿ ಶಿವಶಂಕರಶಾಸ್ತ್ರಿಗಳು ನುಡಿಗನ್ನಡಿ' (ಭಾಷಾದರ್ಪಣ) ಎಂಬ ತ್ರೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಪತ್ರಿಕೆಯ ಮುಖ್ಯ ವಿಷಯ ಭಾಷೆ ಮತ್ತು ಸಾಹಿತ್ಯ. ಇದರಲ್ಲಿ ರಾಜಕೀಯವಿರಲಿಲ್ಲ. ವ್ಯಾಪಾರ ಬುದ್ಧಿಯೂ ಇರಲಿಲ್ಲ. ಶಾಸ್ತ್ರಿಗಳು ಮದ್ರಾಸಿನ ಎರಡು ಮೂರು ಕಾಲೇಜುಗಳಲ್ಲಿ ಪಂಡಿತರಾಗಿ ಮಹಾಮಹೋಪಾಧ್ಯಾಯ ರೆಂದು ಹೆಸರಾದವರು. ಒಂದೆರಡು ಸಂಚಿಕೆಗಳು ಬಂದಕೂಡಲೆ ಅವರಿಗೆ ಪತ್ರಿಕೆ ನಡೆಸುವ ಕಷ್ಟ ಅರ್ಥವಾಗತೊಡಗಿತು. ನಂತರ ಅವರು ತಮ್ಮ ಪತ್ರಿಕೆಯನ್ನು ರಾಮರಾಯರಿಗೆ ವಹಿಸಿಕೊಟ್ಟರು. ಇದೇ ಮುಂದೆ
ವೀರಕೇಸರಿ’ ಎಂಬ ಹೆಸರನ್ನು ತಳೆಯಿತು.
ಮಹಾರಾಷ್ಟ್ರದ ಕೇಸರಿ' ಪತ್ರಿಕೆ ಅವರಿಗೆ ಮಾದರಿ. ಈ ಪತ್ರಿಕೆಯ ಮುಖಪುಟದಲ್ಲಿ ಎರಡು ಸಿಂಹಗಳೂ,
ಹಂ ಹೋ ಮೃಗೇಂದ್ರ… .. ..’ ಎಂಬ ಪದ್ಯವೂ ಇರುತ್ತಿತ್ತು.
ಮಹಾರಾಷ್ಟ್ರದ ಕೇಸರಿ' ಎಷ್ಟೊಂದು ಪ್ರಭಾವಿಯಾಗಿತ್ತೆಂದರೆ, ಬಾಗಲಕೋಟೆಯ ಕೆರೂರು ವಾಸುದೇವಾಚಾರ್ಯರು ಹುಬ್ಬಳ್ಳಿಯಿಂದ ಹೊರಡಿಸಿದ ತಮ್ಮ ವಾರ ಪತ್ರಿಕೆಗೆ
ಕನ್ನಡ ಕೇಸರಿ’ ಎಂದು ಹೆಸರಿಟ್ಟರು. ಟಿಳಕರ ಕೇಸರಿ' ಸ್ವಾತಂತ್ಯ್ರ, ಸ್ವದೇಶೀ ಚಿಂತನೆಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆ. ಕೆರೂರು ವಾಸುದೇವಾಚಾರ್ಯರು
ಸಚಿತ್ರ
ಭಾರತ’, ಶುಭೋದಯ' ಎಂಬ ಮಾಸ ಪತ್ರಿಕೆಗಳನ್ನೂ ಹೊರಡಿಸುತ್ತಿದ್ದರು. ೧೯೨೮ರಲ್ಲಿ ದಕ್ಪಿಣ ಕನ್ನಡದ ಪುತ್ತೂರಿನಿಂದ ಹೊರಟ ಪತ್ರಿಕೆಯ ಹೆಸರು ಕರ್ನಾಟಕ ಕೇಸರಿ. ಇದರಲ್ಲಿ ಎಂ. ಗೋವಿಂದ ಪೈ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ, ಐರೋಡಿ ಶಿವರಾಮ್ಯ, ಹೊಸಕೆರೆ ಚಿದಂಬರಯ್ಯ, ಉಗ್ರಾಣ ಮಂಗೇಶರಾವ, ಪಾಂಡೇಶ್ವರ ಗಣಪತಿರಾವ್, ಬೆಳ್ಳೆ ರಾಮಚಂದ್ರರಾವ್ ಮೊದಲಾದವರು ಕತೆ, ಕವಿತೆ, ಪ್ರಬಂಧ, ನಾಟಕಗಳನ್ನು ಬರೆದಿದ್ದಾರೆ ಅಂದಮೇಲೆ ಸಾಹಿತ್ಯ ಪೋಷಣೆಗೆ ಈ ಪತ್ರಿಕೆಯ ಕೊಡುಗೆ ವಿಶಿಷ್ಟವಾದದ್ದೇ. ದಕ್ಪಿಣ ಕನ್ನಡದಿಂದಲೇ ಆಕಾಲದಲ್ಲಿ ಹಲವು ಪತ್ರಿಕೆಗಳು ಬಂದವು. ಮುಳಿಯ ತಿಮ್ಮಪ್ಪಯ್ಯನವರು ಮಂಗಳೂರಿನಿಂದ
ಕನ್ನಡ ಕೋಗಿಲೆ’ (೧೯೧೬) ಹೊರಡಿಸಿದರು.
ಇದು ಮಾಸ ಪತ್ರಿಕೆ. ಇದರಲ್ಲಿ ಸಾಹಿತ್ಯದ ಜೊತೆಯಲ್ಲಿ ಧಾರ್ಮಿಕ, ಆರ್ಥಿಕ, ಸಾಮಾಜಿಕ
ವಿಷಯಗಳನ್ನು ಪ್ರಕಟಿಸಲಾಗುತ್ತಿತ್ತು. ಮಂಜೇಶ್ವರ ಅನಂತರಾವ, ಉಗ್ರಾಣ ಮಂಗೇಶ
ರಾವ, ಮುಳಿಯ ಶಂಕರ ಭಟ್ಟ ಮೊದಲಾದವರು ಇದರಲ್ಲಿ ಕವಿತೆ, ಲೇಖನಗಳನ್ನು
ಪ್ರಕಟಿಸಿರುವರು. ಮಂಗಳೂರಿನಿಂದಲೇ ಹೊರಟ ಕಂಠೀರವ' (೧೯೧೯) ಮೊದಲು ವಾರದಲ್ಲಿ ೨ ಬಾರಿ ಪ್ರಕಟವಾಗುತ್ತಿತ್ತು. ನಂತರ ವಾರಪತ್ರಿಕೆಯಾಯಿತು. ಇದರಲ್ಲಿ ಹುರುಳಿ ಭೀಮರಾಯರು, ಪಂಜೆ ಮಂಗೇಶರಾಯರು, ಕಾಮತ, ಉಳ್ಳಾಳ, ಗೋವಿಂದ ಪೈ, ಟಿ.ನಾರಾಯಣ ಭಟ್ಟ, ಜೆ.ವಾಮನ ಭಟ್ಟ, ಕೆ.ಶಂಕರ ಭಟ್ಟ, ಬಿ.ಶಂಕರ ಭಟ್ಟ, ವಿ.ಎಸ್..ಕುಡ್ವ ಮೊದಲಾದವರು ಲೇಖನಗಳನ್ನು ಬರೆದಿರುವರು. ಗೋವಿಂದ ಪೈಗಳು ೧೯೨೮ರಲ್ಲಿ ಮಂಗಳೂರಿನಿಂದಲೇ
ರಾಷ್ಟ್ರಬಂಧು’ ಹೊರಡಿಸಿದರು. ರಾಷ್ಟ್ರ ಶಬ್ದ ಚಾಲ್ತಿ
ಯಲ್ಲಿ ಬಂದುದನ್ನು ಇಲ್ಲಿ ಗಮನಿಸಬಹುದು.
ಕಾರಂತರ ವಸಂತ': ಕುಂದಾಪುರದಿಂದ ಡಾ.ಕೆ.ಶಿವರಾಮ ಕಾರಂತರು
ವಸಂತ’ (೧೯೨೪) ಪತ್ರಿಕೆಯನ್ನು ಹೊರಡಿಸಿದರು. ಅನ್ಯ ವಿಷಯಗಳ ಜೊತೆಯಲ್ಲಿ
ಸಾಹಿತ್ಯವೂ ಇದರಲ್ಲಿ ಪ್ರಕಟಗೊಂಡಿದೆ. ಮೊದಲು ಪಾಕ್ಷಿಕವಾಗಿದ್ದ ವಸಂತ' ಆರ್ಥಿಕ ನಷ್ಟದಿಂದ ಮಾಸಪತ್ರಿಕೆಯಾಗಿ ಬಳಿಕ ಎರಡು ತಿಂಗಳಿಗೊಮ್ಮೆ ಪ್ರಕಟಗೊಳ್ಳುತ್ತಿತ್ತು. ಎರಡು ಸಂಪುಟಗಳಾದ ಬಳಿಕ
ವಸಂತ’ವನ್ನು ನಿಲ್ಲಿಸಲಾಯಿತು. ೧೯೨೮ರಲ್ಲಿ ಇದು
ಮಂಗಳೂರಿನಿಂದ ಮತ್ತೆ ಪ್ರಕಟಣೆ ಆರಂಭಿಸಿತು. ೧೯೩೦ರ ಏಪ್ರಿಲ್-ಜೂನ್ ತಿಂಗಳ
೫ನೆ ಸಂಪುಟವೇ ಕೊನೆಯ ಸಂಚಿಕೆಯಾಯಿತು. ಕಾರಂತರಂಥ ನಿಷ್ಠುರವಾದಿ ತಾವು
ಅಂದುಕೊಂಡ ಧೋರಣೆಗಳಿಗೆ ಅನುಗುಣವಾಗಿ ಪತ್ರಿಕೆಯನ್ನು ನಡೆಸಬೇಕು ಎನ್ನುವವರು
ಓದುಗರ ಮನೋಲಹರಿಗೆ ತಕ್ಕಂಥ ಪತ್ರಿಕೆ ನೀಡುವದು ಕಷ್ಟವಾಯಿತು. ಹೀಗಾಗಿ ಪತ್ರಿಕೆ
ನಿಂತರೂ ತೊಂದರೆಯಿಲ್ಲ ಎಂಬ ನಿರ್ಧಾರಕ್ಕೆ ಕಾರಂತರು ಬಂದರು.
ವಸಂತನಲ್ಲಿ ಕಥೆಗಳನ್ನು ಬೇಡುವವರು ಬಹಳ. ಆದರೆ ಪತ್ರಿಕೆಯನ್ನು ಕಥೆಗಾಗಿ ಇರಿಸುವುದೂ, ಗ್ರಾಹಕರ ಮನೋಲಹರಿಗಳಿಗೆ ಸರಿಯಾಗಿ ಪತ್ರಿಕೆಯ ಸ್ವರೂಪವನ್ನು ಬದಲಾಯಿಸುವುದೂ ಧ್ಯೇಯಾತ್ಮಕ ದೃಷ್ಟಿಯಿಂದ ಸರಿಯಾಗಲಾರದು. ವಸಂತವು ತನ್ನದೇ ಒಂದು ನಿಶ್ಚಿತ ಧೋರಣೆಯಿಂದ ಮುಂದುವರಿಯುವುದು. ಆ ಧೋರಣೆಯು ಪ್ರಪಂಚಕ್ಕೆ ಸರಿತೋರದಿದ್ದಲ್ಲಿ ಪತ್ರಿಕೆಯೂ ಸಾಯುವುದು. ಧೋರಣೆಯಿಲ್ಲದ ಜೀವನಕ್ಕಿಂತ ಮರಣವೇ ಮಾನ್ಯವೆಂದು ನಮ್ಮ ನಂಬುಗೆ. `ವಸಂತ'ನಂತಹ ಪತ್ರಿಕೆಯೊಂದು ಕರ್ನಾಟಕಕ್ಕೆ ಅವಶ್ಯವಿರುವುದಾದರೆ ನಾಡಿನವರು ಅದನ್ನು ಉಳಿಸಲಿ. ಕೇವಲ ವ್ಯಾಪಾರೀ ದೃಷ್ಟಿಯಿಂದ ವಸಂತವನ್ನು ನಡೆಸುವುದಕ್ಕಿಂತ ಪತ್ರಿಕೆಯು ನಿಂತರೂ ನಾವು ಬೇಸರ ಪಡುವುದಿಲ್ಲ'', ಎಂಬುದಾಗಿ ಕಾರಂತರು `ವಸಂತ'ದ ತಮ್ಮ ಸಂಪಾದಕೀಯದಲ್ಲಿ ಬರೆದಿರುವರು. ಕಾರಂತರು ಇಲ್ಲಿ ಓದುಗನ ಬಗೆಗೆ `ಗ್ರಾಹಕ' ಎಂಬ ಪದವನ್ನು ಬಳಸಿರುವುದನ್ನು ಗಮನಿಸಬಹುದು. ಅಲ್ಲದೆ ಈ ಗ್ರಾಹಕನಿಗೂ ಆಯ್ಕೆಗಳು ಇದ್ದವು ಎಂಬುದನ್ನು ಇದು ತೋರಿಸುತ್ತದೆ. ಓದುಗ ಮತ್ತು ಗ್ರಾಹಕರ ಮೇಲಿಂದಲೇ ಸಾಹಿತ್ಯಪತ್ರಿಕೆ ಮತ್ತು ಇತರ ಪತ್ರಿಕೆಗಳನ್ನು ಪ್ರತ್ಯೇಕಿಸಬಹುದು. ಸಾಹಿತ್ಯಪತ್ರಿಕೆಗಳಿಗೆ `ಓದುಗ'ನ ಅಗತ್ಯವಿರುತ್ತದೆ. ಇತರ ಜನಪ್ರಿಯ ಪತ್ರಿಕೆಗಳು `ಗ್ರಾಹಕ'ನನ್ನು ಮೆಚ್ಚಿಸುವ ಸರಕಾಗಿ ಹೊರಬರುತ್ತವೆ. ಧೋರಣೆಗೆ ಅಂಟಿಕೊಂಡು ಪತ್ರಿಕೆ ನಡೆಸುವ ಅಪಾಯವನ್ನು ಕಾರಂತರು ಕಂಡುಕೊಂಡು ಪತ್ರಿಕೆ ನಿಂತರೂ ಚಿಂತೆಯಿಲ್ಲ ಎಂಬ ನಿಲುವಿಗೆ ತಲುಪಿದ್ದರು. ವಾಸ್ತು, ಶಿಲ್ಪ, ಚಿತ್ರ, ಚಲಚ್ಚಿತ್ರ ಮುಂತಾದ ಕಲೆಗಳ ಬಗೆಗೆ, ಪ್ರವಾಸ ಲೇಖನಗಳು, ರಾಜಕೀಯ, ಐತಿಹಾಸಿಕ, ಸಾಹಿತ್ಯಕ ಮುಂತಾಗಿ `ಕನ್ನಡ ನುಡಿಗೆ ಚಿರೋಪಯೋಗಿಯಾಗಿರುವ' ಅನೇಕ ಲೇಖನಗಳನ್ನು ಪತ್ರಿಕೆ ಪ್ರಕಟಿಸಿತ್ತು. ವಸಂತದ ಆರ್ಥಿಕ ಸ್ಥಿತಿ ಏನೇನೂ ಉತ್ತಮವಾಗಿರಲಿಲ್ಲ. ಆದರೂ ಧೋರಣೆ ಬಿಟ್ಟು ಲೇಖನಗಳನ್ನು ಪ್ರಕಟಿಸಲಿಲ್ಲ.
ಅವುಗಳು ತಾತ್ಕಾಲಿಕ ವಿಸ್ಮಯವನ್ನು ಹುಡುಕುವ ಜನರಿಗೆ
ನಿರುಪಯೋಗಿಯಾಗಿ ಕಂಡರೂ, ದೇಶದ ಏಳಿಗೆಗೆ ಅವಶ್ಯವಾಗಿ ಬೇಕಾದವುಗಳು. ಅವುಗಳ
ಉಪಯುಕ್ತತೆಯು ಕಾಲ ಕ್ರಮೇಣ ತಿಳಿಯದಿರದು. ಇದೇ ದೃಷ್ಟಿಯಿಂದಲೇ ನಾವು ಮುಂದೆ
ಸಾಗಬೇಕೆಂದಿರುವೆವು. ನಮ್ಮ ಕರ್ತವ್ಯ ದೃಷ್ಟಿಯಿಂದ ನಾವು ಲೇಖನಗಳನ್ನರಸಿ
ಪ್ರಕಟಿಸಿರುವೆವು. ಅವು ಸಮಾನ್ಯವಾಗಿ ಆದರಣೀಯವಾದಾವೆಂದು ನಮಗಿನ್ನೂ
ಭರವಸೆಯಿಲ್ಲ” ಎನ್ನುವ ಕಾರಂತರು, ಹಾಗಾಗದಿದ್ದರೆ ನಮಗೆ ಆಶ್ಚರ್ಯವೂ ಆಗದು
ಎಂದು ಬರೆದಿದ್ದಾರೆ. ತಮ್ಮ ನಿಲುವಿಗೆ ಅನುಗುಣವಾಗಿಯೇ ಅವರು ಲೇಖನಗಳನ್ನು
ಪ್ರಕಟಿಸಿದ್ದಾರೆ.
ವಸಂತದಲ್ಲಿ ಕಾರಂತರೇ ಹಲವು ಲೇಖನಗಳನ್ನು ಬರೆದಿರುವರು. ಹಲವನ್ನು ಅನುವಾದಿಸಿ ಪ್ರಕಟಿಸಿರುವರು. ಅವರ ಕತೆ, ಕಾದಂಬರಿ, ಹರಟೆಗಳೂ ಇದರಲ್ಲಿ ಬಂದಿವೆ. ಅವರ ವಿಚಿತ್ರ ಕೂಟ, ಭೂತ, ಸೂಳೆಯ ಸಂಸಾರ (ಕನ್ಯಾ ಬಲಿ), ನಿರ್ಭಾಗ್ಯ ಜನ್ಮ, ದೇವದೂತರು, ಕರ್ಣಾರ್ಜುನ, ಭಾರತೀಯ ಚಿತ್ರಕಲೆ, ಭಾರತ ವರ್ಷದಲ್ಲಿ ಬ್ರಿಟಿಷರು, ಸಾವಿರ ಮಿಲಿಯ, ಬೆವರಿಗೆ ಜಯವಾಗಲಿ, ವಿಜಯ ದಶಮಿ ಮೊದಲಾದವು ಇದರಲ್ಲಿಯೇ ಮೊದಲು ಬೆಳಕು ಕಂಡಿವೆ. ವಸಂತದ ಲೇಖಕರ ಬಳಗ ಬಹಳ ದೊಡ್ಡದಿತ್ತು. ಎಂ.ಗೋವಿಂದ ಪೈ, ಎಂ.ಎನ್. ಕಾಮತ, ಪಂಜೆ ಮಂಗೇಶರಾಯರು, ಬೇಂದ್ರೆ, ಕಾರ್ನಾಡು ಸದಾಶಿವ ರಾಯರು, ಸುಧೀಂದ್ರ ಬೋಸ್, ಎಂ.ಆಚಾರ್ಯ, ವಾಸುದೇವ ಕಾರಂತ, ಶಂಕರ ನಾರಾಯಣ ಕಾರಂತ, ಮೈಸೂರಿನ ಸ್ವಾಮಿ ಸಿದ್ಧೇಶ್ವರಾನಂದ, ಕೃಷ್ಣಶರ್ಮ, ಪ.ಸೀತಾದೇವಿ, ಕೆ.ವಿ.ಪುಟ್ಟಪ್ಪ ಮೊದಲಾದವರು ವಸಂತಕ್ಕೆ ಲೇಖನ, ಹರಟೆ, ಕವನ, ಕತೆಗಳನ್ನು ಬರೆದಿರುವರು. ವಸಂತದ ಲೇಖಕರ ಪಡೆ, ಅದು ತಳೆದ ನಿರ್ದಿಷ್ಟ ಧೋರಣೆ ಇವನ್ನೆಲ್ಲ ಗಮನಿಸಿದಾಗ ಸಾಹಿತ್ಯಪತ್ರಿಕೆಗಳ ಸಾಲಿನಲ್ಲಿ ಅದಕ್ಕೊಂದು ಸ್ಥಾನ ದೊರೆಯುವುದು. ಪ್ರಬುದ್ಧ ಕರ್ನಾಟಕ: ಸಾಹಿತಿಗಳನ್ನು ತಿದ್ದಿ ಬೆಳೆಸುವಲ್ಲಿ
ಪ್ರಬುದ್ಧ ಕರ್ನಾಟ
ಕ’ ಒಂದು ಕಮ್ಮಟದ ರೀತಿಯಲ್ಲಿ ಕಾರ್ಯ ಮಾಡಿತು. ನಮ್ಮ ಮುಖ್ಯ ಕೆಲಸವೆಂದರೆ ಕಾವ್ಯ ಸೃಷ್ಟಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಿಕೊಡುವುದು. .. . ಸಾಹಿತ್ಯವನ್ನೆಲ್ಲ ತುಲನಪೂರ್ವಕವಾಗಿ ವಿಮರ್ಶೆ ಮಾಡಿ ನಮ್ಮ ಕವಿಗಳಲ್ಲಿರುವ ಗುಣ ದೋಷಗಳೇನು? ಸತ್ಕಾವ್ಯದ ಲಕ್ಪಣಗಳೇನು ಎಂಬುದನ್ನು ನಿಷ್ಪಕ್ಷಪಾತ ಬುದ್ಧಿಯಿಂದ ವಿಚಾರ ಮಾಡಿ ದೋಷಗಳನ್ನು ಕಿತ್ತು ಒಗೆದು ಗುಣಗಳನ್ನು ಗ್ರಹಿಸಿ ಒಂದು ಕಡೆ ವಿಮರ್ಶೆಯನ್ನು ಮತ್ತೊಂದು ಕಡೆ ರಚನೆಯನ್ನು ಮಾಡಬೇಕೆಂಬುದು ನಮ್ಮ ಉದ್ದೇಶ.''10 ಹೀಗೆ ಒಳ್ಳೆಯ ಕಾವ್ಯ ರಚನೆಗೆ ಉತ್ತೇಜನ ಕೊಡುವುದು `ಪ್ರಬುದ್ಧ ಕರ್ನಾಟಕ'ದ ಗುರಿಯಾಗಿತ್ತು. `ಶ್ರೀ'ಯವರು ಪ್ರತಿಭೆಯುಳ್ಳವರೆಂದು ಗುರುತಿಸಿದ ಕವಿಗಳನ್ನು ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ ಇವರುಗಳಿಗೆ ಒಪ್ಪಿಸುತ್ತಿದ್ದರು. ಈ ಇಬ್ಬರೂ ಹಿರಿಯರು ಆ ಕವಿಗಳನ್ನು ಸಾಣೆ ಇಟ್ಟು ನಯಗೊಳಿಸಿ ಅವರ ಓರೆ ಕೋರೆಗಳನ್ನು ತಿದ್ದಿ ಸರಿಪಡಿಸಿ, ಕಡೆದ ವಜ್ರಗಳಾಗಿಸುತ್ತಿದ್ದರು. ಈ ಕವಿಶಿಲ್ಪದಲ್ಲಿ `ಪ್ರಬುದ್ಧ ಕರ್ನಾಟಕ' ಮತ್ತು `ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ' ಇವು ಬಹು ಮುಖ್ಯ ಪಾತ್ರ ವಹಿಸಿದವು11 ಎಂಬ ಎಸ್.ಅನಂತನಾರಾಯಣ ಅವರ ಮಾತು ಸರಿಯಾದದ್ದೇ. `ಪ್ರಬುದ್ಧ ಕರ್ನಾಟಕ' ಸಂಪಾದಕರಾದ ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳನ್ನು ಮಾಸ್ತಿ `ನಮ್ಮ ಹೊಸ ಸಾಹಿತ್ಯದ ಅಶ್ವಿನೀ ದೇವತೆಗಳು' ಎಂದು ಕರೆದಿದ್ದಾರೆ.12
ಹೊಸ ಸಾಹಿತ್ಯದ ನೆಲೆಯೇನು, ಗುರಿಯೇನು, ಅದರ ಸೂತ್ರವೇನು,
ಗಮನವೇನು ಎಂಬ ವಿಷಯವನ್ನೇ ಹೇಳುತ್ತಿರಬೇಕಾಗುತ್ತದೆ. ಸಾವಿರದ ಒಂಬೈನೂರ
ಇಪ್ಪತ್ತರ ವೇಳೆಗೆ ಕನ್ನಡದಲ್ಲಿ ಈ ಕೆಲಸ ತೀರಾ ಅವಶ್ಯಕವಾಗಿ ಬಿಟ್ಟಿತ್ತು. ಆ ಸಮಯದಲ್ಲಿ
ಮೈಸೂರು ಪ್ರಾಂತದಲ್ಲಿ ಈ ಕೆಲಸವನ್ನು ಇಬ್ಬರು ಮಹನೀಯರು ಕೈಗೊಂಡರು. ಇದಕ್ಕಾಗಿ
ಒಂದು ತ್ರೈಮಾಸಿಕವನ್ನು ಆರಂಭಿಸಿದರು. ಆ ಮಹನೀಯರು ಶ್ರೀ ತಳುಕಿನ ವೆಂಕಣ್ಣಯ್ಯ
ನವರು, ಶ್ರೀ ಅಂಬಳೆ ಕೃಷ್ಣ ಶಾಸ್ತ್ರಿಗಳು: ಆ ತ್ರೈಮಾಸಿಕ ಪ್ರಬುದ್ಧ ಕರ್ನಾಟಕ” ಎಂದು
ಮಾಸ್ತಿ ಹೇಳುವರು.
ಪ್ರಬುದ್ಧ ಕರ್ನಾಟಕ' ಶುದ್ಧ ಸಾಹಿತ್ಯಪತ್ರಿಕೆಯಾಗಿ ೧೯೧೯ರ ಸಿದ್ಧಾರ್ಥ ಸಂವತ್ಸರದ ಯುಗಾದಿಯಂದು ಆರಂಭವಾಯಿತು. ಅದಕ್ಕೆ ಐವತ್ತು ವರ್ಷ ತುಂಬಿದ ಸಂದರ್ಭದಲ್ಲಿ,
ಈ ಐವತ್ತು ವರ್ಷಗಳೆಂದರೆ ಕರ್ನಾಟಕದ ನವೋದಯದ ೫೦ ವರ್ಷಗಳು; ಕನ್ನಡಿಗರ
ಜಾಗೃತಿಯ ಐದು ದಶಕಗಳು; ಕನ್ನಡ ಸಾಹಿತ್ಯದ ಆಧುನಿಕತೆಯ ಅರ್ಧ ಶತಮಾನ’13
ಎಂದು ಹಾ.ಮಾ.ನಾಯಕರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.
ಪ್ರಬುದ್ಧ ಕರ್ನಾಟಕ ಎಂಬ ಹೆಸರನ್ನು ಸೂಚಿಸಿದವರು ಬೆಂಗಳೂರಿನ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀನಿರ್ಮಲಾನಂದ ಸ್ವಾಮೀಜಿ. ಈ ಹೆಸರಿನ ಧಾರ್ಮಿಕ ಪತ್ರಿಕೆಯೊಂದನ್ನು ಹೊರಡಿಸುವಂತೆ ಅವರು ಕೃಷ್ಣಶಾಸ್ತ್ರಿಗಳು ಮತ್ತು ಟಿ.ಎಸ್. ವೆಂಕಣ್ಣಯ್ಯನವರಿಗೆ ಸೂಚಿಸಿದ್ದರು.
ಪ್ರಬುದ್ಧ ಭಾರತ’ ಎಂಬ ಪತ್ರಿಕೆ ಇಂಗ್ಲಿಷಿನಲ್ಲಿತ್ತು.
ಪ್ರಬುದ್ಧ ಕೇರಳಂ' ಎಂಬ ಪತ್ರಿಕೆಯೂ ಇತ್ತು. ಧಾರ್ಮಿಕ ವಿಚಾರಗಳನ್ನು ಪ್ರಾಂತೀಯ ಭಾಷೆಯಲ್ಲಿ ತಿಳಿಸಬೇಕು ಎನ್ನುವುದು ಅವರ ಉದ್ದೇಶವಾಗಿತ್ತು. ಕೃಷ್ಣ ಶಾಸ್ತ್ರಿಗಳು
ಪ್ರಬುದ್ಧ
ಕರ್ನಾಟಕ’ ಹೆಸರನ್ನು ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಸಾಹಿತ್ಯಪತ್ರಿಕೆಗೆ
ಬಳಸಿಕೊಂಡರು. ಒಂದು ನೂರು ವಿದ್ಯಾರ್ಥಿಗಳಿಂದ ತಲಾ ಒಂದೊಂದು ರುಪಾಯಿ
ಮುಂಗಡ ಚಂದಾ ಸಂಗ್ರಹಿಸಿ ಆರಂಭಿಸಿದ ಈ ಪತ್ರಿಕೆಯನ್ನು ಬಿ.ಎಂ.ಶ್ರೀಯವರ
ಪ್ರಯತ್ನದ ಫಲವಾಗಿ ೧೯೩೨ರಲ್ಲಿ ಮೈಸೂರು ವಿಶ್ವವಿದ್ಯಾಲಯವು ವಹಿಸಿಕೊಂಡಿತು. ಇದು
ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಭಾರತಿ', ಬೆಂಗಳೂರು ವಿಶ್ವವಿದ್ಯಾಲಯದ
ಸಾಧನೆ’, ಕನ್ನಡ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ' ಪತ್ರಿಕೆಗಳಿಗೆ ಮಾದರಿಯಾಯಿತು.
ಪ್ರಬುದ್ಧ ಕರ್ನಾಟಕದಲ್ಲಿ ಮೊದಲು ಕೃಷ್ಣ ಶಾಸ್ತ್ರಿಗಳು, ಅವರ ಶಿಷ್ಯರ
ಲೇಖನಗಳು, ಕರ್ನಾಟಕ ಸಂಘದ ಆರಂಭ ಉಪಸಂಹಾರ ಭಾಷಣಗಳ ಲೇಖನ ರೂಪವು
ಪ್ರಕಟಗೊಳ್ಳುತ್ತಿದ್ದವು. ೧೯೩೯ರಲ್ಲಿ ವೆಂಕಣ್ಣಯ್ಯನವರು ಗತಿಸಿದ ಬಳಿಕ ಉಪಕುಲಪತಿ
ಎನ್.ಎಸ್.ಸುಬ್ಬರಾಯರು ಪ್ರಬುದ್ಧ ಕರ್ನಾಟಕ'ದಲ್ಲಿ ಸಾಹಿತ್ಯ ಮಾತ್ರವಲ್ಲದೆ ಶಾಸ್ತ್ರ ವಿಚಾರಗಳನ್ನೂ ಪ್ರಕಟಿಸಬೇಕೆಂದೂ, ಮೈಸೂರಿನ ಹೊರಗಿನ ಕರ್ನಾಟಕದ ಸಹಾಯ ಸಹಾನುಭೂತಿಗಳನ್ನು ಪಡೆಯಬೇಕೆಂದೂ ಸೂಚಿಸಿದರಂತೆ. ಇದಕ್ಕೆ ಅಗತ್ಯವಾದ ಹಣಕಾಸಿನ ಸಹಾಯವನ್ನು ಒದಗಿಸಲು ಅವರು ಮುಂದಾದರು. ಆ ಬಳಿಕ ಪ್ರಬುದ್ಧ ಕರ್ನಾಟಕದ ಸ್ವರೂಪ ಮತ್ತು ವ್ಯಾಪ್ತಿ ವಿಶಾಲವಾಯಿತು. ಇಪ್ಪತ್ತನೆ ಶತಮಾನದ ಮೊದಲ ಮತ್ತು ಎರಡನೆಯ ತಲೆಮಾರಿನ ಪ್ರಮುಖ ಸಾಹಿತಿಗಳ ಲೇಖನಗಳು ಅದರಲ್ಲಿ ಬೆಳಕುಕಂಡಿವೆ. ಹೊಸಗನ್ನಡದ ಗದ್ಯವನ್ನು ರೂಪಿಸುವುದರಲ್ಲಿ, ವಿಜ್ಞಾನದ ಪರಿಭಾಷೆಯನ್ನು ಹುಟ್ಟುಹಾಕುವುದರಲ್ಲಿ ಪ್ರಬುದ್ಧ ಕರ್ನಾಟಕದ ಕೊಡುಗೆ ಅಪಾರ.
ಪ್ರಬುದ್ಧ ಕರ್ನಾಟಕವು ಸಾಹಿತ್ಯ ವಿಮರ್ಶೆ, ಸಂಶೋಧನೆಗಳಲ್ಲಿ ದೊಡ್ಡ
ಆದರ್ಶಗಳನ್ನು ಪಾಲಿಸಿಕೊಂಡು ಬಂದಿತೇ ಹೊರತು ಅದು ಯಾವತ್ತೂ ಪಂಥ,
ಗುಂಪುಗಳಿಗೆ ಆಸ್ಪದ ಕೊಡಲಿಲ್ಲ. ವಿಶ್ವವಿದ್ಯಾನಿಲಯದ ಆಶ್ರಯದಲ್ಲಿದ್ದರೂ ಕನ್ನಡದ
ಹಿತರಕ್ಪಣೆಗೆ ಸಂಬಂಧಿಸಿದಂತೆ ತನ್ನ ದೃಢವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಎಂದೂ
ಹಿಂಜರಿಯಲಿಲ್ಲಟ14 ಎಂಬ ಹಾಮಾನಾ ಮಾತು ಅಕ್ಪರಶಃ ಸತ್ಯ.
ಇದನ್ನು ಗೋರೂರು ರಾಮಸ್ವಾಮಿ ಅಯ್ಯಂಗಾರರ ಮಾತೊಂದನ್ನು ಉಲ್ಲೇಖಿಸಿ
ಪುಷ್ಟೀಕರಿಸಬಹುದು. .. ..ಶ್ರೀಮಾನ್ ಕೃಷ್ಣ ಶಾಸ್ತ್ರಿಗಳು, ಕವಿವರ್ಯ ಕೆ.ವಿ.ಪುಟ್ಟಪ್ಪನವರ (ಡಾಕ್ಟರ್, ಪದ್ಮ ವಿಭೂಷಣ) ಒಂದು ಕೃತಿಯ ವಿಷಯದಲ್ಲಿ ವ್ಯಕ್ತಪಡಿಸಿದ ಪ್ರಶಂಸೆ ಮೆಚ್ಚಿಕೆ, ಅತಿಶಯೋಕ್ತಿ ಅತ್ಯುಕ್ತಿಯೆಂದೂ, ಅದನ್ನು (ಶ್ರೀಮಾನ್ ಕೆ.ವಿ. ಪುಟ್ಟಪ್ಪನವರ ಪುಸ್ತಕವನ್ನು) ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಶ್ರೇಷ್ಠ ಗ್ರಂಥಗಳಿಗೆ ಹೋಲಿಸಿರುವುದು ತುಂಬ ಅಳತೆ ಮೀರಿದ ಹೊಗಳಿಕೆಯೆಂದೂ, ಇದರಿಂದ ಆಧುನಿಕ ಬರಹಗಾರರ ತಲೆ ತಿರುಗಿಹೋಗುವುದೆಂದೂ ಒಬ್ಬ ವಿದ್ವಾಂಸರು (ಅವರೂ ಆಧುನಿಕರೇ) ಶ್ರೀಮಾನ್ ಡಿ.ವಿ. ಗುಂಡಪ್ಪನವರೊಂದಿಗೆ ದೂರಿದರು. ಅದಕ್ಕೆ ಡಿವಿಜಿಯವರು `ಶ್ರೀಮಾನ್ ಕೃಷ್ಣ ಶಾಸ್ತ್ರಿಗಳು ಹಾಗೆ ಹೇಳಿದರೆ, ಅದಕ್ಕೆ ಗ್ರಂಥ ಅರ್ಹವಾದದ್ದಾಗಿರಬೇಕು. (He has a sure taste. He never is swayed by any prejudice in his judgement)’ ಎಂದು ಉತ್ತರವಿತ್ತರು. ಪ್ರಬುದ್ಧ ಕರ್ನಾಟಕದ ವಿಮರ್ಶೆ ಹೀಗೆ ನಿರ್ದುಷ್ಟವಾಗಿದ್ದುದರಿಂದಲೇ ಅದರಲ್ಲಿ ಬರುತ್ತಿದ್ದ ಅಭಿಪ್ರಾಯಗಳಿಗೂ ಲೇಖನಗಳಿಗೂ ವಿಮರ್ಶನಗಳಿಗೂ ಕನ್ನಡ ನಾಡಿನಲ್ಲಿ ಅಂತಹ ಬೆಲೆ ಇತ್ತು.''15 `ಪ್ರಬುದ್ಧ ಕರ್ನಾಟಕ'ದ ತಮ್ಮ ಮೊದಲನೆಯ ಲೇಖನದ ಕೊನೆಯಲ್ಲಿ ಎ.ಆರ್.ಕೃ. `ನಮ್ಮಲ್ಲಿ ಬೆಳ್ಳಿಯಿಲ್ಲ ಭಂಗಾರವಿಲ್ಲ. ಯಾವುದು ಇದೆಯೋ ಅದನ್ನು ನಿರ್ವಂಚನೆಯಾಗಿ ಕೊಡುತ್ತೇವೆ. ನಾವು ಮಾಡತಕ್ಕ ಕೆಲಸವನ್ನು ದೃಢದಿಂದಲೂ ನಿರ್ವಂಚನೆಯಿಂದಲೂ ಮಾಡಿದರೆ ಸರಸ್ವತಿಯೂ ಲಕ್ಪ್ಮಿಯೂ ತಾವಾಗಿ ಸಹಾಯಕ್ಕೆ ಬಂದು ನಿಲ್ಲುವರೆಂದು ನಮಗೆ ಧೈರ್ಯವಿದೆ' ಎಂದು ಹೇಳಿದ್ದು ಆಮೇಲೆ ಸತ್ಯವಾಯಿತು. ಕೃಷ್ಣ ಶಾಸ್ತ್ರಿಗಳ ಸಂಪಾದಕತ್ವ ಅನೇಕ ಲೇಖಕರ ಬರೆಹಗಳಿಗೆ ಹೊಸ ಹೊಳಪನ್ನು ನೀಡಿದೆ. `.. .. .. ಕಿರಿಯರ ಪ್ರಬಂಧಕ್ಕೆ ಕತ್ತರಿಯ ಪ್ರಯೋಗವನ್ನು ಮಾಡುವಂತೆಯೇ ಹಿರಿಯರ ಲೇಖನಕ್ಕೂ ಉಳಿಯ ಪೆಟ್ಟನ್ನು ಕೊಟ್ಟು ಕೊಟ್ಟಿದ್ದಾರೆ'16 ಎಂಬ ಎನ್.ಅನಂತ ರಂಗಾಚಾರ್ ಅವರ ಮಾತು ಶಾಸ್ತ್ರಿಗಳ ಪ್ರಭುತ್ವವನ್ನು ತೋರಿಸುವುದು. `ಪ್ರಬುದ್ಧ ಕರ್ನಾಟಕ'ದಲ್ಲಿ ಒಂದು ಸಂಪ್ರದಾಯಶೀಲತೆ ಇತ್ತು. ಭಾರತೀಯತೆ ಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ನಾವು ಅದರಲ್ಲಿ ಕಾಣಬಹುದಾಗಿತ್ತು. ಅದರ ಸಂಚಿಕೆಗಳನ್ನು ಹಿಂದೂ ಪಂಚಾಂಗಕ್ಕೆ ಅನುಗುಣವಾಗಿ ವಿನಾಯಕ ಸಂಚಿಕೆ, ದೀಪಾವಳಿ ಸಂಚಿಕೆ, ಸಂಕ್ರಾಂತಿ ಸಂಚಿಕೆ, ಕಾಮನ ಸಂಚಿಕೆಯೆಂದು ಪ್ರಟಿಸಲಾಗುತ್ತಿತ್ತು. `ಪ್ರಬುದ್ಧ ಕರ್ನಾಟಕ'ದ ಸಂಪುಟ ೩೧, ಸಂಚಿಕೆ ೨ನ್ನು ವಿರೋಧಿ ಸಂವತ್ಸರ, ದೀಪಾವಳಿ ಸಂಚಿಕೆ ಎಂದು ಪ್ರಕಟಿಸಲಾಗಿದೆ. ಇಂಥ ಒಂದು ಸಂಪ್ರದಾಯ ಬದ್ಧತೆಗೆ ಜಯಕರ್ನಾಟಕವೂ ಹೊರತಾಗಿರಲಿಲ್ಲ. ಒಮ್ಮೆ ಈ ಪತ್ರಿಕೆ ತಡವಾಗಿ ಪ್ರಕಟವಾಯಿತು. ಅದಕ್ಕೆ ಅದರ ಸಂಪಾದಕರು ನೀಡಿದ ವಿವರಣೆ,
ಮುಂದಿನ ತಿಂಗಳು ಅಧಿಕ ಮಾಸವಿರುವುದರಿಂದ ಜಯಕರ್ನಾಟಕ'ದ ೧೦ನೆಯ ಸಂಚಿಕೆ ನಮ್ಮ ಪದ್ಧತಿಯ ಪ್ರಕಾರ ನಿಜ ಶ್ರಾವಣ ಶುದ್ಧ ೧೫ಕ್ಕೆ ಹೊರಡುವುದು,''- ಹೀಗೆ ಉದ್ದೇಶ ಪೂರ್ವಕವಾಗಿಯೇ ತಮ್ಮದೇ ಪದ್ಧತಿ ಅನುಸರಿಸುವ ಇವರು ಆ ಮೂಲಕ ತಮ್ಮದಲ್ಲದ ಪದ್ಧತಿ ಯನ್ನು ವಿರೋಧಿಸುತ್ತಿರುವುದನ್ನು ಅರಿಯಬಹುದು. ಎ.ಆರ್.ಕೃಷ್ಣ ಶಾಸ್ತ್ರಿಗಳು
ಪ್ರಬುದ್ಧ ಕರ್ನಾಟಕ’ದ ಸಂಪಾದಕರಾಗಿದ್ದ ಮತ್ತು ವೆಂಕಣ್ಣಯ್ಯನವರೊಂದಿಗೆ ಸಹ ಸಂಪಾದಕರಾಗಿದ್ದ ಕಾಲದಲ್ಲಿ ಸುಮಾರು ೨೬೦ ವಿದ್ಯಾರ್ಥಿಗಳೂ ವಿದ್ವಾಂಸರೂ ಅವರೊಡನೆ ಸಹಕರಿಸಿ ಅವರ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರ ನೇತೃತ್ವದಲ್ಲಿ ೨೦೦ ನವೀನ ಪ್ರಾಚೀನ ಕವಿತೆಗಳು ಪ್ರಕಾಶಿತವಾಗಿವೆ. ಸಾಹಿತ್ಯ ಸಂಶೋ ಧನೆಗೆ ಸಂಬಂಧಪಟ್ಟ ೧೪೫ ಲೇಖನಗಳು ಪ್ರಚುರವಾಗಿವೆ. ೧೨೫ ಸಣ್ಣ ಕತೆಗಳು, ಪ್ರಬಂಧ, ಗದ್ಯ ಚಿತ್ರ ಮೊದಲಾದವು ರಚಿತವಾಗಿವೆ. ವಿವಿಧ ಜಾತಿಗೆ ಸೇರಿದ ೨೨ ನಾಟಕಗಳು ಹೊರಬಿದ್ದಿವೆ. ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಮಾಜ ಶಾಸ್ತ್ರ, ಜೀವಶಾಸ್ತ್ರ, ಗಣಿತ, ಮತ, ಧರ್ಮ, ಆಧುನಿಕ ವಿಜ್ಞಾನ, ಭೂಶೋಧನೆ, ಚಿತ್ರಕಲೆ, ವಾಸ್ತುಶಿಲ್ಪ, ಸಂಗೀತ, ಶಿಕ್ಷಣ, ಆಕಾಶವಾಣಿ, ಆಹಾರ ವಿಜ್ಞಾನ, ಪುಸ್ತಕ ಭಂಡಾರ ಮೊದಲಾದ ವಿಷಯಗಳಿಗೆ ಸಂಬಂಧಪಟ್ಟ ಉಚ್ಚ ತರಗತಿಯ ೮೫ ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿವೆ. ೨೦ ಐತಿಹಾಸಿಕ ಪ್ರಬಂಧಗಳು ಬೆಳಕನ್ನು ಕಂಡಿವೆ. ೪೦೦ ಗ್ರಂಥಗಳು ವಿಮರ್ಶಿತವಾಗಿವೆ. ೧೨,೧೦೦ ಡೆಮ್ಮಿ ಆಕಾರದ ಪುಟಗಳ ಸಾಹಿತ್ಯ ಅಚ್ಚಾಗಿ ಕನ್ನಡಿಗರ ಕೈ ಸೇರಿದೆ. ಇಲ್ಲಿ ಪ್ರಕಟವಾದ ಲೇಖನಗಳ ಆಧಾರದ ಮೇಲೆ ಕಾಲಾನುಕ್ರಮದಲ್ಲಿ ೪೭ ಸ್ವತಂತ್ರ ಪುಸ್ತಕಗಳಾಗಿವೆ. ಪತ್ರಿಕೆಗೆ ಅನುಬಂಧವಾಗಿ ನಾಲ್ಕು ಗ್ರಂಥಗಳನ್ನು ಮುದ್ರಿಸಿ ಹಂಚಲಾಗಿದೆ.''17 ಈ ಲೆಕ್ಕಾಚಾರ ಒಂದು ಸೀಮಿತ ಅವಧಿಯದು. ಆ ಬಳಿಕವೂ ಪ್ರಬುದ್ಧ ಕರ್ನಾಟಕ ಸಾಗಿ ಬಂದಿದೆ. ಇದರ ಮೇಲಿಂದಲೇ ಕನ್ನಡ ಸಾಹಿತ್ಯ ಕ್ಪೇತ್ರಕ್ಕೆ ಅದರ ಕೊಡುಗೆಯನ್ನು ಲೆಕ್ಕಹಾಕಬಹುದು. ಕನ್ನಡ ಉಪಾಧ್ಯಾಯರಿಂದ ಪ್ರಬುದ್ಧ ಕರ್ನಾಟಕಕ್ಕೆ ನಾನು ಪ್ರತಿ ವರ್ಷವೂ ನಿರೀಕ್ಪಿಸುವುದು ಒಂದು ಲೇಖನ ಮತ್ತು ಒಂದು ವಿಮರ್ಶೆ ಎಂದು ಶಾಸ್ತ್ರಿಯವರು ಪ್ರಕಟಿಸಿದರು. ಮೂರು ಸಂಚಿಕೆಗಳಿಗೆ ಬೇಕಾಗುವಷ್ಟು ಲೇಖನಗಳನ್ನು ಶಾಸ್ತ್ರಿಗಳು ಮೊದಲೇ ಸಂಗ್ರಹಿಸಿ ಇಡುತ್ತಿದ್ದರಂತೆ. ಗೆಳೆಯರ ಗುಂಪು ಮತ್ತು ಜಯಕರ್ನಾಟಕ: `ಜಯಕರ್ನಾಟಕ' ಮಾಸ ಪತ್ರಿಕೆಯನ್ನು ೧೯೨೩ರಲ್ಲಿ ಆಲೂರ ವೆಂಕಟರಾಯರು ಆರಂಭಿಸಿದರು. ಇದನ್ನು ಅವರು ಮುಂದೆ `ಗೆಳೆಯರ ಗುಂಪಿ'ಗೆ ವಹಿಸಿಕೊಟ್ಟರು. ಆಲೂರರ ಸಂಪಾದಕತ್ವದಲ್ಲಿ ಪತ್ರಿಕೆ ಬರುತ್ತಿದ್ದಾಗಲೂ ಗೆಳೆಯರ ಗುಂಪಿನ ಸಹಕಾರ ಪತ್ರಿಕೆಗೆ ಇತ್ತು. ಆಲೂರರು ಗುಂಪಿಗೆ ಗೆಳೆಯರಲ್ಲದಿದ್ದರೂ ಗುಂಪಿನ ಹಿರಿಯರಂತೆ ಇದ್ದರು. ಆರ್ಥಿಕ ಹೊರೆ ಇದ್ದಲ್ಲಿ ಸ್ನೇಹವನ್ನು ತೂಗಿಸಿಕೊಂಡು ಹೋಗುವುದು ಸುಲಭವಲ್ಲ.
ಇದೊಂದು ಪ್ರತ್ಯೇಕವಾದ ದರ್ಶನವೆಂದೇ
ಹೇಳಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಯಾವ ಕೆಲಸದ ಹೊಣೆಯನ್ನೂ ಕನ್ನಡಿಗರು
ವಹಿಸಿಕೊಂಡು, ನಡೆಸಿಕೊಂಡು ಬಂದಿರುವ ಉದಾಹರಣೆಗಳು ತೀರ ಕಡಿಮೆ.
ಲೋಕಮಾನ್ಯ ಟಿಳಕರ ಸ್ನೇಹಿತರಾಗಿದ್ದ ಅಥವಾ ಅವರಿಂದ ಸ್ಫೂರ್ತಿ ಪಡೆದು ಅವರ
ಆದರ್ಶವನ್ನು ತಮ್ಮ ಆದರ್ಶವನ್ನಾಗಿ ಮಾಡಿಕೊಂಡಿದ್ದ ಆಲೂರ ವೆಂಕಟರಾಯರು ಜಯಕರ್ನಾಟಕ' ಮಾಸ ಪತ್ರಿಕೆಗೆ ಒಂದು ಸಂಸ್ಥೆಯ ಸ್ವರೂಪವನ್ನು ಕೊಡಬಹುದಾಗಿತ್ತು'',18 ಎಂದು ಗೆಳೆಯರ ಗುಂಪಿನವರಲ್ಲಿ ಒಬ್ಬರಾಗಿದ್ದ ಶೇ.ಗೋ. ಕುಲಕರ್ಣಿಯವರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ದೂರದರ್ಶಿತ್ವ ಬೇಕಾಗುತ್ತದೆ. ಭಾರತದಲ್ಲಿ, ಕರ್ನಾಟಕದಲ್ಲಿ ಸಾರ್ವಜನಿಕ ಸಂಸ್ಥೆಗಳು ನಡೆಯುವುದು ತೀರ ದುರ್ಲಭ ಎಂಬ ಮಾತನ್ನೂ ಅವರು ಹೇಳಿದ್ದಾರೆ. ಆಲೂರ ವೆಂಕಟರಾಯರು ಏಳು ವರ್ಷಗಳ ಕಾಲ ಪತ್ರಿಕೆಯನ್ನು ನಡೆಸಿದ ಮೇಲೆ, ಅದನ್ನು ಗೆಳೆಯರ ಗುಂಪಿಗೆ ಹತ್ತು ವರ್ಷಗಳ ವರೆಗೆ ತಿಂಗಳಿಗೆ ಒಂದು ನೂರು ರುಪಾಯಿ ಕೊಡಬೇಕು ಎನ್ನುವ ಶರತ್ತಿನ ಮೇಲೆ ವಹಿಸಿಕೊಟ್ಟಿದ್ದರು. ಇದು ಅತಿ ಎನ್ನಿಸಿ ಕೊನೆಗೆ ಮೂರು ಸಾವಿರ ರುಪಾಯಿಗಳನ್ನು ಒಂದು ವರ್ಷದ ಅವಧಿಯಲ್ಲಿ ಕೊಡುವುದೆಂಬ ನಿರ್ಣಯಕ್ಕೆ ಬರಲಾಗುತ್ತದೆ. ಮುಂದೆ ಒಂದು ವರ್ಷದೊಳಗೇ ಆಲೂರರಿಗೆ ಗೆಳೆಯರ ಗುಂಪು ಮೂರು ಸಾವಿರ ರುಪಾಯಿಗಳನ್ನು ನೀಡುತ್ತದೆ. ``ಜಯಕರ್ನಾಟಕವು ಒಂದು ವ್ಯಾಪಾರ ವೃತ್ತಿಯೆಂದು ಪರಿಗಣಿಸಲ್ಪಡದೆ ನಾಡಿಗಾಗಿ, ನುಡಿಗಾಗಿ ನಿಸ್ವಾರ್ಥದಿಂದ ಹಾಗೂ ಕೆಲಮಟ್ಟಿಗೆ ತ್ಯಾಗದಿಂದ ಸೇವೆ ಸಲ್ಲಿಸುತ್ತಿರುವ ಸಮರ್ಥ ಕೆಲಸಗಾರರಿಂದ ಕೂಡಿದ ಒಂದು ಸಂಸ್ಥೆ ಎಂಬ ಭಾವನೆ ಜನರಲ್ಲಿ ಬರತೊಡಗಿತು. ಇದರೊಂದಿಗೆ ಗೆಳೆತನವನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಸಾಧಿಸಬೇಕೆನ್ನುವ ಆದರ್ಶ ಗೆಳೆಯರದಾಗಬೇಕೆಂಬ ಹಂಬಲವನ್ನು ಇರಿಸಿಕೊಂಡ ಗೆಳೆಯರ ಸಂಸ್ಥೆ ಎಂದೂ ಅದಕ್ಕೆ ಸಮಾಜದಲ್ಲಿ ಒಂದು ಗೌರವದ ಸ್ಥಾನ ದೊರೆಯಿತು. ಗಾಂಧಿ ಚಳವಳಿಯು ಪ್ರಬಲವಾಗಿದ್ದ ಆಗಿನ ದಿನಗಳಲ್ಲಿ ಅಷ್ಟೇ ಮಹತ್ವವಾದ ಆದರ್ಶವನ್ನಿಟ್ಟುಕೊಂಡು ಕೆಲಸ ಮಾಡುವುದು ಅವಶ್ಯವಾಗಿತ್ತು, ಅನಿವಾರ್ಯವಾಗಿತ್ತು; ಇದರಲ್ಲಿ ಆತ್ಮ ತೃಪ್ತಿಯೂ ಇತ್ತು. ನುಡಿಯ ಸೇವೆ ನಾಡ ಸೇವೆಗೆ ಯಾವ ರೀತಿಯಿಂದಲೂ ಕಡಿಮೆ ಅಲ್ಲ ಎಂಬ ಅಭಿಮಾನವಿತ್ತು. ಅಂತೆಯೇ ಆಗ ಕಾಂಗ್ರೆಸ್ಸಿನ ಕೆಲಸಗಳಲ್ಲಿ, ಖಾದಿ ಕೆಲಸಗಳಲ್ಲಿ ಕೆಲಸ ಮಾಡುತ್ತಿದ್ದ ದೇಶ ಭಕ್ತರ ಹೆಗಲಿಗೆ ಹೆಗಲು ಹಚ್ಚಿ ನಾವು ಅಂತಹದೇ ಕೆಲಸ ಮಾಡುತ್ತಿರುವೆವೆಂಬ ಆತ್ಮವಿಶ್ವಾಸ ನಮ್ಮಲ್ಲಿ ಇತ್ತು. ಬಂದಿತ್ತು''19 ಎಂದು ಶೇ.ಗೋ. ಕುಲಕರ್ಣಿಯವರು ಹೇಳುವ ಮಾತು ಅತ್ಯಂತ ಮಹತ್ವದ್ದು. ಸ್ವಾತಂತ್ಯ್ರ ಚಳವಳಿಯ ಆ ದಿನಗಳಲ್ಲಿ ಇಂಥ ಪತ್ರಿಕೆ ನಡೆಸುವುದು ಕೂಡ ದೇಶ ಭಕ್ತಿಯ ಕೇಲಸವೇ ಎಂಬ ಭಾವನೆ ಇದ್ದದ್ದು ಆಗಿನ ಇಡೀ ವಾತಾವರಣವನ್ನು ಪ್ರತಿಬಿಂಬಿಸುವುದು. ಪ್ರಭಾತ:
ಜಯಕರ್ನಾಟಕ’ಕ್ಕಿಂತ ಸ್ವಲ್ಪ ಮೊದಲು ಹುಟ್ಟಿಕೊಂಡ ಪತ್ರಿಕೆ
ಪ್ರಭಾತ'. ಕೇವಲ ಕವಿತೆಗಳ ಪ್ರಕಟಣೆಗಾಗಿಯೇ ಹುಟ್ಟಿಕೊಂಡ ಇದು ಹೊಸ ಪ್ರಯೋಗಗಳಿಗೆ ವೇದಿಕೆಯಾಯಿತು. ಕಾವ್ಯದ ಛಂದಸ್ಸು ಹಳೆಯದೇ ಆದರೂ ಅಭಿವ್ಯಕ್ತಿಯ ರೀತಿಯಲ್ಲಿ ಹೊಸತನ ಇದ್ದುದನ್ನು ಇದರಲ್ಲಿಯ ಕವಿತೆಗಳಿಂದ ಅರಿಯಬಹುದು.
ಪ್ರಭಾತ’ದ ಕವಿತೆಗಳನ್ನು ಗಮನಿಸಿದಾಗ ಮುಕ್ಕಾಲು ಭಾಗ ಷಟ್ಪದಿಗಳಲ್ಲಿ ಇವೆ. ಇಲ್ಲಿಯ
ಕವಿತೆಗಳ ಶೀರ್ಷಿಕೆಗಳು- ಕಾಗದ, ಕವಿಯ ಸಾಮ್ರಾಜ್ಯ, ಕಾಲು ಗಾಡಿ (Cycle), ವಸಂತ
ಋತುವಿನ ಮನೆ, ವಿಷಮ ವಿವಾಹ, ಭಕ್ತಿ ಕುಸುಮಾವಳಿ, ದೇವರಲ್ಲಿ ಪ್ರಾರ್ಥನೆ, ಕನ್ನಡ
ನಾಡಿನ ಹಿರಿಮೆ, ತುತೂರಿ, ಜಾದಿಯ ಹೂ, ಕನ್ನಡ ನಾಡಿನ ಇತಿಹಾಸ, ಮುಂಜಾವು-
ಹೀಗೆ ಹೊಸದು ಮತ್ತು ಹಳೆಯ ವಸ್ತುವಿನ ವಿಶ್ರಣವಿದೆ, ವೈವಿಧ್ಯವಿದೆ. ಆನಂದಕಂದರ
ಭಕ್ತಿ ಕುಸುಮಾವಳಿ'ಯನ್ನು ಗಮನಿಸಿದರೆ ಹಳೆಯ ಬಂಧದೊಳಗೆ ಹೊಸದರತ್ತ ಇರುವ ತುಡಿತ ಕಾಣುತ್ತದೆ. ಒಡೆಯ ನೀನೆಂದರಿದೇ ನಿ-| ನ್ನಡಿಯ ಭಜನೆಯ ಮರೆತು ಬಿಟ್ಟೆನು| ಮಡದಿ ಮಕ್ಕಳ ಮೋಹದಲ್ಲಿ ಮದಾಂಧನಾಗಿರುತ ॥ ಪೊಡವಿಯಂ ನಡೆದಿರುವ ಕಾಲಕೆ| ಮಡದಿಯಾರ್ ಮೇಣ್ ಮಕ್ಕಳುಗಳಾರ್| ಪೊಡವಿಯೊಡೆಯನೆ ಕಡೆಗೆ ನೀನಿರದಾರು ನನಗಿಹರೋ ॥20 ಇಲ್ಲಿಯ ಭಾಷೆಯ ಸರಳತೆ ಮತ್ತು ಸೊಗಸು ಹಳೆಯ ವಸ್ತುವಿಗೆ ಹೊಸತನವನ್ನು ನೀಡಿದೆ. ಈ ಹಳೆಯದು ಮತ್ತು ಹೊಸದರ ನಡುವಿನ ಮಸೆದಾಟವನ್ನು ಬೇಂದ್ರೆಯಂಥವರ ಕಾವ್ಯದಲ್ಲಿಯೇ ಕಾಣಬಹುದು. ``ತಾಳವಿಲ್ಲದೆಲೆ ಬೇತಾಳನಂದದಿ ಕುಣಿವ| ಕಾಳ ನರ್ತಕನ ಕಾಲ್ಕೆಳಗೆ ತೊತ್ತಳಿಗೊಂಡು| ಹಾಳಾಗಿ ಹುಡಿಗೂಡಿ ಹೋದ ಕನ್ನಡ ನಾಡಿಗಿದಿರಾಗಿ ಬಂದು ನಿಂತು॥ ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು| ಬೀಳುಗಳ ಬದಿಗೆ ಬೀಳುಗಳ ಬಾಳುಗಳು| ಕಾಳರಕ್ಕಸನ ಕೂಡೆ ಕೂಳು ಬಾಳಕವಾದ ನಾಡನಡುಮನೆಯ ಕಂಡೆ ॥''21 ಕಾವ್ಯದ ಶರೀರ ಷಟ್ಪದಿ. ಆತ್ಮ ನವನವೀನವಾಗಿರುವುದು ಈ ಕವಿತೆ ಓದಿದಾಗ ಅನುಭವಕ್ಕೆ ಬರುತ್ತದೆ.
ಪ್ರಭಾತ’, ಜಯಕರ್ನಾಟಕ'ಗಳು ಈ ರೀತಿಯಲ್ಲಿ ಹೊಸ ಕಾವ್ಯ ಪ್ರಯೋಗಕ್ಕೆ ವೇದಿಕೆಯಾಗಿ ದೊರೆತವು. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ:
ಪ್ರಬುದ್ಧ ಕರ್ನಾಟಕ’ಕ್ಕಿಂತ ಸ್ವಲ್ಪ
ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ' ಕವಿಕಾವ್ಯ ಪರಿಚಯ, ಕನ್ನಡ ಕಾವ್ಯ ಪ್ರಕಾ ರಗಳ ಪರಿಚಯ, ಸಂದೇಹಗಳು, ಸೂಚನೆಗಳು, ಸಾಹಿತ್ಯ ಸಮ್ಮೇಳನಗಳು, ಸಮ್ಮೇಳನಾಧ್ಯ ಕ್ಪರು, ಅಧ್ಯಕ್ಷರ ಭಾಷಣಗಳು ಮೊದಲಾದವುಗಳನ್ನು ಪ್ರಕಟಿಸುತ್ತ ಬಂದಿದೆ.
ಸಾಹಿತ್ಯ
ಪರಿಷತ್ಪತ್ರಿಕೆ’ಯನ್ನು ಎ.ಆರ್.ಕೃಷ್ಣ ಶಾಸ್ತ್ರಿಗಳು ನಾಲ್ಕು ವರ್ಷಗಳ ಕಾಲ ಸಂಪಾದಕರಾಗಿ
ಮುನ್ನಡೆಸಿದರು. ಶಾಸ್ತ್ರಿಗಳ ಸಂಪಾದಕತ್ವದ ಬಗ್ಗೆ ಎಂ.ವಿ.ಸೀತಾರಾಮಯ್ಯನವರು ಹೇಳು
ವ ಮಾತುಗಳು ಮಹತ್ವದ್ದು. “ಬಹುಮಟ್ಟಿಗೆ ಪರಂಪರಾಗತ ಪಾಂಡಿತ್ಯಕ್ಕೆ ಮೀಸಲಾಗಿದ್ದ
ಪತ್ರಿಕೆಯನ್ನು ಆಧುನಿಕ ಸಂಶೋಧನಾತ್ಮಕ ಪಾಂಡಿತ್ಯಕ್ಕೆ ತೆರವು ಮಾಡಿಕೊಡುವ ಹೊಣೆ
ಗಾರಿಕೆಯನ್ನು ಹೊತ್ತಿದ್ದರು ಶಾಸ್ತ್ರಿಗಳು. ಪತ್ರಿಕೆಯಲ್ಲಿ ಅವರು ಮಾಡಿದ ಮಾರ್ಪಾಟುಗಳು
ಹಳಬರನ್ನು ಎದುರುಹಾಕಿಕೊಳ್ಳದೆ ಹೊಸ ವಿದ್ವಾಂಸರನ್ನು ಸ್ವಾಗತಿಸಿದವು”.೨೨ ಒಳ್ಳೆಯ
ಸಂಪಾದಕತ್ವ ಕೂಡ ಒಂದು ಪತ್ರಿಕೆಗೆ ಹೊಸ ರೂಪವನ್ನು ಕೊಡಬಲ್ಲುದು. ಪತ್ರಿಕೆಯ ಒ
ಳ ಪುಟಗಳನ್ನು ಶ್ರೀಮಂತಗೊಳಿಸಿದ್ದರ ಜೊತೆಯಲ್ಲಿಯೇ ಪತ್ರಿಕೆಯ ಹೊರ ಪುಟವನ್ನೂ
ಅವರು ಅಂದಗೊಳಿಸಿದರು. ಮುದ್ರಣಕ್ಕೆ ಉತ್ತಮ ಕಾಗದ ಬಳಸಿದರು. ಪತ್ರಿಕೆಯ ತೂಕ
ಏರಬೇಕಾದರೆ ಬರವಣಿಗೆಯ ತೂಕದ ಜೊತೆ ಕಾಗದದ ತೂಕವೂ ಅಗತ್ಯ ಎಂಬ ನಂಬು
ಗೆ ಅವರದಾಗಿತ್ತು. ಇದರ ಉದ್ದೇಶ ಇಷ್ಟೇ, ದೇಶ ವಿದೇಶಗಳ ವಿದ್ವತ್ ಪತ್ರಿಕೆಗಳನ್ನು ವಿನಿ
ಮಯ ಮಾಡಿಕೊಳ್ಳುವುದು. ಆ ಮೂಲಕ ಪರಿಷತ್ಪತ್ರಿಕೆಯ ಸಂಪಾದನ ಕಾರ್ಯಕ್ಕೂ
ಪರಿಷತ್ತಿನಲ್ಲಿ ಸಂಶೋಧನೆ ಮಾಡುವವರಿಗೂ ಅನುಕೂಲ ಕಲ್ಪಿಸುವುದು. ಆ ಪತ್ರಿಕೆಗಳನ್ನೆ
ಲ್ಲ ಚಂದಾ ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಪರಿಷತ್ತಿಗೆ ಇಲ್ಲದ್ದರಿಂದ ಶಾಸ್ತ್ರಿಗಳು
ದೂರಾಲೋಚನೆಯಿಂದ ಈ ಕ್ರಮ ಕೈಗೊಂಡರು. ಅಗ್ಗದ ಕಾಗದದ ಮೇಲೆ ಅಚ್ಚು
ಹಾಕಿದ ಬಡಕಲು ಪತ್ರಿಕೆ ಕಳಿಸಿಕೊಟ್ಟರೆ, ಶ್ರೀಮಂತ ಪತ್ರಿಕೆಗಳು ನಮಗೆ ವಿನಿಮಯವಾಗಿ
ಬರುತ್ತವೆಯೇ ಎಂದು ಅವರು ಪ್ರಶ್ನಿಸುತ್ತಿದ್ದರು.
ಶಾಸ್ತ್ರಿಗಳು ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದುದು ಅದರ ೧೯ನೆಯ ಸಂಪುಟದಿಂದ
ಮುಂದಿನ ನಾಲ್ಕು ಸಂಪುಟಗಳ ವರೆಗೆ. ಆ ಅವಧಿಯ ಸಂಚಿಕೆಗಳನ್ನು ಅದರ ಹಿಂದಿನ
ಸಂಚಿಕೆಗಳೊಂದಿಗೆ ಹೋಲಿಸಿ ನೋಡಿದರೆ ವ್ಯತ್ಯಾಸ ಗೊತ್ತಾಗಿ ಬಿಡುತ್ತದೆ. ಶಾಸ್ತ್ರಿಗಳು
ವಿನಿಮಯ ರೂಪದಲ್ಲಿ ಬರುತ್ತಿದ್ದ ಪತ್ರಿಕೆಗಳಲ್ಲಿ ಭರತ ಖಂಡದ ಭಾಷೆ, ಸಾಹಿತ್ಯ, ಚರಿತ್ರೆ,
ಸಂಸ್ಕೃತಿ ಮೊದಲಾದವುಗಳ ಕುರಿತು ಪ್ರಕಟವಾದ ಲೇಖನಗಳು ಆ ವಿಷಯಗಳಲ್ಲಿ ಕೆಲಸ
ಮಾಡುವ ವಿದ್ವಾಂಸರು ಮತ್ತು ಆಸಕ್ತ ಜನರ ಗಮನಕ್ಕೆ ಬರಬೇಕು ಎಂಬ ಉದ್ದೇಶದಿಂದ,
ಪ್ರಾಚ್ಯ ಲೇಖನ ಮಾಲೆ ಎಂಬ ಉಪಯುಕ್ತ ವಿಭಾಗವನ್ನು ಆರಂಭಿಸಿದರು. ಮೊದಲಿನ
ಒಂದೆರಡು ಸಂಚಿಕೆಗಳಲ್ಲಿ ಲೇಖನಗಳ- ಲೇಖಕರ ಹೆಸರುಗಳಷ್ಟೇ ಪ್ರಕಟವಾದವು. ನಂತರ
ಅವರು ಆ ಲೇಖನಗಳ ಸಾರವನ್ನು ಪ್ರಕಟಿಸಬೇಕೆಂಬ ನಿರ್ಧಾರವನ್ನು ಕೈಗೊಂಡರು.
ಒಂದು ಉದಾಹರಣೆ ನೋಡಬೇಕೆಂದರೆ:
1)Journal oF The Benares Hindu University, Vol.1, No.1 1937.
- “Agasthya or the Rise and spread of Hindu Culture”-Mr.K.A.Neelakantha Sastri, M.A.
- “State of Hinduism and Budhism in Sudraka`s Mrchhakatika”- Dr. S.K.
Belvalkar, M.A., Ph.D.
[Sudraka seems to have used Sakara as an instrument for venting out his own
views against contemporary Society and superstitios.]
2)Journal of Annamalai University,January 1937 - “The age of Tholkappiam”- Mr. S.S. Bharathi
[5th or 6th Century B.C.: Vide also issue of May 1937]
೩) ಜಯಕರ್ನಾಟಕ- ಮಾರ್ಚಿ ೧೯೩೭
೧.ದ್ರಾವಿಡ ಲಿಪಿಯಿಂದ ಬ್ರಾಹ್ಮೀ ಲಿಪಿಯ ಉತ್ಪತ್ತಿ. ಲೇಖಾಂಕ ೧. ಶ್ರೀ
ಪ್ರ.ಗೋ. ಕುಲಕರ್ಣಿ
೨.ಇತಿಹಾಸ ಸಂಶೋಧಕರು- ಶ್ರೀ ಎಸ.ಆರ್. ಶೇಷಗಿರಿರಾವ್, ಬಿ.ಎ.
೪) ಆಂಧ್ರ ಸಾಹಿತ್ಯ ಪರಿಷತ್ಪತ್ರಿಕೆ- ಎಪ್ರಿಲ್-ಮೇ ೧೯೩೭
ಪ್ರಕಾಶ ವರ್ಷುಡು- ರಸಾರ್ಣವಾಲಂಕಾರಮು
-ಶ್ರೀ ಈ.ವೆಂಕಟವೀರರಾಘವಾಚಾರ್ಯಲುಗಾರು, ಎಂ.ಎ.
ಶಾಸ್ತ್ರಿಗಳ ಈ ಉಪಕ್ರಮವೇ ಮುಂದೆ ಕನ್ನಡದಲ್ಲಿ ಲೇಖನ ಸೂಚಿಗಳು, ಗ್ರಂಥಸೂಚಿಗಳು, ಶಾಸನ ಸೂಚಿಗಳು ಬರುವುದಕ್ಕೆ ಪ್ರೇರಣೆ ನೀಡಿರಬಹುದು.
ಸಮಕಾಲೀನ ಪತ್ರಿಕೆಗಳಲ್ಲಿ ಬಂದಿರುವ ಇಂಥ ವಿಷಯಗಳನ್ನು ಕನ್ನಡ ವಿದ್ವಾಂಸರಿಗೆ ಪರಿಚಯಿಸಿದ ಹಾಗೆಯೇ ಪರಿಷತ್ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯಗಳ ಸಾರವು ಕನ್ನಡ ಬಾರದ ವಿದ್ವಾಂಸರ ಗಮನಕ್ಕೆ ಬರುವುದೂ ಅಷ್ಟೇ ಮುಖ್ಯ ಎಂದು ಶಾಸ್ತ್ರಿಗಳು ಭಾವಿಸಿದ್ದರು. ಈ ಪತ್ರಿಕೆ ಇಂಗ್ಲೆಂಡ, ಅಮೆರಿಕ, ಜರ್ಮನಿ ಮೊದಲಾದ ಪಾಶ್ಚಾತ್ಯ
ದೇಶಗಳಿಗೆ ಹೋಗುತ್ತಿತ್ತು. ಅಲ್ಲಿಯ ವಿದ್ವಾಂಸರು ಈ ಪತ್ರಿಕೆಯಲ್ಲಿಯ ವಿಷಯವನ್ನು
ಅರಿಯಲಿ ಎಂಬ ಉದ್ದೇಶದಿಂದ ಅವರು Contents in Briefs ಎಂಬ ವಿಷಯ ಸಂಗ್ರಹ
ಪತ್ರವನ್ನು ಇಂಗ್ಲಿಷಿನಲ್ಲಿ ಅಚ್ಚು ಹಾಕಿಸಿ, ಪತ್ರಿಕೆಯ ಮುಖಪುಟಕ್ಕೆ ಅಂಟಿಸಿ ಕಳಿಸುವ
ವ್ಯವಸ್ಥೆಯನ್ನು ಮಾಡಿದರು.
ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ:
Vol.XXI. October- December 1936, No.4.
2.National Literature in kannada: By Mr. R.S. Mugali, M.A., B.T.,
Proffessor of Kannada, Willingdon College, Sangli.
“Prof. Mugali points out in this article that ‘The love of the Land’ has been
from the earliest times a source of inspiration for poets of the Kannada country and
gives examples from inscriptions, and works of Ancient and Modern periods of
Kannada Literature”
ಶಾಸ್ತ್ರಿಗಳ ಇಂಥ ಒಂದು ಉಪಕ್ರಮದಿಂದ ಸಂಶೋಧಕರಿಗೆ ಆಕರವನ್ನು
ಅರಿಯುವುದು ಸುಲಭವನ್ನಾಗಿ ಮಾಡಿತು. ಅವರು ಎರಡನೆಯ ಬಾರಿಗೆ ಪ್ರಬುದ್ಧ
ಕರ್ನಾಟಕದ ಸಂಪಾದಕರಾಗಿದ್ದಾಗಲೂ ಇದನ್ನೇ ಅನುಸರಿಸಿದರು.
`ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ಗೆ ಶಾಸ್ತ್ರಿಗಳು ಅಖಿಲ ಕರ್ನಾಟಕ ವ್ಯಾಪ್ತಿಯನ್ನು
ತಂದುಕೊಟ್ಟರು. ಇದಕ್ಕಾಗಿ ಪತ್ರಿಕೆಯ ವಿಮರ್ಶೆ ವಿಭಾಗವನ್ನು ಅವರು ಯಶಸ್ವಿಯಾಗಿ
ಬಳಸಿದರು. ಬೆಂಗಳೂರಿನ ಸುತ್ತಮುತ್ತ ಇದ್ದವರಿಂದಲೇ ಅವರು ಪುಸ್ತಕ ವಿಮರ್ಶೆ
ಬರೆಸಬಹುದಾಗಿತ್ತು. ಆದರೆ ಹಾಗೆ ಮಾಡದೆ ನಾಡಿನ ಮೂಲೆ ಮೂಲೆಯಲ್ಲಿರುವ
ವಿದ್ವಾಂಸರನ್ನು ಗುರುತಿಸಿ ಯಾರಿಗೆ ಯಾವುದರಲ್ಲಿ ಪರಿಶ್ರಮವಿದೆಯೋ ಅಂಥವರಿಗೇ
ಆಯಾ ಪುಸ್ತಕಗಳನ್ನು ಕಳುಹಿಸಿ ವಿಮರ್ಶೆಯನ್ನು ತರಿಸಿಕೊಳ್ಳುತ್ತಿದ್ದರು. ಇದಕ್ಕಾಗಿ ಅವರು
ಒಂದು ನೊಂದಣಿ ಪುಸ್ತಕವನ್ನು ಮಾಡಿದ್ದರು. ಅದರಲ್ಲಿ ಪುಸ್ತಕವನ್ನು ವಿಮರ್ಶೆಗೆ ಕಳುಹಿಸಿದ
ತಾರೀಖು, ವಿಮರ್ಶೆ ಬಂದ ತಾರೀಖು, ವಿಮರ್ಶೆ ಸಕಾಲದಲ್ಲಿ ಬಾರದಿದ್ದರೆ ವಿಮರ್ಶಕರಿಗೆ
ನೆನಪು ಕೊಡಲು ಪತ್ರ ಬರೆದ ತಾರೀಖು, ಅಂಚೆ ಹಾಸಲು (ಪುಸ್ತಕಗಳನ್ನು ಹಿಂದಿರುಗಿಸಲು
ತಗಲುವ ಮೌಲ್ಯದ ಅಂಚೆ ಚೀಟಿಗಳನ್ನು ಪುಸ್ತಕದೊಂದಿಗೆ ಇರಿಸಲಾಗುತ್ತಿತ್ತು.) ಇವನ್ನೆಲ್ಲ
ಬರೆದಿಡಲಾಗುತ್ತಿತ್ತು. ಕೆಲವು ಬಾರಿ ಐದಾರು ನೆನಪಿನ ಓಲೆಗಳನ್ನು ಬರೆದು ವಿಮರ್ಶೆಯನ್ನು
ತರಿಸಿಕೊಂಡಿದ್ದೂ ಇತ್ತು. ಸಾಹಿತ್ಯ ಪರಿಷತ್ಪತ್ರಿಕೆಯ ಮೂಲಕ ಎ.ಆರ್.ಕೃಷ್ಣ ಶಾಸ್ತ್ರಿಗಳು ಒಂದು ಅನುಕರಣೀಯ ಪರಂಪರೆ ನಿರ್ಮಿಸಿದರು.
ವಿಶ್ವಕರ್ನಾಟಕ: ಕನ್ನಡತನದ ಪ್ರಸ್ತಾಪವಾದಾಗ ತಿ.ತಾ.ಶರ್ಮ ಅವರನ್ನು ಸ್ಮರಿಸದೆ ಇರಲು ಸಾಧ್ಯವಿಲ್ಲ. ವಿಶ್ವಕರ್ನಾಟಕ'ದ ಮೂಲಕ ದೊಡ್ಡ ಹೆಸರನ್ನು ಮಾಡಿದ ಅವರು ಪತ್ರಿಕೋದ್ಯವನ್ನು ಪ್ರವೇಶಿಸಿದ್ದು
ದೇಶೀಯ ವಿದ್ಯಾಶಾಲಾ ಪತ್ರಿಕೆ’ಯ ಮೂಲ
ಕ. ಇದನ್ನು ಆರಂಭಿಸಿದವರು ತುಂಟರ ಗುಂಪಿನವರು. ಕೋಲಾರ ಸಂಪದ್ಗಿರಿ ರಾಯರು,
ಕಂದಾಡೆ ಕೃಷ್ಣಯ್ಯಂಗಾರರು ಸೇರಿ ಶಾಲೆಯ ಚಟುವಟಿಕೆಗಳನ್ನು ಜನಪ್ರಿಯಗೊಳಿಸಲು
೧೯೨೨ರಲ್ಲಿ ಇಂಗ್ಲಿಷಿನಲ್ಲಿ ಶಾಲಾಪತ್ರಿಕೆಯನ್ನು ಆರಂಭಿಸಿದರು. ಇದು ವರ್ಷದಲ್ಲಿ ಮೂರು
ಬಾರಿ ಪ್ರಕಟಗೊಳ್ಳುತ್ತಿತ್ತು. ತಿ.ತಾ.ಶರ್ಮರು ದೇಶೀಯ ವಿದ್ಯಾಶಾಲೆಗೆ ಬಂದ ಮೇಲೆ
ಪತ್ರಿಕೆಯ ಹೊಣೆಯನ್ನು ತಾವೇ ಹೊತ್ತುಕೊಂಡರು. ಕನ್ನಡಾಭಿಮಾನಿಯಾದ ಅವರು
೧೯೨೩ರ ಜುಲೈ ಸಂಚಿಕೆಯಿಂದ ಅದನ್ನು ಕನ್ನಡ ಪತ್ರಿಕೆಯಾಗಿಸಿದರು. ಈ ಬದಲಾವಣೆ
ಯನ್ನು ಮಾಡಿದಾಗ, ಕರ್ನಾಟಕ ದೇಶಮಾತೆಯ ಸೇವೆಗಾಗಿ ದೇಶೀಯ ಶಿಕ್ಷಣದಲ್ಲಿ ಎಲ್ಲ
ರಿಗೂ ಪ್ರಚಾರವನ್ನು ಮಾಡುವುದಕ್ಕಾಗಿ ಈ ಪತ್ರಿಕೆಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸುವ
ಉದ್ಯಮವನ್ನು ಕೈ ಬಿಡಲು ಸಿದ್ಧರಾಗಿದ್ದೇವೆ ಎಂದು ಪ್ರಕಟಿಸಿದರು.
ಆಂಗ್ಲ ಭಾಷೆಗೆ ಯುವ ಜನಾಂಗ ಮೋಹಗೊಳ್ಳುತ್ತಿದ್ದ ಸಂದರ್ಭದಲ್ಲಿ ವಿದ್ಯಾವಂತರ
ಹೃದಯಗಳನ್ನು ಗೆಲ್ಲುವುದಕ್ಕೆ ಈ ಪತ್ರಿಕೆಯನ್ನು ಕನ್ನಡದಲ್ಲಿ ಪ್ರಕಟಿಸುವುದು ಅಗತ್ಯವಿದೆ
ಎಂದು ಶರ್ಮ ಭಾವಿಸಿದರು. ತುಂಟರ ಗುಂಪಿನ ಮುಖವಾಣಿಯಾದ ಇದರ
ಉದ್ದೇಶಗಳನ್ನು ಶರ್ಮರು ಹೀಗೆ ಹೇಳಿಕೊಂಡಿದ್ದಾರೆ: ೧)ಶಿಕ್ಷಣದ ಎಲ್ಲ ಹಂತಗಳಲ್ಲೂ
ಕನ್ನಡ ಭಾಷೆಯನ್ನು ನೀತಿ ನಿರ್ಣಯ ಮಾಡಿ, ಪ್ರಭುತ್ವದವರು ಆಚರಣೆಗೆ ತರುವಂತೆ
ಮಾಡಬೇಕು. ೨) ಕನ್ನಡ ಭಾಷಾ ಸಾಹಿತ್ಯಗಳ ಅಧ್ಯಯನದಲ್ಲಿ ನವೀನ ವೈಜ್ಞಾನಿಕ ರೂಪ
ಬರಬೇಕು. ಉತ್ತಮವಾದ, ಪರಿಣಾಮಕಾರಿಯಾಗಿರುವ ಸರಳ ಗದ್ಯದ ನಿರ್ಮಾಣವಾಗ
ಬೇಕು. ಇದಕ್ಕಾಗಿ ಹೊಸ ಹೊಸ ಶಬ್ದಗಳನ್ನು ಸೃಷ್ಟಿಸಬೇಕು. ಸಾಹಿತ್ಯ ರಚನೆಯಲ್ಲಿಯೂ
ಹೊಸ ಪ್ರಯೋಗಗಳನ್ನು ನಡೆಸಬೇಕು. ೩) ಮಕ್ಕಳಲ್ಲಿ ವಿಚಾರ ಶಕ್ತಿಯನ್ನು, ಸೃಷ್ಟಿ ಶಕ್ತಿಯನ್ನು
ಬೆಳೆಸಬೇಕು, ಪರೋಪಕಾರ ಬುದ್ಧಿಯನ್ನು ಪ್ರತಿಯೊಬ್ಬರೂ ತಮಗಿರುವ ಅವಕಾಶದಲ್ಲಿ
ಆಚರಣೆಗೆ ತರಬೇಕು. ಮಕ್ಕಳಲ್ಲಿ ವಿದ್ಯಾರ್ಜನೆಯ ಜೊತೆಗೆ, ಸ್ವಾತಂತ್ಯ್ರವೇ ಜೀವನ, ದಾಸ್ಯವೇ ಸಾವು',
ಬಡತನವೇ ಭಾಗ್ಯ’, ಸೇವೆಯೇ ಜೀವನದ ಸಾಧನೆಯ ಸರ್ವಸ್ವ', ಈ ಮನೋಭಾವಗಳನ್ನು ಮೂಡಿಸಬೇಕು- ಈ ಉದ್ದೇಶಗಳಿಗಾಗಿ ಪತ್ರಿಕೆ ಶ್ರಮಿಸುತ್ತದೆ ಎಂದು ಪ್ರಕಟಿಸಿದರು. ಕನ್ನಡವು ಸರ್ವಾಂತರ್ಯಾಮಿಯಾಗಬೇಕು ಎಂಬ ಉದ್ದೇಶವನ್ನು ಇದರಲ್ಲಿ ಪ್ರಕಟವಾದ ಲೇಖನಗಳೆಲ್ಲ ಹೊಂದಿತ್ತು. ಶರ್ಮರಂಥ ದೂರ ದೃಷ್ಟಿಯ ಕನ್ನಡ ಪ್ರೇಮಿಯಿಂದಾಗಿಯೇ ಕನ್ನಡ ಸಾಹಿತ್ಯ ಬಲಗೊಂಡಿದ್ದು, ಕನ್ನಡ ನಾಡಿನ ಏಕೀಕರಣ ಸಾಧ್ಯವಾಗಿದ್ದು. ತುಂಟರ ಗುಂಪಿನಲ್ಲಿ ಕೋಲಾರ ಸಂಪದ್ಗಿರಿರಾಯರು, ಕಂದಾಡೆ ಕೃಷ್ಣಯ್ಯಂಗಾರರು, ಕೆ.ಎಸ್. ಕೃಷ್ಣ ಅಯ್ಯರ್, ದ.ಕೃ. ಭಾರದ್ವಾಜ, ಕೈಲಾಸಂ, ಕೆ.ಎ. ವೆಂಕಟರಾಮಯ್ಯ, ಅ.ನ.ಕೃ., ಸಿ.ಮಹಾದೇವಯ್ಯ, ಅನೇಕಲ್ ಸರ್ವಾಭಟ್ಟ, ಕಣ್ಣನ್ ಮೊದಲಾದವರಿದ್ದರು. ಇವರೆಲ್ಲರೂ ತುಂಟರ ಚಿಳ್ಳೆ, ತುಂಟರ ಪಿಳ್ಳೆ, ತುಂಟರ ಕೊಳ್ಳಿ, ತುಂಟರ ಭಟ್ಟ, ತುಂಟರ ಗೊರವ, ತುಂಟರ ಕೊಂಟ, ತುಂಟರ ದತ್ತ.. .. ಮೊದಲಾದ ಹೆಸರುಗಳಿಂದ ಬರೆಯುತ್ತಿದ್ದರು. ತುಂಟರ ಗುಂಪಿನ ಸದಸ್ಯರು ನವೋದಯದ ಆರಂಭ ಕಾಲದಲ್ಲಿ ಕನ್ನಡದಲ್ಲಿ ಸ್ವತಂತ್ರ ಗದ್ಯಶೈಲಿಯನ್ನು ರೂಪಿಸಿದರು. ಉದ್ಯೋಗ, ಹುಂಜಗಳು, ಶ್ರಾದ್ಧವೋ ಸರ್ವನಾಶವೋ?, ರೆ ರಾಜ್ಯ, ಇಂಗ್ಲಿಷ್ ಶಾಸ್ತ್ರಿಗಳ ಚೆಲ್ಲಾಟ, ಕೂಗೋ ಗುಡ್ಡ, ಗುಂಪಿಗಂಟುವ ರೋಗ, ಕವಿತೆಯ ಗುಟ್ಟು- ಹೀಗೆ ಅನೇಕ ಉತ್ತಮ ಲೇಖನಗಳು ಇದರಲ್ಲಿ ಪ್ರಕಟವಾಗಿವೆ. ತಿ.ತಾ.ಶರ್ಮರ ಕನ್ನಡ ಪ್ರೇಮವು ಅವರು ವಿಶ್ವಕರ್ನಾಟಕಕ್ಕೆ ಹೆಸರನ್ನಿಡುವಾಗಲೂ ಪ್ರಕಟಗೊಂಡಿದೆ. ತುಮಕೂರಿನ ಕೆ.ರಂಗಯ್ಯಂಗಾರ್ಯರು ನಡೆಸುತ್ತಿದ್ದ
ಮೈಸೂರು
ಕ್ರಾನಿಕಲ್’ ಪತ್ರಿಕೆಯನ್ನು ಶರ್ಮರು ಸೇರಿದರು. ೧೯೨೫ರ ಆಗಸ್ಟ್ ೨ನೆ ತಾರೀಖಿನ
ಮೈಸೂರು ಕ್ರಾನಿಕಲ್'ನ ಮೂರನೆ ಸಂಪುಟದ ೪೪ನೆ ಸಂಚಿಕೆ ಶರ್ಮ ಅವರ ಸಂಪಾದಕತ್ವದಲ್ಲಿ ಪ್ರಕಟವಾಯಿತು. ಕನ್ನಡ ಪತ್ರಿಕೆಗೆ ಇಂಗ್ಲಿಷ್ ಹೆಸರು ಬೇಡವೆಂದು ಅವರು ಇದಕ್ಕೆ
ವಿಶ್ವಕರ್ನಾಟಕ’ ಎಂದು ಹೆಸರಿಟ್ಟರು. ವಿಶ್ವ ಕ' ಎಂದರೆ ಸಮಸ್ತವೂ ಕರ್ನಾಟಕ ಎನ್ನುವ ಅರ್ಥದಲ್ಲಿ ಈ ಹೆಸರನ್ನು ಆಯ್ಕೆ ಮಾಡಿದರು.
ವಿಶ್ವ ಕರ್ನಾಟಕ’
ಆರಂಭಿಸಿದಾಗ ಇದರ ಮುಖ್ಯ ಉದ್ದೇಶ ಭಾರತದ ಸಂಪೂರ್ಣ ಸ್ವಾತಂತ್ಯ್ರ ಮತ್ತು
ಕರ್ನಾಟಕದ ಏಕೀಕರಣ. ೧೯೨೫ರಲ್ಲಿ ವಿಶ್ವಕರ್ನಾಟಕ'ವು ರಾಷ್ಟ್ರೀಯ ವಾರ ಪತ್ರಿಕೆಯಾಗಿ ಪ್ರಕಟವಾಯಿತು. ಇದು ಮುಂದೆ ೧೬-೦೭-೧೯೩೪ರಿಂದ ದಿನಪತ್ರಿಕೆಯಾಯಿತು.
ವಿಶ್ವಕರ್ನಾಟಕ’ವು ಸ್ವಾತಂತ್ಯ್ರ ಸಂಗ್ರಾಮದ ಚಳವಳಿಗೆ ಅನುಗುಣವಾಗಿ ಮೂರು
ಹಂತಗಳಲ್ಲಿ ವಿಕಾಸಗೊಂಡಿದೆ. ಮೊದಲ ಹಂತದಲ್ಲಿ (೧೯೨೫-೨೮) ವಿಶೇಷವಾಗಿ ನಾಡಿನ
ಸಾಹಿತ್ಯ, ಕಲೆ, ನಾಡು-ನುಡಿಯ ಏಳಿಗೆಗಾಗಿ ಜನ ಸಾಮಾನ್ಯರ ಜ್ಞಾನಾಭಿವೃದ್ಧಿಗಾಗಿ ಪತ್ರಿಕೆ
ಶ್ರಮಿಸಿದೆ. ಎರಡನೆ ಹಂತದಲ್ಲಿ (೧೯೨೮-೧೯೩೯) ಮೈಸೂರು ಸಂಸ್ಥಾನದಲ್ಲಿ ನಡೆದ
ಗಲಭೆಗಳು, ಗಾಂಧೀಜಿಯ ಚಳವಳಿ ಇತ್ಯಾದಿಗಳ ವರದಿಯನ್ನು ಪ್ರಮುಖವಾಗಿ
ಪ್ರಕಟಿಸಲಾಗಿದೆ ೧೯೩೯-೪೬ರ ೩ನೆ ಹಂತದಲ್ಲಿ ಮೈಸೂರಿನ ರಾಜಕೀಯ ಸುಧಾರಣೆಗಳನ್ನು,
ಜನರ ಪ್ರತಿಕ್ರಿಯೆಗಳನ್ನು ವಿವರವಾಗಿ ಪ್ರಕಟಿಸಿದೆ. ನಿಟ್ಟೂರು ಶ್ರೀನಿವಾಸರಾವ್ ದಂಪತಿ
ಕನ್ನಡಕ್ಕೆ ಅನುವಾದಿಸಿದ ಗಾಂಧೀಜಿಯವರ ಆತ್ಮಚರಿತ್ರೆ ಸತ್ಯಶೋಧನೆ'ಯನ್ನು
ವಿಶ್ವಕರ್ನಾಟಕ’ವು ಧಾರಾವಾಹಿಯಾಗಿ ಪ್ರಕಟಿಸಿದೆ.
ನಾಡು ನುಡಿಯ ಸಂಸ್ಕೃತಿಯ ಮಹತ್ವವನ್ನು ಪ್ರಚಾರ ಮಾಡುವ ಮಹದಾಸೆ
ಹೊಂದಿದ್ದ ತಿ.ತಾ.ಶರ್ಮರು ಪ್ರತಿ ಸಂಚಿಕೆಯಲ್ಲೂ ಐತಿಹಾಸಿಕ ಸ್ಮಾರಕವೊಂದನ್ನು ಇಲ್ಲವೆ
ಹೊಸ ಶಾಸನವೊಂದನ್ನು ಕುರಿತು ವಿವರಿಸುತ್ತಿದ್ದರು. ಪ್ರಾಚೀನ ದ್ರಾವಿಡ ನಾಗರಿಕತೆ ಪತ್ತೆ',
ದ್ವಾರಕಾನಗರದ ಅವಶೇಷಗಳು’, ಬಳ್ಳಿಗಾವೆಯ ಗಂಡಭೇರುಂಡ ಸ್ತಂಭ' ಇವೆಲ್ಲ ಗಮನಾರ್ಹವಾದ ಲೇಖನಗಳಾಗಿವೆ. ಪತ್ರಿಕೆಯ
ಸಾಹಿತ್ಯ ಪ್ರಪಂಚ’ ಅಂಕಣದಲ್ಲಿ
ಪ್ರಕಟವಾಗಿರುವ ಬಿ.ವೆಂಕಟಾಚಾರ್ಯರ ಸ್ಮಾರಕ, ರನ್ನ ಕವಿ ಇಬ್ಬರಿದ್ದರೆ? ಪಂಪ
ಮಹಾಕವಿಯ ಸ್ಮಾರಕೋತ್ಸವ, ಮೌರ್ಯ ಶಾತವಾಹನರ ಕಾಲವೂ ಕನ್ನಡ ಭಾಷೆಯೂ
ಮೊದಲಾದ ಲೇಖನಗಳು ಇವತ್ತಿಗೂ ಅಭ್ಯಾಸಿಗಳ ಕುತೂಹಲ ಕೆರಳಿಸುವ ದಾಖಲೆಗಳಾಗಿ
ಉಳಿದಿವೆ.
ವಿಶ್ವಕರ್ನಾಟಕ'ವು ೧೯೩೨ರಿಂದ ತಿಂಗಳಿಗೆ ಎರಡರಂತೆ ಉಪ ಸಂಚಿಕೆಗಳನ್ನು ಹೊರಡಿಸಿತು. ಒಂದು ಸಾಹಿತ್ಯ ಸಂಚಿಕೆ. ಇನ್ನೊಂದು ಅರ್ಥಸಾಧಕ ಸಂಚಿಕೆ. ಇಂಗ್ಲಿಷಿನಲ್ಲಿ ಬರುತ್ತಿದ್ದ
ಬುಕ್ಮನ್’ ಹೋಲುವಂಥ ಪತ್ರಿಕೆಯಾಗಿದ್ದ ಸಾಹಿತ್ಯ ಸಂಚಿಕೆಯು ಎಂಟು
ಪುಟಗಳನ್ನು ಹೊಂದಿತ್ತು. ಇದರಲ್ಲಿ ಕಾವ್ಯಾವಲೋಕನ, ಕವಿ ಕಲಾವಿಲಾಸ, ಕನ್ನಡದ
ಮೆಯ್ಸಿರಿ, ಸಾಹಿತ್ಯ ಸಮಾಲೋಚನೆ. ವಾದ ಭೂಮಿ, ಸ್ವೀಕಾರ, ಶಬ್ದ ಸಂಪತ್ತು ಎಂಬ
ಅಂಕಣಗಳನ್ನು ಒಳಗೊಂಡಿತ್ತು. ಕನ್ನಡ ಮೆಯ್ಸಿರಿ ಭಾಗದಲ್ಲಿ ಕನ್ನಡ ನಾಡಿನಲ್ಲಿ ನಡೆಯುತ್ತಿದ್ದ
ವಿವಿಧ ಸಾಹಿತ್ಯ ಚಟುವಟಿಕೆಗಳನ್ನು ವರದಿಗಳನ್ನು ಪ್ರಕಟಿಸುತ್ತಿದ್ದರು. ಸಭೆಗಳಲ್ಲಿ ಅತ್ಯುತ್ತಮ
ಭಾಷಣ ಇದ್ದರೆ ಅದನ್ನು ಯಥಾವತ್ತಾಗಿ ಪ್ರಕಟಿಸಲಾಗುತ್ತಿತ್ತು. ಬೇರೆ ಬೇರೆ ಭಾಷೆಯ
ಸಾಹಿತ್ಯಕ್ಕೆ ಸಂಬಂಧಿಸಿದ ವಿವರಗಳೂ ಪ್ರಕಟಗೊಳ್ಳುತ್ತಿದ್ದವು. ಅನ್ಯ ಭಾಷೆಯ ಸಾಹಿತಿಗಳ
ಪರಿಚಯವೂ, ಕವಿತೆಗಳೂ, ಪುಸ್ತಕ ವಿಮರ್ಶೆಯೂ ಇರುತ್ತಿದ್ದ ಈ ಸಾಹಿತ್ಯ ಸಂಚಿಕೆ ಸಂಗ್ರಹ
ಯೋಗ್ಯವಾಗಿತ್ತು.
ತಿ.ತಾ.ಶರ್ಮರು ಕನ್ನಡ ಪತ್ರಿಕೋದ್ಯಮಕ್ಕೆ ಅನೇಕ ಹೊಸ ಶಬ್ದಗಳನ್ನು ನೀಡಿದರು.
ಆ ಮೂಲಕ ಕನ್ನಡ ನುಡಿಯನ್ನು ಬಲಪಡಿಸಿದರು. ಸರ್ಪಗಾವಲು (picketing) ಅಖಂಡ
ಕ್ಷೋಭೆ, ಅನುಗ್ರಹ, ಅಭ್ಯುದಯ, ಅಭೇದ ಬದ್ಧಿ, ಅರ್ಥ ವಿವಾದ, ಅನರ್ಥ ವ್ಯವಹಾರ,
ಅಗ್ನಿ ಭಕ್ಷಕರು, ಅರ್ಧಚಂದ್ರ ಪ್ರಯೋಗ, ಅರಿಕೆ, ಅಧಿವೇಶನ (session), ಅಧಿಲೇಖ್ಯ,
ಅಸಂದಿಗ್ಧ, ಚಕ್ರಗೋಷ್ಠಿ (Round table conference), ಕರಾಳ ಶಾಸನ, ವೃತ್ತ ಪತ್ರಾಸುರ
ಶಾಸನ, ಮುದ್ರಾ ರಾಕ್ಷಸ, ಕಂಠ ಕೌಪೀನ, ಪೌರನೀತಿ, ವಿರಾಮ ಖುರ್ಚಿ, ನರೇಂದ್ರ
ಭಾರತ (princly state), ಶ್ವೇತ ಪತ್ರ, ಭಿನ್ನವತ್ತಳೆ, ಕಪಿಮುಷ್ಟಿ ಇನ್ನೂ ಅನೇಕ ಶಬ್ದಗಳು
ಇವತ್ತಿಗೂ ಚಲಾವಣೆಯಲ್ಲಿವೆ. ಕನ್ನಡ ನುಡಿಗೆ ವಿಶ್ವಕರ್ನಾಟಕ'ದ ಮೂಲಕ ತಿ.ತಾ. ಶರ್ಮರು ಮಾಡಿದ ಉಪಕಾರ ಮಹತ್ವದ್ದು. ಸುಬೋಧ: ಸಾಹಿತ್ಯ ಪತ್ರಿಕೆಗಳ ಪ್ರಸ್ತಾಪ ಮಾಡುವಾಗ
ಸುಬೋಧ’
ಮಾಸಪತ್ರಿಕೆ ಮತ್ತು ಎಂ.ರಾಮರಾಯರನ್ನು ಮುಖ್ಯವಾಗಿ ಸ್ಮರಿಸಬೇಕು. ೧೯೩೧ರ
ಸುಮಾರಿಗೆ ಬೆಂಗಳೂರು ಸಿಟಿ ಮಾರ್ಕೆಟ್ ಲೈನ್ ಮುಂಭಾಗದ ಒಂದು ಮಳಿಗೆಯಲ್ಲಿ
ಸುಬೋಧ ಮಾಸಪತ್ರಿಕೆ, ಸುಬೋಧ ಕುಸುಮಾಂಜಲಿ, ಹರಿದಾಸ ಕೀರ್ತನೆ ತರಂಗಿಣಿ-
ನಿಯತಕಾಲಿಕೆಗಳು ಪ್ರಕಟಗೊಳ್ಳುತ್ತಿದ್ದವು. ಸುಬೋಧ ಕುಸುಮಾಂಜಲಿ ಗ್ರಂಥಮಾಲೆ
೧೯೧೫ರಲ್ಲಿ ಪ್ರಾರಂಭವಾಯಿತು. ಮೊದಲ ಗ್ರಂಥ ಚಂದ್ರಹಾಸ. ೧೯೨೨ರ ವರೆಗೂ ಈ
ಗ್ರಂಥಮಾಲೆಯಲ್ಲಿ ಏಳು ಪುಸ್ತಕಗಳನ್ನು ಪ್ರಕಟಿಸಲಾಯಿತು. ಇದೇ ವರ್ಷ
ಗ್ರಂಥಮಾಲೆಯನ್ನು ಮಾಸ ಪುಸ್ತಕಾವಳಿಯನ್ನಾಗಿ ಮಾರ್ಪಡಿಸಲಾಯಿತು. ಪ್ರತಿ ಪುಸ್ತಕವೂ
೬೦ರಿಂದ ೮೦ ಪುಟಗಳನ್ನು ಹೊಂದಿರುತ್ತಿತು. ಇದರ ಬೆಲೆ ೨ ಆಣೆ. ೧೯೫೧ರ ವರೆಗೆ
ಸುಬೋಧ ಕುಸುಮಾಂಜಲಿ ಗ್ರಂಥಮಾಲೆಯಲ್ಲಿ ಒಟ್ಟೂ ೧೪೦ ಪುಸ್ತಕಗಳು ಪ್ರಕಟವಾಗಿವೆ.
ಇವುಗಳಲ್ಲಿ ಭಕ್ತಶಿರೋಮಣಿಗಳ ಚರಿತ್ರೆ ೨೭, ಮತೋದ್ಧಾರಕರು, ಧರ್ಮೋದ್ಧಾರಕರು
೨೨, ಪೌರಾಣಿಕ ಮಹಾಪುರುಷರು ೨೯, ಆಧುನಿಕ ಮಹಾಪುರುಷರು ೧೮, ವಿದೇಶೀಯ
ಮಹಾಪುರುಷರು ೮, ಕವಿತಾ ಪುಸ್ತಕಗಳು ೩ ಪ್ರಕಟವಾಗಿವೆ. ಇವುಗಳ ಒಟ್ಟೂ ಪ್ರತಿಗಳ
ಸಂಖ್ಯೆ ಮೂರುಲಕ್ಷಕ್ಕೂ ಅಧಿಕ ಎಂದರೆ ಈ ಮಾಸಿಕ ಗ್ರಂಥಾವಳಿ ಮಾಡಿರುವ ಕೆಲಸದ
ಅಗಾಧತೆ ಅರಿವಾಗುವುದು.
ಎಂ.ರಾಮರಾಯರು ೧೯೨೫ರಲ್ಲಿ ಸುಬೋಧ' ಮಾಸ ಪತ್ರಿಕೆ ಆರಂಭಿಸಿದರು. ೧೯೨೭ರಲ್ಲಿ
ಹರಿದಾಸ ಕೀರ್ತನ ತರಂಗಿಣಿ’ ಎಂಬ ಹೆಸರಿನಲ್ಲಿ ದಾಸ ಸಾಹಿತ್ಯ ಪ್ರಕಟಣೆ
ಪ್ರಾರಂಭಿಸಿದರು. ಕರ್ನಾಟಕದಲ್ಲಿ ಸುಪ್ರಸಿದ್ಧರೆನಿಸಿ ಜನತೆಗೆ ಭಕ್ತಿ, ಜ್ಞಾನ, ವೈರಾಗ್ಯಾದಿಗಳು, ಲೋಕ ನೀತಿ, ಧರ್ಮ ಸೂಕ್ಪ್ಮಗಳು, ವೇದ ಶಾಸ್ತ್ರ ಪುರಾಣಾದಿಗಳ ಸಕಲ ಧರ್ಮ ರಹಸ್ಯಗಳು ಇವನ್ನು ಮೃದು ಮಧುರ ತಿಳಿಗನ್ನಡ ಭಾಷೆಯಲ್ಲಿ...'' ಪ್ರಕಟಿಸಲಾಗಿದೆ. ಪುರಂದರ ದಾಸರು, ಕನಕ ದಾಸರು, ಜಗನ್ನಾಥ ದಾಸರು, ವಿಜಯ ದಾಸರು, ವಾದಿರಾಜ ಸ್ವಾಮಿಗಳು, ಶ್ರೀಪಾದರಾಯ ಸ್ವಾಮಿಗಳು, ವ್ಯಾಸರಾಯ ಸ್ವಾಮಿಗಳು, ಗೋಪಾಲದಾಸರು, ಮೋಹನದಾಸರು ಇವರ ಹಾಡುಗಳು, ಹರಿಕಥಾಮೃತಸಾರ, ಹನುಮದ್ವಿಲಾಸ, ಕುಚೇಲೋಪಾಖ್ಯಾನ, ಕಾಳಿಯ ಮರ್ದನ ಕಾವ್ಯಗಳೂ ಇದರಲ್ಲಿ ಪ್ರಕಟವಾಗಿವೆ. ಹಳೆಯ ಗ್ರಂಥಗಳ ಪ್ರಕಟಣೆ: ಸಾಹಿತ್ಯ ಪೋಷಣೆಗೆ ಹೊಸ ಲೇಖಕರನ್ನು ಪ್ರೋತ್ಸಾಹಿಸುವುದರೊಂದಿಗೆ ಹಳೆಯ ಗ್ರಂಥಗಳನ್ನು ಹುಡುಕಿ ಪ್ರಕಟಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಎನ್.ಆರ್.ಕರಿಬಸವ ಶಾಸ್ತ್ರಿಗಳ `ವೀರಶೈವ ಗ್ರಂಥ ಪ್ರಕಾಶಿಕೆ' ಹೆಸರಿಸಬೇಕಾದದ್ದು. ಸಿದ್ಧಾಂತ ಶಿಖಾಮಣಿ, ಸಂಸ್ಕೃತ ಪಂಡಿತಾರಾಧ್ಯ ಚರಿತ್ರೆ, ಚೆನ್ನಬಸವೇಶ ವಿಜಯಂ (ವಿರೂಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣದ ಗದ್ಯಾನುವಾದ), ಬಸವರಾಜ ವಿಜಯ, ವೀರಶೈವ ಧರ್ಮ ಶಿರೋಮಣಿ, ರೇವಣ ಸಿದ್ಧೇಶ್ವರ ಪುರಾಣ, ಪಾಲ್ಕುರಿಕೆ ಸೋಮೇಶ್ವರ ಪುರಾಣ, ವೀರಶೈವ ದೀಕ್ಪಾವಿಧಿ, ಶಿವಯೋಗ ಪ್ರದೀಪಿಕಾ, ಸೌಂದರ ಪುರಾಣ, ರಕ್ಷಾ ಶತಕ, ಶಂಕರಲಿಂಗ ಕಂದ, ಸ್ತುತಿ ಮುಕ್ತಾವಳಿ, ಸಟೀಕಾ ವೃಷಭೇಂದ್ರ ವಿಜಯ, ಶತಕ ತ್ರಯ, ಬಸವೇಶ ಜನನ, ಕರ್ನಾಟಕ ಶಬ್ದಮಂಜರಿ, ವೀರಶೈವ ಪೂಜಾವಿಧಿ ಈ ನಿಯತಕಾಲಿಕೆಯಲ್ಲಿ ಪ್ರಕಟವಾದ ಗ್ರಂಥಗಳಲ್ಲಿ ಕೆಲವು. ಇಂಥದ್ದೇ ಇನ್ನೊಂದು ಪತ್ರಿಕೆ ಮಲ್ಲಿಕಾರ್ಜುನರು ೧೯೩೨ರಲ್ಲಿ ಆರಂಭಿಸಿದ `ಸದ್ಧರ್ಮ ದೀಪಿಕೆ'. ಇದರಲ್ಲಿ ೯೩ ಸಣ್ಣ ದೊಡ್ಡ ವೀರಶೈವ ಗ್ರಂಥಗಳು, ೧೩೭ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಫ.ಗು.ಹಳಕಟ್ಟಿಯವರ `ಶಿವಾನುಭವ' ವಚನ ಸಾಹಿತ್ಯಕ್ಕೇ ಮೀಸಲಾದ ಪತ್ರಿಕೆಯಾಗಿತ್ತು. ಇದೇ ದಾರಿಯಲ್ಲಿ ಸಾಗಿದ ಇನ್ನೊಂದು ಪತ್ರಿಕೆ ಡಿ.ಎಲ್. ನರಸಿಂಹಾಚಾರ್ ಅವರ `ಶರಣ ಸಾಹಿತ್ಯ'. ಪ್ರಾಚೀನ ಸಾಹಿತ್ಯದ ಪ್ರಕಟಣೆಯೊಂದಿಗೆ ಅವುಗಳ ವಿಶ್ಲೇಷಣೆ, ವಿಮರ್ಶೆಗಳು ಇವುಗಳಲ್ಲಿ ನಡೆದವು. ಕಥೆಗಾಗಿಯೇ ಬಂದ ಪತ್ರಿಕೆಗಳು: ೧೯೨೭ರಿಂದ ಬೆಂಗಳೂರಿನಿಂದ ಅ.ನ.ಕೃ. ಸಂಪಾದಕತ್ವದಲ್ಲಿ `ಕಥಾಂಜಲಿ' ಪತ್ರಿಕೆ ಹೊರ ಬಂತು. ೧೪ ತಿಂಗಳುಗಳ ಕಾಲ ಇದು ನಡೆಯಿತು. `ತಿಳಿಗನ್ನಡದ ಸಣ್ಣ ಕಥೆಗಳ ಮಾಸಪತ್ರಿಕೆ' ಎಂದು ಹೇಳಿಕೊಂಡರೂ ಇದರಲ್ಲಿ ಪದ್ಯಗಳೂ ಇದ್ದವು. ಗ್ರಂಥ ವಿಮರ್ಶೆಗಳೂ ಪ್ರಕಟಗೊಳ್ಳುತ್ತಿದ್ದವು. `ಕಥಾಂಜಲಿ' ಭಿನ್ನ ಆಶೋತ್ತರಗಳನ್ನು ಹೊಂದಿದ ಪತ್ರಿಕೆ. ಪತ್ರಿಕೆಯನ್ನು ಮಾರುಕಟ್ಟೆಯಲ್ಲಿ ಜನರು ಕೊಂಡು ಓದುವ ರೀತಿಯಲ್ಲಿ ಅನಕೃ ಪತ್ರಿಕೆ ಹೊರಡಿಸಲು ನಿರ್ಧರಿಸಿದರು. ಇದಕ್ಕಾಗಿ ದಪ್ಪನೆಯ ಹೊಳಪು ಕಾಗದವನ್ನು ಮುದ್ರಣಕ್ಕೆ ಬಳಸುತ್ತಿದ್ದರು. ಕಲೆ ಹಾಗೂ ಸಿನಿಮಾ ಚಿತ್ರಗಳನ್ನು ಪತ್ರಿಕೆಯ ಪುಟಗಳಲ್ಲಿ ಸೇರಿಸುತ್ತಿದ್ದರು. ಕಥಾಂಜಲಿ ಲೇಖಕರ ಬಳಗದಲ್ಲಿ ಜಿ.ಪಿ. ರಾಜರತ್ನಂ, ರಾ.ಶಿ., ಮ.ನ.ಮೂರ್ತಿ, ಡಾ.ಗೋಪಾಲಕೃಷ್ಣ ರಾವ್ ಮೊದಲಾದವರು ಸೇರಿದ್ದಾರೆ. ದೇಶ, ವಿದೇಶಗಳ ಅನ್ಯ ಭಾಷೆಯ ಕಥೆಗಳನ್ನು ಟಿ.ಪಿ.ಕೈಲಾಸಂ ಅವರ ಸಹಕಾರದೊಂದಿಗೆ ಕನ್ನಡಿಸಿ ಕಥಾಂಜಲಿಯಲ್ಲಿ ಅನಕೃ ಪ್ರಕಟಿಸುತ್ತಿದ್ದರು. ನಿಯಮಿತವಾಗಿ ನಾಟಕ ವಿಮರ್ಶೆ ಇದರಲ್ಲಿ ಬರುತ್ತಿತ್ತು. `ಕಥಾಂಜಲಿ' ಪ್ರಕಟವಾದ ಹೊಸತರಲ್ಲಿ ಇದರ ಪರಿಚಯ `ವಾಗ್ಭೂಷಣ'ದ ಪುಸ್ತಕ ಪರಿಚಯದಲ್ಲಿ ಬಂದಿದೆ.೨೩ `ಇದೊಂದು ಚಿಕ್ಕ ಕಥೆಗಳ ಮಾಸಪತ್ರಿಕೆ ಈ ನಮ್ಮ ಕಡೆಗೆ ೧-೨ ಅಂಕಗಳು ಬಂದಿದ್ದು ಅವುಗಳಲ್ಲಿ ಅನೇಕ ಸುಂದರವಾದ ಕತೆಗಳು ಪ್ರಕಟವಾಗಿವೆ. ಕತೆಗಳಲ್ಲಿ ಕೆಲವು ಕಟ್ಟುಕತೆಗಳಂತೆ ತೋರಿದರೂ ಕತೆಯ ಮಟ್ಟನ್ನು ಬಿಡದಿರುವುದರಿಂದ ಓದುಗರಿಗೆ ಅವುಗಳಿಂದ ಆನಂದವಾಗುವುದು. ಮನೋರಂಜನೆಯೊಂದಿಗೆ ಕೆಲವು ತಾತ್ವಿಕ ವಿಚಾರಗಳನ್ನು ಓದುಗರ ಮನಸ್ಸಿನಲ್ಲಿ ಬಿಂಬಿಸುತ್ತಿರುವುದರಿಂದ ಪ್ರಯೋಜನಕಾರಿಯಾಗಿದೆ. ವಾರ್ಷಿಕ ಚಂದಾ ೨-೮-೦... ಕನ್ನಡದಲ್ಲಿ ಇಂತಹ ಪ್ರಯತ್ನವು ಇದೇ ಮೊದಲನೆಯದಾಗಿರುವುದರಿಂದ ಎಲ್ಲರೂ ಪ್ರೋತ್ಸಾಹಿಸಿ ಸಂಪಾದಕರ ಉತ್ಸಾಹವನ್ನು ಹೆಚ್ಚಿಸಬೇಕು. ಸಂಪಾದಕರು ಕಾಗದ ಮುದ್ರಣಾದಿಗಳನ್ನು ಇನ್ನೂ ಹೆಚ್ಚು ಒಳ್ಳೆಯ ಸ್ಥಿತಿಗೆ ತರಬಹುದು. ಚಿತ್ರಗಳನ್ನು ಸೇರಿಸಿದರೆ ಓದುಗರಿಗೆ ಇನ್ನಷ್ಟು ಉತ್ಸಾಹವುಂಟಾಗಬಹುದು....' `ವಾಗ್ಭೂಷಣ'ದಲ್ಲಿ ಗುರುತಿಸಿರುವಂತೆ ಮನೋರಂಜನೆಯೊಂದಿಗೆ ಕೆಲವು ತಾತ್ವಿಕ ವಿಚಾರಗಳನ್ನು ನೀಡುವುದು ಅನಕೃ ಉದ್ದೇಶವಾಗಿತ್ತು. ಎಡಪಂಥೀಯ ಚಿಂತನೆಯ ಅನಕೃ ಅದಕ್ಕೆ ಅನುಗುಣವಾಗಿಯೇ ಪತ್ರಿಕೆಯನ್ನು ಸಿದ್ಧಪಡಿಸಿದ್ದನ್ನು ಇದು ಸೂಚಿಸುತ್ತದೆ. ಕತೆಗಳನ್ನೇ ಪ್ರಕಟಿಸುವ ಉದ್ದೇಶದ `ಕಥಾಕುಂಜ' ಪತ್ರಿಕೆಯನ್ನು ೧೯೩೪ರಲ್ಲಿ ಅರವಿಂದ ಜೋಶಿ ಬೆಂಗಳೂರಿನಲ್ಲಿ ಆರಂಭಿಸಿದರು. ಎರಡು ವರ್ಷಗಳ ಕಾಲ ನಡೆದ ಈ ಪತ್ರಿಕೆಯ ಸಂಪಾದಕತ್ವವನ್ನು ಪ್ಯಾಟಿ ಶಾಮರಾಯರೂ ವಹಿಸಿದ್ದರು ಎನ್ನುವುದು ಶ್ರೀನಿವಾಸ ಹಾವನೂರ ಅವರು ನೀಡಿರುವ ಪಟ್ಟಿಯಿಂದ ತಿಳಿದು ಬರುತ್ತದೆ. ೧೯೩೩ರಲ್ಲಿ ಪ್ರಾರಂಭವಾದ `ಕತೆಗಾರ'ದ ಸಂಪಾದಕರು ಜಿ.ಎ. ನರಸಿಂಹಮೂರ್ತಿ. ೧೯೫೪ರ ವರೆಗೂ ಇದು ನಡೆಯಿತು. ಎಂ.ಎನ್. ನಾರಾಯಣರಾವ್, ಎಂ.ಎನ್. ಗೋಪಾಲರಾವ್ ಅವರೂ ಇದರ ಸಂಪಾದಕರಾಗಿದ್ದಂತೆ ತಿಳಿದು ಬರುವುದು. ೧೯೪೨ರಲ್ಲಿ ಜಿ.ಎಸ್. ಕೃಷ್ಣರಾವ್ ಸಂಪಾದಕತ್ವದಲ್ಲಿ `ಕಥಾ ಚಂದ್ರಿಕೆ' ಪ್ರಕಟವಾಯಿತು. ಇದು ಒಂದೇ ವರ್ಷ ಬಾಳಿತು. ವಿ.ಗುಪ್ತ ಎನ್ನುವವರು ೧೯೩೮ರಿಂದ ೫೬ರ ವರೆಗೆ `ಕಥಾವಳಿ'ಯನ್ನು, ೧೯೫೩ರಿಂದ ೫೬ರ ವರೆಗೆ ವಾಮನ ಅನಂತ ಹೊದಿಕೆ ಎನ್ನುವವರು `ಕಥಾ ಸಂಗ್ರಹ' ಪತ್ರಿಕೆಯನ್ನು ಪ್ರಕಟಿಸಿದರು. ಈ ಎಲ್ಲ ಪತ್ರಿಕೆಗಳು ಮಾಸಿಕಗಳು ಮತ್ತು ಮುಖ್ಯವಾಗಿ ಕತೆಗಳನ್ನು ಪ್ರಕಟಿಸುತ್ತಿದ್ದವು. ಜಯಂತಿ: ಸಾಹಿತ್ಯವನ್ನು ಪೋಷಿಸಿದ ಪತ್ರಿಕೆಗಳಲ್ಲಿ ಬೆಟಗೇರಿ ಕೃಷ್ಣ ಶರ್ಮರ `ಜಯಂತಿ'ಗೆ ವಿಶಿಷ್ಟ ಸ್ಥಾನವಿದೆ. ಏಕ ವ್ಯಕ್ತಿಸಾಹಸದ ಈ ಪತ್ರಿಕೆ ೧೯೩೮ರಿಂದ ೧೯೭೭ರ ವರೆಗೆ ನಡೆಯಿತು. ಕೃಷ್ಣಶರ್ಮರಿಗೆ ಪತ್ರಿಕೋದ್ಯಮ ಹೊಸದಲ್ಲ. ಅವರು ೧೯೨೧ರಲ್ಲಿಯೇ `ಮಾತೃಭೂಮಿ'ಯ ೧೨ ಸಂಚಿಕೆಗಳನ್ನು ಹೊರಡಿಸಿದ್ದರು. ಆ ಬಳಿಕ ಅವರು ಧಾರವಾಡದ ರಾಷ್ಟ್ರೀಯ ಶಾಲೆಯ ಶಿಕ್ಷಕರಾಗಿದ್ದಾಗ ೧೯೨೫ರಿಂದ ೧೯೨೭ರ ವರೆಗೆ `ಸ್ವಧರ್ಮ' ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದರು. ಇದರಲ್ಲಿಯೇ ಬೆಟಗೇರಿ ಕೃಷ್ಣ ಶರ್ಮರ ಆರಂಭ ಕಾಲದ ಕಥೆಗಳು ಇವೆ. ಇಲ್ಲಿಯೇ ಅವರಿಗೆ `ಆನಂದಕಂದ' ಎಂಬ ಕಾವ್ಯನಾಮ ಗಟ್ಟಿಯಾದದ್ದು. ಈ ಪತ್ರಿಕೆಯಲ್ಲಿ ನವರಾತ್ರಿ ಮತ್ತು ವಿಜಯ ದಶಮಿಗಳ ಕುರಿತು ಹಲವು ಲೇಖನಗಳನ್ನು ಬರೆಯುವುದರ ಮೂಲಕ `ಆನಂದಕಂದ'ರು ಕರ್ನಾಟಕಕ್ಕೆ ಒಂದು ನಾಡಹಬ್ಬವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ೧೯೨೫ರಲ್ಲಿ ನಾಡಹಬ್ಬದ ಆಚರಣೆ ಮೊದಲಾಯಿತು. ನಾಡಹಬ್ಬದ ಬಗ್ಗೆ ೧೯೨೭ರಲ್ಲಿ `ಸ್ವಧರ್ಮ' ಒಂದು ವಿಶೇಷ ಸಂಚಿಕೆಯನ್ನು ಹೊರಡಿಸಿತು. `ಸ್ವಧರ್ಮ'ದ ಲೇಖಕರ ಬಳಗದಲ್ಲಿ ದ.ರಾ.ಬೇಂದ್ರೆ, ನಾ.ಶ್ರೀ. ರಾಜಪುರೋಹಿತ, ಬುರ್ಲಿ ಬಿಂದು ಮಾಧವ, ರಂ.ಶ್ರೀ. ಮುಗಳಿ, ಶ್ರೀಧರ ಖಾನೋಳ್ಕರ, ಕಾವ್ಯಾನಂದ, ಕೃಷ್ಣಕುಮಾರ ಕಲ್ಲೂರ ಸೇರಿದ್ದಾರೆ. ಇವರೆಲ್ಲ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಇದರಲ್ಲಿ `ಸವಿ' ಎಂಬ ಸ್ಥಿರ ಶೀರ್ಷಿಕೆಯಲ್ಲಿ ಬೇಂದ್ರೆಯವರು ಮತ್ತು ಇತರ ಲೇಖಕರು ಕವಿತೆಗಳ ಸೌಂದರ್ಯ ವಿವರಿಸುವ ಲೇಖನಗಳನ್ನು ಬರೆದರು. ಬೇಂದ್ರೆಯವರು ಇದರಲ್ಲಿ ಆನಂದಕಂದರ ಕೆಲವು ಪದ್ಯಗಳನ್ನು ವಿಮರ್ಶಿಸಿದ್ದಾರೆ. `ಸವಿ' ಸಹೃದಯ ರಸ ವಿಮರ್ಶೆಯಾಗಿತ್ತು. ಸ್ವತಂತ್ರ ಕಥೆಗಳನ್ನು ಉತ್ತರ ಕರ್ನಾಟಕದಲ್ಲಿ ಪ್ರಕಾಶಿಸಿದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಯೂ `ಸ್ವಧರ್ಮ'ಕ್ಕಿದೆ. `ಸ್ವಧರ್ಮ'ದ ಬಳಿಕ ಬೆಟಗೇರಿಯವರು ಗೆಳೆಯರ ಗುಂಪಿನ `ಜಯಕರ್ನಾಟಕ'ದಲ್ಲಿಯೂ ಕೆಲವು ಕಾಲ ಕೆಲಸ ಮಾಡಿದರು. ೧೯೩೮ರಲ್ಲಿ `ಜಯಂತಿ'ಯ ಮೊದಲ ಸಂಚಿಕೆ ಪ್ರಕಟವಾಗಿದ್ದಾಗ ಅದರ ಪುಟಗಳ ಸಂಖ್ಯೆ ೭೨. ನಂತರದ ಸಂಚಿಕೆಗಳೆಲ್ಲವೂ ೮೦ ಪುಟಗಳನ್ನು ಹೊಂದಿತ್ತು. `ಜಯಂತಿ'ಯ ವಿಶೇಷ ಎಂದರೆ ಅದರ ನಿಯಮಿತತನ. ಪ್ರತಿ ತಿಂಗಳ ಮೊದಲನೆ ತಾರೀಖಿಗೆ ಅದು ಪ್ರಕಟಗೊಳ್ಳುತ್ತಿತ್ತು. ಸಂಯುಕ್ತ ಸಂಚಿಕೆಯಾಗಿ ಅದು ಎಂದೂ ಹೊರಬರಲಿಲ್ಲ. `ಜಯಂತಿ' ಮೂರು ವರ್ಷ ಮುಗಿಸಿ ನಾಲ್ಕನೆ ವರ್ಷದಲ್ಲಿ ಕಾಲಿಡುತ್ತಿದ್ದಂತೆ ಅದರ ನಾಲ್ವರು ಪಾಲುದಾರರಿಗೆ ಇದು ಲಾಭದಾಯಕ ಉದ್ಯಮವಲ್ಲ ಎಂದೆನಿಸಿ ಅದನ್ನು ನಿಲ್ಲಿಸಿ ಬಿಡಲು ಯೋಚಿಸಿದರು. ಇದರ ಪರಿಣಾಮವಾಗಿ ೧೯೪೧ರಿಂದ ೧೯೬೧ರ ವರೆಗೆ ಬೆಟಗೇರಿಯವರೇ ನಡೆಸಿದರು. ನಂತರ ಅದನ್ನು ಸಿ.ಎಸ್.ಕುಲಕರ್ಣಿ ಎನ್ನುವವರಿಗೆ ವಹಿಸಿ ಕೊಟ್ಟರು. ಪತ್ರಿಕಾ ಸಂಪಾದಕನ ವ್ಯವಸಾಯವೆಂದರೆ ಅದೊಂದು ಸಮಾಜಿಕ ಸಂಸ್ಕೃತಿಯ ಶಿಕ್ಷಣದ ವ್ಯವಸಾಯ. ಸಮಾಜದ ಘಟಕಗಳಾದ ವ್ಯಕ್ತಿ ವ್ಯಕ್ತಿಗಳಿಗೆಲ್ಲ ನಿಜವಾದ ಜ್ಞಾನ ವಿಜ್ಞಾನದ ಪರಿಚಯ ಮಾಡಿಕೊಟ್ಟು ಅವರ ಮನಸ್ಸು ಹೃದಯಗಳನ್ನು ಆದರ್ಶದತ್ತ ತಿರುಗಿಸುವುದು ಅವನ ಕರ್ತವ್ಯ. ತ್ಯಾಗ, ತಪಸ್ಸು, ತಿಳಿವಳಿಕೆಗಳೇ ವ್ಯಕ್ತಿಯ ಆದರ್ಶದ ಸಾಧನಗಳೆಂಬುದನ್ನು ಉತ್ಕಟ ಭಾವನೆಯಿಂದ ಪ್ರಚಾರ ಮಾಡುವವನೇ ನಿಜವಾದ ಸಂಪಾದಕ ಎಂಬ ಧ್ಯೇಯ ಧೋರಣೆಯೊಂದಿಗೆ ಸಂಪಾದಕನ ಹೊಣೆಯನ್ನು ಹೊತ್ತವರು ಕೃಷ್ಣಶರ್ಮರು. ಸಾಂಸ್ಕೃತಿಕ ಪುನರುತ್ಥಾನದ ಆದರ್ಶ ಇಟ್ಟುಕೊಂಡ `ಜಯಂತಿ'ಯ ಎಲ್ಲ ಸಂಚಿಕೆಗಳೂ ಈ ದಿಕ್ಕಿನಲ್ಲಿ ನಡೆಸಿದ ಪ್ರಯತ್ನಗಳೇ ಆಗಿವೆ. ಹೃದಯ ಮತ್ತು ಬುದ್ಧಿ ಎರಡಕ್ಕೂ ಸಂಸ್ಕಾರ ನೀಡುವ ಲೇಖನಗಳು `ಜಯಂತಿ'ಯಲ್ಲಿ ಪ್ರಕಟವಾಗಿವೆ. `ಜಯಂತಿ' ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯದ ಪ್ರಮುಖ ಘಟ್ಟದ ಅಭಿವ್ಯಕ್ತಿಗೆ ವೇದಿಕೆಯಾಗುವ ಅವಕಾಶವನ್ನು ಪಡೆಯಿತು. ಮೂವತ್ತರ ದಶಕದ ನವೋದಯ, ಆನಂತರದ ಪ್ರಗತಿಶೀಲ, ನವ್ಯ ಸಾಹಿತ್ಯ ಘಟ್ಟಗಳನ್ನು ದಾಖಲಿಸಿದ `ಜಯಂತಿ' ಸಾಹಿತ್ಯಕವಾಗಿ ಪ್ರಾತಿನಿಧಿಕ ಪತ್ರಿಕೆಯಾಗಿತ್ತು. ಆದರೆ `ಜಯಂತಿ'ಯ ಅಭಿಮಾನ ನವೋದಯದಲ್ಲೇ ಸ್ಥಾಯಿಯಾಗಿತ್ತು. ಹೀಗಾಗಿ ಕೆಲವು ನವ್ಯ ಲೇಖಕರ ಆಗ್ರಹಕ್ಕೂ ಅವರು ಒಳಗಾದರು. ಪ್ರಗತಿಶೀಲ ಮತ್ತು ನವ್ಯ ಸಾಹಿತ್ಯ ಚಳವಳಿಗಳನ್ನು ನವೋದಯದ ದೃಷ್ಟಿಕೋನದಿಂದಲೇ `ಜಯಂತಿ' ಗ್ರಹಿಸಲು ಯತ್ನಿಸಿತು. ಹೊಸ ಸಾಹಿತ್ಯ ಚಳವಳಿಯನ್ನು ಹುಚ್ಚು ಉತ್ಸಾಹ ಎಂದು ಅದು ಬಗೆಯಿತು. `ಜಯಂತಿ'ಯ ವಿಶಿಷ್ಟತೆಯಾದ `ಮಂಗನ ಮಲ್ಲಿನಾಥತನ'ದಲ್ಲಿ ಪ್ರಗತಿಶೀಲ ಸಾಹಿತ್ಯದ ಬಗ್ಗೆ ಬಂದ ಟೀಕೆಯನ್ನು ನೋಡಬಹುದು.
ಮರಗತಶೀಲ ಸಾಹಿತ್ಯ!
ಈಚೆಗೆ ಕೂಗೆದ್ದ ಪ್ರಗತಿಶೀಲ ಸಾಹಿತ್ಯದ ಗಲಾಟೆ ಕೇಳಿ ಅನೇಕರು
ಗಾಬರಿಗೊಂಡಿದ್ದಾರೆ. ಆದರೆ ಮಂಗರಾಯರಿಗೆ ಮಾತ್ರ ಯಾವ ಗಾಬರಿಯೂ ಇಲ್ಲ.
ಮಂಗರಾಯರಿಗೆ ಪರಿಚಿತವಾದ ಮರಗತಶೀಲ ಸಾಹಿತ್ಯದ ತತ್ವಕ್ಕಿಂತ ಯಾವ ಹೆಚ್ಚಿನ
ತತ್ವವೇನೂ ಇದರಲ್ಲಿ ಇಲ್ಲ! ಗುರಿಯಿಲ್ಲದೆ ಹುಚ್ಚು ಉತ್ಸಾಹದಿಂದ ಕಂಡಕಂಡವರ
ಮರಕ್ಕೆಹಾರುವುದು!.. ..”೨೪ ಪ್ರಗತಿಶೀಲರ ಅತ್ಯುತ್ಸಾಹಕ್ಕೆ ವಿಡಂಬನೆ ಇದು. ಇದನ್ನು
ಆದ್ಯ ರಂಗಾಚಾರ್ಯರು (ಶ್ರೀರಂಗ) ಬರೆಯುತ್ತಿದ್ದರು. ನಾಡು ನುಡಿಗಳ ಬಗೆಗೆ
ಸಾಂದರ್ಭಿಕ ಟೀಕೆ ಟಿಪ್ಪಣಿಗಳು, ವಿಡಂಬನೆಗಳು ಈ ಶೀರ್ಷಿಕೆಯಲ್ಲಿ ಪ್ರಕಟಗೊಳ್ಳುತ್ತಿತ್ತು.
ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಔಷಧಿಯಂತೆ ಕಾರ್ಯಮಾಡಿದ ಇದು ಮುಂದೆ
ಪ್ರಜಾವಾಣಿ'ಯ
ಛೂ ಬಾಣ’, ಲಂಕೇಶರ ಚೇ!ಚೇ!',
ನಾಡೋಜ’ದ
ಹುಚ್ಚಿಗೊಂದು ಚುಚ್ಚುಮದ್ದು' ಮೊದಲಾದವುಗಳಿಗೆ ಪ್ರೇರಣೆ ಒದಗಿಸಿದ್ದರೆ ಆಶ್ಚರ್ಯವಿಲ್ಲ.
ಜಯಂತಿ’ಯ ಲೇಖಕರ ಬಳಗ ಬಹಳ ದೊಡ್ಡದಿತ್ತು. ಬೇಂದ್ರೆ, ಕಾರಂತ,
ಗೌರೀಶ ಕಾಯ್ಕಿಣಿ, ಅನಕೃ, ಮಾಸ್ತಿ, ಗೋಪಾಲಕೃಷ್ಣ ಅಡಿಗ, ಶಾಂತಿನಾಥ ದೇಸಾಯಿ,
ಚಂದ್ರಶೇಖರ ಪಾಟೀಲ ಮೊದಲಾದವರೆಲ್ಲ ಇದರಲ್ಲಿ ಬರೆದಿದ್ದಾರೆ. ಮೈಸೂರು ಭಾಗದಲ್ಲಿ
ರಾಜಾಶ್ರಯದಲ್ಲಿ ಸಾಹಿತ್ಯ ಪೋಷಣೆಗೆ ಒಳಗಾದಾಗ, ಉತ್ತರ ಕರ್ನಾಟಕ ಭಾಗದಲ್ಲಿ
ಪ್ರೋತ್ಸಾಹವಿಲ್ಲದೆ ಅದು ಸೊರಗುತ್ತಿತ್ತು. ಸೃಜನಶೀಲ ಲೇಖಕ ಒಬ್ಬೊಂಟಿತನವನ್ನು
ಅನುಭವಿಸುತ್ತಿದ್ದ. ಇದನ್ನು ನಿವಾರಿಸುವ ವೇದಿಕೆಯಾಗಿ ಜಯಂತಿ' ಕಾರ್ಯನಿರ್ವಹಿಸಿತು. ಅದೇ ಆಗ ಬರೆಯಲು ಆರಂಭಿಸಿದ್ದ ಚೆನ್ನವೀರ ಕಣವಿಯವರ ಭಾವಚಿತ್ರ ಹಾಕಿ ಪರಿಚಯದೊಂದಿಗೆ ಅವರ ಲೇಖನ ಪ್ರಕಟಿಸಿದ್ದು ಕಾಣಬಹುದು. ಕೇವಲ ಕಣವಿ ಮಾತ್ರವಲ್ಲ ಆ ಕಾಲದ ಎಲ್ಲ ಲೇಖಕರಿಗೂ ಇದೇ ಆತಿಥ್ಯವಿತ್ತು. ಹೀಗೆ
ಜಯಂತಿ’
ಉತ್ತರ ಕರ್ನಾಟಕದಲ್ಲಿ ಲೇಖಕರ ಪಡೆಯನ್ನು ಹುಟ್ಟುಹಾಕಿತು. ಜೊತೆಯಲ್ಲಿ
ಸದಭಿರುಚಿಯ ಓದುಗರನ್ನೂ ಬೆಳೆಸಿತು. ರಾಜಕೀಯವಾಗಿ ಉತ್ತರ ಕರ್ನಾಟಕದಲ್ಲಿ
ಕನ್ನಡವು ಅತಂತ್ರಗೊಂಡಿದ್ದಾಗ ಈ ಪ್ರಯತ್ನ ಮೆಚ್ಚುಗೆಗೆ ಅರ್ಹವಾದುದು.
ಜಯಂತಿ'ಯಲ್ಲಿ ಕನ್ನಡಕ್ಕೆ ಹೊಸತೆನಿಸಿದ
ವಿಮರ್ಶೆಯ ಶಿಕ್ಷಣ ರಂಗ’ ಎಂಬ
ಶೀರ್ಷಿಕೆಯಡಿ ಪ್ರಾಯೋಗಿಕ ವಿಮರ್ಶೆ ಇದರಲ್ಲಿ ದೊರೆಯುತ್ತದೆ. ಕರ್ನಾಟಕದ
ಏಕೀಕರಣದ ಬಗೆಗೂ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಜನಪದ
ಸಾಹಿತ್ಯವನ್ನು ಸಂಗ್ರಹಿಸಿ ಪ್ರಕಟಿಸುವ ಕೆಲಸವನ್ನೂ ಅವರು ಮಾಡಿದ್ದಾರೆ. ಒಟ್ಟಾರೆ ಉತ್ತರ
ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಜಯಂತಿ ತನ್ನ ಛಾಪನ್ನು ಮೂಡಿಸಿದೆ.
ಉಷಾ: ಜಯಂತಿಯ ಸಂದರ್ಭದಲ್ಲಿ ಪ್ರಗತಿಶೀಲ ಚಳವಳಿಯ ಕುರಿತು ಮಾತು
ಬಂತು. ಪ್ರಗತಿಶೀಲ ಚಳವಳಿಯನ್ನು ಬಲಪಡಿಸಿದ ಒಂದು ಪತ್ರಿಕೆಯನ್ನು ಇಲ್ಲಿ
ಸ್ಮರಿಸಬೇಕು. ಅದು ಬಸವರಾಜ ಕಟ್ಟೀಮನಿಯವರು ಸಂಪಾದಕರಾಗಿದ್ದ ಉಷಾ' ಮಾಸಿಕ. ೧೯೪೪ರಲ್ಲಿ ಬೆಂಗಳೂರಿಗೆ ತೆರಳಿದ ಕಟ್ಟಿಮನಿಯವರು ಎಸ್.ನಂಜಪ್ಪನವರೊಂದಿಗೆ ಸೇರಿಕೊಂಡು
ಉಷಾ’ ಪತ್ರಿಕೆ ಆರಂಭಿಸಿದರು. ಉಷಾ'ದ ಮೂಲಕ ಅನೇಕ ತರುಣ ಲೇಖಕರು ಬೆಳಕಿಗೆ ಬಂದರು. ಕೋ.ಚೆನ್ನಬಸಪ್ಪ, ಪಾಟೀಲ ಪುಟ್ಟಪ್ಪ, ಕೆ.ಈಶ್ವರನ್, ಗೋಪಾಲಕೃಷ್ಣ ಅಡಿಗ ಮೊದಲಾದವರನ್ನು ಇಲ್ಲಿ ಹೆಸರಿಸಬಹುದು. ಕಟ್ಟೀಮನಿಯವರು
ಉಷಾ’ದ ಸಂಪಾದಕರಾಗಿದ್ದುದು ಕೇವಲ ಎರಡೇ ವರ್ಷ. ಈ ಅಲ್ಪ ಅವಧಿಯಲ್ಲಿಯೇ
ಪತ್ರಿಕೆಯ ಕೊಡುಗೆ ಅಗಾಧವಾದದ್ದು. ಅದರಲ್ಲಿ ಪ್ರಕಟವಾಗುತ್ತಿದ್ದ ಪ್ರಗತಿಶೀಲ ಕಥೆ, ಲೇಖನಗಳೂ, ನಿರ್ದಾಕ್ಷಿಣ್ಯವಾದ ಟೀಕೆ ಟಿಪ್ಪಣಿಗಳೂ, ಕೆಚ್ಚಿನ ಸಂಪಾದಕೀಯ ಬರವಣಿಗೆಯೂ ನಮ್ಮನ್ನು ಆಕರ್ಷಿಸಿದ್ದುವು. ಹಾಗೆಯೇ ಸಂಪಾದಕರ ಬಗ್ಗೆ ಕುತೂಹಲವನ್ನೂ ಕೆರಳಿಸಿದ್ದವು. ಧಾರವಾಡಕ್ಕೆ ಪತ್ರಿಕೆ ಬಂದರೆ ಒಂದೆರಡು ದಿನಗಳಲ್ಲಿಯೇ ಪ್ರತಿಗಳು ಮಾರಾಟವಾಗಿ ಹೋಗುತ್ತಿದ್ದವು'',25 ಎಂದು ಚನ್ನವೀರ ಕಣವಿಯವರು ಬರೆದಿದ್ದಾರೆ. `ಉಷಾ'
ಪ್ರಗತಿಶೀಲ ಸಾಹಿತ್ಯದ ಒಂದು ಮಹಾಧ್ವನಿಯಾಗಿ, ಯುವಜನಾಂಗದ
ಆಶೆ, ಆಕಾಂಕ್ಷೆಗಳಿಗೊಂದು ವೇದಿಕೆಯಾಗಿ, ಪಟ್ಟಭದ್ರ ಹಿತಾಸಕ್ತರಿಗೊಂದು ಸಿಂಹಸ್ವಪ್ನವಾಗಿ
ಅದು ಮೆರೆಯುತ್ತಿತ್ತು. ನನ್ನಂಥ ಅನೇಕರು ಅದು ಯಾವಾಗ ಕೈಸೇರೀತೋ, ಯಾವಾಗ
ಅದನ್ನೋದಿ ಸಂತೋಷಿಸಿ ಸರೀಕರೊಡನೆ ಪಾಲುಗೊಂಡೇವೋ ಎಂದು ತವಕಿಸುತ್ತಿದ್ದೆವು;
ನಿಡು ನಿರೀಕ್ಷೆಯಲ್ಲಿರುತ್ತಿದ್ದೆವು” ಎಂದು ಎಂ.ಅಕಬರಅಲಿ ಬರೆಯುತ್ತಾರೆ. ಸಾಹಿತ್ಯ
ಕ್ಷೇತ್ರದಲ್ಲಿ ತಪ್ಪಡಿಯಿಡಲನುವಾಗುತ್ತಿದ್ದ ತಮ್ಮ ಗದ್ಯ ಗೀತವೊಂದು ಕಟ್ಟಿಮನಿಯವರ
ಸ್ನೇಹಿತರಾಗಿದ್ದ ತಮ್ಮ ಗುರುಗಳೊಬ್ಬರ ಮುಖಾಂತರ ಮೊದಲ ಬಾರಿಗೆ ಉಷಾ'ದಲ್ಲಿ ಪ್ರಕಟವಾಯಿತು ಎಂದೂ ಅವರು ಸ್ಮರಿಸಿದ್ದಾರೆ.26 ಕಟ್ಟಿಮನಿ ಎಂಥ ಧೈರ್ಯಶಾಲಿ ಸಂಪಾದಕರಾಗಿದ್ದರು ಎನ್ನುವುದನ್ನು ಕೋ.ಚೆನ್ನಬಸಪ್ಪ ನೆನೆಯುತ್ತಾರೆ. ಬೆಳಗಾವಿಯ ಕೆಲವು ಗೆಳೆಯರು ಒಂದು ಕಥಾ ಸಂಕಲನಕ್ಕೆ ಕೋ.ಚೆ.ಯವರಿಗೆ ಒಂದು ಕಥೆ ಬರೆಯಲು ಹೇಳಿದ್ದರು. ಇವರು ಬರೆದ ಕಥೆ ಉಗ್ರವಾಗಿದೆ ಎಂಬ ಕಾರಣಕ್ಕೆ ಅದನ್ನು ಪ್ರಕಟಿಸಲು ಹಿಂಜರಿದರು. ಇದೇ ಸಂದರ್ಭದಲ್ಲಿ ಕಟ್ಟಿಮನಿಯವರು
ಉಷಾ’ಗೆ ಲೇಖನ, ಕತೆ, ಕವನ ಕಳುಹಿಸಲು ಕೋರಿ
ಪತ್ರ ಬರೆಯುವರು. ಇವರು ದ್ವಿತೀಯ ಮಹಾಯುದ್ಧದ ದುಷ್ಪರಿಣಾಮಗಳ ಬಗ್ಗೆ
ಯಾರಿಗಾಗಿ' ಎಂಬ ಕತೆ ಬರೆದು ಕಳುಹಿಸಿದರು. ಅದು ಪ್ರಕಟವಾಗುತ್ತದೆ. ಏಕೀಕರಣದ ಪ್ರಶ್ನೆಯನ್ನು ಕುರಿತು ಅತ್ಯಂತ ಕಟುವಾದ ಲೇಖನಗಳನ್ನು ಅವರು ಒಂದಕ್ಷರವೂ ಬದಲಾಯಿಸದೆ ಉಷಾದಲ್ಲಿ ಪ್ರಕಟಿಸಿದರು ಎಂದಿದ್ದಾರೆ.27 ಜೀವನ: ಈ ಅವಧಿಯ ಸಾಹಿತ್ಯ ಪತ್ರಿಕೆಗಳ ಪರಿಚಯವನ್ನು
ಜೀವನ’
ಪತ್ರಿಕೆಯಂದಿಗೆ ಮುಗಿಸಬಹುದು. ಜೀವನ' ಪತ್ರಿಕೆಯ ಇತಿಹಾಸವನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುವುದು. ೧.ಧಾರವಾಡದ
ಗೆಳೆಯರ ಗುಂಪು’ ಪತ್ರಿಕೆ ನಡೆಸಿದ ಹಂತ.
೨.ಬೆಂಗಳೂರು ಜೀವನ ಕಾರ್ಯಾಲಯ' ಪತ್ರಿಕೆ ನಡೆಸಿದ ಹಂತ. ೩.ಬೆಂಗಳೂರು
ಗಾಂಧಿ ಸಾಹಿತ್ಯ ಸಂಘ’ದ ಗೆಳೆಯರು ಪತ್ರಿಕೆ ನಡೆಸಿದ ಹಂತ.
೪.ಅಂತಿಮ ಹಂತ.
ಮಾಸ್ತಿಯವರು ಕಾವ್ಯಾರಾಮ' ಎಂಬ ಒಂದು ಸೇವಾಸಂಸ್ಥೆಯನ್ನು ಮತ್ತು ಅದೇ ಹೆಸರಿನ ಒಂದು ಮಾಸಪತ್ರಿಕೆಯನ್ನು ನಡೆಸುವ ಕನಸು ಕಂಡಿದ್ದರು.
ಕಾವ್ಯಾರಾಮ’ವೇ
ಜೀವನ' ಎಂಬ ಹೆಸರಿನಿಂದ ೧೯೩೯ರ ಜೂನ್ ತಿಂಗಳಿನಿಂದ ಧಾರವಾಡದಲ್ಲಿ ಆರಂಭವಾಯಿತು. ದ್ವಿತೀಯ ಮಹಾಯುದ್ಧದ ಕಷ್ಟ ನಷ್ಟದ ಕಾಲದಲ್ಲಿಯೂ ಪತ್ರಿಕೆ ದ.ರಾ.ಬೇಂದ್ರೆ, ವಿ.ಕೃ. ಗೋಕಾಕ ಮತ್ತು ರಂ.ಶ್ರೀ.ಮುಗಳಿ ಸಂಪಾದಕತ್ವದಲ್ಲಿ ಮಾಸ ಪತ್ರಿಕೆಯಾಗಿ ಚೆನ್ನಾಗಿ ನಡೆಯಿತು. ಕಾಗದದ ಕೊರತೆ ಮೊದಲಾದ ಕಾರಣಗಳಿಂದ ನಾಲ್ಕನೆ ವರ್ಷ ಪತ್ರಿಕೆಯನ್ನು ಅನಿವಾರ್ಯವಾಗಿ ತ್ರೈಮಾಸಿಕವನ್ನಾಗಿ ಮಾಡಬೇಕಾಯಿತು.
ಜೀವನ’
ಈ ಮೊದಲ ಹಂತದಲ್ಲಿ ನಡೆದದ್ದೇ ಅದರ ಅತ್ಯುತ್ತಮ ಕಾಲ ಎಂದು ಮಾಸ್ತಿಯವರೇ
ಹೇಳಿದ್ದಾರೆ. ಅಂದು ನಡೆದಷ್ಟು ಚೆನ್ನ ಮರಳಿ ಈಚೆಗೆ ಎಂದೂ ನಡೆದಿಲ್ಲ. ಆ ಗಾತ್ರ, ಆ ಲೇಖನ ವೈಭವ, ಆ ಉತ್ಸಾಹ ಆ ಮೂರು ವರ್ಷ ಪತ್ರಿಕೆಯ ಸ್ವರ್ಣ ಯುಗದ ಲಕ್ಪಣ ಆದವು''28 ಎಂದು ಮಾಸ್ತಿಯವರೇ ಹೇಳಿಕೊಂಡಿದ್ದಾರೆ. ಜೀವನಕ್ಕೆ ಸುಮಾರು ೧೫೦೦ ಚಂದಾದಾರರಿದ್ದರು. ಪ್ರತಿ ತಿಂಗಳು ಮೊದಲನೆ ತಾರೀಖಿಗೆ ಅದು ಹೊರಬರುತ್ತಿತ್ತು. ಜಿ.ಎಸ್. ಶಿವರುದ್ರಪ್ಪ, ರಾಮಚಂದ್ರ ಶರ್ಮ, ಕೆ.ಎಸ್. ನರಸಿಂಹಸ್ವಾಮಿ, ಬಾಗಲೋಡಿ ದೇವರಾಯ ಮೊದಲಾದವರು ಬೆಳಕಿಗೆ ಬಂದದ್ದು `ಜೀವನ'ದ ಮೂಲಕವೇ. ಸಾಹಿತ್ಯಕವಾಗಿ ಮಾಸ್ತಿಯವರ ಕಾಲದ ಜೀವನಕ್ಕಿಂತ ಬೇಂದ್ರೆ ಮತ್ತು ಗೆಳೆಯರ ಕಾಲದ ಜೀವನವೇ ಸಂಪುಷ್ಟವಾದದ್ದು. ಮಾಸ್ತಿಯವರ ಕಾಲದಲ್ಲಿ ಅವರು ತಪ್ಪದೇ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಮಾಸ್ತಿಯವರು ಒಂದು ಸಲ ಸಂಪಾದಕೀಯವನ್ನು ಬರೆದಿರಲಿಲ್ಲ. ಆಗ ವಾಚಕರೊಬ್ಬರು, `ಪತ್ರಿಕೆ ತಿಲಕವನ್ನು ಇಟ್ಟುಕೊಳ್ಳಲು ಮರೆತ ಸ್ತ್ರೀಯ ಮುಖದಂತೆ ಇತ್ತು' ಎಂದು ಬರೆದಿದ್ದಾರೆ. ಸಾಹಿತ್ಯ ಪೋಷಣೆಗೆ ಹುಟ್ಟಿಕೊಂಡ ಜೀವನದ ಸಂಪಾದಕೀಯದಲ್ಲಿ ರಾಜಕೀಯ ವಿಚಾರಗಳೇ ಹೆಚ್ಚಿಗೆ ಇರುತ್ತಿದ್ದವು. ಇದು ಸರಿಯೇ ಎಂಬ ಪ್ರಶ್ನೆ ಆಗಾಗ ಎದ್ದಿದೆ. ಅದಕ್ಕೆ ಮಾಸ್ತಿಯವರ ಉತ್ತರ ಹೀಗಿತ್ತು,
ಈ ಟಿಪ್ಪಣಿಗಳು
ಈ ಪರಿಮಾಣದಲ್ಲಿ ರಾಜಕೀಯವನ್ನು ಹರಿಸದೆ ಇದ್ದರೆ ಚೆನ್ನಾಗಿತ್ತು ಎಂದು (ವಾಚಕರು)
ಸೂಚಿಸಿದ್ದಾರೆ. ಸಾಹಿತ್ಯ ಜೀವನವನ್ನೆಲ್ಲ ಒಳಗೊಳ್ಳುವ ತತ್ವ. ಅದು ರಾಜಕೀಯವನ್ನು
ಬಿಟ್ಟು ಸೇವೆ ನಡಸಿಯೇನು ಎಂದು ಹೇಳುವಂತಿಲ್ಲ.”29
ಮಾಸ್ತಿ ತಮ್ಮ ಸಂಪಾದಕೀಯದಲ್ಲಿ, ಅನೇಕ ಸಂಗತಿಗಳನ್ನು ಕುರಿತು ತಮ್ಮ
ಚಿಂತನೆಗಳಿಗೆ ರೂಪು ಕೊಟ್ಟಿದ್ದಾರೆ. ಕರ್ನಾಟಕದ ಅತ್ಯುಚ್ಚ ಸಂಸ್ಕೃತಿಯ ದೃಷ್ಟಿಯೇನು
ಎಂಬುದನ್ನು ತಮ್ಮ ದೃಷ್ಟಿಕೋನದಿಂದ ತಿಳಿಸಲು ಪ್ರಯತ್ನಿಸಿದ್ದಾರೆ. ಲಿಬರಲ್
ಮನೋಭಾವದ ಭಾರತೀಯನೊಬ್ಬನ ಮನಸ್ಸು ಹೇಗೆ ಹರಿಯುತ್ತಿತ್ತು ಎಂಬುದನ್ನು ಈ
ಟಿಪ್ಪಣಿಗಳು ಸೂಚಿಸುತ್ತವೆ. ಮಾಸ್ತಿಯವರ ಬದುಕು ಬರೆಹಗಳನ್ನು ಸರಿಯಾಗಿ ಗ್ರಹಿಸಲು
ಈ ಟಿಪ್ಪಣಿಗಳ ತಿಳಿವಳಿಕೆ ಅಗತ್ಯ.30 ನಾಡು ನುಡಿಯ ಬಗ್ಗೆ, ದೇಶ, ಕಾಲ, ಧರ್ಮಗಳ
ಬಗ್ಗೆ ಕಾಳಜಿ ಹೊಂದಿದ್ದ ಮಾಸ್ತಿಯವರ ಸಂಪಾದಕೀಯದ ದೊಡ್ಡ ಕೊರತೆ ಎಂದರೆ
ಸಾಹಿತ್ಯದ ಸೊಗಸು, ಸೂಕ್ಪ್ಮ ಒಳನೋಟಗಳು ಅದರಲ್ಲಿ ಇಲ್ಲದೆ ಇದ್ದುದು. ಉಪದೇಶದ
ದಾಟಿ ಧಾರಾಳವಾಗಿ ಅದರಲ್ಲಿ ಕಂಡುಬರುತ್ತದೆ.
ಮಾಸ್ತಿಯವರ ಕಾಲದ ಜೀವನ' ಅತ್ಯುತ್ತಮ ಸಾಹಿತ್ಯಪತ್ರಿಕೆಯೇನಾಗಿರಲಿಲ್ಲ. ಒಂದೆರಡು ಸಂದರ್ಭಗಳನ್ನು ಬಿಟ್ಟರೆ ಸಾಹಿತ್ಯಿಕ ವಾಗ್ವಾದಗಳಿಗೆ ಅದು ತೆರೆದುಕೊಳ್ಳಲಿಲ್ಲ. ಆಗೊಂದು ಈಗೊಂದು ಉತ್ತಮ ಸಾಹಿತ್ಯಕ ಲೇಖನಗಳು ಪ್ರಕಟವಾಗಿವೆ. ಕೆಲವು ನೀರಸ ಧಾರಾವಾಹಿಗಳು ಕಾಣಿಸಿಕೊಂಡಿವೆ. ಸಾಹಿತ್ಯ ಚಳವಳಿಗಳ ಕಾವು ತೀವ್ರಗೊಂಡ ಸಂದರ್ಭದಲ್ಲಿ ಸೃಜನಶೀಲ ಬರೆಹಗಳ ಬಗ್ಗೆ ಆರೋಗ್ಯಕರ ಸಂವಾದಕ್ಕೆ ಅದು ವೇದಿಕೆ ಆಗಲಿಲ್ಲ. ಮುಸಲ್ಮಾನರಲ್ಲಿ
ಮೋಜಿನ್’ ಇರುವ ಹಾಗೆ ಜೀವನ' ಪತ್ರಿಕೆಯಾಗಿತ್ತು ಮಾಸ್ತಿಯವರಿಗೆ. ಬೆಳಗಾದಾಗ ಜನರನ್ನು ಪ್ರಾರ್ಥನೆಗೆ ಕೂಗಿ ಎಬ್ಬಿಸುವುದು ಅವನ ಕೆಲಸ.
ನಾನು ಕೂಗಿದಾಗ ಹೆಚ್ಚು ಜನ ಕೇಳಲಿಲ್ಲ’ ಎನ್ನುವ ಮಾತನ್ನು ಅವನು ಆಡುವಂತಿಲ್ಲ.
ಇಂತಹವರು ಮಲಗಿದ್ದಾಗ ಕೂಗಿ ಎಬ್ಬಿಸುವ ಕೆಲಸ ಅವನದು. ಕನ್ನಡ ನಾಡಿನಲ್ಲಿ ನಾನು
ಮಾಡಿದುದು ಈ ಮೋಜಿನ್ ಕೆಲಸ' ಎಂದು ಅವರೇ ಹೇಳಿಕೊಂಡಿದ್ದು
ಜೀವನ’ದ
ಸರಿಯಾದ ಮೌಲ್ಯಮಾಪನ ಎನ್ನಬಹುದು.
ನವೋದಯ ಕಾಲದ ಪ್ರಮುಖ ಲೇಖಕರೆಲ್ಲ ಪತ್ರಿಕೆಯೊಂದನ್ನು ತಾವೇ
ನಡೆಸುತ್ತಿದ್ದವರು. ಅವರ ಸಾಲಿಗೆ ಮಾಸ್ತಿಯವರೂ ಸೇರಿದರು. ಸಾಹಿತ್ಯ ಸೃಷ್ಟಿಗೆ ಕನ್ನೆ ನೆಲ ದೊರಕಿತ್ತು.
ಅಭಿವ್ಯಕ್ತಿ ಹಲವು ನಿಟ್ಟಿನಲ್ಲಿ ಕಾಣಿಸಿಕೊಂಡಾಗ ಅದಕ್ಕೆ ವಾಹಕವಾಗುವ
ಅವಕಾಶವನ್ನು `ಜೀವನ’ ಕಲ್ಪಿಸಿಕೊಂಡಿತು.
೧೯೪೭ರಲ್ಲಿ ಭಾರತ ಸ್ವಾತಂತ್ಯ್ರವನ್ನು ಗಳಿಸಿತು. ೧೯೫೬ರಲ್ಲಿ ರಾಜ್ಯಗಳ
ಪುನರ್ವಿಂಗಡಣೆಯಾಗಿ ಕರ್ನಾಟಕದ ಏಕೀಕರಣ ಆಗಿತ್ತು. ಇದೇ ಸಮಯಕ್ಕೆ
ಧ್ಯೇಯಕ್ಕಾಗಿ ನಡೆಸುತ್ತಿದ್ದ ಪತ್ರಿಕೆ ಉದ್ಯಮದ ಸ್ವರೂಪವನ್ನು ಪಡೆದುಕೊಂಡಿತು.
ಮಾರುಕಟ್ಟೆಯ ಮೇಲೆ ಗಮನ ಕೇಂದ್ರೀಕರಿಸಿ ಪತ್ರಿಕೆಗಳು ಹೊರ ಬಂದವು. ಇದರ
ಜೊತೆಯಲ್ಲಿಯೇ ಪತ್ರಿಕೆಗಳು ವಾಣಿಜ್ಯ ಜಾಹೀರಾತುಗಳ ಪ್ರಕಟಣೆಗೆ ಗಮನ
ನೀಡತೊಡಗಿದವು. ಇದು ಔದ್ಯಮೀಕರಣಗೊಂಡ ಪತ್ರಿಕೆಯ ಅಗತ್ಯವೂಆಗಿತ್ತು. ಪತ್ರಿಕೆ
ನಾಲ್ಕಾರು ಜನ ಸ್ನೇಹಿತರು ಸೇರಿ ಕಷ್ಟವೋ ನಷ್ಟವೋ ಹವ್ಯಾಸವೆಂದು ನಡೆಸುವುದು
ಹಾಸ್ಯಾಸ್ಪದ ಸಂಗತಿಯಾಗಿ ಈಗ ತೋರತೊಡಗಿತು. ೩೦ರ ದಶಕದಲ್ಲಿಯೇ ಹುಟ್ಟಿಕೊಂಡ
ಸಂಯುಕ್ತ ಕರ್ನಾಟಕ, ೫೦ರ ದಶಕದ ಪ್ರಜಾವಾಣಿ ಉತ್ತರ ಕರ್ನಾಟಕ ಮತ್ತು ದಕ್ಪಿಣ
ಕರ್ನಾಟಕಗಳಲ್ಲಿ ವ್ಯಾಪಕ ಜಾಲವನ್ನು ನೇಯ್ದವು. ನೂರಾರು ಕೆಲಸಗಾರರನ್ನು
ಇಟ್ಟುಕೊಂಡು ಅವರಿಗೆ ಸಂಬಳ, ಭತ್ತೆ ನೀಡಿ ಲಾಭದಾಯಕವಾಗಿ ಪತ್ರಿಕೆಯನ್ನು
ನಡೆಸತೊಡಗಿದ್ದನ್ನು ಕಾಣಬಹುದು. ಇವುಗಳ ಸಾಲಿಗೆ ೭೦ರ ದಶಕದಲ್ಲಿ ಕನ್ನಡಪ್ರಭ
ಸೇರಿಕೊಂಡಿತು. ಕರಾವಳಿ ಭಾಗದಲ್ಲಿ ಉದಯವಾಣಿ ಜನಪ್ರಿಯವಾಯಿತು. ಈ
ಪತ್ರಿಕೆಗಳು ಪ್ರಕಟಿಸುತ್ತಿದ್ದ ವಾರದ ಪುರವಣಿಗಳಲ್ಲಿ ಸಾಹಿತ್ಯದ ಭಾಗವೂ ಇರುತ್ತವೆ. ಒಟ್ಟಾರೆ
ಇವುಗಳ ಆಯ್ಕೆ ಸರ್ವಜನ ಮಾನ್ಯವಾಗುವಂಥದ್ದಾಗಿತ್ತು. ಹೀಗಾಗಿ ಗಂಭೀರ ಸಾಹಿತ್ಯ,
ಹೊಸ ಸಾಹಿತ್ಯ ಚಳವಳಿಗಳು, ಸಾಹಿತ್ಯಕ ಸಂವಾದ, ವಾಗ್ವಾದಗಳು ಇವುಗಳಿಗೆ
ಬೇಕಾಗಲಿಲ್ಲ. ಇವುಗಳಿಗೆ ಅಪವಾದವೆನ್ನುವಂತೆ ನವ್ಯ ಸಾಹಿತ್ಯದ ಬರೆಹಗಳಿಗೆ ಪ್ರಜಾವಾಣಿ
ಅವಕಾಶವನ್ನು ಒದಗಿಸಿತು. ವೈ.ಎನ್.ಕೃಷ್ಣಮೂರ್ತಿ ಅದರ ಸಂಪಾದಕರಾಗಿದ್ದಾಗ ನವ್ಯ
ಚಳವಳಿಗೆ ಅವರು ಉತ್ತೇಜನ ನೀಡಿದರು. ಆದರೆ ಎಲ್ಲ ಜನಪ್ರಿಯ ಪತ್ರಿಕೆಗಳೂ
ಇಷ್ಟೊಂದು ಉದಾರವಾಗಿ ಇರಲಿಲ್ಲ. ಹೀಗಾಗಿ ಸಾಹಿತ್ಯಕ ಚಳವಳಿಗಳನ್ನೇ ಪ್ರತಿಪಾದಿಸುವ
ಪತ್ರಿಕೆಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಂಡವು. ಸಾಕ್ಷಿ, ಸಂಕ್ರಮಣ, ರುಜುವಾತು,
ಶೂದ್ರ ಹೀಗೆ ದೊಡ್ಡ ಪಟ್ಟಿಯನ್ನೇ ನೀಡಬಹುದು.
ಏಕೀಕರಣ, ಸಾಹಿತ್ಯ ಮತ್ತು ಪತ್ರಿಕೆ:
ಕನ್ನಡ ನವೋದಯ ಸಾಹಿತ್ಯದ ಪ್ರೇರಣೆಗಳ ಮೂಲ ನಾಡು ನುಡಿಗಳ
ಪ್ರೇಮದಲ್ಲಿಯೇ ಇದೆ ಎನ್ನುವುದನ್ನು ಈಗಾಗಲೆ ಹೇಳಲಾಗಿದೆ. ನವೋದಯದ ಕಾಲದಲ್ಲಿ
ಕನ್ನಡ ನಾಡಿನ ಏಕೀಕರಣದ ಚಳವಳಿ ತೀವ್ರವಾಗಿತ್ತು. ಸಹಜವಾಗಿಯೇ ಅದರ ಪ್ರಭಾವ
ಅಂದಿನ ಸಾಹಿತ್ಯದ ಮೇಲೆ ಬಿದ್ದಿದೆ. ನಾಡಿನ ಏಕೀಕರಣದ ಜೊತೆಯಲ್ಲಿ ದೇಶದ
ಸ್ವಾತಂತ್ಯ್ರವೂ ಸಾಹಿತಿಗಳ ಕಾಳಜಿಯಾಯಿತು. ಇವುಗಳ ಜೊತೆಯಲ್ಲಿ ಸಮಾಜದ
ಸುಧಾರಣೆ ಆಗಬೇಕೆಂಬ ಕಾಳಜಿಯೂ ಅಂದಿನ ಸಾಹಿತಿಗಳಲ್ಲಿ ಇತ್ತು. ಇವೆಲ್ಲಕ್ಕೆ
ಪೂರಕವಾಗಿ ಅಂದಿನ ಪತ್ರಿಕೆಗಳು ಕೆಲಸ ಮಾಡಿವೆ.
ಬಂಗಾಳ ವಿಭಜನೆಯ ನಂತರದ ಹಾಗೂ ಕರ್ನಾಟಕ ಏಕೀಕರಣದ ವರೆಗಿನ
ಅವಧಿಯಲ್ಲಿ ಕನ್ನಡದಲ್ಲಿ ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯದ ಅಲೆಗಳು
ಕಾಣಿಸಿಕೊಂಡವು. ಈ ಅವಧಿಯ ಕೊನೆಯಲ್ಲಿ ಪತ್ರಿಕೆ ನಡೆಸುವುದು ಲಾಭದಾಯಕ
ಉದ್ಯೋಗವನ್ನಾಗಿ ಪರಿಗಣಿಸಲಾಯಿತು. ನುಡಿ ಸೇವೆಯೇ ನಾಡಸೇವೆ; ಅದು ದೇಶ
ಸೇವೆಯ ಇನ್ನೊಂದು ರೂಪ ಎಂಬ ಭಾವನೆ ಈ ಅವಧಿಯಲ್ಲಿತ್ತು.
ಶೇ.ಗೋ.ಕುಲಕರ್ಣಿಯವರ ಮಾತಿನಲ್ಲಿ ಈ ಭಾವವನ್ನು ನಾವು ಈಗಾಗಲೆ ಗಮನಿಸಿದ್ದೇವೆ.
ದೇಶಕ್ಕೆ ಸ್ವಾತಂತ್ಯ್ರವೂ ಬಂತು. ನಾಡು ಏಕೀಕರಣವೂ ಆಯಿತು. ಅಂದಮೇಲೆ ಪತ್ರಿಕೆಗಳ
ಬಹು ದೊಡ್ಡ ಜವಾಬ್ದಾರಿ ಮುಗಿದಂತೆ ಭಾಸವಾಯಿತು. ಇಂಥ ಒಂದು ನಿರ್ವಾತ
ಸಮಯದಲ್ಲಿ ಸಾಹಿತ್ಯದ ಮುಖ್ಯ ಕಾಳಜಿಗಳನ್ನು ಪ್ರತಿಪಾದಿಸಬೇಕಾದ ಅಗತ್ಯ ಕೆಲವರಿಗೆ
ತೋರಿತು. ಹೀಗಾಗಿ ಕೇವಲ ಸಾಹಿತ್ಯ ಚಳವಳಿಗಳ ಪ್ರತಿಪಾದನೆಗಾಗಿ ಪತ್ರಿಕೆಗಳು ನಂತರದ
ಅವಧಿಯಲ್ಲಿ ಕಂಡುಬಂದವು.
ನವೋದಯ ಸಾಹಿತ್ಯದ ಮೂಲ ಸೆಲೆಗಳಲ್ಲಿ ರಾಷ್ಟ್ರೀಯತೆಯೂ ಒಂದು. ಈ
ರಾಷ್ಟ್ರೀಯತೆಯ ಪರಿಕಲ್ಪನೆ ಬಹುಮುಖಿಯಾದದ್ದು. ಅದು ರಾಜಕೀಯವಾಗಿ,
ಸಾಮಾಜಿಕವಾಗಿ, ಧಾರ್ಮಿಕವಾಗಿ ಹೀಗೆ ವಿವಿಧ ನೆಲೆಗಳಲ್ಲಿ ಅರಳಿತು. ಈಗಲೂ ಹಿಂದಿನ
ಸಾಮ್ರಾಜ್ಯಗಳನ್ನು ವರ್ಣಿಸುವ ಕಾದಂಬರಿಗಳು ಬಂದವು. ಆದರೆ ಈ ಕಾದಂಬರಿಗಳು
ಬಂದದ್ದು ರಾಷ್ಟ್ರೀಯತೆಯ ಭಾವನೆಗೆ ಇಂಬು ನೀಡಿ ಬಲಗೊಳಿಸುವುದಕ್ಕಾಗಿಯೇ ಇದ್ದವು.
ನವೋದಯ ಕಾಲದ ಪತ್ರಿಕೆಗಳಲ್ಲಿ ರಾಷ್ಟ್ರೀಯತೆಯ ಪ್ರಚೋದನೆ ಒಂದೆಡೆ
ಇದ್ದರೆ ಹಿಂದೂ ಸನಾತನ ವಾದದ ಸಮರ್ಥನೆ ಮತ್ತು ವಿರೋಧ ಇನ್ನೊಂದು ಕಡೆ ಕಂಡು
ಬರುತ್ತದೆ. ಇದು ಆ ಕಾಲದ ಸಾಹಿತ್ಯದಲ್ಲೂ ಪಡಿ ಮೂಡಿದೆ. ಕುವೆಂಪು ಆ ಕಾಲದ
ಮಹಾನ್ ಲೇಖಕ. ವೈದಿಕ ಸಂಸ್ಕೃತಿಯ ಮೇಲೆ ಹಕ್ಕು ಸ್ಥಾಪಿಸಲು ಬ್ರಿಟಿಷರ ಆಗಮನವೇ
ಕಾರಣವಾಯಿತು ಎಂಬ ನಂಬಿಕೆಯ ಜೊತೆಯಲ್ಲಿಯೇ ಬ್ರಿಟಿಷರಿಂದ ದೇಶ
ಸ್ವತಂತ್ರವಾಗಬೇಕು, ಸ್ವಮತಾಕ್ರಮಣ ಅವರಿಂದ ನಡೆಯದಂತೆ ತಡೆಯಬೇಕು ಎಂಬ
ಬದ್ಧತೆ ಉಳ್ಳವರು. ಸರ್ವೋದಯ ತತ್ವ ಸಾರುವ ಶ್ರೀರಾಮಾಯಣ ದರ್ಶನಂ' ಬರೆದ
ಅವರೇ
ಶೂದ್ರ ತಪಸ್ವಿ’ಯನ್ನೂ ಬರೆದರು.
ನವೋದಯದ ಸಂದರ್ಭದಲ್ಲಿ ದೇಶದಂತೆ ಕರ್ನಾಟಕದಲ್ಲೂ ರಾಷ್ಟ್ರೀಯತೆಯ
ಚಳವಳಿ ತೀವ್ರವಾಗಿದ್ದ ಕಾಲ. ಅದೆಲ್ಲದರ ಹಿಂದಿನ ನಿಯಂತ್ರಕ ಶಕ್ತಿ ಮೋಹನದಾಸ
ಕರಮಚಂದ ಗಾಂಧಿ ಎಂಬ ಮಹಾತ್ಮ. ಗಾಂಧೀಜಿಯ ಸ್ವಾತಂತ್ಯ್ರ ಹೋರಾಟವನ್ನು
ಬೆಂಬಲಿಸುವುದರ ಜೊತೆಯಲ್ಲೇ ಅಸ್ಪೃಶ್ಯತೆ ನಿವಾರಣೆ ಚಳವಳಿ ಹಾಗೂ ಆರ್ಯ
ಸಮಾಜದ ಶುದ್ಧೀ' ಚಳವಳಿಗೆ ವಿರುದ್ಧವಾಗಿ ಮೂವತ್ತರ ದಶಕದ
ಜಯಕರ್ನಾಟಕ’ದ
ಸಂಚಿಕೆಗಳಲ್ಲಿ ಆಲೂರ ವೆಂಕಟರಾಯರು ಮತ್ತು ಇತರರು ಲೇಖನಗಳನ್ನು ಬರೆದಿರುವರು.
ಈ ಲೇಖನಗಳ ಭಾಷೆಯೇ ಉಗ್ರವಾದದ್ದು. ಮತೀಯ ಸಾಮರಸ್ಯ, ಜನಶಿಕ್ಪಣ
ಕಾರ್ಯಕ್ರಮಗಳಿಗೆ ಇಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲಾಗಿದೆ. ಆಲೂರರು
ಶುದ್ಧಿಯೋ ಅದರ ನಗೆಚಾಟಿಕೆಯೋ' ಮೊದಲಾದ ಲೇಖನಗಳನ್ನು ಬರೆದರು.
ಅಸ್ಪೃಶ್ಯರಿಗೆ ಜನಿವಾರ ಹಾಕಿ ಬ್ರಾಹ್ಮಣರನ್ನಾಗಿಸುವ ಪದ್ಧತಿಯನ್ನು ಖಂಡಿಸಿರುವ ಆಲೂರರು
ಪುರಾಣಮತವಾದಿಗಳು. ಪೌರಾಣಿಕ ಕಥೆಗಳನ್ನೋ ಐತಿಹಾಸಿಕ ಕಥೆಗಳನ್ನೋ ಆಧುನಿಕ
ಸಂದರ್ಭದಲ್ಲಿ ಅರ್ಥೈಸುವಂಥ ಪ್ರಯತ್ನ ನಡೆದಾಗ ಸನಾತನವಾದಿಗಳು ಅದನ್ನು
ಪ್ರತಿಭಟಿಸಿದರು. ಕುವೆಂಪು ಅವರ
ಶೂದ್ರ ತಪಸ್ವಿ’ ಪ್ರಕಟವಾದಾಗ ಜೀವನ'ದಲ್ಲಿ
ಮಾಸ್ತಿಯವರು ಇಂಥ ಪ್ರಯತ್ನ ಟೀಕಿಸಿದರು. ಅದನ್ನು ಸಮರ್ಥಿಸಿ ಕುವೆಂಪು ಬರೆದರು.
ಈ ವಾಗ್ವಾದ ಮುಂದೆ ಇದೇ ರೀತಿಯ ಬರೆವಣಿಗೆಯ ಕವಲನ್ನು ಹುಟ್ಟುಹಾಕಲು
ಕಾರಣವಾಯಿತು.
ಜಯಕರ್ನಾಟಕ’ದಲ್ಲಿಯೇ ಪುರಾಣಮತವಾದಿಯೊಬ್ಬರು ವೈದಿಕ
ಧರ್ಮಗ್ಲಾನಿಯೂ ಕ್ರಮೋನ್ನತಿಯೂ' ಎಂಬ ಮಾಲಿಕೆಯಲ್ಲಿ ಲೇಖನಗಳನ್ನು ಬರೆದರು.
ಹಿಂದೂ ಸಮಾಜದಲ್ಲಿಯ ಅದುವರೆಗೆ ನಡೆದುಕೊಂಡು ಬಂದ ಪದ್ಧತಿಯನ್ನು ಅದರಲ್ಲಿ
ಬಲವಾಗಿ ಸಮರ್ಥಿಸಲಾಯಿತು. ಬ್ರಿಟಿಷ್ ಶಿಕ್ಪಣದಿಂದ ಸಮಾಜದಲ್ಲಿ ಹಕ್ಕುಗಳಿಂದ
ವಂಚಿತ ವರ್ಗವು ಪ್ರಶ್ನೆಗಳನ್ನು ಹಾಕಲು ತೊಡಗಿದ್ದು ಅನಾಹುತಕಾರಿಯಾಗಿ ಕಂಡಿತು
ಇಂಥವರಿಗೆ. ಅದಕ್ಕಾಗಿಯೇ ಇಂಥ ಶಿಕ್ಷಣ ನೀಡುವ ಬ್ರಿಟಿಷರಿಗಿಂತ ಶಿಕ್ಪಣ
ಸಾರ್ವತ್ರಿಕಗೊಳಿಸದ ಮುಸ್ಲಿಂ ದೊರೆಗಳೇ ಸುರಕ್ಪಿತವಾಗಿ ಕಂಡಿತು ಇವರಿಗೆ. ಪರಮತದ
ಆಕ್ರಮಣದ ವಿರುದ್ಧ ಸ್ವಮತವನ್ನು ಕಠಿಣಗೊಳಿಸುವುದೇ ಇವರಿಗೆ ಎದುರಿಸುವ
ಮಾರ್ಗವಾಗಿ ತೋರಿತು. ಇದು ಆ ಕಾಲದ ಲೇಖಕರಾದ ಗಳಗನಾಥರು, ಕೆರೂರರು,
ಆಲೂರರ ಬರೆಹಗಳಲ್ಲಿ ಕಂಡು ಬರುತ್ತದೆ. ಆಲೂರರು
ಜಯಕರ್ನಾಟಕ’ದಲ್ಲಿ
ಪ್ರಕಟಿಸಿದ ಲೇಖನಗಳು ಗಳಗನಾಥರ ಕಾದಂಬರಿಗಳಲ್ಲಿ ಅಧ್ಯಾಯಗಳಾಗಿ ಬಂದಿವೆ.೩೧
ಹೀಗೆ ಈ ಕಾಲದ ಪತ್ರಿಕೆಗಳು, ಆ ಮೂಲಕ ಈ ಕಾಲದ ಸಾಹಿತ್ಯದ ಮುಖ್ಯ
ಕಾಳಜಿ ನಾಡು, ನುಡಿ, ದೇಶ, ಧರ್ಮಗಳ ರಕ್ಷಣೆಯಾಗಿರುತ್ತದೆ. ಈ ಕಾರ್ಯವನ್ನು ಅವು
ಅತ್ಯಂತ ಶ್ರದ್ಧೆಯಿಂದ ಮಾಡುತ್ತವೆ. ದೇಶ ಕಾಲಾತೀತವಾಗಿ ಜನರೂ ಇಲ್ಲ ಜೀವನವೂ
ಇಲ್ಲ. ಈ ಜೀವನದ ಪ್ರತಿಬಿಂಬವಾದ ಸಾಹಿತ್ಯವೂ ಇಲ್ಲ, ಪತ್ರಿಕೆಯೂ ಇಲ್ಲ ಎಂಬ ಅಂಶ
ಅವುಗಳ ಅಭ್ಯಾಸದಿಂದ ದಟ್ಟವಾಗಿ ಮನವರಿಕೆಯಾಗುತ್ತದೆ.
ರಾಜಕೀಯ ಕಾರಣಗಳಿಗಾಗಿ ನವೋದಯದ ಆರಂಭದ ಕಾಲದಲ್ಲಿ
ಕರ್ನಾಟಕವು ಸಾಂಸ್ಕೃತಿಕವಾಗಿ ಮೂರು ಮುಖ್ಯ ಭಾಗಗಳಲ್ಲಿ ಹಂಚಿ ಹೋಗಿತ್ತು. ಒಂದು
ಧಾರವಾಡ, ಇನ್ನೊಂದು ಮಂಗಳೂರು, ಮತ್ತೊಂದು ಮೈಸೂರು. ಈ ಮೂರೂ
ಸಾಂಸ್ಕೃತಿಕ ಕೇಂದ್ರಗಳಲ್ಲಿ ಹೆಚ್ಚೂಕಡಿಮೆ ಒಂದೇ ಕಾಲದಲ್ಲಿ ನವೋದಯ ಬರೆಹ
ಕಾಣಿಸಿಕೊಂಡಿತು. ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ ಕಾರಣಗಳಿಗಾಗಿ ಈ
ಮೂರು ಭಾಗಗಳಿಂದ ಬಂದ ಸಾಹಿತ್ಯ ಭಿನ್ನವಾಗಿತ್ತು. ಒಟ್ಟಾರೆಯಾಗಿ ಗಮನಿಸಿದಾಗ
ದೇಶದ ಸ್ವಾತಂತ್ಯ್ರ ಚಳವಳಿ, ಗಾಂಧೀವಾದ, ಕನ್ನಡ ನಾಡಿನ ಏಕೀಕರಣ, ಭಾಷೆ-
ಸಂಸ್ಕೃತಿಗಳ ಪುನರುಜ್ಜೀವನ, ಸಮಾಜ ಸುಧಾರಣೆ, ಇಂಗ್ಲಿಷ್ ರೋಮ್ಯಾಂಟಿಕ್ ಕಾವ್ಯ
ಇತ್ಯಾದಿಗಳು ಮಾಡಿದ ಪ್ರಭಾವ ಒಂದೇ ಎನ್ನಿಸಿದರೂ ಆಂತರ್ಯದಲ್ಲಿ ಈ ಮೂರು
ಭಾಗಗಳ ಸಾಹಿತ್ಯದಲ್ಲಿ ಭಿನ್ನತೆ ಒಡಲೊಳಗೇ ಇತ್ತು. ಈ ಸೂಕ್ಷ್ಮಗಳನ್ನು ಸಾಹಿತ್ಯದ
ಅಭ್ಯಾಸಿಗಳು ಗಮನಿಸಬೇಕು. ಸಮಾನ್ಯವಾಗಿ ಶ್ರೀ'ಯವರ
ಇಂಗ್ಲಿಷ್ಗೀತ’ಗಳೇ
ನವೋದಯ ಕಾವ್ಯದ ಮೇಲೆ ಪ್ರಭಾವ ಬೀರಿದವು ಎಂದು ಸಮಾನ್ಯೀಕರಿಸಿ ಹೇಳಿಕೆಯನ್ನು
ನೀಡಿ ಬಿಡುತ್ತೇವೆ. ಆದರೆ ವಸ್ತು ಸ್ಥಿತಿ ಹಾಗಿಲ್ಲ.
ಐತಿಹಾಸಿಕವಾಗಿ ಶ್ರೀ'ಯವರ ಇಂಗ್ಲಿಷ್ ಗೀತಗಳು ಪ್ರಕಟವಾದದ್ದು ೧೯೨೧ರಲ್ಲಿ.
ಅದರಲ್ಲಿ ಆಗ ೧೨ ಗೀತಗಳಿದ್ದವು. ಮತ್ತೆ ೨೪ ಗೀತಗಳು ಡಿ.ವಿ.ಗುಂಡಪ್ಪನವರ
ಕರ್ನಾಟಕ
ಜನಜೀವನ’ ಪತ್ರಿಕೆಯಲ್ಲಿ ೧೯೨೪ರಲ್ಲಿ ಪ್ರಕಟವಾಗಿದೆ. ಮೈಸೂರು ಭಾಗದಲ್ಲಿ ತೀ.ನಂಶ್ರೀ,
ಕುವೆಂಪು ಮೊದಲಾದವರು ಇದರ ಪ್ರಭಾವಕ್ಕೆ ಒಳಗಾದರು. ಆದರೆ ಈ ಗೀತಗಳು
ಉತ್ತರ ಕರ್ನಾಟಕವನ್ನು ತಲುಪಲಿಲ್ಲವೆಂದೇ ಹೇಳಬೇಕು. ಅಷ್ಟುಹೊತ್ತಿಗಾಗಲೇ ಧಾರವಾಡ
ಭಾಗದಲ್ಲಿ ಬೇಂದ್ರೆಯವರು ದೊಡ್ಡ ಕವಿಗಳಾಗಿದ್ದರು. ೧೯೧೮ರಲ್ಲಿ ಅವರ ಮೊದಲ ಕವಿತೆ
ತುತೂರಿ'
ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ೧೯೨೨ರಲ್ಲಿ ಅವರ ಕೃಷ್ಣಾಕುಮಾರಿ'
ಕವನ ಸಂಕಲನ ಪ್ರಕಟವಾಗಿದೆ. ಅವರ ಸುಪ್ರಸಿದ್ಧ ಕವಿತೆ
ಬೆಳಗು’ ಸ್ವಧರ್ಮ'
ಪತ್ರಿಕೆಯಲ್ಲಿ ೧೯೧೯ರ ಸುಮಾರಿಗೆ ಪ್ರಕಟವಾಗಿದೆ. ಒಟ್ಟಾರೆಯಾಗಿ ಇದು
ಬಿ.ಎಂ.ಶ್ರೀ.ಯವರ ಪ್ರಭಾವದಿಂದ ಬೇರೆಯಾಗಿಯೇ ರೂಪುಪಡೆದ ಕಾವ್ಯವಾಗಿತ್ತು.
ಬೇಂದ್ರೆಯವರ ಹಾಗೆಯೇ ಮಧುರಚೆನ್ನ, ಆನಂದಕಂದ, ಶ್ರೀಧರ ಖಾನೋಳ್ಕರರು
ತಮ್ಮ ಕಾವ್ಯ ರಚಿಸಿದರು. ಮೈಸೂರಿನವರಿಗಿಂತ ಇವರು ಭಿನ್ನವಾಗಿ ಕಾವ್ಯ ರಚಿಸಲು ಕಾರಣ
ಈ ಭಾಗ ರಾಜಕೀಯವಾಗಿ ಮುಂಬೈ ಪ್ರಾಂತ್ಯದಲ್ಲಿತ್ತು. ಈ ಕಾರಣಕ್ಕಾಗಿ ಎಲ್ಲ
ರಾಜಕೀಯ ಸಾಂಸ್ಕೃತಿಕ ಸಂಬಂಧಗಳು ಮರಾಠಿಯವರೊಂದಿಗೆ ನಡೆಯುತ್ತಿತ್ತು. ಮರಾಠಿ
ಭಾಷೆಯು ಕನ್ನಡವನ್ನು ತುಳಿಯುತ್ತಿದೆ ಎಂಬ ಭಾವನೆಯೂ ಈ ಭಾಗದಲ್ಲಿತ್ತು. ಜೊತೆಯಲ್ಲಿ
ಇವರೆಲ್ಲ ಜಾನಪದವನ್ನು ಸಂಗ್ರಹಿಸಿ ಪ್ರಕಟಿಸಿದವರು.
ಜಯಕರ್ನಾಟಕ’ದ ಸಂಚಿಕೆಗಳಲ್ಲಿ
ಜನಪದ ಕಾವ್ಯವನ್ನು ಪ್ರಕಟಿಸಲಾಗುತ್ತಿತ್ತು. ಬೇಂದ್ರೆ, ಮಧುರಚೆನ್ನ, ಆನಂದಕಂದ ಇವರೆಲ್ಲ
ಜಾನಪದಕ್ಕೆ ಮಾರು ಹೋದವರು. ಹೀಗಾಗಿ ಇವರು ತಮ್ಮ ಕಾವ್ಯದಲ್ಲಿ ಜಾನಪದ ಸತ್ವವನ್ನು
ತುಂಬಿದರು. ಮಾತ್ರಾ ಗಣಕ್ಕೆ ಬದಲಾಗಿ ಜಾನಪದದ ಅಂಶಗಣವನ್ನು ಅವರು ಬಳಸಿದ್ದು
ಕಂಡುಬರುತ್ತದೆ. ಜೊತೆಯಲ್ಲಿ ಅನುಭಾವ ಸಾಹಿತ್ಯವೂ ಇವರ ಮೇಲೆ ಪ್ರಭಾವ ಬೀರಿದೆ.
ಶಿಶುನಾಳ ಶರೀಫರು ಈ ಭಾಗದ ಜನಪ್ರಿಯ ಸಂತ. ಅವರ ಪ್ರಭಾವವೂ ಇವರ
ಮೇಲಾಗಿದೆ. ಬೇಂದ್ರೆ, ಮಧುರಚೆನ್ನ, ವಿನಾಯಕ, ಮುಗಳಿ, ಸು.ರಂ.ಎಕ್ಕುಂಡಿ
ಮೊದಲಾದವರೆಲ್ಲ ಈ ಅನುಭಾವ ಪ್ರಭೆಗೆ ಒಳಗಾದವರೇ. ಈ ಭಾಗದ ಕವಿಗಳನ್ನು
ಪ್ರಭಾವಿಸಿದ ಇನ್ನೊಂದು ಅಂಶ ವಚನ ಸಾಹಿತ್ಯ. ಇದು ನವೋದಯ ಕಾವ್ಯಕ್ಕೆ ಬೇಕಾದ
ತಂತ್ರ ಸೂಕ್ಷ್ಮತೆಗಳನ್ನು ಒದಗಿಸಿತು. ಬ್ರಿಟಿಷರಿಗಿಂತ ಮೊದಲು ಈ ಭಾಗವನ್ನು ಮರಾಠರು
ಆಳಿದ್ದರು. ಹೀಗಾಗಿ ರಾಜಕೀಯವಾಗಿ ಬ್ರಿಟಿಷರೊಂದಿಗೆ, ಸಾಂಸ್ಕೃತಿಕವಾಗಿ
ಮರಾಠರೊಂದಿಗೆ ಇವರು ಹೋರಾಡಬೇಕಾಯಿತು. ಈ ಕಾರಣಕ್ಕಾಗಿಯೇ ಈ ಭಾಗದಲ್ಲಿ
ದೇಶಭಕ್ತಿ ಗೀತೆಗಳು, ನಾಡ ಗೀತೆಗಳು ಉಳಿದ ಭಾಗಗಳಿಗಿಂತ ಹೆಚ್ಚಾಗಿ ಬಂದಿವೆ.
೧೯೩೮ರಲ್ಲಿ ಶ್ರೀಯವರು ಸಂಪಾದಿಸಿದ ಕನ್ನಡ ಬಾವುಟ' ಪ್ರಕಟವಾಗುವುದಕ್ಕೆ ಹತ್ತು
ವರ್ಷ ಮೊದಲೇ ಅಂದರೆ ೧೯೨೮ರಲ್ಲಿ ಬೇಂದ್ರೆಯವರು ಸಂಪಾದಿಸಿದ
ನನ್ನದು ಈ
ಕನ್ನಡ ನಾಡು’ ಸಂಕಲನ ಪ್ರಕಟವಾಗಿದೆ. ಈ ಎಲ್ಲ ಪ್ರಭಾವಗಳ ಗ್ರಹಣ ಧಾರಣಗಳ
ಹಿಂದೆ ಗೆಳೆಯರ ಗುಂಪು' ಕೆಲಸ ಮಾಡಿದೆ.
ಇತ್ತ ಮಂಗಳೂರು ಕಡೆಯ ಹೊಸ ಕಾವ್ಯದ ಪ್ರಭಾವ ಬೇರೆಯೇ ಆಗಿತ್ತು.
ಇಂಗ್ಲಿಷ್ ಕಾವ್ಯದ ಪರಿಚಯ ಇವರಿಗೆ ಇತ್ತು. ಹಟ್ಟಿಯಂಗಡಿ ನಾರಾಯಣ ರಾಯರ
ಆಂಗ್ಲ ಕವಿತಾವಳಿ’ ೧೯೧೯ರಲ್ಲಿಯೇ ಪ್ರಕಟವಾಗಿತ್ತು. ಆದರೆ ಅದು ಬಿ.ಎಂ.ಶ್ರೀ.ಯವರ
ಕಾವ್ಯದಷ್ಟು ಹೊಚ್ಚ ಹೊಸತೆನಿಸುತ್ತಿರಲಿಲ್ಲ. ಪ್ರಾಚೀನ ಕಾವ್ಯ ಪರಂಪರೆಗೆ ಮುದ್ದಣ
ತೋರಿಸಿದ ಪ್ರತಿಕ್ರಿಯೆ ವಿನೂತನವಾದದ್ದು. ಪ್ರಾಚೀನ ಕಾವ್ಯದ ಬಗ್ಗೆ ಅವನ ಟೀಕೆ
ಅವನ ಕಾವ್ಯದಲ್ಲಿಯೇ ವ್ಯಕ್ತವಾಗಿದೆ. ಕನ್ನಡಂ ಕತ್ತುರಿಯಲ್ತೆ' ಎಂದು ಹೇಳುವ ಮೂಲಕ
ಸಂಸ್ಕೃತವನ್ನು ನಿರಾಕರಿಸುತ್ತಾನೆ. ಅಲ್ಲದೆ ಅವನು ಗದ್ಯದ ಮೇಲ್ಮೆಯನ್ನು ಹೇಳುತ್ತಾನೆ. ಇಂಥ
ಸಂದರ್ಭದಲ್ಲಿಯೇ ಹಟ್ಟಿಯಂಗಡಿ ನಾರಾಯಣ ರಾಯರು ೧೯೧೮ರಲ್ಲಿ
ಕನ್ನಡ ಸಾಹಿತ್ಯ
ಪರಿಷತ್ಪತ್ರಿಕೆ’ಯಲ್ಲಿ ಕನ್ನಡ ಕವಿತೆಯ ಭವಿತವ್ಯ' ಎಂಬ ಲೇಖನವನ್ನು ಬರೆದಿದ್ದರು. ``ಈ
ಲೇಖನದಲ್ಲಿ ಅವರು ಇಂಗ್ಲಿಷ್ ಮಾರ್ಗಗಳ ಅನುಸರಣೆಯಿಂದ ಕನ್ನಡ ಕಾವ್ಯದ ಪ್ರಸಂಗ,
ರಚನೆ ಹಾಗೂ ಅಲಂಕಾರ ಇವು ಹೇಗೆ ಬದಲಾಗಬಹುದೆಂದು ವಿವರಿಸಿದ್ದರು. ಕವಿಗಳು
ಪಾರಮಾರ್ಥಿಕ ವಿಷಯಗಳಿಗಿಂತ ರಾಷ್ಟ್ರಿಕ, ಸಾಮಾಜಿಕ, ಚಾರಿತ್ರಿಕ ಇತ್ಯಾದಿ
ವಿಷಯಗಳಿಗೆ ಗಮನಕೊಡುವರು, ದೀರ್ಘ ಕಾವ್ಯದ ಬದಲು ಲಘು ಕಾವ್ಯ ರಚಿಸುವರು,
ಛಂದಸ್ಸಿನಲ್ಲಿ ಹೊಸ ಮಾರ್ಗಗಳನ್ನು ಅನುಸರಿಸುವರು, ಮಾನಸಿಕ ಭಾವನೆಗಳಿಗೆ
ಮೂರ್ತತ್ವವನ್ನು ಆರೋಪಿಸುವ ಉತ್ಪ್ರೇಕ್ಷೆಯನ್ನು ರೂಢಿಸಿಕೊಳ್ಳುವರು, ಹಳಗನ್ನಡಕ್ಕಿಂತ
ನಡುಗನ್ನಡವನ್ನು ಹೆಚ್ಚಾಗಿ ಪ್ರಯೋಗಿಸುವರು- ಇತ್ಯಾದಿ ವಿಚಾರಗಳನ್ನು ಅವರು
ಮಂಡಿಸಿದ್ದರು. ಹೊಸ ಕಾವ್ಯ ಸ್ವರೂಪದ ಬಗ್ಗೆ ಅವರಿಗಿದ್ದ ಅಸ್ಪಷ್ಟ ಕಲ್ಪನೆಗಳನ್ನು ಇದು
ತೋರಿಸುತ್ತದೆ. ಇಂಗ್ಲಿಷ್ ಕಾವ್ಯದ ಮಾದರಿಗಳನ್ನು ಮುಂದಿಟ್ಟುಕೊಂಡು ಆ ಮಾದರಿಯಲ್ಲಿ
ಕನ್ನಡ ಕಾವ್ಯದಲ್ಲಿ ಹೊಸ ಅಭಿವ್ಯಕ್ತಿ, ಹೊಸ ದೃಷ್ಟಿಕೋನ ಮತ್ತು ಹೊಸ ವಸ್ತು ಬರಬೇಕೆಂದು
ಅವರು ಅಪೇಕ್ಪಿಸಿದರು. ದೀರ್ಘ ಕಾವ್ಯದ ಬದಲು ಛಂದಸ್ಸಿನಲ್ಲಿ ವೈವಿಧ್ಯವಿರುವ ಲಘು
ಕಾವ್ಯ ಕನ್ನಡಕ್ಕೆ ಹೊಸ ನೀರು ತಂದೀತೆಂದು ನಂಬಿದ ಅವರು ಮಿಲ್ಟನ್, ಗ್ರೇ,
ವರ್ಡ್ಸ್ವರ್ತ್, ಶೆಲ್ಲಿ, ಕೀಟ್ಸ್, ಕಾಲಿನ್ಸ್, ವಿಟಿಯರ್ ಮುಂತಾದ ಕವಿಗಳ ಕವನಗಳನ್ನಲ್ಲದೆ
ಶೇಕ್ಸಪಿಯರ್ ನಾಟಕಗಳಲ್ಲಿನ ಕೆಲವು ಸ್ವಯಂಪೂರ್ಣ ಕಾವ್ಯಭಾಗಗಳನ್ನು ಸಹ
ಭಾಷಾಂತರಿಸಿದರು.''32
ಇಂಗ್ಲಿಷ್ ಗೀತಗಳು’ ಬರುವುದಕ್ಕಿಂತ ಮೊದಲೇ ಹಟ್ಟಿಯಂಗಡಿ
ನಾರಾಯಣರಾಯರು ಹೊಸಗನ್ನಡ ಕವಿತೆಯ ಭವಿತವ್ಯದ ಬಗ್ಗೆ ಚಿಂತನೆ ನಡೆಸಿ ಕೆಲವು
ಸ್ಪಷ್ಟ ಅಭಿಪ್ರಾಯಗಳನ್ನು ನೀಡಿದ್ದು ಮಹತ್ವದ್ದಾಗಿದೆ. ಇವರ ಭಾಷೆ ಸಂಸ್ಕೃತಭೂಯಿಷ್ಠ,
ಕ್ಲಿಷ್ಟ ಮತ್ತು ಆಡಂಬರಯುತ. ಹಿಂದಿನ ಕಾವ್ಯದಂತೆ ಸಂಸ್ಕೃತ ಪದ ಪ್ರಯೋಗದಲ್ಲಿಯೇ
ಗಾಂಭೀರ್ಯವನ್ನು ಮತ್ತು ಛಂದಸ್ಸಿನ ನಿಷ್ಠೆಯಲ್ಲಿಯೇ ಸೌಂದರ್ಯವನ್ನು ಕಂಡ ಭಾಷೆ
ಅವರದು. ಆದರೆ ಬಿ.ಎಂ.ಶ್ರೀ.ಯವರು ಇಂಗ್ಲಿಷ್ ಕವಿತೆಗಳನ್ನು ಪರಿಚಯಿಸಿದ ಮೇಲೆ
ಕಾವ್ಯದ ರೂಪ ವಸ್ತುವಿಗೆ ಅನುಗುಣವಾಗಿ ಬದಲಾಗುವಂಥದ್ದು, ಅದು ಸ್ಥಾಯಿಯಾದುದಲ್ಲ
ಎಂಬ ಪ್ರಜ್ಞೆ ಮೂಡಿತು.
ಹಟ್ಟಿಯಂಗಡಿ ನಾರಾಯಣರಾಯರ ಅನುವಾದ ಶ್ರೀಯವರ ಅನುವಾದಕ್ಕೆ
ಸರಿಸಾಟಿಯಿಲ್ಲದೆ ಇರಬಹುದು. ಆದರೆ ಅವರು ಅಂದು ಸಾಮಾನ್ಯವಾಗಿ ಪ್ರಚಲಿತದಲ್ಲಿದ್ದ
ಮೂರು ನಂಬಿಕೆಗಳನ್ನು ಮುರಿದರು. ಹೊಸಗನ್ನಡದಲ್ಲಿ ಕಾವ್ಯ ರಚಿಸಬಾರದು, ಆಂಗ್ಲ
ಕವನಗಳನ್ನು ಅನುವಾದಿಸಬಾರದು ಮತ್ತು ಛಂದಸ್ಸಿನ ಹೊಸ ರೀತಿಗಳನ್ನು ಕಲ್ಪಿಸಬಾರದು-
ಇವೇ ಆ ಮೂರು ನಂಬಿಕೆಗಳು. ಇದು ಮಂಗಳೂರು ಭಾಗದ ಕವಿಗಳ ಮೇಲೆ
ಪರಿಣಾಮವನ್ನು ಬೀರದೆ ಇರಲಿಲ್ಲ. ಹೊಸಗನ್ನಡ ಕಾವ್ಯ ಹೊಸ ರೂಪ ತೊಟ್ಟುಕೊಳ್ಳಲು
ಶ್ರೀಯವರಿಗೂ ಮೊದಲೇ ಇವರು ಪ್ರಯೋಗಶೀಲರಾಗಿದ್ದರು ಎಂಬುದು ಐತಿಹಾಸಿಕ
ಸತ್ಯ. ಇದಕ್ಕೆ ಅವರು ಪತ್ರಿಕೆಗಳನ್ನೇ ಸಾಧನ ಮಾಡಿಕೊಂಡಿದ್ದರು.
ಮಂಗಳೂರು ಭಾಗದ ಕವಿಗಳ ಪ್ರಮುಖ ಸಮಸ್ಯೆ ಎಂದರೆ ಶಾಲೆಯಲ್ಲಿ ಕಲಿತ
ಭಾಷೆಯನ್ನು ಅಭಿವ್ಯಕ್ತಿಯ ಮಾಧ್ಯವನ್ನಾಗಿ ಮಾಡಿಕೊಳ್ಳಬೇಕಾಗಿ ಬಂದುದು. ಪರಿಸರದ,
ಮನೆಯ ಭಾಷೆಗಳಾಗಿದ್ದ ಕೊಂಕಣಿ, ತುಳು ಭಾಷೆಗಳಿಗೆ ಲಿಪಿ ಇರಲಿಲ್ಲ. ಹೀಗಾಗಿ ಇವರ
ಕನ್ನಡ ಗ್ರಾಂಥಿಕ ಭಾಷೆ. ಕನ್ನಡದಲ್ಲಿ ಅವರು ಮಾತನಾಡಿದರೂ ಪುಸ್ತಕದ ಭಾಷೆಯ ಹಾಗೆ
ಕೇಳಿಸುತ್ತಿತ್ತು. ಈ ಸಮಸ್ಯೆ ಬೇಂದ್ರೆ, ಮಾಸ್ತಿ, ಡಿವಿಜಿ, ಪುತಿನ ಮೊದಲಾದವರಿಗೂ ಇತ್ತು.
ಮಂಗಳೂರು ಭಾಗದ ಸಾಹಿತಿಗಳು ಗ್ರಾಂಥಿಕ ಕನ್ನಡದಲ್ಲಿ ಬರೆದರೂ ಅವರು ತುಳು
ನಾಡ ಸಂಸ್ಕೃತಿಯನ್ನು ಬಿಡಲಿಲ್ಲ. ಸಾಂಸ್ಕೃತಿಕವಾದ ಅನೇಕ ಪದಗಳು ಅವರ ಸಾಹಿತ್ಯದಲ್ಲಿ
ಕಂಡು ಬರುತ್ತದೆ. ಹೀಗಾಗಿ ಧಾರವಾಡ ಭಾಗದಲ್ಲಿ ಹೇಗೆ ಆಡು ಭಾಷೆಗೆ ಹತ್ತಿರವಾದ
ಸಾಹಿತ್ಯ ಸೃಷ್ಟಿಯಾಯಿತೋ ಅಂಥ ಸಾಹಿತ್ಯ ಇಲ್ಲಿ ಸೃಷ್ಟಿಯಾಗಲಿಲ್ಲ.
ಇದರ ಹೊರತಾಗಿ ನಾಡು ನುಡಿಯ ಬಗ್ಗೆ ಇಲ್ಲಿಯ ಕವಿಗಳ ಪ್ರೀತಿ, ಕಳಕಳಿ
ಉಳಿದ ಭಾಗಗಳ ಕವಿಗಳಿಗಿಂತ ಕಡಿಮೆಯಾದುದಲ್ಲ. ರಾಷ್ಟ್ರೀಯ ಪ್ರಜ್ಞೆಯೂ ಹಾಗೆಯೇ.
ಏಕೀಕರಣದ ಬಗೆಗಿನ ತುಡಿತವೂ ಅದೇ ರೀತಿ.
ಆದರೆ ಮೈಸೂರು ಭಾಗದಲ್ಲಿ ಪರಿಸ್ಥಿತಿ ಬೇರೆಯೇ ಇದ್ದಿತ್ತು. ಅಲ್ಲಿ ಕನ್ನಡ ದೊರೆಗಳ
ಆಡಳಿತ ಇತ್ತು. ಹೀಗಾಗಿ ಕನ್ನಡ ಭಾಷೆಯು ಯಾವ ಆಪತ್ತಿಗೂ ಒಳಗಾಗಿರಲಿಲ್ಲ. ಸಾಹಿತ್ಯ
ಸೃಷ್ಟಿಗೆ ರಾಜ ಪೋಷಣೆ ಇತ್ತು. ವಿಶ್ವವಿದ್ಯಾಲಯ ಇತ್ತು. ಹೀಗಾಗಿ ಸ್ವಾತಂತ್ಯ್ರದ ಬಗೆಗಿನ
ಕಳಕಳಿ, ಏಕೀಕರಣದ ಬಗೆಗಿನ ಕೂಗು ಇವೆಲ್ಲ ತಡವಾಗಿಯೇ ಇಲ್ಲಿ ಕೇಳಿಬಂದುದು.
ಏಕೀಕರಣ ಬೇಡ ಎನ್ನುವವರೂ ಇಲ್ಲಿದ್ದರು. ರಾಜಾಶ್ರಯ ಇಲ್ಲಿದ್ದುದರಿಂದ ಒಂದು
ರೀತಿಯಲ್ಲಿ ಶಿಷ್ಟ ಭಾಷೆಯೇ ಇಲ್ಲಿ ಪ್ರಯೋಗಗೊಂಡಿತ್ತು. ಇಂಗ್ಲಿಷ್ ಗೀತೆಗಳು'
ಮೂಲಕ ಶ್ರೀಯವರು ಹೊಸ ಮಾರ್ಗವನ್ನೇ ತೆರೆದು ತೋರಿಸಿದರು. ಭಾವಗೀತೆಯ
ಹೊಸ ಪ್ರಪಂಚವನ್ನು ಇದು ಕನ್ನಡದಲ್ಲಿ ತೆರೆಯಿತು. ಕುವೆಂಪುರಂಥ ಮಹಾನ್ ಕವಿಗಳು
ಈ ದಾರಿಯಲ್ಲಿ ನಡೆದರು. ಈ ಭಾಗದಲ್ಲಿ ಸಾಹಿತ್ಯದ ಮಾರ್ಗದರ್ಶನ ಮಾಡಲು
ಪ್ರಬುದ್ಧ
ಕರ್ನಾಟಕ’ ಮತ್ತು ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ'ಗಳು ಇದ್ದವು.
ಹೀಗೆ ಆಧುನಿಕ ಕನ್ನಡ ಸಾಹಿತ್ಯವು ನವೋದಯಲ್ಲಿ ರೂಪುಪಡೆಯುತ್ತಿದ್ದಾಗ
ಕನ್ನಡನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಕ್ಕೆ
ಒಳಗಾಗಿತ್ತು. ಹಲವು ಮೂಲಗಳಿಂದ ಆಧುನಿಕ ಕನ್ನಡ ಸಾಹಿತ್ಯವು ಆರಂಭ ಘಟ್ಟದಲ್ಲಿ
ಪುಷ್ಟಿಯನ್ನು ಪಡೆದುಕೊಂಡು ಸೃಷ್ಟಿಯಾಗತೊಡಗಿತು. ಸಾಹಿತ್ಯದ ಈ ಹುಚ್ಚುಹೊಳೆಯ
ಪ್ರವಾಹವನ್ನು ಕಾಲುವೆಗಳಲ್ಲಿ ಹರಿಸಿ ಫಸಲು ಪಡೆಯುವಂಥ ಕಾರ್ಯವನ್ನು ಅಂದಿನ
ಪತ್ರಿಕೆಗಳು ಮಾಡಿದವು. ಆಧುನಿಕ ಕನ್ನಡ ಸಾಹಿತ್ಯ ಹೀಗೆಯೇ ಇರಬೇಕು ಎಂದು
ನಿರ್ದೇಶಿಸುವ ಪ್ರಯತ್ನಗಳು ನಡೆದವು. ಇಂಥ ಪ್ರಯತ್ನಗಳನ್ನು ಕೆಲವರು ವಿರೋಧಿಸಿದರು.
ಪರಸ್ಪರ ತಮ್ಮ ವಾದವನ್ನು ಪತ್ರಿಕೆಗಳ ಮೂಲಕವೇ ಮಂಡಿಸಿದರು. ಇಂಥ ವಾದಗಳ
ಆಧಾರದ ಮೇಲೆಯೇ ಆಧುನಿಕ ಕನ್ನಡ ಸಾಹಿತ್ಯ ಪಡೆದುಕೊಂಡ ತಿರುವುಗಳನ್ನು
ಗುರುತಿಸುವ ಪ್ರಯತ್ನ ಇಲ್ಲಿಯದು.
ಸಾಹಿತ್ಯ ಪ್ರೇರಣೆ ಅಂದಿನ ಜನಜೀವನದಲ್ಲಿಯೇ ಇದೆ. ಇಂಥ ಪ್ರೇರಕ
ಅಂಶಗಳನ್ನು ಪತ್ರಿಕೆಗಳು ಪ್ರತಿಪಾದಿಸಿವೆ. ಆರಂಭದ ಘಟ್ಟದಲ್ಲಿ ರಾಜಕೀಯವಾಗಿ ಹರಿದು
ಹಂಚಿಹೋದ ಕನ್ನಡ ನಾಡಿನ ಬಗ್ಗೆ ಇರುವ ಕಳಕಳಿಯನ್ನು ನಾವು ಗುರುತಿಸುತ್ತೇವೆ. ಇದನ್ನು
ಪತ್ರಿಕೆಗಳು ಬಲವಾಗಿ ಮಂಡಿಸಿದಾಗ ಅದು ಸಾಹಿತ್ಯದ ವಸ್ತುವೂ ಆಯಿತು. ಇದೇ ಮುಂದೆ
ಕರ್ನಾಟಕ ಏಕೀಕರಣ ಚಳುವಳಿಯಾಗಿ ರೂಪು ತಳೆದು ವಿಶಾಲ ಮೈಸೂರು ರಾಜ್ಯದ
ರಚನೆಯಲ್ಲಿ ಕೊನೆಗೊಳ್ಳುತ್ತದೆ. ಇದರ ಜೊತೆಯಲ್ಲಿ ರಾಷ್ಟ್ರವು ಸ್ವಾತಂತ್ಯ್ರವನ್ನು
ಪಡೆಯಬೇಕು, ಪಾರತಂತ್ಯ್ರದ ಬೇಡಿ ಕಳಚಬೇಕು ಎಂಬ ಅಭಿಪ್ರಾಯವನ್ನು
ಮೂಡಿಸಿದಾಗ ಅದೂ ಸಾಹಿತ್ಯದ ವಸ್ತುವಾಯಿತು. ಜೊತೆಯಲ್ಲಿ ಸಾಮಾಜಿಕ ಸುಧಾರಣೆಯ
ಕಳಕಳಿ, ಗಾಂಧೀಜಿಯ ಹರಿಜನೋದ್ಧಾರ ಮೊದಲಾದವು ಸಾಹಿತ್ಯದ ವಸ್ತುವಾದವು. ಹೀಗೆ
ಸಾಹಿತ್ಯವು ತನ್ನ ವಸ್ತುವನ್ನು ಆರಿಸಿಕೊಳ್ಳುವುದಕ್ಕೆ ಪತ್ರಿಕೆಗಳು ವಿಷಯವನ್ನು ಒದಗಿಸಿದ್ದನ್ನೂ
ನಾವು ಕಾಣುತ್ತೇವೆ. ನಾಡಿನ ಏಕೀಕರಣ, ನುಡಿಯ ಬೆಳವಣಿಗೆಯ ಕಾಳಜಿ
ಪ್ರತಿಪಾದನೆಯಾದಾಗ ಅವುಗಳಿಗೆ ಪ್ರತಿಭಟನೆ ಅಥವಾ ಪ್ರತಿಕ್ರಿಯಾತ್ಮಕ ಬರವಣಿಗೆ ಕಂಡು
ಬಂದಿಲ್ಲ. ಆದರೆ ಸಮಾಜ ಸುಧಾರಣೆಯ ಬಗ್ಗೆ ಪ್ರತಿಪಾದನೆಯಾದಾಗ ಅದಕ್ಕೆ ವಿರುದ್ಧ
ಅಭಿಪ್ರಾಯ ಲೇಖನಗಳ ರೂಪದಲ್ಲಿಯೂ ಸಾಹಿತ್ಯ ಕೃತಿಗಳ ರೂಪದಲ್ಲಿಯೂ
ವ್ಯಕ್ತವಾಗಿದ್ದನ್ನು ಈಗಾಗಲೇ ಗಮನಿಸಿದ್ದೇವೆ. ಗುಲ್ವಾಡಿಯವರ
ಇಂದಿರಾಬಾಯಿ’ಗೆ
ಪ್ರತಿಕ್ರಿಯಾತ್ಮಕವಾಗಿಯೇ ಕೆರೂರರ ಇಂದಿರಾ' ಬಂದದ್ದು ಎಂಬುದನ್ನು ಗಮನಿಸಬೇಕು.
ಒಂದು ಭಾಷೆಯ ಸಾಹಿತ್ಯವು ಪುಷ್ಟಗೊಳ್ಳುವುದಕ್ಕೆ ಅನುವಾದಗಳೂ ನೆರವಾಗುತ್ತವೆ.
ಅನುವಾದ ಕನ್ನಡ ಸಾಹಿತಿಗಳಿಗೆ ಹೊಸದೇನಲ್ಲ. ಆದಿ ಕವಿ ಪಂಪನೂ ಒಬ್ಬ ಅನುವಾದಕನೇ.
ಸಂಸ್ಕೃತದಿಂದ ಪ್ರಾಕೃತದಿಂದ ಪ್ರಾಚೀನ ಕನ್ನಡದಲ್ಲಿಯೇ ಗ್ರಂಥಗಳನ್ನು ಅನುವಾದಿಸಿಯೋ
ರೂಪಾಂತರಿಸಿಯೋ ಬರೆಯಲಾಗಿದೆ. ಅವೆಲ್ಲ ಭಾರತೀಯ ಸಾಂಸ್ಕೃತಿಕ ಪರಿಸರದಲ್ಲಿಯೇ
ಸೃಷ್ಟಿಯಾದವು ಹಾಗೂ ಅನುವಾದ, ರೂಪಾಂತರಗೊಂಡವು. ಆದರೆ ಆಧುನಿಕರ ಸಮಸ್ಯೆ
ಬೇರೆಯೇ ಆದುದು. ಆಧುನಿಕ ಕನ್ನಡ ಸಾಹಿತ್ಯದ ಪ್ರೇರಣೆ ಇಂಗ್ಲಿಷಿನಲ್ಲಿತ್ತು. ಇಂಗ್ಲಿಷ್
ವಿದ್ಯಾಭ್ಯಾಸ ಮಾಡಿದ ಕೆಲವರು ಆ ಭಾಷೆಯ ಕಾವ್ಯ, ನಾಟಕ, ಕಾದಂಬರಿಗಳನ್ನು
ಅನುವಾದಿಸಿದರು. ಪಾಶ್ಚಾತ್ಯ ಸಂಸ್ಕೃತಿಯ ಕೃತಿಯೊಂದನ್ನು ಭಾರತೀಯ ಸಂಸ್ಕೃತಿಯಲ್ಲಿ
ಪುನರ್ ಸೃಷ್ಟಿಮಾಡುವಾಗ ಕೆಲವು ವಿಶಿಷ್ಟ ಸಮಸ್ಯೆಗಳು ತಲೆದೋರಿದವು. ಹೀಗಾಗಿ
ಭಾಷಾಂತರ ಹೇಗಿರಬೇಕು ಎಂಬ ಬಗ್ಗೆ ಸಿದ್ಧಾಂತಪರವಾದ ಚರ್ಚೆಯು
ಆರಂಭಕಾಲದಲ್ಲಿಯೇ ನಡೆದದ್ದು ಮಹತ್ವಪೂರ್ಣವಾದ ಅಂಶ. ಇಂಥ ಚರ್ಚೆಗಳೇ ಕನ್ನಡ
ಸಾಹಿತ್ಯದಲ್ಲಿ ಭಾಷಾಂತರ ಮಾರ್ಗವನ್ನು ನಿರ್ಧರಿಸಿದವು.
ಹಳೆಯ ಮಾದರಿಯಲ್ಲಿ ಮಹಾಕಾವ್ಯವನ್ನು ಬರೆಯುವುದು ಆಧುನಿಕ
ಸಂವೇದನೆಯವರಿಗೆ ಬೇಡವಾಯಿತು. ಅವರು ಇಂಗ್ಲಿಷ್ ಕವಿತೆಯ ಪ್ರಭಾವಕ್ಕೆ ಒಳಗಾಗಿ,
ಹಳೆಯ ಛಂದಸ್ಸಿನಲ್ಲಿಯೇ ಹೊಸ ಕವಿತೆಗಳನ್ನು ಬರೆದರು.
ಆಂಗ್ಲ ಕವಿತಾವಳಿ’, ಇಂಗ್ಲಿಷ್
ಗೀತಗಳು' ಇವಕ್ಕೂ ಪೂರ್ವದಲ್ಲಿಯೇ ಆ ಕಾಲದ ಪತ್ರಿಕೆಗಳಲ್ಲಿ ಇಂಥ ಕವಿತೆಗಳು
ಪ್ರಕಟಗೊಂಡಿವೆ. ಹಳೆಯ ಛಂದಸ್ಸಾದರೂ ಆಧುನಿಕ ಮನಸ್ಸು ಅಲ್ಲಿತ್ತು. ಹೀಗೆ ಹೊಸ
ಕಾವ್ಯ ಬರುತ್ತಿದ್ದಾಗ ಹಳೆಯ ಛಂದಸ್ಸಿಗೇ ಜೋತುಬೀಳಬೇಕೆ? ಕನಿಷ್ಠ ಪದ್ಯ ರಚನೆಗೆ
ತ್ರಾಸದಾಯಕವಾದ ಪ್ರಾಸವನ್ನು ಬಿಡಬಾರದೆ? ಎಂಬ ಚರ್ಚೆ ನಡೆದದ್ದು ಮಹತ್ವದ
ಅಂಶ. ಗೋವಿಂದ ಪೈಗಳು, ಅವರ ಹಾಗೆಯೇ ಚಿಂತಿಸುವ ಇತರರು ಪ್ರಾಸತ್ಯಾಗವನ್ನು
ಮಾಡಿ ಪದ್ಯಗಳನ್ನು ರಚಿಸಿದರು. ಅಂದಿನ ಪತ್ರಿಕೆಗಳು ಪ್ರಾಸ ತ್ಯಾಗ ಮಾಡಿದ ಹಾಗೂ
ಪ್ರಾಸ ಸಹಿತ ಇರುವ ಪದ್ಯಗಳೆರಡನ್ನೂ ಪ್ರಕಟಿಸಿ ಪ್ರಾಸ ರಹಿತ ಪದ್ಯ ರಚನೆಗೆ ಮಾರ್ಗ
ತೆರೆದವು. ಪ್ರಾಸ ಬೇಕೆ? ಬೇಡವೆ? ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಇಂಥ
ಚರ್ಚೆಗೆ ವೇದಿಕೆ ಒದಗಿಸುವ ಮೂಲಕ ಕನ್ನಡ ಸಾಹಿತ್ಯ ಹೊಸ ತಿರುವು ಪಡೆಯುವಲ್ಲಿ
ಪತ್ರಿಕೆಗಳು ಜವಾಬ್ದಾರಿಯುತ ಕಾರ್ಯ ನಿರ್ವಹಿಸಿದವು.
ಕನ್ನಡ ಭಾವಗೀತೆಯ ಪ್ರಕಾರ ಒಂದೇ ರೀತಿಯಲ್ಲಿ ಹರಿದು ಬರುತ್ತಿರುವಾಗ
ಪ್ರಗತಿಶೀಲ ಸಂವೇದನೆಯವರಿಗೆ, ತನ್ನ ಸುತ್ತಲಿನ ಸಮಾಜವನ್ನು ನಿರ್ಲಕ್ಷಿಸಿ ಇಂದ್ರ,
ಚಂದ್ರರು, ಗಿಳಿ ಕೋಗಿಲೆಗಳ ಮೇಲೆ ಕಾವ್ಯ ಬರೆಯುವುದು ನಿರರ್ಥಕವೆನ್ನಿಸಿ ಅದನ್ನು
ಪ್ರತಿಭಟಿಸಿದರು. ಹೀಗೆ
ಪ್ರಗತಿಶೀಲ’ ಸಾಹಿತ್ಯವು ಆ ಪ್ರಕಾರದ ನಿಲುವನ್ನು
ಮಂಡಿಸುತ್ತಲೇ, ತನ್ನ ಹಿಂದಿನ ಸಾಹಿತ್ಯ ಮಾರ್ಗದಲ್ಲಿಯ ಕೊರತೆಯೇನು ಎಂಬುದನ್ನು
ಪಟ್ಟಿ ಮಾಡಿತು. ಇಂಥ ಖಂಡನೆ ಮಂಡನೆಗಳ ಮೂಲಕವೇ ಪ್ರಗತಿಶೀಲ ಸಾಹಿತ್ಯ ತನ್ನ
ಕವಲನ್ನು ಬೆಳೆಸಲು ಸಾಧ್ಯವಾಯಿತು.
ನವ್ಯ'ದವರೂ ತಮ್ಮ ಸಾಹಿತ್ಯ ಪಂಥವನ್ನು ಪ್ರತಿಪಾದಿಸಿದ್ದು ಮತ್ತು ಗಟ್ಟಿಗೊಳಿಸಿದ್ದು
ಪತ್ರಿಕೆಗಳ ಮೂಲಕವೇ. ಆಗ ಪತ್ರಿಕೆಗಳಲ್ಲಿ ಮಂಡನೆಯಾದ
ನವ್ಯ’ ಮೀಮಾಂಸೆ,
ವಿಮರ್ಶೆಗಳು ಅನೇಕ ಕವಿಗಳು ಈ ಮಾರ್ಗದಲ್ಲಿ ಹೆಜ್ಜೆ ಇಡಲು ಪ್ರೇರಣೆ ನೀಡಿದವು.
ಪ್ರಗತಿಶೀಲ, ನವ್ಯ, ನವ್ಯೋತ್ತರ ಸಾಹಿತ್ಯ ಮಾರ್ಗಕ್ಕಿಂತ ನವೋದಯ ಸಾಹಿತ್ಯ
ಮಾರ್ಗದ ಸಮಸ್ಯೆ ಬೇರೆಯೇ ರೀತಿಯದಾಗಿತ್ತು. ಪಾಶ್ಚಾತ್ಯ ಪ್ರಭಾವದಿಂದ ಆಧುನಿಕ
ಕನ್ನಡದಲ್ಲಿ ಸಾಹಿತ್ಯವು ಹತ್ತು ಹಲವು ರೂಪಗಳನ್ನು ಪಡೆದುಕೊಳ್ಳತೊಡಗಿತ್ತು. ಪಾಶ್ಚಾತ್ಯ
ರೂಪವನ್ನು ಕನ್ನಡದ ಸಂದರ್ಭದಲ್ಲಿ ಸಂವಾದಿಯಾಗಿಸುವುದು ಹೇಗೆ? ಈ ಸಮಸ್ಯೆ ನಂತರದ
ಸಾಹಿತ್ಯ ಚಳುವಳಿಗಳಿಗೆ ಇರಲಿಲ್ಲ. ಸಾಹಿತ್ಯದ ವಸ್ತು, ರೂಪ, ಭಾಷೆ ಎಲ್ಲವನ್ನೂ
ನವೋದಯದವರು ಸೃಷ್ಟಿಸಿಕೊಳ್ಳಬೇಕಿತ್ತು. ಹಳೆಯ ಸಾಹಿತ್ಯದಲ್ಲಿ ಇಲ್ಲದ ಹೊಸ ರೂಪಗಳಿಗೆ
ಹೆಸರು ಕೊಡುವುದೂ ಇದರಲ್ಲಿ ಸೇರಿತ್ತು. ಕಾದಂಬರಿ' ಸಂದರ್ಭದಲ್ಲಿ ನಡೆದ ಚರ್ಚೆಯನ್ನು ಈಗಾಗಲೆ ಗಮನಿಸಲಾಗಿದೆ. ಇಲ್ಲಿ ಗಮನಿಸಬೇಕಾಗಿರುವ ಇನ್ನೊಂದು ಅಂಶವೆಂದರೆ ನವೋದಯ ಸಾಹಿತ್ಯ ಮಾರ್ಗಕ್ಕೆ ಟೀಕೆಗಳು ಮತ್ತು ಖಂಡನೆಗಳು ಬಂದದ್ದು ಪ್ರಗತಿಶೀಲ, ನವ್ಯ ಮಾರ್ಗಗಳು ತೆರೆದುಕೊಳ್ಳುವ ಸಂದರ್ಭದಲ್ಲಿ. ಪ್ರಗತಿಶೀಲರು ತಮ್ಮ ಪಂಥವನ್ನು ಸ್ಥಾಪಿಸುವಾಗ ತಮಗಿಂತ ಹಿಂದಿನ ಸಂಪ್ರದಾಯವನ್ನು ಖಂಡಿಸಿದರು. ತಮಗಿಂತ ಹಿಂದಿನ ಪಂಥಕ್ಕಿಂತ ತಮ್ಮದು ಹೇಗೆ ಭಿನ್ನ ಎಂಬುದನ್ನು ಅವರು ಸ್ಪಷ್ಟಪಡಿಸಬೇಕಿತ್ತು. ಹಾಗೆ ನೋಡಿದರೆ ನವೋದಯದವರು ತಮ್ಮ ಸಾಹಿತ್ಯ ಮಾರ್ಗಕ್ಕೆ ಯಾವುದೇ ಹೆಸರನ್ನು ಕೊಟ್ಟಿರಲಿಲ್ಲ. ಈ ನಾಮಕರಣ ನಡೆದದ್ದು ಪ್ರಗತಿಶೀಲ, ನವ್ಯ ಸಂದರ್ಭದಲ್ಲಿಯೇ. ಪ್ರಗತಿಶೀಲರು ತಮ್ಮದು ಪ್ರಗತಿಶೀಲ ಎಂದು ಹೇಳಿಕೊಳ್ಳುವಾಗ ತಮಗಿಂತ ಹಿಂದಿನದು ಹೇಗೆ ಪ್ರಗತಿಶೀಲ ಅಲ್ಲ ಎನ್ನುವುದನ್ನು ಹೇಳುತ್ತ ಸಾಹಿತ್ಯ ಏಕೆ ಪ್ರಗತಿಶೀಲವಾಗಿರಬೇಕು ಎನ್ನುವುದನ್ನು ವಿವರಿಸಲು ಯತ್ನಿಸಿದರು. ನವ್ಯದವರೂ ಹಾಗೆಯೇ. ಬಂಡಾಯದವರೂ ಸಾಹಿತ್ಯದಲ್ಲಿ ಬಂಡಾಯ ಮನೋಧರ್ಮ ಏಕಿರಬೇಕು ಎನ್ನುವುದನ್ನು ವಿವರಿಸುತ್ತ ತಮಗಿಂತ ಹಿಂದಿನ ಸಾಹಿತ್ಯದಲ್ಲಿ ಏನಿರಲಿಲ್ಲ ಎನ್ನುವುದನ್ನು ಸಿದ್ಧಾಂತಪರವಾಗಿ ಮಂಡಿಸಿದರು. ಇಂಥ ಸಿದ್ಧಾಂತಗಳ ಮಂಡನೆ, ಖಂಡನೆಗಳು ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಿರ್ದಿಷ್ಟವಾದ ಪರಿಣಾಮಗಳನ್ನು ಉಂಟುಮಾಡಿವೆ. ಈಗಾಗಲೇ ಸಿದ್ಧ ಹೆಸರುಗಳನ್ನು ಪಡೆದಿರುವ ಸಾಹಿತ್ಯ ಪಂಥಗಳ ಶೀರ್ಷಿಕೆಯಲ್ಲಿಯೇ ಬದಲಾವಣೆಗೆ ಕಾರಣವಾದ ಅಂಶಗಳನ್ನು ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ನವೋದಯದ ಒಟ್ಟೂ ಪ್ರಜ್ಞೆ ನಾಡು-ನುಡಿ, ರಾಷ್ಟ್ರ, ಸಮಾಜ ಹಾಗೂ ಧರ್ಮದ ಬಗೆಗಿನ ಕಾಳಜಿಯಲ್ಲಿ ವ್ಯಕ್ತವಾಗಿದೆ. ಈ ಅಂಶಗಳೇ ನವೋದಯ ಸಾಹಿತಿಗಳ ಪ್ರಜ್ಞೆಯನ್ನು ನಿಯಂತ್ರಿಸಿದ್ದು. ಇಂಥ ಒಂದು ಪ್ರಜ್ಞೆ ರೂಪುಪಡೆಯುವುದಕ್ಕೆ ಅಂದಿನ ಸಮಾಜ ವ್ಯವಸ್ಥೆಯೇ ಕಾರಣ. ಜನಮನವನ್ನು ಸಮರ್ಥವಾಗಿ ಪ್ರತಿಪಾದಿಸಿದ್ದು ಅಂದಿನ ಪತ್ರಿಕೆಗಳೇ. ಈ ಮೂಲಕ ಪತ್ರಿಕೆಗಳು ಸಾಹಿತ್ಯ ಪ್ರವಾಹ ಹೀಗೆಯೇ ಹರಿಯಬೇಕು ಎಂದು ನಿರ್ದೇಶಿಸಿದವು. ನಾಡು ನುಡಿ: ನವೋದಯ ಸಾಹಿತಿಗಳಿಗೆ
ನಾಡು ನುಡಿ’ ತಾವು ಧಾರಣ
ಮಾಡಲೇಬೇಕಾದ ಕನ್ನಡ ಧರ್ಮ'ವಾಯಿತು. ನಾಡು ಮತ್ತು ನುಡಿಯನ್ನು ಅವರು ಒಟ್ಟೊಟ್ಟಿಗೇ ಗ್ರಹಿಸುತ್ತಾರೆ. ನಾಡಿಲ್ಲದೆ ನುಡಿಯಿಲ್ಲ; ನುಡಿಯಿಲ್ಲದೆ ನಾಡಿಲ್ಲ. ಇಂಥ ಪ್ರಜ್ಞೆಯೇ ಮುಂದೆ ಸ್ವಾತಂತ್ಯ್ರೋತ್ತರದಲ್ಲಿ ಭಾಷಾವಾರು ರಾಜ್ಯಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಈ ಭಾವನೆ ಬಲಗೊಳ್ಳಲು ಆ ಸಂದರ್ಭದ ರಾಜಕೀಯ, ಸಾಮಾಜಿಕ ಅಂಶಗಳೂ ಕಾರಣವಾದವು. ಬ್ರಿಟಿಷ್ ಆಡಳಿತವು ಬಂಗಾಳವನ್ನು ವಿಭಜಿಸಿದ್ದರಿಂದ ಒಂದು ಭಾಷೆಯನ್ನು ಆಡುವ ಜನರಿರುವ ಪ್ರದೇಶ ಒಂದು ಆಡಳಿತದಲ್ಲಿ ಇರಬೇಕು ಎಂಬ ಭಾವನೆ ಬೆಳೆಯುವುದಕ್ಕೆ ಕಾರಣವಾಯಿತು. ಇದಕ್ಕಿಂತ ಮೊದಲು ಕನ್ನಡ ನಾಡು ಬೇರೆಬೇರೆ ಆಡಳಿತದಲ್ಲಿ ಸೇರಿರುವ ಬಗ್ಗೆ ಅತೃಪ್ತಿ, ಅಸಮಾಧಾನ, ಹತಾಶೆ ವ್ಯಕ್ತವಾದುದನ್ನು ಗಮನಿಸಿದ್ದೇವೆ. ಆದರೆ ಈ ಬೇರೆಬೇರೆ ಆಡಳಿತದಲ್ಲಿದ್ದ ಪ್ರದೇಶಗಳು ಒಟ್ಟಿಗೆ ಸೇರಬೇಕು ಎಂಬ ಭಾವನೆ ಬಲಗೊಳ್ಳುವಂತೆ ಆಗಿದ್ದು ಬಂಗಾಲ ವಿಭಜನೆಯಿಂದ. ನಾಡಿನ ಜೊತೆಯಲ್ಲಿಯೇ ನುಡಿಯ ಬಗೆಗಿನ ಕಾಳಜಿಯನ್ನೂ ನಾವು ಗಮನಿಸಿದ್ದೇವೆ. ಅದು ಈ ಅವಧಿಯಲ್ಲಿಯೂ ಮುಂದುವರಿಯಿತು. ೧೯೦೭ರ ನವೆಂಬರ್ ತಿಂಗಳ
ಶ್ರೀಕೃಷ್ಣ ಸೂಕ್ತಿ’ಯಲ್ಲಿ ನಮ್ಮ ದೇಶ ಭಾಷೆಯ
ಈಗಿನ ದುಸ್ಥಿತಿಯನ್ನು ಎಂ.ಡಿ. ಅಳಸಿಂಗಾಚಾರ್ಯರು ಮನಮುಟ್ಟುವ ಹಾಗೆ
ವಿವರಿಸಿದ್ದಾರೆ. ಒಂದೆರಡು `ಇಂಗ್ಲಿಷು' ಶಬ್ದಗಳನ್ನು ತಿಳಿದುಕೊಂಡ ಚಿಕ್ಕ ಹುಡುಗರು ಕೂಡ, ತಾವು ಮಾತನಾಡುವಾಗ, ತಮಗೆ ತಿಳಿದಿರುವಷ್ಟು ಪದಗಳನ್ನು ಸೇರಿಸಿ ಆಡುವುದಕ್ಕೆ ಪ್ರಯತ್ನಿಸುವರು. ನಮ್ಮ ಭಾಷೆಯನ್ನು ಆಡುವುದು ಕೂಡ ಅವಮಾನಕರವೆಂದು ಕೆಲವರ ಮನಸ್ಸಿನಲ್ಲಿ ಭಾವವಿರುವುದು'' ಎಂದು ವ್ಯಥೆಯಿಂದ ಹೇಳುವರು. ಒಂದು ಭಾಷೆಯಲ್ಲಿ ನ್ಯೂನತೆ ಕಂಡು ಬಂದರೆ ಅದು ಆಯಾ ಜನಗಳ ನ್ಯೂನತೆಯೇ ಹೊರತು ಬೇರೆಯಲ್ಲ ಎಂದು ಎಚ್ಚರಿಸುವರು. ಇದರಿಂದ ತಮ್ಮ ಭಾಷೆಯನ್ನು ಅಪ್ರಯೋಜಕವೆಂದು ತಿರಸ್ಕರಿಸಿ ಅನಾದರಿಸುವವರು, ತಮ್ಮನ್ನು ತಾವೇ ಅಪ್ರಯೋಜಕರು ಎಂದಂತೆ ಅಲ್ಲವೆ? ಎಂದು ಪ್ರಶ್ನಿಸುವರು. ಅಳಸಿಂಗಾಚಾರ್ಯರ ಈ ಕಳಕಳಿಯ ಮಾತುಗಳು ಕೆಲವರನ್ನಾದರೂ ಪ್ರಚೋದಿಸಿದ್ದರೆ ಅದು ಭಾಷೆಗೆ ದೊಡ್ಡ ಕೊಡುಗೆಯೇ ಆಗಬಹುದು. ಸಾಹಿತ್ಯದ ಸಾಧನವಾದ ಭಾಷೆಯು ಕೆಲವೊಮ್ಮೆ ಅದೇ ಭಾಷಿಕರಿಂದಲೇ ಅವಜ್ಞೆಗೆ ಈಡಾದಾಗ ಸಾಹಿತ್ಯಪತ್ರಿಕೆಗಳು ಎಚ್ಚರಿಸಿವೆ. ಇದೇ ಅಭಿಪ್ರಾಯಗಳು ಆ ಕಾಲದ ಸಾಹಿತ್ಯ ಕೃತಿಗಳಲ್ಲಿಯೂ ವ್ಯಕ್ತವಾಗಿದೆ. ಮಂಗಳೂರು ಭಾಗದಲ್ಲಿ ಈ ಭಾಷಿಕ ಕಾಳಜಿ ಇಂಗ್ಲಿಷ್ ವಿರುದ್ಧವಿದ್ದರೆ, ಧಾರವಾಡ ಭಾಗದಲ್ಲಿ ಇದು ಇಂಗ್ಲಿಷ್ ಜೊತೆಯಲ್ಲಿ ಮರಾಠಿಯ ವಿರುದ್ಧ ವ್ಯಕ್ತವಾಗಿದೆ. ಮೈಸೂರು ಭಾಗದಲ್ಲಿ ಇದು ಪಾರಸಿಕ ಭಾಷೆಯ ವಿರುದ್ಧವಿದೆ. ಎಂ.ಎಸ್.ಪುಟ್ಟಣ್ಣನವರ `ಮುಸುಕು ತೆಗೆಯೇ ಮಾಯಾಂಗನೆ' ಕಾದಂಬರಿಯಲ್ಲಿ ಮೈಸೂರು ಅರಮನೆಯ ಆಡಳಿತದ ಚಿತ್ರಣಕೊಡುವಾಗ ಈ ಪಾರಸಿಕ ಭಾಷೆಯ ಬಗೆಗಿದ್ದ ಅಸಹನೆ ವ್ಯಕ್ತವಾಗಿದೆ. ೧೯೦೮ರಲ್ಲಿ ಪ್ರಕಟವಾದ ಕೆರೂರು ವಾಸುದೇವರಾಯರ `ಇಂದಿರಾ' ಕಾದಂಬರಿಯಲ್ಲಿ ಕನ್ನಡ ನುಡಿಯ ಬೆಳವಣಿಗೆಯ ವಿಚಾರದಲ್ಲಿ ಕೆಲವು ನಿರ್ದಿಷ್ಟ ವಿಚಾರಗಳನ್ನು ವ್ಯಕ್ತಪಡಿಸಲಾಗಿದೆ. ಕೆರೂರರು `ರಾಜಹಂಸ' ಪತ್ರಿಕೆಯ ಸಂಪಾದಕರೂ ಹೌದು. ಈ ಪತ್ರಿಕೆ `ಪ್ರಾಸ' ತ್ಯಾಗದ ವಿಚಾರದಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ಸಾಹಿತ್ಯಕ ವಿಚಾರಗಳಲ್ಲಿ ಅದರ ಅಭಿಪ್ರಾಯಗಳಿಗೆ ಮಾನ್ಯತೆ ಇತ್ತು. `ರಾಜಹಂಸ'ದಲ್ಲಿ ಪ್ರತಿಪಾದಿಸಿದ ವಿಚಾರಗಳನ್ನೇ ಕೆರೂರರು ತಮ್ಮ ಕಾದಂಬರಿಯ ಪಾತ್ರಗಳ ಮೂಲಕವೂ ವ್ಯಕ್ತಪಡಿಸಿದ್ದಾರೆ. ಕಾದಂಬರಿಯ `ವಿಜ್ಞಾಪನೆ'ಯಲ್ಲಿ ಅವರು,
ದಕ್ಪಿಣ ಕರ್ನಾಟಕದ ಕನ್ನಡಕ್ಕೂ
ಉತ್ತರ ಕರ್ನಾಟಕದ ಕನ್ನಡಕ್ಕೂ ಹೆಚ್ಚು ಕಡಿಮೆ ಅದೆ. ಎರಡೂ ಪ್ರಾಂತಗಳ ಭಾಷೆಯನ್ನು
ಒಂದಾಗಿ ಮಾಡುವುದಕ್ಕೆ ಅವಶ್ಯವಾಗಿ ಎಷ್ಟೋ ಕಾಲ ಹೋಗಬೇಕು. ಸದ್ಯಕ್ಕೆ ಕೆಲವು
ಶಬ್ದಗಳಾಗಲಿ ಪ್ರಯೋಗಗಳಾಗಲಿ ನಮಗೂ ಮೈಸೂರು ಪ್ರಾಂತ ನಿವಾಸಿಗಳಿಗೂ
ಪರಸ್ಪರರಿಗೆ ತಪ್ಪಾಗಿ ಕಂಡರೂ ಕಾಲಾಂತರದಿಂದ ಉಭಯತರಿಗೂ
ಗ್ರಾಹ್ಯವಾಗಬಹುದೆಂದು ನಂಬಿ ಇಂಥ ಶಬ್ದ ಪ್ರಯೋಗಗಳ ಸಮಾವೇಶವನ್ನು ತಕ್ಕಮಟ್ಟಿಗೆ
ಈ ಪುಸ್ತಕದಲ್ಲಿ ಮಾಡಿದೆ” ಎಂದು ಹೇಳುವರು. ಇದರ ಹಿಂದಿನ ಕಾರಣ ಕನ್ನಡ ನಾಡು
ಒಂದೇ ಆಡಳಿತದಲ್ಲಿ ಇಲ್ಲದಿರುವುದು. ಜನರ ನಡುವೆ ಸಂಪರ್ಕದ ಕೊರತೆ ಇರುವುದು.
ಪುರಾಣಮಿತ್ಯೇವ ನ ಸಾಧು ಸರ್ವಂ- ಎಂಬ ಪದದ ಭಾಷಾಂತರವು `ಪ್ರವೇಶಮಲ್ತೈ ಪಳದಂದಯಲ್ಲಂ' ಎಂತಾಗಲು ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಸುಖವನು ಗಳಿಸಿಕೊಂಡರೆ ಸಾಲದೆ ಸಂಸ್ಕೃತದಲ್ಲಿನ್ನೇನು? ಎಂಬ ಅಭಿಮಾನಯುಕ್ತವಾದ ಉಕ್ತಿಗೆ ಅರದಾಳವೇ ಹತ್ತಿದಂತಾಗುತ್ತದಲ್ಲ! ಮೇಲೆ ತೋರಿಸಿದ ಉದಾಹರಣೆಯಲ್ಲಿ ಸಂಸ್ಕೃತವನ್ನು ಹಿಡುಕೊಂಡು ಕನ್ನಡದ ಅರ್ಥಮಾಡಬೇಕಾಗಿರುವದು'' ಎಂದು ಹೇಳುವ ಕೆರೂರರು ಭಾಷೆ ಲಲಿತವಾಗಿರಬೇಕು ಎಂಬ ಕಡೆಗೆ ಗಮನ ಸೆಳೆಯುವರು. ಸಾಹಿತ್ಯಕ್ಕೆ ಬಳಕೆಯಾಗುವ ಭಾಷೆ ಎಂಥದಿರಬೇಕು ಎಂಬ ಬಗ್ಗೆ ಆ ಕಾಲದ ಪತ್ರಿಕೆಗಳಲ್ಲಿ ವ್ಯಕ್ತಗೊಂಡ ಅಭಿಪ್ರಾಯಗಳು ಇಲ್ಲಿ ಪ್ರತಿಫಲಿಸಿರುವುದನ್ನು ಕಾಣಬಹುದು. `ಇಂದಿರಾ'ದ ಒಡಲೊಳಗಿನಿಂದ ಈ ಭಾಗವನ್ನು ನೋಡಬೇಕು: `ಮೃಚ್ಛ ಕಟಕ' ನಾಟಕ ಪ್ರದರ್ಶನದ ಬಗ್ಗೆ ನಡೆದ ಚರ್ಚೆಯ ಭಾಗ ಇದು- `ಏನು ಮಣ್ಣೋ, ಕೃಷ್ಣಮಾಚಾರ್ಯರ ಮೃತ್ಶಕಟದಲ್ಲಿಯ ಕನ್ನಡ ಅಕ್ಷರಗಳ ಗುರುತು ಮಾತ್ರ ಹತ್ತಿತು. ಅದರರ್ಥವು ಬರೆದವರೊಬ್ಬರಿಗೇ ತಿಳಿದರೆ ಸೈ. ಅನ್ಯರ ಪಾಡೇನು? ಆ ಅಪ್ರತಿಮ ಗ್ರಂಥದ ಅರ್ಥ ಮಾಡುವುದಕ್ಕಾಗಿ ಮೂಲ ಸಂಸ್ಕೃತ ನಾಟಕವನ್ನು ಹಿಡುಕೊಂಡು ಅಕ್ಷರಾಕ್ಷರಕ್ಕೆ ತಲೆಯೊಡಕೊಂಡು ಪಂಡಿತರು ಮಣ್ಣು ಮುಕ್ಕಿಹೋದರು. ನಮ್ಮ ಆಚಾರ್ಯರಂಥವರು ಇನ್ನೂ ಹತ್ತು ಜನರು ಕೂಡಿ ಕನ್ನಡ ಭಾಷೆಯನ್ನು ಪರಿಶೋಧಿಸಿ ಬಿಟ್ಟರೆ, ಈ ಭಾಷೆಯು ಬರುವ ಹತ್ತು ವರ್ಷಗಳಲ್ಲಿ ಇತ್ತೋ ಇಲ್ಲವೋ ಎಂಬುದಾಗಿ ಹೋಗಲಿಕ್ಕೆ ಸಂದೇಹವಿಲ್ಲ. ಧಾರವಾಡ ದೇಶದಲ್ಲಿ ಕೂಡಾ ಕೆಲವು ಪಂಡಿತರು `ಅಳಲೀ ಭಕ್ತಿ' ಎಂಬ ನ್ಯಾಯದಿಂದ ತಮ್ಮ ಕೈಲಾದ ಮಟ್ಟಿಗೆ ಈ ಮಹತ್ಕಾರ್ಯಕ್ಕೆ ನೆರವಾಗುತ್ತಿರುವರೆಂದು `ರಾಜಹಂಸವು' ಹೇಳುತ್ತದೆ.'' (ಇಂದಿರಾ- ಪುಟ ೮೧). ಕೆರೂರರು ಇಲ್ಲಿ ಭಾಷೆಯು ಜನರಿಂದ ದೂರವಾದರೆ ಅದಕ್ಕೊದಗುವ ಅಪಾಯದ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಸಂಕ್ರಮಣ ಕಾಲದಲ್ಲಿ ಇಂಥ ಎಚ್ಚರ ಅಗತ್ಯವಾಗಿಯೇ ಇತ್ತು. ಆ ಕೆಲಸವನ್ನು `ರಾಜಹಂಸ' ಕೂಡ ಮಾಡುತ್ತಿತ್ತು ಎಂಬ ವಿಚಾರ ಇಲ್ಲಿಂದ ತಿಳಿದು ಬರುತ್ತದೆ. ಸಾಹಿತ್ಯದ ಭಾಷೆ ಹಳಗನ್ನಡವೇ ಹೊಸಗನ್ನಡವೇ ಎಂಬ ಮುದ್ದಣನ ದ್ವಂದ್ವ ಆ ಕಾಲದ ಎಲ್ಲ ಸಾಹಿತಿಗಳಲ್ಲೂ ಇದ್ದಿತ್ತು. ಇಂಥ ದ್ವಂದ್ವಕ್ಕೆ ಕೊನೆಯ ಮಾತು ಎನ್ನುವಂಥ ಚರ್ಚೆ ಕೂಡ `ಇಂದಿರಾ'ದಲ್ಲಿ ಬಂದಿದೆ.
ಮಹಾರಾಷ್ಟ್ರ ಗ್ರಂಥ ಸಂಗ್ರಹವು ದೊಡ್ಡದಿದ್ದು ಆ ಭಾಷೆಯಾದರೂ ಬಹು
ಸೌಕರ್ಯವುಳ್ಳದ್ದೂ ಸುರಸವಾದದ್ದೂ ಇರುವುದು. ಕನ್ನಡವು ಕಾಡು ಜನರ ಭಾಷೆಯೇ
ಸರಿ. ವಸ್ತುಸ್ಥಿತಿ ಹೀಗಿರುವುದು, ನಾನು ಸುಳ್ಳು ಹೇಳುವದಿಲ್ಲ,” ಎಂದು ಡಾಕ್ಟರನು ನುಡಿದು
ಹೆಮ್ಮೆಯಿಂದ ಎಲ್ಲರ ಕಡೆಗೂ ನೋಡಿದನು.
ದೇವಯಾನಿಯು ಸ್ವಸ್ಥಳಾಗಿ ಮೃದ್ವಾಸನದಲ್ಲಿ ಆತುಕೊಂಡು ಕುಳಿತವಳು ಎದ್ದು
ಕುಳಿತು, ಏನಂದಿರಿ ಡಾಕ್ಟರರೇ? ಕನ್ನಡ ಭಾಷೆಯಲ್ಲಿ ಬರೆದ ಕಾವ್ಯಗಳ ಮಾಧುರ್ಯವು ಮಹಾರಾಷ್ಟ್ರ ಭಾಷೆಯಲ್ಲಿ ಹುಡುಕಿದರೂ ಸಿಕ್ಕಲರಿಯದು. ಲಕ್ಪ್ಮೀಶ, ಷಡಕ್ಷರಿ, ಅಭಿನವ ಪಂಪ ಮುಂತಾದ ಕವಿಗಳ ಗ್ರಂಥಗಳನ್ನೋದಿದರೆ ರಸಜ್ಞರಿಗೆ ಉದ್ರೇಕ ಬಾರದಿರದು''
ಆದರೆ ಹಳಗನ್ನಡವನ್ನು ಹೊಸಗನ್ನಡದಲ್ಲಿ ಕಲಿಸಿ, ಕರ್ಣಕಟುಗಳಾದ ಸಂಧಿಗಳನ್ನು
ಜಾಣತನವೆಂದು ತಿಳಿದು ಮಾಡಿ ಅರ್ಥತಿಳಿಯುವುದೊತ್ತಟ್ಟಿಗಿರಲಿ, ಓದಲಿಕ್ಕೂ ಬಾರದಂಥ
ಹೊತ್ತಿಗೆಗಳನ್ನು ಬರೆದವರೇ ಈಗ ಪಂಡಿತರೆಂದೆನಿಸುವರು. ಹಳಗನ್ನಡವು
ಅಪ್ರಯುಕ್ತವಾದದ್ದೆಂದು ಹಿಂದಕ್ಕುಳಿಯಿತು. ಅದನ್ನು ಮತ್ತೆ ತೆಗೆಯುವುದರಲ್ಲಿ ಅರ್ಥವಿಲ್ಲ.
ವೇದದ ಭಾಷೆಯಂಥ ಸಂಸ್ಕೃತದಲ್ಲಿ ಕಾಲಿದಾಸಾದಿಗಳಿಗೆ ಗ್ರಂಥ ಬರೆಯಲಿಕ್ಕೆ
ಬರುತ್ತಿದ್ದಿಲ್ಲವೇನು? ಚಾಸರನಂಥ ಇಂಗ್ರಜಿಯಲ್ಲಿ, ಅಡ್ಡಿಸನ್ ಸ್ಕಾಟ್ ಪ್ರಭೃತಿಗಳಿಗೆ
ಬರೆಯುವುದು ಆಗಾಧವಾಗಿದ್ದಿಲ್ಲ. ಮಾತ್ರ ಅವರು ಬರೆದಿದ್ದರೆ ನಿಜವಾಗಿ
ಮೂರ್ಖರೆಂದೆನ್ನಿಸಿಕೊಳ್ಳುತ್ತಿದ್ದರು. ಮಹಾ ಭಾರತದ ಕಾಲದಲ್ಲಿ ಧನುರ್ಬಾಣಗಳಿಂದ
ಯುದ್ಧ ಮಾಡುತ್ತಿದ್ದರು. ಆಗಿನ ವೀರರ ಧನುರ್ವಿದ್ಯಾ ಕೌಶಲವನ್ನು ವ್ಯಾಸರು ಬಹು
ರಮಣೀಯವಾಗಿ ವರ್ಣಿಸಿರುವರೆಂದು ನಾವು ಬಿಲ್ಲು ಬಾಣಗಳನ್ನು ಹಿಡುಕೊಂಡು
ಹಲಹಲಲಲವೆಂದು ತಲೆ ಭಾರಾದ ಕಿರೀಟ ಹಾಕಿಕೊಂಡು ನಿಂತರೆ ಎಷ್ಟು ಉಪಹಾಸಕ್ಕೆ
ಪಾತ್ರರಾಗುವೆವು! ಈ ಹಳಗನ್ನಡ ಪ್ರಿಯರೇ ಪ್ರಚಲಿತವಾದ ಕನ್ನಡ ಪ್ರಸಾರಕ್ಕೆ
ಕಾಲ್ದೊಡಕಾಗಿರುವರು. ಈ ಹೊಸಗನ್ನಡಕ್ಕೆ ಹೊಸ ಮಾದರಿಯ ಚಾಲನಿಯನ್ನು ಕೊಟ್ಟು
ರಸಾಲಂಕಾರಗಳನ್ನು ವ್ಯಕ್ತಪಡಿಸುವಂತೆ ಸದ್ವಸ್ತು ವರ್ಣನೆಯುಳ್ಳ ಗ್ರಂಥಗಳನ್ನು ಪಂಡಿತರು
ಬರೆಯಹತ್ತಿದರೆ ಮಹಾರಾಷ್ಟ್ರ ಭಾಷೆಯು ಎಷ್ಟು ಹಿಂದುಳಿದಿರುವುದೆಂಬುದನ್ನು ನಾವು
ಹಿಂತಿರುಗಿ ನೋಡಬಹುದು. ಭಾಷಾ ಸೌಕರ್ಯಕ್ಕಾಗಿಯೇ ಮಹಾರಾಷ್ಟ್ರೀಯರು ಶಬ್ದ,
ಸಂಧಿಗಳ ಗೋಜಿಗೆ ಹೋಗಲಿಲ್ಲ. ಅರ್ಥ ಗಾಂಭೀರ್ಯದ ಕಡೆಗೇ ಅವರ
ದೃಷ್ಟಿಯಿದ್ದದ್ದರಿಂದ ಮಹಾರಾಷ್ಟ್ರ ಭಾಷೆಯು ಈಗಿದ್ದ ಸ್ಥಿತಿಗೆ ಬಂದಿತು.” (ಇಂದಿರಾ-
ಪುಟ ೧೪೨-೧೪೩)
ಕೆರೂರರು ಇಲ್ಲಿ ಸ್ಪಷ್ಟವಾಗಿ ಸಮಕಾಲೀನ ಭಾಷೆಯನ್ನೇ ಸಾಹಿತ್ಯಕ್ಕೆ ಬಳಸಬೇಕು
ಎನ್ನುವುದನ್ನು ಹೇಳುತ್ತಾರೆ. ಧಾರವಾಡದ ಕಡೆಗೆ ಕನ್ನಡಕ್ಕೆ ಪ್ರತಿಸ್ಪರ್ಧಿ ಭಾಷೆ
ಮರಾಠಿಯಾಗಿತ್ತು. ಮರಾಠಿ ಭಾಷೆಗಿಂತ ಕನ್ನಡ ಕಡಿಮೆಯದಲ್ಲ ಎಂಬ ಸಮರ್ಥನೆಯ
ಜೊತೆಯಲ್ಲಿಯೇ ಮರಾಠಿಯನ್ನು ಮೀರಲು ಕನ್ನಡದಲ್ಲಿ ಏನೇನು ಮಾಡಬೇಕು ಎಂಬ
ಸ್ಪಷ್ಟ ವಿಚಾರಗಳು ಇಲ್ಲಿವೆ. ಕೆರೂರರ ಈ ಅಭಿಪ್ರಾಯಗಳನ್ನು ನಾವು ಶೋಧಕ'ದಲ್ಲಿ ವೆಂಕಟರಂಗೋ ಕಟ್ಟಿ ಬರೆದ ಸಂಪಾದಕೀಯದೊಂದಿಗೆ ಹೋಲಿಸಿ ನೋಡಬೇಕು. ಎರಡಕ್ಕೂ ಇರುವ ಸಾಮ್ಯ ಗೊತ್ತಾಗುತ್ತದೆ. ಇದು ಆ ಕಾಲದ ಪತ್ರಿಕೆಗಳು
ಕನ್ನಡ
ಧರ್ಮ’ವನ್ನು ಯಾವ ರೀತಿ ಎತ್ತಿ ಹಿಡಿದವು, ಸಾಹಿತ್ಯ ಕೃತಿಗಳು ಅದನ್ನು ಹೇಗೆ ಅನುಸರಿಸಿದವು
ಎನ್ನುವುದಕ್ಕೆ ಒಂದು ಉದಾಹರಣೆ ಮಾತ್ರ. ಕಟ್ಟಿಯವರ ಕೃತಿಗಳನ್ನು ಕೆರೂರರು ಓದಿದ್ದರು
ಎನ್ನುವುದಕ್ಕೆ ಇಂದಿರಾ'ದಲ್ಲಿಯೇ ಪುರಾವೆಗಳು ಸಿಗುತ್ತವೆ. (ಪುಟ-೧೮೫). ಕೆರೂರರ ಅಭಿಪ್ರಾಯಗಳನ್ನು ಅನುಮೋದಿಸುವ ಒಂದು ಲೇಖನ
ವಾಗ್ಭೂಷಣ’ದಲ್ಲಿ ಪ್ರಕಟವಾಗಿದೆ.೩೩ ಇದನ್ನು ಬರೆದವರು ವಿದ್ವಾನ್
ಎಚ್.ಚನ್ನಕೇಶವಯ್ಯಂಗಾರ್ಯರು. ಲೇಖನದ ಹೆಸರು ಸಂಯುಕ್ತ ಕರ್ನಾಟಕ'. ಇದು ನಾಡಿನ ಏಕತೆಯ ಬಗ್ಗೆ ಮಾತ್ರ ಅಲ್ಲ ನುಡಿಯ ಏಕತೆಯ ಬಗ್ಗೆಯೂ ಹೇಳುತ್ತದೆ. ಒಂದೊಂದು ಭಾಗದಲ್ಲಿ ಕನ್ನಡ ಭಾಷೆಯ ಒಂದೊಂದು ರೂಪ ಬಳಕೆಯಾಗುತ್ತಿದ್ದ ಸಂದರ್ಭದಲ್ಲಿ ಇಂಥ ಕಳಕಳಿ ಸಹಜವಾಗಿಯೇ ಇದೆ. ಪ್ರಾಂತ ಭೇದ ತೊರೆಯಲು ಪ್ರಯತ್ನ: ಕರ್ನಾಟಕದಲ್ಲೆಲ್ಲ ಗ್ರಂಥಸ್ಥ ಭಾಷೆ ಒಂದೇ ರೀತಿಯಿರುವಂತೆ ಮಾಡಬೇಕೆಂದು ಅನೇಕ ವರ್ಷಗಳಿಂದ ನಡೆದ ಪ್ರಯತ್ನದ ಇತಿಹಾಸದ ಕಡೆಗೆ ಚನ್ನಕೇಶವಯ್ಯಂಗಾರ್ಯರು ಒಮ್ಮೆ ಗಮನ ಹರಿಸಿದ್ದಾರೆ. ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದಲ್ಲಿ ಇದು ಮೊದಲಾಯಿತು ಎಂಬ ಅಂಶವನ್ನು ಅವರು ಹೇಳುವರು. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳದಲ್ಲಿ ಈ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತವಾಯಿತು ಎಂಬ ಅಂಶವನ್ನೂ ಹೇಳುವ ಅವರು, ``ಅಂದಿನಿಂದ ಮೊನ್ನಿನ ಸಮ್ಮೇಳನದ ವರೆಗೂ ಭಾಷಾಭಿಮಾನಿಗಳು, ಅದರಲ್ಲಿಯೂ- ಮುಂಬಯಿ ಕರ್ನಾಟಕದವರು ಈ ವಿಷಯದಲ್ಲಿ ಬಹಳ ತಳಮಳಗೊಳ್ಳುತ್ತಿರುವರು. ಒಂದೇ ವಿಧವಾದ ಕ್ರಮಿಕ ಪುಸ್ತಕಗಳನ್ನು ಎಲ್ಲ ಪ್ರಾಂತ್ಯಗಳಲ್ಲಿಯೂ ಬಳಕೆಗೆ ತರಬೇಕೆಂದು ಬೇಗುದಿಯುತ್ತಿರುವರು....'' ಎನ್ನುವ ಮೂಲಕ ಈ ವಿಷಯದಲ್ಲಿ ಉತ್ತರ ಕರ್ನಾಟಕದವರ ಕಳಕಳಿಯನ್ನು ಎತ್ತಿಹೇಳುವರು. ಭಾಷೆಯ ಏಕೀಕರಣಕ್ಕೆ ಸರ್ವತ್ರ ಒಂದೇ ವಿಧವಾದ ಕ್ರಮಿಕ ಪುಸ್ತಕಗಳನ್ನು ಬರೆಯಿಸಬೇಕೆಂಬುದು ಅವರ ಸಲಹೆ. ಇದು ಅದುವರೆಗೆ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಕೇಳಿ ಬಂದಿತ್ತು. ಆದರೆ ಕ್ರಮಿಕ ಪುಸ್ತಕಗಳು ಉದ್ದೇಶಿತ ಪ್ರಭಾವ ಬೀರಿದವೆ?
ಭಾಷಾ ಪ್ರವಾಹವು ಮುಂಬಯಿ ಕರ್ನಾಟಕದಲ್ಲಿ ರೂಢಿಸಿದ
ಕ್ರಮಿಕ ಪುಸ್ತಕಗಳ ಪ್ರಭಾವವು ಬೀರದೆಯೇ ಹೇಗೆ ಗುಪ್ತಗಾಮಿನಿಯಾಗಿ
ಹರಿದಿದೆಯೆಂಬುದನ್ನು ನೋಡಿರಿ’ ಎನ್ನುವ ಲೇಖಕರು ಧಾರವಾಡ ಪ್ರಾಂತದಲ್ಲಿ ಹತ್ತು
ಹನ್ನೆರಡು ವರ್ಷಗಳ ಹಿಂದೆ ಕಂಡು ಬರುತ್ತಿದ್ದ ಗ್ರಂಥಸ್ಥ ಭಾಷೆಗೂ ಈಗ ಕಾಣಬರುವ
ಗ್ರಂಥಸ್ಥ ಭಾಷೆಗೂ ಉಂಟಾಗಿರುವ ತಾರತಮ್ಯವನ್ನು ವಿವೇಚಿಸುವರು. ಇದಕ್ಕೆ ಕಾರಣ
ಕೇವಲ ಸಾಹಿತ್ಯ ಸಮ್ಮೇಳನ, ಪರಿಷತ್ತುಗಳಲ್ಲ. ವಿವಿಧ ಪ್ರಾಂತಗಳ ಜನರಲ್ಲಿ ಉಂಟಾಗಿರುವ
ಪರಸ್ಪರ ಪರಿಚಯ, ಸೌಹಾರ್ದ ಎನ್ನುತ್ತಾರೆ. ಒಂದು ಪ್ರಾಂತದವರು ಇನ್ನೊಂದು ಪ್ರಾಂತದ
ಭಾಷೆಯನ್ನು ಹೀಯಾಳಿಸುವುದಕ್ಕೆ ಕಾರಣ ಕನ್ನಡಕ್ಕೆ ಸೋಕಿರುವ ಪರಭಾಷೆಗಳ ಗಾಳಿ.
ಅಲ್ಲದೆ ಒಂದು ಕಡೆಯವರು ಮತ್ತೊಂದು ಕಡೆಯವರು ಬಳಸುವ ಪದಗಳನ್ನು ಮಾತ್ರವೇ
ಅಲ್ಲಗಳೆಯುತ್ತಿರುವುದು ಎಂಬ ನಿರ್ಣಯಕ್ಕೆ ಬರುವರು.
ಇಷ್ಟಕ್ಕಾಗಿಯೇ ಒಬ್ಬರ ಭಾಷೆ ಮತ್ತೊಬ್ಬರಿಗೆ ಅರ್ಥವಾಗದೆಂದು ಹೇಳುವುದರಲ್ಲಿ
ತಥ್ಯಾಂಶವಿಲ್ಲ. ರಚನೆಯೂ ಧೋರಣೆಯೂ ಕನ್ನಡಕ್ಕೆ ಸ್ವಭಾವವಾಗಿ ಇರಬೇಕಾದಂತೆ
ಇದ್ದರೆ, ಹೊಸ ಪದಗಳು ಪೂರ್ವೋತ್ತರ ಸಂದರ್ಭಗಳಿಂದ ಸಾಮಾನ್ಯವಾಗಿ
ಅರ್ಥವಾಗಬಹುದು ಎನ್ನುವ ಲೇಖಕರು ಈಗ ಕನ್ನಡದಲ್ಲಿ ಪ್ರಾಂತಸ್ಥ ಭೇದವೆಂದರೆ,
ವಸ್ತ್ರದೋಪಾದಿಯಲ್ಲಿರುವ ಬರಿಯ ಪದಗಳಿಂದಾಗಿಲ್ಲ, ಕನ್ನಡದ ತಿರುಳನ್ನೇ, ಕನ್ನಡದ
ಪ್ರಾಣವನ್ನೇ ಹಿಂಡಿ ಹೀರುತ್ತಿರುವ ಕನ್ನಡಕ್ಕೆ ಹೊಸದಾದ ವಿಲಕ್ಪಣ ರಚನೆಯಿಂದ ವಿನೂತನ
ಧೋರಣೆಯಿಂದ ಬಂದೊದಗಿದೆ ಎನ್ನುತ್ತ ಅದರ ಕಾರಣಗಳನ್ನು ವಿಶ್ಲೇಷಿಸುವರು.
...ಧಾರವಾಡ ಪ್ರಾಂತವು, ಎಂದರೆ ಬಹುಭಾಗದ ಮುಂಬಯಿ ಕರ್ನಾಟಕವು ಅನೇಕ ಕಾಲ ಮಹಮ್ಮದೀಯರ ದಾಳಿಯಲ್ಲಿ ನರಳಿ ಬಿಸಿಲಿಂದ ಬೆಂಕಿಗೆ ಬಿದ್ದಂತೆ, ಮತ್ತೆ ಅನೇಕ ಕಾಲ ಪೇಶ್ವೆಗಳ ದಾಂಧಲೆಗೆ ಸಿಕ್ಕಿ ನುರುಗಿ ಹೋಯಿತು...'' ಎನ್ನುವ ಲೇಖಕರು ಇದರಲ್ಲಿ ತಿಲಕರ `ಕೇಸರಿ' ಪತ್ರಿಕೆಯ ಪಾತ್ರವೂ ಇರುವುದನ್ನು ಗುರುತಿಸುವರು. ಇದರಿಂದಾಗಿ ಕನ್ನಡದ ಹಲವು ಪದಗಳು ಕಣ್ಮರೆಯಾದುದಲ್ಲದೆ ಸಹಜವಾದ ಧೋರಣೆಯನ್ನೂ ರಚನೆಯನ್ನೂ ಕಳೆದುಕೊಂಡಿತು ಎನ್ನುವರು. ಈ ರೀತಿ ಬಂದ ಪಗಳನ್ನು ವಿವೇಕಿಗಳಾದವರು ಯಾರೂ ತಿರಸ್ಕರಿಸುವುದಿಲ್ಲ. ಇಂಗ್ಲಿಷ್ ಭಾಷೆಯ ಕೋಶದಲ್ಲಿ ಮುಕ್ಕಾಲು ಪಾಲಿನಷ್ಟು ಅನ್ಯರ ಹಂಗಿಗೆ ಗುರಿಯಾಗಿರುವಾಗ ಕನ್ನಡವು ಅನ್ಯದೇಶ್ಯ ಶಬ್ದಗಳನ್ನು ತಿರಸ್ಕರಿಸಬೇಕಿಲ್ಲ ಎಂಬ ಮಹತ್ವದ ಮಾತನ್ನು ಹೇಳುವರು. ಜೊತೆಯಲ್ಲಿ ಭಾಷೆಯ ಸಹಜ ಬೆಳವಣಿಗೆಯನ್ನು ಒಪ್ಪಿಕೊಳ್ಳಬೇಕೆಂಬ ಕಿವಿಮಾತು ಅದರಲ್ಲಿ ಅಡಗಿದೆ. ನುಡಿಯ ಏಕೀಕರಣದಲ್ಲಿಯೇ ನಾಡಿನ ಏಕೀಕರಣವೂ ಇದೆ ಎಂಬ ಮಹತ್ವದ ಅಂಶವನ್ನು ಈ ಲೇಖಕರು ಮನಗಂಡಿದ್ದರು.
ಭಾಷೆಯೊಂದಾಗಿ ದೇಶವೊಂದಾಗಬೇಕೆ?
ದೇಶವೊಂದಾಗಿ ಭಾಷೆಯೊಂದಾಗಬೇಕೆ? ಇದು ಹುಚ್ಚು ಬಿಡದ ಹೊರತು ಮದುವೆಯಾಗದು, ಮದುವೆಯಾಗದ ಹೊರತು ಹುಚ್ಚು ಬಿಡದು' ಎಂಬ ಹಾಗಿದೆ. ಪ್ರಪಂಚದ ನಾನಾ ರಾಷ್ಟ್ರಗಳ ಚರಿತ್ರೆಯನ್ನು ಪರಿಶೀಲಿಸಿದಲ್ಲಿ ದೇಶವನ್ನು ಬಿಟ್ಟು ಭಾಷೆಯಿಲ್ಲ, ಭಾಷೆಯನ್ನು ಬಿಟ್ಟು ದೇಶವಿಲ್ಲ. ದೇಶವು ಮುಂದಾದರೆ ಜೊತೆಯಲ್ಲಿ ಭಾಷೆಯೂ ಮುಂದಾಗುವುದು. ದೇಶವು ಬಿದ್ದರೆ ಭಾಷೆಯೂ ಬಿದ್ದಂತೆ. ಇದಕ್ಕೆ ನಮ್ಮ ಧಾರವಾಡ ಪ್ರಾಂತವೇ ಸಾಕ್ಪಿ. ಹಲವು ಸರಕಾರಗಳ ಅಧೀನಕ್ಕೆ ಒಳಪಟ್ಟಿರುವ ನಮ್ಮ ಕರ್ನಾಟಕ (ಕನ್ನಡ)ವನ್ನು ಒಮ್ಮೊಗವಾಗಿ ಮಾಡತೊಡಗುವುದು ಸುಲಭ ಸಾಧ್ಯವಲ್ಲ. ಕನ್ನಡ ನಾಡು ಒಂದಾಗದ ಹೊರತು ಕನ್ನಡ ಮಾತು ಒಂದಾಗುವುದು ಕಷ್ಟ. ಸಾವಿರ ಜನರು ಸಾವಿರ ಹೇಳಲಿ ನಾಡು ಒಂದಾಗದೆ ಮಾತು ಒಂದಾಗಲೆಂದು ಪ್ರಯತ್ನಿಸುವುದು ಮರಳೊಳಗೆ ಎಣ್ಣೆಯನ್ನು ಹಿಂಡಿದಂತೆ'' ಎಂದು ಚನ್ನಕೇಶವಯ್ಯಂಗಾರ್ಯರು ಹೇಳುವರು. ಒಟ್ಟಾರೆ ನುಡಿಯು ಸಮೃದ್ಧವಾಗಬೇಕಾದರೆ ನಾಡು ಒಂದಾಗಬೇಕು ಎಂಬುದು ತಾತ್ಪರ್ಯ. ಭಾಷೆಯ ಧಾರಣ ಸಾಮರ್ಥ್ಯ: ಇಂಗ್ಲಿಷ್ ಮೂಲದಿಂದ ಹೊಸಹೊಸ ಜ್ಞಾನ ಶಾಖೆಗಳು ಕನ್ನಡ ಭಾಷೆಗೆ ಬಂದಾಗ ಕನ್ನಡ ಭಾಷೆಯ ಧಾರಣ ಸಾಮರ್ಥ್ಯದ ಬಗೆಗೆ ಆಗಾಗ ಅಪನಂಬಿಕೆ ವ್ಯಕ್ತವಾಗಿದೆ. ಅದು ಈಗಲೂ ಇದೆ. ಶಾಸ್ತ್ರ ವಿಷಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ವಿವರಿಸುವಷ್ಟು ಸಹಜವಾಗಿ ಕನ್ನಡದಲ್ಲಿ ಸಾಧ್ಯವಿಲ್ಲ. ಇದಕ್ಕೆ ಪಾರಿಭಾಷಿಕ ಪದಗಳು ನಮ್ಮ ಭಾಷೆಯಲ್ಲಿ ಇಲ್ಲದಿರುವುದು ಎಂಬ ಮಾತು ಕೇವಲ ಇವತ್ತಿನದೇ ಅಲ್ಲ. ಡಿವಿಜಿಯವರ ಕಾಲದಲ್ಲಿಯೂ ಇಂಥ ಅಭಿಪ್ರಾಯವಿತ್ತು. ಅವರು ಆ ಕಾಲದಲ್ಲಿ ತಮ್ಮ ಬರೆಹಗಳಲ್ಲಿ ಮತ್ತು ಭಾಷಣಗಳಲ್ಲಿ ಇದನ್ನು ವ್ಯಕ್ತಪಡಿಸಿದ್ದಾರೆ. ಈ ಕೊರತೆಯಿಂದ ಪಾರಾಗುವ ಮಾರ್ಗವನ್ನು ಅವರು ಸೂಚಿಸಿದ್ದಾರೆ. ೧೯೩೯ರ ಜುಲೈ ತಿಂಗಳ
ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ’ಯಲ್ಲಿ ಪ್ರಕಟವಾದ ಅವರ ಲೇಖನದಲ್ಲಿ ಅವರು
ಹಲವು ಉಪಾಯಗಳನ್ನು ಸೂಚಿಸಿದ್ದಾರೆ.34
ಉಪನ್ಯಾಸಕನಿಗೆ ವಿಷಯ ಸ್ವಾಧೀನವಾಗಿದ್ದರೆ ತಕ್ಕ ಮಾತು ಅವನಿಗೆ ಕನ್ನಡದಲ್ಲಿಯೂ ಸಹ ಸ್ವಾಭಾವಿಕವಾಗಿ ಒದಗುತ್ತದೆ ಎಂದು ನನ್ನ ತಿಳಿವಳಿಕೆ' ಎಂದು ಡಿವಿಜಿ ಹೇಳುತ್ತಾರೆ. ಭಾಷೆ ಯಾವಾಗಲೂ ವಿಚಾರಕ್ಕೆ ಅಧೀನವಾಗಿರುತ್ತದೆ ಎನ್ನುವ ಅವರು ಸರಿಯಾದ ಮಾತು ದೊರೆಯುವುದು ಮೊದಮೊದಲು ಸ್ವಲ್ಪ ಕಷ್ಟವಾಗಬಹುದು. ಈ ಸ್ವಲ್ಪ ಕಷ್ಟ ಕನ್ನಡಕ್ಕೆ ಮಾತ್ರ ವಿಶೇಷವಾದದ್ದೇನೂ ಅಲ್ಲ; ಅದು ಎಲ್ಲ ಭಾಷೆಗಳಿಗೂ ಸಹಜವಾದದ್ದು. ಹೊಸ ಭಾವ, ಹೊಸ ಅಭಿಪ್ರಾಯ, ಹೊಸ ತತ್ವ- ಇವಕ್ಕೆ ಹೊಸ ಶರೀರ, ಹೊಸ ಕವಚ, ಹೊಸ ವಾಹನ- ಇವು ಸೃಷ್ಟಿಯಾಗಬೇಕಾಗುವುದು ಸಹಜ. ಎಷ್ಟು ದಿನ ಅವು ಹೊಸದಾಗಿರುವುವೋ ಅಷ್ಟು ದಿವಸ ಅವು ಜನರಿಗೆ ಕಷ್ಟವೆಂದು ತೋರಬಹುದು ಎಂದು ಹೇಳುತ್ತಾರೆ. ಹೊಸದನ್ನು ಹೊಸದರಲ್ಲಿ ತಿರಸ್ಕರಿಸುವುದು ಇದು ಸಮಸ್ತ ಮನುಷ್ಯ ಸ್ವಭಾವಕ್ಕೂ ಸೇರಿದ ಲಕ್ಪಣ. ಭಾಷೆಯ ವಿಷಯದಲ್ಲಿಯೂ ಇದು ನಿಜ ಎನ್ನುವರು.
ಅನ್ಯ ದೇಶಗಳ ಅಭಿಪ್ರಾಯಗಳನ್ನೂ ಜ್ಞಾನವನ್ನೂ ನಮ್ಮ ಜನರಿಗೆ ಪರಿಚಯ
ಮಾಡಿಕೊಡಬೇಕಾದರೆ ಕೆಲವು ಅಪರಿಚಿತ ಪದಗಳನ್ನು ಉಪಯೋಗಿಸಲೇ ಬೇಕಾಗುತ್ತದೆ.
ಈ ನೂತನ ಪದ ಸೃಷ್ಟಿಯ ಕಾರ್ಯವು ಕಷ್ಟದ ಕೆಲಸವೇ ಹೌದು. ಆ ಕೆಲಸವನ್ನು ಮಾಡಿದ
ಮೇಲೆ ಅದು ಜನರಲ್ಲಿ ರೂಢಿಗೆ ಬರುವವರೆಗೂ ಅವರಿಗೆ ಅದು ಕಷ್ಟವಾಗಿ ತೋರುವುದು
ನಿಜ. ಆದರೆ ಒಂದು ಭಾಷೆಯನ್ನು ಬೆಳೆಸಿ, ಅದರ ಜನವನ್ನು ಮೇಲಕ್ಕೆತ್ತ ಬೇಕೆಂದು ಆಶೆ
ಪಡುವವರು ಇಂಥಾ ಕಷ್ಟಕ್ಕೆ ಸಿದ್ಧರಾಗಿರಬೇಕು. ಇಷ್ಟುಮಟ್ಟಿನ ಕಷ್ಟವನ್ನು ಕನ್ನಡ
ಭಾಷಣಕರ್ತರೂ ಲೇಖಕರೂ ಸಹಿಸಲು ಸಿದ್ಧರಾದರೆ, ಕನ್ನಡದಲ್ಲಿ ಒಂದು ಹೊಸ
ಕಾಂತಿಯೂ ಉಂಟಾಗುವುದು ಅಸಾಧ್ಯವಾಗದು’ ಎನ್ನುವ ಮೂಲಕ ಡಿವಿಜಿ ಸಾಹಿತ್ಯ
ಶ್ರೀಮಂತವಾಗುವ ಪರಿಯನ್ನು ವಿವರಿಸುವರು.
ಕೆರೂರರು, ಚನ್ನಕೇಶವಯ್ಯಂಗಾರ್ಯರು ಮತ್ತು ಡಿವಿಜಿಯವರು ಭಾಷೆಯನ್ನು
ಬೆಳೆಸುವ ಬಗ್ಗೆ ಸಮಾನವಾದ ಕಳಕಳಿಯನ್ನು ಹೊಂದಿದ್ದಾರೆ. ಕಾಲಕಾಲಕ್ಕೆ ಇಂಥ
ಅಭಿಪ್ರಾಯಗಳು ವ್ಯಕ್ತಗೊಂಡಿದ್ದರಿಂದಾಗಿಯೇ ಭಾಷೆಯು ಅಗತ್ಯ ಕಸುವನ್ನು
ಪಡೆದುಕೊಂಡು ಬೆಳೆದು ಉಳಿದು ಬಂತು.
ಲೇಖಕ ಬಳಸುವ ಭಾಷೆಯು ಅವನಿಗೆ ಓದುಗರನ್ನು ಗಳಿಸಿಕೊಡಬೇಕೆ ಹೊರತು
ಓದುಗರನ್ನು ಲೇಖಕನಿಂದ ದೂರಮಾಡಬಾರದು. ಲೇಖಕರೇ ವಾಚಕರನ್ನು ಮರೆಯದಿರಿ!' ಎನ್ನುವ ಶ್ರೀ ಚಕ್ರಪಾಣಿ, ಲೇಖಕರಾದರೂ ವಾಚಕನ ಸ್ಥಾನದಲ್ಲಿ ಕುಳಿತು ಆಲೋಚಿಸಬೇಕು ಎಂದು ಸಲಹೆ ನೀಡುವರು.೩೫
ಜಯಕರ್ನಾಟಕ’ದಲ್ಲಿ ಪ್ರಕಟವಾದ
ಈ ಲೇಖನ ಡಿ.ವಿ.ಜಿ.ಯವರ ಅಭಿಪ್ರಾಯವನ್ನು ಸಮರ್ಥಿಸುತ್ತದೆ ಎಂಬುದು ಇಲ್ಲಿ
ಮುಖ್ಯ. ಕನ್ನಡಿಗರಿಗೆ ವಾಚನಾಭಿರುಚಿಯೇ ಇಲ್ಲ. ಈ ಅಭಿರುಚಿ ಲೋಪಕ್ಕೆ ಅಭಿಮಾನ
ಶೂನ್ಯತೆಯೇ ಕಾರಣ ಎಂಬ ಮಾತುಗಳು ಸಮಂಜಸ ಎಂದು ಅವರು ಒಪ್ಪುವುದಿಲ್ಲ.
ಕನ್ನಡದ ಮೇಲಿನ ಅಭಿಮಾನವೊಂದೇ ವಾಚಕರನ್ನು ಬೆಳೆಸಲಾರದು ಎನ್ನುವುದು ಅವರ
ಸ್ಪಷ್ಟ ಅಭಿಪ್ರಾಯ. ಒಂದೂರ ಭಾಷೆ ಇನ್ನೊಂದೂರಿಗೆ ತಿಳಿಯುವುದಿಲ್ಲ ಎಂಬ ಆಕ್ಪೇಪದಲ್ಲಿ
ಹುರುಳಿಲ್ಲ ಎನ್ನುವ ಅವರು, ಲೇಖನ ಭಾಷೆಯೆಂದರೆ ಸಾಮಾನ್ಯವಾಗಿ ಗ್ರಹೀತವಾದ
ಹೊಸಗನ್ನಡದಲ್ಲಿ ಬರೆದರೆ ಅರ್ಥವಾಗುವುದಕ್ಕೆ ಹೆಚ್ಚೇನೂ ತೊಡಕಾಗುವುದಿಲ್ಲ.
ಒಂದೊಂದು ಶಬ್ದವು ಅಲ್ಲಲ್ಲಿ ತಿಳಿಯದಿದ್ದರೆ ಪುಸ್ತಕವೇ ನಿರರ್ಥಕವಾಗಲಾರದು ಎಂದು
ಹೇಳುವರು. ಸಂವಹನದ ತೊಡಕು ತಲೆದೋರುವುದು ಒಂದು ಪ್ರದೇಶಕ್ಕೋ ಅಥವಾ
ಒಂದು ಜಾತಿಗೋ ಸೀಮಿತವಾದ ಆಡುಭಾಷೆಯಲ್ಲಿ ಗ್ರಂಥ ಪ್ರಕಟವಾದಾಗ. ಇದು
೨೦ನೆ ಶತಮಾನದ ೪ನೆ ದಶಕದ ಸಮಸ್ಯೆಯೂ ಹೌದು, ಶತಮಾನದ ಕೊನೆಯ ದಶಕದಲ್ಲಿ
ಬಂದ ದೇವನೂರು ಮಹಾದೇವರ ಕುಸುಮಬಾಲೆ' ಸಮಸ್ಯೆಯೂ ಹೌದು. ಇದನ್ನೇ ಚಕ್ರಪಾಣಿಯವರು, ಈ ಭಾಷೆಯನ್ನು ಸಮಗ್ರ ಕರ್ನಾಟಕವು ತಿಳಿಯದಿದ್ದರೆ ಅದು ವಾಚಕರ ನಿರಭಿಮಾನತೆಯೂ ಅಲ್ಲ, ಲೇಖಕರ ದುರ್ದೈವವೂ ಅಲ್ಲ; ಸಣ್ಣ ಪರಿಧಿಯೊಳಗೆ ಅಡಗುವ ಭಾಷಾ ಸ್ವರೂಪದ ಮೋಹವನ್ನು ಬಿಡಲಾರದೆ, ಸಮಗ್ರ ದೇಶದಲ್ಲಿ ಪ್ರಚಾರ ಹೊಂದಬೇಕೆಂಬ ಹಂಬಲವನ್ನು ತೊರೆಯಲಾರದೆ ಮಾಡಿದ ಪೇಚಾಟದ ಫಲ ಎನ್ನುವರು. ಸಾಹಿತ್ಯದ ಸಾಧನವಾದ ಭಾಷೆ, ಜನರ ಅನುದಿನದ ಜೀವನಕ್ಕೆ ಬೇಕಾದ ಎಲ್ಲ ಜ್ಞಾನ ಸಾಮಗ್ರಿಯನ್ನೂ, ಎಲ್ಲ ವ್ಯವಹಾರ ಉಪಕರಣಗಳನ್ನೂ ಒದಗಿಸುವ ಶಕ್ತಿಯುಳ್ಳದ್ದಾಗಿರಬೇಕು ಎಂದು ಬಯಸುವ ಡಿವಿಜಿ ಅಂಥ ಸಂಪತ್ತನ್ನು ಕನ್ನಡಕ್ಕೆ ತಂದುಕೊಡಬೇಕೆಂಬುದು ನಮ್ಮ ಆಸೆ ಎನ್ನುವರು.36
ನಮ್ಮ ತೋಟದಲ್ಲಿರುವ ಗಿಡ
ಬಳ್ಳಿಗಳು ವರ್ಷ ವರ್ಷವೂ ಚಿಗುರಿ ವರ್ಷ ವರ್ಷವೂ ಹೊಸದಾಗಿ ಹೂ ಬಿಡುವ
ರೀತಿಯಲ್ಲಿ, ನಮ್ಮ ಸಾಹಿತ್ಯವೂ ಹೊಸಹೊಸ ಜೀವ ಕಾಂತಿಗಳನ್ನು ತೋರಬೇಕು. ಮರ
ಹೊಸದಾಗಿ ಚಿಗುರಿಡದೆ ಕರಡಿ ಕಟ್ಟಿ ನಿಂತರೆ ಪುರಾಧಿಕಾರಿಗಳು ಅದನ್ನು ಕಡಿದುಬಿಟ್ಟಾರು.
ಭಾಷೆ ನವ ಜೀವನದ ಹೊಸ ತಳಿರನ್ನು ತಳೆಯಲಾರದೆ ಹೋದರೆ ಲೋಕವು ಅದನ್ನು
ನಿರಾಕರಿಸುವುದು ಸ್ವಾಭಾವಿಕವೇ ಆಗಿದೆ. ಭಾಷೆ, ಸಾಹಿತ್ಯಗಳು ನವನವೀನತೆಯನ್ನು
ತಾಳಲಾರದೆ ಹೋದರೆ ಆ ಭಾಷೆಯನ್ನು ಆಡುವ ನವ ಜೀವನವೂ ನವೀನತೆಯನ್ನು
ತೋರಲಾರದು ಎನ್ನುವುದು ಅವರ ಖಚಿತ ಅಭಿಪ್ರಾಯ.
ಸಾಹಿತ್ಯವನ್ನು ಪಂಡಿತ ಗೋಷ್ಠಿಯಿಂದ ಪೇಟೆಯ ಚೌಕಕ್ಕೆ ತರಬೇಕಾದದ್ದು ನಮ್ಮ
ಈಗಿನ ಕರ್ತವ್ಯವಾಗಿದೆ ಎಂದು ಡಿವಿಜಿ ಹೇಳುವರು. ಪೂರ್ವದಲ್ಲಿ ವಿದ್ವಾಂಸರಾದವರ
ವಾಗ್ವಿಜೃಂಭಣೆಗೂ ಪುಣ್ಯವಂತರ ವಿನೋದ ಕಾಲಕ್ಷೇಪಕ್ಕೂ ಅವಕಾಶವನ್ನೊದಗಿಸುವುದು
ಸಾಹಿತ್ಯದ ಕೆಲಸವಾಗಿತ್ತು. ಈಗಲಾದರೋ ಬಡವರಿಗೆ ಬದುಕನ್ನು ಸಹ್ಯವನ್ನಾಗಿ
ಮಾಡುವುದೂ ಸಾಹಿತ್ಯದ ಕರ್ತವ್ಯವಾಗಿದೆ ಎಂಬುದು ಅವರ ದೃಢ ನಂಬುಗೆ.
ಪ್ರಾಚೀನ ಕಾವ್ಯಮೀಮಾಂಸೆಯಲ್ಲಿ ಯಾವನು ಸಹೃದಯ'ನಾಗಿದ್ದನೋ ಅವನೇ ಇಂದಿನ ಓದುಗ. ಭಾಷೆಯ ಬಳಕೆಯೂ ಓದುಗನ ಭಾಷಾ ಸಂಪತ್ತು ಎಷ್ಟಿದೆ ಎಂಬುದನ್ನು ಗಮನಿಸಿಯೇ ಮಾಡಬೇಕು ಎಂಬುದು ಚಕ್ರಪಾಣಿಯವರ ಅಭಿಪ್ರಾಯ. ಓದುಗನ ಸಾಹಿತ್ಯ ಜ್ಞಾನದ ಮಟ್ಟವಾವುದು, ಅಭಿರುಚಿಯ ಸ್ವರೂಪವೇನು? ಅದನ್ನು ಮುರಿಯದೆ ಯಾವ ಇಷ್ಟವಾದ ಕಡೆಗೆ ಅದನ್ನು ತಿರುಗಿಸಬಹುದು, ತಿರುಗಿಸಬೇಕು. ನಮ್ಮ ಲೇಖನದ ಫಲವಾಗಿ ಅವರಲ್ಲಿ ಯಾವ ಸಂಸ್ಕಾರವುಂಟಾಗಬಹುದು ಎಂದು ಸಾಕಲ್ಯವಾಗಿ ವಿಮರ್ಶಿಸಿ ಅನಂತರ ನಾವು ಬರೆದುದಾದರೆ, ನಮಗೆ ಅವರ ಕೊಡುಗೈಯನ್ನು ಹಿಡಿದು ಬೇಡುವ, ಒತ್ತಾಯಿಸುವ ಅಧಿಕಾರ ಬರುವುದು ಎಂದು ಅವರು ಹೇಳುವರು. ಇದೊಂದು ರೀತಿಯಲ್ಲಿ ಮಾರುಕಟ್ಟೆ ಆಧಾರಿತ ಚಿಂತನೆ ಎನ್ನಿಸುವುದು. ಹೊಸತೆಂಬ ಒಂದು ರೀತಿಯ ಕವನ, ಲೇಖನಗಳು ಆರಂಭಿಸಿದ ಸಮಯದಲ್ಲಿ ಸಾಮಾನ್ಯ ಜನತೆಯ ಕಣ್ಣೊಮ್ಮೆ ಸ್ವಲ್ಪ ಅರಳಿತ್ತು. ಆದರೆ ಅಭಿಮಾನ ಮಾತ್ರದಿಂದ, ಕುತೂಹಲ ಮಾತ್ರದಿಂದ, ವಾಚನವನ್ನು ಹೆಚ್ಚು ಜನರು ಬೆಳೆಯಿಸಿಕೊಳ್ಳಲಾರದೆ ಹೋದರು. ಓದಲಿಕ್ಕೆ ತಿಳಿಯದ, ಅಥವಾ ಓದಿದರೂ ಅರ್ಥವಾಗದ, ಅರ್ಥವಾದರೂ ಚಮತ್ಕಾರವು ಹೊಳೆಯದ, ಹೊಳೆದರೂ ಹೃದಯಕ್ಕೆ ಸಂಸ್ಕಾರವನ್ನು ಕೊಟ್ಟು ತದನುರುಕ್ತಿಯನ್ನು ಹೆಚ್ಚಿಸಲಾರದ ಏಕರೂಪದ ಬರೆವಣಿಗೆಗಳೇ ಬರತೊಡಗಿ ಬೇಸರ ಹೊಂದಿದವರು ಹಲವರಿರುವರು ಎನ್ನುವ ಚಕ್ರಪಾಣಿ, ಇಂಥ ಸಂದರ್ಭದಲ್ಲಿ ಉತ್ತಮ ಕೃತಿ ಬಂದರೂ ತೆನ್ನಾಲಿ ರಾಮ ಬಾಯಿ ಸುಟ್ಟ ಬೆಕ್ಕಿನಹಾಗೆ ಮುಖ ತಿರುವುವ ಅಪಾಯದ ಕಡೆ ಬೆರಳು ಮಾಡುವರು. ಇದಕ್ಕೆ ಪರಿಹಾರವೇನು? ಇಂಥವರನ್ನು ಪುನಃ ಒಲಿಸಿಕೊಳ್ಳುವ ಬಗೆ ಹೇಗೆ? ಜನತೆಯ ಅವಶ್ಯಕತೆ- ಅಭಿರುಚಿ- ಸ್ಥಿತಿಗತಿಗಳನ್ನು ಸೂಕ್ಷ್ಮ ಬುದ್ಧಿಯಿಂದ ನಿರೀಕ್ಪಿಸಿ ಎಚ್ಚರಿಕೆಯಿಂದ ಬರೆಯುವ ಸಾಹಿತ್ಯ ತಪಶ್ಚರ್ಯೆಯನ್ನು ಕೈಗೊಳ್ಳಬೇಕು. ಇಷ್ಟ ಬಂದಂತೆ ಬರೆಯುವ ಲೇಖಕನಿಗೆ ಸ್ವಲ್ಪ ಸಂಯಮವನ್ನು ಕಲಿಸಬೇಕು. ಕೀರ್ತಿಯ ಹಂಬಲವನ್ನು ತತ್ಕಾಲ ಬಿಟ್ಟುಬಿಡುವ ವ್ರತವನ್ನು ಧರಿಸಬೇಕು; ಜನತೆಯ ಸೇವೆಯೆಂಬ ಪ್ರಾಯಶ್ಚಿತವನ್ನು ಮಾಡಿಕೊಳ್ಳಬೇಕು. ಇದಕ್ಕೆ ನಾವು ಸಿದ್ಧರಿಲ್ಲವಾದರೆ ಜನತೆಯನ್ನು ದೂರುವ ಕೆಲಸಕ್ಕಾದರೂ ಇಳಿಯದಿರಬೇಕು. ಅಥವಾ ನನ್ನಂಥವನು ಯಾವನಾದರೂ ಹುಟ್ಟಿಯಾನು, ಅಂಥವನಿಗಾಗಿ ಬರೆದೆ ಎಂದು ಹೇಳಿಕೊಳ್ಳುವ ಧೈರ್ಯವಾದರೂ ನಮಗಿರಬೇಕು ಎಂದು ಅವರು ಹೇಳುತ್ತಾರೆ. ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಬಿ.ಎಂ.ಶ್ರೀ.ಯವರು ೧೯೧೧ರಲ್ಲಿ
ಕನ್ನಡ ಮಾತು ತಲೆ ಎತ್ತುವ ಬಗೆ’ ಎಂಬ ವಿಷಯವಾಗಿ ಮಾಡಿದ ಭಾಷಣ ಐತಿಹಾಸಿಕ
ಮಹತ್ವವನ್ನು ಪಡೆದಿದೆ. ಸಾಹಿತ್ಯಕವಾಗಿ ಮೈಸೂರು ರಾಜ್ಯ ಮತ್ತು ಉತ್ತರ ಕರ್ನಾಟಕ
ಪ್ರದೇಶಗಳು ಒಂದಾಗುತ್ತಿದ್ದುದನ್ನೂ ಇದು ಸೂಚಿಸುತ್ತದೆ. ಉತ್ತರ ದಕ್ಪಿಣ ಭೇದವಿಲ್ಲದೆ
ಎಲ್ಲರ ಕಾಳಜಿಯೂ ಕನ್ನಡ ನುಡಿಯ ಏಳ್ಗೆಯೇ ಆಗಿತ್ತು. ಬಿ.ಎಂ.ಶ್ರೀ. ಇಂಗ್ಲಿಷ್
ಪ್ರಾಧ್ಯಾಪಕರಾಗಿದ್ದವರು, ರಾಜಸೇವಾಸಕ್ತರು. ಅವರ ಪ್ರಕಾರ ಕನ್ನಡದ ಜಡತೆಗೆ
ಕಾರಣವಾಗಿರುವುದು ಪರಕೀಯವಾದ ಇಂಗ್ಲಿಷಲ್ಲ. ಒಳಗಿನದಾದ ನಮ್ಮ'ದೇ ಆದ ಸಂಸ್ಕೃತ. ಈ ಕುರಿತು ಶ್ರೀಯವರಿಗೆ ದ್ವಂದ್ವಗಳಿರಲಿಲ್ಲ. ಇಂಗ್ಲಿಷ್ ಸಾಹಿತ್ಯವೇ ಸಂಸ್ಕೃತ ಸಾಹಿತ್ಯದಿಂದ ನಮ್ಮ ಕಾವ್ಯರೂಪಕ್ಕೆ ಇಳಿದಿರುವ ದೋಷಗಳನ್ನು ಪರಿಹಾರ ಮಾಡಬೇಕು ಎಂಬುದು ಅವರ ನಿಲುವಾಗಿತ್ತು. ಸಂಸ್ಕೃತದ ಬಗೆಗಿನ ವಿರೋಧದ ಸ್ವರೂಪವೇನು? ಅದು ಕೇವಲ ಸಾಹಿತ್ಯಕ ಪ್ರಭಾವಗಳ ಪ್ರಶ್ನೆ ಮಾತ್ರ ಆಗಿರಲಿಲ್ಲ. ದೃಷ್ಟಿಕೋನಗಳ ಬಗೆಗಿನ ಜಗಳವೂ ಆಗಿತ್ತು. ಶ್ರೀಯವರ ದೃಷ್ಟಿಕೋನ ಹೊಸದಾಗಿದ್ದರಿಂದಲೇ ಅವರು
ಇಂಗ್ಲಿಷ್
ಗೀತಗಳ’ನ್ನು ನೀಡುವುದಕ್ಕೆ ಸಾಧ್ಯವಾಯಿತು. ಈ ಕೃತಿಯ ಐತಿಹಾಸಿಕ ಮಹತ್ವ ಗೊತ್ತೇ
ಇದೆ. ಕನ್ನಡದ ಬಗೆಗಿನ ಅಂದಿನವರ ಧೋರಣೆಯನ್ನು ಶ್ರೀಯವರು ತಮ್ಮ ಭಾಷಣದಲ್ಲಿ
ಪ್ರಸ್ತಾಪಿಸಿದ್ದಾರೆ. ಈ ನಮ್ಮ ಕನ್ನಡವನ್ನು ಏನು ಕೊಳ್ಳೆಹೋಗುತ್ತದೆಂದು ಕಾಪಾಡಬೇಕು; ಕಷ್ಟ ಬಿದ್ದು ಹೆಚ್ಚಿಸಬೇಕು? ಅದರಲ್ಲಿ ನಮಗೆ ವೈರವೂ ಇಲ್ಲ, ವಿಶ್ವಾಸವೂ ಇಲ್ಲ. ಅದು ಇದ್ದರೆಷ್ಟು, ಹೋದರೆಷ್ಟು? ನಿಮಗೆ ಇನ್ನೇನೂ ಕೆಲಸವಿಲ್ಲದಿದ್ದರೆ, ಅದನ್ನು ಹಚ್ಚಿಕೊಂಡು ಹೊತ್ತು ಕಳೆಯಿರಿ, ನಮಗೆ ದುಃಖವಿಲ್ಲ.'' ಜನ ಸಾಮಾನ್ಯರಲ್ಲಿ ಇಂಥ ಭಾವನೆ ಇದ್ದಾಗ ಕನ್ನಡ ಮಾತು ತಲೆ ಎತ್ತುವ ಬಗೆ ಹೇಗೆಂಬ ಅವರ ಚಿಂತನೆ ಮಹತ್ವ ಪಡೆದುಕೊಳ್ಳುತ್ತದೆ. ಕನ್ನಡ ಎಂದಾಕ್ಷಣ ಅವಮಾನ ಎನ್ನುವ ಸ್ಥಿತಿಯನ್ನು ಕನ್ನಡಿಗರೇ ಬೆಳೆಸಿಕೊಂಡಿದ್ದಕ್ಕೆ ಐದು ಕಾರಣಗಳನ್ನು ದ.ರಾ.ಬೇಂದ್ರೆಯವರು ಗುರುತಿಸುತ್ತಾರೆ.
ಹೀಗಾಗಲಿಕ್ಕೆ ಅಂಥ
ಕಾರಣಗಳೂ ಇರುವವು. ಎಷ್ಟೋ ದಿವಸಗಳಿಂದ ರಾಜಾಶ್ರಯವನ್ನು ಕಳೆದುಕೊಂಡು
ತೊಳಲುತ್ತಿರುವ ಕರ್ನಾಟಕವು ಇಂಗ್ಲೀಷರ ಆಳಿಕೆಯಲ್ಲಿ ಭಿನ್ನ ಭಿನ್ನವಾಗಿದ್ದುದು
ಮೊದಲನೆಯ ಕಾರಣವು. ಪೇಶ್ವೆಯರ ಆಳಿಕೆ ತೀರಿದ ಮೇಲೆ ಆರೇ ಅಮಲುದಾರರ
ಆಳಿಕೆಯು ಎರಡನೆಯ ಕಾರಣವು; ರಾಜಾಶ್ರಯ ದೊರೆತ ಮೈಸೂರ ಕನ್ನಡವು
ಯಾವುದೋ ಒಂದು ಕಾರಣದಿಂದ ನಮ್ಮ ಕೂಡ ಬಳಕೆ ಮಾಡದೆ ಇದ್ದದ್ದು ಮೂರನೆಯ
ಕಾರಣ, ಕಾಲ ಪ್ರತಿಕೂಲತೆಯು ನಾಲ್ಕನೆ ಕಾರಣ, ಮೊದಲನೆಯ ತರಗತಿಯ
ಕರ್ತೃತ್ವಶಾಲಿಗಳು ಹುಟ್ಟದಿದ್ದದ್ದು ಐದನೆಯ ಕಾರಣ”37 ಎಂದು ಅವರು ಪಟ್ಟಿ
ಮಾಡುವರು. ಮೈಸೂರಿನವರ ಧೋರಣೆಯ ಕಾರಣವನ್ನು ನಾವು
ಬಿ.ಎಂ.ಶ್ರೀಯವರಲ್ಲಿಯೇ ಗುರುತಿಸಬಹುದು. ಧಾರವಾಡ ಕಡೆಯ ಸಾಹಿತಿಗಳು ಅಖಂಡ
ಕರ್ನಾಟಕದ ಪ್ರತೀಕವಾಗಿ ವಿಜಯ ನಗರದ ರತ್ನ ಸಿಂಹಾಸನವನ್ನು ಸ್ಮರಿಸುತ್ತಾರೆ. ಆದರೆ
ಬಿ.ಎಂ.ಶ್ರೀ.ಯವರ ನಿಷ್ಠೆ ಮೈಸೂರು ಮಹಾರಾಜರ ಸಿಂಹಾಸನಕ್ಕಾಗಿತ್ತು. ಈ ಮೈಸೂರು
ಅರಸರು ಒಂದು ರೀತಿಯಲ್ಲಿ ಬ್ರಿಟಿಷರ ಗುಲಾಮರಾಗಿದ್ದರು. ಶ್ರೀ ಅವರ ಕಾವ್ಯದಲ್ಲಿ
ಬ್ರಿಟಿಷ್ ರಾಣಿಯ ಹೊಗಳಿಕೆಯೂ ಬರುತ್ತದೆ. ಒಟ್ಟಾರೆಯ ಕನ್ನಡದ ಪರಿಸ್ಥಿತಿ ಮೈಸೂರು
ಭಾಗದಲ್ಲಿ ಚೆನ್ನಾಗಿ ಇದ್ದುದರಿಂದ ನಾಡು ನುಡಿಯ ಬಗೆಗಿನ ಅವರ ಕಾಳಜಿ
ವ್ಯಕ್ತವಾಗುವುದು ಸ್ವಲ್ಪ ವಿಳಂಬವಾಗಿಯೇ.
೧೯೦೭ರ ಫೆಬ್ರವರಿ ವಾಗ್ಭೂಷಣ'ದಲ್ಲಿ ಆಲೂರ ವೆಂಕಟರಾಯರು ಕನ್ನಡಿಗರ ಅಳಿವು ಉಳಿವುಗಳು ಏಕೀಕರಣದಿಂದ ಮಾತ್ರ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸಿದರು. ೧೯೧೭ರಲ್ಲಿ
ಕನ್ನಡಿಗರ ಕರ್ತವ್ಯ’ ಎಂಬ ಕೃತಿ ಪ್ರಕಟವಾಗಿದೆ. ಇದು ಕರ್ನಾಟಕ
ಸಭಾ (ಸಭಾ ಅಥವಾ ಸಭೆ) ಮೂಲಕ ಹೊರಬಂದಿದೆ. ಇದು ಈಗಾಗಲೇ ನಾವು
ನೋಡಿರುವ ಕನ್ನಡಿಗರ ಜನ್ಮ ಸಾರ್ಥಕತೆ' ಕೃತಿಗೆ ಪೂರಕವಾಗಿದೆ. ಪತ್ರಿಕೆಗೆ ಎಂಥ ಲೇಖನ ಬೇಕು?: ಕನ್ನಡ ನುಡಿಯ ಏಳ್ಗೆಯ ಸಂಬಂಧದಲ್ಲಿ
ವಾಗ್ಭೂಷಣ’ದ ಎರಡು ಸಂಚಿಕೆಗಳಲ್ಲಿ ನೀಡಿರುವ ಪ್ರಕಟಣೆಗಳನ್ನು
ಗಮನಿಸುವುದು ಇಲ್ಲಿ ಉಚಿತವಾಗುತ್ತದೆ. ೧೯೧೮ರ ಮೇ ತಿಂಗಳ ವಾಗ್ಭೂಷಣ' ಪತ್ರಿಕೆಯಲ್ಲಿ ಪತ್ರಿಕೆಗೆ ಎಂಥ ಲೇಖನಗಳನ್ನು ಕಳುಹಿಸಬೇಕು ಎಂಬ ಸೂಚನೆ ಈ ರೀತಿ ಇತ್ತು.38 ``೧.ವಾಗ್ಭೂಷಣದಲ್ಲಿ ಭಾಷಾಂತರ, ಅನುವಾದಗಳಿಂದ ಸ್ವತಂತ್ರ ಲೇಖಗಳಿಗೆ ಮೊದಲು ಸ್ಥಳ ಸಿಕ್ಕುವುದು. ೨.ಪೌರಾಣಿಕ, ಸಾಮಾನ್ಯ ನೀತಿ ವಿಷಯಕ ವಿಷಯಗಳಿಗಿಂತ ವಿವೇಚನಾತ್ಮಕವಾದ ಸಾಮಾಜಿಕ, ಔದ್ಯೋಗಿಕ, ಐತಿಹಾಸಿಕ, ವ್ಯಾವಹಾರಿಕ, ಆರ್ಥಿಕ, ಧಾರ್ಮಿಕ, ವಾಙ್ಮಾತ್ಮಕ ವಿಷಯಗಳ ಮೇಲಣ ಲೇಖನಗಳಿಗೆ ಮೊದಲು ಅಗತ್ಯವಾಗಿ ಸ್ಥಳ ಕೊಡಲಾಗುವುದು. ೩.ಹಳೆಯ ವಿಷಯಗಳ ಮೇಲೆ ಬರೆದ ಹಳೆಯ ತರದ ಕವಿತೆಗಳಿಗಿಂತ ಹೊಸ ವಿಷಯಗಳ ಮೇಲೆ ರಚಿಸಿದ ಸ್ಫೂರ್ತಿಕರವಾದ ಮನೋಹರವಾದ ಹೊಸತರದ ಸುಲಭ ಕವಿತೆಗಳು ಮೊದಲು ಮುದ್ರಿಸಲ್ಪಡುವವು. ೯.ಮೇಲೆ ೨ನೆ ಕಲಮಿನಲ್ಲಿ ಹೇಳಿದ ವಿವೇಚನ ಪರವಾದ ಲೇಖನಗಳನ್ನ ಬರೆಯುವವರೇ ಸದ್ಯದ ಕಾಲದಲ್ಲಿ ಅವಶ್ಯವಾಗಿರುವುದರಿಂದ ಅವರ ಲೇಖನಗಳನ್ನು ಮುದ್ರಿಸುವುದಲ್ಲದೆ ವಾಗ್ಭೂಷಣದ ಅನುಕೂಲತೆಯ ಪ್ರಕಾರ ಅವರಿಗೆ ದ್ರವ್ಯ ಸಹಾಯವನ್ನೂ ಮಾಡಬಹುದು.''
ವಾಗ್ಭೂಷಣ’ದ ಇನ್ನೊಂದು ಸಂಚಿಕೆಯಲ್ಲಿ ಬರೆಹಗಾರರಿಗೆ ಮಾಡಿರುವ ವಿನಂತಿ
ಈ ರೀತಿ ಇದೆ. ನಮ್ಮ ಕಲೆ- ಇತಿಹಾಸ ಮುಂತಾದ ಕರ್ನಾಟಕಕ್ಕೆ ಸಂಬಂಧಿಸಿದ ಕನ್ನಡಿಗರಲ್ಲಿ ಜಾಗ್ರತಿಯನ್ನುಂಟುಮಾಡುವ ವಿಷಯಗಳಿಗೆ ಹೆಚ್ಚು ಪ್ರಾಧಾನ್ಯವನ್ನು ಕೊಡಬೇಕೆಂದು ವಾಗ್ಭೂಷಣದ ಬಹುದಿನದ ಕೋರಿಕೆಯಿದ್ದು ಲೇಖಕರು ಈ ಮಾತನ್ನು ಮರೆಯದಿರಬೇಕು.''39 `ವಾಗ್ಭೂಷಣ'ದ ಸಂಪಾದಕರ ನಿಲುವಿನಲ್ಲಿ ನಿರ್ದಿಷ್ಟವಾದ ಅಂಶಗಳಿವೆ. ಹೊಸ ಸಾಹಿತ್ಯ ಮಾರ್ಗ ಹೇಗಿರಬೇಕು ಎಂದು ಅವರು ನಿರ್ದೇಶಿಸುತ್ತಿದ್ದಾರೆ. `ಪೌರಾಣಿಕ ಮತ್ತು ಸಾಮಾನ್ಯ ನೀತಿ ವಿಷಯಕ ವಿಷಯ'ಗಳಿಗೆ ಅವರು ನಮಸ್ಕಾರ ಹೇಳುತ್ತಿದ್ದಾರೆ. ನಾಡು ನುಡಿಯ ಬಗ್ಗೆ ಪ್ರೀತಿಯು ಹೆಚ್ಚಲು, ಅದನ್ನು ಭಾವನಾತ್ಮಕವನ್ನಾಗಿ ಮಾಡಿ ನಾಡವರ ಉಸಿರೊಳಗೆ ಮಿಳಿತಗೊಳ್ಳುವಂತೆ ಮಾಡಲು ಹಲವು ಪ್ರಯತ್ನಗಳು ಆ ಕಾಲದಲ್ಲಿ ನಡೆದವು. ಅಂಥ ಪ್ರಯತ್ನಗಳಲ್ಲಿ ಒಂದು ವಿದ್ಯಾರಣ್ಯರ ಉತ್ಸವವನ್ನು ನಾಡಹಬ್ಬವನ್ನಾಗಿ ಮಾಡಲು ಪ್ರೇರೇಪಿಸಿದ್ದು. ಅಂದಿನ `ಸ್ವಧರ್ಮ' ಪತ್ರಿಕೆ ಈ ಬಗ್ಗೆ ಪ್ರಚಾರನ್ನು ಮಾಡಿತು. ಇವರಿಗಿಂತಲೂ ಎರಡು ವರ್ಷ ಮೊದಲೇ ಅದರೆ ೧೯೨೬ರಲ್ಲಿಯೇ ದ.ರಾ.ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮರು ವಿದ್ಯಾವರ್ಧಕ ಸಂಘದ ಮೂಲಕ ನವರಾತ್ರಿ ಹಬ್ಬವನ್ನು `ನಾಡಹಬ್ಬ'ವನ್ನಾಗಿ ಆಚರಿಸುವಂತೆ ಮಾಡಿದ್ದರು. ವಿದ್ಯಾವರ್ಧಕ ಸಂಘದ ಸಭೆಯಲ್ಲಿಯೆ ನಾಡಿನ ಏಕೀಕರಣಕ್ಕೆ ಸಂಬಂಧಿಸಿದಂತೆ ಇದಕ್ಕಿಂತ ಒಂಬತ್ತು ವರ್ಷಗಳ ಹಿಂದೆಯೆ ಗೊತ್ತುವಳಿಯೊಂದನ್ನು ಸ್ವೀಕರಿಸಿದ್ದು ವಾಗ್ಭೂಷಣದಲ್ಲಿ ದಾಖಲಾಗಿದೆ. ೭-೧೦-೧೯೧೭ರಂದು ನಡೆದ ಸಭೆಯ ಗೊತ್ತುವಳಿ ಈ ರೀತಿ ಇದೆ:-
ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು, ತಾಲ್ಲೂಕು, ಜಿಲ್ಲೆಗಳನ್ನು
ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ ಕರ್ನಾಟಕ
ಪ್ರಾಂತವೆಂದು ಕರೆಯುವ ಬಗ್ಗೆ ಸರಕಾರಕ್ಕೆ ಬಿನ್ನಹ ಮಾಡಬೇಕು. ಉದಾಹರಣಾರ್ಥ
ಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡವಿರುತ್ತದೆ. ಮದ್ರಾಸ್ ಇಲಾಖೆಯಲ್ಲಿ ಬಳ್ಳಾರಿ,
ದಕ್ಪಿಣ ಕನ್ನಡ ಈ ಜಿಲ್ಲೆಗಳು ಕೂಡ ಕನ್ನಡವಿದ್ದು ಕಡಪಾ, ಕರ್ನೂಲು, ಅನಂತಪೂರ
ಮುಂತಾದ ಜಿಲ್ಲೆಗಳ ಎಷ್ಟೋ ಹಳ್ಳಿಗಳಲ್ಲಿ ತಾಲೂಕುಗಳೂ ಕನ್ನಡ ಇರುತ್ತವೆ. ಇವುಗಳನ್ನೆಲ್ಲ
ಒಟ್ಟುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವಾ ಪ್ರಾಂತವೆಂಬ ರಾಜಕೀಯ
ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ, ಹಿತಕ್ಕೂ, ಬೆಳವಣಿಗೆಗೂ
ಅನುಕೂಲವಾಗುವುದು.”
ಕನ್ನಡದ ಬಗೆಗಿನ ಈ ಬಗೆಯ ಕಾಳಜಿ ವಿದ್ಯಾವರ್ಧಕ ಸಂಘದಿಂದ, ಅದರ
ಮುಖವಾಣಿಯಾದ ವಾಗ್ಭೂಷಣ'ದಲ್ಲಿ ಹಲವು ಬಾರಿ ವ್ಯಕ್ತವಾಗಿದೆ. ಇದಕ್ಕೆ ಪೂರಕವಾಗಿ ಆಲೂರ ವೆಂಕಟರಾಯರು ೧೯೩೦ರಲ್ಲಿ ಮೈಸೂರಿನಲ್ಲಿ ನಡೆದ ೧೬ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಪ ಸ್ಥಾನದಿಂದ ನಾಡಿನ ಏಕೀಕರಣಕ್ಕೆ ನೀಡಿದ ಕರೆ ಮಹತ್ವದ್ದಾಗಿದೆ. ``ಚತುರ್ಮುಖವಾದ ಕರ್ನಾಟಕವು ಏಕಮುಖವಾಗಬೇಕಾಗಿದೆ.... ಆದುದರಿಂದ ಕನ್ನಡಿಗರೇ ಏಳಿರಿ, ಅಖಿಲ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೋಸ್ಕರ ಟೊಂಕ ಕಟ್ಟಿರಿ. ಕರ್ನಾಟಕ ವಿಶ್ವವಿದ್ಯಾಲಯವಿಲ್ಲದ ವರೆಗೆ ನಮ್ಮ ಸಾಹಿತ್ಯ ದೇವತೆ ಪದಭ್ರಷ್ಟೆ, ಅದಾದ ಮೇಲೆಯೇ ಅವಳ ಪ್ರಾಣ ಪ್ರತಿಷ್ಠೆ'' ಎಂಬ ಮಾತು ಏಕೀಕರಣದ ಬಗೆಗಿನ ಉತ್ತರ ಕರ್ನಾಟಕ ಭಾಗದವರ ಬದ್ಧತೆಯನ್ನು ತೋರಿಸುತ್ತದೆ.
ಕರ್ನಾಟಕ’ ಶಬ್ದ ಜಡತೆಯನ್ನು ತೊಡೆದು ಹಾಕುವ ಮಂತ್ರದಂಡ ಅವರ ಪಾಲಿಗೆ.
ಅದಕ್ಕಾಗಿಯೇ ಅವರು ಪಾತಾಳಕ್ಕಿಳಿದ ನಮ್ಮ ಕರ್ನಾಟಕ ಆರ್ಯ ಸಂಸ್ಕೃತಿಯನ್ನು ನಾವು
ಉದ್ಧರಿಸದೆ ಇನ್ನಾರು ಉದ್ಧರಿಸುವರು? ಎಂದು ಪ್ರಶ್ನಿಸುತ್ತಾರೆ. ಕನ್ನಡಿಗರು ಹೇಡಿಗಳು;
ಹಿಂದುಳಿದವರು, ಅಭಿಮಾನ ಶೂನ್ಯರು ಎಂದು ಮೊದಲಾದ ಕರ್ಣಕಟುವಾದ
ನುಡಿಗಳಿಂದ ನಮ್ಮನ್ನು ಚುಚ್ಚುವವರಿಗೆ ನಾವು ನಮ್ಮ ಕ್ರಿಯಾಶಕ್ತಿಯಿಂದ ಉತ್ತರ
ಕೊಡೋಣ. ಸಾಯಲಾದ ಕರ್ನಾಟಕಕ್ಕೆ ಇತಿಹಾಸದ ಸಂಜೀವಿನಿ ಮಾತ್ರೆಯನ್ನು ಹಾಕಿ
ಚೇತನಗೊಳಿಸೋಣ. ನಮ್ಮ ಆಶಾ ವೃಕ್ಷವನ್ನು ಕೊಳೆಯಿಸಿ ಬಿಡುವಂತಹ ಹುಳುಗಳನ್ನು
ಕೊಲ್ಲಲು ಇತಿಹಾಸವೇ ಮದ್ದು. ಕನ್ನಡಿಗರೇ ಕರ್ನಾಟಕ'ವೆಂಬ ಒಂದು ಶಬ್ದದಲ್ಲಿ ಎಂಥ ಅದ್ಭುತವಾದ ಮಾಂತ್ರಿಕ ಶಕ್ತಿಯು ತುಂಬಿರುತ್ತೆಂಬುದನ್ನು ಲಕ್ಷಕ್ಕೆ ತನ್ನಿರಿ! ಎಂದು ಕರೆ ಕೊಡುವರು. ಹಿಂದಿನ ಅರಸರು, ವೈಭವ, ಸಂಪತ್ತು, ಕವಿಗಳು ಎಲ್ಲರೂ ಹೋದರೂ
ಕರ್ನಾಟಕ’ ಎಂಬ ಶಬ್ದ ಮಾತ್ರ ದ್ರೌಪದಿಯ ಅಕ್ಷಯ ಪಾತ್ರೆಯ ಅಗುಳಿನಂತೆ ಇನ್ನೂ
ಉಳಿದಿದೆ. ಇದೊಂದು ಅಗುಳಿನಿಂದ ಸಾವಿರಾರು ಜನರ ಹಸಿವೆಯನ್ನು ಹಿಂಗಿಸಬಹುದು.
ಕಾರಣ ಗುಪ್ತಗಾಮಿನಿಯಾದ ಕರ್ನಾಟಕ ಸಂಸ್ಕೃತಿ ಗಂಗೆಯನ್ನು ಮೇಲಕ್ಕೆ ತರುವುದು
ನಮ್ಮ ಕರ್ತವ್ಯ ಎಂದು ಅವರು ನಮ್ಮ ಕರ್ತವ್ಯವನ್ನು ನೆನಪಿಸುವರು.
ಆಲೂರರು ಚತುರ್ಮುಖ ಕನ್ನಡ ನಾಡನ್ನು ಕಂಡರೆ ಶಾಂತಕವಿಗಳು ಐದು ಮುಖದ
ಕನ್ನಡ ನಾಡನ್ನು ನಮಗೆ ಪರಿಚಯಿಸುವರು. ತಮ್ಮ ಶ್ರೀ ವಿದ್ಯಾರಣ್ಯ ವಿಜಯ' ಕೀರ್ತನೆಯಲ್ಲಿ (೧೯೧೮) ಅವರು ಕರ್ನಾಟಕದ ಚಿತ್ರಣವನ್ನು ಈ ರೀತಿ ನೀಡುತ್ತಾರೆ:
ಇದು ಮಮ್ಮೈ ಕನ್ನಡಿ ಕೇಳ್ ಗೆಳೆಯ
ಇದು ಮದ್ರಾಸದ ಕನ್ನಡಿಯು
ಇದು ಮೈಸೂರವರಿಡಿಗನ್ನಡಿ ಮೇಣ್
ಇದು ಕೊಡಗದ ಕನ್ನಡಿ ಕಾಣೈ
ಇದು ಭಾಗ್ಯದ ನಗರದ ಕನ್ನಡಿ ಕೂ-
ಡಿದರಿವು ನಿನ್ನಿಡಿ ಕನ್ನಡಿಯು
ಈ ನಿನ್ನ ಇಡಿ ಕನ್ನಡಿಯ ಹೆಸರೇನೆಂದರೆ
ಕರ್ನಾಟಕಮಿದು!’- ಅವರ ದೃಷ್ಟಿಯಲ್ಲಿ ಇದು ಪಂಚ ಭೂತಗಳ ಕನ್ನಡಿಯೂ
ಹೌದು. ಕನ್ನಡ ಮಾತೆಯನ್ನು ಅವರು ಭುವನೇಶ್ವರಿಯನ್ನಾಗಿ ಪರಿಚಯಿಸುತ್ತಾರೆ.
ಬೇಂದ್ರೆಯವರಲ್ಲಿಯೂ ಕನ್ನಡ ನಾಡಿನ ಪಂಚ ಮುಖದ ವರ್ಣನೆ ಬಂದಿದೆ.
ಪರಮೇಶ್ವರನ ಪಂಚಮುಖಕ್ಕೆ ಇದನ್ನು ಅವರು ಹೋಲಿಸುತ್ತಾರೆ. ಅವರ ಪಾರ್ವತಿ ನೀನೇ ಸಲಹು' ಕವನವನ್ನು ನೋಡಬೇಕು:
ಬಡಗಣ ತೆಂಕಣ ಪಡುವಣ ಮೂಡಣ
ನಡುವಣ ಕನ್ನಡ ಪಂಚಶಿಖ
ಪರಮೇಶ್ವರನೊಲು ಪ್ರಪಂಚ ಪ್ರಕಟಿಸಿ
ಮೈದೋರಿತು ಇಗೊ ಪಂಚಮುಖ’
ಈ ಪಂಚ ಮುಖವನ್ನು ಏಕಮುಖವನ್ನಾಗಿ ಮಾಡಲು ಅವರು ಆಯಾ ಭಾಗಗಳ
ಶಕ್ತಿದೇವತೆಯ ಮೊರೆಹೋಗುವರು. ಕಡಲ ಪಾವನ ಪರಂಪರೆ' ಕವಿತೆಯಲ್ಲಿ ಅವರು ಮೈಸೂರಿನ ಚಾಮುಂಡಿ, ಕೊಲ್ಲೂರ ಮೂಕಾಂಬೆ, ಗೋಕರ್ಣದ ಭದ್ರಕಾಳಿ, ಬಾದಾಮಿ ಬನಶಂಕ್ರಿ, ಗುಡ್ಡದಾ ಎಲ್ಲಮ್ಮ ಎಲ್ಲರ ಹರಕೆ ನಮ್ಮ ಮೇಲಿದೆ ಎಂಬ ಭರವಸೆಯನ್ನು ತಾಳುತ್ತಾರೆ. ಒಟ್ಟಾರೆ ಕನ್ನಡ ನಾಡು ಒಂದು ಆಡಳಿತಕ್ಕೆ ಒಳಪಡಬೇಕು ಎಂಬ ಬಯಕೆ ಅಂದಿನ ಪತ್ರಿಕೆಗಳಲ್ಲಿ ಆ ಮೂಲಕ ಸಾಹಿತ್ಯದಲ್ಲಿ ಒಡಮೂಡಿದ್ದವು. ಬೆಳಗಾವಿ: ಕರ್ನಾಟಕದ ಏಕೀಕರಣದಲ್ಲಿ ಬೆಳಗಾವಿಯು ಮಹತ್ವದ ಅಂಶ. ಈ ಬೆಳಗಾವಿಯ ಮೇಲೆ ಮರಾಠಿಗರ ಕಣ್ಣು ಮೊದಲಿನಿಂದಲೂ ಇದೆ. ಇದನ್ನು ಮಹಾರಾಷ್ಟ್ರದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂಬ ಹುನ್ನಾರು ಅವರು ಮೊದಲಿನಿಂದಲೂ ನಡೆಸುತ್ತ ಬಂದಿದ್ದಾರೆ. ಇದನ್ನು ಕನ್ನಡಿಗರೂ ಸಮರ್ಥವಾಗಿ ನಿಭಾಯಿಸುತ್ತಲೇ ಬಂದಿದ್ದಾರೆ. ಐತಿಹಾಸಿಕವಾಗಿ ನಾಡಿಗೂ ನುಡಿಗೂ ಸಂಬಂಧವಿರುವ ಈ ಒಂದು ಸಂದರ್ಭವನ್ನು ಇಲ್ಲಿ ಉಲ್ಲೇಖಿಸುವುದು ಉಚಿತವೆನ್ನಿಸುತ್ತದೆ. ೧೯೨೮ರಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಗ್ವಾಲಿಯರದಲ್ಲಿ ನಡೆಯುತ್ತದೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ಒಬ್ಬಿಬ್ಬರು ಪ್ರತಿನಿಧಿಗಳನ್ನು ಕಳುಹಿಸಬೇಕು ಎಂದು ಮಹಾರಾಷ್ಟ್ರ ಸಾಹಿತ್ಯ ಪರಿಷತ್ತಿನವರು ಕರ್ನಾಟಕ ಸಾಹಿತ್ಯ ಪರಿಷತ್ತಿನವರಿಗೆ ಆಹ್ವಾನ ಕಳುಹಿಸುತ್ತಾರೆ. ಬೆಂಗಳೂರಿನಿಂದ ಯಾರೂ ಹೋಗುವವರಿಲ್ಲ, ಕಾರಣ ಧಾರವಾಡ ಕಡೆಯಿಂದ ಯಾರಾದರೂ ಹೋಗುವವರಿದ್ದರೆ ಹೋಗಬಹುದು ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನವರು ತಿಳಿಸುತ್ತಾರೆ. ಇಲ್ಲಿಂದ ದ.ರಾ.ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮರು ಹೋಗುತ್ತಾರೆ. ಮುಂದಿನ ವಿವರಗಳಿಗೆ
ವಾಗ್ಭೂಷಣ’ದ
ಸಂಪಾದಕೀಯವನ್ನು ನೋಡಬೇಕು.40
ಕರ್ನಾಟಕದ ಪರವಾಗಿ ಈ ವಿಚಾರಗಳು ನಡೆದಿರುವಾಗ ಕರ್ನಾಟಕದಲ್ಲಿ ಸೇರಿಕೊಂಡು ಅದರಲ್ಲಿಯ ಜಲ ವಾಯುಗಳನ್ನು ಸೇವಿಸಿ ಉಪ್ಪನ್ನವನ್ನುಂಡುಕೊಂಡು ಬೆಳೆದ ಮರಾಟಿಗರಲ್ಲಿ ಕೆಲವರು ಒಂದು ಕುಚೋದ್ಯವನ್ನು ಹೂಡಿದರು. ಮುಂದಿನ ವರ್ಷ (೧೯೨೯)ದ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ಕೂಡಿಸಬೇಕೆಂದು ಅವರ ಹವಣಿಕೆ! ಬೆಳಗಾವಿಯನ್ನು ಮರಾಟಿಯ ಕಾಲೊಳಗೆ ತುಳಿದಾಡಿಸಬೇಕೆಂದು ಅವರ ಕೋರಿಕೆಯಾಯಿತು. ಮಹಾರಾಷ್ಟ್ರ ಸಾಹಿತ್ಯ ಸೇವಕರ ಸೈನ್ಯವನ್ನು ಹುರಿದುಂಬಿಸಿ ಕರ್ನಾಟಕದ ಮೇಲೆ ದಾಳಿ ಕರೆಯಿಸಿ ಕನ್ನಡದ ಕೊಲೆ ಮಾಡಿಸಿಬಿಡಬೇಕೆಂದು ಅವರು ಹಂಬಲಿಸಿ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನಕ್ಕೆ ಆಮಂತ್ರಣ ಕಳುಹಿಸುವ ಸಿದ್ಧತೆ ಮಾಡತೊಡಗಿದರು.'' ಇದನ್ನು ಕರ್ನಾಟಕದ ಪ್ರತಿನಿಧಿಗಳಾದ ಬೇಂದ್ರೆ ಮತ್ತು ಬೆಟಗೇರಿಯವರು ವಿರೋಧಿಸುತ್ತಾರೆ. ಉಂಡಮನೆಯ ಗಳ ಎಣಿಸುವ ಈ ಅಲ್ಪಸಂಖ್ಯಾಕರ ಆಮಂತ್ರಣವನ್ನು ಕನ್ನಡಿಗರ ಮನಸ್ಸಿನ ವಿರುದ್ಧವಾಗಿ ಸ್ವೀಕರಿಸಬೇಡಿರೆಂದೂ ತಿಳಿಸುತ್ತಾರೆ. ಇದರ ಪರಿಣಾಮವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಗಳು ಮರಾಠಿಗರ ತಿರಸ್ಕಾರಕ್ಕೊಳಗಾಗುತ್ತಾರೆ. ಅವರನ್ನು ಹಾದಿಹೋಕರಂತೆ ಕಾಣಲಾಯಿತು ಎಂದು `ವಾಗ್ಭೂಷಣ' ಬರೆಯುತ್ತದೆ. ಗ್ವಾಲಿಯರದ ಅನುಭವಗಳನ್ನು ಬೇಂದ್ರೆ ಮತ್ತು ಬೆಟಗೇರಿಯವರು ಪತ್ರಿಕೆಗಳಿಗೆ ವಿವರಿಸುತ್ತಾರೆ. ಆ ಬಳಿಕ ಕನ್ನಡಿಗರೆಲ್ಲರೂ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಳನವು ಬೆಳಗಾವಿಯಲ್ಲಿ ನಡೆಯಕೂಡದೆಂದು ಒಮ್ಮನಸ್ಸಿನಿಂದ ಹೇಳುತ್ತ ಬಂದರು.
ಬೆಳಗಾವಿಯಲ್ಲಿ ಕೂಡಲಿಕ್ಕಿರುವ ಪ್ರಾಂತಿಕ ಪರಿಷತ್ತನ್ನು ಸವದತ್ತಿಗೆ ದೂಡಿ
ಬೆಳಗಾವಿಯು ಕರ್ನಾಟಕ ಪ್ರಾಂತದ ಕಾರ್ಯಕ್ಪೇತ್ರದಿಂದ ಹೊರಗಿರುವದೆಂದು
ತೋರಿಸುವ ಪ್ರಯತ್ನವೂ ನಡೆದಿರುವುದಂತೆ! ಭಲೆ! ಮರಾಟರೇ ನಿಮ್ಮ ಗನಿಮೀ ಕಾವಾ' ಚೆನ್ನಾಗಿದೆ. ಈ ತರದ ಹೊಳ್ಳು ಹಂಚಿಕೆಗಳು ನಿಮಗೆ ಯಶಸ್ಸು ಕೊಡಬಹುದೆಂದು ನಾವು ನಂಬಲಾರೆವು'' ಎಂದು ವಾಗ್ಭೂಷಣವು ಮರಾಠರ ಕುತಂತ್ರವನ್ನು ಬಯಲಿಗಿಡುವುದು. ``.... ಮರಾಟರಂತೂ ಈ ರೀತಿ ಕರ್ನಾಟಕದ ಮೇಲೆ ದಾಳಿ ಮಾಡುವುದನ್ನು ನಿಶ್ಚಯಿಸಿದ್ದಾರೆ. ನಾವು ಕನ್ನಡಿಗರು ಇದಕ್ಕೆ ಮಾಡತಕ್ಕುದೇನು? ಮರಾಟರ ಈ ದಾಳಿಯನ್ನು ಬಾಯಿಗೆ ಬಾಯಿ ಹಚ್ಚಿ ತಡೆಯುವುದು ಕನ್ನಡಿಗರ ಶಾಂತತಾ ಪ್ರಿಯ ಸರಳತೆಗೆ ಒಪ್ಪತಕ್ಕ ಮಾತೇ ಹೇಗೆ ಎಂಬದೊಂದು ಪ್ರಶ್ನೆಯುಳಿದಿದೆ. ಅದನ್ನು ಮುಂದೆ ವಿಚಾರಿಸೋಣ. ಮೊದಲು ಮರಾಟರು ಕನ್ನಡಿಗರನ್ನು ರೊಚ್ಚಿಗೇಳಿಸುವ ಕುಹಕ ಭಾವನೆಯಿಂದ ನಡೆಸುವ ಈ ಕಾರ್ಯವನ್ನು ಎಲ್ಲರೂ ಒಮ್ಮನಸ್ಸಿನಿಂದ ನಿಷೇಧಿಸೋಣ'' ಎಂದು
ವಾಗ್ಭೂಷಣ’ ಕರೆ ಕೊಡುತ್ತದೆ.
ಇದೇ ಸಂಚಿಕೆಯಲ್ಲಿ ಓರ್ವ ಕನ್ನಡದ ಆಳು' ಬರೆದು ಕಳುಹಿಸಿದ ಪತ್ರವನ್ನು ಪ್ರಕಟಿಸಲಾಗಿದೆ. ಇದು ಆ ಒಬ್ಬನ ಅಭಿಪ್ರಾಯವನ್ನು ಸಂಕೇತಿಸುವುದಿಲ್ಲ, ಮುಂಬೈ ಕರ್ನಾಟಕದ ಎಲ್ಲ ಕನ್ನಡಿಗರ ಅಭಿಪ್ರಾಯವೂ ಆಗಿತ್ತು. ಮರಾಠಿಗರ ಆಕ್ರಮಣಕ್ಕೆ ಪ್ರತಿಕಾರ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಇದೆಲ್ಲ ಆ ಮರಾಠಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿಯೇ ವ್ಯಕ್ತವಾದ ಅಭಿಪ್ರಾಯಗಳು ಎನ್ನುವುದನ್ನು ಗಮನಿಸಬೇಕು. ಮರಾಠಿಗರು ``...ಹಠದಿಂದ ಕನ್ನಡ ನಾಡಿನಲ್ಲಿಯೇ ತಮ್ಮ ಸಾಹಿತ್ಯ ಸಮ್ಮೇಳವನ್ನು ನೆರೆಯಿಸಿದರೆ ಕನ್ನಡಿಗರಲ್ಲಿ ಅವರು ತಮ್ಮ ವಿಷಯವಾಗಿ ಅನಾದರ ಭಾವವನ್ನು ತಾವೇ ಉಂಟುಮಾಡಿಕೊಂಡಂತೆ ಆಗುವುದು. ಆಗ ಕನ್ನಡ ನಾಡಿನವರು ಮರಾಠಿಗರ ವಿಷಯವಾಗಿ ತಮ್ಮಲ್ಲುಂಟಾದ ಅನಾದರ ಭಾವವನ್ನು ಕೆಳಗೆ ಹೇಳುವ ಉಪಾಯಗಳಿಂದ ವ್ಯಕ್ತಗೊಳಿಸಬೇಕಾಗುವುದು. ಮತ್ತು ಈ ಪ್ರಕಾರದ ಪರನಾಡಿನವರ ಆಕ್ರಮಣಕ್ಕೆ ತಮ್ಮ ಈ ವರೆಗಿನ ಔದಾಸೀನ್ಯವೇ ಕಾರಣವೆಂದು ತಿಳಿದು ಇನ್ನುಮುಂದೆ ಅವರ ಆಕ್ರಮಣವು ತಮ್ಮ ಮೇಲೆ ಆಗದಂತೆ ಮಾಡಬೇಕಾಗುವ ಕೆಳಗೆ ಹೇಳುವ ಉಪಾಯಗಳನ್ನು ಐದು ಮನೆಯ ಹಳ್ಳಿಯಿಂದ ದೊಡ್ಡ ಪಟ್ಟಣಗಳ ವರೆಗೂ ಸಮಗ್ರ ಕರ್ನಾಟಕದಲ್ಲಿ ಎಲ್ಲೆಲ್ಲಿಯೂ ಕನ್ನಡಿಗರು ಮಾಡುವರೆಂದು ಆಶಿಸುತ್ತೇವೆ. ೧.ಕನ್ನಡಿಗರು, ತಮ್ಮ ಮಕ್ಕಳು ಮರಾಠಿ ಭಾಷೆಯನ್ನು ಮತ್ತು ಮರಾಠಿ ಲಿಪಿಯನ್ನು ಕಲಿಯದಿರುವಂತೆ ಎಚ್ಚರ ಪಡಬೇಕು. ೨.ಒಂದು ವೇಳೆ ಕಲಿತಿದ್ದರೆ ಯಾವ ಕನ್ನಡಿಗನೂ ಕರ್ನಾಟಕದೊಳಗಿನ ಮರಾಠಿಗನೊಡನೆ ಮರಾಠಿಯಲ್ಲಿ ಮಾತನಾಡಕೂಡದು: ಹೀಗೆ ನಡೆದು ಮರಾಠಿಗನಿಗೆ ಕನ್ನಡವನ್ನು ಕಲಿತ ಹೊರ್ತು ಗತಿಯಿಲ್ಲವೆಂದು ಮನವರಿಕೆ ಮಾಡಿಕೊಡಬೇಕು. ೩.ಕನ್ನಡ ನಾಡಿನಲ್ಲಿ ಜೀವಿಸಿ ಮರಾಠಿಯನ್ನಾಡುವ ವಕೀಲ, ವ್ಯಾಪಾರಿ, ಡಾಕ್ಟರ, ಶಿಂಪಿ, ನಾಪಿತ, ಅಗಸ ಮುಂತಾದವರ ಸಂಗಡ ಬಳಕೆಯನ್ನು ಶಕ್ಯವಿದ್ದ ಮಟ್ಟಿಗೆ ಬಿಡಲಿಕ್ಕೆ ಪ್ರಯತ್ನಿಸಬೇಕು. ೪.ಕನ್ನಡ ನಾಡಿನಲ್ಲಿ ಎಲ್ಲಿಯೂ ಮರಾಠಿ ಲಿಪಿಯ ಬೋರ್ಡುಗಳು, ಸಾರ್ವಜನಿಕ ಪ್ರಕಟಣೆಗಳು, ಸರಕಾರಿ ಫಾರ್ಮುಗಳು ಮುಂತಾದವು ಉಂಟಾಗದಂತೆ ಪ್ರಯತ್ನಿಸಬೇಕು. ಇಂಜಿನಿಯರ್; ರೇಲ್ವೆ, ಪೋಸ್ಟಲ್ ಮುಂತಾದ ರಾಜಕೀಯ ವಿಭಾಗಗಳ ಅಧಿಕಾರಿಗಳನ್ನು ಪ್ರಾರ್ಥಿಸಿ ಈ ತರದ ವ್ಯವಸ್ಥೆಯನ್ನು ಮಾಡಿಸಿಕೊಳ್ಳಬೇಕು. ೫.ಕನ್ನಡ ಭಾಷೆಯಲ್ಲಿ ಮರಾಠಿ ಶಬ್ದಗಳ ಬಳಕೆಯು ಶಕ್ಯವಿದ್ದ ಮಟ್ಟಿಗೆ ಇಲ್ಲದಂತೆ ಮಾಡಬೇಕು. ಉಳಿದ ಭಾಷೆಗಳ ಶಬ್ದಗಳಿಗಿಂತ ಅವುಗಳ ಪ್ರವೇಶಕ್ಕೆ ಕಡೆಯ ನಂಬರು ಕೊಡಬೇಕು. ೬.ಮರಾಠಿ ನಾಟಕಗಳು ನಡೆದ ನಾಟಕ ಗೃಹಗಳ ಬಳಿಯಲ್ಲಿ ನಿವಾರಣ (ಪಿಕೆಟಿಂಗ್) ಕಾರ್ಯವನ್ನು ನಡೆಸಬೇಕು. ೭.ಕನ್ನಡ ನಾಡಿನಲ್ಲಿ ಮರಾಟಿಯ ಗ್ರಂಥಗಳು, ವರ್ತಮಾನ ಪತ್ರಗಳು, ಮಾಸ ಪತ್ರಿಕೆಗಳು ಮುಂತಾದ ವಾಙ್ಮಯವು ಸೇರದಂತೆ ಪ್ರಯತ್ನಿಸಬೇಕು. ಕನ್ನಡಿಗರ ಬಹುಮತವುಳ್ಳ ಇಲ್ಲವೆ ಬಹುಮತ ಮಾಡಿಕೊಳ್ಳಬಹುದಾದ ವಾಚನಾಲಯಗಳಲ್ಲಿ ಮರಾಠಿ ಪತ್ರಿಕೆಗಳಾಗಲಿ, ಪುಸ್ತಕಕ್ಕಾಗಲಿ ಪ್ರವೇಶವಾಗದಂತೆ ಮಾಡುವುದು. ಈಗ ಅವುಗಳಲ್ಲಿದ್ದ ಪುಸ್ತಕಗಳನ್ನು ಮರಾಟಿ ನಾಡಿಗೆ ಉಚಿತವಾಗಿ ಕಳುಹಿಬಿಡುವುದು. ಮರಾಟಿಯ ಪುಸ್ತಕವನ್ನು ಬಿಟ್ಟರೆ ಗತಿಯಿಲ್ಲವೆಂಬಂತಹ ಪುಸ್ತಕಗಳಿದ್ದರೆ ಅಂತಹ ಪುಸ್ತಕಗಳನ್ನು ಕನ್ನಡ ನಾಡಿನವರು ತೀವ್ರ ಸಿದ್ಧಪಡಿಸುವಂತೆ ಅನುಕೂಲತೆ ಮಾಡಿಕೊಡಬೇಕು. ೮.ಮರಾಟಿಗರ ಗಾಯನ, ವ್ಯಾಖ್ಯಾನ ಕೀರ್ತನ ಮೊದಲಾದವನ್ನು ಕೇಳದಿರುವುದು; ಮತ್ತು ಅವು ನಡೆವಲ್ಲಿ ನಿವಾರಣ ಕಾರ್ಯವನ್ನು ನಡೆಯಿಸುವುದು. ೯.ಮರಾಟಿ ಕವಿತೆ ಮುಂತಾದವನ್ನು ಸೇರಿಸಿ ನಡೆಯಿಸುವ ಕನ್ನಡಿಗರ ಪುರಾಣ, ಕೀರ್ತನ ಮುಂತಾದವನ್ನು ನಿರಾಕರಿಸುವುದು. ೧೦.ಕನ್ನಡ ಮಾತೃ ಭಾಷೆಯಾಗಿದ್ದ ಕನ್ನಡಿಗನು ಕನ್ನಡ ನಾಡಿನ ಸಭೆಗಳಲ್ಲಿ ಮರಾಟಿಯನ್ನಾಡತೊಡಗಿದರೆ ಅವನ ಮೋ.... ಬೇಕು. ೧೧.ಕನ್ನಡ ನಾಡಿನ ಮುನಸಿಪಾಲಿಟಿ, ಲೋಕಲ್ ಬೋರ್ಡು ಮತ್ತು ಸಹಕಾರಿ ಸಂಘ ಮುಂತಾದ ಎಲ್ಲ ಸ್ಥಾನಿಕ ಸಂಸ್ಥೆಗಳಲ್ಲಿ ಮರಾಠಿ ಮಾತೃ ಭಾಷೆಯವನು ಲೋಕಮತದಿಂದ ಆರಿಸಲ್ಪಡದಂತೆಯೂ ಸರಕಾರದಿಂದ ನಿಯುಕ್ತನಾಗದಂತೆಯೂ ಪ್ರಯತ್ನಿಸಬೇಕು. ೧೨.ಕನ್ನಡ ನಾಡಿನ ಹಿತವಿಲ್ಲದ ಮರಾಟಿ ದೇಶದ ಕಾರ್ಯಗಳಿಗೆ ಹಣದ ಸಹಾಯವನ್ನು ಮಾಡದಿರುವಂತೆ ಕಟ್ಟುಮಾಡಿಕೊಳ್ಳಬೇಕು. ಈ ದ್ವಾದಶ ಸೂತ್ರಗಳು ಬೆಳಗಾವಿಯ ಮಟ್ಟಿಗೆ ಇವತ್ತಿಗೂ ಅಗತ್ಯವೇನೋ? ಈ ಪತ್ರಕ್ಕೆ ಸಮರ್ಥನೆಯಾಗಿ
ವಾಗ್ಭೂಷಣ’ದ ಸಂಪಾದಕರು, ಒಂದು ಘಟನೆಯನ್ನು
ವಿವರಿಸಿದ್ದಾರೆ. ಧಾರವಾಡದ ಎಡ್ವರ್ಡ್ ಪಾರ್ಕಿನಲ್ಲಿ ದೇಶಪಾಂಡೆ ಗಂಗಾಧರ ರಾಯರು
ಮರಾಠಿಯಲ್ಲಿ ಮಾತನಾಡತೊಡಗಿದಾಗ ಅದನ್ನು ಕಡಪಾ ರಾಘವೇಂದ್ರ ರಾಯರು ಪ್ರತಿಭಟಿಸಿ
ದೇಶಪಾಂಡೆಯವರು ಕನ್ನಡದಲ್ಲಿಯೇ ಮಾತನಾಡುವಂತೆ ಮಾಡುವರು. ಕನ್ನಡಿಗರಲ್ಲಿಯೇ
ಕೆಲವರು ರಾಘವೇಂದ್ರ ರಾಯರನ್ನು ಉತಾವಳಿ ಸ್ವಭಾವದವರು, ಕನ್ನಡದ ದುರಭಿಮಾನಿಗಳು
ಎಂದು ಜರೆಯುತ್ತಾರೆ. ಆದರೆ ಈ ಉತಾವಳಿ ಸ್ವಭಾವದ ರಾಘವೇಂದ್ರ ರಾಯರ ಮಾತೇ
ಈಗ ನಮಗೆ ಮನೆ ಮಾತಾಗಿದೆ; ಕನ್ನಡಿಗರ ಉದ್ಧಾರದ ಕಿವಿ ಮಾತಾಗಿದೆ ಎಂದು ವಾಗ್ಭೂಷಣದ
ಸಂಪಾದಕರು ಹೇಳುತ್ತಾರೆ.
ಒಟ್ಟಾರೆ ನಾಡಿನಿಂದ ನುಡಿಯ ಬೆಳವಣಿಗೆ, ನುಡಿಗಾಗಿ ನಾಡು ಎಂಬ ಅರಿವಿನೊಂದಿಗೆ
ನವೋದಯ ಸಂದರ್ಭದಲ್ಲಿ ಪತ್ರಿಕೆಗಳು ಕೆಲಸ ಮಾಡಿದವು. ಅದರ ಪ್ರತಿಫಲನವನ್ನು ನಾವು
ಅಂದಿನ ಸಾಹಿತ್ಯ ಕೃತಿಗಳಲ್ಲಿಯೂ ಕಾಣುತ್ತೇವೆ.
ತಾಯಿಯ ಸ್ಥಾನದಲ್ಲಿ: ನವೋದಯದ ಎಲ್ಲ ಕವಿಗಳ ಕೃತಿಗಳನ್ನು
ಪರಿಶೀಲಿಸಿದಾಗ ಈ ಕನ್ನಡ ಧರ್ಮವನ್ನು ಅವರು ನಿಷ್ಠೆಯಿಂದ ಪಾಲಿಸಿದ್ದು ಕಂಡು ಬರುತ್ತದೆ.
ಬಿ.ಎಂ.ಶ್ರೀ.ಯವರ ಕನ್ನಡ ತಾಯ್ ಗೆಲ್ಗೆ, ಬಾಳ್ಗೆ!'ಯಲ್ಲಿ ಕನ್ನಡಿಗರೆಲ್ಲ ಒಡಹುಟ್ಟಿದವರು. ನಾಡು ನುಡಿ ನಡೆಗಳನು ಮುನ್ನಡೆಗೆ ನಡೆಸುತ್ತ, ಮುಂದೆ ಸಾಗುವಿರಾ? ಎಂದು ಅವರು ಪ್ರಶ್ನಿಸುತ್ತಾರೆ. ಒಕ್ಕೊರಲಲೆಲ್ಲರೂ ಕೂಗಿ ಈ ಒಕ್ಕೂಗ- ಈ ಹಿರಿಯ ಕೂಗ-
ಸಿರಿಗನ್ನಡಂ ಗೆಲ್ಗೆ; ಹಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಬಾಳ್ಗೆ
ಕನ್ನಡದ ತಾಯ್ ಗೆಲ್ಗೆ, ಬಾಳ್ಗೆ’
ನಾಡನ್ನು ಮತ್ತು ನುಡಿಯನ್ನು ತಾಯಿಯ ಸ್ಥಾನದಲ್ಲಿಟ್ಟು ಗೌರವಿಸುವ ಪರಿಪಾಟ
ನವೋದಯದಲ್ಲಿ ಆರಂಭವಾಯಿತು. ನಾಡು ನುಡಿಯೊಂದಿಗೆ ಇಂಥ ಭಾವನಾತ್ಮಕ
ಸಂಬಂಧ ಏಕೀಕರಣದ ಹೋರಾಟದ ಸಂದರ್ಭದಲ್ಲಿ ಅಗತ್ಯವಾಗಿತ್ತು. ಕನ್ನಡ ಡಿಂಡಿಮವ
ಬಾರಿಸುವ ಕುವೆಂಪು ಕೂಡ ಜೈ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ|' ಎಂದು ಘೋಷಿಸುತ್ತಾರೆ. ತೀ.ನಂ.ಶ್ರೀಕಂಠಯ್ಯನವರು
ಸ್ವಾಗತ’ದಲ್ಲಿ ,
ಒಬ್ಬ ಕನ್ನಡ ದೇವಿಯುದರದಿಂದೊಗೆದು,
ಒಬ್ಬ ಕನ್ನಡ ಜನನಿಯೆದೆಹಾಲ ಮೊಗೆದು
ಒಬ್ಬ ಮಾತೆಯ ಮಡಿಲು ತೊಡೆಗಳಲಿ ಕುಣಿದು,
ಒಬ್ಬ ತಾಯುಲಿಗಳನೆ ತೊದಲಿ ಕುಣಿದು,
ಬೆಳೆದ ಕನ್ನಡಿಗರೇ, ಬಂಧು ಕನ್ನಡಿಗರೇ
ಇನಿಯ ಕನ್ನಡಿಗರೇ, ಸ್ವಾಗತವು ನಿಮಗೆ!- ಎಂದು ಹಾಡಿದ್ದಾರೆ.
ಎಂ.ಗೋವಿಂದ ಪೈಗಳು ಕೂಡ ಕನ್ನಡವನ್ನು ತಾಯಿಯೆಂದೇ ಬಗೆಯುತ್ತಾರೆ.
ಅವರ, ಕನ್ನಡಿಗರ ತಾಯಿ' ಪದ್ಯದಲ್ಲಿ
ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ|
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ|’
ಎಂದು ಹಾಡುತ್ತಾರೆ. ಕನ್ನಡಾಂಬೆಯ ಹಿರಿಮೆ ಸಾರುವ ಬೆನಗಲ್ ರಾಮರಾವ್
ಅವರು, ಕನ್ನಡವನುಳಿದೆನಗೆ| ಅನ್ಯ ಜೀವನವಿಲ್ಲ| ಕನ್ನಡವೇ ಎನ್ನುಸಿರು| ಪೆತ್ತೆನ್ನ ತಾಯಿ|' ಎಂದು ಹೇಳಿದ್ದಾರೆ. ಹುಯಿಲಗೋಳ ನಾರಾಯಣರಾವ್
ಉದಯವಾಗಲಿ ನಮ್ಮ ಚಲುವ
ಕನ್ನಡನಾಡು’ ಎಂದು ಹಾಡುತ್ತಾರೆ. ಸಾಲಿ ರಾಮಚಂದ್ರರಾಯರು ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ!' ಎನ್ನುತ್ತಾರೆ. ಶಾಂತ ಕವಿಗಳು
ರಕ್ಪಿಸು ಕರ್ನಾಟಕ ದೇವಿ’
ಬರೆಯುತ್ತಾರೆ. ಅಂಬಿಕಾತನಯದತ್ತರು ಕನ್ನಡ ನಾಡ ರಾಣಿ', ಕಯ್ಯಾರ ಕಿಞ್ಞಣ್ಣ ರೈ
ಬೆಂಕಿ ಬಿದ್ದಿದೆ ಮನೆಗೆ’ ಬರೆಯುವರು. ಪು.ತಿ.ನರಸಿಂಹಾಚಾರ್, ಕನ್ನಡ ಉಳಿಸಿ' ಕವಿತೆಯಲ್ಲಿ
ಕನ್ನಡ ಉಳಿಸಿ- ಕನ್ನಡ ಬೆಳೆಸಿ| ಕನ್ನಡವನೆ ಬಳಸಿ’ ಎಂದು ಕರೆ ನೀಡುವರು.
ಅವರ ದೃಷ್ಟಿಯಲ್ಲಿ ನಾಡೇ ನುಡಿಯು, ನುಡಿಯೇ ನಾಡು'
ಕನ್ನಡಕೇತಕೆ
ಹೆರನುಡಿಯೊಜ್ಜೆ’ ಎಂದು ಅವರು ಪ್ರಶ್ನಿಸುತ್ತಾರೆ. ಹಚ್ಚೇವು ಕನ್ನಡದ ದೀಪ' ಎಂದು ಡಿ.ಎಸ್.ಕರ್ಕಿಯವರು ಬರೆಯುತ್ತಾರೆ.
ಹೊತ್ತಿತೋ ಹೊತ್ತಿತು’ ಕನ್ನಡದ ದೀಪ ಕವಿತೆಯನ್ನು
ಸಿದ್ದಯ್ಯ ಪುರಾಣಿಕರು (ಕಾವ್ಯಾನಂದ) ಬರೆಯುತ್ತಾರೆ. ಹೊಸಗನ್ನಡದ ಹಾಡು'ದಲ್ಲಿ ಗೋಪಾಲಕೃಷ್ಣ ಅಡಿಗರು,
ಇಂದು ಕೂಡ ಆಗದೆ,
ಕನ್ನಡವೊಂದಾಗದೆ?
ಭೇದದ ಹುಳಿ ನೀಗದೇ…’ ಎಂದು ವಿಷಾದಿಸುತ್ತಾರೆ.
ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಎನ್ನುವ ಕುವೆಂಪು ಅವರಿಗೆ
ಮೆಟ್ಟುವ ನೆಲ-
ಅದೇ ಕರ್ನಾಟಕ’ವಾಗಿದೆ.
ಕನ್ನಡವೆನೆ ಕುಣಿದಾಡುವುದೆನ್ನೆದೆ
ಕನ್ನಡವೆನೆ ಕಿವಿ ನಿಮಿರುವುದು! ಎಂದು ಅವರು ಆತ್ಮೀಯವಾಗಿ ಹಾಡಿದ್ದಾರೆ.
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ' ಮೂಡುತ್ತದೆ ಎಂದು ಅವರು ಹೇಳಿದ್ದಾರೆ. ಕನ್ನಡದ ಬಗೆಗಿನ ಕುವೆಂಪು ಅವರ ಕಳಕಳಿ ಅನನ್ಯವಾದುದು. ಅನ್ಯಭಾಷೆಗಳ ಆಕ್ರಮಣದಲ್ಲಿ ಕನ್ನಡ ಬಡವಾಗುವುದನ್ನು ನೋಡಿ ಸಹಿಸುವುದು ಅವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವರು, ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ, ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ! ರಾಜನುಡಿಯೆಂದೊಂದು ರಾಷ್ಟ್ರ ನುಡಿಯೆಂದೊಂದು ದೇವನುಡಿಯೆಂದೊಂದು ಹತ್ತಿ ಜಗ್ಗಿ ನಿರಿನಿಟಿಲು ನಿಟಿಲೆಂದು ಮುದಿ ಮೂಳೆ ಮುರಿಯುತಿದೆ ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ! ಕೂಗಿಕೊಳ್ಳಲು ಕೂಡ ಬಲವಿಲ್ಲ; ಮಕ್ಕಳೇ ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ! ಎಂದು ಅವರು ಟೀಕಿಸುತ್ತಾರೆ. ಇಂಗ್ಲಿಷಿನ ಹೇರಿಕೆಯ ವಿರುದ್ಧ ಅವರ ಆಕ್ರೋಶ ನೋಡಿ; ಹೆಣಭಾರ! ಹೆಣಭಾರ! ಸಾಕೀ ಬಲಾತ್ಕಾರ; ಸಾಕು ನಿಲ್ಲಿಸಿ, ನಿಮಗೆ ಬೇಕಾದರುದ್ಧಾರ ಇಂಗ್ಲೀಷಿನ, ಚಪ್ಪಡಿಯಡಿಯ ಹಸುಳೆ ಚೀತ್ಕಾರ ಕೇಳಿಸದ ಕಿವುಡರಿರ ನಿಮಗೇಕೆ ಅಧಿಕಾರ? ಕೇಳಿಯೂ ಧಿಮ್ಮನಿರೆ ಕೋಟಿ ಧಿಕ್ಕಾರ! ಬೇಕಾದವರಿಗೆ ಕೊಡಿರೊ, ಬೇಡವೆಂದವರಾರೊ? ಹೇರಿ ಎಲ್ಲರ ಮೇಲೆ ಕೊಲೆಗೈವಿರೇಕೋ? ಎನ್ನುವ ಕುವೆಂಪು ಕನ್ನಡದ ಬಗ್ಗೆ ನಿರ್ಲಕ್ಷಿತವಾಗಿರುವ ಅಧಿಕಾರಶಾಹಿಗೇ ಧಿಕ್ಕಾರ ಹೇಳುವರು. ಇಂಗ್ಲಿಷ್ ಕಲಿಕೆ ಐಚ್ಛಿಕವಾಗಿರಬೇಕು ಎನ್ನುವುದು ಅವರ ಅಭಿಪ್ರಾಯ. ಕುವೆಂಪು ಅವರ ಅಖಂಡ ಕರ್ನಾಟಕದ ಕನಸು ನೋಡಿ: ನೃಪತುಂಗನೆ ಚಕ್ರವರ್ತಿ ಪಂಪನಲ್ಲಿ ಮುಖ್ಯಮಂತ್ರಿ ರನ್ನ ಜನ್ನ ನಾಗವರ್ಮ ರಾಘವಾಂಕ ಹರಿಹರ ಬಸವೇಶ್ವರ ನಾರಾಣಪ್ಪ ಸರ್ವಜ್ಞ ಷಡಕ್ಷರ; ಸರಸ್ವತಿಯು ರಚಿಸಿದೊಂದು ನಿತ್ಯ ಸಚಿವ ಮಂಡಲ, ತನಗೆ ರುಚಿರ ಕುಂಡಲ ಅಖಂಡ ಕರ್ನಾಟಕ; ಅಲ್ತೋ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ (ಅಖಂಡ ಕರ್ನಾಟಕ) ಕುವೆಂಪು ಅವರು ನೃಪತುಂಗನನ್ನೇ ಚಕ್ರವರ್ತಿ ಎಂದು ಕರೆಯಲು ಕಾರಣ, ಅವನು ಸಾಹಿತಿಯೂ ಹೌದು, ಕನ್ನಡದ ಪ್ರಥಮ ಉಪಲಬ್ಧ ಕೃತಿ ಅವನ ಹೆಸರಿನಲ್ಲಿಯೇ ಇರುವುದು. ಒಟ್ಟಾರೆ ಇದೊಂದು ಪರಿಪೂರ್ಣ ಸಚಿವ ಮಂಡಲ. ಕನ್ನಡಿಗರ ಉದಾರತೆಯೇ ದೋಷವಾಗಿರುವ ಪರಿಯನ್ನು ಜಿ.ಪಿ.ರಾಜರತ್ನಂ ಅವರ ಪದ್ಯದಲ್ಲಿ ನೋಡಬಹುದು. ಕರೆದು ತಣಿಯರು ಕೊಟ್ಟು ತಣಿಯರು ಸುರಿದು ಸೂರೆಯನಿಟ್ಟು ತಣಿಯರು ಹರಿದು ತಮ್ಮದ ಹಂಚಿ ತಣಿಯರು ನಾಡನು ಇತರರಿಗೆ| ಮೆರೆದು ತಣಿಯರು ನುಡಿಯೆ ಪರರದು ಮೊರೆದು ತಣಿಯರು ನುಡಿಯೆ ಪರರದು ನೆನೆದು ತಣಿಯರು ತಮ್ಮ ಜೀವನ ಪರರ ಬೆಳೆಗಾಗಿ॥ ನಾಡನ್ನು ಅನ್ಯರಿಗೆ ಬಿಟ್ಟುಕೊಡುವುದು, ಪರರ ನುಡಿಯನ್ನು ತಮ್ಮದೆಂದು ಆಡುವುದನ್ನು ರಾಜರತ್ನಂ ಇಲ್ಲಿ ವ್ಯಂಗ್ಯವಾಗಿ ವರ್ಣಿಸಿದ್ದಾರೆ. ಕನ್ನಡ ನಾಡಿನ ಏಕೀಕರಣವನ್ನು ಬಯಸಿದ ಈ ಕವಿಗಳಲ್ಲಿ ಧಾರವಾಡ, ಮೈಸೂರು, ಮಂಗಳೂರು ಭಾಗದ ಕವಿಗಳೆಲ್ಲರೂ ಸೇರಿದ್ದಾರೆ. ಕೇವಲ ಕಾವ್ಯದಲ್ಲಿ ಮಾತ್ರವಲ್ಲ ಆ ಕಾಲದ ಇತರ ಬರೆಹಗಳಲ್ಲೂ ನಾಡು ನುಡಿಯ ಬಗೆಗಿನ ಕನ್ನಡ ಧರ್ಮ ಪಾಲನೆಯಾಗಿದೆ. ಹಂಪಿ, ವಿಜಯ ನಗರ ಸಾಮ್ರಾಜ್ಯ, ವಿದ್ಯಾರಣ್ಯರು ಇದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದನ್ನು ಇಲ್ಲಿ ಗಮನಿಸಬಹುದು. ಡಿ.ವಿ.ಗುಂಡಪ್ಪನವರು
ಶ್ರೀ ವಿದ್ಯಾರಣ್ಯ
ವಿಜಯ’ ಎಂಬ ಕೃತಿಯನ್ನು ರಚಿಸಿದ್ದಾರೆ. ಅದೇ ರೀತಿ ಎಂ.ಆರ್.ಶ್ರೀನಿವಾಸ ಮೂರ್ತಿ
ನಾಗರಿಕ', ನರಸಿಂಗ ಲಕ್ಪ್ಮಣ ಹೆಗ್ಗಡೆ
ಕರ್ನಾಟಕ ಸಿಂಹಾಸನ ನಾಟಕವು’, ಶಾಂತ ಕವಿಗಳು
ಶ್ರೀ ವಿದ್ಯಾರಣ್ಯ ವಿಜಯ', ಹೊಸಕೆರೆ ಚಿದಂಬರಯ್ಯ
ವಿದ್ಯಾರಣ್ಯ ಕಾವ್ಯಂ’, ಆಲೂರ
ವೆಂಕಟರಾಯರು ವಿದ್ಯಾರಣ್ಯರ ಚರಿತ್ರೆ', ಸಿ.ವೆಂಕಟರಣಮಯ್ಯ
ಶ್ರೀವಿದ್ಯಾರಣ್ಯ
ಚರಿತ್ರ ಸಂಗ್ರಹ’, ಭೀಮಾಜಿ ಜೀವಾಜಿ ಹುಲಿಕವಿ ಶ್ರೀ ವಿದ್ಯಾರಣ್ಯ ಸ್ವಾಮಿಗಳು' ಕೃತಿ ರಚಿಸಿದ್ದಾರೆ. ಇವೆಲ್ಲ ನಾಟಕಗಳೇ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಆರುನೂರು ವರ್ಷಗಳ ಉತ್ಸವದ ಸಂದರ್ಭದಲ್ಲಿ ಶ್ರೀರಂಗರು
ಪರಮೇಶ್ವರ ಪುಲಿಕೇಶಿ’ ನಾಟಕವನ್ನು
ರಚಿಸಿದ್ದಾರೆ. ಜಯಕರ್ನಾಟಕವು ಈ ಸಂದರ್ಭದಲ್ಲಿ ವಿಜಯನಗರ ವಿಶೇಷ ಸಂಚಿಕೆಯನ್ನು
ಹೊರಡಿಸಿತು. ವಿಜಯನಗರದ ಕಲ್ಲುಗಳನ್ನು ವರ್ಣಿಸಿ ಬೆಟಗೇರಿ ಕೃಷ್ಣಶರ್ಮ ಅವರು
ಬರೆದ ಕವಿತೆಯ ಸಾಲುಗಳು ಇವು-
ಹಾಳು ಪಟ್ಟಣದ ಬಂಡೆಯ ಬಳಗದ ಗೋಳಿನ ಮೌನದ ಕೂಗನು ಕೇಳಿ ಅರಮನೆ ಸಿರಿಮನೆಗಲ್ಲದೆಯಾದರೂ ಸೆರೆಮನೆಗಾದರೂ ನಮ್ಮನು ಬಳಸಿ' ಹಂಪೆಯ ಕಲ್ಲುಬಂಡೆಗಳು ಹೇಳುವ ಮಾತು ಇದು. ಕನ್ನಡ ಧರ್ಮ ಬೋಧಿಸಿದ ಇತರ ಕೆಲವುಬರೆಹಗಳಾದ ಮಾಧವ ಕರುಣಾ ವಿಲಾಸ, ದುರ್ಗದ ಬಿಚ್ಚುಗತ್ತಿ, ಕನ್ನಡಿಗರ ಕರ್ಮಕಥೆ (ಗಳಗನಾಥ), ರಾಜಯೋಗಿ, ಅಶಾಂತಿ ಪರ್ವ (ಬೆಟಗೇರಿ ಕೃಷ್ಣ ಶರ್ಮ), ಮಯೂರ (ದೇವುಡು), ದೌಲತ್ (ವೀರಕೇಸರಿ ಸೀತಾರಾಮ ಶಾಸ್ತ್ರಿ), ಪರಮೇಶ್ವರ ಪುಲಿಕೇಶಿ (ಶ್ರೀನಿವಾಸ ಕೊರಟಿ), ಕಿತ್ತೂರು ಮುತ್ತಿಗೆ (ಮುದವೀಡು ಕೃಷ್ಣರಾವ್), ಎಚ್ಚಮ ನಾಯಕ (ನಾಗೇಶ), ನೂರ್ಮಡಿ ತೈಲಪ (ಬಿ.ಪುಟ್ಟಸ್ವಾಮಯ್ಯ) ಇವುಗಳಲ್ಲೆಲ್ಲ ಕನ್ನಡಿಗರ ಹಳೆಯ ವೈಭವವನ್ನು ಎತ್ತಿಹೇಳಿ ಪ್ರೇರಣೆ ನೀಡುವ ಉದ್ದೇಶ ಕಂಡುಬರುತ್ತದೆ. ಒಟ್ಟಾರೆಯಾಗಿ ನವೋದಯದ ಸಂದರ್ಭದಲ್ಲಿ ಪತ್ರಿಕೆಗಳು ನಾಡಿಲ್ಲದೆ ನುಡಿಯ ಬೆಳವಣಿಗೆ ಇಲ್ಲ ಎಂಬ ಅಂಶವನ್ನು ಮನದಟ್ಟು ಮಾಡಿಕೊಡುತ್ತವೆ. ಅದಕ್ಕೆ ಅನುಗುಣವಾಗಿ ಅನೇಕ ಸಾಹಿತ್ಯ ಕೃತಿಗಳು ಪ್ರಕಟವಾಗಿದ್ದನ್ನು ಈಗ ಗಮನಿಸಲಾಗಿದೆ. ಒಂದು ಆಡಳಿತದಲ್ಲಿ ನುಡಿಯನ್ನಾಡುವ ಜನರು ಸೇರಿರದೆ ಇರುವ ಕಾರಣವಾಗಿಯೇ ಭಾಷೆಯಲ್ಲಿಯೂ ಏಕರೂಪತೆ ಇಲ್ಲ ಎಂಬ ಅಂಶವನ್ನು ಕಂಡಿದ್ದಾರೆ. ಅನ್ಯಭಾಷೆಗಳ ಆಕ್ರಮಣಕ್ಕೆ ಅವರು ಅತ್ಯಂತ ಸೂಕ್ತವಾಗಿ ಪ್ರತಿಕ್ರಿಯಿಸಿದ್ದಾರೆ. ಉತ್ತರ ಕರ್ನಾಟಕವು ಏಕೀಕರಣದ ತುರ್ತನ್ನು ಮೊದಲು ಕಂಡುಕೊಳ್ಳುತ್ತದೆ. ಏಕೆಂದರೆ ಅದು ದೀರ್ಘ ಕಾಲದಿಂದ ಬೇರೆ ಆಡಳಿತದಲ್ಲಿ ಇದ್ದುದು. ಮೈಸೂರಿನಲ್ಲಿ ಕನ್ನಡ ದೊರೆಗಳೇ ಆಡಳಿತ ನಡೆಸುತ್ತಿದ್ದುದರಿಂದ ಅವರಿಗೆ ಏಕೀಕರಣದ ತುರ್ತು ಅಷ್ಟೊಂದು ತೀವ್ರವಾಗಿ ತಟ್ಟಲಿಲ್ಲ. ಮಂಗಳೂರು ಭಾಗದವರೂ ಏಕೀಕರಣವನ್ನು ಬಯಸುತ್ತಾರೆ. ಒಟ್ಟಾರೆಯಾಗಿ ನಾಡು ಒಂದಾಗುವುದಲ್ಲಿಯೇ ನುಡಿಯ ಏಳಿಗೆಯೂ ಇದೆ ಎಂಬುದು ಆ ಕಾಲದ ಎಲ್ಲ ಸಾಹಿತಿಗಳ ಅಭಿಪ್ರಾಯವೂ ಆಗಿತ್ತು. ತಿದ್ದುವ- ಬೆನ್ನುತಟ್ಟುವ ಹಂತ: ಹೊಸಗನ್ನಡ ಸಾಹಿತ್ಯ ವಿವಿಧ ಪ್ರೇರಣೆಗಳಿಗೆ ಒಳಪಟ್ಟು ಸೃಷ್ಟಿಯಾಗುತ್ತಿದ್ದಾಗ ಸಾಹಿತ್ಯಪತ್ರಿಕೆಗಳು ಅವುಗಳನ್ನು ತಿದ್ದುವ ಕೆಲಸ ಮಾಡಿದವು. ಪ್ರಬುದ್ಧ ಕರ್ನಾಟಕದ ಸಂದರ್ಭದಲ್ಲಿ ಎ.ಆರ್.ಕೃಷ್ಣಶಾಸ್ತ್ರಿಗಳು ಮತ್ತು ಟಿ.ಎಸ್. ವೆಂಕಣ್ಣಯ್ಯನವರು ಇಂಥ ಕೆಲಸ ಮಾಡಿದರು. ಈ ಬಗ್ಗೆ ಸ್ವತಃ ಮಾಸ್ತಿಯವರೇ ಆಡಿದ ಮಾತುಗಳನ್ನು ಈಗಾಗಲೇ ಗಮನಿಸಿದ್ದೇವೆ. ಇವರಿಬ್ಬರನ್ನೂ ಮಾಸ್ತಿಯವರು ಹೊಸಗನ್ನಡದ ಅಶ್ವಿನಿ ದೇವತೆಗಳು ಎಂದು ಕರೆದಿದ್ದರು. ಇಪ್ಪತ್ತನೆ ಶತಮಾನದ ಮೊದಲ ಮೂರು ದಶಕಗಳಲ್ಲಿ ಆದರ್ಶ ವಿಮರ್ಶೆ ಎಂಬುದು ಇರಲಿಲ್ಲ. ಕನ್ನಡ ಭಾಷೆಯಲ್ಲಿ ಹೊಸಗನ್ನಡದಲ್ಲಿ ಸಾಹಿತ್ಯ ಕೃತಿಗಳು ಹೆಚ್ಚಬೇಕು ಎಂಬ ಉದ್ದೇಶದಿಂದ ಕೃತಿಗಳು ರಚನೆಯಾಗುತ್ತಿದ್ದವು. ಕೃತಿ ರಚನೆಗೆ ವಿವಿಧ ಪತ್ರಿಕೆಗಳಲ್ಲಿ ನೀಡಿರುವ ಕರೆಯನ್ನು ಈಗಾಗಲೆ ಗಮನಿಸಿದ್ದೇವೆ. ಒಟ್ಟಾರೆ ಕನ್ನಡ ಸರಸ್ವತಿಯನ್ನು ಶ್ರೀಮಂತಗೊಳಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಅಂದಿನ ವಿಮರ್ಶೆ ಕೂಡ ಓದುಗ ಲೋಕ ಬೆಳೆಯಬೇಕು ಎಂಬ ಉದ್ದೇಶದಿಂದಲೇ ಬರತೊಡಗಿದವು. ಹೀಗಾಗಿ ಇವನ್ನು ವಿಮರ್ಶೆ ಎನ್ನುವ ಹೆಸರಿನಿಂದ ಕರೆಯದೆ ತಿದ್ದುವ - ಬೆನ್ನುತಟ್ಟುವ ಕೆಲಸ ಎಂದೇ ಕರೆಯುವುದು ಸೂಕ್ತ ಎನ್ನಿಸುತ್ತದೆ. ವಿಮರ್ಶೆಯ ಗಮನ ಸಾಹಿತ್ಯದ ಓದುಗರನ್ನು ಹೆಚ್ಚಿಸುವುದು ಆಗಿದ್ದರಿಂದ ಸಹಜವಾಗಿಯೇ ಅದು ವ್ಯಾಖ್ಯಾನಮುಖಿಯಾಯಿತು. ರಸ ವಿಮರ್ಶೆಯಾಯಿತು. ಬಿ.ಎಂ.ಶ್ರೀಕಂಠಯ್ಯನವರು ಇಂಥ ವಿಮರ್ಶೆಗೆ ಒಂದು ಮಾರ್ಗವನ್ನು ಹಾಕಿಕೊಟ್ಟರು. ಕುವೆಂಪು, ಮಾಸ್ತಿ ಮೊದಲಾದವರು ಈ ದಾರಿಯಲ್ಲಿ ಮುನ್ನೆಡೆದರು. ಕೃತಿಯ
ಗುಣ ಗ್ರಹಣ’ಕ್ಕೆ ಇವರದು
ಆದ್ಯತೆ. ಹೀಗಾಗಿ ಕೃತಿಯು ಯಾವತ್ತೂ ಒಂದು ಆಹ್ವಾನ ಎನ್ನಿಸಲಿಲ್ಲ ಈ ಮಾರ್ಗದವರಿಗೆ.
ನವೋದಯ ವಿಮರ್ಶಕರ ಎದುರು ಅಪಾರವಾದ ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ
ರಾಶಿ ಇತ್ತು. ಅವುಗಳಿಗೆ ವ್ಯಾಖ್ಯಾನ ವಿವರಣೆ ನೀಡುವ ಜವಾಬ್ದಾರಿಯನ್ನು ಅವರು
ವಹಿಸಿಕೊಂಡರು. ಧ್ವನಿ ಸಿದ್ಧಾಂತದ ಆಧಾರದ ಮೇಲೆ ಕಾವ್ಯದಲ್ಲಿಯ ಶ್ರೇಷ್ಠ ಭಾಗ
ಯಾವುದು, ರಸ ಘಟ್ಟಗಳು ಯಾವವು ಎಂಬುದನ್ನು ತಿಳಿದುಕೊಳ್ಳಲು
ಪ್ರಯತ್ನಿಸಲಾಯಿತು. ಈ ಕಾರಣಕ್ಕಾಗಿಯೇ ಕಾಳಿದಾಸನನ್ನು ವಿಮರ್ಶಿಸುವಾಗ, ಅವನ
ಕೃತಿಗಳಲ್ಲೆಲ್ಲ ಶಾಕುಂತಲ' ಶ್ರೇಷ್ಠ, ಅದರಲ್ಲಿಯೂ ಅದರ ನಾಲ್ಕನೆ ಅಂಕ ಶ್ರೇಷ್ಠ. ನಾಲ್ಕನೆ ಅಂಕದಲ್ಲಿಯೂ ಶಾಕುಂತಲೆಯನ್ನು ಬೀಳ್ಕೊಡುವಾಗ ಕಣ್ವ ಮುನಿಗಳು ಆಡುವ ಉಪದೇಶಪರವಾದ ನಾಲ್ಕು ಶ್ಲೋಕಗಳು ಅತ್ಯಂತ ಶ್ರೇಷ್ಠ ಎಂಬಂಥ ಮಾತುಗಳು ಕೇಳಿ ಬಂದವು. ಕಾಳಿದಾಸನನ್ನು ಉಪಮಾ ಕವಿಯೆಂದಿರುವುದೂ ಕುಮಾರವ್ಯಾಸನನ್ನು ರೂಪಕ ಚಕ್ರವರ್ತಿ ಎಂದಿರುವುದೂ ಇಂಥ ಮೌಲ್ಯ ಮಾಪನದ ಫಲವೇ ಆಗಿದೆ. ಇಂಥ ವಿಮರ್ಶೆ ಹೊಸಗನ್ನಡದಲ್ಲೂ ಬಂತು. ಎಸ್.ವಿ. ರಂಗಣ್ಣನವರು ಮುದ್ದಣನನ್ನು ಬೆಲೆ ಕಟ್ಟುವಾಗ
ರಾಮಾಶ್ವಮೇಧ’ ಕೃತಿಯನ್ನು ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು ಎಂದು
ಹೇಳಿದರು. ನವೋದಯ ಕಾಲದ ವಿಮರ್ಶೆ ಇಂಥ ವಿಮರ್ಶೆಯೇ ಆಗಿತ್ತು.
ಇದು ಬೇಕು, ಅದು ಬೇಡ, ಅದು ಒಳ್ಳೆಯದು, ಇದು ಕೆಟ್ಟದ್ದು ಎಂಬ ಆಯ್ಕೆಯ
ಪ್ರಶ್ನೆ ಎದುರಾದಾಗ ವಿಮರ್ಶೆ ತಲೆದೋರುತ್ತದೆ. ಆಯ್ಕೆ ಯಾವತ್ತೂ ಒಳ್ಳೆಯದರ ಕಡೆಗೇ
ಇರುತ್ತದೆ. ಸಾಹಿತ್ಯದ ವಿಷಯದಲ್ಲಿಯೂ ವಿಮರ್ಶೆ ಇದೇ ರೀತಿಯದಾಗಿರುತ್ತದೆ.
ಕೃತಿಯೊಂದನ್ನು ಓದುಗನೊಬ್ಬ ಓದಿದಾಗ ಅದರ ಬಗ್ಗೆ ಒಂದು ಅಭಿಪ್ರಾಯ ಮೂಡುತ್ತದೆ.
ಕೃತಿ ಚೆನ್ನಾಗಿದೆಯೆಂದೋ, ಕೆಟ್ಟದ್ದು ಎಂದೋ, ಭಾಷೆ ಕ್ಲಿಷ್ಟ ಎಂದೋ ಒಟ್ಟಾರೆ ಒಂದು
ಅಭಿಪ್ರಾಯ ಮೂಡುತ್ತದೆ. ಓದುಗನ ಬೌದ್ಧಿಕ ಮಟ್ಟಕ್ಕೆ ಅನುಸಾರವಾಗಿ ಈ ವಿಮರ್ಶೆ
ಇರುತ್ತದೆ. ಸಾಮಾನ್ಯ ಓದುಗನೊಬ್ಬನಿಗೆ ಕೃತಿಯೊಂದನ್ನು ಓದುವಾಗ ಅದರ ಎಷ್ಟೋ
ಅರ್ಥಗಳು ಗ್ರಹೀತವಾಗದೆ ಹೋಗಬಹುದು. ಅಂಥ ಸಂದರ್ಭದಲ್ಲಿ ವಿದ್ವಾಂಸರು ಆ
ಕೃತಿಯ ಬಗೆಗೆ ಬರೆದಿರುವ ವಿಮರ್ಶೆಯನ್ನು ಓದುವುದರಿಂದ ಆ ಕೃತಿಯನ್ನು
ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಬ್ಬೊಬ್ಬ ವಿಮರ್ಶಕನಿಗೆ ಒಂದು ಕೃತಿಯ ಬಗ್ಗೆ
ಬೇರೆಬೇರೆಯದೇ ಆದ ಅಭಿಪ್ರಾಯಗಳು ಹೊರಡಬಹುದು. ಕೃತಿಯ ಅಭ್ಯಾಸ
ಮಾಡುವವರು ಈ ಎಲ್ಲ ಅಭಿಪ್ರಾಯಗಳನ್ನು ಗ್ರಹಿಸಿ ಒಟ್ಟಾರೆಯಾದ ಒಂದು
ಅಭಿಪ್ರಾಯವನ್ನು ಪಡೆಯಬಹುದು. ವಿಮರ್ಶೆ ಕೃತಿಯ ವಿವಿಧ ಮಗ್ಗಲುಗಳನ್ನು,
ಸೌಂದರ್ಯವನ್ನು ಪರಿಚಯಿಸುತ್ತದೆ. ಆ ಮೂಲಕ ಸಾಮಾನ್ಯ ಓದುಗನಿಗೆ ಕೃತಿಯನ್ನು
ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಂದೇ ಕೃತಿಯನ್ನು ವಿವಿಧ ಕಾಲಘಟ್ಟಗಳಲ್ಲಿ,
ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ಇಟ್ಟು ವಿಮರ್ಶೆ ಮಾಡಬಹುದು. ಹೀಗಾಗಿ
ಕೃತಿಯೊಂದರ ಮರುಮೌಲ್ಯಮಾಪನ ಮೇಲಿಂದ ಮೇಲೆ ಆಗುತ್ತಲೆ ಇರುತ್ತದೆ. ಪಂಪನ
ಕೃತಿಯನ್ನು ಹತ್ತನೆ ಶತಮಾನದ ಸಂದರ್ಭದಲ್ಲಿಟ್ಟು ನೋಡುವುದಕ್ಕೂ ಇಪ್ಪತ್ತನೆ ಶತಮಾನದ
ಸಂದರ್ಭದಲ್ಲಿಟ್ಟು ವಿಮರ್ಶಿಸುವುದಕ್ಕೂ ಅಂತರವಿದೆ. ಪಂಪನ ವಿಕ್ರಮಾರ್ಜುನ ವಿಜಯ'ವನ್ನು ರಾಜಕೀಯ ದೃಷ್ಟಿಕೋನದಿಂದ, ಸಾಮಾಜಿಕ ದೃಷ್ಟಿಕೋನದಿಂದ, ಧಾರ್ಮಿಕ ದೃಷ್ಟಿಕೋನದಿಂದ, ಬಂಡಾಯ ದೃಷ್ಟಿಕೋನದಿಂದ, ದಲಿತ ಸಂವೇದನೆ, ಸ್ತ್ರೀ ಸಂವೇದನೆ ಹೀಗೆ ವಿವಿಧ ರೀತಿಯಿಂದ ಅಭ್ಯಾಸ ಮಾಡಬಹುದು. ಇಡಿ ಕನ್ನಡ ಸಾಹಿತ್ಯ ಚರಿತ್ರೆಯನ್ನೇ ಚಾರಿತ್ರಿಕ ದೃಷ್ಟಿಕೋನದಿಂದ ಅಭ್ಯಾಸ ಮಾಡಿದವರೂ ಇದ್ದಾರೆ. ಕವಿ ಪ್ರತಿಭೆ ಶ್ರೇಷ್ಠ; ವಿಮರ್ಶನ ಪ್ರತಿಭೆ ದ್ವಿತೀಯ ದರ್ಜೆಯದು ಎಂಬ ಅಭಿಪ್ರಾಯವಿದೆ. ಈ ಕಾರಣಕ್ಕಾಗಿಯೇ
ನಾನೇರುವೆತ್ತರಕ್ಕೆ ನೀನೇರಬಲ್ಲೆಯಾ?’ ಎಂದು
ವಿಮರ್ಶಕ ವೈದ್ಯನಿಗೆ' ಆತ್ಮ ಪ್ರತ್ಯಯದಿಂದ ಸವಾಲು ಎಸೆದ ಕವಿಗಳೂ ಇದ್ದಾರೆ. ಕವಿ-ವಿಮರ್ಶಕರ ಸಂಬಂಧವನ್ನು ಎಣ್ಣೆ-ಸೀಗೇಕಾಯಿ ಸಂಬಂಧಕ್ಕೆ ಹೋಲಿಸುವವರಿದ್ದಾರೆ. ಇಂಥ ಸಂದರ್ಭದಲ್ಲಿ ಸಾಹಿತಿ- ವಿಮರ್ಶಕ- ಓದುಗ ಇವರ ನಡುವೆ ಸಾಹಿತ್ಯ ಪತ್ರಿಕೆಯ ಕೆಲಸವೇನು? ಅದು ಯಾವ ರೀತಿಯಲ್ಲಿ ಕಾರ್ಯ ಮಾಡುತ್ತದೆ?
ಸಂಕ್ರಮಣ’ದ ೨ನೆ ಸಂಚಿಕೆಯಲ್ಲಿ41 ವಿಮರ್ಶೆ: ಅಂದು ಇಂದು' ಬರೆದ ಕೆ.ಕೃಷ್ಣಮೂರ್ತಿಯವರು,
ಇವನಾವ ಘನ ವಿಮರ್ಶಕ? ನನ್ನ ಭಾವಶ್ರೀಯನ್ನು ಅರಿಯುವ
ಸಾಮರ್ಥ್ಯ ಇವನಿಗೆಲ್ಲಿಂದ ಬರಬೇಕು? ನಿಜವಾದ ಕಾವ್ಯ ವಿಮರ್ಶೆಯ ತಿರುಳನ್ನು
ತಿಳಿಯಬೇಕಾದರವರು ನನ್ನ ಬಳಿಗೆ ಬನ್ನಿ. ನಾನೇ ತಿಳಿಸಿ ಹೇಳುತ್ತೇನೆ’ ಎಂಬ ಕವಿ
ಮನೋಧರ್ಮವನ್ನು ಪ್ರಸ್ತಾಪಿಸಿರುವರು. ಕವಿಯ ಇಂಥ ಸವಾಲಿಗೆ ವಿಮರ್ಶಕನೇನು
ಕಮ್ಮಿ. ಇಂಥ ವಾದ ವಿವಾದಗಳಿಂದ ನೋಡುವವರಿಗೆ, ಇವನು ಕವಿಯೂ ಅಲ್ಲ, ಅವನು ವಿಮರ್ಶಕನೂ ಅಲ್ಲ' ಎಂದನ್ನಿಸುವ ಅಪಾಯದ ಕಡೆ ಗಮನ ಸೆಳೆದಿರುವರು. ``ಕನ್ನಡದ ಮಟ್ಟಿಗೆ ಹೇಳುವುದಾದರೆ, ಸದ್ದುಗದ್ದಲಗಳಡಗಿ, ಈಗ ಕಾರ್ಯ ಪ್ರವೃತ್ತಿಯ ಕಡೆಗೆ ಕವಿ-ವಿಮರ್ಶಕರ ಒಲವು ಹೆಚ್ಚಾಗಿ ಹರಿಯುತ್ತಿವುದು ಶುಭ ಸೂಚನೆ. ಈ ಬಗೆಯ ಹೊಸ ಸಾಹಿತ್ಯಪತ್ರಿಕೆಗಳ ಉದಯ ಬರಲಿರುವ ಸಿದ್ಧಿಯ ದ್ಯೋತಕವಾಗಿದೆ'' ಎಂದು ಹೇಳುವರು. ಅವರ ಈ ಮಾತು
ಸಂಕ್ರಮಣ’ಕ್ಕಿಂತ ಹಿಂದಿನ ಸ್ಥಿತಿ ಹಾಗೂ ಸಂಕ್ರಮಣ' ಮತ್ತು ಅಂಥ ಪತ್ರಿಕೆಗಳು ವಹಿಸಬೇಕಾದ ಜವಾಬ್ದಾರಿಯ ಕಡೆ ಗಮನ ಸೆಳೆಯುತ್ತದೆ. ಕವಿ ಕಾವ್ಯ ರಹಸ್ಯ, ಅದನ್ನು ವಿಮರ್ಶಕ ತೆರೆದು ತೋರಿಸುವುದರಿಂದ ಸಾಮಾನ್ಯ ಓದುಗನಿಗೆ ಆಗುವ ಲಾಭದ ಬಗೆಗೆ ಕೃಷ್ಣಮೂರ್ತಿಯವರು ಹೇಳುವ ಮಾತು ಇದು,- ``ನಾನು ಜನಕ್ಕಾಗಿ ಬರೆಯುತ್ತಿಲ್ಲ; ನನ್ನ ಚಿತ್ತದ ಒತ್ತಡವನ್ನಿಳಿಸಿಕೊಳ್ಳುವುದಷ್ಟೇ ನನ್ನ ಉದ್ದೇಶ ಎಂದು ಒಬ್ಬ ಕವಿ ಘೋಷಿಸಿದರೂ, ಮತ್ತೊಬ್ಬ ವಿಮರ್ಶಕ ಬಂದು,
ಈ ಕವಿ ಇಂದಿನ
ಜನ ಜೀವನದ ಇಂತಹ ಗುಪ್ತ ಇಲ್ಲವೆ ಸುಪ್ತ ಸಂವೇದನೆಗಳಿಗೆ ಇಷ್ಟು ಪ್ರಭಾವಶಾಲಿಯಾದ
ಪ್ರತಿಮಾ ವಿಧಾನದಿಂದ ಅಭಿವ್ಯಕ್ತಿಯನ್ನು ತಂದಿದ್ದಾನೆ’ ಎಂದು ಬಿಡಿಸಿ ತೋರಿಸಲು
ಮುಂದಾಗುತ್ತಾನೆ. ಜನತೆಯ ರುಚಿಯನ್ನು ಸಂಸ್ಕರಿಸಲು ನೆರವಾಗುತ್ತಾನೆ.” – ರುಚಿ
ಸಂಸ್ಕಾರ ಎನ್ನುವ ಮಾತು ಮಹತ್ವದ್ದು. ಎಲ್ಲರ ರುಚಿಯೂ ಒಂದೇ ರೀತಿಯಲ್ಲಿ ಒಂದೇ
ಸ್ತರದಲ್ಲಿ ಇರುವುದಿಲ್ಲ. ಅದನ್ನು ವಿಮರ್ಶೆ ಸಂಸ್ಕರಿಸಿ ಸಂಸ್ಕಾರ ನೀಡುತ್ತದೆ.
ಸಾಹಿತ್ಯಪತ್ರಿಕೆಯೊಂದರ ಜವಾಬ್ದಾರಿಯ ಕಡೆಗೆ ಕೃಷ್ಣಮೂರ್ತಿಯವರು ಗಮನ
ಸೆಳೆಯುತ್ತಾರೆ. ಅದೆಂದರೆ ನಮ್ಮ ವಿಮರ್ಶೆಯನ್ನು ಅನ್ಯ ಪ್ರಭಾವಗಳಿಂದ
ಮುಕ್ತವಾಗಿರಿಸುವುದು. ಅಂದು ಸಂಸ್ಕೃತ ಮಹಾಕಾವ್ಯ ಮಾರ್ಗದ ಅನುಕರಣದಿಂದ ಕನ್ನಡಕ್ಕೆ ಆದ `ಅನರ್ಥ'ವನ್ನೂ, ಈಚೆಗೆ ಇಂಗ್ಲಿಷ್ ರೋಮ್ಯಾಂಟಿಕ್ ಸಂಪ್ರದಾಯದ ಅಂಧಾನುಕರಣದಿಂದ ಆದ `ಅವನತಿ'ಯನ್ನೂ ಸೂಕ್ಷ್ಮವಾಗಿ ವಿವರಿಸಬಲ್ಲ ವೇಧಾವಿ ವಿಮರ್ಶಕನ ಮೇಲೆ... ಗುರುತರ ಹೊಣೆ ಇದೆ... ವಾಚನಾಭಿರುಚಿಯನ್ನುಳಿಸುವ ವಿಮರ್ಶೆ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿದೆ'' ಎಂದು ಹೇಳುವ ಮೂಲಕ ಸಾಹಿತ್ಯಪತ್ರಿಕೆಗಳು ಎಂಥ ವಿಮರ್ಶೆಯನ್ನು ಬೆಳೆಸಬೇಕು ಎನ್ನುವುದನ್ನೂ ಸೂಚಿಸುತ್ತಾರೆ. ಸಂಕ್ರಮಣದ ಎರಡನೆಯ ಸಂಚಿಕೆಯಲ್ಲಿಯೇ ಈ ಮಾತು ಬಂದಿರುವುದೂ ಮಹತ್ವದ್ದೇ. ವಿಮರ್ಶಕ ಪದವಿಗೇರುವವರಿಗೆ ಶಾಸ್ತ್ರ ಶಿಕ್ಷಣ ವಿಸ್ತಾರವಾಗಿದ್ದಷ್ಟೂ ಕ್ಪೇಮ. ಆದರೆ ಇವುಗಳನ್ನು ಕಲಿತವರೆಲ್ಲ ವಿಮರ್ಶಕರಲ್ಲ ಎನ್ನುವ ಮಾತನ್ನೂ ಕೃಷ್ಣಮೂರ್ತಿಯವರು ಹೇಳುವರು. ಸಾಹಿತ್ಯ ಮತ್ತು ವಿಮರ್ಶೆ ಎರಡರ ಮಾಧ್ಯಮವೂ ಭಾಷೆಯೇ. ಎಲ್ಲರಿಗೂ ಗೊತ್ತಿರುವ ಭಾಷೆಯೇ ಆದರೂ ಅದು ಕಾವ್ಯದಲ್ಲಿ ಬಳಕೆಯಾದಾಗ ಯಾರಿಗೂ ಪರಿಚಿತವಲ್ಲದ ಹೊಸ ಪ್ರಯೋಗವಾಗಿ ಕಾಣಿಸುವುದು. ಈ ಉಕ್ತಿ ವೈಚಿತ್ರ್ಯ ಅರಿಯುವುದಕ್ಕೇ ಶಾಸ್ತ್ರ ಶಿಕ್ಷಣ ಬೇಕು ಎಂದು ಅವರು ಹೇಳುವರು.
ಕಾವ್ಯಲೋಲರಾಗಿ ತಾತ್ಕಾಲಿಕ ಮನೋ ವಿನೋದವನ್ನು ಪಡೆದವರೆಲ್ಲರೂ
ಉತ್ತಮ ವಿಮರ್ಶಕರಾಗಿಬಿಡುವುದಿಲ್ಲ. ಇದುವರೆಗೆ ನಾವು ನೋಡಿದ್ದರ ಮೇಲೆ ಇನ್ನಷ್ಟು
ಹೇಳಬಹುದು- ಆದರ್ಶ ಕವಿ, ಆದರ್ಶ ವಿಮರ್ಶಕ ಇಬ್ಬರೂ ಅಷ್ಟೇ ವಿರಲ; ಇಬ್ಬರೂ
ಪರಸ್ಪರ ಉಪಕಾರಕರು; ಆದರೆ ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸ್ವತಂತ್ರರು. ಒಬ್ಬರು
ಹೆಚ್ಚು, ಇನ್ನೊಬ್ಬರು ಕಡಿಮೆಯನ್ನುವುದು ಸಲ್ಲದು. ಕೂಸು ಹುಟ್ಟಲು ತಾಯಿಯ ನೆರವಿಗೆ
ಸೂಲಗಿತ್ತಿಯೂ ಬೇಕು. ಕಾವ್ಯ ಹುಟ್ಟಿ ಹೆಸರುವಾಸಿಯಾಗಬೇಕಾದರೆ ವಿಮರ್ಶಕನೂ
ಬೇಕು” ಎಂಬ ಮಾತು ನಾನೇರುವೆತ್ತರಕ್ಕೆ ನೀನೇರಬಲ್ಲೆಯಾ ? ಎಂಬ ಸವಾಲಿಗೆ
ಸಮಾಧಾನದ ಉತ್ತರ ಎನ್ನಬೇಕು.
ಆರಂಭ ಕಾಲದ ವಿಮರ್ಶೆ: ಹೊಸಗನ್ನಡದ ಆರಂಭದ ಕಾಲದಲ್ಲಿ
ವಿಮರ್ಶೆಯೆಂದರೆ ಪುಸ್ತಕದಲ್ಲಿಯ ಕೆಲವು ಉತ್ತಮಾಂಶಗಳನ್ನು ಎತ್ತಿ ಹೇಳಿ ಬೆನ್ನು
ತಟ್ಟುವುದಷ್ಟೇ ಆಗಿತ್ತು. ಕೆಲವೊಮ್ಮೆ ಸ್ವಲ್ಪ ತೆಗಳಿಕೆಯೂ ಇರುತ್ತಿತ್ತು. ಇದರ ನಡುವೆ ಪುಸ್ತಕದ
ಅಚ್ಚುಕಟ್ಟುತನದ ಬಗ್ಗೆಯೂ ನಾಲ್ಕು ಮಾತುಗಳು ಇರುತ್ತಿದ್ದವು. ಈಗಿನಂತೆ ವೃತ್ತಿವಂತ
ವಿಮರ್ಶಕರು ಆಗ ಇರಲಿಲ್ಲ. ಸಾಹಿತ್ಯಾಸಕ್ತರು ಪತ್ರಿಕೆಗಳಲ್ಲಿ ಸಾಹಿತ್ಯದ ಕುರಿತು ತಮ್ಮ
ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇಂಥ ಅಭಿಪ್ರಾಯಗಳು ಒಮ್ಮೊಮ್ಮೆ ಇಡಿ ಸಾಹಿತ್ಯ
ಮಾರ್ಗದ ಬದಲಾವಣೆಗೇ ಒತ್ತಾಯ ಪಡಿಸುವಂಥದ್ದೂ ಆಗಿರುತ್ತಿದ್ದವು.
ಶ್ರೀಕೃಷ್ಣ ಸೂಕ್ತಿಯಲ್ಲಿ ಪ್ರಕಟವಾದ ಇಂಥ ಒಂದು ಅಭಿಪ್ರಾಯವನ್ನು ಇಲ್ಲಿ
ಗಮನಿಸಬೇಕು, ತಮ್ಮ ಕವಿತಾ ಪ್ರೌಢಿಮೆಯನ್ನು ತೋರಿಸಿಕೊಳ್ಳಲು ಸಾಧ್ವೀ ಸ್ತ್ರೀಯರೊಡನೆ ಮಾತನಾಡುವ ಸಂದರ್ಭದಲ್ಲಿ ಪೃಥು ನಿತಂಬಿನಿಯೆಂದೂ, ಸುಮಧ್ಯಮೆಯೆಂದೂ ರಂಭೋರುವೆಂದೂ ಸುಶ್ರೋಣಿಯೆಂದೂ- ಅಸಾಂಗತ್ಯವುಳ್ಳ ಪದಗಳನ್ನುಪಯೋಗಿಸುವರು. ಕಾಳಿದಾಸನೂ ಕೂಡ ಹೈಮವತಿಯನ್ನರಸುತ್ತಿರಲು, ಆ ಸುಂದರಿಯ ಪೃಥು ನಿತಂಬವನ್ನೂ ಸ್ತನ ಯುಗ್ಮವನ್ನೂ ವರ್ಣಿಸದೆ ಇರಬಾರದಿತ್ತೆ? ಈ ವಿಷಯದಲ್ಲಿ ತಪ್ಪದಿರುವ ಕರ್ನಾಟಕ ಕವಿಗಳೇ ಇಲ್ಲ. ಪತಿವ್ರತಾ ಶಿರೋಮಣಿಯಾದ ದ್ರೌಪದಿಯ ಸೀರೆಯನ್ನು ಸೆಳೆಯಲೆತ್ನಿಸಿ ಶಾಶ್ವತವಾದ ಅಕೀರ್ತಿಯನ್ನು ಪಡೆದ ದುರ್ಯೋಧನನಿಗೂ ಈ ಕವಿಗಳಿಗೂ ಏನಾದರೂ ವ್ಯತ್ಯಾಸವಿದೆಯೇ?'' ಎಂದು ಹೈಕೋರ್ಟಿನ ವಕೀಲರಾದ ಬಿ.ಸೀತಾರಾಮರಾವ ಪ್ರಶ್ನಿಸುತ್ತಾರೆ.42 ತಮ್ಮ ಲೇಖನಕ್ಕೆ ಅವರು ಕೊಟ್ಟ ಹೆಸರು `ಪುರಾಣಮಿತ್ಯೇವ ನ ಸಾಧು ಸರ್ವಂ'. ಹಳೆಯದನ್ನೇ ಅನುಸರಿಸಿ ಕಾವ್ಯ ಬರೆಯುವ ಹೊಸ ಕವಿಗಳನ್ನು ತಮ್ಮ ವಕೀಲಿ ಶೈಲಿಯಲ್ಲಿ ಸೀತಾರಾಮರಾವ್ ಚೆನ್ನಾಗಿಯೇ ತರಾಟೆಗೆ ತಗೆದುಕೊಂಡಿದ್ದಾರೆ. ಆಧುನಿಕ ಕನ್ನಡ ಕಾವ್ಯ ಹೊಸತನಕ್ಕೆ ಹೊಂಚುಹಾಕುತ್ತಿರುವ ಸಮಯದಲ್ಲಿ ಪ್ರಕಟವಾದ ಈ ಲೇಖನ ಹೊಸ ಕಾವ್ಯ ಹೇಗಿರಬೇಕು ಎಂಬುದರ ಕಡೆಗೆ ಗಮನ ಸೆಳೆಯುತ್ತಿದೆ. ಈ ಕಾರಣಕ್ಕಾಗಿ ಈ ಲೇಖನಕ್ಕೆ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಮುಖ ಸ್ಥಾನ ಸಿಗಲೇಬೇಕು. ಆರಂಭ ಕಾಲದ ವಿಮರ್ಶೆಗಳೆಲ್ಲ ಇದೇ ರೀತಿಯಲ್ಲಿ ಇದ್ದವು ಎಂದೇನಲ್ಲ. ಅತಿ ಸಾಮಾನ್ಯವಾದ ವಿಮರ್ಶೆಗಳೂ ಪ್ರಕಟವಾಗಿವೆ. ಇದು ಬೆನ್ನು ತಟ್ಟುವ ಕೆಲಸ ಮಾತ್ರವಾಗಿ ಕಾಣುತ್ತದೆ. `ಶ್ರೀಕೃಷ್ಣ ಸೂಕ್ತಿ'43ಯಲ್ಲಿಯೇ ಪ್ರಕಟವಾಗಿರುವ ಇನ್ನೊಂದು ವಿಮರ್ಶೆಯನ್ನು ಇಲ್ಲಿ ನೋಡಬಹುದು.
ವಿವೇಕೋದಯ ಗ್ರಂಥಮಾಲೆಯ ತೃತೀಯ ಪುಸ್ತಕವಾದ ಶ್ರೀ ಶಂಕರ ಕಥಾಮೃತ'ವೆಂಬ ಹಸ್ತ ಪುಸ್ತಕವು ಪತ್ರಕರ್ತರಿಂದ ನಮಗೆ ಕಳುಹಲ್ಪಟ್ಟಿತು.
ಸೂಕ್ತಿ’ಯ ವ್ಯಕ್ತ ಲೇಖಕರಾದ ಚಿದಂಬರಯ್ಯನವರಿಂದ ಬರೆಯಲ್ಪಟ್ಟುದರಿಂದ ಭಾಷಾ
ವಿಷಯದಲ್ಲಿ ಬೇರೆ ಹೇಳಲೇಕೆ? ಅದ್ವೈತ ಮತ ಸ್ಥಾಪಕರಾದ ಶ್ರೀಶಂಕರಾಚಾರ್ಯರವರ
ಚರಿತ್ರೆಯೂ, ಆಚಾರ್ಯಾವತಾರಕ್ಕೆ ಪೂರ್ವಭಾವಿಯಾದ ದೇಶಕಾಲ ಸ್ಥಿತಿಯೂ,
ಆಚಾರ್ಯರ ಅದ್ವೈತ ಮತದ ತತ್ವ ರಹಸ್ಯವೂ ಇದರಲ್ಲಿ ಉದೀರತವಾಗಿವೆ.”
ಕೃತಿಯ ಲೇಖಕರು ಸೂಕ್ತಿ'ಯ ವ್ಯಕ್ತ ಲೇಖಕರಾದುದರಿಂದ ಭಾಷಾ ವಿಷಯದಲ್ಲಿ ಬೇರೆ ಹೇಳಲೇಕೆ? ಎಂದು ಪ್ರಶ್ನಿಸುವ ವಿಮರ್ಶಕರು ಇದೇ ಕಾರಣಕ್ಕಾಗಿ ಆ ಕೃತಿಯನ್ನು ಓದುವ ಶ್ರಮವನ್ನು ವಹಿಸಿದಂತೆ ಕಾಣುವುದಿಲ್ಲ. ಕೃತಿಯ ಕುರಿತು ಖಚಿತವಾದ ಯಾವ ಮಾತುಗಳೂ ಇದರಲ್ಲಿ ಇಲ್ಲ. ಇದೇ ಸಂಚಿಕೆಯಲ್ಲಿ ಪ್ರಕಟವಾದ ಇನ್ನೊಂದು ಕೃತಿಯ ವಿಮರ್ಶೆ ಈ ರೀತಿ ಇದೆ. ``ನೀತಿ ಪರಂಪರೆಗಳನ್ನು ಪ್ರದರ್ಶಿಸುತ್ತಿರುವ ಈ ನಾಟಕವು (ವಲ್ಲೀ ಮುಖ ವಿಲಾಸ: ಮೈಸೂರು ಚಾಮರಾಜ ನಾಟಕ ಸಭೆಯ ಮೆಂಬರರೊಳಗೊಬ್ಬರಾದ ಸ್ಕೂಲ್ ಮಾಸ್ಟರ್ ಸುಬ್ಬರಾಯರಿಂದ ವಿರಚಿಸಲ್ಪಟ್ಟ ರೂಪಕವು.) ನೀತಿಪರರಾದ ವಾಚಕರೆಲ್ಲರಿಂದ ಓದಲ್ಪಟ್ಟರೆ, ಗ್ರಂಥಕಾರರ ಪ್ರಯತ್ನವು ಸಾರ್ಥಕವಾದುದೆಂದು ನಾವು ಸಂಭಾವಿಸುವೆವು.'' ಇಲ್ಲಿಯ ಕನ್ನಡ ವಾಕ್ಯ ಪ್ರಯೋಗವೂ ಕರ್ಮಣಿಯನ್ನು ಅನುಸರಿಸಿದೆ. ಕೃತಿಯ ಬಗ್ಗೆ ದಿವ್ಯ ಮೌನವನ್ನು ವಹಿಸಲಾಗಿದೆ. ಇದು ಇಪ್ಪತ್ತನೆ ಶತಮಾನದ ಮೊದಲ ದಶಕದಲ್ಲಿಯ ವಿಮರ್ಶೆಯ ಸ್ಥಿತಿ. ಇನ್ನು ಎರಡನೆಯ ದಶಕದಲ್ಲಿಯ ಸ್ಥಿತಿಯು ಇದಕ್ಕಿಂತ ಭಿನ್ನವಾಗಿದೆ. ಸುಧಾರಣೆ ಕಂಡು ಬಂದಿದೆ. ಈ ದಶಕದ ಕೊನೆಯಲ್ಲಿ ಬಂದ ವಿಮರ್ಶೆಯೊಂದನ್ನು ಉದಾಹರಣೆಗೆ ಇಲ್ಲಿ ನೋಡಬಹುದು. ``ಲೋಕಮಾನ್ಯ ಬಾಳಗಂಗಾಧರ ಟಿಳಕ ಕರ್ನಾಟಕ ಗೌರವ ಗ್ರಂಥ ಮಾಲೆಯ ೫ನೆಯ ಪುಷ್ಪ. ಪುಟಗಳು ೧೦. ಕ್ರಯ ೨ ಆಣೆ. ಈ ಚಿಕ್ಕ ಪುಸ್ತಕವನ್ನು ರಾ.ವಿ.ಎಸ್. ರಂಗೈ ಶೇಣವಿ ಎಂಬವರು ಬರೆದಿದ್ದಾರೆ. ಪುಸ್ತಕದ ಭಾಷೆಯು ತಕ್ಕಮಟ್ಟಿಗೆ ಚನ್ನಾಗಿದೆ. ಆದರೆ ೧ ಸಾವಿರ ರು.ಗಳ ದಂಡು ಆಯಿತು. ಕೈ.ವಾ. ವಿಷ್ಣು ಕೃಷ್ಣ ಚಿಪಳೂಣಕರ ಎಂಬೊಬ್ಬ ಚಪಲ ಗೃಹಸ್ಥರ ಎಂಬೀ ತರದ ದೋಷಗಳೂ ಕೆಲವು ಕಡೆ ಕಂಡು ಬರುತ್ತವೆ. ಕೇಸರಿ ಮರಾಠಾ ವರ್ತಮಾನ ಪತ್ರಗಳನ್ನು ೧೮೮೫ನೆಯ ಇಸವಿಯಲ್ಲಿ ಹೊರಡಿಸಲ್ಪಟ್ಟವೆಂಬುದು ಆ ಪತ್ರಗಳ ಮೇಲೆ ಕೊಟ್ಟ ವರ್ಷಗಳಿಂದ ಕಂಡು ಬರುತ್ತದೆ. ೧೦ ಪುಟಗಳಲ್ಲಿ ಲೋಕಮಾನ್ಯರಂಥ ಪ್ರಸಿದ್ಧ ಪುರುಷರ ಚರಿತ್ರವನ್ನು ವಾಚಕರಿಗೆ ಬೋಧಪ್ರದವಾಗುವಂತೆ ಬರೆಯುವುದು ಯಾರಿಗೂ ಅಸಾಧ್ಯವೇ. ಆದ್ದರಿಂದ ಪ್ರಸ್ತುತ ಪುಸ್ತಕವು ಚರಿತ್ರ ನಾಯಕರ ಚರಿತ್ರದ ಬರೇ ಅನುಕ್ರಮಣಿಕೆಯೇ ಆಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲಿ ಕೊಟ್ಟ ಕೆಲವು ಚಲೋ ಇಂಗ್ಲಿಷ್ ಅವತರಣಗಳ ಕನ್ನಡ ಭಾಷಾಂತರಗಳನ್ನು ಕೊಟ್ಟಿಲ್ಲ. ಆದ್ದರಿಂದ ಅವು ಬರೇ ಕನ್ನಡವನ್ನೇ ಬಲ್ಲವರಿಗೆ ಕೇವಲ ನಿರರ್ಥಕವಾಗಿರುವವು. ೧೦ ಪುಟಗಳ ಪುಸ್ತಕದ ಬೆಲೆ ೨ ಆಣೆಯೆಂದರೆ ಬಹಳವೆಂದು ನಮಗೆ ತೋರುತ್ತದೆ. ಒಟ್ಟಿಗೆ ಕರ್ನಾಟಕಕ್ಕೆ ಗೌರವವನ್ನು ತರಲಪೇಕ್ಪಿಸುವ ಗ್ರಂಥಮಾಲೆಯಲ್ಲಿ ದೊಡ್ಡ ಗೃಹಸ್ಥರ ಚರಿತ್ರಗಳನ್ನು ಪ್ರಸಿದ್ಧಿಸಬೇಕಾದರೆ ಅವು ಪ್ರಸ್ತುತ ಪುಸ್ತಕಕ್ಕಿಂತಲೂ ದೊಡ್ಡವುಗಳೂ ಯೋಗ್ಯವಾದ ಬೆಲೆಯುಳ್ಳವುಗಳೂ ಆಗಿರಬೇಕೆಂದು ನಮ್ಮ ಅಭಿಪ್ರಾಯವಿರುತ್ತದೆ.''44
ಪುಸ್ತಕಗಳ ಬಗ್ಗೆ ಅಭಿಪ್ರಾಯ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ವಿಮರ್ಶೆ
ಕೃತಿಯ ಬಗೆಗೆ ಕೆಲವು ನಿರ್ದಿಷ್ಟವಾದ ತಳ್ಳಿಹಾಕಲಾಗದಂಥ ಮಾತುಗಳನ್ನು ಹೇಳಿದೆ. ಬೆನ್ನು
ತಟ್ಟುವ ಕೆಲಸವನ್ನು ಬದಿಗಿಟ್ಟು ಇಂಥ ಪುಸ್ತಕವೊಂದರಲ್ಲಿ ಏನಿರಬೇಕು, ಪ್ರಕಟಿತ
ಪುಸ್ತಕದಲ್ಲಿಯ ದೋಷಗಳೇನು? ಭಾಷೆಯ ಅಗತ್ಯವೇನು? ಇತ್ಯಾದಿಗಳ ಬಗೆಗೆ ಚಿಂತನೆ
ವ್ಯಕ್ತಪಡಿಸಿರುವುದು ಕಾಣುವುದು. ಮುಂದಿನ ವಿಮರ್ಶೆಯ ದಾರಿಗೆ ಇದೊಂದು ತೋರು
ಬೆರಳು ಎಂಬಂತೆ ಇದೆ.
೨೦ನೆ ಶತಮಾನದ ಮೂರನೆ ದಶಕದ ಕೊನೆಯಲ್ಲಿ ಬಂದ ಇನ್ನೊಂದು
ವಿಮರ್ಶೆಯನ್ನು ಇಲ್ಲಿ ಗಮನಿಸಬೇಕು.
ಕುಪ್ಪಾ ಭಟ್ಟನ ಯಾತ್ರೆ- ಶ್ರೀ ಗ.ರಾ. ಯಾಜಿ- ಸಂಪಾದಕ, ಕರ್ನಾಟಕ ಧುರೀಣ, ಕುಮಠಾ, ಇವರು ಬರೆದುದು ಬೆಲೆ ೦-೧-೬. ಇದೊಂದು ಚಿಕ್ಕ ಪ್ರಾಪಂಚಿಕ ಕಥೆ. ಕುಪ್ಪಾ ಭಟ್ಟನು ಬಡ ಕುಟುಂಬದಲ್ಲಿ ವೈದಿಕ ಬ್ರಾಹ್ಮಣನ ಮಗನಾಗಿ ಹುಟ್ಟಿದ್ದರೂ ವೈದಿಕ ವಿದ್ಯೆಯಲ್ಲಾಗಲಿ, ವೃತ್ತಿಯಲ್ಲಾಗಲಿ ಒಲವಿಲ್ಲದೆ ವ್ಯಾಪಾರೋದ್ಯೋಗಗಳಲ್ಲಿ ಪ್ರವೃತ್ತಿಯುಳ್ಳವನಾಗಿದ್ದ. ಮುಂದೆ ಕಾಶಿ ಯಾತ್ರೆಯ ನೆವನದಿಂದ ದೇಶ ಸಂಚಾರಕ್ಕೆ ಹೊರಟು ಲೋಕಾನುಭವಗಳನ್ನು ಪಡೆದು ದೊಡ್ಡ ಅರಳೆಯ ವ್ಯಾಪಾರಿಯನ್ನು ಆಶ್ರಯಿಸಿ ಕೊನೆಗೆ ದೊಡ್ಡ ವ್ಯಾಪಾರಿಯಾಗಿ ಲಕ್ಷಗಟ್ಟಲೆಯಿಂದ ಹಣ ಗಳಿಸಿ ಶ್ರೀಮಂತನಾದುದೇ ಈ ಕತೆಯ ಮುಖ್ಯಾಂಶವು. ಹಳ್ಳಿಯ ಜೀವನದೊಳಗಿನ ಹಲವು ಸಂಗತಿಗಳೂ ಇದರಲ್ಲಿ ಯಥಾರೀತಿಯಾಗಿ ಚಿತ್ರಿತವಾಗಿವೆ. ಭಾಷೆಯು ಸುಲಭವಾಗಿ ಪರಿಣಾಮಕಾರಕವಾಗಿ ಮನೋರಂಜಕವಾಗಿದೆ. ಗ್ರಂಥಕರ್ತರು ಪತ್ರಿಕಾ ಸಂಪಾದಕರಂತಹ ಜವಾಬ್ದಾರಿಯ ತೆರಪಿಲ್ಲದ ವೃತ್ತಿಯಲ್ಲಿ ತೊಡಗಿಕೊಂಡವರಾದರೂ ಕೆಳತರಗತಿಯ ಜನಹಿತವನ್ನು ಬಯಸಿ ಇಂತಹ ಲಘು ಸಾಹಿತ್ಯೋದ್ಯಮಕ್ಕೆ ಮನಸ್ಸು ಮಾಡಿದುದು ಪ್ರಶಂಸನೀಯವಾಗಿದೆ. ಲೋಕಾದರವನ್ನು ಹೊಂದಿ ಹಲವು ಹೊತ್ತಿಗೆಗಳನ್ನು ಬರೆದು ಪ್ರಕಟಿಸಲೆಂದು ಬಯಸುವೆವು.''೪೫ ಇದನ್ನು `ಪುಸ್ತಕ ಪರಿಚಯ' ಶೀರ್ಷಿಕೆಯಲ್ಲಿ ಪ್ರಕಟಿಸಲಾಗಿದೆ. ಕೃತಿಯ ಸಾರಾಂಶವನ್ನು ಹೇಳಿ, ಕೃತಿಕಾರರ ಪರಿಚಯ, ಪುಸ್ತಕದ ಬೆಲೆ ಎಲ್ಲವನ್ನೂ ವಿವರಿಸುವ ಇದು ಸಮರ್ಥವಾಗಿಯೇ ಕೃತಿಯನ್ನು ಪರಿಚಯಿಸಿದೆ. ಇಂಥ ಪರಿಚಯ ೨೧ನೆ ಶತಮಾನದ ಪತ್ರಿಕೆಗಳ ಭಾನುವಾರದ ಸಾಹಿತ್ಯಕ ಪುಟಗಳಲ್ಲಿಯೂ ಕಾಣಬಹುದು. ಇದರಲ್ಲಿ ಪುಸ್ತಕವನ್ನು ಪರಿಚಯಿಸಿದವರು ಎರಡು ಮಹತ್ವದ ಮಾತುಗಳನ್ನು ಹೇಳಿದ್ದಾರೆ- ಕೆಳತರಗತಿಯ ಜನಹಿತ ಬಯಸುವುದು ಮತ್ತು ಲಘು ಸಾಹಿತ್ಯೋದ್ಯಮ. ಕೆಳತರಗತಿಯ ಜನರೆಂದರೆ ಸಾಮಾನ್ಯ ಓದುಗ. ಸಾಮಾನ್ಯ ಓದುಗನಿಗೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಕ್ಲಿಷ್ಟ ಎನ್ನಿಸಿಬಿಟ್ಟರೆ ಆತನು ಅದನ್ನು ಓದದೆ ಬಿಟ್ಟುಬಿಡುತ್ತಾನೆ. ಸಾಹಿತ್ಯ ಪಂಡಿತನ ಸೊತ್ತಾಗುತ್ತದೆ. ಸಾಹಿತ್ಯವೊಂದು ಜನಮಾನ್ಯವಾಗಬೇಕಾದರೆ ಬಹುಜನರು ಅದನ್ನು ಓದಬೇಕು. ಅದರ ಬಗೆಗೆ ಚರ್ಚಿಸಬೇಕು. ಹೊಸ ಸಾಹಿತ್ಯದ ಆರಂಭದ ಕಾಲದಲ್ಲಿ ಇಂಥ ಕಾಳಜಿಯನ್ನು ವ್ಯಕ್ತಪಡಿಸಿರುವುದು ಮಹತ್ವದ್ದಾಗಿದೆ. ಕೃತಿಯೊಂದು ಸಾಮಾನ್ಯ ಓದುಗನನ್ನು ಆಕರ್ಷಿಸಬೇಕು ಎಂಬ ವಿಚಾರ ಆರಂಭದ ದಶಕಗಳಲ್ಲಿ ಎಲ್ಲರ ಕಾಳಜಿಯೂ ಆಗಿತ್ತು ಎನ್ನುವುದಕ್ಕೆ ಇನ್ನೊಂದು ಉದಾಹರಣೆಯನ್ನು ನೋಡಬಹುದು-
ರಮಾ ಮಾಧವ- ಶ್ರೀಯುತ ಬಿ. ರಾಮರಾವ ಇವರಿಂದ ರಚಿತವಾದುದು.
ಇದೊಂದು ಕಲ್ಪಿತ ಗ್ರಂಥವು… ಕಥೆಯು ಮನಸ್ಸಿನ ಮೇಲೆ ಪರಿಣಾವನ್ನುಂಟು ಮಾಡುವುದು.
ಭಾಷೆಯು ಸರಸವೂ ಲಲಿತವೂ ಸುಸಂಸ್ಕೃತವೂ ಇರುವುದು. ಕನ್ನಡದಲ್ಲಿ ಸುಲೇಖರೆಂದು
ಪ್ರಸಿದ್ಧಿ ಪಡೆದ ಶ್ರೀರಾಮರಾಯರ ಭಾಷೆಯು ಕನ್ನಡಿಗರಿಗೆ ಸುಪರಿಚಿತವೂ, ಪ್ರಿಯವೂ
ಆಗಿರುವುದರಿಂದ ಅದರ ಪ್ರಶಂಸೆಯು ಪುನರುಕ್ತವೇ ಸರಿ. ಓದಲಾರಂಭಿಸಿದರೆ ಮುಗಿಸಿ
ಏಳಬೇಕೆಂದೆನಿಸುವುದು. ಸ್ತ್ರೀಯರೂ ಓದಲರ್ಹವಾಗಿದೆ.”46
ಇಲ್ಲಿ ಎರಡು ಅಂಶಗಳು ಉಲ್ಲೇಖಿತವಾಗಿವೆ. ಓದಲಾರಂಭಿಸಿದರೆ ಮುಗಿಸಿ
ಏಳಬೇಕೆಂದೆನಿಸುವುದು- ಇದು ವಾಚಕರನ್ನು ಬೆಳೆಸುವ ರೀತಿ. ಇನ್ನೊಂದು ಸ್ತ್ರೀಯರೂ
ಓದಲರ್ಹವಾಗಿದೆ- ಎನ್ನುವುದು. ಸಮಾಜದ ಅರ್ಧಭಾಗದಷ್ಟಿರುವ ಸ್ತ್ರೀಯರು ಪುಸ್ತಕಗಳನ್ನು
ಓದುವುದು ಅನಿಷ್ಟ ಎಂಬ ಅಭಿಪ್ರಾಯವಿದ್ದ ಕಾಲದಲ್ಲಿ ಆ ಸ್ತ್ರೀ ಸಮೂಹವನ್ನು ಒಳಗೊಳ್ಳುವ
ಕೃತಿ ಎಂದು ಗುರುತಿಸಿರುವುದು. ಆಗಿನ ಮುಖ್ಯ ಕಾಳಜಿ ಅಧಿಕ ಸಂಖ್ಯೆಯಲ್ಲಿ ಲೇಖಕರು
ಬರೆಯಬೇಕು; ಜನರು ಓದಬೇಕು ಎನ್ನುವುದಾಗಿತ್ತು.
ಇಪ್ಪತ್ತನೆ ಶತಮಾನದಲ್ಲಿಯ ನಾಲ್ಕನೆ ದಶಕದಲ್ಲಿಯ ಒಂದು ವಿಮರ್ಶೆ ಇಲ್ಲಿದೆ.
ಜಯಕರ್ನಾಟಕ'ದಲ್ಲಿ ಪ್ರಕಟವಾದ ಈ ವಿಮರ್ಶೆ ವಿಮರ್ಶಾತ್ಮಕ ಗುಣಗಳಿಂದಾಗಿ ಗಮನ ಸೆಳೆಯುತ್ತದೆ.೪೭ ಪತ್ರಿಕೆಯ ವಿಮರ್ಶೆ ವಿಭಾಗ
ವೀಣಾ ವಿತಾನ’ದಲ್ಲಿ ಇದು ಪ್ರಕಟವಾಗಿದೆ.
ಪಂಡಿತ ಕೆ.ಶ್ರೀಕಂಠಶಾಸ್ತ್ರಿಯವರ ಪಿಳ್ಳಂಗೋವಿ' ಎಂಬ ಆರು ಕತೆಗಳಿರುವ ಒಂದು ಕಥಾ ಸಂಕಲನದ ವಿಮರ್ಶೆ ಇದು. ಕ್ರೌನ್೧/೮ ಪುಟಗಳು ೭೧, ಇದರ ಬೆಲೆ ೫ ಆಣೆ. ಈ ವಿಮರ್ಶೆಯ ಮೊದಲ ಸಾಲನ್ನು ನೋಡಿ: ``ಲಕ್ಪಣಕ್ಕೆ ಅಪವಾದಾತ್ಮಕ ದೃಷ್ಟಾಂತಗಳೆನ್ನುವಂತಿದ್ದ
ಈ ಆರು ಕತೆಗಳ’ನ್ನು ಆರು ಚಿಕ್ಕ ಹರಟೆ'ಗಳೆಂದಿದ್ದರೆ ಹೆಚ್ಚು ಒಪ್ಪಬಹುದಾಗಿತ್ತು.'' ಆಗಲೇ ಕತೆ ಮತ್ತು ಹರಟೆಗಳ ಲಕ್ಪಣಗಳು ಪ್ರಚಲಿತವಿದ್ದವು ಎನ್ನುವುದು ಇದರಿಂದ ತಿಳಿಯುತ್ತದೆ. ಕತೆ ಎಂದರೆ ಹೀಗೆಯೇ ಇರಬೇಕು ಎನ್ನುವ ರೂಢಿಯ ಅಭಿಪ್ರಾಯ ಇದ್ದುದರಿಂದಲೇ ಅವರು ಇವುಗಳು ಕಥೆಯಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ``ಚಿಕ್ಕ ಕತೆಯಲ್ಲಿ ಜೀವನ ಘಟನಾವಳಿಗಳಲ್ಲಿ ಒಂದನ್ನೇ ಕುರಿತು ಕತೆಗಾರನು ತನ್ನ ಪಾತ್ರ, ವಸ್ತುಗಳನ್ನು ಹೆಣೆದಿರುವನು. ಆದರೆ ಇಲ್ಲಿ ಸಂಕಲಿತವಾಗಿದ್ದ ಕತೆಗಳಲ್ಲಿ
ಮಳೆ ಅಯ್ನೋರು’ ಒಡ್ಡತಮ್ಮ'
ಚನ್ನಿ ಭಟ್ಟರು’ ಇವು ಒಂದೊಂದು ವ್ಯಕ್ತಿಯ
ಇಡೀ ಜೀವನದ ಮಾದರಿಯ ಚಿತ್ರಗಳಾಗಿವೆ. ಇವುಗಳಲ್ಲಿ ಚಿಕ್ಕ ಕತೆಯಲ್ಲಿ ಕಂಡು ಬರುವ
ಸಂಗತಿ ಸನ್ನಿವೇಶಗಳಾವುವೂ ಇಲ್ಲ. ಪಾತ್ರ ಪ್ರಾಧಾನ್ಯತೆ ಇದ್ದರೂ ಅದಕ್ಕೆ ತಕ್ಕ ಹಿಡಿತವಿಲ್ಲದೆ
ಹೋಗಿದೆ; ಎಂದರೆ ಪಾತ್ರ ಪರಿಚಯವು ವ್ಯಕ್ತಿ ಚರಿತ್ರ(biography)ಕ್ಕಿಳಿದು ಬಿಟ್ಟಿದ್ದರಿಂದ
ನೂರಾರು ಪುಟಗಳಲ್ಲಿ ಹೇಳಬಹುದಾದ ಜೀವನ ವಿಸ್ತಾರವನ್ನು ಹತ್ತು ಹನ್ನೆರಡು ಪುಟಗಳಲ್ಲಿ
ಸಂಗ್ರಹಿಸಿ ಹೇಳಿದಂತಾಗಿಯೂ ಶೈಥಿಲ್ಯವುಂಟಾಗಿದೆ” ಎಂದು ಹೇಳುವ ಈ ವಿಮರ್ಶಕ
ಸಣ್ಣ ಕತೆಯು ಹೇಗೆ ಇರಬೇಕು ಎಂಬ ಲಕ್ಪಣಗಳನ್ನು ಇಲ್ಲಿ ಹೇಳಿದಂತೆ ಆಗಿದೆ.
ಈ ಸಂಕಲನದಲ್ಲಿಯ ಒಂದು ಕತೆ ಆವೇಶ'. ಇದನ್ನು ಚಿಕ್ಕ ಕತೆಯೆನ್ನುವುದಕ್ಕಿಂತ ಉತ್ತಮ ತರಗತಿಯ ಹಾಸ್ಯ ಪ್ರಧಾನ ವಿಡಂಬನಾತ್ಮಕ ಹರಟೆಯೆಂದರೆ ಮತ್ತಷ್ಟು ಪ್ರಾಶಸ್ತ್ಯ ಬರಬಹುದು ಎನ್ನುತ್ತಾರೆ ಅವರು.
ಗ್ರಹಗಳು’- ಗುರುಗಳು ಚಿಕ್ಕ ಮಕ್ಕಳಿಗೆ ಕಥಾ
ರೂಪವಾಗಿ ಹೇಳುವ ವಸ್ತು ಪಾಠದಂತೆ, ಮನೋರಂಜಕವಾಗಿ ಜ್ಯೋತಿಷದಂತಹ ಒಂದು
ಶಾಸ್ತ್ರೀಯ ವಿಷಯವನ್ನು ತಿಳಿಯಪಡಿಸುತ್ತದೆ. ಅಂದು ಕಳೆಯಿತು' ಎಂಬುದೂ ಉತ್ತಮ ಹರಟೆಗೆ ಉದಾಹರಣೆಯಾಗಿದೆ ಎಂದು ಅವರು ವಿಮರ್ಶಿಸುವರು. ಶ್ರೀಕಂಠ ಶಾಸ್ತ್ರಿಗಳವರ ಶೈಲಿಯು ಸರಳವೂ ಹದಗೊಂಡುದೂ ಇದೆ. ಅವರ ಕಥಾ ನಿರೂಪಣಾ ಕೌಶಲವು ಸುಗಮವಾಗಿದೆ. ಪಾತ್ರ ನಿರೂಪಣೆಯಲ್ಲಿ ಅಲ್ಲಲ್ಲಿ ಅಸ್ವಾಭಾವಿಕತೆಯುಂಟಾಗಿದ್ದರೂ ಜೀವನಕ್ಕೆ ಹೊರತಾಗದ
ಮಾನಸ ಪುತ್ರ’ರನ್ನು
ನಿರ್ಮಿಸಿದ್ದಾರೆ. ಆವೇಶದಲ್ಲಿ ಆವಿಷ್ಕೃತವಾದ ಇವರ ಹಾಸ್ಯದ ಬಗೆಯೂ, ಅಲ್ಲಲ್ಲಿ ಬರುವ
ಕಾವ್ಯಪ್ರಾಯ, ರೀತಿ-ಭಾವಗಳೂ, ಗ್ರಂಥಕರ್ತರ ಕಲಾಭಿಜ್ಞತೆಯನ್ನು ಸ್ಪಷ್ಟಪಡಿಸುತ್ತದೆ.
ತಿರುಳನ್ನು ಮುಟ್ಟಿ ನುಡಿದ ಒಂದೆರಡು ಮಾತಿಗೂ ಕಿವಿಗೂ… ಪಿಳ್ಳಂಗೋವಿಯ ಇಂಚರವು
ಮೈತ್ರಿಯನ್ನುಂಟು ಮಾಡುವ ಸಂಕೋಲೆಯಾಗಬಹುದೆಂದು ಧಾರಾಳವಾಗಿ ಹೇಳಬಲ್ಲೆವು
ಎಂದು ಈ ವಿಮರ್ಶೆ ಮುಗಿಯುತ್ತದೆ. ವಿಮರ್ಶೆಗೆ ಎತ್ತಿಕೊಂಡ ಅಥವಾ ಪರಿಚಯಿಸಲು
ಆರಿಸಿಕೊಂಡ ಕೃತಿಯೇ ಸಾಮಾನ್ಯ ದರ್ಜೆಯದಾದುದರಿಂದ ಕೃತಿ ನಿಷ್ಠ, ಸಿದ್ಧಾಂತಪರ
ವಿಮರ್ಶೆಯಾವುದೂ ಇಲ್ಲಿ ಮಂಡನೆಯಾಗಿಲ್ಲ.
ಜಯಕರ್ನಾಟಕ'ದಲ್ಲಿ ಸಮಕಾಲೀನವಾಗಿ ಹೊರ ಬಂದ ವಿವಿಧ ವಿಶೇಷ ಸಂಚಿಕೆಗಳನ್ನು ವಿಮರ್ಶೆ ಮಾಡಲಾಗುತ್ತಿತ್ತು.
ಕಂಠೀರವ’ ದಸರಾ ಸಂಚಿಕೆ (೧೯೩೭)
ಪ್ರಭಾತ'ದ ದಸರಾ ಸಂಚಿಕೆ,
ನವ ಯುಗ’ದ ಪರ್ಯಾಯ ಸಂಚಿಕೆ, ತ್ರಿವೇಣಿ' ದೀಪಾವಳಿ ಸಂಚಿಕೆ ಇತ್ಯಾದಿಗಳನ್ನು ವಿಮರ್ಶಿಸಲಾಗಿದೆ.
ಸಾಹಿತ್ಯ ಗೋಷ್ಠಿ’ ಶೀರ್ಷಿಕೆಯಲ್ಲಿ
ಇತರ ಪತ್ರಿಕೆಗಳಲ್ಲಿ ಬಂದವುಗಳಲ್ಲಿ ಉತ್ತಮವಾದುದನ್ನು ಆಯ್ದು ಪ್ರಕಟಿಸಲಾಗುತ್ತಿತ್ತು.
ಈ ಕಾಲದಲ್ಲಿ ವಿಮರ್ಶೆಯನ್ನು ಬೆಳೆಸುವ ಕೆಲಸವನ್ನು ಮೈಸೂರು ಕಡೆ ಪ್ರಬುದ್ಧ ಕರ್ನಾಟಕ'ದ ಎ.ಆರ್.ಕೃಷ್ಣ ಶಾಸ್ತ್ರಿಗಳು, ಟಿ.ಎಸ್.ವೆಂಕಣ್ಣಯ್ಯನವರು ಮಾಡಿದರೆ ಧಾರವಾಡದ ಕಡೆ ಗೆಳೆಯರ ಗುಂಪಿನವರು ಮಾಡಿದರು. ``ಗೆಳೆಯರ ಗುಂಪಿನವರು ಶಾಸ್ತ್ರೀಯವಾಗಿ ಕಾವ್ಯವನ್ನೂ ಕಾವ್ಯ ವಿಮರ್ಶನವನ್ನೂ ಅಭ್ಯಾಸಮಾಡಿದರು. ವಿಮರ್ಶೆಯೆಂದರೆ ಬರಹಗಾರನನ್ನು ಹೊಗಳುವುದಷ್ಟೇ ಅಲ್ಲ, ಕೃತಿಯ ತಿರುಳನ್ನು ಅರಿತು ಅದನ್ನು ತಾರ್ಕಿಕವಾಗಿ ಒರೆ ಹಚ್ಚಿ ವಿವೇಚಿಸುವುದು ಎಂಬುದನ್ನು ಗುಂಪಿನವರು ತಿಳಿದು, ಅದನ್ನು ತಮ್ಮ ವಿಮರ್ಶೆಗಳ ಆಧಾರವಾಗಿಟ್ಟುಕೊಂಡರು. ಈ ರೀತಿಯಲ್ಲಿ ವಿಮರ್ಶೆಯನ್ನು ಮಾಡಬೇಕಾದರೆ ವಿಮರ್ಶಕನು ಸಹೃದಯನಾಗಿರಬೇಕು. ಅಲ್ಲದೆ ಚೆನ್ನಾಗಿ ಅಭ್ಯಾಸಮಾಡಿ, ತಿಳಿವಳಿಕೆಯನ್ನು ಪಡೆದಿರಬೇಕು. ಇದನ್ನರಿತ ಗುಂಪಿನವರು ತೀವ್ರವಾದ, ಆಳವಾದ ಮತ್ತು ಸುವ್ಯವಸ್ಥಿತವಾದ ರೀತಿಯಲ್ಲಿ ಕಾವ್ಯಾಭ್ಯಾಸವನ್ನು ಮಾಡಿದರು....''48 ಎಂಬ ಅಭಿಪ್ರಾಯ ಗಮನಿಸಬೇಕು. ಗುಂಪಿನ ಬೆಳಗಾಂವಿ ರಾಮಚಂದ್ರರಾಯರು,
ಪ್ರತಿಭೆಯ ಬಗ್ಗೆ
ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡ ಬರೆಹಗಳಿಂದ ಉದಾಹರಣೆಗಳನ್ನು ನೀಡಿ
ಪಾಂಡಿತ್ಯಪೂರ್ಣವಾದ ಲೇಖನವನ್ನು ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ಬರೆದರು.49 ಗೆಳೆಯರ
ಗುಂಪಿಗೆ ಮುಖವಾಣಿಯಾಗಿ ಜಯಕರ್ನಾಟಕ' ಪತ್ರಿಕೆ ದೊರೆಯಿತು. ಗುಂಪಿನ ಗೆಳೆಯರ ಲೇಖನಗಳು ಇದರಲ್ಲಿ ಪ್ರಕಟವಾಗಿದ್ದವು. ಗೋಕಾಕರೂ ಆರಂಭದಲ್ಲಿ ಜಯಕರ್ನಾಟಕದಲ್ಲಿಯೇ ವಿಮರ್ಶೆಯನ್ನು ಬರೆದರು. ಜಯಕರ್ನಾಟಕದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಆರಂಭದ ಸಂಚಿಕೆಗಳ ವಿಮರ್ಶೆಗೂ ನಂತರದ ಸಂಚಿಕೆಗಳಲ್ಲಿ ಬಂದ ವಿಮರ್ಶೆಗೂ ಇರುವ ಅಂತರವನ್ನು ತಕ್ಪಣ ಗುರುತಿಸಬಹುದು. ಉದಾಹರಣೆಗೆ, ``ಗಿರಿಮಲ್ಲಿಕಾರ್ಜುನ ಶತಕಂ (ಕವಿ- ಶ್ರೀಯುತ ಆರ್.ತಾತಾ). ಇದು ಸನ್ಮಾನ ಗ್ರಂಥಾವಳಿಯಲ್ಲಿ ನಾಲ್ಕನೆಯದಾಗಿ ಶಿವಭಕ್ತಿ ಪ್ರಾಶಸ್ತ್ಯವನ್ನು ವರ್ಣಿಸುವ ರಸವತ್ತಾದ ಪದ್ಯಗ್ರಂಥವಾಗಿರುವುದು. ಇದರ ಶೈಲಿಯು ಹಳಗನ್ನಡದ ಉದ್ಗ್ರಂಥಗಳನ್ನು ಚೆನ್ನಾಗಿ ಹೋಲುವುದು. ಭಾಷೆಯು ಶುದ್ಧವಾಗಿಯೂ, ಪ್ರೌಢವಾಗಿಯೂ ಇರುವುದು. ಇದರಲ್ಲಿ ಶಿವಸಂಬಂಧವಾದ ಅನೇಕ ಕಥೆಗಳು ಅಡಕವಾಗಿದ್ದು ಅವುಗಳೆಲ್ಲಾ ಟಿಪ್ಪಣಿಗಳಲ್ಲಿ ವಿವರಿಸಲ್ಪಟ್ಟಿರುವುವು.''50 ವಿಮರ್ಶೆಯೆಂಬ ಶೀರ್ಷಿಕೆಯಲ್ಲಿ ಇದು ಅಚ್ಚಾಗಿದ್ದರೂ ಇದು ವಿಮರ್ಶೆಯಾಗಿರದೆ ಸಾಮಾನ್ಯ ಹೇಳಿಕೆಯಾಗಿದೆ. ಪುಸ್ತಕವನ್ನು ಓದದೆಯೂ ಈ ಮಾತುಗಳನ್ನು ಬರೆಯಬಹುದಾಗಿದೆ. ಈ
ವಿಮರ್ಶೆ’ಯ ಜೊತೆಯಲ್ಲಿ ಇನ್ನೊಂದು ವಿಮರ್ಶೆಯನ್ನು
ಹೋಲಿಸಿದೆ ಕಾಲದ ವ್ಯತ್ಯಾಸದ ಹಾಗೆ ಗುಣದ ವ್ಯತ್ಯಾಸವೂ ಇರುವುದು ಕಾಣುವುದು.
ಮೈಸೂರು ಮಕ್ಕಳು- ಇದನ್ನು ಬರೆದವರು ಈಗಲೀಗ ಕನ್ನಡಿಗರಿಗೆ ವಿಶೇಷ ವಿಶ್ವಾಸ ವಿಷಯರಾದ ಶ್ರೀ ಬಿ.ಎಂ.ಶ್ರೀಕಂಠಯ್ಯನವರು. ಈ ಕವಿತೆಯಲ್ಲಿ ಪದಗಳನ್ನು ನಯವಾಗಿ ನೆಯ್ದಿರುವುದರಿಂದ ಸಹಜ ಸೌಂದರ್ಯವು ಮತ್ತಷ್ಟು ಹೆಚ್ಚಿದೆ. `ಅಲ್ಲೆಲ್ಲಿ ನೋಡಿದರು ಬಾನಕೆರೆಯಲಿ ಹುದುಗಿ ಕಾರಮುಗಿಲಂತಿಹುದು ಬೆಟ್ಟ ಹಬ್ಬಿ' ಎಂಬ ಸಣ್ಣದಾದರೂ ಮನೋಹರವಾದ ಕಲ್ಪನೆಯೂ, `ಕಾಡಿನಲಿ ನುಸಿಯುತ್ತ ಕಲ್ಲಿನಲಿ ಮೊರೆಯುತ್ತ' ಇತ್ಯಾದಿಯಾಗಿರುವಲ್ಲಿಯ ಶಬ್ದ ಸಾಮರ್ಥ್ಯವೂ ಶ್ಲಾಘನೀಯವಾಗಿದೆ. ಶ್ರೀಯವರ ದೇಶ ಭಕ್ತಿಯು ಹರಿದಲ್ಲೆಲ್ಲ ಹಾದಿಯನ್ನು ಮಾಡಿ ಭರದಿಂದ ಸಾಗುವ ಗಿರಿನಿರ್ಝರಿಣಿಯಂತಲ್ಲ, ಸಮ ನೆಲದಲ್ಲಿ ಸಾವಕಾಶವಾಗಿ ಮುಂದುವರಿಯುವ ತುಂಬು ತೊರೆಯಂತೆ. ಆದರೆ ಈ ಕವಿತೆಯನ್ನು ಬರೆಯುವಾಗ ಕವಿಗಳು ಆನಂದ ಪರವಶರಾಗಿ ವಿಶಾಲವಾದ ವಿಶ್ವವನ್ನು ಮರೆದ ಹಾಗಿದೆ. ಇಲ್ಲಿಯ ಕೊನೆಯ ಚರಣಗಳಲ್ಲಿ ಮಾತ್ರಾ ವ್ಯತ್ಯಾಸ ದೋಷದಿಂದ ಅವನ್ನು ಹಾಡುವುದಕ್ಕೆ ಬರುವುದಿಲ್ಲ.''51 ಇದೊಂದು ರಸ ವಿಮರ್ಶೆ. ಮೊದಲಿನ ವಿಮರ್ಶೆಗೂ ಇದಕ್ಕೂ ಸುಮಾರು ಆರು ವರ್ಷಗಳ ಅಂತರವಿದೆ. ನೇರ ಮಾತುಗಳಲ್ಲಿ ಯಾವುದೇ ದಾಕ್ಪಿಣ್ಯಕ್ಕೆ ಒಳಗಾಗದೆ, ಕಾವ್ಯ ಮೀಮಾಂಸೆಯ ಹಿನ್ನೆಲೆಯಲ್ಲಿ ಇಲ್ಲಿ ಅಭಿಪ್ರಾಯ ಮಂಡಿಸಲಾಗಿದೆ. ೧೯೩೧ರಲ್ಲಿ `ಜಯಕರ್ನಾಟಕ'ದಲ್ಲಿ `ವಿಮರ್ಶೆಯ ರೀತಿ ನೀತಿಗಳು' ಕುರಿತು ವಿ.ಕೃ. ಗೋಕಾಕರು ಲೇಖನವೊಂದನ್ನು ಬರೆದಿದ್ದಾರೆ. `ವಿಮರ್ಶೆಯೆಂದರೆ ಕೇವಲ ಪುಸ್ತಕಾವಲೋಕನವಲ್ಲ. ಅದು ಸಾಹಿತ್ಯದ ಧ್ವಜಸ್ತಂಭವಾಗಿದೆ. ಸಾಹಿತ್ಯವೆಂದರೆ ಕೇವಲ ಅಬಾಧಿತ ತತ್ವಗಳ ಮೇಲೆ ನಿಂತ ಅಂತಸ್ತಿನ ಮನೆಯಾಗಿದೆ. ವಿಮರ್ಶೆಯೆಂದರೆ ಈ ತತ್ವಗಳ ಹಾಗೂ ಅವುಗಳ ಮೇಲೆ ನಿಂತ ಅಸ್ತಿವಾರದ ಸುಸ್ಥಿತಿಯನ್ನು ಕೆಡದಂತೆ ನೋಡಿಕೊಂಡು ಅವುಗಳ ಸೌಂದರ್ಯವನ್ನು ಹೆಚ್ಚಿಸುವ ಸಾಧನೆಯಾಗಿದೆ' ಎಂದು ಹೇಳಿದ್ದಾರೆ. ಸಾಹಿತ್ಯದ ತಿರುಳು ಹುರುಳಿಲ್ಲದಾದಾಗ ವಿಮರ್ಶೆ ಜೀವನವನ್ನು ತೂಗಿ ನೋಡಿ ಅದರಲ್ಲಿರುವ ಬೆಲೆಬಾಳುವ ಸಾಮಗ್ರಿಯನ್ನು ಸಾಹಿತ್ಯಕ್ಕೆ ಒದಗಿಸಿಕೊಡುವುದು ಎಂದೂ ಗೋಕಾಕರು ಹೇಳಿದ್ದಾರೆ. ಹೇಗೆ ನವೋದಯ ಕಾಲದಲ್ಲಿ ವಿಮರ್ಶೆ ಒಂದು ಸಿದ್ಧಾಂತದ ರೂಪವನ್ನು ಪಡೆಯತೊಡಗಿತ್ತು ಎಂಬುದಕ್ಕೆ ಇಲ್ಲಿ ಪುರಾವೆ ಸಿಗುತ್ತದೆ. ವಿಮರ್ಶೆ ಕೃತಿಯಲ್ಲಿಯ ದೋಷಗಳನ್ನು ಹುಡುಕಿ ಖಂಡಿಸುತ್ತದೆ. ಜೊತೆಯಲ್ಲಿ ಸಾಮಾನ್ಯ ಓದುಗ ಕೃತಿಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥನಾದಾಗ ಅದು ಭಾಷ್ಯಕಾರನ ಪಾತ್ರವನ್ನೂ ವಹಿಸುವುದು ಎಂದು ಅವರು ಹೇಳಿದ್ದಾರೆ. ಸಾಹಿತ್ಯದ ಅಜರಾಮರವಾದ ತತ್ತ್ವಗಳನ್ನು ರಕ್ಪಿಸಿ ಬೆಳಗಿಸುವುದೇ ವಿಮರ್ಶೆಯ ಆದ್ಯ ಕರ್ತವ್ಯ ಎಂಬುದು ಅವರ ನಂಬಿಕೆ. ಜೊತೆಯಲ್ಲಿ ಅವರು ವಿಮರ್ಶೆಗೂ ಒಂದು ನಿರ್ಮಾಣ ಶಕ್ತಿ ಇದೆ ಎಂದಿದ್ದಾರೆ. ನಿಜವಾದ ವಿಮರ್ಶೆಯನ್ನು ಓದಿದಲ್ಲಿ ರಸಾನುಭವವು ಉದ್ಭವಿಸುವುದು; ಜೀವನದ ಅಪೂರ್ಣತೆಯು ಗೋಚರಿಸುವುದು; ಬಾಳಿನ ಸಮಸ್ಯೆಯ ಉತ್ತರವು ತಕ್ಕ ಮಟ್ಟಿಗೆ ಸಮರ್ಪಕವಾಗಿಯೂ ಸಮಾಧಾನಕರವಾಗಿಯೂ ದೊರೆಯುವುದು. ಒಟ್ಟಾರೆಯಾಗಿ ವಿಮರ್ಶೆಯ ಹಾಗೂ ಉಳಿದ ವಾಙ್ಮಯದ ಮಾರ್ಗಗಳು ಬೇರೆಯಾಗಿದ್ದರೂ ಅವುಗಳ ಗುರಿ ಒಂದೇ ಆಗಿದೆ. ನೂರು ಕೀಳು ಕವಿಗಳಿಗಿಂತ ಓರ್ವ ಶ್ರೇಷ್ಠ ವಿಮರ್ಶಕ ಲೇಸು ಎಂಬುದು ಗೋಕಾಕರ ನಿಲುವು. ಗೋಕಾಕರು ವಿಮರ್ಶೆಯಲ್ಲಿ ತೀರ್ಪುನೀಡುವಂಥ ನ್ಯಾಯವಿಧಾಯಕ ವಿಮರ್ಶೆ (judicial criticism) ಸಪ್ರಮಾಣ ವಿಮರ್ಶೆ (Inductive criticism), ಸಪ್ರಮೇಯ ವಿಮರ್ಶೆ (Deductive criticism), ತುಲನಾತ್ಮಕ, ಐತಿಹಾಸಿಕ (Historical), ತಾತ್ವ್ತಿಕ (philosophical) ಹೀಗೆ ವಿವಿಧ ಪ್ರಕಾರಗಳನ್ನು ವಿವರಿಸುವರು. ಒಟ್ಟಾರೆ ಆರಂಭಕಾಲದಲ್ಲಿ ವಿಮರ್ಶೆಯನ್ನು ಬೆಳೆಸುವಲ್ಲಿ ಈ ಪರಿಚಯಾತ್ಮಕ ಲೇಖನ ಅತ್ಯಂತ ಮಹತ್ವದ್ದು. ಸಾಹಿತಿಗಳ ಪಾರಮ್ಯಕ್ಕೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾದ ಈ ಲೇಖನ ಸಾಹಿತಿಯ ಬೆಳವಣಿಗೆಯಲ್ಲಿ ವಿಮರ್ಶಕನ ಪಾತ್ರ ಮಹತ್ವದ್ದು ಎಂದು ಸಾರಿ ಹೇಳುತ್ತದೆ. ಜೊತೆಯಲ್ಲಿ ಈ ಮಹತ್ವದ ಪಾತ್ರವನ್ನು ನಿಭಾಯಿಸುವ ಕೆಲವು ಅಂಶಗಳನ್ನು ತಿಳಿಸಿಕೊಡುತ್ತದೆ. `ಪ್ರಬುದ್ಧ ಕರ್ನಾಟಕ'ಕ್ಕೆ ೨೫ ವರ್ಷ ತುಂಬಿದ ಸಂದರ್ಭದಲ್ಲಿ ಲೇಖನವೊಂದನ್ನು ಬರೆದ ಮಾಸ್ತಿಯವರು,
ಹೊಸ ಸಾಹಿತ್ಯವನ್ನು ಕಲಿತಂತೆ ಹೊಸ ವಿಮರ್ಶೆಯನ್ನೂ ನಾವು
ಇಂಗ್ಲಿಷ್ನಿಂದ ಕಲಿಯಬೇಕಾಗಿದ್ದಿತ್ತು. ಅದು ಪ್ರಬುದ್ಧ ಕರ್ನಾಟಕ'ದ ಮೂಲಕ ನಡೆಯಿತು'' ಎಂದಿದ್ದಾರೆ.52 ಕೃಷ್ಣಶಾಸ್ತ್ರಿಗಳು ಮತ್ತು ವೆಂಕಣ್ಣಯ್ಯನವರು ಕೃತಿಗಳನ್ನು ವಿಮರ್ಶಿಸಲು ಬಳಸಿದ ಮಾನದಂಡಗಳು, ಅನ್ವಯಿಸಿದ ರೀತಿ, ಮೌಲ್ಯ ನಿರ್ಣಯ ಎಲ್ಲವೂ ಉನ್ನತ ಪರಂಪರೆಯನ್ನು ಹಾಕಿಕೊಟ್ಟಿತು. ಇದೇ ಕಾಲದಲ್ಲಿ ಹೊಸ ವಿಮರ್ಶೆಯನ್ನು ರೂಪಿಸಿದ ಪತ್ರಿಕೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯೂ ಒಂದು. ಬಿ.ಎಂ.ಶ್ರೀಯವರ
ಇಂಗ್ಲಿಷ್ ಗೀತಗಳು’ ಕುರಿತು ಶ್ರೀ
ಮಾ.ವೆಂ. ಎನ್ನುವವರು ಬರೆದ ವಿಮರ್ಶೆಯನ್ನು ಇಲ್ಲಿ ಗಮನಿಸಬಹುದು.
“ಶ್ರೀ ಶ್ರೀಕಂಠಯ್ಯನವರು ಪ್ರಯೋಗಿಸಿರುವ ಛಂದೋರೂಪಗಳು
ಸುಂದರವಾಗಿವೆ; ಕಾವ್ಯ ವಸ್ತುವಿಗೆ ಅನುಕೂಲವಾಗಿವೆ. ಕನ್ನಡದ ಮರ್ಯಾದೆಗೆ ಒಪ್ಪಿವೆ.
ಮುಖ್ಯವಾಗಿ ಶೈಲಿಯಲ್ಲಿಯೂ ಛಂದಸ್ಸಿನಲ್ಲಿಯೂ ಶ್ರೀಮಾನ್ ಶ್ರೀಕಂಠಯ್ಯನವರು
ಮಾರ್ಗದರ್ಶಿಗಳು. ಇನ್ನು ಮೇಲೆ ಬರುವ ಕವಿಗಳು ಇವರು ತೋರಿಸಿ ಕೊಟ್ಟಿರುವ
ದಾರಿಯಲ್ಲಿ ಹೆಚ್ಚು ಹೆಚ್ಚಾಗಿ ನಡೆಯುವರೆಂಬುದರಲ್ಲಿಯೂ ಇದರಿಂದ ನಮ್ಮ ಸಾಹಿತ್ಯವು
ಪಂಡಿತರಿಗೆ ಮಾತ್ರವಲ್ಲದೆ ಈಗ್ಗಿಂತಲೂ ಹೆಚ್ಚಾಗಿ ಜನಸಾಮಾನ್ಯಕ್ಕೆ
ನಿಲುಕುವಂತಾಗುತ್ತದೆಂಬುದಲ್ಲಿಯೂ ಸಂದೇಹವಿಲ್ಲ.”53
ಕಾವ್ಯಕ್ಕೆ ಕವಿ ಬಳಸಿದ ಛಂದಸ್ಸು ಅನುರೂಪವಾಗಿದೆಯೋ ಇಲ್ಲವೋ ಎನ್ನುವುದರ ವಿವೇಚನೆ ಇಲ್ಲಿದೆ. ಇಂಗ್ಲಿಷ್ ಗೀತಗಳು' ಒಂದು ಹೊಸ ಕಾವ್ಯ ಮಾರ್ಗವನ್ನು ತೆರೆಯ ಬಲ್ಲ ಸಾಮರ್ಥ್ಯ ಹೊಂದಿದೆ ಎಂಬುದನ್ನು ಇಲ್ಲಿ ಗುರುತಿಸಲಾಗಿದೆ. ನಂತರದ ಇನ್ನೊಂದು ಮಾತು, ಸಾಹಿತ್ಯ ಪಂಡಿತರ ವರ್ತುಳದಿಂದ ದಾಟಿ ಪಾಮರರಿಗೂ ಸಮ್ಮತವಾಗಬೇಕು ಎಂಬ ಬಯಕೆ. ಧಾರವಾಡ, ಮೈಸೂರು, ಬೆಂಗಳೂರುಗಳ ಹಾಗೆಯೇ ಮಂಗಳೂರು ಭಾಗದಲ್ಲಿಯೂ ಸಾಹಿತ್ಯ ಕೃತಿಗಳನ್ನು ವಿಮರ್ಶಿಸುವ ಪರಿಪಾಠ ಪತ್ರಿಕೆಗಳಲ್ಲಿ ಆರಂಭವಾಯಿತು. ಮೊದಲಿಗೆ ಇದು ಪುಸ್ತಕವನ್ನು ಪರಿಚಯಿಸುವ ಮಟ್ಟದಲ್ಲಿ ಇದ್ದದ್ದು ನಂತರ ಒಳ್ಳೆಯ ವಿಮರ್ಶೆಯಾಗಿಯೂ ಬೆಳೆದಿದೆ. ಇಪ್ಪತ್ತನೆಯ ಶತಮಾನದ ಮೂರನೆಯ ದಶಕದಲ್ಲಿ
ಸುವಾಸಿನಿ’ ಪತ್ರಿಕೆಯಲ್ಲಿ ಬಂದ ಈ ವಿಮರ್ಶೆಯನ್ನು ಇಲ್ಲಿ ಗಮನಿಸಬೇಕು.
ಕನ್ನಡದ ನಾಲ್ಕನೆಯ ಪುಸ್ತಕವು (ಅಭಿಪ್ರಾಯ) ಇಂತಹ ಪುಸ್ತಕಗಳು ಅನೇಕ ವಿದ್ವಜ್ಜನರು ಸೇರಿರುವ ಮಂಡಳಿಯಿಂದಲೇ ತಯಾರಾಗಬೇಕೆಂದು ನಮ್ಮ ಮತವಿರುವುದು. ತರಗತಿಯ ಪ್ರಮಾಣಕ್ಕನುಸರಿಸಬೇಕು; ಪಾಠಗಳ ಅನುಕ್ರಮವು ಸುಸಂಗತವಾಗಿರಬೇಕು; ವಿಷಯ ವೈವಿಧ್ಯವಿರಬೇಕು; ವಾಕ್ಯ ರಚನೆ, ವಿಷಯ ವಿವೇಚನೆಗಳು ಸುಲಭವೂ ಮನೋಹರವೂ ಆಗಿರಬೇಕು; ... ೫ನೆಯ ಪಾಠವು ಅತ್ಯುತ್ತಮವಾಗಿರುವುದು. `ಸರ್ವಜ್ಞ'ನ ಪದ್ಯಗಳು ಯಥೋಚಿತವಾಗಿ ಸೇರಿಸುವಲ್ಲಿಯ ಜಾಣತನವು ಆಕರ್ಷಕವಾಗಿರುವುವು... `ಕಂಕಣ ದೇವಿಯ ಅಂಗಳ'ದ ಪದ್ಯಗಳು, ದೇವರೋ ದೆವ್ವವೋ ಎಂಬ ಸಂದೇಹವನ್ನುಂಟುಮಾಡುತ್ತಿರುವುದರಿಂದ ಅದನ್ನು ಹಾಕಿದ್ದು ಎಷ್ಟು ಮಾತ್ರವೂ ಚಂದವಾಗಲಿಲ್ಲವೆಂದು ಸೂಚಿಸಬೇಕಾಗಿದೆ. `ಪುಷ್ಪೋದ್ಭವ' ಕವಿತೆಯಲ್ಲಿ ಸ್ವಾರಸ್ಯವೇನೂ ಕಾಣಲಿಲ್ಲ.''54 ಶಾಲೆಯ ಪುಸ್ತಕವೊಂದರ ವಿಮರ್ಶೆ ಇದು. ಶಾಲೆಯ ಪುಸ್ತಕವೆಂದರೆ ಹೇಗಿರಬೇಕು, ಅದನ್ನು ಯಾರು ಸಿದ್ಧಪಡಿಸಿದರೆ ಒಳಿತು, ಸಿದ್ಧ ಪಠ್ಯದಲ್ಲಿ ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಇತ್ಯಾದಿ ಅಭಿಪ್ರಾಯಗಳು ಇದರಲ್ಲಿ ವ್ಯಕ್ತವಾಗಿದೆ. ಪುಸ್ತಕವನ್ನು ಇಡಿಯಾಗಿ ಓದಿರುವುದಕ್ಕೆ ಇದರಲ್ಲಿ ಪುರಾವೆ ಸಿಕ್ಕುತ್ತದೆ. ಇದೇ ರೀತಿಯಲ್ಲಿ ಪುಸ್ತಕಗಳನ್ನು ಪರಿಶೀಲಿಸಿದರೆ ಉತ್ತಮ ವಿಮರ್ಶೆಯನ್ನು ಮಾಡುವುದು ಸಾಧ್ಯವಿದೆ. ಇದೇ ಸುಮಾರಿಗೆ ಎಂ.ಗೋವಿಂದ ಪೈಗಳು ಪಾಂಡೇಶ್ವರ ಗಣಪತಿರಾಯರ `ಹೂಗೊಂಚಲು' ಕವನ ಸಂಕಲನವನ್ನು ವಿಮರ್ಶಿಸಿದ್ದಾರೆ.೫೫ ಉತ್ತಮ ವಿಮರ್ಶೆಗೆ ಅದೊಂದು ಉದಾಹರಣೆಯಾಗಬಲ್ಲುದು.
ಕವಿತೆಯಲ್ಲಿ ಆಯಾ ಕಾಲಕ್ಕೆ ಅನುಗುಣವಾದ ಭಾವನೆಗಳು, ಆ ಭಾವನೆಗಳ
ಧ್ವನಿಗೆ ಅನುಗುಣವಾದ ರೂಪು ಮೊದಲಾದವು ಇಲ್ಲದಿದ್ದರೆ ಸಾವಿರಾರು ವರ್ಷಗಳ ಹಿಂದಿನ
ಸವಗನ್ನು ಈಗಣ ಯೋಧನು ಹೇಗೆ ತೊಟ್ಟುಕೊಳ್ಳಬಹುದೋ? ಹೊಸ ಭಾವನೆಗಳಿಗೆ
ಹೊಸ ಶೈಲಿ ಬಂಧಗಳೇ ಸಾಲವು. ಹೊಸ ಶಬ್ದ ಸೃಷ್ಟಿಯೂ ಬೇಕಾಗದಿರದು; ಎಂಬುದರಿಂದ
ತನ್ನ ಭಾವನೆಗಳನ್ನು ತಟ್ಟನೆ ಮೂಡಿಸಲಿಕ್ಕೆ ಹಳೆಯ ಶಬ್ದಗಳು ನೆರವಾಗದೆಂದಾದರೆ, ಕವಿ,
ಹೊಸ ಶಬ್ದಗಳನ್ನು ಕೂಡ ಸೃಷ್ಟಿಸಿ, ತನ್ನ ಭಾವನೆಗಳನ್ನು ಬೆಳಗಿಸಬೇಕೆಂದೇ ನನಗೆ ತೋರುತ್ತದೆ.
ಆದುದರಿಂದ ಇದೆಲ್ಲ ಬಗೆಯ ನವೀನತೆಯು ಆಯಾ ಕಾಲದಲ್ಲಿ ಬರಲೇಬೇಕು. ಈ
ಬಗೆಗಳ ನವೀನತೆಯಿಂದಲೇ ಕನ್ನಡಸಾಹಿತ್ಯದ ಪುನರುಜ್ಜೀವನವೆಂದು ನನ್ನ ದೃಢ ನಂಬಿಕೆ.
ಕವಿಗೆ ಬೇಕಾದುದು ತುಂಬ ಸ್ವಾತಂತ್ಯ್ರ. ಅದನ್ನಾತನು ನೀಗಲಾಗದು.. .. ಹೆರವರ
ಮಾತುಗಳಲ್ಲಿ ತನ್ನ ಮೂಗುದಾರವನ್ನು ಸಿಲುಕಲಿತ್ತಿರುವ ಕವಿ ತನ್ನ ಕವಿತಾ ಶಕ್ತಿಯನ್ನು
ಕಳಕೊಂಡನೆಂದೇ ತಿಳಿಯಬೇಕು”, ಎಂದು ಕಾವ್ಯ ತತ್ವವನ್ನು ಹೇಳುವರು
ಗೋವಿಂದಪೈಗಳು. ಕನ್ನಡ ಸಾಹಿತ್ಯದ ಪುನರುಜ್ಜೀವನ ಹೇಗೆಂಬುದನ್ನು ಇಲ್ಲಿ ಪೈಗಳು ವಿವರಿಸಿದ್ದಾರೆ. ಹೊಸ ಹೊಸ ಭಾವನೆಗಳಿಗೆ ಹೊಸ ಹೊಸ ಶಬ್ದ ಸೃಷ್ಟಿಯ ಅಗತ್ಯವನ್ನು
ಅವರು ಮನಗಂಡಿದ್ದಾರೆ. ತಮ್ಮ ಈ ಕಾಣ್ಕೆಯನ್ನು ಅವರು ಹೂ ಗೊಂಚಲು'ಗೆ ಅನ್ವಯಿಸಿ ನೋಡುವರು- ``ಕೆಲವು ಕವಿತೆಗಳಲ್ಲಿ ಅಲ್ಲಲ್ಲಿ ನವೀನ ಭಾವನೆಗಳೂ ಇವೆ; ಉದಾ; ಇರುಳನ್ನು ಕುರಿತು, ಬೇರಲ್ಲ ನೀನು ಹಗಲಿನ ಮಾತೆ ಎಂಬರಿವನೀಯೌ ಜಗಕೆ' ಎಂಬುದು ಕನ್ನಡ ವಾಙ್ಮಯದಲ್ಲಿ ತೀರ ಹೊಸತು.. ..
ಮನೋರಮೆ’ ಮೃದು
ಗದ್ಯವೆಂದರೇನು? ಈ ಹೆಸರು ಈ ಛಂದಸ್ಸಿಗೆ ಹೇಗೆ ನೆರೆಯುತ್ತದೆ? ಗುಲಾಬಿ'ಗೆ ಕನ್ನಡದಲ್ಲಿ ಬೇರೆ ಶಬ್ದವಿಲ್ಲದಿದ್ದರೆ,
ಪರದೆ’ ಎಂಬುದರ ಎಡೆಯಲ್ಲಿ ತೆರೆಯ' ಎಂದಿರಿಸಲಾಗದೆ? ಎಂಬಲ್ಲೆಲ್ಲ ಗೋವಿಂದ ಪೈಗಳ ವಿಮರ್ಶನ ಶಕ್ತಿ ಪ್ರಕಟಗೊಂಡಿದೆ. ಇದು ಪೂರ್ವಗ್ರಹವಿಲ್ಲದ ಕೃತಿ ನಿಷ್ಠ ವಿಮರ್ಶೆ. ದಾಕ್ಷಿಣ್ಯಕ್ಕೆ ಒಳಗಾಗದೆ ಸರಳ ಮಾತುಗಳಲ್ಲಿ ಹೇಳಬೇಕಾದುದನ್ನು ಹೇಳಿರುವುದು ವಿಮರ್ಶರ ನಿಶಿತ ಮತಿ, ಆಳವಾದ ಅಧ್ಯಯನಕ್ಕೆ ಸಾಕ್ಪಿಯಾಗಿದೆ. ಕನ್ನಡದಲ್ಲಿ ಮುಂದೆ ಬಂದ ವಿಮರ್ಶೆಗೆ ಇದು ಮಾರ್ಗದರ್ಶಿಯಂತಿದೆ. ಬೆಲೆ ಕಟ್ಟುವ ಹಂತ: ಆರಂಭದ ಹಂತವನ್ನು ದಾಟಿದ ಮೇಲೆ ಸಾಹಿತ್ಯ ಕೃತಿಯನ್ನು ಹೊಗಳುವ, ಸಾಹಿತಿಯ ಬೆನ್ನು ತಟ್ಟುವ ಕೆಲಸವನ್ನು ಬದಿಗಿಟ್ಟು ಕೃತಿಯ ಬೆಲೆಗಟ್ಟುವ ಹಂತವನ್ನು ಕಾಣುತ್ತೇವೆ. ಕನ್ನಡದ ಮೊದಲ ವಿಮರ್ಶೆಯನ್ನು ಪ್ರಭಾವಿಸಿದ ಅಂಶಗಳು ಯಾವುವು? ನವೋದಯ ವಿಮರ್ಶೆ ಕಾಣಿಸಿಕೊಳ್ಳುವ ಹಂತದಲ್ಲಿ ದೇಶವು ಪಾರತಂತ್ಯ್ರಕ್ಕೆ ಒಳಗಾಗಿತ್ತು. ಹೊಸ ಸಾಹಿತ್ಯವು ಆಂಗ್ಲ ಮತ್ತಿತರ ಅನ್ಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿತ್ತು. ವಿಮರ್ಶೆಯೂ ಆಂಗ್ಲ ಪ್ರಭಾವದಿಂದಲೇ ನಮ್ಮಲ್ಲಿ ಬೆಳೆಯಿತು ಎನ್ನುವುದಕ್ಕೆ ಯಾರದೂ ಭಿನ್ನಾಭಿಪ್ರಾಯ ಇಲ್ಲ. ನವೋದಯದ ಸಂದರ್ಭದ ವಿಮರ್ಶೆಯ ಸ್ವರೂಪ ಎಂಥದ್ದು? ಸಾಹಿತ್ಯವಾಗಲಿ ವಿಮರ್ಶೆಯಾಗಲಿ ಶೂನ್ಯದಿಂದ ಹುಟ್ಟುವುದಿಲ್ಲ. ಹಾಗೂ ಕೇವಲ ಭಾವಜನ್ಯ ಬುದ್ಧಿಜನ್ಯ ಆಗಿರುವುದಿಲ್ಲ; ಬದಲಾಗಿ ಇವೆರೆಡೂ ಆಯಾ ಕಾಲದೇಶಗಳ ಸಾಂಸ್ಕೃತಿಕ ನೆಲೆಯಿಂದ ಜೀವನ ಪಡೆಯುತ್ತವೆ. ಒಂದು ಕಾಲಘಟ್ಟದ ಸಾಂಸ್ಕೃತಿಕ ಜವಾಬ್ದಾರಿಯನ್ನು ಸಾಹಿತಿ ಮತ್ತು ವಿಮರ್ಶಕರು ನಿಭಾಯಿಸುತ್ತಾರೆ. ಈ ಮಾತುಗಳ ಹಿನ್ನೆಲೆಯಲ್ಲಿ ನಾವು ನವೋದಯದ ವಿಮರ್ಶೆಯನ್ನು ಅರ್ಥಮಾಡಿಕೊಳ್ಳಬೇಕು. ನವೋದಯದ ಸಂದರ್ಭದಲ್ಲಿ ಬಂದ ಕೃತಿ ವಿವೇಚನೆಗಳೆಲ್ಲ ವಿಮರ್ಶೆಯೋ ಮೀಮಾಂಸೆಯೋ ಎಂದು ವಿಂಗಡಿಸಲು ಬಾರದಂಥದ್ದು. ಪ್ರಾಚೀನ ಕಾಲದಲ್ಲಿ ಬುದ್ಧಿ ಶಕ್ತಿಯನ್ನು ವ್ಯಯಿಸಿ ಕೃತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇರಲಿಲ್ಲ. ಆದರೆ ನವೋದಯದ ಕಾಲದಲ್ಲಿ ಅದನ್ನು ಕಾಣುವುದು ಒಳ್ಳೆಯ ಬೆಳವಣಿಗೆಯೇ. ವಿಮರ್ಶೆ ಓದುಗನಿಗೆ ಸಹಾಯ ಮಾಡುವ ಕಿಂಕರ ಅಲ್ಲ. ಅಥವಾ ಕೃತಿಯ ಅರ್ಥವನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ತಿಳಿಸಿಕೊಡುವುದಲ್ಲ ಎಂಬ ಖಚಿತ ನಿಲುವು ನವೋದಯ ಕಾಲದವರದು. ನವೋದಯದವರ ಎದುರು ಕೆಲವು ಜವಾಬ್ದಾರಿಗಳಿದ್ದವು. ಅಪಾರವಾದ ಹಳೆಗನ್ನಡ ಕಾವ್ಯಗಳು ಅವರ ಎದುರಿಗೆ ಇತ್ತು. ಹೀಗಾಗಿ ಅವುಗಳಿಗೆ ವ್ಯಾಖ್ಯಾನ ವಿವರಣೆ ನೀಡುವುದು ಅವರ ದೊಡ್ಡ ಜವಾಬ್ದಾರಿಯಾಯಿತು. ಈ ಕಾರಣಕ್ಕಾಗಿ ನವೋದಯ ವಿಮರ್ಶೆ ವ್ಯಾಖ್ಯಾನಮುಖಿ ಆಯಿತು. ಕೃತಿಯ ರಸಗ್ರಹಣದ ಸಂದರ್ಭದಲ್ಲಿ ವಿಮರ್ಶೆ ವಿವರಣೆಯಾಯಿತು. ನವೋದಯ ವಿಮರ್ಶೆಯನ್ನು ಪ್ರೇರಿಸಿದ ಅಂಶಗಳು ಯಾವವು? ಸಾಹಿತ್ಯವನ್ನು ಪ್ರೇರಿಸಿದ ಅಂಶಗಳೇ ವಿಮರ್ಶೆಯನ್ನೂ ಪ್ರೇರಿಸಿವೆ. ಇಂಗ್ಲಿಷ್ ವಿದ್ಯಾಭ್ಯಾಸದಿಂದಾಗಿ ಆ ಭಾಷೆಯ ವಿಮರ್ಶೆಯ ತತ್ವ, ಸ್ವರೂಪಗಳು ಕನ್ನಡದಲ್ಲಿ ಕಾಣಿಸಿಕೊಂಡವು. ದೇಶ ಪರಸತ್ತೆಯಲ್ಲಿದ್ದುದು, ಕನ್ನಡ ನಾಡು ಹಲವು ಆಡಳಿತಗಳಲ್ಲಿ ಹಂಚಿ ಹೋಗಿದ್ದು ಆರಂಭದ ವಿಮರ್ಶಕರನ್ನು ಪ್ರಭಾವಿಸಿದ ಅಂಶಗಳಲ್ಲಿ ಮುಖ್ಯವಾದದ್ದು. ವಸಾಹತುಶಾಹಿ ಅನುಭವದ ಗ್ರಹಿಕೆಯ ದೆಸೆಯಿಂದ ಕನ್ನಡದಲ್ಲಿ ವಿಮರ್ಶೆಯ ತತ್ವಗಳು ಕಂಡು ಬಂದವು. ವಸಾಹತುಶಾಹಿಯೇ ನವವಿದ್ಯಾವಂತ ವರ್ಗವನ್ನು ಸೃಷ್ಟಿಸಿದ್ದು. ಈ ವರ್ಗದಲ್ಲಿ ಉಂಟಾದ ಅಭಿರುಚಿಯ ಬದಲಾವಣೆಯು ಕಾವ್ಯಮೀಮಾಂಸೆಯ ಜಾಗದಲ್ಲಿ ವಿಮರ್ಶೆಯನ್ನು ತಂದಿತು. ಈ ನವ ವಿದ್ಯಾವಂತರಿಗೆ ಆಂಗ್ಲ ವಿದ್ಯಾಭ್ಯಾಸದ ಜೊತೆಯಲ್ಲಿ ರಾಜಾರಾಮ ಮೋಹನರಾಯ್, ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ ಮೊದಲಾದವರ ಸಾಮಾಜಿಕ, ಆಧ್ಯಾತ್ಮಿಕ ಪರಿಷ್ಕರಣ ಮೂಲದ ವೈಚಾರಿಕ ಚಳುವಳಿಗಳು ಹಾಗೂ ಗಾಂಧೀವಾದ ಪ್ರಬಲವಾದ ಪ್ರೇರಣೆಯಾದವು. ಈ ಪ್ರೇರಣೆಗಳ ಹೊರತಾಗಿಯೂ ಆ ಕಾಲದ ತೀವ್ರವಾದ ರಾಡಿಕಲ್ ವಿಚಾರಧಾರೆಗಳನ್ನು ಈ ವಿಮರ್ಶೆ ಒಳಗೊಳ್ಳಲಿಲ್ಲ. ಹೊಸ ವಿಚಾರಧಾರೆಗಳು ಮತ್ತು ಪರಂಪರಾಗತ ಮೌಲ್ಯಗಳ ನಡುವೆ ಇಲ್ಲಿ ತೀವ್ರ ಸಂಘರ್ಷ ತಲೆದೋರುತ್ತದೆ. ಸಂಘರ್ಷವು ಒಂದು ಸಮನ್ವಯ ಸೂತ್ರದ ಕಡೆಗೆ ವಾಲುತ್ತದೆ. ಅಲೌಕಿಕ ಆಸಕ್ತಿಯೇ ಜೀವನದ ಪರಮ ಮೌಲ್ಯವಲ್ಲ ಎಂದ
ಧರ್ಮನಿರಪೇಕ್ಷ’ ನಿಲುವು ಮತ್ತು ಮನುಷ್ಯ ತನ್ನ ಲೌಕಿಕ ಪರಿಮಿತಿಯಲ್ಲಿಯೇ ಸಹನಶೀಲ
ಬದುಕನ್ನು ಕಟ್ಟಿಕೊಳ್ಳಬೇಕೆಂಬ ನೈತಿಕ ನಿಲುವುಗಳು ಜೀವನ ದೃಷ್ಟಿಗಳಾಗುತ್ತವೆ. ಸಾಹಿತ್ಯ
ಸೃಷ್ಟಿಯ ಹಿಂದಿನ ನಿಲುವೂ ಇದೇ ಇದ್ದುದನ್ನು ಗಮನಿಸಬೇಕು. ಮಾಸ್ತಿಯವರ ಕಥೆಗಳನ್ನು
ವಿಮರ್ಶಿಸುವಾಗ ಅವರ ಕಥೆಗಳ ಹಿಂದೆ ಇದೇ ಭಾವನೆ ಇದ್ದುದನ್ನು ವಿಮರ್ಶಕರು
ಗಮನಿಸುತ್ತಾರೆ. ಇದ್ದುದನ್ನು ಇದ್ದಂತೆಯೇ ಒಪ್ಪಿಕೊಳ್ಳಬೇಕು ಎನ್ನುವುದು ನಿಲುವಾದರೂ
ಅದರ ಶುದ್ಧತೆಯನ್ನು ಮಾತ್ರ ಸ್ವೀಕರಿಸುವ ವ್ರತ ಪಾಲನೆಯಾಗುತ್ತದೆ. ಇದು ಪಾರಂಪರಿಕ
ನೈತಿಕ ದೃಷ್ಟಿಕೋನ. ಲೇಖಕ ಮತ್ತು ವಿಮರ್ಶಕನ ಸಂಬಂಧ ಇಂಥಲ್ಲಿ ಕೇವಲ ಸಹೃದಯ' ಸಂಬಂಧವಾಗುತ್ತದೆ. ಲೇಖಕನ ದೃಷ್ಟಿಕೋನದಿಂದ ಹೊರಗೆ ನಿಂತು ವಿಮರ್ಶಿಸುವ ನಿಲುವು ನವೋದಯ ವಿಮರ್ಶೆಗೆ ಸಾಧ್ಯವಾಗಲಿಲ್ಲ. ಪಾರಂಪರಿಕ ನೈತಿಕ ಶ್ರದ್ಧೆಗೆ ಹೊರತು ಎನ್ನಿಸಿದಾಗ ಮಾತ್ರ ಲೇಖಕನ ದೃಷ್ಟಿಕೋನವನ್ನು ಪ್ರಶ್ನಿಸಿದ ಉದಾಹರಣೆ ದೊರೆಯುತ್ತದೆ. ಶೂದ್ರ ಪ್ರಜ್ಞೆ: ಕುವೆಂಪು ಅವರು
ಶೂದ್ರ ತಪಸ್ವಿ’ಯನ್ನು ಬರೆದಾಗ ಅದಕ್ಕೆ
ಬಂದ ಪ್ರತಿಕ್ರಿಯೆ ಇಲ್ಲಿ ಮುಖ್ಯವಾಗುತ್ತದೆ. ಶೂದ್ರ ತಪಸ್ವಿ'ಯಲ್ಲಿ ಬರುವ ಈ ಮಾತನ್ನು ಗಮನಿಸಬೇಕು: ``....ನಮ್ಮ ದೇಶದಲ್ಲಿ ನಮ್ಮ ಪುರಾಣ ಕಥೆಗಳು ವಸ್ತುಸಂಗ್ರಹ ಶಾಲೆಯ ನಿರ್ಜೀವ ಪ್ರಾಣಿಗಳಂತಿಲ್ಲ. ಅವುಗಳು ಜೀವ ಶಕ್ತಿಗಳಾಗಿ ನಮ್ಮ ಜನರ ಆಸೆ ಆಕಾಂಕ್ಪೆ ಸಂಸ್ಕೃತಿಗಳನ್ನು ಪೋಷಿಸುತ್ತವೆ. ಅಲ್ಲಿ ಬರುವ ವ್ಯಕ್ತಿಗಳ ನಡತೆಯಿಂದ ಈ ಜನ ತಮ್ಮ ನಿತ್ಯ ಜೀವನದ ಮತೀಯ ಮತ್ತು ಸಾಮಾಜಿಕ ಚೇಷ್ಟಿತಗಳನ್ನು ನಿರ್ಣಯಿಸುವ ಅಂಧ ಶ್ರದ್ಧೆಗೆ ಶರಣಾಗುತ್ತಾರೆ.'' ಈ ಅಂಧ ಶ್ರದ್ಧೆಯ ವಿರುದ್ಧವೇ ಕುವೆಂಪು ಅವರು ಧ್ವನಿ ಎತ್ತುವುದು. ಪುರಾತನವಾದುದನ್ನು ಏಕೆ ಪ್ರಶ್ನಿಸುವುದು ಬೇಡ ಎಂದು ಅವರು ಪ್ರಶ್ನಿಸುತ್ತಾರೆ. ``ಉತ್ತಮ ಶಿಲ್ಪಿ ಕಟ್ಟಿದ ದೇವಾಲಯದಲ್ಲಿ ಅದು ಹಳತಾಗುತ್ತ ಬಂದಂತೆಲ್ಲ, ಇಲಿ ಹಲ್ಲಿ ಬಾವಲಿ ಮೊದಲಾದ ಅನಾಹುತ ಜೀವ ಜಂತುಗಳೂ ಗೂಡುಬೀಡು ಮಾಡುವುದುಂಟು. ವಾಲ್ಮೀಕಿಯ ಮಹಾ ಕೃತಿಗೂ ಅಂತಹ ಗತಿ ಒದಗಿದರೆ ಅದು ಅದರ ಪುರಾತನತ್ವಕ್ಕೆ ಒಂದು ಅನಿವಾರ್ಯ ಲಕ್ಷಣವಾಗುತ್ತದೆ. ದೇವಾಲಯಕ್ಕೆ ಪೂಜೆಗೆಂದು ಹೋಗುವವರು ಯಾರೂ ಅಲ್ಲಿವೆ ಎಂಬ ಒಂದು ಕಾರಣದಿಂದಲೇ ಇಲಿ, ಹಲ್ಲಿ, ಬಾವಲಿಗಳನ್ನು ಹೇಗೆ ಪೂಜಿಸುವುದಿಲ್ಲವೋ ಹಾಗೆಯೇ ಮಹಾಕವಿಯ ಕೃತಿಯಲ್ಲಿ ಬಂದಿಳಿಕೆಗಳಂತೆ ಸೇರಿಕೊಂಡಿರುವ ಅಲ್ಪ ದೃಷ್ಟಿಯ ಕುಕವಿಕೃತವಾದ ಪ್ರಕ್ಷಿಪ್ತಗಳನ್ನು ತಿಳಿದವರು ಯಾರೂ ಗೌರವಿಸುವುದಿಲ್ಲ'' ಎಂದು ಹೇಳುತ್ತಾರೆ. ಶೂದ್ರ ತಪಸ್ವಿಯನ್ನು
ಜೀವನ’ದಲ್ಲಿ ವಿಮರ್ಶಿಸುವ ಮಾಸ್ತಿ ಪುರಾತನ ಕಾವ್ಯದ
ವಸ್ತುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದನ್ನು ಒಪ್ಪುವುದಿಲ್ಲ. ವಕ್ರ ದೃಷ್ಟಿಯ ಹಿಂದಿನ ಕಥೆಯನ್ನು ತಿದ್ದುವೆವೆಂದು ಹೋಗುವವರು ಬೇರೆಯವರು ಹಾಕಿದ ನೆಲಗಟ್ಟಿನ ಮೇಲೆ ನಮ್ಮ ಮನಸ್ಸಿಗೆ ಒಪ್ಪುವ ಭವನವನ್ನು ಕಟ್ಟುವೆವನ್ನುವ ಪ್ರಯತ್ನದಂತೆ. ಇಂದು ನಾನು ಏನು ಮಾಡಿದರೂ ಹಿಂದಿನ ಗೀರು ಇದ್ದೇ ಇರುತ್ತದೆ. ಹೊಸ ಕಾಲದ ಧರ್ಮವನ್ನು ಹೇಳುವುದಕ್ಕೆ ಹೊಸ ಕಥೆಯನ್ನೇ ಹೇಳುವುದು ಕ್ಪೇಮ ಎಂದು ನಾನು ಶ್ರೀ ಪುಟ್ಟಪ್ಪನವರಿಗೆ ಸೂಚಿಸುತ್ತೇನೆ'' ಎಂದು ಹೇಳುತ್ತಾರೆ. ಆದರೆ ಕುವೆಂಪು ದೃಷ್ಟಿಯಲ್ಲಿ `ಶಂಭೂಕ ವಧೆ' ಪ್ರಸಂಗ ವಾಲ್ಮೀಕಿ ಸೃಷ್ಟಿಯಲ್ಲ. ಯಾರೋ ಕುಕವಿಗಳು ಸೇರಿಸಿದ ಪ್ರಕ್ಷಿಪ್ತ. ಕುವೆಂಪು ತಮ್ಮ ಕೃತಿಗಳ ಬಗೆಗೆ ಬಂದ ವಿಮರ್ಶೆಗಳಿಗೆ ಉತ್ತರಿಸಿದ್ದು ಕೇವಲ ಒಂದೇ ಒಂದು ಬಾರಿ ; ಅದು `ಶೂದ್ರ ತಪಸ್ವಿ'ಯ ಬಗೆಗೆ ಮಾಸ್ತಿಯವರು ಬರೆದ ವಿಮರ್ಶೆಗೆ ಮಾತ್ರ. ಪುಟ್ಟಪ್ಪನವರ ಮಾರುತ್ತರ ನೋಡಿ:
ಈ ಟೀಕೆ ಮತ್ತು ಸೂಚನೆ ಅತ್ಯಂತ
ಆಶ್ಚರ್ಯಕರವೂ ಹಾಸ್ಯಾಸ್ಪದವೂ ಆಗಿ ತೋರುತ್ತದೆ. ಅತ್ತ ಪುಲಿ ಇತ್ತ ದರಿ!' ಹೊಸ ಕಾಲದ ಹೊಸ ಧರ್ಮವನ್ನು ಹೇಳಲು ಹೊಸ ಕತೆಯನ್ನು ಕಟ್ಟಿದರೆ ಸಜೀವವಾಗಿ ವಿದ್ವೇಷದ ಉದ್ರೇಕ ಭೂತಗಳನ್ನು ಎಬ್ಬಿಸುತ್ತದೆ. ಆ ಸ್ಥಳದವರೂ, ಈ ಮಠದವರೂ, ಆ ಜಾತಿಯವರೂ, ಆ ಕೋಮಿನವರೂ ಕೋರ್ಟಿಗೆ ಹೋಗುತ್ತೇವೆ ಎನ್ನುತ್ತಾರೆ. ಆ ರಗಳೆಯೇ ಬೇಡವೆಂದು ಹಳೆಯ ಕಥೆಗಳನ್ನು ಅಳವಡಿಸಿಕೊಂಡರೆ ವಿಮರ್ಶಕರು ನಮ್ಮ ಕ್ಪೇಮದ ವಿಚಾರವಾಗಿ ಕಾತರರಾಗಿ ಸೂಚನೆ ಕೊಡ ಹೋಗುತ್ತಾರೆ'' ಎಂದಿರುವರು. ಮಾಸ್ತಿಯವರು ಮೂಲ ಕಥೆಯನ್ನು ಗ್ರಹಿಸುವ ನೆಲೆಯೇ ಬೇರೆ. ಅದು ಸನಾತನವಾದದ್ದು. ``ಉತ್ತರ ಕಾಂಡದಲ್ಲಿ ಪ್ರಕಟವಾಗುವ ಮನೋಧರ್ಮ ವರ್ಣ ವ್ಯವಸ್ಥೆಯನ್ನು ಕುರಿತು ತೀವ್ರವಾದ ಶ್ರದ್ಧೆ. ಈ ಕಾವ್ಯದಲ್ಲಿ ಅದನ್ನು ಜಾತಿ ಗರ್ವಾಂಧತೆ ಎಂದು ವರ್ಣಿಸಿರುವುದು ಕಾಣುತ್ತದೆ'' ಎಂದು ಆಕ್ಪೇಪಿಸಿರುವರು. ಇದಕ್ಕೆ ಕುವೆಂಪು ಅವರ ಸಮಾಧಾನ ಹೀಗೆ: ``ಅವಿವೇಕ ತೀವ್ರವಾದ ಶ್ರದ್ಧೆಯಾದರೂ ಅವಿವೇಕವಾಗಿಯೇ ನಿಲ್ಲುತ್ತದೆ. ಆದ್ದರಿಂದ ತನ್ನ ಶ್ರದ್ಧಾಂಶದಲ್ಲಿ ಅಲ್ಲದಿದ್ದರೂ ಅವಿವೇಕಾಂಶದಲ್ಲಿ ತಿದ್ದುಪಡಿ ಪಡೆಯಬೇಕಾದುದೇ ಅತ್ಯಂತ ಅಗತ್ಯ.'' ವರ್ಣಾಶ್ರಮ ವ್ಯವಸ್ಥೆಯಲ್ಲಿ ಮಾಸ್ತಿಯವರು ಅಚಲ ನಂಬಿಕೆಯನ್ನು ಹೊಂದಿದ್ದರು. ಇದಕ್ಕೆ
ಜೀವನ’ದಲ್ಲಿ ಅವರು ಬರೆದ ಸಂಪಾದಕೀಯದಿಂದ ಉದಾಹರಣೆಗಳನ್ನು
ನೀಡಬಹುದು. ಬ್ರಾಹ್ಮಣ ಜಾತಿಯನ್ನು ಮೊದಲ ವರ್ಣ ಎಂದದ್ದು ಬ್ರಾಹ್ಮಣ ದುರಹಂಕಾರಿಯಾಗಲಿ ಎಂಬ ಅಪೇಕ್ಪೆಯಿಂದ ಅಲ್ಲ. ಯಾವುದೋ ಒಂದು ದೊಡ್ಡ ಗುರಿಯನ್ನು ಸಾಧಿಸುವುದಕ್ಕಾಗಿ, ಸಮಾಜದ ವರ್ಣ ವ್ಯವಸ್ಥೆಯನ್ನು ಆ ಉದ್ದೇಶಗಳ ಸಾಧನೆಗೆ ಸಹಾಯವಾಗುವಂತೆ ತಿದ್ದುವುದು ಪ್ರಾಜ್ಞ ಹಿಂದೂ ಮಹನೀಯರ ಇಂದಿನ ಕರ್ತವ್ಯ. ಜಾತಿಯೆನ್ನುವುದು ನಮ್ಮಲ್ಲಿ ಏರ್ಪಟ್ಟಿದ್ದು ಬೇರೆ ಬೇರೆ ರೀತಿಯ ಅನ್ನ, ವಸನ, ಆಚಾರದ ಜನ ಪರಸ್ಪರ ಸಹನೆಯಿಂದ ಮೈತ್ರಿಯಿಂದ ಬಾಳುವುದು ಸಾಧ್ಯವಾಗಲಿ ಎಂಬ ದೃಷ್ಟಿಯಿಂದ. ಬಹುರೀತಿಯ ಜನ ತಮ್ಮ ತಮ್ಮ ರೀತಿಯಲ್ಲಿ ಬಾಳುತ್ತ ಹಿಂದೂ ಧರ್ಮದ ಮಕ್ಕಳಾಗಿ ಬಾಳಬೇಕು. ಇದು ಇಂದಿನ ಗುರಿ.' `ಮದ್ರಾಸಿನ ಜಸ್ಟಿಸ್ ಪಕ್ಪ ಆಂಗ್ಲರ ಉಪದೇಶ ಕೇಳಿ ಬ್ರಾಹ್ಮಣರ ಮೇಲೆ ದ್ವೇಷ ಮಾಡಿ ಹಿಂದೂ ಧರ್ಮ ನಾಶಕ್ಕೆ ನಾಂದಿ ಹೇಳಿ ಈಗ ಹತ್ತಿರ ಹತ್ತಿರ ಐವತ್ತು ವರ್ಷ ಆಗಿದೆ. ವಿಷ ವೃಕ್ಷವನ್ನು ನೆಟ್ಟ ಜಸ್ಟಿಸ್ ಪಕ್ಪ ಈಗ ಇಲ್ಲ. ಆದರೆ ಈ ವೃಕ್ಷ ಬಿಟ್ಟ ಫಲ ದ್ರಾವಿಡ ಕಳಗಂ, ದ್ರಾವಿಡ ಮುನ್ನೇತ್ರ ಕಳಗಂ, ರಾಮಸ್ವಾಮಿ ನಾಯಕರು, ಇವರಂಥ ಇತರ ಜನ....' `ನಮ್ಮ ಧರ್ಮದ ವರ್ಣ ವ್ಯವಸ್ಥೆಯನ್ನು ನಮ್ಮ ಸಂಸ್ಕೃತಿ ಉಳಿಸುವ ಒಂದು ಮುಖ್ಯ ಸಾಧನವಾಯಿತು ಎಂದು ನಮಗೆ ಕಾಣುತ್ತದೆ. ಇದು ಹಿಂದೂ ಧರ್ಮದಲ್ಲಿ ಒಂದು ದೋಷ ಎಂದು ಹೇಳಲಾರೆವು. ವರ್ಣವ್ಯವಸ್ಥೆಯು ದೋಷ ಎಂಬ ನಿರ್ಣಯಕ್ಕೂ ನಾವು ಬರಲಾರೆವು'.''56 ಈ ಮಾತುಗಳನ್ನು ನಾವು `ಶೂದ್ರ ತಪಸ್ವಿ' ಕುರಿತ ವಾಗ್ವಾದದ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮಾಸ್ತಿಯವರ ಧೋರಣೆ ಇನ್ನಷ್ಟು ಸ್ಪಷ್ಟವಾಗುತ್ತದೆ. `ಜೀವನ'ದಲ್ಲಿ ಆ ಬಳಿಕ ಅನೇಕರು ಪರ ವಿರುದ್ಧ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಅನ್ಯ ಪತ್ರಿಕೆಗಳಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಪುರಾಣ ಪ್ರತಿಮೆಗಳನ್ನು ಸಮಕಾಲೀನ ಸಂದರ್ಭದಲ್ಲಿ ಮುಖಾಮುಖಿಯಾಗಿಸುವ ಮೂಲಕ ಕುವೆಂಪು ಹೊಸಗನ್ನಡ ಸಾಹಿತ್ಯದಲ್ಲಿ ಹೊಸ ಮಾರ್ಗವನ್ನು ತೆರೆಯುತ್ತಾರೆ. ಪುರೋಹಿತಶಾಹಿ ಸಂಸ್ಕೃತಿಗೆ ಶೂದ್ರ ಪ್ರಜ್ಞೆಯ ಪ್ರತಿಕ್ರಿಯೆ ಇದು. ಪುರಾತನ ಕಥೆಯನ್ನು ಸಮಕಾಲೀನ ಸಂದರ್ಭದೊಂದಿಗೆ `ತಗುೞ್ಚಿ 'ಹೇಳುವ ಕ್ರಮ ಪಂಪನಷ್ಟೇ ಹಳೆಯದು. ಹೊಸಗನ್ನಡದಲ್ಲಿ ಕುವೆಂಪು ಇದನ್ನು ಸಾಮಾಜಿಕ ಬದಲಾವಣೆಯ ಸಾಧನವಾಗಿ ಬಳಸುತ್ತಾರೆ ಎನ್ನುವುದು ಮಹತ್ವದ ಅಂಶ. ಪೌರಾಣಿಕ, ಐತಿಹಾಸಿಕ ಪ್ರಸಂಗಗಳನ್ನು ಆಧುನಿಕ ನೆಲೆಯಲ್ಲಿ ಪುನರ್ಸೃಷ್ಟಿ ಮಾಡುವ ಪರಂಪರೆ ನಂತರ ಕನ್ನಡದಲ್ಲಿ ಬೆಳೆಯಿತು. ದೇಶ ಬ್ರಿಟಿಷರಿಂದ ಸ್ವತಂತ್ರವಾಗಬೇಕು ಎಂದು ಬಯಸುತ್ತಿದ್ದ ಕಾಲದಲ್ಲೇ ಕುವೆಂಪು ಸಾಮಾಜಿಕವಾಗಿ ಬ್ರಿಟಿಷರ ಆಗಮನದಿಂದ ದೇಶಕ್ಕೆ ಒಳ್ಳೆಯದೇ ಆಯಿತು ಎಂದು ತಿಳಿದವರು. `ರಾಷ್ಟ್ರಕವಿ ಸಂದರ್ಶನ'ದಲ್ಲಿ ಕುವೆಂಪು ವ್ಯಕ್ತಪಡಿಸಿದ ಅಭಿಪ್ರಾಯಗಳು ಸ್ಫೋಟಕ ವೆನಿಸುವಂಥದ್ದು.
ಬ್ರಿಟಿಷರು
ಬಂದುದರಿಂದಲೇ ಎಲ್ಲರಿಗೂ ವಿದ್ಯಾಭ್ಯಾಸ ಕೊಟ್ಟರು. ಇದರಿಂದಾಗಿ ನಮ್ಮಲ್ಲಿ
ಆತ್ಮಾಭಿಮಾನವಾದರೂ ಮೂಡಿತು. ಪ್ರತಿಭಟಿಸುವಂಥ ಶಕ್ತಿಯಾದರೂ ಬಂದಿತು. ಅವರು
ಬರದಿದ್ದರೆ ನಾನು ಎಲ್ಲಿರುತ್ತಿದ್ದೆ ಗೊತ್ತೇನು? ನಾನು ಕುಪ್ಪಳ್ಳಿಯಲ್ಲಿ ಸಗಣಿ ಹೊತ್ಕೊಂಡು,
ಯಾರಾದ್ರೂ ಒಬ್ಬ ಹಾರುವನ ಜಮೀನಿನಲ್ಲಿ ಕೆಲಸ ಮಾಡ್ಕೊಂಡು ಇರುತ್ತಿದ್ದೆ”
ಎಂದಿದ್ದಾರೆ. ಆಂಗ್ಲರು ಬರದಿದ್ದರೆ ಶೂದ್ರರು ಮನು ಧರ್ಮಶಾಸ್ತ್ರವನ್ನು ಪೂಜಿಸುತ್ತ, ವರ್ಣವ್ಯವಸ್ಥೆಯನ್ನಪ್ಪಿಕೊಂಡು, ಜಾತೀಯತೆಯ ಕೆಸರಲ್ಲಿ ಒದ್ದಾಡುತ್ತ, ನಾಯಿ ನರಿಗಳಿಗೂ ಕಡೆಯಾಗಿ ಬಾಳು ಸಾಗಿಸಬೇಕಾಗುತ್ತಿತ್ತು. ಅಸ್ಪೃಶ್ಯತಾ ನಿವಾರಣೆಯ ಪ್ರಯತ್ನವೂ ಸಾಧ್ಯವಾಗುತ್ತಿರಲಿಲ್ಲ. ಹೀಗಿರುವಾಗ ಪಾಶ್ಚಾತ್ಯ ಸಾಹಿತ್ಯದ ಹಿಡಿತದಿಂದ ತಪ್ಪಿಸಿಕೊಳ್ಳುತ್ತೇನೆನ್ನುವುದು ಕೂಪಮಂಡೂಕ ಪ್ರವೃತ್ತಿಯಾಗುತ್ತದೆ'' ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಕುವೆಂಪು ಬಂಡಾಯ ಸಾಹಿತಿಗಳಿಗೂ ಪ್ರಿಯರಾಗಿದ್ದಾರೆ. ಬಂಡಾಯದ ಸಂದರ್ಭದಲ್ಲಿ ಕುವೆಂಪು ಅವರ ಕೃತಿಗಳ ಪುನರ್ ಮೌಲ್ಯೀಕರಣ ನಡೆಯಿತು. ಇಷ್ಟೊಂದು ಉಗ್ರ ವಿಚಾರವಾದಿಯಾದ ಕುವೆಂಪು ನವೋದಯ ವಿಮರ್ಶೆಗೆ ಒಂದು ಹೊಸ ರೂಪವನ್ನು ಕೊಡಬಹುದಿತ್ತು. ಅವರ ಕೃತಿಗಳಲ್ಲಿ ಕಂಡು ಬಂದ ಈ ಪ್ರಖರವಾದ ವೈಚಾರಿಕತೆ ವಿಮರ್ಶೆಯಲ್ಲಿ ಕಂಡುಬರುವುದಿಲ್ಲ. ಇದಕ್ಕೆ ವಸಾಹತುಶಾಹಿಯೇ ಕಾರಣ ಎನ್ನಬೇಕು. ವಿಮರ್ಶೆ ಕೂಡ ರಾಜಕೀಯ ಗುಪ್ತ ಅಸ್ತ್ರವೇ ಆಗಿತ್ತು ಆಗ. ಎರಡು ಸಂಸ್ಕೃತಿಗಳ ಮುಖಾ ಮುಖಿಯಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾಗಿತ್ತು. ದೇಶದ ಸ್ವಾತಂತ್ಯ್ರ ಮತ್ತು ಕರ್ನಾಟಕದ ಏಕೀಕರಣದ ಬಯಕೆಯು ಸಂಸ್ಕೃತಿಯ ಪುನರುಜ್ಜೀವನದ ಅಂಶವಾಗಿ ಮೈ ತಳೆಯುತ್ತದೆ. ಸಂಸ್ಕೃತಿಯ ಪುನರುಜ್ಜೀವನದ ಸಾಧನ ಸಾಹಿತ್ಯ. ಅದಕ್ಕಾಗಿ ಸಾಹಿತ್ಯ ಜನರನ್ನು ತಲುಪಬೇಕು ಎನ್ನುವುದು ಸಾಹಿತಿಗಳ ಕಾಳಜಿಯಾಯಿತು. ಈ ಸಾಹಿತ್ಯ ಜನರಿಗೆ ಅರ್ಥವಾಗಬೇಕು ಎಂದಾಗ ಅದು ವ್ಯಾಖ್ಯಾನಮುಖಿಯಾಯಿತು. ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ ನೀಡಬೇಕು ಎಂಬ ನವೋದಯದ ಕಳಕಳಿಗೆ ಅನುಗುಣವಾಗಿಯೇ ಅಂದಿನ ವಿಮರ್ಶೆ ಮೈದಾಳಿದೆ. ಒಳ್ಳೆಯದು ಎನ್ನುವಾಗ ಕೆಟ್ಟದ್ದು ಇರಬೇಕಲ್ಲವೆ? ಈ ಒಳ್ಳೆಯ ಮತ್ತು ಕೆಟ್ಟ ಸಾಹಿತ್ಯದ ಪರಿಕಲ್ಪನೆ ನವೋದಯದ ವಿಮರ್ಶಕರಿಗೆ ಇದ್ದಿತ್ತು. ಒಳ್ಳೆಯದನ್ನು ಅವರು ಮಾರ್ಗ ಸಾಹಿತ್ಯ ಎಂದು ಕರೆದರು. ಈ ಕಪ್ಪು ಬಿಳುಪಿನ ಪರಿಕಲ್ಪನೆ ಅಥವಾ `ಜನರ ಅಭಿರುಚಿಯನ್ನು ತಿದ್ದುವ ಸಾಹಿತ್ಯ'ದಂಥ ಮಾತು ಸಾಹಿತ್ಯ ವಿಮರ್ಶೆಯಲ್ಲಿ ಸಹಜವಾಗಿ ಹುಟ್ಟುವುದಿಲ್ಲ. ಇದಕ್ಕೆ ಅಂದಿನ ಚಾರಿತ್ರಿಕ ಮತ್ತು ಸಾಮಾಜಿಕ ಅಂಶಗಳು ಕಾರಣವಾಗುತ್ತವೆ. ಈ ಮಾತನ್ನು ಹೇಳುವಾಗ ಮತ್ತೆ ನಾವು ಪಾರತಂತ್ಯ್ರ, ಏಕೀಕರಣಗಳ ಕಡೆಗೇ ಹೊರಳುತ್ತೇವೆ. ನವೋದಯದ ಪ್ರಮುಖ ವಿಮರ್ಶಕರಾದ ಮಾಸ್ತಿ, ಕುವೆಂಪು ಮೊದಲಾದವರೆಲ್ಲ ವಸಾಹತುಶಾಹಿಯ ಕಪಿಮುಷ್ಟಿಯಿಂದ ಹೊರಬರಬೇಕು ಎಂಬ ತಾತ್ವಿಕ ನಿಲುವನ್ನು ಹೊಂದಿದವರಾಗಿದ್ದರು. ಹೀಗಾಗಿ ಪರಂಪರಾನುಗತ ಮೌಲ್ಯಗಳ ಬಗ್ಗೆ ಶ್ರದ್ಧೆ, ಗೌರವ, ಪ್ರಶಂಸೆಯನ್ನು ಅವರು ತಳೆದರು. ಹೀಗೆಂದ ಮಾತ್ರಕ್ಕೆ ಅವರು ಬರೆದ ಸಹೃದಯ ವಿಮರ್ಶೆ ಪ್ರತಿಗಾಮಿಯಾದದ್ದು ಎಂದು ಹೇಳುವುದು ಸರಿಯಲ್ಲ. ಏಕೆಂದರೆ ಅದು ಪ್ರಜ್ಞಾಪೂರ್ವಕವಾಗಿ ಹೊಂದಿದ್ದು ಅಲ್ಲ. ಸಮಾಜದಲ್ಲಿಯ ಕ್ರೌರ್ಯ, ಶೋಷಣೆಗಳ ಬಗೆಗೆ ಅವರು ಅನುಕಂಪವನ್ನು ವ್ಯಕ್ತಪಡಿಸಬಲ್ಲವರಾಗಿದ್ದರು. ನವೋದಯ ಸಾಹಿತಿಗಳಿಗೆ ವಿಮರ್ಶಕರ ಬಗೆಗೆ ಇದ್ದ ಧೋರಣೆಯ ಬಗ್ಗೆ ಇಲ್ಲಿ ಎರಡು ಮಾತನ್ನು ಹೇಳಬೇಕು. ನವೋದಯ ಸಾಹಿತಿಗಳು ವಿಮರ್ಶನ ಪ್ರತಿಭೆ ತಮಗೆ ಸಮನಾದುದು ಎಂದು ಪರಿಗಣಿಸಿದವರಲ್ಲ. ಕಾರಯಿತ್ರೀ ಪ್ರತಿಭೆ ಭಾವಯಿತ್ರೀ ಪ್ರತಿಭೆಗೆ ಅಡಿಯಾಳಾದುದು ಎಂಬುದು ಅವರ ಅಭಿಪ್ರಾಯ. ಈ ಕಾರಣಕ್ಕಾಗಿಯೇ ನವೋದಯ ವಿಮರ್ಶೆಯ ತತ್ವಗಳಲ್ಲಿ ಕವಿಗೆ ಎಲ್ಲಿಲ್ಲದ ಮಹತ್ವ ಪ್ರಾಪ್ತವಾಗಿದೆ. ಕವಿಯೆಂದರೆ ಒಬ್ಬ ತತ್ವಜ್ಞಾನಿ, ಸಂತ, ದಾರ್ಶನಿಕ ಎಂದೆಲ್ಲ ಭಾವಿಸಲಾಗಿದೆ. ಕವಿಗಳಿಗೆ ಪ್ರತಿಭೆ ಮಹತ್ವದ್ದು ಎಂದು ತಿಳಿಯುವ ನವೋದಯ ಸಾಹಿತಿಗಳು ವಿಮರ್ಶನ ಪ್ರತಿಭೆಯನ್ನು ಕವಿ ಪ್ರತಿಭೆಗೆ ಸಮನಾದುದು ಎಂದು ಪರಿಗಣಿಸುವುದೇ ಇಲ್ಲ. ಅದಕ್ಕಾಗಿಯೇ ಕುವೆಂಪು ಅವರು `ನಾನೇರುವೆತ್ತರಕ್ಕೆ ನೀನೇರ ಬಲ್ಲೆಯಾ?' ಎಂದು ವಿಮರ್ಶನ ಪ್ರತಿಭೆಗೆ ಸವಾಲು ಎಸೆಯುತ್ತಾರೆ. `ಅಲ್ಲಿ ಹುಗಲಿಲ್ಲ ಓ ಬಿಯದ ಅದು ಪಕ್ಪಿಕಾಶಿ' ಎಂದು ಹೇಳುತ್ತಾರೆ. ವಿಮರ್ಶಕನೆಂದರೆ ಅವರ ದೃಷ್ಟಿಯಲ್ಲಿ ಕರುಣೆಯಿಲ್ಲದೆ ಕೊಲ್ಲುವ ಬೇಡನಾಗಿಬಿಡುತ್ತಾನೆ. ಹೀಗಾಗಿ ಸ್ವತಃ ಕುವೆಂಪು ಅವರೇ ಬರೆದ ವಿಮರ್ಶೆಯೂ ವ್ಯಾಖ್ಯಾನಮುಖಿಯಾಗಿದೆ. ಕಾವ್ಯಮೀಮಾಂಸೆಯ ತತ್ವಗಳನ್ನು ಅನ್ವಯಿಸಿ ರಸ ಸ್ಥಾನಗಳನ್ನು ಗುರುತಿಸುವುದಾಗಿಬಿಟ್ಟಿದೆ. ಇದು ನವೋದಯ ವಿಮರ್ಶೆಯ ಮಿತಿಯೂ ಆಗಿದೆ. ಕವಿ ಪಾರಮ್ಯಕ್ಕೆ ಪ್ರಶ್ನೆ: ನವೋದಯ ವಿಮರ್ಶೆಯಲ್ಲಿ ಕವಿಗಿರುವ ಪಾರಮ್ಯವನ್ನು ವಿ.ಕೃ.ಗೋಕಾಕರು ಪ್ರಶ್ನಿಸುತ್ತಾರೆ. ೧೯೩೧ರಲ್ಲಿ `ಜಯಕರ್ನಾಟಕ'ದಲ್ಲಿ `ವಿಮರ್ಶೆಯ ರೀತಿ-ನೀತಿಗಳು' ಕುರಿತು ಬರೆಯುವ ಗೋಕಾಕರು
ಸಾಹಿತ್ಯ
ಸಾಮ್ರಾಟರು ಇಲ್ಲದಾಗಲು ಪಾಳೆಯಗಾರರೆ ರಾಜಾಧಿರಾಜರಂತೆ ವರ್ತಿಸುವರು. ತಾವು
ಸರಸ್ವತೀ ದೇವಿಯ ಪುತ್ರರಲ್ಲ, ಪತಿಗಳೆಂದು ತಿಳಿದುಕೊಳ್ಳುವರು. ಆಗ `ನೀವು
ಸಾಮ್ರಾಟರಲ್ಲ, ಪಾಳೆಯಗಾರರೆಂ’ದು ವಿಮರ್ಶಕನು ನಿರ್ಭೀತನಾಗಿ ಹೇಳುವನು.
ಪ್ರತ್ಯುತ್ತರವೆಂದು ಆ ನಾಯಕರು ಅವನನ್ನು ಕೊಲ್ಲಬಹುದು. ಆದರೆ ಸತ್ಯವನ್ನು
ಕೊಲ್ಲಬಹುದೆ? ಅದರಂತೆ ಕೆಲವು ಸಾಹಿತಿಗಳು ಕೀರ್ತಿವಂತರಾಗಿ ತಾವು ಉಸಿರಿದ್ದೇ
ವೇದವೆಂದು ಭಾವಿಸುತ್ತಿರಬಹುದು.ಆಗ ಅವರ ಉಸಿರಿನಲ್ಲಿ ವೇದವು ಎಲ್ಲಿ
ಲೋಪವಾಗಿದೆಯೆಂಬುದನ್ನು ವಿಮರ್ಶಕನು ವಿಂಗಡಿಸಿ ತೋರಿಸುವನು. ಇದಕ್ಕೆ
ಪ್ರತಿಯಾಗಿ ಅವರು ವಿಮರ್ಶಕನನ್ನು ಹೀಯಾಳಿಸಬಹುದು, ಹಳಿಯ ಬಹುದು,
ಹೂಳಬಹುದು. ಆದರೆ ಸತ್ಯವನ್ನು ಹೂಳಬಹುದೆ?” ಎಂದು ಪ್ರಶ್ನಿಸುತ್ತಾರೆ.
ವಿಮರ್ಶಕ ಅಪ್ರಿಯ ಸತ್ಯವಾದಿ ಎನ್ನುವ ಗೋಕಾಕರು, ಹೊಗಳಿಸಿಕೊಂಡು
೧೫೭
ದಡ್ಡುಬಿದ್ದಿರುವ ಕೆಲವರಿಗೆ ತಮ್ಮ ಗ್ರಂಥಗಲ್ಲಿ ದೋಷಗಳಿವೆಯೆಂದರೆ
ಸಹನವಾಗುವುದಿಲ್ಲ ಎನ್ನುತ್ತಾರೆ. ವಿಮರ್ಶಕನು ಪ್ರಿಯನಾಗಬಹುದು; ಇಲ್ಲವೆ
ಅಪ್ರಿಯನಾಗಬಹುದು; ಆದರೆ ವಿಮರ್ಶಕನು ಸತ್ಯವಾದಿ ಎಂಬುದು ಅವರ ದೃಢವಾದ ಮಾತು.
ನವೋದಯ ಸಾಹಿತ್ಯ ತನ್ನ ಕಾಲದ ಒತ್ತಡಕ್ಕೆ ಅನುಗುಣವಾಗಿ ಪ್ರೇರಣೆ ಪಡೆದು
ಅದಕ್ಕೆ ತಕ್ಕ ಅಭಿವ್ಯಕ್ತಿಯನ್ನು ಪಡೆಯಿತು. ಆ ಕಾಲದ ಸಾಹಿತಿಗೆ ಮಾರ್ಗಸೂಚಕ
ತೋರುಬೆರಳಾಗಿ ಪತ್ರಿಕೆಗಳು ಕೆಲಸ ಮಾಡಿದವು. ಪತ್ರಿಕೆಗಳು ತಂದ ಒತ್ತಡದಲ್ಲಿ
ನವೋದಯ ಸಾಹಿತ್ಯ ಯಾವ ರೂಪವನ್ನು ಪಡೆದುಕೊಂಡವು ಎಂಬುದನ್ನು ಗಮನಿಸಿದೆವು.
ಸಾಹಿತ್ಯ ನಿರ್ಮಿತಿಗೆ ದಾರಿ ತೋರಿದ್ದು ಮಾತ್ರವಲ್ಲದೆ ನಿರ್ಮಿತ ಸಾಹಿತ್ಯವನ್ನು ತೂಗಿ ನೋಡಿ
ಬೆನ್ನುತಟ್ಟಿತು, ಬಳಿಕ ಬೆಲೆಗಟ್ಟಿತು. ಇದುವರೆಗಿನ ವಿವರಣೆಗಳನ್ನು ಗಮನಿಸಿದಾಗ
ನವೋದಯ ಸಾಹಿತ್ಯ ರೂಪುಪಡೆಯುವಲ್ಲಿ ಪತ್ರಿಕೆಗಳು ಮಾಡಿದ ಕಾರ್ಯ ಮನದಟ್ಟಾಗದೆ ಇರದು.
ಈ ಸಂದರ್ಭದಲ್ಲಿ ನಮೂದಿಸಬೇಕಾಗಿರುವ ಇನ್ನೊಂದು ಮಹತ್ವದ
ವಿಷಯವೆಂದರೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಸಾಹಿತ್ಯಕ ಚರ್ಚೆ;
ಅದು ಪ್ರಾಸ ಸಂಬಂಧಿಯಾದುದು. ಪದ್ಯ ರಚನೆಗೆ ತೊಡಕು ಎನಿಸಿದ್ದ ಪ್ರಾಸ ತ್ಯಾಗ
ಹೊಸಗನ್ನಡ ಕವಿತೆಯಲ್ಲಿ ಒಂದು ಹೊಸ ತಿರುವು. ಒಂದು ಹೊಸ ಬೆಳವಣಿಗೆ. ಈ
ಬೆಳವಣಿಗೆಯಲ್ಲಿ ಪತ್ರಿಕೆಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಪತ್ರಿಕೆಗಳು ಅಂದು
ನಿರ್ವಹಿಸಿದ ನಿರ್ಣಾಯಕ ಪಾತ್ರದಿಂದಾಗಿಯೇ ಹೊಸಗನ್ನಡ ಕವಿತೆಯಲ್ಲಿ ಪ್ರಾಸ ಬಿಟ್ಟು
ಹೋಯಿತು. ಅದೇ ರೀತಿ ಅನುವಾದಗಳ ಸಂಬಂಧದಲ್ಲಿ ನಡೆದ ಚರ್ಚೆಯೂ ಅಷ್ಟೇ
ಮಹತ್ವದ್ದು. ಹೊಸಗನ್ನಡ ಸಾಹಿತ್ಯದ ಆರಂಭದ ಕಾಲವನ್ನು ಬಿ.ಎಂ.ಶ್ರೀಯವರು
ಅನುವಾದ ಯುಗವೆಂದೇ ಕರೆದಿದ್ದರು. ಇದರಿಂದ ಅನುವಾದದ ಮಹತ್ವ ಅರಿವಾಗುವುದು.
ಆ ಅನುವಾದ ಹೇಗಿರಬೇಕು, ಹೇಗಿರಬಾರದು ಎಂಬ ಚರ್ಚೆಯೂ ಮಹತ್ವದ್ದೇ.
ಪ್ರಾಸ ತ್ಯಾಗ:
ನವೋದಯದ ಸಂದರ್ಭದಲ್ಲಿ ಇಡೀ ಹೊಸಗನ್ನಡ ಸಾಹಿತ್ಯಕ್ಕೇ ಹೊಸ ದಿಕ್ಕನ್ನು
ನೀಡಿದ ವಾಗ್ವಾದವೊಂದು ಪತ್ರಿಕೆಗಳಲ್ಲಿ ನಡೆದು ಹೊಸ ಮಾರ್ಗವನ್ನು ಸ್ಥಾಪಿಸುವಲ್ಲಿ
ಯಶಸ್ವಿಯಾಯಿತು. ಅದು ಪ್ರಾಸ ತ್ಯಾಗ ಕುರಿತ ವಾಗ್ವಾದ. ವಾಗ್ವಾದಗಳಿಂದ ಯಾವುದೇ
ವಿಷಯವು ನಿಕಷಕ್ಕೆ ಸಿಲುಕಿ ಇನ್ನಷ್ಟು ಪರಿಷ್ಕಾರಕ್ಕೆ ಒಳಗಾಗುತ್ತದೆ. ವಾಗ್ವಾದಗಳು ಭಾಷೆಯ
ಜೀವಂತಿಕೆಯನ್ನು ತೋರಿಸುತ್ತವೆ. ಇಂಥ ವಾಗ್ವಾದಗಳಿಗೆ ಸಾಹಿತ್ಯಪತ್ರಿಕೆಗಳು ಯಾವತ್ತೂ
ವೇದಿಕೆಯಾಗುತ್ತಲೇ ಬಂದಿವೆ. ಕನ್ನಡದಲ್ಲಿ ಹೊಸ ಕಾವ್ಯ ಹುಟ್ಟು ಪಡೆದುಕೊಳ್ಳುತ್ತಿದ್ದಾಗ
ನಡೆದ ಪ್ರಾಸ ಸಂಬಂಧಿ ವಾಗ್ವಾದ ಹೊಸ ಕಾವ್ಯಮಾರ್ಗದಲ್ಲಿ ಹೊಸ ಅಧ್ಯಾಯವನ್ನು
ಆರಂಭಿಸುವುದಕ್ಕೆ ಕಾರಣವಾಯಿತು.
ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕೋಲಾಹಲ ಪ್ರಾಸಕ್ಕೆ ಸಂಬಂಧಿಸಿದ್ದು.
ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದ ಈ ಪ್ರಾಸವನ್ನು ಬಿಡುವುದು ಅಷ್ಟು ಸುಲಭ
ಇರಲಿಲ್ಲ. ಈಬಗ್ಗೆ ಆಗಿನ ಕಾಲದ ಪತ್ರಿಕೆಗಳಲ್ಲಿ ಸುದೀರ್ಘವಾದ ಚರ್ಚೆ ನಡೆದಿದೆ.
ದ್ವಿತೀಯಾಕ್ಷರ ಪ್ರಾಸವನ್ನು ಅನುಸರಿಸುವುದರಿಂದ ಏನು ತೊಂದರೆಗಳು ಇವೆ, ಅದನ್ನು
ತ್ಯಾಗ ಮಾಡುವುದರಿಂದ ಕಾವ್ಯಕ್ಕೆ ಏನು ಲಾಭ ಇತ್ಯಾದಿ ಸ್ವಾರಸ್ಯಕರ ವಾಗ್ವಾದವನ್ನು
ಇಲ್ಲಿ ಅವಲೋಕಿಸಲಾಗಿದೆ.
ಪ್ರಾಸ ಪಾಲನೆಯಲ್ಲಿ ರಳ-ಕುಳ-ಕ್ಷಳದ ಗೊಂದಲವನ್ನು ಹರಿಹರ
ನಿವಾರಿಸಿಕೊಂಡಾಗಲೂ ಇಂಥ ಪ್ರತಿಭಟನೆ ವ್ಯಕ್ತವಾಗಿದ್ದಿರಬಹುದು. ಆಧುನಿಕ ಕನ್ನಡದಲ್ಲಿ
ಎಂ.ಗೋವಿಂದ ಪೈಯವರು ಪ್ರಾಸ ರಹಿತ ಪದ್ಯ ಬರೆಯುವುದಕ್ಕೆ ಮನಸ್ಸು ಹೊಂದಿದ್ದರು.
ಅಂತ್ಯಪ್ರಾಸವನ್ನು ಬಿಟ್ಟು ಬರೆಯುವುದೆಂದರೆ ಚೇಳಿನ ಮಂತ್ರ ಬಾರದೆ ಹಾವಿನ ಗುದ್ದಿನಲಿ
ಕೈಯಿಕ್ಕುವ' ಸಾಹಸವಾಗಿ ಗೋವಿಂದಪೈಯವರಿಗೆ ಕಂಡಿತ್ತು. ಗೋವಿಂದ ಪೈಯವರು
ಪ್ರಾಸವನ್ನು ಬಿಡುವ ಸಂಬಂಧ ಪಂಜೆ ಮಂಗೇಶರಾಯರ ಅಭಿಪ್ರಾಯವನ್ನು ಕೇಳುವರು.
ಅವರಿಂದ ಉತ್ಸಾಹಜನಕ ಪ್ರತಿಕ್ರಿಯೆ ದೊರೆಯಲಿಲ್ಲ.
``೧೯೦೦ರ ವೇಳೆಗೇ ಪೈಯವರಲ್ಲಿ ಪ್ರಾಸ ತ್ಯಾಗದ ಯೋಚನೆ ಅಂಕುರಿಸಿದುದೇ
ಅಚ್ಚರಿಯೆನಿಸುವುದು. ೧೯೦೨ನೆಯ ಆಗಸ್ಟ್ ತಿಂಗಳ
ಸುವಾಸಿನೀ’ ಪತ್ರಿಕೆಯಲ್ಲಿ
ಪ್ರಕಟವಾದ ಪೈ ಅವರ ಕಾಲಿಯ ಮರ್ಧನ' ಆರು ಕಂದ ಪದ್ಯಗಳನ್ನೊಳಗೊಂಡುದು,
ಇಲ್ಲಿ ಪ್ರಾಸವಿದೆ. (ಈ ಕವಿತೆ ಅವರ
ಗಿಳಿವಿಂಡು’ ಸಂಗ್ರಹದಲ್ಲಿ ಸೇರಿಲ್ಲ.) ಅನಂತರ
೧೯೦೩ರಿಂದ ೧೯೧೦ರ ತನಕವೂ ಅವರು ಪ್ರಾಸವನ್ನು ಇಟ್ಟೂ ಬಿಟ್ಟೂ ಬರೆಯುತ್ತಿದ್ದರು”,
ಎಂದು ಎಸ್.ಅನಂತನಾರಾಯಣ ಹೇಳಿರುವರು.57
ತಾವು ಪ್ರಾಸ ಬಿಟ್ಟ ಸಂದರ್ಭವನ್ನು ಗೋವಿಂದ ಪೈಗಳು ವರ್ಣಿಸುವುದು ಹೀಗೆ,
೧೯೧೧ನೆಯ ಎಪ್ರಿಲ್ ತಿಂಗಳಿನಲ್ಲಿ ನಾನು ಸುಮಾರು ಒಂದು ತಿಂಗಳು ಬಡೋದಾ
ರಾಜ್ಯದ ನವಸಾರಿ ಎಂಬಲ್ಲಿದ್ದೆ. ಆಗ್ಗೆ ಒಂದು ಮುಂಜಾನೆ ಮಾಳಿಗೆಯಲ್ಲಿ
ಶತಪದಗೆಯ್ಯುತ್ತಿದ್ದಾಗ ಹಠಾತ್ತಾಗಿ, ಆಗೋದು ಹೋಗೋದು ದೇವರ ಇಚ್ಛೆ. ಇನ್ನು
ಮೀನ-ಮೇಷ ನೋಡದೆ `ಪ್ರಾಸವನೀಗಲೆ ತೊರೆದುಬಿಡುವುದೇ ನಿಶ್ಚಯಂ'
ಎಂದಾಯಿತು. ಮರದ ಹಣ್ಣು ಮರದ ಬುಡದಲ್ಲಿ ಬಂತು.''58
ಪೈಯವರು `ಸ್ವದೇಶಾಭಿಮಾನಿ' ಪತ್ರಿಕೆಯಲ್ಲಿ ಪ್ರಾಸವಿಲ್ಲದ `ಹೊಲೆಯನು
ಯಾರು?' ಎಂಬ ಕವಿತೆಯನ್ನು ಪ್ರಕಟಿಸಿದರು. ಈ ಕವಿತೆಗೆ ಪ್ರಾಸವಿಲ್ಲದ ಕಾರಣಕ್ಕಾಗಿ
ತೀವ್ರವಾದ ಪ್ರತಿಕ್ರಿಯೆ ಬಂತು. ತಮ್ಮ ಕವನವನ್ನು ಖಂಡಿಸಿದ ಹಲವು ಪತ್ರಗಳು
`ಸ್ವದೇಶಾಭಿಮಾನಿ'ಯಲ್ಲಿ ಪ್ರಕಟವಾದೊಡನೆ ಪೈಯವರು ಸುಮ್ಮನೆ ಕುಳಿತುಕೊಳ್ಳಲಿಲ್ಲ.
ತಮ್ಮನ್ನು ಸಮರ್ಥನೆ ಮಾಡಿಕೊಂಡು ಬರೆದರು.`ಸ್ವದೇಶಾಭಿಮಾನಿ'ಯಲ್ಲಿ ಅವರು,
ಕನ್ನಡಕ್ಕೆ ಪ್ರಾಸವೇನೂ ವೇದವಾಕ್ಯವೂ ಅಲ್ಲ, ಶಾಶ್ವತವೂ ಅಲ್ಲ. ಅದನ್ನು ಬೇಕಾದಾಗ
ಬೇಕಾದಂತೆ ಬಿಟ್ಟು ಬಿಡಬಹುದು. ಅತ ಏವ ಕಾಲಕ್ಕೆ ತಕ್ಕಂತೆ ರಚನೆಯನ್ನೇ ಅಲ್ಲ,
ಛಂದಸ್ಸನ್ನೂ ವ್ಯಾಕರಣವನ್ನೂ ಕೂಡ ತನಗೆ ಬೇಕಾದಂತೆ ಮಾರ್ಪಡಿಸಿಯೂ ನೇರ್ಪಡಿಸಿಯೂ
ಕೊಳ್ಳಲಿಕ್ಕೆ ಕವಿಗೆ ಅಧಿಕಾರವಿದೆ. ಬೇಕಾದವರು ಈ ಹೊಸ ಹಾದಿಯನ್ನು ಹಿಡಿಯಲಿ
ಬೇಡದವರು ಹಳೆಯ ಹಾದಿಯಲ್ಲೇ ನಡೆಯಲಿ,. . . ಇಂದು ಒಬ್ಬನೆ ನಡೆವ ಮೇಕೆ
ದಾರಿಯೇ ಮುಂದೆ ತೇರು ಎಳೆವ ಹೆದ್ದಾರಿ” ಎಂದು ಬರೆದರು.
ಪ್ರಾಸ ಪರವಾಗಿ ಪ್ರಕಟವಾದ ಒಂದು ಪತ್ರವನ್ನು ಇಲ್ಲಿ ಗಮನಿಸಬೇಕು.59 ಪ್ರಾಸ
ಮರ್ಯಾದೆಯನ್ನನುಸರಿಸದ ಪದ್ಯಗಳು ಪುನಃ ಕರ್ನಾಟಕದಲ್ಲಿ ಅವತರಿಸಿರುವವೆಂಬ
ವರ್ತಮಾನ ಕೊಟ್ಟುದುದಕ್ಕಾಗಿ ತಮಗೆ ಸಾವಿರ ಸಾವಿರ ನಮಸ್ಕಾರ! ಅಂದೊಮ್ಮೆ ಇದೇ
ರೀತಿಯಲ್ಲಿ ಇದೇ ರೋಗವು ಹಬ್ಬುವುದಕ್ಕಾರಂಭವಾಗಿ `ಸ್ವದೇಶಾಭಿಮಾನಿ'ಯಲ್ಲಿಯೂ
`ಸಾಧ್ವಿ'ಯಲ್ಲಿಯೂ ಬಹುಕಾಲ ತರ್ಕ ವಿತರ್ಕಗಳು ನಡೆದಿದ್ದವು... .. ಎಂದು ಹೇಳುವ
ಮೂಲಕ ವಾಗ್ವಾದ ನಿರಂತರ ನಡೆದುದನ್ನು `ಹಿತೈಷಿ' ಸೂಚಿಸುವರು. ಅವರ ದೃಷ್ಟಿಯಲ್ಲಿ
ಪ್ರಾಸ ತ್ಯಾಗವು ಒಂದು ರೋಗ. ಮುಂದೆ ಅವರು,
ಬರೆದವರೂ ಪ್ರಕಟಿಸಿದವರೂ
ಆರಾದರೇನು. ಈ ಪ್ರಾಸ ತ್ಯಾಗದಿಂದ ಕನ್ನಡನಾಡಿಗಾಗುವ ಪ್ರಯೋಜನವೇನೋ
ತಿಳಿಯಬರುವುದಿಲ್ಲ. ಕರ್ನಾಟಕ ಮಧುಸೂದನದತ್ತರೆಂಬ ಬಿರುದು ಆರಿಗಾದರೂ
ಬೇಕಿದ್ದರೆ, ಅವರು ಅದನ್ನು ಪ್ರಾಸ ತ್ಯಾಗದಿಂದ ಸಂಪಾದಿಸಬೇಕಾಗಿಲ್ಲ; ಸುಲಭ
ಶೈಲಿಯನ್ನುಳ್ಳ, ಪ್ರಾಸಯುಕ್ತ ಪದ್ಯಗಳಿಂದಲೇ ಸಂಪಾದಿಸಬಹುದಾಗಿದೆ”, ಎಂದು ಸಲಹೆ
ನೀಡುವರು. ಇಲ್ಲಿ ಕರ್ನಾಟಕದ ಮಧುಸೂದನದತ್ತರೆಂದು ಗೋವಿಂದ ಪೈಯವರನ್ನು
ಉದ್ದೇಶಿಸಿಯೇ ಹೇಳಿದ್ದು. ಈ ಮೂದಲಿಕೆಗೆ ಅವರು ಎರಡು ಮೂರು ಬಂಗಾಲಿ
ಕವಿತೆಗಳನ್ನು ಅನುವಾದ ಮಾಡಿದ್ದೇ ಕಾರಣ ಎಂದು ಎಸ್. ಅನಂತನಾರಾಯಣ
ಹೇಳುವರು.'60 ``ಇಷ್ಟರ ಮೇಲೆ ಕರ್ನಾಟಕ ಮಧುಸೂದನರ ಇಷ್ಟ. ಉಪ್ಪಿಲ್ಲದ ಸಾರನ್ನೇ
ಬಡಿಸಬೇಕೆಂದಿದ್ದರೆ ಬಡಿಸಲಿ!. .. . ಕರ್ನಾಟಕ ದೇಶದಲ್ಲಿ ಪ್ರಾಸವಿಲ್ಲದ ಪದ್ಯಗಳು
ತ್ರಾಸಿಲ್ಲದೆ ಹಾರಾಡುವುದಾದರೆ- ಕ್ರಾಸು ಹಾಕಿ ಪದ್ಯಗಳನ್ನೇಕೆ ನಿರ್ಮಿಸಬಾರದೆಂದು
ಇದೂ ಒಂದು ಪ್ರಶ್ನೆ'' ಎಂದು ಪ್ರಶ್ನೆ ಎಸೆಯುವ ಈ
ಹಿತೈಷಿ’ಗಳಿಗೆ ಪ್ರಾಸವೆಂದರೆ
ಊಟದಲ್ಲಿ ಉಪ್ಪು ಇದ್ದಹಾಗೆ.
ಪ್ರಾಸ ತ್ಯಾಗ ಮಾಡಿದವರನ್ನು ಪ್ರಾಸ ಸಹಿತ ಪದ್ಯದ ಮೂಲಕವೇ
ಖಂಡಿಸಿದವರಿದ್ದಾರೆ. ಪ್ರಾಸನಿಂದಕಂಗೆ ಕಟುವಾಣಿ' ಎಂಬ ಶೀರ್ಷಿಕೆಯ ಪದ್ಯವನ್ನು
ಬರೆದವರು
ಗಧಾಧರ’ ಎಂಬವರು. ಇದು ಮಧುರವಾಣಿ'ಯ ಫೆಬ್ರವರಿ ೧೯೧೯ರ
ಸಂಚಿಕೆಯಲ್ಲಿ ಪ್ರಕಟವಾಯಿತು.61
''ಪ್ರಾಸನಿಂದಕಂಗೆ ಕಟುವಾಣಿ
ಕಂದ॥ ಕವಿಯಾಗಲಪೇಕ್ಪಿಸಿ ಯಾ|
ಕವಿತಾ ನಿಯಮಾನುರೋಧದಿಂ ನಡೆಯದ ಮಾ॥
ನವನೊಳ್ ಮೇಣ್ ಸಗ್ಗಕ್ಕೆಳ|
ಸುವ ಪಾಪಿಷ್ಠನೊಳದಾವದಿರ್ಕುಂ? ಭೇದಂ॥೧
ಪ್ರಾಸಮನಿಡುವೊಡೆ ನಿನಗಾ|
ಯಾಸಮದಪ್ಪೊಡೆ ಬಿಡುವುದು ಪದ್ಯರಚನೆಯಂ॥
ಸಾಸಮಿದಲ್ಲವೆ? ಲೋಕದೊ|
ಳಾಶಿಸುವುದು ಮದುವೆಯಂ ನಪುಂಸಕನುಂ ಪೇಳ್॥೨
ಚರಿಸಿದ ದಾರಿಯೊಳಂ ತಾ|
ನೆರಚುತೆ ಮಳಮಂ ತಿರುಗುವ ಸಿಂಬಳಬುಳುವೊಲ್॥
ಪೆರರ ಬಗೆಯೊಳಂ ನೀನೀ|
ದುರಭಿಪ್ರಾಯಮನದೇಕೆ ಪುಟ್ಟಿಸುವಯ್? ಪೇಳ್॥೩
ಕವಿ ಷೆಕ್ಸ್ಪಿಯರ್, ಕವಿ ಕೇ|
ಶವ ಸುತ, ಮಧುಸೂದನಾದಿಗಳವೊಲ್ ನೀನೂ॥
ಕವನಂಗೆಯ್, ಬೊಗಳ್ವುದೆ? ಬೊಗ|
ಳುವ ಕರ್ಚ್ಚಲ್ ಶಕ್ತಿಯಿಲ್ಲದಾ ಶ್ವಾನವೊಲ್॥೪
ಏಕಿಂತು
ನಾನೃಷಿಃ ಕುರು|
ತೇ ಕಾವ್ಯಂ’ ನುಡಿ ಜನಿಸಿತು? ಲೋಕದೆ ಮರುಳೇ॥
ಪ್ರಾಕಾರಮನೇರಿದೊಡಂ|
ಕಾಕಂ ಗರುಡಂಗೆ ತೊಣೆಯದಕ್ಕುಮೆ? ಪೇಳಯ್॥೫”
ಬಹುಶಃ ಪ್ರಾಸ ತ್ಯಾಗವನ್ನು ಇದಕ್ಕಿಂತ ಹೀನೋಪಮೆಗಳಿಂದ ಟೀಕಿಸುವುದು
ಸಾಧ್ಯವಿಲ್ಲವೇನೋ? ಕೆಲವರೇನೋ ಸಮಾಧಾನಚಿತ್ತರಾಗಿ ಹೊಸ ಕವಿತೆಯನ್ನು
ಸ್ವಾಗತಿಸಿದರು. ಆದರೂ ಮಲ್ಲಿಕಾರ್ಜುನ ಶಾಸ್ತ್ರಿ ಎಂಬವರು, ಶಬ್ದಮಣಿ ದರ್ಪಣವನ್ನು
ನಿರಾಕರಿಸಿ ಶಾಸನವನ್ನು ಹಾಳು ಮಾಡಿ ಇಂಗ್ರಜಿಯಲ್ಲಿ ಟೆನಿಸನ್ ಎಂಬ ಮಹಾಕವಿಯಂತೆ
ತಾವು ಕನ್ನಡಕ್ಕೆ ಟೆನಿಸನೆಂದು ಬರೆಯಲಾರಂಭಿಸಿದರು',೬೨ ಎಂದು ಟೀಕಿಸಿದ್ದಾರೆ.
ಅಂದಿನ ಪ್ರಮುಖ ಸಾಹಿತ್ಯಪತ್ರಿಕೆಗಳಾದ ಶ್ರೀಕೃಷ್ಣ ಸೂಕ್ತಿ, ವಾಗ್ಭೂಷಣ, ನಂದಿನಿ,
ಬೋಧಿನಿ, ಸುವಾಸಿನೀ, ಮಧುರವಾಣಿ ಮುಂತಾದವು ಪ್ರಾಸ ಸಹಿತ, ಪ್ರಾಸ ರಹಿತ
ಭೇದ ಎಣಿಸದೆ ಎಲ್ಲ ರೀತಿಯ ಪದ್ಯಗಳನ್ನು ಪ್ರಕಟಿಸುತ್ತಿದ್ದುದು ಮಹತ್ವದ ಸಂಗತಿಯೇ.
ಪ್ರಾಸವಿಲ್ಲದೆ ಏಕೆ ಪದ್ಯವನ್ನು ರಚಿಸಬಾರದು ಎಂಬುದಕ್ಕೆ ಹಟ್ಟಿಯಂಗಡಿ
ನಾರಾಯಣರಾಯರು ತಮ್ಮದೇಆದ ಕಾರಣಗಳನ್ನು ನೀಡಿದ್ದಾರೆ.೬೩ ಪ್ರಾಸವಿಲ್ಲದೆ ಪದ್ಯ
ರಚಿಸುವುದೆಂದರೆ ಅವರ ದೃಷ್ಟಿಯಲ್ಲಿ ಹಣೆಗೆ ಬೊಟ್ಟಿಲ್ಲದಂತೆ. ತಮ್ಮ ವಾದಕ್ಕೆ ಅವರು
ಸಂಗೀತದ ತಿಳಿವಳಿಕೆಯನ್ನು ಸಮರ್ಥನೆಗಾಗಿ ಬಳಸಿಕೊಂಡಿದ್ದಾರೆ. ಒಂದು ರಾಗದಲ್ಲಿ ವಾದಿ
ಮತ್ತು ಸಂವಾದಿ ಎಂಬ ಎರಡು ಪ್ರಧಾನ ಸ್ವರಗಳಿರಬೇಕಂತೆ ಎನ್ನುವ ಅವರು ಅವುಗಳನ್ನು
ಪದೇ ಪದೇ ತೋರಿಸಿದರೆ ರಾಗವು ಸ್ಪಷ್ಟವಾಗಿಯೂ ಸುಂದರವಾಗಿಯೂ ಕಾಣುವುದೆಂದು
ಸಂಗೀತಜ್ಞರು ಹೇಳುವರು ಎಂದು ಹೇಳುತ್ತ ಈ ನಿಯಮವನ್ನು ಉಲ್ಲಂಘಿಸಿದರೆ ಸಂಗೀತವೇ
ಅಳಿದು ಹೋಗದು. ಅಷ್ಟೇಕೆ, ಈ ಮರ್ಯಾದೆಗೆ ಉತ್ತರದಲ್ಲಿರುವ ಪ್ರಾಮುಖ್ಯವು
ದಕ್ಪಿಣದಲ್ಲಿಲ್ಲವಂತೆ ಎಂದು ಹೇಳಿದ್ದಾರೆ. ಇದರ ಅರ್ಥ ಪ್ರಾಸದ ನಿಯಮವಿದ್ದರೂ ಅದರ
ಉಲ್ಲಂಘನೆಯಿಂದ ಕವಿತೆಯೇ ಆಗುವುದಿಲ್ಲ ಎನ್ನುವುದು ಸುಳ್ಳು ಎಂಬುದು. ಪ್ರಾಸದ
ಇತಿಹಾಸದ ಕಡೆಗೆ ಗಮನಹರಿಸುವ ಹ.ನಾರಾಯಣರಾಯರು, ``ಕನ್ನಡಕ್ಕೆ
ಸತತಂ
ಪ್ರಾಸಂ’ ಎಂದು ನೃಪತುಂಗನು ಬರೆದಿರುವನು. ಈ ಪದ್ಧತಿ ಎಷ್ಟು ಹಳೆಯದು ಎಂದು
ಹೇಳಕೂಡದು. ಸಾಂಗತ್ಯದಲ್ಲಿ ನಾಗವರ್ಮನು ವರ್ಣಿಸಿದ ಅಕ್ಷರ ಮಾತ್ರಾ ಗಣಗಳ
ಕ್ರಮವನ್ನು ಕಿತ್ತುಹಾಕಿದರೂ ಪ್ರಾಸವನ್ನು ಬಿಡಲಿಲ್ಲ. ಪ್ರಾಸಕ್ಕೆ ಕನ್ನಡಿಗರು ಇಷ್ಟು
ಮರುಳಾದುದಕ್ಕೆ ಕಾರಣವಿಲ್ಲದಿರಬಹುದೆ? ಅನುಭವಕ್ಕೆ ಕಂಡುಬರುವುದೇನು?” ಎಂಬ
ಪ್ರಶ್ನೆಗಳನ್ನು ಮುಂದಕ್ಕೆ ಇಟ್ಟುಕೊಂಡು ಅವರು ಅದಕ್ಕೆ ಮೂರು ಕಾರಣಗಳನ್ನು
ನೀಡುವರು.
೧.ಪ್ರಾಸಕ್ಕಿಂತಲೂ ಅಕ್ಷರ ಗಣಾನುಸರಣವೇ ಕಠಿಣ. ಒಂದು ಷಟ್ಪದಿಯಲ್ಲಿ ಆರು
ಸ್ಥಳಗಳಲ್ಲಿ ಒಂದಕ್ಷರವನ್ನು ಇಟ್ಟರೆ ಸಾಕು. ಒಂದು ಅಕ್ಷರ ಗಣಗಳ ವೃತ್ತದಲ್ಲಿ ಗುರು
ಲಘುಗಳನ್ನು ಎಷ್ಟು ನಿರ್ದಿಷ್ಟ ಸ್ಥಾನದಲ್ಲಿಡಬೇಕು? ಇಷ್ಟು ಪ್ರಯಾಸಪಟ್ಟರೂ ಕನ್ನಡ
ತಾಳಗಳಿಗೆ ಎಷ್ಟು ವೃತ್ತಗಳನ್ನು ಹಾಡಬಹುದು!
೨.ಲೋಕಪ್ರಿಯವಾದ ಕವಿತೆಗಳನ್ನು ತಾಳ ಹಾಕಿ ಹಾಡಲಾಗುವಂತೆ ರಚಿಸುವುದು
ಉಚಿತವಾದುದರಿಂದ, ಅವುಗಳಲ್ಲಿ ವಾದಿ ಸ್ವರದಂತೆ ಕೇಳಿಸುವ ಪ್ರಾಸವನ್ನು
ಕಾಪಾಡುವುದು ಉಪಯುಕ್ತ ಪದ್ಧತಿ.
೩.ಅರ್ಥಕ್ಕೆ ತೇಜವಿಲ್ಲದೆಡೆಗಳಲ್ಲಿ ಆ ಕಂದಕವನ್ನು ಪ್ರಾಸದಿಂದ ಅಡಗಿಸಿದಷ್ಟು
ಸುಲಭವಾಗಿ ಬೇರೆ ಶಬ್ದಾಲಂಕಾರಗಳಿಂದಾಗದು.
ಪ್ರಾಸವನ್ನು ಕನ್ನಡದಲ್ಲಿ ಮಾತ್ರ ಅನುಸರಿಸಲು ಕಾರಣವೇನಿರಬಹುದು? ಎಂಬ
ಬಗ್ಗೆ ಚಿಂತಿಸುವ ಹ.ನಾರಾಯಣರಾಯರು, ಕನ್ನಡದಲ್ಲಿ ಚರಣದ ಎರಡನೆಯ ಅಕ್ಷರವು
ಪ್ರಾಸಕ್ಕೆ ಯುಕ್ತವೆಂದು ಪ್ರಾಚೀನ ಕವಿಗಳು ನಿರ್ಧರಿಸಿದ್ದು ತಪ್ಪೆಂದು ನಾನು ಸರ್ವಥಾ
ಉಸುರಲಾರೆ. ಆದರೆ ಈ ಪ್ರಾಸಕ್ಕೆ ಬದಲಾಗಿ ಅಂತ್ಯಪ್ರಾಸವನ್ನು ಆಚರಿಸಿದರೆ
ಇಂಪಾಗಲಾರದೆಂದೂ ವಾದಿಸಲಾರೆ. ಕೊಡಗರ ಹಾಡುಗಳಲ್ಲಿ ಅಂತ್ಯಪ್ರಾಸವೇ ಪ್ರಧಾನ.
ಪ್ರಾಚೀನ ದ್ರಾವಿಡರ ಪದ್ಧತಿ ಹೀಗಿರಬಹುದಿತ್ತು. ನಾನೊಂದು ಸಾವಿರ ಚರಣಗಳನ್ನು
ರಚಿಸಿರಬಹುದು. ಇದುವರೆಗೆ ಪ್ರಾಸಮುಂಡನಕ್ಕೆ ನನ್ನ ಕಿವಿ ಒಗ್ಗಲಿಲ್ಲ'' ಎಂದು ಹೇಳಿದ್ದಾರೆ.
ಅಂತ್ಯ ಪ್ರಾಸಕ್ಕೆ ಅವರ ಒಲವು ಇದ್ದರೂ ಆದಿಪ್ರಾಸ ಬೇಡವೆಂದು ಅವರು ಹೇಳಲಿಲ್ಲ.
ಸಂಗೀತದ ದೃಷ್ಟಿಯಿಂದ ಈ ವಾಗ್ವಾದದಲ್ಲಿ ಅವರು ಭಾಗಿಯಾದದ್ದು ವಿಶೇಷ.
ಗೋವಿಂದ ಪೈಯವರು ಮಂಗಳೂರು ಕಡೆ ಪ್ರಾಸತ್ಯಾಗ ಮಾಡಿ ಖಂಡನೆಗೆ
ಒಳಗಾದರೆ ಧಾರವಾಡ ಭಾಗದಲ್ಲಿ ೧೯೧೮ಕ್ಕೆ ಮೊದಲು ಕಾವ್ಯಾನಂದ ಪುಣೇಕರರೂ
ಪ್ರಾಸರಹಿತವಾಗಿ ಅನೇಕ ಕವನಗಳನ್ನು ರಚಿಸಿ ಖಂಡನೆಗೆ ಒಳಗಾಗಿದ್ದಾರೆ. ಕಾವ್ಯಾನಂದ
ಪುಣೇಕರರನ್ನು ಖಂಡಿಸಿ ವಲ್ಲಭ ತಟ್ಟಿಯವರು ಬರೆದ ಕವನ `ಪ್ರಭಾತ'ದಲ್ಲಿ
ಪ್ರಕಟವಾಗಿದೆ.64
ಪ್ರಾಸತ್ರಾಸಕೆ ತೊಡಕದೆ
ದೇಶದೊಳೀಗಿರ್ದ ಕನ್ನಡದ ನುಡಿ ಬಿಡದ|
ಮೋಸದಿ ಕದಿಯದೆ ಪರಪದ
ಮೀಸಲ ಕಲ್ಪನೆಯನೀವ ಕಾವ್ಯಾನಂದಂ॥
ಹಾಗೆ ನೋಡಿದರೆ ಇದೇನು ಅಂಥ ಕಟುವಾದ ಖಂಡನೆಯೇನಲ್ಲ.
`ವಾಗ್ಭೂಷಣ'ವು ಪ್ರಾಸ ಸಂಬಂಧ ಚರ್ಚೆಗೆ ಒಂದು ವೇದಿಕೆಯನ್ನೇ ಒದಗಿಸಿಕೊಟ್ಟಿತು.
`ಕರ್ನಾಟಕ ವೈಭವ', `ಶುಭೋದಯ' ಪತ್ರಿಕೆಗಳಲ್ಲೂ ಪ್ರಾಸ ಸಂಬಂಧಿ ಚರ್ಚೆ ನಡೆದಿದೆ.
`ವಾಗ್ಭೂಷಣ'ದ ೧೯೧೮ರ ನವೆಂಬರ್ ತಿಂಗಳ ಸಂಚಿಕೆಯಲ್ಲಿ ನರಸಿಂಹ ಧೋಂಡೋ
ಮುಳಬಾಗಿಲ ಅವರ `ಕನ್ನಡ ಛಂದಸ್ಸಿನ ಕೊಲೆಯು' ಲೇಖನವನ್ನು ಪ್ರಕಟಿಸಿದ
ಸಂಪಾದಕರು, ಆ ಲೇಖನದ ಕೊನೆಯಲ್ಲಿ, `ಈ ವಿಷಯದ ಚರ್ಚೆಯಾಗುವುದು
ಇಷ್ಟವಾಗಿರುವುದರಿಂದ ಈ ವಿಷಯದಲ್ಲಿ ಲೇಖಗಳು ಇನ್ನೂ ಬಂದರೆ ಅವುಗಳನ್ನು
ಮುದ್ರಿಸುವೆವು' ಎಂದು ಪ್ರಕಟಿಸಿರುವುದು ಮಹತ್ವದ್ದಾಗಿದೆ.
`ವಾಗ್ಭೂಷಣ'ದ ಸಂಪಾದಕರಿಗೆ ೧೯-೦೫-೧೮ರಂದು ಪತ್ರವೊಂದನ್ನು ಬರೆದ
`ಕನ್ನಡ ವಾಮನ' ಎಂಬವರು,
ಸಾಂಪ್ರತ ಯುಗದಲ್ಲಿ ಪ್ರಾಸವನ್ನು ತೆಗೆದುಹಾಕಿ
ಸುಲಭವಾದ ವಾಕ್ಯದಲ್ಲಿ ಪದ್ಯಗಳನ್ನು ರಚಿಸಬೇಕೆಂದು ಬಹಳ ಜನರ ತಲೆಯಲ್ಲಿ
ವಿಚಾರಗಳು ತೂಗಾಡಹತ್ತಿವೆ. ಕಾರಣ ಅದೇ ಸರಣಿಯನ್ನು ಜನರಿಗೆ ತೋರಿಸುವುದಕ್ಕಾಗಿ
ಬಂಗಾಲಿ ಭಾಷೆಯಲ್ಲಿ ಜೋಗೀಂದ್ರನಾಥ ಬಸು ಎಂಬವರು ಬರೆದ ಪೃಥ್ವೀರಾಜ'
ಎಂಬ ಮಹಾಕಾವ್ಯದ ಒಂದು ಸರ್ಗವನ್ನು ಭಾಷಾಂತರಿಸಿ ಕಳಿಸಿದ್ದೇನೆ. ಇದಕ್ಕೆ ತಮ್ಮ
ಪತ್ರಿಕೆಯಲ್ಲಿ ಆಶ್ರಯವು ದೊರೆತು ಮುದ್ರಣವಾದದ್ದು ನನ್ನ ಕಣ್ಣಿಗೆ ಬಿದ್ದಕೂಡಲೇ ಇದರ
ಮುಂದಿನ ಸರ್ಗವನ್ನೂ ಬರೆದು ಕಳುಹಬೇಕೆಂದು ಮಾಡಿದ್ದೇನೆ. ಕಾರಣ ಮಹಾಶಯರು
ಇದಕ್ಕೆ ಆಶ್ರಯಕೊಡಬೇಕೆಂದು ಬೇಡಿಕೊಳ್ಳುತ್ತೇನೆ'' ಎಂದು ವಿನಂತಿಸಿದರು. ಅದೇ
ಪ್ರಕಾರ
ಕನ್ನಡ ವಾಮನ’ರು ಉತ್ಪಲ ಚಂಪಕ ವೃತ್ತಗಳಲ್ಲಿ ಪ್ರಾಸರಹಿತವಾಗಿ ಬರೆದು
ಕಳುಹಿಸಿದ ಪೃಥ್ವೀರಾಜನ ಯುದ್ಧದ ಸಿದ್ಧತೆ' ಕಾವ್ಯಭಾಗವನ್ನು ಪ್ರಕಟಿಸಲಾಗಿದೆ. ಆ
ಹದಿನೆಂಟು ಪದ್ಯಗಳಲ್ಲಿಯ ಒಂದು ಪದ್ಯವನ್ನು ಉದಾಹರಣೆಗೆ ಇಲ್ಲಿ ಕೊಡಲಾಗಿದೆ.
ಹೊರಟವು ರಾಜರಪ್ಪಣೆಯ ಪತ್ರಗಳಾಗಲೆ ದೇಶದೇಶಕೆ|
ತಲುಪಿದವಯ್ಯ ಗೌಡ ಕುಲಕರ್ಣಿಗೆ ತಪ್ಪದೆ ಹಳ್ಳಿಪಳ್ಳಿಗೆ॥
ತಳಮಳವಾಯ್ತು ದಿಲ್ಲಿಯಜಮಿರಚಿತೋರದೊಳಿದ್ದ ಮಂದಿಗೆ|
ಹರುಷವದಾಯಿತೈ! ಖಲ! ಕನೋಜದ ರಾಜಗೆ ಜಮ್ಮು ಭೂಪಗೆ॥
ಇಲ್ಲಿ ದ್ವಿತೀಯಾಕ್ಪರ ಪ್ರಾಸವನ್ನು ಅನುಸರಿಸದಿರುವುದು ಕಂಡು ಬರುತ್ತದೆ. ಇಂಥ
ಪದ್ಯಗಳೇ ನರಸಿಂಹ ಧೋಂಡೋ ಮುಳಬಾಗಲ ಅವರಿಗೆ
ಕನ್ನಡ ಛಂದಸ್ಸಿನ ಕೊಲೆಯು’
ಲೇಖನ ಬರೆಯಲು ಪ್ರಚೋದನೆ ನೀಡಿತು.
.... ಕನ್ನಡ ಛಂದಸ್ಸಿನ ಮುಖ್ಯ ನಿಯಮವೇನು? ಈ ಪ್ರಕಾರದ ಕವಿತೆಗಳನ್ನು
ಹಿಂದೆ ಸಾವಿರಾರು ವರ್ಷಗಳೊಳಗೆ ಯಾವನಾದರೂ ರಚಿಸಿರುವನೋ ಹ್ಯಾಗೆ? ಅಥವಾ
ಇಂಥ ಕವಿತೆಗಳನ್ನು ರಚಿಸಲಿಕ್ಕೆ ಈಗಿನ ಕನ್ನಡ ವಿದ್ವಾಂಸರೆಂದೆನಿಸಿಕೊಂಡು ಹೋದವರ
ಸಮ್ಮತಿಯಿರುವುದೋ ಹ್ಯಾಗೆ? ಪ್ರಾಸವಿಲ್ಲದಂಥ ಕವಿತೆಗಳ ಸಮಾವೇಶವು ಕನ್ನಡ
ಗ್ರಂಥಗಳೊಳಗೆ ಆಗಬಹುದೋ ಹ್ಯಾಗೆ? ಪುರಾತನದ ಹಾಗೂ ಈಗಿನ ಕನ್ನಡ
ವಿದ್ವಾಂಸರು, ಪ್ರಾಸವಿಲ್ಲದ ಕವಿತೆಗಳನ್ನು ರಚಿಸಬಾರದೆಂದು ಯಾಕೆ ನಿಯಮಿಸಿದರು?''
ಇತ್ಯಾದಿ ಪ್ರಶ್ನೆಗಳನ್ನು ಎತ್ತುವ ಮುಳಬಾಗಲರು, ಆಂಗ್ಲ ಭಾಷೆಯನ್ನು ಅನುಸರಿಸಿಯೇ
ಪ್ರಾಸರಹಿತವಾಗಿ ಬರೆಯುವ ಆಲೋಚನೆ ಬಂದಿದೆ ಎನ್ನುತ್ತ, ಆಂಗ್ಲ ಭಾಷಾ ಪದ್ಧತಿಯನ್ನು
ಕನ್ನಡ ಭಾಷಾ ಲಕ್ಷಣಗಳಲ್ಲಿ ಸಮಾವೇಶ ಮಾಡಬೇಕೆನ್ನುವುದು ಅಸಮಂಜಸ ಎನ್ನುವರು.
ಸಂಸ್ಕೃತದಲ್ಲಿ ಪ್ರಾಸದ ಬಳಕೆ ಇಲ್ಲ. ಕನ್ನಡ ಕವಿಗಳಿಗೆ ಸಂಸ್ಕೃತದಲ್ಲಿಯೂ ಪಾಂಡಿತ್ಯವಿತ್ತು.
ಕನ್ನಡ ಮತ್ತು ಸಂಸ್ಕೃತ ಭಾಷೆಗಳ ಸಂಬಂಧ ಸಾವಿರ ವರ್ಷಗಳಷ್ಟು ಹಳೆಯದು.
ಹೀಗಿರುವಾಗ ಸಂಸ್ಕೃತದ ಪ್ರಭಾವದಿಂದ ಕನ್ನಡದಲ್ಲೂ ಪ್ರಾಸರಹಿತ ಕಾವ್ಯವನ್ನು
ರಚಿಸಬಹುದಿತ್ತು. ಹಾಗೆ ಮಾಡಲಿಲ್ಲ. ಕನ್ನಡ ಮತ್ತು ಆಂಗ್ಲ ಭಾಷೆ ಸಂಬಂಧ ಕೇವಲ
ಇಪ್ಪತ್ತೈದು ವರ್ಷಗಳ ಈಚಿನದು. ಆಂಗ್ಲ ಭಾಷೆಯ ‘Blank Verse’ ಅಂದರೆ ಪ್ರಾಸವಿಲ್ಲದೆ
ಕವಿತೆಗಳನ್ನು ಕನ್ನಡದಲ್ಲಿ ಸೇರಿಸಬೇಕೆನ್ನುವುದು ಅಸಂಬದ್ಧವಾದದ್ದು ಎಂದು ಹೇಳುವರು.
ವಸ್ತು ಸ್ಥಿತಿಯು ಹೀಗಿರಲು ಪುರಾತನ ವಿದ್ವಾಂಸರ ಮತದ ವಿರುದ್ಧವಾಗಿಯೂ,
ಛಂದಸ್ಶಾಸ್ತ್ರದ ವಿರುದ್ಧವಾಗಿಯೂ, ರೂಢಿಯ ವ್ಯಾಕರಣ ವಿರುದ್ಧವಾಗಿಯೂ, ಭಾಷಾ
ಸಂಪ್ರದಾಯದ ವಿರುದ್ಧವಾಗಿಯೂ, ರಚಿಸಲ್ಪಡುವ ಕವಿತೆಗಳು ಕನ್ನಡ ಭಾಷೆಯ
ಕೊಲೆಯನ್ನು ಮಾಡುವವಲ್ಲದೆ, ಆ ಭಾಷೆಗೆ ಅಲಂಕಾರವಾಗಲಾರವು. ಹಾಗೂ ತನ್ನ
ಭಾಷೆಯ ನಿಜವಾದ ಉನ್ನತಿಯ ಸಲುವಾಗಿ ಪ್ರಯತ್ನಿಸುವ ಪ್ರತಿಯೊಬ್ಬ ಕನ್ನಡಿಗನೂ
ಹಾಗೂ ಮಾಸ ಪತ್ರಿಕೆಗಳೂ ಇಂಥ ಕವಿತೆಗಳಿಗೆ ಆಶ್ರಯ ಕೊಡಬಾರದು” ಎಂದು ಕರೆ
ನೀಡುವರು.
ಈಗಿನ ಹಾಗೂ ಹಿಂದಿನ ಕವಿಗಳ ತುಲನೆ ಮಾಡುವ ಮುಳಬಾಗಲರು ಹಿಂದಿನವರ
ಶಬ್ದ ಸಂಗ್ರಹ, ಭಾಷಾ ಪರಿಚಯ ಅತ್ಯಂತವಾಗಿದ್ದುದರಿಂದ ಈಗಿನ ಅರ್ಧಪಂಡಿತರಂತೆ
ಪ್ರಾಸದ ತ್ರಾಸವು ಅನಿಸುತ್ತಿರಲಿಲ್ಲ ಎನ್ನುತ್ತ, ಅದಕ್ಕೆ ಲಕ್ಷ್ಮೀಶನನ್ನು ಉದಾಹರಿಸಿರುವರು.
ಛಂದಾಸ್ಶಾಸ್ತ್ರಕ್ಕೆ ಅನುಗುಣವಾಗಿ ಪ್ರಾಸಗಳ ಪರ್ವತವನ್ನೇ ಲಕ್ಷ್ಮೀಶನು ರಚಿಸಿದ್ದಾನೆ. ಜೈಮಿನಿ
ಭಾರತದಂಥ ಕಾವ್ಯ ರಚಿಸುವಾಗ ಮೊದಲಿನ ಕವಿಗಳಿಗೆ ಪ್ರಾಸ ಬಿಡುವ ಆಲೋಚನೆ
ಬರಲಿಲ್ಲ. ಆದರೆ ಈಗಿನ ಕವಿಗಳಿಗೆ ಕಾಗೆ ಗುಬ್ಬಿಗಳ ಕಥೆಯನ್ನು ಕವಿತಾ ರೂಪದಲ್ಲಿ
ರಚಿಸುವಾಗ ಪ್ರಾಸ ಬಿಕ್ಕಟ್ಟಾಗುತ್ತಿದೆ ಎಂದು ಲೇವಡಿ ಮಾಡಿರುವರು. ಲಕ್ಪ್ಮೀಶನಿಗೆ, ಮುಂದೆ
ಪ್ರಾಸವು ಸಾಯುವುದೆಂದು ತಿಳಿದಿದ್ದರೆ ಪ್ರಾಸದ ಸಮಾಧಿ' ಎಂಬ ಮತ್ತೊಂದು
ಸಂಧಿಯನ್ನು ತಮ್ಮ ಕಾವ್ಯಕ್ಕೆ ಜೋಡಿಸುತ್ತಿದ್ದರು ಎಂದು ವ್ಯಂಗ್ಯವಾಗಿ ಹೇಳಿರುವರು.
ಶಾಸ್ತ್ರ ಸಮ್ಮತವಾದ ಲಕ್ಷಣಗಳಿಂದ ಯುಕ್ತವಾದ ಕವಿತೆಗಳನ್ನು ರಚಿಸುವ ಯೋಗ್ಯತೆ
ಇದ್ದರೆ ಕವಿತೆಗಳನ್ನು ರಚಿಸಬೇಕು. ತಮ್ಮಲ್ಲಿ ಅಷ್ಟು ಭಾಷಾ ಜ್ಞಾನವೂ, ಶಬ್ದ ಸಂಗ್ರಹವೂ
ಇಲ್ಲದಿದ್ದರೆ ಅದರ ಹವ್ಯಾಸಕ್ಕೆ ಯಾಕೆ ಹೋಗಬೇಕು? ಎಂದು ಮುಳಬಾಗಲ ಪ್ರಶ್ನಿಸುವರು.
ಕವಿತೆಗಳನ್ನು ರಚಿಸಿ ವಿದ್ವಾಂಸರಾಗಬೇಕೆನ್ನುವವರು ಮೊದಲು ಛಂದಸ್ಶಾಸ್ತ್ರವನ್ನೂ, ಹಳಗನ್ನಡ
ಹೊಸಗನ್ನಡ ವ್ಯಾಕರಣವನ್ನೂ ಭಾಷಾ ಲಕ್ಷಣವನ್ನೂ, ಅರಿತುಕೊಂಡು ಶಬ್ದ ಸಂಗ್ರಹವನ್ನು
ಮಾಡಿಕೊಳ್ಳಬೇಕೆಂದು ಅವರು ಉಪದೇಶ ನೀಡಿರುವರು.
ಈ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಕೇಶವಶರ್ಮ ಗಲಗಲಿಯವರು
ಪ್ರಾಸ
ನಿರಾಸ’ ಎಂಬ ಲೇಖನವನ್ನು ಬರೆದಿರುವರು. ಇದು ವಾಗ್ಭೂಷಣ'ದ ೧೯೧೯ ಜನವರಿ
ಮತ್ತು ಫೆಬ್ರವರಿ ಸಂಚಿಕೆಗಳಲ್ಲಿ ಪ್ರಕಟವಾಗಿದೆ. ಗಲಗಲಿಯವರು ಪ್ರಾಸ ಬೇಕು ಬೇಡ
ಎಂಬ ಬಗ್ಗೆ ಪತ್ರಿಕೆಗಳಲ್ಲಿ ನಡೆದಿದ್ದ ವಾಗ್ವಾದವನ್ನು ಗಮನಿಸಿದ್ದಾರೆ. ಪ್ರಾಸ ತಗೆದುಹಾಕಬೇಕು
ಎಂಬ ಬಗ್ಗೆ
ಕರ್ನಾಟಕ ವೈಭವ’ದಲ್ಲಿ ಆರ್.ಜಿ.ಹಬ್ಬು ಲೇಖನ ಬರೆದ ಮೇಲೆ ಧಾರವಾಡ
ಪ್ರಾಂತದಲ್ಲಿ ಮಂದವಾಗಿಯೇ ಏಕಾಗಲೊಲ್ಲದು; ಚಳವಳಿಯು ಎದ್ದಿದೆ ಎನ್ನುವರು. ಕನ್ನಡ
ಕೋಗಿಲೆಯ ಸಂಪಾದಕ ಎಂ. ತಿಮ್ಮಪ್ಪಯ್ಯ, ಕಾವ್ಯಾನಂದ ನರಸಿಂಹಾಚಾರ್ಯರು
ಪ್ರಾಸವನ್ನು ತಗೆದುಹಾಕಬೇಕೆಂಬ ಬಗ್ಗೆ ಅನುಕೂಲಕರ ಮತವನ್ನು ನೀಡಿದ್ದಾರೆ. ಪ್ರಾಸ
ಬಿಡುವುದರ ವಿರುದ್ಧವಿದ್ದ ರಾ.ಮಂಗೇಶರಾಯರಿಗೆ
ವೈಭವ’ ದ್ವಾರಾ ಯಥೋಚಿತ ಉತ್ತರ
ಕೊಟ್ಟಾಗಿದೆ ಎಂದು ಅವರು ಲೇಖನ ಪೀಠಿಕೆಯಲ್ಲಿ ಹೇಳಿದ್ದಾರೆ.
ಸಾವಿರಾರು ವರ್ಷಗಳಿಂದ ಕನ್ನಡ ಕವಿತೆಗಳಲ್ಲಿ ಪ್ರಾಸಗಳನ್ನು ಇಡುತ್ತ ಬಂದಿದ್ದಾರೆ.
ನಾವೂ ಇಡುತ್ತೇವೆಂಬದು ಸಮಂಜಸವಾದ ಉತ್ತರವಲ್ಲ ಎನ್ನುವ ಗಲಗಲಿಯವರು,
ಮಹಾರಾಷ್ಟ್ರ ಭಾಷೆಯಲ್ಲಿ ಅಂತ್ಯ ಯಮಕ ಪ್ರಾಸವಿರುವುದು. ಗುಜರಾಥ ಭಾಷೆಯಲ್ಲಿ
ಉಂಟು, ವಂಗ ಭಾಷೆಯಲ್ಲಿ ಪ್ರಕಾಶಿಸುತ್ತಿರುವುದು. ಅದರಂತೆ ನಮ್ಮ ಕನ್ನಡ ಕವಿತಾ
ಭಾಮಿನಿಗೆ ಅಲಂಕರಣದಂತಿರುವ ಪ್ರಾಸದ ಮೇಲೆ ನಿಮ್ಮ ಕಟಾಕ್ಷವೇಕೆ? ಎಂದು
ಪ್ರತಿಕಕ್ಷಿಗಳು ಕೇಳಬಹುದು. ಅವರಿಗೆ ನಮ್ಮ ಉತ್ತರ, ಆ ಭಾಷೆಗಳಲ್ಲಿ ಅಂತ್ಯ
ಯಮಕವಿದ್ದರೂ ನಮ್ಮ ಕನ್ನಡಕ್ಕಿಂತಲೂ ಶಿಥಿಲವಾಗಿರುವದು. ನಾಲ್ಕು ಚರಣಗಳಲ್ಲಿ
ಎರಡೇ ಚರಣಗಳ ಅಂತ್ಯಾಕ್ಷರವು ಒಂದೇ ಆಗಿರುವುದು ಎಂದು ಅವರು ಹೇಳುವರು.
ನಮ್ಮ ಪ್ರಾಚೀನ ಕನ್ನಡ ಕವಿಗಳು ವಿದ್ವಾಂಸರೇ ಇದ್ದರು. ಲಕ್ಷ್ಮೀಶ, ಆದಿಕವಿ ಪಂಪ,
ರುದ್ರಭಟ್ಟ, ಕೇಶಿರಾಜರೂ ಪ್ರಾಸದ ಸಲುವಾಗಿ ತ್ರಾಸಬಟ್ಟದ್ದನ್ನು ಎಷ್ಟು ತೋರಿಸುವಾ?
ಎಂದು ಅವರು ಪ್ರಶ್ನಿಸುವರು. ಒಂದು ಸಣ್ಣ ಅನುಷ್ಟುಪ್ ಛಂದಸ್ಸಿನ ಸಂಸ್ಕೃತ ಶ್ಲೋಕವನ್ನು
ಪ್ರಾಸದ ಸಲುವಾಗಿ ಮಳವುದ್ದ ಷಟ್ಪದಿಯನ್ನಾಗಿ ಲಂಬಿಸಬೇಕಾಯಿತು ಎಂದು ಅವರು
ಹೇಳುತ್ತಾರೆ. ಪ್ರಾಸಕ್ಕಾಗಿ ರಸಭಂಗಮಾಡಿ ನಿರರ್ಥಕ ಶಬ್ದಗಳನ್ನು ಪ್ರಯೋಗಿಸಿರುವ
ಸಾವಿರಾರು ಕವಿತೆಗಳನ್ನು ಪ್ರಾಚೀನ ಕವಿಗಳ ಗ್ರಂಥಗಳಲ್ಲೇ ನಾವು ತೋರಿಸುವೆವು ಎಂದು
ಸವಾಲು ಹಾಕುವ ಅವರು, ಸುಮ್ಮಸುಮ್ಮನೆ ಈಗಿನ ಕವಿಗಳು ದಡ್ಡರು, ಆದ್ದರಿಂದ ಅವರಿಗೆ
ಪ್ರಾಸ ತ್ರಾಸವೆಂದು ಆಧುನಿಕ ಕವಿಗಳ ಹೆಸರಿನಿಂದ ಕಲ್ಲು ಒಡೆಯುವುದರಲ್ಲಿ ಅರ್ಥವಿಲ್ಲ
ಎಂದೂ ಹೇಳುವರು.
ಅಲಂಕಾರ, ವ್ಯಾಕರಣ ಶಾಸ್ತ್ರಗಳೆಲ್ಲ ಭಾಷೆಯ ಶುದ್ಧತೆಗಾಗಿ ಎನ್ನುವ ಅವರು,
ಪ್ರಾಸವನ್ನು ಐಚ್ಛಿಕವಾಗಿ ಮಾಡಬೇಕೆಂಬುದು ನಮ್ಮ ಆಶಯ. ಕವಿಯ ಇಚ್ಛೆ ಇದ್ದರೆ
ಅಶ್ವಧಾಟಿಯಂತೆ ಹೆಜ್ಜೆಜ್ಜೆಗೆ ಪ್ರಾಸವನ್ನು ಇಡಲಿ. ನಮ್ಮ ಅಡ್ಡಿಯಿಲ್ಲ. ದ್ವಿತೀಯಾಕ್ಷರವು
ಯಮಕಿತವಾಗಿಯೇ ಇರಬೇಕೆಂಬ ನಿರ್ಬಂಧ ಬೇಡ. ಪ್ರಾಸವೈಕಲ್ಪ್ಯದಿಂದ ಅದರ ಅನನ್ಯ
ಭಕ್ತರಿಗೆ ದುಃಖವಾಗುತ್ತಿದ್ದರೆ (ಭವಿಷ್ಯ ಅನಭಿಜ್ಞನಾದ ಆ ವರಾಕ- ಲಕ್ಪ್ಮೀಶನು ಮರೆತು
ಬಿಟ್ಟನು) ಅದರ ಉಪಾಸಕರು ಪ್ರಾಸ ಸಮಾಧಿಯೆಂಬ ಸಂಧಿಯನ್ನು ರಚಿಸಿ ೩೫ನೆ
ಸಂಧಿಯಾಗಿ ಮಾಡಿ ಕುಶಲವಾಗಿ ಅದರ ಸ್ಮಾರಕವನ್ನು ಮಾಡಲಿ. ಕನ್ನಡ ಕವಿತಾ ಶರೀರದಲ್ಲಿ
ಹುಣ್ಣಿನಂತಿರುವ ಈ ಅವಯವವನ್ನು ಕೊಯ್ದು ಬಿಡಬೇಕೆಂದು ಅದರ ಹಿತಚಿಕಿತ್ಸಕರು
ಇಚ್ಚಿಸಿದರೆ, ಅಯ್ಯೋ ಇವರು ಕನ್ನಡ ಛಂದಸ್ಸಿನ ಕೊಲೆ ಮಾಡುತ್ತಾರೆ. ಕನ್ನಡ ಕವಿತ್ವದ
ಕುತ್ತಿಗೆ ಕೊಯ್ಯುತ್ತಾರೆ' ಎಂದು ಸುಳ್ಳುಸುಳ್ಳೇ ಚೀರ್ಯಾಟವೆಬ್ಬಿಸಿ
ನರಸಿಂಹ’ರು ಗರ್ಜನೆ
ಮಾಡಿದರೆ ಅವರ ಬೆದರಿಕೆಗೆ ಸೊಪ್ಪುಹಾಕುವ ಅಳ್ಳೆದೆಯವರಾದ ಕನ್ನಡ ಕವಿಗಳು ಇನ್ನೂ
ನಮ್ಮ ಕನ್ನಡ ಪ್ರಾಂತದಲ್ಲಿ ಇಲ್ಲದಿರುವದು ನಮ್ಮ ಸೌಭಾಗ್ಯವೇ ಸರಿ ಎಂದು ಗಲಗಲಿ
ಹೇಳುವರು.
ವಾಗ್ವಾದವನ್ನು ಮಂದುವರಿಸುವ ಇಚ್ಛೆ ಹೊಂದಿದ ಅವರು, `ವಾದ ರಣರಂಗದಲ್ಲಿ
ನಿಂತ ಮೇಲೆ ಪ್ರತಿಕಕ್ಷಿಯ ಪ್ರತಿಯೊಂದು ಕೃತಿಯನ್ನು ಸ್ವಯಮೇವ ನಿರಾಕರಿಸಬೇಕು.
ಇಂಥ ಕವಿತೆಗಳಿಗೆ ಆಶ್ರಯಕೊಡಬಾರದು. ಇವುಗಳನ್ನು ಓದಬಾರದು’ ಮೊದಲಾದವು
ವಾದಿಗಳ ಉತ್ತರಾತ್ಮಕ ಮಾತುಗಳಲ್ಲ. ಖಂಡನ ಚಾತುರ್ಯವೂ ಅವುಗಳಲ್ಲಿ ಕಂಡು
ಬರುವುದಿಲ್ಲ. ಪ್ರಾಸ ಪಕ್ಷಪಾತಿಗಳು ಅದನ್ನು ಅನೇಕ ರೀತಿಯಿಂದ ಮಂಡಿಸಲಿ. ಅವುಗಳಿಗೆ
ಸಂಪಾದಕರೂ ಆಶ್ರಯವನ್ನು ಕೊಡಲಿ. ಅವುಗಳಿಗೆಲ್ಲ ಉತ್ತರಕೊಡುವ ಕುತೂಹಲವೂ
ನಮಗುಂಟು” ಎಂದು ಚರ್ಚೆಗೆ ಆಹ್ವಾನ ನೀಡಿಯೇ ಮುಗಿಸುವರು.
ವಾಗ್ಭೂಷಣ'ದ ಮುಂದಿನ ಸಂಚಿಕೆಯಲ್ಲೂ ಕೇಶವ ಶರ್ಮಾ ಗಲಗಲಿಯವರ
ಅಭಿಪ್ರಾಯವನ್ನೇ ಮತ್ತೆ ಪ್ರಕಟಿಸಲಾಗಿದೆ. ಈ ಬಾರಿ ಅವರು ೧೯೧೮ ಡಿಸೆಂಬರ್ ೧೩ನೆ
ತಾರೀಖಿನ
ಶುಭೋದಯ’ ಪತ್ರಿಕೆಯಲ್ಲಿ ಪ್ರಾಸ ವಿಷಯವಾಗಿ ಪ್ರಕಟವಾದ ಎರಡು
ವಿಚಾರ ಪೂರಿತ ಲೇಖನಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಬರೆದಿರುವರು. ಒಂದು
ಲೇಖವು ಪ್ರಾಸನಿರಸನಪರವಾಗಿದ್ದು, ಮತ್ತೊಂದು ಅದರ ಉತ್ತರಾತ್ಮಕವಾಗಿ ಪ್ರಾಸ
ಮಂಡನಪರವಾಗಿದೆ. ಪ್ರಾಸ ಮಂಡನ ಪರವಾಗಿ ಅದರಲ್ಲಿ ಶುಭೋದಯ'ದ
ಸಂಪಾದಕರಾದ ಕೆರೂರು ವಾಸುದೇವಾಚಾರ್ಯರು ತಮ್ಮ ಅಭಿಪ್ರಾಯ ಮಂಡಿಸಿದ್ದರು.
ಪ್ರಾಸದ ಆಶ್ರಯ ಮಾಡಿದಾಗ್ಗೆ ಯತಿಭಂಗ ಉಂಟಾದರೆ ಅಡ್ಡಿಯಿಲ್ಲವೆಂದು
ಶಾಸ್ತ್ರಕಾರರು ಹೇಳಿರುವರು. ಅಂದಬಳಿಕ ಯತಿ ಭಂಗ ವಿಚಾರ ಮಾಡುವ ಕಾರಣವೇ
ಇಲ್ಲವೆಂದು ಶುಭೋದಯದಲ್ಲಿ ಬರೆದುದಕ್ಕೆ ಪ್ರತಿಕ್ರಿಯಿಸುವ ಗಲಗಲಿ ಅವರು,
ಯತಿಭಂಗದಿಂದ ಉಂಟಾಗುವ ಅನರ್ಥ ಪರಂಪರೆಯನ್ನು ವಾಸುದೇವಾಚಾರ್ಯರು
ವಿಚಾರಿಸಿರುವರೋ? ಎಂದು ಪ್ರಶ್ನಿಸುತ,
ಪೃಥ್ವೀಶಕೋ-ಟೀರವ್ಯಾಪ್ತಿಗೆ ಸಂದಚಕ್ರ
ರವಿದೈತ್ಯಧ್ವಾಂತಮಂಗೆಲ್ದ ಭೂಭಾರಚ್ಛೇದ ವಿನೋದಿ ಕೃಷ್ಣ ನಮಗೀಗಾನಂದ
ಸಂದೋಹಮಂ’ ಈ ರುದ್ರಭಟ್ಟನ ಕವಿತೆಯಲ್ಲಿ ಪ್ರಾಸಪರಾಧೀನನಾದ ಕವಿಗೆ ಕೋ
ಒತ್ತಟ್ಟಿಗೆ ಟೀರ ಒತ್ತಟ್ಟಿಗೆ ಮಾಡಬೇಕಾಯಿತು. ಕೋ ಟೀರ' ಶಬ್ದವು ಒತ್ತಟ್ಟಿಗೆ ಇದ್ದರೆ
ಎಷ್ಟು ಸ್ವಾರಸ್ಯವು ಬರುತ್ತಿತ್ತು! ಪರಂಪರಾಭಿಮಾನವನ್ನು ಸ್ವಲ್ಪ ಬದಿಗಿಟ್ಟು ವಿಚಾರಿಸಬೇಕು'' ಎಂದು ಸಲಹೆ ನೀಡಿರುವರು.
ಪ್ರಾಚೀನ ಕವಿಗಳು ಮುಖ್ಯಪ್ರಾಸದ ಗುದ್ದಿಯನ್ನು ಕಟ್ಟಿಕೊಂಡಿದ್ದರಿಂದಲೇ
ಕನ್ನಡದಲ್ಲಿ ಸಂಸ್ಕೃತದ ಮನೋರಮವಾದ ಉಪಜಾತಿ, ಮಂಜುಭಾಷಿಣಿ, ದ್ರುತ ವಿಲಂಬಿತ
ಮೊದಲಾದ ಲಘು ವೃತ್ತಗಳು ವಿಪುಲವಾಗಿ ಪ್ರಚಾರದಲ್ಲಿ ಬರಲಿಲ್ಲ. ಕನ್ನಡ ಕವಿತಾ
ಭಾಮಿನಿಯ ಸಲುವಾಗಿ ಷಟ್ಪದಿ ಮೊದಲಾದ ಆರಾರು ಚರಣಗಳುಳ್ಳ ದೀರ್ಘ ವೃತ್ತಗಳನ್ನು
ಸ್ಪೆಶಲ್’ ಮಂಜೂರ ಮಾಡಬೇಕಾಯಿತು ಎಂದು ಹೇಳುವ ಗಲಗಲಿ, ಕರ್ನಾಟಕ ಕವಿತಾ
ಸುಂದರಿಯ ಸಲುವಾಗಿ ವಾಙ್ಮಯ ಸಭೆಯಲ್ಲಿ ಚಂಪಕಮಾಲೆ, ಉತ್ಪಲಮಾಲೆ,
ಮತ್ತೇಭವಿಕ್ರೀಡಿತ ಮೊದಲಾದ ರಿಜರ್ವ್ ಖುರ್ಚಿಗಳು' ಸನ್ನದ್ಧವಾಗಿ ಇಡಲ್ಪಟ್ಟವು.
ಪ್ರಾಸಪರವಶರಾದ ಕವಿಗಳು ಸಲೆ ವಲಂ ಮೊದಲಾದ ನಿರರ್ಥಕ ಪದಗಳನ್ನು
ಉಪಯೋಗಿಸಬೇಕಾಯಿತು ಎಂದು ಹೇಳುವರು. ಗುಣ ದೋಷ ವಿಚಾರ ಮಾಡಿದರೆ
ಪ್ರಾಸಭಂಗದಿಂದ ಯಾವ ಹಾನಿಯೂ ಉಂಟಾಗುವುದಿಲ್ಲ. ಯತಿಭಂಗದಿಂದ ಮಾತ್ರ
ಕವಿತಾ ಅನ್ನುವಾಗ ತೊಂದರೆ, ಕ್ಲಿಷ್ಟೋಚಾರ, ಸ್ವಾರಸ್ಯಲೋಪ ಉಂಟಾಗುತ್ತಿರಲು ಯತಿ
ಭಂಗ ವಿಚಾರವನ್ನು ಕಟ್ಟಿಕೊಳ್ಳುವುದರಲ್ಲಿ ಅರ್ಥವಿಲ್ಲವೆಂದು ಹೇಳುವುದು ಹೇಗೆ? ಎಂದು
ಅವರು ಪ್ರಶ್ನಿಸುವರು. ಪಂಪನು ಪ್ರಾಸತ್ರಾಸಕ್ಕೊಳಗಾಗಿ ಛಂದಸ್ಸಿನ ನಿಯಮವನ್ನು
ಭಂಗಮಾಡಿದ್ದಾನೆ. ಮುಳಬಾಗಲರ ಭಾಷೆಯಿಂದ ಹೇಳಬೇಕಾದರೆ ಕನ್ನಡ ಛಂದಸ್ಸಿನ
ಕೊಲೆ ಮಾಡಿದ್ದಾನೆ ಎಂದು ಹೇಳಬೇಕಾಗಿದೆ ಎಂದು ಅವರು ಹೇಳುತ್ತಾರೆ. ಕವಿತಾ
ಸುಂದರಿಯ ಪಾದಗಳಲ್ಲಿರುವ ಮುಖ್ಯಪ್ರಾಸವೆಂಬ ಶೃಂಖಲೆಯನ್ನು ಕಡಿದು ಒಗೆದು
ಆಕೆಯನ್ನು ಬಂಧಮುಕ್ತಳನ್ನಾಗಿ ಮಾಡಿರಿ. ಸ್ವಚ್ಛಂದವಾಗಿ ಆಕೆಯು ನಮ್ಮ ಕರ್ನಾಟಕ
ವಾಙ್ಮಯೋಪವನದಲ್ಲಿ ವಿಹರಿಸಲಿ ಎಂದು ಅವರು ಹಾರೈಸುತ್ತಾರೆ.
ಇದುವರೆಗಿನ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮಹಾದೇವ ಪ್ರಭಾಕರ
ಪೂಜಾರ ಅವರು,
ಪ್ರಾಸ ವಿಚಾರವು’ ಎಂಬ ಸುದೀರ್ಘವಾದ ಲೇಖನವೊಂದನ್ನು
`ವಾಗ್ಭೂಷಣ’ದಲ್ಲಿ ಪ್ರಕಟಿಸುವರು.೬೫ ೞಪ್ರಾಸವೆಂದರೇನು? ಎಂಬ ಪ್ರಶ್ನೆಯನ್ನು
ಹಾಕಿಕೊಂಡು ನೃಪತುಂಗನು ಪ್ರಾಸಕ್ಕೆ ನೀಡಿದ ವ್ಯಾಖ್ಯೆಯನ್ನು ಉಲ್ಲೇಖಿಸುವರು. ಪ್ರಾಸದ
ಮುಖ್ಯಭೇದಗಳು, ಉಪಭೇದಗಳನ್ನು ಅವರು ವಿವರಿಸುವರು. ನೃಪತುಂಗನು ಪ್ರಾಸವನ್ನು
ಶಬ್ದಾಲಂಕಾರಗಳಲ್ಲಿ ಸೇರಿಸಿರುವನು. ಆದರೆ ಅದು ಶಬ್ದಾಲಂಕಾರಗಳಲ್ಲಿ ಸೇರುವುದೋ
ಇಲ್ಲವೋ ಹೇಗೇ ಇರಲಿ, ಅದು ಕನ್ನಡ ಕವಿತೆಯ ಮುಖ್ಯ ಲಕ್ಷಣಗಳಲ್ಲೊಂದಾಗಿರುವದು.
ಮತ್ತು ಪ್ರಾಸವು ತಪ್ಪಿದರೆ ನಾಗವರ್ಮನು ಹೇಳುವಂತೆ ಕಾವ್ಯವು
ಶೋಭಿಸಲಾರದೆಂಬುದಿಷ್ಟೇ ಅಲ್ಲ, ಅದು ಛಂದೋಬದ್ಧ ಕಾವ್ಯವೆಂದೆನಿಸಲಾರದು; ಅಂದರೆ
ಪ್ರಾಸವು ಕನ್ನಡದಲ್ಲಿ ಶಬ್ದಾಲಂಕಾರ ಮಾತ್ರವಲ್ಲ, ಛಂದೋಲಕ್ಷಣದಷ್ಟು ಮಹತ್ವವು ಅದಕ್ಕೆ
ಇರುವದು. ಕನ್ನಡದ ಕವಿಗಳು ಬಹು ಪೂರ್ವಕಾಲದಿಂದ ಪ್ರಾಸವನ್ನು ಪಾಲಿಸುತ್ತ
ಬಂದಿರುವರು ಎಂದು ಪೂಜಾರ ಸಮಾಲೋಚಿಸುವರು. ಕನ್ನಡಕ್ಕೆ ಬಹು ಪರಿಯಿಂದ
ಮಾದರಿಯಾಗಿರುವ ಸಂಸ್ಕೃತದಲ್ಲಿ ಪ್ರಾಸವೆಂಬುದು ಇಲ್ಲ. ಅನುಪ್ರಾಸವೆಂಬುದು ಅಲ್ಲಿ
ಉಂಟು. ಅನುಪ್ರಾಸಕ್ಕೂ ಕನ್ನಡದ ಪ್ರಾಸಕ್ಕೂ ಲಕ್ಷಣ ಸಾಮ್ಯವಿಲ್ಲ ಎಂಬ ಅಂಶವನ್ನು
ಅವರು ಗಮನಿಸುವರು. ಪ್ರಾಸದ ನಿಯಮವು ಕನ್ನಡ ಕವಿಗಳ ಪಾಲಿಗೆ ಹೇಗೆ ಬಂದಿತು?
ಒಬ್ಬನೂ ಇದನ್ನು ಉಲ್ಲಂಘಿಸದೆ ತಪ್ಪದೆ ಪಾಲಿಸುವ ಪ್ರಯತ್ನವನ್ನು ಮಾಡುವಷ್ಟು ಮೋಹವು
ಹೇಗೆ ಉಂಟಾಯಿತು? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅದಕ್ಕೆ ಅವರು ನೃಪತುಂಗನಲ್ಲೇ
ಉತ್ತರ ಹುಡುಕಿರುವರು.
ದೋಸಮನೆ ಗುಣದವೋಲು
———ಯತಿಯಂ ಮಿಕ್ಕರ್॥
ದೋಷ(ವೆನಿಸಿದ ಯತಿ ಭಂಗ)ವನ್ನೇ ಕನ್ನಡದಲ್ಲಿ ಗುಣದಂತೆ ತೋರ್ಪಡಿಸಿ
ಖಂಡಪ್ರಾಸ (ಪ್ರಾಸ?)ವನ್ನು ಮುಖ್ಯವಾಗಿ ಇಟ್ಟುಕೊಂಡು ಯತಿಯನ್ನು ಮಿಕ್ಕರು.
ಅಂದರೆ ಯತಿ ಭಂಗವನ್ನು ಮಾಡಿದುದಕ್ಕಾಗಿ ಪ್ರಾಸವನ್ನು ಪಾಲಿಸುವರೆಂದು
ಹೇಳಿದಂತಾಗಿದೆ. ಯತಿಯನ್ನು ಬಿಟ್ಟಿದ್ದರಿಂದ ಕವಿತೆಗೆ ಬಂದ ಕುಂದನ್ನು ಪ್ರಾಸದಿಂದ
ನೀಗಲಾಡಿಸಿದಂತಾಯಿತೆಂದು ಭಾವಿಸಿದರೆಂದು ತೋರುತ್ತದೆ. ಇಲ್ಲವೆ ಪ್ರಾಸಕ್ಕಾಗಿ
ಯತಿಯನ್ನು ಮಿಕ್ಕರೋ? ಎಂದು ಪೂಜಾರ ಅರ್ಥೈಸಿದ್ದಾರೆ. ಭಾಗವತರಾಟದಲ್ಲಿ
ಗೋಪಾಲಕರೂ ತೊತ್ತುಗಳೂ ಹಾಡುವ ಪದ್ಯಗಳಲ್ಲಿ ಅನುಪ್ರಾಸದ ಮೋಹ ಇರುವುದನ್ನು
ಅವರು ಗುರುತಿಸುವರು. ಮೊದಲಿಗೆ ಇದು ಕೌತುಕ ಎನಿಸಿದರೂ ಕ್ರಮೇಣ ಅದು ನೀರಸ
ಎನಿಸುವುದು ಎಂಬ ಮಹತ್ವದ ಅಂಶವನ್ನು ಅವರು ಹೇಳಿದ್ದಾರೆ.
ಕಾವ್ಯಮಾರ್ಗದಲ್ಲಿ ಪ್ರಾಸದ ಸ್ಥಾನವೇನು? ಎಂಬ ಪ್ರಶ್ನೆಗೆ ಪೂಜಾರ ಅವರು
ಕೊನೆಯ ಸ್ಥಾನ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಇಲ್ಲದೆ ಇಲ್ಲ. ಅಲಂಕಾರಗಳು
ಶರೀರಕ್ಕೆ ಶೋಭೆಯನ್ನುಂಟುಮಾಡುವಂತೆ ಕಾವ್ಯಕ್ಕೆ ಶೋಭೆಯನ್ನುಂಟುಮಾಡುವವೇ
ಹೊರತು ಕಾವ್ಯತ್ವವನ್ನುಂಟುಮಾಡಲಾರವು. ಅಲಂಕಾರಗಳಲ್ಲಿಯೂ ಶಬ್ದಾಲಂಕಾರಗಳು,
ಅರ್ಥಾಲಂಕಾರಗಳಿಗಿಂತ ಕಡಿಮೆ ತರದವು. ಕನ್ನಡದ ಪ್ರಾಸವು ಅನುಪ್ರಾಸದ
ಆಭಾಸರೂಪವಾಗಿರುವದೆಂದು ಇಟ್ಟುಕೊಂಡರೂ ಕಾವ್ಯಮಾರ್ಗದಲ್ಲಿ ಅದಕ್ಕೆ
ಮಹತ್ವವೇನೂ ಇಲ್ಲ ಎಂಬುದು ಅವರ ತೀರ್ಮಾನ.
ಕಾವ್ಯದೃಷ್ಟಿಯಿಂದ ಛಂದೋಬದ್ಧತೆಗೆ ಅಷ್ಟೊಂದು ಪ್ರಾಮುಖ್ಯವಿಲ್ಲ.
ಛಂದಸ್ಸಂಬಂಧವಿಲ್ಲದ ಗದ್ಯಭಾಗವೂ ಕಾವ್ಯವೇ. ಕವಿಯ ಮುಖದಿಂದ ಹೊರಟ
ರಸಲಹರಿಯು ಇಲ್ಲವೆ ಭಾವಲಹರಿಯು ಕಾವ್ಯವು. ಅದಕ್ಕೆ ಛಂದಸ್ಸಂಬಂಧ
ಕೃತ್ರಿಮವಾದುದು; ಸಹಜವಾದುದಲ್ಲ. ಕವಿಯ ಹೃದಯಾಬ್ಧಿಯಲ್ಲೆದ್ದ ರಸ ಲಹರಿಗಳು
ಸ್ವಾಭಾವಿಕವಾಗಿ ಹೊರಬೀಳುವುದು ಆತನಾಡುವ ವಾಕ್ಯಗಳ ರೂಪದಿಂದಲೇ. ಅವು
ಅಕ್ಷರಗಳ ಇಲ್ಲವೆ ಮಾತ್ರೆಗಳ ಲೆಕ್ಕ ನೋಡಲಾರವು ಎಂಬ ಮಾತನ್ನು ಪೂಜಾರ
ಹೇಳುವರು. ಇದೇ ಮುಂದೆ ವಿ.ಕೃ.ಗೋಕಾಕರು ಛಂದಸ್ಸನ್ನು ತೊರೆದು ಕಾವ್ಯ
ಬರೆಯುವುದಕ್ಕೆ ಸ್ಫೂರ್ತಿ ನೀಡಿರಬಹುದು. ಪ್ರಾಸ ನಿರ್ಬಂಧದಿಂದ ಕಾವ್ಯದಲ್ಲಿ
ನಿರರ್ಥಕತ್ವ, ಅಧಿಕಪದತ್ವ ಎಂಬ ದೋಷಗಳು ಉಂಟಾಗುವವು ಎಂದು ಪೂಜಾರ
ಉದಾಹರಣೆ ನೀಡಿರುವರು.
ಭವಿಷ್ಯದಲ್ಲಿ ರಸಪ್ರಧಾನವಾದ ಕಾವ್ಯವನ್ನು ಮಾಡುವ ಕವಿಗಳು ತಮಗೆ ಪ್ರಾಸದ
ತೊಂದರೆಯಾದರೆ ಅದನ್ನು ಮೀರಬಹುದು. ಪ್ರಾಸೋಪಪ್ರಾಸಾದಿ ಭೇದಗಳು ಲಕ್ಷಣ
ಶಾಸ್ತ್ರದಲ್ಲಿ ಸೇರಿದುದು ಹೇಗೆ? ಕವಿಗಳು ಅಂತು ಬೇರೆಬೇರೆ ಪ್ರಾಸಗಳುಳ್ಳ ಕಾವ್ಯಗಳನ್ನು
ರಚಿಸಿದುದರಿಂದೇ ಅಲ್ಲವೆ? ಲಕ್ಷಣ ಶಾಸ್ತ್ರವು ಭಾಷೆಯನ್ನು ಅನುಸರಿಸುವುದೇ ಹೊರತು
ಭಾಷೆಯು ಲಕ್ಷಣ ಶಾಸ್ತ್ರವನ್ನು ಅನುಸರಿಸಲಾರದು ಎಂಬ ಅವರ ಮಾತು ಮಹತ್ವದ್ದು.
ಪ್ರಾಸಾತಿಕ್ರಮಣದಿಂದ ಕನ್ನಡ ಭಾಷೆಯ ಕನ್ನಡತನಕ್ಕೂ ಕನ್ನಡಿಗರ ಕನ್ನಡತನಕ್ಕೂ ಕೇಡು
ಒದಗೀತೆಂದು ತಾವು ಭಾವಿಸುವುದಿಲ್ಲ ಎಂದು ಪೂಜಾರರು ಮುಗಿಸಿರುವರು.
ಈ ಲೇಖಕರ ಅಭಿಪ್ರಾಯದಲ್ಲಿ ತಮ್ಮ ಅಭಿಪ್ರಾಯದ ಬಹ್ವಂಶ
ಬಂದಿರುವುದರಿಂದಲೂ, ಈ ಬಗ್ಗೆ ಸಾಕಷ್ಟು ಚರ್ಚೆ ಆಗಿರುವುದರಿಂದಲೂ ಈ ಕುರಿತು
ಮತ್ತೆ ಲೇಖನಗಳನ್ನು ಪ್ರಕಟಿಸುವ ಅವಶ್ಯಕತೆ ತೋರುವುದಿಲ್ಲವೆಂದು ಸಂಪಾದಕರು
ವಾಗ್ವಾದಕ್ಕೆ ತಮ್ಮ ಪತ್ರಿಕೆಯಲ್ಲಿ ಕೊನೆ ಹೇಳುವರು.
ಇಪ್ಪತ್ತನೆ ಶತಮಾನದ ಆರಂಭದ ಎರಡು ದಶಕಗಳಲ್ಲಿ ಕನ್ನಡ ಕಾವ್ಯದ ಅವಿಭಾಜ್ಯ
ಅಂಗವಾದ ಪ್ರಾಸ ತ್ಯಾಗದ ಬಗ್ಗೆ ಪಾಂಡಿತ್ಯಪೂರ್ಣವಾದ ಚರ್ಚೆ ನಡೆಯಿತು. ಎರಡನೆಯ
ದಶಕದ ಕೊನೆಯಲ್ಲಿ ಒಂದು ಅಂತಿಮ ನಿರ್ಣಯಕ್ಕೆ ಬಂದಹಾಗೆ ಆಗಿತ್ತು. ಪ್ರಾಸವನ್ನು
ಬೇಕಾದವರು ಬಳಸಬಹುದು, ಬೇಡದವರು ಬಿಡಬಹುದು ಎಂಬುದು ಸಾಮಾನ್ಯವಾಗಿ
ಒಪ್ಪಿತ ಅಂಶವಾಗಿತ್ತು. ನವೋದಯ ಕಾವ್ಯದ ಮಹಾನ್ ಕವಿಗಳ ಕಾವ್ಯ ಇನ್ನೂ ಬರುವ
ಪೂರ್ವದಲ್ಲಿಯೇ ಅವರಿಗೊಂದು ಮಾರ್ಗ ಸಿದ್ಧಗೊಂಡಿತ್ತು. ಬಿ.ಎಂ.ಶ್ರೀ., ಬೇಂದ್ರೆ,
ಕುವೆಂಪು, ಪುತಿನ, ವಿ.ಸೀ. ಮೊದಲಾದವರೆಲ್ಲ ಪ್ರಾಸಮುಕ್ತವಾಗಿಯೇ ತಮ್ಮ ಕವಿತೆಗಳನ್ನು ರಚಿಸಿದ್ದಾರೆ.
ಪ್ರಾಸದ ಬಗ್ಗೆ ವಿವರವಾದ ಮಾಹಿತಿ ನಮಗೆ ದೊರೆಯುವುದು ಕನ್ನಡದ ಉಪಲಬ್ಧ್ದ
ಆದಿಗ್ರಂಥ ಕವಿರಾಜ ಮಾರ್ಗದಲ್ಲಿಯೇ. ಅಂದರೆ ಅದಕ್ಕೂ ಪೂರ್ವದಲ್ಲಿಯೇ ಪ್ರಾಸದ
ಬಳಕೆ ಕನ್ನಡ ಕಾವ್ಯದಲ್ಲಿ ರೂಢವಾಗಿತ್ತು. ಪ್ರಾಸದ ಪ್ರಾಚೀನತೆಯನ್ನು ಹುಡುಕುತ್ತ ಹೋದರೆ
ಶಾಸನಗಳಲ್ಲಿ ಇದು ದೊರೆಯುತ್ತದೆ. ಕನ್ನಡದ ಮೊದಲ ಪದ್ಯವೆಂದು ಪರಿಗಣಿತವಾಗಿರುವ
ತಮಟಕಲ್ಲು ಶಾಸನದಲ್ಲಿಯೇ ಪ್ರಾಸದ ಬಳಕೆಯಾಗಿದೆ. ಇದರ ಕಾಲ ಕ್ರಿ.ಶ.ಸು. ೫೦೦.
ಫಣಿಮಣಿ ಅನ್ತು ಭೋಗಿ ಫಣದುಳ್ಮನದೋನ್|
ರಣಮುಖದುಳ್ಳೆ ಕೋಲ ನೆರಿಯರ್ಕ್ಕುಮನಿನ್ದ್ಯ ಗುಣನ್॥
ಪ್ರಣಯಿಜನಕ್ಕೆ ಕಾಮನಸಿತೋತ್ಪಲವರ್ಣ್ಣನವನ್|
ಗುಣಮಧುರಾಂಕ ದಿವ್ಯಪುರುಷನ್ ಪುರುಷ ಪ್ರವರನ್॥
ಅತ್ಯಷ್ಟಿ ಛಂದಸ್ಸಿನ ಕನಕಾಬ್ಜಿನೀ ಹೆಸರಿನ ಅಪೂರ್ವ ವೃತ್ತವಿದು. ಕನ್ನಡದ ಮೊದಲ
ಉಪಲಬ್ಧ ತ್ರಿಪದಿ ಎಂದು ಪರಿಗಣಿತವಾಗಿರುವ, ಕ್ರಿ.ಶ. ಸುಮಾರು ೭೦೦ರ ಬಾದಾಮಿ
ಶಾಸನದ ಸಾಧುಗೆ ಸಾಧು ಮಾಧೂ(ಧು)ರ್ಯ್ಯನ್ಗೆ ಮಾಧೂ(ಧು)ರ್ಯ್ಯಂ...'
ಇದರಲ್ಲಿಯೂ ಪ್ರಾಸವನ್ನು ಪಾಲಿಸಲಾಗಿದೆ. ಕ್ರಿ.ಶ.ಸು.೭೦೦ರ ಶ್ರವಣಬೆಳುಗೊಳ
ಶಾಸನದಲ್ಲಿಯೂ ಪ್ರಾಸ ಪಾಲನೆಯಾಗಿದೆ. ಹೀಗೆ ಅನೂಚಾನವಾಗಿ ಸುಮಾರು ೧೫೦೦
ವರ್ಷಗಳ ಕಾಲ ಕನ್ನಡ ಕಾವ್ಯದ ಭಾಗವಾಗಿದ್ದ ಪ್ರಾಸವನ್ನು ಬಿಡಬೇಕು ಎಂಬ ಆಲೋಚನೆ
ಬಂದದ್ದೇ ಅಪೂರ್ವ.
ಈವರೆಗಿನ ಚರ್ಚೆಯಲ್ಲಿ ಗಮನಿಸಿರುವಂತೆ, ಕನ್ನಡ ಭಾಷೆಯೊಂದಿಗೆ ಬಹುಕಾಲದ
ಸಾಹಚರ್ಯವನ್ನು ಹೊಂದಿರುವ ಸಂಸ್ಕೃತದಲ್ಲಿ ಇದು ಇಲ್ಲ. ಹಾಗೆಯೇ ಇಂಗ್ಲಿಷ್
ಕಾವ್ಯದಲ್ಲಿಯೂ ಈ ದ್ವಿತೀಯಾಕ್ಷರ ಪ್ರಾಸವಿಲ್ಲ. ಆಧುನಿಕ ಕವಿಗಳಲ್ಲಿ ಪಾಂಡಿತ್ಯದ
ಕೊರತೆಯಿಂದಾಗಿಯೇ ಪ್ರಾಸವನ್ನು ಬಿಡಲು ಮುಂದಾಗಿದ್ದಾರೆ ಎಂಬ ಆರೋಪದಲ್ಲಿಯೂ
ಹುರುಳಿಲ್ಲದಿರುವುದು ಕಾಣುತ್ತದೆ. ಪ್ರಾಸಾಧೀನರಾದ ಮಹಾಕವಿಗಳೇ ಪ್ರಾಸದಿಂದ ಕಷ್ಟಕ್ಕೆ
ಒಳಗಾದುದು ಇಲ್ಲಿಯ ವಿವೇಚನೆಯಲ್ಲಿ ಬಂದಿದೆ.
ಈ ಪರಂಪರೆಯನ್ನು ಪ್ರಶ್ನಿಸುವ ಮನೋಭಾವವೇ ಆಶ್ಚರ್ಯಕರವಾದದ್ದು. ಇದು ಇಂಗ್ಲಿಷ್ ವಿದ್ಯಾಭ್ಯಾಸದ ಪರಿಣಾಮ ಎಂದೇ ಹೇಳಬೇಕು. ಆಂಗ್ಲರ ಆಗಮನದಿಂದ
ಸಮಾಜದ ವಿವಿಧ ಸ್ತರಗಳಲ್ಲಿ ಪುನರುಜ್ಜೀವನ ಕಾಣಿಸಿಕೊಂಡಿತ್ತು. ಅದರ ಫಲವಾಗಿಯೇ
ಪ್ರಾಸದ ಬಗೆಗೆ ವಾಗ್ವಾದ ಸಾಧ್ಯ ಆದದ್ದು.
ಪ್ರಾಸವನ್ನು ಬಿಡಬೇಕೆಂಬ ವಿಚಾರ ಹೊಸಗನ್ನಡ ಸಾಹಿತ್ಯ ಬೆಳೆದು ಬಂದ ರಾಜ್ಯದ
ಮೂರು ಕೇಂದ್ರಗಳು ಎಂದು ಗುರುತಿಸಲಾದ ಧಾರವಾಡ, ಮಂಗಳೂರು ಮತ್ತು
ಮೈಸೂರುಗಳಲ್ಲಿ ಏಕಕಾಲದಲ್ಲಿ ನಡೆದಿದೆ. ಈ ಮೂರೂ ಭಾಗಗಳ ಸಾಹಿತ್ಯಪತ್ರಿಕೆಗಳು
ಇದಕ್ಕೆ ವೇದಿಕೆಯನ್ನು ಒದಗಿಸಿವೆ. ಎರಡೂ ಪಕ್ಷದವರ ಅಭಿಪ್ರಾಯವನ್ನು ಮಂಡಿಸುವುದರ
ಜೊತೆಯಲ್ಲಿ ಪ್ರಾಸ ಸಹಿತ, ಪ್ರಾಸ ರಹಿತ ಎರಡೂ ರೀತಿಯ ಪದ್ಯಗಳನ್ನು ಇವು ಪ್ರಕಟಿಸಿವೆ.
ಪ್ರಾಸ ಪರವಾಗಿದ್ದವರು ಪ್ರಾಸ ರಹಿತ ಪದ್ಯಗಳನ್ನು ಪ್ರಕಟಿಸಬಾರದು ಎಂದು ಕರೆ
ನೀಡಿದ್ದನ್ನು ಅವು ಲಕ್ಷ್ಯಕ್ಕೆ ತಂದುಕೊಂಡಿಲ್ಲ.
ಒಟ್ಟಾರೆಯಾಗಿ ಪ್ರಾಸ ತ್ಯಾಗದ ಬಗೆಗೆ ಆಲೋಚನೆ ಮೂಡುವುದಕ್ಕೆ ಆಧುನಿಕ
ಶಿಕ್ಪಣದಿಂದ ತರಬೇತಾದ ಮನಸ್ಸು, ಪುನರುಜ್ಜೀವನ ವಾತಾವರಣ,
ಹಳೆಯದೆಲ್ಲ ಹೊನ್ನಲ್ಲ’
ಎಂಬ ಚಿಕಿತ್ಸಕ ಬುದ್ಧಿ, ಹೊಸದರ ಕಡೆಗಿನ ತುಡಿತ ಇವುಗಳೇ ಕಾರಣ ಎಂದು
ಹೇಳಬಹುದು. ಹೊಸಗನ್ನಡ ಸಾಹಿತ್ಯ ಪಡೆದುಕೊಂಡ ಈ ಮಹತ್ವದ ತಿರುವಿನಲ್ಲಿ ಸಾಹಿತ್ಯ
ಪತ್ರಿಕೆಗಳು ಜವಾಬ್ದಾರಿಯಿಂದ ವರ್ತಿಸಿ ತಮ್ಮ ಹೊಣೆ ನಿರ್ವಹಿಸಿವೆ ಎಂದೇ ಹೇಳಬೇಕು.
ಪ್ರಾಸ ತ್ಯಾಗ ವಾಗ್ವಾದದಲ್ಲಿ ವೇದಿಕೆ ಒದಗಿಸಿದ ಪ್ರಮುಖ ಪತ್ರಿಕೆಗಳು:
೧.ವಾಗ್ಭೂಷಣ, ೨.ಶುಭೋದಯ, ೩. ಕರ್ನಾಟಕ ವೈಭವ, ೪.ಮಧುರವಾಣಿ,
೫.ಸ್ವದೇಶಾಭಿಮಾನಿ, ೬.ಸಾಧ್ವಿ, ೭.ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ, ೮.ಶ್ರೀಕೃಷ್ಣ ಸೂಕ್ತಿ,
೯.ಪ್ರಭಾತ, ೧೦.ಕನ್ನಡ ಕೋಗಿಲೆ.
ಅನುವಾದ ವಾಗ್ವಾದ :
ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಇಂಗ್ಲಿಷ್ ಹಾಗೂ ಇತರ ಐರೋಪ್ಯ
ಭಾಷೆಗಳಿಂದ ಮತ್ತು ಇತರ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ ಅನುವಾದಗಳು ನಡೆದವು.
ಅನುವಾದ, ಭಾವಾನುವಾದ, ರೂಪಾಂತರಗಳು ಕನ್ನಡ ಸಾಹಿತ್ಯಕ್ಕೆ ಹೊಸದೇನಲ್ಲ.
ಮಾರ್ಗಸಾಹಿತ್ಯದ ಕಾಲದಲ್ಲಿ ಪ್ರಾಕೃತ, ಸಂಸ್ಕೃತಗಳಿಂದ ಮೂಲ ಆಕರಗಳನ್ನು ಪಡೆದು
ಕನ್ನಡದಲ್ಲಿ ಕೃತಿ ರಚನೆ ಮಾಡಿ ಮಹಾಕವಿಗಳೆನ್ನಿಸಿಕೊಂಡವರು ಇದ್ದಾರೆ. ಪಂಪ ಭಾರತದಲ್ಲಿ
ಮಾಡಿಕೊಂಡ ಬದಲಾವಣೆಗಳು ಇಂದಿನ ವಿಮರ್ಶಕರ ಟೀಕೆಗೆ ಗುರಿಯಾಗಿವೆ. ಪಂಪ
ಮಹಾಭಾರತದ ಅರ್ಜುನನನ್ನು ತನ್ನ ದೊರೆ ಅರಿಕೇಸರಿಯೊಂದಿಗೆ ಸಮೀಕರಿಸಿದ್ದು,
ದ್ರೌಪದಿಗೆ ಅರ್ಜುನನೊಬ್ಬನನ್ನೇ ಪತಿಯಾಗಿಸಿದ್ದು, ಯುದ್ಧದ ಕೊನೆಯಲ್ಲಿ ಅರ್ಜುನನಿಗೆ
ಪಟ್ಟಾಭಿಷೇಕವಾಗುವುದು ಇವೆಲ್ಲ ಪಂಪ ಮಾಡಿಕೊಂಡಿದ್ದ ಮಾರ್ಪಾಟುಗಳಾಗಿತ್ತು. ಇದು
೧೭೨
ಆಧುನಿಕ ವಿಮರ್ಶಕರಿಗೆ ಸರಿ ಬಂದಿಲ್ಲ. ಸಂಸ್ಕೃತ, ಪ್ರಾಕೃತ ಕಾವ್ಯಗಳನ್ನು ಕನ್ನಡಕ್ಕೆ ತರುವ
ಪಂಪನ ಪರಂಪರೆ ಪೊನ್ನ, ರನ್ನರಲ್ಲಿಯೂ ನಾವು ಕಾಣುತ್ತೇವೆ. ನಮ್ಮ ಮೊದಲ ಉಪಲಬ್ಧ
ಕೃತಿ ಕವಿರಾಜಮಾರ್ಗದಲ್ಲಿಯೇ ಸಾಕಷ್ಟು ಅನುವಾದ ಪದ್ಯಗಳಿವೆ. ಅದೇ ರೀತಿ
ಹೊಸಗನ್ನಡದ ಆರಂಭ ಕಾಲದಲ್ಲಿ ಇಂಗ್ಲಿಷ್, ಬಂಗಾಳಿ, ಮರಾಠಿಗಳಿಂದ ಸಾಹಿತ್ಯ ಕೃತಿಗಳು
ಅನುವಾದವಾಗಿ ಬಂದವು. ಇಂಗ್ಲಿಷ್ನಿಂದ ಅನುವಾದವಾಗಿ ಬಂದ ಕೃತಿಗಳ ಬಗೆಗೆ ತೀವ್ರ
ಟೀಕೆಗಳು ಎದುರಾಗಿವೆ. ಅಂಕಿತನಾಮಗಳು, ಸ್ಥಳನಾಮಗಳನ್ನು ಬದಲಿಸಿದ ಬಗೆಗೆ ಕಟು
ಟೀಕೆ ಮಾಡಲಾಗಿದೆ. ಅನುವಾದ ಹೇಗಿರಬೇಕು, ಹೇಗಿರಬಾರದು ಎಂಬ ಬಗ್ಗೆ
ಪತ್ರಿಕೆಗಳಲ್ಲಿ ವಾಗ್ವಾದ ನಡೆದಿದೆ. ನಂತರ ಅದು ಭಾಷಾಂತರದ ಕುರಿತು ಒಂದು ಕೃತಿ
ರಚಿಸುವುದಕ್ಕೆ ಕಾರಣವಾಯಿತು.
ಆಗಿನ ಹೊಸ ಶಿಕ್ಷಣ ಕಲಿತ ಜನರಿಗೆ ಭಾಷಾಂತರ ಅನಿವಾರ್ಯ ಎನಿಸಿತ್ತು.
ಸರಕಾರಿ ಕಚೇರಿಗಳಲ್ಲಿ ಇದ್ದವರು ಹೆಚ್ಚಾಗಿ ಭಾಷಾಂತರ ಕಾರ್ಯವನ್ನೇ ಮಾಡಬೇಕಿತ್ತು.
ಆಳುವ ಬ್ರಿಟಿಷ್ ಪ್ರಭುಗಳಿಗೆ ಕಚೇರಿ ದಫ್ತರುಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಬೇಕಿತ್ತು.
ಭಾಷಾಂತರಿಗಳೆಂದೇ ನೌಕರಿಗೆ ತಗೆದುಕೊಳ್ಳಲಾಗುತ್ತಿತ್ತು. ಕಂದಾಯ ಇಲಾಖೆ, ಶಿಕ್ಷಣ
ಇಲಾಖೆಗಳಿಂದ ಹಿಡಿದು ಪುರಾತತ್ವ ಇಲಾಖೆಯ ವರೆಗೆ ಎಲ್ಲೆಡೆಗೂ ಅನುವಾದಕರಿದ್ದರು.
ಶಾಸನಗಳನ್ನು ಸಂಶೋಧಿಸಿದವರು ಅದನ್ನು ಇಂಗ್ಲಿಷ್ಗೆ ಅನುವಾದಿಸಿ ವರದಿ ಸಲ್ಲಿಸಬೇಕಿತ್ತು.
ಇಂಥ ವ್ಯವಸ್ಥೆಯಲ್ಲಿ ಭಾಷಾಂತರ ಆ ಕಾಲದಲ್ಲಿ ನಿತ್ಯಕರ್ಮ ಎನ್ನುವಂತಾಗಿತ್ತು.
ಇಂಥ ಭಾಷಾಂತರಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಇದ್ದವರು ಅನ್ಯಭಾಷೆಯ
ಗ್ರಂಥಗಳನ್ನು ಅನುವಾದಿಸತೊಡಗಿದರು. ಇಂಥ ಭಾಷಾಂತರಿಗಳಿಗೆ ಆಂಗ್ಲರಲ್ಲಿ
ಶೇಕ್ಸ್ಪಿಯರ್ ಮೆಚ್ಚಿನವನಾದ. ಆತನ ನಾಟಕಗಳು ಅನುವಾದಗೊಂಡಹಾಗೆಯೇ
ಕಥಾರೂಪದಲ್ಲಿಯೂ ಬಂದಿವೆ. ಶೇಕ್ಸ್ಪಿಯರನ ಬಹುತೇಕ ಕೃತಿಗಳು ಕನ್ನಡದಲ್ಲಿ
ಅನುವಾದಗೊಂಡಿದ್ದು ಹೊಸಗನ್ನಡದ ಆರಂಭದ ದಶಕಗಳ ವೈಶಿಷ್ಟ್ಯ. ಕನ್ನಡದ
ಮೊಟ್ಟಮೊದಲ ಕಾದಂಬರಿ ಯಮುನಾಬಾಯಿ ಪರ್ಯಟನ' (೧೮೬೯) ಒಂದು ಅನುವಾದ ಕೃತಿಯೇ. ಮರಾಠಿಯಲ್ಲಿ ಬಾಬಾಪದಮಂಜಿ ಎನ್ನುವವರು ಬರೆದುದನ್ನು ಕನ್ನಡಕ್ಕೆ ಸೋಲೋಮನ್ ಭಾಸ್ಕರ ತಂದರು. ಒಬ್ಬ ಅನುವಾದಕನಿಗೆ ಭಾರತೀಯ ಸಂದರ್ಭದಲ್ಲಿ ಇರುವ ಸವಾಲುಗಳು ಹಲವು. ``ಭಾರತದ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಾಹಿತ್ಯ ಕೃತಿಗಳನ್ನು ಅನುವಾದಿಸುವಾಗ ಪಾರಿಭಾಷಿಕ ಮತ್ತು ಸಾಂಸ್ಕೃತಿಕ ಶಬ್ದಗಳ ಅಡಚಣೆ ಹೆಚ್ಚಾಗಿ ಉಂಟಾಗುವುದಿಲ್ಲ. ನಮ್ಮ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್ಗೆ ಅನುವಾದಿಸುವುದು ನಿಜವಾಗಿಯೂ ಕಷ್ಟ. ಏಕೆಂದರೆ ಇದು ಒಂದು ಸಂಸ್ಕೃತಿಯಲ್ಲಿ ಬೆಳೆದು ಅಭಿವ್ಯಕ್ತವಾದ ಅನುಭವವನ್ನು ಇನ್ನೊಂದು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮವಾದ ಭಾಷೆಯಲ್ಲಿ ರೂಪುಕೊಡುವ ಕ್ರಮ. ಭಾರತೀಯ ಭಾಷಾ ಕೃತಿಗಳ ಇಂಗ್ಲಿಷ್ ಅನುವಾದವನ್ನು ಭಾರತದ ಕೆಲವು ಇಂಗ್ಲಿಷ್ ಸಾಹಿತ್ಯ ಪ್ರಕಾಶಕರು ಪ್ರಕಟಿಸುತ್ತಾರಾದರೂ ಅದು ಬಹತೇಕ ಭಾರತದಲ್ಲೇ ಹುಟ್ಟಿ ಬೆಳೆದರೂ ಯಾವ ಭಾರತೀಯ ಭಾಷೆಯಲ್ಲಿಯೂ ಪ್ರಭುತ್ವವಿಲ್ಲದ ಇಂಗ್ಲಿಷ್ ಓದುಗರಿಗೆ ಸೀಮಿತವಾಗಿದೆ''೬೬ ಎಂದು ಎಸ್.ಎಲ್. ಭೈರಪ್ಪ ಹೇಳಿದ್ದಾರೆ. ೧೯ನೆ ಶತಮಾನದ ಕೊನೆಯಲ್ಲಿ
ಕನ್ನಡಿಗರ ಜನ್ಮಸಾರ್ಥಕತೆ’೬೭ ಎಂಬ ಪುಸ್ತಕವನ್ನು
ಬರೆದ ವಲ್ಲಭ ಮಹಾಲಿಂಗ ತಟ್ಟಿ ಮಾಸ್ತರು ಭಾಷಾಂತರದ ಬಗ್ಗೆ ಕೆಲವು ನಿರ್ದಿಷ್ಟ
ವಿಚಾರಗಳನ್ನು ಹೇಳಿದ್ದಾರೆ. ಭಾಷೆಯು ಭಾಷಾಂತರದಿಂದ ಹೇಗೆ
ಶ್ರೀಮಂತಗೊಳ್ಳುವುದು, ಭಾಷಾಂತರವು ಹೇಗಿರಬೇಕು ಎಂಬಿತ್ಯಾದಿ ವಿವರಗಳನ್ನು ಇದು
ಒಳಗೊಂಡಿದೆ. ಹೊಸಗನ್ನಡ ಸಾಹಿತ್ಯದಲ್ಲಿ ಭಾಷಾಂತರ ಆರಂಭವಾಗಿ ೫೦ ವರ್ಷಗಳೂ
ಆಗಿರಲಿಲ್ಲ. ಆಗಲೇ ಇಂಥ ವಿಚಾರ ಪ್ರಚೋದಕ ಲೇಖನ ಮತ್ತು ಪುಸ್ತಕ ಪ್ರಕಟವಾಗಿದ್ದು
ಮಹತ್ವದ ಅಂಶವಾಗಿದೆ.
ಪರಭಾಷೆಯ ಪದ್ಯ ಗ್ರಂಥಗಳನ್ನು ಇದ್ದಕ್ಕಿದ್ದ ಹಾಗೆ ಭಾಷಾಂತರಿಸುವುದು ಅತಿಶಯ
ಶ್ರಮದ ಕೆಲಸ ಎಂದು ಹೇಳುವ ತಟ್ಟಿಯವರು ಗದ್ಯಕ್ಕಿಂತ ಪದ್ಯದ ಅನುವಾದ ಕಷ್ಟ ಎಂದು
ಅಭಿಪ್ರಾಯಪಡುತ್ತಾರೆ. ಇದು ಅಂದಿಗೂ ಇಂದಿಗೂ ಎಂದೆಂದಿಗೂ ಸತ್ಯವಾದ ಮಾತು.
ಯಾವ ಭಾಷೆಯ ಗ್ರಂಥಗಳ ಭಾಷಾಂತರ ಮಾಡಬೇಕಾವುದೋ, ಆ ಭಾಷೆಯ
ವ್ಯಾಕರಣ, ಅರ್ಥ ಸ್ವಾರಸ್ಯ, ಛಂದೋ ನಿಯಮಗಳು ಚೆನ್ನಾಗಿ ಗೊತ್ತಿರಬೇಕಾಗುತ್ತದೆ.
ಮತ್ತು ಅದರಷ್ಟೇ ವ್ಯಾಪಕಾರ್ಥವುಳ್ಳ ಸ್ವಭಾಷೆಯ ಶಬ್ದಗಳು ಬೇಗನೆ ನೆನಪಾಗುವಂತೆ
ನಿಪುಣತೆಯಿರಬೇಕಾಗುತ್ತದೆ. ಎರಡೂ ಭಾಷೆಗಳ ಮರ್ಮವಂತೂ ಗೊತ್ತಿರಲಿಕ್ಕೇ ಬೇಕು.
ಇದಲ್ಲದೆ ಮೂಲ ಗ್ರಂಥಕಾರನ ಸ್ಥಿತಿ, ರೀತಿ, ಸ್ವಭಾವವು, ತಿಳಿವಳಿಕೆಯು, ವಿಚಾರ
ಸರಣಿಯು, ಭಾಷಾ ಪದ್ಧತಿಯು ಇವೆಲ್ಲವುಗಳ ಸಂಬಂಧದ ಸಮವೃತ್ತಿಯುಳ್ಳವನೇ
ಭಾಷಾಂತರಿಸುವ ಕೆಲಸಕ್ಕೆ ಯೋಗ್ಯನಾಗುವನು ಎಂಬ ತಟ್ಟಿಯವರ ಮಾತು
ಯಥಾಯೋಗ್ಯವಾಗಿದೆ.
ಯಾವ ಭಾಷೆಯಿಂದ ಯಾವ ಭಾಷೆಗೆ ಮಾಡುವ ಭಾಷಾಂತರ ಹೆಚ್ಚು ಸಮರ್ಥ
ಮತ್ತು ಸುಲಭ ಎಂಬ ಬಗ್ಗೆ ತಟ್ಟಿಯವರು ವಿಚಾರಪೂರ್ಣವಾದ ಮಾತುಗಳನ್ನು ಹೇಳಿದ್ದಾರೆ.
ಒಮ್ಮೊಮ್ಮೆ ಭಾಷೆಯ ಸಂಬಂಧದಿಂದಲೂ ಭಾಷಾಂತರದ ಕೆಲಸವು ಕಠಿಣವಾಗುವುದು.
ಸಂಸ್ಕೃತದಿಂದ ಮರಾಠಿಯಲ್ಲಿ, ಲ್ಯಾಟಿನದಿಂದ ಇಂಗ್ಲಿಷದಲ್ಲಿ ಭಾಷಾಂತರಿಸುವುದು
ಸುಲಭವಾದಂತೆ, ಸಂಸ್ಕೃತ- ಇಂಗ್ಲಿಷ್- ಮಹಾರಾಷ್ಟ್ರ ಭಾಷೆಗಳಿಂದ ಕನ್ನಡದಲ್ಲಿ
ಭಾಷಾಂತರಿಸುವದು ಸುಲಭವಲ್ಲ. ಆದರೆ ತಮಿಳ, ತೆಲುಗು ಭಾಷೆಗಳ ಗ್ರಂಥಗಳನ್ನು
ಕನ್ನಡದಲ್ಲಿ ಭಾಷಾಂತರಿಸುವುದು ಸುಲಭವಾಗಬಹುದು. ಆದರೂ ಕೆಲವೆಡೆಯಲ್ಲಿ ಬಿಸಿಲಲ್ಲಿ
ಕನ್ನಡಿಯನ್ನು ಹಿಡಿದು, ಸೂರ್ಯಪ್ರಕಾಶವನ್ನು ಕತ್ತಲೆಯಲ್ಲಿ ಕೆಡವಿದರೆ, ಅದರಲ್ಲಿ
ಉಷ್ಣತೆಯೂ ತೇಜಸ್ಸೂ ಬಿಸಿಲಿಗಿಂತ ಹೇಗೆ ಕಡಿಮೆಯಾಗಿರುವವೋ ಹಾಗೆಯೇ
ಭಾಷಾಂತರಿಸಿದ್ದರಲ್ಲಿ ತಥ್ಯವೂ ರಸವೂ ಕಡಿಮೆಯಾಗಿರುವವು ಎಂದು ತಟ್ಟಿಯವರು
ನೀಡಿರುವ ಉಪಮಾನ ವಿಶಿಷ್ಟವಾಗಿದೆ.
ಭಾಷಾಂತರದ ಬಗ್ಗೆ ಸರ್ ಉಯಿಲ್ಯಮ್ ಜೋನ್ಸ್ನೆಂಬವನು (ಸರ್ ವಿಲಿಯಂ
ಜೋನ್ಸ್- ಇವನು ಶಾಕುಂತಲ ನಾಟಕವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾನೆ) ವ್ಯಕ್ತಪಡಿಸಿದ
ಅಭಿಪ್ರಾಯವನ್ನು ತಟ್ಟಿಯವರು ಉದಾಹರಿಸಿರುವರು. ಒಂದು ಭಾಷೆಯ ಕವಿತೆಗಳನ್ನು ಮತ್ತೊಂದು ಭಾಷೆಯಲ್ಲಿ ಭಾಷಾಂತರಿಸುವವನು ಒಂದು ಸೀಸೆಯೊಳಗಿನ ಪನ್ನೀರನ್ನು ಮತ್ತೊಂದರಲ್ಲಿ ಸುರುವುವ ಗಂಧಿಗನಂತೆ ಇರುತ್ತಾನೆ. ಪನ್ನೀರಿನ ಕುಪ್ಪಿಯ ಬಾಯಿ ತೆರೆದು ಸುರುವುವಷ್ಟರಲ್ಲಿ ಸುವಾಸನೆಯೆಲ್ಲ ಹಾರಿಹೋಗಿ ಬರಿಯ ನೀರು ಮಾತ್ರ ಮತ್ತೊಂದು ಸೀಸೆಯಲ್ಲಿ ನಿಲ್ಲುವುದು' ಎಂಬ ಉದಾಹರಣೆ ಅತ್ಯಂತ ಉಚಿತವಾದದ್ದು. ಭಾಷಾಂತರ ರೂಪದ ಪದ್ಯ ಗ್ರಂಥಗಳನ್ನು ರಚಿಸುವವರು ಸ್ವತಂತ್ರ ಕವಿತೆಗಳನ್ನು ರಚಿಸುವವರಿಗಿಂತ ಎಷ್ಟೋ ಹೆಚ್ಚು ಜವಾಬದಾರಿಯುಳ್ಳ ಕೆಲಸವನ್ನು ಕಯ್ಕೊಂಡಂತೆ ಎಂಬ ಅಭಿಪ್ರಾಯಕ್ಕೆ ತಟ್ಟಿಯವರು ಬರುವರು. ಭಾಷಾಂತರದ ಪ್ರಯೋಜನವೇನು ಎಂಬ ಬಗ್ಗೆಯೂ ಅವರು ಕೆಲವು ಮನನೀಯ ಮಾತುಗಳನ್ನು ಹೇಳಿದ್ದಾರೆ. ಕೆಲವು ಭಾಷಾಂತರದ ಗ್ರಂಥಗಳು ಸ್ವಭಾಷೆಯವುಗಳೆಂದು ಹೇಳಿಕೊಳ್ಳುವಷ್ಟು ರಮ್ಯವಾಗಬಹುದು. ಹಾಗೂ ಭಾಷಾಂತರದ ಕವಿತಾ ಗ್ರಂಥಗಳಿಂದ ಭಾಷೆಗೆ ಭೂಷಣವಾಗುವದು. ಪರಭಾಷೆಯ ಗ್ರಂಥಕರ್ತರ ಅನುಭವವು, ವಿಚಾರವು, ಉತ್ಕೃಷ್ಟ ಕಲ್ಪನೆಗಳು, ದೇಶಾಚಾರಗಳು ಮುಂತಾದವುಗಳು ಸ್ವಭಾಷೆಯ ಜನರಿಗೆ ಗೊತ್ತಾಗುವವು. ಅವತರಣಗಳನ್ನು ತಕ್ಕೊಳ್ಳುವಾಗ ಈ ಬಗೆಯ ಪದ್ಯ ಗ್ರಂಥಗಳು ಹೆಚ್ಚು ಉಪಯೋಗಿಸುವವು. ಒಟ್ಟಿನಿಂದ ವಿಚಾರಿಸಲು ಪರಭಾಷೆಯ ಪದ್ಯಗ್ರಂಥಗಳನ್ನು ಭಾಷಾಂತರಿಸುವುದರಿಂದ ಬಹು ಪ್ರಯೋಜನವಾಗುತ್ತಲೇ ಹೋಗುವದು. ಆದರೆ ಆ ಕೆಲಸವನ್ನು ಮೇಲೆ ವಿವರಿಸಿದ ಯೋಗ್ಯತೆಯುಳ್ಳ ಪಂಡಿತರು ಕಯ್ಕೊಳ್ಳ ತಕ್ಕದ್ದು, ಇಲ್ಲದಿದ್ದರೆ ಭಾಷೆಗೆ ಗ್ರಾಮ್ಯತ್ವವು ಬರುವ ಸಂಭವವುಂಟು ಎಂದು ತಟ್ಟಿ ಮಾಸ್ತರು ಎಚ್ಚರಿಸುವರು. ಇದು ೧೮೯೯ರಷ್ಟು ಹಿಂದೆಯೇ ಎನ್ನುವುದನ್ನು ಮರೆಯಬಾರದು. ತಟ್ಟಿ ಮಾಸ್ತರ ಕಾಲಕ್ಕಾಗಲೇ ಅನೇಕ ಅನುವಾದ ಗ್ರಂಥಗಳು ಬೇರೆಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದಿದ್ದವು. ಅವುಗಳನ್ನೆಲ್ಲ ಪರಿಶೀಲಿಸಿದ ಬಳಿಕವೇ ಅವರು ಈ ಅಧಿಕಾರಯುತವಾದ ಮಾತುಗಳನ್ನು ಹೇಳಿರುವುದು ಗಮನಾರ್ಹ. ೧೯೦೭ರ ನವೆಂಬರ್ ತಿಂಗಳ
ಶ್ರೀಕೃಷ್ಣ ಸೂಕ್ತಿ’ಯಲ್ಲಿ ಎಂ.ಡಿ. ಅಳಸಿಂಗಾಚಾರ್ಯ
ಅವರು ಭಾಷಾಂತರಿಂದ ಭಾಷಾಭಿವೃದ್ಧಿಗೆ ಆಗುವ ಪ್ರಯೋಜನದ ಬಗ್ಗೆ ಹೇಳಿರುವ ಈ
ಮಾತನ್ನು ಗಮನಿಸಬೇಕು- ಉಭಯ ಭಾಷೆಗಳನ್ನು ತಿಳಿದವರು ತಾವು ಭಾಷಾಂತರದಿಂದ
ಸಂಗ್ರಹಿಸಿದ, ಸಾರವತ್ತಾಗಿಯೂ ಜನರಂಜಕವಾಗಿಯೂ ಇರುವ ವಿಷಯಗಳನ್ನು
ಸ್ವಭಾಷೆಯಲ್ಲಿ ಬರೆದಿಡುತ್ತಿದ್ದರೆ.. .. ಭಾಷಾಭಿವೃದ್ಧಿಗೆ ಹೇತುವಾಗುವದು. ಸ್ವದೇಶೀಯ-
ವಿದೇಶೀಯಗಳೆಂಬ ಭೇದವನ್ನಿಟ್ಟು ಕೊಂಡು ಅತ್ಯಾದರವನ್ನಾಗಲಿ, ತಿರಸ್ಕಾರವನ್ನಾಗಲಿ
ತೋರಿಸುವುದು ತಪ್ಪು ಎನ್ನುವ ಅವರು, ಎರಡನ್ನೂ ತಕ್ಕ ಮಟ್ಟಿಗೆ ಸಮಸ್ಥಿತಿಯಿಂದ
ಆದರಿಸುತ್ತಿರಬೇಕು ಎನ್ನುವರು. ವಿದೇಶೀಯವೆಂಬ ಭಾವದಿಂದ ಭಾಷಾಂತರಗಳನ್ನು
ತಿರಸ್ಕರಿಸಿ ಸ್ವದೇಶ ಭಾಷೆಯಲ್ಲಿಯೇ ಅತ್ಯಾದರವನ್ನು ತೋರಿಸಿದರೆ ಆ
ಭಾಷಾಂತರಗಳಲ್ಲಿರುವ ಸಾರವಾದ ಅಂಶಗಳನ್ನು ಸಂಗ್ರಹಿಸಲು ಅವಕಾಶವಿಲ್ಲದೆ
ಹೋಗುವುದು. ವಿದೇಶೀಯ ಭಾಷೆಯನ್ನು ಅತ್ಯಾದರದಿಂದ ಅಭ್ಯಸಿಸುತ್ತ ಸ್ವಭಾಷೆಯನ್ನು
ತಿರಸ್ಕರಿಸಿದರೆ, ತಾವು ಅದರಿಂದ ಗ್ರಹಿಸಿದ ಸಾರಾಂಶಗಳನ್ನು ತಮ್ಮ ಭಾಷೆಯಲ್ಲಿ ಬರೆದು
ಭಾಷೆಯನ್ನು ವೃದ್ಧಿಗೆ ತರುವಂತೆ ಮಾಡುವುದಕ್ಕೆ, ತಕ್ಕ ವ್ಯತ್ಪತ್ತಿಯನ್ನು ಸಂಪಾದಿಸಲು
ಅವಕಾಶವಿಲ್ಲದೆ ಹೋಗುವುದು. ಆದ್ದರಿಂದ ಇವೆರಡನ್ನೂ ಸಮದೃಷ್ಟಿಯಿಂದ
ಆದರಿಸುತ್ತಿದ್ದಷ್ಟೂ ಭಾಷಾಭಿವೃದ್ಧಿಗೆ ಹೇತುವಾಗುವುದು. ನದಿನದಗಳೆಲ್ಲವನ್ನೂ ತನ್ನೊಳಗೆ
ಅಡಗಿಸಿಕೊಂಡು ತನ್ನಲ್ಲಿ ತಾನೇ ಉಕ್ಕಿ ಅಡಗುತ್ತಿರುವ ಸಮುದ್ರದಂತೆ ಅನೇಕ ಹೊಸ
ವಿಷಯಗಳನ್ನು ತಿಳಿದುಕೊಂಡು ತಮ್ಮಲ್ಲಿ ತಾವೇ ಉಕ್ಕಿ ಆನಂದಪಡುವುದರಿಂದಲೇನು?..
.. ಆದುದರಿಂದ ಈಗಿನ ಆಂಗ್ಲೇಯ ವಿದ್ಯಾಭ್ಯಾಸದಲ್ಲಿ ಪ್ರವರ್ತಿಸಿ ವರ್ಧಿಷ್ಣುಗಳಾದ
ವಿದ್ಯಾರ್ಥಿಗಳೆಲ್ಲರೂ.. .. ತಮ್ಮ ಭಾಷೆಯನ್ನೂ ದೇಶವನ್ನೂ ವೃದ್ಧಿ ಸ್ಥಿತಿಗೆ
ತರಬೇಕೆಂಬುದುದೊಂದುದ್ದೇಶವನ್ನು ಇಟ್ಟುಕೊಂಡಿರಬೇಕು. ಉಭಯ ಭಾಷಾಭಿಜ್ಞತೆ
ಇದ್ದಹೊರತು ಇದು ಸಾಧ್ಯವಲ್ಲ ಎಂಬ ಮಾತನ್ನೂ ಅಳಸಿಂಗಾಚಾರ್ಯರು ಹೇಳುವರು.
ಭಾಷೆಯ ಅಭಿವೃದ್ಧಿಯ ದೃಷ್ಟಿಯಿಂದ ಆಚಾರ್ಯರು ಆಡಿದ ಮಾತಿನ ಹಿಂದಿನ
ಕಳಕಳಿಯನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಮರಾಠಿಯ ಖಾಂಡೇಕರ ಅವರ ಎಂಟು ಕತೆಗಳನ್ನು ವಿ.ಎಂ. ಇನಾಂದಾರ ಅವರು
ದೃಷ್ಟಿಲಾಭ' ಎಂಬ ಹೆಸರಿನ ಸಂಕಲನದಲ್ಲಿ ಅನುವಾದಿಸಿದ್ದರು.
ಜಯಕರ್ನಾಟಕ’ದಲ್ಲಿ
ನಾ.ಕು. ಅವರು ವೀಣಾ ವಿತಾನ' ಕಾಲಂನಲ್ಲಿ ಇದನ್ನು ವಿಮರ್ಶಿಸಿದ್ದಾರೆ. ಇಲ್ಲಿಯ ವಿಮರ್ಶಕರ ಆಕ್ಪೇಪ ಇರುವುದು ಮರಾಠಿಯಿಂದ ಭಾಷಾಂತರಿಸಿರುವುದಕ್ಕೆ. ಇದಕ್ಕೆ ಕಾರಣ ಧಾರವಾಡ ಭಾಗದಲ್ಲಿ ಕನ್ನಡದ ಮೇಲೆ ಮರಾಠಿ ಸವಾರಿ ಮಾಡುತ್ತಿದೆ ಎಂಬ ಭಾವ ಸಾರ್ವತ್ರಿಕವಾಗಿ ಬಲವಾಗಿದ್ದುದು.
ನೀವು ಎರಡನೆ ಮೂರನೆ ತರಗತಿಯ
ಗ್ರಂಥಕರ್ತರ ಕೃತಿಗಳನ್ನು ಭಾಷಾಂತರಿಸುವುದಕ್ಕಿಂತಲೂ ಸ್ವತಂತ್ರ ಕೃತಿಗಳನ್ನು ಎಷ್ಟೇ
ಸಾಧಾರಣ ತರಗತಿಯವಾದರೂ ಅಡ್ಡಿಯಿಲ್ಲ, ರಚಿಸುವುದು ಹೆಚ್ಚು ಶ್ರೇಯಸ್ಕರ’ ಎಂದು
ಕನ್ನಡದ ಹೆಸರುವೆತ್ತ ಸಾಹಿತಿಗಳೊಬ್ಬರು ಹೇಳಿದ್ದನ್ನು ವಿಮರ್ಶಕ ನಾ.ಕು.
ಗಂಭೀರವಾಗಿಯೇ ಕೃತಿಕಾರರಿಗೆ ಸೂಚಿಸಿದ್ದಾರೆ. ಹೆಸರುವೆತ್ತ ಸಾಹಿತಿಗಳ ಸಲಹೆಯಲ್ಲಿ
ಇರುವ ಮುಖ್ಯ ಅಂಶವೆಂದರೆ ಭಾಷಾಂತರ ಕೃತಿಗಳಿಗಿಂತ ಸ್ವತಂತ್ರ ಕೃತಿಗಳು ಉತ್ತಮ.
ಇದು ಭಾಷೆಯನ್ನು ಸಮೃದ್ಧಗೊಳಿಸುತ್ತದೆ ಎನ್ನುವುದು. ಅನುಕರಣದಿಂದ ಸಂಸ್ಕಾರಕ್ಕೆ ಅನ್ನವು
ದೊರೆಯಬಹುದಾದರೂ ಅನುಕರಣವೇ ಅವರ ಜೀವನ ಸರ್ವಸ್ವವಾಗಬಾರದಲ್ಲವೆ?
ಎಂದು ನಾ.ಕು. ಪ್ರಶ್ನಿಸುವರು. ಅನುವಾದದಿಂದಲೇ ಕನ್ನಡ ಸಾಹಿತ್ಯವು
ಪರಿಪುಷ್ಟವಾಗಬೇಕಾದಲ್ಲಿ ಇಂಗ್ಲಿಷ್-ಫ್ರೆಂಚ್-ಇಟಾಲಿಯನ್, ಸಂಸ್ಕೃತ
ಮೊದಲಾದವುಗಳಿಂದ ಯಾವ ನಿಜವಾದ ಸಂಸ್ಕಾರ ದೊರೆಯಬಹುದೋ ಅಂತಹ
ಸಂಸ್ಕಾರವು ಮರಾಠಿಯಿಂದ ದೊರೆಯಬಹುದೇ ಎಂಬ ಬಗ್ಗೆ ನಮಗೇಕೋ ಧೈರ್ಯವಿಲ್ಲ
ಎಂದು ಅವರು ಹೇಳುವರು. ಅವರ ಈ ಮಾತಿನ ಉದ್ದೇಶವಿಷ್ಟೇ, ಮರಾಠಿ ಕೂಡ
ಕನ್ನಡದಷ್ಟೇ ಎಳೆಯ ಭಾಷೆ. ಹಾಗೊಂದುವೇಳೆ ಕನ್ನಡ ಸಾಹಿತ್ಯ ಪುಷ್ಟವಾಗಬೇಕಾದರೆ
ಅದಕ್ಕಿಂತ ಪ್ರಬುದ್ಧವಾದ ಸಾಹಿತ್ಯ ಹೊಂದಿರುವ ಭಾಷೆಯಿಂದ ಅನುವಾದಮಾಡಬೇಕು
ಎನ್ನುವುದು. ಅಲ್ಲದೆ ಅವರು ಇಲ್ಲಿ ಅನುವಾದಿಸಿರುವ ಯೋಗ್ಯತೆಯ ಕತೆಗಳು
ಕನ್ನಡದಲ್ಲಿಯೂ ಇವೆ. ಕನ್ನಡದಲ್ಲಿ ಇಲ್ಲದಂಥವನ್ನು ಅನುವಾದಿಸಿದರೆ ಭಾಷೆಗೆ ಅನುಕೂಲ
ಎನ್ನುತ್ತ, ಅನುವಾದವನ್ನು ಮಾಡಲೇಬಾರದೆಂದು ಹುಂಬಾಗುತಿಗಿ'ಯಿಂದ ಹೇಳುವ ಮಾತಲ್ಲ ಇದು ಎನ್ನುವರು. ಮರಾಠಿಯಿಂದ ಅನುವಾದ ಬೇಡ ಎಂದುದಕ್ಕೆ ಭಗಿನಿ ಭಾಷೆಯ ಮೇಲಿನ ದ್ವೇಷವಲ್ಲ ಎಂದು ಅವರು ಸ್ಪಷ್ಟಪಡಿಸುವರು. ಅನುವಾದಕ್ಕಿಂತ ಸ್ವತಂತ್ರ ನಿರ್ಮಿತಿಗಳನ್ನು ಪ್ರಸಿದ್ಧಪಡಿಸುವುದರಿಂದ ಕನ್ನಡತನವನ್ನು ಕಾಯ್ದುಕೊಳ್ಳುವುದು ಸಾಧ್ಯ ಎಂಬುದು ಅವರ ಮತ. ಕನ್ನಡದ ಕೃತಿಗಳೇ ಅನ್ಯಭಾಷೆಗೆ ಅನುವಾದಗೊಳ್ಳುವಷ್ಟು ಯೋಗ್ಯತಾಸಂಪನ್ನವಾದುವೂ ಇವೆ. ಕಾರಣ ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದುಕೊಡಬೇಕಾದರೆ ಇನ್ನು ಮೇಲೆ ಹೆಚ್ಚಾಗಿ ಸ್ವತಂತ್ರ ಕೃತಿಗಳನ್ನು ರಚಿಸಬೇಕು ಎಂದು ಹೇಳುವ ನಾ.ಕು. ಅವರಿಗೆ ಅನುವಾದ ಪ್ರಿಯವಾದ ವಿಷಯವಲ್ಲವೆಂದು ಹೇಳಬೇಕು. ಅನ್ಯ ಭಾಷೆಗಳಿಂದ ಕೃತಿಗಳನ್ನು ಅನುವಾದಿಸಿ ನಮ್ಮ ಭಾಷೆಯನ್ನು ಶ್ರೀಮಂತಗೊಳಿಸಿಕೊಳ್ಳಬೇಕೆಂಬ ಕಳಕಳಿ ಬಹಳ ಹಿಂದಿನದು. ಇಂಗ್ಲಿಷ್ ಸಾಹಿತ್ಯದಿಂದ ಸ್ಫೂರ್ತಿಗೊಂಡು ಅದರಷ್ಟೇ ಸಂಪದ್ಯುಕ್ತವಾದ ಕಾವ್ಯವನ್ನು ಕನ್ನಡದಲ್ಲಿಯೂ ಸೃಷ್ಟಿಸಬೇಕೆಂಬ ಯೋಚನೆಯನ್ನು
ಶ್ರೀ’ಯವರಿಗೂ ಮೊದಲು ಎಷ್ಟೋ ಜನರು ಮಾಡಿದ್ದರು ಎನ್ನುವ
ಎಸ್.ಅನಂತನಾರಾಯಣ೬೮ ಇತರ ಭಾಷೆಗಳಲ್ಲಿನ ಗ್ರಂಥಗಳನ್ನು ಭಾಷಾಂತರಿಸಲು ತಕ್ಕ
ಉತ್ತೇಜನ ಕೊಟ್ಟು ಭಾಷಾಭಿವೃದ್ಧಿಯನ್ನು ಮಾಡಿಸಿ ಎಂದು ೧೮೮೬ರ ಹಿತಬೋಧಿನೀ' ಪತ್ರಿಕೆಯಲ್ಲಿ ಮೈಸೂರು ಅರಮನೆಯ ಅಧಿಕಾರಿಗಳಿಗೆ ಕರೆಕೊಟ್ಟಿದ್ದನ್ನು ಉಲ್ಲೇಖಿಸುವರು. ಭಾಷಾಂತರವು ಹೆಚ್ಚು ಅಭಿವೃದ್ಧಿ ಹೊಂದಿದ ಶಾಖೆಯಲ್ಲ. ಅಲ್ಲದೆ ಭಾಷಾಂತರದಂತಹ ಕ್ಲಿಷ್ಟ, ತಿರಸ್ಕೃತ ಮತ್ತು ಪರಿಶ್ರಮದಾಯಕ ಕಾರ್ಯಕ್ಕೆ ಜನಪ್ರಿಯ ಸಾಹಿತ್ಯ ಲೋಕದಲ್ಲಿ ಹೆಚ್ಚಿನ ಪ್ರತಿಷ್ಠೆಯೂ ಇಲ್ಲ ಎನ್ನುವ ಭಾಲಚಂದ್ರ ನೇಮಾಡೆ, ಉತ್ತಮ ಭಾಷಾಂತರ ಮಾಡುವುದಕ್ಕಿಂತ ಸಾಮಾನ್ಯ ಸಾಹಿತ್ಯವನ್ನು ರಚಿಸುವುದೇ ಹೆಚ್ಚು ಮಹತ್ವವಾದುದು ಎಂಬುದು ಸರ್ವತ್ರ ಒಪ್ಪಿತ ವಿಚಾರವಾಗಿದೆ ಎನ್ನುವರು.೬೯ ಭಾಷಾಂತರ ಹೇಗಿರಬೇಕು ಎಂಬ ಬಗ್ಗೆ ಆಧುನಿಕ ಕನ್ನಡ ಸಾಹಿತ್ಯದ ಆರಂಭ ಕಾಲದ ಪತ್ರಿಕೆಗಳಲ್ಲಿ ಬಂದ ಚರ್ಚೆಯೊಂದನ್ನು ಇಲ್ಲಿ ಗಮನಿಸಬೇಕು. ಭಾಷಾಂತರಕ್ಕೂ ರೂಪಾಂತರಕ್ಕೂ ಇರುವ ವ್ಯತ್ಯಾಸವೇನು? ಇಂಗ್ಲಿಷ್ ಭಾಷೆಯ ಕೃತಿಯ ಅನುವಾದ ಮಾಡುವಾಗ ಅಲ್ಲಿಯ ಪ್ರದೇಶದ ಹೆಸರುಗಳನ್ನು, ಸ್ಥಳ ನಾಮಗಳನ್ನು ನಮ್ಮಲ್ಲಿಯ ಹೆಸರು ಸ್ಥಳನಾಮಗಳನ್ನಾಗಿ ಮಾರ್ಪಡಿಸಿಕೊಳ್ಳಬಹುದೆ? ಅನುವಾದಕ ಹೀಗೆ ಮಾಡಲು ಎಷ್ಟರಮಟ್ಟಿಗೆ ಸ್ವತಂತ್ರ? ಇಂಥ ಬದಲಾವಣೆಗಳು ಮೂಲ ಸಾಹಿತಿಗೆ ದ್ರೋಹ ಬಗೆದಂತೆ ಅಲ್ಲವೆ? ಷೇಕ್ಸಾದಿಯ ವಚನಗಳ ಅನುವಾದ ಮಾಡಿರುವ ರವೀಂದ್ರನಾಥ ಠಾಕೂರರು The translations are not always literal. The originals being some times abridged and some times paraphrased’ ಎಂದು ಹೇಳಿರುವರು. ಅವರ ದೃಷ್ಟಿಯಲ್ಲಿ ಅನುವಾದಕನಿಗೆ ರೂಪಾಂತರಿಸುವ, ಹಿಗ್ಗಿಸುವ, ಕುಗ್ಗಿಸುವ ಸ್ವಾತಂತ್ಯ್ರವಿದೆ. ಆದರೆ ಔಚಿತ್ಯ ಮೀರಬಾರದು. ಇಂಥ ರೂಪಾಂತರಗಳನ್ನು ವಿರೋಧಿಸುವವರು ಇದ್ದಾರೆ. ``ಈ ರೂಪಾಂತರ ಮಹಾಮೋಹಕ್ಕೆ ಸಿಕ್ಕಿ ದಿನದಿನಕ್ಕೆ ನಮ್ಮಲ್ಲಿ ಸ್ವಪ್ರಯತ್ನವೇ ಮಾಯವಾಗುತ್ತಿದೆ... ಈ ರೀತಿಯ ಸುಲಭಮಾರ್ಗವನ್ನು ಹಿಡಿಯುವುದು ಕನ್ನಡ ಭಾಷೆಗಾಗಲಿ, ಸಾಹಿತ್ಯಕ್ಕಾಗಲಿ ಶ್ರೇಯಸ್ಕರವಲ್ಲ. ಪರಸಾಹಿತ್ಯದ ಅನುಕರಣವೆಂದರೆ ಮೂಲ ಕಾವ್ಯದ ಮುಖ್ಯ ಭಾವವು ಅನುವಾದದಲ್ಲಿ ಪ್ರತಿಫಲಿಸಿದೆ ಎಂದು ತೃಪ್ತರಾಗಿ ಮಿಕ್ಕ ವಿಷಯಗಳನ್ನು ಅಲಕ್ಪ್ಯ ಮಾಡುವುದಲ್ಲ. ಫಲವು ನ್ಯಾಯವಾದರೆ ಸಾಧನವೂ ನ್ಯಾಯವೇ ಎಂಬ ತತ್ವವನ್ನು ನಂಬಿ, ಮೂಲವನ್ನು ರೂಪಾಂತರಿಸಿ ನಮ್ಮದಾಗಿ ಮಾಡಿಕೊಳ್ಳುವುದೂ ಅಲ್ಲ. ಅದನ್ನು ಭಾಷಾಂತರಿಸಿ ನಮ್ಮ ಜನರಿಗೆ ಅದರ ನಿಜ ರೂಪವನ್ನೂ ಮೇಲ್ಮೆಯನ್ನೂ ತೋರಿಸಿಕೊಟ್ಟು ಸ್ವಪ್ರತಿಭೆಯಿಂದ ಬರೆಯುವ ಕವಿಗಳಿಗೆ ಮಾದರಿಯನ್ನೊದಗಿಸುವುದು''೭೦ ಎಂದು ನಂ.ಶಿವರಾಮ ಶಾಸ್ತ್ರಿಗಳು ಹೇಳಿದ್ದಾರೆ. ರೂಪಾಂತರಕ್ಕಿಂತ ಭಾಷಾಂತರ ಒಳ್ಳೆಯದು ಎಂದು ಅವರ ಅಭಿಪ್ರಾಯ. ಏಕೆಂದರೆ, ಭಾಷಾಂತರದಲ್ಲಿ ಆ ಕವಿಯ ಪ್ರತಿಭೆ, ಅವನ ವಿಶಿಷ್ಟ ಗುಣ ಇವುಗಳನ್ನು ತರಲು ಪರಿಚಯ ಮಾಡಿಕೊಡಲು ಅವಕಾಶವಿದೆ. ಆದರೆ ರೂಪಾಂತರ ಮಾಡುವಾಗ ನಮ್ಮ ಕಲ್ಪನೆಗೆ ಒಗ್ಗದ ವಿಷಯವನ್ನು, ಮೂಲದಲ್ಲಿ ಅದು ಎಷ್ಟೇ ಮುಖ್ಯವಾಗಿರಲಿ, ಬಿಟ್ಟುಬಿಡುವುದೂ ಸಾಧ್ಯವಿದೆ. ಎಂದಮೇಲೆ ಮೂಲ ಕೃತಿಯ ಸಂಪೂರ್ಣ ಸತ್ವವನ್ನು ತರಲು, ರೂಪಾಂತರದಲ್ಲಿ ಸಾಧ್ಯವೇ ಇಲ್ಲವೆಂದು ಒಪ್ಪಬೇಕು. ಈ ದೃಷ್ಟಿಯಿಂದಲ್ಲದೆ ಬೇರೊಂದು ದೃಷ್ಟಿಯಿಂದಲೂ ಈ ರೂಪಾಂತರಕ್ಕಿಂತ ಭಾಷಾಂತರ ಒಳ್ಳೆಯದೆನಿಸುತ್ತದೆ. ``ಹೀಗೆ ಜನ್ಮಾಂತರವನ್ನು ಪಡೆದ ಕಾವ್ಯಗಳನ್ನು ಓದಿ ನಾವು ಆನಂದಪಡುವಾಗ, ಅದಕ್ಕೆಲ್ಲ ಕಾರಣ ಮೂಲ ಕವಿಯ ಮಹಿಮೆಯೆಂದಾಗಲಿ ಅವನ ಚಾತುರ್ಯವೆಂದಾಗಲಿ, ಪ್ರತಿಭೆಯೆಂದಾಗಲಿ ನಮಗೆ ಸ್ವಲ್ಪವಾದರೂ ಜ್ಞಾಪಕ ಬರುತ್ತದೆಯೇ?. ... ನಮ್ಮ ಆನಂದದಲ್ಲಿ ಅದೆಲ್ಲಾ ನಮ್ಮ ಮನಸ್ಸಿಗೆ
ಕನ್ನಡ’ವೆಂದೇ
ತೋರುತ್ತದೆ. … ರೂಪಾಂತರಗಳು ಎಷ್ಟು ಮುದ್ದಾಗಿವೆ, ಮನೋಹರವಾಗಿವೆ; ಆದರೇನು?
ಇವು ಹರಣಕ್ಕೆ ಸಮವಾಗುವುದಿಲ್ಲವೆ?” ಎಂದು ಶಿವರಾಮ ಶಾಸ್ತ್ರಿಗಳು ಪ್ರಶ್ನಿಸಿರುವರು.
ರೂಪಾಂತರಕ್ಕೆ ಸಂಬಂಧಿಸಿದಂತೆ ಶಾಸ್ತ್ರಿಗಳು ಎತ್ತಿದ ಪ್ರಶ್ನೆ ಭಾಷಾಂತರಕ್ಕೂ ಅನ್ವಯಿಸುತ್ತದೆ.
ಹೀಗಾಗಿ ಶಾಸ್ತ್ರಿಗಳ ಆಕ್ಪೇಪಗಳನ್ನು ರೂಪಾಂತರಕಷ್ಟೇ ಸೀಮಿತಗೊಳಿಸಬೇಕಾಗಿಲ್ಲ. ರಕ್ತಾಕ್ಷಿ
ನಾಟಕ, ಕಿಂದರಜೋಗಿ ಕಾವ್ಯ, ಸೋಹ್ರಾಬ್ ಮತ್ತು ರುಸ್ತುಂ' ಮೊದಲಾದವುಗಳನ್ನು ನಾವು ನೋಡಿದಾಗ ರೂಪಾಂತರವೂ ಭಾಷೆಗೆ ಅಗತ್ಯ ಎಂದು ಒಪ್ಪಿಕೊಳ್ಳುವುದು ಅನಿವಾರ್ಯ. ರೂಪಾಂತರ ಹೇಗಿರಬಾರದು ಎನ್ನುವ ಬಗ್ಗೆ ೨೦ನೆ ಶತಮಾನದ ಆರಂಭಕಾಲದಲ್ಲಿಯೇ ನಡೆದ ಈ ವಾಗ್ವಾದ ಉಲ್ಲೇಖನಾರ್ಹ. ನೇರವಾದ ನಾಟಕ ರೂಪವಲ್ಲದೆ, ಶೇಕ್ಸ್ಪಿಯರನು ನಾಟಕ ಕಥೆಗಳ ಮೂಲಕವಾಗಿಯೂ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾನೆ. (ಲ್ಯಾಂಬ್ಸ್ ಟೇಲ್ಸ್- ಅನುಸರಣೆ). ಇಲ್ಲಿಯೂ ಅವಕ್ಕೆ ಭಾರತೀಯ ಆವರಣವನ್ನು ಕಲ್ಪಿಸಲಾಯಿತು. ಶೇಕ್ಸ್ಪಿಯರ್ನನ್ನು ಕನ್ನಡದಲ್ಲಿ ತಂದ ಬಗೆಯನ್ನು ಟೀಕಿಸಲಾಗಿದೆ. ಶ್ರೀಕಂಠೇಶ ಗೌಡ ಅವರ
ಪ್ರತಾಪರುದ್ರದೇವ’
ಪ್ರಕಟವಾದಾಗ ಭಾಷಾಭಿಮಾನಿ'ಯೊಬ್ಬರು ೧೮೯೬ರ
ವಿದ್ಯಾದಾಯಿನೀ’ ಪತ್ರಿಕೆಯಲ್ಲಿ
ಟೀಕಿಸಿದರು. ಆ ಲೇಖನ ಮಾಲೆ, ಪ್ರತ್ಯುತ್ತರಾದಿಗಳು ಮುಂದಿನ ಹಲವು ಸಂಚಿಕೆಗಳಲ್ಲಿ
ನಡೆಯಿತು. ಈ ನಾಟಕದ ಮಖಪುಟದಲ್ಲಿಯ ಕನ್ನಡಿಗರಿಗಾಗಿ ಬರೆಯಲ್ಪಟ್ಟ ಇಂಗ್ಲಿಷ್ ಉದ್ದಾಮ ಗ್ರಂಥ' ಎಂಬ ವಾಕ್ಯವೇ
ಭಾಷಾಭಿಮಾನಿ’ಯ ಟೀಕೆಗೆ ಗುರಿಯಾಗಿದೆ. ಈ ಕಾರ್ಯ ಒಳ್ಳೆಯದೇ. ಆದರೆ ಹಾಗೆ ಮಾಡುವವನಿಗೆ ಯೋಗ್ಯತೆ ಬೇಕಲ್ಲ?' ಎಂದು ಅವರು ಛಾಟಿ ಏಟು ನೀಡುವರು. ಶ್ರೀಕಂಠೇಶಗೌಡರು ತಮ್ಮ ನಾಟಕಕ್ಕೆ ಸುದೀರ್ಘವಾದ ಒಂದು ಮುನ್ನುಡಿಯನ್ನು ಬರೆದು ಇಂಗ್ಲಿಷ್ ನಾಟಕವನ್ನು ಹೇಗೆ ಅನುವಾದಿಸಬೇಕು, ನಾಟಕದ ಭಾಷೆ ಇತ್ಯಾದಿಗಳ ಬಗ್ಗೆ ವಿವರಿಸಿದ್ದು ಈ
ಭಾಷಾಭಿಮಾನಿ’ಯ ಟೀಕೆಗೆ ಒಳ್ಳೆಯ
ಆಹಾರವನ್ನು ಒದಗಿಸಿತು.
ಇಂಗ್ಲಿಷ್ ಭಾಷೆಯು ಹಲವು ಭಾಷೆಯ ಪಗಳನ್ನು ಲೀಲಾಜಾಲವಾಗಿ
ಸೇರಿಸಿಕೊಂಡು ಶಬ್ದ ಸಂಪತ್ತನ್ನು ಹೆಚ್ಚಿಸಿಕೊಂಡಿದೆ. ಆದುದರಿಂದ ಶಬ್ದ ದಾರಿದ್ಯ್ರವಿಲ್ಲ..
ಕನ್ನಡದಲ್ಲಿ ಶಬ್ದ ದಾರಿದ್ಯ್ರವಿದೆ ಎಂಬ ಶ್ರೀಕಂಠೇಶಗೌಡರ ಮಾತಿನಲ್ಲಿ ಕನ್ನಡ ಶಬ್ದ
ಸಂಪತ್ತನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬ ಚಿಂತನೆಯಿದೆ. ಪ್ರಪಂಚದಲ್ಲಿ ರಸವತ್ತಾಗಿರುವ
ವಿಶಿಷ್ಟ ಭಾಷೆಗಳನ್ನು ಸಂಧಿಸುತ್ತಿರುತ್ತಾ, ಆ ಭಾಷೆಗಳಲ್ಲಿರತಕ್ಕ ಅಸಾಧಾರಣವಾದ ಶಬ್ದಗಳನ್ನು
ಅವರ ಕಾವ್ಯ ರಚನಾ ಚಮತ್ಕಾರಗಳನ್ನು ತೆಗೆದುಕೊಂಡು ಮತ್ತು ತೆಗೆದುಕೊಳ್ಳುತ್ತಾ,
ಸಮುದ್ರದಂತಾಗಿರುವ ಇಂಗ್ಲಿಷ್ ಭಾಷೆಯ ಶಬ್ದಗಳಿಗೆ ಸಾಮಾನ್ಯ ವಿಷಯವನ್ನು
ಬರಿಯಬೇಕಾದರೂ ಹತ್ತು ಪಂಗ್ತಿಗೆ ಹದಿನಾರು ಕಡೆ ಪರಭಾಷೆಯನ್ನಪೇಕ್ಷಿಸುವ ಕನ್ನಡದಲ್ಲಿ
ಸಮಾನಾರ್ಥವನ್ನು ಕೊಡುವ ಪ್ರತಿ ಶಬ್ದಗಳನ್ನು ದೊರಕಿಸಿಕೊಳ್ಳಬೇಕು. ಇಲ್ಲದಿದ್ದರೆ,
ಸಂಸ್ಕೃತದಲ್ಲಿ ಹುಡುಕಬೇಕು… ಎನ್ನುವ ಗೌಡರು ಕನ್ನಡ ಅನುವಾದಕನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ.
ಇಂಗ್ಲಿಷ್ ಗ್ರಂಥಗಳಲ್ಲಿರುವಷ್ಟು ಸ್ವಾರಸ್ಯ ಸಂಸ್ಕೃತ ಗ್ರಂಥಗಳಲ್ಲಿಲ್ಲ.
ಷೇಕ್ಸ್ಪಿಯರ್ನಲ್ಲಿರತಕ್ಕ ಸ್ವಾರಸ್ಯ ಕಾಳಿದಾಸನಲ್ಲಿಲ್ಲವೆಂದಾದರೂ ಒಪ್ಪಬೇಕು ಎಂಬ
ಅವರ ಮಾತು ಸಹಜವಾಗಿಯೇ ಟೀಕೆಗಳನ್ನು ಆಹ್ವಾನಿಸಿತು. ನಾಟಕದಲ್ಲಿ ಗದ್ಯದಲ್ಲಿ
ಮಾತ್ರವಲ್ಲ ಪದ್ಯದಲ್ಲಿಯೂ ಕೆಲವುಮಟ್ಟಿಗಾದರೂ ಹೊಸಗನ್ನಡವನ್ನು ಸೇರಿಸದಿದ್ದರೆ ಅವು
ನಾಟಕಶಾಲೆಗೆ ಉಪಯೋಗವಾಗುವುದಿಲ್ಲ ಎಂಬ ಮಾತನ್ನು ಹೇಳುವ ಗೌಡರಿಗೆ
ಭಾರತೀಯ ಪುರಾಣಗಳಲ್ಲಿಯ ಅದ್ಭುತಗಳನ್ನು ರಂಗದ ಮೇಲೆ ಆಧುನಿಕ ಕಾಲದಲ್ಲಿ
ತರುವುದು ಹೇಗೆಂಬ ಜಿಜ್ಞಾಸೆ ಮೂಡಿದೆ. ರಾವಣ ಪಾತ್ರಧಾರಿಯನ್ನು ಹತ್ತು ತಲೆಯೊಂದಿಗೆ
ರಂಗದ ಮೇಲೆ ಹೇಗೆ ತರುವುದು. ಒಂಟಿ ತಲೆ ಎರಡು ಕೈಯ ರಾವಣನನ್ನು ಪ್ರೇಕ್ಪಕರು
ಒಪ್ಪಿಕೊಳ್ಳುವರೆ ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾರೆ. ಪಾಶ್ಚಾತ್ಯ ನಾಟಕಗಳನ್ನು ಅವರು
ಓದಿದ್ದರಿಂದ ಇಂಥ ಪ್ರಶ್ನೆಗಳು ಅವರನ್ನು ಕಾಡಿವೆ. ಇಂಥ ವಿಚಾರಗಳನ್ನೆಲ್ಲ ಭಾಷಾಭಿಮಾನಿ' ಟೀಕಿಸಿದ್ದಾರೆ.
ಸೋಜಿಗವೇ ಪೇಳೆ ಕಬ್ಬ ಗೌಡಂ’ ಎಂಬ ಶೀರ್ಷಿಕೆ ಹೊಂದಿರುವ ಈ ಟೀಕಾ
ವಿಮರ್ಶೆಯು ಶೇಕ್ಸ್ಪಿಯರನ ಪದ್ಯ ಕಾವ್ಯದ ಅನುವಾದ ಕನ್ನಡದಲ್ಲಿ ಸರಿಯಾಗಿ ಆಗಿಲ್ಲ
ಎಂದು ಹೇಳುವುದು. ಗೌಡರು ಇನ್ನೂ ತಮಗೆ ರೂಢಿಯಿಲ್ಲದ ಪದ್ಯಕಾವ್ಯ ಸರಣಿಯನ್ನು
ಬರೆಯಲು ಯತ್ನಿಸದೆ ವಚನ ರೂಪವಾಗಿಯೇ ಬರೆದಿದ್ದರೆ ನೆಟ್ಟಗಿತ್ತು ಎಂದು
ಭಾಷಾಭಿಮಾನಿ ಹೇಳಿದ್ದಾರೆ. ಕಥೆಯನ್ನು ಭಾರತೀಯ ಪರಿಸರಕ್ಕೆ ತರುವಾಗ
ಶ್ರೀಕಂಠೇಶಗೌಡರು (ಮ್ಯಾಕ್ಬೆತ್ನ) ವೀರಸೇನನ ಬದಲು ಪ್ರತಾಪರುದ್ರದೇವನನ್ನು
ನಾಯಕನನ್ನಾಗಿ ಮಾಡಿರುವರು. ಇಂಥ ಮಾರ್ಪಾಡಿಗೆ ಅನುವಾದಕರು ಶೇಕ್ಸ್ಪಿಯರನ
ಕ್ಷಮೆ ಕೇಳಬೇಕು ಎನ್ನುವರು. ಮೂಲ ವಸ್ತುವಿನಲ್ಲಿ ಬದಲಾವಣೆ ಮಾಡಿಕೊಳ್ಳಬಾರದು
ಎನ್ನುವ ಭಾಷಾಭಿಮಾನಿ'ಯ ಅಭಿಪ್ರಾಯ ಒಪ್ಪಬೇಕು. ಆದರೆ ಭಾರತೀಯ ಪರಿಸರದ ಹೆಸರನ್ನು ಇಟ್ಟಿದ್ದಕ್ಕೆ ಅವರ ಆಕ್ಷೇಪ ಇದ್ದಹಾಗಿಲ್ಲ. ಶ್ರೀಕಂಠೇಶಗೌಡರು ತಮ್ಮ ಮುನ್ನುಡಿಯಲ್ಲಿ,
ಮೂಲ ಗ್ರಂಥದ ಯಾವ
ಭಾಗದಲ್ಲಿ ಸ್ವಾರಸ್ಯವು ಒಪ್ಪುವುದೋ ಭಾಷಾಂತರಿಸಿದ ಗ್ರಂಥದ ಆ ಭಾಗದಲ್ಲಿ ಇಲ್ಲದಿದ್ದರೂ
ಒಟ್ಟು ಗ್ರಂಥದಲ್ಲಿದ್ದರೆ ಎರಡು ಗ್ರಂಥಗಳಲ್ಲಿಯೂ ಸ್ವಾರಸ್ಯವೆಂಬುದು ಒಂದೇ ಆಗಿ ತಾನೇ
ಇರುವುದು’ ಎಂದು ಹೇಳಿದ್ದರು. ಇದನ್ನು ಒಪ್ಪದ ಭಾಷಾಭಿಮಾನಿ'ಯು
ರಸವೆಂಬುದು
ಉಚಿತ ಸ್ಥಾನದಲ್ಲಿ ಬರತಕ್ಕಂಥಾದ್ದು; ಭಾಷಾಂತರದಲ್ಲಿ ಸಿಕ್ಕಸಿಕ್ಕಲ್ಲಿ ಇಡುವುದಾದರೆ ಹೇಗೆ?’
ಎಂದು ಪ್ರಶ್ನಿಸುತ್ತಾರೆ.
ಶ್ರೀಕಂಠೇಶಗೌಡರ ಮುನ್ನುಡಿಗೆ ಟೀಕೆ ಇನ್ನೂ ಮುಂದುವರಿಯುತ್ತದೆ,
ಗ್ರಂಥಾದಿಯಲ್ಲಿ ಇವರು ಯಾವನೋ ಇಟಾಲಿಯನನೊಬ್ಬನು ಬರೆದ ವಾಕ್ಯವನ್ನು ತಗೆದುಕೊಂಡು, ಆ ವಾಕ್ಯವನ್ನು ಖಂಡಿಸ ಯತ್ನಿಸಿ, ಪಿಷ್ಟ ಪೇಷಣ ನ್ಯಾಯವಾಗಿ ಕೆಲವು ಕಡೆ ಹೇಳಿದ್ದನ್ನೇ ಹೇಳಿಕೊಂಡು, ಕೆಲವೆಡೆ ತಾವು ಹೇಳಿರುವ ವಾಕ್ಯಗಳಿಗೇ ವಿರುದ್ಧವಾಗಿ ಪೂರ್ವಾಪರ ಸಂಬಂಧವಿಲ್ಲದೆ ವಿಷಯ ವಿಚಾರವನ್ನು ಮಾಡಿ, ಮುಗ್ಗರಿಸಿ ಹಳ್ಳಕ್ಕೆ ಬಿದ್ದು ಏಳ ಯತ್ನಿಸಿ ಪುನಃ ಜಾರಿ ಕುಕ್ಕರಿಸುವವನಂತೆ ಏನೋ ಉಪಕ್ರಮ ಮಾಡಿ ಪೇಚಾಡಿ ಪೇಚಾಡಿ ಕಡೆಗೆ ಎಲ್ಲಿಯೋ ವಿರಮಿಸಿರುವರು'' ಎಂದು ಹೇಳುವರು. ಸಂಸ್ಕೃತದಿಂದ ಕನ್ನಡಕ್ಕೆ ಶಬ್ದಗಳನ್ನು ತಗೆದುಕೊಳ್ಳುವಂತೆ ಇಂಗ್ಲಿಷ್ನಿಂದಲೂ ಶಬ್ದಗಳನ್ನು ತಗೆದುಕೊಳ್ಳಬಹುದು ಎಂಬ ಶ್ರೀಕಂಠೇಶಗೌಡರ ಅಭಿಪ್ರಾಯಕ್ಕೆ `ಭಾಷಾಭಿಮಾನಿ'ಯ ಸಮ್ಮತಿ ಇಲ್ಲ. ಕನ್ನಡ ಶಬ್ದ ಸ್ವರೂಪವು ಇಂಗ್ಲಿಷ್ಗಿಂತಲೂ ಸಂಸ್ಕೃತಕ್ಕೆ ಹತ್ತಿರವಾಗಿರುತ್ತದೆ; ಹಾಗೂ ಸಂಸ್ಕೃತ ಶಬ್ದಗಳಿಗೆ ಕನ್ನಡ ಪ್ರತ್ಯಯಗಳನ್ನು ಸುಲಭವಾಗಿ ಹಚ್ಚಿ ಕನ್ನಡ ವಾಕ್ಯದಲ್ಲಿ ಸರಾಗವಾಗಿ ತಗೊಳ್ಳಬರುತ್ತದೆ; ಈ ಸೌಲಭ್ಯ ಇಂಗ್ಲಿಷ್ಗಿಲ್ಲ- ಎಂದು ಅವರು ವಿವರಿಸುವರು. ನಾಟಕದ ಅನುವಾದದಲ್ಲಿ ವಿಭಕ್ತಿ ಮತ್ತು ಕ್ರಿಯಾ ಪ್ರತ್ಯಯಗಳು ಇಲ್ಲ. ಹಳಗನ್ನಡ ಹೊಸಗನ್ನಡ ಪ್ರತ್ಯಯಗಳ ಕಲಬೆರಕೆಯಾಗಿದೆ, ಗ್ರಾಮ್ಯ ಶಬ್ದಗಳನ್ನು ಬಳಸಲಾಗಿದೆ ಎಂಬ ದೋಷಗಳನ್ನು `ಭಾಷಾಭಿಮಾನಿ'ಯು ನಾಟಕದಿಂದ ಹೆಕ್ಕಿ ತೋರಿಸುತ್ತಾರೆ. ಇಂಥ ದೋಷಗಳನ್ನು ಪುಟಪುಟಗಳಲ್ಲೂ ಅವರು ಕಾಣುತ್ತಾರೆ. ಇಷ್ಟೆಲ್ಲ ವಿಚಾರ ಮಾಡಿದ `ಭಾಷಾಭಿಮಾನಿ' ಕೊನೆಯಲ್ಲಿ ಹೇಳುವುದು ಹೀಗೆ-
ಇಷ್ಟೆಲ್ಲ ವಿಚಾರ ಮಾಡಿದ
ಅನಂತರದಲ್ಲಿ ಈ ಪ್ರತಾಪರುದ್ರದೇವ' ಎಂಬ ಗ್ರಂಥವನ್ನು ಯಾವ ಗ್ರಂಥಗಳ ಜೊತೆಗೆ ಸೇರಿಸಬೇಕೋ ನಿಷ್ಕರ್ಷಿಸುವುದು ಪ್ರಯಾಸವಾಗಿದೆ... ಸರಿಯಾದ ಭಾಷಾಂತರವೂ ಅಲ್ಲದೆ, ಸ್ವಂತವಾಗಿ ಸಂವಿಧಾನವನ್ನು ಅನುಸರಿಸಿಯೂ ಬರೆಯದೆ, ಲಕ್ಪಣ ಗ್ರಂಥವೂ ಅಲ್ಲದೆ, ಓದುವುದಕ್ಕೆ ಆಹ್ಲಾದಕರವಾಗದಂತೆ ಬರೆದ ಗ್ರಂಥವನ್ನು ಏನೆಂದು ಕರೆಯೋಣ?'' ಬಹುಶಃ ಇದಕ್ಕೆ ಶ್ರೀಕಂಠೇಶಗೌಡರು ಉತ್ತರಕೊಟ್ಟ ಹಾಗಿಲ್ಲ. ಆದರೆ ಮಹಾರಾಜಾ ಕಾಲೇಜಿನ ಕನ್ನಡ ಪಂಡಿತರಾದ ಪಿ.ಆರ್.ಕರಿಬಸವಶಾಸ್ತ್ರಿಯವರು ನೀಡಿದ ಉತ್ತರ
ವಿದ್ಯಾದಾಯಿನಿ’ಯ ಮುಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದೆ. ಇದು ರೂಪಾಂತರ, ಭಾಷಾಂತರವಲ್ಲ; ಆದ ಕಾರಣ ಬಹಳಷ್ಟು ಹೋಲಿಸುವುದು ಬೇಡ. ಇದರಲ್ಲಿಯ ಗುಣಗಳನ್ನೊಂದನ್ನೂ `ಭಾಷಾಭಿಮಾನಿ'ಯು ಗಮನಿಸಿಲ್ಲ. ಆದ್ದರಿಂದ ಇವನನ್ನು `ದೋಷಾಭಿಮಾನಿ'ಯೆಂದು ಕರೆಯುವುದು ಸೂಕ್ತ.'' ಒಟ್ಟಾರೆ ೧೮೯೬ರಷ್ಟು ಹಿಂದೆಯೇ ಭಾಷಾಂತರದ ಬಗ್ಗೆ ಇಷ್ಟೊಂದು ಪ್ರಬುದ್ಧವಾದ ಚರ್ಚೆ ನಡೆದದ್ದು ಸಾಹಿತ್ಯದ ಬೆಳವಣಿಗೆಗೆ ದೊಡ್ಡ ಕೊಡುಗೆಯೇ. ಭಾಷಾಂತರ ರೂಪಾಂತರಗಳ ಸಂಬಂಧದಲ್ಲಿ ನಡೆದ ಇಂಥ ಚರ್ಚೆಯ ಫಲವಾಗಿಯೇ ೧೯೧೫ರಲ್ಲಿ ಒಂದು ಪುಸ್ತಕ ಹೊರ ಬಂತು. ಇದನ್ನು ಬರೆದವರು ತಮ್ಮನ್ನು `ಇಂಗ್ಲಿಷ್-ಕನ್ನಡ ಭಾಷಾಂತರ ವೈರಿ'ಯೆಂದು ಕರೆದುಕೊಂಡಿರುವರು. ಇವರ ಹೆಸರು ಎ.ಬಿ. ಏಯಾಟ್ನ್ ಕಿರಸನು (ಕೃಷ್ಣಯ್ಯ ಎಂಬ ಹೆಸರಿನ ತಿರುಗು ಮುರುಗು) ಎಂದು ಶ್ರೀನಿವಾಸ ಹಾವನೂರ ಹೇಳಿದರೆ, ಅಯ್ಯಟ್ನಿಕಿರ್ಸ್ (ಬಿ.ಎ.ಶ್ರೀಕಂಠಯ್ಯ) ಎಂದು ಡಾ.ಕೋ.ವಸಂತಲಕ್ಪ್ಮಿ ಹೇಳಿದ್ದಾರೆ. ಕುತೂಹವುಳ್ಳವರು ಶ್ರೀನಿವಾಸ ಹಾವನೂರ ಅವರ `ಹೊಸಗನ್ನಡದ ಅರುಣೋದಯ' ಕೃತಿಯನ್ನು ನೋಡಬಹುದು. ಭಾಷಾಂತರಕಾರ ಮೂಲವನ್ನು ಉಲ್ಲೇಖಿಸದೆ ಇರುವುದರ ಬಗ್ಗೆಯೂ ಆಕ್ಪೇಪ ವ್ಯಕ್ತವಾಗಿದೆ. `ವಾಗ್ಭೂಷಣ'ದಲ್ಲಿ ಪ್ರಕಟವಾದ ತಮ್ಮ `ಕರ್ನಾಟಕ ಸ್ವಪ್ನವಾಸವದತ್ತಂ' ಪ್ರಸ್ತಾವನೆಯಲ್ಲಿ ಭೀಮಾಜಿ ಜೀವಾಜಿ ಹುಲಿಕವಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಇಲ್ಲಿ ಗಮನಿಸಬೇಕು.
ನಮ್ಮ ಭಾಷೆಯಲ್ಲಿ ಭಾಷಾಂತರ ಗ್ರಂಥಗಳೇ ಸ್ವತಂತ್ರ
ಗ್ರಂಥಗಳಿಗಿಂತ ಹೆಚ್ಚಾಗಿ ರಚಿತವಾಗಹತ್ತಿರುವದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಆದರೆ ಮೂಲ ಗ್ರಂಥದ ವಿಷಯವಾಗಿಯೂ ಆ ಗ್ರಂಥ ಕರ್ತೃವಿನ ವಿಷಯವಾಗಿಯೂ
ಸ್ವಲ್ಪವಾದರೂ ಉಲ್ಲೇಖವನ್ನು ಮಾಡದೆ ಸ್ವತಃ ಬರೆದಂತೆ ಜನರಲ್ಲಿ
ಆಭಾಸವನ್ನುಂಟುಮಾಡುವ ಪ್ರಯತ್ನವು ಭಾಷೆಗಾಗಲಿ ಲೇಖಕನಿಗಾಗಲಿ ಶ್ರೇಯಸ್ಕರವಲ್ಲ;
ಮತ್ತು ಗ್ರಂಥ ಕರ್ತರಿಗೂ ಪ್ರಕಾಶಕರಿಗೂ, ಲೇಖಕರಿಗೂ ಇರತಕ್ಕ ಹಕ್ಕುಗಳನ್ನ
ಉಲ್ಲಂಘಿಸುವುದೂ ಮನುಷ್ಯಧರ್ಮವಲ್ಲ.. .. ..”೭೧ ಇದು ಪ್ರತಿಯೊಬ್ಬ ಭಾಷಾಂತರಕಾರ
ಯಾವತ್ತೂ ಪಾಲಿಸಬೇಕಾದ ಅಗತ್ಯವಾಗಿದೆ. ಇದು ಪ್ರಾಮಾಣಿಕತೆಯ ಪ್ರಶ್ನೆಯೂ ಹೌದು.
ಮೂಲ ಉಲ್ಲೇಖಿಸದಿದ್ದರೆ ಈಗ ಅದನ್ನು ಕೃತಿಚೌರ್ಯ ಎಂದು ಕರೆಯಲಾಗುತ್ತಿದೆ.
ಹೊಸಗನ್ನಡದ ಆರಂಭ ಕಾಲದಲ್ಲಿ ಆಂಗ್ಲ ಸಾಹಿತ್ಯ ಓದಿಕೊಂಡವರಿಗೆ
ಷೇಕ್ಸ್ಪಿಯರ್ ಅತ್ಯಂತ ಆಕರ್ಷಕನಾಗಿ ಕಂಡನು. ನವೋದಯ ಪೂರ್ವ ಘಟ್ಟದಲ್ಲಿ
ಷೇಕ್ಸ್ಪಿಯರ್ನ ಹಲವು ಅನುವಾದಗಳು ಬಂದಿವೆ. ಆದರೆ ಅವುಗಳಿಗೆ ಅನುವಾದ ಎನ್ನುವ
ಬದಲು ರೂಪಾಂತರ ಎಂದು ಹೇಳುವುದೇ ಸರಿ. ಆ ಕಾಲದಲ್ಲಿದ್ದ ರಂಗಭೂಮಿಯನ್ನು
ಗಮನದಲ್ಲಿಟ್ಟುಕೊಂಡು ಇವುಗಳನ್ನು ರೂಪಾಂತರಿಸಲಾಗಿದೆ. ಕೆರೂರರ ಸುರತ ನಗರದ ಶ್ರೇಷ್ಠಿ', (ಮರ್ಚೆಂಟ್ ಆಫ್ ವೇನಿಸ್) ಮತ್ತು
ವಸಂತಯಾಮಿನೀ ಸ್ವಪ್ನ ಚಮತ್ಕಾರ’
(ಮಿಡ್ ಸಮ್ಮರ್ ನೈಟ್ಸ್ ಡ್ರೀಮ್), ಬಸವಪ್ಪ ಶಾಸ್ತ್ರಿಗಳ ಶೂರಸೇನ ಚರಿತ್ರೆ' (ಒಥೆಲೋ), ಎಂ.ಎಲ್. ಶ್ರೀಕಂಠೇಶಗೌಡರ
ಪ್ರತಾಪರುದ್ರದೇವ’ (ಮ್ಯಾಕ್ಬೆತ್),
ಆನಂದರಾಯರ ರಾಮವರ್ಮ ಲೀಲಾವತಿ' (ರೋಮಿಯೋ ಆ್ಯಂಡ್ ಜೂಲಿಯಟ್), ಗುಂಡೋ ಕೃಷ್ಣ ಚುರಮುರಿಯವರ
ರಾಘವೇಂದ್ರರಾವ್’
(ಒಥೆಲೋ), ಗದಿಗೆಯ್ಯ ಹೊನ್ನಾಪುರ ಮಠರ ತ್ರಾಟಿಕಾ ನಾಟಕ' (ದಿ ಟೇಮಿಂಗ್ ಆಫ್ ದಿ ಶ್ಯ್ರೂ), ಎಂ.ಎಸ್. ಪುಟ್ಟಣ್ಣನವರ
ಹೇಮಚಂದ್ರ ರಾಜ ವಿಲಾಸ’ (ಕಿಂಗ್
ಲಿಯರ್) ಮೊದಲಾದವುಗಳ ಹೆಸರುಗಳನ್ನು ಗಮನಿಸಿದಾಗ ಅದರ ಸ್ವರೂಪವೂ ಗೊತ್ತಾಗಿ
ಬಿಡುವುದು. ಪರಿಚಿತವಾದ ಆಂಗ್ಲ ಪರಿಸರದ ಕಥೆಯನ್ನು ಭಾರತೀಯ ಪರಿಸರಕ್ಕೆ
ಒಗ್ಗಿಸಿಕೊಳ್ಳುವ ಸವಾಲನ್ನು ಈ ಆರಂಭಕಾಲದ ಅನುವಾದಕರು ಎದುರಿಸಿದರು. ಅವರಿಗೆ
ತಮ್ಮ ರಂಗಭೂಮಿಗೆ ಒಂದು ನಾಟಕವನ್ನು ನೀಡಬೇಕು ಎಂಬ ಉದ್ದೇಶ ಇದ್ದುದರಿಂದ
ಷೇಕ್ಸ್ಪಿಯರ್ ನಾಟಕದಲ್ಲಿಯ ಪದ್ಯಗಳನ್ನು ಪದ್ಯಗಳನ್ನಾಗಿಯೇ ಅನುವಾದಿಸುವುದಕ್ಕೂ
ಅವರು ಹೋಗುವುದಿಲ್ಲ. ಅವರ ಎದುರಿಗೆ ಕನ್ನಡ ಸಾಹಿತ್ಯವನ್ನು ಹಿಗ್ಗಿಸಬೇಕು ಎಂಬ
ಮೂಲ ಉದ್ದೇಶವಿತ್ತು. ಅಂದಿನ ಕಾಲದ ಪತ್ರಿಕೆಗಳಲ್ಲಿ ಅನ್ಯ ಭಾಷೆಯಿಂದ ಕೃತಿಗಳನ್ನು
ಅನುವಾದಿಸಿ ಕನ್ನಡವನ್ನು ಶ್ರೀಮಂತಗೊಳಿಸಲು ಕರೆ ನೀಡಲಾಗುತ್ತಿತ್ತು. ಇವನ್ನೆಲ್ಲ
ಅನುವಾದಿಸಿದವರು ವಿಶ್ವವಿದ್ಯಾಲಯಗಳ ವಿದ್ವಾಂಸರಲ್ಲ. ಹೆಸರು ಪಡೆದ ಕವಿಗಳೂ ಅಲ್ಲ.
ಅಂದಿದ್ದ ಕಂಪನಿ ನಾಟಗಳ ರೀತಿಯಲ್ಲಿ ರಂಗ ಪ್ರವೇಶ, ಸೂತ್ರಧಾರ-ನಟಿ ಪ್ರವೇಶ
ಇತ್ಯಾದಿಗಳನ್ನೂ ಈ ರೂಪಾಂತರಗಳಲ್ಲಿ ಅಳವಡಿಸಲಾಗಿದೆ. ಈ ರೂಪಾಂತರಕಾರರ
ಎದುರಿಗೆ ಸಾಮಾನ್ಯ ಪ್ರೇಕ್ಪಕ ಇದ್ದನು. ಅವನಿಗೆ ಅರ್ಥವಾಗುವ ಹಾಗೆ ಬರೆಯಬೇಕು
ಎಂಬುದು ಅವರ ಉದ್ದೇಶವಾಗಿತ್ತು. ಹಾಗೆ ನೋಡಿದರೆ ಆರಂಭದ ಈ ಅನುವಾದಕರು
ತಮ್ಮ ಕಾರ್ಯದಲ್ಲಿ ಸಫಲರಾದರೆಂದೇ ಹೇಳಬೇಕು.
ನವೋದಯ ಕಾಲದಲ್ಲಿಯೂ ಅನುವಾದವು ರೂಪಾಂತರದಂತೆಯೇ ನಡೆಯಿತು.
ಇಲ್ಲಿ ಮೂಲ ಗದ್ಯಕ್ಕೆ ಗದ್ಯ ಪದ್ಯಕ್ಕೆ ಪದ್ಯವನ್ನು ಮಾಡಿ ಮೂಲಕ್ಕೆ ಹೆಚ್ಚು ನಿಷ್ಠವಾಗಲು
ಯತ್ನಿಸಲಾಯಿತು. ಇದಕ್ಕೆ ಕಾರಣ ಈ ಅನುವಾದಗಳನ್ನು ಕೈಗೆತ್ತಿಕೊಂಡವರು
ಕವಿಗಳಾಗಿದ್ದರು. ಕುವೆಂಪು, ಡಿವಿಜಿ, ಮಾಸ್ತಿ, ಮೂರ್ತಿರಾವ ಇವರೆಲ್ಲ ಇಂಥ ಅನುವಾದ
ಮಾಡಿದ್ದಾರೆ. ನಾಟಕಕ್ಕೆ ಇವರು ಸರಳ ರಗಳೆಯನ್ನು ಬಳಸಿದರು. ಇವರ ದೃಷ್ಟಿಯಲ್ಲಿ
ರಂಗಭೂಮಿ ಇರಲಿಲ್ಲ. ಈ ನಾಟಕಗಳು ರಂಗಭೂಮಿಗೆ ಹೊಂದುವುದಿಲ್ಲ ಎಂಬ
ಅರಿವಿನಿಂದಲೇ ಅವರು ಬರೆಯುತ್ತಾರೆ. ನವೋದಯದ ಅನುವಾದಕರೂ ರಂಗಭೂಮಿಗೆ
ತಕ್ಕುದಾಗಿ ಷೇಕ್ಸ್ಪಿಯರ್ನನ್ನು ನೀಡಲು ಶಕ್ತರಾಗುವುದಿಲ್ಲ. ಷೇಕ್ಸ್ಪಿಯರ್ನ ಭಾಷೆ
ಅವರ ಸರಳ ರಗಳೆ, ಕಂದಗಳಿಗೆ ವಶವಾಗುವುದಿಲ್ಲ. ಆದರೆ ಇದು ನವ್ಯದವರಲ್ಲಿ ಸಿದ್ಧಿಸುತ್ತದೆ.
ನವ್ಯದವರ ಭಾಷೆಯ ರೂಪಕನಿಷ್ಠತೆ, ಧ್ವನಿಪೂರ್ಣತೆ, ನಾಟ್ಯಪೂರ್ಣತೆಗಳು
ಷೇಕ್ಸ್ಪಿಯರ್ನನ್ನು ಸಮರ್ಥವಾಗಿ ಅನುವಾದಿಸುವಲ್ಲಿ ಯಶಸ್ವಿಯಾಗುತ್ತದೆ. ಇದಕ್ಕೆ
ಲಂಕೇಶರ ದೊರೆ ಈಡಿಪಸ್'ನನ್ನು ಉದಾರಹಣೆಯಾಗಿ ನೀಡಬಹುದು. ಎಚ್.ಎಸ್. ಶಿವಪ್ರಕಾಶರ
ಕಿಂಗ್ ಲಿಯರ್’, ರಾಮಚಂದ್ರದೇವರ ಮ್ಯಾಕ್ಬೆಥ್', ಕೆ.ಎಸ್.ನಿಸಾರ್ ಅಹ್ಮದ್ ಅವರ
ಮಿಡ್ ಸಮರ್ ನೈಟ್ ಡ್ರೀಮ್’ ಮೊದಲಾದವುಗಳೂ
ಈ ಸಾಲಿಗೆ ಸೇರುತ್ತವೆ. ಇವುಗಳನ್ನು ರಂಗದ ಮೇಲೆಯೂ ಪ್ರದರ್ಶಿಸ ಬಹುದು. ಮುಕ್ತ
ಛಂದದ ನಾಟಕೀಯವಾದ ಈ ಭಾಷೆ ಕಾವ್ಯದ ಕಾವನ್ನೂ ಉಳಿಸಿಕೊಂಡಿದೆ,
ಆಡುಮಾತಿನಂತಿದ್ದರೂ ಲಯಬದ್ಧವಾಗಿಯೂ ಇದೆ.
ಭಾಷಾಂತರವು ಇಂದು ಪ್ರಬುದ್ಧವಾದ ಮೀಮಾಂಸೆಯಾಗಿ ಬೆಳೆದಿದೆ ನಿಜ. ಅದರ ಈಗಿನ ಸ್ಥಿತಿಗೆ ಆರಂಭದಲ್ಲಿಯ ಇಂಥ ತಪ್ಪು ಹೆಜ್ಜೆಗಳೇ ಕಾರಣ. ನಡೆಯುವ ಮಗು
ಎಡವುತ್ತದೆ. ಎಡವುವ ಮಗುವೇ ಮುಂದೆ ಎವರೆಸ್ಟನ್ನೂ ಏರಬಹುದು, ಚಂದ್ರಲೋಕಕ್ಕೂ
ಹೋಗಬಹುದು. ಒಟ್ಟಾರೆ ಇಂಥ ವಾಗ್ವಾದವೇ ಅತ್ಯುತ್ತಮ ಅನುವಾದ ಕೃತಿಗಳು
ಬರುವುದಕ್ಕೆ ಕಾರಣವಾಗಿದೆ.
ಸಮಾಜಮುಖಿ ಸಾಹಿತ್ಯ:
ನವೋದಯ ಸಾಹಿತ್ಯದ ಅತಿ ಭಾವುಕತೆಗೆ ಪ್ರತಿಕ್ರಿಯೆಯಾಗಿ ಪ್ರಗತಿಶೀಲ ಸಾಹಿತ್ಯ
ಕನ್ನಡದಲ್ಲಿ ಹುಟ್ಟುಪಡೆಯಿತು. ಚಳವಳಿಯ ಮೂಲಕವಾಗಿ ಹುಟ್ಟು ಪಡೆದ ಸಾಹಿತ್ಯ
ಪ್ರಗತಿಶೀಲ ಸಾಹಿತ್ಯ. ಕನ್ನಡದಲ್ಲಿ ನಾಲ್ವತ್ತರ ದಶಕದಲ್ಲಿ ಕಾಣಿಸಿಕೊಂಡ ಪ್ರಗತಿಶೀಲ
ಸಾಹಿತ್ಯ ಮತ್ತು ಚಳವಳಿ ಕೆಲವು ಗಮನಾರ್ಹ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿವೆ.
ಪ್ರಗತಿಶೀಲತೆ ಕೇವಲ ಕನ್ನಡದಲ್ಲಿ ಕಾಣಿಸಿಕೊಂಡ ಚಳವಳಿಯಾಗಿರಲಿಲ್ಲ. ಇಡೀ
ಭಾರತೀಯ ಸಾಹಿತ್ಯದಲ್ಲಿಯೇ ಅದು ಮೂಡಿ ಬಂತು. ರಶಿಯಾದ ಕಮ್ಯುನಿಸ್ಟ್
ಕ್ರಾಂತಿಯ ಬಳಿಕ ಅಲ್ಲಿಯ ಸಾಹಿತ್ಯದಿಂದ ಪ್ರೇರಣೆ ಪಡೆದು ಹುಟ್ಟಿಕೊಂಡ ಸಾಹಿತ್ಯ
ಇದು. ಸಾಹಿತಿಗಳು ತಮ್ಮ ಸುತ್ತಮುತ್ತಲಿನ ಸಮಾಜಕ್ಕೆ ನಿಷ್ಠರಾಗಿರಬೇಕು. ಅಲ್ಲಿಯ ನೋವು
ಕಷ್ಟ ಕೋಟಲೆಗಳಿಗೆ ಅವರ ಸ್ಪಂದಿಸಬೇಕು. ಅದನ್ನು ಬಿಟ್ಟು ಗಿಳಿ ಕೋಗಿಲೆಗಳು, ಇಂದ್ರ,
ಚಂದ್ರರ ಮೇಲೆ ಕಾವ್ಯ ಬರೆಯುವುದು ಸಲ್ಲ ಎಂಬ ಘೋಷಣೆಯೊಂದಿಗೆ ಸಾಹಿತ್ಯ
ಸಾಮಾಜಿಕ ನಿಷ್ಠೆಯನ್ನು ಹೊಂದಿರಬೇಕು ಎಂಬ ಅರಿವಿನೊಂದಿಗೆ ಪ್ರಗತಿಶೀಲ
ಸಾಹಿತಿಗಳು ಕೃತಿಗಳನ್ನು ರಚಿಸುವ ಸಂಕಲ್ಪ ಮಾಡಿದರು.
ಪ್ರಗತಿಶೀಲ ಸಾಹಿತ್ಯ ಭಾರತದಲ್ಲಿ ಹುಟ್ಟಿಕೊಳ್ಳುವ ಸಂದರ್ಭದಲ್ಲಿ ಫ್ಯಾಸಿಸಂ ಮತ್ತು
ಸಾಮ್ರಾಜ್ಯಶಾಹಿ ಶಕ್ತಿಗಳು ಜಗತ್ತಿನಲ್ಲಿ ಪ್ರಭಾವಶಾಲಿಯಾಗಿದ್ದವು. ಭಾರತೀಯ
ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಅವರು ಧ್ವನಿಯೆತ್ತಬೇಕಿತ್ತು.
ಕನ್ನಡದಲ್ಲಿ ಒಟ್ಟಾರೆ ಭಾರತೀಯ ಸಂದರ್ಭದಲ್ಲಿ ಪ್ರಗತಿಶೀಲ ಸಾಹಿತ್ಯ ಹುಟ್ಟುಪಡೆದದ್ದು
೪೦ರ ದಶಕದ ಆರಂಭದಲ್ಲಿ. ಸಾಹಿತ್ಯ ಸಮಾಜದ ಎಲ್ಲ ವರ್ಗದವರ ನೋವು, ನಲಿವು,
ಬದುಕಿನ ರೀತಿ ನೀತಿ ಹಾಗೂ ಸಂಸ್ಕೃತಿಗಳನ್ನು ಒಳಗೊಳ್ಳಬೇಕೆಂಬ ಕಳಕಳಿ ಕನ್ನಡದಲ್ಲಿ
ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಳ್ಳುವ ಪೂರ್ವದಲ್ಲಿಯೇ ಇತ್ತು. ಕನ್ನಡದ ಸಾಹಿತ್ಯ
ಪತ್ರಿಕೆಗಳಲ್ಲಿ ಈ ಬಗೆಗೆ ಕರೆ ನೀಡಿರುವುದನ್ನು ಇಲ್ಲಿ ಗಮನಿಸಬೇಕು.
ಜಯಕರ್ನಾಟಕ'ದ ೧೬ನೆ ಸಂಪುಟದ ೨ನೆ ಸಂಚಿಕೆಯಲ್ಲಿ ಅದರ ಸಂಪಾದಕರಾದ ಬೆಳಗಾವಿ ರಾಮಚಂದ್ರರಾಯರು ಕವಿ- ಸಾಹಿತಿ- ಸಾಹಿತ್ಯ ಮೊದಲಾದವುಗಳ ಬಗೆಗೆ
ಅಂದು -ಇಂದು’ ಲೇಖನದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿರುವರು. ಇಲ್ಲಿ ಪಾಶ್ಚಾತ್ಯ
ಮೀಮಾಂಸೆಯ ಅಭಿಪ್ರಾಯಗಳನ್ನೂ ಪರಿಗಣಿಸಲಾಗಿದೆ. ಒಂದು ಕಾಲಕ್ಕೆ ಕವಿಯು
ಕಲಾಕೋವಿದನು ಪ್ರಪಂಚದ ಪರಿವೆಯಿಲ್ಲದೆ ತನ್ನೊಳಗೆ ತಾನೇ ತನ್ಮಯನಾಗಿ ರಸಾಸ್ವಾದನೆ
ಮಾಡಬಲ್ಲವನಾಗಿದ್ದನು. ಆಗಿನ ಜಗತ್ತು ಅವನ ಭಾವ ಜೀವಕ್ಕೆ ಅನುಕೂಲವಾಗಿತ್ತು. ಕಾವ್ಯ
ಶಿಲ್ಪಾದಿ ಕಲೆಗಳು ಮಾತ್ರವಲ್ಲ, ಧರ್ಮವೂ ಮಾನವನ ಏಕಾಂತಿಕ ಆತ್ಮೋನ್ನತಿಗೆ
ಸಹಾಯಕವಾಗಿತ್ತು ಎನ್ನುವ ಬೆಳಗಾವಿ ರಾಮಚಂದ್ರರಾಯರು, ಈಗ ಅದು ಸಾಧ್ಯವಿಲ್ಲ
ಎನ್ನುವರು. ಇದಕ್ಕೆ ಕಾರಣ ಜೀವನದ ಘರ್ಷಣೆ ಹೆಚ್ಚಿರುವುದು ಎನ್ನುತ್ತಾರೆ ಅವರು.
ಜಗತ್ತು ನಮ್ಮ ಹೊಸ್ತಿಲಿಗೆ ಬಂದು ತಾಕುತ್ತಿದೆ. ವಿಶ್ವವು ಕಿರಿದಾಗಿದೆ. ಅಗಸ್ತ್ಯನು ಸಪ್ತ
ಸಮುದ್ರಗಳನ್ನು ಆಪೋಷಣೆ ಮಾಡಿದ್ದನಂತೆ. ಅಹುದು; ವಿಜ್ಞಾನದ ಮಹಿಮೆಯಿಂದ
ಮಾನವನಿಂದು ಅಭಿನವ ಅಗಸ್ತ್ಯನಾಗಿದ್ದಾನೆ. ಏಳು ಕಡಲುಗಳು ಆತನ ಬೊಗಸೆಯಲ್ಲಿ
ಹಿಡಿಸುತ್ತಿವೆ. ಮಾನವನಿಂದು ಭೂಮಿಯ ಸಾಮ್ರಾಟನು. ಇನ್ನು ವಿಶ್ವದ ವಿರಾಟನಾಗಲು
ಹವಣಿಸುತ್ತಿರುವನು ಎಂದು ಹೇಳುವ ಮೂಲಕ ಅವರು ಮಾನವನ ಅನುಭವ ಕ್ಪಿತಿಜ
ಯಾವ ರೀತಿ ವಿಸ್ತರಿಸುತ್ತಿದೆ ಎಂಬುದನ್ನು ವಿವರಿಸುವರು.
... ಇಂದಿನ ಕವಿಶೇಖರನಾಗಲಿ, ಕಲಾಕೋವಿದನಾಗಲಿ, ಧರ್ಮ ಮಾರ್ತಾಂಡನಾಗಲಿ ಜೀವನದ ನಿಕಟತೆಯನ್ನು ಅಲ್ಲಗಳೆಯಲಾರನು; ಹಾಗೆ ಮಾಡಿದರೆ ಅವನೊಬ್ಬ ಅರೆ ಮರುಳ'', ಎನ್ನುವ ಮಾತುಗಳಲ್ಲಿ ಕವಿಯೊಬ್ಬನ ಸಿದ್ಧತೆಗಳು ಏನಿರಬೇಕು ಎಂಬುದನ್ನು ಅವರು ಹೇಳುವರು. ಸಾಹಿತ್ಯದ ವಸ್ತು ಹಿಂದೆ ಏನಿತ್ತು ಇಂದು ಏನಾಗಿದೆ ಎಂಬುದನ್ನು ರಾಮಚಂದ್ರರಾಯರು ವಿವರಿಸುವುದು ಹೀಗೆ;
ಅಂದಿನವರ ಕಣ್ಣಿನಲ್ಲಿ ಮಾನವನೊಬ್ಬ
ತಪ್ಪುಗಾರ. ಆದುದರಿಂದ ತಪ್ಪೊಪ್ಪುವಿಕೆ, (confessions), ಪ್ರಾಯಶ್ಚಿತ್ತ ವಿಧಾನ, ಆತ್ಮ
ದಂಡನೆಗಳನ್ನು ಅವರು ನಿರ್ಮಿಸಿದ್ದರು. ಇಂದಿನವರ ತಿಳಿವಳಿಕೆಯಂತೆ ಮಾನವನ
ಅಳು-ನಗುಗಳು, ತಪ್ಪು-ಒಪ್ಪುಗಳು, ಒಳಿತು-ಕೆಡಕುಗಳು ಜೀವನ ಸಂಗೀತದ ಸಪ್ತ
ಸ್ವರಗಳು.” ಆಂಗ್ಲ ಕವಿಯ ಉಕ್ತಿಯಂತೆ ದುಃಖದ ಸಾಲೆಯಲ್ಲಿ ನಾವು ಕಲಿಯುವ ಅನುಭವಕ್ಕೆ ದೇವತೆಗಳ ಅನುಭವವೂ ಸಾಟಿಯಾಗಲಾರದು.'' (All your beauty cannot win Truth we learn in pain and sighs-H.D.) ಇಂದಿನ ಕವಿಯು ಅಳು ನಗುವಿನ ಆಳವನ್ನು ತಿಳಿದಿರಬೇಕು; ಇಂದಿನ ಧರ್ಮಜ್ಞನು ತಪ್ಪು ಒಪ್ಪುಗಳ ದಾರಿಯನ್ನು ತುಳಿದಿರಬೇಕು; ಇಂದಿನ ನೀತಿಜ್ಞನು ಒಳಿತು ಕೆಡಕುಗಳ ಕಳಗುಳದಲ್ಲಿ ಇಳಿದಿರಬೇಕು ಎನ್ನುವ ಮಾತನ್ನು ಬೆಳಗಾವಿ ರಾಮಚಂದ್ರ ರಾಯರು ಹೇಳುವರು. ಲೇಖಕನ ಅನುಭವದ ಬುತ್ತಿ ದೊಡ್ಡದಾದಷ್ಟೂ ಸಾಹಿತ್ಯದ ಸತ್ವ ಹೆಚ್ಚುವದೆಂಬ ನಂಬಿಕೆ ಅವರದು. ಅದಕ್ಕಾಗಿಯೇ, `ನೋಟಕರ ಭೂಮಿಕೆಯು ಹಳಮಾತಾಯಿತು. ಕಣಕ್ಕಿಳಿದು ಮೈ ಮಣ್ಣು ಮಾಡಿಕೊಳ್ಳಬೇಕು. ಹಾಗಲ್ಲದೆ ಬಾಳಿನ ಕಾಳಗದ ಕಟ್ಟು ನಿಟ್ಟುಗಳು ತಿಳಿಯವು' ಎನ್ನುವ ಮಾತನ್ನು ಹೇಳುವರು.
ನಿಮ್ಮ ಸಾಧನೆಯು ಬಯಲನ್ನು ಮತ್ತು
ಸಮುದ್ರ ತಡಿಗಳನ್ನು ಎದುರಿಸಬಲ್ಲವೆ?” (Can your performance face the open fields
and the sea-side) ಎಂಬ ವಾಲ್ಟ್ ವ್ಹಿಟ್ಮನ್ನನ ಮಾತುಗಳನ್ನು ಸ್ಮರಿಸುವರು. ಜೀವನ
ಸಂಘರ್ಷಣೆಯಿಂದ ಹುಟ್ಟುವ ಸಾಹಿತ್ಯ- ಸಂಸ್ಕೃತಿ- ಕಲೆಗಳಿಗೆ ನಿಕಟಾನುಭವದ
ಮುದ್ರೆಯಿರುವುದು. ನೇಗಿಲು ಹೊಡೆಯುವವ, ಉಳಿ ಹಿಡಿಯುವವ, ತಿದಿಯೂದುವವ,
ತಿಗರಿ ತಿರುಗಿಸುವವ ಕವಿಯಾಗಬೇಕು. ಸೆರೆಯಾಳು- ಅರಾಜಕವಾದಿ- ನಗ್ನ
ಸಂಪ್ರದಾಯಿ- ಗಿರಣಿ ಕೆಲಸಗಾರ- ಕಾದಾಳು ಹಾಡುಗಾರನಾಗಬೇಕು ಎಂಬ
ರಾಮಚಂದ್ರರಾಯರ ಕಳಕಳಿ ತಮ್ಮ ಕಾಲಕ್ಕಿಂತ ಸ್ವಲ್ಪ ಮುಂದಾಗಿಯೇ ಯೋಚಿಸಿದಂತೆ
ತೋರುತ್ತದೆ. ಅವರ ಈ ಮಾತುಗಳು ಬಂಡಾಯ-ದಲಿತ ಚಿಂತಕನೊಬ್ಬ ಆಡುತ್ತಿರುವಂತೆ ಭಾಸವಾಗುತ್ತಿದೆ.
ತಳಮಟ್ಟದವರು ಕವಿಯಾಗುವುದು ಯಾವಾಗ? ಹಾಗಾಗಬೇಕಾದರೆ ಸಂಸ್ಕೃತಿಯು
ನೇಗಿಲು -ಉಳಿ- ತಿದಿ- ತಿಗರಿ ಹಿಡಿಯುವವರ ಮಟ್ಟಕ್ಕೆ ಮುಟ್ಟಬೇಕು. ಜ್ಞಾನ ಗಂಗೆಯು
ಅಲ್ಲಿಯವರೆಗೂ ಮುಟ್ಟಬೇಕು. ಆಗ ಜೀವನದ ನಿಜವಾದ ಸೊಲ್ಲು ಕೇಳಿಸುವುದು. ಓಲಗದ
ಲಲ್ಲೆವಾತು, ಕನ್ನಡವಕ್ಕಿಯ ಕಲಿಕೆವಾತು ಅಲ್ಲಿರಲಾರದು. ಬಂಟನ ಬಿರುನುಡಿ, ಪತಿತನ
ಕಹಿನುಡಿ, ಪ್ರಯತ್ನವಾದಿಯ ಹರಳು ನುಡಿ ಆಗ ಮಿಡಿಯುವುದು ಎಂದು ಹೇಳುವ
ಮೂಲಕ ಅವರು ಜೀವಂತ ಭಾಷೆಯ ಬಳಕೆ ಸಾಹಿತ್ಯಕ್ಕೆ ಅಗತ್ಯ ಎನ್ನುವರು.
ಬಾಳುವೆಯ ಸಾಣೆ ಕಲ್ಲಿಗೆ ನಮ್ಮ ಕಿರುಜೀವನವನ್ನೊಡ್ಡಬೇಕು, ಮೈ ತರಿಯಬೇಕು;
ನೆತ್ತರು ಹರಿಯಬೇಕು, ಆಗ ಆ ನುಡಿಯ ಕಿಡಿ ಹಾರುವುದು. ಅದುವೇ ಸಾಹಿತ್ಯದ ಜೀವ
ಜೀವಾಳ; ಸಂಸ್ಕೃತಿಯ ಸಾರ ಸರ್ವಸ್ವ ಎನ್ನುವ ಮೂಲಕ ಸಾಹಿತ್ಯದ ವ್ಯಾಖ್ಯೆಯನ್ನು
ಸುದೀರ್ಘ ಪ್ರಸ್ತಾವನೆಯೊಂದಿಗೆ ನೀಡುವರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಈ ಲೇಖನಕ್ಕೆ ಚಾರಿತ್ರಿಕ ಮಹತ್ವವಿದೆ. ಸಾಹಿತ್ಯ
ವಾಹಿನಿಗೆ ಹೊಸ ದಿಕ್ಕನ್ನು ತೋರಬೇಕೆಂಬ ಬಯಕೆ ಎದ್ದು ಕಾಣುತ್ತಿದೆ. ರೋಮ್ಯಾಂಟಿಕ್
ಕಾವ್ಯ ತನ್ನ ಉತ್ತುಂಗದಲ್ಲಿದ್ದಾಗ, ಅದು ಜೀವನ ವಿಮುಖವಾಗಿದೆ ಎಂಬ ಭಾವನೆ
ಮೂಡುತ್ತಿದ್ದಾಗ ಸಾಹಿತ್ಯ ಹೇಗಿರಬೇಕು ಎಂಬ ಈ ಆಲೋಚನೆ ಆ ಕಾಲಕ್ಕೆ ಅತ್ಯಂತ
ನವೀನವಾದದ್ದು. ಇದು ಪ್ರಕಟವಾದ ವರ್ಷ ೧೯೩೮. ಪ್ರಗತಿಪಂಥ ಹುಟ್ಟಿಕೊಂಡದ್ದು, ಪ್ರಗತಿಶೀಲ ಲೇಖಕರ ಸಮ್ಮೇಳನ ಜರುಗಿದ್ದು ಇವೆಲ್ಲ ಆ ನಂತರದ ಬೆಳವಣಿಗೆ.
ಪ್ರಗತಿಶೀಲ ಚಳವಳಿ ಹುಟ್ಟಿಕೊಳ್ಳುವ ಪೂರ್ವದಲ್ಲಿಯೇ ಕನ್ನಡದಲ್ಲಿ ಪ್ರಗತಿಶೀಲ
ಧೋರಣೆಯ ಸಾಹಿತ್ಯ ಸೃಷ್ಟಿಯಾಗಿತ್ತು. ಆನಂದಕಂದರ ಮಾಲ್ಕಿ ಹಕ್ಕು', ಕೊರಡ್ಕಲ್ ಶ್ರೀನಿವಾಸರಾಯರ
ಧನಿಯರ ಸತ್ಯನಾರಾಯಣ’, ಭಾರತಿಸುತ ಅವರ ಮೋಚಿ' ಇಂಥ ಕಥೆಗಳಾಗಿವೆ.
ಧನಿಯರ ಸತ್ಯನಾರಾಯಣ’ ರಚನೆಯಾದ ವರ್ಷ ತಿಳಿಯದಾದರೂ ಅದು
ಮೊದಲು ಸಂಕಲನದಲ್ಲಿ ಸೇರಿದ್ದು ೧೯೩೮ರಲ್ಲಿ. ಅದಕ್ಕೂ ಪೂರ್ವದಲ್ಲಿಯೇ ಅದನ್ನು
ಬರೆದಿರುವ ಸಾಧ್ಯತೆ ಇದೆ. ಸಾಮಾಜಿಕ ಅನ್ಯಾಯವೊಂದರ ಹೃದಯ ಕಲಕುವ ಚಿತ್ರಣ
ಅದರಲ್ಲಿದೆ. ಪ್ರಗತಿಶೀಲ ಕಥೆಗಳಲ್ಲಿ ಇರುವಹಾಗೆಯೇ ಶ್ರೀಮಂತಿಕೆಯ ಹೃದಯಹೀನತೆ
ಮತ್ತು ಬಡತನದ ಮುಗ್ಧತೆ ಇವುಗಳ ನಡುವಿನ ಅಂತರವನ್ನು ಮನಮುಟ್ಟುವಹಾಗೆ ಇದರಲ್ಲಿ
ಚಿತ್ರಿಸಲಾಗಿದೆ. ಈ ಚಿತ್ರಣದಲ್ಲಿ ಸೂಕ್ಪ್ಮತೆ ಇದೆ. ಕಲಾತ್ಮಕತೆ ಇದೆ.
ಅನ್ಯಾಯಕ್ಕೊಳಗಾಗುವವರು ಇಲ್ಲಿ ಚಿಕ್ಕ ಮಕ್ಕಳು. ಈ ಕಾರಣಕ್ಕಾಗಿಯೇ ಇಲ್ಲಿ ಅವರ
ರೋಷ ಉತ್ಕಟ ಸ್ಥಿತಿಯಲ್ಲಿ ಪ್ರಕಟವಾಗಲು ಸಾಧ್ಯವಾಗಿದೆ. ಎಲ್ಲಿಂದಲೋ ಬಾಳೆಯ
ಗಿಡವನ್ನು ತಂದು ನೆಟ್ಟು ನೀರೆರೆದು ಅದು ಎಲೆಬಿಟ್ಟು ಪಲ್ಲವಿಸಿ ಗೊನೆಯನ್ನೂ ಬಿಟ್ಟಾಗ
ಬಾಲಕರ ಮುಗ್ಧತೆಗೆ ಅನುಗುಣವಾಗಿ ಅವರು ಸಂತೋಷವನ್ನು ಅನುಭವಿಸುತ್ತಾರೆ. ಬಾಳೆ
ಗೊನೆ ಹಣ್ಣೂ ಆಗುತ್ತದೆ. ಆಗ ನೆಲದ ಮಾಲಿಕ ಬಂದು ಅದನ್ನು ಹಕ್ಕಿನಿಂದ ಬೇಡುತ್ತಾನೆ.
ಸಮಾಜದಲ್ಲಿದ್ದ ಒಡೆಯ ಒಕ್ಕಲುವಿನ ವಿಷಮ ಸಂಬಂಧವನ್ನು ಇದು ಸಂಕೇತಿಸುತ್ತದೆ. ತಾವು
ನೆಟ್ಟು ಬೆಳೆಸಿದ್ದು ತಮಗೇ ಎಂಬ ಮುಗ್ಧತೆಯಲ್ಲಿದ್ದ ಮಕ್ಕಳಿಗೆ ವಾಸ್ತವ ಹಠಾತ್ತನೆ ಎದುರಾದಾಗ
ಅದು ರೋಷವಾಗುತ್ತದೆ. ಮಕ್ಕಳ ಮುಗ್ಧತೆಗೆ ವಾಸ್ತವದ ಅರಿವಿಲ್ಲ. ಆದರೆ ಅವರ ಹೆತ್ತವರಿಗೆ
ಅದರ ಅರಿವಿದೆ. ಆದರೆ ಅಸಹಾಯಕತೆ. ತನ್ನ ನೆಲದಲ್ಲಿ ಬೆಳೆದುದೆಲ್ಲ ತನ್ನದೇ ಎಂದು
ಭಾವಿಸುವ ಧನಿಯರ ಹಕ್ಕು ಪ್ರತಿಪಾದನೆ ಅಂದಿನ ವ್ಯವಸ್ಥೆಗೆ ಅನುಗುಣವಾಗಿಯೇ ಇದೆ.
ಈ ವ್ಯವಸ್ಥೆಯ ವಿರುದ್ಧ ಮಕ್ಕಳು ಸಿಡಿದೇಳುವುದು ಅತ್ಯಂತ ಕಲಾತ್ಮಕ ಅಂತ್ಯ. ಮಕ್ಕಳಲ್ಲಿ
ತಾರತಮ್ಯ ಜ್ಞಾನ ಇರುವುದಿಲ್ಲ, ಮಕ್ಕಳು ದೇವರ ಸಮಾನ, ಮಕ್ಕಳ ಮನಸ್ಸು ಬಿಳಿಯ
ಹಾಳೆ ಇದ್ದಹಾಗೆ ಎಂಬೆಲ್ಲ ನಂಬಿಕೆಗಳ ಹಿನ್ನೆಲೆಯಲ್ಲಿ ಅವರು ತೋರುವ ಪ್ರತಿಭಟನೆ
ನ್ಯಾಯವಾದುದೇ ಎಂಬ ನಿರ್ಧಾರಕ್ಕೆ ಓದುಗ ತಲುಪುವಂತಾಗುತ್ತದೆ. ಒಟ್ಟಾರೆ ಇದೊಂದು
ಪ್ರಗತಿಶೀಲ ಕಥೆಗೆ ಉತ್ತಮ ಉದಾಹರಣೆಯಾಗಿದೆ.
ಭಾರತೀಪ್ರಿಯರ (ದಿ.ಎಸ್.ವೆಂಕಟರಾವ್) ಮೋಚಿ' ಪ್ರಕಟವಾದದ್ದು ೧೯೩೨ರಲ್ಲಿ. ಕಥೆಯ ಆರಂಭ ಆಕರ್ಷಕವಾಗಿದೆ. ಸಂಭಾಷಣೆಗಳಲ್ಲಿಯೇ ಕಥೆಯನ್ನು ವಿಸ್ತರಿಸಲಾಗಿದೆ. ಕಥೆಯಲ್ಲಿ ದಟ್ಟವಾದ ವಿಷಾದದ ಧ್ವನಿ ಇದೆ. ಸಮಾಜದ ಕೆಳಸ್ತರದಲ್ಲಿದ್ದ ಮೋಚಿಯಂಥ ವ್ಯಕ್ತಿಯನ್ನು ಕಥೆಗೆ ಬಳಸಿಕೊಂಡದ್ದು ಮತ್ತು ಆತನಲ್ಲಿಯೂ ಪ್ರಾಮಾಣಿಕತೆ ಇದೆ ಎಂಬುದನ್ನು ಸಹಾನುಭೂತಿಯಿಂದ ಚಿತ್ರಿಸಿದ್ದು, ಅವನ ಸ್ವಾಭಿಮಾನವನ್ನು ಎತ್ತಿ ಹಿಡಿದದ್ದು ಪ್ರಗತಿಶೀಲತೆಯ ದ್ಯೋತಕವಾಗಿದೆ. ಕೇವಲ ವೈಯಕ್ತಿಕ ಸಹಾನುಭೂತಿ, ಸಹಾಯಗಳ ನೆಲೆಯಲ್ಲಿ ಬಡತನದಂಥ ಸಾಮಾಜಿಕ ಸಮಸ್ಯೆಯನ್ನು ಪರಿಹರಿಸುವುದು ಸಾಧ್ಯವಿಲ್ಲ, ಅದು ವ್ಯಕ್ತಿಗಳ ಸ್ವಾಭಿಮಾನವನ್ನು ತಾಕುವುದರಿಂದ ಸರಿಯಾದ ಪರಿಹಾರವೂ ಅಲ್ಲ ಎಂಬ ಸಂದೇಶವನ್ನು ಕಥೆ ನೀಡುತ್ತದೆ. ಕಥೆಯಲ್ಲಿಯ ನಿರೂಪಕನಿಗೆ ಅದು ಅರ್ಥವಾಗುತ್ತದೆ. ಸದ್ಯದ ವ್ಯವಸ್ಥೆಯಲ್ಲಿ ಹೆಚ್ಚಿನದೇನನ್ನೂ ಮಾಡುವುದು ತನಗೆ ಸಾಧ್ಯವಿಲ್ಲವಲ್ಲ ಎಂಬ ನಿರೂಪಕನ ವಿಷಾದದಲ್ಲಿ ಕಥೆ ಮುಗಿಯುತ್ತದೆ. ಬಡತನದಂಥ ಸಾಮಾಜಿಕ ಸಮಸ್ಯೆಯನ್ನು ಸಾಮಾಜಿಕ ನೆಲೆಯಲ್ಲಿಯೇ ನಿವಾರಿಸಬೇಕು ಎಂಬ ಸಂದೇಶವನ್ನು ಕಥೆ ನೀಡುತ್ತದೆ. ಇದೊಂದು ಪ್ರಗತಿಶೀಲ ಧೋರಣೆಯೇ ಸರಿ. ವಿಚಿತ್ರದ ಸಂಗತಿಯೆಂದರೆ ಪ್ರಗತಿಶೀಲ ಚಳವಳಿ ಹುಟ್ಟಿಕೊಂಡಮೇಲೆ, ಆ ಚಳವಳಿಯ ಮುಂಚೂಣಿಯಲ್ಲಿದ್ದವರು ಬರೆದ ಕಥೆಗಳು ಈ ಮಟ್ಟಕ್ಕೆ ಏರಲಿಲ್ಲ ಎನ್ನುವುದು. ಧ್ವನಿಪೂರ್ಣವಾಗಿ ಸಮಸ್ಯೆಯ ಸೂಕ್ಷ್ಮಗಳನ್ನು ಹಿಡಿದಿಡಬಲ್ಲ ಸಂಕೀರ್ಣ ಕಥೆಗಳು ಪ್ರಗತಿಶೀಲರ ಕಾಲದಲ್ಲಿ ಬರಲಿಲ್ಲ. ಉದಾಹರಣೆಗೆ ಅನಕೃ ಅವರ
ಅನ್ನದ
ಕೂಗು’ ಕಥೆಯ ವಸ್ತು ಮೋಚಿ' ಕಥೆಯ ವಸ್ತುವನ್ನೇ ಹೊಂದಿದೆ. ಪರಿಸರ ಬೇರೆಯಾಗಿದ್ದರೂ ಎರಡರ ಆಶಯವೂ ಒಂದೇ; ಬಡತನ ಮತ್ತು ಅದನ್ನು ನಿವಾರಿಸಲು ವೈಯಕ್ತಿಕ ನೆಲೆಯಲ್ಲಿ ನಡೆದ ಪ್ರಯತ್ನ.
ಮೋಚಿ’ಯಲ್ಲಿ ಕೇವಲ ವೈಯಕ್ತಿಕ ನೆಲೆಯಲ್ಲಿ
ಈ ಸಾಮಾಜಿಕ ಸಮಸ್ಯೆಗೆ ಉತ್ತರವಿಲ್ಲವೆಂದು ವಿಷಾದಿಸಿ, ಪರ್ಯಾಯವಾಗಿಯಾದರೂ
ಬೇರೆ ಬಗೆಯ ಪರಿಹಾರದ ಅವಶ್ಯಕತೆ ಸೂಚಿಸುತ್ತದೆ. ಅನ್ನದ ಕೂಗು'ದಲ್ಲಿ ಇಂಥ ಯಾವುದೇ ಸೂಚನೆಯಿಲ್ಲ. ಬದಲಾಗಿ ವೈಯಕ್ತಿಕ ನೆಲೆಯ ಪರಿಹಾರವನ್ನೇ ಉತ್ಸಾಹದಿಂದ ವೈಭವೀಕರಿಸುತ್ತದೆ. ಇದು ಪ್ರಗತಿಶೀಲ ಧೋರಣೆಗೆ ವಿರುದ್ಧ ಎನಿಸದೆ ಇರದು. ವಿಚಾರಶೀಲತೆಗಿಂತ ಉದ್ವೇಗವೇ ಇಲ್ಲಿ ಹೆಚ್ಚು. ಭಾವುಕತೆ ಅಧಿಕ. ಒಟ್ಟಾರೆ ತಾತ್ವಿಕ ತಳಹದಿಯೇ ದುರ್ಬಲವಾದದ್ದು. ಪ್ರಗತಿಶೀಲ ಚಳವಳಿಗೂ ಪೂರ್ವದಲ್ಲಿಯ ಇಂಥ ಪ್ರಗತಿಶೀಲ ಸಾಹಿತ್ಯ ಸೃಷ್ಟಿಗೆ
ಜಯಕರ್ನಾಟಕ’ದಲ್ಲಿಯ ಬೆಳಗಾವಿ ರಾಮಚಂದ್ರರಾಯರ ಲೇಖನ ಸ್ಫೂರ್ತಿ
ನೀಡಿರಬಹುದು.
ಜಯಂತಿ'ಯಲ್ಲಿ ಪ್ರಗತಿಶೀಲ ಸಾಹಿತ್ಯದ ವಿಡಂಬನೆ ಬಂದಿದ್ದರೂ ಬೆಟಗೇರಿ ಕೃಷ್ಣ ಶರ್ಮರು ಪ್ರಗತಿಶೀಲ ಚಿಂತನೆಯಿಂದ ದೂರಾದವರು ಆಗಿರಲಿಲ್ಲ. ``ಕತ್ತಲೆ ಮುಸುಕಿದ ಜೀವನದಲ್ಲಿ ಆಶೆಗಳ ದೀಪಮಾಲೆಯನ್ನು ಹಚ್ಚಿ ಅವುಗಳ ಬೆಳಕನ್ನು ಅನುಭವಿಸಬೇಕೆನ್ನುವ, ಬದುಕಬೇಕೆಂಬ ಬಯಕೆ ಹೆಚ್ಚಿಸಬಹುದಾದ ದೀಪಾವಳಿ ಇಂದು ಎಲ್ಲಿದೆ? ಸುಜಲಾ.. ಸುಫಲಾ. .. ಆದ ಭಾರತ ಮಾತೆಯ ಮಕ್ಕಳಿಂದು ಕೂಳಿಲ್ಲದೆ ಸಾವಿರ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ.. .. ಹಸಿವೆಯ ವ್ಯಸನದಿಂದ ಹಾಸಿಗೆ ಹಿಡಿದಿರುವ ಮಕ್ಕಳು ಹಾರಾಡುವ ಆಕಾಶದೀಪದಲ್ಲಿ ಯಾವ ಸೊಗಸನ್ನು ಕಂಡಾರು?''೭೨ ಎನ್ನುವ ಶರ್ಮ ಯಾವ ಪ್ರಗತಿಶೀಲ ಸಾಹಿತಿಯ ಚಿಂತನೆಗಿಂತ ಕಡಿಮೆಯಾಗಿ ಚಿಂತಿಸಿದವರಲ್ಲ. ನವ್ಯ ಸಾಹಿತ್ಯದ ಹಿಂದಿನ ಹಳಹಳಿಕೆಯೂ ಅವರಲ್ಲಿ ಕಂಡು ಬಂದಿದೆ. ``ಭಾರತಕ್ಕೆ ಸ್ವಾತಂತ್ಯ್ರ ಬಂದಿದೆ ನಿಜ. ಆದರೆ ಸ್ವಾತಂತ್ಯ್ರಸಿದ್ಧಿಯ ಮುಖ್ಯೋದ್ದೇಶವಾದ ಸಮೃದ್ಧಿ ಜೀವನ ನಮ್ಮಲ್ಲಿ ಬಂದಿದೆಯೇ? ನಾವು ನಡೆಯುತ್ತಿರುವ ದಾರಿ ಪ್ರಗತಿದಾಯಕವಾಗಿ ಕಾಣುತ್ತಿದೆಯೆ?''೭೩ ಎಂಬಲ್ಲಿ ಸ್ವಾತಂತ್ರ್ಯಾನಂತರದ ನಿರಾಶೆ ಕಂಡುಬಂದಿದೆ. ಜೊತೆಯಲ್ಲಿ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಮನುಷ್ಯನ ಜೀವನ ಸಮೃದ್ಧತೆಯ ಕಲ್ಪನೆ, ಉದ್ದೇಶ ಇರಬೇಕೆನ್ನುವ ಆದರ್ಶವನ್ನೂ ನಿರೂಪಿಸುತ್ತಾರೆ. ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ವಾದಗಳು ಸಾಹಿತ್ಯದಲ್ಲಿ ಸಾಮಾಜಿಕ ರಾಜಕೀಯ ಪ್ರಜ್ಞೆಯ ಅಭಿವ್ಯಕ್ತಿಯ ಬಗೆಗೆ ಪ್ರತಿರೋಧವನ್ನು ಒಡ್ಡುತ್ತಲೇ ಬಂದಿವೆ. ಕಾವ್ಯವೆಂದರೆ ಎಲ್ಲ ಗೊಂದಲ-ಗದ್ದಲದ ನಡುವೆಯೂ ಏಕಾಂತವನ್ನು ಹುಡುಕಿಕೊಂಡು ಹೋಗುವ ವಿಶೇಷ ವಸ್ತು, ಏನೆಲ್ಲ ಸಾಮಾಜಿಕ ಏರುಪೇರುಗಳ ನಡುವೆಯೂ ವ್ಯಕ್ತಿಯ ಅಂತರಂಗದ ಸೂಕ್ಪ್ಮ ವ್ಯಾಪಾರ- ಎನ್ನುವ ಭಾವನೆಯನ್ನು ಈ ವಾದಗಳು ನೀರೆರೆದು ಬೆಳೆಸಿವೆ. ಸಾಮಾಜಿಕ ಗೊಂದಲಗಳೇ ಬೇರೆ, ಕವಿಯ ಅಂತರಂಗವೇ ಬೇರೆ ಎಂಬ ಕಲ್ಪನೆ ಈ ವಾದಗಳ ಹಿಂದಿವೆ. ಸಾಮಾಜಿಕ ಸಮಸ್ಯೆಯನ್ನು ಸಾಹಿತ್ಯ ಕೃತಿ ಪ್ರತಿಪಾದಿಸಿದರೆ ಅದು ಸಾಹಿತ್ಯವಾಗಿಯೂ ಯಶಸ್ವಿಯಾಗುವುದಿಲ್ಲ, ಸಮಾಜ ವಿಮರ್ಶೆಯಾಗಿಯೂ ಪರಿಣಾಮ ಬೀರುವುದಿಲ್ಲ ಎಂಬ ತರ್ಕ ಇಲ್ಲಿಯದು. ಸಾಹಿತ್ಯದ ಸಾಮಾಜಿಕ ಬದ್ಧತೆಯನ್ನು ಒತ್ತಿ ಹೇಳುವುದು ಎಡಪಂಥೀಯ ಧೋರಣೆಯಾಗಿದೆ. ಇದನ್ನು ನಾವು ಪ್ರಗತಿಶೀಲ ಸಾಹಿತ್ಯದಲ್ಲಿ ಗುರುತಿಸಬಹುದು. ಸಾಮಾಜಿಕ ಸಮಸ್ಯೆಯನ್ನು ಕೈಗೆತ್ತಿಕೊಂಡು ಬರೆದ ಬಹುತೇಕ ಸಾಹಿತ್ಯ ಕೇವಲ ಪ್ರಚಾರದ ಸರಕಾಗಿ ಬಿಡುವ ಅಪಾಯ ಇಲ್ಲದೆ ಇಲ್ಲ. ಅದನ್ನೇ ಶ್ರೇಷ್ಠ ಸಾಹಿತ್ಯ ಎಂದು ಭ್ರಮಿಸುವ ಅಪಾಯವೂ ಇದೆ. ಅನಕೃ ಮೊದಲಾದವರ ಕೃತಿಯಲ್ಲಿ ಈ ಅಪಾಯವನ್ನು ಗುರುತಿಸಬಹುದು. ನಿರಂಜನ, ಕಟ್ಟಿಮನಿ ಒಂದು ಕಡೆ, ಅನಕೃ ನೇತೃತ್ವದ ಗುಂಪು ಇನ್ನೊಂದು ಕಡೆ ಆಗುವುದಕ್ಕೆ ಇದೇ ಕಾರಣ. ಪ್ರಗತಿಶೀಲರ ಕಾಲದಲ್ಲಿ ಸಾಹಿತ್ಯದಲ್ಲಿ ಎಡಪಂಥೀಯ ಧೋರಣೆಗಳಿಗೆ ಪ್ರಾಮುಖ್ಯ ಸಿಗತೊಡಗಿದವು. ಸಾಹಿತ್ಯ ಸಾಮಾಜಿಕ, ರಾಜಕೀಯ ಬದ್ಧತೆಯನ್ನು ಹೊಂದಿರಬೇಕೆಂಬ ಮಾತು ಕೇಳಿ ಬಂತು. ಸಾಹಿತ್ಯ ಸಾಮಾಜಿಕ ಬದಲಾವಣೆಯ ವಾಹಕವಾಗಬೇಕು, ಶೋಷಿತರ ಪರವಾಗಿ ನಿಲ್ಲಬೇಕು, ಕ್ರಾಂತಿಯ ಹರಿಕಾರನಾಗಬೇಕು, ಸ್ಪಷ್ಟವಾಗಿ ಪ್ರಗತಿಯ ಪಕ್ಷಪಾತಿಯಾಗಬೇಕು ಎಂಬ ಕೂಗೆದ್ದಿತು. ಸಾಹಿತ್ಯ ಸಮಕಾಲೀನ ರಾಜಕೀಯವನ್ನು ಧಾರಣ ಮಾಡುವುದು ಹೇಗೆ? ಸಾಹಿತ್ಯ ಕೃತಿಯೊಂದರಲ್ಲಿ ಇದು ಹೇಗೆ ಆಕಾರ ಪಡೆಯುತ್ತದೆ? ಈ ರಾಜಕೀಯವೆನ್ನುವುದು ಕೃತಿಯೊಳಗೆ ಚಿತ್ರಿತವಾದ ರಾಜಕೀಯ ಘಟನೆ, ರಾಜಕೀಯ ವ್ಯಕ್ತಿಗಳ ಪ್ರಶ್ನೆಯಷ್ಟೇ ಅಲ್ಲ; ಲೇಖಕನ ನಿಜ ಜೀವನದ ರಾಜಕೀಯ ಬದ್ಧತೆಯೂ ಅಲ್ಲ; ಅಥವಾ ಕೃತಿಯೊಳಗಿನ ಘೋಷಣೆ ರೂಪದ ವಾಕ್ಯಗಳೂ ಅಲ್ಲ. ಕೃತಿಯ ವಸ್ತು ರಾಜಕೀಯ ಸಂಗತಿ ಆಗಿದ್ದ ಮಾತ್ರಕ್ಕೇ ಕೃತಿಗೆ ರಾಜಕೀಯ ಆಯಾಮ ದೊರೆಯಲಾರದು. ನಮ್ಮ ಮನೆ, ಕುಟುಂಬ, ಪ್ರೀತಿ, ಅಭಿವ್ಯಕ್ತಿ ಸ್ವಾತಂತ್ಯ್ರ, ನಮ್ಮ ಜೀವಿಸುವ ಹಕ್ಕು, ನಮ್ಮ ಉದ್ಯೋಗ, ನಮ್ಮ ಆಸೆ, ಕನಸು, ಭಯಗಳೂ ಸಾಮಾಜಿಕ ಆಯಾಮವನ್ನು ಹೊಂದಿವೆ. ಈ ಕಾರಣಕ್ಕಾಗಿಯೇ ಅವು ರಾಜಕೀಯ ಶಕ್ತಿಯಾಗಿಯೂ ರೂಪುಪಡೆಯುತ್ತವೆ. ಈ ಸೂಕ್ಷ್ಮಗಳನ್ನು ಸಾಹಿತಿಗಳು ಅರಿಯಬೇಕು. ಈ ಅರಿವಿನೊಂದಿಗೆ ಬರೆದಾಗ ರಾಜಕೀಯ ಅರ್ಥವಂತಿಕೆಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಪ್ರಗತಿಶೀಲ ಸಾಹಿತ್ಯ ಕನ್ನಡದಲ್ಲಿ ಹುಟ್ಟಿಕೊಳ್ಳುವ ಹೊತ್ತಿಗೆ ದೇಶಕ್ಕೆ ಸ್ವಾತಂತ್ಯ್ರ ದೊರೆಯುವ ಸೂಚನೆಗಳು ಸ್ಪಷ್ಟವಾಗಿದ್ದವು. ಹೀಗಾಗಿ ಸ್ವಾತಂತ್ಯ್ರದ ಬಗೆಗಿನ ತುಡಿತದ ಜೊತೆಗೆ ಅಸಮಾನತೆಯನ್ನು ತೊಡೆದು ಹಾಕುವ, ವ್ಯವಸ್ಥೆಯನ್ನು ಬದಲಿಸುವ, ವರ್ಗರಹಿತ ಸಮಾಜವನ್ನು ನಿರ್ಮಿಸ ಬೇಕೆಂಬ ಆಶಯಗಳು ಪ್ರಾಮುಖ್ಯತೆ ಪಡೆಯುತ್ತವೆ. ನವೋದಯ ಸಾಹಿತ್ಯ ಆರಂಭವಾದಾಗ ಲೇಖಕರು ದೇಶದ ಇತಿಹಾಸ, ಸಂಸ್ಕೃತಿಗಳ ಬಗೆಗೆ ಹೊಸ ಅಭಿಮಾನವನ್ನು ಪ್ರಕಟಿಸಿದರು. ಉದಾರತೆ, ಮಾನವತಾವಾದ ಲೇಖಕರ ಮುಖ್ಯ ಜೀವನದೃಷ್ಟಿಯಾಗಿತ್ತು. ಮನುಷ್ಯ ಚೇತನ ಮೂಲಭೂತವಾಗಿ ಉದಾತ್ತವಾದದ್ದು ಎಂಬ ರಮ್ಯ ಕಲ್ಪನೆ ಸಾಮಾನ್ಯರ ಬದುಕಿನತ್ತ ಗಮನ ಸೆಳೆಯುವಂತೆ ಮಾಡಿತು. ಸಮಾಜದ ಕೆಳವರ್ಗದ ಜನರ ಸುಖಸಂತೋಷಗಳು ಚಿತ್ರಿತವಾಗಿರುವ ಕೃತಿಗಳಲ್ಲಿ ಮನುಷ್ಯನ ಆಂತರಿಕ ಘನವಂತಿಕೆ, ಸಹನಶಕ್ತಿ, ವೀರಗಳು ಸಾಮಾನ್ಯರ ಬದುಕಿನಲ್ಲೂ ಇರಲು ಸಾಧ್ಯವೆಂಬುದನ್ನು ತೋರಿಸಲಾಗಿದೆ. ಆದರೆ ಪ್ರಗತಿಶೀಲ ಲೇಖಕರು ಸುಧಾರಣಾವಾದಿ ಮನೋಭಾವದವರಾಗಿದ್ದರು. ಭಾರತೀಯ ಸಮಾಜದ ಎಷ್ಟೋ ಮೌಲ್ಯಗಳು ಇಂದಿನ ಬದುಕಿಗೆ ಸಂಗತವಾಗಿಲ್ಲವೆಂಬುದನ್ನು ಅರ್ಥಮಾಡಿಕೊಂಡರು. ಹಳೆಯ ಮೌಲ್ಯಗಳ ಬಗೆಗೆ ಅವರು ಸಂದೇಹ ವ್ಯಕ್ತಪಡಿಸಿದರು. ಮಾಸ್ತಿಯಂಥವರ ಬಗೆಗೇ ಪ್ರಗತಿಶೀಲ ಲೇಖಕರಿಗೆ ಅಸಮಾಧಾನವಿತ್ತು. ಮಾಸ್ತಿಯಂಥವರು ನಮ್ಮ ಸಂಸ್ಕೃತಿಯ ವಿಸಂಗತಿಗಳನ್ನು ಗುರುತಿಸುತ್ತಾರಾದರೂ ಈ ವಿಸಂಗತಿಗಳ ನಡುವೆಯೂ ತಮ್ಮ ವೈಯಕ್ತಿಕ ಘನವಂತಿಕೆಯಿಂದ ಪಾರಾಗಿ ಬರುವಂಥ ಪಾತ್ರಗಳನ್ನು ವೈಭವೀಕರಿಸಿದ್ದಾರೆ. ಇಂಥ ವಿಸಂಗತಿಗಳಿಂದಾಗಿ ಅನ್ಯಾಯವಾಗಿ ದುಃಖಕ್ಕೀಡಾಗುವ ಪಾತ್ರಗಳ ಬಗೆಗೆ ಅವರಿಗೆ ಎಷ್ಟೇ ಸಹಾನುಭೂತಿ ಇದ್ದರೂ ಸಮಸ್ಯೆಗಳ ಮೂಲಗಳನ್ನೇ ಅರಸಿಕೊಂಡು ಹೋಗಿ ಅವುಗಳನ್ನು ಪ್ರಶ್ನಿಸುವುದಿಲ್ಲ. ಇಂದಿನ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಬೇಕೆಂದು ಆಗ್ರಹಿಸುವುದಿಲ್ಲ. ಒಟ್ಟಾರೆಯಾಗಿ ಅದು ಕ್ರಾತಿಕಾರಿ ದೃಷ್ಟಿಯಲ್ಲ.
ಜೀವನ’ ಮಾಸಿಕದಲ್ಲಿ
ಸಣ್ಣ ಕತೆಯ ವಸ್ತುವಿನ ಆಯ್ಕೆಯ ಬಗ್ಗೆ ಬರೆಯುವ ನಿರಂಜನರು, ರಾಷ್ಟ್ರೀಯ ಚಳವಳಿಗೆ
ಮೇಲಿಂದ ಮೇಲೆ ಆಗುತ್ತಿದ್ದ ಸೋಲಿನಿಂದ ಸೂಕ್ಷ್ಮಜೀವಿಯಾದ ಕಥೆಗಾರನ ಮೇಲೆ
ಆಘಾತ ಉಂಟಾಯಿತು. ಈ ಸಂದರ್ಭದಲ್ಲಿ ಸಣ್ಣ ಕತೆ ಇನ್ನಷ್ಟು ವಿವಿಧತೆಯಿಂದ
ಜನಜೀವನಕ್ಕೆ ಸಮೀಪ ಹೋಗಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಹೊಸ ಸಮಸ್ಯೆಗಳನ್ನು
ಎದುರಿಸಲು ಇಚ್ಛಿಸದ ಹಲವರು ಸಣ್ಣ ಕತೆಗಳನ್ನು ಬರೆಯುವುದನ್ನೇ ಬಿಟ್ಟರು ಎನ್ನುವ
ಮಾತನ್ನು ಹೇಳುತ್ತಾರೆ. ಕಟ್ಟಿಮನಿಯವರ ಕಾರವಾನ್', ಚದುರಂಗರ
ಶವದ ಮನೆ’
ತ.ರಾ.ಸು.ರವರ ದ್ರೋಹಿ', ಪಾಟೀಲ ಪುಟ್ಟಪ್ಪನವರ
ಸಾವಿನ ಮೇಜವಾನಿ’, ಅರ್ಚಿಕ
ವೆಂಕಟೇಶರ ಜೀವನ ಸಂಗ್ರಾಮ' ಇಲ್ಲೆಲ್ಲ ಈ ಸಮಸ್ಯೆಯನ್ನು ಎದುರಿಸಿದ್ದನ್ನು ಕಾಣಬಹುದು. ಇವು ಕಟ್ಟಿಮನಿ ಸಂಪಾದಕರಾಗಿದ್ದ
ಉಷಾ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಎಂಬುದು ಗಮನಾರ್ಹ.
ಮುಖ್ಯವಾಗಿ ಸಾಮಾಜಿಕ ವಿಷಮತೆ, ಶೋಷಣೆಗಳ ವಿರುದ್ಧದ ಸಮರದಲ್ಲಿ
ಲೇಖಕರು ಮುಂಚೂಣಿಯಲ್ಲಿ ಇರಬೇಕು ಎಂಬುದು ಪ್ರಗತಿಶೀಲರ ವಾದವಾಗಿತ್ತು.
ಸಮಾಜದ ಸದ್ಯದ ವ್ಯವಸ್ಥೆಯ ಬಗೆಗೆ ತೀವ್ರವಾಗಿ ಅಸಮಾಧಾನಗೊಂಡ ಅವರು
ಪರಂಪರಾಗತ ಮೌಲ್ಯಗಳನ್ನು ಪ್ರಶ್ನಿಸಿದರು. ಅವರ ದೃಷ್ಟಿಯಲ್ಲಿ ನವೋದಯ
ಸಾಹಿತ್ಯವೆಂದರೆ ನಗರದ ಸುಶಿಕ್ಷಿತ ಮಧ್ಯಮವರ್ಗದ ಹಗಲುಗನಸಿನ ಕಲಾತ್ಮಕ ಅಭಿವ್ಯಕ್ತಿ.
ಬದುಕಿನ ವಾಸ್ತವತೆಯ ಸ್ಪರ್ಶ ಅದಕ್ಕಿಲ್ಲ. ನಮ್ಮ ಸಂಸ್ಕೃತಿಯ ಹಿಂದಿರುವ ಮೋಸವನ್ನು
ಬಯಲಿಗೆಳೆಯಬೇಕು, ಲೇಖಕ ಸಾಮಾಜಿಕ ಜವಾಬ್ದಾರಿಯ ಉತ್ತರದಾಯಿತ್ವ
ಹೊಂದಿರಬೇಕು ಎಂಬುದು ಪ್ರಗತಿಶೀಲರ ಧೋರಣೆ. ೧೯೫೩ರಲ್ಲಿ ಸಾಹಿತಿ ಮತ್ತು ಸಮಾಜ' ಎಂಬ ಲೇಖನವನ್ನು
ಜಯಭೇರಿ’ಯಲ್ಲಿ ಪ್ರಕಟಿಸಿದ ನಿರಂಜನರು ಲೇಖಕನಿಗೆ
ಸಾಮಾಜಿಕ ಜವಾಬ್ದಾರಿ ಇದೆ ಎಂಬ ಮಾತನ್ನು ಹೇಳಿದ್ದಾರೆ. ಯಾವುದೋ ಭಾವನೆ
ವಿಚಾರ, ಬರೆಹಗಾರನ ಹೃದಯದಲ್ಲೋ ಮೆದುಳಲ್ಲೋ ಇರುವಷ್ಟು ಕಾಲ, ಅವುಗಳಿಂದ
ಬಾಧಿತನಾಗುವವನು ಅವನೊಬ್ಬನೇ. ಆದರೆ ಆತ ಬರೆದ ಕೃತಿ ಓದುಗರ ಕೈಗೆ ಬಿದ್ದಮೇಲೆ,
ಓದುವವರೆಲ್ಲ ಆ ಕೃತಿಯಿಂದ ಬಾಧಿತರಾಗುತ್ತಾರೆ. ಆಗ ಕರ್ತೃ ಓದುಗರಿಗೆ
ಜವಾಬ್ದಾರನಾಗುತ್ತಾನೆ ಎಂಬ ಮಹತ್ವದ ಮಾತುಗಳು ಅಲ್ಲಿವೆ.೭೪
ಸಾಹಿತ್ಯ ಕೂಡ ಚಳವಳಿಯಾಗಬಹುದು ಎಂಬ ಮಾತು ಕೇಳಿ ಬಂದದ್ದು ಬಹುಶಃ
ಪ್ರಗತಿಶೀಲರ ಕಾಲದಲ್ಲಿ. ತಮ್ಮ ಸಾಹಿತ್ಯ ಆಂದೋಲನವನ್ನು ಅವರು ಪ್ರಗತಿಶೀಲ ಚಳವಳಿ
ಎಂದು ಕರೆದುಕೊಂಡರು. ಅವರಿಗೂ ಪೂರ್ವದಲ್ಲಿ ಸಾಹಿತ್ಯವನ್ನು ಚಳವಳಿ ಎಂದು
ಕರೆದಿರಲಿಲ್ಲ. ಸಂಘರ್ಷ ಪ್ರತಿರೋಧ ಇದ್ದಾಗ ಚಳವಳಿ ಅನಿವಾರ್ಯವಾಗುತ್ತದೆ.
ಪ್ರಗತಿಶೀಲರಿಗೆ ನವೋದಯದವರೊಂದಿಗೆ ಅಂದರೆ ರೋಮ್ಯಾಂಟಿಕ್
ಪಂಥದವರೊಂದಿಗೆ ಸಂಘರ್ಷವಿತ್ತು. ಅದನ್ನು ಅವರು ವಿರೋಧಿಸಬೇಕಾಗಿತ್ತು. ಆ
ವಿರೋಧ ಕಾರಣವಾಗಿಯೇ ಅವರು ತಮ್ಮ ಸಾಹಿತ್ಯ ಮಾರ್ಗವನ್ನು ಪ್ರಗತಿಶೀಲ ಚಳವಳಿ
ಎಂದು ಕರೆದುಕೊಂಡರು. ಈ ಚಳವಳಿ ಎಂಬ ಶಬ್ದದ ಬಳಕೆಗೆ ಸ್ವಾತಂತ್ಯ್ರ ಸಂಗ್ರಾಮ
ಕಾಲದ ಚಳವಳಿಗಳು ಪ್ರೇರಣೆ ನೀಡಿರಬಹುದು. ಚಳವಳಿಗಳಿಗೆ ಎರಡು ಮಗ್ಗಲುಗಳು
ಇರುತ್ತವೆ; ಒಂದು ಇರುವ ವ್ಯವಸ್ಥೆಯನ್ನು ವಿರೋಧಿಸುವುದು, ಇನ್ನೊಂದು ಒಪ್ಪಿಕೊಂಡ
ಆದರ್ಶವನ್ನು ಪ್ರತಿಪಾದಿಸಿ, ಸಮಾಜದಲ್ಲಿ ಪ್ರತಿಷ್ಠಾಪಿಸುವುದು. ಚಳವಳಿ ಯಾವ
ಮಗ್ಗುಲಿನಿಂದ ಆರಂಭವಾದರೂ ಅದರ ಗುರಿ ಮಾತ್ರ ತನ್ನ ಆದರ್ಶಗಳ ಪ್ರತಿಪಾದನೆ
ಹಾಗೂ ಪ್ರತಿಷ್ಠಾಪನೆಯೇ ಆಗಿರುತ್ತದೆ. ಚಳವಳಿ ಸಾಹಿತ್ಯಕ್ಕೆ ಸಂಬಂಧಿಸಿದಾಗ ಅದು
ಆಲೋಚನೆ, ಭಾವನೆ ಮತ್ತು ಅಭಿವ್ಯಕ್ತಿ ಮಟ್ಟದ ಚಳವಳಿಗಳಾಗುತ್ತವೆ. ಭಾಷೆ ಇವುಗಳ ಸಾಧನವಾಗುತ್ತದೆ.
ಪ್ರಗತಿಶೀಲರು ಅರ್ಥ ಕಳೆದುಕೊಂಡ ಸಾಂಪ್ರದಾಯಿಕ ಮೌಲ್ಯಗಳ ಬಗೆಗೆ ತಮ್ಮ
ಅಸಮಾಧಾನವನ್ನು ಪ್ರಕಟಿಸಿದ್ದು ನಿಜ. ಆದರೆ ಸಮಸ್ಯೆಗಳ ಸೂಕ್ಷ್ಮಗಳನ್ನು ಗ್ರಹಿಸಿ ಅವುಗಳನ್ನು
ಎಲ್ಲ ಮುಖಗಳಿಂದಲೂ ಪರೀಕ್ಪಿಸಿ ನೋಡಬಲ್ಲ ವಸ್ತುನಿಷ್ಠತೆ ಅವರಿಗಿರಲಿಲ್ಲ. ಎಷ್ಟೋ
ಹೊಸ ಹೊಸ ಸಮಸ್ಯೆಗಳು ಪ್ರಗತಿಶೀಲರಲ್ಲಿ ಮೈದಾಳುತ್ತವೆ. ಆದರೆ ಅವುಗಳ ಆಳವಾದ
ಚಿತ್ರಣ ಅಲ್ಲಿ ದೊರೆಯುವುದಿಲ್ಲ. ತಾವು ಸಾಧನವಾಗಿ ಮಾಡಿಕೊಂಡ ಹೊಸ ಸಾಮಾಜಿಕ
ಕಳಕಳಿಯನ್ನು ಅಭಿವ್ಯಕ್ತಿಸಬಲ್ಲ ಸೂಕ್ಷ್ಮ ತಂತ್ರಗಳನ್ನು ಅವರು ರೂಪಿಸಿಕೊಳ್ಳಲಿಲ್ಲ.
ನಾಟಕೀಯತೆ ಎದ್ದು ಕಾಣುವಹಾಗೆ ಮೂಡಿದವು. ಭಾಷಣದ ಆವೇಶವೂ ಅದಕ್ಕೆ
ಸೇರಿಕೊಂಡಿತು. ಇದರಿಂದಾಗಿ ಬರೆವಣಿಗೆಗೆ ದಕ್ಕಬೇಕಾದ ಕಾವ್ಯದ ಸೂಕ್ಷ್ಮತೆ ಅವರಿಗೆ
ದಕ್ಕದೆ ಹೋಯಿತು. ಪ್ರಗತಿಶೀಲರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು ಆರ್ಥಿಕ
ಅಂಶದ ಮೇಲೆ. ಹಿಂದಿಯಲ್ಲಿ ಯಶಪಾಲ ಅವರ ಮನುಷ್ಯನ ರೂಪ' ಕಾದಂಬರಿಯಲ್ಲಿ ಕಾದಂಬರಿಯ ನಾಯಕಿ ಹಳ್ಳಿಯ ಅಪ್ರಬುದ್ಧೆ ಸಿನಿಮಾ ನಟಿಯಾಗಿ ಬೆಳೆಯುತ್ತಾಳೆ. ನಟಿಯಾಗಿ ಹೆಸರು ಮಾಡಿದ ಮೇಲೆ ಗಂಡ ಎದುರಿಗೆ ಬಂದು ನಿಂತಾಗ ಅವನನ್ನು ಗುರುತಿಸಲು ನಿರಾಕರಿಸುತ್ತಾಳೆ. ಆರ್ಥಿಕವಾಗಿ ಆಗಿರುವ ಅಸಮಾನತೆಯೇ ಇದಕ್ಕೆ ಕಾರಣ. ಹೀಗೆ ಪ್ರಗತಿಶೀಲರು ಮನುಷ್ಯನ ಹಸಿವಿನ ಬಗೆಗೆ ಬರೆದರು. ಹಸಿವೆಗಾಗಿ ತಮ್ಮ ದುಡಿಮೆ ಮತ್ತು ಆತ್ಮಗೌರವವನ್ನು ಮಾರಿಕೊಳ್ಳುವ ಗಂಡಸರು, ತಮ್ಮ ದೇಹವನ್ನು ಮಾರಿಕೊಳ್ಳುವ ಹೆಂಗಸರ ಬಗೆಗೆ ಬರೆದರು. ಈ ಎರಡನೆಯ ಬಗೆ ಅನಕೃ ಅವರ ಕೆಲವು ಕೃತಿಗಳಲ್ಲಿ ಕಾಮಕೇಳಿಯ ವರ್ಣನೆಗಾಗಿ ಬಂದವು ಎಂಬ ಟೀಕೆಗಳು ಬಂದವು. ನಿರಂಜನರು ಪತ್ರಿಕೆಗಳ ಮೂಲಕ ಅನಕೃ ಅವರ ಇಂಥ ಕಾದಂಬರಿಗಳನ್ನು ಖಂಡಿಸಿದ್ದಾರೆ. ಅನಕೃ ಅವರಿಗಿಂತ ಭಿನ್ನವಾಗಿ ಬರೆದ ಕೆಲವರ ಕಥೆಗಳನ್ನು ಇಲ್ಲಿ ನೋಡಬೇಕು. ಕೋ. ಚೆನ್ನಬಸಪ್ಪ ಇವರ
ದಾಸರಯ್ಯನ ಪಟ್ಟಿ’ ಶೋಷಕರನ್ನು ದುಷ್ಟರನ್ನಾಗಿ, ಶೋಷಿತರನ್ನು
ಒಳ್ಳೆಯವರನ್ನಾಗಿ ತೋರಿಸುವ ಕಪ್ಪು ಬಿಳುಪು ಮಾದರಿಯನ್ನು ಅನುಸರಿಸುತ್ತದೆ. ಇದು
ಒಮ್ಮೊಮ್ಮೆ ಶೋಷಕರನ್ನು ಅತಿ ದುಷ್ಟರನ್ನಾಗಿಸುವ ನಾಟಕೀಯತೆಯಲ್ಲಿ ಮುಕ್ತಾಯವಾಗುವ
ಅಪಾಯವಿದೆ. ಇದರಿಂದ ಕೃತಕತೆ ತಲೆಹಾಕಿ ಪರಿಣಾಮ ಊನವಾಗುತ್ತದೆ. ಇವರದೇ
ಮುಕ್ಕಣ್ಣನ ಮುಕ್ತಿ'ಯಲ್ಲೂ ಇದೇ ರೀತಿ ಆಗುತ್ತದೆ. ಕೋ.ಚೆ. ಅವರಿಗೆ ಶೋಷಿತರ, ಹಳ್ಳಿಯ ಒಕ್ಕಲಿಗರ ಪರಿಚಯ ಚೆನ್ನಾಗಿದೆ. ಅವರ ಆಶೆ, ಭೂಮಿಯ ಹಂಬಲ, ದುಡಿಮೆ, ದನ-ಕರುಗಳ ಮೇಲಿನ ಪ್ರೀತಿ ಇತ್ಯಾದಿ ವಿವರಗಳನ್ನು ಸರಿಯಾಗಿ ಹಿಡಿದಿಡಬಲ್ಲರು.
ದಾಸರಯ್ಯನ ಪಟ್ಟಿ’ಯಲ್ಲಿಯಂತೆ ಗೇಣಿದಾರರ ಸಮಸ್ಯೆಗಳನ್ನೂ ಅವರು ಬಲ್ಲರು.
ಆದರೂ ಈ ವಿವರಗಳೆಲ್ಲ ಬರೀ ವಿವರಗಳಾಗಿಯೇ ನಮಗೆ ದೊರೆಯುತ್ತವೆಯೇ ಹೊರತು
ತಾತ್ವಿಕ ತುಡಿತದ ಅಭಾವ ತಟ್ಟನೆ ಗೋಚರಿಸುತ್ತದೆ.
ಪ್ರಗತಿಶೀಲರಲ್ಲಿಯ ಮತ್ತೊಬ್ಬ ಪ್ರಮುಖ ಕಥೆಗಾರ ಬಸವರಾಜ ಕಟ್ಟಿಮನಿ. ಅವರ
ಗಿರಿಜಾ ಕಂಡ ಸಿನಿಮಾ',
ಜೀವನ ಕಲೆ’, ಬೂಟ್ಪಾಲಿಶ್',
ಸೆರೆಯಿಂದ ಹೊರಗೆ’
ಮೊದಲಾದ ಕಥೆಗಳಲ್ಲಿ ಪ್ರಗತಿಶೀಲತೆಯ ಮನೋಧರ್ಮ ಕಾಣುತ್ತದೆ. ವ್ಯವಸ್ಥೆಯ ಬಗೆಗಿನ ಸಿಟ್ಟು ಕಟ್ಟಿಮನಿಯವರ ಬರೆಹಗಳಲ್ಲಿ ಸ್ಥಾಯಿಯಾಗಿದೆ. ಈ ಸಿಟ್ಟೇ ಅವರ ಕಥೆಗಳಲ್ಲಿಯ
ಪಾತ್ರಗಳು ವ್ಯವಸ್ಥೆಯ ವಿರುದ್ಧ ಏನಾದರೂ ಮಾಡಲು ಬಂಡೇಳಲು ಕಾರಣವಾಗುತ್ತವೆ.
ಆದರೆ ಈ ಎಲ್ಲ ಕಥೆಗಳಲ್ಲಿಯ ಘಟನೆಗಳು ವಾಸ್ತವ ಇದ್ದರೂ ಅವನ್ನೆಲ್ಲ
ಬುದ್ಧಿಪೂರ್ವಕವಾಗಿ ಜೋಡಿಸಿದಂತೆ ತೋರುವುದು. ಗಿರಿಜಾ ಕಂಡ ಸಿನಿಮಾ'ದಲ್ಲಿ ಹರೆಯದ ಮುಗ್ಧ ಹುಡುಗಿಯೊಬ್ಬಳಿಗೆ ಅವಳ ಗಂಡ ಸುತ್ತಲಿನ ಬದುಕಿನ ದುಃಖ, ಬಡತನಗಳ ದಾರುಣ ಚಿತ್ರಗಳನ್ನು ತೋರಿಸುತ್ತ ಹೋಗಿ, ಇಂಥ ಸಮಾಜ ವ್ಯವಸ್ಥೆಯ ವಿರುದ್ಧ ಹೋರಾಡುವುದು ಎಷ್ಟು ಅಗತ್ಯ ಎಂಬುದನ್ನು ಬಿಂಬಿಸುತ್ತಾನೆ. ಪರದೆಯ ಮೇಲೆ ಸಿನಿಮಾ ನೋಡಬೇಕಿದ್ದ ಆ ಯುವತಿ ನಿಜ ಜೀವನವನ್ನೇ ಸಿನಿಮಾದಂತೆ ನೋಡಿ ಮನಃಪರಿವರ್ತನೆ ಹೊಂದುತ್ತಾಳೆ. ಕಟ್ಟಿಮನಿಯವರ ಕಥೆಯೊಂದನ್ನು ವಿಮರ್ಶಿಸುವ ಲಂಕೇಶ, ಮಾರ್ಕ್ಸ್ ಪ್ರಭಾವದಿಂದ ಬಡವರ ಬಗೆಗೆ ಹಾಗೂ ಅವರ ದುರಂತದ ಬಗೆಗೆ ಬರೆಯುವುದನ್ನು ಆರಂಭಿಸಿದ ನಮ್ಮ ಲೇಖಕರು ಮಾರ್ಕ್ಸ್ನ ಬುದ್ಧಿಶಕ್ತಿಯನ್ನು ಮತ್ತು ತರ್ಕಬದ್ಧತೆಯನ್ನು ಅರ್ಥಮಾಡಿಕೊಳ್ಳದೇ ಹೋದುದಕ್ಕಾಗಿ ಆಶ್ಚರ್ಯಪಡುವರು. ಇದಕ್ಕೆ ಕಾರಣ ಗುರುತಿಸುವ ಲಂಕೇಶ, ``ಲೇಖಕರಿಗೆ ತಮ್ಮ ಮಾನವೀಯತೆಯ ಬಗ್ಗೆ ಗೊಂದಲವಿದೆ. ಇದು ತಾವು ಚಿತ್ರಿಸುವ ಬದುಕಿನ ಅರ್ಧಮರ್ಧ ತಿಳಿವಳಿಕೆಯಿಂದ ಬಂದದ್ದು'' ಎಂದಿರುವರು. ಪ್ರಗತಿಶೀಲರಲ್ಲಿ ಅನೇಕರಿಗೆ ತಾವು ಬಡವರ ಬದುಕಿನ ಬಗೆಗೆ ಬರೆಯಬೇಕು ಎಂಬ ಬದ್ಧತೆ ಇದೆ. ಆದರೆ ಅದರ ಅನುಭವ ಇಲ್ಲ. ಈ ಸಂದರ್ಭದಲ್ಲಿ ನಾವು, ಸಮಕಾಲೀನತೆಯ ಬಗೆಗೆ ಬರೆದ ಗೋಕಾಕರು, ಅಡದೆ ಉಣಬಡಿಸುವ ಅಪಾಯದ ಬಗ್ಗೆ ಸೂಚಿಸಿದ್ದನ್ನು ನೆನಪಿಸಿಕೊಳ್ಳಬೇಕು. ಪ್ರಗತಿಶೀಲರು ತಾವು ಚಿತ್ರಿಸುವ ಸಮಸ್ಯೆಗಳೆಲ್ಲ ಒಂದು ಬೆಳವಣಿಗೆಯ ಫಲ ಎಂಬ ಸಮಗ್ರ ಚಿಂತನೆಯ ಅಭಾವವನ್ನು ಎದುರಿಸುತ್ತಿದ್ದರು. ಈ ಅಭಾವವು ಅವರ ಕೃತಿಗಳಲ್ಲಿ ತೋರುವುದು. ಪ್ರಗತಿಶೀಲರ ಹೆಚ್ಚಿನ ಕೃತಿಗಳಲ್ಲಿ ಪ್ರಗತಿಶೀಲ ಪ್ರಜ್ಞೆ ವರ್ತಮಾನಕ್ಕೆ ಪ್ರತಿಕ್ರಿಯಿಸುವುದರಲ್ಲೇ ಸೀಮಿತವಾಗುವುದು. ಪ್ರಗತಿಶೀಲರಲ್ಲಿ ಹೆಚ್ಚು ತತ್ವನಿಷ್ಠರಾದ ನಿರಂಜನ (ಕುಳಕುಂದ ಶಿವರಾಯ)ರ
ಕೊನೆಯ ಗಿರಾಕಿ’ ಹೆಚ್ಚು ಯಶಸ್ವಿಯಾದ ಕಥೆ . ಪ್ರಗತಿಶೀಲರ ಕಥೆಗಳಲ್ಲಿ ವಾಸ್ತವ
ಚಿತ್ರಣ ಇಡಿಕಿರಿದಿದ್ದರೆ ಈ ಕಥೆಯಲ್ಲಿ ಸಾಂಕೇತಿಕತೆ ಇದೆ. ಕಾಮುಕರ ಕೈಯಲ್ಲಿ ಸಿಕ್ಕು
ಕ್ರೂರ ಶೋಷಣೆಗೊಳಗಾಗುವ ಈ ಕಥೆಯ ನಾಯಕಿ ಒಬ್ಬ ಮೂಕಿ. ನಮ್ಮ ಸುತ್ತಲಿನ
ಸಮಾಜದ ಸಾವಿರಾರು ಜನ ಮೂಕ ಶೋಷಿತರ, ತುಳಿತಕ್ಕೊಳಗಾದರೂ ಹೇಳಿಕೊಳ್ಳಲು
ಬಾಯಿಲ್ಲದವರ ಪ್ರತಿನಿಧಿಯಾಗುತ್ತಾಳೆ ಆಕೆ. ಹಸಿವೆ, ರೋಗಗಳಿಂದ ಅವಳು ಸತ್ತಾಗ
ಅವಳ ದೇಹದ ಅಳಿದುಳಿದ ಮಾಂಸವನ್ನು ಕುಕ್ಕಿ ತಿನ್ನಲೆಂದು ಹದ್ದೊಂದು ಸುತ್ತತೊಡಗುತ್ತದೆ-
ಅದೇ ಕೊನೆಯ ಗಿರಾಕಿ. ಸಾವಿನ ನಂತರವೂ ಮುಂದುವರಿಯುವ ಶೋಷಣೆಯ ಕರಾಳ
ಚಿತ್ರ. ಶೋಷಕರೆಲ್ಲರ ಪ್ರತಿನಿಧಿಯಾಗಿ ಹದ್ದು ಕಾಣಿಸಿಕೊಳ್ಳುವುದು. ಸಂಕೇತಗಳ ಮೂಲಕ
ಅರ್ಥ ಪರಂಪರೆ ಹೊಮ್ಮಿಸುವ ಪ್ರಯತ್ನ ಇಲ್ಲಿಯದು. ಇದು ಕಥೆಯ ಧ್ವನಿಶಕ್ತಿಯನ್ನು
ಹೆಚ್ಚಿಸಿದರೂ ಫಾರ್ಮುಲಾದ ಪ್ರಗತಿಶೀಲ ಕಥೆಗಳಂತೆ ಈ ಕಥೆಯೂ ಭಾವೋದ್ವೇಗದಿಂದ
ಹೊರತಾಗಿಲ್ಲ. ಏಕಮುಖದಲ್ಲಿ ವಿವರಗಳೆಲ್ಲ ಜೋಡಣೆಯಾಗುವುದರಿಂದ ಪರಿಣಾಮ
ಸರಳವಾಗಿಬಿಡುತ್ತದೆ.
ಪ್ರಗತಿಶೀಲ ಚಳವಳಿಯ ಆರಂಭದ ಕಾಲದಲ್ಲಿ ವಾಣಿ' ಮಾಸಿಕದಲ್ಲಿ
ಹೊಸ
ಸೃಷ್ಟಿಯ ಪ್ರಸವದ ಕಡೆಗೆ’ ಎಂಬ ಲೇಖನ ಪ್ರಕಟಿಸುವ ನಿರಂಜನರು ಪ್ರಗತಿಶೀಲ ಸಾಹಿತ್ಯ
ಭಾರತದಲ್ಲಿ ಯಾವ ರೀತಿ ಬೆಳೆದುಬಂತು ಎಂಬುದನ್ನು ವಿವರಿಸಿ, ಕರ್ನಾಟಕದಲ್ಲಿ
ಪ್ರಗತಿಶೀಲ ಆಂದೋಲನಕ್ಕೆ ಬಾಲಪೀಡೆ ತಗುಲಿ ಶೈಶವದಲ್ಲೇ ತೀರಿಕೊಂಡಿತು ಎಂದು
ಹೇಳಿದ್ದಾರೆ. ಪ್ರಗತಿಶೀಲರೆಂದು ಪರೇಡ್ ಮಾಡುವವರಂತೂ ತಮ್ಮ ಗುರುತರವಾದ
ಹೊಣೆಗಾರಿಕೆಯನ್ನು ಪ್ರತಿ ಹೆಜ್ಜೆಗೂ ತಿಳಿದಿರುವುದು ಲೇಸು. ಪ್ರಗತಿಶೀಲರ ಆಂದೋಲನ
ಸಂಕುಚಿತ ಮನೋವೃತ್ತಿಯ, ಇದನ್ನೇ ಬರೆಯಿರಿ- ಇದನ್ನೇ ಬಿಡಿರಿ ಎನ್ನುವ ಸರ್ವಾಧಿಕಾರಿ
ಮನೋಭಾವನೆಯ, ವಿಧ್ವಂಸಕ ಚಳವಳಿಯಲ್ಲ. ಹಿರಿಯ ಪರಂಪರೆಯನ್ನು
ಉಳಿಸಿಕೊಂಡು, ಹೊಸ ಹಾದಿಯಲ್ಲಿ, ಪುರೋಗಾಮಿಯಾಗಿ, ಸರ್ವವ್ಯಾಪಿಯಾಗಿ
ರಚನಾತ್ಮಕವಾದ ರೀತಿಯಲ್ಲಿ ಅದು ಸಾಗಬೇಕು. ಗರ್ಭಸ್ರಾವಕ್ಕಲ್ಲ, ಹೊಸ ಸೃಷ್ಟಿಯ
ಪ್ರಸವಕ್ಕೆ, ಆ ಕಾರ್ಯ ವಿಧಾನದ ಗತಿ'ಯನ್ನು ಶೀಘ್ರಗೊಳಿಸುವುದಕ್ಕೆ, ಪ್ರಗತಿಶೀಲರು ನೆರವಾಗಬೇಕು, ದುಡಿಯಬೇಕು ಎಂದು ನಿರಂಜನರು ಕರೆ ಕೊಟ್ಟಿದ್ದಾರೆ. ಚಳವಳಿಯ ಉದ್ದೇಶ ದಾರಿ ತಪ್ಪಿದಾಗ ಅದನ್ನು ಸರಿದಾರಿಯಲ್ಲಿ ತರುವ ಉದ್ದೇಶವನ್ನು ಇಲ್ಲಿ ಗುರುತಿಸಬಹುದು. ಇಂಥ ಪ್ರಯತ್ನವನ್ನು ನಿರಂಜನರು ನಿರಂತರ ಮಾಡುತ್ತ ಬಂದರು. ೧೯೫೨ರಲ್ಲಿ ಅವರು
ಪ್ರಜಾವಾಣಿ’ಯಲ್ಲಿ ಕನ್ನಡ ಸಾಹಿತ್ಯದ ಪ್ರಗತಿಶೀಲರು ಎತ್ತ ಸಾಗಿದ್ದಾರೆ?' ಎಂಬ ಲೇಖನವನ್ನು ಬರೆದರು. ಇದರಲ್ಲಿ ಅವರು ಹಿರಿಯೂರಿನಲ್ಲಿ ನಡೆದ ಪ್ರಗತಿಶೀಲ ಸಮಾವೇಶದ ವಿವರಗಳನ್ನು ನೀಡುತ್ತ ಸಾಹಿತ್ಯದಲ್ಲಿ ಕಾಮ ಪ್ರಚೋದನೆ ಕುರಿತು ಕೆಲವು ಮಾತುಗಳನ್ನು ಹೇಳುತ್ತಾರೆ. ಅ.ನ.ಕೃ. ಅವರ ನಟಸಾರ್ವಭೌಮ, ನಗ್ನಸತ್ಯ, ಶನಿಸಂತಾನ ಕಾದಂಬರಿಗಳ ಬಗ್ಗೆ ಬಂದ ಟೀಕೆಗಳ ಹಿನ್ನೆಲೆಯಲ್ಲಿ ಅದನ್ನು ಖಂಡಿಸುವುದಕ್ಕಾಗಿ ಈ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು.
ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಎಂಬ ಅ.ನ.ಕೃ.
ಕೃತಿಯನ್ನು ಈ ಸಮ್ಮೇಳನದಲ್ಲಿಯೇ ಬಿಡುಗಡೆಗೊಳಿಸಿದ್ದು. ಈ ಹಿನ್ನೆಲೆಯಲ್ಲಿ ನಿರಂಜನರ ಈ ಲೇಖನ ಮಹತ್ವದ್ದಾಗಿದೆ.
ಹಿರಿಯೂರು ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷ ದ.ಕೃ.ಭಾರದ್ವಾಜರು
ಸಾಹಿತ್ಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳಡಗಿದ್ದರೆ ಆತ್ಮವನ್ನು ಜಾಗೃತಗೊಳಿಸಿ
ವಿಕಾಸಗೊಳಿಸುವುದೇ ಅದರ ಮುಖ್ಯ ಕೆಲಸ. ನಮ್ಮಲ್ಲಿರುವ ಆತ್ಮವನ್ನು ಜಾಗೃತಗೊಳಿಸುವುದೇ
ಅದರ ಗುರಿ.. ಸಾಹಿತ್ಯವು ಯಾವನನ್ನೂ ಧರ್ಮಾಂತರಗೊಳಿಸುವುದಿಲ್ಲ. ಅಥವಾ ಅದು
ಸಾಮಾಜಿಕ ಕ್ರಾಂತಿಯನ್ನು ಉಂಟುಮಾಡುವುದಿಲ್ಲ. ಅದು ನಮ್ಮ ಮನಸ್ಸನ್ನು
ಬದಲಾಯಿಸುವುದು, ನಮ್ಮ ಹೃದಯವನ್ನು ಮಿಡಿದು ನಮ್ಮ ಆತ್ಮ ಶಾಂತಿ ಸುಖವನ್ನು
ಅನುಭವಿಸುವಂತೆ ಮಾಡುವುದು.. ಎಂದೆಲ್ಲ ಹೇಳಿದ್ದರು. ಪ್ರಗತಿಶೀಲ ಆಶಯಗಳಿಗೆ
ವಿರುದ್ಧವಾಗಿದ್ದ ಈ ಮಾತುಗಳನ್ನು ನಿರಂಜರು ಈ ಲೇಖನದಲ್ಲಿ ಖಂಡಿಸಿದ್ದಾರೆ.
ರಾಯಲಸೀಮೆ- ಕೋಲಾರಗಳ ಕ್ಪಾಮ; ಸ್ವಾತಂತ್ಯ್ರ ನೀಡದೇ ಹೋದ ಸುಖ; ಕೋಟಿ
ಜನತೆಯ ಸಂಕಟದ ನಿಟ್ಟುಸಿರು; ಬಾಳ್ವೆಗಾಗಿ, ಭವಿಷ್ಯತ್ತಿಗಾಗಿ ಮಾನವನ ಹೋರಾಟ-
ಇವೆಲ್ಲದರ ವಾಸ್ತವಿಕ ಚಿತ್ರಣ ಸಾಹಿತ್ಯದಲ್ಲಾಗಬೇಕೆಂದು, ಸಮಾಜದ ಪುನರ್ವ್ಯವಸ್ಥೆಯ
ಕಾರ್ಯದಲ್ಲಿ ಪ್ರಗತಿಶೀಲ ಸಾಹಿತಿಗಳು ಮುದಾಗಬೇಕೆಂದು ಭಾರದ್ವಾಜರು ಹೇಳಲಿಲ್ಲ.
ಹಾಗೆ ಹೇಳುವ ಅವಶ್ಯಕತೆ ಅವರಿಗೆ ತೋರಲಿಲ್ಲ! ಎಂದು ನಿರಂಜರು ಟೀಕಿಸಿದ್ದಾರೆ.೭೫
ಅದೇ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಜರುಗಿದ ಕನ್ನಡ
ಕತೆಗಾರರ-ಕಾದಂಬರಿಕಾರರ ಸಮ್ಮೇಳನದಲ್ಲಿ ಕಾಮಪ್ರಚೋದಕ ಸಾಹಿತ್ಯ
ರಚಿಸಬಾರದೆಂದು ಲೇಖಕರಿಗೆ ಮನವಿ ಮಾಡಿಕೊಂಡು ನಿರ್ಣಯ ಅಂಗೀಕರಿಸಿತ್ತು. ಆ
ನಿರ್ಣವನ್ನು ಹಿರಿಯೂರು ಪ್ರಗತಿಶೀಲರ ಸಮ್ಮೇಳನದಲ್ಲಿ ಖಂಡಿಸಿ ನಿರ್ಣಯ
ಅಂಗೀಕರಿಸಲಾಗುತ್ತದೆ. ಬೆಂಗಳೂರು ಸಮ್ಮೇಳನದ ನಿರ್ಣಯ ಲೇಖಕನ ಸ್ವಾತಂತ್ಯ್ರಕ್ಕೆ
ಚ್ಯುತಿ ತಂದಿದೆ. ಅಂಥ ನಿರ್ಣಯಗಳನ್ನು ಸಂಘ ಸಂಸ್ಥೆಗಳು ಮಾಡುವುದರಿಂದ ಸಾಹಿತ್ಯಕ್ಕೆ
ಹಾನಿಯಾಗುವುದೆಂದು ಹಿರಿಯೂರಿನಲ್ಲಿ ಅಂಗೀಕರಿಸಲಾದ ನಿರ್ಣಯದಲ್ಲಿ
ಹೇಳಲಾಗಿತ್ತು.
ಇದನ್ನು ನಿರಂಜನರು ಖಂಡಿಸಿದ್ದಾರೆ. ಪ್ರಗತಿಶೀಲ ಚಳವಳಿ ಹುಟ್ಟಿದಾಗ ಕೆಲವು
ಸಂಪ್ರದಾಯವಾದಿ ಸಾಹಿತಿಗಳು ಲೇಖಕನ ಸ್ವಾತಂತ್ಯ್ರಕ್ಕೆ ಚ್ಯುತಿ ಬಂತು ಎಂದು ಆಕ್ರೋಶ
ಮಾಡಿದರು. ಶ್ರಮಜೀವಿಗಳ ಜೀವನ ಚಿತ್ರಿಸಿ ಎಂದೆಲ್ಲ ಹೇಳಲು ನೀವು ಯಾರು-
ಎಂದರು. ಈಗ, ಕಾಮ ಪ್ರಚೋದಕ ಸಾಹಿತ್ಯ ರಚನೆ ಸಲ್ಲದು ಎಂದಾಗ, ಕೆಲವು
ಪ್ರಗತಿಶೀಲ ಲೇಖಕರೇ, ಲೇಖಕನ ಸ್ವಾತಂತ್ಯ್ರಕ್ಕೆ ಧಕ್ಕೆ ತಗುಲಿತು ಎನ್ನುತ್ತಾರೆ ಎಂದು
ಟೀಕಿಸುತ್ತಾರೆ. ಜೀವನದ ಒಂದು ಅಂಶವಾದ ಕಾಮದ ಚಿತ್ರಣ ಸಾಹಿತ್ಯದಲ್ಲಿ ಅನಿವಾರ್ಯ.
ಆದರೆ ಮಾನವನ ನೈಸರ್ಗಿಕ ದೌರ್ಬಲ್ಯಗಳ ಲಾಭ ಪಡೆದು ಕೇವಲ
ಕಾಮೋದ್ದೀಪನೆಯನ್ನೇ ಉದ್ದೇಶವಾಗುಳ್ಳ ಕ್ಷುದ್ರ ಸಾಹಿತ್ಯ ರಚಿಸುವುದು
ಹೇಯಕರವಾದದ್ದು. …. ಇದನ್ನು ವಿಚಾರಿಗಳಾದ ಓದುಗರು ಖಂಡಿಸಬಾರದೆ? ಜನ
ಹಿತೈಷಿಗಳಾದ ಪ್ರಗತಿಶೀಲರು ಖಂಡಿಸುವುದು ಬೇಡವೆ? ದಿನನಿತ್ಯದ ಜೀವನ ಸಮಸ್ಯೆ-
ಹೋರಾಟಗಳಿಂದ ಮಾನವನ ಗಮನವನ್ನು ದೂರ ಸೆಳೆದು, ಅವನ ಕರ್ತೃತ್ವ ಶಕ್ತಿಯನ್ನು
ಕುಂಠಿತಗೊಳಿಸಿ, ಅವನನ್ನು ನಿರ್ವೀರ್ಯನಾಗಿಯೂ ನಿಶ್ಚೇಷ್ಟಿತನಾಗಿಯೂ ಮಾಡುವ ಕ್ಷುದ್ರ
ಸಾಹಿತ್ಯ ರಚಿಸುವುದೆಂದರೆ ಪ್ರಗತಿಗೆ ದ್ರೋಹ ಬಗೆದಂತೆಯೇ ಸರಿ ಎಂದು ಅವರು
ಘೋಷಿಸುತ್ತಾರೆ. ಪ್ರಗತಿಶೀಲ ಲೇಖಕರ ಚಳವಳಿ ಆರಂಭವಾದಾಗ ಇರಿಸಿಕೊಂಡ
ಉದಾತ್ತ ಧ್ಯೇಯ-ಗುರಿಗಳು ಈಗೆಲ್ಲಿ ಹೋದವು? ಎಂದು ನಿರಂಜನರು ಪ್ರಶ್ನಿಸುತ್ತಾರೆ.
೧೯೫೩ರ ಚಿತ್ರಗುಪ್ತದಲ್ಲಿ ಕನ್ನಡ ಸಾಹಿತ್ಯದಲ್ಲಿ ಸೂಳೆ' ಎಂಬ ಲೇಖನವನ್ನು ಪ್ರಕಟಿಸುವ ನಿರಂಜನರು, ಟಿ.ಪಿ.ಕೈಲಾಸಂ ೧೯೧೯ರಲ್ಲಿ ಬರೆದ
ಮೊಮ್ಮಗಳ ಮುಯ್ಯಿ’
ಕೃತಿಯನ್ನು ಪರಿಚಯಿಸುವರು. ಕೈಲಾಸಂ ಅವರದೇ ಆದ ಸೂಳೆ' ಕೃತಿಯನ್ನೂ ಪ್ರಸ್ತಾಪಿಸುವರು. ಕೈಲಾಸಂ ಬರೆದ ಕೃತಿಯ ಮಟ್ಟಕ್ಕೆ ಅನಕೃ ಅವರ ಕೃತಿಗಳು ಬರಲಿಲ್ಲ. ಮಹಾ ಮೇರುವಿನಂತಿದ್ದ ಕೈಲಾಸಂ ಕೃತಿಯ ಎದುರು ಅನಕೃ ಅವರ ಮೂರು ಕೃತಿಗಳು ಬೆಟ್ಟಗಳು ಕೂಡ ಆಗಿರಲಿಲ್ಲ, ತಿಪ್ಪೆಗುಂಡಿಗಳಾಗಿದ್ದವು ಎಂದು ಟೀಕಿಸಿದ್ದಾರೆ. ಅ.ನ.ಕೃ. ಕಾದಂಬರಿಗಳು ಪ್ರಗತಿಯ ದೃಷ್ಟಿಗೆ ಎಳ್ಳು ನೀರು ಬಿಟ್ಟುದು ಮಾತ್ರವಲ್ಲ; ನಮ್ಮ ಬರೆಹಗಾರರು ಪ್ರಗತಿಗಿದಿರಾದ ಹಾದಿಯಲ್ಲಿ ಕೆಳಕ್ಕೆ ಜಾರುವುದು ಹೇಗೆ ಸಾಧ್ಯವೆಂದು ತೋರಿಸಿಕೊಟ್ಟವು. ವೈಶ್ಯಾ ಪದ್ಧತಿಯ ಮೂಲೋತ್ಪಾಟನೆಯೇ ತಮ್ಮ ಗುರಿಯೆಂದು ಅವರು ಮುನ್ನುಡಿಗಳಲ್ಲಿ ಎಷ್ಟು ಹೇಳಿಕೊಂಡರೂ ಒಳಗಿನ ತಿರುಳು ಹಳಸಿ ಹೋಗಿದ್ದ ಕಾಮಕೇಳಿಗಳ ವಿಕೃತ ವಿಲಾಸಗಳ ರಸಪುಷ್ಟ ವರ್ಣನೆಯಾಗಿತ್ತು ಎಂದು ಬರೆದಿದ್ದಾರೆ. ೧೯೫೩ರಲ್ಲಿ
ರಾಷ್ಟ್ರಬಂಧು’ ಪತ್ರಿಕೆಯ ವಿಶೇಷಾಂಕದಲ್ಲಿ ೞಪ್ರಗತಿಶೀಲ ಸಾಹಿತ್ಯ; ಗೊತ್ತು, ಗುರಿ' ಎಂಬ ಲೇಖನ ಬರೆದ ನಿರಂಜನರು ಪ್ರಗತಿಶೀಲರ ಬಗೆಗೆ ಬಂದ ಟೀಕೆಗಳಿಗೆ ಉತ್ತರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರಗತಿಶೀಲರ ಘೋಷಣೆಯನ್ನು ಅವರು ಅದರಲ್ಲಿ ಪ್ರಕಟಿಸಿದ್ದಾರೆ. ಅದೇ ವರ್ಷ ಅವರು
ಪ್ರಜಾವಾಣಿ’ಯಲ್ಲಿ
ಪ್ರಗತಿಶೀಲತೆಯ ಹುಟ್ಟು' ಎಂಬ ಲೇಖನ ಬರೆದು ಭಾರತದಲ್ಲಿ ಪ್ರಗತಿಶೀಲ ಚಳವಳಿ ಹೇಗೆ ಹುಟ್ಟಿತು, ಅದಕ್ಕೂ ಪೂರ್ವದಲ್ಲಿ ಲಂಡನ್ನಿನಲ್ಲಿ ಭಾರತೀಯ ಲೇಖಕರು ಪ್ರಗತಿಶೀಲ ಚಳವಳಿಯ ಬಗೆಗೆ ಯಾವಯಾವ ರೂಪುರೇಷೆಗಳನ್ನು ಹಾಕಿದರು ಎಂಬುದನ್ನೆಲ್ಲ ವಿವರಿಸಿದ್ದಾರೆ. ಅದೇ ವರ್ಷ
ಚಿತ್ರಗುಪ್ತ’ದಲ್ಲಿ ಎಂ.ವಿ.ಸೀತಾರಾಮಯ್ಯನವರು ಬರೆದ
ಲೇಖನವೊಂದರಲ್ಲಿ ಪ್ರಗತಿಶೀಲತೆಯ ಬಗೆಗೆ ತಪ್ಪು ಕಲ್ಪನೆ ಉಂಟು ಮಾಡುವಂಥ
ಅಭಿಪ್ರಾಯಗಳಿದ್ದವು. ಅದನ್ನು ವಿಮರ್ಶಿಸಿ ನಿರಂಜನರು ಅದರಲ್ಲಿಯೇ ಮತ್ತೊಂದು
ಲೇಖನ ಬರೆಯುವರು. ಬದುಕಿಗಾಗಿ ಕಲೆ ಎಂಬ ತತ್ವವನ್ನು ಪ್ರತಿಪಾದಿಸಿದ ಬೆಲಿನ್ಸ್ಕಿಯ
ವಿಚಾರಗಳನ್ನು ನಿರಂಜನರು ೧೯೫೫ರಲ್ಲಿ ಪ್ರಬುದ್ಧ ಕರ್ನಾಟಕ'ದ ಸಂಚಿಕೆಯೊಂದರಲ್ಲಿ ಮಾಡಿಕೊಡುವರು. ಪ್ರಗತಿಶೀಲ ಚಳವಳಿ ತೀವ್ರವಾಗಿದ್ದ ಕಾಲದಲ್ಲಿಯೇ ವಿ.ಕೃ.ಗೋಕಾಕರು ರಾಣಿಬ್ನೊರಿನ ಜಿಲ್ಲಾ ಸಾಹಿತ್ಯ ಸಮ್ಮೇಲನದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯದಲ್ಲಿ ಪ್ರಗತಿ ಹೇಗೆ ಎಂಬುದನ್ನು ವಿವರಿಸಿದ್ದಾರೆ. ಸಾಹಿತ್ಯ ಪೂರ್ಣವಾಗಬೇಕಾದರೆ ಅಂತರ್ಮುಖತೆ ಹಾಗೂ ಸಮಾಜಿಕತೆಗಳು ಇರಬೇಕು ಎಂದು ಹೇಳಿದ್ದಾರೆ. ಜೀವನಕ್ಕೂ ಸಾಹಿತ್ಯಕ್ಕೂ ಪ್ರಗತಿ ಇರಲಿ ಇಲ್ಲವೆ ಇಲ್ಲದಿರಲಿ; ಅದಕ್ಕೆ ಗತಿ (Movement) ಇದೆ ಎಂದು ಗೋಕಾಕ ಹೇಳಿದ್ದಾರೆ. ಇದಕ್ಕೆ ಕಾಲದ ಆವರಣವೇ ಕಾರಣ ಎಂಬುದು ಅವರ ಅಭಿಪ್ರಾಯ. ಪ್ರಗತಿಶೀಲರ ಟೀಕೆಗಳ ಹಿನ್ನೆಲೆಯಲ್ಲಿ ಹಿಂದಿನ ಸಾಹಿತ್ಯವನ್ನು ಅವರು ಒರೆಗೆ ಹಚ್ಚಿ ನೋಡಿದ್ದಾರೆ. ಪ್ರಗತಿಶೀಲರ ಟೀಕೆಯು ಸಾಧುವಲ್ಲ. ಪ್ರತಿಯೊಬ್ಬ ಲೇಖಕನನ್ನು ಆತನು ಬದುಕಿದ್ದ ಕಾಲವು ಪ್ರಭಾವಿಸಿರುತ್ತದೆ. ಪ್ರಗತಿಶೀಲರ ವಾದವನ್ನು ಕಾಮ್ರೇಡ್ ವಾದವೆಂದು ನಾವು ಸುಮ್ಮನಿರುವುದು ಸಾಧ್ಯವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಅವರು ಹೇಳಿದ್ದಾರೆ. ಪ್ರಗತಿಶೀಲರ ಸಿದ್ಧಾಂತವನ್ನು ಅವರು ರಶಿಯಾದಿಂದ ಬಂದದ್ದು ಎಂಬುದನ್ನು ಗುರುತಿಸುವ ಹಾಗೆಯೇ ಅದು ಮಜೂರಿಗಾರರು ಮತ್ತು ತಿಜೋರಿಗಾರರ ನಡುವಿನ ಸಂಘರ್ಷದ ಚಿತ್ರ ಎಂದು ತಿಳಿಯುವರು. ಅದಕ್ಕಾಗಿಯೇ ಅವರು, ಹುಬ್ಬಳ್ಳಿ, ಸೊಲ್ಲಾಪುರ, ಗದುಗಿನಲ್ಲಿರುವ ಗಿರಣಿಗಳ ಜೀತದಾಳುಗಳು ನಮಗೆ ಪರಿಚಿತರಾಗಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ. ಇಂಥವರು ಸಾವಿರಾರು ಜನ. ಅವರ ಜೀವನದ ರುದ್ರ ದೃಶ್ಯಗಳು ಇನ್ನೂ ಮೊತ್ತದಲ್ಲಿ ನಮ್ಮೆದುರು ಬರಬೇಕಾಗಿದೆ. ಮೈಸೂರು ಮಹಾರಾಜರ ಚರಿತ್ರವೂ ಅಲ್ಲಿಯ ಕೆಲವು ಮಹನೀಯರ ಜೀವನ ವೃತ್ತಾಂತವೂ ನಮಗೆ ವಿದಿತವಾಗಿವೆ. ಆದರೆ ಕೋಲಾರದ ಚಿನ್ನದ ಗಣಿಗಳಲ್ಲಿ ದುಡಿಯುವ ದೀನರು, ಭದ್ರಾವತಿಯಲ್ಲಿ ಕ್ಷುದ್ರರಾಗಿ ದುಡಿಯುವ ಯಂತ್ರಯೋಗಿಗಳು, ಮಂಡ್ಯದಲ್ಲಿ ಸಕ್ಕರೆಯಿಂದ ಸಿರಿವಂತರ ಬಾಯಿಯನ್ನು ಸಿಹಿಯಾಗಿಸಿ ತಮ್ಮ ಬಾಳಿನ ಕಹಿಯನ್ನು ಕಳೆಯಲು ಸಮರ್ಥರಾಗದ ಮಜೂರಿಗಾರರು- ಇವರ ಜೀವಿತದ ರೀತಿ ನಮಗೆ ಗೊತ್ತಿದೆಯೆಂದು ಎದೆ ತಟ್ಟಿ ಹೇಳಬಲ್ಲೆವೇ? ಎಂದು ಅವರು ಪ್ರಶ್ನಿಸುವರು. ಒಕ್ಕಲಿಗನ ಜೀವಿತ, ಬೇರೆ ಬೇರೆ ಜಾತಿ-ಮತಗಳ ವಿವಿಧ ರೂಢಿಗಳು, ಅಂಚೆ- ಅಲೆಯಂತೆ ಅಲೆದನಿ (Telephone)ಗಳ ಮಜೂರಿ ವರ್ಗ, ಸೈನಿಕ, ಹಡಗದಾಳು, ವೈಮಾನಿಕ, ಅನ್ಯ ಪ್ರಾಂತಗಳ ಜನತೆ, ಬೇರೆ ರಾಷ್ಟ್ರಗಳ ಜೀವಿತ,- ಈ ಎಲ್ಲ ವಸ್ತು ಸಂಪತ್ತಿಯಿಂದ ಇನ್ನೂ ಕನ್ನಡ ಸಾಹಿತ್ಯದ ಅಭ್ಯುದಯವಾಗಬೇಕಾಗಿದೆ ಎಂದು ಹೇಳುವರು. ಈ ವಿವರಣೆಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಪ್ರಗತಿಶೀಲತೆ ಬಗ್ಗೆ ಗೋಕಾಕರ ತಿಳಿವಳಿಕೆ ಸೀಮಿತವಾದದ್ದು ಎನ್ನಿಸದೇ ಇರದು. ದುಡಿಯುವ ವರ್ಗದ ಚಿತ್ರಣವೇ ಪ್ರಗತಿಶೀಲ ಚಳವಳಿಗಾರರ ಬೇಡಿಕೆ ಎನ್ನುವಂತೆ ಅವರು ಮಾತನಾಡಿದ್ದಾರೆ. ಗೋಕಾಕರ ಈ ಮಾತುಗಳನ್ನು ಹೈದರಾಬಾದದ ಅಖಿಲಭಾರತ ಉರ್ದೂ ಪ್ರಗತಿಶೀಲ ಲೇಖಕರ ಸಮ್ಮೇಳನದಲ್ಲಿ ಅಧ್ಯಕ್ಪತೆ ವಹಿಸಿದ್ದ ಕೃಷನ್ಚಂದರ ಮಾತುಗಳೊಂದಿಗೆ ಹೋಲಿಸಿ ನೋಡಬೇಕು. ಗೋಕಾಕರು ಅಲ್ಲಿಂದಲೇ ಅಭಿಪ್ರಾಯ ಎತ್ತಿಕೊಂಡಹಾಗೆ ಸಾಮ್ಯ ತೋರುವುದು.76 ಸಾಹಿತ್ಯದಲ್ಲಿ ಸಮಕಾಲೀನತೆ ಎಂಬ ಮಹತ್ವದ ಮಾತನ್ನು ಗೋಕಾಕರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಸಮಕಾಲೀನತ್ವವು ಇನ್ನೂ ಸಂಪೂರ್ಣವಾಗಿ ನಮ್ಮ ಸಾಹಿತ್ಯದಲ್ಲಿ ಒಡಮೂಡಿಲ್ಲ. ಈ ಮಾತು ಇಡೀ ಭಾರತಕ್ಕೆ ಅನ್ವಯಿಸುತ್ತದೆ. ನಮ್ಮ ರಾಜಕೀಯ ಸ್ಥಿತಿಯಿಂದ ಉಂಟಾಗುವ ನಿರ್ಬಂಧಗಳೂ ಇದಕ್ಕೆ ಕಾರಣವಾಗಿವೆ ಎನ್ನುವ ಗೋಕಾಕರು, ಸಾಹಿತ್ಯದ ಸಮಕಾಲೀನತ್ವಕ್ಕೆ ಮಹತ್ವ ಕೊಡುವಾಗ ಇನ್ನೊಂದು ಮಾತನ್ನು ನಾವು ಮರೆಯ ಬಾರದು ಎಂದು ಹೇಳುತ್ತಾರೆ. ಒಮ್ಮೊಮ್ಮೆ
ಅಪ್ ಟು ಡೇಟ್’ ಇಲ್ಲವೆ ಕಾಲೋಚಿತ' ಲೇಖಕರಾಗಬೇಕೆಂಬ ಹಂಬಲದಿಂದ ಜೀವನ ಸಾಮಗ್ರಿಯನ್ನು ಅಡದೆ ಅನ್ನವೆಂದು ಸಾಹಿತಿಗಳು ಬಡಿಸುತ್ತಾರೆ. ಅದನ್ನು ಜೀರ್ಣವಾಗಿಸದೆ ಅದರಲ್ಲಿ ಭಾವನೆಗಳನ್ನು ಬೆರೆಸಹೋಗಿ ಪ್ರಚಾರ ಸಾಹಿತ್ಯದಂಥ ಸಾಹಿತ್ಯವನ್ನು ನಿರ್ಮಿಸುತ್ತಾರೆ. ಈ ಮಾತು ಅನೇಕ ಸಲ ಯಂತ್ರಯೋಗಿಗಳನ್ನು ಕುರಿತು ಬರೆದ ಕೃತಿಗಳಿಗೂ ಅನ್ವಯಿಸುತ್ತದೆ. ... .. ಪತ್ರಿಕಾ ಸಾಹಿತ್ಯಕ್ಕೂ ಲಲಿತ ಸಾಹಿತ್ಯಕ್ಕೂ ಇರುವ ಅಂತರವೇ ಇದು. ಖಂಡನೆ- ಮಂಡನೆ, ವಿಮರ್ಶೆ- ಪರಾಮರ್ಶೆ, ಪುರಸ್ಕಾರ- ತಿರಸ್ಕಾರಗಳು ಸಂಪಾದಕನು ಕೈಗೊಳ್ಳಬೇಕಾದ ಸಾಧನಗಳಾಗಿವೆ. ಆದರೆ ಸಮಕಾಲೀನ ಸನ್ನಿವೇಶಗಳು ಯೋಗ್ಯ ಸಾಹಿತ್ಯವಾಗಬೇಕಾದರೆ- ಮಳೆ ಬಂದು ಬಿದ್ದ ನೀರು ಬುಗ್ಗೆಯಾಗಿ ಮೇಲಕ್ಕೇಳಲು ವೇಳೆ ಹಿಡಿಯುವಂತೆ- ಕೆಲವೊಂದು ಕಾಲಾವಧಿ ಬೇಕು. ಇಂಥ ಸನ್ನಿವೇಶಗಳನ್ನು ಜೀರ್ಣಿಸುವುದರ ಕಡೆಗೆ ನಮ್ಮ ಸಾಹಿತಿಗಳ ದೃಷ್ಟಿಯಿರಬೇಕು ಎಂಬ ಮಾತನ್ನು ಅವರು ಹೇಳುವರು.೭೭ ಮಹಾಕಾವ್ಯವು ತತ್ಕಾಲ-ಅನಂತಗಳ ನಡುವೆ ಸೇತುವೆ ಕಟ್ಟುವುದು. ಸಮಕಾಲೀನತ್ವವಿಲ್ಲದೆ ಹೋದರೆ ಸಾಹಿತ್ಯವು ಒಂದು ಅಂಗದಲ್ಲಿ ಊನವಾದಂತೆ. ಇದು ಯಾವಾಗಲೂ ನಮ್ಮ ಲಕ್ಷ್ಯದಲ್ಲಿರಬೇಕು. ಆದರೆ ಇದರ ಜೊತೆಗೆ ಬರಿ ಪ್ರಗತಿಶೀಲ ಸಂಘದ ಸದಸ್ಯತ್ವದಿಂದ, ಇಲ್ಲವೆ ಸಮತಾವಾದವನ್ನು ಸಾಧಿಸುವುದರಿಂದ ಸಾಹಿತ್ಯ ಗುಣ ಇಲ್ಲವೆ ಪ್ರಗತಿಯು ಯಾವ ಕೃತಿಯಲ್ಲಿಯೂ ಕಂಡುಬರಲಾರದೆಂಬುದನ್ನೂ ನಾವು ನೆನಪಿಡಬೇಕಲ್ಲವೆ? ಯಾವ ಕೃತಿಯೇ ಆಗಲಿ, ಅದನ್ನು ಯಾರೇ ಬರೆದಿರಲಿ,- ಮೊದಲು ಅದು ಉಳಿದ ಎಲ್ಲ ಕೃತಿಗಳಂತೆ ಸಾಹಿತ್ಯವಾಗಿದೆಯೋ ಇಲ್ಲವೋ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಆ ಮೇಲೆ- ಅದರಲ್ಲಿ ಪ್ರಗತಿಯಿದೆಯೆ? ಇದ್ದರೆ ಎಂಥ ಪ್ರಗತಿ? ಇವೇ ಮೊದಲಾದ ಪ್ರಶ್ನೆಗಳು ಬರುವವು ಎಂದು ಗೋಕಾಕರು ಹೇಳಿದ್ದಾರೆ. ಪ್ರಗತಿಶೀಲರು ತಮ್ಮ ಸಿದ್ಧಾಂತವನ್ನು ಬಲವಾಗಿಯೇ ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದರು. ಸಮಾಜವು ಆಂದೋಲನದಲ್ಲಿ ಸಿಕ್ಕಾಗ ಬರೆಹಗಾರ ತನ್ನ ಹಿತ ದೃಷ್ಟಿಯಿಂದ ತಾನು ಅಡಗಿಕೊಂಡ ಸ್ವಪ್ನಸದನದಿಂದ ಹೊರಗಿಳಿಯಬೇಕು ಎಂಬುದು ಪ್ರಗತಿಶೀಲರ ಘೋಷಣೆ. ಪ್ರಗತಿಶೀಲ ಬರೆಹಗಾರರಾದ ನಾವು ಇಂದು ನಮ್ಮ ಹಾಗೂ ಜಗತ್ತಿನ ಸಕಲ ಜನತೆಯ ಸಾಮ್ರಾಜ್ಯಶಾಹಿ ಮತ್ತು ಫ್ಯಾಸಿಸಂಗಳ ವಿರುದ್ಧ ಹೋರಾಟದಲ್ಲಿ ಬೆಂಬಲಿಗರಾಗಿ ನಿಲ್ಲುತ್ತೇವೆ ಎನ್ನುವುದು ಅವರ ಪ್ರತಿಜ್ಞೆ. ಪ್ರತಿಗಾಮಿ ಸಾಮ್ರಾಜ್ಯಶಾಹಿ ನಮ್ಮ ಸ್ವಾತಂತ್ಯ್ರದ ದಾರಿಯಲ್ಲಿ, ಐಕ್ಯತೆಯ ಮಾರ್ಗದಲ್ಲಿ ಅಡ್ಡ ನಿಂತಾಗ ಪ್ರಗತಿಶೀಲತೆ ನಮ್ಮ ಜನತೆಗೆ ಆಶೆ ಸ್ವಾತಂತ್ಯ್ರಗಳ ಸಂದೇಶವನ್ನು ಸಾರಿ ಸಂಘಟಿತವಾದ ಯತ್ನದ ಮುಂದೆ ಸ್ವಾತಂತ್ಯ್ರ ಅನಿವಾರ್ಯವೆಂದು ತೋರಿಸಿಕೊಡಬೇಕಾಗಿದೆ ಎಂಬುದು ಆಶಯ. ಪ್ರಗತಿಶೀಲ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡ ಕನ್ನಡದ ಪ್ರಮುಖ ಬರೆಹಗಾರರಲ್ಲಿ ಕೆಲವರನ್ನು ಬಿಟ್ಟರೆ ಬಹುಪಾಲು ಇತರರು ಮಾರ್ಕ್ಸ್ವಾದಿಗಳಾಗಿರಲಿಲ್ಲ. ಸೈದ್ಧಾಂತಿಕವಾಗಿ ಕೆಲವರು ಆ ವಾದದ ಜನಪರತೆಯ ಬಗ್ಗೆ ಸಹಾನುಭೂತಿ ಯುಳ್ಳವರಾಗಿದ್ದರು. ಇನ್ನು ಕೆಲವರು ರಷ್ಯದ ಕುರಿತು ಹೊಂದಿದ್ದ ಮೆಚ್ಚುಗೆಯು ಪರೋಕ್ಷವಾಗಿ ಮಾರ್ಕ್ಸ್ವಾದವನ್ನು ಅವರು ಸಮರ್ಥಿಸುವ ಹಾಗೆ ಮಾಡಿತು. ಪ್ರಗತಿಶೀಲ ಸಾಹಿತ್ಯವೆಂದರೇನೆಂಬ ಇವರ ಗ್ರಹಿಕೆಯಾಗಲಿ ಅದಕ್ಕೆ ಹಿನ್ನೆಲೆಯಾದ ಸಾಮಾಜಿಕ ಸಿದ್ಧಾಂತದ ದೃಷ್ಟಿ- ಪ್ರಜ್ಞೆಯಾಗಲಿ ಏಕ ರೂಪದ್ದಾಗಿರಲಿಲ್ಲ.೭೮ ಪ್ರಗತಿಶೀಲರಲ್ಲಿ ಪ್ರಮುಖ ಕೊರತೆಯನ್ನು ಅವರ ವಿಮರ್ಶಾಪ್ರಜ್ಞೆಯಲ್ಲಿ ಗುರುತಿಸಬಹುದು. ಸಾಹಿತ್ಯ ಮಾರ್ಗಗಳ ಗ್ರಹಿಕೆ ಅವಲೋಕನದಲ್ಲಿ ಏಕರೂಪತೆ, ಸ್ಥೂಲ, ಸಾಮಾನ್ಯೀಕರಣದಲ್ಲಿ ಅಭಿಪ್ರಾಯ ಸಾಮ್ಯ ಪ್ರಗತಿಶೀಲರಲ್ಲಿ ವ್ಯಕ್ತವಾಗದಿರುವುದಕ್ಕೆ ಕಾರಣ ಪ್ರಗತಿಶೀಲ ಆಂದೋಲನ ವಿಮರ್ಶೆಯನ್ನು ಬೆಳೆಸಲಿಲ್ಲ ಎಂಬುದೇ ಆಗಿದೆ. ನವೋದಯ ಸಾಹಿತ್ಯ ಬೆಳೆದಾಗ ಅದರ ಜೊತೆಯಲ್ಲಿಯೇ ನವೋದಯ ವಿಮರ್ಶೆ ಬೆಳೆಯಿತು. ಟಿ.ಎಸ್.ವೆಂಕಣ್ಣಯ್ಯನವರು, ಎ.ಆರ್.ಕೃಷ್ಣಶಾಸ್ತ್ರಿಗಳು, ಬಿ.ಎಂ.ಶ್ರೀಕಂಠಯ್ಯನವರು, ಡಿ.ವಿ.ಜಿ., ಎಸ್.ವಿ.ರಂಗಣ್ಣ, ವಿ.ಸೀತಾರಾಮಯ್ಯ ಮೊದಲಾದವರು ನವೋದಯ ವಿಮರ್ಶೆಯನ್ನು ಬೆಳೆಸಿದರು. ಆದರೆ ಪ್ರಗತಿಶೀಲರಲ್ಲಿ ಇದು ಆಗಲಿಲ್ಲ. ಪ್ರಗತಿಶೀಲರಲ್ಲಿ ಮುಂಚೂಣಿಯಲ್ಲಿದ್ದ ಅನಕೃ ತಮ್ಮ ಎಲ್ಲ ಕೃತಿಗಳನ್ನು ಸಿದ್ಧಾಂತಪರವಾಗಿ ಬರೆಯಲಿಲ್ಲ. ಹೀಗಾಗಿ ಅವರು ಮಾರ್ಕ್ಸ್ವಾದಿ ಚಿಂತಕರಿಗೆ ಸೇರಲಿಲ್ಲ. ಅನಕೃ ಅವರ ಜೀವನ ಯಾತ್ರೆ, ಉದಯ ರಾಗ ಕಾದಂಬರಿಗಳನ್ನು ಪ್ರಗತಿಶೀಲ ಕೃತಿಗಳು ದು ಒಪ್ಪಿಕೊಂಡರೂ ಇನ್ನುಳಿದ ಕೆಲವು ಕೃತಿಗಳನ್ನು ಹಾಗೆಂದು ಒಪ್ಪಿಕೊಳ್ಳುವುದು ಸಾಧ್ಯವಿರಲಿಲ್ಲ. ತಮ್ಮ ಕೃತಿಗಳಿಗೆ ಟೀಕೆಗಳು ಬಂದಾಗ ಅದನ್ನು ಸಹಿಸಿಕೊಳ್ಳುವಂಥ ಸಹನಶೀಲರು ಅನಕೃ ಆಗಿರಲಿಲ್ಲ. ಅನಕೃ ಅವರಿಗೆ ದೊಡ್ಡ ಓದುಗ ಪಡೆ ಇತ್ತು. ಅವರ ಕಾದಂಬರಿಯ ಒಂದು ಪುಟಕ್ಕೆ ಇಷ್ಟು ಹಣ ಎಂದು ಪ್ರಕಾಶಕರು ನಿಗದಿ ಮಾಡಿಕೊಂಡು ಅವರಿಂದ ಕೃತಿಯನ್ನು ಪ್ರಕಟಣೆಗೆ ಪಡೆಯುತ್ತಿದ್ದರು. ಹೀಗಾಗಿ ಜನಪ್ರಿಯ ಮಾರ್ಗವನ್ನು ಹಿಡಿಯುವುದು ಅವರಿಗೆ ಅನಿವಾರ್ಯವೂ ಆಗಿತ್ತು. ಜೀವನ ನಿರ್ವಹಣೆಗೆ ಸಾಹಿತ್ಯ ರಚನೆಯೇ ಉದ್ಯೋಗ ಎನ್ನುವ ಹಾಗೆ ಆಗಿತ್ತು. ಕೇವಲ ಅನಕೃ ಮಾತ್ರವಲ್ಲ, ತರಾಸು ಕೂಡ ಜನಪ್ರಿಯ ಲೇಖಕರೇ ಆಗಿದ್ದರು. ಹೀಗಾಗಿ ಸಿದ್ಧಾಂತಪರವಾಗಿ ಬರೆಯುವುದು ಅವರಿಗೆ ಸಾಧ್ಯವಾಗಲಿಲ್ಲ. ಅವರ ಮಹತ್ವಾಕಾಂಕ್ಷೆಯ ಕೃತಿಗಳಾದ
ಸಾಹಿತ್ಯ ರತ್ನ’,
ನಟಸಾರ್ವಭೌಮ'ಗಳನ್ನು ಮಾರ್ಕ್ಸ್ವಾದಿ ವಿಮರ್ಶಕರು ಅಗ್ಗದ ಜನಪ್ರಿಯತೆಯ ದಾರಿ ಹಿಡಿದ ಕೃತಿಗಳಾಗಿ ಕಂಡರು. ಈ ವೇಳೆಗೆ ಬಸವರಾಜ ಕಟ್ಟಿಮನಿಯವರು
ಉಷಾ’
ಪತ್ರಿಕೆಯನ್ನು ನಡೆಸುತ್ತಿದ್ದರು. ಅದರಲ್ಲಿ ಅವರು ನಟಸಾರ್ವಭೌಮ ಕೃತಿಯನ್ನು
ವಿಟಸಾರ್ವಭೌಮ ಎಂದು ಟೀಕಿಸಿದರು. ಪ್ರಗತಿಶೀಲ ಆಂದೋಲನದ ಬರೆಹ- ಕತೆಗಳಿಗೆ
ಸಾಕಷ್ಟು ಅವಕಾಶ ಕೊಡುತ್ತಿದ್ದ ಆ ಪತ್ರಿಕೆಯಲ್ಲಿ ಅನಕೃ ಕುರಿತು ಕಠೋರ ಟೀಕೆಗಳು
ಬಂದವು. ೧೯೪೫ರಲ್ಲಿ ವಾಣಿ' ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ನಿರಂಜನರು, ``ಕಳೆದ ಎರಡು ವರ್ಷಗಳಲ್ಲಿ ಚಿತ್ರವಿಚಿತ್ರವಾಗಿ ನಮ್ಮ ನಾಡಿನಲ್ಲೂ, ಪ್ರಗತಿಶೀಲ ಲೇಖಕರ ಆಂದೋಲನ ಹುಟ್ಟಿಕೊಂಡು ಬೆಳೆದಿದೆ.. ಅಸಹಿಷ್ಣುತೆ ನಮ್ಮ ಧರ್ಮವಾಗಿದೆ. ಪರ ನಿಂದೆ ಅನುದಿನದ ಆಚರಣೆಯಾಗಿದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಅಂದಿನ ಕಲುಷಿತ ವಾತಾವರಣವನ್ನು ತಿಳಿಸುತ್ತದೆ. ಪ್ರಗತಿಶೀಲ ಸಿದ್ಧಾಂತಪರ ಇದ್ದವರು ಸಾಹಿತ್ಯ ಚಳವಳಿಯನ್ನು ಸರಿಯಾದ ದಾರಿಯಲ್ಲಿ ಮುನ್ನೆಡೆಸಲು ಕೈಗೊಂಡ ಕ್ರಮ ಇದಾಗಿದೆ. ಇದಕ್ಕೆ ಅವರು ಬಳಸಿಕೊಂಡ ಮಾಧ್ಯಮ ಪತ್ರಿಕೆಯಾಗಿದೆ. ಪ್ರಗತಿಶೀಲ ಚಳವಳಿಯನ್ನು ಕಮ್ಯುನಿಸ್ಟ್ ಪಾರ್ಟಿಯ ಅಂಗವನ್ನಾಗಿ ಮಾಡಲು ಕೆಲವರು ಪ್ರಯತ್ನಿಸಿದರು ಎನ್ನುವುದು ಅನಕೃ ಆರೋಪ. ರಷ್ಯಾ, ಚೀಣ ಮಾದರಿಯ ಕಮ್ಯುನಿಸಂ ನಮ್ಮ ದೇಶಕ್ಕೆ, ನಮ್ಮ ಸಾಹಿತ್ಯಕ್ಕೆ ಅನಗತ್ಯ ಎಂಬ ನಂಬಿಕೆಯವರು ಅನಕೃ. ನಮ್ಮ ಉಪನಿಷತ್ತುಗಳಲ್ಲಿಯೇ ಅವರು ಸಾಮ್ಯವಾದದ ತತ್ವಗಳನ್ನು ಗುರುತಿಸುತ್ತಾರೆ. ತಮ್ಮ ಕೃತಿಗಳ ಬಗೆಗೆ ಬಂದ ಟೀಕೆಗಳಿಗೆ ಉತ್ತರಿಸಲು ಅವರು
ಸಾಹಿತ್ಯ ಮತ್ತು ಕಾಮ ಪ್ರಚೋದನೆ’ ಎಂಬ ಕೃತಿಯನ್ನು ರಚಿಸಿದರು.
ಪ್ರಗತಿಶೀಲರಲ್ಲಿ ಪ್ರಮುಖವಾಗಿ ಕಂಡುಬರುವುದು ವ್ಯವಸ್ಥೆಯ ಬಗೆಗಿನ ರೊಚ್ಚು,
ಆವೇಶ, ಭಾವಾತಿರೇಕ. ಇದರ ಪರಿಣಾಮವಾಗಿ ಭಾಷೆ ತನ್ನ ಸೂಕ್ಷ್ಮತೆಯನ್ನು, ಚಿತ್ರಣ
ಕಲಾತ್ಮಕ ಸ್ಪರ್ಶವನ್ನು, ಗ್ರಹಿಕೆ ವಾಸ್ತವಿಕತೆಯನ್ನು ಕಳೆದುಕೊಂಡುಬಿಡುತ್ತದೆ. ಅನಕೃ, ತರಾಸು,
ಕಟ್ಟಿಮನಿ ಮೊದಲಾದವರಿಗೆ ಈ ಮಾತು ಅನ್ವಯಿಸುತ್ತದೆ. ಅನೇಕ ಐತಿಹಾಸಿಕ ಕೃತಿಗಳನ್ನು
ರಚಿಸಿದ ತರಾಸು ಅವರಲ್ಲಿ ಇತಿಹಾಸದ ಶಕ್ತಿಗಳ ಸಂಘರ್ಷದ ವಸ್ತುನಿಷ್ಠ ಗ್ರಹಿಕೆಯ
ಅಭಾವ ಕಾಣುತ್ತೇವೆ. ಇತಿಹಾಸದ ಘಟನೆಗಳಲ್ಲೂ ಮಾನವರ ಕ್ರಿಯೆಗಳು ಮೂರ್ತರೂಪ
ಪಡೆಯುವಂಥದ್ದು ಎಂಬ ಅರಿವು ಅವರಲ್ಲಿಲ್ಲ. ತರಾಸು ಅವರ ದುರ್ಗಾಸ್ತಮಾನ' ಕಾದಂಬರಿಯ ಬಗೆಗೆ ಶಿವರಾಮು ಕಾಡನಕುಪ್ಪೆ ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಇದನ್ನು ನಾವು ಕಾಣಬಹುದು. ``ಆಧುನಿಕ ಲೇಖಕನಾಗಿ ಇತಿಹಾಸದ ವಸ್ತುವೊಂದನ್ನೆತ್ತಿಕೊಂಡು ತಾವು ಬರೆಯುವಾಗ ಸಮಕಾಲೀನ ಮೌಲ್ಯಗಳು ಅದರಲ್ಲಿ ವ್ಯಕ್ತವಾಗಬೇಕಾದ ಅಗತ್ಯ, ಗತಕಾಲದ ಚಿತ್ರಣ ವರ್ತಮಾನದ ದೃಷ್ಟಿಕೋನದಿಂದ ಹೊಸ ಅರ್ಥ-ರೂಪ ಪಡೆಯಬೇಕಾದ ಮಹತ್ವ, ವಸ್ತು ಇತಿಹಾಸವಾದರೂ ವರ್ತಮಾನದ ಬದುಕಿಗೆ ಅದು ಹೇಗೆ ಸಂಗತವೆನ್ನುವ ಪ್ರಶ್ನೆ ಇವಾವವೂ ತರಾಸು ಅವರನ್ನು ಬಾಧಿಸದೆ ಒಂದು ಪುಟ್ಟ ಪಾಳೆಗಾರಿ ಸಂಸ್ಥಾನದ ರಾಜನೊಬ್ಬನ ಕುರಿತ ಭಾವುಕ ಅಭಿಮಾನವೇ ಮುಖ್ಯವಾಗಿ ಲೇಖಕನ ವಸ್ತುನಿಷ್ಠ ದೃಷ್ಟಿ ತೀರಾ ಸಂಕುಚಿತವಾಗಿದೆ''೭೯ ಎಂಬ ಅಭಿಪ್ರಾಯ ಅಂಥ ಎಲ್ಲ ಐತಿಹಾಸಿಕ ಕಾದಂಬರಿಗಳಿಗೆ ಅನ್ವಯಿಸುವಂಥದ್ದು. ಪ್ರಗತಿಶೀಲ ಕೃತಿಗಳು ಕತೆ, ಕಾದಂಬರಿಗಳ ರೂಪದಲ್ಲಿ ಮಾತ್ರವಲ್ಲದೆ ಶ್ರೀರಂಗರಂಥ ನಾಟಕಕಾರರು, ಅಡಿಗ, ರಾಮಚಂದ್ರ ಶರ್ಮರಂಥ ಕವಿಗಳ ಕೃತಿಗಳಲ್ಲೂ ಕಾಣಿಸಿಕೊಂಡಿದೆ. ಕನ್ನಡ ಸಾಹಿತ್ಯವನ್ನು ವಾಸ್ತವ ವಾದದ ದಿಕ್ಕಿನಲ್ಲಿ ಕೊಂಡೊಯ್ದ ಕಾರಣಕ್ಕೆ ಪ್ರಗತಿಶೀಲರ ಸಾಧನೆ ಮಹತ್ವದ್ದೇ. ನವೋದಯ ಸಾಹಿತ್ಯವನ್ನು ಪ್ರಗತಿಶೀಲರು ಹಲವು ಬಗೆಯಲ್ಲಿ ಪ್ರಶ್ನಿಸಿದರು. ಅನೇಕ ಸವಾಲುಗಳನ್ನು ಎಸೆದರು. ಈ ಒಂದು ಮುಖಾಮುಖಿ ಮುಂದೆ ನವ್ಯದವರು ನವೋದಯಕ್ಕೆ ಪ್ರಹಾರವನ್ನು ಕೊಡುವುದಕ್ಕೆ ಸುಲಭವನ್ನಾಗಿ ಮಾಡಿತು. ಪ್ರಗತಿಶೀಲ ಚಳವಳಿ ಸಾಹಿತ್ಯದ ಸಹಜ ಬೆಳವಣಿಗೆಯಾಗಿ ಮೂಡಿಬಂದದ್ದು ಅಲ್ಲ. ನವೋದಯ ಸಾಹಿತ್ಯ ಸೃಷ್ಟಿ ಇನ್ನೂ ಶಕ್ತಿಶಾಲಿಯಾಗಿಯೇ ಇದ್ದಾಗ ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಂಡಿದ್ದೂ ಅದು ಅಪೇಕ್ಪಿತ ಯಶಸ್ಸು ಸಾಧಿಸುವುದು ಸಾಧ್ಯವಾಗಲಿಲ್ಲ. ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಳ್ಳುವುದಕ್ಕೆ ಈ ಮಣ್ಣಿನಿಂದಲೇ ಪ್ರಚೋದನೆ ಮೂಡಿ ಬರಲಿಲ್ಲ. ಅದಕ್ಕೆ ಪೂರಕವಾದ ಸಾಮಾಜಿಕ ಪ್ರೇರಣೆ ಚಳವಳಿ ರೂಪದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ನವ್ಯದ ಯಶಸ್ಸಿನಲ್ಲಿ ಪ್ರಗತಿಶೀಲದ ಪಾಲನ್ನು ಅಲ್ಲಗಳೆಯುವಂತಿಲ್ಲ. ಪ್ರಗತಿಶೀಲ ವಿಮರ್ಶಕರು ಸಾಹಿತ್ಯದಲ್ಲಿ ಪ್ರತಿಗಾಮಿ ನಿಲುವುಗಳನ್ನು, ರಾಜಕಾರಣಗಳನ್ನು ಗುರುತಿಸುತ್ತಾರೆ. ಸಾಹಿತ್ಯದ ಓದು ಸೌಂದರ್ಯಾನುಭವಕ್ಕಾಗಿ ಮಾತ್ರ ಅಲ್ಲ. ಅದೊಂದು ಸಾಮಾಜಿಕ ಅನುಸಂಧಾನ. ಸಾಹಿತ್ಯ ಮತ್ತು ವಿಮರ್ಶೆಯ ನಡುವಣ ಸಂಬಂಧ ಸಾಹಿತ್ಯ ಮತ್ತು ಸಮಾಜದ ನಡುವಣ ಸಂಬಂಧ ಎಂದು ಅವರು ತಿಳಿಯುತ್ತಾರೆ. ಸಾಹಿತ್ಯ ಕೃತಿ ತನಗೆ ತಾನೇ ಸ್ವತಂತ್ರ ಅಲ್ಲ. ಸಮಾಜದ ನಡುವೆ ಸಾಹಿತ್ಯ ಕೃತಿ ಬಂದಾಗ ಸಮಾಜ ಅದಕ್ಕೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ವಿಮರ್ಶೆಯ ಬೀಜ ಇಲ್ಲಿಯೇ ಇರುವುದು. ಇಲ್ಲಿ ಸಮಾಜ ಎಂದರೆ ಅಮೂರ್ತ ಕಲ್ಪನೆಯಲ್ಲ.
ಪ್ರತಿಗಾಮಿ
ಎಂಬುದು ಒಂದು ರಾಜಕೀಯ ಪರಿಕಲ್ಪನೆಯಾದರೂ ಮೂಲತಃ ಒಂದು ನಿರ್ದಿಷ್ಟ
ಐತಿಹಾಸಿಕ ಬೆಳವಣಿಗೆಯಲ್ಲಿ ಜರುಗುವ ಸಾಮಾಜಿಕ ಸಾಂಸ್ಕೃತಿಕ ಘರ್ಷಣೆಯ
ಸಂದರ್ಭದಲ್ಲಿ ಯಾವ ಶಕ್ತಿಗಳು ಈ ಘರ್ಷಣೆಯನ್ನು ಹತ್ತಿಕ್ಕಲು ಹವಣಿಸುತ್ತವೆ,
ಚಲನಶೀಲತೆಗೆ ಅಡ್ಡಿಯಾಗುತ್ತವೆ ಮತ್ತು ಹಿಂದಕ್ಕೆ ಜಗ್ಗುತ್ತವೆಯೋ ಅಂಥ ಶಕ್ತಿಗಳು
ಪ್ರತಿಗಾಮಿಯಾಗಿರುತ್ತವೆ’ ಎಂಬ ಅಭಿಪ್ರಾಯವನ್ನು ಇಲ್ಲಿ ಗಮನಿಸಬೇಕು.೮೦
ಪ್ರಗತಿಪರ ವಿಮರ್ಶಕನಿಗೆ ಒಂದು ಸಾಹಿತ್ಯ ಕೃತಿಯನ್ನು ಸಮಾಜದೊಳಗೆ, ಜನತೆಯ
ನಡುವೆ ಇಟ್ಟು ಮೌಲ್ಯಮಾಪನ ಮಾಡುವುದು ಮುಖ್ಯವಾಯಿತು. ಕಲೆ ಕಲೆಗಾಗಿಯೂ
ಅಲ್ಲ, ವಿಮರ್ಶೆ ವಿಮರ್ಶೆಗಾಗಿಯೂ ಅಲ್ಲ. ಅವು ಸಮಾಜದ ಪ್ರತಿಕ್ರಿಯೆಯಾಗಿರಬೇಕು
ಎಂಬ ನಿಲುವು ಕೃತಿ ನಿಷ್ಠ ವಿಮರ್ಶೆ, ರೂಪವಾದಿ ವಿಮರ್ಶೆಗಳನ್ನು ವಿರೋಧಿಸಿತು.
ಇಲ್ಲಿಯೇ ನಾವು ೞಜಯಕರ್ನಾಟಕ'ದಲ್ಲಿ ಪ್ರಕಟವಾದ ಒಂದು ಲೇಖನವನ್ನು ಗಮನಿಸಬೇಕು.೮೧ ಇದನ್ನು ಬರೆದವರು ಜವಾಹರಲಾಲ ನೆಹರೂ ಅವರು. ಪ್ರಕಟವಾದ ವರ್ಷ ೧೯೩೮. ಹಿಂದೀ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಲೇಖನವನ್ನು ಅನುವಾದಿಸಿ ಅದರಲ್ಲಿ ಪ್ರಕಟಿಸಲಾಗಿದೆ.
ಪ್ರಗತಿಪರ ಲೇಖಕರು’ ಎಂಬುದು ಲೇಖನದ ಶೀರ್ಷಿಕೆ.
ಆ ಕಾಲದ ಸಾಹಿತ್ಯಿಕ ಪತ್ರಿಕೆಗಳು ಆಯಾ ಕಾಲದ ಸಾಹಿತ್ಯಕ ಒಲವುಗಳನ್ನು ಗುರುತಿಸಿ
ಅದೇ ರೀತಿಯ ಲೇಖನಗಳನ್ನು ಪೂರಕವಾಗಿ ಪ್ರಕಟಿಸುತ್ತಿತ್ತು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ.
ಇದರಲ್ಲಿ ನೆಹರೂ ಅವರು ಪ್ರಗತಿಪರ ಸಾಹಿತ್ಯವೆಂದರೇನು? ಸಾಹಿತ್ಯ
ನಿರ್ಮಿತಿಯು ಯಾರ ಸಲುವಾಗಿ ನಡೆಯುತ್ತದೆ? ಬರೆಹಗಾರರು ಬರೆಯುವುದಾದರೂ
ಯಾತಕ್ಕೆ?.. ಇವೇ ಮೊದಲಾದ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾರೆ. ಲೇಖಕರ ಲೇಖನದ
ಹಿಂದೆ ದೊಡ್ಡ ತತ್ವವಿರದಿದ್ದರೆ ಇಲ್ಲವೆ ಉದಾತ್ತ ವಿಚಾರ ಸರಣಿಯಿರದಿದ್ದರೆ ವಾಚಕರ
ಮನಸ್ಸಿನ ಮೇಲೆ ಅದರ ಪರಿಣಾಮವಾಗಲಾರದು. ಜಗತ್ತಿನಲ್ಲಿ ಬರೆಹಗಾರರು ಸಾವಿರಗಟ್ಟಲೆ
ಹುಟ್ಟುತ್ತಾರೆ; ಆದರೆ ಚಿರಕಾಲೀನ ಕೃತಿಗಳ ಹಿಂದೆ ಯಾವೊಂದು ದೊಡ್ಡ ತತ್ವವಾಗಲಿ,
ಒಂದು ವ್ಯಾಪಕ ಪ್ರಮೇಯವನ್ನು ಬಿಡಿಸುವ ಪ್ರಯತ್ನವಾಗಲಿ ಇದ್ದುದು ಕಂಡು ಬರುತ್ತದೆ ಎಂದು ನೆಹರೂ ಹೇಳುತ್ತಾರೆ.
ಸಾಹಿತ್ಯದ ಪ್ರಸಾರವಾಗುವಷ್ಟು ರಾಜಕೀಯ ಚಳವಳಿಯದಾಗಲಾರದು.
ಸಾಹಿತ್ಯೋಪಾಸಕರು ಹೋಗುವಲ್ಲೆಲ್ಲ ರಾಜನೀತಿ ವಿಶಾರದರು ಹೋಗಲಾರರು.
ಲೇಖಕನು ಸಾಮಾನ್ಯ ಜನತೆಯ ಸಾದಾ ಸೀದಾ ಮಾತುಗಳನ್ನು ಬಲ್ಲವನಾಗಿರುವನು;
ಅದರ ಸಹಾಯದಿಂದ ಕಲ್ಪನಾ ಪ್ರಪಂಚವನ್ನೂ, ವಾಸ್ತವ ಪ್ರಪಂಚವನ್ನೂ ಸಂಧಿಸುವ
ಸೇತುವೆಯನ್ನು ಕಟ್ಟಬಲ್ಲನು. ಸಾಮಾನ್ಯ ಜನತೆಯು ಕೂಡ ಆ ಸೇತುವೆಯ ಮಾರ್ಗವಾಗಿ
ಆದರ್ಶ ಪ್ರಪಂಚದ ಮೆಟ್ಟಿಲನ್ನು ಮುಟ್ಟಬಹುದು. ಆದರ್ಶ ವಿಶ್ವವನ್ನು ಕಲ್ಪನೆಯಿಂದ
ಒಮ್ಮೆ ತಿಳಿದುಕೊಂಡರೆ, ಜನಸಾಮಾನ್ಯರು ಅದನ್ನು ಮುಟ್ಟಿಯೇ ಬಿಡುವ ಪ್ರಯತ್ನಕ್ಕೆ
ತೊಡಗುತ್ತಾರೆ ಎನ್ನುವ ನೆಹರೂ ಸಾಹಿತ್ಯದ ಅಂತಿಮ ಗುರಿ ಮನುಷ್ಯನೇ ಎನ್ನುವುದನ್ನು
ವಿವರಿಸುವರು. ಸಾಹಿತ್ಯ ತನ್ನಷ್ಟಕ್ಕೆ ತಾನೇ ಪರಿಪೂರ್ಣವಲ್ಲ. ಅದರಿಂದ ಸಮಾಜಕ್ಕೆ
ಏನಾದರೂ ಪ್ರಯೋಜನ ಆಗಬೇಕು. ಹಾಗಂತ ಅವರು ಸಾಹಿತಿಯ ವ್ಯಕ್ತಿ ವೈಶಿಷ್ಟ್ಯವನ್ನು ಅಲ್ಲಗಳೆಯುವುದಿಲ್ಲ.
ಸಾಹಿತಿಯಾಗಲಿ, ಕಲಾಕೋವಿದನಾಗಲಿ ತನ್ನದೊಂದು ವೈಶಿಷ್ಟ್ಯ
ವುಳ್ಳವನಾಗಿರುತ್ತಾನೆ; ಅದಕ್ಕೆ ವ್ಯಕ್ತಿತ್ವ (individuality) ಎನ್ನುವರು. ವ್ಯಕ್ತಿತ್ವವಿರದವನು
ಕಲಾವಿದನಾಗಲಾರನು. ಆದರೀ ವ್ಯಕ್ತಿತ್ವವು ಅವನನ್ನು ಸಮಾಜದಿಂದ
ದೂರಕ್ಕೊಯ್ಯುವಂತಹದ್ದಾಗಿದ್ದರೆ, ಅಥವಾ ಸಮಾಜ ಪೀಡಕ ಪರಿಸ್ಥಿತಿಯ ದೆಸೆಯಿಂದ ಆ
ವ್ಯಕ್ತಿತ್ವದ ಬೆಳಕು ಬೀಳುತ್ತಿದ್ದರೆ, ಆ ಲೇಖಕನು ಕೆಲಸಕ್ಕೆ ಬಾರದವನಾಗಿರುವನು. ಅವನ
ಲೇಖನ ಶಕ್ತಿಯು ಸಮಾಜವನ್ನು ಪ್ರಗತಿಪರವಾಗಿ ಮಾಡಲಾರದು. ಆದರೆ ಅವನ
ವ್ಯಕ್ತಿತ್ವದಲ್ಲಿ ಸಮಾಜದ ಸುಖ ದುಃಖಗಳಿಗೊಂದು ಸ್ಥಾನವಿದ್ದಿದ್ದರೆ ಮಾತ್ರ ಅದಕ್ಕೊಂದು
ಮಹತ್ವ ಬರುವುದು. ಅದರಲ್ಲಿ ರಾಷ್ಟ್ರದ ಶಕ್ತಿಯು ಕೇಂದ್ರೀಭೂತವಾಗಿರುವುದು ಮತ್ತು
ಅದನ್ನುಳ್ಳವನು ರಾಷ್ಟ್ರವನ್ನಲ್ಲಾಡಿಸುವ ಸಾಮರ್ಥ್ಯವುಳ್ಳವನಾಗುವನು ಎನ್ನುವ ಮಾತಿನಲ್ಲಿ
ಯಾರು ಪ್ರಗತಿಪರ ಲೇಖಕರು ಎನ್ನುವುದನ್ನು ಅವರು ಹೇಳುವರು.
ಬರೆಹಗಾರನು ಬರೆಯುವುದೇತಕ್ಕೆ? ಏಕೆಂದರೆ, ಅವನ ಕಲ್ಪನಾ ಲೋಕದಲ್ಲಿ
ಹೊಸದೊಂದು ಜಗತ್ತು ರೂಪುಗೊಂಡಿರುತ್ತದೆ. ಅವನಿಗೆ ಅನಿಸುವುದು, ತಾನು ಆ ಹೊಸ
ಸೃಷ್ಟಿಯನ್ನು ಮುಟ್ಟಬಲ್ಲನೆಂದು. ಆದರೆ ಹಾಗೆ ಮಾಡುವ ಒಂದು ಉಪಾಯವು
ಅವನಮಟ್ಟಿಗಿರುತ್ತದೆ; ಅದೆಂದರೆ ಅವನ ಆದರ್ಶದ ಸ್ಪುರದ್ದರ್ಶನವನ್ನು ಬೇರೆಯವರಿಗೆ
ಮಾಡಿಸುವುದು. ಅಲ್ಲದೆ ವಾಸ್ತವಿಕ ಮತ್ತು ಕಾಲ್ಪನಿಕ ಜಗತ್ತುಗಳ ನಡುವಿನ ಅಂತರವನ್ನು
ಜೋಡಿಸುವ ಸೇತುವೆಯನ್ನು ಕಟ್ಟುವುದು. ಲೇಖಕರು ಈ ಸಂಧಿಕಾರ್ಯವನ್ನು
ಮಾಡುವರು. ಓದುಗರು ಕುತೂಹಲದಿಂದಲಾದರೂ ಈ ನವನಿರ್ಮಾಣವನ್ನು
ಮೊಟ್ಟಮೊದಲು ದಿಟ್ಟಿಸಿದರೆ, ಅವರು ಸ್ವತಂತ್ರವಾಗಿಯೇ ಆ ಸೃಷ್ಟಿಯತ್ತ ಹೋಗಲು
ಪ್ರಯತ್ನಿಸುವರು ಎನ್ನುವ ನೆಹರೂ ಲೇಖಕನ ಜವಾಬ್ದಾರಿಯನ್ನು ತಿಳಿಸಿಕೊಡುವರು.
ಪ್ರಗತಿಶೀಲ ಚಿಂತನೆಯ ವಿಮರ್ಶೆಯ ಮಾನದಂಡಗಳನ್ನು ನಾವು ನೆಹರೂರವರ ಈ
ಲೇಖನದಲ್ಲಿಯೇ ಕಂಡುಕೊಳ್ಳಬಹುದಾಗಿದೆ.
ಸಾಹಿತ್ಯ ವಿಮರ್ಶೆಯ ಮೂಲ ಪ್ರಶ್ನೆ ಅಂದರೆ ಕಲೆಗೂ ಜೀವನಕ್ಕೂ ಇರುವ
ಸಂಬಂಧವನ್ನು ವಿವರಿಸುವುದು. ಈ ಒಂದು ಅಂಶದ ಮೇಲಿಂದಲೇ ವಿಮರ್ಶಕ, ಸಾಹಿತಿ,
ಲೇಖಕರನ್ನು ಪುರೋಗಾಮಿ ಅಥವಾ ಪ್ರತಿಗಾಮಿ ಎಂದು ವಿಂಗಡಿಸಬಹುದು. ಪ್ರಗತಿಪರ
ವಿಮರ್ಶೆ ಹೇಗಿರುತ್ತದೆ? ಪ್ರಗತಿಪರ ವಿಮರ್ಶಕನಿಗೆ ಕಲೆಯಾಗಲಿ ಸಾಹಿತ್ಯವಾಗಲಿ
ಕಲೆಗಾರನ ಅಥವಾ ಸಾಹಿತಿಯ ವ್ಯಕ್ತಿಗತ ಸೊತ್ತಲ್ಲ. ಇದನ್ನೇ ಇನ್ನೊಂದು ಮಾತಿನಲ್ಲಿ
ಹೇಳುವುದಾದರೆ ಕಲಾಕೃತಿಯೊಂದರ ಉಗಮಕ್ಕೆ ಆ ಕಲಾಕಾರನ ಬುದ್ಧಿಶಕ್ತಿಯೇ
ಸಂಪೂರ್ಣ ಕಾರಣವಲ್ಲ. ಸಾಹಿತ್ಯ ಸೃಷ್ಟಿಯು ಸಾಮಾಜಿಕ ಪ್ರಜ್ಞೆಯ ವಿವಿಧ ಸ್ವರೂಪಗಳ
ಪರಿಣಾಮವಾಗಿರುತ್ತದೆ. ಸಮಾಜವೇ ಸಾಹಿತ್ಯದ ಉಗಮಕ್ಕೆ ಕಾರಣ. ಈ ಕಾರಣಕ್ಕಾಗಿಯೇ
ಸಾಹಿತ್ಯವನ್ನು ಸಮಾಜದ ಪ್ರತಿಬಿಂಬ ಎಂದು ಕರೆಯುವುದು. ಇಂಥ ಸಂದರ್ಭದಲ್ಲಿಯೇ
ಸಾಹಿತ್ಯದಲ್ಲಿ ಸಮಕಾಲೀನತೆ ಎಂಬ ಮಾತು ಕೇಳಿ ಬಂದುದು. ಸಮಾಜವನ್ನು ಬಿಟ್ಟು
ಸಾಹಿತಿ ಇಲ್ಲ. ಸಾಹಿತಿಯು ಸಮಾಜದ ಒಂದು ಅಂಗ. ಸಾಹಿತಿಯಾದವನು ತಾನು ಬದುಕಿದ
ಸಮಾಜವನ್ನು ತನ್ನ ಕೃತಿಯಲ್ಲಿ ಪ್ರತಿಬಿಂಬಿಸ ಬೇಕು ಎಂಬುದು ಪ್ರಗತಿಪರ ವಿಮರ್ಶಕನ
ನಿಲುವಾಗಿರುತ್ತದೆ. ಆದರೆ ಪ್ರತಿಗಾಮಿ ವಿಮರ್ಶಕರ ನಿಲುವು ಇದಕ್ಕೆ ವಿರುದ್ಧವಾಗಿರುತ್ತದೆ.
ಸಾಹಿತ್ಯ ಸೃಷ್ಟಿಯಲ್ಲಿ ಸಮಾಜದ ಪಾತ್ರವನ್ನು ಅವರು ಒಪ್ಪುವುದಿಲ್ಲ. ಅವರು ಕಲೆಗಾಗಿ ಕಲೆ ಎಂಬ ತತ್ವವನ್ನು ಮುಟ್ಟುವರು.
ಈ ಕಾರಣಕ್ಕಾಗಿಯೇ ಪ್ರಗತಿಶೀಲ ವಿಮರ್ಶಕರಿಗೂ ಪ್ರತಿಗಾಮಿ ವಿಮರ್ಶಕರಿಗೂ
ಸಂಘರ್ಷ. ಕೃತಿಯನ್ನು ಕೃತಿಕಾರನಿಂದ ಬೇರ್ಪಡಿಸಿ ವಿಶ್ಲೇಷಿಸುವುದಕ್ಕೆ ಪ್ರಗತಿಪರ
ವಿಮರ್ಶಕರ ವಿರೋಧವಿದೆ. ಏಕೆಂದರೆ ಹೀಗೆ ಮಾಡುವುದರಿಂದ ಒಂದು ಸಾಹಿತ್ಯ ಕೃತಿ
ಹುಟ್ಟಿಕೊಂಡ ಸಾಂಸ್ಕೃತಿಕ, ಸಾಮಾಜಿಕ ಸಂದರ್ಭದಿಂದ ಕೃತಿಯನ್ನು ದೂರ ಮಾಡಿದಂತೆ
ಎಂದು ಅವನು ಭಾವಿಸುತ್ತಾನೆ. ಕೃತಿಕಾರ ತನ್ನ ಕಾಲದ ಸಾಂಸ್ಕೃತಿಕ ಒತ್ತಡಗಳನ್ನು,
ಸಾಮಾಜಿಕ ಸಂವೇದನೆಗಳನ್ನು ತನ್ನ ಕೃತಿಯಲ್ಲಿ ಹೇಗೆ ಮೈಗೂಡಿಸಿಕೊಂಡಿದ್ದಾನೆ ಎಂಬುದು
ಆತನಿಗೆ ಮಹತ್ವದ್ದಾಗುತ್ತದೆ. ಸಮಕಾಲೀನತೆಯಿಂದ ಹೊರತಾದ ವಿಮರ್ಶೆಗೆ ಯಾವುದೇ
ರೀತಿಯ ಸಾಂಸ್ಕೃತಿಕ ಜವಾಬ್ದಾರಿ ಇರುವುದಿಲ್ಲ. ಜನಪರ ತಾತ್ವಿಕ ಮೌಲ್ಯಗಳನ್ನು
ಹೊಂದಿರುವುದಿಲ್ಲ.
ಪ್ರಗತಿಪರ ವಿಮರ್ಶಕನ ನಿಲುವು ನವ್ಯ ವಿಮರ್ಶೆಯನ್ನು ವಿರೋಧಿಸುವಂತಿವೆ.
ಸಾಮಾನ್ಯವಾಗಿ ನವೋದಯ ಸಾಹಿತ್ಯದ ನಂತರ ಪ್ರಗತಿಶೀಲ ಸಾಹಿತ್ಯವನ್ನು
ಹೆಸರಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಪ್ರಗತಿಶೀಲ ಚಿಂತನೆಗಳು ನವೋದಯ ಮತ್ತು
ನವ್ಯ ಎರಡಕ್ಕೂ ಪ್ರತಿಕ್ರಿಯಾತ್ಮಕವಾಗಿ ಮೂಡಿವೆ. ಇದಕ್ಕೆ ಕಾರಣಗಳನ್ನು ಹುಡುಕಲು
ಬಹಳ ದೂರ ಹೋಗಬೇಕಾಗಿಲ್ಲ. ಪ್ರಗತಿಶೀಲ ಚಳವಳಿ ಪ್ರಬಲವಾಗಿದ್ದ ಕಾಲದಲ್ಲಿ
ಪ್ರಗತಿಶೀಲ ವಿಮರ್ಶೆ ಕನ್ನಡದಲ್ಲಿ ಬಲವಾಗಿ ಬೇರು ಬಿಡಲಿಲ್ಲ. ಆದರೆ ನವ್ಯೋತ್ತರ
ಕಾಲದಲ್ಲಿ ಬಂಡಾಯ ಮತ್ತು ದಲಿತ ಚಳವಳಿಯ ಕಾಲಕ್ಕೆ ಪ್ರಗತಿಪರ ವಿಮರ್ಶೆ
ಬಲಗೊಂಡಿತು. ಪ್ರಗತಿಶೀಲ ಸಾಹಿತ್ಯವೇ ಬಂಡಾಯದ ರೂಪದಲ್ಲಿ ಮರುಹುಟ್ಟು
ಪಡೆಯಿತು ಎನ್ನುವುದಕ್ಕೆ ಬೇರೆ ಪುರಾವೆ ಬೇಕಿಲ್ಲ. ಪ್ರಗತಿಶೀಲ ಕಾಲದಲ್ಲಿ ಆ
ಚಳವಳಿಯಲ್ಲಿದ್ದವರು ಸಾಹಿತ್ಯ ಸೃಷ್ಟಿಗೆ ಹೆಚ್ಚಿನ ಮಹತ್ವಕೊಟ್ಟರು. ವಿಮರ್ಶೆಯನ್ನು
ಕಡೆಗಣಿಸಿದರು. ಅನಕೃ ಅಂಥವರಿಗೆ ತಮ್ಮ ಕೃತಿಯ ಬಗ್ಗೆ ಟೀಕೆಗಳು ಬಂದರೆ ತೀವ್ರ ಅಸಹನೆ
ಉಂಟಾಗುತ್ತಿತ್ತು ಎಂಬ ಮಾತನ್ನು ಈಗಾಗಲೆ ಹೇಳಲಾಗಿದೆ. ಪ್ರಗತಿಶೀಲ ಚಳವಳಿ
ಉಗ್ರವಾಗಿದ್ದ ಕಾಲದಲ್ಲಿ ನವೋದಯದ ಉದ್ದಾಮ ಸಾಹಿತಿಗಳು ಇನ್ನೂ ಕೃತಿ ರಚನೆಯಲ್ಲಿ
ತೊಡಗಿದ್ದರು. ನವೋದಯದ ಸವಾಲುಗಳಿಗೆ ಪ್ರಗತಿಶೀಲರು ಸಮರ್ಪಕವಾಗಿ
ಉತ್ತರಿಸುವುದು ಸಾಧ್ಯವಾಗಲಿಲ್ಲ. ಅಲ್ಲದೆ ನವ್ಯ ಸಾಹಿತ್ಯವು ಪ್ರಗತಿಶೀಲರು ನವೋದಯದ
ವಿರುದ್ಧ ಎತ್ತಿದ ಆಕ್ಪೇಪಗಳನ್ನು ತಮ್ಮ ಸಾಹಿತ್ಯ ಮಾರ್ಗದ ಸಮರ್ಥನೆಗೆ ಬಳಸಿಕೊಂಡರು.
ನವ್ಯದವರು ನವ್ಯ ಕೃತಿಗಳ ವಿಮರ್ಶೆಗೆ ಹೊಸ ಮಾನದಂಡಗಳನ್ನು ಸೃಷ್ಟಿಸಿದರು. ನವೋದಯ
ಮತ್ತು ನವ್ಯದವರಿಬ್ಬರಿಗೂ ನವ್ಯೋತ್ತರ ಕಾಲದಲ್ಲಿ ಪ್ರಗತಿಶೀಲ ದೃಷ್ಟಿಕೋನದಿಂದ
ಉತ್ತರವನ್ನು ನೀಡಲಾಯಿತು. ನವೋದಯ ಕಾಲದಲ್ಲಿ ಕವಿಗಿದ್ದ ಶ್ರೇಷ್ಠತೆ ಇಲ್ಲಿ
ಕಡಿಮೆಯಾಗಿಬಿಡುತ್ತದೆ. ಕವಿ ಇಲ್ಲಿ ಸರ್ವತಂತ್ರ ಸ್ವತಂತ್ರನಲ್ಲ.
೧೯೫೫ರ ಕನ್ನಡ ನುಡಿ'ಯ ವಿಶೇಷಾಂಕದಲ್ಲಿ ನಿರಂಜನರು ಬರೆದ ಲೇಖನವೊಂದು ಪ್ರಕಟವಾಗಿದೆ. ಅದರಲ್ಲಿ ಅವರು ಸಾಹಿತ್ಯ ವಿಮರ್ಶೆ ಹೇಗಿರಬೇಕು ಎಂಬ ಬಗ್ಗೆ ಕೆಲವು ಮಾತುಗಳನ್ನು ಹೇಳಿದ್ದಾರೆ. ಜೀವನವನ್ನು ವೈಜ್ಞಾನಿಕವಾಗಿ ನೋಡಲೊಪ್ಪದ, ಬದುಕಿಗೂ ಸಾಹಿತ್ಯಕ್ಕೂ ಸಂಬಂಧವಿದೆಯೆಂದು ನಂಬದ, ಕೆಲವರು ವಿಮರ್ಶೆಯ ಕಾರ್ಯಕ್ಕೆ
ಶುದ್ಧ ಸಾಹಿತ್ಯ’ದ ಅಳತೆಗೋಲನ್ನು ಬಳಸುವುದುಂಟು.
ಕಲೆಗಾಗಿ ಕಲೆ' ಎನ್ನುವ ಘೋಷವನ್ನು ಮುಂದಿಡುವವರೂ ಅದೇ ಜನ. ವಿಚಾರದ ಅಂಶ ಎಳ್ಳಿನಷ್ಟೂ ಇಲ್ಲದ ಸಾಹಿತ್ಯವೊಂದೇ ಅವರ ದೃಷ್ಟಿಯಲ್ಲಿ ಶುದ್ಧ ಸಾಹಿತ್ಯ. ಬರೆಯುವ ಚಟಕ್ಕೋಸ್ಕರ ಬರೆದರಾಯಿತು. ಏನನ್ನು ಬೇಕಾದರೂ, ಉದ್ದಕ್ಕೂ ಕುಣಿಯುವ ಪದಗಳ ಮೋಹಕ ಜೋಡಣೆ. ಸಮಾಜದಲ್ಲಿನ ಅತ್ಯಂತ ಪ್ರಭಾವಶಾಲಿ ಶಕ್ತಿಯಾದ ಸಾಹಿತ್ಯವನ್ನು ನಿರ್ವೀರ್ಯಗೊಳಿಸಬಲ್ಲವರೇ
ಶುದ್ಧ ಸಾಹಿತ್ಯ’ದ ಮಾತನ್ನಾಡುತ್ತಾರೆ. ಜನಜಾಗೃತಿಗೆ
ಹೆದರುವವರೇ ಪರಿಶುದ್ಧ ಕಲೆ'ಯ ಬಡಬಾವುಟವನ್ನೆತ್ತಾರೆ ಎನ್ನುವ ಮಾತುಗಳಲ್ಲಿ ಸಾಹಿತ್ಯ ಕೃತಿಯನ್ನು ಯಾವ ಮಾನದಂಡದಿಂದ ಅಳೆಯಬೇಕು ಎಂಬ ಬಗೆಗೆ ಸಲಹೆ ಇದೆ. ಸೌಂದರ್ಯವೆನ್ನುವುದು ಮಾಯೆ, ಸೌಂದರ್ಯದ ಸಾಕ್ಷಾತ್ಕಾರ ಒಳಗಣ್ಣಿಗೆ ಮಾತ್ರ ಆಗುವಂಥದ್ದು. ಕಲಾಕೃತಿಯ ಸನ್ನಿಧಿಯಲ್ಲಿ ತನಗುಂಟಾಗುವ ಭಾವಗಳನ್ನು ವ್ಯಕ್ತಗೊಳಿಸುವದಷ್ಟೇ ವಿಮರ್ಶಕನ ಹೊಣೆ ಎಂಬೆಲ್ಲ ಮಾತುಗಳಿಗೆ ನಿರಂಜನರ ಸಮ್ಮತಿ ಇಲ್ಲ. ಇಂಥ ಧೋರಣೆಯಿಂದ ಸಾಹಿತಿಗಾಗಲೀ ಸಮಾಜಕ್ಕಾಗಲೀ ಒಳಿತಾಗದೆಂಬುದು ಅವರ ಸ್ಪಷ್ಟ ವಿಚಾರ. ಹಾಗಾದರೆ ವಿಮರ್ಶಕ ಏನು ಮಾಡಬೇಕು? ಸಾಹಿತ್ಯ ಕೃತಿಯಲ್ಲಿ ಸೃಷ್ಟಿಯಾಗಿರುವ ಪ್ರತಿಬಿಂಬವನ್ನು ಮೂಲದೊಡನೆ ಹೋಲಿಸಿ ನೋಡುವುದೇ ಮೊದಲ ಹೆಜ್ಜೆ. ಪ್ರತಿಯೊಂದು ಕೃತಿಯೂ ವಾಸ್ತವ ಬದುಕಿನ ಕಾಲ್ಪನಿಕ ಪ್ರತಿಬಿಂಬ. ಆ ರೀತಿಯ ತುಲನೆಯೊಡನೆ ಮೂಡಿ ಬರುವ ಪ್ರಶ್ನೆಗಳಿವು: ಆರಿಸಿಕೊಂಡಿರುವ ವಸ್ತುವಿನ ವಿಷಯದಲ್ಲಿ ಬರೆಹಗಾರನ ದೃಷ್ಟಿ ಪ್ರಾಮಾಣಿಕವಾಗಿದೆಯೆ? ಅದನ್ನು ಆಂತರಿಕ ಪ್ರೇರಣೆಯಿಂದ ಆತ ಬರೆದಿರುವನೆ? ಕೃತಿಯಲ್ಲಿ ಪ್ರತಿಪಾದಿತವಾಗಿರುವ ವಿಚಾರದ ಮೌಲ್ಯವೆಷ್ಟು? ಯುಗಧರ್ಮ ಆ ಕೃತಿಯಲ್ಲಿ ಪ್ರತಿಧ್ವನಿತವಾಗಿದೆಯೆ? ಅದು ಕಲೆಯೆ ಅಥವಾ ಬರಿಯ ವಿಚಾರಗಳ ನೀರಸ ಧೋರಣೆಯೆ? ಆತ ತೋರಿರುವ ಕಲಾವಂತಿಕೆಯ ಶ್ರದ್ಧೆ ಎಷ್ಟು? ಸಮಕಾಲೀನ ಸಾಹಿತ್ಯದಲ್ಲಿ ಅದರ ಸ್ಥಾನಗಳೇನು?- ಈ ಎಲ್ಲ ಪ್ರಶ್ನೆಗಳಿಗೆ ದೊರೆಯುವ ತರ್ಕಬದ್ಧ ಉತ್ತರವೇ ವಿಮರ್ಶೆ ಎಂಬಲ್ಲಿ ಪ್ರಗತಿಶೀಲ ವಿಮರ್ಶಕನಿಗೆ ಸ್ಪಷ್ಟ ಸೂಚನೆಗಳಿವೆ. ಪ್ರಗತಿಶೀಲ ಸಾಹಿತ್ಯಕೃತಿ ಹೇಗಿರಬೇಕು ಎನ್ನುವುದಕ್ಕೆ ನಿರಂಜನರು ಕೆಲವು ಬೆಲೆಯುಳ್ಳ ಮಾತುಗಳನ್ನು ಅಲ್ಲಿಯೇ ಹೇಳಿದ್ದಾರೆ. ಒಂದು ಕೃತಿಯ ವಾಚನದಿಂದ ಓದುಗ ಹೆಚ್ಚು ಬುದ್ಧಿವಂತನಾದರೆ, ಮನುಷ್ಯರನ್ನೂ ಸಮಾಜವನ್ನೂ ಕುರಿತಾದ ಅವನ ತಿಳಿವಳಿಕೆ ಹೆಚ್ಚಿದರೆ, ಆ ಸೃಷ್ಟಿ ಸಾರ್ಥಕವಾದಂತೆಯೇ. ಓದಿದ ಬಳಿಕ ಪರಿಹಾರ ತನ್ನಿಂ ತಾನಾಗಿಯೇ ಸ್ಪಷ್ಟವಾಗುವಂತಹ ಕೃತಿಯೇ ಉತ್ತಮವಾದದ್ದು. ಕೃತಿಯಲ್ಲಿ ಅಡಕವಾಗಿರುವ ಯಾವುದೇ ವಿಚಾರ, ಕಥೆಯ ಬೆಳೆವಣಿಗೆಯೊಡನೆ ಸನ್ನಿವೇಶಗಳೊಡನೆ ಒಂದುಗೂಡಿ ತೋರಬೇಕಲ್ಲದೆ, ತಾನೇ ಪ್ರತ್ಯೇಕವಾಗಿ ಕಾಣಿಸಿಕೊಳ್ಳಬಾರದು. ಇದು ಒಬ್ಬ ಪ್ರಗತಿಶೀಲನ ದೃಷ್ಟಿಯಲ್ಲಿ ಸಾಹಿತ್ಯ ಕೃತಿ ಇರಬೇಕಾದ ರೀತಿ. ನಿರಂಜನರಂಥ ಬದ್ಧತೆಯುಳ್ಳ ಲೇಖಕ ಇದನ್ನು ಸಾಹಿತ್ಯ ಪತ್ರಿಕೆಯೊಂದರಲ್ಲಿ ಪ್ರತಿಪಾದಿಸಿದಾಗ ಅದು ನಿಜಕ್ಕೂ ಮಾರ್ಗದರ್ಶಕ ಮಾತುಗಳಾಗುತ್ತವೆ. ಒಂದು ಕಲಾಕೃತಿಯ ಮೌಲ್ಯ ಮಾಪನಕ್ಕೆ ತೊಡಗುವ ಪ್ರಗತಿಶೀಲ ವಿಮರ್ಶಕನಿಗೆ ಆ ಕಲಾಕೃತಿ ನಮ್ಮ ಸಾಮಾಜಿಕ ಸತ್ಯವನ್ನು ಎಷ್ಟು ಸ್ಪಷ್ಟವಾಗಿ ಮತ್ತು ಕಲಾತ್ಮಕವಾಗಿ ಒಡಮೂಡಿಸುತ್ತದೆ ಎಂಬುದು ಮುಖ್ಯ ಕಾಳಜಿಯಾಗುತ್ತದೆ. ಸಾಮಾಜಿಕ ಸತ್ಯದ ಮೂಲಕವೇ ಸಮಾಜಿಕ ಪ್ರಜ್ಞೆಯ ಸ್ವರೂಪವನ್ನು ಆತ ವಿಶ್ಲೇಷಿಸುತ್ತಾನೆ. ಪ್ರಗತಿಶೀಲರಿಗೂ ಉಳಿದವರಿಗೂ ಇರುವ ವ್ಯತ್ಯಾಸವೇನು? ಪ್ರಗತಿ ವಿರೋಧಿ ಸಾಹಿತ್ಯ ಮತ್ತು ವಿಮರ್ಶೆಗಳು ವಿವಿಧ ಸಾಮಾಜಿಕ ಶಕ್ತಿಗಳ ಅಸ್ತಿತ್ವವನ್ನು ಗುರುತಿಸುವ ಮಟ್ಟಿಗೆ ಹೋದರೂ ಅವುಗಳ ಸ್ವಭಾವದ ಕುರಿತು ಚಿಂತಿಸುವ ಮಟ್ಟಿಗೆ ಹೋಗುವುದಿಲ್ಲ. ಆದ್ದರಿಂದ ಈ ವರ್ಗಕ್ಕೆ ಸೇರಿದ ವಿಮರ್ಶಕರು ವ್ಯಕ್ತಿಗತ ದೃಷ್ಟಿಕೋನವನ್ನು ಸಮಾಜದ ಮೇಲೆ ಹೇರುವರು. ಈ ಮೂಲಕ ಸಾಹಿತ್ಯ ಮತ್ತು ಕಲೆಯನ್ನು ಜನರಿಂದ ದೂರ ಮಾಡುವರು. ಇದು ಅಂತಿಮವಾಗಿ ಅಂತರ್ಮುಖತೆಯೋ, ಆತ್ಮ ಪ್ರಜ್ಞೆಯೋ, ಕಲೆಗಾಗಿ ಕಲೆಯೋ ಘೋಷಣೆಯಲ್ಲಿ ಪರ್ಯಾವಸಾನವಾಗಿಬಿಡುವುದು. ಲೇಖಕ ತನ್ನ ಕಾಲದ ಸಮಾಜದೊಂದಿಗೆ ಹೊಂದಿರುವ ಸಂಬಂಧವನ್ನು ಅಳೆಯಲು ಬೌದ್ಧಿಕ, ಸೈದ್ಧಾಂತಿಕ ಅಂಶಗಳು ಶ್ರೇಷ್ಠ ಒರೆಗಲ್ಲುಗಳು ಎಂದು ಭಾವಿಸುವ ಪ್ರಗತಿಶೀಲ ವಿಮರ್ಶಕನು ಕೃತಿಯ ಮೌಲ್ಯ ನಿರ್ಣಯ ಮಾಡುವಾಗ ಬೌದ್ಧಿಕ, ಸೈದ್ಧಾಂತಿಕ ಮತ್ತು ಕಲಾತ್ಮಕ ಅಂಶಗಳನ್ನು ಒಗ್ಗೂಡಿಸಿ ನೋಡುವನು. ವಸ್ತು ಸಮಾಜದ್ದು. ಅದನ್ನು ಆಯ್ದುಕೊಂಡು ಕಲಾತ್ಮಕ ಜೋಡಣೆ ಮಾಡಬೇಕಾಗುತ್ತದೆ. ಈ ರೀತಿಯ ಜೋಡಣೆ ಮಾಡುವಾಗ ಬುದ್ಧಿಯನ್ನು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ದುಡಿಸಿಕೊಳ್ಳಬೇಕಾಗುತ್ತದೆ. ಕೃತಿಯಲ್ಲಿ ಪ್ರತಿಬಿಂಬಿತವಾಗುವ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಬುದ್ಧಿಮತ್ತೆಗಳು ಕೃತಿಯ ಸ್ವಭಾವವನ್ನು ನಿರ್ಧರಿಸುತ್ತವೆ ಎಂಬುದು ಪ್ರಗತಿಶೀಲರ ಸಿದ್ಧಾಂತ. ಸಾಹಿತ್ಯ ಕೃತಿ ಸಮಾಜವನ್ನು ಮುಂದಕ್ಕೆ ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರಬೇಕು, ಆ ಮೂಲಕ ಅದು ಜ್ಞಾನವನ್ನೊದಗಿಸಬೇಕು. ಇದನ್ನು ನಿರಾಕರಿಸುವುದೆಂದರೆ ಕಲಾತ್ಮಕ ಸತ್ಯ ಮತ್ತು ಜ್ಞಾನದ ಸಾಧ್ಯತೆಯನ್ನು ಅಲ್ಲಗಳೆದಂತೆ. ಪ್ರಗತಿಪರ ವಿಮರ್ಶಕ ಕಲೆ ಮತ್ತು ಸತ್ಯವನ್ನು ಹೋಲಿಸಿ ನೋಡುವನು. ಪ್ರಗತಿಶೀಲ ವಿಮರ್ಶೆಯು ಇಷ್ಟೊಂದು ಸಿದ್ಧಾಂತಪರವಾಗಿದ್ದರೂ ನವೋದಯದಿಂದ ಪೂರ್ತಿಯಾಗಿ ಹೊರಬರುವುದು ಅದಕ್ಕೆ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಪ್ರಗತಿಶೀಲ ಸಾಹಿತ್ಯ ಮೀಮಾಂಸೆಯು ಎತ್ತಿದ ಪ್ರಶ್ನೆಗಳು ನಮ್ಮ ದೇಶದ ಮಾದರಿಗಳಲ್ಲ ಎನ್ನುವ ಪ್ರತಿಕ್ರಿಯೆ ಕನ್ನಡದಲ್ಲಿ ಮೂಡಿದ್ದು. ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ರಷ್ಯಾದಲ್ಲಿ ಸಂಭವಿಸಿದ ಆಗಸ್ಟ್ ಕ್ರಾಂತಿ, ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷದ ಉದಯ ಮೊದಲಾದವುಗಳಿಂದ ಕೆಲವು ಪ್ರಗತಿಪರ ಲೇಖಕರ ತಾತ್ವಿಕ ಬದ್ಧತೆಯಿಂದಾಗಿ ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯ ಹುಟ್ಟಿಕೊಂಡಿದ್ದು. ಅದು ಚಳವಳಿ ಎನಿಸಿಕೊಂಡ ಕಾರಣ ಅದರ ಪ್ರಚಾರ ವೇದಿಕೆಗಳ ಮೂಲಕವೇ ನಡೆಯಿತು. ಕೆಲವೊಮ್ಮೆ ಅದು ಭೂಗತ ಚಟುವಟಿಕೆಯಾಗಿಬಿಡುತ್ತದೆ. ನಿರಂಜನರಂಥವರೂ ಕೆಲವು ಕಾಲ ಭೂಗತರಾಗಿದ್ದರು. ಇಂಥ ಸನ್ನಿವೇಶದಲ್ಲಿ ಪ್ರಗತಿಶೀಲ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದಲೇ ಪತ್ರಿಕೆಗಳು ಹುಟ್ಟಿಬರಲಿಲ್ಲ. ಉಷಾ, ವಾಣಿ, ಚಿತ್ರಗುಪ್ತ ಮುಂತಾದ ಇರುವ ಕೆಲವು ಪತ್ರಿಕೆಗಳಲ್ಲಿಯೇ ಪ್ರಗತಿ ಪಂಥದ ಪ್ರತಿಪಾದನೆ, ಪ್ರಗತಿಶೀಲರ ಕೃತಿಗಳ ಖಂಡನೆ, ಸಮರ್ಥನೆಗಳು ನಡೆದವು. ಈ ಕಾರಣದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯ ವಾಹಿನಿಯ ಬೆಳವಣಿಗೆಗೆ ಪತ್ರಿಕೆಗಳ ಕೊಡುಗೆ ಸೀಮಿತವಾದದ್ದು ಎಂದೇ ಹೇಳಬೇಕು. ಪ್ರಗತಿಶೀಲ ವಿಚಾರಧಾರೆಯೇ ಮುಂದೆ ನವ್ಯೋತ್ತರ ಕಾಲದಲ್ಲಿ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಗಟ್ಟಿತನದೊಂದಿಗೆ ಮೈ ತಳೆಯುತ್ತದೆ. ಆಗ ಅವಕ್ಕೆ ಸಾಹಿತ್ಯಪತ್ರಿಕೆಗಳ ಬೆಂಬಲವೂ ದೊರೆಯುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರಗತಿಶೀಲಪರ್ವ ವಿಫಲ ಪ್ರಯೋಗ ಅಲ್ಲ. ನವ್ಯೋತ್ತರ ಕಾಲದಲ್ಲಿ ಅದು ಮರುಹುಟ್ಟು ಪಡೆಯುತ್ತದೆ. ಸ್ವಾತಂತ್ಯ್ರದ ಭ್ರಮನಿರಸನ: ನವೋದಯ ಕಾಲದಲ್ಲಿ ಸ್ವಾತಂತ್ಯ್ರ ಗಳಿಕೆ ಸಾಹಿತಿಗಳ ಧ್ಯೇಯವಾಗಿತ್ತು. ಪ್ರಗತಿಶೀಲರ ಕಾಲದಲ್ಲಿ ಸುಖೀ ಸಮಾಜ ಸಾಧನೆ ಆದರ್ಶವಾಗಿತ್ತು. ೧೯೪೭ರಲ್ಲಿ ದೇಶ ಸ್ವಾತಂತ್ಯ್ರವನ್ನು ಗಳಿಸಿತು. ಗಳಿಸಿದ ಸ್ವಾತಂತ್ಯ್ರ ಜನರಲ್ಲಿದ್ದ ಅಪಾರವಾದ ನಿರೀಕ್ಷೆಗಳನ್ನು ನಿಜಗೊಳಿಸಲಿಲ್ಲ. ಇದರಿಂದಾಗಿ ಸ್ವಾತಂತ್ಯ್ರದ ಬಗೆಗೆ ಇದ್ದ ಭ್ರಮೆಗಳೆಲ್ಲ ನಿರಸನಗೊಂಡವು. ಇಂಥ ಭ್ರಮನಿರಸನವನ್ನು ಅಭಿವ್ಯಕ್ತಿಸಬೇಕಾದ ಸಾಹಿತ್ಯ ಅದುವರೆಗಿನ ದೇಶನಿಷ್ಠೆಯ ಸಾಹಿತ್ಯದಿಂದ ಭಿನ್ನರೂಪ ಪಡೆಯುವುದು ಅನಿವಾರ್ಯವಾಯಿತು. ಇದು ನವ್ಯ ಸಾಹಿತ್ಯದ ರೂಪದಲ್ಲಿ ಪ್ರಕಟಗೊಂಡಿತು. ಕನ್ನಡದಲ್ಲಿ ನವ್ಯ ಸಾಹಿತ್ಯ ವ್ಯಾಪಕ ಪ್ರಚಾರವನ್ನು ಪಡೆದದ್ದು ಹಾಗೂ ಈ ಸಾಹಿತ್ಯಕ್ಕೊಂದು ಸಿದ್ಧಾಂತವನ್ನು ಕಟ್ಟಿದ್ದು ಐವತ್ತರ ದಶಕದಲ್ಲಿಯೇ. ಇದಕ್ಕೂ ಪೂರ್ವದಲ್ಲಿಯೇ ನವ್ಯ ಸಂವೇದನೆಯ ಕಥೆಗಳು ಪ್ರಕಟವಾಗಿದ್ದನ್ನು ವಿಮರ್ಶಕರು ಗುರುತಿಸಿದ್ದಾರೆ. ಆದರೆ ನವೋದಯ ಸಾಹಿತ್ಯದ ಆಶಯಗಳ ವಿರುದ್ಧವಾಗಿ ನವ್ಯವನ್ನು ತಂದು ಪ್ರತಿಷ್ಠಾಪಿಸಿದ್ದು ಐವತ್ತರ ದಶಕದಲ್ಲಿಯೇ. ನವ್ಯ ಸಾಹಿತ್ಯ ರಚನೆಯಾಗುತ್ತಿದ್ದಂತೆಯೇ ಅದರ ಬಗೆಗೆ ವ್ಯಾಪಕವಾದ ಪರ ವಿರೋಧ ಅಭಿಪ್ರಾಯಗಳ ಮಂಡನೆ ಆ ಕಾಲದಲ್ಲಿ ಪತ್ರಿಕೆಗಳಲ್ಲಿ ನಡೆದಿದೆ. ಸುಮಾರು ಮೂರು ದಶಕಗಳ ಕಾಲ ನವ್ಯದ ಖಂಡನೆ ಮತ್ತು ಅದರ ಪರ ವಕಾಲತ್ತು ನಡೆಯಿತು. ನವ್ಯ ಸಾಹಿತ್ಯ ಇಂದು ಸಾಹಿತ್ಯ ಚರಿತ್ರೆಯ ಒಂದು ಭಾಗವಾಗಿದೆ, ನಿಜ. ಆದರೆ ಅದು ಕನ್ನಡ ಸಾಹಿತ್ಯಕ್ಕೆ ನೀಡಿದ ಕಾಯಕಲ್ಪ ಅತಿ ವಿಶಿಷ್ಟವಾದದ್ದು. ಇದರಲ್ಲಿ ಪತ್ರಿಕೆಗಳ ಪಾತ್ರವಂತೂ ಇದ್ದೇ ಇದೆ. ನವ್ಯ ಸಾಹಿತ್ಯ ಪ್ರಬಲವಾಗಿದ್ದ ಐವತ್ತು, ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ ನವ್ಯವು ಕನ್ನಡದ ಸಂದರ್ಭದಲ್ಲಿ ತಲೆದೋರಿದ ಅಗತ್ಯದ ಬಗೆಗೆ ಪತ್ರಿಕೆಗಳಲ್ಲಿ ವಾಗ್ವಾದಗಳು ನಡೆದಿವೆ. ನವ್ಯದ ಹುಟ್ಟಿನ ಬಗೆಗಿನ ಪ್ರಶ್ನೆಗಳಿಗೆ ಸಮರ್ಪಕ ಉತ್ತರವನ್ನು ನೀಡುವ ಪ್ರಯತ್ನವನ್ನೂ ಅಲ್ಲಿ ಮಾಡಲಾಗಿದೆ. ಕನ್ನಡದ ಖ್ಯಾತ ನಾಮರೇ ಇಂಥ ವಾಗ್ವಾದದಲ್ಲಿ ಭಾಗಿಯಾಗಿದ್ದಾರೆ.
ಸಮುದ್ರ ಗೀತಗಳು’ ಕನ್ನಡ ಕಾವ್ಯದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಡುತ್ತದೆ.
ಇಲ್ಲಿಯ ಕಾವ್ಯ ವಿಷಯ, ಛಂದಸ್ಸು, ಹೊಸ ಹೊಸ ಲಯಗಳು, ರೂಪಕಗಳು, ಸಂಕೇತಗಳು,
ಪ್ರತಿಮೆಗಳ ಪ್ರಯೋಗ ವಿಶಿಷ್ಟವಾದದ್ದು. ಇವೆಲ್ಲವನ್ನು ತಂದ ವಿ.ಕೃ.ಗೋಕಾಕರು
ನವ್ಯಕಾವ್ಯದ ಪ್ರವರ್ತಕರಾಗಿದ್ದಾರೆ. ಇವುಗಳಲ್ಲಿ ಗೋಕಾಕರು ನೂರಕ್ಕೆ ನೂರರಷ್ಟು
ಯಶಸ್ವಿಯಾಗದಿದ್ದರೂ ಸಮುದ್ರ ಗೀತಗಳು' ಕನ್ನಡ ನವ್ಯ ಕಾವ್ಯದ ಧ್ವಜವನ್ನು ಎತ್ತಿ ಹಿಡಿಯಿತು ಎಂದು ಹೇಳಬೇಕು. ಸಮುದ್ರದಾಚೆಗೆ ತೆರಳಿದ ಕವಿಯಲ್ಲಿ ಹೊಸ ಹೊಸ ಭಾವಗಳು ಮೊಳಕೆಯೊಡೆದಿದ್ದವು. ಸಂಕುಚಿತ ವಲಯದಿಂದ ಸ್ವಚ್ಛಂದ ಸಮುದ್ರದ ಸಾನ್ನಿಧ್ಯದಲ್ಲಿ ಛಂದಸ್ಸಿನ ಕಟ್ಟುಗಳನ್ನು ಕಳೆದುಕೊಳ್ಳುವುದು ಅನಿವಾರ್ಯ ಎನ್ನಿಸಿತು ಗೋಕಾಕರಿಗೆ. ಅದಕ್ಕಾಗಿಯೇ ಅವರು,
ಸಮುದ್ರವ ಸೆರೆಹಿಡಿದವರುಂಟೆ?
ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು!’
ಎಂದು ಕರೆ ಕೊಟ್ಟರು. ಮಹಾನ್ ಸಮುದ್ರವನ್ನು ಕಂದ, ಷಟ್ಪದಿ, ವೃತ್ತ,
ಸಾಂಗತ್ಯಗಳಲ್ಲಿ ಹಿಡಿದಿಡುವುದು ಸಮುದ್ರವನ್ನು ಸ್ವತಃ ನೋಡಿದವರು ಮಾಡುವ ಕೆಲಸವಲ್ಲ.
ಯಾವುದೇ ಬಂಧನಕ್ಕೆ ಒಳಗಾಗದ ಸಮುದ್ರವನ್ನು ವರ್ಣಿಸುವಾಗ ಛಂದಸ್ಸಿನ ಬಂಧನವೇಕೆ?' ಎಂಬುದು ಅವರ ನಿಲುವು. ಅದಕ್ಕಾಗಿ ಅವರು ಸಮುದ್ರಕ್ಕೆ ಸ್ವಾತಂತ್ಯ್ರವನ್ನು ಘೋಷಿಸುತ್ತಾರೆ. ನೀರು ನೀರಾಗಿ ಬೆಳಗು ನಾದಮಯವಾಗು ಹೊರಗು ಒಳಗು ಹಿಗ್ಗು ಹಿಗ್ಗಾಗಿ ಹರಿ, ತಗ್ಗು ತಗ್ಗಾಗಿ ಸರಿ ಉಕ್ಕಲಿ ಚಿಮ್ಮಲಿ ಸಮುದ್ರದ ಸ್ವಾತಂತ್ಯ್ರ! ಸಮುದ್ರದ ಸಕಲ ಮುಖಗಳನ್ನು ಛಂದ ಮುಕ್ತ ವರ್ಣನೆಯಲ್ಲಿ ಹಿಡಿದಿಡುವುದು ಅಸಾಧ್ಯ. ಹೇಗೆ ಸಮುದ್ರವು ವಿಶಾಲವಾಗಿದೆಯೋ ಅದೇ ರೀತಿ ಕಾವ್ಯದ ಅಭಿವ್ಯಕ್ತಿ ಸಾಧ್ಯತೆಗಳೂ ವಿಶಾಲವಾದದ್ದು ಎಂಬ ನಂಬಿಕೆ ಗೋಕಾಕರದ್ದು. ಅದಕ್ಕಾಗಿಯೇ ಈ ಅಭಿವ್ಯಕ್ತಿ ಮಾರ್ಗದಲ್ಲಿ ಅಡ್ಡಿಗಳಾಗಿ ಬರುವ ಛಂದದ ಬಂಧವನ್ನು ಅವರು ಹರಿದೊಗೆಯುತ್ತಾರೆ. ಹೊಸದೆಲ್ಲ ಹುಟ್ಟಿ ಬರಲಿ ಬೇಡಯ್ಯ ಬಂಧಗಳ ಬಂಧಿವಾಸ; ಸಾಕಯ್ಯ ವೃತ್ತಗಳಾವರ್ತ ನಿನ್ನ ಮಣಿತವಿರಲಿ ಸಮುದ್ರದ ಕುಣಿತದಂತೆ ಎಂದು ಹಾರೈಸುತ್ತಾರೆ. ಛಂದಸ್ಸನ್ನು ಬಿಟ್ಟು ಕಾವ್ಯ ರಚನೆ ಇಲ್ಲದ ಅಂದಿನ ದಿನದಲ್ಲಿ ಇದೊಂದು ದೊಡ್ಡ ಸಾಹಸದ ಮಾತೇ ಸರಿ. ನವೋದಯದ ಆರಂಭದಲ್ಲಿ ಆದಿ ಪ್ರಾಸವನ್ನು ತೊರೆಯುವಾಗ ಗೋವಿಂದ ಪೈಗಳ ತೊಳಲಾಟವನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಅದೇ ರೀತಿಯ ಸಂಕಟವನ್ನು ಗೋಕಾಕರೂ ಅನುಭವಿಸುತ್ತಾರೆ. ಛಂದಸ್ಸಿನ ಕಟ್ಟನ್ನು ಕಿತ್ತೊಗೆಯಲು ಗೋಕಾಕರಿಗೆ ಗೋವಿಂದ ಪೈಗಳೇ ಪ್ರೇರಣೆಯಾಗಿರಬಹುದು. ಸಂಪ್ರದಾಯದ ಕಟ್ಟನ್ನು ಕಿತ್ತೊಗೆಯುವಾಗ ಕವಿಗೆ ಆತಂಕ ಸಹಜವಾಗಿ ಕವಿದಿದೆ. ತಮ್ಮನ್ನು ಗೀಳ್ ಮಾಡುವವರಿಗೆ ಅವರ ಸಮಾಧಾನದ ನುಡಿ ಹೀಗಿದೆ;
ಸ್ವಚ್ಛಂದ ಛಂದದಲ್ಲಿ
ಜಲಕ್ರೀಡಾ ವೃತ್ತದಲ್ಲಿ
ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ
ಗೀತವನೊರೆದೆನೆಂದು ಗೀಳ್ ಮಾಡಬೇಡ’
ನವೋನವವಾದ ಸಮುದ್ರದ ಅನುಭವವನ್ನು ವರ್ಣಿಸುವಾಗ ಇಂಥ ಸ್ವಾತಂತ್ಯ್ರ ಕವಿಗೆ ಅನಿವಾರ್ಯ ಎಂಬುದು ಗೋಕಾಕರ ನಿಲುವು. ಅದಕ್ಕಾಗಿಯೇ ಅವರು ಕವಿಗಳಿಗೆ ಕೊಡುವ ಕರೆ ಗಮನಾರ್ಹವಾದದ್ದು-
ವೃತ್ತ ಬಂಧಗಳು ಸಂಧಿಸಿ ಬಂದ
ಸಮುದ್ರವಾಗು ಕವಿಯೇ!
ಕವಿಗಳ ಸಮುದ್ರಗುಪ್ತನಾಗು!
ಇತಿಹಾಸದಲ್ಲಿ ಸಮುದ್ರಗುಪ್ತನ ಕಾಲ ಸುವರ್ಣಕಾಲ ಎಂದು ವರ್ಣಿತವಾಗಿದೆ.
ಛಂದಸ್ಸಿನ ಬಂಧದಿಂದ ಕವಿಗಳು ಹೊರ ಬಂದು ಕಾವ್ಯ ರಚಿಸಿದರೆ ಕನ್ನಡ ಕಾವ್ಯ ಸುವರ್ಣ
ಯುಗವನ್ನು ಕಾಣಬಹುದು ಎಂಬ ನಂಬಿಕೆ ಅವರದು. ಕಾವ್ಯ ಇಲ್ಲಿ ಘೋಷಣೆಯಾಗಿದೆ
ನಿಜ. ಆದರೆ ಹೊಸ ಮಾರ್ಗವನ್ನು ರೂಢಿಸುವಾಗ ಇಂಥ ಹೇಳಿಕೆಗಳು ಸಾಮಾನ್ಯ. ಹೊಸ ಮಾರ್ಗ ಪ್ರವರ್ತಕರಿಗೆ ಇದು ಅನಿವಾರ್ಯ ಕೂಡ.
ಸಮುದ್ರ ಗೀತಗಳು' ಕನ್ನಡ ಕಾವ್ಯ ಪ್ರವಾಹಕ್ಕೆ ಹೊಸ ಹರಿವನ್ನು ತೋರಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿರುವಂಥದ್ದು. ``ಸಮುದ್ರ ಗೀತಗಳಲ್ಲಿ ಸಾಧಿಸಿರುವ ಗದ್ಯಲಯ, ಸ್ವಚ್ಛಂದ ಪ್ರವೃತ್ತಿ, ಪ್ರತಿಮಾ ನಿಯೋಜನೆ ಹಾಗೂ ನಿಯಮರಾಹಿತ್ಯ ಇವು ನವ್ಯ ಕಾವ್ಯ ಭೂಮಿಯನ್ನು ಅಣಿಗೊಳಿಸುವಲ್ಲಿ ಸಹಾಯಕವಾಗಿವೆ''೮೨ ಎಂಬ ಬುದ್ಧಣ್ಣ ಹಿಂಗಮಿರೆಯವರ ಮಾತು ಸರಿಯಾಗಿದೆ. ನವ್ಯ ಸಾಹಿತ್ಯ ಎಂದಾಗ ತಕ್ಪಣದ ಪ್ರತಿಕ್ರಿಯೆ ನವ್ಯ ಕಾವ್ಯವನ್ನು ಕುರಿತೇ ಇರುತ್ತದೆ. ಐವತ್ತರ ದಶಕದ ಆರಂಭದಲ್ಲಿ ನವೋದಯದಿಂದ ಭಿನ್ನವಾದ ಸಾಹಿತ್ಯ ರಚನೆಯ ಅಗತ್ಯವನ್ನು ಗೋಪಾಲಕೃಷ್ಣ ಅಡಿಗರು ಪ್ರತಿಪಾದಿಸಿದ್ದಾರೆ.
ಜಯಕರ್ನಾಟಕ’ದಲ್ಲಿ ಹೊಸ ದಿನದ ಆಹ್ವಾನ'೮೩ ಎಂಬ ಲೇಖನವನ್ನು ಅವರು ಬರೆದಿದ್ದಾರೆ. ಇದರಲ್ಲಿ ಅವರು ಕಾವ್ಯ ಹೊಸ ರೂಪ ಪಡೆಯಬೇಕಾದ ಅಗತ್ಯವನ್ನು ಸ್ಪಷ್ಟ ಮಾತುಗಳಲ್ಲಿ ಮಂಡಿಸಿದ್ದಾರೆ. ೧೯೨೦ರಿಂದ ಸ್ವಾತಂತ್ಯ್ರ ಬರುವ ತನಕದ ಕಾಲ ಆದರ್ಶ ನಿಷ್ಠೆಯ ಸರಳಕಾಲ. ಆಸೆಯ, ಆವೇಶದ, ಹೋರಾಟದ, ಬಿಗಿದ ಮನಸ್ಸಿನ, ತುಟಿ ಕಚ್ಚಿದ ಸಂಘಟನೆಯ ಕಾಲ ಅದು. ಒಟ್ಟಿನಲ್ಲಿ ಕಳೆದ ತಲೆಮಾರಿನ ಕವಿತೆ ಮುಖ್ಯವಾಗಿ ಏಕಮುಖವಾಗಿತ್ತು. ಸ್ವಾತಂತ್ಯ್ರದ ವಾಂಛೆಯೋ, ಪ್ರಗತಿಯ ಸ್ವಪ್ನವೋ, ಪುರಾತನ ಸಂಸ್ಕೃತಿಯ ಪುನರುತ್ಥಾನದ ಕನಸೋ ಅಂತೂ ಇಂಥ ಒಂದು ಆದರ್ಶ ಜನರ ಮನಸ್ಸಿನಲ್ಲಿ ಏಕ ಸೂತ್ರತೆಯನ್ನು ತಂದಂತೆ ಕಾವ್ಯದಲ್ಲಿ ಕೂಡ ಒಂದು ಸರಳ ಸಮರಸ ಕಂಡುಬಂದಿತು ಎಂದು ಅಡಿಗರು ಆ ಲೇಖನದಲ್ಲಿ ಹೇಳಿದ್ದಾರೆ. ಇಲ್ಲಿ ಅವರು ನವ್ಯದ ಹಿಂದಿನ ಸಾಹಿತ್ಯದ ಪ್ರೇರಣೆಗಳನ್ನು ಸೂತ್ರೀಕರಿಸುವರು. ನಂತರ ಅವರು, ಕಾಲ ಬದಲಿದಂತೆ ಕಾವ್ಯ ರೂಪವೂ ಬದಲುತ್ತದೆ ಎಂಬ ಮಾತನ್ನು ಪ್ರತಿಯೊಂದು ಕಾವ್ಯ ಪರಂಪರೆಯೂ ಸಾರುತ್ತದೆ ಎಂದಿದ್ದಾರೆ. ಕಾವ್ಯದ ಮೂಲ ವಸ್ತುವಿನಲ್ಲಿ ಅಷ್ಟು ಪರಿವರ್ತನೆಯಾಗದಿದ್ದರೂ ಕವಿಯ ದೃಷ್ಟಿಯಲ್ಲಿ, ಕಾವ್ಯದ ರೀತಿಯಲ್ಲಿ ಕ್ರಾಂತಿ ಆಗುತ್ತ ಬಂದಿದೆ.... ಹೊಸ ಜನಾಂಗ ಬಂದು, ಹೊಸ ಸಮಸ್ಯೆಗಳು- ಅವು ಸಾಮಾಜಿಕವಿರಲಿ, ವೈಯಕ್ತಿಕವಿರಲಿ- ತಲೆದೋರಿದಾಗ, ಅದೇ ಜೀವನ, ಅದೇ ವಿದ್ಯಮಾನಗಳು ಕವಿಯ ಹೃದಯದಲ್ಲಿ ಹೊಸ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟಿಸುತ್ತವೆ... ತಲೆಮಾರಿನಿಂದ ತಲೆಮಾರಿಗೆ ಈ ರೀತಿ ಜೀವನ ಮತ್ತು ಪದ್ಯ ಕಾವ್ಯಗಳಲ್ಲಿ ಮಾರ್ಪಾಟು ತಲೆದೋರುತ್ತ ಬಂದಿದೆ ಎಂದು ಹೇಳುತ್ತಾರೆ. ಸಾಹಿತ್ಯ ಜೀವನಾನುಭವಗಳ ಮೊತ್ತ. ಈ ಅನುಭವದ ಭೂತ, ವರ್ತಮಾನ, ಭವಿಷ್ಯದ್ರೂಪಗಳನ್ನು ಅಳವಡಿಸಿ ಏಕೋದ್ದೇಶವನ್ನು ಸಾಧಿಸುವುದು- ಇದೇ ನವ್ಯ ಕವಿಯು ದಾಟಿ ಗೆಲ್ಲಬೇಕಾದ ಬೆಂಕಿಯ ಹೊಳೆ. ಹೀಗೆ ಮಾತ್ರ ಕಾವ್ಯ ಸತ್ಯವನ್ನು ಬಿತ್ತರಿಸುವುದು ಸಾಧ್ಯ ಎಂದು ನವ್ಯ ಕಾವ್ಯದ ಮುಂದಿರುವ ಸವಾಲನ್ನು ಅಡಿಗರು ಗುರುತಿಸಿದ್ದಾರೆ. ನವ್ಯ ಕಾವ್ಯಕ್ಕೆ ಹೊಸ ಶಬ್ದ ಸಂಪತ್ತು ಬೇಕು ಎನ್ನುವ ಅವರು, ನಮ್ಮ ಹಿರಿಯರು ಬಳಕೆಗೆ ತಂದ ಶಬ್ದಗಳು ಈಗ ಅತಿ ಉಪಯೋಗದಿಂದ ಸವಕಲು ನಾಣ್ಯಗಳಾಗಿವೆ. ಅಂಥ ಶಬ್ದಗಳಿಂದ ಹೊಚ್ಚ ಹೊಸ ಭಾವನೆಗಳು ವ್ಯಕ್ತಗೊಳ್ಳುವುದು ಸಾಧ್ಯವಿಲ್ಲ. ಹೊಸ ಕಾಲದ ಹೊಸ ಮನಃಸ್ಥಿತಿಯನ್ನು ನಿರೂಪಿಸಲು ಅಂಥ ಶಬ್ದಗಳು ಅವು ಅತಿ ಬಳಕೆಯಿಂದ ಕೆಡದಿದ್ದರೂ ಅಸಮರ್ಥವಾಗುತ್ತವೆ ಎನ್ನುವುದು ಅವರ ನಂಬಿಕೆ. ಈ ಹಿನ್ನೆಲೆಯಲ್ಲಿಯೇ ನವ್ಯ ಸಾಹಿತ್ಯ ಭಾಷೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಕನ್ನಡ ಕಾವ್ಯವು ರೋಮ್ಯಾಂಟಿಕ್ನಿಂದ ಬೇರೆಯಾದ ಅಭಿವ್ಯಕ್ತಿಯನ್ನು ಪಡೆದುಕೊಳ್ಳಬೇಕಾದ ಅಗತ್ಯ ಏನಿತ್ತು ಎನ್ನುವುದನ್ನು ಅಡಿಗರು ಹೇಳಿದ್ದಾರೆ.
ಜಯಕರ್ನಾಟಕ’ಕ್ಕಿಂತ ಒಂದು ತಿಂಗಳು ಮೊದಲೇ ಅವರು ಕರ್ಮವೀರ'ದಲ್ಲಿ ಬರೆದ ಲೇಖನದಲ್ಲಿ ಹೊಸ ಕಾವ್ಯದ ಅಗತ್ಯ ಏಕೆ ಉಂಟಾಯಿತು ಎಂಬುದನ್ನು ವಿವರಿಸಿದ್ದಾರೆ.೮೪ ನಮ್ಮ ಹಿರಿಯರು ನಿಂತಿದ್ದ ನೆಲದ ಮೇಲೆ ನಾವು ನಿಂತಿದ್ದರೂ ನಾವು ಅದನ್ನು ಕಾಣುವ ದೃಷ್ಟಿಯಲ್ಲಿ ಮಾತ್ರ ಈಗ ಮಹತ್ತರ ಬದಲಾವಣೆಯಾಗಿದೆ. ೧೯೪೭ರ ನಂತರ ಆದರ್ಶದ ಬಿಗಿ ತಪ್ಪಿ ಬಾಳು ಸಡಿಲಾಯಿತು. ಮತ್ತೆ ವಿಚಾರ ಸಂಕರ, ತುಮುಲ ಹೆಚ್ಚಿತು. ಸುಪ್ತವಾಗಿದ್ದ ದುರ್ಗುಣಗಳೆಲ್ಲ ಮತ್ತೆ ಹೆಡೆಯೆತ್ತಿದುವು.. ಜಡ, ಸ್ವಾರ್ಥ, ಕಪಟ, ಲಾಭಬಡುಕತನ, ಅಶಾಂತಿ, ಬಡತನ, ಅಸತ್ಯ, ವಿರಸ ಇವು ತಾಂಡವವಾಡತೊಡಗಿದವು; ಈಗಲೂ ತಾಂಡವವಾಡುತ್ತಿವೆ ಎಂದು ಹೇಳುತ್ತಾರೆ. ಅದಕ್ಕಾಗಿಯೇ ಅಡಿಗರು,
ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು’
ಎಂದು ಬರೆಯುತ್ತಾರೆ. ಹೊಸ ನಾಡೊಂದನು ಕಟ್ಟಬೇಕೆಂಬ ಕವಿಯ ಬಯಕೆ
ಇಡೀ ಜನಾಂಗದ ಧ್ವನಿಯಾಗುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಅಡಿಗರದೇ ಆದ
ನೆಹರೂ ನಿವೃತ್ತರಾಗುವುದಿಲ್ಲ' ಎಂಬ ಪದ್ಯ ನವ್ಯ ಕಾವ್ಯದ ರಾಜಕೀಯ ವಿಡಂಬನ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಇಲ್ಲಿಯ ವ್ಯಂಗ್ಯ ಸಮಕಾಲೀನ ಸಂದರ್ಭದ ಅಭಿವ್ಯಕ್ತಿಯ ಹೊಸ ಮಾರ್ಗವನ್ನು ತೆರೆಯುತ್ತದೆ. ಈ ಪದ್ಯದ ಮೂಲ ದ್ರವ್ಯ ಪಕ್ಕಾ ರಾಜಕೀಯ ಎಂಬುದನ್ನು ಗಮನಿಸಬೇಕು. ಈ ಹಿನ್ನೆಲೆಯಲ್ಲಿಯೇ ನವೋದಯ ಮತ್ತು ನವ್ಯ ಕಾವ್ಯದ ನಡುವಿನ ಅಂತರ ಭಾರತದ ಸ್ವಾತಂತ್ಯ್ರ ಗಳಿಕೆ ಎಂಬ ಅಭಿಪ್ರಾಯ ಅಡಿಗರ ಮಾತುಗಳಲ್ಲಿ ಕಂಡು ಬರುತ್ತದೆ. ಸ್ವಾತಂತ್ಯ್ರದ ಬಗ್ಗೆ ಅಪಾರವಾದ ಕನಸುಗಳನ್ನು ಕಾಣಲಾಗಿತ್ತು. ಅವು ಈಡೇರದೆ ಹೋದಾಗ ಹತಾಶೆ ಉಂಟಾಗುತ್ತದೆ. ವ್ಯವಸ್ಥೆಯ ಬಗ್ಗೆ ಆಕ್ರೋಶ ಮೂಡುತ್ತದೆ. ಇದು ಹೊಸ ಕಾವ್ಯದ ಸೃಷ್ಟಿಗೆ ಕಾರಣವಾಗುತ್ತದೆ. ತೇಜಸ್ವಿಯವರ
ತಬರನ ಕತೆ’ಯಲ್ಲಿ
ಇಂಥ ಹತಾಶೆಯ ಚಿತ್ರ ಢಾಳವಾಗಿ ಕಾಣಿಸಿಕೊಳ್ಳುತ್ತದೆ. ಕೊನೆಗೆ ಬ್ರಿಟಿಷ್ ಸತ್ತೆಯೇ
ಉತ್ತಮವಾಗಿತ್ತೇನೋ ಎಂಬ ಮಾತುಗಳು ಪಾತ್ರಗಳ ಬಾಯಲ್ಲಿ ಕೇಳಿಬರುತ್ತವೆ. ಇಂಥ ಹೊಸ ಅನುಭವಗಳನ್ನು ಹಳೆಯ ರೋಮ್ಯಾಂಟಿಕ್ ಭಾವನೆಗಳಲ್ಲಿ ಒಡಮೂಡಿಸುವುದು ಕಷ್ಟವೇ ಸರಿ.
ಸ್ವಾತಂತ್ಯ್ರಾನಂತರದ ಬದುಕಿನ ಸಂಕೀರ್ಣತೆಯನ್ನು ಚಿತ್ರಿಸಲು ಭಾಷೆಗೆ ಹೊಸ
ಕಸುವು ಬೇಕು ಎಂದು ಅಡಿಗರಿಗೆ ಅನ್ನಿಸುತ್ತದೆ. ಸ್ಥಿತ್ಯಂತರಗಳು ತಲೆದೋರಿದ ಬಳಿಕ ಬರಿ
ಭಾಷೆ ಮಾತ್ರವಲ್ಲ ಛಂದಸ್ಸಿನಲ್ಲೂ ಬದಲಾವಣೆ ಅಗತ್ಯವೆಂದು ಅವರಿಗೆ ತೋರುತ್ತದೆ.
ದಿಙ್ಮೂಡ ವೃತ್ತಿಯ ಅಲ್ಲೋಲಕಲ್ಲೋಲವನ್ನು ರೂಪುಗೊಳಿಸಲು ಇಂದು ಛಂದಸ್ಸಿನಲ್ಲಿಯೂ ಅನೇಕ ಮಾರ್ಪಾಡು ಆಗುತ್ತಿದೆ. ಅರ್ಥದ, ಭಾವದ ತಿರುವುಮುರುವುಗಳನ್ನೂ ಡೊಂಕು ಕೊಂಕುಗಳನ್ನೂ ಗತಿ ಲಂಘನಗಳನ್ನೂ ಯಥಾವತ್ತಾಗಿ ಮೂರ್ತಿಗೊಳಿಸುತ್ತ ಹೊಸ ಛಂದಸ್ಸಿನ ಗತಿ, ಭಾವ ಗತಿಗೆ ಹೊಂದಿಕೊಂಡು ನಡೆಯುತ್ತದೆ... ತನಗೆ ಸಹಜವಾದ ಶಬ್ದ ಸಂಗೀತದಿಂದ ಓದುವವನಿಗೆ ಮೋಡಿ ಹಾಕುತ್ತ ರಚಿತವಾಗುತ್ತಿದೆ'' ಎಂದು ಅಡಿಗರು `ಜಯಕರ್ನಾಟಕ'ದಲ್ಲಿ ಬರೆದಿರುವರು. ನವ್ಯದ ಸಂದರ್ಭದಲ್ಲಿ ಭಾಷೆ ತನ್ನೆಲ್ಲ ಮಡಿವಂತಿಕೆಯನ್ನು ಕಳೆದುಕೊಳ್ಳುತ್ತದೆ. ಸಮಕಾಲೀನತೆಯನ್ನು ಹಿಡಿದಿಡುವಾಗ ಈ ಮಣ್ಣಿನ ಭಾಷೆಯನ್ನು ಅಂಗೀಕರಿಸಿ ಅದು ಜೀವಂತಿಕೆಯನ್ನು ಪಡೆದುಕೊಳ್ಳುತ್ತದೆ. ರಮ್ಯದ ಕಾಲದಲ್ಲಿಯ ಅದೆಷ್ಟೋ ಅರ್ಥ ಶಿಥಿಲತೆಯ ಶಬ್ದಗಳು ಹಿಂದೆ ಸರಿದವು. ಅವುಗಳ ಸ್ಥಾನದಲ್ಲಿ ನಿರ್ದಿಷ್ಟ ಅರ್ಥದೊಂದಿಗೆ ಶಬ್ದಗಳು ಬಳಕೆಯಾದವು. ಪ್ರತಿಮೆಗಳು, ಸಂಕೇತಗಳು ಬಳಕೆಯಾದವು. ಆಡು ಮಾತು ಹೊಸ ಅರ್ಥಗಾಂಭೀರ್ಯದೊಂದಿಗೆ ಬಳಕೆಯಾಯಿತು. ಕಂಬಾರರ `ತಕರಾರಿನವರು' ಸಂಕಲನದಲ್ಲಿಯ `ಮಾವೋತ್ಸೆ ತುಂಗನಿಗೆ' ಕವನ ನೋಡಬೇಕು `ದುಷ್ಟಾ ಕೆತ್ತಿಸಿ ಬಡದೇನು ಗೂಟಾ, ಮಿಂಡ ಭಂಡತನ, ಲಬೋ, ಲಬೋ ಹೊಯ್ಕೊಂಡು...' ಹೀಗೇ ಸಾಗುವ ಈ ಕವಿತೆಯಲ್ಲಿ ಬಯ್ಗುಳ ಧಾರಾಳವಾಗಿ ಪ್ರಯೋಗವಾಗಿದೆ. ಇವೆಲ್ಲ ನವೋದಯದಲ್ಲಿ ಸಾಧ್ಯವೇ ಇರಲಿಲ್ಲ. ಮೂಢಾ, ಧಡ್ಡಾ, ಬಚ್ಚಾ ನೀ ಇನ್ನೂ ಅಕ್ಕಲ್ ಕಾ ಕಚ್ಚಾ ಇತ್ಯಾದಿ ಪದ ಪ್ರಯೋಗ ಇಲ್ಲಿದೆ. ಇಲ್ಲಿ ಕಂಬಾರರು ಲಂಕೇಶರ `ದೇಶಭಕ್ತ ಸೂಳೆ ಮಗನಿಗೆ' ಪದ್ಯವನ್ನು ನೆನಪಿಸುತ್ತಾರೆ. ಆಧುನಿಕ ಬದುಕು ಬರಿ ಗೊಂದಲದ ಗೂಡಾಗಿರುವುದು ಅಡಿಗರ `ಎಳೆಹರೆಯ'ದಲ್ಲಿ ಚೆನ್ನಾಗಿ ವರ್ಣಿತವಾಗಿದೆ. .. ಎಲ್ಲೆಲ್ಲು ಹೆರಿಗೆ ಮನೆ; ಬೇನೆ, ಸಂಕಟ, ನಗೆ, ಕೊರಡು ಚಿಗುರಿದ ಚೆಲುವು ಚೀರು, ಕೇಕೆ... ಸುಖ ದುಃಖಗಳು ಕವನದ ನಾಯಕನಿಗೆ ಒಂದರ ಹಿಂದೆ ಒಂದರಂತೆ ದರ್ಶನ ನೀಡುತ್ತವೆ. ರೂಪದ ಹಿಂದೆ ವಿರೂಪ, ಸುಖದ ಜೊತೆಯಲ್ಲಿ ದುಃಖ, ಸಿಹಿಯ ಜೊತೆಯಲ್ಲಿ ಕಹಿ ಈ ದ್ವಂದ್ವಗಳ ಸಾಲು ಕವಿತೆಯ ನಾಯಕನನ್ನು ಅಸ್ವಸ್ಥಗೊಳಿಸುತ್ತದೆ. `ನರ್ಸುಗಳು ಡಾಕ್ಟರರು ಹೆರಿಗೆ ಮನೆಯೊಳ ಹೊರಗೆ ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ....' ಇಲ್ಲಿ ಕವಿ ಬದುಕಿನ ದ್ವಂದ್ವ ಚಿತ್ರವನ್ನು ಮುಂದುವರಿಸುತ್ತಾರೆ. ಸುಖವೆಂದರೆ ಸುಖವನ್ನು ಮಾತ್ರವಲ್ಲ, ಸೌಂದರ್ಯವೆಂದರೆ ಸೌಂದರ್ಯಮಾತ್ರವಲ್ಲ ಅವೆರಡನ್ನೂ ಸಮಪ್ರಮಾಣದಲ್ಲಿ ಬದುಕು ಸ್ವೀಕರಿಸಬೇಕಾಗುತ್ತದೆ. ಎನ್ನುವ ಸಂದೇಶ ಸಾರುತ್ತಾರೆ. ಈ ಲೋಕ ಎಷ್ಟು ಗೊಂದಲಕಾರಿ ಎಂಬುದನ್ನು ಗಡಿಯಾರದಂಗಡಿಯ ಈ ಚಿತ್ರ ಇನ್ನಷ್ಟು ಸ್ಪಷ್ಟಪಡಿಸುತ್ತದೆ.- `ಈಗ ಈ ಲೋಕ ಅಸ್ತವ್ಯಸ್ತ; ಗಡಿಯಾರ ಬಿಚ್ಚಿ ಯಂತ್ರೋಪಯಂತ್ರಗಳ ಚೆಲ್ಲಾಪಿಲ್ಲಿ ಚೆಲ್ಲಿ, ಕೈಕಟ್ಟಿ ಕುಳಿತ ರಿಪೇರಿಯವನಂತೆ ಯಾವ ತಿರುಗಣಿ ಮೊಳೆಯನ್ನೆಲ್ಲಿ ಹಾಕಲಿ? ಮತ್ತೆ ಈ ಸುರುಳಿ ತಂತಿಯನ್ನೆಲ್ಲಿ ತುರುಕಲಿ? ಗಡಿಯಾರವಿದೆ, ಯಂತ್ರವಿದೆ, ಎಲ್ಲ ಇವೆ. ಇಲ್ಲ ಸಾವಯವ ಶಿಲ್ಪದ ಸಮಗ್ರೀಕರಣಬಲ' ಇಲ್ಲಿ ಸಂಕೇತಗಳ ಮೂಲಕ ಸ್ವಾತಂತ್ರ್ಯೋತ್ತರ ಭಾರತದ ಸ್ಥಿತಿಯನ್ನು ಕವಿ ಮನಮುಟ್ಟಿಸಿದ್ದಾರೆ. ಇಂಥದ್ದೇ ಮನಸ್ಥಿತಿಯನ್ನು ನವ್ಯ ಕಾದಂಬರಿ ಎಂದು ಗುರುತಿಸಲಾಗುವ ಗಿರಿಯವರ `ಗತಿ ಸ್ಥಿತಿ'ಯಲ್ಲಿಯೂ ನಾವು ಕಾಣಬಹುದು. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದು ಗೊತ್ತಿಲ್ಲದ ನಿರುದ್ದಿಶ್ಯವಾದ ಬದುಕು. ಓಡುವುದು ಓಡುವುದು ಓಡುವುದು.. ಓಟಕ್ಕೆ ಕೊನೆಯೆಂಬುದೇ ಇಲ್ಲ. ಓಟಕ್ಕೆ ಕಾರಣವೂ ಗೊತ್ತಿರುವುದಿಲ್ಲ. ಕೆ.ವಿ. ತಿರುಮಲೇಶ ಅವರ `ಮಹಾ ಪ್ರಸ್ಥಾನ'ದಲ್ಲಿಯ ಅರಸುವಿಕೆ ಇದನ್ನೇ ಸೂಚಿಸುತ್ತದೆ. ಕಾವ್ಯವನ್ನು ಹೇಗೆ ಬಲಗೊಳಿಸುವುದು, ಕಾವ್ಯಕ್ಕೆ ಸಮಗ್ರೀಕರಣ ಬಲವನ್ನು ಒದಗಿಸುವದು ಹೇಗೆ ಎಂಬ ಚಿಂತೆಯನ್ನು ಅಲ್ಲಿ ಗುರುತಿಸಬಹುದು. `ಶಬ್ದಗಳೆ ಪ್ರತಿಮೆಗಳೆ ಪ್ರತೀಕಗಳೆ ಬನ್ನಿ ಧ್ವನಿಗಳೇ ಬನ್ನಿ ಮೂಡಿಸಿರಿ ಬಿದ್ದ ಈ ಹೋರಿಯ ಈ ಕುದುರೆಯ ಈ ಮಾನವನ ಈ ಭಗ್ನಾವಶೇಷ ಅಸ್ತವ್ಯಸ್ತದಲ್ಲಿ ನಿಂತ ಹೆಣ್ಣಿನ ಮಣ್ಣಿನ ರಕ್ತದ ಕ್ರೌರ್ಯದಲ್ಲಿ ಬಿಟ್ಟ ಕಲೆಯ ಅರ್ಥ ಶಬ್ದಗಳೇ, ಪ್ರತಿಮೆಗಳೇ ಪ್ರತೀಕಗಳೆ ಪ್ರತಿಧ್ವನಿಗಳೇ ನನ್ನ ಧ್ವನಿಗಳೇ ಬನ್ನಿ' ಎಂಬಲ್ಲಿ ಕಾವ್ಯವನ್ನು ಬಲಗೊಳಿಸಲು ಏನೇನು ಬೇಕು ಎಂಬ ಬಗ್ಗೆ ಕವಿ ಚಿಂತನೆ ನಡೆಸಿರುವುದನ್ನು ಕಾಣಬಹುದಾಗಿದೆ. ನವ್ಯ ಕಾವ್ಯ ಛಂದಸ್ಸಿನಲ್ಲಿ ನಡೆಸಿದ ಹೊಸ ಪ್ರಯೋಗ ಯಶಸ್ವಿಯಾದರೂ ಹೃದಯಸಾಲದು ಎಂಬ ಕೊರಗನ್ನು ಬಿ.ಸಿ.ರಾಮಚಂದ್ರಶರ್ಮರು `ಪ್ರಜಾವಾಣಿ'ಯಲ್ಲಿ ವ್ಯಕ್ತಪಡಿಸಿದ್ದಾರೆ.೮೫ `ಕಾವ್ಯದ ಮಾತು ಗುಡುಗಿನ ಹಾಗೆ- ಅಬ್ಬರ ಹೆಚ್ಚು. ನವ್ಯ ಕಾವ್ಯದಲ್ಲಿ ಕೌಶಲವಿದೆ. ಛಂದಸ್ಸಿನಲ್ಲಿ ನಡೆಸಿದ ಪ್ರಯೋಗ ಅನೇಕ ಕಡೆ ಯಶಸ್ವಿಯಾಗಿದೆ. ಪ್ರತಿಮೆಗಳನ್ನು ಜೋಡಿಸುವ ಕ್ರಮ ತುಂಬ ಸೊಗಸು. ಆದರೂ ಹೃದಯ ಸಾಲದು. ಸಾಹಿತ್ಯದ ಸಂಪದಂಶಕ್ಕೆ ನವ್ಯ ಕಾವ್ಯ ತಂದು ಸೇರಿಸಿರುವುದು ಕಡಿಮೆ' ಎನ್ನುವ ಮೂಲಕ ಅವರು ಕೊರತೆಯನ್ನೂ ಗುರುತಿಸುವರು. ಕಾವ್ಯ ಕ್ಲಿಷ್ಟತೆ: ನವ್ಯ ಕಾವ್ಯದ ಸಂದರ್ಭದಲ್ಲಿ ಮುಖ್ಯವಾಗಿ ಕೇಳಿಬಂದ ಟೀಕೆ ಅದು ಕ್ಲಿಷ್ಟ, ಸಾಮಾನ್ಯರಿಗೆ ಅರ್ಥವಾಗುವಂಥದ್ದಲ್ಲ ಎಂಬುದು. ನವ್ಯ ಕಾವ್ಯದಲ್ಲಿಯ ನಿರಾಶೆ ಅದು ಹುಟ್ಟಿಕೊಂಡ ಕಾಲದ ಪ್ರತಿಫಲನವಲ್ಲ, ಆರೋಪಿಸಿಕೊಂಡದ್ದು. ಇಂಗ್ಲಿಷ್ ಕಾವ್ಯದ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟ ಇಂಗ್ಲಿಷ್ ಪ್ರೊಫೆಸರುಗಳು ಮಾಡಿದ ಪ್ರಯೋಗ ಇದು ಎಂಬ ಮಾತು ಕೇಳಿಬಂತು. ಇದಕ್ಕೆ ಸಮಾಧಾನ ಹೇಳುವ ಪ್ರಯತ್ನವೂ ಆಗ ನಡೆಯಿತು. `ಜನಪ್ರಗತಿ'ಯು ಕನ್ನಡದ ನವ್ಯ ಕಾವ್ಯಗಳ ಬಗೆಗೆ ಅನೇಕ ಲೇಖನಗಳನ್ನು ಪ್ರಕಟಿಸುತ್ತಿತ್ತು. ಆರ್.ಎಸ್.ರಾಮರಾವ ಅವರು ಬರೆದ `ಕನ್ನಡ ನವ್ಯ ಕಾವ್ಯ' ಎಂಬ ಲೇಖನವು ಜನಪ್ರಗತಿಯಲ್ಲಿ ಪ್ರಕಟವಾಗಿತ್ತು.೮೬ ಆ ಲೇಖನದಲ್ಲಿ ಅವರು, ಜಟಿಲವಾದ ಜೀವನದ ವಾಸ್ತವ ಚಿತ್ರವನ್ನು ಹಾಗೆಯೇ ಕೊಡುವುದಕ್ಕೆ ಯತ್ನಿಸುತ್ತದೆ ನವ್ಯಕಾವ್ಯ. ಆದ್ದರಿಂದ ಶೈಲಿಯಲ್ಲಿ, ವಾಣಿಯಲ್ಲಿ ಜಟಿಲತೆ ಕಂಡು ಬರಬಹುದು. ಅದರಲ್ಲಿ ಭಾವ ಸಮಗ್ರವಾಗಿ ಬರುತ್ತದೆ ಎಂದು ಹೇಳುವ ಮೂಲಕ ಜಟಿಲತೆಗೆ ಕಾರಣವನ್ನು ಹುಡುಕಲು ಯತ್ನಿಸಿದ್ದಾರೆ. ಇದಕ್ಕೂ ಮೊದಲು `ಜನಪ್ರಗತಿ'ಯಲ್ಲಿಯೇ ಬಿ.ಸಿ.ರಾಮಚಂದ್ರ ಶರ್ಮ ಅವರು ನವ್ಯ ಕಾವ್ಯದ ಕ್ಲಿಷ್ಟತೆ ಕುರಿತು ಲೇಖನವನ್ನು ಬರೆದಿದ್ದರು.೮೭
ನವ್ಯ ಕಾವ್ಯವು ಸ್ವಲ್ಪ ಮಟ್ಟಿಗೆ
ಕ್ಲಿಷ್ಟವೆಂಬುದು ವಾಸ್ತವ” ಎಂಬ ಅಂಶವನ್ನು ಒಪ್ಪುವ ರಾಮಚಂದ್ರ ಶರ್ಮ, ಇದಕ್ಕೆ ನವ್ಯ
ಕವಿಯ ಪಾಂಡಿತ್ಯ ಕಾರಣ ಎಂದು ಊಹಿಸುವರು. ಕಾವ್ಯದಲ್ಲಿ ಬಳಸುವ ಪದಗಳ
ಮೂಲಕವಾಗಿ ಬಂದ ಕ್ಲಿಷ್ಟತೆ ಇದಲ್ಲ. ಏಕೆಂದರೆ ನವ್ಯ ಕವಿ ಜನರಾಡುವ ಮಾತುಗಳನ್ನೇ
ಬಳಸುವವನು ಎಂದು ಅವರು ಅಭಿಪ್ರಾಯ ಪಡುವರು. ಮೊದಲನೆ ಮಹಾಯುದ್ಧ ಮುಗಿದಾಗ ಎಲಿಯಟ್ ಹೇಳಿದ: ಸದ್ಯಕಂತೂ ಕಾವ್ಯ ಸುಲಭವಾಗಿರುವುದು ಸಾಧ್ಯವಿಲ್ಲ' ಎಂದು. ಅಡಿಗರು ಅದೇ ಮಾತನ್ನು ಕನ್ನಡ ನವ್ಯ ಕಾವ್ಯದ ಬಗೆಗೂ ಹೇಳಿದರು ಎಂಬುದನ್ನು ಶರ್ಮ ಸ್ಮರಿಸುತ್ತಾರೆ. ನವ್ಯ ಕಾವ್ಯದ ಕ್ಲಿಷ್ಟತೆಯ ಬಗೆಗೆ
ಕನ್ನಡ ನುಡಿ’ಯಲ್ಲಿ ನಿರಂಜನರು ಬರೆದ
ಲೇಖನದಲ್ಲಿಯ ಈ ಮಾತುಗಳನ್ನು ಗಮನಿಸಬೇಕು. ಸಾಮಾಜಿಕ ಜೀವನದಿಂದ, ಜೀವನ ಪ್ರವಾಹದಿಂದ, ದೂರಹೋಗುವ ಬರೆಹಗಾರನಿಗೆ ಒಳ್ಳೆಯ ನಿದರ್ಶನವೆಂದರೆ ನಮ್ಮ ನವ್ಯ ಕವಿ. ಈಗ ಈತ ಸೃಷ್ಟಿಸುವುದು ವೈಯಕ್ತಿಕ ಕಾವ್ಯವನ್ನು, ಮಾತನಾಡುವುದು ವೈಯಕ್ತಿಕ ಪ್ರತಿಮೆಗಳ ಮೂಲಕ. ಕವಿವಾಣಿ ವಿಶ್ವವಾಣಿಯಾಗುವ ಕಾಲ ಕಳೆದಂತೆಯೇ! ಈ ಸಿನಿಕತನ, ನಿರಾಶಾವಾದ, ವಕ್ರ ತಾತ್ವ್ತಿಕ ದೃಷ್ಟಿ - ಎಷ್ಟು ಸರಿಯೋ ಎಷ್ಟು ತಪ್ಪೋ, ಓದುಗರಿಗೆ ಅದು ತಿಳಿದರೆ ತಾನೆ? ಯಾಕೆ ಹೀಗೆ - ಎಂದು ನವ್ಯ ಕವಿಯನ್ನು ಕೇಳಿ ನೋಡಿ. ದೊರೆಯುವ ಉತ್ತರ ಎಂಥದ್ದು? `ನಾನು ಬರೆಯೋದು ಇವತ್ತು ಹತ್ತೇ ಜನರಿಗೆ ತಿಳಿದರೂ ಸಾಕು. ನಾಳೆಯ ಜನರೆಲ್ಲ ನನ್ನ ಕೃತಿಯನ್ನು ಖಂಡಿತವಾಗಿಯೂ ಕೊಂಡಾಡುವರು.''೮೮ ಇಂಥ ಟೀಕೆ ನವ್ಯ ಕಾವ್ಯದ ಬಗೆಗೆ ವ್ಯಾಪಕವಾಗಿ ಕೇಳಿಬಂದವು. ೧೯೫೩ರಲ್ಲಿ `ಚಿತ್ರಗುಪ್ತ'ದಲ್ಲಿ `ರೊಮ್ಯಾಂಟಿಕ್ ಕಾವ್ಯ; ನವ್ಯ ಕಾವ್ಯ; ಜನಕಾವ್ಯ...' ಎಂಬ ಲೇಖನ ಬರೆದ ನಿರಂಜನರು ಅದರಲ್ಲಿ ರಾಮಚಂದ್ರಶರ್ಮರ `ಹೃದಯ ಗೀತ' ಕವನ ಸಂಕಲನವನ್ನು ವಿಮರ್ಶಿಸುತ್ತ ನವ್ಯದ ಬಗ್ಗೆ ಕೆಲವು ಟೀಕಾತ್ಮಕವಾದ ಮಾತುಗಳನ್ನು ಹೇಳುತ್ತಾರೆ. ನವ್ಯ ಕಾವ್ಯದ ಹೆಸರಿನಲ್ಲಿ ಕನ್ನಡ ಕವಿತೆಯನ್ನು ಚಕ್ರಬಂಧ ಸ್ಪರ್ಧೆಯ ಮಟ್ಟಕ್ಕಿಳಿಸುವ ಒಂದು ಯತ್ನ ಈಗ ಆಗುತ್ತಿದೆ ಎಂಬ ಅವರ ಮಾತುಗಳು ನವ್ಯ ಕಾವ್ಯದ ಕ್ಲಿಷ್ಟತೆಯ ಕುರಿತು ಆಡಿದುದೇ ಆಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ವಿದ್ಯಾವಂತರಿಗೂ ಅರ್ಥವಾಗದ ರೀತಿಯಲ್ಲಿ, ಕವಿತೆ ಬರೆಯುವ ಚಟವೊಂದು `ನವ್ಯಕಾವ್ಯ'ದ ಹೆಸರಿನಲ್ಲಿ ಹುಟ್ಟಿಕೊಂಡಿದೆ. ಈ ಹೊಸ ವಾದದಿಂದ ತಮ್ಮ ಸ್ಥಾನಕ್ಕೆ ಸಂಚಕಾರ ಒದಗುತ್ತದೆಂದು, ಕೆಲವು `ಹಿರಿಯ' ಕವಿಗಳು ನವ್ಯ ಕಾವ್ಯವನ್ನು ಖಂಡಿಸಿದ್ದಾರೆ; ಆದರೆ ಪ್ರಗತಿಶೀಲರು, `ಈ ನವ್ಯ ಕಾವ್ಯದ ಹಿನ್ನೆಲೆಯಲ್ಲಿ ಪಲಾಯನವಾದವಿದೆ; ಪ್ರತಿಗಾಮಿಯಾದ ತತ್ವಜ್ಞಾನವಿದೆ ಎನ್ನುವ ಕಾರಣದಿಂದ ನವ್ಯ ಕಾವ್ಯವನ್ನು ಟೀಕಿಸಿದ್ದಾರೆ' ಎಂದು ಅವರು ನವ್ಯ ಕಾವ್ಯಕ್ಕೆ ತಮ್ಮ ವಿರೋಧದ ಕಾರಣವನ್ನು ಹೇಳುವರು.೮೯ ನವ್ಯ ಕಾವ್ಯದ ಪ್ರೇರಣೆ ಈ ನೆಲದಲ್ಲಿ ಇಲ್ಲ. ಅದು ಇಂಗ್ಲಿಷ್ ಪ್ರೊಫೆಸರುಗಳು ಇಂಗ್ಲಿಷ್ ಕಾವ್ಯ ಓದಿ ಕನ್ನಡಲ್ಲೂ ಅದನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗೆ ಉತ್ತರವೆಂಬಂತೆ ಶರ್ಮ `ಜನಪ್ರಗತಿ'ಯಲ್ಲಿಯೇ ಬರೆದಿರುವ ಈ ಮಾತುಗಳನ್ನು ಗಮನಿಸಬೇಕು.
ಯುದ್ಧ ನಿರ್ಮೂಲಕ್ಕೆಂದೇ ನಡೆದ ಮಹಾಯುದ್ಧ ಮುಗಿದಿತ್ತಾದರೂ,
ಜನ ನೆಚ್ಚಿದ್ದ ಶಾಂತಿ ಬಿಸಿಲುಗುದುರೆಯಾಗಿ ದೂರವೇ ಇತ್ತು… ಸಮರದ ನೆರಳಾಗಿ ಬರುವ
ಆರ್ಥಿಕ ಮುಗ್ಗಟ್ಟು ತನ್ನ ಕರಾಳ ರೂಪವನ್ನು ತೋರತೊಡಗಿತ್ತು… ಅಭಿವ್ಯಕ್ತಿ
ಸಾಧನೆಯಾಗುವುದಾದರೆ ಇಂಗ್ಲಿಷ್ ಕಾವ್ಯದ ಹೆಜ್ಜೆಯ ಹಿಂದೆ ಹೆಜ್ಜೆ ಇಡುವುದರಲ್ಲಿ ಏನೂ
ಅವಮಾನವಿಲ್ಲ ಎಂಬುದೇ ನನ್ನ ನಂಬಿಕೆ”90 ಎಂಬಲ್ಲಿ ನವ್ಯ ಕಾವ್ಯದ ಸಮರ್ಥನೆಯನ್ನು ಕಾಣಬಹುದು.
ಅಡಿಗರ ಭೂಮಿಗೀತದಲ್ಲಿ ಅವರೇ ಹೇಳುವ ಈ ಸಂಕೀರ್ಣತೆಯನ್ನು ನಾವು
ಎದುರಾಗುತ್ತೇವೆ. ತುಟಿಗಗಸ್ತ್ಯಾಧರದ ತುರುಸು ತೋಟಿ' ಎಂಬಲ್ಲಿ,
ಹಕ್ಕಿ ಕೊರಳನು
ಹಿಚುಕಿ ಲಾಲಿ ಹಾಡಿದಳು / ಸಸಿ ಕೊರಳ ಕೊಯ್ದು ತಿಂಡಿಯನು ತಿನಿಸಿದಳು’- ಇವಳೆದೆಗೆ ಬೇರಿಳಿದ ಕಾಲು ನನ್ನದು' ಎಂಬಲ್ಲೆಲ್ಲ ಈ ಸಂಕೀರ್ಣತೆ ಎದುರಾಗಿ, ಅಡಿಗರೇ ಹೇಳುವ ನಿರ್ದಿಷ್ಟ ಅರ್ಥ ಕೈಗೆಟುಕದೆ ಹೋಗುವ ಅಪಾಯವಿದೆ. ಹೀಗೆ ನವ್ಯದ ಪ್ರವರ್ತಕರು ಯಾವುದನ್ನು ಗುಣವೆಂದು ಪರಿಗಣಿಸಿದರೋ ಅದನ್ನೇ ಮುಂದಿನವರು ನವ್ಯದ ಅವಗುಣಗಳೆಂದು ಅದನ್ನು ದೂರೀಕರಿಸುವುದಕ್ಕೂ ಕಾರಣವಾಗುತ್ತದೆ. ಈ ಸಂಕೀರ್ಣತೆ ಎಂಬುದು ಆಂತರಿಕತೆಯೂ ಅನ್ನಿಸಿ ಅದು ವೈಯಕ್ತಿಕ ತಹತಹ ಎನ್ನುವ ಮಟ್ಟಕ್ಕೆ ಬಂದು ಬಿಡುತ್ತದೆ. ಹೀಗಾಗಿ ನವ್ಯ ಸಾಹಿತಿ ಸಾಮಾಜಿಕ ಜವಾಬ್ದಾರಿಯಿಂದ ಹೊರಗಿರುವ ಅಪಾಯವಿದೆ.
ಈಡಿಪಸ್ಸಿನ ಗೂಢ ಪಾಪ ಲೇಪಿತ ನಾನು
ಟ್ರ್ಯಾಕ್ಟರನ್ನೇರಿದೆನು ಉತ್ತೆ ಸಿಗಿದೆ.
ಬಿತ್ತಿದೆನು, ಬೆಳೆದೆ ಆಟಂಬಾಂಬು ಕಾಳುಗಳ
ಮಾರಕ ಕ್ರಿಮಿ ಪೈರ ಗೋರಿ ನಲಿದೆ’
ಎಂಬಲ್ಲಿ ಅಡಿಗರು ಪಾಪ ಪ್ರಜ್ಞೆಯನ್ನು ಎತ್ತಿ ಹೇಳುವರು. ಈ ಪಾಪ ಪ್ರಜ್ಞೆ ಇಡಿ
ನವ್ಯ ಸಾಹಿತ್ಯದ ತಳದಲ್ಲಿದೆ. ಇವಳೆದೆಗೆ ಬೇರಿಳಿದ ಕಾಲು ನನ್ನದು' ಎಂದು ನೆಲದೊಂದಿಗೆ ಸಂಬಂಧವನ್ನು ಸ್ಥಾಪಿಸಿಕೊಂಡಿದ್ದರೂ ಅಲ್ಲಿ ಬೆಳೆದದ್ದು ವಿನಾಶವನ್ನೇ ಎಂಬುದನ್ನು ಅವರು ಸೂಚಿಸುತ್ತಾರೆ. ಟ್ರ್ಯಾಕ್ಟರು ಪಾರಂಪರಿಕ ನೇಗಿಲಿನಿಂದ ಭಿನ್ನವಾದ, ಆಧುನಿಕತೆಯನ್ನು ಸೂಚಿಸುವ ಪ್ರತಿಮೆಯಾಗಿದೆ. ಇಂಥ ಸಂದಿಗ್ಧತೆಯಲ್ಲಿರುವ ನವ್ಯ ಸಾಹಿತಿಗೆ ತನ್ನ ಅಸ್ತಿತ್ವ ಮರೆಯಾಗುವ ಆತಂಕ. ಅದೇ-
ಢಿಕ್ಕಿ ಹೊಡೆದೆನು ಪಂಜರದ ಕಂಭ, ಮಾಡಕ್ಕೆ; ಚೀರಿ
ಬಡಿದೆನು ರೆಕ್ಕೆ ಪುಕ್ಕವ ಕಿತ್ತು ರಾಶಿ ಹಾಕಿದ ತಿಂಡಿ ತಟ್ಟೆಯೊಳಗೆ’ ಎಂಬ ಮಾತುಗಳಲ್ಲಿ
ವ್ಯಕ್ತವಾಗಿದೆ. ನವ್ಯ ಕವಿತೆಯ ನಾಯಕ ಈ ರೀತಿ ಪಂಜರದಲ್ಲೇ ಬಂಧಿಯಾದ ಹಕ್ಕಿಯ
ಹಾಗೆ ವಿಲಕ್ಷಣ ನೋವನ್ನು ಅನುಭವಿಸುತ್ತಾನೆ. ಇಂಥಲ್ಲೆಲ್ಲ ನವ್ಯ ಕಾವ್ಯ ಅಲ್ಲಮನ ಬೆಡಗಿನ
ವಚನಗಳ ಹಾಗೆ ವ್ಯಾಖ್ಯಾನವನ್ನು ಅಪೇಕ್ಷಿಸುತ್ತವೆ. ಇದಕ್ಕಾಗಿಯೇ ನವ್ಯ ಕಾವ್ಯ ಕ್ಲಿಷ್ಟ ಎಂಬ
ಮಾತು ಕೇಳಿಬಂತು. ಈ ಕ್ಲಿಷ್ಟತೆ ಯಾವ ರೀತಿಯದು ಎಂಬ ಚರ್ಚೆ ನವ್ಯ ಕಾವ್ಯದ
ಆರಂಭದ ದೆಸೆಯಲ್ಲಿಯೇ ಅಂದಿನ ಪತ್ರಿಕೆಗಳಲ್ಲಿ ನಡೆಯಿತು ಎಂಬುದನ್ನು ಗಮನಿಸಿದಾಗ,
ಹೊಸ ಕಾವ್ಯ ಮಾರ್ಗ ಗಟ್ಟಿಗೊಳ್ಳುವಲ್ಲಿ ಅಂದಿನ ಪತ್ರಿಕೆಗಳು ವಹಿಸಿದ ಪಾತ್ರ
ಮಹತ್ವದ್ದೆನಿಸುತ್ತದೆ.
ಸಾಹಿತ್ಯವು ಸಮಾಜದ ಸಹಜ ಪ್ರೇರಣೆಯಿಂದ ಹುಟ್ಟು ಪಡೆಯದೆ ಇದ್ದಾಗ ಮತ್ತು
ಬುದ್ಧಿಪೂರ್ವಕವಾಗಿ ತಾವು ಒಂದು ಹೊಸ ಮಾರ್ಗವನ್ನು ತೆರೆಯುತ್ತೇವೆ ಎಂಬ ಅರಿವಿನಿಂದ
ಸಾಹಿತ್ಯ ಸೃಷ್ಟಿ ಮಾಡತೊಡಗಿದಾಗ ತಮಗಿಂತ ಹಿಂದಿನ ಸಾಹಿತ್ಯದಲ್ಲಿ ಏನಿಲ್ಲ ಎಂಬುದನ್ನು
ಪಟ್ಟಿ ಮಾಡುವುದು ಅನಿವಾರ್ಯವಾಗುತ್ತದೆ. ಹಿಂದಿನ ಸಾಹಿತ್ಯದಿಂದ ತಾವು ಹೇಗೆ ಭಿನ್ನ
ಎಂಬುದನ್ನು ತೋರಿಸಬೇಕಾಗುತ್ತದೆ. ಹೊಸ ಮಾರ್ಗದ ಶ್ರೇಷ್ಠತೆ ಯಾವುದರಲ್ಲಿದೆ
ಎಂಬುದನ್ನು ಹೇಳಿಕೊಳ್ಳಬೇಕಾಗುತ್ತದೆ. ನವ್ಯರು ಸಾಹಿತ್ಯದಲ್ಲಿ ಶ್ರೇಷ್ಠತೆಯನ್ನು
ಪ್ರತಿಪಾದಿಸುತ್ತಾರೆ.
ಒಟ್ಟಾರೆ ನವ್ಯ ಕಾವ್ಯ ಕನ್ನಡದಲ್ಲಿ ತಲೆದೋರಿದ ಕೂಡಲೆ ರಸಾತ್ಮಕ ಹಾಗೂ ಭಾವ
ಗೀತಾತ್ಮಕವಾದದ್ದು ಕಾವ್ಯವೆನ್ನುವ ವ್ಯಾಖ್ಯೆಯೇ ತಿರುವುಮುರುವಾಯಿತು. ಅನಗತ್ಯವಾಗಿ
ಹೊಗಳುವುದು, ಅತಿಶಯೋಕ್ತಿ, ಉತ್ಪ್ರೇಕ್ಪೆ ಮೊದಲಾದ ಅಲಂಕಾರಗಳ ಹಂಗಿಲ್ಲದೆ ವಾಸ್ತವಿಕ
ದೃಷ್ಟಿಕೋನದಿಂದ, ಸ್ವಂತ ಅನುಭವದಿಂದ, ವೈಜ್ಞಾನಿಕ ಅರಿವಿನಿಂದ ಕಾವ್ಯ ರಚಿಸಬೇಕು
ಎಂಬ ಜವಾಬ್ದಾರಿ ಕವಿಗಳಲ್ಲಿ ಬೆಳೆಯಿತು. ಸ್ಫೂರ್ತಿ, ಪ್ರೇರಣೆ ಕಾವ್ಯ ರಚನೆಗೆ ಬೇಕು
ಎಂಬ ತಿಳಿವಳಿಕೆ ದೂರವಾಯಿತು. ಕಾವ್ಯಕ್ಕೆ ಅನುಭವವೇ ಒರೆಗಲ್ಲಾಯಿತು. ಭಾವ
ಅನುಭಾವಗಳ ಬದಲಿಗೆ ಅನುಭವ ಪ್ರಾಮುಖ್ಯತೆ ಪಡೆಯಿತು. ಹೊಸ ಕವಿಗಳು
ಪರಂಪರಾಗತ ಆಕರ್ಷಕ ಸಂದರ್ಭಗಳಿಂದ ಹೊರಬಂದು ಬರೆದರು. ಹೊಸ ಮೌಲ್ಯಗಳನ್ನು
ಶೋಧಿಸಿದರು. ಪ್ರಾಮಾಣಿಕತೆ ಅಭಿವ್ಯಕ್ತಿಯಲ್ಲಿ ಆದ್ಯತೆ ಪಡೆಯಿತು. ಈ
ಕಾರಣಕ್ಕಾಗಿಯೇ ಅದುವರೆಗಿನ ಕಾಮದ ಬಗೆಗಿನ ಮಡಿವಂತಿಕೆ ದೂರವಾಗಿ ಇಲ್ಲಿ ಅದು
ವಿವಿಧ ರೀತಿಯಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು. ಭಾಷೆಯೊಂದಿಗೆ ಅವರು ಹೋರಾಟ
ನಡೆಸಿದರು. ವೈಯಕ್ತಿಕ ಅನುಭವ ಸಂವೇದನೆಗಳು ಬರೆವಣಿಗೆಗೆ ಇಳಿದವು. ಸಮಕಾಲೀನ
ಸಂದರ್ಭದ ಅರಿವು ಹಾಗೂ ಕಾಳಜಿಗಳಿಂದ ಅವರು ಕಾವ್ಯವನ್ನು ಹೆಣೆದರು. ಶಬ್ದಗಳಿಗಿರುವ
ವಿಶಿಷ್ಟ ಧ್ವನಿ ಸಾಮರ್ಥ್ಯದಿಂದ ಅದುವರೆಗೆ ಪದ್ಯದಲ್ಲಿದ್ದ ಏಕತಾನತೆಯನ್ನು ಅವರು
ಮುರಿದರು. ಗದ್ಯಲಯ ಅಥವಾ ಆಡುಮಾತಿನ ಲಯವನ್ನು ಅವರು ರೂಢಿಗೆ ತಂದರು.
ಪ್ರಾರಂಭದಲ್ಲಿ ಹೊಸ ಕಾವ್ಯ ಕೃತಿಗಳಿಗೆ ಬರೆದ ಮುನ್ನುಡಿ, ಹಿನ್ನುಡಿ, ಅಭ್ಯಾಸ ಲೇಖನಗಳು,
ಪತ್ರಿಕೆಗಳಲ್ಲಿ ಪ್ರಕಟವಾದ ಹೊಸ ಕಾವ್ಯ ಪರಿಚಯಿಸುವ ಉದ್ದೇಶದ ಬರೆಹಗಳಲ್ಲಿ ಹೊಸ
ಕಾವ್ಯದ ಅನುಸಂಧಾನ ಮಾರ್ಗವನ್ನು ಸೂಚಿಸಲಾಯಿತು. ಹೀಗೆ ನವ್ಯ ಮಾರ್ಗ ಕನ್ನಡ
ಸಾಹಿತ್ಯದಲ್ಲಿ ಹೊಸ ಮಾರ್ಗವೊಂದನ್ನು ತೆರೆಯಿತು. ಹೊಸ ಕವಿಗಳ ಹೊಸ ಜೀವನದೃಷ್ಟಿಯೇ
ಹೊಸ ಕಾವ್ಯದ ಪ್ರೇರಕ ಅಂಶ. ಈ ಪ್ರೇರಣೆಯನ್ನು ಬಲಗೊಳಿಸುವಲ್ಲಿ, ಪ್ರಸರಿಸುವಲ್ಲಿ ಪತ್ರಿಕೆಗಳು ಅತ್ಯಂತ ವಿಶಿಷ್ಟ ಪಾತ್ರವನ್ನು ವಹಿಸಿದವು.
ನವ್ಯದ ಆರಂಭದಲ್ಲಿ ಅದನ್ನು ಪ್ರತಿಷ್ಠಾಪಿಸುವುದಕ್ಕೆ ಪ್ರತ್ಯೇಕವಾದ ಸಾಹಿತ್ಯಪತ್ರಿಕೆ
ಇರಲಿಲ್ಲ. ಜಯಕರ್ನಾಟಕ, ಜನಪ್ರಗತಿ ಮೊದಲಾದವುಗಳಲ್ಲಿ ಅಡಿಗ ಮೊದಲಾದವರು
ಲೇಖನಗಳನ್ನು ಬರೆದರು. ಬಂದ ಟೀಕೆಗಳಿಗೆ ಉತ್ತರಿಸಿದರು. ದಿನಪತ್ರಿಕೆಗಳಲ್ಲಿ
ಪ್ರಜಾವಾಣಿ ನವ್ಯರಿಗೆ ವಿಶೇಷ ಆದ್ಯತೆ ನೀಡಿತು. ನವ್ಯರ ಕವನಗಳು, ಕಥೆಗಳು ಅದರಲ್ಲಿ
ಪ್ರಕಟವಾದವು. ಪ್ರಜಾವಾಣಿಯಲ್ಲಿ ನವ್ಯದ ಬಗೆಗೆ ನಡೆದ ವಕಾಲತ್ತನ್ನು ಈಗಾಗಲೇ
ಗಮನಿಸಲಾಗಿದೆ. ದಿನಪತ್ರಿಕೆಗೂ ಅದರದೇ ಮಿತಿ ಇರುತ್ತದೆ. ನವ್ಯದ ಕುರಿತು ಟೀಕೆಗಳು
ಅತಿಯಾದಾಗ ಅಡಿಗರು ನವ್ಯದ ಸಮರ್ಥನೆಗಾಗಿ, ನವ್ಯ ಸಾಹಿತ್ಯದ ವಿವರಣೆಗಾಗಿ ಒಂದು
ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಸಾಕ್ಷಿ' ಪತ್ರಿಕೆಯನ್ನು ಆರಂಭಿಸಿದರು. ಆಗಲೇ
ಲಹರಿ’ ಆರಂಭವಾಗಿ ನಿಂತಿತ್ತು. `ಸಂಕ್ರಮಣ’ ಬರುತ್ತಿತ್ತು. ನವ್ಯ ಹಾಗೂ ನವ್ಯೋತ್ತರ
ಕುರಿತ ಮುಂದಿನ ವಾಗ್ವಾದವನ್ನು ಏಕೀಕರಣದ ನಂತರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗುವುದು.
ಅಡಿ ಟಿಪ್ಪಣಿ-
೧. ನಾರಾಯಣ ಶರ್ಮಾ; ನಾನು ಕನ್ನಡಿಗನು; ವಾಗ್ಭೂಷಣ- (ಡಿಸೆಂಬರ್ ೧೯೧೮) ಪುಟ-೨೬೯
೨.ನಾ.ವೆ.ಕುರಡಿ; ಆತ್ಮ ನಿವೇದನೆ; ವಾಗ್ಭೂಷಣ; (ಆಗಸ್ಟ್ ೧೯೨೪) ಪುಟ-೧
೩.ಹಾಮಾನಾ- ಕನ್ನಡಪ್ರಭ- ಮಾರ್ಚ್ ೩, ೧೯೬೯
೪.ನಾ.ವೆ. ಕುರಡಿ- ಕನ್ನಡ ವಿದ್ಯಾವರ್ಧಕ ಸಂಘ- ವಾಗ್ಭೂಷಣ (ಆಗಸ್ಟ್ ೧೯೨೪ ಪುಟ- ೫)
೫.ಎಂ.ತಿಮ್ಮಪ್ಪಯ್ಯ- ಪ್ರೇಮ ಪಾಶ- ಕರ್ನಾಟಕ ನಂದಿನಿ (ಡಿ.೧೯೧೭) ಪುಟ ೬
೬.ಎಪ್ರಿಲ್ ೧೯೧೮, ಪುಟ- ೯೬
೭.ಬೇಂದ್ರೆ; ಶಾಂತಕವಿಗಳೂ ಅವರ ಕಾಲವೂ; ವಾಗ್ಭೂಷಣ (ಎಪ್ರಿಲ್ ೧೯೨೧) ಪುಟ -೭
೮.ಎಆರ್ಕೃ: ಸಂಪಾದಕೀಯ, ಪ್ರ.ಕ. ಸಂಚಿಕೆ ೭, ಸಂಪುಟ ೪
೯.ಅಮೃತ ಮತ್ತು ಗರುಡ; ಪುಟ- ೪೧, ಆಧುನಿಕ ಸಾಹಿತ್ಯ ಮತ್ತು ಸಾಮಾನ್ಯ ಮನುಷ್ಯ.
೧೦.ಎ.ಆರ್.ಕೃ.: ಪ್ರಬುದ್ಧ ಕರ್ನಾಟಕ'-ಪ್ರ.ಕ.೧೯೧೯ ಯುಗಾದಿ ಸಂಚಿಕೆ. ಪುಟ -೧ ೧೧.ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ: ಎಸ್.ಅನಂತನಾರಾಯಣ- ಪುಟ ೧೦೫ ೧೨ಮಾಸ್ತಿ: ನಮ್ಮ ಹೊಸ ಸಾಹಿತ್ಯದ ಅಶ್ವಿನೀ ದೇವತೆಗಳು; ಪ್ರ.ಕ. ಬೆಳ್ಳಿ ಸಂಚಿಕೆ; ಪುಟ ೩೦, ೧೯೪೫ ೧೩.ಹಾಮಾನಾ; ಸಾಹಿತ್ಯ ಸಲ್ಲಾಪ; ಕನ್ನಡ ಪ್ರಭ- ಮಾರ್ಚ್ ೩, ೧೯೬೯ ೧೪.ಹಾಮಾನಾ; ಸಾಹಿತ್ಯ ಸಲ್ಲಾಪ; ಕನ್ನಡ ಪ್ರಭ- ಮಾರ್ಚ್ ೩, ೧೯೬೯ ೧೫.ಎ.ಆರ್.ಕೃ. ಜೀವನ ಸಾಧನೆ:
ಕೃಷ್ಣ ಶಾಸ್ತ್ರಿಗಳ ಮಾರ್ಗ’,ಗೊರೂರು ರಾಮಸ್ವಾಮಿ ಅಯ್ಯಂಗಾರ,ಪುಟ,೧೮೧
೧೬.ಎ.ಆರ್.ಕೃ. ಜೀವನ ಸಾಧನೆ: ಪ್ರಾತಃಸ್ಮರಣೀಯರಾದ ಆಚಾರ್ಯ ಅಂಬಳೆ ಕೃಷ್ಣ ಶಾಸ್ತ್ರಿಗಳು'- ಎನ್. ಅನಂತ ರಂಗಾಚಾರ್ - ಪುಟ- ೧೩ ೧೭.ಎನ್.ಅನಂತರಂಗಾಚಾರ; ಎಆರ್ಕೃ ಜೀವನ ಸಾಧನೆ- ಪ್ರಾತಃಸ್ಮರಣೀಯರಾದ ಆಚಾರ್ಯ ಅಂಬಳೆ ಕೃಷ್ಣ ಶಾಸ್ತ್ರಿಗಳು; ಪುಟ ೧೬ ೧೮.ನಾನು ಕಂಡ ಗೆಳೆಯರ ಗುಂಪು- ಶೇ.ಗೋ. ಕುಲಕರ್ಣಿ, ಪುಟ- ೨೧೩-೨೧೪ ೧೯.ನಾನು ಕಂಡ ಗೆಳೆಯರ ಗುಂಪು- ಶೇ.ಗೋ. ಕುಲಕರ್ಣಿ, ಪುಟ- ೨೨೮-೨೯ ೨೦. ಬೆಟಗೇರಿ ಕೃಷ್ಣಶರ್ಮ:
ಭಕ್ತಿ ಕುಸುಮಾವಳಿ’ ಪ್ರಭಾತ- ಮೇ-ಜೂನ್-೧೯೧೯
೨೧. ಬೇಂದ್ರೆ: ಹಂಪಿ ವಿಜಯ ನಗರ ದರ್ಶನ- ಜ.ಕ. ಜುಲೈ ೧೯೨೩, ಪುಟ ೬೫೬
೨೨.ಎ.ಆರ್.ಕೃ. ಜೀವನ ಸಾಧನೆ- ಪೂಜ್ಯ ಕೃಷ್ಮ ಶಾಸ್ತ್ರಿಗಳಿಂದ ನಾನು ಕಲಿತ ಪಾಠ- ಎಂ.ವಿ. ಸೀತಾರಾಮಯ್ಯ
೨೩.ವಾಗ್ಭೂಷಣ, ಸಂಪುಟ ೩೩ ನವೆಂ. ೧೯೨೯, ಸಂ.೩
೨೪.ಜಯಂತಿ, ಸೆಪ್ಟೆಂಬರ್ ೧೯೪೩
೨೫.ಕಟ್ಟೀಮನಿ ಬದುಕು ಬರೆಹ; ಲೇಖನ- ಕ್ರಾಂತಿಕಾರಿ ಕಾದಂಬರಿಕಾರ- ಚನ್ನವೀರ ಕಣವಿ- ಪುಟ ೨೫
೨೬.ಅದೇ- ಕುಂದರನಾಡಿನ ಕೆಚ್ಚು; ಎಂ.ಅಕಬರಅಲಿ ಪುಟ- ೭೦
೨೭.ಅದೇ- ಇಂಗಿತಜ್ಞ ಗೆಳೆಯ; ಕೋ.ಚೆನ್ನಬಸಪ್ಪ, ಪುಟ- ೮೫
೨೮. ಜೀವನ ಪತ್ರಿಕೆ ಉತ್ಸವ ಸಂಚಿಕೆ. ಮೇ ೧೯೬೫- ಜೀವನ ಪತ್ರಿಕೆಯ ಕಥೆ- ಮಾಸ್ತಿ ವೆಂಕಟೇಶ ಅಯ್ಯಂಗಾರ-
ಪುಟ ೧೩.
೨೯.ಮಾಸ್ತಿ ಸಮಗ್ರ ದರ್ಶನ: ಜೀವನ ಕಾರ್ಯಾಲಯದ ಮಾಸ್ತಿ- ಪುಟ ೧೫೬
೩೦.ಅದೇ, ಚಿ.ಶ್ರೀನಿವಾಸರಾಜು- ಪುಟ ೧೪
೩೧. ವಿವರಗಳಿಗೆ ನೋಡಿ- ರಹಮತ್ ತರಿಕೆರೆ- ಮರದೊಳಗಣ ಕಿಚ್ಚು- ಪುಟ ೧೦೯
೩೨.ಕನ್ನಡ ನವೋದಯ ಕಾವ್ಯ: ಮಂಗಳೂರು ಕೇಂದ್ರ; ಹಟ್ಟಿಯಂಗಡಿ ನಾರಾಯಣರಾಯರ ಆಂಗ್ಲಕವಿತಾವಳಿ- ವಿ.ಎನ್. ಹೆಗಡೆ.- ಪುಟ ೨೪
೩೩.ವಾಗ್ಭೂಷಣ, ಸಂಪುಟ ೨೯, ಸಂಚಿಕೆ ೧೦, ಮೇ ೧೯೨೫
೩೪.ಸಂಪುಟ ೧೯, ಸಂಚಿಕೆ ೨
೩೫.ಜಯಕರ್ನಾಟಕ ಸಂಪುಟ ೧೬, ಸಂಚಿಕೆ ೨; ಸಾಹಿತ್ಯ ಗೋಷ್ಠಿ; ತ್ರಿವೇಣಿ' ದೀಪಾವಳಿ ಸಂಚಿಕೆಯಲ್ಲಿ ಪ್ರಕಟವಾದ ಶ್ರೀ ಚಕ್ರಪಾಣಿಯವರ ಲೇಖನ ಪುನರ್ ಮುದ್ರಿಸಲಾಗಿದೆ. ೩೬.ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ, ಸಂಪುಟ ೨೧, ಸಂಚಿಕೆ ೨, ಏ-ಜೂ. ೩೬. ನವ್ಯತೆಯೇ ಜೀವನ- ಡಿವಿಜಿ ೩೭.ಬೇಂದ್ರೆ ದ.ರಾ., ಸಾಹಿತ್ಯ ವಿರಾಟ್ ಸ್ವರೂಪ, (ಧಾ. ೧೯೭೪) ಪುಟ ೬೩೪ ೩೮.ಸಂಪುಟ ೨೨, ಸಂಚಿಕೆ ೨ ೩೯.ಸಂಪುಟ ೩೨, ಸಂಚಿಕೆ ೮, ಮಾರ್ಚ್ ೧೯೨೯ ೪೦.ಸಂಪುಟ ೩೨, ಸಂಚಿಕೆ ೮, ಮಾರ್ಚ್ ೧೯೨೯ ೪೧.ಸಂಪುಟ ೩೨, ಸಂಚಿಕೆ ೮, ಮಾರ್ಚ್ ೧೯೨೯ ೪೨.ಶ್ರೀಕೃಷ್ಣ ಸೂಕ್ತಿ -ಮೇ ೧೯೦೮ ಪುಟ ೧೪೯ ೪೩.ವಿಮರ್ಶೆ: ಶ್ರೀಕೃಷ್ಣ ಸೂಕ್ತಿ (ಜೂನ್ ೧೯೦೯) ಪುಟ ೧೮೯-೧೯೦ (ಸಂಪಾದಕರೇ ವಿಮರ್ಶಕರು). ೪೪.ವಾಗ್ಭೂಷಣ, ಎಪ್ರಿಲ್ ೧೯೨೦, ಸಂ.೧, ಸಂಪುಟ ೨೫. ೪೫.ವಾಗ್ಭೂಷಣ, ಸಂಪುಟ ೩೩, ಸಂಚಿಕೆ ೪, ಡಿಸೆಂ. ೧೯೨೯ ೪೬.ವಾಗ್ಭೂಷಣ (ಜೂನ್ ೧೯೧೬) ಪುಟ ೩೭-೩೮ ೪೭.ಜಯಕರ್ನಾಟಕ, ಸಂಚಿಕೆ ೧೬, ಸಂಪುಟ ೨. ೪೮.ಹೊ.ಕ.ಇಂ.ಕಾ.ಪ್ರಭಾವ- ಪುಟ ೧೬೦-೧೬೧ ೪೯.ಸಾಹಿತ್ಯ ಪರಿಷತ್ಪತ್ರಿಕೆ, ಜನವರಿ ೧೯೨೪, ಪುಟ ೨೭೧-೨೭೮ ೫೦.
ಅ’: ಸಾಹಿತ್ಯ ಲೋಕದಲ್ಲಿ ವಿಮರ್ಶೆ- ಜಯಕರ್ನಾಟಕ, ಸಂ.೧, ಸಂಪುಟ ೧೨, ಅಕ್ಟೋ- ೧೯೨೩, ಪುಟ ೯೩೩.
೫೧. ಮಂ': ಸಾಹಿತ್ಯ ಲೋಕದಲ್ಲಿ ವಿಮರ್ಶೆ- ಜಯಕರ್ನಾಟಕ, ಸಂ.೧ ಸಂಪುಟ ೧೨, ಅಕ್ಟೋ. ೧೯೨೩, ಪುಟ ೯೩೩ ೫೨. ಮಾಸ್ತಿ; ನಮ್ಮ ಸಾಹಿತ್ಯದ ಅಶ್ವಿನೀ ದೇವತೆಗಳು; ಪ್ರಬುದ್ಧ ಕರ್ನಾಟಕ ಬೆಳ್ಳಿಯ ಸಂಚಿಕೆ, ಪುಟ ೩೧. ೫೩.ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ; ಸಂಪುಟ ೧೩, ಸಂ.೨, ಜುಲೈ ೧೯೨೮ ೫೪.ಜಿಜ್ಞಾಸು;
ಕನ್ನಡ ನಾಲ್ಕನೆಯ ಪುಸ್ತಕ’ದ ವಿಮರ್ಶೆ, ಸುವಾಸಿನೀ (ಜೂನ್ ೧೯೨೭) ಪುಟ ೩೦೨-೩೦೩
೫೫.ಎಂ.ಗೋವಿಂದಪೈ; ಪಾಂಡೇಶ್ವರ ಗಣಪತಿ ರಾಯರ ?ಹೂಗೊಂಚಲು?ನ ವಿಮರ್ಶೆ, ಉದಯ ಭಾರತ' (ಜೂನ್ ೧೯೨೮)ಪುಟ ೭೧-೭೨. ೫೬. ಮಾಸ್ತಿ ವೆಂಕಟೇಶ ಅಯ್ಯಂಗಾರ್: ಜೀವನ ಸಂಪಾದಕೀಯ ೧ ಮತ್ತು ೨: ೧೯೬೭. ೫೭.ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ- ಪುಟ- ೩೮-೩೯ ೫೮.ಕನ್ನಾಡ ಸಾಹಿತ್ಯಜ್ಞರ ಆತ್ಮಕಥನ ೫೯.ಹಿತೈಷಿ; ಜಿ.ಕೆ.ಮೂರ್ತಿಯವರಿಗೆ ಪತ್ರ: ಮಧುರವಾಣಿ (ಆಗಸ್ಟ್ ೧೯೧೭- ಪುಟ ೩೭-೩೮) ೬೦.ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ ೬೧.ಉದ್ಧೃತ- ಹೊ.ಕ.ಇಂ.ಕಾ.ಪ್ರಭಾವ ೬೨.ಮಲ್ಲಿಕಾರ್ಜುನ ಶಾಸ್ತ್ರಿ: ಕವಿತೆ: ಶ್ರೀಕೃಷ್ಣ ಸೂಕ್ತಿ (ಜುಲೈ ೧೯೧೬) ಪುಟ ೧೨೩ ೬೩.ಹಟ್ಟಿಯಂಗಡಿ ನಾರಾಯಣರಾಯರು: ಕವಿತಾ ವರ್ಧನ, ಕನ್ನಡ ಸಾಹಿತ ಪರಿಷತ್ಪತ್ರಿಕೆ- ಸಂಪುಟ ೩, ಸಂಚಿಕೆ ೪ (ಜನವರಿ ೧೯೧೯) ೬೪.ಪ್ರಭಾತ- ಆಗಸ್ಟ್ ೧೯೧೮ ೬೫.ವಾಗ್ಭೂಷಣ- ಸಂಪುಟ ೨೩, ಸಂಚಿಕೆ ೧೨, ಮಾರ್ಚ್ ೧೯೧೯ ೬೬.ಗಾಂಧಿ ಬಜಾರ್; ಸಂಪುಟ ೧೨, ಸಂಚಿಕೆ ೧, ಜನವರಿ ೧೯೯೯. ೬೭.ಇದನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ೧೮೯೯ರಲ್ಲಿ ಪ್ರಕಟಿಸಿತು. ಇದು
ವಾಗ್ಭೂಷಣ’ ಗ್ರಂಥಮಾಲೆಯ ೧೫ನೆ ಕೃತಿ. ಇದು ಪುಸ್ತಕ ರೂಪದಲ್ಲಿ ಬರುವುದಕ್ಕೆ ಮೊದಲು ಧನಂಜಯ'ದಲ್ಲಿ ಲೇಖನ ರೂಪದಲ್ಲಿ ಪ್ರಕಟವಾಗಿತ್ತು. ೬೮.ಹೊ.ಕ.ಇಂ.ಕಾ.ಪ್ರಭಾವ- ಪುಟ- ೨೮ ೬೯.ಭಾಷಾಂತರ ಮೀಮಾಂಸೆಯ ಸ್ವರೂಪ- ಭಾಲಚಂದ್ರ ನೇಮಾಡೆ: ಕನ್ನಡಕ್ಕೆ ವಿಠ್ಠಲರಾವ ಗಾಯಕವಾಡ; ಸಂಕ್ರಮಣ ೨೯೪ ಸಂಪುಟ ೩೨, ಸಂಚಿಕೆ ೨, ಫೆ.೧೯೯೭ 70.ನಂ.ಶಿವರಾಮ ಶಾಸ್ತ್ರಿ; ಕಾವ್ಯಾವಲೋಕನ; ಪ್ರಬುದ್ಧ ಕರ್ನಾಟಕ, ಸಂಪುಟ ೧೪, ವಿನಾಯಕ ಸಂಚಿಕೆ, ಪುಟ ೧೫ ೭೧.ವಾಗ್ಭೂಷಣ- ಸಂಪುಟ ೨೯, ಸಂಚಿಕೆ ೩, ಅಕ್ಟೋಬರ್ ೧೯೨೪. ೭೨.ಜಯಂತಿ ; ನವೆಂಬರ್ ೧೯೪೩; ಸಂಪಾದಕೀಯ ೭೩.ಜಯಂತಿ : ಸೆಪ್ಟೆಂಬರ್ ೧೯೫೦: ಸಂಪಾದಕೀಯ ೭೪.ನಿರಂಜನ: ಬುದ್ಧಿ ಭಾವ ಬದುಕು- ಪುಟ ೩೯-೪೦ ೭೫.ನಿರಂಜನ: ಬುದ್ಧಿ ಭಾವ ಬದುಕು- ಪುಟ- ೨೬ ೭೬ವಿವರಗಳಿಗೆ ನೋಡಿ- ನಿರಂಜನ: ಬುದ್ಧಿ ಭಾವ ಬದುಕು- ಪುಟ ೧೫. ೭೭.ಸಾಹಿತ್ಯದಲ್ಲಿ ಪ್ರಗತಿ- ಇದೇ ಹೆಸರಿನ ಲೇಖನ- ೧೯೪೪ ೭೮. ವಿವರಗಳಿಗೆ ನೋಡಿ-ಅಶೋಕ ಶೆಟ್ಟರ್: ಕನ್ನಡ ಸಾಹಿತ್ಯದ ಪ್ರಗತಿಶೀಲ ಪರ್ವ: ಒಂದು ಚಾರಿತ್ರಿಕ ನೋಟ, ಸಂಕ್ರಮಣ ೨೨೮, ಸಂಪುಟ ೨೬, ಸಂಚಿಕೆ ೮, ಆಗಸ್ಟ್ ೧೯೯೧. ೭೯.ಉದ್ಧೃತ- ಅಶೋಕ ಶೆಟ್ಟರ್ ೮೦.ವಿವರಗಳಿಗೆ ನೋಡಿ- ಎಸ್.ಶಿವಾನಂದ- ಸಂಕ್ರಮಣ- ೮೭-೮೮ ೮೧.ಸಂಪುಟ ೧೬, ಸಂಚಿಕೆ ೨ ೮೨.ಹೊಸ ಕಾವ್ಯ ಹೊಸ ದಿಕ್ಕು- ಪುಟ ೬ ೮೩.ಎಂ. ಗೋಪಾಲಕೃಷ್ಣ ಅಡಿಗ-
ಹೊಸ ದಿನದ ಆಹ್ವಾನ’, `ಜಯ ಕರ್ನಾಟಕ’ (೧೧-೧೨-೧೯೫೨) ಪುಟ-೨
೮೪.ಅಡಿಗ: ಇಂದಿನ ಕಾವ್ಯದ ಹಿನ್ನೆಲೆ; ಕರ್ಮವೀರ -೧೦-೧೧-೧೯೫೨
೮೫.ಶರ್ಮ; ಪ್ರತಿಭಾ ಸಂದರ್ಶನ- ವಿ.ಸೀ. ಪ್ರಜಾವಾಣಿ- ೭-೧೦-೧೯೫೬
೮೬.ಜನಪ್ರಗತಿ- ೭-೨-೧೯೫೪ ೞಕನ್ನಡ ನವ್ಯ ಕಾವ್ಯ- ಆರ್.ಎಸ್.ರಾಮರಾವ
೮೭.ಜನಪ್ರಗತಿ- ೮-೧೧-೧೯೫೩ೞನವ್ಯ ಕಾವ್ಯ- ಕ್ಲಿಷ್ಟತೆ- ಬಿ.ಸಿ.ರಾಮಚಂದ್ರಶರ್ಮ
೮೮.ನಿರಂಜನ- ಬುದ್ಧಿ ಭಾವ ಬದುಕು- ೧೨೪-೧೨೫
೮೯.ಬುದ್ಧಿ ಬಾವ ಬದುಕು- ಪುಟ ೪೫
೯೦.ಬಿ.ಸಿ. ರಾಮಚಂದ್ರಶರ್ಮ: ೞನವ್ಯ ಕಾವ್ಯ ಜನಪ್ರಗತಿ- ೧೯-೧೦-೧೯೫೩
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಹಿರಿಯ ಸುದ್ದಿ ಸಂಪಾದಕ, ಸಂಪಾದಕ, ಮುದ್ರಕ ಮತ್ತು ಪ್ರಕಾಶಕನಾಗಿ 2020ರ ಡಿಸೆಂಬರ್ ಕೊನೆಯ ದಿನ ವೃತ್ತಿಯಿಂದ ನಿವೃತ್ತನಾದೆ. ಪತ್ನಿ, ಮಗ, ಸೊಸೆ, ಮಗಳು, ಅಳಿಯ ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.